ಮೊದಲೀಗೆ ಅಲ್ಲಮ ಪ್ರಭುವಿಗೆ ಶರಣಾರ್ಥಿ
ಕೂಡಿ ಕುಂತ ಜನಕೆಲ್ಲ ನಮ್ಮ ನಮನಾ.
ಕಲಿಯುಗದೊಳಗಿನ ಕತೆಯ ವಿಸ್ತಾರವ
ತಿಳಿಸಿ ಹೇಳುವೆ ಕೇಳಬೇಕ್ರಿ ಜನಾ.

ಕೂಡಿಕುಂತ ದೈವಕ್ಕ ಕೈಮುಗದ ಹೇಳತೇನು,
ಮರೆಯೀರಿ ಮುಂದಬಂದ್ರ ಚೂರ ಕಸರಾ.
ಯಪ್ಪಾ ಸ್ವಾಮಿ ಗುರುದೇವ ತಪ್ಪಮರತ ಒಪ್ಪಕೂಡ
ನೆಪ್ಪಿನ್ಯಾಗ ಇಡುವಾಂಗ ಸರ್ವರಾ.

ಏ ಎವ್ವಾ ಸರಸೋತಿ ‘ತಾಳಕ್ಕ ನಲಿವಾಕಿ’
ನಾಲೀಗಕ್ಷರ ಕಲಿಸ ಐದಾರಾ.
ಹಿರಿಯರ ಪಿರತೀಗಿ ಸರಿದೊರೆ ಸಮನಿಲ್ಲ;
ಕೇಳಾವರ ಮ್ಯಾಲಿರಲಿ ನಿರಂತರಾ.

ಜಂಬೂದ್ವೀಪದ ಪೈಕಿ ಮ್ಯಾಗಡೆ ಮಲೆನಾಡ
ಸೂಸಿ ಹರಿದಾಳಲ್ಲಿ ಘಟಪ್ರಭಾ.
ಆ ದಂಡಿ ಆರ್ಯಾಣ, ಈ ದಂಡಿ ಶಿವಪೂರ,
ಕೆಂಪು ಹಂಚಿನ ಊರು ಬಲು ಶೋಭಾ.

ಗೌಡ ಶ್ರೀ ಭರತೇಶ, ಗೌಡ್ತಿ ಲಕ್ಷ್ಮೀದೇವಿ,
ಎಳಕ ವಯಾದೊಬ್ಬ ಗಂಡ ಮಗಾ.
ತೂಗು ತೊಟ್ಟಿಲವಾಗಿ, ಬೆಳ್ಳಿ ಬಟ್ಟಲವಾಗಿ,
ಕೈಕಾಲ ಮುರದ ಬಿದ್ದ ಲಕ್ಷ್ಮೀ ಜಾಗ.

ಕತಿ | ಹೇಳತೇವ್ರಿ ಮುಂದಿಂದಾ
ಇರು | ಗುರುವೆ ನಾಲಗೆಯ ಹಿಂದಾ
ಆಗ | ದಿರಲಿ ಒಂದು ಸಹ ಕುಂದಾ
ನಾ| ನಿಮ್ಮ ಕರುಣದ ಕಂದಾ

ಗೌಡ್ತಿ ಬ್ಯಾನೀ ತಿಂದ ಗಂಡ ಹಡದ, ಗಂಗಾಳ ಹೊಡದ,
ಐದೇರೆಲ್ಲ ಜೋ ಅಂದ ಕತಿ ನಿವಳಾ.
ಹೇಳತೇನ ಕೇಳ ಗೆಳೆಯಾ ನಿನಮುಂದ ಕತಿಯೊಂದ
ನನಮುಂದ ಕುಂಡ್ರ ಹೀಂಗ ತೆರದ ಮನಾ ||ಗೀ||

ಊರಾಗೂರ ಅದರಾಗ ಇನ್ಯಾವೂರ
ಚಂದ, ಶಿವಾಪೂರ ರಾಜೇಕ.
ಮಳೆಯಾದ ಎರಿಯೊಳಗ ಬೆಳೆದ ಕರಿಕಿಯ ಹಾಂಗ
ಊರು ಹಬ್ಯsದ ಮೂಡಪಡುವಣಕ.

