ನಮ್ಮ ದೇಶದಲ್ಲಿ ಹನುಮಂತನ ಗುಡಿ ಇಲ್ಲದ ಸಣ್ಣ ಹಳ್ಳಿಯೂ ಇಲ್ಲ.

ದೊಡ್ಡ ಪಟ್ಟಣಗಳಲ್ಲಿ ಹನುಮಂತನ ಗುಡಿಗಳಿಗೆ ಲೆಕ್ಕವೇ ಇಲ್ಲ.

ಹುಡುಗರು, ಮುದುಕರು, ಹೆಂಗಸರು, ಗಂಡಸರು, ಎಲ್ಲ ವಯಸ್ಸಿನವರು, ಎಲ್ಲ ವೃತ್ತಿಗಳವರು ಹನುಮಂತನನ್ನು ಪೂಜಿಸುತ್ತಾರೆ. ವಿದ್ಯಾರ್ಥಿಗಳು ಬುದ್ಧಿಶಕ್ತಿ ಕೊಡು ಎಂದು ಬೇಡುತ್ತಾರೆ, ಸೈನಿಕರು ಶಕ್ತಿ ಕೊಡು ಎಂದು ಬೇಡುತ್ತಾರೆ. ಪೂರ್ವಕಾಲದಲ್ಲಿ ಕೋಟೆಗಳ  ಬಾಗಿಲುಗಳಲ್ಲಿ ಆಂಜನೇಯನ ದೇವಸ್ಥಾನ ಇರುತ್ತಿತ್ತು. ಜಟ್ಟಿಗಳ ಗರಡಿಮನೆಗಳಲ್ಲೆಲ್ಲ ಹನುಮಂತನ ಪಟ ಇರುತ್ತದೆ.

ಮನುಷ್ಯನಲ್ಲಿ ಒಳ್ಳೆಯ ಗುಣಗಳೂ ಕೆಟ್ಟ ಗುಣಗಳೂ ಇರುತ್ತವೆ, ಅಲ್ಲವೆ? ದೇವರಲ್ಲಿ ಕೆಟ್ಟ ಗುಣಗಳೇ ಇಲ್ಲ ಎಂದು ನಂಬುತ್ತೇವೆ. ಪ್ರತಿಯೊಬ್ಬನೂ ತನ್ನ ಸ್ವಾಭಾವಿಕ ಸದ್ಗುಣಗಳನ್ನು ಬೆಳೆಸಿಕೊಂಡು ದೇವರಿಗೆ ಹತ್ತಿರವಾಗಬೇಕು ಎಂಬುದು ನಮ್ಮ ಹಿಂದಿನವರು ಉಪದೇಶಿಸಿದ ನೀತಿ. ದಿವ್ಯವಾದ ಗುಣಗಳಿಂದ ತುಂಬಿರುವುದೇ ದೇವರು ಅಥವಾ ದೈವತ್ವ. ಹೀಗೆ ಮಾನವರಾಗಿ ಹುಟ್ಟಿ ದೇವರೆಂದು ಜನಸಾಮಾನ್ಯರ ಭಕ್ತಿ, ವಿಶ್ವಾಸ, ಪ್ರ ಈತಿ, ಆದರಗಳಿಗೆ ಪಾತ್ರರಾದ ಮಹಾನುಭಾವರು ಅನೇಕರು ನಮ್ಮ ದೇಶದಲ್ಲಿ ಹುಟ್ಟಿದರು. ಇಂಥ ಮಹಾನುಭಾವರಲ್ಲಿ ಹನುಮಂತನೂ ಒಬ್ಬ.

ರಾಮಾಯಣವನ್ನು ಬರೆದ ಕವಿ ವಾಲ್ಮೀಕಿ ಹನುಮಂತ ವಾನರರ ಗುಂಪಿನವರು ಎಂದಿದ್ದಾನೆ.  ಎಂದರೆ ಮರಗಳ ಮೇಲೆ ವಾಸಿಸುವ ಮೃಗಗಳು ಎಂದಂತಾಯಿತು. ಹನುಮಂತನೂ ಅವನ ಜೊತೆಯವರೂ ನಿಜವಾಗಿ ಮನುಷ್ಯರೇ ಎಂದು ಹಲವರು ನಂಬುತ್ತಾರೆ. ಸಾಮಾನ್ಯವಾಗಿ ಹಿಂದುಗಳು ಹನುಮಂತನನ್ನು ಚಿತ್ರಿಸಿ ಕೊಂಡಿರುವುದು ಕಪಿ ಎಂದು. ಬುದ್ಧಿಶಕ್ತಿಗೆ, ದೇಹಬಲಕ್ಕೆ ವಾಕ್ಚಾತುರ್ಯಕ್ಕೆ,  ವಿವೇಚನಾ ಶಕ್ತಿಗೆ ಹನುಮಂತ ಇನ್ನೊಂದು ಹೆಸರಾಗಿದ್ದಾನೆ.

ಹನುಮಂತ ವಾಯುವಿನ ಮಗ ಎಂದು ಪುರಾಣಗಳು ಹೇಳುತ್ತವೆ. ವಾಯು ಎಂದರೆ ಪ್ರಾಣಿಮಾತ್ರದ ಜೀವನಾಧಾರ ಶಕ್ತಿ. ಅನ್ನವಿಲ್ಲದೆ ಇರಬಹುದು; ನೀರಿಲ್ಲದೆ ದಿವಸಗಳನ್ನು ತಳ್ಳಬಹುದು; ಗಾಳಿಯಿಲ್ಲದೆ ಕೆಲ ಗಳಿಗೆಯೂ ಬದುಕಿರುವುದು ಸಾಧ್ಯವಿಲ್ಲ. ವಾಯುವೆಂದರೆ ಪ್ರಾಣಶಕ್ತಿ. ಆದ್ದರಿಂದ ವಾಯುವಿನ ಮಗನಾದ ಹನುಮಂತನಿಗೆ ‘ಪ್ರಾಣದೇವರು’ ಎನ್ನುತ್ತಾರೆ. ಹನುಮಂತನ ಅಂಶದಿಂದಲೇ ಮುಂದೆ ಭೀಮ ಮತ್ತು ಮಧ್ವಾಚಾರ್ಯರ ಅವತಾರವಾಯಿತು ಎಂದು ನಮ್ಮಲ್ಲಿ ಹಲವರು ನಂಬುತ್ತಾರೆ.

ಹನುಮಂತ ಸಂಗೀತಶಾಸ್ತ್ರಜ್ಞ; ಅವನಿಗೆ ನಾಟ್ಯ, ನಾಟಕಗಳಲ್ಲೂ ಪ್ರಾವೀಣ್ಯ ಉಂಟು. ಆದ್ದರಿಂದ ಸಂಗೀತಗಾರರಿಗೂ, ನಟರಿಗೂ ಹನುಮಂತ ಪ್ರೀತಿಯ ಪೂಜಾರ್ಹ ಸ್ವಾಮಿಯಾಗಿದ್ದಾನೆ . ಹನುಮಂತ ಮಹಾಯೋಗಿಯೂ ಹೌದು. ಭಗವಂತನಾದ ಶ್ರೀರಾಮನ ಸೇವೆಯಿಂದ ಪುನೀತನಾಗಿ, ಅವನ ಆಲಿಂಗನದ ಭಾಗ್ಯ ಪಡೆದ ಪುಣ್ಯಜೀವಿ. ದಾಸರಲ್ಲಿ ಅಗ್ರಗಣ್ಯ.

ಹನುಮಂತ ದಕ್ಷಿಣದ ಕಿಷ್ಕಿಂಧೆಯಲ್ಲಿ ಬೆಳೆದು ದೊಡ್ಡವನಾಗಿ, ಲಂಕೆಯಿಂದ ಹಿಮಾಲಯದವರೆಗೆ ಹಲವು ಬಾರಿ ಹಾರಾಡಿ, ಅಯೋಧ್ಯೆಯಲ್ಲಿ ನೆಲೆನಿಂತ ಮಹಾ ಭಾರತೀಯ ದೇಶದ ಏಕತೆಯ ಸಂಕೇತ. ಎಂದೇ ಅವನಿಗೆ ಹಿಮಾಲಯದಿಂದ ರಾಮೇಶ್ವರದವರೆಗೆ ದೇಶದ ಮೂಲೆಮೂಲೆಗಳಲ್ಲೂ ಪೂಜೆ ಸಲ್ಲುತ್ತದೆ.

ಸೂರ್ಯನನ್ನೇ ಹಿಡಿಯಲು ಹೊರಟ ಧೀರ ಶಿಶು

ದೇವಲೋಕದಲ್ಲಿ ಪುಂಜಿಕಸ್ಥಲೆ ಎಂಬ ಅಪ್ಸರೆಯೊಬ್ಬಳಿದ್ದಳು. ಇವಳು ಮಹಾಸುಂದರಿ. ಶಾಪದಿಂದಾಗಿ ಇವಳು ಭೂಲೋಕದಲ್ಲಿ ಕುಂಜರನೆಂಬ ಕಪಿಗೆ ಮಗಳಾಗಿ ಹುಟ್ಟಿದಳು. ಅಂಜನಾದೇವಿ ಎಂದು ಇವಳಿಗೆ ಹೆಸರಿಟ್ಟರು. ಒಮ್ಮೆ ಇವಳು ಪರ್ವತವೊಂದರ ಬಳಿ ವಿಹಾರಕ್ಕಾಗಿ ಓಡಾಡುತ್ತಿದ್ದಾಗ ವಾಯುದೇವ ಇವಳ ಸೌಂದರ್ಯವನ್ನು ಮೆಚ್ಚಿದ. ವಾಯುದೇವ-ಅಂಜನಾದೇವಿ ಇವರ ಮಗ ಆಂಜನೇಯ.

ಹುಟ್ಟಿದಾಗಿನಿಂದಲೇ ಅಸಾಧಾರಣ ವ್ಯಕ್ತಿ ಹನುಮಂತ. ಇವನ ವಿಷಯದ ಕಥೆಗಳು ಕೇಳುವುದಕ್ಕೆ ಬಹಳ ಸ್ವಾರಸ್ಯ.

ಹುಟ್ಟಿದ ಕೊಂಚ ಹೊತ್ತಿನಲ್ಲಿ ಹನುಮಂತನಿಗೆ ಬಹಳ ಹಸಿವಾಯಿತು. ತಲೆಯೆತ್ತಿ ನೋಡಿದಾಗ ಪೂರ್ವ ದಿಕ್ಕಿನಲ್ಲಿ ಕೆಂಪಗೆ ಕಾಣುತ್ತ ಇದ್ದ ವಸ್ತುವೊಂದು ಕಾಣಿಸಿತು. ಕೆಂಪಗಿದ್ದ ಸೂರ್ಯನನ್ನು ಹಣ್ಣೆಂದು ಭಾವಿಸಿ ಅದನ್ನು ಹಿಡಿಯಲೆಂದು ಹನುಮಂತ ಹಾರಿಯೇಬಿಟ್ಟ. ಹುಡುಗಾಟ ಪ್ರಮಾದವೇ ಆಯಿತು. ಸೂರ್ಯನ ಶಾಖದಿಂದ ಮುಖ ಸುಟ್ಟರೂ ಹಟ ಬಿಡದೆ ಹಾರುತ್ತಿದ್ದ ಹನುಮಂತ, ಸೂರ್ಯನನ್ನು ಹಿಡಿದೇಬಿಡಬಹುದೆಂಬ ಹೆದರಿಕೆ ದೇವೇಂದ್ರನಿಗುಂಟಾಯಿತು.  ಅವನು ತನ್ನ ವಜ್ರಾಯುಧದಿಂದ ಹನುಮಂತನಿಗೆ ಹೊಡೆದ. ಕೆಳಗೆ ಬಿದ್ದ ಹನುಮಂತನ ಎಡಕೆನ್ನೆ ಊದಿಕೊಂಡಿತು. (ಸಂಸ್ಕೃತದಲ್ಲಿ ‘ಹನು’ ಎಂದರೆ ಕೆನ್ನೆ ಎಂದರ್ಥ; ಹನುಮಂತನಿಗೆ ಆ ಹೆಸರು ಬರಲು ಇದೇ ಕಾರಣ.)

ಹನುಮಂತನ ತಂದೆ ವಾಯುದೇವನಿಗೆ ಇದರಿಂದ ಭಾರಿ ಕೋಪ ಬಂತು. ಅವನು ತನ್ನ ಚಲನೆಯನ್ನೇ ನಿಲ್ಲಿಸಿ ಬಿಟ್ಟ. ಮೂರು ಲೋಕಗಳಲ್ಲೂ ಉಸಿರಾಡಲೂ ಗಾಳಿಯಿಲ್ಲದೆ ಹೋಯಿತು. ಆಗ ದೇವತೆಗಳೆಲ್ಲ ಬಂದು ವಾಯುದೇವನನ್ನು ಸಮಾಧಾನ ಮಾಡಿದರು. ಅಲ್ಲಿದ್ದ ಪುಟಾಣಿ ಹನುಮಂತನಿಗೆ ಒಬ್ಬೊಬ್ಬ ದೇವತೆಯೂ ಒಂದೊಂದು ವರವಿತ್ತ. “ಶಸ್ತ್ರಗಳಿಂದ ನಿನಗೆ ಸಾವು ಬರದಿರಲಿ” ಎಂದು ಬ್ರಹ್ಮ ವರವಿತ್ತರೆ, “ನಿನಗೆ ಇಷ್ಟವಾಗುವಷ್ಟು ಕಾಲ ನೀನು ಬದುಕಿರುತ್ತೀ” ಎಂದ ದೇವೇಂದ್ರ.

