(ಓಡಿಬಂದ ರಾಮಗೊಂಡ ಬಾವಿಯಲ್ಲಿ ಹಣಿಕಿ ಹಾಕುವನು)

ರಾಮಗೊಂಡ : ನಾನು ಶಿವಾಪುರದ ಗೌಡ ರಾಯಗೊಂಡನ ಮಗ ರಾಮಗೊಂಡ. ನಾ ಕೇಳತೀನಿ : ಎಲಾ ಭುತವೇ, ಎಲ್ಲಿದ್ದರೂ ಹೊರಗ ಬಾ.

(ಬಾವಿಯಿಂದ ವಿಚಿತ್ರವಾದ, ಭಯಂಕರ ಶಬ್ದ ಕೇಳಿಬರುತ್ತದೆ. ಆಮೇಲೆ ಇರಿಪ್ಯಾ ವರ್ಣಿಸಿದಂಥ ಭೂತ ಮೇಲೆ ಬರುತ್ತದೆ.)

ರಾಮಗೊಂಡ : ಯಾರು ನೀನು ? ಖರೆ ಹೇಳು.

ಭೂತ : ನನ್ನ ಮಾತನ್ನ ಕೇಳು.

ರಾಮಗೊಂಡ : ಕೇಳ್ತೀನಿ, ಆದರ ಮೊದಲು ನನಗೆ ಉತ್ತರ ಕೊಡು. ಯಾಕ ನಮ್ಮಪ್ಪನ ರೂಪ ತೊಟ್ಟು ಬಂದೆ? ನಿನ್ನ ಮನಸ್ಸಿನಾಗೇನೈತಿ? ಯಾವ ಸೇಡು ತೀರಿಸಿಕೊಳ್ಳೋದಕ್ಕ ನಮ್ಮಪ್ಪನ ರೂಪ ತೊಟ್ಟೀದಿ?

ಭೂತ : ರಾಮಗೊಂಡಾ, ಕಣ್ಣ ತಗದ ನೋಡೋ – ನಾ ನಿನ್ನ ತಂದೆ, ರಾಯಗೊಂಡ!

ರಾಮಗೊಂಡ : ಈಗಷ್ಟs ನಮ್ಮಪ್ಪನ ಮನ್ಯಾಗ ನೋಡಿ ಬಂದೀನಿ. ಇಗ ಅವನ ಭೂತಾ ನೋಡತೀನಂದರ ಹೆಂಗ ನಂಬೋದು? ಕಳಕೊಳ್ಳದೇ ಇರೋ ತಂದೀನ್ನ ಕಳಕೊಂಡ ಹಾಂಗ ಮಾತಾಡೋದು ಹುಚ್ಚತನ, ಇಲ್ಲ ಅಪಶಕುನ. ನೀನು ನನ್ನ ತಂದೆಯೇ ಆಗಿದ್ದರ ಮನೆಯಲ್ಲಿಯೋ ನೀನು ಇಲ್ಲಿಗೆ ಹೆಂಗ ಬಂದೆ? ನಿಜ ಆಗಿದ್ದೋನು ಹೆಂಗ ಭೂತವಾದೆ?

ಭೂಗ : ಮನೆಯಲ್ಲಿದ್ದವನು ರಾಕ್ಷಸ! ನಾನs ನಿನ್ನ ನಿಜವಾದ ತಂದೆ, ಭೂತವಾಗಿದ್ದೀನಿ.

ರಾಮಗೊಂಡ : ಭೂತಗಳೂ ಸುಳ್ಳು ಹೇಳಬಹುದು.

ಭೂತ : ಬ್ಯಾಟಿ ಆಡಿ ಬಂದ ಮ್ಯಾಲ ಅವನ ನಡವಳಿಕ್ಯಾಗ ಏನೂ ವ್ಯತ್ಯಾಸ ಆಗೇ ಇಲ್ಲೇನು?

