ಚಂದ್ರಶೇಖರ ಕಂಬಾರರ ನಾಟಕಗಳ ಬರೆವಣಿಗೆಯಲ್ಲಿರುವ ಇಬ್ಬಂದಿತನ ಅವರ ಸಾಹಿತ್ಯಿಕ ವ್ಯಕ್ತಿತ್ವದಲ್ಲಿ ಒಂದು ಸಮಸ್ಯೆಯೂ ಹೌದು, ಅವರ ನಾಟಕಗಳಲ್ಲಿಯ ಶಕ್ತಿಕೇಂದ್ರವೂ ಹೌದು. ‘ಋಷ್ಯಶೃಂಗ’, ‘ಜೋಕುಮಾರಸ್ವಾಮಿ’, ‘ಕಾಡುಕುದುರೆ’, ‘ಸಿರಿಸಂಪಿಗೆ’, ಇಂಥ ಕೃತಿಗಳು ಒಂದು ಗುಂಪಿಗೆ ಸೇರಿದ್ದರೆ, ಅವರ ‘ಚಾಳೇಶ’, ‘ಜೈಸಿದ ನಾಯಕ’, ‘ಹರಕೆಯ ಕುರಿ’ ಇವು ಇನ್ನೊಂದು ಗುಂಪಿಗೆ ಸೇರಿದ್ದರೆ, ಅವರ ‘ಚಾಳೇಶ’, ‘ಜೈಸಿದ ನಾಯಕ’, ‘ಹರಕೆಯ ಕುರಿ’ ಇವು ಇನ್ನೊಂದು ಗುಂಪಿಗೆ ಸೇರಿದ ಕೃತಿಗಳಾಗಿವೆ. ಎರಡನೆಯ ಗುಂಪಿನ ನಾಟಕಗಳ ಆಸಕ್ತಿ ಬಹಿರ್ಮುಖವಾದದ್ದು, ಅವುಗಳ ಮುಖ್ಯ ವಸ್ತುವೆಂದರೆ ಸಮಕಾಲೀನವಾದ ರಾಜಕೀಯ. ‘ಸಾಂಬಶಿವ ಪ್ರಹಸನ’ದಂಥ ಕಲ್ಪತೆಯ ವೇಷತೊಟ್ಟ ನಗೆನಾಟಕದಲ್ಲಿ ಕೂಡ ನಿರೂಪಿತವಾಗಿರುವದು ಇತಿಹಾಸದ ಸಂದರ್ಭದಲ್ಲಿ ಪ್ರಕಟವಾಗುವ ನಾಗರಿಕ ಜೀವನವಾಗಿದೆ. ಇಪ್ಪತ್ತನೆಯ ಶತಮಾನದಲ್ಲಿ ರಾಜಕೀಯ ಪ್ರಜ್ಞೆಯಿಂದ ಮನುಷ್ಯನಿಗೆ ಬಿಡುಗಡೆಯಿಲ್ಲ ಎಂಬ ಮಾತು ಈಗ ಸರ್ವಗ್ರಾಹ್ಯವಾಗಿದೆ. ಅಂದ ಮೇಲ ಕಂಬಾರರ ಈ ಕೃತಿಗಳಲ್ಲಿಯ ರಾಜಕೀಯದ ಅಭಿವ್ಯಕ್ತಿ ಸಹಜವಾಗಿದೆ. ಈ ನಾಟಕಗಳಿಗೆ ಅವುಗಳ ಬೆಲೆಯೂ ಇದೆ. ವಿಡಂಬನದ ತೀಕ್ಷ್ಣತೆಯಿಂದಾಗಿ ಈ ಕೃತಿಗಳ ಪ್ರಭಾವ ಬಹುಕಾಲ ಬಾಳುವಂಥ ಸಾಮರ್ಥ್ಯವನ್ನು ಪಡೆದಿದೆ.

