ಸೂತ್ರಧಾರ : ಅದಾಗಿ ಆರು ತಿಂಗಳಾಗಿತ್ತು.
ದಿನ ಕಳೆದಂತೆ ದೊಡ್ಡ ಆಶ್ಚರ‍್ಯಗಳು ನಮಗಾಗಿ ಕಾದಿದ್ದವು. ಹಿಂಡುಹಿಂಡಾಗಿ ಬಂದರ ಬೆರಗಿಗೆ ಸಾಯತೀವಂತಲೋ ಏನೊ ಒಂದೊಂದಾಗಿ, ಹಿಂದೆ ಮುಂದಾಗಿ, ಸಾಲಾಗಿ ಸಾಗಿ ಬಂದು ಎದೀಗೊದ್ದು ಒಳಗೆ ಹೆಜ್ಜೆ ಮೂಡಿಸಿ ಹೋಗತಿದ್ದುವು.

ಗೌಡರು ನಮ್ಮ ಗುರತ ಹಿಡೀತಿರಲಿಲ್ಲ.
ಯಾವ್ಯಾವ್ದೋ ಹೆಸರಿನಿಂದ ಕರೀತಿದ್ದರು.
ನಮ್ಮ ಹೆಸರು ಅವರಿಗೆ ನೆಪ್ಪಿರಲಿಲ್ಲ.
ಅವರು ಕರೆಯೋ ಹೆಸರು ನಮಗ ಸಮ್ಮತ ಇರಲಿಲ್ಲ.
ಕರೆದಾಗೆಲ್ಲ ಹೆದರಿ ಅವರ ಕಡೆ ನೋಡತಿದ್ದಿವಿ.
ಸಂಶೇದಿಂದ ಅವರೂ ನೋಡತಿದ್ದರು ಮತ್ತು ರೇಗತಿದ್ದರು.

ಮನಸ್ಸಿನಾಗs ಕೇಳತಿದ್ದಿವಿ: ಹಿಂಗ್ಯಾಕ್ರಿ ಗೌಡರ? ಅಂತ.
ಆದರ ಅವರ ಉತ್ತರಾ ಕೊಡ್ತಾನs ಇರಲಿಲ್ಲ.
ಖರೇ ಹೇಳಬೇಕಂದರ.
ನಾವೀಗ ಸಣ್ಣವರಾಗಿ ಉಳಿದಿರಲಿಲ್ಲ.
ಆಗಲೇ ಕಥೆಗಳಾಗಿದ್ದಿವಿ.

ವಾಡೇದೊಳಗೆ ರಾತ್ರಿ ಮೊದಲಿನ್ಹಾಂಗ ಬೆಳಕು
ಇರತಿರಲಿಲ್ಲ. ಮ್ಯಾಲಿನ ದೇವರು ಹಣಿಕಿ ಹಾಕಿದರೂ
ಕಾಣಧಾಂಗ, ಎಲ್ಲೆಲ್ಲಿಯ ಕತ್ತಲೆಲ್ಲಾ ಅಲ್ಲೇ ಬಂದು
ರಾಶಿಯಾಗಿತ್ತು.
ಸುತ್ತಲಿನ ಕೆಟ್ಟ ದೆವ್ವಗಳೆಲ್ಲ ಅಲ್ಲಿಗೇ ಬಂದು
ಕುಹಕಗಳನ್ನ ಪಿಸಗುಡತಿದ್ದುವು.
ದುಃಸ್ವಪ್ನ ಕಂಡಾಗ ಕೂಸ ಚೀರತಾವಲ್ಲಾ-
ಹಾಂಗ ವಾಡೇದಾಗಿನಿಂದ ಒಮ್ಮೊಮ್ಮಿ ಗೌಡ್ತಿ
ಚೀರಿದ್ದು ಕೇಳಸ್ತಿತ್ತು.
ಆದರ,
ಆ ತಾಯಿ ಕನಸಿನಾಗ ನಮಗ ಪ್ರವೇಶ ಇರಲಿಲ್ಲ.