ರಾಮಗೊಂಡ : ಹೌದು, ಆಗೇದ. ಆದರ ಅದು ಮಾಯಾಮಾಟದಿಂದ ಆಗಿರಭೌದು.

ಭೂತ : ರಾಮಗೊಂಡ, ನೀನು ನನ್ನ ವೀರ‍್ಯಕ್ಕೆ ಹುಟ್ಟಿದ್ದೇ ಖರೆ ಆದರ ಹೊಕ್ಕಳ ಮುಟ್ಟಿಕೊಂಡು ನೋಡು, ಅಂತಃಕರಣದ ಕಣ್ಣ ತಗದ ನೋಡು. ನಿ ನನ್ನ ಮಗ; ನಾ ನಿನ್ನ ತಂದೆಯ ಭೂತ. ನನ್ನ ಕಥೆ ಕೇಳಿ ನೀನು ಕಣ್ಣೀರು. ಸುರಿಸಲಿ ಅಂತ ಹೇಳತಾ ಇಲ್ಲ. ಸತ್ತವನ ಆತ್ಮ ಸುಳ್ಳು ಹೇಳೋದಿಲ್ಲ, ನಂಬು. ಇಂದಿಗೆ ಆರು ತಿಂಗಳ ಹಿಂದೆ ಅಡವಿಗೆ ಏಳಪಟ್ಟಿ ಹುಲಿ ಬಂದಿತ್ತು. ಬ್ಯಾಟಿ ಆಡಾಕ ಹೊಂಟ ನಿಂತೆ. ನೀನೂ ಬರತೀನಿ ಅಂದಿ. ನಿನ್ನ ತಾಯಿಗೆ ಕೆಟ್ಟ ಕನಸ ಬಿದ್ದೈತಿ, ಈ ಸಲ ಬರಬೇಡ ಅಂದೆ, ನೆನಪಿದೆಯಾ?

ರಾಮಗೊಂಡ : ಹೌದು.

ಭೂತ : ಆದರ ಅದು ಹುಲಯಲ್ಲ, ರಾಕ್ಷಸ! ಮೋಸ ಮಾಡಿ ನಾನು ನನ್ನ ಜನರಿಂದ ಆಗಲೋ ಹಾಂಗ ಮಾಡಿದ. ನನ್ನ ಕೊಂದು ರಕ್ತ ಮಾಂಸ ಎಲ್ಲಾ ಈ ಹಾಳಬಾವ್ಯಾಗ ಚೆಲ್ಲಿದ. ನನ್ನ ಹಾಂಗs ಆಗಿ ಊರ ಸೇರಿದ. ಇಲ್ಲಿ ನಾ ಭೂತವಾಗಿದ್ದೀನಿ. ಅಲ್ಲಿ ಊರ ಆಳಾಕ ಹತ್ಯಾನ. ನಿನಗ ಇನ್ನ ಹೆಂಗ ಹೇಳಲೋ ಮಗನs?

ರಾಮಗೊಂಡ : ದೇವರs ಹೆಂಗ ನಂಬಲಿ? ಕಣ್ಣೆದುರಿಗೆ ಅವನೂ ಇದ್ದಾನೆ. ಕಣ್ಣ ನಂಬಲಾ? ಅಂತಃಕರಣಕ್ಕ ನಿನ್ನ ಮಾತು ಖರೇ ಅನಸ್ತದ. ನಿನ್ನ ನಂಬಲಾ?

ಭೂತ : ಆ ದಿನದಿಂದಲೇ ನಿನ್ನ ತಾಯಿ ಅರೆಹುಚ್ಚಿ ಆದಳು, ಊರು ಬದಲಾಯ್ತು, ಜನ ಬದಲಾದರು. ಗೌಡ ಬದಲಾಗ್ಯಾನಂತ ಜನ ತಂತಮ್ಮೊಳಗ ಮಾತಾಡ್ತಾ ತಮಗ ತಾವs ಚಾಡೀ ಹೇಳಿಕೊಳ್ತಾ ಕೂತರು. ಇದನ್ನಾದರೂ ನಂಬತೀಯ?

