ಸೂಚನೆ ||
ಅಪರಮಿತಸೈನ್ಯ ಸನ್ನಾಹದಿಂದರ್ಜುನನ |
ಚಪಲಹಯಮಂ ಮರಾಳಧ್ವಜಂ ಪಿಡಿಯಲ್ಕೆ |
ತಪನಸುತನಂದನ ಸುಧನ್ವರ್ಗೆ ಕಾಳಗಂ ಪೂಣ್ದುದಾಡಂಬರದೊಳು ||

ಇನ್ನು ಮೇಲಣ ಕಥೆಯನಾಲಿಸೆಲೆ ಭರತಕುಲ |
ರನ್ನ ಜನಮೇಜಯ ಸುಧನ್ವನ ಕಟಾಹದುರಿ |
ಯಂ ನಾರಸಿಂಹ ಜಪದಿಂ ಜಯಿಸೆ ಲಿಖಿತನೆಸಗಿದ ವೈಷ್ಣವದ್ರೋಹಕೆ ||
ತನ್ನರಿವನುರೆ ಜರೆದುಕೊಂಡಸುದೊರೆವೆನೆಂದು |
ನನ್ನಿಯಿಂದಾ ತೈಲದೊಳ್ ಬೀಳಲವರ್ಗಳಂ |
ಮನ್ನಿಸಿ ನೃಪಂ ತೆಗೆಸಲಾ ಪುರೋಹಿತನವನಿಪತಿಗೆ ಬಳಿಕಿಂತೆಂದನು ||೧||

ಭೂನಾಥ ಕೇಳ್ನಿನ್ನ ಸುತನ ದೆಸೆಯಿಂದೆ ನ |
ವಿನೆಲಂ ಪ್ರಜೆ ನಾಡು ಬೀಡೂರು ಪರಿವಾರ |
ಮಾನೆ ಕುದುರೆಗಳಿರ್ದ್ದ ಪಶು ಪಕ್ಷಿ ಮೃಗ ಕೀಟ ತರು ಗುಲ್ಮ ಲತೆಗಳೆಲ್ಲ ||
ಈ ನಿರುದ್ಧಕೆ ದನ್ಯವಾದುವೇಂ ಕೃತಿಯೊ ನೀಂ |
ಭಾನುರಶ್ಮಿಗೆ ಕಂದೆರೆಯದ ಗೂಗೆಯವೊಲ |
ಜ್ಞಾನಿ ದ್ವಿಜಾದಮಂ ತಾನಾದೆನೀ ದ್ರೋಹಕೆಂದು ಲಿಖಿತಂ ನುಡಿದನು ||೨||

ಬಳಿಕಾತನಂ ಸುಮ್ಮನಿರಿಸಿ ನಿಡಿದಂ ಶಂಖ |
ನೆಲೆ ಮಹೀಪಾಲ ಹರಿಶರಣರ್ಗೆಡರರ್ಗಳೆ |
ತ್ತೊಳವು ಬೆಳುದಿಂಗಳ್ಗೆ ಬೆಮರುಂಟೆ ಬೇಸಗೆಯೊಳಿವನ ನಿಜಮಂ ಕಾಣದೆ ||
ಬಳಸಿದೆವು ಮೂರ್ಖತೆಯನರಿದು ಮರುಳಾದೆವಿ |
ನ್ನುಳಿದು ಮಾತುಗಳೇಕೆ ಸಾಕೀ ಸುಧನ್ವನಂ |
ಕಳುಹು ಕಾಳಗಕೆನಲ್ ಭೂಪನವನಂ ತೆಗೆದು ಬಿಗಿಯಪ್ಪಿದಂ ಮುದದೊಳು ||೩||

ತಂದೆಯ ಚರಣಕೆರಗಿ ಶಂಖಲಿಖಿತರ ಪದಕೆ |
ವಂದಿಸಿ ಪರಕೆಗೊಂಡು ಸಾರಥಿಯನಾದರಿಸಿ |
ಪೊಂದೇರನಳವಡಿಸಿ ತುರಗಂಗಳಂ ಪೂಡಿ ಸಿಂಧಮಂ ನಿಡಿದುಮಾಡಿ ||
ಗೊಂದಣದ ಝಲ್ಲಿಗಳ ಕನಕಮಾಲೆಗಳ ಸ್ರ |
ಕ್ಜಂದನ ವಿಭೂಷಣಾವಳಿಗಳಂ ಸಿಂಗರಿಸಿ |
ಬಂದಡರ್ದಂ ಜಯರವದೊಳಾ ಸುಧನ್ವ ತಿರಸ್ಕೃತಕುಸುಮಧನ್ವನು ||೪||

ಕೇಳ್ಗುಣಮಣಿಯೆ ಧರಣಿಪಾಗ್ರಣೆಯೆ ತನ್ನ ಮಗ |
ನೇಳ್ಗೆಯಂ ಕಂಡುಬ್ಬಿದಂ ಮರಾಳಧ್ವಜ |
ಸೂಳ್ಗೈದುವಾಗ ತಂಬಟೆ ಭೇರಿ ನಿಸ್ಸಾಳ ಕಹಳಾದಿ ವಾದ್ಯಂಗಳು ||
ತೋಳ್ಗುಟ್ಟು ಸುಮ್ಮಾನದಿಂ ಪಟುಭಟರ್ |
ಕೇಳ್ಗೊಂಡು ಕುದಿಯುತಿರ್ದರು ಸಾರ್ಧಯೋಜನದೊ |
ಳಾಳ್ಗಜ ತುರಂಗ ರಥವಿಟ್ಟಣಿಸಿ ನಡೆದುದುತ್ಸಾಹದಿಂ ನರನ ಮೇಲೆ ||೫||

ಬೆರಬೆರಸುತೊತ್ತಿಡಿದು ಮುಂದೆ ಭರದಿಂದೆ ನಡೆ |
ವರಸರಸುಗಳ ಕಂಠಮಾಲೆಗಳ ತೋರಮು |
ತ್ತೊರಸೊರಸು ಮಿಗೆ ಪರಿದವರ ಸುಸುದಂಬುಲದ ಚೆನ್ನೆಲದ ಮೇಲೊಕ್ಕಿರೆ ||
ಪೊರೆದ ಸಂಧಾರುಣದ ಗಗನಮಂಡಲದೊಳಂ |
ಕುರಿಸಿದುಡುಗುಣದಂತೆ ರಂಜಿಸಿತು ದೆಸೆದೆಸೆಗೆ |
ಪರಿಮಳದೆಲರ್ ಪರಿದುದಗರುಚಂದನ ಯಕ್ಷಕರ್ದಮದ ಮೊಗವಾಸದ ||೬||

