(ಗೌಡನ ಮನೆ. ಪಾರಿ ಮನೆಗೆಲಸ ಮಾಡುತ್ತಿದ್ದಾಗ ರಾಮಗೊಂಡ ಬರುತ್ತಾನೆ.)

ರಾಮಗೊಂಡ : ಅವ್ವ ಏನ ಮಾಡತಾಳ?

ಪಾರಿ : ಮಲಗ್ಯಾಳ

ರಾಮಗೊಂಡ : ಈಗ ಹೆಂಗದಾಳ?

ಪಾರಿ : ಅಳತಾಳೋ ನಗತಾಳೋ ಒಂದೂ ತಿಳಿಯಾಣಿಲ್ಲ. ರಾತ್ರಿ ನಿನ್ನ ನೆನಪಾಗಿತ್ತೋ ಏನೋ, – ನನ್ನ ಕಂದಾ ಅಂತ ಅತ್ತಳು. ಗರ್ಭಕ್ಕ ಪೆಟ್ಟ ಹತ್ತಿದೆಯೋ ಏನೋ, – ಗುಡ್ಡ ಹೊತ್ಹಾಂಗ ಆಗೇತಿಬೇ ಪಾರೀ ಅಂತಿದ್ದಳು.

ರಾಮಗೊಂಡ : ಮದ್ದು ಕೊಟ್ಟೇನು?

ಪಾರಿ : ಕೊಟ್ಟೆ. ತಗೊಂಡಾಗ ಒಂದ ಜಂಪ ನಿದ್ದಿ ಮಾಡತಾಳ. ಮತ್ತ ಅಯ್ಯೋ ಪಿಂಡ ಅಂತ ಏಳತಾಳ, ಮಾತಾಡ್ತ ಮಾತಾಡ್ತ ಅರಿವು ಹಾರಿ ಏನೇನೋ ಬಡಬಡಸ್ತಾಳ. ಅಕಾ ಬಂದಳು.

ಗೌಡ್ತಿ : (ಬರುವಳು) ಚಂಡಾಳ ಪಿಂಡ! ಮೂರು ತಿಂಗಳೊಳಗ ದೊಡ್ಡವರ್ಹಾಂಗ ಒದೀತೈತಿ. ಗುದಮುರಿಗಿ ಹಾಕತೈತಿ. ತುಸ ನಡೆದಾಡಿದರ ಒಳಗಡೆ ಕುಣೀತೈತಿ. ನಿನ್ನ ಹೆಜ್ಜಿ ಬಿದ್ದಲ್ಲಿ ತಗ್ಗ ಬೀಳತಾವ, ಹುಷಾರೋ ಮರಿ! ಬಿದ್ದ ತಗ್ಗು ಗೋರಿ ಆಗತಾವ. ಗೋರಯಿಂದ ಹೆಣ ಎದ್ದು ಬಂದು ಹಲ್ಲು ಕಿರೀತಾ ನಿನ್ನ ಸುತ್ತ ಚೆಲ್ಲವರಿದರ ಏನ ಮಾಡತಿ? ಆಮ್ಯಾಲ ಯಾರೂ ಕಾಪಾಡೋದಿಲ್ಲ. ಕಾಪಾಡೋ ಕರಿಮಾಯಿ ಹೆದರಿ ಎದಿ ಒಡಕೊಂಡಾಳ. ಮರ ಕಡಿದು ನೆತ್ತಿಗೆ ತಂಪಿಲ್ಲದ ತಬ್ಬಲಿಯಾಗಿ ಬಿದ್ದಾಳ. ನೋಡೀಯಂತ ಹೊರಗ ಬಾ.

ಪಾರಿ : ಎವ್ವಾ, ಯಾರು ಬಂದಾರ ನೋಡು.

ಗೌಡ್ತಿ : (ರಾಮಗೊಂಡನನ್ನು ನೋಡಿ) ಆಯ್ ಗೌಡಾ, ಯಾವಾಗ ಬಮದಿ? ಅಂದ ಬ್ಯಾಟಿಗಿ ಹೋದಾವ ಇಂದ ಬಂದಿ? ಹಾದಿ ಗುಂಟ ಕಣ್ಣ ಹಡದೀ ಹಾಸಿ ಕಾದ ನಿಂತೀನಿ. ತಿಳೀಬಾರದ? ಸನೇಕ ಬಾ, ಹಂಗ್ಯಾಕ ದೂರ ನಿಂತಿ?

