ಮೇಳ : ಬ್ಯಾಟಿಗಂತ ಗೌಡ ಬಂದನೋ
ಕೊಂಬು ಕಹಳೆ |
ದಂಡು ದಳ ಸಹಿತ ಬಂದನೋ ||

ಹುಲಿಯ ಹುಡುಕಿ ಹುಯ್ಯಲಿಟ್ಟಿರೋ
ಮಿಕಗಳೆಲ್ಲ |
ಗವಿಯ ಸೇರಿ ಅಡಗಿ ಕುಂತವೋ ||

ಕಾಡಿನಲ್ಲಿ ಬೊಬ್ಬೆಯಿಟ್ಟರೋ
ಕಾಡದೇವರೆಲ್ಲ |
ಎದ್ದು ಬೆರಗುಗೊಂಡರೋ ||

(ಇಬ್ಬರು ವಿಚಿತ್ರ ವೇಷದ ಮುದುಕಿಯರ ಪ್ರವೇಶ)

ಮುದುಕಿ ೧ : ಸಿಕ್ಕನ ?

ಮುದುಕಿ ೨ : ಇನ್ನೇನು ಸಿಗೋ ಹೊತ್ತು.

ಮುದುಕಿ ೧ : ಕಾಡಿಗೆ ಹೌಸೀನs ಇಲ್ಲ. ಹೂ ಚಿಗುರು ಬಾಡಿ, ಗಿಡ ಮರ ಜೋಲುಮುಖ ಹಾಕ್ಯಾವ

ಮುದುಕಿ ೨ : ನೆಲದ ಪುಣ್ಯ ಆರಿ ನೀರಡಿಸೇತಿ; ರಗತ ಬಿದ್ದರ ಧಗಿ ಆರಿತೋ ಏನೋ! ಯಾರೋ ಬಂಧಾಂಗಾಯ್ತು; ಹುಲೀ ಹೆಜ್ಜಿ ಇರಬೇಕೇನ?

ಮುದುಕಿ ೧ : ಅಲ್ಲ, ಬ್ಯಾಡರು. ಗೌಡ ಕುದುರೀ ಹತ್ಯಾನ.

ಮುದುಕಿ ೨ :  ಕಾಡ ತುಂಬ ಅವರs ತುಂಬ್ಯಾರ. ಮುಖಾಮುಖಿ ಆಗವೊಲ್ದು.

ಮುದುಕಿ ೧ : ಈಗ ಕತ್ತಲಾಗಬೇಕು. ಅಂದರ ಇಬ್ಬರೂ ಮುಖಾಮುಖಿ ಆಗತಾರ.

ಮುದುಕಿ ೨ : ನೆರಳ ಕಂಡರೂ ಸಿಕ್ಕಿಬೀಳತಾರ. ಸಿಕ್ಕಿಬಿದ್ದರ ನೆತ್ತರ ನೆಲಕ್ಕ ಬೀಳತೈತಿ.

ಮುದುಕಿ ೧ : ಕತ್ತಲಾದರ ನೆರಳು ಬೀಳೋದs ಇಲ್ಲ. ಆಮ್ಯಾಲ ಹಿಡಿಯೋದಕ್ಕಾಗಾಣಿಲ್ಲ.

ಮುದುಕಿ ೨ : ಕತ್ತಲಾಗಲಿ, ಬೆಳಕಿರಲಿ. ಇಬ್ಬರೂ ಮುಖಾಮುಖಿ ಆಗೆ ಆಗತಾರ. ಇಬ್ಬರೂ ಜಿಪುಣರು. ನೆಲಕ್ಕ ನೆತ್ತರ ಚೆಲ್ಲತಾರೋ, ಇಲ್ಲಾ ತಾವs ಕುಡೀತಾರೋ!

ಮುದುಕಿ ೧ : ಹೆಣ ಬಿದ್ದರ ನಮಗೂ ಅಷ್ಟಿಷ್ಟು ಮಾಂಸ ಸಿಕ್ಕೀತು.