ಪಡೆಯೊಳನ್ಯೋನ್ಯ ಸಂಘರ್ಷಣದೊಳೊಗುವ ಪೊಂ |
ದೊಡವುಗಳ ರೇಣುಗಳೊ ಮೈಗಳಂ ಸೋಂಕಿ ಪುಡಿ |
ವಡೆದ ಕುಂಕುಮ ಸುಗಂಧಾನುಲೇಪನದ ಚುರ್ಣಂಗಳೋ ಪದಘಾತಿಗೆ ||
ಪೊಡವಿಯಿಂದಿರದೇಳ್ವರುಣರಜಂಗಳೊ ತಿಳಿದು |
ನುಡಿಯಲರಿದೆಂಬಿನಂ ಮೇರುವಿನ ಬಣ್ಣಮಿಂ |
ಪಿಡಿದ ದಿವಿಜರ ಭೋಗಮಜನ ಗುಣಮೆಚ್ಚರಿಸೆ ಕೆಂಧೂಳಿ ಮಸಗಿತಾಗ ||೭||

ಮೊಗಗೈಗಳಿಂ ತಮ್ಮೊಡಲ ನೀರನಾನೆಗಳ್ |
ತೆಗೆದು ಚೆಲ್ಲಲ್ ಪೊನಲ್ವರಿದ ಮಡುಗಳ ಕೆಸರೊ |
ಳೊಗೆದ ನೃಪಮಂಡಲದ ಕನಕಾಭರಣ ತರುಣಾತಪದೊಳಲರ್ದ ||
ಮಿಗೆ ಸುಳಿವ ಚಾಮರಂಗಳ ರಾಜಹಂಸಾವ |
ಳಿಗಳ ಸಂಚಾರಮಂ ಕೆಳೆಗೊಂಡ ಬೆಳುದಾವ |
ರೆಗಳ ಹಂತಿಗಳಂತೆ ಪಡೆಯೊಳೆಸೆದುವು ತಳ್ತಿಡಿದ ಸತ್ತಿಗೆಯ ಸಾಲ್ಗಳು ||೮||

ಮುಂಕೊಂಬ ಮಂದಿ ಕುದುರೆಗೆ ಧರಾಮಂಡಲಂ |
ಸಂಕುಲದ ವಾದ್ಯಧ್ವನಿಗೆ ದಿಶಾಮಂಡಲಂ |
ಸಂಖ್ಯೆಯಿಲ್ಲದೆ ಸಿಂಧ ಸೀಗುರಿ ಪತಾಕೆಗೆ ನಭೋಮಂಡಲಂ ವಿರಿದ ||
ಬಿಂಕದಿಂದಿರಿವ ಕಲಿತನಕೆ ರಣಮಂಡಲಂ |
ಸಂಕೋಚಮೆನೆ ಬಂದು ಪಿಡಿದು ಪಾರ್ಥನ ತುರಗ |
ಮಂ ಕಟ್ಟಿ ಬಳಸಿ ಪದ್ಮವ್ಯೂಹಮಾಗಿ ನಿಂದಾರ್ದುದಾ ಸೇನೆ ನಲಿದು ||೯||

*  * ಸುತ್ತ ಪದ್ಮವ್ಯೂಹಮಂ ರಚಿಸಿ ನಡುವೆ ನರ |
ನುತ್ತಮತುರಂಗಮಂ ಕಟ್ಟಿ ಕಾಳಗಕೆ ಭಟ |
ರೊತ್ತಾಗಿ ನಿಂದರರವೀರರಂ ಬರಕೇಳೆನುತ್ತರಸನಾಜ್ಞೆಯಿಂದೆ ||
ಇತ್ತ ಪಾರ್ಥಂಗೆ ಚರರೈತಂದು ನುಡಿದರೀ |
ವೃತ್ತಾಂತಮಂ ಬಳಿಕ ಪ್ರದ್ಯುಮ್ನನಂ ಕರೆದು |
ವತ್ತೆ ಬಂದುದು ವಿಘ್ನಮಿದಕಿನ್ನುಪಾಯಮೇನೆಂದೊಡವನಿಂತೆಂದನು ||೧೦||

ನಿನ್ನಂ ಕಳುಹುವಂದು ಹಯದ ಮೇಲಾರೈಕೆ |
ಗೆನ್ನನಟ್ಟಿದನಲಾ ಪಿತನಾತನಾಜ್ಞೆಯಂ |
ಮನ್ನಿಸುವ ಕಾಲಮಲ್ಲವೆ ತನಗೆ ನೀನದಕ್ಕೆಣಿಕೆಗೊಳಬಹುದೆ ಬರಿದೆ ||
ತನ್ನ ಭುಜಬಲದಿಂದೆ ಬಿಡಿಸಿ ತಂದಪೆನಶ್ವ |
ಮನ್ನೋಡು ಸಾಕೆನುತ ಪಾರ್ಥನಂ ಬಿಳ್ಕೊಂಡು |
ಪನ್ನಗಾರಿಧ್ವಜನ ತನಯ ನೈದಿದನಹಿತಮೋಹರಕೆ ಸೇನೆಸಹಿತ ||೧೧||

ಲಟಕಟಿಸುತಾಗ ಸಾತ್ಯಕಿ ಸಾಂಬ ಕೃತವರ್ಮ |
ಶಠ ನಿಶಠ ರಸಿರುದ್ಧ ಗದ  ಮುಖ್ಯರಾದ ಪಟು |
ಭಟರಖಿಳ ಯಾದವ ಚತುರ್ಬಲಂ ಜೋಡಿಸಿತು ಸಮರಸನ್ನಾಹದಿಂದೆ ||
ದಿಟಮಿಂದಜಜಾಂಡಘಟಮೊಡೆಯದಿರದೆಂಬಿನಂ |
ಪಟಹ ಡಿಂಡಿಮ ಡೌಡೆ ಭೇರಿ ನಿಸ್ಸಾಳ ತಂ |
ಬಟ ಮುರಜ ಡಕ್ಕೆ ಡಮರುಗ ಕೊಂಬು ಕಹಳೆಗಳ ಬಹುಳರವಮಳ್ಳಿರಿದುದು ||೧೨||

