ಸೂತ್ರಧಾ : ರಾಮಗೊಂಡನಿಗೆ ಯಕ್ಷಿಣಿಯ ಭೇಟಿಯಾದ ಮೇಲೆ
ಗೆದ್ದೆವೆಂದೇ ಅಂದುಕೊಂಡೆವು.
ಅನುಮಾನಕ್ಕೆ ಅವಕಾಶವಾಗದ ಹಾಗೆ
ಶತ್ರುವನ್ನ ಅವನ ನಿಜದಲ್ಲೇ ತೋರಿಸುವ
ಕನ್ನಡಿ ಸಿಕ್ಕಿತ್ತು.
ಅವನಿದ್ದಲ್ಲಿಗೇ ಒಯ್ಯುವ ಕೀಲುಕುದುರೆಯಿತ್ತು.
ಇರಿಯುವುದಕ್ಕೆ ಕೊಂಬಿತ್ತು.

ಇಷ್ಟೆಲ್ಲ ವರ ಪಡೆದು ರಾಮಗೊಂಡ ಬಂದಾಗ
ಹಟ್ಟಿಯ ಮೇಲೆ ಹದದು ಹಾರಾಡುತ್ತಿದ್ದವು.
ನಮ್ಮ ಸೀಮೆಯಲ್ಲಿ ಇಷ್ಟು ಹದ್ದುಗಳಿದ್ದಾವೆಂದು
ನಮಗೆ ತಿಳಿದೇ ಇರಲಿಲ್ಲ.
ಜನ ದನ ಯಾರೂ ಸತ್ತಿರಲಿಲ್ಲ.
ಮನುಷ್ಯರ ಹೆದರಿಕೆ ಅವಕ್ಕೆ ಇರಲೇ ಇಲ್ಲ.
ನಾವೇ ಹೆಣ ಅಂದುಕೊಂಡೊವೋ ಏನೋ-
ನಮ್ಮ ಮೇಲೇ ಎರಡಗುತ್ತಿದ್ದವು.
ಮೇಲೆ ಮೇಲಕ್ಕೆ ಹಾರಿ,
ರೆಕ್ಕೆ ಬಿಡಿಯದೆ ಹಾಗೇ ತೇಲಿ
ತೇಲು ತೇಲುತ್ತ, ಬೇಟೆ ಸಿಕ್ಕಂತೆ
ಏಕ್‌ದಂ ಕೆಳಕ್ಕೆ, ನಮ್ಮ ನೆತ್ತಿಗೇ ಎಗರಿ
ಗಕ್ಕನೆ ಮೇಲಕ್ಕೆ ಹೋಗುತ್ತಿದ್ದವು.
ರಾಮಗೊಂಡನ್ನ ಜ್ಞಾಪಿಸಿಕೊಂಡೆವು,-
ಹೇಳಕೇಳುವ ಯಾರಿಗಾದರೂ ಹೇಳಬೇಕಲ್ಲ-ಅದಕ್ಕೆ.
ಕರಿಮಾಯಿ ಬರಿದಿದ್ದಳು. ಕರಿಯಜ್ಜ ಸತ್ತಿದ್ದ.
ರಾಮಗೊಂಡನಿಗೆ ಹೇಳಬೇಕು; ಆದರೆ
ಅವ ನಮ್ಮ ಗುರುತ ಹಿಡಿದಾನು ಅಂತ
ನಂಬಿಕೆ ಇರಲಿಲ್ಲ.
ಗೌಡನಿಗೆ ಹೇಳಬೇಕು-ಆದರೆ ಧೈರ್ಯ ಇರಲಿಲ್ಲ.
ಯಾಕೆಂದರೆ ಅವನನ್ನು ನೋಡಿದಾಗೆಲ್ಲ
ನಮ್ಮ ಜೀವ ನಮ್ಮ ಎದುರಿನಲ್ಲೇ
ಹಾರಿಹೋದಂತೆ ಅನಿಸುತ್ತಿತ್ತು.