ಈಗ ನಮಗಿದ್ದ ಆಶ್ರಯ ಒಂದೇ – ಕರಿಮಾಯಿ ಮರ.
ನಮಗೆಲ್ಲೋ ಗಾಯವಾಗಿತ್ತು, ಅದರ ಮ್ಯಾಲ
ಪಾರಂಬಿ ನೆರಳು ಕವಿದು ಅದು ಕಾಣದ ಹಾಂಗ
ಮಾಡತಿತ್ತು. ನೆರಳ ಬಿಟ್ಟ ಹೊರಗಡೆ ಬಂದರ ಸಾಕು
ಗಾಯದ ಭಯ ನಮ್ಮನ್ನ ಮುಕ್ತಿ ತಿಂತಿತ್ತು.
ಅದರ ಗೌಡರಿಗೆ ಇದೂ ಸರಿಬರಲಿಲ್ಲ.
ನಾವೆಲ್ಲಾ ಸೇರಿ ಸಂಚ ಮಾಡತೀವಂದರು.
ಪಾರಂಬಿ ಮರದಡಿ ಹೊಂಚಿ ನಿಂತೇವಂದರು.
ಚಿಗುರೋ ದಯ ಚಿವುಟಿಬಿಟ್ಟರು.

(ಪಾರಂಬಿ ಮರದ ಬಳಿ ಕರಿಯಜ್ಜ ಚಿಂತೆ ಮಾಡುತ್ತಾ ಕೂತಿದ್ದಾನೆ. ರಾಮಗೊಂಡ ಬರುತ್ತಾನೆ.)

ರಾಮಗೊಂಡ : ಯಜ್ಜಾ

ಕರಿಯಜ್ಜ : ಹೂ

ರಾಮಗೊಂಡ : ಆಕಾಶ ಕಡಕೊಂಡ ಮೈಮ್ಯಾಲ ಬಿದ್ಧಾಂಗ ಕುಂತೀಯಲ್ಲ. ಯಾಕೆ?

ಕರಿಯಜ್ಜ : ತಿಳೀವೊಲ್ದಪ.

ರಾಮಗೊಂಡ : ಏನ ತಿಳೀವೊಲ್ಲದು?

ಕರಿಯಜ್ಜ : ಏನೇನೂ.

ರಾಮಗೊಂಡ : ಅಂದರ?

ಕರಿಯಜ್ಜ : ಯಾಕೋ ಜೀವದಾಗ ಆರಾಮಿಲ್ಲೋ ತಮ್ಮಾ. ಎದಿ ಬಿರಧಾಂಗ ಆಗೇತಿ, ಕಣ್ಣು ಸಮ ಕಾಣವೊಲ್ದು. ಎದರಿದ್ದವರೆಲ್ಲ ಎರಡೆರಡ ಕಾಣಸ್ತಾರ.

ರಾಮಗೊಂಡ : ಸೊಪ್ಪ ಹಿಂಡಿಕೊಂಡರ ಸಮ ಆದೀತು ಬಿಡು.

ಕರಿಯಜ್ಜ : ನಾ ಇಂದ ಸಾಯತೀನೋ ಏನೊ.

ರಾಮಗೊಂಡ : (ಭಯ ಮತ್ತು ಆತಂಕಗಳಿಂದ) ಏನೇನೋ ಮಾತಾಡ್ತಿ ಬಿಡೆಜ್ಜ ನೀನು.

ಕರಿಯಜ್ಜ : ತಮ್ಮಾ, ಹೋಗಿ ತಾಯಿಗಿ ನಮಸ್ಕಾರ ಮಾಡಿ ಬಾ.

ರಾಮಗೊಂಡ : ನಾ ಇನ್ನೂ ಜಳಕಾ ಮಾಡಿಲ್ಲ.

ಕರಿಯಜ್ಜ : ಇರಲಿ, ತಾಯೀ ದರ್ಶನ ಮಾಡಿಕೊಂಡ ಬಾ.

