ಶ್ರೀ ಚಂದ್ರಶೇಖರ ಕಂಬಾರರ ಈ ಎರಡನೆಯ ಕವನ ಸಂಕಲನ “ಹೇಳತೇನ ಕೇಳ” ಪ್ರಕಟವಾಗುತ್ತಿರುವುದು ತುಂಬ ಸಂತೋಷದ ಸಂಗತಿ. ನಿಜವಾದ ಕವಿಯೊಬ್ಬ ಸಂಕಲನದಿಂದ ಸಂಕಲನಕ್ಕೆ ಬೆಳೆದು ಬರುತ್ತಿರುವ ರೀತಿ ಕಾವ್ಯಾಭ್ಯಾಸಿಗಳಿಗೆ ಈ ಕವಿಯ ಭವಿಷ್ಯದ ಬಗ್ಗೆ ಭರವಸೆ ಹುಟ್ಟಿಸುವಂಥದು. ಇತ್ತೀಚೆಗೆ ಕನ್ನಡದಲ್ಲಿ ಕಾವ್ಯರಚನೆ ಮಾಡುತ್ತಿರುವ ತರುಣ ಕವಿಗಳಲ್ಲಿ ಶ್ರೀ ಕಂಬಾರರ ಕಾವ್ಯಶಕ್ತಿ ಅತ್ಯಂತ ಗಮನಾರ್ಹವಾದುದು. ತನ್ನ ಸುತ್ತು ಮುತ್ತಲೂ ಪರಂಪರಾಗತವಾಗಿ ಮೊಳಗುತ್ತ ಬಂದಿರುವ ಭಾಷೆಯನ್ನು ತನ್ನ ವಿಶಿಷ್ಟ ಉದ್ದೇಶಕ್ಕಾಗಿ ಅದರ ಬೇರು ಹಿಡಿದು ಆಡಿಸುವ ಶಕ್ತಿ ಯಾವ ಕವಿಯಲ್ಲೇ ಆಗಲಿ ಇರಬೇಕಾದ ಮೂಲ ಲಕ್ಷಣ. ಅದು ಈ ಕವಿಯಲ್ಲಿ ನಿಚ್ಚಳವಾಗಿ ಇರುವುದು ಈ ಸಂಕಲನದ ಉದ್ದಕ್ಕೂ ಕಂಡು ಬರುತ್ತದೆ. ಉತ್ತರ ಕರ್ಣಾಟಕದ ದೇಸಿಯ ಮೇಲೆ ಇವರಿಗಿರುವ ಪ್ರಭುತ್ವ ಬೇಂದ್ರೆಯವರನ್ನು ಬಿಟ್ಟರೆ ಇನ್ನಾವ ಕವಿಯಲ್ಲೂ ಕಂಡು ಬರುವುದಿಲ್ಲ. ಆ ದೇಸಿಯ ಸೊಬಗು ಮೈಗೂಡಿರುವ ಈ ಕಾವ್ಯ ಸಹೃದಯರಿಗೆ ರಸದ ಸೆಲೆಯಾಗಿ ಪುಟಿಯುತ್ತಿದೆ. ಇಂಥ ಕವನಗಳನ್ನು ಬರೆಯ ಬಲ್ಲ, ಭಾಷೆಯನ್ನು ಈ ರೀತಿ ಬಳಸಬಲ್ಲ ಕವಿಯ ಬಗ್ಗೆ ಕಾವ್ಯ ಪ್ರಿಯರು ಅಭಿಮಾನ ಪಡುವುದು ಸಹಜ.