ದೇವತೆಗಳಿಂದ ಹೀಗೆ ವರಗಳನ್ನು ಪಡೆದ ಹನುಮಂತ ತನ್ನ ತಂದೆಯಷ್ಟೇ ಬಲಶಾಲಿಯಾಗಿ ಸ್ವಚ್ಛಂದವಾಗಿ ಹಾರಾಡುತ್ತಾ ಬಹಳ ತುಂಟನಾಗಿ ಬೆಳೆದ. ಇದರಿಂದ ಬೇಸರಗೊಂಡ ಋಷಿಗಳು ಪುಟ್ಟ ಶಾಪವೊಂದನ್ನು ಕೊಟ್ಟರು. ಈ ಶಾಪದಿಂದಾಗ ಹನುಮಂತನಿಗೆ ಇರುವ ಶಕ್ತಿ ಸಾಮರ್ಥ್ಯಗಳು ಎಷ್ಟೆಂದು ಅವನಿಗೇ ತಿಳಿದಿರುವುದಿಲ್ಲ. ಬೇರೆ ಯಾರಾದರೂ ಅವನಿಗೆ, ಅವನ ಶಕ್ತಿಯನ್ನು ವಿವರಿಸಿ ಹೇಳಬೇಕು – ಆಗ ತನ್ನ ಶಕ್ತಿಯ ಅರಿವು ಹನುಮಂತನಿಗಾಗುತ್ತದೆ.

ಶ್ರೀರಾಮಲಕ್ಷ್ಮಣರ ದರ್ಶನ

ಹನುಮಂತ ಬೆಳೆದು ದೊಡ್ಡವನಾದ ಮೇಲೆ ಕಿಷ್ಕಿಂಧೆಯ ರಾಜ ಸುಗ್ರೀವನ ಮಂತ್ರಿಯಾದ. ಒಮ್ಮೆ ಸುಗ್ರೀವನ ಅಣ್ಣ ವಾಲಿ ರಾಕ್ಷಸನೊಬ್ಬನೊಡನೆ ಯುದ್ಧ ಮಾಡುತ್ತಾ ಗುಹೆಯೊಂದರೊಳಗೆ ಹೋಗಿ ಬಹಳ ಕಾಲ ಬರಲೇ ಇಲ್ಲ. ಗುಹೆಯಿಂದ ರಕ್ತ ಹರಿಯಲು ಪ್ರಾರಂಭಿಸಿದಾಗ ವಾಲಿ ಸತ್ತಿರಬಹುದೆಂದು ಸುಗ್ರೀವ ಕಿಷ್ಕಿಂಧೆಗೆ ಹಿಂತಿರುಗಿ ತಾನೇ ರಾಜನಾದ. ಆದರೆ ವಾಲಿ ಕೊಂಚಕಾಲದ ನಂತರ ಹಿಂತಿರುಗಿ ಸುಗ್ರೀವನನ್ನು ಓಡಿಸಿದ. ವಾಲಿ ಪ್ರವೇಶಿಸಲಾಗದ ಮಲಯ ಪರ್ವತದಲ್ಲಿ ಸುಗ್ರೀವ ಮತ್ತು ಅವನ ಮಂತ್ರಿಗಳು ಬಚ್ಚಿಟ್ಟುಕೊಂಡರು.

ಶ್ರೀರಾಮ, ಸೀತೆ, ಲಕ್ಷ್ಮಣರು ಕಾಡಿನಲ್ಲಿದ್ದಾಗ ರಾವಣ ಎಂಬ ರಾಕ್ಷಸ ಸೀತೆಯನ್ನು ಕದ್ದುಕೊಂಡು ಹೋದ. ಸೀತೆಯನ್ನು ಕಳೆದುಕೊಂಡ ರಾಮ ದುಃಖಿಸುತ್ತಾ ಕಾಡುಗಳಲ್ಲಿ ಅಲೆಯುತ್ತಾ ಕಿಷ್ಕಿಂಧೆಯನ್ನು ಪ್ರವೇಶಿಸಿದ. ಲಕ್ಷ್ಮಣನೊಡನೆ ಶ್ರೀರಾಮ ಮಲಯ ಪರ್ವತಕ್ಕೆ ಬಂದಾಗ ಅವನನ್ನು ಸುಗ್ರೀವ ಕಂಡ. ಇವರನ್ನು ಕಂಡು “ವಾಲಿಯೇ ಇವರನ್ನು ತಮ್ಮನ್ನು ಕೊಲ್ಲಲೆಂದು ಕಳಿಸಿದ್ದಾನೆ” ಎಂದು ಸುಗ್ರೀವ ಮತ್ತಿತರರಿಗೆ ಹೆದರಿಕೆ, ತಲ್ಲಣ. ಹನುಮಂತ ಇವರೆಲ್ಲರನ್ನು ಸಮಾಧಾನ ಮಾಡಿದ. ಸುಗ್ರೀವನಿಗೂ ಆ ಸುಂದರ ಹಾಗೂ ಬಲಶಾಲಿಗಳಾಗಿದ್ದ ಯುವಕರು ಯಾರು ಎಂದು ತಿಳಿಯುವ ಕುತೂಹಲ. ಅವರೊಡನೆ ಮಾತನಾಡಲು ಯಾರು ಹೋಗಬೇಕು? ಹನುಮಂತನನ್ನೇ ಕಳುಹಿಸಿದ.

ಹನುಮಂತ ರಾಯಭಾರಿಯ ಕೆಲಸ ಮಾಡುವುದರಲ್ಲಿ ಬಹು ಪ್ರವೀಣ. ಇತರರ ಸ್ವಭಾವವನ್ನು ಸುಲಭವಾಗಿ ತಿಳಿದುಕೊಳ್ಳಬಲ್ಲ. ರಾಮ ಲಕ್ಷ್ಮಣರನ್ನು ನೋಡುತ್ತಲೇ ಇವರು ಮೋಸಗಾರರಲ್ಲ , ಮಹಾತ್ಮರು ಎಂದು ತಿಳಿದುಕೊಂಡ. ಬಹು ಮೃದುವಾದ, ಸಂತೋಷಕರವಾದ ಮಾತುಗಳಿಂದ ಅವರು ಯಾರು ಎಂದು ಪ್ರಶ್ನಿಸಿದ, ತಾನು ಯಾರು ಎಂದು ಹೇಳಿದ.

ಶ್ರೀರಾಮನಿಗೆ ಹನುಮಂತನ ಮಾತುಗಳನ್ನು ಕೇಳಿ ತುಂಬ ಸಂತಸವಾಯಿತು. ರಾಮನು ಲಕ್ಷ್ಮಣನಿಗೆ ಹೇಳಿದ: “ಲಕ್ಷ್ಮಣ, ಹನುಮಂತನ ಮಾತುಗಳನ್ನು ಕೇಳಿದೆಯ? ಕತ್ತಿಯನ್ನು ಹಿಡಿದು ನಿಂತಿರುವ ಶತ್ರುವೂ ಸಹ ಇವನ ಮಾತುಗಳಿಂದ ಶಾಂತನಾಗುತ್ತಾನೆ. ರಾಜನಿಗೆ ಇಂಥ ದೂತನಿದ್ದರೆ ಕಾರ್ಯಗಳೆಲ್ಲ ಸಫಲವಾಗಿ ನೆರವೇರುತ್ತವೆ.”

ರಾಮ ಲಕ್ಷ್ಮಣರಿಬ್ಬರೂ ಹನುಮಂತನೊಡನೆ ಸುಗ್ರೀವನ ಬಳಿಗೆ ಹೋದರು. ಈ ಧೀರ ಯುವಕರು ಸುಗ್ರೀವನಿಗೆ ರಾಜ್ಯವನ್ನು ಮತ್ತೆ ಕೊಡಿಸುತ್ತಾರೆ ಎಂಬ ಆಸೆ ಹನುಮಂತನಿಗೆ.

ಸುಗ್ರೀವನ ಮಂತ್ರಿಶ್ರೀರಾಮನ ದೂತ

ಶ್ರೀರಾಮನೂ ಸುಗ್ರೀವನೂ ಬಹುಬೇಗ ಸ್ನೇಹಿತರಾದರು. ವಾಲಿ, ಸುಗ್ರೀವರು ಹೋರಾಡುವಾಗ ರಾಮ ಮರೆಯಲ್ಲಿ ನಿಂತು ಬಾಣ ಬಿಟ್ಟು ವಾಲಿಯನ್ನು ಕೊಂದ.

ವಾಲಿಯು ಸಾಯುವ ಸ್ಥಿತಿಯಲ್ಲಿರುವ ವಿಷಯ ತಿಳಿದ ಅವನ ಪತ್ನಿ ತಾರೆ ವಾಲಿಯ ದೇಹದ ಮೇಲೆ ಬಿದ್ದು ಬಹು ದುಃಖದಿಂದ ಗೋಳಿಟ್ಟಳು. ಆಗ ಹನುಮಂತ ಅವಳಿಗೆ ನಮಸ್ಕರಿಸಿ, “ಪೂಜ್ಯಳೇ, ವಾಲಿ ತನ್ನ ದುಷ್ಕಾರ್ಯಗಳಿಂದ, ತಾನು ಮಾಡಿದ ಕರ್ಮದಿಂದಲೇ ಈ ಸ್ಥಿತಿಗೆ ಬಂದ. ಸುಗ್ರೀವನು ಇದಕ್ಕೆ ನಿಮಿತ್ತ ಮಾತ್ರ. ಆದ್ದರಿಂದ ವಾಲಿಯನ್ನು ಸುಗ್ರೀವ ಕೊಂದನೆಂದು ತಿಳಿಯಬೇಡ. ಪ್ರಪಂಚದಲ್ಲಿ ಯಾರೂ ಯಾವಾಗಲೂ ಬದುಕಿರುವುದಿಲ್ಲ. ನಿನ್ನ ಪುತ್ರ ಅಂಗದನನ್ನು ನೋಡಿಕೊಂಡು ಶಾಂತಳಾಗು” ಎಂದು ಸಮಾಧಾನಮಾಡಿದ.

ಸುಗ್ರೀವ ರಾಜನಾದ. ಅವನ ಕಷ್ಟಗಳೆಲ್ಲ ಮುಗಿದುವು. ರಾಜ್ಯ ಸಿಕ್ಕಿತು. ಕೂಡಲೆ ತಾನು ಸೀತೆಯನ್ನು ಹುಡುಕಿಸಿ ಕೊಡುತ್ತೇನೆಂದು ರಾಮನಿಗೆ ಕೊಟ್ಟಿದ್ದ ಭಾಷೆಯನ್ನು ಮರೆತೇ ಬಿಟ್ಟ. ತನ್ನ ರಾಜ್ಯಭಾರದ ಹೊಣೆಯನ್ನೆಲ್ಲ ಮಂತ್ರಿಗಳಿಗೆ ಒಪ್ಪಿಸಿ, ತಾನು ವಿಹಾರ, ಕೂಟಗಳಲ್ಲಿ ಸುಖವಾಗಿದ್ದುಬಿಟ್ಟ.

ಸುಗ್ರೀವನಿಗೆ ಎಚ್ಚರಿಕೆ ಕೊಟ್ಟವನು ಹನುಮಂತ. ಸಚಿವೋತ್ತಮನಾಗಿ ತನ್ನ ಕೆಲಸವನ್ನು ಸಮಯಕ್ಕೆ ಸರಿಯಾಗಿ ಅಚ್ಚುಕಟ್ಟಾಗಿ ಮಾಡಿದ. ಸುಗ್ರೀವನಿಗೆ, “ದೊರೆಯೇ, ನೀನು ಆಶಿಸುತ್ತಿದ್ದ ರಾಜ್ಯ, ಕೀರ್ತಿಗಳು ನಿನಗೆ ಈಗ ಲಭಿಸಿವೆ. ಸರಿಯಾದ ಸಮಯದಲ್ಲಿ ಮಿತ್ರರ ಕಾರ್ಯವನ್ನು ಮಾಡದೆ, ಅನಂತರ ಅವರಿಗಾಗಿ ಎಂಥ ದೊಡ್ಡ ಸಹಾಯ ಮಾಡಿದರೂ ಅದರಿಂದ ಪ್ರಯೋಜನವಾಗುವುದಿಲ್ಲ. ಸೀತಾದೇವಿಯನ್ನು ಕಾಣಬೇಕೆಂದು ರಾಮನು ಅತಿ ಆತುರದಿಂದಿದ್ದರೂ ನಿನಗಾಗಿ ಕಾಯುತ್ತಿದ್ದಾನೆ. ಈಗಾಗಲೇ ಕಾಲ ಮೀರಿದ್ದರೂ ಅವನು ಕೋಪಿಸಿಕೊಳ್ಳುವಂಥವನಲ್ಲ. ಈಗಲೇ ನಿನ್ನ ಸೈನ್ಯವನ್ನು ಸೀತೆಯನ್ನು ಹುಡುಕಲು ಕಳುಹಿಸು” ಎಂದು ಹೇಳಿದ.