ಆದರೆ ಮೊದಲ ಗುಂಪಿಗೆ ಸೇರಿದ ನಾಟಕಗಳ ರೀತಿ ಸಂಪೂರ್ಣ ಬೇರೆಯಾಗಿದೆ. ೧೯೭೨ರಲ್ಲಿ ಕಂಬಾರರ ‘ಜೋಕುಮಾರ ಸ್ವಾಮಿ’ಯ ಪ್ರದರ್ಶನ ಬೆಂಗಳೂರಲ್ಲಿ ಮೊದಲ ಸಲ ಆದಾಗ ಅದನ್ನು ಕಣ್ಣಾರೆ ಕಂಡವರಲ್ಲಿ ನಾನೂ ಒಬ್ಬವನಾಗಿದ್ದೆ. ಆ ಹೊತ್ತಿಗಾಗಲೇ ಕಂಬಾರರ ‘ಋಷ್ಯಶೃಂಗ’ದ ಪರಿಚಯ ನನಗಾಗಿತ್ತು. ‘ಜೋಕುಮಾರ ಸ್ವಾಮಿ’ಯ ಹಸ್ತಪ್ರತಿಯನ್ನೂ ಓದಿ ಮುಗಿಸಿದ್ದೆ. ಅಲ್ಲದೆ ‘ಸಂಗ್ಯಾಬಾಳ್ಯಾ’ ಬಾಲ್ಯದಿಂದಲೇ ನನ್ನ ಕಣ್ಣು ಸೆಳೆದ ನಾಟಕವಾಗಿತ್ತು. ಇಷ್ಟಾಗಿಯೂ ‘ಜೋಕುಮಾರ ಸ್ವಾಮಿ’ಯ ಅಂದಿನ ಪ್ರದರ್ಶನದ ಪ್ರಭಾವ ಅಭೂತ ಪೂರ್ವವಾಗಿತ್ತು. ಕಳೆದುಕೊಂಡಿದ್ದ ರಂಗಭೂಮಿಯನ್ನು ಜೀವಂತವಾಗಿ ತಿರುಗಿ ಪಡೆದದ್ದನ್ನು ಅಂದಿನ ಪ್ರೇಕ್ಷಕರು ಅನುಭವಿಸಿದ್ದರು. ಅದನ್ನು ಜಾನಪದ ರಂಗಭೂಮಿ ಎಂದು ಗುರುತಿಸಲಾಯಿತು. ಆದರೆ ಈ ಜಾನಪದ ರಂಗಭೂಮಿ ಬೆಂಗಳೂರಿನಂಥ ಅತ್ಯಂತ ಆಧುನಿಕವಾದ ನಗರದ ಪ್ರೇಕ್ಷಕರನ್ನು ಹೇಗೆ ಆಕರ್ಷಿಸಿತು? ಇದು ಇಂದಿಗೂ ವಿಚಾರ ಮಾಡಬೇಕಾದ ವಿಷಯವಾಗಿದೆ. ನಮ್ಮ ಹಳೆಯ ಸಂಸ್ಕೃತ ನಾಟಕಗಳ ರಂಗಭೂಮಿಗೂ ನಮ್ಮ ಜಾನಪದ ರಂಗಭೂಮಿಗೂ ವ್ಯತ್ಯಾಸವಿದೆಯೆ? ಅದಕ್ಕೂ ಮುಂದೆ ಹೋಗಿ ಇನ್ನೊಂದು-ಆದರೆ ಈ ಪ್ರಶ್ನೆಗೆ ಸಂಬಂಧಿಸಿದ ಪ್ರಶ್ನೆಯನ್ನೂ ಕೇಳಬಹುದು-ನಮ್ಮ ಪುರಾಣಗಳಿಗೂ ಮತ್ತು ಜಾನಪದ ದಂತಕತೆಗಳಿಗೂ ವ್ಯತ್ಯಾಸವಿದೆಯಾ? ವ್ಯತ್ಯಾಸವಿದೆ ಮತ್ತು ವ್ಯತ್ಯಾಸವಿಲ್ಲ ಎಂದು ಉತ್ತರ ಹೇಳಬೇಕಾಗುತ್ತದೆ. ನಮ್ಮ ಜಾನಪದ ರಂಗಭೂಮಿ ಸಂಸ್ಕೃತ ರಂಗಭೂಮಿಯ ಅನೇಕ ತಂತ್ರಗಳನ್ನು ಸಮಯಗಳನ್ನು ಬಳಸಿಕೊಂಡಿದೆ, ಮತ್ತು ತನ್ನ ಕೆಲವು ತಂತ್ರ ವಿಶೇಷಗಳನ್ನು ಸಂಸ್ಕೃತ ರಂಗಭೂಮಿಗೆ ದಾನ ಮಾಡಿದೆ. ಅಲ್ಲದೆ ಈ ಎರಡೂ ರಂಗಭೂಮಿಗಳ ಸೈದ್ದಾಂತಿಕ ತಳಹದಿ ಒಂದೇ ಆಗಿದೆ. ಈ ರಂಗಭೂಮಿಗಳು ಪಡೆದಿದ್ದ ಸಂಸ್ಕಾರಗಳು ಬೇರೆ ಬೇರೆಯಾಗಿರುವದರಿಂದ ಅವುಗಳಲ್ಲಿ ವ್ಯತ್ಯಾಸವೂ ಇದೆ. ಕಂಬಾರರು ಇಂಥ ಒಂದು ರಂಗಭೂಮಿಯನ್ನು ಬದುಕಿಸಿಕೊಟ್ಟರು.

