ರಾಯಚೂರು ಜಿಲ್ಲೆಯಲ್ಲಿ ಹುಟ್ಟಿ ಗದಗ-ಹುಬ್ಬಳ್ಳಿಗಳಲ್ಲಿ ಸಂಗೀತ ಶಿಕ್ಷಣ ಪಡೆದು ಬೆಂಗಳೂರಿನಲ್ಲಿ ಸಂಗೀತ ಶಾಲೆ ಸ್ಥಾಪಿಸಿ ಹಿಂದೂಸ್ಥಾನಿ ಸಂಗೀತ ಕ್ಷೇತ್ರದ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಶ್ರೀ ಹನುಮಂತರಾವ ಗೋನವಾರ ಅವರು ನಾಡಿನ ಜನಪ್ರಿಯ ಗಾಯಕರಲ್ಲೊಬ್ಬರು.

ಶ್ರೀ ಹನುಮಂತರಾವ್‌ ಗೋನವಾರ ಏಪ್ರಿಲ್‌ ೪, ೧೯೪೮ರಲ್ಲಿ ರಾಯಚೂರು ಜಿಲ್ಲೆಯ ಗೋನವಾರದಲ್ಲಿ ಜನಿಸಿದರು. ಇವರದು ಕಲಾವಿದರ ಪಾರಂಪರಿಕ ಕುಟುಂಬ. ತಂದೆ ಗಾನಾಭಿನಯಚಂದ್ರ ಪಂಡಿತ್‌ ಮುರುಡೇಶ್ವರ ಗೋನವಾರ. ಬಾಲ್ಯದಲ್ಲಿ ಶ್ರೀ ಹನುಮಂತರಾವ್‌ ಸಂಗೀತದ ಜೊತೆಗೆ ಕಲೆ, ಅಭಿನಯಗಳಲ್ಲೂ ಆಸಕ್ತಿಯಿಂದ ಅಭ್ಯಾಸ ಆರಂಭಿಸಿದ್ದರು. ನಂತರ ಗದುಗಿನ ವೀರೇಶ್ವರ ಪುಣ್ಯಾಶ್ರಮದ ಸಂಗೀತ ಮಹಾ ವಿದ್ಯಾಲಯದಲ್ಲಿ ಪಂಡಿತ್‌ ಪುಟ್ಟರಾಜ ಗವಾಯಿಗಳ ಗರಡಿಯಲ್ಲಿ ಸುಮಾರು ಆರು ವರ್ಷಗಳ ಕಾಲ ಕಠಿಣಾಭ್ಯಾಸ ಮಾಡಿದರು. ಅನಂತರ ಮತ್ತೆ ಆರು ವರ್ಷಗಳ ಕಾಲ ಪಂಡಿತ್‌ ಅರ್ಜುನ ಸಾ ನಾಕೋಡ್‌ ಅವರಲ್ಲಿ ಶ್ರೀಯುತರ ಸಂಗೀತ ಶಿಕ್ಷಣ ಪಡೆದು ನಡೆಯಿತು.

ಶ್ರೀ ಹನುಮಂತರಾವ್‌ ಅವರು ಮುಂಬೈ, ಕಲ್ಕತ್ತಾ, ಮದ್ರಾಸ್‌, ಪಾಂಡಿಚೇರಿಗಳಲ್ಲದೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ಹಿಂದೂಸ್ಥಾನಿ ಕಲಾಕರ್ ಮಂಡಳಿ, ಸುರ್ ಸಾಗರ್, ಬೆಳಗಾಂ ಕಲಾಕರ್ ಸಂಘ, ಹಂಪಿ ಸಂಗೀತ ಸಮ್ಮೇಳನ, ಮೈಸೂರು ದಸರಾ ಅರಮನೆ ಸಂಗೀತ ಕಾರ್ಯಕ್ರಮ ಮುಂತಾದ ಅನೇಕ ಪ್ರತಿಷ್ಠಿತ ಸಂಸ್ಥೆಗಳ ಆಶ್ರಯಗಳಲ್ಲಿ ಸಂಗೀತ ಕಾರ್ಯಕ್ರಮ ನೀಡಿದ್ದಾರೆ.

ಆಕಾಶವಾಣಿಯ ‘ಬಿ-ಹೈ’ ಗಾಯಕರಾಗಿರುವ ಶ್ರೀಯುತರ ಕಾರ್ಯಕ್ರಮ ಆಕಾಶವಾಣಿ ಮತ್ತು ದೂರದರ್ಶನಗಳಲ್ಲಿ ನಿರಂತರ ಪ್ರಸಾರವಾಗುತ್ತಿರುತ್ತವೆ. ತಮ್ಮ ಗುರುಗಳಾದ ಅರ್ಜುನ್‌ ಸಾ ನಾಕೋಡ್‌ ಅವರ ಪ್ರೋತ್ಸಾಹದಿಂದ ಬೆಂಗಳೂರಿನಲ್ಲಿ ‘ಶ್ರೀ ಸಚ್ಚಿದಾನಂದ ಹಿಂದೂಸ್ಥಾನಿ ಸಂಗೀತ ವಿದ್ಯಾಲಯ’ ಸ್ಥಾಪಿಸಿರುವ ಹನುಮಂತರಾವ್‌ ಅವರು ಹಿಂದೂಸ್ಥಾನಿ ಸಂಗೀತ ಕ್ಷೇತ್ರಕ್ಕೆ ಹಲವಾರು ಪ್ರತಿಭಾವಂತ ಯುವ ಕಲಾವಿದರನ್ನು ನೀಡಿದ್ದಾರೆ.

ಮಂಗಳೂರು ಸಂಗೀತ ಸಭಾದಿಂದ ‘ಗಾನ ದಿನಕರ’, ಮೈಸೂರಿನ ಶ್ರೀ ಸಚ್ಚಿದಾನಂದ ಗಣಪತಿ ಸ್ವಾಮಿಗಳ ಶ್ರೀದತ್ತ ಸಂಗೀತ ಅಕಾಡೆಮಿಯಿಂದ ‘ಚಿನ್ನದ ಹಾರ’, ಧರ್ಮಸ್ಥಳದ ಶ್ರೀ ವೀರೇಂದ್ರ ಹೆಗ್ಗಡೆಯವರಿಂದ ‘ಗಾನ ಸುಧಾಕರ’, ಗೋಕಾಕದ ಸಪ್ತಸ್ವರ ಸ್ನೇಹ ತಂಡದವರಿಂದ ‘ರಾಗ ರಂಜನಿ’- ಇವೆಲ್ಲಾ ಶ್ರೀ ಹನುಂತರಾವ್‌ ಗೋನವಾರ ಅವರ ಸಂಗೀತ ಸೇವೆಯನ್ನು ಗುರುತಿಸಿ ಸಂಘ ಸಂಸ್ಥೆಗಳು ನೀಡಿರುವ ಗೌರವ ಸನ್ಮಾನಗಳು. ಈ ಸಂಗೀತ ಸಾಧಕರಿಗೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ವಾರ್ಷಿಕ ಪ್ರಶಸ್ತಿ (೨೦೦೪-೦೫) ನೀಡಿ ಗೌರವಿಸಿದೆ.