ಹನುಮಂತನು, ‘ಈಗಲೇ ನಿನ್ನ ಸೈನ್ಯವನ್ನು ಸೀತೆಯನ್ನು ಹುಡುಕಲು ಕಳುಹಿಸು’ ಎಂದು ಸುಗ್ರೀವನಿಗೆ ಎಚ್ಚರಿಕೆ ಕೊಟ್ಟ.

ಸುಗ್ರೀವ ತನ್ನ ಸೇನಾಧಿಪತಿಗಳಲ್ಲೊಬ್ಬನಾದ ನೀಲನೆಂಬವನನ್ನು ಸೀತೆಯನ್ನು ಹುಡುಕಿಬರಲು ಕಳುಹಿಸಿದ. ಮತ್ತೆ ರಾಜಭೋಗದಲ್ಲಿ ಮುಳುಗಿಬಿಟ್ಟ.

ಮಳೆಗಾಲ ಕಳೆಯಿತು; ಶರದೃತು ಪ್ರಾರಂಭವಾಯಿತು. ಸೀತೆ ಎಲ್ಲಿರುವಳೊ, ಎಷ್ಟು ಕಷ್ಟದಲ್ಲಿದ್ದಾಳೊ, ಎಷ್ಟು ದುಃಖಪಡುತ್ತಿದ್ದಾಳೊ ಎಂದು ರಾಮನಿಗೆ ಚಿಂತೆ. ಲಕ್ಷ್ಮಣನಲ್ಲಿ ತನ್ನ ದುಃಖವನ್ನು ಹೇಳಿಕೊಂಡ. ಬಿಸಿರಕ್ತದ ಲಕ್ಷ್ಮಣನಿಗೆ ಸುಗ್ರೀವನ ಮೇಲೆ ಭಾರಿ ಕೋಪ ಬಂತು. ಸುಗ್ರೀವನನ್ನು ಕಾಣಲು ಬಂದ. ಕೋಪದಿಂದ ಕೆರಳಿದ ಲಕ್ಷ್ಮಣನ ರೂಪದಿಂದ ವಾನರರೆಲ್ಲರೂ ಭಯದಿಂದ ನಡುಗಿದರು. ಸುಗ್ರೀವನಿಗೂ ಭಯದಿಂದ ಏನು ಮಾಡಬೇಕೆಂದು ತೋಚಲಿಲ್ಲ.

ಮತ್ತೆ ಹನುಂತನೇ ಸುಗ್ರೀವನಿಗೆ ಸೂಕ್ತ ಸಲಹೆ ಕೊಟ್ಟ. “ನಿನ್ನ ವಿಷಯದಲ್ಲಿ ಶ್ರೀರಾಮನಿಗೆ ನಿಜವಾಗಿಯೂ ಕೋಪವಿರಲಾರದು. ತನ್ನ ಕೆಲಸ ತಡವಾಗುತ್ತಿರುವುದರಿಂದ ಲಕ್ಷ್ಮಣನನ್ನು ಕಳುಹಿಸಿರಬಹುದು. ನಮಗಿಂತ ಬಲಿಷ್ಠರಾದವರು ಕೋಪಗೊಂಡಾಗ ನಾವು ಕೋಪಗೊಳ್ಳಬಾರದು. ಇದರಿಂದ ಅವರ ಕೋಪ ಮತ್ತಷ್ಟು ಹೆಚ್ಚುತ್ತದೆ. ನಾವು ಇಂಥ ಸಮಯದಲ್ಲಿ ಕೋಪಗೊಂಡ ಬಲಿಷ್ಠರನ್ನು ಶಾಂತರಾಗುವಂತೆ ಮಾಡಬೇಕು. ಜೊತೆಗೆ ಶ್ರೀರಾಮ ನಿನಗೆ ಸಹಾಯವನ್ನು ಮಾಡಿರುವುದರಿಂದ ನೀನು ಅವನಲ್ಲಿ ಅತ್ಯಂತ ಗೌರವದಿಂದ ನಡೆದುಕೊಳ್ಳಬೇಕು” ಎಂದು ಬುದ್ಧಿ ಹೇಳಿದ.

ಈ ಬಾರಿಯ ಬೋಧನೆ ಸುಗ್ರೀವನ ತಲೆಗೆ ನಾಟಿತು. ಲಕ್ಷ್ಮಣನನ್ನು ಸಮಾಧಾನ ಮಾಡಿ ತನ್ನ ಸಮಸ್ತ ಸೇನೆಯೊಂದಿಗೆ ರಾಮನ ಬಳಿಗೆ ಹೋದ. ತನ್ನ ಸೈನ್ಯವನ್ನು ನಾಲ್ಕೂ ದಿಕ್ಕಿಗೆ ಸೀತೆಯನ್ನು ಹುಡುಕಿಕೊಂಡು ಬರಲು ಕಳುಹಿಸಿದ. ಹೊರಟಿತು ಸಮುದ್ರದಂತಹ ಮಹಾ ಸೈನ್ಯ. – ಉತ್ಸಾಹದಿಂದ ಕೂಗುತ್ತ ಆರ್ಭಟಿಸುತ್ತ , ದಿಕ್ಕುಗಳನ್ನು ನಡುಗಿಸುತ್ತ ಹೊರಟಿತು. ಶ್ರೀರಾಮನು ತನ್ನ ಬೆರಳಲ್ಲಿದ್ದ ಉಂಗುರವನ್ನು ತೆಗೆದು ಹನುಮಂತನ ಕೈಗಿತ್ತು, “ಸೀತೆ ನಿನ್ನನ್ನು ಕಂಡು ಹೆದರಬಹುದು. ಅಂಥ ಸಮಯದಲ್ಲಿ ನೀನು ಈ ಉಂಗುರವನ್ನು ತೋರಿಸು. ನಿನ್ನ ಶಕ್ತಿಯನ್ನೇ ನಾವು ನಂಬಿದ್ದೇವೆ” ಎಂದ. ಹನುಮಂತ ಆ ಉಂಗುರವನ್ನು ತೆಗೆದು ತಲೆಯಲ್ಲಿಟ್ಟುಕೊಂಡು ಶ್ರೀರಾಮನಿಗೆ ನಮಸ್ಕರಿಸಿ ಹೊರಟನು.

ಸಮುದ್ರ ಅಡ್ಡವಾಯಿತಲ್ಲ!

ಹನುಮಂತ, ಅಂಗದ, ಜಾಂಬವಂತ ಮೊದಲಾದವರು ಸೀತೆಯನ್ನು ಹುಡುಕುತ್ತಾ ದಕ್ಷಿಣ ದಿಕ್ಕಿಗೆ ಹೊರಟರು. ಸುಗ್ರೀವನು ಸೀತೆಯನ್ನು ಒಂದು ತಿಂಗಳೊಳಗೆ ಹುಡುಕಿ ಬರಬೇಕೆಂದು ಹೇಳಿದ್ದ. ಅಲೆದಲೆದು ಬಳಲಿದರು ವಾನರರು. ಕಡೆಗೆ ಸಮುದ್ರ ತೀರಕ್ಕೆ ಬಂದರು. ಎದುರಿಗೆ ವಿಶಾಲವಾದ ಸಮುದ್ರ ಭೋರ್ಗರೆಯುತ್ತಿತ್ತು.

ಸುಗ್ರೀವ ಕೊಟ್ಟಿದ್ದ ಕಾಲಾವಧಿ ಕಳೆದು ಹೋಗಿದೆ. ಏನು ಮಾಡಬೇಕು? ಕಪಿವೀರರು ದಿಕ್ಕು ತೋರದೆ ಕುಳಿತರು. ಕಿಷ್ಕಿಂಧೆಗೆ ಹಿಂತಿರುಗಿದರೆ ಸುಗ್ರೀವ ತಮ್ಮನ್ನು ಸುಮ್ಮನೆ ಬಿಡುವುದಿಲ್ಲ. ಆದ್ದರಿಂದ ಉಪವಾಸದಿಂದ ಆ ಸಾಗರ ತೀರದಲ್ಲಿಯೇ ಪ್ರಾಣ ಬಿಡೋಣ ಎಂದು ಅಂಗದ ಸೂಚಿಸಿದ. ಹನುಮಂತನು, “ಅಯ್ಯಾ, ಇದು ಸರಿಯಲ್ಲ. ಹಿಂದಕ್ಕೆ ಹೋದರೆ ಸುಗ್ರೀವನು ಶಿಕ್ಷೆ ಮಾಡುವುದಿಲ್ಲ” ಎಂದು ಎಷ್ಟೋ ರೀತಿಯಲ್ಲಿ ಹೇಳಿದನು. ಆದರೆ ನಿರಾಶೆಗೊಂಡ ಕಪಿಗಳು ಇವನ ಮಾತು ಕೇಳಲಿಲ್ಲ. ಎಲ್ಲರೂ ದರ್ಭೆಯನ್ನು ಹಾಸಿ ಉತ್ತರಕ್ಕೆ ತಲೆ ಮಾಡಿ ಮಲಗಿಯೇ ಬಿಟ್ಟರು.

ಅಷ್ಟು ಹೊತ್ತಿಗೆ ಸಂಪಾತಿ ಎಂಬಾತ ಅಲ್ಲಿಗೆ ಬಂದ. ಅವನಿಂದ ವಾನರರಿಗೆ ರಾವಣನು ಸೀತೆಯನ್ನು ಲಂಕೆಯಲ್ಲಿ ಸೆರೆ ಇಟ್ಟಿದ್ದಾನೆ ಎಂದು ತಿಳಿಯಿತು.

ವಾನರರ ಸಂತಸಕ್ಕೆ ಎಲ್ಲೆಯೇ ಇಲ್ಲ. “ಓಹೋ, ಸೀತೆಯ ವಿಷಯ ತಿಳಿಯಿತು” ಎಂದು ಕುಣಿದಾಡಿದರು. ಸಂಭ್ರಮದಿಂದ ಅವರೆಲ್ಲರೂ ಸಾಗರದ ಕಡೆ ತಿರುಗಿದರು.  ಆದರೆ, ಸಾಗರವನ್ನು ದಾಟುವವರಾರು?

ಒಬ್ಬ “ನಾನು ಹತ್ತು ಯೋಜನ ಹಾರಬಲ್ಲೆ” ಎಂದ.

ಮತ್ತೊಬ್ಬ, “ಇಪ್ಪತ್ತು ಯೋಜನ ಹಾರಬಲ್ಲೆ” ಎಂದ.

ಜಾಂಬವಂತ, ಮಹಾವೀರ. ಆದೆ ವಯಸ್ಸಾದವನು. ಅವನೆಂದ, “ನಾನು ಯುವಕನಾಗಿದ್ದಾಗ ಎಷ್ಟು ದೂರ ಬೇಕಾದರೂ ಹಾರುತ್ತಿದ್ದೆ. ಈಗ ವಯಸ್ಸಾಯಿತು. ತೊಂಬತ್ತು ಯೋಜನ ಹಾರಬಲ್ಲೆ. ಆದರೆ, ಸಮುದ್ರ ನೂರು ಯೋಜನ ಇದೆಯಲ್ಲ!”

ಅಂಗದ ಹೇಳಿದ: “ನಾನು ನೂರು ಯೋಜನವೇನೊ ಹಾರಬಲ್ಲೆ. ಲಂಕೆ ಸೇರಿಬಿಡುತ್ತೇನೆ. ಆದರೆ ಹಿಂದಕ್ಕೆ ಬರುವಷ್ಟು ಶಕ್ತಿ ಇರುವುದೊ ಇಲ್ಲವೊ ಕಾಣೆ!”

ಮುದುಕ ಜಾಂಬವಂತ ಅವರನ್ನೆಲ್ಲ ಸಮಾಧಾನ ಮಾಡುತ್ತಾ, “ಲಂಕೆಗೆ ಹಾರಿ ವಾಪಸ್ಸು ಬರಬಲ್ಲ ಮಹಾವೀರ ಹನುಮಂತನೊಬ್ಬನೇ. ಅವನನ್ನು ಪ್ರೋತ್ಸಾಹಿಸಿ ಬರುತ್ತೇನೆ” ಎಂದು ಎದ್ದ. ಹನುಮಂತ ಸ್ವಲ್ಪ ದೂರದಲ್ಲಿ ಒಬ್ಬನೇ ಕುಳಿತು ಮಾತನಾಡದೆ ಸಮುದ್ರವನ್ನೇ ನೋಡುತ್ತಿದ್ದ.