ರಾಮಗೊಂಡ : ನಿನ್ನ ಮಾತಿನಿಂದ ನನ್ನ ಹೃದಯ ಒಡೆದುಬಿಟ್ಟೆ. ನನ್ನ ಕಣ್ಣುಗಳನ್ನ ನಾನs ನಂಬದ ಹಾಂಗ ಮಾಡಿದೆ. ಈಗ ನನ್ನ ಕಣ್ಣಿಗೂ ಪ್ರತಿಯೊಂದೂ ಒಡೆದೊಡೆದು ಕಾಣಿಸ್ತ ಇದೆ. ನನಗ ನಾನs ಇಬ್ಬರಾಗಿ ಕಾಣಸ್ತ ಇದ್ದೀನಿ. ಎರಡೂ ಸತ್ಯಗಳನ್ನ ಒರೆಗೆ ಹಚ್ಚೋದು ಹೆಂಗ?

ಭೂತ : ಮೂಡದಿಕ್ಕಿನ ಏಳುಕೊಳ್ಳದಾಗ ಒಂದು ಆಲದ ಮರ ಐತಿ. ಮರದ ಪೊದರಿನಾಗೊಂದು ಕತ್ತಲದ ಅರಮನಿ ಐತಿ. ಅಲ್ಲಿ ಪಂಜರದಾಗ ಒಂದು ಗಿಣಿ ಐತಿ. ಅದರಾಗ ಅವನ ಜೀವ ಐತಿ. ಅದನ್ನ ಕೊಂದರ ಅವ ತನ್ನ ನಿಜರೂಪದಾಗ ಸಾಯತಾನ. ಅಲ್ಲಿ ಒಬ್ಬ ಸಾಧು ಶರಣ ಇದ್ದಾನ. ಅವ ಮಂತ್ರಿಸಿದ ನೀರು ಕೊಡತಾನ. ದನ್ನ ತಂದ ನನ್ನ ಮ್ಯಾಲ ಸಿಂಪಡಿಸಿದರ ನನ್ನ ಆತ್ಮಕ್ಕ ಶಾಂತಿ ಸಿಗತೈತೋ ಮಗನ. ಹುಷಾರ್‌ಹುಡುಗ, ಅಲ್ಲಿ ಹಿಂಡ ಹಿಂಡ ಸೈತಾನರನ್ನ ಕಾವಲಿಗಿಟ್ಟಾನ ರಾಕ್ಷಸ!

(ಭೂತ ಮಾಯವಾಗುತ್ತದೆ.)

ರಾಮಗೊಂಡ : ಯಾವುದು ನಿಜ, ಯಾವುದು ಸುಳ್ಳು? ಇದು ಮನೆಯೋ ಬಾವಿಯೋ? ಇವೆಲ್ಲ ನನ್ನನ್ನ ಗೊಂದಲಿಸಿ ಗೊಂದಲ ಹಾಕತಾವ, ಏನ ಮಾಡಲಿ? ಏಳುಕೊಳ್ಳಕ್ಕ ಹೋಗೋವಷ್ಟು ತಾಂಳ್ಮೆ ನನ್ನಲ್ಲಿಲ್ಲ. ಸತ್ಯ ಈಗಲೇ ತಿಳಿಯಬೇಕು. ಬಯಲಾಟದ ಬಣ್ಣ ದಾಟಿ ಎಲ್ಲರ ನಿಜ ಮುಖ ಕಾಣಬೇಕು. ನೆರಳಿದ್ದವರು ನೆರಳಾಗಿ, ಕೊಲೆ ಮಾಡಿದ ಕೈ ಕೆಂಪಾಗಿ ಕಾಣಬೇಕು. ಇದನ್ನ ತಿಳಿಯುವ ಸಮೀಪದ ದಾರಿಯೆಂದರೆ ತಾಯಿಯೇ! ತಾಯೀ-ತಂದೆಯ ಆತ್ಮಕ್ಕೆ ಆತ್ಮ ಬೆಸೆದವಳು, ದೇಹಕ್ಕೆ ದೇಹ ಬೆಸೆದವಳು. ಸತ್ಯ ಸುಳ್ಳಿನ ಸಂಚು ನಿನಗೆ ತಿಳಿದಿರಲೇಬೇಕು. ತಪ್ಪಿಸಿಕೊಳ್ಳೋದಕ್ಕಾಗಿಯೇ ನೀನು ಅರೆಹುಚ್ಚಿನಲ್ಲಿ ಅಡಗಿರಬೇಕು. ಇಕೋ ನಿನ್ನ ಭೇಟಿ ಈಗಲೇ ಈ ಕತ್ತಲಲ್ಲೇ ಆಗಬೇಕು.

