(ಕಾಡಿನಲ್ಲಿ ಹಿಂದೆ ಬಂದಿದ್ದ ಇಬ್ಬರು ಮುದುಕಿಯರು ತೋಂತಕದಿನ ತಾಂ ತಕದಿನ ಎಂದು ಕುಣಿಯುತ್ತಾ ಬರುವರು.)

ಮುದುಕಿ ೧ : ಕುದರಿ ಹೆಂಗ ಓಡಿಸ್ತಾನ ನೋಡ.

ಮುದುಕಿ ೨ : ಕುರಪುಟ್ ಕುರಪುಟ್ ಕುರಪುಟ್ ಕುರಪುಟ್

ಮುದುಕಿ ೧ : ದಟ್ಟ ಕಾಡಿನಾಗ ದರಕಾರಿಲ್ಲದs ಹೊಡೀತಾನ್ನೋಡs!

ಮುದುಕಿ ೨ : ಹೈ ಹೈ ಘೋಡಾ ಚಲ್ ಚಲ್ ಚಲ್.

ಮುದುಕಿ ೧ : ಸುತ್ತ ಹೆಂಗ ಕಣ್ಣಾಡಿಸಿ ಹುಲಿ ಹುಡುಕತಾನ್ನೋಡ!

ಮುದುಕಿ ೨ : ಮಸದ ಕುಡಗೋಲಧಾಂಗ ಹೊಳೀತಾನ ನೋಡ!

ಮುದುಕಿ ೧ : ಶ್ಯೂ! ಹುಲಿ ಬಂತು! ಹುಲಿ ಬಂತು!

ಮುದುಕಿ ೨ : ಈ ಹುಲೀನ್ನ ನಾವೆಲ್ಲೋ ನೋಡಿದ್ದೀವಲ್ಲಾ….

ಮುದುಕಿ ೧ : ಹೌಂದು ಎಲ್ಲಿ ನೋಡಿದ್ದೀವಿ?

ಮುದುಕಿ ೨ : ಹಾ ಗುರುತು ಸಿಕ್ಕಿತು! ಇವರಪ್ಪನ ಕೊಂದ ಹುಲಿ ಇದs!

ಮುದುಕಿ ೧ : ಹೌದು, ಇವರಪ್ಪನ್ನ ಕೊಂಧಾಂಗ ಇವನನ್ನೂ ಕೊಲ್ಲತೈತೋ ಏನೊ!

ಮುದುಕಿ ೨ : ಸಾಧ್ಯ ಇಲ್ಲ ತಗಿ. ಶ್ಯೂ! ನೋಡಲ್ಲಿ ಕುದರಿ ಮ್ಯಾಗಿಂದ ಇಳಿದ.

ಮುದುಕಿ ೧ : ಅಬ ಅಬ ಹುಲಿ ಹಾದಿಗಿ ಅಡ್ಡನಿಂತ!

ಮುದುಕಿ ೨ : ಏನ ಧೀರ! ಏನ ಗಂಭೀರ!

ಮುದುಕಿ ೧ : ಅವನ ದಿಗರೇನು! ಧಿಮಾಕೇನು!

ಮುದುಕಿ ೨ : ಹುಲಿ ಮುಕಳ್ಯಾಗ ಬಾಲ ಹಾಕ್ಕೊಂಡಿತು. ಪಳಗಿಸಿದ ಹುಲಿ ಹಾಂಗ ಅಲ್ಲೇ ಸುತ್ತಾಡತೈತಿ.

ಮುದುಕಿ ೧ : ಕುಡಗೋಲ ತೋರಿಸಿ ಹಾಲ ಕೊಡು ಅಂತಾನಲ್ಲ, ಹುಡುಗನ ಧೈರೆ ನೋಡ!

ಮುದುಕಿ ೨ : ಹಾಲ ಹಿಂಡಾಕ ಸುರುಮಾಡಿದ, ಮಲಿ ಜಗ್ಗಿ ಜಗ್ಗಿ ಹಾಲ ಹಿಂಡತಾನ. ಅವನ ಎದಿಗಾರಿಕೆ ನೋಡ!

ಮುದುಕಿ ೧ : ಹುಲಿ ಯಾಕ ಅವನ ಕಡೆ ಹಾಂಗ ನೋಡತೈತಿ?

ಮುದುಕಿ ೨ : ಕೆಚ್ಚಲ ಗುದ್ದತಾನಲ್ಲ, -ಅದಕ್ಕಿರಬೇಕು.