ಪಾರಿ : ಎವ್ವಾ, ಮಗ- ನಿನ್ನ ಮಗ ರಾಮಗೊಂಡ ಬಂದಾನ. ಅರಿವಿಗಿ ಬಂದ ನೋಡು.

ಗೌಡ್ತಿ : ಅಯ್ಯ, ಹೌಂದಲ್ಲ! ನನ್ನ ಹೊಟ್ಯಾಗಿನಿಂದ ಯಾವಾಗ ಹೊರಗ ಬಂದಿ? ಎಷ್ಟ ಒದ್ದಾಡಿದೆಯೋ ಕಂದ! ಹೊಟ್ಟಿ ತುಂಬ ಹುಣ್ಣಾಗ್ಯಾವ. ಪಾರೀ ನನ್ನ ಕಂದ ಹಸದ ಬಂದಾನ, ಹಾಲ ಕೊಡು, ಸನೇಕ ಬಾ.

(ನೋವಿನಿಂದ ರಾಮಗೊಂಡ ಅವಳ ಬಳಿಗೆ ಹೋಗುವನು. ಗೌಡ್ತಿ ತಬ್ಬಿಕೊಳ್ಳುವಳು.)

ನಿಮ್ಮಪ್ಪ ಹಿಂಗs ತಬ್ಬತಿದ್ದ. ಅವ ತಬ್ಬಿದಾಗಲೆಲ್ಲ ನಾ ಮಸಾರಿ ನೆಲ ಆಗತಿದ್ದೆ. ಅವ ಮೋಡ ಆಗತಿದ್ದ. ನಾ ಮಣ್ಣು, ನನ್ನ ಮಣ್ಣಿನ ಮ್ಯಾಲ ಅವನ ಕಣ್ಣು, ನೋಡತಾ ನೋಡತಾ ಅವ ಮಳಿಯಾಗಿ ಹೊಲ ತುಂಬಿ ಹರಿದಾಡತಿದ್ದ. ರಾತ್ರಿ ಎಲ್ಲಿ ಹೋಗಿದ್ದೆ ಕಂದಾ?

ಪಾರಿ : ಅರಿವಿಗಿ ಬಂದಾಳ, ಮಾತಾಡು.

ರಾಮಗೊಂಡ : ಕರಿಯಜ್ಜನ ಮಣ್ಣ ಮಾಡಾಕ ಹೋಗಿದ್ದೆ.

ಗೌಡ್ತಿ : ನನಗ ಹೇಳದ ಕೇಳದ ಎಲ್ಲಿಗೂ ಹೋಗಬ್ಯಾಡೋ ರಾಜಾ. ಮಲಗಿದಾಗೆಲ್ಲ ಹುಲಿ ಮೀಸಿ ನನ್ನ ಮುಖಕ್ಕ ಚುಚ್ಚಿಧಾಂಗ ಅನಸತೈತಿ. ನಿನ್ನಿ ರಾತ್ರಿಯಂತೂ ಒಂದು ಹುಲಿ ಬಂದು ನನ್ನ ಹೊಟ್ಟೀ ಮ್ಯಾಗ ಗಟ್ಟಿ ಕೂತಬಿಟ್ಟಿತ್ತು, ಚೀರಿದೆ, ಕೂಗಿದೆ. ಯಾರೂ ಬರಲಿಲ್ಲ. ನನ್ನ ಮೈಯಾಗ ಯಾವಾಗ ಹಲ್ಲೂರೈತೊ ಹೊಟ್ಟಿಗಿ ವಿಷ ಇಳಿದೈತಿ.

ರಾಮಗೊಂಡ : ಕೆಟ್ಟ ಕನಸ ಕಂಡಿರಬೇಕು.

ಗೌಡ್ತಿ : ಹುಲಿ ಬಂದು ನನ್ನ ಹಾಸಿಗಿ ಹೊಲಸ ಮಾಡೇತಿ. ಎಷ್ಟ ಜಳಕ ಮಾಡಿದರೂ ವಾಸನೆ ಹೋಗವೊಲ್ದು.

(ಅವಳು ಹುಲಿ ಅಂದಾಗೆಲ್ಲ ರಾಮಗೊಂಡ ವಿಶೇಷ ಗಮನ ಹರಿಸುವುದನ್ನ ಗಮನಿಸುತ್ತಾಳೆ.)

