ಗಿರಿ, ತೊರೆ, ನದಿಗಳಿಂದ ಕೂಡಿದ ವಿಶೇಷ ‘ಪ್ರಕೃತಿ-ಪ್ರಾಣಿ’ ಸಂಪತ್ತಿನಿಂದ ಕಂಗೊಳಿಸುವ, ಜೀವವೈವಿಧ್ಯಗಳ ಕಣಜವೆನಿಸಿದ. ಆದಿವಾಸಿಗಳ ತವರೂರು, ನಿಸರ್ಗದೈಸಿರಿಯ ಗಡಿನಾಡೆನಿಸಿದ ಜಾನಪದ ಐಸಿರಿಯ ಶೈಕ್ಷಣಿಕ ತಾಲ್ಲೂಕು ಎನಿಸಿದ ಹನೂರು ಶೈಕ್ಷಣಿಕ ವಲಯ, ತನ್ನೊಳಗೆ ಅದೆಷ್ಟೊ ಪ್ರಕೃತಿಯ ರಹಸ್ಯಗಳನ್ನು ಮೈಗೂಡಿಸಿಕೊಂಡಿದೆ.

ಜನಪದ ಕಣಜವಾದ ಈ ಶೈಕ್ಷಣಿಕ ವಲಯದಲ್ಲಿ ತೋಡಿದಷ್ಟು ಜನಪದ ಗೀತೆಗಳು, ಮೊಗೆದಷ್ಟು ಜನಪದ ರಾಗಗಳು, ಬಾಚಿಕೊಡಷ್ಟು ಜನಪದ ಕಲೆಗಳು ಹೇರಳವಾಗಿವೆ. ಮಹದೇಶ್ವರ ಬೆಟ್ಟದಲ್ಲಿ ನಮ್ಮ ಘನ ಸರ್ಕಾರ ‘ಜಾನಪದ ಅಧ್ಯಯನ ಕೇಂದ್ರ’ ಸ್ಥಾಪನೆಗೆ ಬೃಹತ್ ಯೋಜನೆ ರೂಪಿಸುತ್ತಿರುವುದು ಈ ವಿಚಾರಕ್ಕೆ ಮತ್ತಷ್ಟು ಪುಷ್ಠಿಯನ್ನು ನೀಡುತ್ತದೆ.

ಇಲ್ಲಿನ ಕಪ್ಪುಶಿಲೆ ವಿಶ್ವವಿಖ್ಯಾತವೆನಿಸಿದೆ. ಮಹದೇಶ್ವರ ಬೆಟ್ಟವೂ ಸೇರಿದಂತೆ ನೂರಾರು ಬೆಟ್ಟಗಳನ್ನು, ಸಹಸ್ರಾರು ದುರ್ಗವು ಗಿರಿ ಕಣಿವೆಗಳನ್ನು, ಹತ್ತಾರು ಪವಾಡ ಪುರುಷರನ್ನು ಹಲವಾರು, ವನ್ಯಧಾಮಗಳನ್ನು, ಲೆಕ್ಕವಿಲ್ಲದಷ್ಟು ಪ್ರಾಣಿ-ಪಕ್ಷಿ’ ಸಂಕುಲಗಳನ್ನು ವಿವಿಧ ಬಗೆಯ ‘ಸಸ್ಯ-ಶ್ಯಾಮಲೆ’ಗಳನ್ನು ಗರ್ಭೀಕರಿಸಿಕೊಂಡು ರಾಜ್ಯದಲ್ಲಿ ವಿಶಿಷ್ಟ ಸ್ಥಾನವೆನಿಸಿದೆ.

