ಸೂತ್ರಧಾರ : ನಾವಾಗ ಸಣ್ಣವರು, ಮಣ್ಣಾಟದಲ್ಲಿ ಮೈ ಮರೆತಿದ್ದಾಗ
ಸಿಡಿದ ಮದ್ದಿನ ಹಾಂಗ ಹೊಡೆದ ಡಂಗುರ ಕೇಳಿ
ತಬ್ಬಿಬ್ಬಾಗಿ ಸ್ತಬ್ಧರಾದಿವಿ. ಡಂಗರು ಬಂತು:

ಸುತ್ತೇಳು ಬಳಗದ ಕುಳವಾಡಿಗಳ ಕೇಳಿರಿ:
ಈಗಿಂದೀಗ ಬರ‍್ರಿ ಅರಮನೆಗೆ ಎಲ್ಲ,
ನಾಯಕರ ಆಜ್ಞೆಯಿದು, ಕೈಯಲ್ಲೇನಿದ್ದರೂ
ಚೆಲ್ಲಿ ಬರ‍್ರಿ.

ಬಗೆಬಗೆಯ ಲಗುಬಗೆಯಿಂದ, ಮಾತಿಲ್ಲದೆ ದೌಡಾಯಿಸುವ
ಹಿರಿಕಿರಿಯರನ್ನ -ಚಿಳ್ಳೆ ಮಿಳ್ಳೆಗಳು ನಾವು
ಬೆಂಬತ್ತಿ ನುಗ್ಗಿದ್ದೆವು ವಾಡೆಯ ಗೋಡೆಯೊಳಕ್ಕೆ,
ಗದೆಯಂಥ ಭುಜದ ಗೌಡರ ತೋಳಾಸರೆಗೆ.
ಸಾಗಿಹೋಗಿ ಬಾಗಿ ನಿಂತ ಜನ ಬೆರಗಿನ ಗರ
ಹೊಡೆದು ಗೊಂಬೆಗಳಾದರು.
ಬೆನ್ನ ಹಿಂದೆ ಕೈ ಕಟ್ಟಿದ ಗೌಡರು ಹಿಂದೆ ಮುಂದೆ
ಚಲಿಸಿದರು.

ಹಟ್ಟಿಗೆ ಅವರು ಒಡೆಯರಾದರೆ ಕಣ್ಣೊಳಗೆ
ಚಿಂತೆ ಆಳುತ್ತಿತ್ತು. ಹೇಳಿದರು:

ಹೋಶೀಯರ್‌: ಕಿವಿಗೊಟ್ಟು ಕೇಳಿರಿ ಹಟ್ಟಿಯ ಕುಳಗಳೇ
ಬರಲಿದ್ದಾನೆ ಹದ್ದನೇರಿ ಪಡುವಣದ ಖಳನಾಯಕ,
ಕ್ಷಣದಲ್ಲಿ ಮರದೆಲೆ ಎಣಿಸುವಾತ
ಮೆದುಳನ್ನೆ ತಿಂದು ಬದುಕಬಲ್ಲಾತ.,
ನೆಲ ಮುಗಿಲಿಗೆ ಒಡೆಯನಾಗಿ, ದೇವರ ಜೊತೆ
ಹುಡುಗಾಟವಾಡ ಬಯಸುವಾತ,

ರಾಜ್ಯ ವಿಸ್ತರಿಸುತ್ತ, ನಮ್ಮ
ಹಳ್ಳೀಯ ದರೋಡೆಗೆ ಹೊಂಚಿನಿಂತ ಹೊಟ್ಟಿಬಾಕ ಬಕ.
ಹೆಂಗಸರೆಲ್ಲ ಮನೆಯೊಳಕ್ಕಿರಲಿ,
ಹಣಿಕಿ ಹಾಕಿದರೂ ದಂಡ ಶಿಕ್ಷೆಗಳುಂಟೆಂದು ತಿಳಿದಿರಲಿ.
ಗಂಡಸರು ಆಯುಧಗಳ ಬಚ್ಚಿಟ್ಟಿರಲಿ.
ಸಂದೇಹ ಬರುವಂತೆ ಯಾರೂ ನಗದಿರಲಿ,
ಕಣ್ಣಿನ ಕಪಟ ಪ್ರಕಟವಾಗದ ಹಾಗೆ ಅಭಿನಯವಿರಲಿ.

