ಮೇಳ : ಕನಸು ಕಂಡಳು ತಾಯಿ ಕಾಡ ಹೊಕ್ಕಂತೆ
ಕಾಡ ಬಣ್ಣಿಸುವೆವು ನಮಗೆ ತಿಳಿದಂತೆ.
ಆಲದಮರ ಜಡೆಯ ಬಿಟ್ಟು ನಿಂತಾವ
ಸುಳಿದಾಡೊ ನದಿಗಳು ಬುಸುಗುಡತಾವ.

ಗೌಡ್ತಿ : (ಗರ್ಭ ಹಿಡಿದುಕೊಂಡು ಬರುವಳು.)

ಎಷ್ಟು ಚಡಪಡಸ್ತೀಯೋ ನನ್ನ ಕಂದಾ, ನಿನ್ನ ತಾಯಿಗೆ ತ್ರಾಸ ಆಗತೈತಿ ಅನ್ನೋ ಕಾಳಜಿ ಬ್ಯಾಡಾ ನಿನಗ? ಬರೀ ಮನ್ಯಾಗಿದ್ದೂ ಇದ್ದೂ ಬ್ಯಾಸರಾಗೇತೇನು? ನೀ ಎಷ್ಟಂದರೂ ಹುಲೀಪಿಂಡ; ಕಾಡಿನ ಗಾಳೀ ಉಂಡು ಬೆಳೀಬೇಕಾದವನು. ಬಾ, ನಿನ್ನನ್ನ ಕಾಡಿಗೆ ಕರೆಕೊಂಡು ಹೋಗತೀನಿ. ಅಲ್ಲಿ ಗಿಡ ಮರ ಗುಡ್ಡ ಬೆಟ್ಟದಾಗೆಲ್ಲ ಅಡ್ಡಾಡಸ್ತೀನಿ.

ಮೇಳ : ಕಲ್ಲಾದ ಬೆರಗೀಗೆ ಕಣ್ಣಲ್ಲೆ ಜೀವ
ಮೊಳಕಾಲಿಗೆ ಕೈಕಟ್ಟಿ ಬೆಟ್ಟ ಕುಂತಾವ
ಹೆಡೆಯೆತ್ತಿ ನಿಂತಾವ ಕ್ಯಾದೀಗಿ ಹೂವ
ಸಂಪೀಗಿ ಮರದಾಗ ದೀಪ ಉರದಾವ

ಗೌಡ್ತೀ : ಅವಯ್ಯಾ, ಏನ ಚಂದ ಐತಿ ಕಾಡಿದು! ಕಾಡಿನಂಗಳದಾಗ ತಂಗಾಳಿ ಚೆಲ್ಲಾಟ ಆಡತೈತಿ. ಹೆಸರು ಗೊತ್ತಿಲ್ಲದ ಥರಾವರಿ ಹಸಿರು ಹುಲುಸಾಗಿ ಬೆಳದೈತಿ. ಆದರ ಅದ್ಯಾಕ ಈ ಮೆಳಿ ಹಿಂಗ ಕೆಂಪ ಕಾಣತೈತಿ? ಒಂದs ಒಂದ ಹಸಿರೆಲಿ ಇಲ್ಲ. ಮೈ ತುಂಬ ಕೆಂಪ ಹೂ ಬಿಟ್ಟೈತಿ. ಕಾಡು ಮುಟ್ಟಾಗೇತೋ ಏನೋ! ಹಂಗಾದರ ಈಗ ರಾಜಕುಮಾರ ಬರತಾನ. ಅವಯ್ಯಾ, ನನಗ ನಾಚಿಕಿ ಬರತೈತಿ…

ಮೇಳ : ಮೆಳಿಯಾಗಿನ ಗವಿಯೊಳಗ ಹುಲಿಯೊಂದ ಕಂಡೆ
ಹುಲಿ ಹಿಡಿದು ತಿನ್ನುತ ನಾ ನಿಂತುಕೊಂಡೆ
ಅರ್ಧ ತಿಂದಿರುವಾಗ ನಾ ನೋಡಿಕೊಂಡೆ
ಅಷ್ಟರಲಿ ಅದೆ ನನ್ನ ಮುಗಿಸಿದ್ದ ಕಂಡೆ.