ಈ ಸಂಗತಿಗಿಂತ ಹೆಚ್ಚು ಮಹತ್ವದ್ದಾಗಿರುವದು ಕಂಬಾರರ ನಾಟಕಗಳ ಅರ್ಥಪೂರ್ಣತೆ. ‘ಹೇಳತೇನ ಕೇಳ’ ಎಂಬ ತಮ್ಮ ಮೊದಲ ಕಥನ ಕವನದಲ್ಲಿ ಕಂಬಾರರು ತಮ್ಮ ಮೂಲಭೂತವಾದ ಪುರಾಣ ಕತೆಯನ್ನು ನಿರೂಪಿಸಿದರು. ಈ ಪುರಾಣತೆ ಅವರ ಋಷ್ಯಶೃಂಗ ಮೊದಲಾದ ಮೊದಲ ಗುಂಪಿನ ಎಲ್ಲ ನಾಟಕಗಳಿಗೆ ವಸ್ತುವನ್ನು, ಪಾತ್ರಗಳನ್ನು ಅಲ್ಲದೆ ಅರ್ಥವಂತಿಕೆಯನ್ನು ಕೊಟ್ಟಿದೆ. ಕಥನ ಕಾವ್ಯದಲ್ಲಿ ಮೂಡಿ ಬಂದದ್ದು ಹಲವು ನಾಟಕಗಳಲ್ಲಿ ಬೆಳವಣಿಗೆಯನ್ನು ಪಡೆದ ಈ ಕತೆ ‘ಹುಲಿಯ ನೆರಳು’ ನಾಟಕದಲ್ಲಿ ಪರಾಕಾಷ್ಠೆಯನ್ನು ಮುಟ್ಟಿದೆ. ಕಾಲಾನುಕ್ರಮದಲ್ಲಿ ಈ ನಾಟಕ ಮೊದಲು ಬರಬೇಕಾಗಿತ್ತು. ‘ಋಷ್ಯಶೃಂಗ’ ಆಮೇಲೆ ಬರಬೇಕಾಗಿತ್ತು. ‘ಹುಲಿಯ ನೆರಳು’ ನಾಟಕದ ರಾಮಗೊಂಡ ‘ಋಷ್ಯಶೃಂಗ’ ನಾಟಕದ ಬಾಳಗೊಂಡನ ಅಣ್ಣ. ಅವನ ಬಲಿ ಆದ ಮೇಲೆ ಬಾಳಗೊಂಡನ ಕತೆ ಪ್ರಾರಂಭವಾಗುತ್ತದೆ. ಇದು ಕಥಾನುಕ್ರಮ. ಆದರೆ ಪುರಾಣಕತೆ ಕೂಡ ಹೊಸ ಅರ್ಥವಂತಿಕೆಗೆ ಇಂಬುಗೊಡಲು ಬೆಳೆಯುತ್ತ ಹೋಗುವದರಿಂದ ನಾಟಕಗಳಲ್ಲಿ ಈ ಕ್ರಮ ವಿಪರ್ಯಸ್ತವಾಗಿದೆ.