(ರಾಮಗೊಂಡ ಹೋಗುವನು. ಹೋಗಿ ನಮಸ್ಕರಿಸಿ ಅಲ್ಲಿಂದಲೇ ಯಜ್ಜಾ ಎಂದು ಚೀರುತ್ತ ಬರುವನು. ಕರಿಯಜ್ಜ ಬರುವನು. ಕರಿಯಜ್ಜ ಕಣ್ಣೀರು ಸುರಿಸುತ್ತಿರುವನು.)

ರಾಮಗೊಂಡ : ಯಜ್ಜಾ! ತಾಯೀ ಮೂರ್ತಿ ಒಡದೈತಿ!

ಕರಿಯಜ್ಜ : ……….

ರಾಮಗೊಂಡ : ಏನಾರ ಮಾತಾಡೆಜ್ಜಾ, ಕರಿಮಾಯೀ ಮೂರ್ತಿ ಬಿರದೈತಿ! ಅಪ್ಪಗ ಹೇಳಿ ಬರಲೇನು?

ಕರಿಯಜ್ಜ : ಏನೂ ಆಗಾಣಿಲ್ಲ. ನಿಮ್ಮಪ್ಪಗ ಹೇಳಿದರ ಒಡೆದದ್ದು ಒಂದಾಗತೈತಿ? ಇಂಥಾದ್ದೇನೋ ಆಗತೈತಿ ಅಂತ ನನಗನಿಸಿತ್ತು. ನಮ್ಮಂಥ ಭಕ್ತರಿದ್ದೂ ಎದಕ್ಕ ಬಂತು? ಹಂದಿನ ಕಾಲದಾಗ ತಾಯೀ ಭಕ್ತರಿದ್ದರು. ಪಾರಂಭಿ ಮರ ಮಾತಾಡಸ್ತಿದ್ದರು. ಗುಡ್ಡ ಗರ್ಜನಿ ಮಾಡೋ ಹಾಂಗ ಮಾತಾಡತಿದ್ದರು! ನಾವೂ ಇದ್ದೀವಿ, ತಾಯಿ ಬಿರದದ್ದನ್ನು ನೋಡ್ತಾ ಕುಂತೀವಿ!

(ಇರಿಪ್ಯಾ ಬರುವನು. ರಾಮಗೊಂಡ ಇರಿಪ್ಯಾನಿಗೆ)

ರಾಮಗೊಂಡ : ತಾಯೀ ಮೂರ್ತಿ ಬಿರದೈತಿ!

ಕರಿಯಜ್ಜ : ಏನಂದಿ?

ರಾಮಗೊಂಡ : ಹೋಗಿ ನೋಡಿ ಬಾ!

(ಇರಿಪ್ಯಾ ಸಂದೇಹದಿಂದ ಹೋಗುವನು. ಹೆಣ ಕಂಡ ಗಾಬರಿಯಲ್ಲಿ ಓಡಿ ಬರುವನು.)

ಇರಿಪ್ಯಾ : ಗೌಡರ್ನ ಕರಕೊಂಬರತೀನಿ.

ರಾಮಗೊಂಡ : ಅಜ್ಜ ಬ್ಯಾಡಂತಾನ.

ಇರಿ‌ಪ್ಯಾ : ಅದೂ ಖರೆ.

(ಅಷ್ಟರಲ್ಲಿ ನಾಲ್ವರು ಮರ ಕಡಿಯುವವರು ಬರುವರು.)

ಮರಕಟುಕ ೧ : ಪಾರಂಬಿ ಮರ ಅಂದರ ಇದs ಏನ್ರಿ?

ರಾಮಗೊಂಡ : ಹೌದು, ಯಾಕ?

ಮರಕಟುಕ ೧ : ಇದನ್ನ ಕಡ್ಯಾಕ ಕಳಿಸ್ಯಾರ ಗೌಡ್ರು.

ರಾಮಗೊಂಡ : ಯಾವೂರವರು ನೀವು?

ಮರಕಟುಕ ೨ : ಬೆಳಗಾವಿ ಸಿಟಿ ಕಡೆಯವರು.