ಕೊನೆಗೆ ಏನು ಮಾಡಬೇಕಂತ ತಿಳಿಯದೆ
ಗೌಡನ ಹೆಸರು ಹೇಳಿ ಹೊಯ್ಕೊಂಡರೆ
ಹದ್ದು ಹದರಿ ಹಾರಿಹೋದಾವೇನೋ ಅಂತ
ಬಾಯಿ ಬಾಯಿ ಬಡಕೊಳ್ತ ಇದ್ದಿವಿ,-
ಆಗಲೇ ನಮ್ಮ ಕರ್ಮದ ತೀರ್ಮಾನವೂ
ಆಗಿಬಿಟ್ಟಿತ್ತು.

(ಗೌಡ್ತಿ ಮಲಗಿದ್ದಾಳೆ. ರಾಮಗೊಂಡ ಬರುವನು.)

ರಾಮಗೊಂಡ : ಮಲಗವ್ವಾ ಮಲಗು. ಹುಚ್ಚು ಮತ್ತು ನಿದ್ದೆ ಎರಡೇ ನಿನ್ನ ರಕ್ಷಕರು. ಸತ್ಯ ನಿನ್ನ ಹತ್ತಿರ ಸುಳಿಯದ ಹಾಗೆ ಎರಡೂ ನಿನ್ನ ಸುತ್ತ ಹಗಲೂ ರಾತ್ರಿ ಕಾವಲು ಕಾಯತಾ, ಇವೆ. ನಾನೋ ಸತ್ಯದ ಬೆಳಕಿನಲ್ಲಿ ಹುಚ್ಚನಾದವನು. ಹುಚ್ಚಿನಿಂದಾಗಿ ನಿದ್ದೆ ನನ್ನ ಕಣ್ಣೆವೆಯ ಮೇಲೆ ಸುಳಿಯುವುದೇ ಇಲ್ಲ. ನಿನ್ನ ಗರ್ಭಕ್ಕೆ ಕೂಸಾಗಿ, ಇಬ್ಬರಿಗೆ ಮಗನಾಗಿ, ಆಡಿಕೊಂಬವರ ತೋರುಬೆರಳಿಗೆ ಗುರಿಯಾಗಿ ಬದುಕುವ ಕಷ್ಟ ನಿನಗೆ ತಿಳಿಯದು ತಾಯಿ. ಕಳ್ಳ ನೋಟಗಳಿಗೆ, ಪಿಸುದನಿಗಳಿಗೆ ಗುರಿಯಾಗಿ ನಾನು ಬದುಕಬೇಕು. ಸತ್ತರೂ ಬೆನ್ನಟ್ಟಿ ಬರುವ ಕಥೆಗಳಿಂದ ಮುಕ್ತಿಯಿಲ್ಲ ನನಗೆ!

ಗೌಡ್ತಿ : (ಎಚ್ಚರುತ್ತ) ಮಾಯದ ಕನ್ನಡಿ ನಿನಗೆ ತೋರಿಸಿದ್ದು ಖರೆ ಅಲ್ಲೋ ಮಗನs; ನಿನ್ನ ಎದಿ ಒಡೆಯೋದಕ್ಕ ಮಾಡಿದ ಪಿತೂರಿ ಅದು.

ರಾಮಗೊಂಡ : ಮಾಯದ ಕನ್ನಡಿ ನನ್ನ ಹತ್ತಿರ ಇದ್ದದ್ದು ನಿನಗ ಹೆಂಗ ತಿಳೀತು?

ಗೌಡ್ತಿ : ಮೈಗೆ, ಮನಸ್ಸಿಗೆ ಎಷ್ಟು ಸುಳ್ಳು ಸುತ್ತಿಕೊಂಡೀಯೋ ಕಂದ! ಸುಳ್ಳಿನ ಮ್ಯಾಲ ಸುಳ್ಳು! ಸುಳ್ಳಿನ ಮ್ಯಾಲ ಸುಳ್ಳು! ನಿನ್ನ ಕಂಡರ ನನ್ನ ಹೊಕ್ಕಳದಾಗಿನ ದುಃಖ ಉಕ್ಕಿಬರತಾವ. ಸುತ್ತಿಕೊಂಡ ಸುಳ್ಳು ಸುಲಿದು ಮೊದಲಿನ್ಹಾಂಗ ನನ್ನ ಮಗ ಆಗಿ ಬಾರೋ ಕಂದ!

ರಾಮಗೊಂಡ : ಗೊತ್ತಿದ್ದು ಮಾತಾಡ್ತೀಯೋ, ಗೊತ್ತಾಗದs ಮಾತಾಡ್ತೀಯೊ, -ನಿದ್ದೀ ಯೊ ಳ ಗಿ ದ್ದೀ ಯೋ ಎಚ್ಚರಾಗಿದ್ದೀಯೋ-ನನ್ನ ಮಾತು ಎಲ್ಲಿಗಾದರೂ ತಲುಪಲಿ ಕೇಳು; ನನ್ನ ಮುಖ ಎಂಜಲಾಗೇತಿ, ನಿನ್ನ ಹತ್ತಿರ ಬರಲಾರೆ.

ಗೌಡ್ತಿ : ಎಂಜಲ? ಎಂಜಲ ಯಾಕಾಯ್ತು?

ರಾಮಗೊಂಡ : ಹಾಳಬಾವ್ಯಾಗೊಂದು ಭೂತ ಕಂಡೆ, ಅದು ನನ್ನ ಮುಖದ ಮ್ಯಾಲ ಸತ್ಯ ಉಗುಳಲಿ ಎಂಜಲ ಮಾಡೇತಿ.

ಗೌಡ್ತಿ : ಸತ್ಯ ಉಗುಳಿದರ ಮುಖ ಎಂಜಲ ಹೆಂಗಾಗತೈತಿ? ಭೂತ ಅಂದಮ್ಯಾಲ ಸುಳ್ಳ ಉಗುಳಿರಬೇಕು; ಅದಕ್ಕs ಮುಖ ಎಂಜಲಾಗೇತಿ. ತೊಳಕೋ ಹಸನಾಗತೈತಿ.

ರಾಮಗೊಂಡ : ಆದರ ಅದು ನನ್ನ ಆತ್ಮ ಎಂಜಲ ಮಾಡೇತಿ.

ಗೌಡ್ತಿ : ಇಲ್ಲಿ ಬಾ ತೊಳೀತೀನಿ. ಬಾ….

(ರಾಮಗೊಂಡ ಬರುವನು. ಅವನ ಮುಖವನ್ನು ಸೆರಗಿನಿಂದ ಒರೆಸಿ)
ಹೌದ? ಮುಖ ಹಸನಾಯ್ತು. ತಾಯೀ ಮುಂದ ಮಗ ಯಾವತ್ತೂ ಹಸನಾಗಿರತಾನ. ಇಕಾ ನೋಡು. ಈಗಷ್ಟ ಜಳಕಾ ಮಾಡಿಧಾಂಗ ಕಾಣತಿ.

ರಾಮಗೊಂಡ : ನನ್ನ ಕಣ್ಣಾಗೇನೂ ಕಾಣ್ಸಾಣಿಲ್ಲೇನು?

ಗೌಡ್ತಿ : ಹೌದು ಕಣ್ಣಾಗ ಅಷ್ಟಿಷ್ಟ ಸಂಶೆ ಉಳಿದೈತಿ. ಆದರ ಉಳಿದಂತೆ ನಿನ್ನ ಆತ್ಮದ ತುಂಬ ಪ್ರೀತಿ ತುಂಬೇತಿ.

ರಾಮಗೊಂಡ : ಕಣ್ಣಾಗಿನ ಸಂಶೆ ಒಳಕ್ಕೂ ಇಳಿದು ವಿಷ ಹರಡತೈತಿ. ತಾಯೀ ಲಗು ನನ್ನನ್ನು ಕಾಪಾಡು.

ಗೌಡ್ತಿ : ಎಲ್ಲಾ ತೊಳೆದನಲ್ಲ? ಈಗ ಹಸನಾಗೀದಿ! ಜಳಕಾ ಮಾಡಿ ‘ಅವ್ವಾ’ ಅಂದಿ. ನಾ ‘ಯಾಕೋ ಕಂದ?’ ಅಂದೆ. ಏನೋ ಹೇಳಬೇಕಂದಿ. ತಗೊ ಕೇಳತೀನಿ.

ರಾಮಗೊಂಡ : ನಿನ್ನ ಕನವರಿಕಿ ನನಗ ತಿಳಿಯಾಣಿಲ್ಲ.

ಗೌಡ್ತಿ : ನಿನಗೆಲ್ಲಾ ತಿಳೀತೈತಿ. ಆದರೂ ಇಲ್ಲಂತಿ.