ಪುರಾಣಿಕತೆ ಮತ್ತು ಜಾನಪದ ಕತೆ ಇವುಗಳ ನಡುವಿನ ವ್ಯತ್ಯಾಸ ಕಣ್ಣಿಗೆ ಕಾಣುವಷ್ಟು ಸ್ಪಷ್ಟವಾಗಿದ್ದರೂ ಅದು ತಾತ್ವಿಕ ವ್ಯತ್ಯಾಸವಲ್ಲ. ಪುರಾಣದಲ್ಲಿ ನಡೆಯುವುದೆಲ್ಲ ಜಾನಪದ ಕತೆಯಲ್ಲಿ ಪ್ರಾದೇಶಿಕ  ಪರಿಸರದಲ್ಲಿ ಸಣ್ಣ ಪ್ರಮಾಣದಲ್ಲಿ ನಡೆಯುವುದೆಲ್ಲ ಜಾನಪದ ಕತೆಯಲ್ಲಿ ಪ್ರಾದೇಶಿಕ ಪರಿಸರದಲ್ಲಿ ಸಣ್ಣ ಪ್ರಮಾಣದಲ್ಲಿ ನಡೆಯುತ್ತದೆ. ‘ಹೇಳತೇನ ಕೇಳ’ದ ಕತೆ ನೋಡಲಿಕ್ಕೆ ಜಾನಪದ ಕತೆ, ಆದರೆ ಸತ್ವದಲ್ಲಿ ಪುರಾಣಕತೆ. ಪುರಾಣ ಕತೆಯ ವಿಶ್ವರಚನೆ ಇದಕ್ಕಿಲ್ಲ. ಇಲ್ಲಿಯ ದೇವಾನುದೇವತೆಗಳು ಪಾರಂಬಿ ಕರ್ರೆವ್ವ ಮತ್ತು ಗುಡ್ಡದ ನಿರವಾನಿ. ಎರಡೂ ನೆಲಕ್ಕಂಟಿಕೊಂಡ ಸ್ಥಿರ ದೇವತೆಗಳು. ರಾಕ್ಷಸನ ನಿಜ ಸ್ವರೂಪ ನಮಗೆ ಗೊತ್ತಿಲ್ಲ. ಆದರೆ ಅವನ್ನು ಕಾಣಿಸಿಕೊಳ್ಳುವುದು ಸತ್ತ ರಾಯಗೊಂಡನ ರೂಪದಲ್ಲಿ. ಕತೆಯಲ್ಲಿ ಅವನು ಪ್ರತಿನಾಯಕನಾಗಿದ್ದರೂ ಅವನ ಕೆಲಸ ಮಾತ್ರ ಸುಳ್ಳು ನಾಯಕನದು. ರಾಕ್ಷಸ ಜೀವನಕ್ಕೆ ವಿಮುಖವಾದ ಶಕ್ತಿಯನ್ನು ಪ್ರತಿನಿಧಿಸುತ್ತಾನೆ. ಅವನಿಗೆ ಮೂಲದಲ್ಲಿ ಅಸ್ತಿತ್ವವಿಲ್ಲದಿರುವುದರಿಂದ (ಉಪನಿಷತ್ತು ಹೇಳುವ ಅಸತ್) ಅವನು ಒಮ್ಮೆ ಹುಲಿಯಾಗಿ, ಇನ್ನೊಮ್ಮೆ ಸುಳ್ಳುನಾಯಕನಾಗುತ್ತಾನೆ. ವೃಕ್ಷ ಮತ್ತು ಪರ್ವತಗಳ (ಇವು ಸ್ಥಿರದೇವತೆಗಳು) ಅಚಲ ಸ್ಥಿತಿಗೂ ಸುಳ್ಳುನಾಯಕನ ಚಲನ ಶೀಲತೆಗೂ ಇರುವ ವಿರೋಧ ಮಹತ್ವದ್ದಾಗಿದೆ. ಇಲ್ಲಿ ನಾಯಕರು ಮೂರು ಜನ-ರಾಯಗೊಂಡ, ರಾಮಗೊಂಡ ಮತ್ತು ಬಾಳಗೊಂಡ. ಮೊದಲಿನವನು ಸತ್ತುಹೋದರೆ ಬಾಳಗೊಂಡ. ಇದ್ದೂ ಸತ್ತಂತಿರುತ್ತಾನೆ. ಇವರ ಪರಾಕ್ರಮ ಮತ್ತು ಇವರ ಕಾಮ ಜಗತ್ತನ್ನು ಬದುಕಿಸಿಕೊಳ್ಳಬೇಕು. ನಾಯಕರ ಭಾವನುಭಾವಗಳು ಸುಳ್ಳುನಾಯಕನ ಭಾವಾನುಭಾವಗಳಿಗಿಂತ ಭಿನ್ನವಾಗಿವೆ. ಅವರ ನಡುವಿನ ಸಂಘರ್ಷದ ಸೋಲು ಗೆಲುವಿನಗಿಂತ ಈ ಭಿನ್ನತೆ ಹೆಚ್ಚು ಮಹತ್ವದ್ದೆಂದು ಕಾಣುತ್ತದೆ. ರಾಕ್ಷಸ, ಹುಲಿ, ಸತ್ತಗೌಡ-ಈ ರೂಪಾಂತರ ನಾಯಕರಿಗಿಲ್ಲ. ಪಾರಂಬಿ ಕರ್ರೆವ್ವ ಮತ್ತು ಗುಡ್ಡದ ನಿರವಾನಿಯಂತೆ ನಾಯಕರಿಗಿರುವದು ಒಂದೇ ರೂಪ, ವೈಭವದಿಂದ ಬಾಳಿದ್ದ ರಾಯಗೊಂಡ ಹುಲಿಯೊಡನೆ ಹೋರಾಡಿ ವೀರನಾಗಿ ಸತ್ತ. ಹುಲಿಯ ಹಾಲನ್ನು ತಂದ ರಾಮಗೊಂಡನೂ ವೀರನೇ. ಆದರೆ ರಾಮಗೊಂಡನಿಗೆ ತನ್ನ ಇನ್ನೊಂದು ರೂಪದ ಸುಳಿವು ಸಿಕ್ಕಿದೆ. ಬಾಲಗೊಂಡನಿಗೆ ತಾನು ನಿಜವೋ ಇನ್ನೊಂದು ರೂಪವೇ ನಿಜವೋ ಎಂಬ ಭ್ರಮೆ ಕಾಡಿ ಮುಕ್ಕಿದೆ. ಕಣ್ಣಿಗೆ ಕಾಣದ ರಾಕ್ಷಸ ಹುಲಿಯಾಗಿ, ತಂದೆಯಾಗಿ ಬಸಿರಿನಲ್ಲಿ ಮೊಳೆತ ಇನ್ನೊಂದು ಗರ್ಭ ಮುಂದೆ ಬಾಳಗೊಂಡನಾಗಿ ಮಾಯೆಯ ಸಂಬಂಧಗಳು ದೃಗ್ಭಂಧವಾಗಿ, ದಿಬ್ಬಂಧವಾಗಿ ಕಾಡುತ್ತವೆ, ಈ ಗೊಂದಲದಲ್ಲಿ, ಕಣ್ಣಟ್ಟಿನಲ್ಲಿ ಸತ್ಯವನ್ನು ತಿಳಿಯಬೇಕೆನ್ನುವ ಛಲ ಎಲ್ಲರನ್ನೂ ಕಾಡುತ್ತದೆ. ‘ಋಷ್ಯಶೃಂಗ’ ಮತ್ತು ‘ಹುಲಿಯ ನೆರಳು’ ಈ ಎರಡೂ ನಾಟಕಗಳಲ್ಲಿ ಹೀಗೆ ಸತ್ಯದ ಹುಡುಕಾಟ ಪ್ರಮುಖ ವಸ್ತುವಾಗಿಬಿಟ್ಟಿದೆ.

ತಮ್ಮನ್ನು ಹುಟ್ಟಿಸಿದ ತಂದೆ-ತಾಯಿಯರನ್ನು ಅರಿತುಕೊಳ್ಳುವ ಹಂಬಲ, ಹೋರಾಟಗಳು ಸತ್ಯವನ್ನು ತಿಳಿಯುವ ಕ್ರಿಯೆಗೆ ರೂಪಕವಾಗುತ್ತವೆ. ಬಾಳಗೊಂಡ ಮತ್ತು ರಾಮಗೊಂಡರ ಛಲ ಎಡಿಪಸ್ ಮತ್ತು ಹ್ಯಾಮ್ಲೆಟ್‌ರ ಛಲಕ್ಕಿಂತ ಬೇರೆ ಏನಲ್ಲ. ಸಂದಿಗ್ಧವಾದ ಹುಟ್ಟು ಕೇವಲ ಸಾಮಾಜಿಕ ಸಮಸ್ಯೆಯಾಗಬೇಕಿಲ್ಲ. ಅದು ತಾತ್ವಿಕ ಸಮಸ್ಯೆಯೂ ಹೌದು. ಎಡಿಪಸ್ ಮತ್ತು