ಹಸರುಶಾಂತಿ ಪಸರೀಸಿ ಮೈಚಾಚಿ ಮಲಗ್ಯsದ
ನದಿಯ ಎದಯಾಗನು ಅದೆ ನೆರಳಾ
ಹೊಳೆಯ ದಂಡೆಯ ಆಲ ನೂರಾರು ಪಾರಂಬಿ,
ಬುಡದಾಗ ಕರ್ರೆವ್ವ ಊರ್ಯಾಳ್ತಳಾ.

ನೂರು ಬಂಡಿಗೆ ಇಂಬುಗೊಡುವಷ್ಟು ನೆರಳಿತ್ತು;
ಯಾರ್ಯಾರು ಸುಳಿದಿಲ್ಲ ಬಡ್ಡೀತನಕ.
ಉದಯಾಸ್ತಗಳ ನಡಕ, ಹೊಳಿಗುಡ್ಡ ಎಡಬಲಕ,
ಜಗದಾಗಿಂಥಾದ್ದಿಲ್ಲ ಬಹುತೇಕ.

ಊರ ದನಗಳನೆಲ್ಲ ಇಲ್ಲಿ ಹಾರಸತಾರ,
ಕೂಡತಾರೆ ಹಿರಿಯರು ಯಾವಾಗರೆ.
ಈ ನೆರಳ ತಂಪನ್ನ ಅದಕಿದಳು ಬಳಸುವರು
ಎಳಿಗೂಸು ನಗುವುದು ಅದರಾಗರೆ.

ನದಿಯ ತೆರೆಗಳ ಮ್ಯಾಲೆ ಬಿಸಲಿಂದ ಬರಬರದ
ಈ ತಂಪ ಕಳಿಸ್ಯಾರು ದಿಗ್ದೇಶಕ.
ಪೂಜಾರಿಗಳ ಬಿಟ್ಟು ಇನ್ಯಾರು ನೋಡಿಲ್ಲ
ಊರಕರ್ರೆವ್ವನ ಕರೀಮಕಾ.

ಮಾ | ಡಿದನು ಹರಿಯಿಲ್ಲ ಬೋಧಾ
ಬೆಳೆ | ದಾರು ಇಲ್ಲೆ ವೇದಾ
ಈ | ನೆರಳ ತಂಪಿನ ಹಸಾದಾ
ಕೊನೆ | ಕೊನೆಗೆ ಬುದ್ಧ ಏನಾದ?

ಈ ತಂಪು ಸತ್ಯದಲ್ಲಿ ಈ ಬದುಕ ಬಣ್ಣಿಸಿದ
ಚೆನ್ನsರ ನೆನಿ ತಮ್ಮ ದಿನಾದಿನಾ.
ಹೇಳತೇನ ಕೇಳ ಗೆಳೆಯಾ ನಿನಮುಂದ ಕತಿಯೊಂದ
ನನಮುಂದ ಕುಂಡ್ರ ಹೀಂಗ ತೆರದ ಮನಾ ||ಗೀ||

ಹುಡಿಗೇರ ಹುಸಿ ಸಿಟ್ಟಿನ್ಹಾಂಗ ಓಣಿಯ ತಿರುವು.
ತೆರೆದ ಕಣ್ಣುಗಳಣ್ಣ ಮನಿಬಾಗಿಲಾ;
ಮಣ್ಣಾಗ ಆಡೂವ ಚಿಣ್ಣರ ಗಿಣಿ ಹಿಂಡ
ಯಾವತ್ತು ಊರಾಗ ಕಲಲಲಲಾ.

ಸೂರ್ಯಾ ಕರಗಿ ನೀರಾಗಿ ನಾಡೀ ಒಳಗ ಹರಿದಾನು
ಎಳಿ ಹರೆ ಬಂದಾಗ ಹುಡಗೋರಿಗಿ
ಜೋಡೆಮ್ಮಿ ಹಾಲಕುಡದ ಸೆಡ್ಡುಹೊಡೆದ, ಕುಸ್ತಿಹಿಡದ,
ಗರಡಿಮನೆ ಕಾಣಸ್ತೈತಿ ಓಣಿ ತುದಿಗಿ.

