ಕುರ್ತಕೋಟಿಯವರ ನೆನಪಿನೊಂದಿಗೆ ಈ ಮಾತುಗಳನ್ನು ಬರೆಯುತ್ತಿದ್ದೇನೆ. ಕೆಲವು ತಿಂಗಳ ಹಿಂದೆ ಅವರು ನಮ್ಮ ಮನೆಗೆ ಬಂದಿದ್ದಾಗ ಮಾತಿಗೆ ಮಾತು ಬಂದು “ಋಷ್ಯಶೃಂಗದ ಮುಂದಿನ ಭಾಗವನ್ನು ಬರೆಯಬೇಕೇನ್ರಿ?” ಅಂದೆ. ತಕ್ಷಣಬೇಕಿಲ್ಲವೆಂದರು. ‘ಹೇಳತೇನ ಕೇಳ’ದ ಪ್ರಶ್ನೆಗೆ ‘ಹುಲಿಯ ನೆರಳಿ’ನಲ್ಲಿ ಉತ್ತರವಿದೆ. ಋಷ್ಯಶೃಂಗ ಅದರ ಪರಿಣಾಮದ ದುರಂತ ಚಿತ್ರ ನೀಡುತ್ತದೆ. ಮುಂದಿನದು ಈ ದೇಶದ ಕರ್ಮ ಅಂದರು. ‘ನೀವು ಈಗಂದ ಮಾತುಗಳೊಂದಿಗೆ ಒಂದು ಮುನ್ನುಡಿ ಬರೆದುಬಿಡ್ರಿ’ ಅಂದೆ. ಮನೋಹರ ಗ್ರಂಥಮಾಲೆಯ ಸಮೀರನಿಗೇ ಇದನ್ನು ಪ್ರಕಟಿಸಲು ಕೊಡಬೇಕೆಂಬ ಕರಾರಿನೊಂದಿಗೆ ನನ್ನನ್ನ ಒಪ್ಪಿಸಿದರು. ಅವರು ಬದುಕಿದ್ದಾಗಲೇ ಇದರ ಪ್ರಕಟಣ ಕಾರ್ಯ ಸುರುವಾಗಿತ್ತು ದುರ್ದೈವದಿಂದ ಅದು ಮುಗಿವ ಹೊತ್ತಿಗೆ ಅವರಿಲ್ಲ.

ಈ ಮೂರೂ ಕೃತಿಗಳೊಂದಿಗೆ ಕುರ್ತಕೋಟಿಯವರ ಸಂಬಂಧವಿದೆ. ೧೯೬೩ರ ಸುಮಾರಿಗೆ ಬೆಳಗಾವಿಯಲ್ಲಿದ್ದಾಗ ವಿಶ್ವವಿದ್ಯಾಲಯದ ಒಂದು ಸಣ್ಣ ಕೆಲಸಕ್ಕಾಗಿ ಧಾರವಾಡಕ್ಕೆ ಹೋಗಿದ್ದೆ. ಸ್ನೇಹಿತರು ಸಿಕ್ಕರೆ ಓದಬಹುದೆಂದು ಜೊತೆಗೆ ಹೊಸದಾಗಿ ಬರೆದ ‘ಹೇಳತೇನ ಕೇಳ’ವನ್ನು ಬರೆದ ನೋಟಬುಕ್ಕನ್ನು ಒಯ್ದಿದ್ದೆ. ಅಲ್ಲಿಯ ತನಕ ನಾನು ಕುರ್ತಕೋಟಿಯವರನ್ನು ಕಂಡಿರಲಿಲ್ಲ. ಇದ್ದರೆ ನೋಡೋಣವೆಂದು ಅಟ್ಟಕ್ಕೆ ಹೋದೆ. ಕುರ್ತಕೋಟಿಯವರು ಕುಂತಿದ್ದರು. ಹಳೇಪರಿಚಿತರಂತೆ ಮುಖ ಅರಳಿಸಿ  ಬರಮಾಡಿಕೊಂಡುದನ್ನು ನೋಡಿ ಬೆರಗಾದೆ. ಅವರಾಗಲೇ ಸಾಕ್ಷಿಯಲ್ಲಿ ಬಂದ ನನ್ನ ಪದ್ಯಗಳನ್ನ ಓದಿದ್ದರಾದ್ದರಿಂದ ಮಾತುಕತೆ ಸುಲಭವಾಯ್ತು ಜಿ.ಬಿ. ಪ್ರಕಾಶಕರ ಟೇಬಲ್ ಪಕ್ಕದ ಬಾಕಿನ ಮೇಲೆ ಇಡಿಯಾಗಿ ಒಬ್ಬರೇ ಆಕ್ರಮಿಸಿಕೊಂಡು ಸಿಟ್ಟುಮಾಡಿದ ಬೆಟ್ಟದ ಹಾಗೆ ಕುಂತಿದ್ದರು. ಕುರ್ತಕೋಟಿಯವರು ಪರಿಚಯಿಸಿದರೂ ಅವರ ದೊಡ್ಡ ಮುಖದ ತುಂಬ ಇದ್ದ ಗಡ್ಡದಲ್ಲಿ ಒಂದು ಬಿಳಿಗಡ್ಡವೂ ಅಲುಗಲಿಲ್ಲ. ಕುರ್ತಕೋಟಿಯವರೊಂದಿಗೆ ಪದ್ಯ ಓದಬೇಕೆಂದು ಬಹಳ ಆಸೆಯಾಗುತ್ತಿತ್ತು. ಆದರೆ ಭಯ. ಯುನಿವರ್ಸಿಟಿಯ ಕೆಲಸದ ಸಮಯವೂ ಆಯಿತಾದ್ದರಿಂದ ‘ಹೇಳತೇನ ಕೇಳ’ ಇದ್ದ ಕೈಚೀಲವನ್ನು ಅಲ್ಲೇ ಬಿಟ್ಟು ಹೋದೆ. ಸಂಜೆ ಸುಮಾರಿಗೆ ತಿರುಇ ಬಂದೆ. ಅಷ್ಟರಲ್ಲಿ ನನ್ನ ಜೀವನದ ಒಂದು ದೊಡ್ಡ ಪವಾಡ ಘಟಿಸಿಯಾಗಿತ್ತು. ಕುರ್ತಕೋಟಿಯವರು ‘ಹೇಳತೇನ ಕೇಳ’ ಓದಿದ್ದರು!

ಸಾಲದ್ದಕ್ಕೆ ‘ಹೇಳತೇನ ಕೇಳ’ವನ್ನ ಜಿಬಿಯವರೆದುರು ಹಾಡುತ್ತಿದ್ದರು! ಕುರ್ತಕೋಟಿಯವರ ಹಾಡುಗಾರಿಕೆಯನ್ನು ಎಷ್ಟು ಜನ ಪುಣ್ಯಾತ್ಮರು ಕೇಳಿದ್ಯಾರೋ -ನನಗೆ ತಿಳಿಯದು. ಇಷ್ಟಂತೂ ನಿಜ ಅವರ ಸಂಗೀತ ಕಛೇರಿ ಒಂದು ಭಯಂಕರ ಅನುಭವ. ಅನುಭವಿಸಿದವರೇ ಬಲ್ಲರು ಆ ಸವಿಯ. ನಾನು ಬರೆದದ್ದು ದ್ರಾವಿಡ ಛಂದಸ್ಸಿನ ಅಂಶಗಣದಲ್ಲಿ, ಅವರೋ ಹಟಮಾರಿ ವಿಮರ್ಶಕ. ಅಂಶಗಣವನ್ನ ಮಾತ್ರಾಗಣಕ್ಕೆ ಬಗ್ಗಿಸಿ ಬಗ್ಗದಿದ್ದಲ್ಲಿ ಮುರಿದು, ಮುರಿದದ್ದನ್ನು ಜೋಡಿಸಿ, ಎಳೆಯಬಾರದ್ದನ್ನು ಎಳೆದೆಳದು ಹಾಡುತ್ತಿದ್ದರು! ಆಶ್ಚರ್ಯವೆಂದರೆ ಜೀಬಿ ಕಣ್ಣುಮುಚ್ಚಿ ತನ್ಮಯರಾಗಿ ಕೇಳುತ್ತಿದ್ದರು! ಅಥವಾ ನಿದ್ದೆ ಮಾಡುತ್ತಿದ್ದರು. ನನಗೆ ತಡೆಯಲಾಗಲಿಲ್ಲ. “ಸರ್ ಇದು ಹಿಂಗ ಹೇಳೂದಲ್ಲರೀ” ಅಂದೆ, ತಕ್ಷಣ ನಿಲ್ಲಿಸಿ ನನ್ನನ್ನ ದುರುಗುಟ್ಟಿ ನೋಡಿದರು. ಜಾತಿವಂತ ಸಂಗೀತಗಾರನಿಗಾದಂತೆ ರಸಭಂಗವಾಗಿ ಕೋಪದಲ್ಲಿ ಕುದಿಯುತ್ತ “ಮತ್ತ ಹೆಂಗ ಹೇಳಬೇಕೊ? ಅಂದ ತೋರ್ಸು” ಅಂದರು. ‘ಹೇಳತೇನ ಕೇಳ’ಹಾಡಿದೆ. ಅಂದಾಜು ಒಂದು ತಾಸು ಹಾಡಿ ನಿಲ್ಲಿಸಿದಾಗ ಅಟ್ಟದ ತುಂಬ ಜನ ಸೇರಿದ್ದರು. ಕುರ್ತಕೋಟಿಯವರ ಕಣ್ಣು ಫಳಫಳ ಹೊಳೆಯುತ್ತಿದ್ದವು. ಬೆಟ್ಟ ಮಿದುವಾಗಿ ಜೀಬಿಯಾಗಿದ್ದರು. ಆದಿನ ಜೀಬಿ ಒಡ್ಡೋಲಗವನ್ನು ಗೆದ್ದುಬಿಟ್ಟಿದ್ದೆ. ಜೀಬಿ ಎಷ್ಟು ಗೆಲುವಾಗಿದ್ದರೆಂದರೆ-ಅಲ್ಲದ್ದವರಿಗೆಲ್ಲ ಚಹ ತರಿಸಿಕೊಟ್ಟರು. ಮುಂದೆ ಸದರಿ ‘ಹೇಳತೇನ ಕೇಳ’ ಕವಿತೆಯೇ ಋಷ್ಯಶೃಂಗವಾಗಿ ಹುಲಿಯ ನೆರಳಾಗಿ ಬೆಳೆಯಿತು. ‘ಹೇಳತೇನ ಕೇಳ’ದ ಹುಲಿ ಹದ್ದಾಗಿ, ತಾಯಿ ವಿಶ್ವದ ತಾಯಾಗಿ ನನ್ನ ಅನೇಕ ಕೃತಿಗಳಿಗೆ ತಾಯಾದಳು. ಇದಕ್ಕೆಲ್ಲ ಕಾರಣ ಕುರ್ತಕೋಟಿಯವರು ನನ್ನ ಮೇಲೆ ಇಟ್ಟುಕೊಂಡಿದ್ದ ಪ್ರೀತಿ ಮತ್ತು ಅಭಿಮಾನಗಳೇ ಕಾರಣ ಎಂಬುದನ್ನು ಬೇರೆ ಹೇಳಬೇಕಿಲ್ಲ.

