ಹನುಮಾನ ಪ್ರಸಾದ್ ಪೋದ್ದಾರ್ ಬಹು ಸಾತ್ವಿಕವಾದ ನಿರ್ಮಲವಾದ ಬಾಳು ಬಾಳಿದ ಹಿರಿಯರು. ದೇಶದ ಸ್ವಾತಂತ್ರ  ಸಂಗ್ರಾಮದಲ್ಲಿ ಕ್ರಾಂತಿಕಾರಿಗಳಿಗೆ ತಾವೂ ನೆರವಾದರು, ಸೆರೆಮನೆಗೆ ಹೋದರು. ಅನಂತರ ಗಾಂಧೀಜಿಯ ಪ್ರಭಾವದಿಂದ ಅಹಿಂಸಾ ಮಾರ್ಗಕ್ಕೆ ತಿರುಗಿದರು. ಹದಿಮೂರು ವರ್ಷ ವಯಸ್ಸಾಗಿದ್ದಾಗಲೇ ಹಿಂದೂ ಸಮಾಜಕ್ಕೆ ಬಂದು ಸೇರಿಕೊಂಡಿರುವ ತಪ್ಪು ನಂಬಿಕೆಗಳು -ಪದ್ಧತಿಗಳ ವಿರುದ್ಧ ಹೋರಾಟ ಪ್ರಾರಂಭಿಸಿದರು. ಮುಂದೆ ಕಲ್ಯಾಣಪತ್ರಿಕೆಯ ಸಂಪಾದಕರಾಗಿ ಹಿಂದೂ ಧರ್ಮವನ್ನೂ ಭಾರತೀಯ ಸಂಸ್ಕೃತಿಯನ್ನೂ ಜನಕ್ಕೆ ತಿಳಿಸಿ ಕೊಡುವ ಕಾರ್ಯಕ್ಕೆ ಮುಡಿಪಾಗಿ ಬಾಳಿದರು.

ಹನುಮಾನ ಪ್ರಸಾದ್ ಪೋದ್ದಾರ್

ಗೋರಖಪುರ ಉತ್ತರಪ್ರದೇಶದ ಮೂಲೆಯಲ್ಲಿರುವ ಒಂದು ಊರು. ಈ ಶತಮಾನದಲ್ಲಿ ಭಾರತದ ಮೂಲೆ ಮೂಲೆಯಲ್ಲೂ ಈ ಊರಿನ ಹೆಸರು ಪ್ರಖ್ಯಾತವಾದುದಕ್ಕೆ ಕಾರಣ ಅಲ್ಲಿಂದ ಪ್ರಕಟವಾಗುತ್ತಿರುವ ‘‘ಕಲ್ಯಾಣ’’  ಮಾಸಪತ್ರಿಕೆ. ಇಡೀ ಭಾರತದಲ್ಲೇ ಅತಿ ಹೆಚ್ಚಿನ ಬೇಡಿಕೆಯ ಮಾಸಪತ್ರಿಕೆ ಇದು. ಇದರ ಗ್ರಾಹಕರ ಸಂಖ್ಯೆ ಒಂದು ಲಕ್ಷ ಅರವತ್ತೆ ದು ಸಾವಿರಕ್ಕೂ ಹೆಚ್ಚು. ಈ ಪತ್ರಿಕೆಯನ್ನು ಪ್ರಾರಂಭಿಸಿ ಕೊನೆ ಉಸಿರಿರುವವರೆಗೆ ಅದರ ಹೊಣೆಯನ್ನು ಹೊತ್ತವರು ಹನುಮಾನ್ ಪ್ರಸಾದ್ ಪೋದ್ದಾರ ಅವರು.

ಹುಟ್ಟು ಹೆಸರು ಹನುಮಾನ ಪ್ರಸಾದ. ಸ್ನೇಹಶೀಲರಾದ ಈ ವ್ಯಕ್ತಿ ಎಲ್ಲರಿಗೂ ಸಮೀಪದ ಬಂಧುವಿನಂತಿದ್ದರು. ಕಿರಿಯರಿಗೆ ಅಣ್ಣ, ಹಿರಿಯರಿಗೆ ತಮ್ಮ. ಅಪರಿಚಿತರಿಗೂ ಆಪ್ತಮಿತ್ರ. ಆದ್ದರಿಂದಲೇ ಆತ್ಮೀಯರೊಬ್ಬರು ಅವರನ್ನು ಪ್ರೀತಿಯಿಂದ ನೀವು ನಮ್ಮೆಲ್ಲರ ಸೋದರ-‘‘ಭಾಯಿ’’ ಎಂದರು. ಮುಂದೆ ಅದೇ ರೂಢಿಗೆ ಬಂದಿತು.

ಮನೆತನ

ರಾಜಸ್ತಾನದ ರತನಗಢದಲ್ಲಿದ್ದ ಒಂದು ವಂಶಕ್ಕೆ ಪೋದ್ದಾರ ಎಂದು ಹೆಸರು. ಈ ವಂಶದ ಕನೀರಾಮ ಎಂಬವರು ವ್ಯಾಪಾರಕ್ಕಾಗಿ ರಾಜಸ್ತಾನದಿಂದ ಅಸ್ಸಾಮಿನ ಷಿಲಾಂಗಿಗೆ ಬಂದರು. ಈತ ತುಂಬಾ ಶ್ರದ್ಧಾವಂತರು. ತುಳಸೀದಾಸರು ರಚಿಸಿದ ಹಿಂದಿಯ ಪ್ರಸಿದ್ಧ ರಾಮಾಯಣ ವಾದ ‘ರಾಮ ಚರಿತ ಮಾನಸ’ ದಲ್ಲಿ ಇವರಿಗೆ ಭಕ್ತಿ. ಇವರ ಪತ್ನಿ ರಾಮಕೌರದೇವಿಯೂ ಉದಾರ ಸ್ವಭಾವದ ಧರ್ಮಾತ್ಮಳು, ದಾನಶೀಲಳು. ಸ್ವಪ್ರಯತ್ನದಿಂದ ಚೆನ್ನಾಗಿ ವ್ಯಾಪಾರ ಮಾಡಿ ಕನೀರಾಮ ಶ್ರೀಮಂತರಾದರು.

ದೈವಭಕ್ತಿ, ಪ್ರಾಮಾಣಿಕತೆ ಹನುಮಾನ್ ಪ್ರಸಾದರಿಗೆ ಅವರ ಪೂರ್ವಜರಿಂದ ಬಂದ ಬಳುವಳಿ. ಅನ್ಯಾಯದ ಒಂದು ಕಾಸನ್ನೂ ಈ ಮನೆತನದವರು ಮುಟ್ಟುತ್ತಿರಲಿಲ್ಲ.

ತಂದೆ  ಭೀಮರಾಜರ ಕಾಲದಲ್ಲಿ ಒಂದು ಸಲ ಹೀಗಾಯಿತು.

ಆಗ ಭೀಮರಾಜರು ಬಟ್ಟೆಯ ವ್ಯಾಪಾರ ಮಾಡುತ್ತಿದ್ದರು. ಅವರ ಹತ್ತಿರ ಬಟ್ಟೆ ಕೊಂಡ ಒಬ್ಬರು ನೂರು ರೂಪಾಯಿಗಳನ್ನು ಹೆಚ್ಚಿಗೆ ಕೊಟ್ಟುಬಿಟ್ಟರು. ಮೊದಲು ಇದು ಯಾರ ಗಮನಕ್ಕೂ ಬರಲಿಲ್ಲ. ಕೇವಲ್‌ಸಿಂಹ ಎನ್ನುವವರು ಭೀಮರಾಜರ ಲೆಕ್ಕಪತ್ರಗಳನ್ನು ನೋಡಿಕೊಳ್ಳುತ್ತಿದ್ದರು. ಎರಡು ದಿನಗಳ ನಂತರ ಲೆಕ್ಕ ಮಾಡುವಾಗ ನೂರು ರೂಪಾಯಿ ಹೆಚ್ಚಿಗೆ ಇರುವುದು ಗೊತ್ತಾಯಿತು. ಆ ವಿಷಯವನ್ನು ಅವರು ಭೀಮರಾಜರಿಗೆ ತಿಳಿಸಿದರು. ಅವರು ಹೇಳಿದರು:

‘‘ನೀವು ಸರಿಯಾಗಿ ಎಣಿಸಿಕೊಳ್ಳಬೇಕು. ಹೋಗಲಿ, ಈಗಲೇ ಹೋಗಿ ಆ ನೂರು ರೂಪಾಯಿಗಳನ್ನು ಅವರಿಗೇ ಕೊಟ್ಟು ಬನ್ನಿ.’’

‘‘ಈಗಾಗಲೇ ಸಂಜೆ ಆಗಿದೆ’’ – ಕೇವಲ್‌ಸಿಂಹರು ಅನುಮಾನಿಸಿದರು. ಅವರ ಮಾತು ಪೂರ್ತಿ ಮುಗಿದಿರಲೂ ಇಲ್ಲ. ಭೀಮರಾಜರು ದೃಢಸ್ವರದಲ್ಲಿ ಹೇಳಿದರು:

‘‘ಸಂಜೆ ಆದರೇನಾಯಿತು? ಈಗಲೇ ಕೊಟ್ಟು ಬನ್ನಿ. ನೀವು ಕೊಟ್ಟು ಬರುವವರೆಗೂ ನಾನು ರೊಟ್ಟಿಯನ್ನು ತಿನ್ನಲಾರೆ. ಬೇರೆಯವರ ಹಣ ನಮ್ಮ ಮನೆಯಲ್ಲಿ ಇರುವವರೆಗೆ ನಾನು ಆಹಾರವನ್ನು ಮುಟ್ಟುವುದಿಲ್ಲ. ಆ ಹಣ ನಮ್ಮ ಮನೆಯಲ್ಲಿ ಎರಡು ದಿನ ಇದ್ದಿತಾದ್ದರಿಂದ ಆ ಎರಡು ದಿನಕ್ಕೆ ಬಡ್ಡಿಯನ್ನೂ ಕೊಟ್ಟು ಬನ್ನಿ.’’

ಹೀಗಿತ್ತು ಭೀಮರಾಜ ಪ್ರಾಮಾಣಿಕತೆ. ಇದೇ ಗುಣವೇ ಹನುಮಾನ್ ಪ್ರಸಾದರಲ್ಲೂ ಬೆಳೆದು ಬಂತು.

ಕನೀರಾಮ-ರಾಮಕೌರದೇವಿಯವರಿಗೆ ಮಕ್ಕಳಾಗಲಿಲ್ಲ. ಕೊನೆಗೆ ಕನೀರಾಮರ ತಮ್ಮ ಭೀಮರಾಜನನ್ನೇ ದತ್ತುಪುತ್ರನನ್ನಾಗಿ ಸ್ವೀಕರಿಸಿದರು. ಭೀಮರಾಜನ ಹೆಂಡತಿ ರಿಖೀಬಾಯಿ. ಅನೇಕ ವರ್ಷಗಳ ಕಾಲ ರಿಖೀಬಾಯಿಗೂ ಮಕ್ಕಳಾಗಲಿಲ್ಲ. ಇದರಿಂದ ಮನೆಯವರಿಗೆಲ್ಲ ಚಿಂತೆಯಾಯಿತು. ರಾಮಕೌರದೇವಿಗೂ ಸದಾ ಇದೇ ಯೋಚನೆಯಾಯಿತು. ತನ್ನ ದತ್ತುಪುತ್ರನಿಗೆ ಮಕ್ಕಳಾಗಬೇಕೆಂದು ಅವಳು ಅನೇಕ ಪೂಜೆ ವ್ರತಗಳನ್ನು ಮಾಡಿದಳು. ಕೊನೆಗೆ ತಮ್ಮ ಊರಾದ ರತನಗಢಕ್ಕೆ ಬಂದು ತಮ್ಮ ಇಷ್ಟದೇವನಾದ ಆಂಜನೇಯನನ್ನು ಭಕ್ತಿಯಿಂದ ಆರಾಧಿಸಿದಳು.

೧೮೯೨ ರ ಡಿಸೆಂಬರ್ ೧೭ ರಂದು ಶನಿವಾರ ರಿಖೀಬಾಯಿ ಗಂಡು ಮಗುವಿಗೆ ಜನ್ಮವಿತ್ತಳು. ಅಜ್ಜಿ ರಾಮಕಾರದೇವಿ ಹನುಮಂತನನ್ನು ಆರಾಧಿಸಿದ್ದರಿಂದ ಹುಟ್ಟಿದ ಮಗುವಿಗೆ ‘‘ಹನುಮಾನ ಬಖ್ಕ’’ (ಹನುಮಂತನ ಅನುಗ್ರಹದಿಂದ ಹುಟ್ಟಿದವನು) ಎಂದೇ ಹೆಸರಿಟ್ಟರು. ‘‘ಹನುಮಾನ ಬಖ್ಕ’’  ಎನ್ನುವುದು ಕ್ರಮೇಣ ಹನುಮಾನ ಪ್ರಸಾದ ಎಂದಾಯಿತು.