ಚಿಗುರು ಮೊಲೆಗಳ ಕಂಡು ಚಿಗುರು ಚಿಗುರಲೆ ಇಲ್ಲ
ಒಮ್ಮಿಗಿಲೆ ಎಲೆಯಾಯ್ತು ಗಿಡಗಿಡಕ.
ಚೈತ್ರ ಫಾಲ್ಗುಣಗಳನು ಎದೆಯಾಗ ಹಿಡಿದಾರು
ಹೂವಾಗಿ ಸೋರೀತ ತಟತಟಕ.

ಯಾರೇನ ಆಡಿದರು ಗಾದಿ ನಾಣ್ಣುಡಿಯಾಗಿ
ವಾಡಿಕೆಯಾದಾವು ನಾಡೊಳಗ
ಕರಿಯಜ್ಜ ಹಾಕೀದ ಗೆರಿಗೋಳ ಯಾರ್ಯಾರು
ದಾಟಿಲ್ಲ ಹದಿನಾಕು ಹಳ್ಳಿಯೊಳಗ.

ಬೇಡಿ ಬಂದಾನ ಗೌಡ ಪಡದ ಬಂದಾರ ಜನಾ
ಕೊರತಿಲ್ಲ ಹೊಗಳುವ ಕವಿಜನಕ.
ಮನಿಮನಿಗಿ ನಡುವಡ್ಡ ಗೆರೆಯಿಲ್ಲ, ಎರಡಿಲ್ಲ,
ಕಾಣಿ ತಕ್ಕಡಿಗಿಲ್ಲ. ಸಮತೂಕ.

ಮರ | ತಾನ ಕೊಟ್ಟ ಭಗವಾನಾ
ಕಡಿ | ಮಿಲ್ಲ ಅವರಿಗೇನೇನಾ
ಹೊಲ | ದಾಗ ಕಾಳ ಭರಪೂರಾ
ದರ | ದಾಗ ಇಲ್ಲ ಹೇರಪೇರಾ

ಪಾರಂಬಿ ಕರ್ರೆವ್ವ ಗುಡ್ಡದ ನಿರವಾಣಿ
ಈ ಊರ ಕಡೆಗಿರಲಿ ನಿಮ್ಮ ಧ್ಯಾನಾ.
ಹೇಳತೇನ ಕೇಳ ಗೆಳೆಯಾ ನಿನಮುಂದ ಕತಿಯೊಂದ
ನನಮುಂದ ಕುಂಡ್ರ ಹೀಂಗ ತೆರದ ಮನಾ||ಗೀ||

ಇನ್ನ ಮುಂದಿನ ಕತಿ ಹ್ಯಾಂಗಾರೆ ಹೇಳಲಿ?
ಎದಿಯಾಗ ಆಗತದ ಕಸವೀಸಿ.
ಯೋಳಪಟ್ಟಿ ಹುಲಿಬಂದು ಯೋಳೆಂಟು ದನತಿಂದು
ಸುದ್ದಿ ಕೇಳಿ ಗೌಡ ಹೊಂಟಾ ಬ್ಯಾಟೀಗಿ.

ಗೌಡ್ತಿ ಲಕ್ಷ್ಮೀದೇವಿ ಸೆರಗೊಡ್ಡಿ ಬೇಡತಾಳ
ಹೋಗಬ್ಯಾಡ್ರಿ ಬಿದ್ದೀತೆನಗ ಕೆಟ್ಟಕನಸಾ.
ಖುಶೀಲಿಂದ ಸರಸವಾಡಿ, ಗೌಡಾ ನೀವು ಮಲಗಿದಾಗ,
ಮಂಚದ ಕಾಲ ಮುರಧಾಂಗಾತ ಕಸಕ್ಕನ.

ಅಬಲೆ ಅಂಜಿದಳೆಂದು ದಾದುಮಾಡದೆ ಹೊಂಟ;
ವಾದ್ಯದ ದನಿ ತುಂಬಿ ದಿಕ್ಕದಿಶಾ.
ಬೆಲ್ಲದ ಬೆಂಟೀಗಿ ಇರುವಿ ಮುತ್ತಿದ ಹಾಂಗ
ಜನಸೇರಿ ಹರಸ್ಯಾರು ತುಂಬಿ ಮನಸಾ.