ಪುಟ್ಟ ನೇಪಾಳದಂತಿರುವ ಟಿಬೆಟ್ ಕ್ಯಾಂಪ್ ಇರುವ ಒಡೆಯರ-ಪಾಳ್ಯ, ಚಿರಾಂಪುಂಜಿಯ ಅನ್ವರ್ಥವೆನಿಸಿದ ಹೊನ್ನಮೇಟಿ, ತಾಲ್ಲೂಕಿನ ಸಿಮ್ಲಾವೆನಿಸಿದ ಬೇಡಗುಳಿ, ಟಿಪ್ಪುವಿನ ನೆನಪುಗಳನ್ನು ಸಾರುವ ಬಂಡಳ್ಳಿ ಬೆಟ್ಟ, ಮೇಕೆಯು ದಾಟಬಹುದಾದ ಕಿರಿದಾದ ‘ಮೇಕೆದಾಟು’ ಕಣಿವೆ. ಗಗನದೆತ್ತರಕ್ಕೆ ಹೊಗೆಯಂತೆ ಹಾರಿ ಹೊಗೇನಕಲ್ ಎಂದು ಹೆಸರು ಪಡೆದಿರುವ ಹೊಗೇನಕಲ್ ಪಾಲ್ಸ್, ಈ ಎಲ್ಲವೂ ಇರುವ ಪುಟ್ಟ ವೈವಿಧ್ಯಭಾರತ ಈ ಹನೂರು ಶೈಕ್ಷಣಿಕ ವಲಯವೆನಿಸಿದೆ.

 

ಮಹದೇಶ್ವರ ಬೆಟ್ಟ

ಜಿಲ್ಲೆ : ೧೧೦ ಕಿ.ಮೀ.
ತಾಲ್ಲೂಕು : ೭೫ ಕಿ.ಮೀ.

ಫಿನ್‌ಲ್ಯಾಂಡಿನ ‘ಕಲೇವಾಲ’ ಕಾವ್ಯವನ್ನು ಬಿಟ್ಟರೆ ಇಡೀ ಜಗತ್ತಿನಲ್ಲಿ ಕಾಣಸಿಗುವ ಮತ್ತೊಂದು ಬೃಹತ್ ಮೌಖಿಕ ಮಹಾಕಾವ್ಯವೆಂದರೆ ಅದು ಮಹದೇಶ್ವರರ ಜನಪದ ಕಾವ್ಯ.

ಬೆಟ್ಟದ ಸುತ್ತಲೂ ದಟ್ಟ ಕಾನನದ ಹಸಿರಿನಿಂದ ಕಂಗೊಳಿಸುವ ಪ್ರಕೃತಿಯ ಮಡಿಲೊಟ್ಟಿಗೆ ಜೀವ ವೈವಿಧ್ಯಗಳಿಂದ ಕೂಡಿದ ನಿಸರ್ಗ ವೈಭವವಿರುವ ಇಲ್ಲಿ ೭೭ ಮಲೆಗಳ ನಡುವೆ ಮುದ್ದು ಮಾದಪ್ಪನ ಪವಾಡಗಳು ನಮ್ಮನ್ನು ವಿಸ್ಮಯಗೊಳಿಸುವುದಲ್ಲದೆ, ಇವರ ತಪೋಭೂಮಿಯಾದ ಸಾಲೂರು ಮಠ ಭಕ್ತರನ್ನು ಮಂತ್ರಮುಗ್ಧರನ್ನಾಗಿಸುತ್ತದೆ.

ಪ್ರವಾಸಿಗರ ವಾಸ್ತವ್ಯಕ್ಕಾಗಿ ಹಲವಾರು ವಸತಿಗೃಹಗಳ ಜೊತೆಗೆ, ಸಾಮೂಹಿಕವಾಗಿ ತಂಗಲು ದೇವಾಲಯದ ಬಿಲ್ಲಯ್ಯ, ಕಾರಯ್ಯ, ಶಂಕಮ್ಮ ನಿಲಯಗಳು ನಿರ್ಮಾಣಗೊಂಡಿವೆ.

“ಇದು ಪ್ರಕೃತಿ ಆರಾಧಕರಿಗೆ ಪ್ರೇಕ್ಷಣೀಯ ಸ್ಥಳ, ದೈವಾದಾಧಕರಿಗೆ ಪವಿತ್ರ ಸ್ಥಳ, ಪ್ರಾಣಿ ಪ್ರಿಯರಿಗೆ ವನ್ಯಧಾಮ, ಸಾಹಸಿಗರಿಗೆ ಚಾರಣಕ್ಕಾಗಿರುವ ಗಿರಿನಾಡು, ಹಸಿದವರಿಗೆ ಒಡಲು ತುಂಬುವ ಅನ್ನದಾಸೋಹ”

 

ನಾಗಮಲೆ

ಜಿಲ್ಲೆ : ೧೨೨ ಕಿ.ಮೀ.
ತಾಲ್ಲೂಕು : ೮೦ ಕಿ.ಮೀ.