ಬಾಲ್ಯದಲ್ಲಿ ಕಷ್ಟಗಳು

ಬಾಲ್ಯದಲ್ಲಿ ಹನುಮಾನ ಪ್ರಸಾದರು ಅನೇಕ ರೀತಿಯ ಕಷ್ಟಗಳನ್ನು ಅನುಭವಿಸಬೇಕಾಯಿತು. ಮಗುವಿಗೆ ಮೂರು ವರ್ಷವಾಗಿದ್ದಾಗಲೇ ತಾಯಿ ರಿಖೀಬಾಯಿ ಸತ್ತು  ಹೋದಳು. ಅಜ್ಜಿ ರಾಮಕಾರದೇವಿಯೇ ಹುಡುಗನನ್ನು ಬೆಳೆಸಿದಳು. ಮರುವರ್ಷ ಹುಡುಗನಿಗೆ ತುಂಬಾ ಕಾಯಿಲೆ ಆಯಿತು.

ಹುಡುಗ ಇನ್ನೂ ಪೂರ್ಣವಾಗಿ ಚೇತರಿಸಿಕೊಂಡಿರಲೂ ಇಲ್ಲ. ಅಷ್ಟರಲ್ಲಿ ಷಿಲಾಂಗಿನಲ್ಲಿ ಭಾರಿ ಭೂಕಂಪವಾಯಿತು. ಮನೆಯೆಲ್ಲಾ ಕುಸಿಯಿತು. ಪೂಜೆಗೆಂದು ಹೊರಗಡೆ ಹೋಗಿದ್ದ ಹನುಮಾನ ಪ್ರಸಾದ (ವಿಚಿತ್ರ ರೀತಿಯಲ್ಲಿ) ಉಳಿದು ಕೊಂಡದ್ದು ದೈವಸಂಕಲ್ಪವೇ ಇರಬಹುದು.

ಆದರೆ ಕುಟುಂಬಕ್ಕೆ ವಿಪರೀತ ನಷ್ಟವಾಯಿತು. ವ್ಯಾಪಾರವೂ ನಿಂತುಹೋಯಿತು. ಬರಬರುತ್ತಾ ಎರಡು ಹೊತ್ತಿನ ಊಟಕ್ಕೂ ತೊಂದರೆಯಾಯಿತು. ಈ ಎಲ್ಲ ನಷ್ಟ ಚಿಂತೆಗಳಿಂದ ಕೊರಗಿ ತಾತ ಕನೀರಾಮ ದಿವಂಗತರಾದರು. ತಂದೆ ಭೀಮರಾಜ ಷಿಲಾಂಗಿನ ಅಂಗಡಿ ಮುಚ್ಚಿ ಕಲ್ಕತ್ತೆಗೆ ಬಂದುಬಿಟ್ಟರು. ರಾಮಕಾರದೇವಿ ಹನುಮಾನ ಪ್ರಸಾದರನ್ನು ಕರೆದುಕೊಂಡು ರತನಗಢದಲ್ಲಿ ಬಂದು ನೆಲಸಿದಳು.

ಅರಳುವ ಮನಸ್ಸು

ಈ ವೇಳೆಗೆ ಬಾಲಕ ಹನುಮಾನ ಪ್ರಸಾದನಿಗೆ ಆರು ವರ್ಷಗಳಾಗಿದ್ದವು. ಆದರೂ ಮನೆಯ ತಾಪತ್ರಯಗಳಿಂದಾಗಿ ಹುಡುಗ ಶಾಲೆಗೆ ಸೇರಿರಲಿಲ್ಲ. ರತನಗಢಕ್ಕೆ ಬಂದಮೇಲೆ, ಚೋರಾಜೀ ಶಿಕ್ಷಣ ಶಾಲೆಯಲ್ಲಿ ಶಿಕ್ಷಣ ಆರಂಭವಾಯಿತು. ಎಲ್ಲದಕ್ಕಿಂತ ಹೆಚ್ಚಾಗಿ ಭಖನ್ನಾಥರ ಪ್ರಭಾವವಾಯಿತು. ಇವರು ಜನರಿಂದ ಬಹು ಗೌರವಗಳಿಸಿದ್ದ ಯೋಗಿಗಳು. ಇದರಿಂದಾಗಿ ಹನುಮಾನ್ ಪ್ರಸಾದನಿಗೆ ಈ ವಯಸ್ಸಿನಲ್ಲಿಯೇ ಭಗವದ್ಗೀತೆಯ ಪರಿಚಯವಾಯಿತು. ಬಾಲಕ ಒಂದೇ ವರ್ಷದಲ್ಲಿ ಭಗವದ್ಗೀತೆಯನ್ನು ಬಾಯಿಯಲ್ಲಿ ಹೇಳುವಂತಾದ. ಗೀತೆಯ ಮೂಲಕ ಸಂಸ್ಕೃತ ಭಾಷೆಯೂ ಅಭ್ಯಾಸವಾಯಿತು. ಮುಂದೆ ಭಖನ್ನಾಥಜೀಯವರೇ ಹನುಮಾನ್ ಪ್ರಸಾದರ ಅಧ್ಯಾತ್ಮ ಗುರುವೂ ಆದರೂ. ಭಖನ್ನಾಥರು ದೊಡ್ಡ ದೊಡ್ಡ ವಿಚಾರಗಳನ್ನೂ ಮನಸ್ಸಿಗೆ ಹಿಡಿಸುವಂತೆ ಹೇಳುತ್ತಿದ್ದರು. ದೇವರು ಎಲ್ಲರಲ್ಲೂ ಇದ್ದಾನೆ, ಮಾನವರ ಅದರಲ್ಲೂ ರೋಗಿಗಳ, ಅನಾಥರ ಸೇವೆ ಮನುಷ್ಯಜೀವನದ ಗುರಿಯಾಗಬೇಕು ಎನ್ನುವುದೇ ಇವರ ಉಪದೇಶದ ಸಾರಾಂಶ.

ಹನುಮಾನ ಪ್ರಸಾದರಿಗೆ ಚಿಕ್ಕಂದಿನಿಂದಲೇ ಅನೇಕ ಭಾಷೆಗಳ ಪರಿಚಯವಿತ್ತು. ಹಿಂದಿ ಮಾತೃಭಾಷೆ. ಅಸ್ಸಾಂನಲ್ಲಿದ್ದುದರಿಂದ ಬಂಗಾಳಿಯೂ ಮಾತೃಭಾಷೆಯಂತೆಯೇ ಆಗಿತ್ತು. ಗುಜರಾತಿ, ಮರಾಠಿ ಭಾಷೆಗಳಲ್ಲೂ ಇದ್ದ ಭಕ್ತಿ ಸಾಹಿತ್ಯವನ್ನು  ಅಭ್ಯಾಸಮಾಡಿದ್ದರು. ಕಲ್ಕತ್ತೆಯಲ್ಲಿ ಆಯೋಧ್ಯಾಸಿಂಹರಿಂದ ಇಂಗ್ಲಿಷ್ ಕಲಿತರು. ಸಂಸ್ಕೃತವನ್ನಂತೂ ಬಾಲ್ಯದಿಂದಲೇ ಅಭ್ಯಾಸಮಾಡಿದ್ದರು. ಜೊತೆಗೆ ಬರೆಯುವ ಅಭ್ಯಾಸವೂ ಬೆಳೆಯಿತು. ಕಿಶೋರರಾಗಿದ್ದಾಗಲೇ ಹಿಂದಿಯಲ್ಲಿ ಸಾಮಾಜಿಕ ಮತ್ತು ರಾಜಕೀಯ ವಿಚಾರಗಳನ್ನು ಕುರಿತ ಲೇಖನಗಳನ್ನು ಬರೆದು ಪ್ರಕಟಿಸಿದ್ದರು.

ಹನುಮಾನ್ ಪ್ರಸಾದರು ಚಿಕ್ಕಂದಿನಿಂದ ಗಂಭೀರ ಸ್ವಭಾವದವರು, ಏಕಾಂತ ಪ್ರಿಯರು, ಅಧ್ಯಯಶೀಲರು. ಎಂಟು ವರ್ಷದವರಾಗಿದ್ದಾಗಲೇ ನಿಂಬಾರ್ಕ ಸಂಪ್ರದಾಯದ ಬ್ರಜದಾಸರಿಂದ ವೈಷ್ಣವ ದೀಕ್ಷೆ ಪಡೆದರು. ಅದೇ ವರ್ಷ ರತನಗಢದಲ್ಲಿ ಮುಂಜಿಯೂ ಆಯಿತು.

ವಿವಾಹ-ಉದ್ಯೋಗ

ಆ ಕಾಲದ ಪದ್ಧತಿಯಂತೆ ೧೨ ವರ್ಷದವರಿದ್ದಾಗಲೇ ವಿವಾಹವೂ ನಿಶ್ಚಯವಾಯಿತು. ವಧು ಮಹಾದೇವಿ ಬಾಯಿ ಎಂಬ ಹುಡುಗಿ.

ಮದುವೆಗೆ ಇನ್ನೂ ಕೆಲವೇ ದಿನಗಳುಳಿದಿದ್ದವು. ಹುಡುಗಿಗೆ ಸಿಡುಬು ಬಂದಿತು. ಸಿಡುಬೇನೊ ವಾಸಿಯಾಯಿತು. ಆದರೆ ಮುಖದಲ್ಲೆಲ್ಲ ಕಪ್ಪು ಕಲೆಗಳು ಉಳಿದವು.

ಹುಡುಗಿಯ ಮನೆಯವರಿಗೆ ಚಿಂತೆ-ಗಂಡಿನವರು ಮದುವೆ ಬೇಡ ಎಂದುಬಿಡುತ್ತಾರೇನೋ ಎಂದು.

ಆದರೆ ಸತ್ಯನಿಷ್ಠೆಯವರಾದ ಹನುಮಾನ್ ಪ್ರಸಾದರ ಕಡೆಯವರು ವಧುವಿನ ಕಡೆಯವರಿಗೆ ಕೊಟ್ಟ ಮಾತನ್ನು ಮೀರಲು ಇಷ್ಟಪಡಲಿಲ್ಲ. ಮದುವೆ ನಡೆದುಹೋಯಿತು. ಆಗ ಹನುಮಾನ ಪ್ರಸಾದರಿಗೆ ಹದಿನಾರು ವರ್ಷ.

ವಿವಾಹವಾದ ನಂತರ ಹನುಮಾನ್ ಪ್ರಸಾದರು ಕಲ್ಕತ್ತೆಗೆ ಬಂದು ತಂದೆಯ ವ್ಯಾಪಾರದಲ್ಲಿ ನೆರವಾದರು.

ಜೀವನಕ್ಕಾಗಿ ವ್ಯಾಪಾರದಲ್ಲಿ ನಿರತರಾಗಿದ್ದರೂ ಹನುಮಾನ್ ಪ್ರಸಾದರು ಅಷ್ಟಕ್ಕೆ ತೃಪ್ತರಾಗಿ ಕೂಡಲಿಲ್ಲ. ಜನರಿಗೆ ಹಿಂದೂ ಧರ್ಮ ಸರಿಯಾಗಿ ಅರ್ಥವಾಗಬೇಕು. ತಾವು ಹಿಂದೂಗಳು ಎಂದುಕೊಂಡರೆ ಸಾಲದು, ತಮ್ಮ ಧರ್ಮವನ್ನು ತಿಳಿದುಕೊಳ್ಳಬೇಕು ಎಂದು ಅವರ ಬಯಕೆ. ಬಿಡುವಿನ ವೇಳೆಯಲ್ಲಿ ತಮ್ಮ ಸ್ನೇಹಿತರನ್ನು ಕೂಡಿಸಿಕೊಂಡು ‘‘ಸನಾತನ ಧರ್ಮ ಪುಷ್ಟಿಕಾರಿಣಿ ಸಭೆ’’ ಯನ್ನು ಪ್ರಾರಂಭಿಸಿದರು. ಸನಾತನ ಧರ್ಮದ ಪ್ರಚಾರ, ಸಾಹಿತಿಗಳನ್ನು  ಸನ್ಮಾನಿಸುವುದು ಮುಂತಾದವು ಈ ಸಂಸ್ಥೆಯ ಮುಖ್ಯ ಕಾರ್ಯಕ್ರಮಗಳಾದವು.

ಕಲ್ಕತ್ತೆಗೆ ಬಂದ ಮೇಲೆ ಹನುಮಾನ್ ಪ್ರಸಾದರ ಜೀವನ ನಿಯಮಿತರೂಪದಲ್ಲಿ ನಡೆಯಲಾರಂಭಿಸಿತು. ಅಂಗಡಿ ನೋಡಿಕೊಳ್ಳುವುದು, ಸಾಧು ಮಹಾತ್ಮರ ಸತ್ಕಾರ, ಅಜ್ಜಿ ತಂದೆಯವರ ಮಾರ್ಗದರ್ಶನದಲ್ಲಿ ಸಾಧನೆ, ಸಮಾಜ ಸೇವೆ, ಅಧ್ಯಯನ….ಇವು ಅವರ ದಿನಚರ್ಯಗಳಾದವು. ಇದೇ ಸಮಯದಲ್ಲಿ ಜೈನ ಸ್ನೇಹಿತರ ಪ್ರಭಾವದಿಂದ ಜೈನಧರ್ಮದ ಪರಿಚಯವಾಯಿತು. ನಾನಾ ಧರ್ಮಗಳ ಪರಿಚಯದಿಂದಾಗಿ  ಇವರಲ್ಲಿ ಧಾರ್ಮಿಕ ಸಹಿಷ್ಣುತೆ, ಉದಾರತೆಗಳು ಬೆಳೆದವು.