ರಾಮಗೊಂಡ : ಅದಕ್ಕs ಇಷ್ಟ ಧೈರೆ ಮಾಡೀರಿ. ನಾನು ಗೌಡನ ಮಗ ರಾಮಗೊಂಡ-

ಮರಕಟುಕ ೨ : ನಮಸ್ಕಾರ್ರಿ.

ರಾಮಗೊಂಡ : ನಾ ಹೇಳತೀನಿ ಪಾಪಸ್ ಹೋಗ್ರಿ.

ಮರಕಟುಕ ೨ : ಅಪ್ಪ ಮರ ಕಡೀರಿ ಅಂತಾನ. ಮಗ ಬ್ಯಾಡ ಅಂತಾನ. ನಾವು ನೋಡ್ರೀ – ಕೂಲಿಯವರು. ಕೆತ್ತಂದರ ಕೆತ್ತವರು, ಮೆತ್ತಂದರ ಮೆತ್ತವರು. ಕೆತ್ತಲಿಕ್ಕೂ ಕೂಲಿ, ಮೆತ್ತಲಿಕ್ಕೂ ಕೂಲಿ. ಈಗೇನು ಮರ ಕಡೀರಂತೀರೋ ಬ್ಯಾಡಂತೀರೋ?

ರಾಮಗೊಂಡ : ಹೇಳಲಿಲ್ಲಾ, ವಾಪಸ್ ಹೋಗ್ರಿ ಅಂತ?

ಕರಿಯಜ್ಜ : ಸೊಥಾ ಗೌಡರs ಕಳಿಸಿದರೇನ್ರಪ?

ಮರಕಟುಕ ೧ : ಹೌದು, ಬೇಕಾದರ ಕೇಳಿ ಬರ‍್ರಿ. ಇಲ್ಲದಿದ್ದರ ಆನೆಯಂಥಾ ಮರ ಕಡ್ಯಾಕ ನಮಗೇನು ಕೈಚಪಲೇನು? ಕೆಲಸಿರಲಿಲ್ಲ ಅಂತ ಒಪ್ಪಿಕೊಂಡೀವಿ. ಇಲ್ಲದಿದ್ದರ ಎಂಥಾ ಮರ ಕಡಿಯೋ ದಕ್ಕ ದಿನಕ್ಕ ಒಬ್ಬಾವಗ ನಾಕಾಳಿನ ಕೂಲಿ ಕೊಡಬೇಕು.

ಕರಿಯಜ್ಜ : ಅನಾದಿ ಕಾಲದಿಂದಲೂ ಬಂದ ಮರ ಇದು. ಆಗಿನಿಂದಲೂ ತಾಯಿ ಇದರ ಬುಡದಾಗ ನೆನೆದಾಳ. ಆಳೋ ತಾಯಿ, ನಂಬಿದೋರಿಗೆ ನಿಜ ತೋರಿಸೋ ತಾಯಿ, ಆಕೀ ಮರ ಕಡಿಯೋದಕ್ಕ ಹೇಳತಾನಂದರ ನಿಮ್ಮಪ್ಪಗ ಏನೋ ಆಗಿರಬೇಕು. ಸೊಥಾ ತಾಯೀನs ಬಿರದ್ದಾಳ, ಇನ್ನು ನಿಮ್ಮಪ್ಪನಿಗಾದರೂ ಏನ ಹೇಳಾಕಾದೀತು? (ಮರಕಟುಕನಿಗೆ) ಏನಪ್ಪಾ, ಸೊಥಾ ಗೌಡರs ಕಳಿಸಿದರ?

ಮರಕಟುಕ ೧ : ಮುಂಗಡ ಕೂಲಿ ಸಹಿತ ಕೈಯಾಗ ಹಿಡಕೊಂಡು ಬಂದೀವಿ. ವಾಪಸ್ ಹೋದರ ಬಿಟ್ಟಾರೇನ್ರಿ? ನೀವs ಹೋಗಿ ಗೌಡರನ್ನ ಕೇಳಬಾರದ?

ರಾಮಗೊಂಡ : ಯಜ್ಜಾ, ನಾ ಮನೀಗಿ ಹೋಗಿ ಕೇಳಿ ಬರಲೇನು?