ಮೊಗಸಿರಿಬಲವನನುಸಾಲ್ವಕನ ಸೇನೆಯೊ |
ಮ್ಮೊಗದೊಳೊರೆಯುಗಿದ ಫಣಿಕುಲದಂತೆ ರಣದವಕ |
ಮೊಗದಗಿತಂಬುಧಿಯ ತೆರೆಯಂತೆ ಯೌವನಾಶ್ವದ ಸೈನ್ಯಮೊಂದೆಸೆಯೊಳು ||
ಯುಗದಂತ್ಯದಭ್ರದಂತೆದ್ದುದುರವಣಿಸಿ ಸಂ |
ಯುಗಕೆ ನೀಲಧ್ವಜನ ಸೈನಿಕಂ ಬಳಿಕ ಕರ |
ಯುಗಳಂ ಮುಗಿದು ಕಿರೀಟಿಗೆ ವಿನಯದಿಂದ ಬಿನ್ನೈಸಿದಂ ಕರ್ಣಸೂನು ||೧೩||

ತಾತ ಚಿತ್ತೈಸು ಗೋಪ್ಪದಜಲಕೆ ಹರಿಗೋಲ |
ದೇತಕೆ ವೃಥಾ ಕುದುರೆಮಂದಿಯಂ ನೋಯಿಸದಿ |
ರೀತಗಳನೆಲ್ಲರಂ ತೆಗೆಸೆನಗೆ ಸೆಲವಿಂದಿನಾಹವಂ ಪರಬಲವನು ||
ಘಾತಿಸಿ ತುರಂಗಮಂ ತಾರದೊಡೆ ಬಳಿಕ ರವಿ |
ಜಾತನ ಕುಮಾರಕನೆ ನೋಡು ಸಾಕೆನುತ ವೃಷ |
ಕೇತು ಪಾರ್ಥನ ಬೆಸಂಬಡೆಯ ರಥವೇರಿದಂ ವಿರಿದ ಪರಾಕ್ರಮದೊಳು ||೧೪||

ತಾರಕಾಸುರನ ಪಟರ್ಬಡೆಗೆ ಮೈದೋರುವ ಕು |
ಮಾರನಂ ತಾನಭ್ರಮಾರ್ಗದೊಳ್ ಸುಳಿವ ಮುಂ |
ಗಾರಮಿಂಚಂ ತನ್ನ ಹೊಂದೇರುಗಿರಿಗೆರಗುವಶನಿಯಂ ತನ್ನ ಘಾತಿ ||
ಪಢರಡವಿಗೈದುನ ದವಾಗ್ನಿಯಂ ತನ್ನ ಪ್ರ |
ಚಾರಂ ನೆಗಳ್ದ ನಡುವಗಲ ರವಿಯಂ ತನ್ನ |
ವೀರಪ್ರತಾಪಂ ತಿರಸ್ಕರಿಸೆ ವೃಷಕೇತು ರಿಪುಸೈನ್ಯಮಂ ಪೊಕ್ಕನು ||೧೫||

ದೂರದೊಳ್ ಕಂಡಂ ಸುಧನ್ವನಾತನ ಬರವ |
ನಾರಿವಂ ಪಾರ್ಥನಾದೊಡೆ ಕಪಿಧ್ವಜಮಿಹುದು |
ದಾರವ್ಯಷಭಾಂಕಿತದ ಕೇತುದಂಡದ ಸುಭಟನಾವನೋ ಪಾಂಡವರೊಳು ||
ವೀರನಹನೆನುತ ಬಂದಿದಿರಾಗಿ ನಿಂದು ಪರಿ |
ವಾರಮಂ ತೆಗೆಸಿ ಬಿಲ್ದಿರುವನೊದರಿಸುತೆ ಕೈ |
ವಾರಿಸುತೆ ನಸುನಗುತೆ ಬಾಣಮಂ ತೂಗುತಿನಸುತಜನಂ ಬೆಸಗೊಂಡನು ||೧೬||

ಎಲವೊ ನೀನಾರ್ ನಿನ್ನ ಪೆಸರದೇನಾವರ್ಷಿ |
ಕುಲದವಂ ನಿನ್ನ ಪಿತನಾವಾತನೆಂಬುದಂ |
ತಿಳಿಪೆನಗೆ ತಾನೀಗ ವೀರಹಂಸಧ್ವಜನೃಪನ ಕುಮಾರಂ ತನ್ನನು ||
ಇಳೆಯೊಳ್ ಸುಧನ್ವನೆಂಬರ್ ಮಧುಚ್ಛಂದಮುನಿ |
ತಿಲಕನಿಂದಾಯ್ತೆಮ್ಮ ವಂಶಮೆನೆ ಕರ್ಣಜಂ |
ಬಳಿಕ ನಸುನಗೆಯೊಳೆಡಗೈಯ್ಯ ಕೋದಂಡಮಂ ತಿರುಗಿಸುತ್ತಿಂತೆಂದನು ||೧೭||

ಗೂಢಮಾಗಿರ್ದಲರ ಪರಿಮಳಂ ಪ್ರಕಟಿಸದೆ |
ರೂಢಿಸಿದ ವಂಶವಿಸ್ತಾರಮಂ ಪೌರುಷದ |
ಮೋಡಿಯಿಂದರಿಯಬಾರದೆ ಸಮರಸಾದನಮಿದರೊಳಹುದೆ ನಿನಗಾದೊಡೆ ||
ಮೂಢ ಕೇಳ್ ಕಶ್ಯಪನ ಕುಲವೆಮ್ಮದೆಂಬರಾ |
ರೂಢನಾಗಿಹ ದಿನಮಣಿಯ ತನಯನಾಹವ |
ಪ್ರೌಢಕರ್ಣನ ಸುತಂ ಪೆಸರೆನಗೆ ವೃಷಕೇತುವೆಂದೊಡವನಿಂತೆಂದನು ||೧೮||

ಕರ್ಣಸುತನಾದಡೊಳ್ಳಿತು ವೀರನಹುದು ನೀಂ |
ನಿರ್ಣಯಿಸಬಲ್ಲೆ ರಣಗಂಗಮಂ ಮೂಢರಾಂ |
ವರ್ಣಕದ ಮಾತುಗಳನರಿಯೆವೆನುತೆಚ್ಚಂ ಸುಧನ್ವನೀತನ ಸರಿಸಕೆ ||
ಸ್ವರ್ಣಪುಂಖದ ಕಣೆಗಳೈದಿದುವು ಮಿಂಚಿನ ಪೊ |
ಗರ್ನಭೋಮಂಡಲವನಂಡಲೆಯಲಾಕ್ಷಣಂ |
ದುರ್ನಿರೀಕ್ಷಣಮಾಗಲೆಡೆಯೊಳವನೆಲ್ಲವಂ ತರಿದಿವಂ ಕೋಲ್ಗರೆದನು ||೧೯||