ಹನುಮಂತನಿಗೆ ಚಿಕ್ಕವನಿದ್ದಾಗ – “ನಿನ್ನ ಪರಾಕ್ರಮ, ಸಾಮರ್ಥ್ಯಗಳನ್ನು ಬೇರೆಯವರು ನಿನಗೆ ತಿಳಿಸುವವರೆಗೆ ನಿನಗೆ ಅದು ಗೊತ್ತಾಗುವುದಿಲ್ಲ” ಎಂದು ಋಷಿಗಳು ಶಾಪ ಕೊಟ್ಟಿದ್ದರಲ್ಲ? ಜಾಂಬವಂತ ಹನುಮಂತನ ಸಾಮರ್ಥ್ಯವನ್ನು ಹೊಗಳಿದ. “ನಿನ್ನ ಬಲ, ಬುದ್ಧಿ, ತೇಜಸ್ಸು ಪ್ರಪಂಚದಲ್ಲಿ ಬೇರಾವ ಪ್ರಾಣಿಗೂ ಇಲ್ಲ. ಅಂತಹುದರಲ್ಲಿ ನಿನ್ನನ್ನೇ ನೀನು ತಿಳಿಯದೇ ಏಕೆ ಕುಳಿತಿರುವೆ? ನೀನು ಈ ಸಮುದ್ರವನ್ನು ಹಾರಿಬಿಡಬಲ್ಲೆ” ಎಂದು ಪ್ರೋತ್ಸಾಹಿಸಿದ.

ಹನುಮಂತನಿಗೆ ಯಾವುದು ಅಡ್ಡ?

ಹನುಮಂತನಿಗೆ ತನ್ನ ಶಕ್ತಿ ಸಾಮರ್ಥ್ಯಗಳ ಅರಿವು ಉಂಟಾಗುತ್ತಿದ್ದಂತೆ ಅಪಾರ ಉತ್ಸಾಹ ಮೂಡಿತು. ಎದ್ದು ನಿಂತು ಒಮ್ಮೆ ಎಲ್ಲರನ್ನೂ  ನೋಡಿ ಎತ್ತರಕ್ಕೆ ಬೆಳೆಯತೊಡಗಿದ. ಇತರ ವಾನರರು ಬೆರಗಾದರು. ವಾನರರ ಸ್ತುತಿ ಪ್ರೋತ್ಸಾಹಗಳು ಹೆಚ್ಚುತ್ತಿದ್ದಂತೆ ಹನುಮಂತನು ತನ್ನ ದೇಹವನ್ನು ಬೆಳೆಸಿಕೊಳ್ಳುತ್ತಾ ಹೋದ.

ನೂರು ಯೋಜನ ದೂರ ಹಾರಲು ಬೇಕಾದಷ್ಟು ಎತ್ತರಕ್ಕೆ ಬೆಳೆದ ಹನುಮಂತ. ಆದರೂ ವಿನಯದ ಮೂರ್ತಿ ಅವನು. ಅಲ್ಲಿದ್ದ ವೃದ್ಧರಿಗೆಲ್ಲ ವಿನಯದಿಂದ ನಮಸ್ಕರಿಸಿದ. ಹಿಗ್ಗಿನಿಂದ ವಾನರರನ್ನು ಕುರಿತು “ಭೂಮಿಯನ್ನೇ ಮುಟ್ಟದೆ ಆಕಾಶದಲ್ಲೇ ಸಂಚರಿಸಬಲ್ಲ ವಾಯುದೇವನ ಮಗ ನಾನು! ಬೇಕಿದ್ದರೆ ಈ ಸಮುದ್ರದ ನೀರನ್ನೆಲ್ಲ ಮೇಲಕ್ಕೆರಚಿ ಮೂರು ಲೋಕಗಳೂ ನೀರಲ್ಲಿ ತೇಲಾಡುವಂತೆ ಮಾಡಬಲ್ಲೆ. ಮಿಂಚಿನಂತೆ ಹಾರಿ ಸೀತಾದೇವಿಯನ್ನು ಕಂಡೇ ಬರುತ್ತೇನೆ” ಎಂದು ಗುಡುಗಿದ.  ಮಹೇಂದ್ರ ಪರ್ವತದ ಮೇಲೆ ನಿಂತು ದೇಹವನ್ನು ಹಿಗ್ಗಿಸಿ ಹಾರಿದ.

ಹನುಮಂತನ ಈ ಸಾಗರೋಲ್ಲಂಘನವನ್ನು ಕಂಡು ದೇವತೆಗಳಿಗೆ ಅತ್ಯಂತ ಆಶ್ಚರ್ಯವಾಯಿತು. ಇವನ ಬಲಪರೀಕ್ಷೆ ಮಾಡಬೇಕೆಂದು ಯೋಚಿಸಿದ ದೇವತೆಗಳು ಸುರಸೆ ಎಂಬ ನಾಗಮಾತೆಯೊಬ್ಬಳನ್ನು  ಹನುಮಂತನ ಪ್ರಯಾಣಕ್ಕೆ ವಿಘ್ನ ತರಲು ನೇಮಿಸಿದರು. ಇವಳು ಭಯಂಕರ ರಾಕ್ಷಸಿಯ ವೇಷ ಧರಿಸಿ ಹನುಮಂತನಿಗೆ ಅಡ್ಡ ನಿಂತು, “ದೇವತೆಗಳು ನಿನ್ನನ್ನು ನನಗೆ ಆಹಾರವಾಗಿ ಕೊಟ್ಟಿದ್ದಾರೆ. ನಾನು ನಿನ್ನನ್ನು ತಿಂದುಬಿಡುತ್ತೇನೆ” ಎಂದು ಆರ್ಭಟಿಸಿದಳು. “ನೀನು ನನ್ನ ಬಾಯೊಳಗೆ ಹೋಗದೆ ಹಾಗೆಯೇ ಹೋಗುವಂತೆಯೇ ಇಲ್ಲ” ಎಂದಳು. ಹನುಮಂತ ತನ್ನ ದೇಹವನ್ನು ಇನ್ನೂ ಬೆಳೆಸಿ “ನಿನ್ನ ಬಾಯನ್ನೂ ದೊಡ್ಡದು ಮಾಡಿ ನನ್ನನ್ನು ನುಂಗು” ಎಂದ.

ಸುರಸೆ ತನ್ನ ಬಾಯನ್ನು ಹನುಮಂತನ ಆಕಾರದಷ್ಟೆ ಅಗಾಧವಾಗಿ ತೆರೆದು ನಿಂತಳು.

ಹನುಮಂತನ ದೇಹ ಬೆಳೆದೇ ಬೆಳೆಯಿತು. ಸುರಸೆಯ ಬಾಯಿಯು ಅಗಲವಾಗುತ್ತಾ ಹೋಯಿತು.

ಹನುಮಂತ ಬುದ್ಧಿವಂತ. ಹೀಗೆಯೇ ಆದರೆ ಇದಕ್ಕೆ ಕೊನೆಯೇ ಇಲ್ಲ ಎಂದುಕೊಂಡ. ಇದ್ದಕ್ಕಿದ್ದಂತೆ ಹೆಬ್ಬೆರಳಿನಷ್ಟು ಪುಟ್ಟದಾಗಿ ಅವಳ ವಿಶಾಲವಾದ ಬಾಯೊಳಗೆ ಹೋಗಿ ಹೊರಬಂದುಬಿಟ್ಟ. ಅವಳೆದುರು ನಿಂತು “ಇಗೋ, ನಿನ್ನ ಬಾಯನ್ನು ಪ್ರವೇಶಿಸಿ ಹೊರಬಂದೆ. ಇನ್ನು ನಾನು ಮುಂದೆ ಹೋಗಲು ಅವಕಾಶಕೊಡು” ಎಂದ. ಸುರಸೆ ಅವನ ಚಾತುರ್ಯಕ್ಕೆ ಮೆಚ್ಚಿ ಜಯಕೋರಿ ಕಳುಹಿಸಿಕೊಟ್ಟಳು.

ಮಹೇಂದ್ರ ಪರ್ವತದ ಮೇಲೆ ನಿಂತು ಹನುಮಂತನು ದೇಹವನ್ನು ಹಿಗ್ಗಿಸಿ ಹಾರಿದ.

ಹನುಮಂತ ಮುಂದೆ ಸಾಗಿದ. ಆದರೆ ಇನ್ನೊಂದು ವಿಘ್ನ! ಸಿಂಹಿಕೆ ಎಂಬವಳೊಬ್ಬ ರಾಕ್ಷಸಿ. ಅವಳಿಗೆ ಒಂದು ವಿಚಿತ್ರ ಶಕ್ತಿ – ಸಮುದ್ರದ ಮೇಲೆ ಹಾರುವ ಪ್ರಾಣಿಗಳ ನೆರಳನ್ನು ಕೆಳಗಿನಿಂದಲೇ ಎಳೆದು ಆ ಪ್ರಾಣಿಗಳನ್ನು ತಿಂದು ಬಿಡುವಳು! ತನಗೆ ಆಹಾರ ಸಿಕ್ಕಿತೆಂದು ಸಂತಸದಿಂದ ಹನುಮಂತನ ನೆರಳನ್ನು ಎಳೆದಳು. ಹನುಮಂತ ಅವಳ ಬಾಯೊಳಗೆ ನುಗ್ಗಿದ, ಒಳಗೆ ತನ್ನ ದೇಹ ಬೆಳೆಸಿ ಆ ರಕ್ಕಸಿಯ ದೇಹವನ್ನು ಸೀಳಿ ಹೊರಕ್ಕೆ ಹಾರಿದ.

ಹನುಮಂತನಿಗೆ ಸ್ವಲ್ಪ ದೂರದಲ್ಲಿ ಲಂಕೆ ಕಾಣಿಸಿತು. ಅವನ ಆನಂದಕ್ಕೆ ಮಿತಿಯೇ ಇಲ್ಲ. ಆದರೆ ಈ ಬಹು ದೊಡ್ಡ ಆಕಾರದಲ್ಲಿ ಲಂಕೆಯ ಒಳಕ್ಕೆ ಹೋದರೆ ಎಲ್ಲರಿಗೆ ಕಾಣುತ್ತದೆ, ಇದು ಬೇಡ ಎಂದು ಯೋಚಿಸಿ ಮೊದಲಿನ ಸಾಧಾರಣ ಆಕಾರದಲ್ಲಿ ಹನುಮಂತ ಲಂಕೆಯ ತೀರದಲ್ಲಿದ್ದ ಪರ್ವತದ ಮೇಲಿಳಿದ.

ಲಂಕೆಯನ್ನು ಹೊಕ್ಕ

ರಾತ್ರಿ, ಇನ್ನೇನು ಹನುಮಂತ ಲಂಕೆಯನ್ನು ಪ್ರವೇಶಿಸಬೇಕು. ಬಾಗಿಲಲ್ಲೇ ದೇವತೆಯೊಬ್ಬಳು ತಡೆದಳು.

ಲಂಕೆಯನ್ನು ಕಾಯುವ ದೇವತೆ ಅವಳು. “ಯಾರು ನೀನು?” ಎಂದು ಗುಡುಗಿದಳು. “ಒಳಕ್ಕೆ ಹೋಗಬೇಕಾದರೆ ನನ್ನನ್ನು ಸೋಲಿಸಬೇಕು” ಎಂದಳು.

ಹನುಮಂತನಿಗೆ ತುಂಬ ಸಿಟ್ಟು ಬಂದಿತು. ತನ್ನ ಎಡಗೈ ಮುಷ್ಟಿಯಿಂದ ಅವಳ ಮುಖಕ್ಕೆ ಅಪ್ಪಳಿಸಿದ. ಹನುಮಂತನ ಹೊಡೆತದಿಂದ ಆಕೆ ತತ್ತರಿಸಿದಳು. ಪ್ರಾಣ ಉಳಿಸುವಂತೆ ಕೇಳಿಕೊಂಡಳು. “ಬ್ರಹ್ಮ ಹೇಳಿದ್ದ, ನಿನ್ನನ್ನು ವಾನರನೊಬ್ಬ ಸೋಲಿಸಿದಾಗ ಲಂಕೆಗೆ ವಿನಾಶ ಕಾಲ ಬಂದ ಹಾಗೆ ಎಂದು; ಈಗ ಆ ಕಾಲ ಬಂದಿದೆ ಎಂದು ಕಾಣುತ್ತದೆ. ಒಳಕ್ಕೆ ಹೋಗು. ಸೀತೆಯನ್ನು ಹುಡುಕು” ಎಂದಳು.

ಸೀತೆ ಎಲ್ಲಿ?

ಬಹು ವೈಭವದ ಊರು ಲಂಕೆ. ನೋಡಿದಷ್ಟೂ ಇನ್ನಷ್ಟು ನೋಡಬೇಕು ಎನ್ನುವ ಸೊಗಸು, ಸಂಪತ್ತು. ಭವ್ಯ ಕಟ್ಟಡಗಳು, ಸುಂದರ ವನಗಳು. ಆದರೆ ಹನುಮಂತನಿಗೆ ಸೀತಾದೇವಿಯನ್ನು ಹುಡುಕುವುದೇ ಮುಖ್ಯ ಕಾರ್ಯ: ಊರಿನ ಸೊಬಗಿಗೆ ಹೆಚ್ಚು ಗಮನ ಕೊಡಲಿಲ್ಲ. ಕುಂಭ ಕರ್ಣರೇ ಮೊದಲಾದ ಪ್ರಮುಖ ರಾಕ್ಷಸರ ಮನೆಗಳಲ್ಲಿ ಸೀತೆಯನ್ನು ಹುಡುಕಿದ. ಎಲ್ಲಿಯೂ ಅವಳು ಕಾಣಲಿಲ್ಲ. ಅಲ್ಲಿಂದ ಹನುಮಂತ ರಾವಣನ ಅರಮನೆಯನ್ನೇ ಪ್ರವೇಶಿಸಿದ. ಏನು ಐಶ್ವರ್ಯ,ಏನು ಸೊಗಸು, ಏನು ವೈಭವ! ಬೆರಗಾದ ಹನುಮಂತ. ಅರಮನೆಯನ್ನೆಲ್ಲ ಮೂಲೆಮೂಲೆ ಬಿಡದೆ ಹುಡುಕಿದ, ಸೀತೆ ಕಾಣಲಿಲ್ಲ.