ಅಧ್ಯಾತ್ಮದತ್ತ

ಹನುಮಾನ್ ಪ್ರಸಾದರ ಸಾಂಸಾರಿಕ ಜೀವನ ಸುಖಕರವಾಗಿರಲಿಲ್ಲ. ಒಂದು ಮಗುವನ್ನು ಹಡೆದು ಹೆಂಡತಿ ತೀರಿಕೊಂಡಳು. ಅನಂತರ ಎರಡು ತಿಂಗಳಲ್ಲೆ ಆ ಮಗುವೂ ತಾಯಿಯನ್ನೇ ಹಿಂಬಾಲಿಸಿತು. ಹೆಂಡತಿ ತೀರಿಕೊಂಡಾಗ ಪ್ರಸಾದರಿಗೆ ಇಪ್ಪತ್ತು ವರ್ಷ.

ಹೆಂಡತಿ ಮತ್ತು ಮಗನ ಮರಣದಿಂದ ಹನುಮಾನ್ ಪ್ರಸಾದರ ಮನಸ್ಸು ಕಲಕಿತು. ತುಂಬಾ ದುಃಖವಾಯಿತು. ಸತ್ಸಂಗ, ಪ್ರಾರ್ಥನೆ, ಅಧ್ಯಯನಗಳಲ್ಲಿ ತಮ್ಮ ದುಃಖವನ್ನು ಮರೆಯಲು ಪ್ರಯತ್ನಿಸಿದರು.

ಈ ಘಟನೆ ನಡೆದ ಕೆಲವು ದಿನಗಳಲ್ಲೇ ಹನುಮಾನ್ ಪ್ರಸಾದರಿಗೆ ಸ್ವಾಮಿ ಶಂಕರಾನಂದ ಎನ್ನುವ ಹಠಯೋಗಿಗಳ ಪರಿಚಯವಾಯಿತು. ಆಧ್ಯಾತ್ಮ ವಿಚಾರಗಳ ಜೊತೆ ಈ ಸ್ವಾಮಿಯವರಿಗೆ ರಾಜಕೀಯದಲ್ಲೂ ಆಸಕ್ತಿಯಿತ್ತು. ಅವರ ಪ್ರಭಾವದಿಂದಾಗಿ ಹನುಮಾನ್ ಪ್ರಸಾದರಿಗೂ ರಾಜಕೀಯದಲ್ಲಿ ಅಭಿರುಚಿ ಹುಟ್ಟಿತು. ಅವರೂ ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸಲಾರಂಭಿಸಿದರು.

ರಾಜಗಢದ ಸೇಠ ಮಂಗತೂರಾಮ ಅವರ ಮಗಳು ಸುವಟೀಬಾಯಿಯೊಂದಿಗೆ ಪ್ರಸಾದರ ಎರಡನೆ ಮದುವೆ ನಡೆಯಿತು.

ದೇಶಸೇವೆಯ ನಾಂದಿ

ತಂದೆ ತೀರಿ ಹೋದ ಮೇಲೆ ಹನುಮಾನ್ ಪ್ರಸಾದರು ಹೆಚ್ಚು ಹೆಚ್ಚಾಗಿ ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸಲಾರಂಭಿಸಿದರು. ವ್ಯಾಪಾರದ ಕೆಲಸ ಸ್ವಲ್ಪ ಹಿಂದೆ ಬಿದ್ದಿತೆಂದೇ ಹೇಳಬೇಕು. ರಾಜಕೀಯ ಮತ್ತು ಸಾಮಾಜಿಕ ಸೇವಾಕಾರ್ಯಗಳಿಗೆ ಸಂಬಂಧಿಸಿದ ಎಲ್ಲ ಸಂಸ್ಥೆಗಳೊಂದಿಗೆ ಹನುಮಾನ್ ಪ್ರಸಾದರ ಸಂಪರ್ಕ ಬೆಳೆಯಿತು. ‘ಹಿಂದೂ ಕ್ಲಬ್’,‘ಹಿಂದೂ ಸಭಾ’,‘ವೈಶ್ಯ ಸಭಾ’,‘ಹಿಂದೀ ಸಾಹಿತ್ಯ ಪರಿಷತ್’,‘ಸಾಹಿತ್ಯ ಸಂವರ್ಧಿನೀ ಸಮಿತಿ’ ,‘ಸಾವಿತ್ರಿ ಕನ್ಯಾ ಪಾಠಶಾಲಾ’,‘ಬಡಾ ಬಾಜಾರ್ ಪುಸ್ತಕಾಲಯ’‘ಮುಂತಾದ ಸಂಸ್ಥೆಗಳ ಸಕ್ರಿಯ ಸದಸ್ಯರಾಗಿದ್ದರು.

ದೇಶಪ್ರೇಮ ಹನುಮಾನ್ ಪ್ರಸಾದರ ರಕ್ತದಲ್ಲೇ ಹರಿದುಬಂದಿತ್ತು. ೧೯೦೫ ರಲ್ಲಿ ಬ್ರಿಟಿಷ್ ಸರ್ಕಾರ ಬಂಗಾಳವನ್ನು ಎರಡು ಭಾಗ ಮಾಡಿತು. ಇದನ್ನು ವಿರೋಧಿಸಿ ದೇಶದಲ್ಲೆಲ್ಲ ಚಳುವಳಿ ನಡೆಯಿತು. ಆಗ ಹನುಮಾನ್ ಪ್ರಸಾದರಿಗೆ ಕೇವಲ ಹದಿಮೂರು ವರ್ಷ ವಯಸ್ಸು. ಆಗ ಅವರು ಯಾವ ಶಾಲೆಯ ವಿದ್ಯಾರ್ಥಿಯೂ ಆಗಿರಲಿಲ್ಲ. ಸ್ವಭಾವವೂ ಶಾಂತ. ಅಂತಹವರೂ ಕಣ್ಣೆದುರಿಗೆ ನಡೆಯುತ್ತಿದ್ದ ಚಳುವಳಿಗಳ ಪ್ರಭಾವದಿಂದ ತಪ್ಪಿಸಿಕೊಳ್ಳಲಾಗಲಿಲ್ಲ. ಮಹಾತ್ಮಾ ಗಾಂಧಿಯವರು ಸ್ವದೇಶಿ ವಸ್ತ್ರದ ವ್ರತವನ್ನು ಕೈಗೊಳ್ಳುವುದಕ್ಕೆ ಅನೇಕ ವರ್ಷಗಳ ಮುಂಚೆಯೇ ಹನುಮಾನ್ ಪ್ರಸಾದರು ಸ್ವದೇಶಿ ವಸ್ತ್ರ ತೊಡಲು ಆರಂಭಿಸಿದರು. ಭಾರತದ ರಾಷ್ಟ್ರೀಯ ಕಾಂಗ್ರೆಸ್ಸಿನ ಸದಸ್ಯರೂ ಆದರು.

ಉಗ್ರವಾದಿ ಯುವಕರೊಡನೆ

೧೯೦೬ ರಲ್ಲಿ ಉಗ್ರವಾದಿ ಮಾರವಾಡಿ ಯುವಕರು ಒಂದಾಗಿ ಒಂದು ಗುಪ್ತ ಸಮಿತಿಯನ್ನು ಸ್ಥಾಪಿಸಿಕೊಂಡಿದ್ದರು. ರಾಜಕೀಯ ಚಟುವಟಿಕೆಗಳು ಮಾತ್ರವಲ್ಲದೆ ಸಮಾಜ ಸುಧಾರಣೆಯೂ ಈ ಸಂಸ್ಥೆಯ ಉದ್ದೇಶವಾಗಿತ್ತು. ತುಂಬಾ ಚಿಕ್ಕ ವಯಸ್ಸಿನಲ್ಲೆ ಹುಡುಗ ಹುಡುಗಿಯರಿಗೆ ಮದುವೆ ಮಾಡುವುದು, ತುಂಬಾ ವಯಸ್ಸಾದ ಗಂಡಸರು ಎಳೆ ವಯಸ್ಸಿನ ಹುಡುಗಿಯರನ್ನು ಮದುವೆಯಾಗುವುದು- ಇವನ್ನು ನಿಷೇಧಿಸುವುದು, ಪ್ರವಾಹ ಪೀಡಿತರಿಗೆ ಸಹಾಯ, ಚಿಕಿತ್ಸೆ ಮುಂತಾದವುಗಳು ಈ ಸಂಸ್ಥೆಯ ಕಾರ್ಯಕ್ರಮಗಳಾಗಿದ್ದವು. ಹನುಮಾನ್ ಪ್ರಸಾದರು ಇದರ ಸಕ್ರಿಯ ಸದಸ್ಯರಾದರು. ಸಂಸ್ಥೆಯ ಸೇವಾಕಾರ್ಯಗಳಲ್ಲಿ ಅಗ್ರಗಣ್ಯರಾಗಿದ್ದರು.

ಭಾರತವನ್ನು ಇಂಗ್ಲೆಂಡ್ ತನ್ನ ಮುಷ್ಟಿಯೊಳಗಿಟ್ಟು ಕೊಂಡಿದ್ದ ಕಾಲ ಇದು. ಭಾರತ ತನ್ನ ಮುಷ್ಟಿಯಲ್ಲೇ ಉಳಿಯಬೇಕು ಎಂದೂ ಅದರ ಹಠ. ಗುಪ್ತ ಸಮಿತಿಯ ಮೇಲೆ ಅದರ ಕಣ್ಣು ಬಿತ್ತು. ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದೆ ಎಂದು ಆಪಾದನೆ ಹೊರಿಸಿ ಸರಕಾರ ಈ ಸಂಸ್ಥೆಯನ್ನು ಬಹಿಷ್ಕರಿಸಿತು.

ಆಗ ಕಲ್ಕತ್ತೆ ಕ್ರಾಂತಿಯ ಕೇಂದ್ರವಾಗಿತ್ತು. ಭಗವದ್ಗೀತೆ ಕ್ರಾಂತಿಕಾರರಿಗೆ ಸ್ಪೂರ್ತಿಯ ನೆಲೆ ಎನ್ನಿಸಿಕೊಂಡಿತ್ತು. ಪ್ರತಿ ಕ್ರಾಂತಿಕಾರಿಯ ಕೈಯಲ್ಲೂ ಗೀತೆ ಇದ್ದೇ ಇರುತ್ತಿತ್ತು. ಹನುಮಾನ್ ಪ್ರಸಾದರಿಗಂತೂ ಭಗವದ್ಗೀತೆಯಲ್ಲಿ ಚಿಕ್ಕಂದಿನಿಂದಲೂ ಶ್ರದ್ಧೆ, ಪರಿಶ್ರಮಗಳಿದ್ದವು. ಈಗ ಬಂಗಾಳಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿದ್ದ ರಾಜನೀತಿ ಮತ್ತು ಧಾರ್ಮಿಕ ಗ್ರಂಥಗಳನ್ನು ಅಭ್ಯಾಸಮಾಡಿದರು. ಕಲ್ಕತ್ತದಿಂದ ಆಗ ಅನೇಕ ಪತ್ರಿಕೆಗಳು ಪ್ರಕಟವಾಗುತ್ತಿದ್ದವು, ಸಾಹಿತಿಗಳಿಗೂ ಅದು ಕೇಂದ್ರವಾಗಿತ್ತು. ಹನುಮಾನ್ ಪ್ರಸಾದರಿಗೆ ಈ ಎಲ್ಲ ಪತ್ರಿಕೆಗಳ ಸಂಪಾದಕರ ಹಾಗೂ ಅನೇಕ ಸಾಹಿತಿಗಳ ಪರಿಚಯವಿತ್ತು, ಇವರೆಲ್ಲರ ಪ್ರಭಾವದಿಂದ ಅವರೂ ಬರೆಯಲಾರಂಭಿಸಿದರು. ಧರ್ಮ, ಸಮಾಜ ಸುಧಾರಣೆ, ರಾಜನೀತಿ ಮುಂತಾದ ವಿಷಯಗಳ ಬಗ್ಗೆ ಬರೆಯತ್ತಿದ್ದರು.