ಬರಸಿಡಿಲ ಭರದಿಂದೆ ಮಿಂಚಿನ ಹೊಳಹಿನಿಂದೆ |
ಬಿರುವೆಳೆಗಳೊತ್ತಿಂದೆ ಕರ್ಣಜಂ ಕಣೆಗಳಂ |
ಕರೆಯುತಿರೆ ನಡುವೆ ಖಂಡಿಸಿದಂ ಸುಧನ್ವನಾತನ ಸರಳ್ಗಳನೆಡೆಯೊಳು ||
ತರಿದಂ ವೃಷಧ್ವಜಂ ಬಳಿಕವನ ಕೋಲ್ಗಳಂ |
ಬರಿಕೈದನಾ ಮರಾಳಧ್ವಜನ ಸುತನಿಂತು |
ತೆರಹುಗುಡದೊರ್ವರೊರ್ವರಮೇಲೆ ಮುಳಿದು ಜರೆದೆಚ್ಚಾಡಿದರ್ ಧುರದೊಳು ||೨೦||

ಕ್ಷೆಣೆಗೆ ಸುಧನ್ವ ನಾನಿರೆ ನೀಂ ಸುಧನ್ವನೇ |
ಮಾಣೀಸುವೆನೀ ಪೆಸರನೀಕ್ಷಣದೊಳೆಂದು ಪೊಸ |
ಸಾಣೆಯಲಗಿನ ಸರಳ್ಗಳನೆಚ್ಚು ಕರ್ಣಜಂ ಪೋರ್ಗಳನವನ ಮೈಯೊಳು ||
ಕಾಣಿಸ ಕೆರಳ್ದೆಲವೊ ಮೇದಿನಿಗೆ ರಿಪುಪಂಚ |
ಬಾಣ ವೃಷಕೇತು ತಾನಿರಲಾಗಿ ವೃಷಕೇತು |
ಮೇಣುಂಟೆ ಹೇಳೆನುತಿವಂ ಕಣೆಗರೆದನವನ ತನುವನುಚ್ಚಳಿಸುವಂತೆ ||೨೧||

ಭುಗಿಭುಗಿಸೆ ಕೋಪಾಗ್ನಿ ಮೂಡಿಗೆಯ ಕೋಲ್ಗಳಂ |
ತೆಗೆತೆಗೆದು ಕರ್ಣತನಯಂ ಸುಧನ್ವನ ರಥವ |
ಬಗೆಬಗೆಯೊಳಮರ್ದೆಸೆವ ಛತ್ರ ಚಾಮರ ಸಿಂದ ಸೀಗುರಿ ಪತಾಕೆಗಳನು ||
ಮೊಗಮೊಗಿಸಿ ಮುಂಬರಿವ  ಕುದುರೆ ಸಾರಥಿಗಳಂ |
ಝಗಝಗಿಪ ಕವಚಮಂ ತನ್ನ ಕಣೆಯಂ ನಡುವೆ |
ತೆಗೆತೆಗೆವ ಕೋಲ್ಗಲಂ ತರಿದವನ ಬಿಲ್ಲನಿಕ್ಕಡಿಗೈದು ಬೊಬ್ಬಿರಿದನು ||೨೨||

ತಂದರಾಗಳೆ ಸುಧನ್ವಂಗೆ ಮಣಿಮಯದ ಮ |
ತ್ತೊಂದು ರಥಮಂ ಬಳಿಕ ಬಿಲ್ವಿಡಿದು ಜೇಗೈದು |
ನಿಂದು ನಿಡುಗಣಿಗಳಂ ತೆಗೆದೆಚ್ಚು ಕರ್ಣಜನ ಕೈಮೆಗಿಂಮಿಗಿಲಾಗಲು ||
ಸ್ಯಂದನ ತುರಂಗ ಸಾರಥಿಗಳಂ ಕವಚಮಂ |
ಸಿಂಧ ಸೀಗುರಿ ಛತ್ರಚಾಮರ ಪತಾಕೆಗಳ |
ನಂದು ಕತ್ತರಿಸಿ ವೃಷಕೇತುವಿನ ಕರದ ಕೋದಂಡಮಂ ಖಂಡಿಸಿದನು ||೨೩||

ವಿರಥನಾದೊಡೆ ಕರ್ಣಸೂನು ಕೈಗೆಡದೆ ಸಂ |
ಗರದೊಳಸಿ ಮುದ್ಗರ ಮುಸುಂಡಿ ತೀಮರ ಖಡ್ಗ |
ಪರಶು ಗದೆ ಚಕ್ರ ಡೊಂಕಣಿ ಕುಂತ ಶೂಲ ಪಟ್ಟಸ ಭಿಂಡಿವಾಳ ಶಕ್ತಿ ||
ಸುರಗಿ ಮೊದಲಾಗಿರ್ದ ಕೈದುಗಳ ಪರಿವಿಡಿಯೊ |
ಳುರವಣಿಸಿ ಪುಯ್ದು ಸುಧನ್ವನಂ ಮತ್ತವನ |
ಪೊರೆಯ ಪರಿವಾರಮಂ ನಾನಾಪ್ರಹಾರದಿಂದೈದೆ ಘಾತಿಸುತಿರ್ದನು ||೨೪||

ಇತ್ತಲಿಂತಿರಲತ್ತಲವನ ಸಾರಥಿ ಬೇಗ |
ಮತ್ತೊಂದು ರಥಮಂ ತರಲ್ಯದನಡರ್ದು ಮಸೆ |
ವೆತ್ತ ಕೂರ್ಗಣೆಗಳಂ ಕರ್ಣಜಂ ತೆಗದೆಚ್ಚೊಡಾ ಸುಧನ್ವನ ಮೆಯ್ಯೊಳು ||
ತೆತ್ತಸಿದುವಂಬೊಡಲೊಳಿಡಿದ ತನಿವೀರರಸ |
ಮೊತ್ತರಿಸಿ ಮೇಲಕ್ಕುವಂದದಿಂ ಬಸಿವ ಬಿಸಿ |
ನೆತ್ತರೆಸದಿರೆ ಕೆರಳ್ದವನೆಚ್ಚೊಡಾ ಕೋಲ್ಗಲಂ ತರಿಯುತಿವನೆಚ್ಚನು ||೨೫||