ಹನುಮಂತನ ಚಿಂತೆ ಹೆಚ್ಚಾಯಿತು. ರಾಮ, ಸುಗ್ರೀವರು ಹನುಮಂತ ಸೀತೆಯ ಸುದ್ದಿಯನ್ನು ತಂದೇ ತರುತ್ತಾನೆ ಎಂದು ಭರವಸೆಯಿಂದ ಕಾಯುತ್ತಿರುತ್ತಾರೆ. ಅವರಿಗೆ ಏನು ಉತ್ತರ ಕೊಡಲಿ ಎಂದು ಯೋಚಿಸುತ್ತಾ, ಇಂಥ ಸಮಯದಲ್ಲಿ ತಾನು ಉತ್ಸಾಹ ಕಳೆದುಕೊಳ್ಳಬಾರದು ಎಂದು ಮತ್ತೊಮ್ಮೆ ಹುಡುಕಿದ..

ಎಲ್ಲಾ ಕಾಣಲಿಲ್ಲ ಸೀತಾಮಾತೆ.

ಹನುಮಂತನಿಗೆ ಕಳವಳವಾಯಿತು. ಅವಳು ರಾವಣನೊಂದಿಗೆ ಬರುತ್ತಿದ್ದಾಗ ತಲೆತಿರುಗಿ ಸಾಗರದಲ್ಲಿ ಬಿದ್ದಿರಬಹುದೇ? ಅಥವಾ ಸಾಗರದ ವೈಶಾಲ್ಯ ಕಂಡು ಸೀತೆಯ ಕೋಮಲ ಹೃದಯ ಒಡೆದಿರಬಹುದೇ? ಇಲ್ಲ, ತನ್ನನ್ನು ಮದುವೆಯಾಗಲಿಲ್ಲವೆಂದು ರಾವಣ ಅವಳನ್ನು ತಿಂದು ಬಿಟ್ಟಿರಬಹುದೇ? ಯೋಚನೆಗಳು ಮುತ್ತಿದವು.

ಸೀತೆಗೆ ಆನಂದ

ದೂರದಲ್ಲಿ ಅಶೋಕವನ ಕಾಣಿಸಿತು. ಆಹಾ, ಅದು ಒಂದನ್ನು ನೋಡದೆ ಬಿಟ್ಟೆ ಎಂದುಕೊಂಡು ಹನುಮಂತ ಅಲ್ಲಿಗೆ ಹಾರಿದ. ಹುಡುಕಿದ ಹುಡುಕಿದ, ವನವನ್ನೆಲ್ಲ ಹುಡುಕಿದ. ಕಡೆಗೂ ಕಂಡಳು ಸೀತಾದೇವಿ. ಹನುಮಂತನ ಹೃದಯ ಸಂತೋಷದಿಂದ ಉಬ್ಬಿತು. ಮಾಸಿದ ಬಟ್ಟೆಗಳನ್ನುಟ್ಟು ಮರ ಒಂದರ ಕೆಳಗೆ ಕುಳಿತಿದ್ದಳು ಸೀತಾಮಾತೆ. ಅವಳ ಸ್ಥಿತಿಯಿಂದ ಹನುಮಂತನಿಗೆ ಅತ್ಯಂತ ದುಃಖ-ಕೋಪ ಉಕ್ಕಿದವು. ಸೀತೆ ಯಾವ ಮರದ ಕೆಳಗೆ ಕುಳಿತಿದ್ದಳೋ ಆ ಮರದ ಮೇಲೆಯೇ ಹನುಮಂತ ಕುಳಿತ.

ಬೆಳಗಾಯಿತು, ರಾವಣಾಸುರ ಸೀತೆಯನ್ನು ನೋಡಲು ಬಂದ. ಸೀತೆಗೆ ಅವನೊಂದಿಗೆ ನೇರವಾಗಿ ಮಾತಾಡಲು ಇಷ್ಟವೇ ಇಲ್ಲ. ಹಂಚಿಕಡ್ಡಿಯೊಂದನ್ನು ಕೈಯ್ಯಲ್ಲಿ ಹಿಡಿದು ಅದರೊಂದಿಗೆ ಮಾತನಾಡುವಂತೆ ರಾವಣನಿಗೆ ಉತ್ತರ ಕೊಟ್ಟಳು. ರಾವಣ ತುಂಬ ಕೋಪದಿಂದ ಮಾತನಾಡಿ ಹಿಂದಕ್ಕೆ ಹೋದ. ಸೀತಾದೇವಿ ದುಃಖದಿಂದ ಪ್ರಾಣ ತ್ಯಜಿಸಲು ನಿಶ್ಚಯಿಸಿದಳು.

ಮರದ ಮೇಲೆ ಕುಳಿತು ಹನುಮಂತ ಎಲ್ಲವನ್ನೂ ಕೇಳುತ್ತಿದ್ದ, ನೋಡುತ್ತಿದ್ದ. ಈಗ ಅವಳೊಡನೆ ಮಾತನಾಡಬೇಕೆಂದು ತೀರ್ಮಾನಿಸಿದ. ಆದರೆ ಸೀತೆಯನ್ನು ಒಮ್ಮಿಂದೊಮ್ಮೆ ಮಾತನಾಡಿಸಿದರೆ ಅವಳು ಹೆದರಿ ಬಿಟ್ಟರೆ? ಒಂದು ಉಪಾಯ ಮಾಡಿದ. ಸೀತಾದೇವಿಗೆ ಕೇಳಿಸುವಂತೆ, ಮರದ ಮೇಲೆಯೇ ಕುಳಿತು, ಶ್ರೀರಾಮನ ಕಥೆಯನ್ನು ಹೇಳಿದ. “ಸೀತೆಯನ್ನೇ ಇಲ್ಲಿ ನೋಡಿದಂತಾಯಿತಲ್ಲ” ಎಂದು ಅಚ್ಚರಿಪಟ್ಟವನಂತೆ ಹೇಳಿದ.

ಮರದ ಮೇಲಿನಿಂದ ಧ್ವನಿಯನ್ನು ಕೇಳಿದಾಗ ಸೀತೆಗೆ ಭಯವಾಯಿತು. ಆಗತಾನೆ ರಾವಣ ಹೋಗಿದ್ದ. ಇದೇನು ರಾಕ್ಷಸರ ಮಾಯೆಯೊ ಎಂದು ಹೆದರಿದಳು. ಆದರೆ ಶ್ರೀರಾಮ-ಲಕ್ಷ್ಮಣರ ಹೆಸರುಗಳು ಕೇಳಿದುವು, ಅವರ ಕಥೆ ಕೇಳಿಸಿತು. ಆಶ್ಚರ್ಯದಿಂದ ತಲೆ ಎತ್ತಿ ನೋಡಿದಳು. ಹನುಮಂತ ಮೆಲ್ಲಗೆ ಮರವಿಳಿದು ಕೆಳಗೆ ಬಂದು ಸೀತೆಗೆ ವಿನಯದಿಂದ ನಮಸ್ಕರಿಸಿದ. ಮತ್ತೊಮ್ಮೆ ತಾನು ರಾಮನ ದೂತನೆಂದು ಹೇಳಿ ಶ್ರೀರಾಮನನ್ನು ಹೊಗಳಿದ. ಸೀತೆಗೆ ಪರಮ ಸಂತೋಷವಾಯಿತು. ಹನುಮಂತ ಶ್ರೀರಾಮ ಕೊಟ್ಟಿದ್ದ ಉಂಗುರವನ್ನು ಅವಳಿಗೆ ತೋರಿಸಿದ. ರಾಮನ ಉಂಗುರವನ್ನು ನೋಡಿ ಅವಳಿಗೆ ತುಂಬ ದುಃಖವಾಯಿತು. ಹನುಮಂತನು “ಶ್ರೀರಾಮನು ಖಂಡಿತ ನಿನ್ನನ್ನು ಕರೆದೊಯ್ಯುತ್ತಾನೆ; ಚಿಂತಿಸಬೇಡ. ಅಥವಾ ಅಲ್ಲಿಯವರೆಗಾದರೂ ಏಕೆ ಕಾಯಬೇಕು? ಈಗಲೇ ನನ್ನ ಬೆನ್ನ ಮೇಲೆ ನಿನ್ನನ್ನು ಹೊತ್ತುಕೊಂಡು ಹೋಗಿಬಿಡುವೆ. ನಿನ್ನೊಬ್ಬಳನ್ನೇ ಅಲ್ಲ, ರಾವಣಸಹಿತ ಇಡೀ ಲಂಕೆಯನ್ನೇ ಕಿತ್ತು ಒಯ್ಯಬಲ್ಲೆ” ಎಂದ. ಸೀತೆ ಅವನನ್ನು ಸಮಾಧಾನ ಮಾಡಿ “ರಾಮ ಲಕ್ಷ್ಮಕಣರನ್ನೇ ಇಲ್ಲಿಗೆ ಕರೆದುಕೊಂಡು ಬಾ” ಎಂದು ತನ್ನ ಗುರುತಿಗಾಗಿ ಚೂಡಾಮಣಿಯನ್ನು ಕೊಟ್ಟಳು.

ರಾವಣ, ಯೋಚಿಸಿ ನೋಡು

ಹನುಮಂತ ಬಂದಿದ್ದ ಕೆಲಸ ಮುಗಿಸಿದ. ಆದರೆ ಕೆಲವು ಪ್ರಮುಖ ರಾಕ್ಷಸರನ್ನು ಕೊಂದು ಶತ್ರುಬಲ ಎಷ್ಟಿದೆಯೆಂದು ತಿಳಿದು ಹೋಗಬೇಕು, ರಾವಣನನ್ನು ಕಂಡು ಎಚ್ಚರಿಸಿ ಹೋಗುವುದೂ ಒಳ್ಳೆಯದು ಎನಿಸಿತು.

ರಾವಣನಿಗೆ ಅತ್ಯಂತ ಪ್ರಿಯವಾಗಿದ್ದ ಅಶೋಕವನವನ್ನು ಧ್ವಂಸ ಮಾಡಿದರೆ ರಾವಣನನ್ನು ಸಿಟ್ಟಿಗೆಬ್ಬಿಸಬಹುದು ಎಂದು ತೋರಿತು.

ಸರಿ, ಅಶೋಕವೃಕ್ಷಗಳನ್ನೆಲ್ಲ ಬುಡಮೇಲು ಮಾಡಿದ, ಸುಂದರ ಪುಷ್ಪಗಳನ್ನು ಬಿಟ್ಟಿದ್ದ ಬಳ್ಳಿಗಳನ್ನು ಕಿತ್ತೆಸೆ, ಗಿಡಗಳನ್ನೆಲ್ಲಾ ತುಳಿದ. ಇದನ್ನು ಕಂಡ ರಾಕ್ಷಸರು ಹೆದರಿ ರಾವಣನ ಬಳಿಗೆ ಓಡಿದರು.

ರಾವಣ ಭಯಂಕರ ಕೋಪದಿಂದ ಕಿಡಿಕಿಡಿಯಾದ. ಆದರೆ ಹನುಮಂತ ರಾವಣನು ಕಳುಹಿಸಿದ ರಾಕ್ಷಸರನ್ನೆಲ್ಲಾ ಕ್ಷಣಮಾತ್ರದಲ್ಲಿ ನಿರ್ನಾಮ ಮಾಡಿದ.

ರಾವಣ ತನ್ನ ಮಗ ಇಂದ್ರಜಿತುವನ್ನೇ ಹನುಮಂತನನ್ನು ಹಿಡಿದು ತರಲು ಕಳುಹಿಸಿದ. ಅವನು ಮಹಾಶೂರ. ಹನುಮಂತನೊಂದಿಗೆ ಕೊಂಚ ಹೊತ್ತು ಹೋರಾಡಿ ಅನಂತರ ಬ್ರಹ್ಮಾಸ್ತ್ರವನ್ನೇ ಪ್ರಯೋಗಿಸಿದ. ಬ್ರಹ್ಮಾಸ್ತ್ರಕ್ಕೆ ಗೌರವ ತೋರಿಸಬೇಕೆಂದು ಆಂಜನೇಯ ಕ್ಷಣಕಾಲ ಅದಕ್ಕೆ ಕಟ್ಟುಬಿದ್ದ.

