ಮೊದಲೀಗೆ ಅಲ್ಲಮ ಪ್ರಭುವಿಗೆ ಶರಣಾರ್ಥಿ
ಕೂಡಿ ಕುಂತ ಜನಕೆಲ್ಲಾ ನಮ್ಮ ನಮನಾ|
ಕಲಿಯುಗದೊಳಗಿನ ಕೆಥೆಯ ವಿಸ್ತಾರವ
ತಿಳಿಸಿ ಹೇಳೇವು ಕೇಳಬೇಕ್ರಿ ಜನಾ ||

ಕೂಡಿ ಕುಂತ ದೈವಕ್ಕ ಕೈ ಮುಗದ ಹೇಳತೇವು
ಮರೆಯಿತಿ ಮುಂದ ಬಂದ್ರ ಚೂರ ಕಸರಾ |
ಎಪ್ಪಾ ಸ್ವಾಮಿ ಗುರುದೇವ ತಪ್ಪ ಮರೆತು ಒಪ್ಪಕೊಡ
ನೆಪ್ಪಿನಾಗ ಇಡೋ ಹಾಂಗ ಸರ್ವರಾ ||

ಏ ಎವ್ವಾ ಸರಸೋತಿ ತಾಳಕ್ಕ ನಲಿವಾಕಿ
ನಾಲೀಗಕ್ಷರ ಕಲಿಸ ಐದಾರಾ |
ಹಿರಿಯರ ಪಿರತೀಗಿ ಸರಿದೊರೆ ಸಮನಿಲ್ಲ
ಕೇಳಾವರ ಮ್ಯಾಲಿರಲಿ ನಿರಂತರಾ ||

ಕತಿ ಹೇಳತೇವ್ರಿ ಮುಂದಿಂದಾ
ಇರು ! ಗುರುವೆ ನಾಲಿಗೆಯ ಹಿಂದಾ
ಆಗ | ದಿರಲಿ ಒಂದು ಸಹ ಕುಂದಾ
ನಾವು | ನಿಮ್ಮ ಕರುಣದ ಕಂದಾ

ಗೌಡ್ತಿ ಬ್ಯಾನೀ ತಿಂದ ಗಂಡ ಹಡೆದ ಗಂಗಾಳ ಹೊಡೆದ
ಐದೇರೆಲ್ಲ ಜೋ ಅಂದ ಕತಿ ನಿವಳಾ
ಹೇಳತೇವು ಕೇಳ್ರಿ ಜನಾ ನಿಮ ಮುಂದ ಕತಿಯೊಂದ
ನಮ್ಮ ಮುಂದ ಕುಂಡ್ರಿ ಹಿಂಗ ತೆರೆದ ಮನಾ ||