ನಭಕುಪ್ಪರಿಸಿ ನೆಲಕೆ ಪಾಯ್ದೆಡಬಲಕೆ ಮುರಿದು |
ರಭಸದಿಂದಾರ್ದೊರ್ವರೊರ್ವರಂ ವಿರ್ದೊದಗಿ |
ವಿಭವದಿಂದಖಿಳ ಶಸ್ತ್ರಾಸ್ತ್ರದಿಂ ಸಮ ವಿಷಮ ಸೋಲು ಗೆಲುವುಗಳಿಲ್ಲದೆ ||
ತ್ರಿಭುವನಕೆ ರಣರಂಗದೊಳ್ ಸುಭಟ ನರ್ತನವ |
ನಭಿನಯಿಸುವಂತೆ ಲಾಘವ ದೃಷ್ಟಿಗಳೊ |
ಳುಭಯವೀರರ್ ಖತಿಯೊಳೆಚ್ಚಾಡಿದರ್ ಕರ್ಣನಂದನ ಸುಧನ್ವರಂದು ||೨೬||

ಒತ್ತುವರಿಸುವರೆಚ್ಚ ಕಣಿಗಳಂ ಕಣೆಗಳಂ |
ಕತ್ತರಿಸಿ ಮೆತ್ತುವರೊಡಲೊಳಂಬನಂಬನುರೆ |
ಕಿತ್ತು ಬಿಸುಡುವರಸೃಗ್ವಾರಿಯಂ ವಾರಿಯಂ ತೊಳೆದೊಡನೆ ಕವಳಗೊಂಡು ||
ಮತ್ತೆ ಕೈಗೆಡದೆಚ್ಚು ಬೊಬ್ಬಿರಿವರೀತೆರದೊ |
ಳಿತ್ತಂಡದಗ್ಗಳಿಕೆ ಸಮಮಾಗೆ ಖತಿಯೊಳೊಂ |
ಬತ್ತುನಾರಾಚದಿಂದಾ ಸುಧನ್ವಂ ಕರ್ಣತಯನಂ ಘಾತಿಸಿದನು ||೨೭||

ರಾಯ ಕೇಳಾಗ ಪೂರಾಯ ಗಾಯದೊಳಸ್ರ |
ತೋಯದಿಂದವಯವಂ ತೋಯಳವಳಿದು ರಾ |
ಧೇಯಜಂ ಬಹಳಬಾಧೇಯನಾಗಲ್ಕವನ ಸಾರಥಿ ರಥವ ತಿರುಗಿಸೆ ||
ಜೇಯನೇರಿಸಿ ಬಿಲ್ಗಜೇಯ ಹರಿಸೂನು ಸಹ |
ಸಾಯತಿಕೆಯಿಂದೆ ನಿಜಸಾಯಕವನುಗಿಯುತಡ |
ಹಾಯಿದಂ ಕರೆಕೊಳ ಸಹಾಯಿಗಳನೆನುತ ಕಡುಗಲಿ ಸುಧನ್ವನ ಸರಿಸಕೆ ||೨೮||

ಅರಿದನಚ್ಯುತನಸುತನೆಂಬುದಂ ಟೆಕ್ಕೆಯದ |
ಕುರುಪಿಂದೆ ನುಡಿದನವನಿಲ್ಲಿ ನಿನಗಬಲೆಯರ |
ಮರೆಯಲ್ಲ ನಿನ್ನಿಸುಗೆಗಳುಕುವರದಾರೆನುತ ಕಲಿಸುಧನ್ವಂ ಕಣೆಗಳ ||
ಬಿರುವಳೆಗರೆಯಲೆಡೆಯೊಳರಿದೆಲವೋ ಸಂಗರದೊ |
ಳುರುವ ಜಯವಧು ತನ್ನ ಭೂಜದೊಳಿಹಳೆನುತೆ ಕೆಂ |
ಗರಿಯ ಬಾಣಂಗಳಂ ಮುಸುಕಿದಂ ಪ್ರದ್ಯುಮ್ನನವನ ರಥದೆಣ್ದೆಸೆಯೊಳು ||೨೯||

ಅಸಮಸಾಯಕನೆಂದು ಬಣ್ಣಿಪರ್ ನಿನ್ನನಿಂ |
ದಸಮಸಾಯಕ ನಾನೊ ನೀನೊ ನೋಡೆನುತ ಪೊಸ |
ಮಸೆಯ ಶಿಖಂಗಳಿಂ ಸುರಿದಂ ಸುಧನ್ವನಾತನ ಕಣೆಗಳಂ ಖಂಡಿಸಿ |
ವಸುವತಿಗೆ ವೀರ ನೀಣಸಮಸಾಕನಾದೊ |
ಡುಸಿರೆನಗೆ ಸಮಸಾಯಕರದಾರ್ ತ್ರಿಲೋಕದೊಳ್ |
ಪುಸಿಯಬೇಡೆನುತ ಕೂರಂಬರುಗಳನಂಬರಕೆ ತುಂಬಿದಂ ಶಂಬೂರಿ ||೩೦||

ಬರಿಯ ಪೂಗೋಲಿಸ ಗೆಯಲ್ಲದಾಹವದೊಳು |
ಕಿರುದು ಶರಸಂದಾನಮುಂಟಲಾ ನಿನಗೆಂದು |
ಜರೆದೆಂಟು ಬಾಣದಿಂದೆಚ್ಚಂ ಸುಧನ್ವನಾತನ ಕೋಲ್ಗಳಂ ಸೈರಿಸಿ ||
ಬಿರುಸರಳ ಸಾರದಿಂದವನ ಸರ್ವಾಂಗಮಂ |
ತುರುಗಿದು ಕವಚ ಸೀಸಕ ಬಾಹುರಕ್ಷೆಗಳ |
ಬಿರಿವಿನಿಂ ಕೆನ್ನೀರ್ಗಳೊರೆವಿನಂ ನೊಂದು ಮೈಮರೆವಿನಂ ಪ್ರದ್ಯುಮ್ನನು ||೩೧||

ಕೃಷ್ಣಸುತನೆಂದಿನ್ನೆಗಂ ಸೈರಿಸಿದೊಡೆ ನೀ |
ನುಷ್ಣಮುಳ್ಳವನಾದೆ ತನ್ನ ಬಾಣಾವಳಿಯ |
ತೃಷ್ಣಗರುಣಾಂಬುವಂ ನಿನ್ನೊಡಲೊಳೂಡಿಸದೆ ಬಿಡುವನೇ ಮೇಣಸುವನು ||
ಮುಷ್ಣಮಂ ಮಾಡಿಸದೆ ಮಾಣ್ದಪೆನೆ ಸಾಕಿನ್ನು |
ಜಿಷ್ಣುವಂ ಕರೆಸು ತೊಲಗೆನತೊಂದುಸರಳಿಂದ |
ವೃಷ್ಣಿಕುಲತಿಲಕನ ಕುಮಾರಕನ ಧನುವನೇಳ್ತುಂಡಾಗಿ ಖಂಡಿಸಿದನು ||೩೨||