ಕರಿಯಜ್ಜ : ಧರೆಯ ಮ್ಯಾಲಿನ ಧರ್ಮ ಆರಿಹೋಗೇತ್ಯೊ ತಮ್ಮಾ! ಮೊದಲಾದರ ನಿಮ್ಮಪ್ಪ ಎದ್ದಾಗ ತಾಯೀ ಅಂತಿದ್ದ. ಬಿದ್ದಾಗ ತಾಯೀ ಅಂತಿದ್ದ. ಮಗ್ಗಲಾದರೂ ತಾಯೀ ಅಂತಿದ್ದ. ಹುಲಿ ಬ್ಯಾಟಿಗಿ ಹೋಗಿಬಂದಾ ನೋಡು, – ತಾಯೀನ್ನ ಕಸಕಡ್ಡಿ ಮಾಡಿಟ್ಟ. ಯಾವ ಭೂತ ಅವನೊಳಗ ಹೊಕ್ಕೈತೋ, ಇಲ್ಲಾ ಕಲಿಕಾಲ ಅವರ ಮೈ ತುಂಬೈತೋ, ನನ್ನ ಗುರುತ ಹಿಡೀವೊಲ್ಲ, ತಾಯೀ ಗುರುತಾ ಹಿಡೀಲಾರದವನು ನನ್ನ ಗುರುತ ಹೆಂಗ ಹಿಡಿದಾನು?

ಇರಿಪ್ಯಾ : ಹೌಂದ ಹೌಂದು, ಅವರ ಕಣ್ಣ ನೋಡಿದರ ನನಗ ಅಂಜಿಕಿ ಬರತೈತಿ. ಹೊಂಚಿದ ಚೂರಿಯಂಥಾ ಅವರ ಕಣ್ಣಿನ ನದರ ಬಿದ್ದಲ್ಲೆಲ್ಲಾ ನನ್ನ ಮೈಗಿ ತೂತ ಬಿದ್ದಾಂಗ ಅನಸತೈತಿ.

ಕರಿಯಜ್ಜ : ಅವ ಏನು ಮಾಡಿದರೂ ಒಳಗೊಳಗೆ ನಗತಾನ ಅಂತ ಅನಸತೈತಿ.

ಇರಿಪ್ಯಾ : ಈಗ ಪಾರಂಬಿ ಮರ ಕಡೀತಾರ: ಏನ ಮಾಡೋಣು?

ಕರಿಯಜ್ಜ : ನ್ಯಾಯ ಮಾಯವಾತಿಯೇ ತಾಯಿ!
ಪೂರಾ ಎಲ್ಲಾ ಅರೆಬರೆ ಆಗಿ ಹಂಚಿ ಹೋಧಾಂಗ,
ಉರಿಯೋ ಸೂರ್ಯ ಗಾಳಿಗಿ ಗಕ್ಕನ ಆರಿಧಾಂಗ ಅನಸತೈತಿ.
ಬೈಗೂ ಬೆಳಗೂ ಎಲ್ಲಾ ಕಾಲ ಒಂದs ಆಗಿ
ಕಣ್ಣ ರೆಪ್ಪೀ ಮ್ಯಾಲ ಹರದಾಡಿಧಾಂಗ ಅನಸತೈತಿ!
ಕಾಂಬೋದೆಲ್ಲ ಖಾಲಿ ಆಗಿ
ಅನಿಸಿದ್ದೆಲ್ಲ ನಿಜ ಆಗಿ
ಗಾಳಿಗೆ ಆಕಾರ ಬಂದೊ-
ಆಕಾಶ ನೀಲಿಗೆ ನಕ್ಷತ್ರವಾದೋ-
ಸುತ್ತೂ ದಿಕ್ಕಿನ ದೆವ್ವ ಬಂದು ಮರದ ಮ್ಯಾಲೆ
ನೆರಳ ಮಾಡಿ ನಿನ್ನ ಖರೆ ಕಾಣಧಾಂಗ
ಮಾಡ್ಯಾವs ತಾಯೀ!
ತಾಯೀ, ಎಲ್ಲಿದ್ದೀ? ಹೊರಗ ಬಾರs ಎವ್ವಾ!