(ಮೈಮೇಲೆ ಅಕ್ಕರೆಯಿಂದ ಕೈಯಾಡಿಸುತ್ತ)

ಈಗ ಹೇಳು, ಭೂತದ ದನಿ ಇನ್ನೂ ಕೇಳಿಸತೈತೇನು? ನಾವೀಗ ಎಲ್ಲಿದ್ದೀವಿ ಗೊತ್ತ? ವಾಡೇದೊಳಗಲ್ಲ! ಕಾಡಿನಾಗಿನ ಗವಿಯೊಳಗ! ಊರಾಗಿನ ಗಾಳೀ ತುಂಬ ದೆವ್ವ ಭೂತದ ದನಿ ತುಂಬ್ಯಾವ, ಇದೊಂದs ಜಾಗ ಅವಕ್ಕ ಸಿಕ್ಕಿಲ್ಲ. ಈ ಗವಿಯೊಳಗ ನಮ್ಮನ್ನ ಬಿಟ್ಟು ಇನ್ಯಾರೂ ಇಲ್ಲ, ಭೂತ ಇಲ್ಲ, ರಾಕ್ಷಸ ಇಲ್ಲ, ಹುಲಿ ಇಲ್ಲ-ನಾವಿಬ್ಬರs. ನಾನು-ನೀನು!

ರಾಮಗೊಂಡ : ಈ ಗರ್ಭ?

ಗೌಡ್ತಿ : ಹೌದು ಈ ಗರ್ಭ.

(ಗರ್ಭ ಹಿಡಿದುಕೊಂಡ ಅದನ್ನೇ ಕುರಿತು)

ಎಷ್ಟ ಗುದಮುರಿಗಿ ಹಾಕತೀಯೋ ಕಂದ? ನಿನ್ನ ತಾಯಿಗೆ ಕಷ್ಟ ಕೊಡೋದರಾಗ ಎಷ್ಟ ಆನಂದಪಡತೀಯೋ?

(ರಾಮಗೊಂಡನಿಗೆ)

ಅದ್ಯಾಕಿಷ್ಟ ಒದ್ದಾಡತೈತೊ! ಮೊದಲಾದರ ನಿನ್ನ ಕಣ್ಣಿನಾಗ ನೋಡತಿದ್ದೆ. ಅದಕ್ಕ ಏನ ಬೇಕಂಬೋದೆಲ್ಲಾ ತಿಳೀತಿತ್ತು. ನಿನ್ನ ಕಣ್ಣಿನಾಗ ಮೂಡಿ ಹುಲಿಹಾಲ ಕೇಳಿತು. ಕೊಟ್ಟೆ. ಈ ಹೊತ್ತ ಏನು ಬೇಕಾಗಿ ಒದ್ದಾಡತೈತೊ! ಅದಕ್ಕೇನ ಬೇಕೋ ನೋಡೇನಂದರ ನಿನ್ನ ಕಣ್ಣೀನಾಗ ಬೆಳಕs ಇಲ್ಲ. ಬರೀ ಸಂಶೇ ತುಂಬೇತಿ, ಸಾವಿನಂಥಾ ಸಂಶೆ.

ರಾಮಗೊಂಡ : ಒಂದೊಂದು ಮಾತನ್ನ ಒಂದೊಂದ ಕಾರಣಕ್ಕ ಹೇಳ್ತೀ ತಾಯೀ, ಕಾರಣದ ಸೂತ್ರ ಪತ್ತೆ ಆಗೋದs ಇಲ್ಲ, ಹೆಂಗ ತಿಳೀಲಿ?

ಗೌಡ್ತಿ : ಬಾ ಕಂದಾ, ನಿನಗೇನು ಬೇಕನ್ನೋದು ನನಗೂ ತಿಳೀತಾ ಇಲ್ಲ. ಯಾಕಂದರ ನಿನಗಿನ್ನೂ ಬಾಯಿ ಬಂದಿಲ್ಲ. ಆ ಮಾಯದ ಕನ್ನಡಿ ಕೊಡು. ನಿನಗೇನು ಬೇಕನ್ನೋದನ್ನ ತಿಳಕೊಳ್ತೀನಿ.