ಬಿಲ್ಮುರಿಯೆ ಕಾರ್ಷ್ಣಿ ಕಡುಗೋಪದಿಂದಾಕ್ಷಣಂ |
ಪಲ್ಮೊರೆಯುತಸಿಪಲಗವಿಡಿದವನ ಮೇಲೆ ನಡೆ |
ಯಲ್ಮುಂದಕಡಹಾಯ್ದನರಿಯಲಾ ರಿಪುರೌದ್ರಕರ್ಮ ಕೃತವರ್ಮಕನನು ||
ಬಲ್ಮೆಯುಳ್ಳವನಹೆ ವೃಷಧ್ವಜ ಪ್ರದ್ಯುಮ್ನ |
ರೊಲ್ಮಹಾವೀರಂಲ್ಲವರೊಳ ಪೊಣರ್ದೆ ನೀಂ |
ನಿಲ್ಮದೀಯಾಸ್ತ್ರವಿಸ್ತಾರಮಂ ನೋಡೆನುತ ತೆಗೆದೆಚ್ಚು ಬೊಬ್ಬಿರಿದನು ||೩೩||

ಲೇಸಾದುದಖಿಳ ಯಾದವರೊಳಗೆ ಕೃತವರ್ಮ |
ನೇ ಸಮರ್ಥಂ ಕಾಣಬಹುದು ಕಾಳಗದೊಳೆನು |
ತಾ ಸುಧನ್ವ ತೆಗೆದಿಸಲ್ಕವನ ಕಣೆಗಳಂ ಕದಿದಿವಂ ಮಗುಳೆಚ್ಚೊಡೆ ||
ಆ ಸರಳ್ಗಳವನಂ ತರಿದು ಹತ್ತಂಬಿನಿಂ |
ಗಾಸಿಮಾಡಿದೊಡಿವಂ ಪದಿನೈದು ಮಾರ್ಗಣನೊ |
ಳೋಸರಿಸದವನ ಸರ್ವಾಂಗಮಂ ಕೀಲಿಸಿದನರುಣಜಲದೊರತೆ ಮನಗೆ ||೩೪||

ಹಾರ್ದಿಕ್ಯನಿಸುಗೆಯಿಂದುರೆ ನೊಂದು ಕೋಪದಿಂ |
ದಾರ್ದಾ ಸುಧನ್ವನಿಪ್ಪತ್ತುನಾಲ್ಕಂಬಿನಿಂ |
ತೇರ್ದೆಗೆವ ಕುದುರೆಗಳ ಕಾಲ್ಗಳಂ ಗಾಲಿಗಳ ಕೀಲ್ಗಳಂ ಮೂಡಿಗೆಯನು ||
ವಿರ್ದಿಸುವ ಚಾಪಮಂ ಸಾರಥಿಯ ಕರಮಂ ಕ್ಷ |
ಣಾರ್ಧದೊಳ್ ಕಡಿಯೆ ಕೃಥವರ್ಮನಳಿವಳಿದು ಕೆಲ |
ಸಾರ್ದೊಡಾ ಪದದೊಳನುಸಾಲ್ವನಿದಿರಾದನತಿವೇಗದಿಂದಿವನ ರಥಕೆ ||೩೫||

ಸಾಲ್ವಾನುಜಂ ಕಣಾ ತಾನೆನ್ನೊಳಾಹವಕೆ |
ಮೇಲ್ವಾಯ್ದೊಡನುಪಮ ಸುರೇಂದ್ರನ ಪರಾಕ್ರಮಕೆ |
ಸೋಲ್ವೆನೇ ತನ್ನೊರ್ಳ ಪೊಣರ್ದು ಸಾಯದೆ ಧರ್ಮರಾಜನವರಂ ಕಾಣ್ದುದು ||
ತೇಲ್ವುದು ರಣಾಗ್ರದಿಂದಲ್ಲದೊಡುಳುಹೆನೆನುತ |
ಕೋಲ್ವಳೆಗರೆದನವಂ ಪ್ರಳಯಜೀಮೂತಮಂ |
ಪೋಲ್ವಿನಂ ಮುಸುಕಿತು ಸುಧನ್ವನ ವರೂಥಮಂ ಬಹುಲಶರಯೂಧಮಂದು ||೩೬||

ಬಲ್ಲೆನನುಸಾಲ್ವನೆಂದಳವಿಯಂ ಬಿಟ್ಟೊಡಾಂ |
ಬಿಲ್ಲಾಳ್ ಪೇಳ್ ಧರ್ಮರಾಜನವರಂ ಕಾಣ್ಬ |
ನಲ್ಲ ಕಾಣಿಸುವೆನೀಗಳೆ ಧರ್ಮರಾಜನವರಂ ತರಹರಿಸು ನಿನ್ನನು ||
ಎಲ್ಲಿ ತೋರಿಸು ವಜ್ರಿಗಸದಳದ ಬಲ್ಮೆಯಂ |
ಕೊಲ್ಲಬೇಕಾದೊಡಿದ್ದಪೆನುತ ಕೋಲ್ಗಳಂ |
ಚೆಲ್ಲಿದಂ ಹಂಸಧ್ವಜನ ಸುತಂ ಕಾಶಿರಾಜನ ಸುತಂ ಗಾಸಿಯಾಗೆ ||೩೭||

ಫಡಫಡೆಲವೆಲವೊ ತೊಲತೊಲಗೆನುತೆ ರೋಷದಿಂ |
ಘುಡಿಘುಡಿಸಿ ತೌರಿಡುವ ಕಾಯದಿಂದನುಸಾಲ್ವ |
ನೊಡನೊಡನೆ ಪೊಳೆಪೊಳೆವ ಪೊಸಮಸೆಯ ನಿಡುನಿಡುಸರಳ್ಗಳಂ ತೆಗೆದಿಸುತಿರೆ ||
ಎಡೆಯೆಡೆಯೊಳಡಿಗಡಿಗೆ ಹಂಸಧ್ವಜಾತ್ಮಜಂ |
ಕಡಿಕಡಿದು ವಿರಿದ ಪರಾಕ್ರಮದೊಳಸುರನಂ |
ಬಿಡಬಿಡದೆ ಗಾತಿಸಿದನಿಪ್ಪತ್ತುಬಾಣದಿಂ ಬಿಸಿಬಿಸಿಯ ನೆತ್ತರೊಸರೆ ||೩೮||