ಮಹಾಪುರುಷರ ಪ್ರಭಾವ

ಇದೇ ಸಂದರ್ಭದಲ್ಲಿ ಅವರಿಗೆ ಆ ಕಾಲದ ಅನೇಕ ಮಹಾಪುರುಷರ ಭೇಟಿಯೂ ಆಯಿತು. ವಿಶ್ವಕವಿ ರವೀಂದ್ರನಾಥ ಠಾಕೂರರನ್ನು ಹನುಮಾನ್ ಪ್ರಸಾದರು ಆಗಾಗ ಭೇಟಿಯಾಗಿ ಮಾತನಾಡುತ್ತಿದ್ದರು. ೧೯೧೫ರಲ್ಲಿ ಪ್ರಥಮಬಾರಿಗೆ ಗಾಂಧೀಜಿಯ ಪರಿಚಯವಾಯಿತು. ಕೊನೆಯವರೆಗೂ ಇಬ್ಬರಲ್ಲೂ ಸ್ನೇಹವಿತ್ತು. ತಿಲಕರಿಂದ ವಿಶೇಷವಾಗಿ ಪ್ರಭಾವಿತರಾಗಿದ್ದರು.

ಕಾಶಿಯಲ್ಲಿ ಹಿಂದೂ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಬೇಕೆಂದು ಪಂಡಿತ ಮದನಮೋಹನ ಮಾಲವೀಯರು ಪ್ರಯತ್ನಿಸಿದಾಗ ಹನುಮಾನ್ ಪ್ರಸಾದರು ಅವರಿಗೆ ತುಂಬಾ ನೆರವಾದರು. ರಾಜರ್ಷಿ ಟಂಡನರು ಹನುಮಾನ್ ಪ್ರಸಾದರ ಆಪ್ತಮಿತ್ರರು. ಇದೇ ದಿನಗಳಲ್ಲಿ ಅರವಿಂದಘೋಷರು ವಿದೇಶದಿಂದ ಕಲ್ಕತ್ತೆಗೆ ಬಂದು ನೆಲಸಿದರು. ಇಂಗ್ಲಿಷಿನ ಕರ್ಮಯೋಗಿ, ಬಂಗಾಳಿಯಲ್ಲಿ ಪ್ರಕಟವಾಗುತ್ತಿದ್ದ ‘ವಂದೇಮಾತರಂ’ ಮತ್ತು ಧರ್ಮಪತ್ರಿಕೆಗಳಿಗೆ ಅರವಿಂದರು ಸಂಪಾದಕರಾಗಿದ್ದರು. ಇವುಗಳೆಲ್ಲವನ್ನೂ ಹನುಮಾನ್ ಪ್ರಸಾದರು ತುಂಬಾ ಆಸಕ್ತಿಯಿಂದ ಓದುತ್ತಿದ್ದರು. ಈ ಪತ್ರಿಕೆಗಳಲ್ಲಿ ಕ್ರಾಂತಿಕಾರಿ ವಿಚಾರಗಳು ಪ್ರಕಟವಾಗುತ್ತಿದ್ದವು.

ಪ್ರಸಾದರು ‘ಸ್ವದೇಶ ಬಾಂಧವ ಸಮಿತಿ’  ಎನ್ನುವ ಕ್ರಾಂತಿದಳದ ಸದಸ್ಯರಾದರು. ದೀನಬಂಧು ಚಿತ್ರರಂಜನ ದಾಸರ ಪ್ರಭಾವದಿಂದಾಗಿ ಕ್ರಾಂತಿಕಾರಿಗಳೊಂದಿಗೆ ನೇರವಾದ ಸಂಪರ್ಕವೇ ಬೆಳೆಯಿತು. ಬ್ರಿಟಿಷ್ ಸರಕಾರ ಅನೇಕ ಮಂದಿ ಕ್ರಾಂತಿಕಾರಿಗಳನ್ನು ದೇಶದಿಂದ ಹೊರಕ್ಕೆ ಹಾಕುತ್ತಿತ್ತು. ಆ ಕ್ರಾಂತಿಕಾರಿಗಳಿಗೆ ನೆರವಾಗುವುದಕ್ಕಾಗಿಯೂ ಹನುಮಾನ್ ಪ್ರಸಾದರು ತುಂಬಾ ಹೋರಾಡಿದರು.

ದುಃಖದಲ್ಲಿಯೂ ದೇಶದ ಕೆಲಸ

ಹನುಮಾನ್ ಪ್ರಸಾದರ ಸಾಂಸಾರಿಕ ಜೀವನ ಮತ್ತೆ ಬಿರುಗಾಳಿಗೆ ಸಿಕ್ಕಿತು. ಎರಡನೆಯ ಹೆಂಡತಿ ಸುವಟೀಬಾಯಿಯೂ ಒಂದು ಗಂಡು ಮಗುವನ್ನು ಹೆತ್ತು ತೀರಿಕೊಂಡಳು, ಮಗುವೂ ಬದುಕಲಿಲ್ಲ. ಆಗ ಪೋದ್ದಾರರಿಗೆ ೨೭ ವರ್ಷ ವಯಸ್ಸು.

ಕುಟುಂಬ ಜೀವನದಲ್ಲಿ ಪದೇ ಪದೇ ಅಪಘಾತವನ್ನು ಅನುಭವಿಸುತ್ತಿದದರೂ, ಪೋದ್ದಾರರು ವಿಷಾದದಿಂದ ಕೈಕಟ್ಟಿ ಕುಳಿತುಕೊಳ್ಳಲಿಲ್ಲ. ಸಂಸಾರದ ದುಃಖ, ಕಷ್ಟಗಳು ಅವರ ರಾಜಕೀಯ, ಸಾಮಾಜಿಕ ಚಟುವಟಿಕೆಗಳಿಗೆ ಯಾವ ರೀತಿಯಲ್ಲೂ ಅಡ್ಡಿಯಾಗಲಿಲ್ಲ. ಕ್ರಾಂತಿಕಾರಿಗಳೊಂದಿಗೆ ಸಂಪರ್ಕ, ಅವರ ಪರವಾಗಿ ಕೋರ್ಟಿನಲ್ಲಿ ಸಾಕ್ಷಿ ಹೇಳುವುದು, ರಹಸ್ಯ ಸಮಿತಿಗಳೊಂದಿಗೆ ನಿಕಟ ಸಂಬಂಧ, ಅವರಿಗೆ ಸಾಧ್ಯವಾದಷ್ಟು ನೆರವು ಈ ಕಾರ್ಯಗಳು ನಿರಂತರವಾಗಿ ನಡೆಯುತ್ತಲೇ ಇದ್ದವು. ಇದೇ ಕಾರಣಕ್ಕಾಗಿ ಪೋಲಿಸರ ಡೈರಿಯಲ್ಲಿ ಇವರ ಹೆಸರೂ ಬಿತ್ತು. ಒಮ್ಮೆಯಂತೂ ಇವರ ಮನೆಯ ಶೋಧನೆಯೂ ನಡೆಯಿತು.

ಅಜ್ಜಿ ರಾಮಕಾರದೇವಿ ಬಲವಂತದಿಂದ ಮೊಮ್ಮಗನನ್ನು ಮತ್ತೆ ಮದುವೆಗೆ ಒಪ್ಪಿಸಿದಳು. ರಾಮದೇಯಿ ಬಾಯಿಯೊಂದಿಗೆ ಮೂರನೆಯ ವಿವಾಹವಾಯಿತು.

ಸೆರೆಮನೆ

ಕಲ್ಕತ್ತೆಯಲ್ಲಿ ಆರ್.ವಿ.ರೋಡಾ ಅಂಡ್ ಕಂಪನಿ ಎನ್ನುವ ಒಂದು ವ್ಯಾಪಾರ ಸಂಸ್ಥೆ ಇತ್ತು. ವಿದೇಶಗಳಿಂದ ಮದ್ದು ಗುಂಡುಗಳನ್ನು ಪಿಸ್ತೂಲುಗಳನ್ನು ಆಮದು ಮಾಡಿಕೊಳ್ಳುವುದು ಇದರ ವ್ಯವಹಾರ. ೧೯೧೪ ಜುಲೈ ೧೬ರಂದು ಕ್ರಾಂತಿಕಾರಿಗಳು ತುಂಬಾ ಉಪಾಯವಾಗಿ ರಹಸ್ಯವಾಗಿ ಈ ಆಯುಧಗಳನ್ನು ವಶಪಡಿಸಿಕೊಂಡರು. ಈ ಪ್ರಕರಣಕ್ಕೆ ‘ರೋಡಾ ಕಾಂಡ’ ಎಂದೇ ಹೆಸರಾಯಿತು. ಈ ಸಂದರ್ಭದಲ್ಲಿ ಅನೇಕರನ್ನು ಸರಕಾರ ಬಂಧಿಸಿತು. ಅವರಲ್ಲಿ ಹನುಮಾನ್ ಪ್ರಸಾದರೂ ಒಬ್ಬರು. ಮಿಕ್ಕವರ ಜೊತೆ ಅವರೂ ಜೈಲಿಗೆ ಹೋದರು.

ಜೈಲಿನಲ್ಲಿ ಅವರೆಲ್ಲಾ ವಿವಿಧ ರೀತಿಯ ದೈಹಿಕ ಮತ್ತು ಮಾನಸಿಕ ಹಿಂಸೆಗಳನ್ನು ಅನುಭವಿಸಬೇಕಾಯಿತು. ಅವರಿಗೆ ಕೊಳಕು ಆಹಾರವನ್ನು ಕೊಡುತ್ತಿದ್ದರು. ಇದನ್ನು ಪ್ರತಿಭಟಿಸಿ ಊಟಮಾಡುವುದಿಲ್ಲವೆಂದು ಹನುಮಾನ್ ಪ್ರಸಾದರು ಮುಷ್ಕರ ಹೂಡಿದರು.

ಪೋದ್ದಾರರು ಸೆರೆಮನೆಗೆ ಹೋದದ್ದರಿಂದ ಅವರ ಸಂಸ್ಥೆಯ ವ್ಯಾಪಾರ ಹದಗೆಟ್ಟು ಹಣಕಾಸಿನ ಸ್ಥಿತಿ ಏರುಪೇರಾಯಿತು. ಮನೆಯಲ್ಲಿ ಇದ್ದವರು ಹೆಂಗಸರು ಮಾತ್ರ. ಅವರ ನೆರವಿಗೆ ಬರುವವರು ಯಾರೂ ಇರಲಿಲ್ಲ. ಇಷ್ಟಾದರೂ ಹನುಮಾನ್ ಪ್ರಸಾದರು ಚಿಂತೆಯಿಂದ ಕಂಗೆಡಲಿಲ್ಲ. ದೇವರ ನಾಮ ಜಪ ಮಾಡುತ್ತಾ ಮನಸ್ಸನ್ನು ಶಾಂತಸ್ಥಿತಿಯಲ್ಲಿಟ್ಟುಕೊಂಡಿದ್ದರು.

ಕೆಲವು ದಿನಗಳ ನಂತರ ಹನುಮಾನ್ ಪ್ರಸಾದರನ್ನು ಜೈಲಿನಿಂದ ಬಿಡುಗಡೆ ಮಾಡಿದರೂ, ಸರ್ಕಾರ ಅವರನ್ನು ದೂರದ ಶಿಮಲಪಾಲ ಎಂಬಲ್ಲಿ ಸ್ಥಾನಬದ್ಧತೆಯಲ್ಲಿಟ್ಟಿತು. ಮಹಾಪುರುಷರು ಎಲ್ಲಿದ್ದರೂ ಎಲ್ಲರ ಮೇಲೂ ಪ್ರಭಾವ ಬೀರುತ್ತಾರೆ. ಹನುಮಾನ್ ಪ್ರಸಾದರು ಕೆಲವೇ ದಿನಗಳಲ್ಲಿ ಪೊಲೀಸಿನವರಿಗೂ ಮಿತ್ರರಾದರು.

ಹನುಮಾನ್ ಪ್ರಸಾದರು ಶಿಮಲಪಾಲದಲ್ಲಿದ್ದಾಗ ಆಧ್ಯಾತ್ಮಿಕ  ಸಾಧನೆಯಲ್ಲಿ ಬಹಳಮಟ್ಟಿಗೆ ಮುಂದುವರಿದರು. ಉಪನಿಷತ್ತು, ಪುರಾಣ, ದರ್ಶನ, ಭಗವದ್ಗೀತೆಯ ವ್ಯಾಖ್ಯಾನಗಳು, ವೈಷ್ಣವ ಸಂಪ್ರದಾಯದ ಗ್ರಂಥಗಳನ್ನೆಲ್ಲಾ ಅಧ್ಯಯನ ಮಾಡಿದರು. ತಮ್ಮ ಅಧ್ಯಯನದ ಜೊತೆ ತೋಟಗಾರಿಕೆ ಮತ್ತು ಹೋಮಿಯೋಪತಿ ಔಷಧ ಪ್ರಯೋಗಗಳನ್ನು ಕಲಿತರು. ಇದರಿಂದಾಗಿ ಗ್ರಾಮಸ್ಥರಿಗೆ ಚಿಕಿತ್ಸೆ ಮಾಡುವುದಕ್ಕೆ ಅನುಕೂಲವಾಯಿತು. ನಾಮಜಪವನ್ನಂತೂ ನಿಷ್ಠೆಯಿಂದ ಮಾಡುತ್ತಿದ್ದರು. ಏಕಾದಶಿ ವ್ರತವನ್ನು ತಪ್ಪದೆ ಆಚರಿಸುತ್ತಿದ್ದರು.ನಾರದ ಭಕ್ತಿಸೂತ್ರದ ಮೇಲೆ ಟೀಕೆ ಬರೆದರು.(ಮುಂದೆ ಇದರ ಇಂಗ್ಲಿಷ್ ಮತ್ತು ಸಂಸ್ಕೃತದ ಅನುವಾದಗಳು ಪ್ರಕಟವಾದವು) ಸ್ಥಾನಬದ್ಧತೆಯ ಶಿಕ್ಷೆಯಿಂದ ಹನುಮಾನ್ ಪ್ರಸಾದರಿಗೆ ಒಂದು ರೀತಿಯಲ್ಲಿ ಉಪಕಾರವೇ ಆಯಿತೆನ್ನಬಹುದು. ಏಕಾಂತ ಸಾಧನೆಗೆ ಅವರಿಗೆ ಸಮಯ ಸಿಕ್ಕಿತು.