ಮುದುಕಿ ೨ : ಅದೂ ನಂಬಿಕೀದಲ್ಲ ಬಿಡು. ಗೆದ್ದವ ಸತ್ತವನ ಹೆಣ ಹೊತ್ತುಕೊಂಡು ಹೋದರ?

ಮುದುಕಿ ೧ : ನಾವಿಬ್ಬರೂ ಮಣ್ಣ ತಿನ್ನಬೇಕಷ್ಟ….

ಮುದುಕಿ ೨ : ಶ್ಯೂ! ಸಪ್ಪಳ ಕೇಳಿಸ್ತ?

ಮುದುಕಿ ೧ : ಒಣಗಿದೆಲಿ ಸರಸರ ಅಂತಾವ…

ಮುದುಕಿ ೨ : ಕುದರೀ ಹೆಜ್ಜೀ ಸಪ್ಪಳ!

ಮುದುಕಿ ೧ : ಹುಲೀದಿರಬೇಕು!

ಮುದುಕಿ ೨ : ಹೌದು ಹುಲೀದೇ!

ಮುದುಕಿ ೧ : ಅವ ಕುದರೀ ಹತ್ಯಾನ. ಸುತ್ತ ಬ್ಯಾಡರಿದ್ದಾರ.

ಮುದುಕಿ ೨ : ಅದರ ಕರಿ ಮುದಕನ ಮಾತು ಮೀರಿ ಬಂದಾನ, ಮರೀಬ್ಯಾಡ.

ಮುದುಕಿ ೧ : ಅವ ಹುಟ್ಟಾ ಬ್ಯಾಟಿಗಾರ. ಕೈಯಾಗ ಬಿಲ್ಲು ಬಾಣ ಅದಾವ.

ಮುದುಕಿ ೨ : ಆದರ ಅವನ ಹೇಂತಿ ಆರತಿ ಬೆಳಗಬೇಕಂತ ದೀಪ ಹೊತ್ತಿಸಿದರ ಹೊತ್ತಿದ ದೀಪ ಆರಿಹೋದವು. ಮರೀಬ್ಯಾಡ. ಅಕಾ! ಕುದುರೀ ಹೆಜ್ಜೀ ಸಪ್ಪಳ! ಅಲ್ಲಾ?

ಮುದುಕಿ ೧ : ಹೌದು, ಕಾಡಿನಾಗ ಹಾದೀ ತಪ್ಪಿ ಬ್ಯಾಡರೊಂದು ಕಡೆ ಇವನs ಒಂದು ಕಡೆ ಆಗ್ಯಾರ.

ಮುದುಕಿ ೨ : ಅಯ್ಯಯ್ಯ! ಇಕಾ ಇಕಾ ಬೆಳಕಂಜಿ ಓಡಿಹೋಯ್ತು! ಕಾಡು ಕಣ್ಣು ಮುಚ್ಚಿಧಾಂಗ ಕತ್ತಲಾಯ್ತು! ಇನ್ನು ತಡ ಆಗಾಣಿಲ್ಲ.

ಇಬ್ಬರು : (ಕುಣಿಯುತ್ತ)

ಕತ್ತಲೆ ಕತ್ತಲೆ|
ಕರೀ ಕತ್ತಲೆ
ಬೆತ್ತಲಾಗಿ | ಸುರೀ ಕತ್ತಲೆ
ನೋಡೋ ಕಣ್ಣ ಮೆತ್ತೋ ಕತ್ತಲೆ
ಮಿನುಗೋ ಚುಕ್ಕಿ | ಮುಚ್ಚೋ ಕತ್ತಲೆ
ಇದ್ದವರೆಲ್ಲ| ಇದ್ದಲ್ಲಿರಲಿ
ಕಗ್ಗೊಲೆಗ್ಯಾರೊ | ಒದಗದೆ ಇರಲಿ
ಕಾಡೂ ಕತ್ತಲೆ | ಕಣ್ಣೂ ಕತ್ತಲೆ
ದಿಕ್ಕೂ ಕತ್ತಲೆ | ಮುಗಿಲೂ ಕತ್ತಲೆ
ಹೋ ಹೋ ಕತ್ತಲೆ ಕತ್ತಲೆ |…

ಮುದುಕಿ ೧ : ನನಗೊಂದs ದುಃಖ ಅಂದರ ಕತ್ತಲೆಗೆ ಕಣ್ಣೇ ಇಲ್ಲ.