ಮುದುಕಿ ೧ : ಅಲ್ಲ ತಗಿ, ಅದರ ಮನಸ್ಸಿನಾಗೇನೋ ಜ್ವಾಲಾಮುಖಿ ಐತಿ. ಅದರ ಕಣ್ಣಂಚಿನಾಗೇನೋ ಸಂಚೈತಿ. ಅವ ಮೈಮರೀಲಿ ಅಂತ ಕಾದನಿಂತೈತಿ.

ಮುದುಕಿ ೨ : ಅಕಾ! ಹುಲಿ ಕೊಸರಿಕೊಂಡ ತಿರಿಗಿ ನಿಂತಿತು. ಅಯ್ಯಯ್ಯೋ ಹುಲಿ ಅವನ ಮ್ಯಾಲೆ ಹಾರಿತು. ನಾ ನೋಡಲಾರೆ… ನಾ ನೋಡಲಾರೆ!

ಮುದುಕಿ ೧ : ಅಕಾ ಅಕಾ ಅಲ್ಲಿ ನೋಡು, ರಾಮಗೊಂಡ ಕುಡಗೋಲಿನಿಂದ ಹುಲಿ ಬೆನ್ನಿಗೆ ಇರಿದ! ರಕ್ತ ಚಿಲ್ಲನ ಸಿಡೀತು!

(ಚಪ್ಪಾಳೆ ತಟ್ಟಿ ಕುಣಿಯುವರು.)

ಮುದುಕಿ ೨ : ಹುಲಿ ಅಂಜಿ ಓಡಿತು! ಹುಲಿ ಅಂಜಿ ಓಡಿತು!

(ತೇಗುತ್ತ ರಾಮಗೊಂಡ ಬರುವನು. ಒಂದು ಕೈಯಲ್ಲಿ ಕುಡಗೋಲು ಇನ್ನೊಂದರಲ್ಲಿ ಹಾಲ ತಾಲಿಯಿದೆ. ಹುಲಿಯೊಂದಿಗೆ ಹೋರಾಡಿದ ಉದ್ವೇಗ ಅವನ ಮುಖದ ಮೇಲಿದೆ. ಅಷ್ಟರಲ್ಲಿ ಭೂತ ಪ್ರತ್ಯಕ್ಷವಾಗುತ್ತದೆ.)

ಭೂತ : ಬಚಾವಾಗಿ ಬಂದೆಯಲ್ಲ. ಕರಿಮಾಯಿಗೆ ಸಾವಿರ ನಮಸ್ಕಾರ.

ರಾಮಗೊಂಡ : ಓ ನೀನು!

ಭೂತ : ನೀ ಬಚಾವಾಗಿ ಬಂದದ್ದು ದೊಡ್ಡ ಸಾಹಸ.

ರಾಮಗೊಂಡ : ಇರಬಹುದು.

ಭೂತ : ನನ್ನ ಮಾತಿನಾಗಿನ್ನೂ ನಂಬಿಕಿ ಬರಲಿಲ್ಲ.

ರಾಮಗೊಂಡ : ಸಂಶೇದಿಂದ ನಾ ಇನ್ನೂ ಮುಕ್ತನಾಗಿಲ್ಲ ನಿಜ. ಆದರ ಖಾತ್ರಿ ಆಗೋತನಕ ತಾಳ್ಮೆಯಿಂದಿರು.

ಭೂತ : ನಿನಗಿನ್ನೂ ಖಾತ್ರಿ ಆಗಲಿಲ್ಲಂದರ ಅದು ನನ್ನ ದುರ್ದೈವ.

ರಾಮಗೊಂಡ : ನಂದೂ ಹೌದು.

ಭೂತ : ಮುಖಕ್ಕ ಹೊಡಧಾಂಗ ಸತ್ಯ ಏಕಾಏಕಿ ನಿನ್ನ ಮುಂದ ಸಾಕಾರವಾದರೂ ನೋಡಲಾರೆ ಅಂತ ಕಣ್ಣ ಮುಚ್ಚತೀಯಲ್ಲ ಇದಕ್ಕೇನನ್ನಲ್ಲಿ

ರಾಮಗೊಂಡ : ಅಂದರ?

ಭೂತ : ಈಗ ಹುಲಿಯಾಗಿ ಬಂದು ನಿನಗ ಹಾಲ ಕೊಟ್ಟವನು ಅವನೇ.

ರಾಮಗೊಂಡ : ಅಂದರ ರಾಕ್ಷಸ?

