ಮೇಳ : ಏ ಕುರುಬರಣ್ಣಾ!
ಸತ್ಯುಳ್ಳ ಶರಣಾ
ಕಾಪಾಡೊ ಕುರಿಗಳನಾ | ಮಾಡುವೆ ನಮನಾ ||ಪ||

ಗಿರಿವ ಏರಿಗೆ ಬಂದು ಕುರಿ ಹಿಂಡು ನಿಂತಾವ
ಕೋಲು ಕುರುಬನ ಕಾವಲಿರದೆ
ನಿಲ್ಲಲಾರೆವು ಶಿವನೆ ಸುಳಿಯಲಾರೆವೊ ಮುಂದೆ
ದಮ್ಮಯ್ಯ ದಯವಾಗೊ ತಂದೆ.
ಹಳೆಯ ದೊಡ್ಡಿಯ ಗುರುತ ಮರತೇವೊ ಕಳಕೊಂಡು
ಮತಿಗೆಟ್ಟು ಮರುಳಾದೇವಣ್ಣಾ||

ಪಡುವಣದ ಹುಲಿರಾಯಾ ಕುರಿಯ ವೇಷವ ಧರಿಸಿ
ನಮ್ಮೊಳಗ ತಾರ್ತಕವಾದ
ಕಲ್ಯಾಣದ ಬೆಳಕಾರಿ ಪ್ರಳಯದಲಿ ನಿಂತೇವೊ
ಬ್ಯಾಟಿಗೊಂಬುವ ಮಿಕದ ಹಾಂಗ
ಸಂದೇಹ ಸುಳಿದಾವು ಎಲ್ಲರ ಯಾರೊ ಕರಣಾ
ಹುಲ್ಲು ತಿನ್ನುವ ಕುರಿ ಹಲ್ಲುಗುರು ಮಸೆದಾವೊ
ಕದಗಳಿಲ್ಲದ ದೊಡ್ಡಿಯೊಳಗಾ||

(ಸ್ಮಶಾನ, ಇರಿಪ್ಯಾ, ಬಸ್ಯಾ, ಪ್ರಭು ಗೋರಿಯ ಹತ್ತಿರ ಕೂತಿದ್ದಾರೆ.)

ಬಸ್ಯಾ : ಚಂದ್ರನಿಗೇನು ರೋಗ ಬಂತೊ, ಮೂಡೇ ಇಲ್ಲ.

ಬಾಳ್ಯಾ : ಮೂಡಿದರೂ ಬೆಳಕ ಚೆಲ್ಲೋದs ಇಲ್ಲ. ಹಗಲಿ ಸೂರ್ಯನಂಥಾ ಸೂರ್ಯ ಕೂಡಾ ಕೊಳತ ಹಣ್ಣಿನ್ಹಾಂಗ ಕಾಣತಾನಂದರ!

ಬಸ್ಯಾ : ಭೂಮಿಗೂ ಜ್ವರ ಬಂದಾವೇನ್ನೋಡೋ ಮಾರಾಯಾ, ಇಷ್ಟ ರಾತ್ರಿ ಆದರೂ ಇನ್ನೂ ಬೆಚ್ಚಗೈತಿ.

ಪ್ರಭು : ಕರಿಯಜ್ಜ ಸತ್ತದ್ದ ನೋಡಿ ರಾಮಗೊಂಡ ಹುಚ್ಚಾಗ್ಯಾನ.

ಬಾಳ್ಯಾ : ಹೌಂದ್ಹೌಂದು, ಪಾಪ, ರಾಮಗೊಂಡ ಯಾವತ್ತೂ ಮುದುಕನ ಹಂತ್ಯಾಕ ಇರತಿದ್ದ. ಘನ ಮಾತಾಡವರು ಇಬ್ಬರೂ. ರಾತ್ರಿ ದೆವ್ವ ಓಡಾಡೊ ಯಾಳೆ ಆದರೂ ಇಬ್ಬರೂ ಮಾತಾಡ್ತ ಪಾರಂಬಿ ಮರದ ಹಂತ್ಯಾಕs ಕುಂತಿರತಿದ್ದರು.

ಬಸ್ಯಾ : ಮುದುಕ ಸತ್ತನಲ್ಲ, ನಮ್ಮಪ್ಪನ್ನ ಎರಡನೇ ಬಾರಿ ಕಳ ಕೊಂಢಾಂಗಾಯ್ತು! ಮರ ಕಡೀದಿದ್ದರ ಮುದುಕ ಇನ್ನೆರಡ ದಿನ  ಬದಿಕಿರತಿದ್ದನೋ ಏನೊ!