ಇದೆ ಕೊನೆಯ ಸಲದಂತೆ ಮಳಮಳ ಮಕನೋಡಿ
ಎದಿಯಾಗ ಹಿಡಿದಾರು ಆ ರೂಪವ.
ಹತ್ತು ದೇವರಿಗೆಲ್ಲ ಹರಕೀಯ ಹೊತ್ತಾರು,
ತೇರ ಎಳಸತೇವ ಕಾಯೆ ಕರ್ರೆವ್ವ.

ಬ್ಯಾಟಿಗಾರರ ಕುದರಿ ರಥದ ಧೂಳಿನೊಳಗ
ಮುಳುಗಿ ಹೋದಾನ ಗೌಡ ಮುಂದಮುಂದಕ.
ಹುಬ್ಬಗೈಯ ಹಚ್ಚಿಕೊಂಡು ಏರನೇರಿ ನೋಡತಾರ
ಬೆಂಕಿ ಹೊತ್ತಿಸಿಧಾಂಗ ಬಿಸಲ ಬಿದ್ದೀತ.

ಹೊಳಿ | ಯಾಗ ತೆರಿಗಳಿರಲಿಲ್ಲ
ಆ | ಲsದ ಗಿಡದ ತಂಪಿಲ್ಲ
ಓ | ಣ್ಯಾಗ ಎಲ್ಲ ಬಣ ಬಣಾ
ಸುಡ | ಗಾಡಧಾಂಗ ರಣ ರಣಾ

ಗುಡ್ಡದ ಕಡ್ಡಕ ಬೆಂಕಿ ಹಚ್ಚಿದರ್ಯಾರೊ,
ಹೊಗಿ ತುಂಬಿ ನೋಡ್ಯಾರು ಎಲ್ಲಾ ಜನಾ.
ಹೇಳತೇನ ಕೇಳ ಗೆಳೆಯಾ ನಿನ ಮುಂದ ಕತಿಯೊಂದ
ನನಮುಂದ ಕುಂಡ್ರ ಹೀಂಗ ತೆರದ ಮನಾ ||ಗೀ||

ಪಡುವಣದ ಮೂಗಿನ ಮುತ್ತುದುರಿ ಸಂಜ್ಯಾಯ್ತು,
ಹಿಂದಿರುಗಿ ಬಂದಾವು ದನಾ ಕರಾ.
ಈದೊಡನೆ ಕರುಸತ್ತು, ಎಮ್ಮಿ ಕೆರೆಯೊಳಗೊದರಿ
ಕ್ಷಿತಿಜ ಬಾನಿನ ತುಂಬ ಹಸಿನೆತ್ತರಾ.

ಕಂಡ ಹಗಲಿನ ಸತ್ಯ ಸಂಶಯವಾದೀತು
ಸಂಧಿಪ್ರಕಾಶದ ಸಂಧಿನೊಳಗ.
ಕನಸಿನ ಕರಿಯ ಚೋರನ ಹಾಂಗ ಗೌಡ ಬಂದ,
ಊದಿ ಬಾರಿಸಿ ಏನೇನಿಲ್ಲ ಬ್ಯಾಟಿ ಬಳಗ.

ಸಿಡ್ಲ ಹೊಡೆದು ಹಾಳಬಿದ್ದ ಬಾವೀತನಕ ತಾನs ಹೋಗಿ
ಏನೋ ಚೆಲ್ಲಿ ತಿರುಗಿ ಬಂದಾ ನಗನಗತ.
ತೊಟ್ಟಿಲೊಳಗಿನ ಕೂಸು ಚಿಟ್ಟಂತ ಚೀರೀತ-
ಊದು ಹಾಕಿದ ಹೊಗಿ ಓಣಿ ತುಂಬೀತ.

ಊದ ಹಾಕಿ ಐದೇರು ಆರತಿಯ ಬೆಳಗ್ಯಾರು
ಖುಶಿ ಬಾಳ ಗೌಡ್ತೀಗಿ ಒಳಗೊಳಗ.
ಮಗ ಬಂದು ಕೇಳ್ಯಾನು: ಹುಲಿ ಎಲ್ಲಿ? -ಸತ್ತೀತ?
ಇನ್ನ ಮ್ಯಾಲ ಚಿಂತಿಲ್ಲ ಏಟು ನನಗ.