ಹುಲಿ ಹದ್ದಾಗಿ ಪರಿವರ್ತನ ಹೊಂದಿದ್ದುದಕ್ಕೆ ಒಂದೆರಡು ಮಾತು ಹೇಲಬೇಕೆನಿಸುತ್ತದೆ. ಸಾಮಾನ್ಯವಾಗಿ ಜಾನಪದ ನಂಬಿಕೆಗಳ್ಲಲಿ ಹುಲಿ ಅತ್ಯಂತ ಕ್ರೂರಿಯಾದ ಮೃಗ. ಹುಲಿ ಸವಾರಿ ಮಾಡುವುದು, ಹುಲಿ ಮತ್ತು ಹಸು ಒಂದೆಡೆ ಮೇಯುವುದು ಇತ್ಯಾದಿ ಕಲ್ಪನೆಗಳು ಅದರ ಕ್ರೌರ್ಯವನ್ನೆ ಹೇಳುತ್ತವೆ. ನಮ್ಮೂರು ಮಲೆನಾಡಿನ ಸೆರಗಿನ ಪ್ರದೇಶವಾದ್ದರಿಂದ ನಮ್ಮೂರಿಗೂ ಹುಲಿಗೂ ಸಂಬಂಧವಿಲ್ಲ. ಆದರೆ ಬ್ರಿಟಿಷರನ್ನು ಹುಲಿಗೆ ಹೋಲಿಸಿದ ನಾಕೈದು ಜನಪದ ಕಥೆಗಳು ನಮ್ಮಲ್ಲಿವೆ. ಟಿಪ್ಪು ಹುಲಿಯೊಂದಿಗೆ ಹೋರಾಡಿ ಕೊಂದನೆಂಬುದೂ ಅದೇ ಆಶಯದ ಕಥೆ. ಮುಂದೆ ಬ್ರಿಟಿಷರನ್ನು ಒಂದು ಕಾಲಲ್ಲಿ ಬಂದೂಕು, ಇನ್ನೊಂದರಲ್ಲಿ ತಕ್ಕಡಿ ಹಿಡಿದುಕೊಂಡು ಹ್ಯಾಟು ಹಾಕಿರುವ ಹದ್ದಿಗೆ ಹೋಲಿಸುವ ಜಾನಪದ ದಕ್ಷಿಣ ಭಾರತದಲ್ಲಿ ವ್ಯಾಪಕವಾಗಿ ಪ್ರಚಾರಕ್ಕೆ ಬಂತು. ಹದ್ದು ಅಮೆರಿಕದ ರಾಷ್ಟ್ರೀಯ ಸಂಕೇತವಾಗಿರುವುದು ಅದರ ಅರ್ಥವಂತಿಕೆಯನ್ನು ಇನ್ನಷ್ಟು ಗಟ್ಟಿಗೊಳಿಸಿದೆ.

ಈಗ ಈ ಕೃತಿಯನ್ನು ನಿಮ್ಮ ಕೈಯಲ್ಲಿರಿಸುತ್ತೇನೆ. ಮಿತ್ರರಾದ ಗಿರೀಶ್ ಕಾರ್ನಾಡರು ಹಿಂದೆ ಋಷ್ಯಶೃಂಗಕ್ಕೆ ಬರೆದ ಮುಖಪುಟವನ್ನು ಈ ಕೃತಿಗೂ ಹಾಕಿದ್ದಾರೆ. ಅವರಿಗೂ, ಎಳೆಯ ಆತ್ಮೀಯ ಮಿತ್ರ ಸಮೀರ ಜೋಶಿಗೂ ನನ್ನ ವಂದನೆಗಳು.

ಚಂದ್ರಶೇಖರ ಕಂಬಾರ