ರಾಕ್ಷಸರಿಗೆಲ್ಲ ಸಂಭ್ರಮ, ಹೆಮ್ಮೆ. ಇಂದ್ರಜಿತ್‌ ಹನುಮಂತನನ್ನು ರಾವಣನ ಸಭೆಗೆ ಕರೆದೊಯ್ದ.

ಹನುಮಂತನನ್ನು ಕಂಡ ರಾವಣ ಕಿಡಿಕಿಡಿಯಾದ.

ರಾವಣನ ತೇಜಸ್ಸನ್ನು ನೋಡಿ ಹನುಮಂತನಿಗೂ ಆಶ್ಚರ್ಯವಾಯಿತು.

ರಾವಣನೆಂದರೆ ದೇವೇಂದ್ರನಿಗೂ ಭಯ. ಆದರೆ ಹನುಮಂತ ಸ್ವಲ್ಪವೂ ಹೆದರಲಿಲ್ಲ. ತಾನು ಬಂದ ಕಾರಣವನ್ನು ವಿವರವಾಗಿ ಹೇಳಿದ. “ಅಯ್ಯಾ ರಾವಣ, ಸೀತಾಮಾತೆಯನ್ನು ಕರೆದುಕೊಂಡು ಬಂದು ಹೀಗೆ ಸಂಕಟಪಡಿಸುವುದು ನಿನಗೆ ಸರಿಯಲ್ಲ. ನೀನೂ ತಪಸ್ಸನ್ನು ಮಾಡಿದವನು. ಯೋಚಿಸು. ರಾಮನನ್ನು ನೀನು ಎದುರಿಸಬಲ್ಲೆಯ? ನೀನೂ ನಾಶವಾಗುತ್ತಿ, ನಿನ್ನ ಬಂಧುಮಿತ್ರರೂ ಈ ಪಟ್ಟಣವೂ ನಾಶವಾಗುತ್ತವೆ. ಈ ಕೆಟ್ಟ ದಾರಿ ಬಿಡು, ಸೀತೆಯನ್ನು ಶ್ರೀರಾಮನಿಗೆ ಒಪ್ಪಿಸು” ಎಂದು ಹೇಳಿದ.

ಇವನ ಮಾತುಗಳು ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಯಿತು. ರಾವಣ ಹನುಮಂತನನ್ನು ಕೊಂದುಬಿಡುವಂತೆ ಅಲ್ಲಿದ್ದ ರಾಕ್ಷಸರಿಗೆ ಹೇಳಿದ. ರಾವಣನ ತಮ್ಮ ವಿಭೀಷಣ ಮಧ್ಯೆ ಪ್ರವೇಶಿಸಿ ಶತ್ರುವಿನ ದೂತನನ್ನು ವಧಿಸುವುದು ನ್ಯಾಯವಲ್ಲ ಎಂದು ರಾಜನೀತಿಯನ್ನು ತಿಳಿಸಿದ.

ರಾವಣ ವಿಭೀಷಣನ ಮಾತುಗಳನ್ನು ಒಪ್ಪಿ “ಕಪಿಗಳಿಗೆ ಬಾಲವೇ ಭೂಷಣ. ಹನುಮಂತನ ಬಾಲವನ್ನು ಸುಟ್ಟುಬಿಡಿ” ಎಂದು ಆಜ್ಞಾಪಿಸಿದ.

ರಾಕ್ಷಸರು ಕೂಡಲೇ ಹನುಮಂತನ ಬಾಲಕ್ಕೆ ಬಟ್ಟೆಸುತ್ತಿ, ಎಣ್ಣೆ ಸುರಿದು ಬೆಂಕಿ ಹಚ್ಚಿದರು. ಹನುಮಂತನನ್ನು ಊರಲ್ಲೆಲ್ಲ ಮೆರವಣಿಗೆ ಮಾಡಿದರು.

ಹನುಮಂತನಿಗೆ ತಡೆಯಲಾಗದ ಕೋಪ ಬಂದಿತು. ಆದರೂ ರಾಕ್ಷಸರು ತನಗೆ ಲಂಕಾಪಟ್ಟಣವನ್ನು ತೋರಿಸುತ್ತಿರುವುದನ್ನು ಕಂಡು ಸಂತೋಷವೇ ಆಯಿತು. ಅಲ್ಲಿಯ ರಹಸ್ಯದುರ್ಗಗಳನ್ನೂ ಭೂಭಾಗ ರಥಗಳನ್ನೂ ಹನುಮಂತ ಸೂಕ್ಷ್ಮವಾಗಿ ಗಮನಿಸಿದ.

ಅನಂತರ ಛಂಗನೆ ಮೇಲೆ ಹಾರಿದ. ಕಟ್ಟಿದ್ದ ಹಗ್ಗಗಳನ್ನು ಬಿಚ್ಚಿಕೊಂಡ. ತನ್ನನ್ನು ಹಿಂಬಾಲಿಸುತ್ತಿದ್ದ ರಾಕ್ಷಸರನ್ನೆಲ್ಲ ಹೊಡೆದುರುಳಿಸಿ ಎತ್ತರವಾದ ಪ್ರದೇಶದಲ್ಲಿ ನಿಂತ. ಸಮೀಪದ ಕಟ್ಟಡಗಳಿಗೆಲ್ಲ ಬೆಂಕಿ ಹಚ್ಚಿದ. ರಾವಣನ ಮಂತ್ರಿಗಳ, ಸೇನಾಧಿಪತಿಗಳ ಮನೆಗಳೆಲ್ಲವೂ ಧಗಧಗನೆ ಉರಿಯತೊಡಗಿದವು. ಕ್ಷಣಾರ್ಧದಲ್ಲಿ ಇಡೀ ಲಂಕಾಪಟ್ಟಣವೇ ಬೆಂಕಿಯಲ್ಲಿ ಉರಿಯತೊಡಗಿತು.

ಇದ್ದಕ್ಕಿದ್ದಂತೆ ಹನುಮಂತನಿಗೆ ತಾನು ಮಾಡಿದ ತಪ್ಪು ಗೊತ್ತಾಯಿತು. ಲಂಕೆಯನ್ನು ಸುಡುವ ಉತ್ಸಾಹದಲ್ಲಿ, ಅಲ್ಲಿದ್ದ ಸೀತೆಯನ್ನೇ ಹನುಮಂತ ಮರೆತುಬಿಟ್ಟಿದ್ದ! ಈ ಯೋಚನೆಯಿಂದಲೇ ಎದೆ ಒಡೆಯುವಂತಾಯಿತು. ಅಶೋಕವನಕ್ಕೆ ಹಾರಿದ. ಅಲ್ಲಿ ಶಿಂಶುಪಾ ವೃಕ್ಷದ ಕೆಳಗೆ ಸೀತೆ ಕುಳಿತಿದ್ದಳು. ನೋಡಿ ಇವನ ದುಗುಡವೆಲ್ಲ ಮಾಯವಾಯಿತು. ಆಕೆಗೆ ನಮಸ್ಕರಿಸಿ ಆಕೆಯ ಆಶೀರ್ವಾದ ಪಡೆದು ಮತ್ತೊಮ್ಮೆ ಸಾಗರವನ್ನು ದಾಟಿದ.

ಜಾಂಬವಂತ, ಅಂಗದ ಮೊದಲಾದವರೆಲ್ಲ ಹನುಮಂತನಿಗಾಗಿ ಕಾಯುತ್ತಿದ್ದರು. ಅವನು ಹಿಂದಕ್ಕೆ ಬಂದದ್ದು ನೋಡಿ ಹೋದ ಜೀವ ಬಂದಂತಾಯಿತು.

ಇಂತಹ ವೀರನನ್ನು ನಾನು ನೋಡಿಲ್ಲ

ಸೀತೆಯ ಸುದ್ದಿ ಬಂದೀತೇ ಎಂದು ಕಾತರದಿಂದ ದಿನಗಳನ್ನೆಣಿಸುತ್ತಿದ್ದ ಶ್ರೀರಾಮ.

ಹನುಮಂತ ಎಲ್ಲ ವಿಚಾರಗಳನ್ನೂ ಅವನಿಗೆ ವಿಸ್ತಾರವಾಗಿ ತಿಳಿಸಿ, ಸೀತೆ ಕೊಟ್ಟಿದ್ದ ಚೂಡಾಮಣಿಯನ್ನು ಅರ್ಪಿಸಿದ. ಶ್ರೀರಾಮನಿಗೆ ತಡೆಯಲಾಗದ ಸಂತೋಷ! “ಪ್ರಪಂಚದಲ್ಲಿ ಯಾರಿಂದಲೂ ಮಾಡಲು ಅಸಾಧ್ಯವಾದ ಕಾರ್ಯವನ್ನು ಹನುಮಂತ ಮಾಡಿದ್ದಾಣೆ. ಸಾಗರವನ್ನು ದಾಟಬಲ್ಲ ವೀರನನ್ನು ನಾನು ನೋಡಿರಲಿಲ್ಲ. ತನಗೆ ಹೇಳಿದ ಕಾರ್ಯವನ್ನು ಮಾತ್ರವಲ್ಲದೆ, ತನಗೆ ಸೂಕ್ತವೆನಿಸಿದ ಕಾರ್ಯಗಳನ್ನೂ ನೆರವೇರಿಸಿಕಿಂಡು ಬಂದಿರುವ ಮಹಾಮೇಧಾವಿ ಇವನು. ಹೇಳಿದ ಕೆಲಸದ ಜೊತೆಗೆ, ಯಜಮಾನನಿಗೆ ಪ್ರಿಯವೆನಿಸುವ ಇತರ ಕಾರ್ಯಗಳನ್ನೂ ಮಾಡುವವನೇ ಉತ್ತಮ ದೂತ. ಹನುಮಂತನಾದರೋ ಅತ್ಯುತ್ತಮ ದೂತ” ಎಂದು ಶ್ರೀರಾಮ ಹನುಮಂತನನ್ನು ಆಲಂಗಿಸಿ ಕೊಂಡಾಡಿದ.

ರಾಮ ರಾವಣರ ಸಮರ ಪ್ರಾರಂಭವಾಯಿತು

ರಾವಣನ ಮೇಲೆ ಯುದ್ಧಕ್ಕಾಗಿ ಎಲ್ಲಲ ಸಿದ್ಧತೆಗಳೂ ನಡೆದವು. ವಾನರ ಸೈನ್ಯ ಅತ್ಯುತ್ಸಾಹದಿಂದ ಲಂಕೆಯ ಕಡೆಗೆ ನಡೆಯಿತು. ಶ್ರೀರಾಮ ಹನುಮಂತನ ಭುಜದ ಮೇಲೂ ಲಕ್ಷ್ಮಕಣ ಅಂಗದನ ಭುಜದ ಮೇಲೂ ಕುಳಿತು ಸಾಗರ ತೀರದ ಕಡೆಗೆ ಧಾವಿಸಿದರು.

ಹನುಮಂತ ಲಂಕೆಯನ್ನು ಬಿಟ್ಟ ಮೇಲೆ ವಿಭೀಷಣ ತನ್ನ ಅಣ್ಣ ರಾವಣನಿಗೆ ಬುದ್ಧಿವಾದ ಹೇಳಲು ಪ್ರಯತ್ನಿಸಿದ. ಒಳ್ಳೆಯ ಮಾತನ್ನು ಕೇಳುತ್ತಾನೆಯೆ ರಾವಣ? ವಿಭೀಷಣ ಅವನನ್ನು ಬಿಟ್ಟು ರಾಮನಿಗೆ ಶರಣಾಗತನಾದ. ವಿಭೀಷಣನನ್ನು ಸ್ವೀಕರಿಸುವುದೇ ಬೇಡವೇ ಎಂಬ ಬಗ್ಗೆ ಭಾರಿ ವಿವಾದಗಳಾದುವು. ಶ್ರೀರಾಮ ಹನುಮಂತನ ಕಡೆಗೆ ತಿರುಗಿ ಅವನ ಅಭಿಪ್ರಾಯ ಕೇಳಿದ. ಆಗ ಹನುಮಂತ, “ದೇವ! ಒಂದು ವಿಷಯ ಹೇಳುತ್ತೇನೆ. ವಿಭೀಷಣನು ಮಾತನಾಡುವಾಗ ಅವನ ಧ್ವನಿ, ಮುಖಭಾವವನ್ನು ಸೂಕ್ಷ್ಮವಾಗಿ ಗಮನಿಸಿದೆ. ಅವನಲ್ಲಿ ಯಾವುದೇ ಕಪಟ ಅಥವಾ ದುರಭಿಪ್ರಾಯವಿಲ್ಲ. ನೀನು ಸ್ವೀಕರಿಸಬಹುದು. ಮಹಾ ಮೇಧಾವಿಯಾದ ನೀನೇ ಇವನನ್ನು ಏನು ಮಾಡಬೇಕೆಂಬ ಬಗ್ಗೆ ತೀರ್ಮಾನಿಸು” ಎಂದ.

ಕೊನೆಗೆ ಶ್ರೀರಾಮ ವಿಭೀಷಣ ಹಾಗೂ ಅವನ ಅನುಚರರನ್ನು ಸ್ವೀಕರಿಸಿ ಅಭಯ ನೀಡಿದ.