ಹಳ್ಳಿಯ ಯಾವ ಮೂಲೆಗೇ ಬರಲಿ
ಕರೆತನ್ನಿ ಅರಮನೆಗೆ.
ಲೆಕ್ಕ ಚುಕ್ತ ಮಾಡುವವರು ನಾವು, ನೀವಲ್ಲ.

ಆದರೆ ಹಟ್ಟಿಯ ಹೊರಗಡೆ ಕುದುರೆಯ ಖುರಪುಟ
ಕೇಳಿಸಲೇ ಇಲ್ಲ. ಗೌಡರ ಹುಬ್ಬೇರಿ ಕಣ್ಣಗಲವಾದದ್ದು
ಸಣ್ಣಗಾಗಲೇ ಇಲ್ಲ. ಯಾಕೆಂದರೆ ಅಂದುಕೊಂಡದ್ದೊಂದೂ-
ನಡೆಯಲೇ ಇಲ್ಲ:
ಆದರೆ ಆ ದಿನ ರಾತ್ರಿ
ಏಳು ಪಟ್ಟಿಯ ಹುಲಿಯೊಂದು ಹಟ್ಟಿಗೆ ಬಂದು
ಗರ್ಜಿಸಿದ್ದು ಕೇಳಿಸಿತು. ಆದ ಕೇಳಿ ಗೌಡರು
ಗಹಗಹಿಸಿ ನಕ್ಕು ಬೇಡರ ಕರೆದು
ಬೇಟೆಯಾಡಿರೆಂದು ಅಪ್ಪಣೆ ಮಾಡಿದರು.

ಆದರಿದೇ ಬೇರೆ ಹುಲಿ. ಕೊಟ್ಟಿಗೆಯ ದನ ತಿಂದು,
ಹಟ್ಟಿಯ ಕೂಸು ಕುನ್ನಿಗಳ ತಿಂದು ಅಟ್ಟಿಸಿ
ಕಾಡಿತು. ಕೊನೆಗೆ ಗೌಡರೇ ಬೇಟೆಗೆಂದು
ಸಿದ್ದರಾದರು. ಬಿಲ್ಲು ಬಾಣ ಬಲೆಗಳು ಸಿದ್ಧವಾದವು.
ಕೊಂಬು ಕಹಳೆ ಹಲಗೆಗಳ ದನಿ ದಿಕ್ಕಡರಿತು.
ಗೌಡರು ಬೇಟೆಗೆ ಹೊರಟು ನಿಂತರು.

(ಮೇಳ ಹಿಂದೆ ಸರಿದು ಗೌಡನ ಮನೆ ಕಾಣಿಸುತ್ತದೆ. ಗೌಡ ಬೇಟೆಯ ತಯ್ಯಾರಿ ನಡೆಸಿದ್ದಾನೆ. ಹೊರಗಡೆಯಿಂದ ಮಕ್ಕಳ ಆಟದ ಹಾಡು ಕೇಳಿಸುತ್ತದೆ🙂

ಬ್ಯಾಡ ಬ್ಯಾಡ ಹೋಗಬ್ಯಾಡ
ನನ್ನ ಮರಿ | ಗೂಡ ಬಿಟ್ಟು ಹೋಗಬ್ಯಾಡ |
ಹೊಂಚಿ ನಿಂತಿದ್ದಾನ ಬೇಡ
ಬಿಲ್ಲು ಬಾಣ ಗುರಿ ಹಿಡಿದಿದಾನ ನೋಡ ||

ಗೌಡ್ತಿ : (ಹೊರ ಬರುತ್ತಾ ) ಗೌಡಾ ಕೇಳಿದಿ?

ಗೌಡ : ಏನು?

ಗೌಡ್ತಿ : ಆಗಲೇ ಹೊಂಟು ನಿಂತೀಯೇನು?

ಗೌಡ : ಬ್ಯಾಟಿಗಾರರೆಲ್ಲಾ ತಯ್ಯಾರಾಗಿ ಕಾಯಾಕ ಹತ್ಯಾರ.

ಗೌಡ್ತಿ : (ನೆನಪಾಗಿ) ಅಯ್ ಶಿವನ! ನಾ ಇನ್ನs ಆರತೀ ಬೆಳಗಿಲ್ಲ.

ಗೌಡ : ಲಗು ಬೆಳಗು

ಗೌಡ್ತಿ : ಬ್ಯಾಟಿಗಿ ನೀ ಹೋಗಾಕs ಬೇಕೇನು?