(ಹೊರಡುತ್ತಾನೆ. ಪಕ್ಕದ ಮರವೇ ಮುದುಕಿಯಾಗಿ ಕಾಣಿಸಿಕೊಳ್ಳುತ್ತಾಳೆ.)

ಮುದುಕಿ : ನನ್ನ ಕೇಳಿದರ, ನಾ ನೀನs ಆಗಿದ್ದರ ಬೆಳಕು ಮೂಡೋ ತನಕ ಕಾಯತಿದ್ದೆ.

ರಾಮಗೊಂಡ : ಯಾಕ?

ಮುದುಕಿ : ಯಾಕಂದರ ನಿಮ್ಮವ್ವ ಮಲಿಗ್ಯಾಳ? ಮಲಗಿ ಕನಸ ಕಾಣಾಕ ಹತ್ತ್ಯಾಳ! ಕನಸಿನಾಗ ಹುಡುಗಿ ಆಗಿ ಕಾಡಿನಾಗ ಅಡ್ಡಾಡಾಕ ಹತ್ಯಾಳ! ಅದಕ್ಕ ಈಗ ಹೋಗಿ ಎಬ್ಬಿಸಬ್ಯಾಡ ಅಂದೆ.

ರಾಮಗೊಂಡ : ಎಬ್ಬಿಸಿದರ?

ಮುದುಕಿ : ಅಯ್ಯs, ಇಷ್ಟೂ ತಿಳಿಯಾಣಿಲ್ಲೋನೋ ಹುಡುಗ? ಕಾಡಿನಾಗ ಅಡ್ಡಾಡತಾಳ. ನಿಮ್ಮಪ್ಪ ಬಂದು ಅಕೀ ಮ್ಯಾಲ ಹೂವೆಸೆದು ಪದ ಹಾಡತನಾ! ಇಬ್ಬರೂ ಕೂಡತಾರ! ಈಗ ಎಬ್ಬಿಸಿದರ ಆಕಿ ನಿನ್ನನ್ನ ಇನ್ನೂ ಬಸಿರಾಗಿಲ್ಲ ಕೂಡ, ಬಸಿರಾಗಲಿ, ಹಡೀಲಿ. ನೀ ದೊಡ್ಡವಾಗೋವಷ್ಟ ಯಾಳೇ ಕೊಟ್ಟು ಎಬ್ಬಿಸು.

ರಾಮಗೊಂಡ : ಹಾಂಗಿದ್ದರ ತಡೀತೀನಿ. ನಾ ದೊಡ್ಡಾವಾಗಲಿ, ನಮ್ಮಪ್ಪ ಹುಲೀಬ್ಯಾಟಿಗಿ ಹೋಗಿಬರಲಿ. ಅಲ್ಲೀ ತನಕ ಕತೀ ಹೇಳ ಮುದುಕಿ. ಹುಲೀಬ್ಯಾಟಿ ಆಡಿ ಬಂದ ಮ್ಯಾಲ ನಮ್ಮಪ್ಪ ರಾಕ್ಷಸ ಆಗ್ಯಾನ ಅಂತಾರ. ನಮ್ಮವ್ವಗ ವ್ಯತ್ಯಾಸ ತಿಳೀಲಿಲ್ಲೇನು?

