ಮೇಳ : ಪಟ್ಟೇದ ಕುದರೀಯ ಏರ್ಯಾನ ರಾಮಗೊಂಡ
ಬೆನ್ನ ಚಪ್ಪರಿಸ್ಯಾನ ಮೆಲ್ಲಕ |
ಹಾಡಿ ಹರಸವರಿಲ್ಲ, ನೋಡಿ ಮರಗವರಿಲ್ಲ
ಹಿಂದ ಮುಂದ ಯಾರಿಲ್ಲ ಎಡಬಲಕ ||

ಅಗಸೀ ಹೊರಗ ಬಂದ ಏನಂದ ರಾಮಗೊಂಡ
ಪಾರಂಬಿ ಕರ್ರೆವ್ವ ನಮ ಶರಣಾ |
ತಿರುಗಿ ಬಂದರ ನಾವು ಆರ ಸೊಲಿಗಿಯ ಹುಗ್ಗಿ
ಹಾಕ್ಸೇವ ಕೊಟ್ಟೇವ ಸೀರೀಖಣಾ ||

ಹಳ್ಳದ ಹಂತೇಲಿ ಬಂದೆನ ಅಂದಾನ?
ಗುಡ್ಡದ ನಿರವಾನಿ ನಮ ಶರಣಾ |
ತಿರುಗಿ ಬಂದರ ನಾವು ದೀಡ ನಮಸ್ಕಾರ
ಹಾಕೇವ ಕೊಟ್ಟೇವ ಬೆಳ್ಳೀಕಣ್ಣಾ ||

ಹಿರಿಯರ ಪುಣ್ಯ ನಮ ಮ್ಯಾಲಾ |
ಸುರಿತಿರಲಿ ಶಿವನೆ ಅನುಗಾಲಾ |
ಪಾರಂಬಿ ಕರ್ರೆವ್ವ ಗುಡ್ಡದ ನಿರವಾನಿ
ಈ ಊರ ಕಡೆಗಿರಲಿ ನಿಮ ಧ್ಯಾನಾ |
ಹೇಳತೇವ ಕೇಳ್ರಿ ಜನ ನಿಮ ಮುಂದ ಕತಿಯೊಂದ
ನಮ ಮುಂದ ಕುಂಡ್ರಿ ಹಿಂಗ ತೆರೆದ ಮನಾ ||

ಮೇಳ ೧ : ರಾಮಗೊಂಡ ನೀ ಬರೋತನಕ ಬಜನಿ ಮಾಡತೀವಿ.

ಮೇಳ ೨ : ನೀ ಸುಖರೂಪದಿಂದ ತಿರುಗಿಬರಲಿ ಅಂತ ಹರಕೀ ಹೊರತೀವಿ.

ಮೇಳ ೩ : ನೀ ಮೆಟ್ಟಿದ ಮಣ್ಣು ಚಿನ್ನಾಗಲಿ; ಹಿಡಿದ ಕೆಲಸ ಗಂಡಾಗಲಿ ಅಂತೀವಿ.

ಮೇಳ ೪ : ನೀ ಹೋಗೋ ದಾರೀಲಿ ತಂಗಾಳಿ ಸುಳೀಲಿ, ಕೆಂಪ ಹೂವರಳಿ ಸಾಲ ದೀವಟಿಗೆ ಹಿಡೀಲಿ.

ಮೇಳ ೧ :  ನೀ ಹೋಗೋ ದಾರೀಲಿ ಹಕ್ಕಿ ಹಾಡಲಿ
ಹೂ ಹೂವಿಗೆ ಚಿಟ್ಟಿ ಹಾರಾಡಲಿ.
ನೀ ಹಿಡಿದ ಕೆಲಸ ಹೂವಿನಷ್ಟು ಹಗರಾಗಿ
ನಿನ್ನ ಅಂಗೈಗಿ ಬರಲಿ.

ಮೇಳ ೨ : ಹುಲಿ ಆಕಳಾಗಲಿ
ತಾಲಿ ತುಂಬ ಹಾಲ ಕೊಡಲಿ.