ಮತ್ತೆ ಕಿಡಿಯಿಡೆ ಕೋಪಮನುಸಾಲ್ವನಬ್ದಿಯಂ |
ತುತ್ತುಗೊಳ್ವುರಿಗೆ ಸರಿಯಾದೊಂದು ಬಾಣಮಂ |
ಕಿತ್ತು ಹೂಡಿದನದಂ ತರಹರಿಸಿಕೊಳ್ಳೆನುತ ತೆಗೆದೆಚ್ಚು ಬೊಬ್ಬಿರಿಯಲ ||
ಕತ್ತರಸುವೆಡೆಗಣೆಗಳು ವಿರಿ ನಡುವೆದೆಯ |
ನುತ್ತರಿಸಿ ಕೋಲತ್ತಲಡಗಿತವನಿಯೊಳಾಗ |
ಪುತ್ತುವುಗುವಹಿಯಂತೆ ಬಳಿಕ ಮೈಮರೆದಂ ಸುಧನ್ವನದನೇ ವೇಳ್ವೆನು ||೩೯||

ಎಲೆಲೆ ಕವಿಕವಿಯೆನುತವನ ಬಲಂ ಕಂಡು ಸಂ |
ಕಲೆಗಿಡದ ಮುಗಿಲಂತಿವನ ಮೇಲೆ ಕೈದುಗಳ |
ಮಳೆಗರೆಯುತಿಟ್ಟಣಿಸಿ ನೂಕಲನುಸಾಲ್ವನಂ ಕನಲ್ದು ಜಗದಳಿವಿದೆಂದು ||
ಸುಳಿವ ಬಿರುಗಾಳಿಯಂ ಸೋಲಿಸುವ ನಿಡುಸರ |
ಳ್ಗಳ ಗರಿಯ ಭರದನಿಲಘಾತದಿಂ ಬಯಲಾದು |
ದಳವಿಯೆನಲಿಸುಗೆಯಂ ಕೈಕೊಂಡು ಸವರಿದಂ ಬಂದ ರಿಪುಮೋಹರವನು ||೪೦||

ಕಂದೆರದು ಕಂಡಂ ಸುಧನ್ವಂ ಬಳಿಕ ಖಾತಿ |
ಯಿಂದೆ ಕೋದಂಡಮಂ ಕೊಂಡೆಲವೊ ಕಲಿಯಾಗಿ |
ನಿಂದಿದಂ ಸೈರಿಸಿದೆಯಾದೊಡಿನ್ನಿಸುವುದಿಲ್ಲಾವು ಹೋಗೆನುತೆ ಹದೆಗೆ ||
ಒಂದು ಸರಳಂ ಪೂಡಿ ಕಿವಿವರೆಗೆ ತೆಗೆದೊಚ್ಚೊ |
ಡಂದು ಸಾಲ್ವಾನುಜನ ಪೇರುರವನುಚ್ಚಳಿಪೆ |
ನೊಂದಿಲೆಗುರುಳ್ದನಾದುದು ಮೂರ್ಛೆಪೊಕ್ಕನುರವಣಿಸಿ ಪಾರ್ಥನ ಪಡೆಯನು ||೪೧||

ಪೂಣೆಹೊಕ್ಕವನಿಸುವ ಬಾಣಂಗಳರಿಭಟರ |
ಗೋಣನರಿದುಚ್ಚಳಿಸೆ ಮಾಣದೆ ಗಗನಕೇಳ್ವ |
ಶೋಣಿತದ ಧಾರೆಗಳ್ ಶೋಣಾಭ್ರದಂತಿರಲ್ ಪ್ರಾಣಿಗಳ್ ದೃಷ್ಟಿಗಳ್ಗೆ ||
ಕಾಣಿಸಿದುವಾಲಿಸೈ ಕ್ಷೆಣಿಪ ಸುಧನ್ವನ |
ಕ್ಷೀಣವಿಕ್ರಮಶಿಖಿಯ ಚೂಣಿಯ ಮಹಾಜ್ವಾಲೆ |
ಕೇಣಿಗೊಂಡರಿಬಲಶ್ರಢಣೀಯೆಂಬೊಂದಡವಿದಾಣಮಂ ಹೊಕ್ಕಂತಿರೆ ||೪೨||

ಸಂದಣಿಸಿ ದಂತಿಗಳ ಘಟೆಗಳೊತ್ತರಿಸಲೈ |
ಸಂದಣಿಸಿದಂ ಸರಳ ಸಾರದಿಂ ಕೆಡಹಿದಂ |
ಕೊಂದನುರವಣಿಸಿ ಕಾಲಾಲ್ಗಳಂ ಮುಳಿದು ಬಳಿಕೊಂದನುಳಿಯದೆ ರಣದೊಳು ||
ಬಂದ ವಾಜಿಗಳ ನಾನಳವಿಯೊಳ್ ಕಾಣೆನಂ |
ಬಂದವಾಗಲ್ಕೆ ತಡೆಗಡಿದು ಮೆದೆಗೆಡಹಿದಂ |
ಮುಂದಿಟ್ಟನಿಸಿ ಬಿದ್ದುದಾಗ ರಥಕವ್ರಾತಮುಂ ದಿಟ್ಟನಿಸುತೆಯಿಂದೆ ||೪೩||

ಕೆಡೆದೊಡಲ ಸೀಳಿಂದೆ ಕಡಿವಡೆದ ತೋಳಿಂದೆ |
ತೊಡೆಮಡದ ತುಂಡಿಂದೆ ನೆಣವಸೆಯ ಜೊಂಡಿಂದೆ |
ಬಿಡುಮುದುಳೆ ತುಂಡದಿಂ ರುಂಡದಿಂ ಮುಂಡದಿಂ ಖಂಡದಿಂದೆ ||
ಅಡಗುಗಳ ತಿರುಳಿಂದೆ ನಿಡುನರದ ಕರುಳಿಂದೆ |
ಕಡಲಿಡುವ ನೆತ್ತರಿಂದೆಡವಿಡದೆ ಸತ್ತರಿಂ |
ದಿಡಿದಿರ್ದುದಾ ರಣದಲೋರಣದ ಮಾರಣದ ಕಾರಣದ ಪೂರಣದೊಳು ||೪೪||

