ಮೇಳ :
ಕಾದೇವೋ ಸ್ವಾಮಿ ಕಾದೇವೋ
ತಡೆಹಿಡಿದ ಬಿಕ್ಕಾಗಿ ಕಾದೇವೋ
ಕಚ್ಚೀದ ತುಟಿಯಾಗಿ ಕಾದೇವೋ
ರೆಪ್ಪೀಯ ಚಾಲನೆಗೆ ಕಾದ ಕಣ್ಣೀರಾಗಿ
ಮುರಿದ ಮನದವರಾಗಿ ಕಾದೇವೋ ||
ಸೂತ್ರಧಾರ : ನಾವಿಲ್ಲಿ ಕಾಯುತ್ತಿದ್ದೆವು.
ಈಗ ಊರಲ್ಲಿದ್ದವರು ಹೆಂಗಸರು, ಮಕ್ಕಳು, ಮುದುಕರು ಮಾತ್ರ.
ನಾವೆಲ್ಲರು ಕಾಯುತ್ತಿದ್ದೆವು.
ನಮ್ಮ ತಲೆ ತುಂಬ ಯೋಚನೆಗಳಿದ್ದವು.
ಯೋಚನೆಗಳ ತುಂಬ ಅನುಮಾನಗಳಿದ್ದವು.
ಹಿಂದೆಂದೂ ಹಿಂಗಾಗಿರಲಿಲ್ಲ. ಎಂಥಾ ಬಾರಾಪಟ್ಟಿ ಹುಲಿ
ಬ್ಯಾಟಿ ಆಡಿದರೂ ಹೊತ್ತು ಮುಳುಗೋದರೊಳಗೆ ಎಲ್ಲಾರು
ವಾಪಸಾಗತಿದ್ದರು. ಈಸಲ ಮಾತ್ರ ಅವರು ಬಂದಿರಲಿಲ್ಲ.
ದಾರೀ ನೋಡೇವಂದರ ನಮಗ ಕಣ್ಣಿರಲಿಲ್ಲ
ಯಾಕಂದರ ಚುಚಿದರ ಬೆರಳು ಸಿಗಬೀಳುವಂಥಾ
ಕತ್ತಲೆ ಹೊರಗಿತ್ತು, ಕರಿಯಜ್ಜ ಕರ್ರೆವ್ವನ ಗುಡ್ಯಾಗ
ಕುಂತಾವ ಇನ್ನೂ ಎದ್ದಿರಲಿಲ್ಲ.
ಗೌಡ್ತಿ ತೊಲೆಬಾಗಿಲ ಹಿಡಕೊಂಡು ನಿಂತಾಕಿ
ಒಳಗ ಹೋಗಿರಲಿಲ್ಲ.
ಎಲ್ಲಾರು ನಿಟ್ಟುಸಿರ ಬಿಡತಿದ್ದರು. ಯಾರಿಗ್ಯಾರೂ
ಸಮಾಧಾನ ಮಾಡತಿರಲಿಲ್ಲ. ಯಾಕಂದರ
ಸಮಾಧಾನ ಮಾಡೋ ಸ್ಥಿತಿ ಒಳಗಿರಲಿಲ್ಲ.
ಕಡೀಕೂ ಕರ್ರೆವ್ವ ಕಾಪಾಡಿದಳು ಅಂದಿವಿ…
(ಒಬ್ಬೊಬ್ಬರೇ ಬೇಟೆಗಾರರು ಬರುವರು.)
ಮೇಳ : ಯಾಕೋ ಇಷ್ಟೊತ್ತಿನ ತನಕ?
ಒಬ್ಬ : ಏನು ಮಾಡೋದು, ಬ್ಯಾಟಿ ಆಡ್ತ ಆಡ್ತ ಕತ್ತಲಾದದ್ದು ತಿಳೀಲಿಲ್ಲ.
ಮೇಳ ೨ : ಬ್ಯಾಟಿ ಸಿಕ್ಕಿತ ?
ಒಬ್ಬ : ಸಿಕ್ಕಿತೋ ಇಲ್ಲೋ, ಮತ್ತ ನಾಳೆ ಹೋಗಬೇಕೋ ಏನೋ.
ಮೇಳ ೧ : ಗೌಡ್ರು ಬಂದರ?
ಇನ್ನೊಬ್ಬ : ಕಾಡಿನಾಗ ಎಲ್ಲೋ ತಪ್ಪಿಸಿಕೊಂಡರು. ಅವರನ್ನ ಹುಡುಕೋದರೊಳಗೆ ಕತ್ತಲಾಯ್ತು. ಬ್ಯಾಟಿ ಆಡತ್ತಿದ್ದರೋ ಹಂತಿ ತಿರಗತಿದ್ದರೊ ಒಂದೂ ಗೊತ್ತಾಗಲಿಲ್ಲ. ಕರದಿವಿ, ಒದರ್ಯಾಡಿದಿವಿ – ಏನಂದರೂ ಗೌಡ್ರ ಸುಳಿವು ಸಿಗಲಿಲ್ಲ, ಹುಡುಕ್ತಾ ಹುಡುಕ್ತಾ ಅಡ್ಡಾಡುವಾಗ ಊರು ಸಿಕ್ಕಿತು. ಬಂದಿವಿ. ಕೆಲವರು ಇನ್ನೂ ಹುಡುಕ್ಯಾಡಾಕ ಹತ್ಯಾರ. ಏನ ಮಾಯೇನೋ ಏನ ಮಾಟವೋ ಹಿಂದೆಂದೂ ಹಿಂಗ ಆಗಿರಲಿಲ್ಲ.