ಮೇಳ ೧ : ಹೊತ್ತ ಮುಣುಗೂದರೊಳಗ ನೀ ತಿರುಗಿ ಬಂದು
ನಾವೆಲ್ಲ ನಿನ್ನ ಸಾಹಸ ಕತಿ ಮಾಡಿ
ಹಾಡೋ ಹಾಂಗಾಗಲಿ.

(ಮೇಳ ಹಿಂದೆ ಸರಿಯುತ್ತದೆ. ಶಾರಿ ಓಡುತ್ತ ಬರುವಳು. ರಾಮಗೊಂಡನನ್ನು ಕಂಡು ಅನುಮಾನಿಸುತ್ತ ದೂರ ನಿಲ್ಲುವಳು.)

ರಾಮಗೊಂಡ : ಯಾಕ ಬಂದಿ?

ಶಾರಿ : ನನ್ನ ಗುರುತ ಸಿಕ್ಕಿತ?

ರಾಮಗೊಂಡ : ಹುಚ್ಚೀ ಹಾಂಗ ಮಾತಾಡಬ್ಯಾಡ. ಬಾ ಇಲ್ಲಿ.

ಶಾರಿ : ನನ್ನ ಹೆಸರ ಹೇಳ ನೋಡೋಣು.

ರಾಮಗೊಂಡ : ಯಾಕ? ನಿನ್ನ ಹೆಸರು ನಿನಗ ನೆನಪಿಲ್ಲೇನು?

ಶಾರಿ : ಏನೇನೋ ಹೇಳಿ ಮಾತ ಮರಸ್ತಿ, ನೆನಪಿದ್ದರ ಹೇಳಲ್ಲ.

ರಾಮಗೊಂಡ : ಏ ಶಾರಿ, ಏನಾಗೇತಿ ನಿನಗ? ಗುರುತ ಇಲ್ಲದವರ್ಹಾಂಗ ನನ್ನ ಯಾಕ ಹಾಂಗ ನೋಡ್ತೀ?

ಶಾರಿ : ಗುರುತ ಇದ್ದಾವ ನಿನ್ನೆ ಅದ್ಯಾಕ ಗುರುತ ಇಲ್ಲದವರ‍್ಹಾಂಗ ಓಡಿ ಹೋದಿ?

ರಾಮಗೊಂಡ : ನಿನ್ನೆ? ನಾ ನಿನ್ನೆ ನಿನ್ನ ಕಂಡೇ ಇಲ್ಲ.

ಶಾರಿ : ಯಾಕ? ನಿನ್ನೆ ನೀ ನಮ್ಮ ಮನೀಗಿ ಬಂದಿರಲಿಲ್ಲ?

ರಾಮಗೊಂಡ : ಇಲ್ಲ.

ಶಾರಿ : ಇನ್ನೇನು ನಿನ್ನ ಭೂತ ಬಂದಿತ್ತ?

ರಾಮಗೊಂಡ : ಶಾರೀ, ಚಾಷ್ಟೀ ಮಾಡಬ್ಯಾಡ. ನಿನ್ನೆ ನಾ ನಿಮ್ಮ ಮನೀಗೆ  ಬಂದೇ ಇಲ್ಲ. ನಿನ್ನನ್ನಂತೂ ನೋಡೇ ಇಲ್ಲ.

ಶಾರಿ : ಮಂದಿ ಅನ್ನೋದು ಖರೆ ಅಂಧಂಗಾಯ್ತು.

ರಾಮಗೊಂಡ : ಏನು?

ಶಾರಿ  : ಕರಿಯಜ್ಜನ ದೆವ್ವ ನಿನ್ನ ಹಿಡಕೊಂಡೈತಿ. ಯಾರನ್ನೂ ನೀ ಗುರುತು ಹಿಡಿಯೋದಿಲ್ಲಂತ.