ಹ್ಯಾಮ್ಲೆಟ್‌ರಲ್ಲಿ ಅದು ಸತ್ಯದ ಅನ್ವೇಷಣೆಯ ರೂಪಕವಾಗುತ್ತದೆ. ತಂದೆಯನ್ನು ಕೊಂದು ತಾಯಿಯನ್ನು ಮದುವೆಯಾಗುವ ದುರಂತದಲ್ಲಿ ಹುಟ್ಟುವ ಪ್ರಶ್ನೆಯೊಂದರೆ-ತಾನು ಯಾರ ಮಗ? ಮತ್ತು ತಾನು ಹುಟ್ಟಿದ್ದು ಒಬ್ಬ ವ್ಯಕ್ತಿಯಿಂದಲೋ? ಅಥವಾ ಇಬ್ಬರಿಂದಲೋ? ಇವು ಮೂಲಭೂತವಾದ ಪ್ರಶ್ನೆಗಳು. ಸಣ್ಣ ಹುಡುಗನಿಗೆ ದನಿ ಒಡೆದು ಪ್ರಾಯ ಬಂದಾಗ ಒಬ್ಬನಿದ್ದವನು ಇಬ್ಬರಾದ ಅನುಭವ ಬರುತ್ತದೆ. ನೆಲದ ಮೇಲೆ ಬಿದ್ದ ನೆರಳು, ಕನ್ನಡಿಯೊಳಗಿನ ಪ್ರತಿಬಿಂಬ, ಕತ್ತಲೆಯ ಏಕಾಂತದಲ್ಲಿ ತನಗೇಕೇಳಿಸುವ ತನ್ನ ದನಿ -ಇವೆಲ್ಲ ವ್ಯಕ್ತಿಯ ಇಮ್ಮುಡಿ ರೂಪಗಳು. ಅಸ್ತಿತ್ವದ ಒಡಲಲ್ಲಿ ಅನಿವಾರ್ಯವಾಗಿ ಹುಟ್ಟುವ ಸಮಸ್ಯೆಗಳು ಇವಾಗಿವೆ. ಮನುಷ್ಯನ ಹುಟ್ಟಿಗೂ ಬೆಳೆಯುವ ಅವನ ವ್ಯಕ್ತಿತ್ವಕ್ಕೂ ಇರುವ ಸಂಬಂಧ ಕಾರ್ಯ ಕಾರಣ ಸಂಬಂಧವಲ್ಲ. ಅದರಂತೆಯೇ ಮನುಷ್ಯ ಮತ್ತು ದೇವರ ಸಂಬಂಧವೂ ಅಲ್ಲ.

‘ಹುಲಿಯ ನೆರಳು’ ನಾಟಕದ ವಿಶೇಷತೆಯೆಂದರೆ ಕೇವಲ ಸತ್ಯ ಶೋಧನೆ ಅಲ್ಲ. ಈ ನಾಟಕದ ನಾಯಕ ರಾಮಗೊಂಡ ಸತ್ಯದ ಸ್ವರೂಪಕ್ಕಾಗಿ ಹಂಬಲಿಸುತ್ತಾನೆ. ‘ಅಪ್ಪಾ, ಸೂರ್ಯನ್ನ ಮೀರಿದ ಬೆಳಕಿನ ಸ್ವಾಮಿ, ಈ ಲೋಕವನ್ನ ಅಖಂಡ ಸತ್ಯವಾಗಿ ತೋರಿಸೋ ತಂದೇ… ನೆರಳಿಲ್ಲದ ಸತ್ಯ ತೋರಿಸೋ ತಂದೇ’-ಇದು ರಾಮಗೊಂಡನ ಪ್ರಾರ್ಥನೆಯಾಗಿದೆ. ಎಡಿಪಸ್ ಅಪೋಲೋ ದೇವರಿಗೆ ಇದೇ ರೀತಿಯ ಪ್ರಾರ್ಥನೆಯನ್ನು ಸಲ್ಲಿಸುತ್ತಾನೆ. ಇಡೀ ಲೋಖವನ್ನು ಅಖಂಡ ಸತ್ಯವಾಗಿ  ತೋರಿಸೋ ತಂದೇ… ನೆರಳಿಲ್ಲದ ಸತ್ಯ ತೋರಿಸೋ ತಂದೇ’- ಇದು ರಾಮಗೊಂಡನ ಪ್ರಾರ್ಥನೆಯಾಗಿದೆ. ಎಡಿಪಸ್ ಅಪೋಲೋ ದೇವರಿಗೆ ಇದೇ ರೀತಿಯ ಪ್ರಾರ್ಥನೆಯನ್ನು