ವಾನರರು ಸಾಗರಕ್ಕೆ ಸೇತುವೆ ಕಟ್ಟಿದರು, ಶ್ರೀರಾಮ ಲಕ್ಷ್ಮಣರು ಲಂಕೆಯನ್ನು ಮುತ್ತಿದರು. ರಾಮ ರಾವಣರ ಯುದ್ಧ ಪ್ರಾರಂಭವಾಯಿತು.

ಹನುಮಂತ ಒಬ್ಬನಿದ್ದರೆ -’

ಈ ಯುದ್ಧದಲ್ಲಿ ಹನುಮಂತನ ಪರಾಕ್ರಮ ಮುಗಿಲು ಮುಟ್ಟಿತು. ರಾಕ್ಷಸರನ್ನು ನೆಲಕ್ಕೆ ಅಪ್ಪಳಿಕಸಿದ, ಮೇಲೆತ್ತಿ ಗಿರ್ರನೆ ತಿರುಗಿಸಿ ಎಸೆದ. ಧುಮ್ರಾಕ್ಷ, ಅಕಂಪನ ಮೊದಲಾದ ರಾಕ್ಷಸ ವೀರರನ್ನು ಹೊಸೆದು ಹಾಕಿದ. ಅವನನ್ನು ಕಂಡರೇ ಶತ್ರುಗಳಿಗೆ ನಡುಕ. ಸ್ವತಃ ರಾವಣನೇ “ನೀನು ನಿಜವಾಗಿ ಪರಾಕ್ರಮಿ” ಎಂದು ಹೊಗಳುವಂತೆ ಹೋರಾಡಿದ ಧೀರ ಆಂಜನೇಯ. ಶ್ರೀರಾಮನನ್ನು ಭುಜದ ಮೇಲೆ ಕೂಡಿಸಿಕೊಂಡ ಹನುಮಂತ, ಅವನು ರಾವಣನ ಜೊತೆಗೆ ಯುದ್ಧ ಮಾಡುವಾಗ.

ರಾವಣನ ಮಗ ಇಂದ್ರಜಿತ್‌ ರಾಕ್ಷಸ ಸೇನೆಯ ಪ್ರಚಂಡ ವೀರ. ಒಮ್ಮೆ ಅವನು ಬ್ರಹ್ಮಾಸ್ತ್ರವನ್ನು ಪ್ರಯೋಗಿಸಿದ ಬ್ರಹ್ಮಾಸ್ತ್ರ ಭಯಂಕರವಾದ ಅಸ್ತ್ರ. ಇಡೀ ವಾನರಸೇನೆ ನಿಸ್ತೇಜವಾಗಿ ಬಿದ್ದುಬಿಟ್ಟಿತು. ರಾಮ ಲಕ್ಷ್ಮಣರೂ ಸಹ ಮೂರ್ಛೆ ಹೋದರು. ಕ್ಷಣಕಾಲ ಬಿದ್ದಿದ್ದ ಹನುಮಂತ ಎಚ್ಚೆತ್ತು ವಿಭೀಷಣನೊಂದಿಗೆ ರಣರಂಗವನ್ನೆಲ್ಲ ಸುತ್ತಾಡಿ ಉಳಿದ ವಾನರರಲ್ಲಿ ಧೈರ್ಯ ತುಂಬುತ್ತ ನಡೆದ. ವಿಭೀಷಣ ಹಾಗೆ ಬರುತ್ತಿದ್ದಾಗ ಕೆಳಗೆ ಬಿದ್ದಿದ್ದ ಮುದಿ ಜಾಂಬವಂತನನ್ನು ಕಂಡು ಮಾತನಾಡಿಸಿದ. ಜಾಂಬವಂತ ಮೆಲ್ಲನೆ ಕಣ್ಣುಬಿಟ್ಟು “ವಿಭೀಷಣಾ! ಹನುಮಂತ ಬದುಕಿದ್ದಾನೆಯೇ?” ಎಂದು ಪ್ರಶ್ನಿಸಿದ.

ವಿಭೀಷಣನಿಗೆ ಅತ್ಯಾಶ್ಚರ್ಯ. “ಆರ್ಯ ಜಾಂಬವಂತ! ರಾಮಲಕ್ಷ್ಮಣರನ್ನು ಕೇಳದೆ, ಸುಗ್ರೀವ, ಅಂಗದ ನೀಲರನ್ನು ಕೇಳದೆ ಹನುಮಂತನನ್ನು ಮಾತ್ರ ಕೇಳುತ್ತಿರುವೆಯೇಕೆ? ಎಂದು ಪ್ರಶ್ನಿಸಿದ.

ಜಾಂಬವಂತನು, “ವಿಭೀಷಣಾ, ಆ ಮಹಾವೀರ ಹನುಮಂತನೊಬ್ಬ ಬದುಕಿದ್ದರೆ ಇಡೀ ವಾನರ ಸೇನೆ ಸತ್ತರೂ ಬದುಕಿದಂತೆಯೇ. ಆದರೆ ಅವನೊಬ್ಬ ಹತನಾದರೆ ಇಡೀ ವಾನರ ಸೇನೆ ಇದ್ದರೂ ಸತ್ತಂತೆ. ಅವನಿದ್ದರೆ ಮಾತ್ರ ನಾವು ಬದುಕುವ ಆಸೆಯೂ ಇರುವುದು” ಎಂದ.

ಜಾಂಬವಂತನ ಮಾತುಗಳನ್ನು ಕೇಳುತ್ತ ಹತ್ತಿರದಲ್ಲಿ ಇದ್ದ ಹನುಮಂತ ಅವನ ಪಾದಗಳನ್ನು ಹಿಡಿದು ಭಕ್ತಿ ವಿನಯಗಳಿಂದ ತನ್ನ ಹೆಸರು ಹೇಳಿ ತಾನು ಉಳಿದಿರುವುದಾಗಿ ಹೇಳಿದ. ಜಾಂಬವಂತನು “ಅಪ್ಪಾ, ನೀನೀಗ ವಾನರ ಸೇನೆಯನ್ನು ಬದುಕಿಸಲು ಮಹತ್ಕಾರ್ಯವೊಂದನ್ನು ಮಾಡಬೇಕಾಗಿದೆ. ಬ್ರಹ್ಮಾಸ್ತ್ರದಿಂದ ಸ್ಮೃತಿ ತಪ್ಪಿರುವ ರಾಮಲಕ್ಷ್ಮಣರನ್ನೂ ನೀನೇ ಬಿಡಿಸಬೇಕಾಗಿದೆ. ನೀನು ಸಾಗರದ ಮೇಲೆ ಬಹುದೂರ ಹೋಗಿ ಹಿಮವತ್ಪರ್ವತವನ್ನು ನೋಡು. ಅಲ್ಲಿ ಸರ್ವ ಔಷಧಗಳನ್ನು ಹೊಂದಿರುವ ಔಷಧಪರ್ವತವನ್ನು ನೋಡುತ್ತೀಯ. ಆ ಪರ್ವತದಲ್ಲಿ ಮೃತಸಂಜೀವಿನಿ, ವಿಶಲ್ಯಕರಣಿ, ಸಾವರ್ಣಕರಣಿ ಮತ್ತು ಸಂಧಾನಕರಣಿ ಎಂಬ ಮೂಲಿಕೆಗಳು ಇರುತ್ತವೆ. ಇವುಗಳನ್ನು ತತ್‌ಕ್ಷಣ ತೆಗೆದುಕೊಂಡುದ ಬಂದು ಈ ವಾನರರನ್ನು ಬದುಕಿಸು” ಎಂದು ಹೇಳಿದ.

ಹನುಮಂತ ಕೂಡಲೆ ಹಿಮವತ್ಪರ್ವತದ ದಿಕ್ಕಿನಲ್ಲಿ ಮನೋವೇಗದಿಂದ ಹಾರಿದ. ಅಲ್ಲಿ ಔಷಧಪರ್ವತವೂ ಸಿಕ್ಕಿತು. ಆದರೆ ಹನುಮಂತನು ಅಲ್ಲಿಗೆ ಬಂದ ಉದ್ದೇಶ ತಿಳಿದ ಆ ಮಹಾ ಔಷಧಿಗಳೆಲ್ಲ ಕೂಡಲೇ ಮಾಯವಾಗಿಬಿಟ್ಟವು. ಹನುಮಂತ ಅವುಗಳಿಗಾಗಿ ಹುಡುಕಿದ, ಅವು ಸಿಕ್ಕದಿದ್ದಾಗ ಭಯಂಕರ ಕೋಪದಿಂದ ಪರ್ವತವನ್ನು ಗದರಿಸಿದ. “ಏನು ಮಾಡುತ್ತೇನೆಂದು ನೋಡು” ಎನ್ನುತ್ತಾ ಆ ಪರ್ವತವನ್ನೇ ಹಿಡಿದು ಅಲುಗಿಸಿ ಕಿತ್ತು ಕೈಯಲ್ಲಿ ಹಿಡಿದು ಲಂಕೆಯ ಕಡೆಗೆ ಧಾವಿಸಿದ. ಹೊಳೆಯುತ್ತಿದ್ದ ಪರ್ವತವನ್ನು ಆಕಾಶದಲ್ಲಿ ತರುತ್ತಿದ್ದರೆ ಸೂರ್ಯನೇ ಲಂಕೆಯ ಕಡೆಗೆ ಧಾವಿಸಿದಂತಿತ್ತು.

ಆ ಔಷಧಗಳ ವಾಸನೆಯಿಂದಲೇ ರಾಮ ಲಕ್ಷ್ಮಣ ಹಾಗೂ ವಾನರಸೈನ್ಯ ಚೇತರಿಸಿಕೊಂಡು ಎದ್ದು ಕುಳಿತರು. ರಾಕ್ಷಸರು ತಮ್ಮ ಸತ್ತ ಸೈನಿಕರ ಲೆಕ್ಕ ಶತ್ರುಗಳಿಗೆ ಸಿಗುತ್ತದೆಂದು ಹೆದರಿ ಅವರ ಹೆಣಗಳನ್ನು ರಾವಣನ ಆಜ್ಞೆಯಂತೆ ಸಾಗರಕ್ಕೆ ಎಸೆದುಬಿಟ್ಟಿದ್ದರು. ಇದರಿಂದ ರಾಕ್ಷಸರಾದರೂ ಬದುಕಲು ಸಾಧ್ಯವಾಗಲಿಲ್ಲ. ಹನುಮಂತ ಔಷಧ ಪರ್ವತದ ಕೆಲಸವಾದನಂತರ ಅದನ್ನು ಮತ್ತೆ ಹಿಮವತ್ಪರ್ವತದಲ್ಲಿ ಇಟ್ಟು ರಣರಂಗಕ್ಕೆ ಧಾವಿಸಿದ!

ಯುದ್ಧವೆಲ್ಲ ಮುಗಿದು ಹನುಮಂತ ಲಂಕೆಯನ್ನು ಪ್ರವೇಶಿಸಿ ಸೀತೆಯನ್ನು ಕಂಡು ವಿಜಯದ ಸುದ್ಧಿ ತಿಳಿಸಿದ. ಸೀತೆಗೆ ಅತಿಸಂತಸದಿಂದ ಕ್ಷಣಕಾಲ ಮಾತೇ ಹೊರಡಲಿಲ್ಲ. ಅನಂತರ ಅಂಥ ಸುದ್ಧಿ ತಿಳಿಸಿದ ಹನುಮಂತನಿಗೆ ತಾನು ಏನು ಕೊಟ್ಟರೆ ತಾನೆ ಸಾಕಾದೀತು ಎಂದಳು. ಹನುಮಂತ, “ಪರಮ ವಿಶ್ವಾಸದಿಂದ ನೀನಾಡಿದ ಮಾತುಗಳು ರತ್ನದ ರಾಶಿ ಮತ್ತು ದೇವರಾಜ್ಯಗಳಿಗಿಂತ ಹೆಚ್ಚಾದುದು. ನಾನು ವಿಜಯಿಯಾದ ಶ್ರೀರಾಮನನ್ನು ಕಂಡೆನಲ್ಲವೆ? ಅದಕ್ಕಿಂತ ಹೆಚ್ಚಿನ ಭಾಗ್ಯ ಯಾವುದು?” ಎಂದ.

ಶ್ರೀರಾಮ ಅಯೋಧ್ಯೆಗೆ ಹಿಂತಿರುಗಬೇಕಲ್ಲವೆ? ಆದರೆ ಅವನಿಗೆ ಸ್ವಲ್ಪ ಅನುಮಾನ.  ಭರತ ಹದಿನಾಲ್ಕು ವರ್ಷಗಳ ಕಾಲ ರಾಜ್ಯವಾಳಿದ್ದಾನೆ. ತಾನೇ ರಾಜನಾಗಿರಬೇಕು ಎಂದು ಅವನ ಮನಸ್ಸಿನಲ್ಲಿ ಆಸೆ ಇರಬಹುದು. ಅದನ್ನು ತಿಳಿಯುವುದು ಹೇಗೆ? ಹಾಗೆ ಆಸೆ ಇದ್ದರೆ, ಅವನು ಹೇಳುವುದಿಲ್ಲ, ಯಾರೂ ಅವನನ್ನೆ ಕೇಳುವ ಹಾಗಿಲ್ಲ. ಯಾರಾದರೂ ಬುದ್ಧಿವಂತರು, ಅವನ ಮುಖದ ಭಾವ, ಮಾತಿನ ರೀತಿ ಇವುಗಳಿಂದ ಅರ್ಥಮಾಡಿಕೊಂಡು ಬಂದು ರಾಮನಿಗೆ ಹೇಳಬೇಕು. ಇದು ಕಷ್ಟದ ಕೆಲಸ. ತುಂಬ ಬುದ್ಧಿವಂತಿಕೆ, ಇತರರನ್ನು ಅರ್ಥಮಾಡಿಕೊಳ್ಳುವ ಶಕ್ತಿ ಬೇಕು.