ಗೌಡ : ನೀನs ನೋಡ್ತಿ: ದಿನಾ ದನಾಕರಾ ತಿನ್ನಾಕ ಹತ್ತೇತಿ. ಹೊರಕೇರ್ಯಾಗಿನ ನಾಕೈದ ಕೂಸ ತಿಂದೈತಿ. ಮಂದಿ ಯಾರೂ ಮನೀಬಿಟ್ಟು ಹೊರಬೀಳಧಾಂಗ ಆಗೇತಿ.

ಗೌಡ್ತಿ : ಬ್ಯಾಡರ್ನ ಕಳಿಸಿದರ ಆಗಾಣಿಲ್ಲೇನು?

ಗೌಡ : ಒಂದು ವಾರದಿಂದ ಅವರೆಲ್ಲಾ ಹಗ್ಗ ಬಲಿ ಹಿಡಕೊಂಡು ಕಾಡ ತುಂಬ ಅಡ್ಡಾಡಿದರೂ ಸಿಗುವೊಲ್ದು; ಕಾಣಬಾರದ?

ಗೌಡ್ತಿ : ನಿನ್ನಿ ರಾತ್ರಿ ನನಗ ಭಾಳ ಕೆಟ್ಟ ಕನಸ ಬಿದ್ದಿತ್ತು.

ಗೌಡ : ಬ್ಯಾಟಿ ಆಡಿ ಬಂದ ಮ್ಯಾಲ ಕೇಳ್ತೀನಿರು.

ಗೌಡ್ತಿ : ಈಗs ಕೇಳಿದರೇನಾಗತೈತಿ?

ಗೌಡ : ಲಗು ಹೇಳ ಹಂಗಾದರ, ಏನೇನ ಕನಸ ಕಂಡಿ?

ಗೌಡ್ತಿ : ಪಾರಂಬಿ ಕರ್ರೆವ್ವನ ಜಾತ್ರಿ ಆಗತಿತ್ತು. ನೀನು ಮತ್ತ ರಾಮಗೊಂಡ ಕೆಂಪ ರುಂಬಾಲ ಸುತ್ತಿಕೊಂಡು, ಹೊಸ ಅಂಗಿ ಹಾಕ್ಕೊಂಡ ಕೊರಳಾಗ ಮಾಲೀ ಹಾಕ್ಕೊಂಡು ತೇರಿನಾಗ ನಕ್ಕೋತಾ ಕುಂತಿದ್ರಿ. ಎಲ್ಲಾ ಮಂದಿ ಕುಡಿದವರ್ಹಾಂಗ ಕುಣಿದಾಡತಿದ್ದರು, ಆಮ್ಯಾಲಂದರ ಕೋಣ ಕಡ್ಯಾಕ ಹೋದ್ರಿ. ಕೋಣದ ಬದಲಿ..ನನಗ ಅಂಜಿಕಿ ಬರತೈತಿ….

ಗೌಡ : ಕನಸ ಹೇಳಾಕೂ ಹೆದರತೀಯಲ್ಲ. ಮುಖ ನೋಡಿಕೋಬಾರದ? ಬಿಳಚಿಕೊಂಡೈತಿ ! ಮುಂದೇನಾಯ್ತು ಹೇಳು.

ಗೌಡ್ತಿ : ಮುಂದ ಕೋಣ ಕಡಿಯೋ ಬದಲಿ ರಾಮಗೊಂಡನ್ನ ಕಡಿದಿರಿ ! ಕರ್ರೆವ್ವನ ಗುಡಿ ಬಿರಕ ಬಿಟ್ಟು, ಬಿರಿಕಿನಾಗಿಂದ ರಕ್ತ ಚಿಲ್ಲಂತ ಸಿಡೀತು. ನನಗ ನನ್ನ ಎದೀನs ಸೀಳೀಧಾಂಗ ಆಗಿ ಚೀರಿ ಎಚ್ಚರಾದೆ. ನೋಡಿದರ ಪಕ್ಕದಾಗ ನೀ ಅದೇನ ಕನಸ ಕಾಣತಿದ್ದೆಯೋ ಹ ಹಾ ಹಾ ಅಂತ ನಗಾಕ ಹತ್ತಿದ್ದಿ!