ಪರಭಾರೆ ಹಾಸ್ಗಿ ಒಳಗ ಮುಟ್ಟಿಬಿಟ್ಟು ಹೇಳ್ತಾನ:
ನಿನ್ನ ತಾಳಿ ಗಟ್ಟಿಮುಟ್ಟ ಉಳಿದು ಬಂದೇನ.
ಹುಲಿಯಲ್ಲ ಅಂವ ದೊಡ್ಡ ರಾಕ್ಷೇಸ, ಮಾಯಾವಿ,
ಕೊಂದ ಹಾಳ ಬಾಂವಿ ತಳಾ ಕಾಣ್ಸಿ ಬಂದೇನ

ಹಣಕಿ | ಹಾಕಬಾರ‍್ದು ಯಾರ್ಯಾರಾ
ಹಾ | ಕಿದರ ಗೋರಿ ತಯ್ಯಾರಾ
ಊ | ರಾಗ ಹೊಡಸ ಡಂಗೂರಾ
ಯಾ | ವತ್ತು ಇರಲಿ ಖಬರಾ

ನಿನ್ನ ಮಗ ಹಣಿಕಿ ಹಾಕಿದಂದು ನಾನು ಹಲಿಗಿ ಹೊಡಿಸಿ
ಹಾದೀ ಹಿಡಿದೀನಂತ ಗಟ್ಟಿ ತಿಳಕೊ ರಮಣಾ.
ಹೇಳತೇನ ಕೇಳ ಗೆಳೆಯಾ ನಿನಮುಂದ ಕತಿಯೊಂದ
ನನಮುಂದ ಕುಂಡ್ರ ಹೀಂಗ ತೆರದ ಮನಾ||ಗೀ||

ಬೀಸು ಜ್ವಾಳ ಆದಾವು, ನಮ ಹಾಡು ಮುಗಿದಾವು,
ಹಕ್ಕಿ ಚಿಲಿಪಿಲಿ ಚೀರಿ ಬೆಳಗಾಯಿತ.
ಝಮು ಝಮು ನಸಕಿನ್ಯಾಗ ಆಲsದ ಬಡ್ಯಾಗ
ಕರಿಯಜ್ಜ ಕೂತಾನ ಕೆಮ್ಮಿಕೋತ.

ಗೊಂಡೀಯ ಲಂಗೋಟಿ, ಕಸಿಯಂಗಿ ತೊಟ್ಟಾನ,
ಮುದಿಸೂಳಿ ಬಂದಾಳ ಹೊಳಿನೀರಿಗಿ.
ಕೈಬೀಸಿ ಕುಮಡಿ ಹೊಳಿಸಿ ಕಣ್ಣ ಹಾರ‍್ಸಿ ನಡದಾಳ
ನೆನನೆನದ ನಗತಾನ ತಿರುತಿರುಗಿ.

ಇಳಿದ ಪಾರಂಬೀಗಿ ಗೊಡ್ಡೆಮ್ಮಿ ಮೈತಿಕ್ಕಿ
ಸೆಗಣಿ ಹಾಕಿದ ನಾತ ಗೊಮ್ಮೆಂದಿತ.
ದಿನಧಾಂಗ ರಾಮಗೊಂಡ ಚರಿಗಿ ಹಿಡಿದ ಬಂದಾನು,
ಕೂಡ್ರತಾನು ಮುದುಕನ ಹಂತ್ಯಾಕ.

ನಾತಕ್ಕ ಹೇಸಿ ತುಸು ಮುಂದ ಕೂಡ್ರೂನಂದ;
ಅಜ್ಜ ಕೀಳಲೆ ಇಲ್ಲ ತನ್ನ ತಳ.
ಎಣ್ಣೆ ಇಲ್ಲದೆ ಉರಿದ ತನ್ನ ದಿನಮಾನಗಳ
ಹೇಳತಾನ, ಕ್ವಾರಿಮೀಸಿ ಕೊರಕೊರದ.