ಕಾಕ ಬಕ ಗೃದ್ರ ಗೋಮಾಯು ಸಂತತಿಗಳಿಂ |
ಡಾಕಿನಿ ಪಿಶಾಚ ವೇತಾಳ ಭೂತಂಗಳಿಂ |
ಭೀಕರದೊಳಂಜಿಸಿದುವಾರ್ದು ರಿಂಗಣಗುಣಿವ ಕಲಿಗಳ ಕಪಾಲಂಗಳು ||
ಲೋಕದಖಿಳ ಪ್ರಾಣಿಗಳನುಂಡಜೀರ್ತಿಯಿಂ |
ದೋಕರಸಿದನೊ ಕಾಲನೆಂಬಿನಂ ಕೆಣ್ಗೆಸೆದು |
ದಾಕಳಂ ರೌಕುಳದ ಮಾಂಸ ಕರ್ದಮ ರುಧಿರ ನೆಣವಸೆ ಮಿದುಳ್ಗಳಿಂದೆ ||೪೫||

ನೋಡಿದಂ ಸಾತ್ಯಕಿ ಸುಧನ್ವನಾಟೋಪಮಂ |
ಮಾಡಿದಂ ಬದ್ಧಭ್ರುಕುಟಿಯಿಂದ ಕೋಪಮಂ |
ತೀಡಿದಂ ತಿರುವನೇರಿಸಿ ಮಿಡಿದು ಚಾಪಮಂ ತಾಗಿದನವನ ರಥವನು ||
ಆಡಿದಂ ನಿಜನಾಮಧೇಯ ಪ್ರತಾಪಮಂ |
ಪೂಡಿದಂ ತೆಗೆದಂಬನೆಚ್ಚಂ ಯಮೋಪಮಂ |
ತೋಡಿದಂ ಮೂವತ್ತುಬಾಣದಿಂ ತಾಪಮಂಕುರಿಸುವಂತವನೊಡಲೊಳು ||೪೬||

ಗಾಯವಡೆದೆಕ್ಕಲನ ತೆರದಿಂ ಕೆರಳ್ದು ಶೈ |
ನೇಯನಂ ಮಗುಳೆ ಮೂವತೈದು ಕೋಲ್ಗಳಿಂ |
ನೋಯಿಸಿದನಾ ಸುಧನ್ವ ಬಳಿಕ ಸಾತ್ಯಕಿ ಸಹಸ್ರಸಂಖ್ಯಾಕಮಾದ ||
ಸಾಯಕದೊಳಾತನ ವರೂಥ ಹಯ ಸಾರಥಿ ಯು |
ಗಾಯತ ಧ್ವಜ ಛತ್ರ ಚಮರಮಂ ತರಿದೊಡವ |
ನೀ ಯಾದವನ ತೇರನುರೆ ಮುರಿಯಲಿರ್ವರುಂ ವರಥರಾದರೆ ಧುರದೊಳು ||೪೭||

ನಿಂದು ಕಾದಿದರೊಮ್ಮೆ ಕೈದುಕೈದುಗಳೊಳೈ |
ತಂದುಕಾದಿರೊಮ್ಮೆ ಮತ್ತೆ ಪೊಸತೇರ್ಗಳಿಂ |
ಬಂದು ಕಾದಿದರೊಮ್ಮೆ ಕೂಡೆ ತಮತಮಗೊದಗಿದೆಡಬಲದ ಪಡಿಬಲವನು |
ಕೊಂದು ಕಾದಿದರೊಮ್ಮೆ ಶರಶರದ ಹತಿಗಳಿಂ |
ನೊಂದು ಕಾದಿದರೊಮ್ಮೆ ಚಳಚಳಿಕೆಯಿಂದ ಸಲೆ |
ಸಂದು ಕಾದಿದರೊಮ್ಮೆ ಸಾತ್ಯಕಿಸುಧನ್ವರೋರೊರ್ವರ್ಗೆ ಸರಿಮಿಗಿಲೆನೆ ||೪೮||

ಬವರಮಿರ್ವಗೆ ಸರಿಯಾಗೆ ಕಡುಗೋಪದಿಂ |
ದವಗಡಿಸಿದಂ ಸುಧನ್ವ ಬಳಿಕ ಸಾತ್ಯಕಿಯ |
ಸವಗ ಸೀಸಕ ಬಾಣ ಬತ್ತಳಿಕೆ ಸಿಂಧ ಸೀಗುರಿ ಛತ್ರಚಾಮರವನು ||
ಸವರಿ ಸಾರಥಿ ಹಯ ವರೂಥ ಯುಗಚಕ್ರಮಂ |
ಕವಲಂಬುಗಳೊಳೆಚ್ಚು ಕತ್ತರಿಸಿ ಕರದ ಚಾ |
ಪವನೈದು ಕಡಿಯಾಗಿ ಮಾಡಿ ಪೇರುರಕೆ ಮೊನೆಗಣೆಗಳಂ ಮೋಹಿಸಿದನು ||೪೯||

ಸತ್ಯಕಸುತಂಗೆ ಪರಿಭವಮಾಗೆ ಭುಜಬಲದೊ |
ಳತ್ಯಧಿಕಯೌನಾಶ್ವಾಸಿತಧ್ವಜಗದಾ |
ದಿತ್ಯಭವಸೂನು ಶಠ ನಿಶಠ ಕೃತವರ್ಮ ಸಾಂಬಾನುಸಾಲ್ವಪ್ರಮುಖರು ||
ಪ್ರತ್ಯೇಕವೀರರಿವರೆಲ್ಲರುಂ ಪಡೆಸಹಿತ |
ಸತ್ಯವಿಕ್ರಮ ಸುಧನ್ವನ ಸಮ್ಮುಖಕೆ ನಡೆವ |
ಕೃತ್ಯಮ ಕಂಡರ್ಜುನಂ ಕೋಪದಿಂದ ಕಾಳಗಕೆ ತಾನನುವಾದನು ||೫೦||

ಮುಂಜೆರಗನಳವಡಿಸಿ ವೀರಪಳಿಯಂ ಬಿಗಿದು |
ರಂಜಿತ ತನುತ್ರ ಸೀಸಕವನಾಂತಮರಗಣ |
ಕಂಜಳಿಯನೆತ್ತಿ ಪಳವಿಗೆಯ ಹನುಮಂಗೆರಗಿ ಬಲವಂದು ಮಣಿರಥವನು ||
ಮಂಜುಳಹಯಂಗಳಂ ಬೋಳೈಸಿ ಮಣಿದು ತೇ |
ರಂ ಜಯನಿನಾದದಿಂದೇರಿದಂ ಸಮರಕೆ ಧ |
ನಂಜಯಂ ಧ್ಯಾನಿಸುತ ಮನದೊಳಗೆ ದೇವಪುರನಿಲಯ ಲಕ್ಷ್ಮೀಪತಿಯನು ||೫೧||