ಇಪ್ಪತ್ತೊಂದು ತಿಂಗಳುಗಳ ನಂತರ ಪೋದ್ದಾರರಿಗೆ ಬಿಡುಗಡೆಯಾಯಿತು. ಆದರೆ ಜೊತೆಗೇ ಬಂಗಾಳವನ್ನು ಬಿಟ್ಟುಹೋಗುವಂತೆ ಆಜ್ಞೆಯನ್ನು ವಿಧಿಸಲಾಯಿತು. ಶಿಮಲಪಾಲದಲ್ಲಿದ್ದ ಪೋದ್ದಾರರು ತಮ್ಮ ಸಾತ್ವಿಕತೆಯಿಂದ, ಒಳ್ಳೆಯತನದಿಂದ ಹಳ್ಳಿಯವರ ಪ್ರೀತಿ, ಗೌರವಗಳನ್ನು ಪಡೆದಿದ್ದರು. ಅವರು ಹೊರಟಾಗ ಅಲ್ಲಿನ ಗ್ರಾಮಸ್ಥರ ದುಃಖ ಹೇಳತೀರದು.

ಮನೆಯಲ್ಲೆ ಸೆರೆ

ಪರಿವಾರ ಸಮೇತ ಹನುಮಾನ್ ಪ್ರಸಾದರು ರಾಜಸ್ತಾನದ ರತನಗಢಕ್ಕೆ  ಬಂದರು. ಆದರೆ ಇಲ್ಲಿ ಅವರಿಗೆ ಒಂದು ಮನೆಯನ್ನು ಬಿಟ್ಟರೆ ಬೇರೆ ಯಾವ ಆಸ್ತಿಯೂ ಇರಲಿಲ್ಲ. ಸಾವಿರಾರು ರೂಪಾಯಿಗಳ ಸಾಲ ಮಾತ್ರ ಹೆಗಲ ಮೇಲಿತ್ತು. ವಂಶದ ಪದ್ಧತಿಯಂತೆ ವ್ಯಾಪಾರ ಮಾಡುವ ಇಚ್ಛೆಯಿತ್ತು, ಆದರೆ ಬಂಡವಾಳ ಇರಲಿಲ್ಲ. ಇದೇ ಸಮಯದಲ್ಲಿ ಸೇಠ್ ಜಮನಾಲಾಲ ಬಜಾಜರಿಂದ ಮುಂಬಯಿಗೆ ಬರುವಂತೆ ಆಹ್ವಾನ ಬಂತು. ಅದೇ ಪ್ರಕಾರ ಮುಂಬಯಿಗೆ ಬಂದು ಬಜಾಜರೊಂದಿಗೆ ಅನೇಕ ವ್ಯಾಪಾರಗಳಲ್ಲಿ ತೊಡಗಿದರು.

ಇಷ್ಟೆಲ್ಲಾ ಆದರೂ ಹನುಮಾನ್ ಪ್ರಸಾದರಿಗೆ ದೇಶಸೇವೆಯ ಕಡೆ ಗಮನ ಇದ್ದೇ ಇತ್ತು. ಮುಂಬಯಿಗೆ ಬಂದು ಒಂದೂವರೆ ವರ್ಷಗಳಾದ ಮೇಲೂ ಇವರು ಕ್ರಾಂತಿಗಳಿಗೆ ಧನಸಹಾಯ ಮಾಡುತ್ತಲೇ ಇದ್ದರು. ಆದರೆ ಕ್ರಮೇಣ ಅವರಿಗೆ ಹಿಂಸೆಯ ಬಗ್ಗೆ ನಂಬಿಕೆ ಹೊರಟುಹೋಗಿತ್ತು. ಮಹಾತ್ಮಾ ಗಾಂಧಿಯವರ ಪ್ರಭಾವದಿಂದ ಅಹಿಂಸಾವಾದಿ ಚಳವಳಿಯಲ್ಲಿ ವಿಶ್ವಾಸ ಮೂಡಿತು. ಅನಂತರ ಅವರು ಕಾಂಗ್ರೆಸಿನ ಸದಸ್ಯರೂ ಆದರು.

ಒಂದು ಪ್ರಸಂಗ

ಗಾಂಧೀಜಿಯವರ ಉಪದೇಶದಂತೆ ಖಾದಿ ತೊಡುವು ದನ್ನೂ, ವಿದೇಶಿ ವಸ್ತ್ರಗಳ ಬಹಿಷ್ಕಾರವನ್ನೂ ಆರಂಭಿಸಿದರು. ‘ಮಾರವಾಡಿ ಖಾದಿ ಪ್ರಚಾರ ಮಂಡಳಿ’ ಸ್ಥಾಪಿಸಿ ಖಾದಿ ಬಟ್ಟೆಯ ವ್ಯಾಪಾರವನ್ನು ಶುರುಮಾಡಿದರು. ಮಹಾತ್ಮಾ ಗಾಂಧಿಯವರೇ ಖುದ್ದಾಗಿ ಪೋದ್ದಾರರ ಮನೆಗೆ ಬಂದು ಮನೆಯಲ್ಲಿದ್ದ ವಿದೇಶೀ ವಸ್ತ್ರಗಳನ್ನು ಕೇಳಿದರು. ಅಜ್ಜಿ ರಾಮಕಾದೇವಿ ಕೂಡಾ ತನ್ನಲ್ಲಿದ್ದ ರೇಷ್ಮೆ ವಸ್ತ್ರಗಳನ್ನು ಕೊಟ್ಟಳು. ಒಳಗಿದ್ದ ವಿದೇಶಿ ಬಟ್ಟೆಗಳನ್ನೆಲ್ಲಾ ಅಂಗಳಕ್ಕೆ ತಂದು ಒಟ್ಟುಗೂಡಿಸಿ ಸುಟ್ಟರು.

ಅಧ್ಯಾತ್ಮ ಮತ್ತು ಸಮಾಜ ಸೇವೆ

ರಾಜಕೀಯ ರಂಗದಲ್ಲಿದ್ದ ಭಿನ್ನಾಭಿಪ್ರಾಯಗಳು, ದ್ವೇಷ ಅಸೂಯೆಗಳನ್ನು ಕಂಡು ಹನುಮಾನ್ ಪ್ರಸಾದರಿಗೆ ಕ್ರಮೇಣ ಅದರಲ್ಲಿ ನಿರಾಸಕ್ತಿ ಉಂಟಾಯಿತು. ಆಧ್ಯಾತ್ಮಿಕ ಮತ್ತು ಸಮಾಜ ಸೇವೆಗಳ ಕಡೆ ಹೆಚ್ಚು ಹೆಚ್ಚು ಗಮನ ಕೊಡಲಾರಂಭಿಸಿದರು. ಗೃಹಕೃತ್ಯದಲ್ಲಿ ತಮ್ಮ ಪಾಲಿಗೆ ಬಂದಿದ್ದ ಕರ್ತವ್ಯಗಳನ್ನು ಮುಗಿಸಿದರು. ತಂಗಿಯರಾದ ಅನ್ನಪೂರ್ಣ ಮತ್ತು ಚಂದಾಬಾಯಿಯವರ ಮದುವೆಯನ್ನು ಮಾಡಿದರು. ಮದುವೆಯಲ್ಲೂ ವಧೂವರರಿಗೆ ಕೇವಲ ಖಾದಿ ವಸ್ತ್ರಗಳನ್ನೇ ಕೊಟ್ಟರು.

ಮುಂಬಯಿಯಲ್ಲಿ ‘‘ಅಖಿಲ ಭಾರತೀಯ ಮಾರವಾಡಿ ಅಗ್ರವಾಲ ಮಹಾಸಭೆ’’ ಎಂಬ ಸಂಸ್ಥೆಯೊಂದು ಸಮಾಜ ಸೇವಾಕಾರ್ಯಗಳಲ್ಲಿ ನಿರತವಾಗಿತ್ತು. ಹೆಸರಿಗೆ ಮಾರವಾಡಿ ಮಹಾಸಭೆ ಎಂದಿದ್ದರೂ ಅದು ಇಡೀ ಹಿಂದೂ ಸಮಾಜದ ಹಿತವನ್ನು ಬಯಸುವ ಸಂಸ್ಥೆಯಾಗಿತ್ತು. ಹನುಮಾನ್ ಪ್ರಸಾದರು ಈ ಸಂಸ್ಥೆಯ ಸದಸ್ಯರಾಗಿದ್ದರು. ಕ್ರಮೇಣ ಪ್ರಾಂತೀಯ ಶಾಖೆಯ ಕಾರ್ಯದರ್ಶಿಗಳಾದರು. ಈ ಸಂಸ್ಥೆಯ ಮೂಲಕ ಅನೇಕ ಸಾಮಾಜಿಕ ಅನಿಷ್ಟಗಳನ್ನು ವಿರೋಧಿಸಿದರು. ಆ ಕಾಲದಲ್ಲಿ ಹೋಳಿಹಬ್ಬವನ್ನು ಜನ ಕೀಳುಮಟ್ಟದಲ್ಲಿ ಆಚರಿಸುತ್ತಿದ್ದರು, ಅದರ ಸಂಭ್ರಮದಲ್ಲಿ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದರು. ಪೋದ್ದಾರರು ಅದನ್ನು ಹಿಡಿತಕ್ಕೆ ತಂದರು. ಆ ದಿನ ಹರಿಕಥೆ ಮುಂತಾದವನ್ನು ಏರ್ಪಡಿಸಲು ವ್ಯವಸ್ಥೆ ಮಾಡಿದರು.

ಅಧ್ಯಾತ್ಮವಂತೂ ಹನುಮಾನ್ ಪ್ರಸಾದರ ಜೀವನದ ಉಸಿರಾಗಿತ್ತು. ಮರಾಠಿ ಮತ್ತು ಗುಜರಾತಿ ಭಾಷೆಗಳಲ್ಲಿದ್ದ ಭಕ್ತಿ ಸಾಹಿತ್ಯವನ್ನೆಲ್ಲಾ ಅಧ್ಯಯನ ಮಾಡಿದರು. ಇವರು ರಚಿಸಿದ ಕೃತಿಗಳಲ್ಲಿ ‘‘ಮನ ಕೋ ವಶ ಕರನೇ ಕಾ ಉಪಾಯ್’’ (ಮನಸ್ಸನ್ನು ವಶಪಡಿಸಿಕೊಳ್ಳುವ ಉಪಾಯ) ಎನ್ನುವುದು ಮುಖ್ಯವಾದದ್ದು.

ಹನುಮಾನ್ ಪ್ರಸಾದರಲ್ಲಿ ಒಂದು ವಿಶೇಷವಾದ ಆಕರ್ಷಣೆಯಿತ್ತು. ಎಲ್ಲಾ ಸಾಮಾಜಿಕ ಅಂತಸ್ತುಗಳ, ಎಲ್ಲಾ ವಯಸ್ಸಿನ ಜನರೂ ಅವರಿಗೆ ಆತ್ಮೀಯರಾಗುತ್ತಿದ್ದರು. ಜಮನಾಲಾಲ್ ಬಜಾಜ್, ಡಾಕ್ಟರ್ ರಾಮಮನೋಹರ ಲೋಹಿಯಾ ಮುಂತಾದ ರಾಜಕೀಯ ವ್ಯಕ್ತಿಗಳಂತೆಯೇ ಸಂತ ಕಟ್ಟೂ ಭಾಯಿಯವರು, ಭಗವದ್ಗೀತೆಯ ಬಗ್ಗೆ ಪ್ರವಚನ ಮಾಡುತ್ತಿದ್ದ ನರಹರಿ ಶಾಸ್ತ್ರಿಗಳು, ಬಾಂಕುಡದ ಜಯದಯಾಲಜಿ ಗೋವಿಂದ ಮುಂತಾದ ಧಾರ್ಮಿಕ ವ್ಯಕ್ತಿಗಳೊಂದಿಗೂ ಪೋದ್ದಾರರಿಗೆ ಸ್ನೇಹವಿತ್ತು. ಜಯದಯಾಲಜಿಯವರ ಪ್ರಭಾವದಿಂದ ಇವರು ಮುಂಬಯಿಯಲ್ಲಿ ‘ಗೀತೆ’, ‘ರಾಮಚರಿತ ಮಾನಸ’ ಗ್ರಂಥಗಳ ವ್ಯಾಖ್ಯಾನವನ್ನೂ ಸಾಧು ಸಂತರ, ಭಕ್ತರ ಬಗ್ಗೆ ಕೀರ್ತನೆಯನ್ನೂ ಮಾಡಲಾರಂಭಿಸಿದರು.