ಗೌಡ : ಹ ಹಾ ಹಾ… ಹೆದರಿದ್ದೀಯಲ್ಲಾ! ಇರು, ಬ್ಯಾಟಿ ಆಡಿ ಹುಲಿ ತರತೇನಿ. ಅದರ ಎದೆಗುಂಡಿಗಿ ತಿನ್ನು, ಹೆದರಿಕಿ ಹೋಗತೈತಿ. ಆಮ್ಯಾಲ ಕನಸಿನ ಅರ್ಥ ಮುದುಕಪ್ಪನ್ನ ಕೇಳೋಣು.

ಗೌಡ್ತಿ : ಇದೊಂದು ದಿನ ಬ್ಯಾಡರ್ನ ಬ್ಯಾಟಿಗಿ ಕಳಿಸಿದರ ಆಗಾಣಿಲ್ಲೇನು?

ಗೌಡ : ಊರಗಾರಿಕಿ ಹಿರಿಯಾ ಆಗಿ ಹಿಂದ ಕುಂತರ ಮಂದಿ ಏನಂದಾರು? ಹುಲಿ ಬ್ಯಾಟಿ ನನಗೇನು ಹೊಸದ? ನಾ ಕೊಲ್ಲೋದ ಇದs ಮೊದಲನೇ ಹುಲಿಯೇನು? ನೋಡ್ತಾ ಇರು, -ಹೊತ್ತು ಮುಳುಗೋದರೊಳಗ ಮೆರೂಣಿಗಿ ಮಾಡಿಕೊಂಡು ಹುಲಿ ತಂದರಾಯ್ತೋ ಇಲ್ಲೋ?

ಗೌಡ್ತಿ : ನನ್ನ ಮಾತಂದ್ರ ನಿನಗ ದರಕಾರs ಇಲ್ಲ.

ಗೌಡ : ಹೆಂಗಸಿನ ಮಾತೇನ ಕೇಳೋದು? ಗರಿ ಗರಕ್ಕಂದರ ‘ಅಯ್ ಶಿವನ!’ ಅಂತ ಎದಿ ಕಳಕೊಳ್ತಿ. ತಿರುಗಾ ಮುರುಗಾ ನಾಯಿ ಅಂಥಾದ್ದೊಂದ ಹುಲಿ; ಬ್ಯಾಟಿ ಆಡಿ ಬರತೀನಿ ಅಂದರ ಕನಸ ಹೇಳಿಕೊಂಡು ಚಿಂತೀ ಮಾಡಾಕ ಹತ್ತೀದಿ. ನಡಿ ಒಳಗ ನಡಿ.

ಗೌಡ್ತಿ : ಆರತಿ ಬೆಳಗತೇನಿರು.

(ಒಳಗೆ ಹೋಗುವಳು. ಜನರ ಗುಂಪು ಬರುವುದು.)

ಇರಿಪ್ಯಾ : ಎಪ್ಪಾ ಕರ್ರೆವ್ವ ಕಬೂಲಿ ಕೊಡವೊಲ್ಲಳು.

ಗೌಡ : ಅಂದರ?

ಇರಿಪ್ಯಾ : ಕರೀಮುದುಕ ಹರ್ಯಾಗಿಂದ ತಾಯೀ ಮುಂದsಕುಂತಾನ್ರಿ! ತಾಯಿ ಕಬೂಲಿ ಕೊಡವಲ್ಲಳು : ಇವ ಏಳವೊಲ್ಲ.

ಗೌಡ : ನಿಮಗೂ ಬುದ್ದಿಯಿಲ್ಲ, ಮುದುಕಪ್ಪಗೂ ಬುದ್ದಿಯಿಲ್ಲ. ಬ್ಯಾಟಿ ಆಡೋದಕ್ಕೂ ತಾಯೀ ಕಬೂಲಿ ಕೇಳ್ತಾರೇನ್ರೊ?

ಇರಿಪ್ಯಾ : ಇದು ಭಾಳ ದೊಡ್ಡ ಹುಲಿ ಅಂತ್ರಿ! ಯೋಳಪಟ್ಟಿ ಅದಾವಂತ!

ಗೌಡ : ಬಾರಾಪಟ್ಟಿ ಹುಲೀ ಮುಂದ ಏಳಪಟ್ಟಿ ಹುಲಿ ಎದಕ್ಕಾದೀತಲೆ? ಏ ಸಿಂಗ್ಯಾ, ಕಾಳೀ ಊದೋ ಮಗನs. ಹುಲಿ ಎಲ್ಲಿದ್ದರೂ ಕೇಳಿ ಅಂಜಿ ಹೇತ್ಕೋ ಬೇಕು, ಹಾಂಗ ಊದು.