ಮುದುಕಿ : ಹೆಂಗಸಿಂದೇನ ಕೇಳತೀಯೋ ತಮ್ಮ! ಆಕೀ ಸತ್ಯ ಯಾರಿಗಿ ತಿಳದೈತಿ? ದೊಡ್ಡವಳಾದ ಮ್ಯಾಲ ಮುಖ ಮ್ಯಾಲ ಮಾಡಿ ಮಲಗತಾಳ, ಕೆಳಗೆ ತೊಡ್ಯಾಗಿಂದ ನದೀ ಹರೀತೈತಿ, ನೀರಿನಾಗ ಚಿಳಿಮಿಳಿ ಮೀನ ಸಾವಿರಾರ ಈಜಾಡತಿದ್ದರ ಆಯ್ತು, ನಗತಾ ಇರತಾಳ.

ರಾಮಗೊಂಡ : ಭಾಳ ದುರ್ದೈವಿ ಅವಳು.

ಮುದುಕಿ : ಹೌದು, ಅದಕ್ಕs ಎಬ್ಬಿಸಬ್ಯಾಡ ಅಂದೆ.

ರಾಮಗೊಂಡ : ಆಗಲಿ. ಬೆಳಗಾಗೋತನಕ ತಡೀತೀನಿ. ಆಮ್ಯಾಲ ಭಯಂಕರ ಸತ್ಯದಾಗ ಎಚ್ಚರಾಗಬೇಕು.

ಮುದುಕಿ : ನಿನ್ನ ಜಾಗಾದಾಗ ನಾನs ಇದ್ದಿದ್ದರ ಇನ್ನೂ ಎಚ್ಚರದಿಂದ ಕೆಲಸ ಮಾಡಿತಿದ್ದೆ. ಯಾಕಂದರ ಇಷ್ಟ ವರ್ಷ ನೋಡೇನಿ, ಸತ್ಯ ಒಂದೇ ಅಂತ ಅನ್ನಿಸೇ ಇಲ್ಲ. ಏನಿಲ್ಲದಂರೂ ಸತ್ಯ ಎರಡಾದರೂ ಇರತಾವ. ಒಂದು ಹೆಂಗಸಿನ ಸತ್ಯ, ಇನ್ನೊಂದು ಗಂಡಸಿನ ಸತ್ಯ. ಹೆಂಗಸು ತನ್ನ ಸತ್ಯ ಎಂದೂ ಬಾಯಿಬಿಟ್ಟು ಹೇಳಾಣಿಲ್ಲ. ಅದಕ್ಕs ಗಂಡಸಿಗೆ ಅದು ತಿಳಿಯಾಣಿಲ್ಲ. ಅವ ತಿಳೀತಾನ – ತನ್ನ ಸತ್ಯ ಹೆಂಗಸಿನ ಸತ್ಯವೂ ಹೌದು ಅಂತ. ಹೆಂಗಸಿನ ಸತ್ಯ ಹೆಂಗಿರತೈತಿ ಹೇಳ್ಲೀಯಪ್ಪ? ಕೋಳಿಗೆ ಹುಂಜ ಯಾಕ ಕೂಗತೈತಿ ಅಂತ ಗೊತ್ತು. ಅದರ ಕೂಗಿನಾಗ ಏನೋ ಸತ್ಯ ಐತಿ ಅಂತ ಗೊತ್ತು. ಅದಕ್ಕs ಅದರ ಹಂತ್ಯಾಗ ಹೋಗತೈತಿ. ಆಮ್ಯಾಲ ತತ್ತೀ ಹಾಕತೈತಿ, ಮರಿ ಮಾಡತೈತಿ. ಮರಿ ಅದರ ಸತ್ಯ. ಅದರಾಚೆ ಈಚೆ ಸತ್ಯಕ್ಕ ಎಷ್ಟ ನೆರಳಿದ್ದರು ಅದಕ್ಕ ಕಾಣೂದs ಇಲ್ಲ. ಯಾಕಂದರ ಅದರ ಸತ್ಯಕ್ಕ ನೆರಳಿರೋದು ಸಾಧ್ಯ ಇಲ್ಲ. ಗಂಡಸಿಂದು ಹಾಂಗಲ್ಲ ನೋಡು. ಮಕ್ಕಳ ಹೆರೋದು ಸತ್ಯ, ಬಂಜೆತನ ಸತ್ಯ, ಹಗಲೂ ಸತ್ಯ, ರಾತ್ರೀನೂ ಸತ್ಯ, ದೊಡ್ಡ ಸತ್ಯ ಸಣ್ಣ ಸತ್ಯ, ಹೆಚ್ಚು ಸತ್ಯ – ಕಮ್ಮಿ ಸತ್ಯ. ಸತ್ಯಕ್ಕಿಂತ ಸತ್ಯದೆ ನೆರಳs ಜಾಸ್ತಿ ಅವನಲ್ಲಿ. ಹೌದಂತೀಯೋ, ಅಲ್ಲಂತೀಯೋ?