ಇರಿಪ್ಯಾ : ಆ ಹುಡುಗಿ ಬಂದಾಗ ಖರೆ ಖರೆ ಕರಿಮಾಯೀನs ಹಾಂಗ ಬಂದಳಂತ ನಾ ತಿಳಕೊಂಡೆ

ಬಸ್ಯಾ : ನಾನೂ ಹಾಂಗs ಅಂದಕೊಂಡೆ, ಯಾರು ಆ ಹುಡಿಗಿ?

ಇರಿಪ್ಯಾ : ಯಾರೂ ಅಲ್ಲ ತಗಿ, ನಮ್ಮ ಊರಾಗ ಆ ಹುಡುಗೀನ್ನ ನೋಡೇ ಇಲ್ಲ ನಾನು.

ಬಸ್ಯಾ : ಮತ್ತ ಹೆಂಗ ಬಂದಳು?

ಇರಿಪ್ಯಾ : ಹೆಂಗೇನು – ಕರಿಮಾಯೀನs ಇರಬೇಕು.-

ಬಸ್ಯಾ : ಕರಿಮಾಯಿ ಆದರ ಮರ ಕಡಿಯೋನ ಮಾತಿಗಿ ಮರುಳಾಗತಿದ್ದಳ?

ಬಾಳ್ಯಾ : ಹಂಗೇನೂ ಅನಬ್ಯಾಡಪೋ, ಗೌಡ ದೇವರಿಗೂ ಮೋಸ ಮಾಡಬಲ್ಲ.

ಇರಿಪ್ಯಾ : ನೀ ಏನs ಹೇಳು, ಕರಿಯಜ್ಜನ್ಹಾಂಗ ವಿನಾಕಾರಣ ಸತ್ತವರನ್ನ ನಾ ಕಂಡಿಲ್ಲಪ್ಪ.

ಪ್ರಭು : ಅಧೆಂಗ ವಿನಾಕಾರಣ ಅಂತೀಯೋ? ಪಾರಂಬಿ ಮರ ಕಡೀ ಬ್ಯಾಡರಿ ಅಂತ ಸತ್ತ. ನಮ್ಮ ಹಕ್ಕೊಳಬಳ್ಳೀ ಮ್ಯಾಲ ಕುಡಗೋಲ ನೆರಳಾಡತಾವಂತ ಹೇಳಿ ಸತ್ತ, ಇನ್ನ ಹೆಂಗ ಸಾಯಬೇಕಪ? ಉಳಿದವರ್ಹಾಂಗ ಹುಳೀಮಜ್ಜಿಗಿ ಕುಡಿದಿದ್ದಕ್ಕ, ನೊಣ ಕಚ್ಚಿದ್ದಕ್ಕ ಸತ್ತನೇನು? ಬೇಕಾದರ ಇದಕ್ಕೆಲ್ಲ ಗೌಡನs ಕಾರಣ ಅನ್ನು ಒಪ್ಪತೀನಿ.

ಬಾಳ್ಯಾ : ಗೌಡನ ದರ್ಬಾರಂದರ ಹೆಂಗಂದಿ? ಸುಡಗಾಡಧಾಂಗ. ಅವ ಅದರ ರಾಜಾ. ನಾವೆಲ್ಲ ಅರ್ಧ ಸುಟ್ಟ ಹೆಣ. ಅವ ಚಪ್ಪಾಳೆ ಹೊಡದ ಕೂಡಲೇ ನಾವೆಲ್ಲಾ ಅವನ ಮುಂದ ಹೋಗಿ ಕೂರುತೀವಿ. ಅವ ಏನೇನೋ ಮಾತಾಡತಾನ. ನಮಗೊಂದೂ ತಿಳಿಯಾಣಿಲ್ಲ, ಆದರ ನಮ್ಮ ಕತ್ತ ನಮಗೂ ಗೊತ್ತಾಗಂಧಾಂಗ ತೂ ಗ ತಾ ವ. ಖರೆ ಅಂತೀಯ, ಸುಳ್ಳಂತೀಯ?

ಬಸ್ಯಾ : ಖರೆ, ದೆವ್ವಿನಂಥಾ ದೆವ್ವ ಸಹಿತ ಗೌಡನ ಮುಂದ ನಿಲ್ಲಾಕ ಹೆದರತಾವೋ ಏನೋ!

ಪ್ರಭು : ಕರಿಯಜ್ಜ ಒಬ್ಬಾವನs ಗೌಡನೆದುರಿಗೆ ಮಾತಾಡತಿದ್ದ ಆದರ ಅವನೂ ಹೆಣಧಾಂಗ ಕಾಣತಿದ್ದ. ಆದರ ಅವಗ ನಮಗ ಫರ್ಕ ಇಷ್ಟ: ಅವ ತಾಜಾ ಹೆಣಧಾಂಗ ಕಾಣತಿದ್ದ.