ರಾಮಗೊಂಡ : ಈಗ ನಿನ್ನ ಗುರುತು ಹಿಡೀಲಿಲ್ಲೇನು?

ಶಾರಿ : ನಿಮಗೆಲ್ಲಾ ಏನಾಗೇತಿ? ನಿಮ್ಮವ್ವ ಗುರುತು ಹಿಡಿಯೋದಿಲ್ಲ. ಅರೆಹುಚ್ಚಿ ಅನ್ನೋಣ. ನಿಮ್ಮಪ್ಪ ಗುರುತ ಹಿಡಿಯೋದಿಲ್ಲ.ಹೆಸರ ಹೇಳಿದರ ಯಾರ ಮಗಳು ಅಂತಾನ. ನಿನ್ನೆ ನೀನಾಗಿ ಮನೀ ಕಡೆ ಬಂದಿ. ಒಳಗ ಬಾ ಅಂದರ ಗುರುತಿಲ್ಲದವರ್ಹಾಂಗ ಕಣ್ಣಕಿಸದ ನನ್ನ ಕಡೆ ನೋಡತಾ ಓಡಿಹೋದಿ!

ರಾಮಗೊಂಡ : ನನಗೂ ಒಂದ ಭೂತ ಐತಿ ಅಂತಾಯ್ತು.

ಶಾರಿ ಅದೇನೋ ನಿನಗ್ಗೊತ್ತು.

ರಾಮಗೊಂಡ : ಈಗ ನಾ ಭೂತದಾಂಗ ಕಾಣತೀನೊ? ನಿನ್ನ ಮಾವನ್ಹಾಂಗ ಕಾಣತೀನೊ?

ಶಾರಿ : ನಾ ಚಾಷ್ಟೀ ಮಾಡಾಕ ಬಂದಿಲ್ಲ.

ರಾಮಗೊಂಡ : ಶಾರೀ ತಲ್ಯಾಗ ಏನೇನೋ ಹುಳ ಹೊಕ್ಕಾವ. ಎಲ್ಲಾ ಒಂದ ಗೊತ್ತಿಗಿ ಮುಟ್ಟಲಿ. ಆಮ್ಯಾಲ ಮಾತಾಡೋಣಂತ. ಕಾಡಿಗಿ ಹೋಗಿಬರ್ತೀನಿ, ನೀ ಮನೀಗಿ ನಡಿ,

ಶಾರಿ : ಕಾಡಿಗಿ ನಾನೂ ಬರತೀನಿ.

ರಾಮಗೊಂಡ : ಹೇಳಿದಷ್ಟು ಕೇಳು. ಯಾವುದೋ ದೊಡ್ಡ ಕೆಲಸಕ್ಕ ಹೊಂಟೇನಿ, ಅಡ್ಡಬಾಯಿ ಹಾಕಬ್ಯಾಡ.

ಶಾರಿ : ದೊಡ್ಡ ಕೆಲಸ! ಯಾವಳೋ ಮೆಳಿ ಹತ್ತರ ಕಾಯ್ತಾಳೇನೊ? ಮಲ್ಲಿಗಿ ಹೂ ಚೆಲ್ಲಾಡಬೇಕಲ್ಲ!

ರಾಮಗೊಂಡ : ಮತ್ತದs ಮಾತು. ಛೆ, ಏನಾಗೇತಿ ನಿನಗ?

ಶಾರಿ : (ಅಳುತ್ತ) ದಿನಾ ನನ್ನ ಗೆಳತ್ಯಾರ ಬಂದು ಎಲ್ಲಾ  ಹೇಳತಾರ: ರಾಮಗೊಂಡ ಮೊನ್ನಿ ಕಾಶೀ ಜೋಡಿ ಇದ್ದ; ನಿನ್ನಿ ಬಸ್ಸೀ ಜೋಡಿ ನಗತಿದ್ದ. ಆಕಿಗಿ ಹೂ ಕೊಟ್ಟ; ಈಕಿಗಿ ಎಲಡಿಕಿ ಕೊಟ್ಟ-ಅಂತ. ನನ್ನ ಮ್ಯಾಲ ಅದೇನಂಥಾ ಸಿಟ್ಟ ನಿನಗ?