ರಾಮಗೊಂಡ : ನಿನ್ನ ಮಾತ ಕೇಳಿದರ ಸಂಶೆ ಬರತಾವ. ನಿನ್ನ ಬಾಯಿಂದ ಯಾರೋ ಮಾತಾಡತಾರಂತ ಅನಸತೈತಿ.

ಗೌಡ್ತಿ : ಶ್ಯೂ! ಸನೇಕ ಬಾ. ಗರ್ಭ ಮಾತನಾಡತೈತಿ ಕೇಳು.

(ರಾಮಗೊಂಡನ ತಲೆಯನ್ನು ತನ್ನ ಗರ್ಭದ ಮೇಲೆ ಇಟ್ಟುಕೊಂಡು ದನಿ ಬದಲಾಯಿಸಿ)

ಏಯ್ ರಾಮಗೊಂಡಣ್ಣಾ, ಅವ್ವನ ಗರ್ಭ ಗುದ್ದಿ ಗುದ್ದಿ ನನ್ನ ಮೈ ಗಾಯ ಆಗೇತಿ, ಆ ಗಾಯ ನೋಡಿಕೋ ಬೇಕು. ಲಗು ಕನ್ನಡಿ ಕೊಡೋ ಎಣ್ಣಾ!

(ರಾಮಗೊಂಡ ಕನ್ನಡಿ ಕೊಡುವನು. ಗೌಡ್ತಿ ಅದರಲ್ಲಿ ನೋಡುತ್ತಾ)

ಗೌಡ್ತಿ : ಆಹಾಹಾ! ಎಲ್ಲೀ ಇದರವ್ವನ ! ಎಷ್ಟ ದೊಡ್ಡವಾಗೀನೋ ಎಣ್ಣಾ ನಾನು! ಮೈಮ್ಯಾಲ ಏಳಪಟ್ಟಿ ಮೂಡ್ಯಾವ! ನೀನು ಹುಲೀಹಾಲು ತಂದುಕೊಟ್ಟೆ ನೋಡು-ಅದಕ್ಕs ನಾ ಹುಲಿ ಆಗೀನೋ ಎಣ್ಣಾ!

ರಾಮಗೊಂಡ : ಎವ್ವಾ ಎವ್ವಾ, ನನ್ನ ತಾಯಿ ನೀನು.

ಗೌಡ್ತಿ : ನಾ ನಿನ್ನ ತಮ್ಮ! ನೀ ತಾಯೀಹಾಲು ಕುಡಿದವನು. ನಾನು ಹುಲೀಹಾಲು ಕುಡಿದವನು. ಅಣ್ಣಾ, ನನಗಿನ್ನೂ ಕೈಕಾಲು ಮೂಡಿಲ್ಲ. ನಿನ್ನ ಹಂತ್ಯಾಕಿನ ಕೀಲಕುದರಿ ಕೊಡೋ ಅಣ್ಣಾ. ಅದನ್ನ ಹತ್ತಿ ಕಾಡಿಗೆ ಹೋಗತೀನಿ. ಕಾಡಿನಾಗ ಹೊಂಚಿ ಕೂರತೀನಿ. ಯಾವನಾದರೂ ನಿನ್ನಂಥ ಗೌಡ ಬಂದರ ಅವನ್ನ ಕೊಂದು ಅವನ ಆಕಾರ ತಾಳತೀನಿ. ನೀ ಕೀಲಕುದರಿ ಕೊಡದಿದ್ದರ ನನಗ ಆಕಾರ ಬರೂದs ಇಲ್ಲ. ನಾ ಕಾಡಿಗೆ ಹೋಗದಿದ್ದರ ನನಗ ಆಕಾರ ಬರೂದs ಇಲ್ಲ. ಆಕಾರ ಬರದಿದ್ದರ ನಾ ಹೊರಗ ಬರೂದs ಇಲ್ಲ. ಇಲ್ಲೇ ಅವ್ವನ ಗರ್ಭ ಗೋರಿ ಮಾಡಿ ಸಾಯತೀನಿ.

(ತಕ್ಷಣ ಗರ್ಭ ಹಿಡಿದುಕೊಂಡು ಸಹಜ ಧ್ವನಿಯಲ್ಲಿ)

ಸಾಯಬ್ಯಾಡೋ ನನ್ನ ಕಂದಾ! ಸಾಯಬ್ಯಾಡೋ….