(ಒಬ್ಬೊಬ್ಬರೇ ಮಾಯವಾಗಿ ರಂಗಭೂಮಿ ಖಾಲಿಯಾಗುವುದು.)
ಸೂತ್ರಧಾರ : ಎಲ್ಲಾರು ಬಂದ ಮ್ಯಾಲೆ ಗೌಡರು ಬಂದರು.
ದಣಿದಿದ್ದರು.
ಬೆನ್ನಿನ ಮ್ಯಾಲೇನೋ ಹೊತ್ತುಕೊಂಡು ಬಂದಿದ್ದರು.
ಬ್ಯಾಟೀ ಹುಲಿ ಇದ್ದಿದ್ದೀತು ಅಂದಿವಿ.
ಇರಲಾರದು ಅನ್ನಿಸಿತು.
ಯಾಕಂದರ ಊರ ಹೊರಗಿನ ಹಾಳ ಬಾವ್ಯಾಗ
ಅದನ್ನ ಚೆಲ್ಲಿ ಬಂದರು.
ಒಂದು ಕಹಳೆ ಕೂಗಿಲ್ಲ.
ಬಾಜಾಬಜಂತ್ರಿ ಇಲ್ಲ.
ಹುಲಿ ಬೇಟಿ ಸಿಕ್ಕಿತು ಅಂತಿಲ್ಲ.
ಸಿಗಲಿಲ್ಲ ಅಂತಿಲ್ಲ.
ಕಳ್ಳನ ಹಂಗ ಬಂದು ಮನಿ ಹೊಕ್ಕರು.
ಅವರು ಬಂದ ರೀತಿಯಲ್ಲೆ ನಾವು ಸ್ವೀಕರಿಸಿದಿವಿ.
(ಗೌಡ ಬರುವನು, ಗೌಡ್ತಿ ಬಂದು ಸ್ವಾಗತಿಸುವಳು.)
ಗೌಡ್ತಿ : ಅಯ್ ಶಿವನ! ಬಂದೆಯಾ? ಬಾ! ನೀ ಹೋದಾಗಿನಿಂದ ಜೀವದಾಗ ಜೀವ ಇರಲಿಲ್ಲ. ಸುತ್ತೂ ದೇವರಿಗೆಲ್ಲ ಹರಿಕೆ ಹೊತ್ತಿದ್ದೆ. ತಾಯಿ ಕಾಪಾಡಿದಳು.
(ಗೌಡ ದಣಿದವನಂತೆ ಕೂರುವನು.)
ಒಳಗ ನಡೀಯಲ್ಲ. ದಣಿದಿದ್ದೀ ಎಣ್ಣೀ ಹಚ್ಚಿ ಎರೀಲೇನು?
(ಗೌಡ ಅವಳಿಗೂ ಕೂರುವಂತೆ ಸನ್ನೆ ಮಾಡುವನು. ಮತ್ತು ಇದೇ ಮೊದಲ ಸಲವೆಂಬಂತೆ ಮನೆಯನ್ನೂ ಅವಳನ್ನೂ ನೋಡುವನು. ಅಷ್ಟರಲ್ಲಿ ರಾಮಗೊಂಡ ಬರುವನು. ಗೌಡ ಅವನನ್ನು ಇವನ್ಯಾರು ಎನ್ನುವಂತೆ ನೋಡುವನು.)
ರಾಮಗೊಂಡ : ಎಪ್ಪಾ, ಹುಲಿ ಸಿಕ್ಕಿತ?
ಗೌಡ : ಹೂ.
ರಾಮಗೊಂಡ : ಎಲ್ಲಿ ಐತಿ?
ಗೌಡ : ಹಾಳ ಬಾವ್ಯಾಗ ಎಸದ ಬಂದೆ.
ರಾಮಗೊಂಡ : ತರಬೇಕಾಗಿತ್ತು ನೋಡತಿದ್ದೆ.
ಗೌಡ : ಕೆಟ್ಟ ಹುಲಿ ಅದು, ಅದನ್ನೋಡಿ ನೀ ಏನ ಮಾಡತಿದ್ದೆ?
(ರಾಮಗೊಂಡ ಹೊರಗೆ ಹೋಗುವನು.)
ಗೌಡ್ತಿ : ಮೈ ತಿಕ್ಕಲೇನು?
ಗೌಡ : ಬ್ಯಾಡ.
ಗೌಡ್ತಿ : ಬ್ಯಾಡ ಬ್ಯಾಡ ಅಂದರ ನನ್ನ ಮಾತ ಮೀರಿ ಹೋದಿ. ನೀ ಹೋಗೋವಾಗ ಆರತ್ಯಾಗಿನ ದೀಪ ಆರಿತು. ಅದಕ್ಕ ಹೆಂಗೋ ಏನೋ ಅಂತ ಜೀವಾ ಕೈಯಾಗ ಹಿಡಕೊಂಡ ಕುಂತಿದ್ದೆ.