ಮುದುಕಿ ೨ : ಅದರ ಕಿವಿ ಅವ! ಎದೀ ಐತಿ! ಎದ್ಯಾಗ ನೋವಿರತಾವ. ನೋವಿನಾಗ ಕತಿ ಇರತಾವ. ಶ್ಯೂ! ಇಬ್ಬರೂ ಒಂದs ಕಡೆ ಬಂದು ಅಡಗ್ಯಾರ. ಯಾರು ಸಪ್ಪಳ ಮಡಿದರೂ ಇನ್ನೊಬ್ಬರು ಕೊಲ್ಲತಾರ.

ಮುದುಕಿ ೧ : ಯಾರೂ ಸಪ್ಪಳ ಮಾಡವೊಲ್ಲರು. ಕಾಡೂ ಸತ್ತಬಿದ್ದಿರಬೇಕು, ಒಂಚೂರೂ ಸದ್ದಿಲ್ಲ.

ಮುದುಕಿ ೨ : ತಡಿ ತಡಿ! ಇಬ್ಬರೂ ಹೆಂಗ ಹೊಂಚತಾರ ನೋಡು!

ಮುದುಕಿ ೧ : ಇವರೊಳಗ ಸಾಯೋರ್ಯಾರು?

ಮುದುಕಿ ೨ : ನಾ ಹೇಳದಿದ್ದರೂ ಸಾಯೋರೇ ಸಾಯೋದು.

ಮುದುಕಿ ೧ : ನಿನ್ನ ತಲ್ಯಾಗ ಬರೀ ಸಾವು ತುಂಬೇತಿ.

ಮುದುಕಿ ೨ : ಅಲ್ಲ, ರಕ್ತ ತುಂಬೇತಿ. ಯಾಕಂದರ ಥಂಡಿ ಹತ್ತೇತಿ. ಈಗೊಂದಿಷ್ಟು ಬಿಸಿ ರಕ್ತ ಸಿಕ್ಕರ…..

ಮುದುಕಿ ೧: ಒಂದು ಹಕ್ಕೀನೂ ಎಚ್ಚರಿಲ್ಲ. ಗಾಳಿಗಿ ಉಸಿರಗಟ್ಟೇತಿ, ಉಸಿರಾಡ್ತಾನೇ ಇಲ್ಲ. ಅಯ್ಯೋ ಅಯ್ಯೋ! ನನಗ ನೋಡಾಕ ಆಗೋದಿಲ್ಲ.

ಮುದುಕಿ ೨ : ನಿನ್ನಮುದ್ದು ಕಣ್ಣನ್ನ ಮುಚ್ಚಿಕೋ ಚಿನ್ನ. ಈಗ ನಡೆಯೋದು ಕೊಲೆ. ಅದನ್ನ ನೋಡಿ ಮೊದಲs ಹೊಲಸಾಗಿರೋ ನಿನ್ನ ಕಣ್ಣನ್ನ ಇನ್ನಷ್ಟು ಕೊಳೆ ಮಾಡಿಕೋಬೇಡ. ಇಕಾ ಇಕಾ ! ಹೋಯ್! ಸಿಕ್ಕ ! ಸಿಕ್ಕ ಹುಲಿ ಉಗುರು! ರುಂಬಾಲದ ರುಂಡ! ಹೊಯ್!….. ಬಿತ್ತು! ಬಿತ್ತು!

(ಅಸಹಾಯಕನಾದ ಗೌಡ ಕಿರುಚಿದ ಸದ್ದು.)