ಈ ಸಂಕಲನದುದ್ದಕ್ಕೂ ನಾವು ಗಮನಿಸಬೇಕಾದ್ದು ಈ ಕವಿಗೆ ಪರಿಸರದಿಂದ ಲಭಿಸಿದ ಜಾನಪದ ಭಾಷೆಗೂ ಈ ಕವಿಯ ಆಧುನಿಕ ಪ್ರಜ್ಞೆಗೂ ನಡೆಯುತ್ತಿರುವ ದ್ವಂದ್ವ. ಪರಂಪರೆಯಿಂದ ಬಂದ ಸಹಜ ಪ್ರಾಕೃತ ಭಾಷಾ ಸಂಪತ್ತಿಗೂ, ಇಂದು ಈಗ ಇಲ್ಲಿ ಜೀವಂತನಾಗಿದ್ದು ಹೊಸ ಪರಿವರ್ತನೆಗಳಿಗೆ ಜಾಗ್ರತನಾದ ಕವಿಯ ವಿಶಿಷ್ಟ ಅನುಭವಗಳಿಗೂ ನಡುವೆ ಇರುವ ಕಂದಕಕ್ಕೆ ಸೇತುವೆ ಕಟ್ಟುವ ಪ್ರಯತ್ನ ಉದ್ದಕ್ಕೂ ಕಂಡು ಬರುತ್ತದೆ. ಆದರೆ ಆ ಎರಡೂ ಒಂದೇ ಆಗಿ ಒಂದು ಇನ್ನೊಂದರ ಮಯಯಾಗುವ ಮಟ್ಟದಲ್ಲಿ ಸಮಗ್ರೀಕರಣ ಇನ್ನೂ ಸಿದ್ಧಿಸಬೇಕಾಗಿದೆ. ಇದು ಎಲ್ಲ ಕವಿಗಳೂ ಸಂಧಿಸಿ ಭಾಷೆಯನ್ನು ಒಗ್ಗಿಸಿಕೊಂಡು, ತನ್ನದೇ ಆದ ಅನುಭವ ಈ ಕಾಲದ್ದೂ ಆಗುವ ಹಾಗೆ. ಸಾರ್ವಕಾಲಿಕತೆಯನ್ನೂ ಧ್ವನಿಸುವ ಹಾಗೆ ಮಾಗುವ ಕೆಲಸ. ಬುದ್ದಿಯ ಬೆಳವಣಿಗೆಯಿಂದ ಅನುಭವಕ್ಕೆ ವ್ಯಾಪಕತೆಯೂ ಆಳವೂ ಬಂದಾಗ ನಿಜವಾದ ಕವಿಗೆ ಆ ರೀತಿ ಪರಿಪಾಕಗೊಳ್ಳುವುದು ಸಾಧ್ಯವಾಗುವುದು.

ಈ ಸಂಕಲನದಲ್ಲಿ ಅತ್ಯಂತ ಗಮನಾರ್ಹವಾಗಿ ಅಭ್ಯಾಸಕ್ಕೆ ಅರ್ಹವಾದ ಪದ್ಯಗಳು ‘ಹೋರಿ’ ಮತ್ತು ‘ಹೇಳತೇನ ಕೇಳ’ ತನ್ನ ಆಧುನಿಕ ಪ್ರಜ್ಞೆಗೆ ವಿಶಿಷ್ಟವಾದ ವೈಯಕ್ತಿಕ ಅನುಭವಕ್ಕೆ ತಕ್ಕ ರೂಪವನ್ನು ಕೊಡುವ ಪ್ರಯತ್ನ ‘ಹೋರಿ’ಯಲ್ಲಿ ಕಂಡು ಬರುತ್ತದೆ. ಅತ್ಯಂತ ಸಮರ್ಥವಾದ, ಮೂರ್ತವಾದ ಪ್ರತಿಮೆಗಳು ಉದ್ದಕ್ಕೂ ನಮ್ಮ ಮನಸ್ಸನ್ನು ತಟ್ಟುತ್ತವೆ. ನವ ತಾರುಣ್ಯದ ಉನ್ಮತ್ತ ವೃತ್ತಿಗೆ ತಕ್ಕ ಚಿತ್ರ ಇಲ್ಲಿ ಸುಸ್ಪಷ್ಟವಾಗಿ ಮೂಡಿದೆ. ಆದರೆ ಈ ಕವನದಲ್ಲಿ ಏಕಾಗ್ರತೆ ಸಿದ್ಧಿಸಿಲ್ಲ. ಬಹಳ ಹೇಳುವುದಕ್ಕೆ ಹೊರಟು ಯಾವುದಕ್ಕೂ ಸ್ಪಷ್ಟತೆ ಬಂದಿಲ್ಲ ಎನ್ನಿಸುತ್ತದೆ. ಆದ ಕಾರಣ ಕವಿ ಭಾಷೆಯನ್ನು ಬಳಸುವ ರೀತಿಯಿಂದ ನಮಗೆ ಎಷ್ಟು ಸಂತೋಷವಾಗುತ್ತದೋ ಅಷ್ಟು ಸಂತೋಷವನ್ನು ಕೊಡಲು ಸಮರ್ಥವಾದ ಸಮಗ್ರವಾದ ಅನುಭವ ಅದರಲ್ಲಿ ಮೂಡುವುದಿಲ್ಲ. ‘ಹೇಳತೇನ ಕೇಳ’ ಜನಪದ ಭಾಷೆಯಲ್ಲಿ ಲಾವಣಿಗಳ ಶೈಲಿಯಲ್ಲಿ ಬರೆದ ರಸಭರಿತವಾದ ದೀರ್ಘ ಕವನ. ಉತ್ತರ ಕರ್ಣಾಟಕದ ಒಂದು ಹಳ್ಳಿಯ, ಅಲ್ಲಿಯ ಜನಜೀವನದ  ಸಮಗ್ರ ಚಿತ್ರ ಕಣ್ಣಿಗೆ ಕಟ್ಟುವ ಹಾಗೆ ಆ ಕವನದಲ್ಲಿ ರೂಪುಗೊಂಡಿದೆ. ಕವಿ ತನ್ನ ಹುಟ್ಟು ನೆಲವನ್ನು ಎಷ್ಟು ಆಳವಾಗಿ ಹೀರಿದ್ದಾರೆ ಎನ್ನುವುದು ಪ್ರತಿ ಸಾಲಿನಲ್ಲೂ ವ್ಯಕ್ತವಾಗುತ್ತದೆ. ಕವನದ ಉದ್ದಕ್ಕೂ ಈ ಕವಿ ಒಂದು ಜಾನಪದ ಕಥೆಯ ಮೂಲಕ ಆಧುನಿಕ ಜೀವನಕ್ಕೊಂದು ಪ್ರತಿಮೆಯನ್ನು ಹುಡುಕುತ್ತಿದ್ದಾರೆ ಎನ್ನುವುದು ತಿಳಿಯುತ್ತದೆ. ಆದರೆ ಕವನದ ಇಡೀ ವಾತಾವರಣವೇ ಕವಿಯ ಆಧುನಿಕ ಅನುಭವಕ್ಕೆ ಪ್ರತಿ ಗಾಮಿಯಾಗಿ ನಿಲ್ಲುವುದರಿಂದ ಸಾರ್ಥಕ ಪ್ರತಿಮೆ ಮೂಡುವುದಿಲ್ಲ. ಕವನ ಒಂದು ಹೃದ್ಯವಾದ ಜಾನಪದ ಕಥೆಯಾಗಿ ಮಾತ್ರ ನಮ್ಮ ಮನಸ್ಸಿನಲ್ಲಿ ನಿಲ್ಲುತ್ತದೆ. ಆದರೆ ಈ ಕವನದಲ್ಲಿ ಕವಿ ಅನುಭವಿಸಿದರುವ ಸೋಲು ಸಾರ್ಥಕವಾದದ್ದು, ಮುಂದಿನ ಗೆಲುವಿಗೆ ಪೂರ್ವಭಾವಿಯಾಗಿ ನಡೆದದ್ದು ಎನ್ನಿಸುತ್ತದೆ.

ಚಂದ್ರಶೇಖರ ಕಂಬಾರರಿಂದ ಕನ್ನಡ ಕಾವ್ಯಲೋಕ ಬಹಳವನ್ನು ನಿರೀಕ್ಷಿಸುತ್ತದೆ. ಅಷ್ಟನ್ನು ಕೊಡುವ ಶಕ್ತಿ ಅವರಿಗಿದೆ. ಬೆಳೆಯುತ್ತಿರುವ ಅವರ ಕಾವ್ಯಶಕ್ತಿ ಸಾರ್ಥಕ ಪರಿಣತಿಯನ್ನು ಶೀಘ್ರವಾಗಿ ಗಳಿಸಲಿ ಎಂದು ಹಾರೈಸುತ್ತೇನೆ.

ಎಂ.ಗೋಪಾಲಕೃಷ್ಣ ಅಡಿಗ
ಮೈಸೂರು
೧೯೬೪
(ಮೊದಲ ಆವೃತ್ತಿಯಿಂದ)