ಅಷ್ಟರಾಗ ಸಮಗಾರ ಬಸ್ಸಿಕೂಸನು ತಂದು
ಕರ್ರೆವ್ವಗಿದಿರಾಗ ಇಟ್ಟಾಳಡ್ಡ:
ರಾತ್ರಿ ಚಿಟ್ಟನೆ ಚೀರಿ ಮಲಿಮರತ ಮಲಗೇತಿ
ತಾಯಿ ನಿನ್ನ ವರ್ಮಬ್ಯಾಡ ನಮಗೂಡ.

ಕೇಳಿ |  ಬಂತ ಹೊಡೆದ ಡಂಗೂರಾ
ಹಾಳ | ಬಾಂವ್ಗಿ ಹೋಗಬ್ಯಾಡ್ರಿ ಯಾರಾ
ಹಣಿಕಿ | ಹಾಕಬಾರ‍್ದು ಯಾರ್ಯಾರಾ
ಯಾ | ವತ್ತು ಇರಲಿ ಖಬರಾ

ತಪ್ಪಿಗಿಪ್ಪಿ ಹಣಕಿದರ ದಂಡಾಶಿಕ್ಷಾ ಮಾಡತಾರು
ನೆಪ್ಪಿನ್ಯಾಗ ಇಟಗೊಳ್ರಿ ಎಲ್ಲಾ ಜನಾ.
ಹೇಳತೇನ ಕೇಳ ಗೆಳೆಯಾ ನಿನ ಮುಂದ ಕತಿಯೊಂದ
ನನ ಮುಂದ ಕುಂಡ್ರ ಹೀಂಗ ತೆರದ ಮನಾ ||ಗೀ||

ಹೋರೀಯ ಕೊಂಬಿನ್ಹಾಂಗ ಮಕ ಮೀಸಿ ಮೂಡ್ಯಾವ
ಎಳಕ ಯೌವನ ಬಂದು ರಾಮಗೊಂಡಗ.
ಹಿಂಡ ದನಗೋಳೊಳಗ ದ್ಯಾಮನ್ನ ಕ್ವಾಣಧಾಂಗ
ಅವನಿದ್ದ ವಾರಿಗಿಯವರೊಳಗ.

ಅವನ ಕೆನ್ನಿಯ ಒಳಗ ಸೂರ್ಯದೇವ ಹೊಳದಾನು
ಕಣ್ಣಾಗ ಹುಣ್ಣೀಮಿ ಚಂದ್ರಾಮರಾ
ಒಗರೇನು, ಹೊಗರೇನು, ಹರೆಯ ಗರುವಿಕೆಯೇನು
ಬಾಯಿ ಬಾಯಿ ಬಿಡತಾವ ಹುಡಿಗೇರಾ.

ಹಸನಾದ ಬಾಲೇರು ಹಂತೇಲಿ ಬಂದ ಬಂದ,
ಒಡಪ ಹೇಳಿ ಓಡತಾರ ನಗನಗತ.
ಸರಿಸರಿ ಸಖಿಯರು ಮಾರೀಗಿ ನೀರಗೊಜ್ಜಿ
ಕಾಡತಾರ ಪರಿ ಪರಿ ಅಡ್ಡನಿಂತಾ.

ತುಂಬೀದ ಹೊಳೆಯಾಗ ತೆರಿ ಹೊಡದ ಈಸಾಂವಾ,
ಗುಡಿಯ ಮುಂದಿನ ಗುಂಡ ಹೊತ್ತ ಒಗದಾಂವಾ.
ಮನ್ನಿ ಶಿವರಾತ್ಯ್ರಾಗ ಹತ್ತು ಮಂದಿಯ ಕೂಡ
ಕುಸ್ತಿ ಹಿಡಿದ, ಎರಿ ಮಣ್ಣ ಮುಕ್ಕಿಸಿದಾಂವಾ.

ಊರೀನ ಹುಡುಗೋರು ದೊಡ್ಡಾಟ ಬಿಟಕೊಟ್ಟು
ನಾಟಕವಾಡ್ಯಾರು ಪಟ್ಟಪೈಲೇಕ.
ಹುಳಮೇದ ಬನಧಾಂಗ ಒಣಗ್ಯಾವ ಕುಣಿದಾವ;
ನೋಡಲಿಲ್ಲ ರಾಮಗೊಂಡ, ಕರಿಮುದಕ.