ಭೂತ : ಹೌದು. ನನ್ನ ಮುಗಿಸಿಧಾಂಗ ನಿನ್ನನ್ನೂ ಮುಗಿಸಬೇಕಂತೆ ಬಂದಿದ್ದ. ಆಗಲಿಲ್ಲ. ಬೇಕಾದರ ವಾಡೇಕ್ಕ ಹೋಗಿ ನೋಡು, ಅವನ ಬೆನ್ನಾಗಿಂದ ರಕ್ತ ಹರೀತಿರತೈತಿ. ಅದನ್ನ ನೋಡಿದ ಮ್ಯಾಲಾದರೂ ನನ್ನ ಮಾತು ಖಾತ್ರಿಯಾದೀತು. ಸತ್ತು ಸ್ವರ್ಗಕ್ಕಿಲ್ಲ, ಇದ್ದು ಬದುಕಿಗಿಲ್ಲ, ನಟ್ಟನಡುವೆ ನಿನ್ನ ತಂದೆ ಆತ್ಮ ಗಾಳಿಯಾಗಿ ಹಾಳಬಾವೀ ತಳ ಹಿಡದೈತಿ. ಕಾಪಾಡೋ ಮಗನ!

ರಾಮಗೊಂಡ : ನನ ಗೊಂದಲ ನಿನಗ ಹೆಂಗ ಹೇಳಲಿ? ಇಲ್ಲೀತನಕ ನನ್ನಪ್ಪ ಮತ್ತವನ ಭೂತ-ಎರಡs ಅಂತಿದ್ದೆ. ಆದರ ಈಗ ನೋಡಿದರ ನಿನ್ನ ಹಾಂಗ ನನಗೂ ಒಂದ ಭೂತ ಐತಿ! ಕನ್ನಡಿ ಮುಂದ ನಿಂತರ ನನ್ನ ಬದಲು ನಮ್ಮಪ್ಪನ ನೆರಳು ಮೂಡತೈತಿ. ನಾ ಮನ್ಯಾಗಿದ್ದರ ನನ್ನ ನೆರಳು ಊರ ತುಂಬ ಓಡ್ಯಾಡಿ ಹುಡಿಗೇರ ಹರೆ ಹರೀತೈತಿ. ನಾ ಬದಿಕ್ಕಿದ್ದೀನೋ, ಸತ್ತಿದ್ದೀನೋ? ನಾ ರಾಮಗೊಂಡನೋ ಇಲ್ಲಾ ನನ್ನ ಭೂತವೋ ಅಂತ ಸಂಶೆ ಬರಾಕ ಹತ್ತೇತಿ. ದೇವರಂಥಾ ದೇವರಿಗೆ ಒಂದಂಬೊ ಸತ್ಯ ಇಲ್ಲ. ಕರಿಮಾಯಿ ಮುಂಜಾನೆ ಹುಡಿಗಿ ಆಗತಾಳ; ಸಂಜೀ ಹೊತ್ತ ಮುದುಕಿ ಆಗತಾಳ. ಅವ್ವನ ಒಂದೊಂದು ಮಾತಿಗೆ ಸಾವಿರ ನೆರಳ ಮೂಡತಾವ. ಒಂದೊಂದು ಸತ್ಯಕ್ಕ ದಾರಿ ತಪ್ಪಿಸುವ ಸಾವಿರ ದಾರಿಗಳು, ಯಾವುದನ್ನ ಹಿಡೀಲಿ, ಯಾವುದನ್ನ ಬಿಡಲಿ? ಸೂರ್ಯನಂಥ ಸೂರ್ಯನಿಗೂ ಮನುಷ್ಯ ಮತ್ತವನ ಭೂತಗಳನ್ನ ಬ್ಯಾರೇ ಮಾಡಿ ತೋರಿಸಲಿಕ್ಕಾಗಲೇ ಇಲ್ಲ. ಯಾರನ್ನಂತ ನಂಬಲಿ?

(ಆಕಾಶದ ಕಡೆ ಮುಖ ಮಾಡಿ ಅಸಹಾಯಕನಾಗಿ ಕಿರುಚಿ)

ಅಪ್ಪಾ, ಸೂರ್ಯನ್ನ ಮೀರಿದ ಬೆಳಕಿನ ಸ್ವಾಮಿ, ಈ ಲೋಕವನ್ನ ಅಖಂಡ ಸತ್ಯವಾಗಿ ತೋರಿಸೋ ತಂದೇ, ನನ್ನ ಗೊಂದಲ ಬಗಿಹರಿಸೋ ತಂದೇ….. ನೆರಳಿಲ್ಲದ ಸತ್ಯ ತೋರಿಸೋ ತಂದೇ…..