ಇರಿಪ್ಯಾ : ಒಂದು ಚಿಕ್ಕೀನೂ ಕಾಣವೊಲ್ದಲ್ಲೊ ಮಾರಾಯಾ. ಅವೂ ಕಣ್ಣ ಮುಚ್ಚಿ ಮಲಗ್ಯಾವೋ ಏನೊ!

ಬಸ್ಯಾ : ಗೌಡ ಬಂದ, ಸುಮ್ಮನ ಕುಂತಕ.

(ಎಲ್ಲರೂ ಸುಮ್ಮನೆ ಕೂರುವರು. ರಾಮಗೊಂಡ ಬರುವನು.)

ರಾಮಗೊಂಡ : ಪರಬೂ ಇನ್ನೂ ಹೆಣ ತರಲಿಲ್ಲೇನೋ?

ಪ್ರಭು : ಎಲಾ ಶಿವನೇ! ನೀ ಗೌಡ ಅಂತ ತಿಳಕೊಂಡಿವಲ್ಲೋ ಮಾರಾಯಾ!

ರಾಮಗೊಂಡ : ಕಣ್ಣು ನೆತ್ತಿಗೆರ್ಯಾವೇನಲೇ?

ಇರಿಪ್ಯಾ  : ನನಗೂ ಅದs ಹೊಯ್ಕಾತಂದರ! ಔನಡ, ಕತ್ತಲಿ, ಪಾಟೀ ಮ್ಯಾಗಿನ ಅಕ್ಷರ ಅಳಿಸಿಧಾಂಗ ಎಲ್ಲಾ ಗುರುತು ಅಳಿಸಿ ಹಾಕೇತಿ, ಕಾಣಬಾರದ? ಹೋಗಲಿ, ಹೆಣ ಯಾಕ ತರಲಿಲ್ಲ? ನೀನ s ಹೊರಸಿಕೊಂಡ ಬರ‍್ತೀಯಂತ ನಾವಿಲ್ಲಿ ಕಾದ ಕುಂತಿವಿ!

ರಾಮಗೊಂಡ : ಆ ಕಡೆ ನಾ ಹೋಗಲಿಲ್ಲ, ಸೀದಾ ಇಲ್ಲಿಗೇ ಬಂದೆ. ಯಾಕ, ಅಲ್ಲಿ ಯಾರೂ ಇಲ್ಲೇನು?

ಪ್ರಭು : ಬಂದಾರು ತಡಿ, ಮುದುಕನ್ನ ಉಳಿಸಿಕೊಳ್ಳಾಕ ಆಗಲಿಲ್ಲ. ಅವನ ಹೆಣ ಆದರೂ ಚಂದ ಮಾಡೋಣು. ಏ ಇರಿಪ್ಯಾ, ಬಸ್ಯಾ ಇಬ್ಬರೂ ಹೋಗಿ ಹೆಣ ತರತೀರೇನು? ಬೇಕಾದರ ಬಾಳ್ಯಾನ್ನೂ ಕರಕೊಂಡ ಹೋಗ್ರಿ.

ಬಸ್ಯಾ : ನೀವಿಬ್ಬರೂ ಇಲ್ಲೆ ಇರ್ರಿ ಹಂಗಾದರ.

(ಇರಿಪ್ಯಾ, ಬಸ್ಯಾ ಮತ್ತು ಬಾಳ್ಯಾ ಹೋಗುವರು. ತುಸು ಹೊತ್ತು ನೀರವ)

ರಾಮಗೊಂಡ : ಪರಬೂ

ಪ್ರಭು : ಹೂ

ರಾಮಗೊಂಡ : ನನಗೂ ಸಾಯಬೇಕನಸತೈತಿ.

ಪ್ರಭು : ಥೂ ಒಳಿತನ್ನು.

ರಾಮಗೊಂಡ : ಕರಿಯಜ್ಜನ್ನ ನಾವs ಕೈಯಾರೆ ಕೊಂದಿವಂತ ಅನ್ನಿಸೋದಿಲ್ಲೇನು?

ಪ್ರಭು : ಖರೆ ಹೇಳಬೇಕಂದರ ನಿಮ್ಮಪ್ಪನs ಕೊಂದ. ಮರ ಕಡೀದಿದ್ದರ ಮುದುಕ ಬದುಕಿರತಿದ್ದ.