ಅವನ | ಮ್ಯಾಲೆ ಮುದುಕ ಭಾಳ ಪ್ರೀತಿ
ಕ | ಣ್ಣಾಗ ತುಂಬಿ ಅಕ್ಕರತಿ
ನೀ | ನಮ್ಮ ಊರ ಸರದಾರಾ
ನನ | ಗಿಲ್ಲ ಎದರ ದರಕಾರಾ

ಊರ ಹೊರಗ ಹೋಗುವಾಗ ತಿರುಗಿ ನೋಡ್ಯಾನ ಗೌಡ
ಹಾವಿನ ಹುತ್ತಿನ್ಹಾಂಗ ಮೂಗ ಮುರದಾನ.
ಹೇಳತೇನ ಕೇಳ ಗೆಳೆಯಾ ನಿನ ಮುಂದ ಕತಿಯೊಂದ
ನನ ಮುಂದ ಕುಂಡ್ರ ಹೀಂಗ ತೆರದ ಮನಾ ||ಗೀ||

ಚಂದ್ರನ ಮುರಿದ್ಯಾರೊ ನೀರಿಗೆ ಎಸೆದಾರ
ಚೂರು ಚೂರು ಚೀರ್ಯಾವ ನದಿಯೊಳಗೆ
ಬಸರಿಯರ ಕನಸಿನಲಿ ತಲೆಬುರುಡೆ ಹಲ್ಕಿರಿದು
ಹೂ ಹೆರುವ ಗಿಡಬಳ್ಳಿ ಒಣಗ್ಯಾವ

ಹೋರಿಗsಳು ಎತ್ತಾಗಿ ನೊಗ ಎತ್ತಲಾರದೆ
ಗದ್ದೆಯಲಿ ಬಿದ್ದಾವ ಬಾಲ ಮುದುರಿ
ಪಾರಂಬಿಕರ್ರೆವ್ವನ ಕೈ ಭಿನ್ನವಾದಾವು
ಮಾಯವಾಗದ ಗಾಯವಾದಾವರಿ.

ಹೊತ್ತೇರಿ ಎದ್ದ ಗೌಡ ಬಡ್ಡೀಗಿ ಹಣ ಕೊಟ್ಟು
ಕೂಡ್ಸ್ಯಾನ ಚಾವಡ್ಯಾಗ ದೊಡ್ಡಸಭಾ.
ಹಸಮಕ್ಳ ಸಲುವಾಗಿ ಗರಡೀಯ ಮನಿ ಕೆಡಿವಿ
ಹೊಸ ಸಾಲಿ ಕಟ್ಟಿಸೋಣ, -ಬಲೆ ಶೋಭಾ

ಊರಂತ ಊರೆಲ್ಲ ಹೌದಂತ ತಲಿದೂಗಿ
ಬಾಯಿತುಂಬ ಹೊಗಳ್ಯಾರ ಗೌಡಪ್ಪನ
ಮನೆಗೊಂದು ಹೆಣ್ಣಾಳು ಗಂಡಾಳು ಬಂದಾವು,
ಲಗುಮಾಡಿ ಮುಗೀಬೇಕ, ಮೂರsದಿನಾ.

ಶುಕ್ರಾರ ಸುರುವಾಗಿ ಆಯ್ತಾರ ತಯ್ಯಾರ
ಬಿರದೀತ ಸ್ವಾಮಾರ ಬಡ್ಯಾಗನ.
ಆಲsದ ಬೇರ ಬಂದು ತೊಡರ್ಯಾವು ತೊಡಕ್ಯಾವು;
ಮೊದಲದನ ಎಲ್ಲಾರು ಕಡಿಯೋಣ.