ಸಂಗೀತಕ್ಕಾಗಿ

ಬೇರೆಯವರಿಗೆ ಸಹಾಯ ಮಾಡುವುದಂತೂ ಪೋದ್ದಾರರಿಗೆ ರಕ್ತಗತವಾಗಿ ಬಂದಿದ್ದ ಗುಣ. ಪ್ರಸಿದ್ಧ ಹಿಂದೂಸ್ತಾನಿ ಸಂಗೀತಗಾರರಾದ ವಿಷ್ಣು ದಿಗಂಬರ ಪಲೂಸ್ಕರ್ ಅವರಿಗೂ ಹನುಮಾನ್ ಪ್ರಸಾದರಿಗೂ ನಿಕಟ ಸ್ನೇಹವಿತ್ತು. ಅವರು ಹನುಮಾನ್ ಪ್ರಸಾದರಿಗೆ ಅನೇಕ ರಾಗ ರಾಗಿಣಿಯರ ಪರಿಚಯವನ್ನು ಮಾಡಿಸಿದರು. ಇದರಿಂದಾಗಿ ಪೋದ್ದಾರರು ಬೇರೆ ಬೇರೆ ರಾಗಗಳಲ್ಲಿ ಭಕ್ತಿಗೀತೆಗಳನ್ನು ರಚಿಸುವುದು ಸಾಧ್ಯವಾಯಿತು. ವಿಷ್ಣು ದಿಗಂಬರ ಪಲೂಸ್ಕರರು ಜನಸಾಮಾನ್ಯರಿಗೂ ಸಂಗೀತವನ್ನು ಕಲಿಸಬೇಕೆಂಬ ಉದ್ದೇಶದಿಂದ ಮುಂಬಯಿಯಲ್ಲಿ ಗಾಂಧರ್ವ ವಿದ್ಯಾಲಯವನ್ನು ತೆರೆದಿದ್ದರು. ಇದು ಪ್ರಸಿದ್ಧ ಸಂಗೀತ ಸಂಸ್ಥೆಗಳಲ್ಲಿ ಮುಖ್ಯವಾದುದಾಗಿತ್ತು. ಆದರೆ ಸಂಸ್ಥೆಗೆ ಸರಿಯಾದ ಆದಾಯ ಯಾವುದೂ ಇರಲಿಲ್ಲವಾದ್ದರಿಂದ ಸಾಲದ ಹೊರೆ ದಿನ ದಿನಕ್ಕೆ ಹೆಚ್ಚಿತು. ಕೊನೆಗೆ ಸಾಲ

ಎಪ್ಪತ್ತೈದು ಸಾವಿರ ರೂಪಾಯಿಗಳಷ್ಟಾಯಿತು. ಈ ಸಾಲವನ್ನು ತೀರಿಸುವ ಮಾರ್ಗ ಕಾಣದೆ ಪಲೂಸ್ಕರರವರು ತುಂಬಾ ಚಿಂತಿತರಾಗಿದ್ದರು. ಹನುಮಾನ್ ಪ್ರಸಾದರ ಬಳಿಯೂ ಅಷ್ಟೊಂದು ಹಣ ಇರಲಿಲ್ಲ. ಆದರೆ ಪಲೂಸ್ಕರರಿಗೆ ಸಹಾಯ ಮಾಡಲೇಬೇಕೆಂದು ಅವರಿಗೆ ಮನಸ್ಸು. ತಮ್ಮ ಹೆಸರಿನಲ್ಲೇ ಬೇರೆಯವರಿಂದ ಸಾಲ ತೆಗೆದುಕೊಂಡು ವಿಷ್ಣು ದಿಗಂಬರರಿಗೆ ಕೊಟ್ಟರು!

ಮುಂದೆ ಕೆಲವು ದಾನಿಗಳಿಂದ ಸಂಸ್ಥೆಗೆ ಹಣ ಬಂದು ಈ ಸಾಲದ ಕೆಲವು ಭಾಗ ತೀರಿತಾದರೂ ಹೆಚ್ಚಿನ ಭಾಗವನ್ನು ಪೋದ್ದಾರರೇ ತೀರಿಸಿದರು. ಗೋರಖಪುರಕ್ಕೆ ಬಂದಮೇಲೂ ಅವರು ಸಾಲಕ್ಕೆ ಹಣ ಕಟ್ಟುತ್ತಲೇ ಇದ್ದರು.

ಸಂಸಾರದ ನೋವು ಸಂಕಟಗಳು ಹನುಮಾನ್ ಪ್ರಸಾದರನ್ನು ಕಾಡುತ್ತಲೇ ಇದ್ದವು. ಒಂದು ಗಂಡು ಮಗು ಹುಟ್ಟಿ ಸುಮಾರು ಒಂದೂವರೆ ವರ್ಷಗಳು ಬದುಕಿ ಸತ್ತುಹೋಯಿತು. ಅನಂತರ ಹುಟ್ಟಿದ ಹೆಣ್ಣುಮಗಳು ಸಾವಿತ್ರಿ ಒಬ್ಬಳೇ ಬೆಳೆದು ದೊಡ್ಡವಳಾದುದು. ಈ ಮಧ್ಯೆ ತಾಯಿಗಿಂತ ಹೆಚ್ಚಿನ ಮಮತೆಯಿಂದ ಪೋದ್ದಾರರನ್ನು ಸಾಕಿ ಬೆಳೆಸಿದ ರಾಮಕಾರದೇವಿಯೂ ಮರಣ ಹೊಂದಿದಳು.

ಹೊರಗಿನ ಯಾವ ಜಂಜಾಟಕ್ಕೂ ಬಗ್ಗದೆ ಹನುಮಾನ್ ಪ್ರಸಾದರು ತಮ್ಮ ಸಾಧನೆಯಲ್ಲೇ ನಿರತರಾಗಿದ್ದರು. ಸ್ವಂತ ಸಾಧನೆಯಲ್ಲಿ ತುಂಬಾ ಮುಂದುವರಿದಿದ್ದರು, ಅದರಿಂದ ಸಾಕಷ್ಟು ತೃಪ್ತಿ ಪಡೆದಿದ್ದರು.

ಕಲ್ಯಾಣದ ಯೋಜನೆ

ಆದರೆ ತಾವು ಮನಶ್ಶಾಂತಿಯನ್ನು ಕಂಡುಕೊಂಡರೆ ಸಾಕು ಎಂದು ಒಂಟಿಯಾಗಿ ಇತರರಿಂದ ದೂರ ಉಳಿದವರಲ್ಲ. ಸುತ್ತಲ ಜನರ ದುಃಖವನ್ನು, ದ್ವೇಷಾಸೂಯೆಗಳನ್ನು ದೂರಮಾಡುವುದು ಹೇಗೆ ಎನ್ನುವ ಚಿಂತೆ ಇವರನ್ನು ಸದಾ ಕಾಡುತ್ತಿತ್ತು.

ಈ ಚಿಂತನೆ ‘ಕಲ್ಯಾಣ’ ಪತ್ರಿಕೆಯ ರೂಪದಲ್ಲಿ ಪ್ರಕಟಗೊಂಡಿದ್ದೂ ಆಕಸ್ಮಿಕವೇ.

೧೯೨೬ ರಲ್ಲಿ ದೆಹಲಿಯಲ್ಲಿ ‘‘ಮಾರವಾಡಿ ಅಗ್ರವಾಲ ಮಹಾಸಭೆ’’ ಯ ವಾರ್ಷಿಕ ಅಧಿವೇಶನ ನಡೆಯಿತು. ಸೇಠ್ ಜಮನಾಲಾಲ ಬಜಾಜರರು ಈ ಅಧಿವೇಶನದ ಅಧ್ಯಕ್ಷರಾಗಿದ್ದರು. ಆತ್ಮಾರಾಮ ಖೇಮಕಾ ಅವರು ಸ್ವಾಗತಾಧ್ಯಕ್ಷರಾಗಿದ್ದರು. ಆತ್ಮಾರಾಮರು ಪಂಡಿತರಾಗಿದ್ದರೂ ಅವರಿಗೆ ಹಿಂದಿಯಲ್ಲಿ ಬರೆಯುವ ಅಭ್ಯಾಸವಿರಲಿಲ್ಲ. ಅದರಿಂದಾಗಿ ಸೇಠ್ ಜಮನಾಲಾಲರು ಸ್ವಾಗತ ಭಾಷಣವನ್ನು ಸಿದ್ಧಮಾಡುವಂತೆ ಹನುಮಾನ್ ಪ್ರಸಾದರನ್ನು ಕೇಳಿದರು. ಹನುಮಾನ್ ಪ್ರಸಾದರು ದೆಹಲಿಗೆ ಬಂದು ಎರಡೇ ದಿನಗಳಲ್ಲಿ ಕೇಳುವವರ ವಿಚಾರಶಕ್ತಿಯನ್ನು ಎಚ್ಚರಗೊಳಿಸುವಂತಹ ಸ್ವಾಗತಭಾಷಣವನ್ನು ಸಿದ್ಧಪಡಿಸಿದರು. ಈ ಭಾಷಣ ಎಲ್ಲರ ಮೆಚ್ಚುಗೆಯನ್ನು ಗಳಿಸಿತು.

ಅಧಿವೇಶನಕ್ಕೆ ಸೇಠ್ ಘನಶ್ಯಾಮದಾಸ್ ಬಿರ‍್ಲಾ ಅವರೂ ಆಗಮಿಸಿದ್ದರು. ಅವರು ಹನುಮಾನ್ ಪ್ರಸಾದರನ್ನು ಕಂಡು ಹೇಳಿದರು: ‘‘ಭಾಯಿಯವರೇ, ನಿಮ್ಮ ಅನೇಕ ವಿಚಾರಗಳು ಸಮಾಜಕ್ಕೆ ಉಪಯುಕ್ತವಾಗಿವೆ. ನಿಮ್ಮ ಈ ವಿಚಾರಗಳು ಸಿದ್ಧಾಂತಗಳು ಜನತೆಗೆ ಮುಟ್ಟಬೇಕಾದರೆ ನಿಮ್ಮದೇ ಆದ ಒಂದು ಪತ್ರಿಕೆ ಇದ್ದರೆ ಒಳ್ಳೆಯದು. ನೀವು ಒಂದು ಪತ್ರಿಕೆ ಆರಂಭಿಸಿ.’’

ಹನುಮಾನ್ ಪ್ರಸಾದರು ಬಿರ‍್ಲಾ ಅವರ ಮಾತನ್ನು ಒಪ್ಪಿದರೂ, ಒಂದು ಪತ್ರಿಕೆಯ ಸಂಪಾದಕನಾಗುವ ಶಕ್ತಿ ನನಗಿಲ್ಲ ಎಂದರು.

ಅಧಿವೇಶನದಿಂದ ಹಿಂತಿರುಗಿ ಬರುವಾಗ ರೈಲಿನಲ್ಲಿ ಹನುಮಾನ್ ಪ್ರಸಾದರು ಸೇಠ್ ಜಮನಾಲಾಲ ಬಜಾಜರ ಹತ್ತಿರ ಬಿರ‍್ಲಾ ಹೇಳಿದ ಮಾತನ್ನು ತಿಳಿಸಿದರು. ಅವರ ಜೊತೆ ಲಕ್ಷಿ ರಾಮಜೀ ಎಂಬ ಮತ್ತೊಬ್ಬ ಆತ್ಮೀಯರೂ ಇದ್ದರು. ಈ ಇಬ್ಬರಿಗೂ ಪತ್ರಿಕೆಯನ್ನು ಆರಂಭ ಮಾಡುವ ವಿಚಾರ ತುಂಬಾ ಇಷ್ಟವಾಯಿತು. ಏನು ಹೆಸರಿಡಬೇಕೆಂಬ ಯೋಜನೆ ಬಂದಾಗ ಹನುಮಾನ್ ಪ್ರಸಾದರೇ ‘ಕಲ್ಯಾಣ’ ಎಂಬ ಹೆಸರನ್ನು ಸೂಚಿಸಿದರು. ಅದೇ ವರ್ಷ ಅಕ್ಷಯ ತದಿಗೆಯ ದಿನದಂದು ಪತ್ರಿಕೆಯನ್ನು ಪ್ರಾರಂಭಿಸಲೇಬೇಕೆಂದು ಸೇಠ್‌ರವರೂ ಆದೇಶ ನೀಡಿದರು. ಊರಿಗೆ ಬಂದು ಎಲ್ಲರೂ ತಮ್ಮ ತಮ್ಮ ದಾರಿ ಹಿಡಿದು ಹೊರಟು ಹೋದರು.

ಅಕ್ಷಯ ತದಿಗೆ ಬಂದು ಹೋಯಿತು. ಪತ್ರಿಕೆ ಆರಂಭವಾಗಲಿಲ್ಲ.