ರಾಮಗೊಂಡ : ನೀವೆಲ್ಲ ಯಾಕ ಸುಮ್ಮನಿದ್ದಿರಿ?

ಪ್ರಭು : ಅದs ತಿಳೀವೊಲ್ದು.

ರಾಮಗೊಂಡ : ಖರೆ ಹೇಳತೀನೋ ಪರಬು. ನನಗೇನಾಗೈತೋ ತಿಳೀವೊಲ್ದು. ಏನೇನೋ ಭಾವನೆ ಉಕ್ಕತಾವ. ಅವಕ್ಕೆಲ್ಲಾ ಮೂಕನಾಗೀನಿ. ಥಣ್ಣಗಾಗ್ಯಾವ. ಬಿಸಿರಕ್ತ ನಾಲಿಗೆಗೆ ಹಾಡು ಕಲಿಸತೈತಂತ, ನನಗೋ ಬೈಗಳ ಕಲಿಸತಾ ಇದೆ. ಆದರ ಯಾರನ್ನ ಬೈಬೇಕಂತ ತಿಳೀವೊಲ್ದು. ಏನ ಮಾಡಲಿ? ಬ್ಯಾಟಿಗಿ ಹೋಗಿ ಬಂದಾಗಿಂದ ನಮ್ಮಪ್ಪ ಬದಲಾಗ್ಯಾನ  ಅಂತಾರ. ಹೆಂಗ ಬದಲಾಗ್ಯಾನ? ಎಲ್ಲಿ ಬದಲಾಗ್ಯಾನ? ತಿಳೀವೊಲ್ದು. ನಿಮಗ ತಿಳದಿದ್ದರ ನೀವ್ಯಾಕ ತಿಳಿಸಬಾರದು? ಮರ ಕಡಿದದ್ದು ದೊಡ್ಡದಲ್ಲ. ಆ ಮರ ಎಂದೋ ಸತ್ತಿತ್ತು.  ಅದರ ಬೇರಿನಾಗ ವಿಷ ಸೇರಿತ್ತು. ನಮ್ಮಪ್ಪ ಬ್ಯಾಟಿ ಆಡಿ ಬಂದ ದಿನಾನs ಪಾರಂಬಿ ಮರದ ಚಿಗುರು ಬಾಡಿತ್ತು. ನೀವ್ಯಾರೂ ನನ್ನ ಮಾತು ಕೇಳಲೇ ಇಲ್ಲ. ಕರಿಯಜ್ಜಗ ಹೇಳಿದೆ, ಹೌದಂದ. ನನ್ನ ತಾಯಿಗೆ ಹೇಳಿದೆ. ಅವಳೋ ಅಂದಿನಿಂದ ಅರೆಹುಚ್ಚಿ! ಏನಿದರರ್ಥ?

ಪ್ರಭು : ನನಗೂ ಅದ s ತಿಳೀವೊಲ್ದೋ ಮಾರಾಯಾ!

(ಅಷ್ಟರಲ್ಲಿಅಯ್ಯೋ ಅಪ್ಪಾ ಸತ್ತಿನ್ರೋಎಂದು ಕಿರುಚುತ್ತಾ ಇರಿಪ್ಯಾ ಬರುವನು.)

ಪ್ರಭು : ಯಾಕೋ ಏ ಇರಿಪ್ಯಾ?

ಇರಿಪ್ಯಾ : (ನಡುಗುತ್ತ) ಪರಬೂ, ದೆವ್ವ ಕಂಡಿನೋ!

ಪ್ರಭು : ದೆವ್ವ! ಎಲ್ಲಿ ನೋಡಿದೆ?

ಇರಿಪ್ಯಾ : ಹಾಳ ಬಾವೀ ಹಂತ್ಯಾಕ!

ಪ್ರಭು : ಸೂಳೀಮಗನ, ಆ ಕಡೆ ಹೋಗಬ್ಯಾಡ್ರಂತ ಗೌಡ್ರು ಡಂಗುರ ಸಾರಿಲ್ಲೇನೊ?

ಇರಿಪ್ಯಾ : ದೂರದಾಗ ಇದ್ದಿನೋ ಮಾರಾಯಾ!

ಪ್ರಭು : ಹೆಂಗಿತ್ತು?

ಇರಿಪ್ಯಾ : (ರಾಮಗೊಂಡನನ್ನು ನೋಡಿ ಅನುಮಾನಿಸುತ್ತ) ಥೇಟ ಗೌಡರ್ಹಾಂಗ ಇತ್ತೊ ಎಪ್ಪಾ!

ರಾಮಗೊಂಡ : ಸುಳೀಮಗನ, ನಮ್ಮಪ್ಪನ್ನ ನೋಡೀಯೋ ಏನೋ!

ಇರಿಪ್ಯಾ : ದೇವರಾಣಿ! ಕರಿಮಾಯಿ ಆಣಿಯೋ ಎಪ್ಪಾ!
ಮೊದಮೊದಲು ನಾನು ಹಾಂಗs  ಅಂದಕೊಂಡೆ. ನಮ್ಮ ಗೌಡರು ಈ ಯಾಳೇದಾಗ ಇಲ್ಲಿಗ್ಯಾಕೆ ಬಂದಾರಪಾ ಅಂತ ನೋಡತೀನಿ, – ಮುಗಿಲಿಗೆ ನೆಲಕ್ಕ ಏಕಾಗಿ ನಿಂತೈತಲ!

ರಾಮಗೊಂಡ : ನಿನ್ನವ್ವನ, ಖರೇ ಹೇಳದಿದ್ದರೆ ನಿನ್ನನ್ನ ಇದs ಗೋರ್ಯಾಗ ಮುಚ್ಚತೇನ ಮಗನ!

ಇರಿಪ್ಯಾ : ನಾ ಯಾಕ ಸುಳ್ಳ ಹೇಳಲೋ ಮಾರಾಯಾ? ಕೆಂಪ ಹೆಡಿಗಿ ರುಂಬಾಲ ಸುತ್ತಿತ್ತು, ಜರಿ ಅಂಗಿ, ದಡಿ ಧೋತರ, ಹಣಿ ಗಂಟ ಹಾಕಿತ್ತು. ಆ ದಿನ ಅಡಿವ್ಯಾಗ ಹುಲಿ ಸಿಗದೇ ಇದ್ದಾಗಲೂ ಗೌಡರು ಹಿಂಗs ಹಣಿ ಗಂಟ ಹಾಕಿದ್ದರು. ಏನೋ ಹೇಳತೀನಿ ಬಾ ಅನ್ನವರ‍್ಹಾಂಗ ಕೈಮಾಡಿ ಕರ್ಯಾಕ ಹತ್ತಿತು. ಸತ್ತಿನೋ ಎಪ್ಪಾ ಅಂತ ಓಡಿಬಂದೆ. ಬೆನ್ನಹತ್ತಿ ಬಂತೇನೋ ಅಂತ ತಿರಿಗಿ ನೋಡಿದೆ, ಹಾಳಬಾವ್ಯಾಗ ಲಯ ಆಗತಿತ್ತು.

ರಾಮಗೊಂಡ  : ಈಗ ಹಾಳ ಬಾವಿಗಿ ಹೋದರ ಸಿಕ್ಕೀತೇನಲೆ?

ಇರಿಪ್ಯಾ : ಏನೋಪ್ಪ.

ರಾಮಗೊಂಡ : ಮಗನ, ಸುಳ್ಯಾದರ ನಿನ್ನ ಕಣ್ಣ ಕೀಳತೀನಿ.

ಪ್ರಭು : ಇರಿಪ್ಯಾ ಹಾಂಗ ಸುಳ್ಳ ಹೇಳಾವಲ್ಲ ತಗಿ.

ರಾಮಗೊಂಡ : ತಡಿ, ಹಂಗಾದರ ಹೋಗಿ ಬರತೀನಿ.

ಪ್ರಭು : ದುಡುಕಿನ ಕೈಯಾನ ಬುದ್ದೀ ಕೊಡಬಾರದು. ಕಂಡೀತು ಕಾಣಲಿಕ್ಕಿಲ್ಲ ಅದೇನಂಬೋದನ್ನ ಬರೋಬರಿ ವಿಚಾರ ಮಾಡಿ ನೋಡೂಣಂತ. ನೀ ಈಗಲೇ ಇಷ್ಟು ಅವಸರ ಮಾಡೋದು ಚೆಲೋ ಅಲ್ಲ.

ರಾಮಗೊಂಡ : ಪರಬು, ಇದರಾಗೇನೋ ಗುಟ್ಟ ಇದ್ಧಾಂಗೈತಿ, ನೋಡಿ ಬರತೀನಿ.

ಪ್ರಭು : ಒಬ್ಬನs ಹೋಗಬ್ಯಾಡ. ನಾನೂ ಬರ್ತೀನಿರು.

ರಾಮಗೊಂಡ : ದೆವ್ವಿಗೆ ಹೆದರೋದಿಲ್ಲ. ನೀ ಏನೂ ಕಾಳಜಿ ಮಾಡಬ್ಯಾಡ.

(ರಭಸದಿಂದ ಒಬ್ಬನೇ ಓಡಿಹೋಗುವನು.)