ಯಾರನ್ನು ಕಳುಹಿಸುವುದು?

ಕಷ್ಟದ ಕೆಲಸ ಎಂದರೆ, ಸಾಹಸ ಎಂದರೆ, ಸೂಕ್ಷ್ಮ ಬುದ್ಧಿ ಎಂದರೆ ನೆನಪಾಗುವುದು ಆಂಜನೇಯನೇ?

ಶ್ರೀರಾಮ ಹನುಮಂತನನ್ನೆ ಕಳುಹಿಸಿದ.

“ಭರತನೇನಾದರೂ ರಾಜ್ಯದ ಆಸೆಯಿಂದ ನಾನು ಹಿಂತಿರುಗುವುದನ್ನು ಇಷ್ಟಪಡದಿದ್ದಲ್ಲಿ ನನಗೆ ಬಂದು ಹೇಳು. ನಾನು ಇಲ್ಲೇ ಇದ್ದುಬಿಡುತ್ತೇನೆ. ನೀನು ಅವನ ಮಾತು ಮುಖಚರ್ಯೆಗಳನ್ನು ಸೂಕ್ಷ್ಮವಾಗಿ ಗಮನಿಸಿ ವಿಷಯ ತಿಳಿದು ಬಾ” ಎಂದು ಹನುಮಂತನಿಗೆ ರಾಮ ಹೇಳಿದ.

ಹನುಮಂತ ಮಾನವರೂಪ ಧರಿಸಿ ಅಯೋಧ್ಯೆಗೆ ಬಂದು ಭರತನಿಗೆ ರಾಮನ ಆಗಮನದ ವಿಷಯ ತಿಳಿಸಿದ. ಭರತ ಅತ್ಯಂತ ಸಂತೋಷದಿಂದ ಮೂರ್ಛೆಹೋದ. ಅನಂತರ ಎದ್ದು ಹನುಮಂತನನ್ನು ಕುರಿತು, “ಎಲೈ ಪುರುಷೋತ್ತಮ! ನೀನು ಮಾನವನೋ, ದೇವರೋ ನನಗೆ ಗೊತ್ತಿಲ್ಲ. ನೀನು ತಂದ ಈ ಅತ್ಯಂತ ಪ್ರಿಯವಾದ ವಾರ್ತೆಗಾಗಿ ಬಹುಮಾನ ಕೊಡುತ್ತೇನೆ” ಎಂದ.

ಶ್ರೀರಾಮ ಅಯೋಧ್ಯೆಗೆ ಹಿಂತಿರುಗಿದ.

ಬಹು ವಿಜೃಂಭಣೆಯಿಂದ ಶ್ರೀರಾಮನ ಪಟ್ಟಾಭಿಷೇಕ ನಡೆಯುತ್ತಿದ್ದಾಗ ಶ್ರೀರಾಮ ತನ್ನೆಲ್ಲ ಮಿತ್ರರಿಗೂ ಅಮೂಲ್ಯ ಉಡುಗೊರೆಗಳನ್ನು ಕೊಟ್ಟ. ಸೀತಾದೇವಿಗೆ ಶ್ರೀರಾಮ ಅತ್ಯಮೂಲ್ಯವಾದ ಆಭರಣ ಮುಕ್ತಾಹಾರಗಳನ್ನು ಕೊಟ್ಟ. ಆಗ ಅವಳು ಅವನ್ನು ಹನುಮಂತನ ಮಹೋಪಕಾರವನ್ನು ನೆನೆದು ಅವನಿಗೆ ಕೊಟ್ಟುಬಿಟ್ಟಳು. ಕೊನೆಗೆ ತನ್ನ ಕಂಠದಲ್ಲಿದ್ದ ಹಾರವನ್ನೂ ಸಹ ತೆಗೆದು ರಾಮನ ಕಡೆಗೆ ನೋಡಿದಳು. ರಾಮ ಆಕೆಯ ಮನಸ್ಸನ್ನರಿತು, “ದೇವಿ! ನೀನು ಯಾರಿಂದ ಅತ್ಯಂತ ಸಂತೋಷವನ್ನು ಪಡೆದಿದ್ದೀಯೋ ಮತ್ತು ಯಾರಲ್ಲಿ ಪೌರುಷ, ಸಾಮರ್ಥ್ಯ, ವಿನಯ, ಬುದ್ಧಿಗಳು ಶಾಶ್ವತವಾಗಿರುತ್ತವೆಯೋ ಅವನಿಗೆ ನಿನ್ನ ಕೈಯಲ್ಲಿರುವ ಹಾರವನ್ನು ಕೊಡು” ಎಂದ. ಅವಳು ಕೂಡಲೇ ಅದನ್ನೂ ಹನುಮಂತನಿಗೇ ಕೊಟ್ಟುಬಿಟ್ಟಳು!

ಸೀತೆಯು ತನ್ನ ಹಾರವನ್ನು ಹನುಮಂತನಿಗೆ ಕೊಟ್ಟುಬಿಟ್ಟಳು.

ಭೀಮಾರ್ಜುನರೊಡನೆದ್ವಾಪರ ಯುಗದಲ್ಲಿ

 

ಶ್ರೀರಾಮನ ನಾಮಸ್ಮರಣೆ ಮಾಡುತ್ತ ಹನುಮಂತ ಪ್ರತಿ ಯುಗದಲ್ಲೂ ಇರುತ್ತಾನೆ ಎಂದು ಒಂದು ನಂಬಿಕೆ.

ಪಾಂಡವರು ವನವಾಸದಲ್ಲಿದ್ದಾಗ ದ್ರೌಪದಿ ಒಮ್ಮೆ ಅತ್ಯಂತ ಸುಗಂಧಮಯವಾದ ಸೌಗಂಧಿಕಾ ಪುಷ್ಪ ತನಗೆ ಬೇಕೆಂದು ಭೀಮನನ್ನು ಕೇಳಿದಳು. ಭೀಮ ಅದನ್ನು ತರಲೆಂದು ಕಾಡಿನಲ್ಲಿ ಹೊರಟ.

ಭೀಮ ದಾಪುಗಾಲು ಹಾಕುತ್ತ ಸರಸರ ಹೋಗುತ್ತಿದ್ದಾನೆ. ದಾರಿಯಲ್ಲಿಲ ಅಡ್ಡಲಾಗಿ ಒಂದು ಕಪಿಯ ಬಾಲ! ಕೋಪದಿಂದ “ಎಲೆ ಕಪಿ, ನಿನ್ನ ಬಾಲವನ್ನು ಅತ್ತ ಸರಿಸು. ನನಗೆ ಹೋಗಲು ದಾರಿಬಿಡು” ಎಂದು ಗದರಿದ. ಕಪಿ ಭೀಮನ ಕಡೆಗೆ ನೋಡಿ “ಅಪ್ಪ, ನಾನು ಮುದುಕನಾಗಿದ್ದೇನೆ, ಅಲ್ಲಾಡಲಾರೆ. ನೀನೇ ಬಾಲವನ್ನು ನೂಕಿ ಮುಂದೆ ಹೋಗು” ಎಂದ. ಭೀಮನಿಗೆ ಸಿಟ್ಟು ನಗು, ತಿರಸ್ಕಾರ-ತನ್ನಂತಹ ಮೂರು ಲೋಕದ ವೀರನಿಗೆ ಈ ಕೆಲಸವೇ ಎಂದು. ಭೀಮ ಗದೆಯಿಂದ ಬಾಲವನ್ನು ನೂಕಲು ನೋಡಿದ. ಸಾಧ್ಯವಾಗಲಿಲ್ಲ.! ಏನೇನು ಪ್ರಯತ್ನ ಮಾಡಿದರೂ ಆ ಮುದಿಬಾಲವನ್ನು ಅಲುಗಿಸಲೂ ಸಾಧ್ಯವಾಗಲಿಲ್ಲ ಭೀಮನಿಗೆ. ಆಗ ಭೀಮನಿಗೆ ಜ್ಞಾನೋದಯವಾಯಿತು – ಇವನು ಹನುಮಂತನೆಂದು. ಅವನಿಗೆ ಕೈಮುಗಿದು ಕ್ಷಮಾಪಣೆ ಕೇಳಿದ.

ಇನ್ನೊಮ್ಮೆ ಅರ್ಜುನ ಹನುಮಂತನನ್ನು ಕಂಡಾಗ, “ಹಿಂದೆ ರಾಮ ಸಾಗರಕ್ಕೆ ಕಪಿಗಳ ಕೈಯಲ್ಲಿ ಸೇತುವೆ ಕಟ್ಟಿಸುವ ಬದಲು ಅವನ ಬಾಣಗಳಿಂದಲೇ ಸೇತುವೆ ಕಟ್ಟಬಹುದಾಗಿತ್ತು. ನಾನಾಗಿದ್ದರೆ ಹಾಗೇ ಮಾಡುತ್ತಿದ್ದೆ” ಎಂದ. ಹನುಮಂತ, “ನಿನ್ನ ಬಾಣದ ಸೇತುವೆ ಮೇಲೆ ವಾನರ ಸೈನ್ಯವಿರಲಿ, ನಾನೊಬ್ಬ ಕಾಲಿಟ್ಟರೆ ಸಾಕು ಮುರಿದು ಬೀಳುತ್ತದೆ” ಎಂದು ಉತ್ತರ ಕೊಟ್ಟ. ಸರಿ, ಇಬ್ಬರಿಗೂ ಪಂಥ ಬಿತ್ತು. ಅರ್ಜುನ ಬಾಣಗಳ ಸೇತುವೆ ಕಟ್ಟುವುದು – ಅದರ ಮೇಲೆ ಹನುಮಂತ ನಡೆಯುವುದು. ಅದು ಮುರಿದುಬಿದ್ದರೆ ಅರ್ಜುನ ಅಗ್ನಪ್ರವೇಶ ಮಾಡಬೇಕು, ಇಲ್ಲದಿದ್ದರೆ ಅರ್ಜುನನ ಪತಾಕೆಯಲ್ಲಿ ಹನುಮಂತ ಹಾರಾಡಬೇಕು ಎಂದು.  ಅರ್ಜುನ ಬಾಣದ ಸೇತುವೆ ಕಟ್ಟಿದ.

ಹನುಮಂತ ಇನ್ನೂ ಕಾಲಿಡುವುದೇ ತಡ ಅದು ಲಟಲಟ ಮುರಿದುಹೋಯಿತು. ಅರ್ಜುನ ತನ್ನ ಮಾತಿನ ಪ್ರಕಾರ ಅಗ್ನಿಪ್ರವೇಶಕ್ಕೆ ಸಿದ್ಧವಾದ.

ಅಷ್ಟುಹೊತ್ತಿಗೆ ಶ್ರೀಕೃಷ್ಣ ಅಲ್ಲಿಗೆ ಬಂದ. ತನ್ನ ಎದುರಿಗೆ ಮತ್ತೊಮ್ಮೆ ಪಂಥ ನಡೆಯಲಿ ಎಂದ. ಅರ್ಜುನ ಬಾಣಗಳ ಸೇತುವೆ ಕಟ್ಟಿದಾಗ ಅದನ್ನು ಪರೀಕ್ಷಿಸುವಂತೆ ಕೃಷ್ಣ ಅದನ್ನು ತನ್ನ ಅಮೃತಹಸ್ತದಿಂದ ಸ್ಪರ್ಶಮಾಡಿದ. ಅನಂತರ ಹನುಮಂತ ಅದರ ಮೇಲೆ ಕುಣಿದರೂ ಅದು ಮಿಸುಕಲಿಲ್ಲ. ಹನುಮಂತ ತನ್ನ ಮಾತಿನ ಪ್ರಕಾರ ಅರ್ಜುನನ ಬಾವುಟದಲ್ಲಿ ನೆಲೆಸಿದ. ಹೀಗೆಂದು ಒಂದು ಕಥೆ ಇದೆ.

ಹನುಮಂತ ಚಿರಂಜೀವಿ. ಇಮದಿಗೂ ರಾಮಾಯಣವನ್ನು ಯಾರಾದರೂ ಓದುತ್ತಿದ್ದರೆ ಅಲ್ಲಿ ಕಣ್ಣಿಗೆ ಕಾಣದಂತೆ ನಿಂತು ಆನಂದಬಾಷ್ಪ ಸುರಿಸುತ್ತಾನೆ ಎಂದು ಬಹುಜನ ನಂಬುತ್ತಾರೆ.

* * *