ರಾಮಗೊಂಡ : ಹೌದು.

ಮುದುಕಿ : ಅದಕ್ಕ ಗಂಡಸುs ಎಲ್ಲಾದಕ್ಕೂ ಮಾತಿನಾಗ ಉತ್ತರ ಕೊಡತಾನ. ಹೆಂಗಸಿಗೆ ಮಾತು ಗೊತ್ತs ಇಲ್ಲ. ಆಕಿ ಎಲ್ಲಾ ಕಣ್ಣಾಗ ತೋರಿಸಬೇಕು. ಆಕೀ ಕಣ್ಣು ಓದಾಕ ಬರದಿದ್ದರ ನೀನs ಸೋತ್ಹಾಂಗ, ಅವಳಲ್ಲ ತಿಳಕ.

ರಾಮಗೊಂಡ : ಹೌದು. ಮುದುಕಿ ನೀ ಯಾರು?

ಮುದುಕಿ : ತಾಯಿ.

ರಾಮಗೊಂಡ : ಯಾರ ತಾಯಿ?

ಮುದುಕಿ : ನಿನ್ನ ತಾಯಿ, ಊರ ತಾಯಿ! ಅಯ್‌ಶಿವನ, ಆ ದಿನ ಪಾರಂಬಿ ಮರ ಕಡಿಯೋರು ಬಂದಾಗ ನಾ ಬಂದಿದ್ದೆ. ನೀನೂ ಅಲ್ಲೇ ಇದ್ದೆ.

ರಾಮಗೊಂಡ : ಆವಾಗ ಬಂದವಳು ಹುಡುಗಿ.

ಮುದುಕಿ : ಆವಾಗಿಂದ ಎಷ್ಟು ಕಾಲ ಸರಿದು ಹೋಗೈತಿ! ಆಗ ಹುಡುಗಿ ಇದ್ದೆ, ಈಗ ಮುದುಕಿ ಆಗೇನಿ.

ರಾಮಗೊಂಡ : ನಾನು?

ಮುದುಕಿ : ನೀನೂ ಬೆಳೆದು ದೊಡ್ಡವನಾಗಿ ಸೀಳಿಹೋಗಿದ್ದಿ.  ಆಗ ರಾಮಗೊಂಡಾಗಿದ್ದಿ. ಈಗ ನಿಮ್ಮಪ್ಪನೂ ಆಗೀದಿ! ಹೋ…

(ಎಂದು ಮುದುಕಿ ಕುಣಿಯುತ್ತ ರಾಮಗೊಂಡನಿಗೆ ಅಣಕಿಸುತ್ತ ಹೋಗುವಳು. ರಾಮಗೊಂಡ ದಿಗ್ಭ್ರಾಂತನಾಗಿ ನಿಲ್ಲುವನು.)