ಇದು ಮಹದೇಶ್ವರ ಬೆಟ್ಟದ ಬೆಟ್ಟಸಾಲುಗಳಲ್ಲಿ ಬರುವ ೭೭ ಮಲೆಗಳಲ್ಲಿ ನಡು ಮಲೆಗೆ ಪೂರ್ವ ದಿಕ್ಕಿನಲ್ಲಿ ಗೋಪಿನಾಥ ಗ್ರಾಮಕ್ಕೆ ಹೊರಡುವ ದಾರಿಯಿಂದ ೧೨  ಕಿ.ಮೀ. ದೂರದಲ್ಲಿದೆ. ಇಲ್ಲಿಗೆ ನಡೆದೇ ಹೋಗಬೇಕು. ವಾಹನಗಳು ಹೋಗಲು ಸಾಧ್ಯವಿಲ್ಲ. ಇಲ್ಲಿಗೆ ಹೋಗಬೇಕಾದರೆ ನಾಲ್ಕೈದು ಗುಡ್ಡಗಳನ್ನು ಏರಿ ಇಳಿಯಬೇಕು. ಮಾರ್ಗ ಮಧ್ಯೆ ಗಿರಿವಾಸಿ ಗ್ರಾಮಗಳಾದ ಹಳೆಯೂರು, ಇಂಡಿಗನತ್ತ ಗ್ರಾಮಗಳನ್ನು ಬಿಟ್ಟ ನಂತರ ಕಂಡು ಬರುವುದೇ ‘ನಾಗಮಲೆ’ ಗಿರಿಯಾಗಿದೆ.

ಇಲ್ಲಿನ ವೈಶಿಷ್ಟ್ಯವೆಂದರೆ ಮಾದಪ್ಪರವರ ತಪೋ ಕುರುಹಾಗಿ ಬೃಹತ್ ಬಂಡೆಯೊಂದು ಲಿಂಗಾಕಾರವನ್ನು ಹೊಂದಿದ್ದರೆ, ಮತ್ತೊಂದು ಹೆಬ್ಬಂಡೆ ಸರ್ಪಾಕಾರವಾಗಿ ಹೆಡೆಬಿಟ್ಟು ಲಿಂಗಕ್ಕೆ ನೆರಳು ನೀಡಿದಂತಿದೆ.

ಇದು ಸಂಶೋಧಕರು, ದೈವಭಕ್ತರು, ಪ್ರಾಣಿಪ್ರಿಯರು, ನಿಸರ್ಗ, ಪ್ರೇಮಿಗಳು ಮತ್ತು ಚಾರಣಪ್ರಿಯರಿಗೆ ಸೂಕ್ತವೆನಿಸಿದ ಸ್ಥಳವಾಗಿದೆ.

 

ಹೊಗೇನಕಲ್ಲು ಜಲಪಾತ

ಜಿಲ್ಲೆ : ೧೫೦ ಕಿ.ಮೀ.
ತಾಲ್ಲೂಕು : ೧೧೦ ಕಿ.ಮೀ.

‘ದಕ್ಷಿಣ ಭಾರತದ ನಯಾಗರ’ ಎಂದು ಹೆಸರು ಪಡೆದ ‘ಹೊಗೇನಕಲ್’ ಜಲಪಾತ ನೋಡುಗರಿಗೆ ಸ್ವರ್ಗ. ಮಹದೇಶ್ವರ ಬೆಟ್ಟದಿಂದ ತಮಿಳುನಾಡು ಕಡೆಗೆ ಹೋಗುವ ಪಾಲಾರ್ ಸೇತುವೆ ಹತ್ತಿರದಲ್ಲಿ ಎಡಕ್ಕೆ ತಿರುಗಿ ೫ ರಿಂದ ೬ ಕಿ.ಮೀ. ದೂರ ಕ್ರಮಿಸಿದರೆ, ನರಹಂತಕ ಕಾಡುಗಳ್ಳ ವೀರಪ್ಪನ್ ಜನಿಸಿದ ಗೋಪಿನಾಥ ಗ್ರಾಮ ಸಿಗುತ್ತದೆ. ಇಲ್ಲಿಂದ ೩ ರಿಂದ ೪ ಕಿ.ಮೀ. ದೂರ ಕ್ರಮಿಸಿದರೆ ಕಾವೇರಿ ನದಿ ಇಬ್ಭಾಗವಾಗಿ ಹರಿದು ‘ಬೆಟ್ಟ- ಗುಡ್ಡ’ಗಳಲ್ಲಿ ದುಮ್ಮಿಕ್ಕಿ ಮುನ್ನುಗ್ಗುವ ವಿಶಾಲವಾದ ಜಲಪಾತಗಳ ರಾಶಿಯೇ ಸಿಗುತ್ತದೆ.