ರಾಮಗೊಂಡ : ಹಿಂಗೆಲ್ಲಾ ಮಾತಾಡಿ ನನ್ನ ಹಾದೀ ತಪ್ಪಿಸಬ್ಯಾಡಾ ತಾಯೀ. ಉರಿಯೋ ಸೇಡನ್ನ ಆರಿಸಿ ರಕ್ತ ಹರೀಬೇಕಾದಲ್ಲಿ ಕಣ್ಣೀರು ಹರಿಯೋ ಹಾಂಗ ಮಾಡಬ್ಯಾಡ. ನಿನ್ನ ಮಗನನ್ನ ನಂಬು. ನಾ ನಿನ್ನ ವೈರಿ ಅಲ್ಲ. ನಿನಗೂ ಗೊತ್ತಿಲ್ಲದ ಸತ್ಯಗಳಿವೆ. ನನಗ ನಮ್ಮೆಲ್ಲರ ದುಃಖದ ಮೂಲ ಗೊತ್ತು. ಅದರಿಂದ ಪಾರಾಗುವ ಉಪಾಯ ಗೊತ್ತು. ನನ್ನಲ್ಲಿ ನೀನು ನಂಬಿಕೆ ಇಡೋದಾರೆ ಕ್ಷಣಮಾತ್ರದಲ್ಲಿ ನಾವೆಲ್ಲ ಬಚಾವಾಗತೀವಿ. ಜಗತ್ತೆಲ್ಲ ಒಂದು ಸಲ ತನ್ನ ನಿಜದಲ್ಲಿ ನೆಲೆಗೊಳ್ಳಲಿ, ಆಮೇಲೆ ಕೀಲುಕುದುರೆ, ಕೊಂಬು, ಕನ್ನಡಿ-ಎಲ್ಲಾ ತಮ್ಮನಿಗೇ ಕೊಡತೀನಿ. ಮೊದಲೀಗ ಆ ಕನ್ನಡಿ ಕೊಡು.

ಗೌಡ್ತಿ : ನಿನ್ನ ಕನ್ನಡಿ ನಿನಗೆಷ್ಟು ಖರೆ ತೋರಿಸೀತೋ ಮಗನ? ನನ್ನ ಕಣ್ಣಿಗಿಂತ ಹೆಚ್ಚಿನ ಕನ್ನಡ ಇದೆಯೇನೋ ಕಂದ? ಯಾವ ಲೋಕ ಬೇಕು ಹೇಳು, ಆ ಲೋಕ ತೋರಸ್ತೀನಿ. ನಿನ್ನ ಅಧೋಲೋಕದ ಕದಾ ತೆಗೆದು ತೋರಿಸಲೇನು?

(ಎರಡೂ ಕಣ್ಣು ಕಿಸಿದು ತೋರಿಸುತ್ತ)

ಇಕಾ ನೋಡು ನನ್ನ ಕಣ್ಣಾಗ. ನೋಡು, ಕಾಣಿಸ್ತ? ಹೇಳು ಏನೇನ ಕಾಣ್ತಿ?

ರಾಮಗೊಂಡ : (ಭಾವುಕನಾಗಿ) ಕಾಡು ಕಾಣತಾ ಇದೆ, ಹಸಿರು ಕಾಣತಾ ಇದೆ. ನೀಲಿ ಮುಗಿಲು, ಹೊಳೆಯೋ ಚಂದ್ರ! ಅಲ್ಲೊಂದು ದೊಡ್ಡ ಆಲದಮರ. ಮರದಾಗೊಂದು ಪಂಜರ…. ಪಂಜರದಾಗೊಂದು ಗಿಳಿ… ಗಿಳೀಜಿವದಾಗ ರಾಕ್ಷಸನ ಜೀವ ಮಲಗೇತಿ.