ಇದು ದೈವೇಚ್ಛೆ

ಕೆಲವು ದಿನಗಳ ನಂತರ ಮುದ್ರಣಾಲಯವೊಂದರ ಮಾಲೀಕರಾದ ಕೃಷ್ಣದಾಸ ಎನ್ನುವವರು ಹನುಮಾನ್ ಪ್ರಸಾದರನ್ನು ಭೇಟಿಯಾಗಲು ಬಂದರು. ಮಾತಿನ ಮಧ್ಯೆ ಪತ್ರಿಕೆಯನ್ನು ಆರಂಭಿಸುವ ವಿಚಾರ ಬಂತು. ಹನುಮಾನ್ ಪ್ರಸಾದರನ್ನು ‘ಕಲ್ಯಾಣ’ ದಂತಹ ಒಂದು ಪತ್ರಿಕೆಯನ್ನು ಆರಂಭಿಸಲೇಬೇಕೆಂದು ಕೃಷ್ಣದಾಸರು ಒತ್ತಾಯಪಡಿಸಿದರು. ಲೇಖನಗಳನ್ನು ಸಿದ್ಧಪಡಿಸಿ ಕೊಟ್ಟರೆ ಮುದ್ರಣದ ಹೊರೆಯನ್ನು ತಾವು ವಹಿಸಿಕೊಳ್ಳುವುದಾಗಿ ಭರವಸೆ ನೀಡಿದರು. ಹನುಮಾನ್‌ಪ್ರಸಾದರು ಅದಕ್ಕೆ ಎಷ್ಟು ಹೇಳಿದರೂ ಒಪ್ಪಲಿಲ್ಲ. ಕೊನೆಗೆ ಕೃಷ್ಣದಾಸರು ಆವೇಶದಿಂದ ‘‘ಭಾಯೀಜಿ, ದೇವರು ನಿಮ್ಮನ್ನು ಒಂದಲ್ಲ ಎರಡು ಬಾರಿ ಪ್ರಾಣಾಪಾಯದಿಂದ ರಕ್ಷಿಸಿದ್ದಾನೆ. ಕಾಯಿಲೆಯಿಂದ, ಭೂಕಂಪದಿಂದ ಕಾಪಾಡಿದ್ದಾನೆ. ನಿಮ್ಮಿಂದ ಲೋಕೋಪಕಾರದ ಕೆಲಸ ಆಗಬೇಕೆಂಬುದು ದೈವೇಚ್ಛೆ’’ ಎಂದರು. ಕೃಷ್ಣದಾಸರ ಈ ಮಾತನ್ನು ನಿರಾಕರಿಸುವುದು ಹನುಮಾನ್ ಪ್ರಸಾದರಿಗೆ ಸಾಧ್ಯವಾಗಲಿಲ್ಲ. ‘‘ದೇವರ ಇಚ್ಛೆಯಂತಾಗಲಿ, ‘ಕಲ್ಯಾಣ’ ಪತ್ರಿಕೆ ಸಂಪಾದಕತ್ವದ ಹೊಣೆ ಒಪ್ಪಿಕೊಳ್ಳುತ್ತೇನೆ’’ ಎಂದರು. ೧೯೨೬ ರಲ್ಲಿ ಶ್ರಾವಣಮಾಸ ಕೃಷ್ಣಪಕ್ಷದ ಏಕಾದಶಿಯಂದು ‘ಕಲ್ಯಾಣ’ದ ಮೊದಲ ಸಂಚಿಕೆ ಪ್ರಕಟವಾಯಿತು.

‘ಕಲ್ಯಾಣ’ ಪತ್ರಿಕೆಯ ಮುಖ್ಯ ಉದ್ದೇಶ ಹಿಂದೂ ಧರ್ಮದ ಸಿದ್ಧಾಂತಗಳನ್ನೂ, ವೇದಗಳು ಶಾಸ್ತ್ರಗಳು ಪುರಾಣಗಳು ರಾಮಾಯಣ ಮಹಾಭಾರತಗಳು – ಎಲ್ಲವನ್ನೂ ಜನರು ಮಾತನಾಡುವ ಭಾಷೆಯಲ್ಲಿ ಸರಳವಾಗಿ ವಿವರಿಸಿ ಪರಿಚಯ ಮಾಡಿಕೊಡುವುದು.

ಗಾಂಧೀಜಿಯ ಆಶೀರ್ವಾದ

ಹೊಸದಾಗಿ ಆರಂಭವಾದ ‘ಕಲ್ಯಾಣ’ ಪತ್ರಿಕೆಗೆ ಮಹಾತ್ಮಗಾಂಧಿಯವರಿಂದ ಆಶೀರ್ವಾದ ಪಡೆಯುವ ಉದ್ದೇಶದಿಂದ ಹನುಮಾನ್ ಪ್ರಸಾದರು, ಜಮನಾಲಾಲ ಬಜಾಜರೊಂದಿಗೆ ಅವರ ಬಳಿಗೆ ಹೋದರು. ಪತ್ರಿಕೆಯ ಉದ್ದೇಶಗಳನ್ನು ಕೇಳಿದ ಗಾಂಧೀಜಿ ತುಂಬಾ ಸಂತೋಷಪಟ್ಟು ಎರಡು ನಿಯಮಗಳನ್ನು ಪಾಲಿಸುವಂತೆ ಹನುಮಾನ್ ಪ್ರಸಾದರಿಗೆ ತಿಳಿಸಿದರು. ‘ಹೊರಗಿನ ಯಾವ ಜಾಹೀರಾತನ್ನು ಪ್ರಕಟಿಸಬೇಡಿ ಮತ್ತು ಯಾವ ಪುಸ್ತಕದ ವಿಮರ್ಶೆಯನ್ನೂ ಪ್ರಕಟಿಸಬೇಡಿ’ ಎಂದು ಹೇಳಿದರು. ದುಡ್ಡಿಗಾಗಿ ಎಲ್ಲ ರೀತಿಯ ಜಾಹೀರಾತುಗಳನ್ನು ಪ್ರಕಟಿಸುವುದರಿಂದ ಜನರಿಗೆ ಮೋಸ ಮಾಡಿದಂತಾಗುತ್ತದೆ ಎಂಬುದು ಮೊದಲ ನಿಯಮಕ್ಕೆ ಕಾರಣ. ಪುಸ್ತಕ ವಿಮರ್ಶಯಿಂದ ಅನೇಕ ಲೇಖಕರ ಮನಸ್ತಾಪ ಕಟ್ಟಿಕೊಳ್ಳಬೇಕಾಗುತ್ತದೆಂಬುದು ಎರಡನೆಯ ನಿಯಮಕ್ಕೆ ಕಾರಣ. ಹನುಮಾನ್ ಪ್ರಸಾದರು ಗಾಂಧೀಜಿಯವರ ಈ ಎರಡು ನಿಯಮಗಳನ್ನು ಒಪ್ಪಿಕೊಂಡರು ಮತ್ತು ಮುಂದೆ ಎಂಥದೇ ಸಂದರ್ಭ ಬಂದಾಗಲೂ ಇವುಗಳನ್ನು ಮೀರಲಿಲ್ಲ.

ಕಲ್ಯಾಣ

‘ಕಲ್ಯಾಣ’ದ ಮೊದಲ ಸಂಚಿಕೆಯೇ ಪಂಡಿತರನ್ನೂ ಸಾಮಾನ್ಯರನ್ನೂ ಮೆಚ್ಚಿಸಿತು. ಮುಂದೆ ಕ್ರಮವಾಗಿ ಪತ್ರಿಕೆ ಪ್ರಕಟವಾಯಿತು. ಸುಮಾರು ಹದಿನಾಲ್ಕು ವಿಶೇಷಾಂಕಗಳು ಹೊರಬಂದವು. ಇವುಗಳಲ್ಲಿ ಭಗವನ್ನಾಮಾಂಕ ಮೊದಲನೆಯದು.

‘ಕಲ್ಯಾಣ’ ಪತ್ರಿಕೆಯ ಜನಪ್ರಿಯತೆ ದಿನದಿನಕ್ಕೆ ಹೆಚ್ಚುತ್ತಲೇ ಹೋಯಿತು. ಹನುಮಾನ್ ಪ್ರಸಾದರು ತನ್ಮಯರಾಗಿ ಅದರ ಕೆಲಸದಲ್ಲೇ ನಿರತರಾಗಿದ್ದರು. ಅನೇಕ ಶಾಸ್ತ್ರಗಳ ಅಭ್ಯಾಸ ಮಾಡಿದರು, ಸಾಧು ಸಂತರ ಜೀವನ ಚರಿತ್ರೆಯ ಅಧ್ಯಯನ ನಡೆಸಿದರು. ಸಂಸ್ಕೃತ, ಹಿಂದೀ, ಗುಜರಾತಿ, ಮರಾಠಿ ಮತ್ತು ಇಂಗ್ಲಿಷ್‌ಗಳಲ್ಲಿದ್ದ ಉತ್ತಮ ಗ್ರಂಥಗಳನ್ನೆಲ್ಲಾ ಸಂಗ್ರಹಿಸಿ ಓದುತ್ತಿದ್ದರು; ಅವಕ್ಕೆ ಸಂಬಂಧಪಟ್ಟ ಲೇಖನಗಳನ್ನು ಬರೆಯುತ್ತಿದ್ದರು. ತನ್ನ ಅನುಯಾಯಿಗಳಲ್ಲಿ ಯಾರ ಸಾಧನೆಯಲ್ಲೂ, ಯಾವ ತೊಡಕೂ ಉಂಟಾಗದ ಹಾಗೆ, ಯಾರ ಮನಸ್ಸಿಗೂ ನೋವಾಗದ ಹಾಗೆ ಎಚ್ಚರಿಕೆ ವಹಿಸುತ್ತಿದ್ದರು. ಪತ್ರಿಕೆಯಲ್ಲಿ ಪಾರಮಾರ್ಥಿಕ ವಿಚಾರಗಳಿಗೇ ಪ್ರಾಧಾನ್ಯ ಇರುತ್ತಿತ್ತು.

ಗೋರಖಪುರದಲ್ಲಿ

ಬರಬರುತ್ತಾ ಹನುಮಾನ್ ಪ್ರಸಾದರಿಗೆ ಮುಂಬಯಿಯ ಗಲಾಟೆಯ ಜೀವನ ಬೇಸರ ತರಿಸಿತು. ಗಂಗಾತೀರದಲ್ಲಿ, ಪ್ರಶಾಂತ ವಾತಾವರಣದಲ್ಲಿ ವಾಸಿಸುವ ಇಚ್ಛೆ ಬಲವಾಯಿತು. ಅದೇ ರೀತಿ ತಾವು ಮುಂಬಯಿ ಬಿಡುವ ವಿಚಾರವನ್ನು ಸ್ನೇಹಿತರಿಗೆ ತಿಳಿಸಿದರು. ಸೇಠ್ ಜಮನಾಲಾಲ ಬಜಾರರು ‘‘ನೀವು ಎಲ್ಲೇ ಇದ್ದರೂ ‘ಕಲ್ಯಾಣ’ ಪತ್ರಿಕೆಯನ್ನು ನೀವೇ ವಹಿಸಿಕೊಳ್ಳಬೇಕು’’ ಎಂದರು. ಗೋರಖಪುರದಲ್ಲಿ ‘‘ಗೀತಾ ಪ್ರೆಸ್’’ ಇದ್ದುದರಿಂದ ಹನುಮಾನ್ ಪ್ರಸಾದರು ಅಲ್ಲೆ ನೆಲೆಸುವುದೆಂದೂ, ಅಲ್ಲಿಂದಲೇ ‘ಕಲ್ಯಾಣ’ ಪತ್ರಿಕೆ ಪ್ರಕಟವಾಗಬೇಕೆಂದೂ ನಿಶ್ಚಯವಾಯಿತು.

ಗೋರಖಪುರದಲ್ಲಿ ಹನುಮಾನ್ ಪ್ರಸಾದರಿಗೆ ಅವರ ಇಷ್ಟದೈವದ ದರ್ಶನವೂ ಆಯಿತೆಂದು ಹೇಳುತ್ತಾರೆ.

೧೯೩೪ರಲ್ಲಿ ‘ಕಲ್ಯಾಣ’ ಪತ್ರಿಕೆಯ ಉದ್ದೇಶಗಳನ್ನೇ ಒಳಗೊಂಡಿದ್ದ ‘‘ಕಲ್ಯಾಣ ಕಲ್ಪತರು’’ ಎಂಬ ಇಂಗ್ಲಿಷ್ ಪತ್ರಿಕೆಯೂ ಆರಂಭವಾಯಿತು. ಪ್ರಪಂಚದ ಎಲ್ಲ ಭಾಗಗಳಲ್ಲೂ ಈ ಪತ್ರಿಕೆಗೆ ಬೇಡಿಕೆಯಿತ್ತು. ಈ ಪತ್ರಿಕೆಯೂ ಹನುಮಾನ್ ಪ್ರಸಾದರ ಮೇಲ್ವಿಚಾರಣೆಯಲ್ಲಿಯೇ ಪ್ರಕಟವಾಗುತ್ತಿತ್ತು.