ರಾಮಗೊಂಡ : ನಿನ್ನ ಹೊಟ್ಟಿ ಉರಸಾಕ ಏನೇನೋ ಕತಿ ಹೇಳತಾರ.

ಶಾರಿ : ನಿನ್ನೆ ಸಂಜೀನಾಗ ಬಣಿವೀ ಹಿಂದ ಸೀತೀನ ಹಿಡಿಕೊಂಡಿದ್ದೆಲ್ಲ. ಅದೂ ಕತೀಯೇನ?

ರಾಮಗೊಂಡ : ಛೇ, ಯಾಕ್ಹಿಂಗ ಸುಳ್ಳ ಹೇಳತಿ?

ಶಾರಿ : ನಾನs ಕಣ್ಣಾರೆ ನೋಡಿದ್ದು. ನಿನ್ನ ದೆವ್ವ ಅಲ್ಲ, ನಿನ್ನನ್ನs ನೋಡಿದ್ದು.

ರಾಮಗೊಂಡ : ನಿನಗೆಲ್ಲೋ ಹುಚ್ಚ ಹಿಡಿದಿರಬೇಕು.

ಶಾರಿ : ಹೌದು, ಖರೇ ಹೇಳಿದವರೆಲ್ಲಾ ಹುಚ್ಚರು ನಿನ್ನ ಪಾಲಿಗೆ.

(ಮತ್ತೆ ಅಳುವಳು)

ರಾಮಗೊಂಡ : ಶಾರೀ, ನನ್ನ ಮಾತ ನಂಬು; ನಿನ್ನೆ ಬಣವೀ ಹಿಂದ ಹೋಗಲೂ ಇಲ್ಲ, ಸೀತೀನ ನೋಡಲೂ ಇಲ್ಲ.

(ಸಮಾಧಾನ ಮಾಡಲು ಹೋಗುವನು)

ಶಾರಿ : ಥೂ ನನ್ನ ಮುಟ್ಟಬ್ಯಾಡ. ನಿನ್ನ ನಂಬಿಕಿ ತಿಳಧಾಂಗಾಯ್ತು.
ನನ್ನ ತೆಕ್ಕ್ಯಾಗಿಂದ ನಿನ್ನನ್ನ ಕಸಿದಳಲ್ಲಾ ಆ ಸೀತಿ
ಆಕಿ ತೋಳಿಗಿ ಹಾವು ಹಲ್ಲೂರಲಿ.
ಆ ಪರಿ ನಿನ್ನ ನೋಡತಿದ್ದಳಲ್ಲಾ
ಅವಳ ಕಣ್ಣು ಕೊಳತ ಹೋಗಲಿ.
ಗಲ್ಲ ಕಚ್ಚಿದಳಲ್ಲ.
ಅವಳ ಬಾಯಿಗಿ ಇರಿವಿ ಮುತ್ತಲಿ.
ನಿನ್ನ ಕೈ ತಾಗಿದಾಗೆಲ್ಲ ಸೊಂಟ ನಡುಗಿಸಿದಳಲ್ಲ.
ಅವಳ ಸೊಂಟ ಬತ್ತಿ ಹೋಗಲಿ.
ತೆಕ್ಕಿ ಹಾದ ನಿನ್ನ ಎದಿ ಇರಿದಳಲ್ಲ,
ಅವಳೆದಿ ಒಣಗಿಹೋಗಲಿ.

(ಅಳುತ್ತ ಓಡುವಳು. ರಾಮಗೊಂಡ ತಬ್ಬಿಬ್ಬಾಗಿ ಗೊಂದಲದಲ್ಲಿ ಬೀಳುವನು. ಗೊಂದಲಗಳನ್ನು ಮೆಲುಕು ಹಾಕುತ್ತಾ ಹೊರಡುವನು.)