ಗೌಡ : ನನಗ ನೆನಪs ಇಲ್ಲ.
ಗೌಡ್ತಿ : ನಾ ನಿನಗ ಹೇಳಿದ್ದರಲ್ಲೇನು ನೆನಪಿರೋದು ?
ಗೌಡ : ಹೌಂದಲ್ಲ!
ಗೌಡ್ತಿ : ಬಾವ್ಯಾಗ ಯಾಕ ಒಗದ ಬಂದಿ ? ಎದೆಗುಂಡಿಗಿ ತರತೀನಿ ತಿಂದೀಯಂತ ಹೇಳಿದ್ದಿ.
ಗೌಡ : ಹೌಂದ?
(ಅವಳ ಹತ್ತಿರ ಹೋಗಿ)
ಹುಲಿ ಅಲ್ಲ, ರಾಕ್ಷಸ ಅದು. ಮೋಸ ಮಾಡಿ ಕೊಲ್ಲಾಕ ಬಂದ. ದೇವರ ದಯೆ, ನಿನ್ನ ತಾಳೀ ಪುಣ್ಯ ಅಮತಿಟ್ಟಕ; ಬಜಾವಾಗಿ ಅದನ್ನ ಕೊಂದ ಬಂದೆ. ಅದಕ್ಕs ಅದರ ಸಾವಾಸ ಬ್ಯಾಡಂತ ಬಾವ್ಯಾಗ ಎಸದ ಬಂದೆ. ನಾಳೆ ಡಂಗುರ ಸಾರಬೇಕು.
ಗೌಡ್ತಿ : ಏನಂತ?
ಗೌಡ : ಹಾಳ ಬಾವ್ಯಾಗ ಯಾರೂ ಹಣಿಕಿ ಹಾಕಬ್ಯಾಡ್ತೀ ಅಂತ. ಯಾರಿಗ್ಗೊತ್ತು – ಮೊದಲs ರಾಕ್ಷಸ. ಯಾವ ಮಾಯೇದಿಂದ ಯಾರನ್ನ ಹಿಡೀತಾನೋ? ಕೊಂದವನ ಸಂತಾನಂತೂ ಹಣಕಿ ಹಾಕಲೇಬಾರದು. ಬಾವೀ ಕಡೆ ಹೋಗಬ್ಯಾಡಂತ ನಿನ್ನ ಮಗನಿಗೆ ತಾಕೀತ ಮಾಡು.
ಗೌಡ್ತಿ : ನೀ ಹೇಳಿದ್ದ ಕೇಳಿದರs ನಡುಕ ಹುಟ್ಟತೈತಿ, ನಾಳೆ ಕರ್ರೆವ್ವಗ ಒಂದು ಕುರಿ ಕೊಡೋಣೇಳು.
(ಹೊರಗೆ ಹೆಂಗಸೊಂದು “ನನ್ನ ಕೂಸs ನನ್ನ ಕೂಸs” ಎಂದು ಚೀರಿ ಅಳುವುದು ಕೇಳಿಸುತ್ತದೆ.)
ಗೌಡ : (ಹೆದರಿ) ಯಾರಿಗೇನಾಯ್ತು?
ಗೌಡ್ತಿ : ಏನಾಯ್ತೋ ಏನೋ! ಹೊರಗ ಎಂಥಾ ಕತ್ತಲಂತಿ. ರಾಮಗೊಂಡ ಮತ್ತ ಯಾಕ ಹೊರಗ್ಹೋದ? ರಾಮಾ ರಾಮಾ-
(ರಾಮಗೊಂಡ ಒಳಕ್ಕೆ ಬರುವನು.)
ಯಾರಿಗೇನಾಯ್ತೋ ಮಗ?
ರಾಮಗೊಂಡ : ಕುರುಬರ ಗುಳ್ಳವ್ವನ ಮಗ ಉಸಿರಾಡೋದ ಮರತೈತಂತ, ಕರಿಯಜ್ಜನ ಹಂತ್ಯಾಕ ತಗೊಂಡು ಹೋದ್ಲು.
ಗೌಡ್ತಿ : ಹೌಂದ? (ಗೌಡನಿಗೆ) ನೀನೂ ನೋಡಾಕ ಹೋಗ್ತೀಯೇನು?
ಗೌಡ : ನಾ ಯಾಕ ಹೋಗಲಿ? (ರಾಮಗೊಂಡನಿಗೆ) ತೊಲಿಬಾಗಿಲಾ ಹಾಕೇತಿಲ್ಲ ನೋಡು, ಹಾಕದಿದ್ದರೆ ಹಾಕ್ಕೊಂಡು ಒಳಗ ಬಾ.
(ಗೌಡ್ತಿ ಆಶ್ಚರ್ಯದಿಂದ ಗೌಡನನ್ನೇ ನೋಡುವಳು.)
Leave A Comment