ಈ ಎರಡೂ ಪತ್ರಿಕೆಗಳ ಜೊತೆ ೧೯೫೫ ರಲ್ಲಿ

‘ಮಹಾಭಾರತ’ ಎನ್ನುವ ಮಾಸಿಕ ಪತ್ರಿಕೆಯೂ ಪೋದ್ದಾರರ ನೇತೃತ್ವದಲ್ಲಿ ಆರಂಭವಾಯಿತು. ಮಹಾಭಾರತದ ಮೂಲ ಶ್ಲೋಕಗಳನ್ನು ಹಿಂದೀ ಅರ್ಥದ ಸಮೇತ ಈ ಪತ್ರಿಕೆಯಲ್ಲಿ ಪ್ರಕಟಿಸುತ್ತಿದ್ದರು. ಸುಮಾರು ಏಳು ವರ್ಷಗಳು ಈ ಪತ್ರಿಕೆ ಪ್ರಕಟವಾಯಿತು. ೭೫೦೦ ಪ್ರತಿಗಳು ಖರ್ಚಾಗುತ್ತಿದ್ದವು.

ಅಗಾಧ, ಅಮೂಲ್ಯ ಬರಹ

ತಮ್ಮ ಕೆಲಸಕಾರ್ಯಗಳ ಜೊತೆ ಹನುಮಾನ್ ಪ್ರಸಾದರು ಎಷ್ಟೊಂದು ಬರೆದಿದ್ದಾರೆ ಎಂದು ನೋಡಿದರೆ ಆಶ್ಚರ್ಯವಾಗುತ್ತದೆ. ಇಪ್ಪತ್ತೆ ದು ಸಾವಿರ ಪುಟಗಳಷ್ಟು ಬರೆದಿದ್ದಾರೆ.ಇದಲ್ಲದೆ ‘ಕಲ್ಯಾಣ’ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಲೇಖನಗಳು ಬೇರೆ. ಈ ಬರಹಗಳಲ್ಲಿ ಪ್ರಬಂಧಗಳು, ಪಾರಮಾರ್ಥಿಕ ವಿಚಾರಗಳ ಬಗ್ಗೆ ಲೇಖನಗಳು, ಸಂತರ ಜೀವನ ಚಿತ್ರಗಳೂ ಸೇರಿವೆ. ಜೊತೆಗೆ ಹನುಮಾನ್ ಪ್ರಸಾದರು ವ್ರಜಭಾಷೆ, ಖಡೀ ಖೋಲಿ ಮತ್ತು ರಾಜಸ್ತಾನಿ ಭಾಷೆಗಳಲ್ಲಿ ಎರಡು ಸಾವಿರದಷ್ಟು ಗೀತೆಗಳನ್ನು ಬರೆದಿದ್ದಾರೆ. ರಾಮಚರಿತ ಮಾನಸ, ವಿನಯಪತ್ರಿಕೆ ಮುಂತಾದ ಹಿಂದಿಯ ಪ್ರಸಿದ್ಧ ಗ್ರಂಥಗಳ ಅಧ್ಯಯನಕ್ಕೆ ಸಂಬಂಧಿಸಿದ ಲೇಖನಗಳೂ ಇವೆ. ಎಪ್ಪತ್ತನಾಲ್ಕು ಪುಸ್ತಕಗಳು ಹನುಮಾನ್ ಪ್ರಸಾದರ ಹೆಸರಿನಲ್ಲಿ ಪ್ರಕಟವಾಗಿವೆ. ಹದಿಮೂರು ಪುಸ್ತಕಗಳು ಇಂಗ್ಲಿಷ್ ಭಾಷೆಯಲ್ಲಿ ಅಚ್ಚಾಗಿವೆ.

ದೇಹದ ಚಿಂತೆ ಯಾಕೆ

ಅನೇಕ ಸಾಧು ಸಂತರು ಅನೇಕ ವಿಧದ ಖಾಯಿಲೆಗಳಿಂದ ಕಷ್ಟಪಟ್ಟಿದ್ದಾರೆ. ರೋಗದ ನೋವು, ತೊಂದರೆಗಳನ್ನು ತಾಳ್ಮೆಯಿಂದ ಸಹಿಸಿದ್ದಾರೆ. ಆತ್ಮ ಶರೀರಕ್ಕಿಂತ ಭಿನ್ನವಾದದ್ದು ಎಂಬ ಅರಿವನ್ನು ಅವರು ರಕ್ತಗತ ಮಾಡಿಕೊಂಡವರು. ಆದುದರಿಂದ ಕೆಲವು ವರ್ಷಗಳನಂತರ ಬಿದ್ದುಹೋಗುವ ದೇಹಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡಬಾರದು ಎಂದು ರೋಗ-ನೋವುಗಳನ್ನು ಸಹಿಸಿದರು. ತಮ್ಮ ಜೀವಿತದ ಕೊನೆಯ ಎರಡು ವರ್ಷಗಳು ಹನುಮಾನ್ ಪ್ರಸಾದರೂ ಭಯಂಕರ ರೋಗದಿಂದ ನರಳಿದರು. ಆದರೆ ಅವರ ದಿನನಿತ್ಯದ ಪೂಜೆ ಪ್ರವಚನ, ಕೆಲಸ ಕಾರ್ಯಗಳ ಮೇಲೆ ಈ ರೋಗದ ಪ್ರಭಾವ ಬೀಳಲಿಲ್ಲ. ಮೇಲ್ನೋಟಕ್ಕೆ ಅವರು ಸದಾ ಶಾಂತರಾಗಿ, ಪ್ರಸನ್ನರಾಗಿ ಇರುತ್ತಿದ್ದರು.

೧೯೬೯ರಲ್ಲಿ ಹೃಷಿಕೇಶದಲ್ಲಿದ್ದಾಗ ಮೊಟ್ಟಮೊದಲ ಬಾರಿ ಹನುಮಾನ್ ಪ್ರಸಾದರಿಗೆ ರೋಗ ಕಾಣಿಸಿಕೊಂಡಿತು. ವೈದ್ಯಕೀಯ ಪರೀಕ್ಷೆಗಳಾದವು. ಎಕ್ಸ್-ರೇಗಳಾದವು. ಆದರೂ ಯಾವ ರೋಗವೆಂದು ನಿಶ್ಚಯಿಸುವುದಕ್ಕೇ ಸಾಧ್ಯವಾಗಲಿಲ್ಲ. ೧೯೭೧ ರ ಜನವರಿ ತಿಂಗಳ ಕೊನೆಯ ಭಾಗ; ಮನೆಯ ವೈದ್ಯರು ಹನುಮಾನ್ ಪ್ರಸಾದರನ್ನು ಪರೀಕ್ಷಿಸಿದರು. ಅವರ ಮುಖ ಸಪ್ಪಗಾಯಿತು. ಪೋದ್ದಾರರು ಇನ್ನು ಬಹುದಿನ ಉಳಿಯುವುದಿಲ್ಲ ಎನ್ನಿಸಿ ಅವರಿಗೆ ದುಃಖ ತುಂಬಿ ಬಂದಿತು. ಅವರ ಮುಖವನ್ನು ನೋಡಿಯೇ ಪೋದ್ದಾರರು ವಿಷಯವನ್ನು ಗ್ರಹಿಸಿದರು.

ಆಗ ರೋಗಿಯೇ ವೈದ್ಯರನ್ನು ಸಮಾಧಾನ ಮಾಡಿಸಿದರು;

‘‘ಆಗುವುಗು ಆಗುತ್ತದೆ. ಅದಕ್ಕೆ ವ್ಯಥೆ ಯಾಕೆ? ಸಾವು ಬರುವುದಕ್ಕೆ ಮುಂಚೆಯೇ ಸಾವಿನ ದುಃಖ ಯಾಕೆ? ನನಗೇನೂ ಇದರ ಚಿಂತೆಯಿಲ್ಲ. ದೇಹದಲ್ಲಿ ನೋವಾಗುತ್ತಿದ್ದರೂ ಮನಸ್ಸು ಪ್ರಸನ್ನವಾಗಿದೆ.’’

ಇನ್ನೊಮ್ಮೆ ಅವರು ವೈದ್ಯರೊಂದಿಗೆ ಹೇಳಿದರು: ‘‘ನೀವು ಬಂದಾಗ ಮಾತ್ರ ನನಗೆ ರೋಗದ ನೆನಪಾಗುತ್ತದೆ. ‘‘ಮಿಕ್ಕ ಸಮಯದಲ್ಲಿ ಮನಸ್ಸು ಭಗವಂತನ ಧ್ಯಾನದಲ್ಲಿ ಮಗ್ನವಾಗಿರುತ್ತದೆ. ಶರೀರಕ್ಕೆ ರೋಗ ಬರುತ್ತದೆಯೇ ಹೊರತು ಆತ್ಮಕ್ಕಲ್ಲ. ದೇಹ, ಆತ್ಮ ಒಂದೇ ಎಂದು ಭಾವಿಸುವುದರಿಂದಲೇ ನೋವು ಕಾಣಿಸಿಕೊಳ್ಳುತ್ತದೆ.’’

ಇನ್ನೊಮ್ಮೆ ವೈದ್ಯರಿಗೆ ಹೇಳಿದರು: ‘‘ನಿಮ್ಮ ಪ್ರಯತ್ನ ಸಫಲವಾಗಲಿಲ್ಲ. ಚಿಂತಿಸಬೇಡಿ. ನಿಮ್ಮ ಪ್ರೀತಿ ಹೆಚ್ಚಿನದು.’’

ಕರ್ಮಯೋಗಿ

ಸಾಯುವುದಕ್ಕೆ ಕೆಲವು ದಿನಗಳ ಮುಂಚೆ ಪೋದ್ದಾರರು ಹೇಳಿದರು.

‘ನನಗೆ ಬುದ್ಧಿ ಬಂದಾಗಿನಿಂದ ನಾನು ಯಾರಿಗೂ ಕೇಡು ಬಯಸಿಲ್ಲ. ಎಲ್ಲರಲ್ಲೂ ದೇವರನ್ನು ಕಾಣಲು ಪ್ರಯತ್ನಿಸಿದ್ದೇನೆ. ಇದರಲ್ಲಿ ಕೆಲವು ಬಾರಿ ಸಫಲನಾಗಿದ್ದೇನೆ, ಕೆಲವು ಬಾರಿಇಲ್ಲ. ನನಗೆ ಯಾರೂ ಶತ್ರುಗಳಿಲ್ಲ.

ಸಾಯುವುದಕ್ಕೆ ನಾಲ್ಕು ದಿನಗಳು ಇದ್ದಾಗಲೂ ಅವರ ವಿಚಾರಶಕ್ತಿ ಚುರುಕಾಗಿಯೇ ಇತ್ತು. ಗಂಟಲ ದ್ರವ ಆರಿದ್ದಾಗಲೂ ದೇವರ ನಾಮಸ್ಮರಣೆಯನ್ನು ಬಿಡಲಿಲ್ಲ. ಸಾಯುವುದಕ್ಕೆ ಆರುಗಂಟೆ ಮಾತ್ರ ಇದ್ದಾಗಲೂ ತಮ್ಮನ್ನು ನೋಡಬಂದ ವೈದ್ಯರಿಗೆ ಊಟವಾಗಿದೆಯೋ ಇಲ್ಲವೋ ಎಂದು ವಿಚಾರಿಸಿದರು. ಅದನ್ನು ಕೇಳಿ ವೈದ್ಯರ ಕಣ್ಣಲ್ಲೇ ನೀರು ಬಂತು.

೧೯೭೧ನೇ ಇಸವಿ ಮಾರ್ಚಿ ೨೨ರಂದು ಪ್ರಾತಃಕಾಲ. ಆತ್ಮೀಯರು, ಮನೆಯವರು ಹತ್ತಿರದಲ್ಲೇ ಇದ್ದರು. ಹನುಮಾನ್ ಪ್ರಸಾದರು ಎಲ್ಲರ ಕಡೆಗೂ ಕಣ್ಣು ಹೊರಳಿಸಿ ಎಲ್ಲರಿಗೂ ಬೀಳ್ಕೊಡುಗೆ ಹೇಳುವಂತೆ, ಎರಡೂ ಕೈಗಳನ್ನು ಮೇಲೆತ್ತಿ ಜೋಡಿಸಿದರು. ಹತ್ತು ನಿಮಿಷಗಳ ನಂತರ ಪ್ರಾಣಪಕ್ಷಿಯು ಹಾರಿಹೋಯಿತು.

೭೯ ವರ್ಷಗಳ ಸಾರ್ಥಕ ಜೀವನವನ್ನು ಮುಗಿಸಿ ಹನುಮಾನ್ ಪ್ರಸಾದರು ತಮ್ಮ ಇಷ್ಟದೈವದಲ್ಲಿ ಲೀನರಾದರು. ನಿಜವಾದ ಅರ್ಥದಲ್ಲಿ ಅವರೊಬ್ಬ ಕರ್ಮಯೋಗಿ.