ರಾಮಗೊಂಡ : ಅವ್ವಾ…

ಗೌಡ್ತಿ : ನೀ ಏನೋ ಬಚ್ಚಿಡತಾ ಇದ್ದೀಯಲ್ಲ, ಏನದು?

ರಾಮಗೊಂಡ : ಏನಿಲ್ಲವಲ್ಲ.

ಗೌಡ್ತಿ : ಸುಳ್ಳು, ಆಗಲೇ ನಿನ್ನ ಕಣ್ಣಾಗ ಬೆತ್ತಲೆ ಬೆಂಕಿ ಕಂಡಿತು. ಈಗ ಮೆಲ್ಲಗೆ ಅದಕ್ಕ ತಂಗಿ ತೊಡಿಸ್ತಾ ಇದ್ದೀಯಾ. ಹೇಳು ನಿನ್ನ ಮನಸ್ಸಿನಾಗೇನೈತಿ?

ರಾಮಗೊಂಡ : ಏನಿಲ್ಲವ್ವ.

ಗೌಡ್ತಿ : ಏ ನನ್ನ ಕೋಣ, ಯಾರನ್ನ ಇರಿಯೋದಕ್ಕೆ ಗುರಿ ಇಟ್ಟೀದಿ? ನಿನ್ನ ಕೊಂಬಿನಾಗಿನ ಕನಸೆಲ್ಲ ನನಗ್ಗೊತ್ತು.

ರಾಮಗೊಂಡ : ನಿನ್ನ ಮುಂದ ಮುಚ್ಚಿಟ್ಟುಕೊಳ್ಳೋದು ಏನಿರತೈತಿಬೇ?

ಗೌಡ್ತಿ : ಹಾಂಗಿದ್ದರ ತೇರ ಕಟ್ಟಿ ನನ್ನ ಜಾತ್ರಿ ಮಾಡು, ನಾ ಕರಿಮಾಯಿ! ನೀ ನನ್ನ ಕೋಣ. ನಿನ್ನ ಕಡಿದು, ನಿನ್ನ ಬಾಯಾಗ ಮುಂಗಾಲಿಟ್ಟು ನೆತ್ತೀ ಮ್ಯಾಲ ದೀಪ ಹಚ್ಚತೀನಿ. ಕೈಯಾಗ ಕೊಳ್ಳೀ ಹಿಡಕೊಂಡು ಸಿಡಿ ಆಡತೀನಿ.

(ಒದೆಯುವಳು)

ಪಾರಿ : ಏನಂಬೋ ಮಾತಾಡ್ತೀಯೇ ತಾಯೀ, ಒಳಿತನ್ನು.

ಗೌಡ್ತಿ : (ಹೊಟ್ಟೆ ಹಿಡಿದುಕೊಂಡು) ಬ್ಯಾಟಿಗಿ ಹೋದ ಗೌಡ ಹುಲಿ ಎದಿ ಗುಂಡಿಗಿ ತಂದಕೊಡತೇನಂದ. ಅದನ್ನ ಮನಸ್ಸಿನಾಗs ತಿಂದ ಬಸರಾಗೇನಿ. ಅದಾಗಲೇ ಒಳಗ ಗುಡಿಗ್ಯಾಡಾಕ ಹತ್ತೇತಿ! ಹಸಿದು ಒದ್ದಾಡಾಕ ಹತ್ತೇತಿ! ನಾ ಬೆಳ್ಳೀಬೇಕು, ಆಹಾರ ಕೊಡಬೇ ಅಂತ ಒದರಾಡತೈತಿ. ನಾ ಎಲ್ಲಿಂದ ತರಲಿ? ನನ್ ರಕ್ತ ಕೊಟ್ಟೆ. ಮುಟ್ಟವೊಲ್ಲದು, ಹುಲಿ ಪಿಂಡ ನೋಡು. ಹುಲಿ ಹಾಲ ಕೊಡಬೇ ಅಂತೈತಿ.