ಇದೇ ಹೊಗೇನಕಲ್.

ನದಿಯು ೩೦ಕ್ಕೂ ಹೆಚ್ಚು ಜಲಧಾರೆಗಳಾಗಿ ಒಮ್ಮೆಗೆ ಭೋರ್ಗರೆದು ದುಮ್ಮಿಕ್ಕುವಾಗ ನೀರಿನ ರಭಸಕ್ಕೆ ಬಂಡೆಗಳ ಸುತ್ತಲೂ ಗಗನದೆತ್ತರದ ಹೊಗೆಯೇಳುವುದರಿಂದ ಇದಕ್ಕೆ ‘ಹೊಗೇನಕಲ್’ ಎಂಬ ಹೆಸರಿದೆ.

ತೆಪ್ಪಗಳಲ್ಲಿ ಕುಳಿತು ಜಲಪಾತದ ವೈಭವವನ್ನು ಸವಿಯಬಹುದಾದ ಇದು, “ಜಲಪ್ರಿಯರ ಜಲಕಾಶಿ ಗಿರಿಪ್ರಿಯರ ಗಿರಿಧಾಮ”.

 

ಪಾಲ್ಮಡು

ಜಿಲ್ಲೆ : ೧೫೨ ಕಿ.ಮೀ.
ತಾಲ್ಲೂಕು : ೧೧೨ ಕಿ.ಮೀ.

ಹೊಗೇನಕಲ್‌ನಿಂದ ಸುಮಾರು ೨ ಕಿ.ಮೀ. ಕಾಡಿನಲ್ಲಿ ನಡೆದು ಹೋದರೆ ‘ಪಾಲ್‌ಮಡು’ ಎಂಬ ಸ್ಥಳ ಸಿಗುತ್ತದೆ. ಇಲ್ಲಿ ೩೩ ಜಲಧಾರೆಗಳು ಒಂದೇ ಕಡೆ ದುಮ್ಮಿಕ್ಕಿ ರಭಸದಿಂದ ಬಂಡೆಗಲ್ಲುಗಳಿಂದ ತೂರಿ ಬೀಳುತ್ತವೆ. ಇಲ್ಲಿ ಈಜಲು ಇಳಿದರೆ ತುಂಬಾ ಅಪಾಯವಿದೆ. ಜಾರುವ ಬಂಡೆಗಲ್ಲುಗಳಿರುವ ಇಲ್ಲಿ ಮುನ್ನೆಚ್ಚರಿಕೆ ಅಗತ್ಯ.

ಜಲಧಾರೆಯು ಇಲ್ಲಿ ಹಾಲಿನ ನೊರೆಯಂತೆ ಕಂಗೊಳಿಸುತ್ತಿರುವುದರಿಂದ ಇದಕ್ಕೆ ‘ಪಾಲ್‌ಮಡು’ ಎಂಬ ಹೆಸರು ಬಂದಿದೆ. ಇಲ್ಲಿಗೆ ಹೋಗುವಾಗ ನೀರಿನ ಬಾಟಲಿಗಳೊಂದಿಗೆ ಊಟ-ತಿಂಡಿ ತೆಗೆದುಕೊಂಡು ಹೋಗುವುದು ಅನಿವಾರ್ಯವೆನಿಸಿದೆ.

ಜುಲೈ ತಿಂಗಳ ನಂತರ ಇಲ್ಲಿಗೆ ಹೊರಟರೆ ಮಳೆಯ ಕಿರಿಕಿರಿಯಿಂದ ತಪ್ಪಿಸಿಕೊಳ್ಳಬಹುದಾಗಿದೆ.

 

ಬಂಡಳ್ಳಿಬೆಟ್ಟ

ಜಿಲ್ಲೆ : ೯೨ ಕಿ.ಮೀ.
ತಾಲ್ಲೂಕು : ೫೨ ಕಿ.ಮೀ.

