ಸೂತ್ರಧಾರ : ಊರಿಗೂರs
ಕತ್ತಲಾಗ ಅಡಗಿಬಿಟ್ಟಿತ್ತು.
ಆ ರಾತ್ರಿ ಏನೇನೋ ತಂದಿತ್ತು.
ಸಂಶಯ ತಂದಿತ್ತು, ಸೋಲು ತಂದಿತ್ತು.
ಎಂದೆಂದೂ ಮಾಗದ ನೋವು ತಂದಿತ್ತು.
ಸಕಾಲಕ್ಕ ಮುಂಜಾನೆಯೇನೋ ಬಂತು.
ಆದರ ಹೊಸ ಮುಂಜಾನೆ ಹೊಸ ಆಸೆ ತರಲಿಲ್ಲ.

ಊರಿನ ಮ್ಯಾಲ ಯಾವುದೋ ಮಾಯೆ
ಕವಿಧಾಂಗ ಮಂಜು ಬಿದ್ದಿತ್ತು,
ಇದ್ದಷ್ಟ ಬೆಳಕಿನಾಗ ಕನ್ನಡಿ ನೋಡಿದಿವಿ.
ಎಲ್ಲಾ ಅದಲ ಬದಲಿ ಆಗಿತ್ತು.
ಹುಡುಗರು ಮುದುಕರಾಗಿದ್ದರು.
ಹೋರಿಗಳು ಎತ್ತಾಗಿದ್ದವು.
ಮನಸ್ಸು ಮನಸ್ಸಿನ ನಡುವೆ ಅಡ್ಡಗೆರೆ ಮೂಡಿದ್ದವು.
ಮನೆ ಮನೆ ನಡುವೆ ಅಡ್ಡಗೋಡೆ ಎದ್ದಿದ್ದವು.
ನಮ್ಮ ನೆರಳು ನೋಡಿ ನಮಗs ಆಶ್ಚರ‍್ಯ ಆಗತಿತ್ತು:
ಇವು ನಮ್ಮ ನೆರಳೇನು ಅಂತ –
ಇದು ನಮ್ಮ ಊರೇನು ಅಂತ –
ನಾವೆಲ್ಲ ನಾವೇನು ಅಂತ!

ಡಂಗರುದವ : ಕೇಳ್ರೆಪೋ ಕೇಳ್ರಿ, ಇಂದಿನಿಂದ ಯಾರೂ ಊರ ಹೊರಗಿನ ಹಾಳ ಬಾವ್ಯಾಗ ಹಣಿಕಿ ಹಾಕಬಾರದು. ಹಣಿಕಿ ಹಾಕಿದರ ಗೌಡರು ದಂಡ ಶಿಕ್ಷಾ ಮಾಡತಾರ್ರೆಪೊ….

(ಇರಿಪ್ಯಾ, ಬಸ್ಯಾ ಮಾತಾಡುತ್ತ ಕುಳಿತಿರುವರು.)

ಇರಿಪ್ಯಾ : ಊರಿಗೇನೋ ಕೆಡಗಾಲ ಬಂದೈತಿ!

ಬಸ್ಯಾ : ಹೌಂದೋ ಏನೋ! ಅಜ್ಜನ ಮಂತ್ರ ಹುಸಿಹೋದದ್ದನ್ನ ನಾ ಇಲ್ಲೀತನಕ ನೋಡಿದ್ದಿಲ್ಲ ಬಿಡು.

ಇರಿಪ್ಯಾ : ಯಾಕ, ಏನಾಯ್ತು?

ಬಸ್ಯಾ : ಬೇಕಾದಂಥ ಉಸಿರು ಸಿಕ್ಕಿರಲಿ, ಅಜ್ಜ ಮಂತ್ರ ಹಾಕಿದರ ತಿರಿಗಿ ಬರತಿತ್ತು. ನಿನ್ನಿ ಗುಳ್ಳವ್ವನ ಕೂಸಿಗೆ ಅಜ್ಜ ಮೂರ ಸಲ ಮಂತ್ರ ಹಾಕಿದರು ಜೀವ ಬರಲಿಲ್ಲ!

ಇರಿಪ್ಯಾ : ಗುಳ್ಳವ್ವನ ಕೂಸು ಸತ್ತ ಹೋಯ್ತು?

ಬಸ್ಯಾ : ಮಣ್ಣ ಮಾಡಿ ಇಕಾ ಇಲ್ಲಿಗೇ ಬಂದೆ. ಅದೇನೋ ಡಂಗುರ ಸಾರತಿದ್ದರಲ್ಲ?

ಇರಿಪ್ಯಾ : ಹಾಳ ಬಾವ್ಯಾಗ ಯಾರೂ ಹಣಿಕಿ ಹಾಕಬಾರದಂತ.

ಬಸ್ಯಾ : ಯಾಕ?

ಇರಿಪ್ಯಾ : ಕೊಂದ ಹುಲಿ ಅದರಾಗ ಎಸದ ಬಂದರಾಂತ ಗೌಡರು.

ಬಸ್ಯಾ : ಹಂಗಾದರ ಹುಲಿ ಕೊಂದರ ಗೌಡ್ರು? ನನಗ್ಗೊತ್ತs ಇರಲಿಲ್ಲ ಬಿಡು. ನಿನ್ನಿ ರಾತ್ರಿ ಅದೇನ ಹೊಯ್ಕ ಕಂಡಿನೋ ಮಾರಾಯಾ! ರಾತ್ರಿ ಉಚ್ಚೀ ಹೊಯ್ಯಾಕಂತ ಎದ್ದಿದ್ದೇ ಹೊಯ್ ಹೊಯ್ಯೂದರಾಗ ನಾಕೈದ ಉಲ್ಕಿ ನಮ್ಮೂರ ಮ್ಯಾಗs ಬೀಳಬೇಕ! ಎಲಾ ತಾಯಿ! ಏನ ಕೆಡಗಾಲ ಬಂತವಾ ಅಂತ ಮ್ಯಾಲ ನೋಡತೀನಿ, ಆಕಾಶ ಹಿಡಿದು ಯಾರೋ ಅಲ್ಲಾಡಿಸಿಧಾಂಗ, ಎಲ್ಲಾ ಚುಕ್ಕಿ ತೊಟ್ಟು ಕಳಚಿ ನಮ್ಮೂರ ಮ್ಯಾಲs ಬಿದ್ದಾಂಗಾಯ್ತು!… ಇರಿಪ್ಯಾ ಇದರರ್ತ ಏನಿದ್ದೀತು?

ಇರಿಪ್ಯಾ : ಇನ್ನೇನಿದ್ದೀತೋ, ಊರ ಮುಳುಗಿ ಸತ್ಯಾನಾಸ ಆಗತೈತಿ ಅಷ್ಟ.

ಬಸ್ಯಾ : ನಿನಗ ಹಂಗ್ಯಾಕನಿಸ್ತು?

ಇರಿಪ್ಯಾ : ಯಾಕೋ ನಂಗೊತ್ತಿಲ್ಲಪ್ಪ.

(ಇಬ್ಬರೂ ಮರೆಯಾಗಿ ಸೂತ್ರಧಾರ ಕಾಣಿಸಿಕೊಳ್ಳುವನು.)