(ಹೊಟ್ಟೆಯ ಕೂಸನ್ನು ಸಮಾಧಾನಪಡಿಸುವಂತೆ ತಟ್ಟುತ್ತ)

ಅಯ್ಯೋ ನನ್ನ ಕಂದಾ, ಬೆಳಕಲ್ಲ, ಕತ್ತಲಲ್ಲ-ಸಂಜೀನೆರಳಿನಾಗ ಮೂಡಿದ ಸಂದೇಹದ ಕಂದಾ, ನೀ ಹೆಂಗಿದ್ದೀ ಅಂತ ನನಗ್ಗೊತ್ತು. ನಿನಗಿನ್ನೂ ಆಕಾರ ಬಂದಿಲ್ಲ. ಆದರ ಕಾಲ ಮೀರಿ ಬೆಳೆದಿದ್ದೀಯಾ. ಆಗಲೇ ನನ್ನ ಗರ್ಭ ಕುಟ್ಟೋ ಗುಂಡುಕಲ್ಲಾಗಿದ್ದೀ. ನನಗೊತ್ತು, ಹುಲಿ ಹಾಲ ಕೊಡದಿದ್ದರ ನೀ ಅಲ್ಲೇ ಸಾಯತೀ ಅಂತ. ನೀ ಸಾಯೋದs ಒಳ್ಳೇದು, ಸತ್ತ ಮ್ಯಾಲಾದರೂ ಹೊರಗ ಬರತೀಯಲ್ಲಾ, ಬಾ. ಆಗ ನಿನ್ನ ಮೈತುಂಬ ರಕ್ತದ ಉಚ್ಚೀ ಹೊಯ್ದು ಹುಗೀತೀನಿ! (ಎನ್ನುತ್ತ ಮಂಚದ ಮೇಲೆ ಕೂರುವಳು. ದೂರದಲ್ಲಿ ಅವರ್ಯಾರಿಗೂ ಕಾಣದಂತೆ ಗೌಡ ಬಂದಿದ್ದಾನೆ.)

ನಿನಗ ಇನ್ನೊಂದ ನೆರಳ ಮೂಡಿಧಾಂಗ ಆಯ್ತಲ್ಲ?

ರಾಮಗೊಂಡ : ಏನಂದಿ?

ಗೌಡ್ತಿ : ನಿನಗ ಎರಡ ನೆರಳು ಮೂಡ್ಯಾವ.

ರಾಮಗೊಂಡ : ಏನವ್ವ ನಿನ್ನ ಮಾತು?

ಗೌಡ್ತಿ : ಇದು ಕನ್ನಡಿ ಮನಿ. ಇಲ್ಲಿದ್ದವರಿಗೆಲ್ಲಾ ಎರಡೆರಡು ನೆರಳು ಮೂಡತಾವ. ನನಗೊಂದು ಹುಲಿ ನೆರಳೈತಿ, ಒಂದು ನಂದೈತಿ. ಇಕಾ ನೋಡು, ನಿನಗೂ ಎರಡದಾವ. ಒಂದು ನಿಂತೈತಿ, ಇನ್ನೊಂದು ಹರಿದಾಡತೈತಿ. ಬೇಕಾದರ ಹೋಗಿ ಕನ್ನಡಿ ನೋಡಿಕೋ,

(ರಾಮಗೊಂಡ ಅನುಮಾನದಿಂದ ಎದ್ದು ಸರ್ರನೆ ಕನ್ನಡಿ ಮುಂದೆ ಹೋಗುವನು. ದೂರದಲ್ಲಿ ಇವರಿಗೆ ಕಾಣದಂತೆ ನಿಂತಿದ್ದ ಗೌಡ ಕನ್ನಡಿಯಲ್ಲಿ ಮೂಡಿದ್ದವನು ರಾಮಗೊಂಡ ನೋಡಿದೊಡನೆ ಮರೆಯಾಗುವನು. ರಾಮಗೊಂಡ ಚಕಿತನಾಗಿ ತಿರುಗುವನು)