ಇತಿಹಾಸವನ್ನು ಸಾರುವ ಅದೆಷ್ಟೋ ಕಥೆಗಳನ್ನು ತನ್ನೊಳಗೆ ಇರಿಸಿಕೊಂಡಿರುವ ಬೆಟ್ಟ ಸಾಲಿನಿಂದ ಕೂಡಿರುವ ಪ್ರದೇಶವೇ ಅತ್ಯಂತ ಸುಂದರವಾಗಿ ಕಾಣುವ ಈ ಬೆಟ್ಟವು. ಇತಿಹಾಸದ ಕಣ್ಮುಂದಿನ ಸ್ಮಾರಕಗಳ ತಾಣವೆನಿಸಿದೆ.

ಈ ಬೆಟ್ಟವು ಎತ್ತರವಾಗಿದ್ದು ಇಲ್ಲಿಂದ ಶ್ರೀರಂಗಪಟ್ಟಣಕ್ಕೆ ಸುರಂಗ ಮಾರ್ಗವಿದೆಯೆಂದು ಕಾಲನ ಒತ್ತಡದಲ್ಲಿ ಸಿಲುಕಿ ಇದು ಕುಸಿದು ಮುಚ್ಚಿಹೋಗಿದೆಯೆಂದು ತಿಳಿದು ಬಂದಿದೆಯಲ್ಲದೆ, ಇಲ್ಲಿ ಕಲ್ಲಿನಿಂದ ನಿರ್ಮಾಣ ಮಾಡಿದ ಕೋಟೆಯೊಂದಿದ್ದು ಇದು ಟಿಪ್ಪು ಸುಲ್ತಾನನ ಕಾಲದ್ದೆಂದು ಹೇಳಲಾಗುತ್ತದೆ.

ಇಲ್ಲಿಗೆ ಬಸ್ಸಿನ ಸೌಕರ್ಯವಿರುವುದಿಲ್ಲ. ಸುಮಾರು ೧೨ ಕಿ.ಮೀ. ದೂರ ಕಾಡಿನಲ್ಲಿ ನಡೆದು ಶ್ರಮಿಸಬೇಕಾಗಿದ್ದು ಆ ಕಾಲದಲ್ಲಿ ನಿರ್ಮಿಸಿದ ದೇವಾಲಯವಿದೆ. ಪ್ರಾಣಿಗಳ ಓಡಾಟವು ಹೆಚ್ಚಿರುತ್ತದೆ.

 

ಮೇಕೆದಾಟು

ಜಿಲ್ಲೆ : ೯೨ ಕಿ.ಮೀ.
ತಾಲ್ಲೂಕು : ೫೨ ಕಿ.ಮೀ.

ಹನೂರು ವಲಯದ ಶಾಗ್ಯದ ಹತ್ತಿರದಲ್ಲಿ ಇರುವ ಈ ಪ್ರದೇಶವು ಸುಮಾರು ೧೨ ಕಿ.ಮೀ. ಕಾಡುದಾರಿಯಲ್ಲಿ ಕ್ರಮಿಸಿದ ನಂತರ ಸಿಗುವ ಒಂದು ಉತ್ತಮ ಕಣಿವೆ ಪ್ರದೇಶವೆನಿಸಿದೆ. ಹಲವು ಬೆಟ್ಟಗಳನ್ನು ಏರಿ ಇಳಿದ ನಂತರ ಸಿಗುವ ಈ ಪ್ರದೇಶವು ಕಾವೇರಿ ನದಿಯಿಂದಾಗಿ ನಿರ್ಮಾಣಗೊಂಡುದಾಗಿದೆ.

ಅತೀ ಆಳವಾದ ಕಿರಿದಾದ ಬಂಡೆಗಳ ನಡುವೆ ಹರಿಯುವ ಕಾವೇರಿಯಿಂದ ನಿರ್ಮಾಣವಾದ ಈ ಸ್ಥಳದಲ್ಲಿ ಮೇಕೆಯೊಂದು ಕಣಿವೆಯ ಎರಡೂ ದಂಡೆಗಳಿಗೆ ಹೊಂದಿಕೊಂಡಂತೆ ಕೊಂಡಿಯಾಗಿ ಬೆಳೆದಿದ್ದ ಹಗ್ಗದಂತಿದ್ದ ಹಂಬಿನ ಮೇಲೆ ಮೇಯುತ್ತಾ ಮತ್ತೊಂದು ದಂಡೆಗೆ ಹೋಯಿತೆಂದೂ, ಇದರಿಂದಾಗಿಯೇ ಈ ಸ್ಥಳಕ್ಕೆ ಮೇಕೆದಾಟೆಂದು ಹೆಸರು ಬಂದಿತೆಂದು ತಿಳಿದು ಬಂದಿದೆ. ಇಲ್ಲಿಗೆ ತೆರಳಲು ಅರಣ್ಯ  ಇಲಾಖೆಯ ಅನುಮತಿ ಅಗತ್ಯವಿದ್ದು ನಾಲ್ಕು ಚಕ್ರದ ಚಿಕ್ಕ ವಾಹನಗಳಲ್ಲಿ ಹೋಗಬಹುದಾಗಿದೆ. ಈ ನದಿ ಕಣಿವೆಯಿಂದಾಗಿ ಕನಕಪುರ ಮತ್ತು ಕೊಳ್ಳೇಗಾಲ ತಾಲ್ಲೂಕುಗಳು ಗಡಿ ಭಾಗವಾಗಿದೆ.