(ಗೌಡ್ತಿ ಸಡಗರ ಮಾಡುತ್ತ ನಾಚಿಕೆಯನ್ನು ಅಭಿನಯಿಸುತ್ತಿರುವಾಗ ಕೆಂಪು ಮೆಳೆಯೊಳಗೆ ಹೊಂಚಿ ನಿಂತ ಗೌಡ ಕಾಣಿಸುತ್ತಾನೆ.)

ಗೌಡ್ತಿ : ಅದ್ಯಾಕ ಹಾಂಗ ಹೊಂಚತಿ. ಹೊರಗ ಬಾರಲ್ಲ. ಏ ನನ್ನ ಪುರುಷಾ, ನಿನ್ನ ಕಂಡು ಅರಳ್ಯಾವೋ ನಮ್ಮ ಹರುಷ! ಸನೇಕ ಬಾ ಅಂದರ…ರಾಜಕುಮಾರಾ ಸನೇಕ ಬಾರಲ್ಲ, ನೀ ಸನೇಕ ಬರೋವಾಗ ಏನೂ ಅಡ್ಡ ಬಾರದಿರಲಿ ಅಂತ ಎಷ್ಟ ಹಾರೈಸತತೀನಿ.

(ಗೌಡ ಬರುವನು. ಅವನಿಗೆ ಆತು ನಿಲ್ಲುತ್ತ)

ನೀ ಮರ ಆಗಿ ನಿಂತುಕೊ. ನಾ ಬಳ್ಳಿ ಆಗಿ ನಿನ್ನಗುಂಟ ಹಬ್ಬತೀನಿ. ನಿನ್ನ ಜೋಡಿ ಎಷ್ಟ ಮಾತಾಡಬೇಕಂತ ಅನಸತೈತಿ. ಆದರ ನಾ ಮಾತಾಡಿದಾಗ ನನ್ನ ಕಡೆ ನೋಡೋದs ಇಲ್ಲ ನೀನು. ಪರಿಮಳದ ಪವನ ಒಳಗ ಹೊರಗ ಘಮ್ಮಂತ ಹರಿದಾಡಿ, ವಾಸನೆ ಮೂಗ ತುಂಬಿ ಮತ್ತೇರಿ ಮಲಗತೀನಿ. ಅವಯ್ಯಾ, ಮರದ ಟೊಂಗಿ ಗಾಳಿಗಿ ಅಲುಗಿದಾಗೆಲ್ಲಾ ನನ್ನ ಮ್ಯಾಲ ಭಾರ ಬೀಳತೈತಿ. ಭಾರ ಬಿದ್ದಲ್ಲೆಲ್ಲಾ ಮೈ ಒಡ್ಡತೀನಿ. ಇಕ, ಬಳ್ಳೀಗರ್ಭಕ್ಕ ಕೆಂಪು ಮೊಗ್ಗು ಬಿಟ್ಟಾವ. ಒಳಗೇನೋ ನಿಧಿ ಮುಚ್ಚಿಟ್ಟುಕೊಂಡು ಮ್ಯಾಲ ಹೂವಿನ ನಗಿ ನಗತೈತಿ. ಬಳ್ಳಿ ತುಂಬ ಹೂವಾಗ್ಯಾವ, ಹೂವು ಕೇಳೋದಿಲ್ಲೇನು? ನೀ ಒಂದ ಕೇಳು, ನಾ ಮೂರ ಕೊಡತೀನಿ. ಇಕಾ ಕೊಡಲ?

ಗೌಡ : ಬೇಡ.

ಗೌಡ್ತಿ : ಹೂವ್ಯಾಕ ಬ್ಯಾಡ?

ಗೌಡ್ತಿ : ನಾ ರಾಜಕುಮಾರ ಅಲ್ಲ, ರಾಕ್ಷಸ.

ಗೌಡ್ತಿ : ಮರ-ಬಳ್ಳಿ ನಡುವೆ ರಾಕ್ಷಸ ಹೆಂಗ ಬಂದ?

ಗೌಡ : ಕಾಡು ಮುಟ್ಟಾಗಿ ಮೈಲಿಗೆ ಆಗಿತ್ತಲ್ಲ. ಅದರೊಳಗಿಂದ ಹುಟ್ಟಿಕೊಂಡ.

ಗೌಡ್ತಿ : ಥೂ ಪಾಪಿ, ಏನ ಬೇಕು ನಿನಗ?