(ಸಂಗೀತ ಕೇಳಿಬರುತ್ತದೆ, ಮೇಳದ ಹಾಡಿಗೆ ತಕ್ಕಂತೆ ಕುಣಿಯುತ್ತ ಒಬ್ಬ ಯಕ್ಷಿಣಿ ಬರುವಳು. ರಾಮಗೊಂಡ ಬೆರಗಾಗಿ ನಿಲ್ಲುವನು. ಭೂತ ಮಾಯವಾಗುವುದು.)

ರಾಮಗೊಂಡ : ಕತ್ತಲೆಗೆ ಬೆಳಕಾಗಿ ಮೂಡಿದ ದೈವವೇ, ಬಂದವಳು ಯಾರೆಂದು ಕುರುಹುದೋರಿ ಕಾಪಾಡು ತಾಯೇ, ಸೌಖ್ಯ ಪ್ರದಾಯೇ.

ಯಕ್ಷಿಣಿ : ಸಂದೇಹದ ಮಂಜಿಗೆ ನಿಸ್ಸಂದೇಹದ ಕಿರಣ ನಾನು, ಲೋಕದ ತಾಯಿ ನಾನು. ನಾನೊಬ್ಬ ಯಕ್ಷಿಣಿಯೆಂದು ಭಾವಿಸೈಕಂದಾ, ನಿನ್ನ ಮಾತೆನಗೆ ಚಂದಾ.

ರಾಮಗೊಂಡ : ನಿನ್ನ ಬೆಳಕಿಗೆ ಬೆರಗಾಗಿ ಅನುಮಾನಗಳ ನಾಲಗೆ ಬತ್ತಿ ಹೋಗಿದೆ ತಾಯೇ. ಮರೆವಿನ ಮಾಯೆ ಆವರಿಸುವ ಮುನ್ನ ಮನಸ್ಸಿನಲ್ಲಿ ಧಾಂದಲೆ ಮಾಡುವ ಗೊಂದಲಗಳನ್ನು ತಿಳಿಯಾಗಿಸು ತಾಯೇ ಸೌಖ್ಯಪ್ರದಾಯೇ.

ಯಕ್ಷಿಣಿ : ನಿನ್ನ ಭಾವನೆಗಳಿಗೆ ಶಬ್ದ ತೊಡಿಸುವ ಮುನ್ನವೇ ಮೂರು ವರ ಕೊಡುವೆ ಕಂದಾ. ಒಳಗಿನ ಇಲ್ಲವೇ ಹೊರಗಿನ, ಹಿಂದೆ ಮುಂದೆ ಇಂದಿನ ವೈರಿಯ ಕುರುಹನ್ನ ಸಂದೇಹಕ್ಕೆಡೆಯಿಲ್ಲದಂತೆ ಅಂಗೈಯಲ್ಲಿ ತೋರಿಸುವ ಕನ್ನಡಿಯಿದು. ಎಲ್ಲಿಗೆಂದರೆ ಅಲ್ಲಿಗೆ, ವೈರಿಯ ಜೀವಪಕ್ಷಿ ಅಡಗಿರುವಲ್ಲಿಗೆ ಮನೋವೇಗ ಮೀರಿ ಹಾರುವ ಕೀಲು ಕುದುರೆಯಿದು. ಕೋಟಿ ಅಮಾವಾಸ್ಯೆಗಳ ಶಕ್ತಿಯ ರಕ್ಕಸರನ್ನ ಸರಾಗವಾಗಿ ಇರಿವ ಕೊಂಬಿದು. ಇವನ್ನು ತೆಗೆದುಕೊಂಡು ನಿನ್ನ ಕಾರ್ಯ ಸಾಧಿಸು ಕಂದಾ, ನಿನ್ನ ಕೃತಿಯೆನಗೆ ಚಂದಾ!

(ಕೊಡುವಳು. ರಾಮಗೊಂಡ ಸ್ವೀಕರಿಸಿ)

ರಾಮಗೊಂಡ : ಕೇಳುವುದೇನಂದರಿಯದೆ ಗೊಂದಲದಲ್ಲಿದ್ದಾಗ ಎಲ್ಲವನು ಪರಿಹರಿಸಿ ವರ ನೀಡಿದ ತಾಯೇ, ನಿನ್ನಿಷ್ಟದಂತೆ ಮಣಿಹ ಪೂರೈಸುವೆನು, ಆಶೀರ್ವದಿಸು.

ಯಕ್ಷಿಣಿ : ಜೋಕೆ ಮಗನೇ, ಇವು ನಿನ್ನ ಶಕ್ತಿಗಳು. ನಿನ್ನ ಆತ್ಮದಲ್ಲಿ ಬೆರೆತ ಶಕ್ತಿಗಳು. ಅಪ್ಪಿತಪ್ಪಿ ಕೈತಪ್ಪಿ ಈ ಮೂರಕ್ಕೆ ನಿನ್ನ ವೈರಿಯ ಹಸ್ತಸ್ಪರ್ಶವಾದರೆ ಇವು ಶಕ್ತಿಗುಂದುತ್ತವೆ. ಜೊತೆಗೆ ನೀನು ಕೂಡ; ಜೋಕೆ.