ಟಿಬೆಟ್ ಕ್ಯಾಂಪ್

ಜಿಲ್ಲೆ : ೯೫ ಕಿ.ಮೀ.
ತಾಲ್ಲೂಕು : ೫೫ ಕಿ.ಮೀ.

ಒಡೆಯರ ಪಾಳ್ಯ ಕೊಳ್ಳೇಗಾಲದ ಪೂರ್ವಕ್ಕೆ ಚೆನ್ನಾಲಿಂಗನಹಳ್ಳಿ ಮಾರ್ಗವಾಗಿ ಸುಮಾರು ೫೦ ಕಿ.ಮೀ. ‘ಬೆಟ್ಟ-ಗುಡ್ಡ’ಗಳ ಏರುತಗ್ಗು ರಸ್ತೆಯಲ್ಲಿ ಸಾಗಿದಾಗ ಸ್ವರ್ಗದ ಹೆಬ್ಬಾಗಿಲಿನಂತಿರುವ “ಪುಟ್ಟ ನೇಪಾಳ”ವೆನಿಸಿದ ಒಡೆಯಪಾಳ್ಯ ಗ್ರಾಮದಿಂದ ೦೧ ಕಿ.ಮೀ. ದೂರದಲ್ಲಿ ಇರುವ ಈ ‘ಟಿಬೆಟ್ ಕ್ಯಾಂಪ್’ ಸರ್ವಧರ್ಮಕ್ಕೆ ಕುರುಹೆನಿಸಿದೆ.

ಪೂರ್ವ ಘಟ್ಟದ ಪಶ್ಚಿಮ ಶ್ರೇಣಿಗಳಿಂದ ಸುತ್ತುವರಿದಿರುವ ಈ ಸ್ಥಳವು ಹಲವು ಬಗೆಯ ವನ್ಯ ಜೀವಿಗಳ ಆಶ್ರಯ ತಾಣವೂ ಹೌದು. ಟಿಬೆಟಿಯನ್ನರು ವ್ಯವಸಾಯದ ಜೊತೆ ನೇಯ್ಗೆಯಂತಹ ಕೆಲಸಗಳಿಂದ ಬದುಕು ನಡೆಸುತ್ತಿರುವ ಈ ಸ್ಥಳವು ಅನಿವಾಸಿ ಭಾರತೀಯರೆನಿಸಿದ ಚೀನಾದಿಂದ ಬಂದ ಟಿಬೆಟ್ ಜನರು “ಬದುಕು ಆಚರಣೆ, ಭೌದ್ಧ ಧರ್ಮ”ದ ಬಗ್ಗೆ ಸಾರುತ್ತದೆ. ಇವರ ದೇವಸ್ಥಾನಗಳು ಚಿತ್ತಾಕರ್ಷಕವಾಗಿದ್ದು ಸ್ಮರಣೀಯವೆನಿಸಿದ ಇದು ಪುಟ್ಟ ನೇಪಾಳವು ಹೌದು.

 

ಶ್ರವಣ ಬೆಟ್ಟ

ಜಿಲ್ಲೆ : ೧೦೦ ಕಿ.ಮೀ.
ತಾಲ್ಲೂಕು : ೬೦ ಕಿ.ಮೀ.