ರಾಮಗೊಂಡ : ನನ್ನ ಸಂಶಯ ಇನ್ನಷ್ಟ ಬಲಿಯೋ ಹಾಂಗ ಮಾತಾಡ್ತಿ ತಾಯಿ. ಅವು ಹಿಂಗs ಬಲೀತಾ ಹೋದರ ಕಡೀಕ ನನ್ನನ್ನ ತಿಂದಹಾಕಭೌದು. ಒಡಪಿನಾಗ ಖರೆ ಹುಗೀಬ್ಯಾಡ. ನಿನ್ನ ಮಗನ ಗತಿ ಏನಾಗೇತಿ, ಕಣ್ಣು ತಗದ ನೋಡು. ನಿನ್ನೆ ರಾತ್ರಿ ಅಪ್ಪನ ಭೂತ ನೋಡಿ ಬಂದೆ. ಮನೀಗಿ ಬಂದು ಅಪ್ಪನ ಆಕಾರ ನೋಡಿದೆ. ಏನಿದರ ಅರ್ಥ? ಏಕಕಾಲಕ್ಕ ಇಬ್ಬರಿಗೆ ಮಗ ಆಗಲಾರೆ ನಾನು. ನೀನೂ ಅಷ್ಟ, ಇಬ್ಬರಿಗೆ… ಇಬ್ಬರಿಗೆ… ಈ ಇಬ್ಬರಲ್ಲಿ ಯಾರನ್ನ ನಂಬಲಿ? ನಂಬಿದರೂ ದುಃಖ, ನಂಬದಿದ್ದರ ಇನ್ನಷ್ಟ ದುಃಖ. ಇದಕ್ಕೆ ಕಡೀ ಉತ್ತರ ಕೊಡೋಳು ನೀನು. ಹುಚ್ಚಿನ ಮರೆಯೊಳಗ ನಿನ್ನ ಪಾಪ ಮುಚ್ಚಿಟ್ಟಕೋಬೇಡ, ಹೇಳು.

ಗೌಡ್ತಿ : ಹಾ ಈಗ ನೆನಪಾಯ್ತು, ತಾಯಿ ನಾನು! ಕೆಟ್ಟದ್ದಕ್ಕೂ ತಾಯಿ, ಒಳ್ಳೇದಕ್ಕೂ ತಾಯಿ! ನನ್ನ ಸಂತಾನ ಕೊಡೋ ಎಲ್ಲಾ ಹಿಂಸೆಗೆ ಹಿಗ್ಗೋ ತಾಯಿ! ಆಹಾರಿಲ್ಲದ ಗರ್ಭದಾಗ ನನ್ನ ಕಂದ ಒದ್ದಾಡತೈತಿ ಹುಲಿಹಾಲು ತಂದಕೊಡೋ ಮಗನ,

ರಾಮಗೊಂಡ : ಹುಲೀಹಾಲಿಗೂ, ನಿನ್ನ ಉತ್ತರಕ್ಕೂ ಏನು ಸಂಬಂಧ?

ಗೌಡ್ತಿ : ನನಗೂ ನಿನಗೂ ಏನು ಸಂಬಂಧ? ಹುಲಿಗೂ ನಿನಗೂ ಏನ ಸಂಬಂಧ? ಪಾರಂಬಿ ಕರ್ರೆವ್ವಗೂ ಕೀಲಕುದರಿಗೂ ಏನ ಸಂಬಂಧ? ಹಾಳಬಾವಿಗೂ ನನ್ನ ಗರ್ಭಕ್ಕೂ ಏನ ಸಂಬಂಧ?

ಗಿಣಿಗೂ ರಾಕ್ಷಸನಿಗೂ ಏನ ಸಂಬಂಧ?

ಪಾರಿ : ಬಿಡ ಎವ್ವಾ ಏನ ಮಾತಾಡ್ತಿ, ಒಂದಕ್ಕೂ ಅರ್ಥ ಇಲ್ಲ.

ರಾಮಗೊಂಡ : ಅಲ್ಲ, ಹುಚ್ಚಿನ ಮಾತಲ್ಲ ಇವು. ಅವ್ವ ಹೇಳೋ ಒಡಪಿನಾಗ ಏನೋ ಗುಟ್ಟ ಅಡಗೈತಿ. ನಿನಗೂ ನೆಮ್ಮದಿ ಇಲ್ಲ ತಾಯೇ. ಕನಸಿನೊಳಗಿದ್ದಾಂಗ ಮಾತಾಡತಿ. ಇಲ್ಲಿಂದ ನಿಜ ಮೂಡೀತು. ಹೇಳೆವ್ವ ಏನ ಮಾಡಲಿ?

ಗೌಡ್ತಿ : ಹಾಂಗಿದ್ದರ ಅವಸರ ಮಾಡು. ಪಿಂಡ ಹಸಿದು ಸಾಯೋ ಮೊದಲು ಹುಲಿಹಾಲು ತಗಂಬಾ.

ರಾಮಗೊಂಡ : ಇಕಾ ಹೊರಟೆ.

(ಕುಡು ಗೋಲು ಹಿಡಿದು ಹೋಗುವನು ಅಡಗಿದ್ದ ಗೌಡ ಗಮನಿಸುವನು.)