(ಯಕ್ಷಿಣಿ ಕುಣಿಯುತ್ತಾ ಮಾಯವಾಗುವಳು. ಅವಳು ಹೋದ ದಿಕ್ಕಿಗೆ ನಮಸ್ಕರಿಸಿ ವರಗಳ ಬಗ್ಗೆ ಉತ್ಸಾಹಿತನಾಗುವನು.)

ರಾಮಗೊಂಡ : ದಿವ್ಯಕನ್ನಡಿಯೇ, ಮಿಂಚಿನಂತೆ ಮೋಹಕವಾದ ಕನ್ನಡಿಯೇ, ತೋರಿಸು ನಿನ್ನ ಸತ್ಯವನ್ನು. ನನ್ನ ಶತ್ರು ಯಾರು? ಎಲ್ಲಿದ್ದಾನೆ? ಯಾವ ರೂಪದಲ್ಲೇ ಅಡಗಿರಲಿ ತೋರಿಸು.

(ಕನ್ನಡಿ ನೋಡಿ ಬೆರಗಾಗುವನು.)

ಹೌದು. ಇದು ನಮ್ಮನೆ! ಇವಳು ನನ್ನ ತಾಯಿ! ತಾಯಿ ಕನಸ ಕಾಣಾಕಹತ್ಯಾಳ. ಹೊಂಚಿ ನಿಂತಾನಲ್ಲ. ಯಾರಿವನು? ಬೆನ್ನಲ್ಲಿ ರಕ್ತ….!

(ಕೋಪಗೊಂಡು)

ಮೋಸ ! ಮೋಸ ! ನಮ್ಮಪ್ಪನ ಆಕಾರದಲ್ಲಿರೋ ರಾಕ್ಷಸ ! ಹುಲಿ ವೇಷದಾಗ ಬಂದು ಅಪ್ಪನ್ನ ಕೊಂದು ನನ್ನನ್ನೂ ಕೊಲ್ಲಬೇಕಂತ ಮಸಲತ್ತು ಮಾಡಿದ ಘಾತುಕ! ಪಾರಂಬಿ ಮರ ಕಡಿದು ಊರ ಗಂಡಸುತನದ ಬೇರಿಗೆ ಬಿಸಿ ನೀರೆರೆದ ಚಂಡಾಲ! ಗಳಿಗ್ಗೊಂದು ರೂಪ ಧರಿಸಿ, ಸಂಶೆ ಮೂಡಿಸಿ, ಊರಿನ ಅಖಂಡ ಆತ್ಮದಾಗ ಬಿರುಕು ಮೂಡಿಸಿದ ಮಾಟಗಾರ! ಎಲ್ಲಿ ನನ್ನ ತಂದೆಯ ಭೂತ? ಅಪ್ಪಾ… ಅಪ್ಪಾ…

(ಸುತ್ತ ಹುಡುಕಿ ಅದು ಕಾಣದ್ದಕ್ಕೆ ನಿರಾಶನಾಗಿ)

ಛೆ! ನಾನೋ ಹುಂಬ. ಭೂತ ಹೇಳಿದ ಸತ್ಯವನ್ನ ತಿರಸ್ಕರಿಸಿ ಅನುಮಾನ ಹೇಳೋ ಸುಳ್ಳಿಗೆ ನೀರೆರೀತಾ ಇದ್ದೆ. ಆತ್ಮದ ಪಿಸುದನಿಗಳನ್ನ ನಿರ್ಲಕ್ಷಿಸಿ ನನ್ನ ನಾನೇ ಚಾಡೀ ಹೇಳಿಕೊಳ್ತ ಸಂಶೇದೊಳಗ ಸಮಾಧಾನಪಡತಿದ್ದೆ. ಇರೀಬೇಕು! ಈಗಲೇ ಇರೀಬೇಕು. ರಾಕ್ಷಸ ತಾಯಿಯ ಕನಸಿನಾಗ ಪ್ರವೇಶ ಮಾಡೋ ಮೊದಲs ಇರೀಬೇಕು. ತಾಯಿಯ ಕನಸುಗಳನ್ನ ಮೈಲಿಗೆ ಮಾಡೋ ಮೊದಲs ಇರೀಬೇಕು!

(ಹೋಗುವನು)