ಹನೂರು ಶೈಕ್ಷಣಿಕ ವಲಯದಿಂದ ೪೦ ಕಿ.ಮೀ. ದೂರವಿರುವ ಬೈಲೂರು ಸಮೀಪದ ಶ್ರವಣ ಬೆಟ್ಟ ತನ್ನದೇ ಆದ ಪೌರಾಣಿದ ಐತಿಹ್ಯವುಳ್ಳ ಒಂದು ಸುಂದರ ತಾಣ.

ಬಹಳ ಹಿಂದೆ ‘ಶ್ರವಣ’ ಎಂಬ ಕ್ರೂರ ರಾಕ್ಷಸನಿದ್ದು ಜನರನ್ನು ಹಿಂಸಿಸುತ್ತಿದ್ದು ಮಹದೇಶ್ವರರು ಜನರ ಅಭೀಪ್ಸೆಯಂತೆ ‘ಮಾದಾರಿ’ಯಾಗಿ ಬಂಡೆಯ ಮೇಲೆ ಇವನನ್ನು ಸಂಹರಿಸಿದನೆಂದು ಹೇಳಲಾಗಿದ್ದು ಅದರಿಂದಲೇ ಈ ಸ್ಥಳಕ್ಕೆ ‘ಶ್ರವಣ ಬೆಟ್ಟ’ ಎಂಬ ಹೆಸರು ಬಂದಿತಂತೆ. ಈಗಲೂ ಸಹ ಈ ಬೆಟ್ಟದಲ್ಲಿ ಇವರೀರ್ವರು ಕಾದಾಡಿದ ಕುರುಹುಗಳಿವೆಯಂತೆ.

ಒಂದು ಕ್ಷಣ ಕಚಗುಳಿಯಿಡುವ ಇಬ್ಬನಿಯ ಹಿಮ ಇಡೀ ಪ್ರದೇಶವನ್ನು ಆವರಿಸಿದರೆ, ಮತ್ತೊಂದು ಕ್ಷಣ ಬೀಸುವ ತಂಗಾಳಿಯು ಆಹ್ಲಾದವನ್ನುಂಟು ಮಾಡಿ ಮೈಮನಗಳಿಗೆ ಮುದ ನೀಡುವ ತಾಣವೆನಿಸಿದೆ.

 

ಉಡುತೊರೆ ಜಲಾಶಯ

ಜಿಲ್ಲೆ : ೭೦ ಕಿ.ಮೀ.
ತಾಲ್ಲೂಕು : ೩೭ ಕಿ.ಮೀ

 


ಅಜ್ಜೀಪುರ ಸುತ್ತಮುತ್ತಲಿನ ಬೆಟ್ಟಗುಡ್ಡಗಳ ನಡುವೆ ನಿರ್ಮಿತಿಗೊಂಡು ಅರಳಿದ ಸುಂದರ ಜಲಾಶಯವೇ ಉಡುತೊರೆ ಜಲಾಶಯ. ನೆರೆಯ ತಮಿಳ್ನಾಡಿನಿಂದ ಹರಿದು ಬಂದ ಬಹುತೇಕ ನೀರು ಈ ಜಲಾಶಯದ ಒಡಲು ತುಂಬಿ ಆಧಾರವೆನಿಸಿದೆ.

ಇದು ತನ್ನ ಸುತ್ತಮುತ್ತಲಿನ ಸಾವಿರಾರು ಎಕರೆಗೆ ನೀರುಣಿಸಿ ರೈತರಿಗೆ ‘ಬಾಳ ಸಂಜೀವಿನಿ’ಯೆನಿಸಿದೆ. ಈ ಜಲಾಶಯದ ವೈಶಿಷ್ಟ್ಯವೆಂದರೆ ಸುಮಾರು ೦೪ ಕಿ.ಮೀ. ಉದ್ದದ ‘ತೂಬು ಸೇತುವೆ’ ಇದು ಈ ಜಲಾಶಯದ ಅಂದವನ್ನು ನೂರ್ಮಡಿಗೊಳಿಸಿದೆ.

ಮುಂದಿನ ಹಂತದಲ್ಲಿ ಮೀನುಗಾರಿಕೆ, ಉದ್ಯಾನವನಗಳಂತಹ ಮಹತ್ಕಾರ್ಯಗಳ ಯೋಜನೆ ಜಾರಿ ಹಂತದಲ್ಲಿದ್ದು ಇದರ  ಜನಪ್ರಿಯತೆ ಇನ್ನೂ ದ್ವಿಗುಣಗೊಳ್ಳಲಿದೆ.