ಸಲ್ಲಿಸುತ್ತಾನೆ. ಇಡೀ ಲೋಕವನ್ನು ಅಖಂಡ ಸತ್ಯವಾಗಿ ತೋರಿಸುವ ನೆರಳಿಲ್ಲದ ಸತ್ಯ ಇವರಿಗೆ ಬೇಕಾಗಿದೆ. ಆದರೆ ಇಂಥ ಛಲಗಾರರು ಸತ್ಯದ ಬಹುರೂಪಿತ್ವವನ್ನು ಕಡೆಗಣಿಸುತ್ತಾರೆ. ಎಡಿಪಸ್, ಹ್ಯಾಮ್ಲೆಟ್, ರಾಮಗೊಂಡ ಇವರೆಲ್ಲ ಗಂಡಸರು-ಇವರ ಕಣ್ಣಿಗೆ ಕಾಣುವ, ಬುದ್ಧಿಗೆ ತಿಳಿಯುವ ಸತ್ಯದ ಸ್ವರೂಪ ಒಂದೇ ಆಗಿದೆ. ಇವರಿಗೆ ಬೇಕಾಗಿರುವದು ಬೆಳಕಿನ ಸತ್ಯ. ಇವರಿಗೆ ಕತ್ತಲೆಯ ಸತ್ಯ ಕಣ್ಣುಕಟ್ಟಾಗುತ್ತದೆ. ಮಾಯೆಯಾಗುತ್ತದೆ. ಮಾನವ ಸಂಬಂಧಗಳು ತೊಡತೊಡಕಾಗಿ ಬಾಳುವೆ ಒಂದು ಒಗಟಾಗುತ್ತದೆ. ತಾಯಿಯಾದವಳು ಹೆಂಡತಿಯಾಗಿ, ಕಕ್ಕನಿದ್ದವನು ಅಪ್ಪನಾಗಿ ಅಪ್ಪನಾದವನು ಸತ್ತು ಭೂತವಾಗಿ, ರಂಗಹೊಯ್ದ ನೆಲದ ಮೇಲೆ ಅಶರೀರ ವಾಣಿಗಳು ಕಣಿ ಹೇಳುತ್ತವೆ. ಈ ನಾಯಕರು ತೊಡಕಿಲ್ಲದೆ ಸರಳವಾದ, ನೆರಳಿಲ್ಲದ ಸತ್ಯವನ್ನು ಬೇಡತೊಡಗುತ್ತಾರೆ.

‘ಹುಲಿಯ ನೆರಳು’ ನಾಟಕದ ವಿಶೇಷತೆಯಿರುವದು ಈ ಸಮಸ್ಯೆಯನ್ನು ಗುರುತಿಸುವದರಲ್ಲಿ ಎಂದು ನನಗೆ ತೋರುತ್ತದೆ. ಹುಲಿಯನ್ನು ಸೋಲಿಸಿ ಹಾಲುತಂದ ರಾಮಗೊಂಡ ಯಕ್ಷಿಣಿಯಿಂದ ಕನ್ನಡ, ಕೀಲುಕುದುರೆ ಮತ್ತು ಕೊಂಬುಗಳನ್ನು ಪಡೆದು ಸತ್ಯದ ದರ್ಶನಕ್ಕಾಗಿ ಸಿದ್ಧನಾಗುತ್ತಾನೆ. ಇವುಗಳ ಸಹಾಯದಿಂದ ಸತ್ಯವನ್ನು ಕಾಣಬಹುದು, ಆದರೆ ಅದು ಸತ್ಯದ ಆಂಶಿಕ ದರ್ಶನ. ಅವನ ಎದುರಿಗಿರುವ ತಾಯಿ ಸಮಗ್ರ ಸತ್ಯವನ್ನು ತೋರಿಸಲು ಸಿದ್ಧಳಾಗಿದ್ದಾಳೆ. ತನ್ನನ್ನು ಕೊಲ್ಲದೆ, ಒಳಗಿನ ಗರ್ಭವನ್ನು ನಾಶ ಮಾಡದೆ ಅದು ಸಾಧ್ಯವಿಲ್ಲ ಎಂದು ಹೇಳುತ್ತಾಳೆ. ಹುಟ್ಟು ಸಾವುಗಳ ನಡುವಿನ ಒಳಸೂತ್ರವನ್ನು ಕೊಯ್ಯದೆ ಪೂರ್ಣ ಸತ್ಯ ಕಾಣುವುದಿಲ್ಲ. ರಾಮಗೊಂಡ ಮತ್ತು ಸತ್ಯ ಇವುಗಳ ನಡುವೆ ತಾಯ ಹೊಟ್ಟೆಯೊಳಗಿನ ಗರ್ಭ ಅಡ್ಡಗೋಡೆಯಾಗಿ ನಿಂತಿದೆ. ‘ಕಾಣುವ ಈ ಕುರುಡು, ಕಾಣsದ ಆ ಕುರುಡು, ಕಂಡೇನು ಕಾಣದಿದ್ದೇನೆ. ಏಳಮ್ಮ ಮಲಗಿರುವ ತಾಯಿ ಪೃಥಿವೀ’ ಎಂದ ಮಧುರಚನ್ನರಿಗೆ ಈ ಸಮಸ್ಯೆಯ ಅರಿವಾಗಿತ್ತು. ಈ ನಾಟಕದಲ್ಲಿಯ ಗೌಡಿತಿ ಸಚರಾಚರನ್ನರಿಗೆ ಈ ಸಮಸ್ಯೆಯ ಅರಿವಾಗಿತ್ತು. ಈ ನಾಟಕದಲ್ಲಿಯ ಗೌಡಿತಿ ಸಚರಾಚರವನ್ನೆಲ್ಲ ಗರ್ಭದಲ್ಲಿಟ್ಟುಕೊಂಡು ಸತ್ಯಕ್ಕೆ ಬೆನ್ನುಕೊಟ್ಟು ನಿಂತ ಪೃಥಿವಿಯಾಗಿ ನಾಟಕವನ್ನೆಲ್ಲ ವ್ಯಾಪಿಸಿದ್ದಾಳೆ. ಮೂವರು ಗೌಡರು, ಒಬ್ಬ ರಾಕ್ಷಸ ಈ ಶಕ್ತಿಯ ಎದುರು ನತಮಸ್ತಕರಾಗಿರುವದು ಈ ನಾಟಕದ ದರ್ಶನವಾಗಿದೆ.

ಕಂಬಾರರ ಈ ನಾಟಕವನ್ನು ನಾನು ಕಂಡ ರೀತಿ ಇದು, ಈ ಮಾತು ಮಹತ್ವದ್ದಾಗಿ ನನಗೆ ತೋರಿದ್ದರಿಂದ ಅದರ ಬಗ್ಗೆ ಮಾತ್ರ ಇಲ್ಲಿ ಪ್ರಸ್ತಾಪ ಮಾಡಲಾಗಿದೆ. ಕಂಬಾರರ ನಾಟಕದ ಭಾಷೆ, ಪಾತ್ರರಚನೆ, ಗುಂಗುಹಿಡಿಸುವ ಹಾಡುಗಳು ಇವುಗಳ ಬಗ್ಗೆ ಬರೆಯುವದು ಅಷ್ಟೊಂದು ಮಹತ್ವದ್ದಾಗಿ ನನಗೆ ಕಾಣಲಿಲ್ಲ. ಈ ನಾಟಕ ಪ್ರಜ್ಞೆಯನ್ನು ಕಲಕುವ ನಾಟಕ. ಒಂದು ಜಾನಪದ ಕತೆಯ ವಸ್ತುವನ್ನು ರೂಪಕವನ್ನಾಗಿ ಮಾಡಿಕೊಂಡು ಮನುಷ್ಯನ ಅಸ್ತಿತ್ವದ ಸತ್ಯವನ್ನು ಹುಡುಕುವ ನಾಟಕ ಇದು. ಕನ್ನಡ ನಾಟಕ ಇಲ್ಲಿಯವರೆಗೆ ಸಾಧಿಸಿರುವ ಹಲಾವರು ಸಿದ್ದಿಗಳ ಪಂಕ್ತಿಗೆ ಈ ನಾಟಕದ ಸಿದ್ದಿಯನ್ನು ಹೊಸದಾಗಿ ಸೇರಿಸಬೇಕು. ನಮ್ಮ ನಾಟಕಕಾರರಲ್ಲಿ ಚಿಕ್ಕವರಾದ ಕಂಬಾರರ ಈ ಪ್ರಯತ್ನ ನಿಜವಾಗಿ ಅಭಿಮಾನಕರ ಮತ್ತು ಅಭಿನಂದನೀಯವಾಗಿದೆ.

ಕೀರ್ತಿನಾಥ ಕುರ್ತಕೋಟಿ
ಧಾರವಾಡ
ಫೆಬ್ರುವರಿ ೧೯೯೦

(ಮೊದಲ ಆವೃತ್ತಿಯಿಂದ)