(ಮರದೊಳಗಿಂದ ಸುಮಾರು ವಯಸ್ಸಿನ ಪುಟ್ಟ ಹುಡಿಗಿಯೊಬ್ಬಳು ಖುಶಿ ಖುಶಿಯಾಗಿ ನಗುತ್ತ ಬರುವಳು. ಕರಿಯಜ್ಜ ಅವಳು ಕರಿಮಾಯಿಯೆಂದೇ ತಿಳಿದು ಭಾವುಕನಾಗುವನು. ಹುಡುಗಿ ಪಾರಂಬಿಮರ ನೋಡುತ್ತಾ ಅಣಕಿಸುವಳು.)

ಹುಡುಗಿ : ಅಯ್ಯ, ನಿನ್ನ ಐಸಿರಿಯೆ! ಕೆಳಗೂ ಬೇರು, ಮ್ಯಾಗೂ ಬೇರು!
ಕೆಳಗ ನೆಲದಾಗೂ ಬೇರು
ಮ್ಯಾಲ ಆಕಾಶದಾಗೂ ಬೇರು!
ನೆಲದಾಗಿನ ಬೇರಿನಿಂದ ನೀರು ಕುಡೀತಾಳ
ಆಕಾಶದ ಬೇರಿನಿಂದ ಗಾಳಿ ಕುಡೀತಾಳ,
ಕೆಳಗಿನ ಬೇರಿಗೆ ನೀರಿಲ್ಲಾ ನೀರಿಲ್ಲಾ
ಮ್ಯಾಗಿನ ಬೇರಿಗೆ ಗಾಳಿಲ್ಲಾ ಗಾಳಿಲ್ಲಾ.

(ಚಪ್ಪಾಳೆ ತಟ್ಟುತ್ತಾ ಕುಳಿದಾಡುವಳು.)

ಕರಿಯಜ್ಜ ; ತಾಯಿ ಬಂದಳು! ತಾಯಿ ಬಂದಳು!!

ಮರಕಟುಕ ೧ : ಏನಪಾ, ಇವಳು ನಿನ್ನ ತಾಯೀನ?

ಕರಿಯಜ್ಜ : ಹೌದು. ಪಾರಂಬಿ ಕರ್ರೆವ್ವ! ಕರಿಮಾಯಿ ಈ ಹುಡುಗಿ ರೂಪದಿಂದ ಬಂದಾಳ! ಹೇಳು ತಾಯೀ, ಪರಂಬಿ ಮರ ಕಡೀಬ್ಯಾಡಂತ ಹೇಳು.

ಮರಕಟುಕ ೨ : ಛೇ ಛೇ ! ಏಳೀ ಕೂಸು, ಅಧೆಂಗಪ ನಿನ್ನ ತಾಯಿ ಆಗತಾಳ?

ರಾಮಗೊಂಡ : ಸುಮ್ಮನ ಕೇಳ್ರೆಲೇ.

ಕರಿಯಜ್ಜ : ಎಳೀ ಕೂಸಲ್ಲ ಅವಳು – ತಾಯಿ, ಕರಿಮಾಯಿ, ಜಗದಂಬಿ, ಕರ್ರೆವ್ವ! ಗುಂಡು ತೇಲಿಸುವಾಕಿ, ಬೆಂಡು ಮುಳುಗಿಸೋವಾಕಿ, ಮಹಾಮಾಯಿ!

ಮರಕಟುಕ ೧ : ಇವನೊಳ್ಳೆ ಕರಿಮಾಯೀ ಚೇಲಾ ಗಂಟ ಬಿದ್ನಪಾ. ಅಪಾ, ನಿನ್ನ ತಾಯೀನ್ನ ಮಾತಾಡಸ್ತೀನಿ ಇರು. ಏ ಏ ಹುಡುಗಿ, ಇಲ್ಲಿ ಬಾ. ನಿನ್ನ ಹೆಸರೇನು?