ಗೌಡ್ತಿ : ಥೂ ! ನಿನ್ನ ಕಣ್ಣಿಗೆ ಖರೆ ಕಾಣಿಸೋದೇ ಇಲ್ಲ. ನಿನನಗೆ ಕನ್ನಡಿ ಕೊಟ್ಟಳಲ್ಲ. ಆ ಜಕ್ಕಿಣಿಗೆ ಖರೆ ಕಂಡಿಲ್ಲೋ ಮಗನ. ಅವಳು ಹೇಳಿದ್ದು ಯಾವುದೋ ಹಳಸಲು ಸತ್ಯ. ಕಟ್ಟ ಕಡೆಯ ಸತ್ಯ ತೋರಿಸಲೇನು? ನೋಡು, ಕಾಡಿನಾಗ ಒಂದು ಆಲದ ಮರ… ನಾನs ಆ ಆಲದ ಮರ. ಮರದಾಗೊಂದು ಪಂಜರ…. (ಗರ್ಭ ತೋರಿಸುತ್ತ)

ಇದs ಆ ಪಂಜರ. ಪಂಜರದಾಗೊಂದು ಗಿಣಿ ಐತಿ. ಗಿಣೀ ಹೊಟ್ಟೀ ಒಳಗೊಂದು ಹುಲಿ ಐತಿ. ಹುಲೀ ಹೊಟ್ಟೀ ಒಳಗೊಬ್ಬ ರಾಕ್ಷಸ. ಈ ರಾಕ್ಷಸ ಹೊರಗ ಬಂದರ ಸಾವಿರ ಸಾವಿರ ಸಂತಾನ ಮಾಡತಾನ. ಅವನ ಹನಿ ನೆತ್ತರ ಬಿದ್ದಲ್ಲಿ ಕೋಟಿ ರಾಕ್ಷಸರು ಹುಟ್ಟತಾರ. ಆವಾಗ ನಿನ್ನ ಇರಿಯೋ ಕೊಂಬು, ಕೀಲಕುದರಿ, ಮಾಯದ ಕನ್ನಡಿ-ಎದಕ್ಕೂ ಬರೋದಿಲ್ಲ. ಊರನ್ನ ಕಾಪಾಡಬೇಕಾದರ ಈ ರಾಕ್ಷಸನನ್ನ ಇರೀಬೇಕು. ಇರಿಯೋ ಧೈರ್ಯ ಇದೆಯ?

ಶ್ಯೂ ತಾಳು.. ಮಧ್ಯರಾತ್ರಿ, ಗಿಣಿ ಮಲಗೈತಿ, ರಾಕ್ಷಸ ಮಲಗ್ಯಾನ. ಸದ್ದು ಮಾಡಬ್ಯಾಡ. ಮೆಲ್ಲಗೆ ಕೊಂಬು ಧರಿಸು. ಇರಿ, ಬೇಗ ಇರಿ! ಇಂಥಾ ಅವಕಾಶ ನಿನಗ ಇನ್ನೊಮ್ಮಿಸಿಕ್ಕೋದಿಲ್ಲ. ಲಗು ಇರಿ.

ರಾಮಗೊಂಡ : ತಾಯೀ  ತಾಯೀ ಏನಂಬೊ ಮಾತಾಡ್ತೀ?

ಗೌಡ್ತಿ : ಇರೀಬೇಕಾದಾಗ ಮಾತಾಡ್ತ ನಿಲ್ಲಬೇಡ. ಗವಿಯೊಳಗ ಯಾರೂ ಇಲ್ಲ. ನಾವಿಬ್ಬರs ಇದ್ದೀವಿ. ತಾಯಿ ಅಂತ ಕರುಣೆ ತೋರಿಸಬ್ಯಾಡ. ಲಗು ಇರಿ.

ರಾಮಗೊಂಡ : ಎವ್ವಾ ಎವ್ವಾ! ನಿನ್ನ ಗರ್ಭ ಇರಿದು ಯಾವ ನರಕಕ್ಕ ಹೋಗಲಿ? ಹುಚ್ಚಿನ ಉನ್ಮಾದದೊಳಗ ಮಾತುಗಳನ್ನ ಚೆಲ್ಲಾಡ್ತ ಇದ್ದೀ ತಾಯೀ.