ಚಾಲಿ | ವರದ ಮುದುಕ ಬೇಡಿಕೊಂಡಾ
ಕೈ | ಮುಗಿದು ಅಡ್ಡ ನಿಂತಕೊಂಡಾ
ಸರಿ | ಸರಿಸಿ ಗಿಡವ ಕಡಿದಾರ
ಸಾ | ಲೀಯ ಪೂಜಿ ಮಾಡ್ಯಾರ

ತಾಸೇ ಹಲಗಿ ಡೊಳ್ಳ ಗರ್ದೀಲೆ ಬಾರಿಸ್ಯಾರ;
ಕರಿಯಜ್ಜ ತೀರಿಕೊಂಡ ಅದsದಿನಾ.
ಹೇಳತೇನ ಕೇಳ ಗೆಳೆಯಾ ನಿನ ಮುಂದ ಕತಿಯೊಂದ
ನನ ಮುಂದ ಕುಂಡ್ರ ಹೀಂಗ ತೆರದ ಮನಾ||ಗೀ||

ಬಾಂದದ ಮ್ಯಾಗಿನ ಕೆಂದ ಗೋವಿನ ಕರಾ
ಬಿಸಲೀಗಿ ಬಾಯಿ ಬಾಯಿ ಬಿಡತsದರಿ.
ಬಿಸಲ ಹಳದಿಯ ನಡುವ ಕರಿ ನೆರಳ ಚೆಲ್ಲೂವ
ಹಸರ ನಂಬಿಗೆಯನ್ನು ಕಡದಾರರಿ.

ರಾಮ ಮುದುಕನ ನೆನೆದು ಹಾಡಿ ಅಳಬೇಕಂದ್ರ
ಹನಿ ನೀರು ಬರಲಿಲ್ಲ ಕಣ್ಣಾಗ.
ಹಡೆದವನ ಬಯ್ಯುದಕ ಬಾಯsರೆ ತಗದಾನ
ಅಕ್ಷರ ಹಿಡೀಲಿಲ್ಲ ಶಬ್ದದೊಳಗೆ.

ಕ್ವಾಣೀ ಬಾಗಿಲ ಮುಚ್ಚಿ ಕುಂತ ಧ್ಯಾನಿಸತಾನ,
ಉಸುರರೆ ಹಾಕತಾನ ಮೈಲುದ್ಧ.
ಕತ್ತಲೆಯ ಗವಿಯೊಳಗ ಕೇಂದ್ರ ತಪ್ಪಿದ ಭ್ರಾಂತಿ
ಉರುಳ್ಯಾವ ಇಳಕಲಕಡ್ಡಬಿದ್ದಾ.

ಅದನಿದನು ಬ್ಯಾರೇ ಮಾಡಿ ವರ್ಣಿಸುವ ವಿವರಿಸುವ
ಬೆಳಕಿಲ್ಲ, ಬಲ್ಲಿರೇನ ನೀವ್ಯಾರರೇ?
ದೀವೀಗಿ ತರಲಾಕ ದೇವರ ಮನಿ ಹೊಕ್ಕ,
ಮನದಾಗ ಖುಶಿಯಾಗಿ ಕುಂತಾನರಿ.

ಅವರಪ್ಪ ಬಂದವನು ‘ಭಕ್ತಿ ನಾಟಕ ಸಾಕು’
ಹಿಂಗಂದು ಚೆಂಡೀಯ ಚಿವುಟ್ಯಾನರಿ
ನಾಚಿ ಕೋಣೆಗೆ ಬಂದು ನೋಡತಾನು, -ಕರಿಯಜ್ಞ
ಮೀಸ್ಯಾಗ ಮುಸಿ ಮುಸಿ ನಗತಾನರಿ.

ಚಿ | ಟ್ಟಂತ ಚೀರಿ ಬಿದ್ದಾನು
ಬೇ | ಖಬರ ಆಗಿ ಅಂದಾನು
ಪಾ | ರಂಬಿ ಅಂತ ಕೂಗ್ಯಾನು
ಹಡೆ | ದವನ ಬಳಿಗೆ ಕರದಾನು

ಕರ್ರೆವ್ವನಾಣಿ ನೀನಲ್ಲ-ಇನ್ನೇನೇನೊ
ಬಡಬಡಿಸಿ, ಹೊಸ್ತಿಲಕ ತಲಿ ಹೊಡೆದಾನ.
ಹೇಳತೇನ ಕೇಳ ಗೆಳೆಯಾ ನಿನಮುಂದ ಕತಿಯೊಂದ
ನನ ಮುಂದ ಕುಂಡ್ರ ಹೀಂಗ ತೆರದ ಮನಾ ||ಗೀ||

೧೦