ಹುಡುಗಿ : ತಾಯಿ.

ಮರಕಟುಕ ೧ : ಇಲ್ಲಿಗ್ಯಾಕ ಬಂದಿ?

ಹುಡುಗಿ : ಕರಿಯಜ್ಜ ಕರೆದ.

ಮರಕಟುಕ ೨ : ನಾವು ಈ ಮರ ಕಡೀಬೇಕಂತೀವಿ. ನೀ ಏನಂತಿ?

ಕರಿಯಜ್ಜ : ಬ್ಯಾಡಂತ ಹೇಳು ತಾಯಿ.

ಹುಡುಗಿ : ಬ್ಯಾಡ.

ಮರಕಟುಕ ೩ : ಕಡದರ ಏನ ಮಾಡತಿ?

ಕರಿಯಜ್ಜ : ಸುಡತೀನಂತ ಹೇಳು ತಾಯೀ.

ಹುಡುಗಿ : ಸುಡತೀನಿ.

ಕರಿಯಜ್ಜ : ಕೇಳಿದಿರೇನ್ರೋ ಕೇಳಿದಿರೇನ್ರೋ? ಈ ಮರಕ್ಕ ಒಂದ ಏಟ ಹಾಕಿದರೂ ನಿನ್ನ ಸತ್ಯ ತೋರಸ್ತೇನಂತ ಹೇಳು ತಾಯೀ.

ಹುಡುಗಿ : ನನ್ನ ಸತ್ಯ ತೋರಸ್ತೀನಿ.

ಮರಕಟುಕ ೪ : ತಾಯೀ, ನಿನ್ನ ವಯಸ್ಸೆಷ್ಟು?

ಹುಡುಗಿ : ಎಂಟು. ನಾ ಇನ್ನೂ ದೊಡ್ಡೋಳಾಗಿಲ್ಲ.

ಮರಕಟುಕ ೪ : ಹಾಂಗಿದ್ದರ ನೋಡು, ಈಗ ಈ ಮರ ಕಡೀತೀವಿ. ಕಡಿದು ಅದರಾಗಿಂದ ನಿನಗೊಂದು ಕೀಲಕುದರೀ ಮಾಡಿಕೊಡ್ತೀವಿ. ನೀನು ರಾಜಕುಮಾರಿ. ಅದರ ಮ್ಯಾಲ ಕುಂತು ಆಕಾಶದಾಗ ಹಾರತಿ! ಹಾರ್ತ ಹಾರ್ತಾ ಕೆಳಗಿನ ಹೊಲ, ಮರ, ಗಿಡ, ಹೊಳಿ, ಗುಡ್ಡ ನೋಡತಿ. ಅಲ್ಲಿ ನಿನ್ನ ಎದುರಿಗೆ ಒಂದು ಗಿಣಿ ಹಾರಿ ಬರತೈತಿ! ಅದನ್ನ ಕುದರೀ ಮ್ಯಾಲ ಕೂರಿಸಿಕೊಂಡು ಮಾತಾಡತಿ!

ಹುಡುಗಿ : ರಾಜಕುಮಾರ ಬರಾಣಿಲ್ಲೇನು?

ಮರಕಟುಕ ೪ : ಬರದೇನು? ಗಿಣೀನೇ ರಾಜಕುಮಾರ!

ಹುಡುಗಿ : ಥೂ! ಗಿಣೀ ಜೋಡಿ ಹೆಂಗ ಮದುವೆ ಆಗೋದು?

ಮರಕಟುಕ ೧ : ಗಿಣೀ ಮ್ಯಾಲ ಕೈ ಆಡಸ್ತೀಯಲ್ಲ, ನೋಡಿದರ ಅದರ ನೆತ್ತೀಮ್ಯಾಲೆಂದು ಮುಳ್ಳಿದೆ! ಮೆಲ್ಲಗೆ ಮುಳ್ಳು ಕೀಳಬೇಕು. ಕಿತ್ತೆಯೋ ಗಿಣಿ ಹೋಗಿ ರಾಜಕುಮಾರ ಆಗತಾನ!