ಗೌಡ್ತಿ : ರಾಮಗೊಂಡಾ, ಇದರಂಥಾ ವ್ಯಾಳ್ಯಾ ನಿನಗ ಇನ್ನೊಮ್ಮಿ ಸಿಕ್ಕೋದಿಲ್ಲ. ಲಗು ಧೈರ್ಯ ಮಾಡು. ಕೈ ಮುಗಿದು ಬೇಡಿಕೋತೀನಿ ಬಾರೊ-

ರಾಮಗೊಂಡ : ಏನ ಬೇಡಿಕೋಳ್ತ ಇದ್ದೀಯವ್ವಾ? ನಿನ್ನ ಬೇಡಿಕೆಗಳಿಂದ ನನಗೂ ಹುಚ್ಚ ಹಿಡಿಸಬ್ಯಾಡ.

ಗೌಡ್ತಿ : ಬೇ ಡ ತೀ ನಿ, ಬ್ಯಾಟಿ ಹಾಂಗ ಅಟ್ಟಿಸಿಕೊಂಡ ಬಂದ ಬೇಡತೀನಿ. ಬೇಡಿದ್ದ ಕೊಡದಿದ್ದರ ಶಾಪ ಹಾಕತೀನಿ, ಬಾ.

(ರಾಮಗೊಂಡನಿಗೆ ಕಾಣಿಸದಂತೆ ಆದರೆ ಗೌಡ್ತಿಗೆ ಗೊತ್ತಾಗುವಂತೆ ಗೌಡ ಕಾಣಿಸಿಕೊಳ್ಳುವನು.)

ಥೂ ಹೇಡಿ ಹೋಗು. ರಾಕ್ಷಸ ಎಚ್ಚರಾದ. ಇನ್ನು ನೀ ಇರಿಯೋದಕ್ಕಾಗೋದಿಲ್ಲ. ಏಯ್ ಬಾರೋ ಇಲ್ಲಿ.

(ರಾಮಗೊಂಡ ಮಂತ್ರ ಮುಗ್ಧನಂತೆ ಬರುವನು)

ನನ್ನ ಕಂದ ಕೀಲಕುದರಿ ಬೇಡತಾನ ಕೊಡು.

(ರಾಮಗೊಂಡ ಮಂತ್ರ ಮುಗ್ಧನಾದವನಂತೆ ಬೇಡಿದ್ದನ್ನೆಲ್ಲ ಕೊಡುವನು)

ಕೊಂಬು ಕೊಡು. ಇನ್ನ ಮ್ಯಾಲ ನಿನ್ನ ನೀನs ಮಾತಾಡ್ತ, ಪಶ್ಚಾತ್ತಾಪ ಪಡತ, ಕಾಡಿನಾಗ ಶತಪತ ಹಾಕತಾ ತಿರುಗು ಹೋಗು.

(ಧಣಿದು ಮಂಚದ ಮೇಲೆ ಕುಸಿದು ತಾನಿಸಿದುಕೊಂಡ ಶಕ್ತಿಗಳನ್ನೆಲ್ಲ ಗೌಡನಿಗೆ ಕೊಡುವಳು. ಗೌಡ ಒಂದೊಂದನ್ನೇ ಮುಟ್ಟಿದಂತೆ  ರಾಮಗೊಂಡ ಭಯಭೀತನಾಗಿ ಶಕ್ತಿಗುಂದಿ ಕುಸಿಯುವನು.)

ಅಯ್ಯೋ ಪ್ರಭು, ಇರಿಪ್ಯಾ…. ಯಾರಾದರೂ ಬನ್ರೋ….

(ಕುಸಿಯುವನು.)

ಗೌಡ್ತಿ : (ಗರ್ಭಕ್ಕೆ ಸಮಾಧಾನ ಹೇಳುತ್ತ) ಗಾಳಿ ಬುಸಗುಡತಾವ. ಆಕಾಶದಾಗ ಚಂದ್ರ ಇಲ್ಲ. ಈಗ ಸಧ್ಯೆ ಮಲಕ್ಕೊ. ನಾಳೆ ಬೆಳಿಗ್ಗೆ ಎದ್ದು ಕೀಲಕುದರಿ ಹತ್ತಿ ಹೋದೀಯಂತೆ. ಹೊಂಚಿ ನಿಂತು ಬ್ಯಾಟೀ ಆಡೀಯಂತೆ. ಈಗ ಸುಮ್ಮನೆ ಮಲಕ್ಕೊ ಕಂದಾ…

ಮಲಗು ಮಲಗೆಲೆ ಕಂದನೇ||
ಮಲಗು ಮಲಗೆಲೆ ಕಂದನೇ||

* * *