ಗೌಡ : ಹೂ ಬೇಕು, ಕೆಂಪ ಹೂ ಬೇಕು. ನಿನ್ನ ಗರ್ಭದಾಗ ಅರಳಿರೋ ಕೆಂಪ ಹೂವು ಬೇಕು.

ಗೌಡ್ತಿ : ಅದನ್ನ ಕಿತ್ತರ ನಾ ಸಾಯತೀನಿ.

ಗೌಡ : ಅದಕ್ಕs ನನಗ ಆ ಹೂ ಬೇಕು.

ಗೌಡ್ತಿ : ಬ್ಯಾರೇ ಹೂ ಬೇಕಾದರ ಹತ್ತ ಕಿತ್ತಕೊಡತೀನಿ.

ಗೌಡ : ನನಗ ಅದs ಹೂ ಬೇಕು. ಹ ಹ್ಹ ಹ್ಹ…..

ಗೌಡ್ತಿ : ನಾ ಯಾರಿಗೂ ಕಾಣದಲ್ಲಿ ಅಡಗತೀನಿ.

ಗೌಡ : ನನ್ನ ಹತ್ತಿರ ನೀ ಎಲ್ಲಿ ಅಡಗಿದರೂ ತೋರಿಸೋ ಕನ್ನಡಿ ಐತಿ.

ಗೌಡ್ತಿ : ಯಾರಿಗೂ ಸಿಕ್ಕಧಾಂಗ ನಾ ದೂರ ಓಡಿಹೋಗ್ತೀನಿ.

ಗೌಡ : ನನ್ನ ಹತ್ತಿರ ಗಾಳಿಗಿಂತ ವೇಗವಾಗಿ ಓಡೋ ಕೀಲಕುದರಿ ಐತಿ.

ಗೌಡ್ತಿ : ಹಂಗಾದರ ನಾ ಏನ ಮಾಡಲಿ? ರಾಜಕುಮಾರ ಎಲ್ಲಿ? ರಾಜಕುಮಾರಾ, ನನ್ನ ಕಾಪಾಡು, ಕಾಪಾಡು.

ಗೌಡ : ಯಾರೂ ಕಾಪಾಡೋದಕ್ಕಾಗೋದಿಲ್ಲ ರಾಜಕುಮಾರೀ, ನಿನ್ನ ರಾ ಜ ಕು ಮಾ ರ ಆಗಲೇ ನನ್ನ ಸೆರೆಯಾಳು. ಹ ಹ್ಹ ಹ್ಹಾ….

ಗೌಡ್ತಿ : ತಾಯೀ ಕರಿಮಾಯೀ, ನೀನಾದರೂ ಕಾಪಾಡs ಎವ್ವಾ!

ಗೌಡ : ದೇವರೂ ನನ್ನ ಎದುರು ನಿಂತುಕೊಳ್ಳಾಕ ಹೆದರತಾವ.

ಗೌಡ್ತಿ : ಅಯ್ಯೋ, ಏನ ಮಾಡಲಿ? ರಾಮಗೊಂಡಾ… ರಾಮಗೊಂಡಾ…

ಗೌಡ : ಹಂಗಾದರ ನಾ ರಾಮಗೊಂಡನ ವೇಷದಾಗs ಬರತೀನಿ.

(ಗೌಡ  ಮಾತನ್ನು ಮತ್ತೆ ಹೇಳುತ್ತಿದ್ದಾಗ ಗೌಡ್ತಿ ಓಡಾಡಿ ತಪ್ಪಿಸಿಕೊಳ್ಳಲೆತ್ನಿಸುತ್ತ ಹಾಸಿಗೆಯ ಮೇಲೆ ಬೀಳುತ್ತಾಳೆ. ಗೌಡ ರಾಕ್ಷಸನ ಅಭಿನಯ ಮಾಡುತ್ತ ಸುತ್ತ ಓಡಾಡುತ್ತಾನೆ. ಹೆದರಿದ ಗೌಡ್ತಿ ಚೀರಿ ಎಚ್ಚರಾಗುತ್ತಾಳೆ. ಗೌಡ ಮಾಯವಾಗುತ್ತಾನೆ. ಗೌಡ್ತಿ ಗಾಬರಿಯಿಂದ ಬೆದರಿ ತನ್ನ ಗರ್ಭ ಸುರಕ್ಷಿತವಾಗಿರುವ ಬಗ್ಗೆ ಖಾತ್ರಿ ಮಾಡಿಕೊಳ್ಳುತ್ತಾಳೆ.)