(ಸಿಂಗ್ಯಾ ಕಹಳೆ ಊದುವನು. ಅಷ್ಟರಲ್ಲಿ ರಾಮಗೊಂಡ ಉತ್ಸಾಹದಿಂದ ಬರುವನು.)

ರಾಮಗೊಂಡ : ಎಪ್ಪ, ಬ್ಯಾಟಿಗಿ ನಾನೂ ಬರತೀನಿ.

ಗೌಡ : ಈ ಸಲ ಬ್ಯಾಡ ತಗಿ, ಇನ್ನೊಮ್ಮಿ ಬಂದೀಯಂತ. ಆಕಿಗೇನೋ ಕೆಟ್ಟ ಕನಸ ಬಿದ್ದೈತಂತ. ಹೋಗಿ ಸಮಾಧಾನ ಮಾಡು.

(ಗೌಡ್ತಿ ಆರತಿಯಿಲ್ಲದೇ ಬರುವಳು.)

ಗೌಡ : ಬರತೀನಿ.

(ಗೌಡ ತನ್ನ ಪರಿವಾರ ಸಮೇತ ಹೋಗುವನು. ಗೌಡ್ತಿ ಅವರು ಹೋದ ದಿಕ್ಕನ್ನೇ ನೋಡುತ್ತಿರುವಳು. ಮೆಲ್ಲನೆ ಮಕ್ಕಳಾಟದ ಹಾಡು ಕೇಳಿಸುವುದು🙂

ಬ್ಯಾಡ ಬ್ಯಾಡ ಹೋಗಬ್ಯಾಡ
ನಮ್ಮ ಮರಿ| ಗೂಡ ಬಿಟ್ಟು ಹೋಗಬ್ಯಾಡ ||
ಕಟ್ಟಿದಾವ ದಟ್ಟ ಮೋಡ
ಮೋಡದಾಗ | ತೂಗ್ಯಾಡತಾವ ಕರಿನೆರಳ ||
ಮ್ಯಾಲ ನೋಡ ಹಾಳ ಹದ್ದಾ
ಹದ್ದಿನ ಕಣ್ಣು | ಹರಿದಾಡತಾವ ನಿನ್ನ ಮ್ಯಾಗ ||

ಗೌಡ್ತಿ : ರಾಮಗೊಂಡಾ….

ರಾಮಗೊಂಡ : ಯಾಕಬೆ?

ಗೌಡ್ತಿ : ಆ ಹುಡಿಗೇರಿಗೆ ಇಲ್ಲಿ ಆಡಬ್ಯಾಡಂತ ಹೇಳು ಹೋಗು.

ರಾಮಗೊಂಡ : ಆಡಿದರ ಆಡಿಕೊಳ್ಳಲಿ ಬಿಡಬೇ.

ಗೌಡ್ತಿ : ಹಾಂಗಿದ್ದರ ಬ್ಯಾರೇ ಆಟ ಆಡರಿ ಅಂತ್ಹೇಳು.

ರಾಮಗೊಂಡ : ಆಡಿದರೇನಾಯ್ತಬೇ? ಆ ಹಾಡು ಕೇಳಾಕ ಭಾಳ ಚೆಂದೈತಿ.

ಗೌಡ್ತಿ : ಹೇಳಿದಷ್ಟು ಕೇಳು.

(ರಾಮಗೊಂಡ ಹೊರಗೆ ಹೋಗಿ ಮಕ್ಕಳನ್ನು ಬೆದರಿಸುವನು. ಹಾಡು ನಿಲ್ಲುತ್ತದೆ. ರಾಮಗೊಂಡ ಒಳಗೆ ಬಂದುನಾ ಗುಡೀ ಕಡೆ ಹೋಗಿ ಬರ್ತೀನಬೇಎಂದು ಹೇಳಿ ಹೋಗುವನು. ಹೊರಗಿನಿಂದ ಪಾರಿ ಬರುವಳು.)

ಗೌಡ್ತಿ : ಪಾರೀ, ಗುಡಿ ಕಡೆ ಹೋಗಿದ್ಯೇನು?

ಪಾರಿ : ಹೌಂದೆವ್ವ.

ಗೌಡ್ತಿ : ಕರಿಯಜ್ಜ ತಾಯೀ ಮುಂದ ಇನ್ನೂ ಹಾಂಗs ಕುಂತಾನಂತ ಹೌಂದ?