ಹುಡುಗಿ : ಅವ ಏನೇನೆಲ್ಲಾ ಆಗತಾನ?

ಮರಕಟುಕ ೧ : ದೆವ್ವ ಆಗತಾನ! ರಾಕ್ಷಸ ಆಗತಾನ ! ದೇವರಾಗತಾನ ! ಬೇಕಾದರ ಗಿಣಿ ಆಗತಾನ! ಹುಲಿ ಆಗತಾನ !

ಹುಡುಗಿ : ಅದೆಲ್ಲ ನಾನೂ ಆಗಬೇಕು. ನನಗೆ ರಾಜಕುಮಾರ ಬೇಕು.

ಮರಕಟುಕ ೪ : ಅದೂ ಆದೀತು. ಅದೆಲ್ಲ ಅವನ ಮುಖವಾಡ. ಬೇಕಂದರ ಅವನ್ನ ಕಳಚಿ ನಿನಗೂ ಕೊಡತಾನ. ಅದರ ಅವನ್ನ ನೀ ಒಂದರ ಮ್ಯಾಲೊಂದು ಮುಖದ ಮ್ಯಾಲ ಹಾಕ್ಕೊಂಡಿ ಅಂದರ, ರಾಜಕುಮಾರ ನಿನ್ನ ಕಣ್ಣಿಗೆ ಕಾಣೋದs ಇಲ್ಲ. ನೀ ಒಬ್ಬಂಟಿ ಆಗತಿ.

ಹುಡುಗಿ : ನನಗ ರಾಜಕುಮಾರ ಬೇಕು.

ಮರಕಟುಕ ೧ : ರಾಜಕುಮಾರ ಬೇಕಂದರ ನೀ ರಾಜಕುಮಾರಿ ಆಗಬೇಕು.

ಹುಡುಗಿ : ಆಗತೀನಿ, ನನಗ ರಾಜಕುಮಾರ ಬೇಕು.

ಮರಕಟುಕ ೧ : ರಾಜಕುಮಾರ ಬೇಕಂದರ ನೀ ರಾಜಕುಮಾರಿ ಆಗ ಕೀಲ ಕುದರಿ ಹತ್ತಬೇಕು.

ಹುಡುಗಿ : ಕೀಲಕುದರಿ ಹತ್ತತೀನಿ.

ಮರಕಟುಕ ೧ : ಕೀಲಕುದರಿ ಬೇಕಂದರ ಮರ ಕಡೀಬೇಕು. ಕಡಿಯೋಣವ?

ಹುಡುಗಿ : ಕಡೀರಿ ಹಂಗಾದರ.

ಕರಿಯಜ್ಜ : ತಾಯೀ! ತಾಯೀ! ಏನ ಹೇಳಿದೆ ತಾಯಿ!

ಹುಡುಗಿ : ನನಗ ರಾಜಕುಮಾರ ಬೇಕು.

ಮರಕಟುಕ ೩ : ನಿನ್ನ ತಾಯಿ ಅಪ್ಪಣೆ ಆಯ್ತು, ಇನ್ನು ಮರ ಕಡೀಭೌದಲ್ಲ?

ರಾಮಗೊಂಡ : ತಾಳಜ್ಜ, ಅಪ್ಪನ್ನ ಕರಕೊಂಬರತೀನಿ (ಓಡಿಹೋಗುವನು).

ಮರಕಟುಕ ೧ : ಮರ ಕಡಿದು ಕೀಲಕುದರೀ ಮಾಡಿ ಕರೀತೀವಿ. ಅಲ್ಲೀತನಕ ಎಲ್ಲಾದರೂ ಆಡಿಕೋ ಹೋಗು. ಬರ್ರೆಪ.

(ಹುಡುಗಿ ಕುಣಿಯುತ್ತಾ ಹೋಗುವಳು. ಮರ ಕಡಿಯುವವರು ಮರ ಕಡಿಯತೊಡಗಿದಂತೆ ಕರಿಯಜ್ಜ ಮರದ ಹಾಗೇ ಕುಸಿಯುವನು.)