ಪಾರಿ : ಹೌಂದೆವ್ವ, ಯಾಕೋ ತಾಯಿ ತೊಯ್ದ ಹೊರಸಿನ್ಹಾಂಗ ಬಿಗಿದುಕೊಂಡು ಕುಂತಾಳ. ವಾಕ್ಯ ಆಗವೊಲ್ದು. ಗೌಡ ಅದ್ಯಾಕಷ್ಟು ಅವಸರ ಮಾಡಿ ಬ್ಯಾಟಿಗಿ ಹೋದ?

ಗೌಡ್ತಿ : ಬ್ಯಾಟಿಗಿ ಹೊಂಟಾಗೆಲ್ಲ ತಾಯೀ ವಾಕ್ಯ ಕೇಳ್ತಾರೇನಗ?

ಪಾರಿ : ಕೇಳಾಕಿಲ್ಲ ಖರೆ, ಆದರ ಕರೀಮುದುಕಗ ಅದೇನೋ ಭಾಲ ಕೆಟ್ಟ ಕನಸ ಬಿದ್ಹಿತ್ತಂತ. ಅದಕ್ಕs ತಾಯೀ ವಾಕ್ಯ ಆಗೋತನಕ ಬ್ಯಾಟಿಗಿ ಹೋಗಬ್ಯಾಡ ಗೌಡಾ-ಅಂತ ಹೇಳಿಕಳಿಸಿದ್ದ.

ಗೌಡ್ತಿ : ಈ ಗಂಡಸರಿಗೆ ಬುದ್ದಿ ಎಂದ ಬಂದೀತೋ? ನನಗೂ ಕೆಟ್ಟ ಕನಸು ಬಿದ್ದಿತ್ತು. ಹೋಗಬ್ಯಾಡ ಗೌಡಾ ಅಂದೆ. “ಹೆದರೀದಿ, ಹುಲಿ ಎದಿಗುಂಡಿಗೆ ತಿಂದೀಯಂತ ಇರು; ಗಾಬರಿ ಹೋಗತೈತಿ” ಅಂತಂದ ಹೋದ. ಆರತಿ ಬೆಳಗಬೇಕಂದರ ದೀಪ ಆರಿಹೋಯ್ತು. ಬ್ಯಾಡಂತ ಹೇಳಾಕ ಹೊರಗ ಬರೂದರೊಳಗ ಹೊಂಟ್ಹೋದ. ಏನ ಮಾಡ್ಲಿ? ಪಾರಂಬಿ ಕರ್ರೆವ್ವನs ಕಾಪಾಡಬೇಕು.

ಪಾರಿ : ಕಾಡಿನ ತುಂಬ ಕರ್ರೆವ್ವನ ಆಳಿಕಿ ಐತಿ ; ಏನಾದೀತು ಬಿಡs ಎವ್ವಾ. ಆದರೂ ಇದೊಂದ ದಿನ ಗೌಡ ತಡದಿದ್ದರ ಚಲೋ ಇತ್ತು.

ಗೌಡ್ತಿ : ಜೀವದಾಗ ಯಾಕೋ ಮುಳು ಮುಳು ಅಂತೈತಿ. ಏನ ಮಾಡಿದರೂ ಸಮಾಧಾನ ಆಗವೊಲ್ಲದು. ಇವ ಬ್ಯಾಟಿ ಆಡಿ ಮನೀಗಿ ಬಂದರ ಸಾಕು; ಕರ್ರೆವ್ವಗ ಬೆಳ್ಳೀ ಕಣ್ಣ ಮಾಡಿಸಿಕೊಡ್ತೀನಿ.

ಪಾರಿ : ಮಾಡಸೀಯಂತ ಯಾಕ ಚಿಂತೀ ಮಾಡ್ತಿ. ಬಿಡ ಎವ್ವ. ಒಂದ ತಪ್ಪ ಮಾಡಲಿಲ್ಲ, ಒಂದ ದೇವರ ಮರೆತಿಲ್ಲ. ಬೆಂಕ್ಯಾಗಿನ ಬಂಗಾರದಂಥಾಕಿ. ತಾಯಿ ನಿನ್ನ ಮಾತ ನಡಿಸಿಕೊಡದ s ಹೆಂಗಿದ್ದಾಳು? ಗೌಡ ಬಂದsಬರತಾನ, ನಿಶ್ಚಿಂತ ಇರು.

* * *