ಸೂಚನೆ ||
ಹಿಂದುಲಿದನಾಹವಕ್ಕೆಂದು ಹಂಸಧ್ವಜಂ |
ನಂದನನನೆಣ್ಣೆ ಗಾಯ್ದಿರ್ದ ಕೊಪ್ಪರಿಗೆಯೊಳ್ |
ತಂದು ಕೆಡಹಿಸಲಚ್ಚುತಧಾನದಿಂ ತಂಪುವಡೆದನವನಚ್ಚರಿಯೆನೆ ||

ಭೂಹಿತಚರಿತ್ರ ಕೇಳುಳಿಯದೆ ಸಮಸ್ತಭಟ |
ರಾಹವಕೆ ಪೊರಮಟ್ಟ ಬಳಿಕ ಹಂಸಧ್ವಜನ |
ಮೋಹದ ಕುಮಾರಂ ಸುಧನ್ವನಾಯತಮಾಗಿ ಬಂದು ನಿಜಮಾತೆಯಡಿಗೆ ||
ಬಾಹುಯುಗಮಂ ನೀಡಿ ಸಾಷ್ಟಾಂಗಮೆರಗ ಸಿತ |
ವಾಹನನ ಹರಿಯಂ ಪಿಡಿದು ಕಟ್ಟಿ ಕದನದೊಳ್ |
ಸಾಹಸಂಮಾಳ್ಪೆನೆನ್ನಂ ಪರಿಸಿ ಕಳುಹೆಂದು ಕೈಮುಗಿದೊಡಿಂತೆಂದಳು ||೧||

ಕಂದ ಕೆಳ್ ಫಲುಗುಣಂ ಪಾಲಿಪಂ ನಾಲ್ದಡಿಯ |
ದೊಂದು ಹರಿಯಂ ನಿನಗದರ ಚಿಂತೆ ಬೇಡ ಸಾ |
ನಂದದಿಂ ಪಾರ್ಥನಂ ರಕ್ಷಿಸುವ ಹರಿಯನೇ ಹಿಡಿವ ಬುದ್ಧಿಯನೇ ಹಿಡಿವ ಬುದ್ಧಿಯನೆ ಮಾಡು ||
ಹಿಂದೆ ನಾರದಮುನಿಯ ಮುಖದಿಂದೆ ಕೇಳ್ದೆ ಮು |
ಕುಂದನ ವಿಶಾಲಲೀಲಾಮಾಲೆಯಂ ಕೃಷ್ಣ |
ನಿಂದು ಮೈದೋರಿದೊಡೆ ಕಣ್ಣಾರೆ ಕಾಣಬಹುದೆಂದೊಡವನಿಂತೆಂದನು ||೨||

ತಾಯೆ ಚಿತ್ತೈಸಾದೊಡೀ ಭಾಷೆಯಂ ಕೃಷ್ಣ |
ರಾಯನಂ ತನ್ನೆಡೆಗೆ ಬರಿಸಿಕೊಳ್ವುದಕೊಂದು |
ಪಾಯಮಂ ಬಲ್ಲೆನಾಂ ಕಯ್ಯಂ ಪಿಡಿದೊಡೆ ಮೈ ತಾನೆ ಬಹುದಿಂದ್ರಜನನು ||
ನೋಯಿಸಿದೊಡಗಧರಂ ಬಾರದಿರನಾನತರ |
ಪಾಯಮಂ ಸೈರಿಸಂ ಬಳಿಕ ತೋರುವೆನಂಬು |
ಜಾಯತಾಕ್ಷನ ಮುಂದೆ ತನ್ನ ಪೌರುಷವನೆನಲಾಕೆ ಮಗುಳಿತೆಂದಳು ||೩||

ಕರುವನೆಳಗಂದಿ ತಾನರಸಿಕೊಂಡೈತರ್ಪ |
ತೆರದಿಂದೆ ಬಂದಪಂ ಮುರಹರಂ ಪಾರ್ಥನೆಡೆ |
ಗರಿವೆನಿದು ನಿಶ್ಚಯಂ ಮಗನೆ ನೀನಾ ಹರಿಗೆ ವಿಮುಖನಾದೊಡೆ ತನ್ನನು ||
ಜರಿವರಿಕ್ಕೆಲದ ಬಂಧುಗಳಿನ್ನು ಸಮರದೊಳ್ |
ನೆರೆ ಕೃಷ್ಣನಂ ಗೆಲ್ವರುಂಟೆ ಸಾಕೆನ್ನೊಡಲ |
ಮರುಕಮಂ ಬಿಟ್ಟೆನವನಂ ಕಂಡ ಬಳಿಕ ಹಿಮ್ಮಟ್ಟದಿರ್ ಪೋಗೆಂದಳು ||೪||

ಎಂದೊಡೆಲೆ ತಾಯೆ ಕೆಳ್ ಚಕ್ರಿಗೆ ವಿಮುಖನಾಗಿ |
ಬಂದೆನಾದೊಡೆ ನಿನ್ನ ಗರ್ಭದಿಂದುದಯಿಸಿದ |
ನಂದನನೆ ಹಂಸಧ್ವಜನ ಕುಮಾರನೆ ಮೇಣು ಹರಿಕಿಂಕರನೆ ವೀರನೆ ||
ಕೊಂದಪೆಂ ಪಾರ್ಥನ ಪತಾಕಿಯನವನದಟ |
ನಂದಗೆಡಿಸುವೆನೆನ್ನ ವಿಕ್ರಮವನಚ್ಯುತನ |
ಮುಂದೆ ತೋರಿಸುವೆನಿನಿತರರಮೇಲೆ ಸೋಲುಗೆಲುವದು ಪುಣ್ಯವಶಮೆಂದನು ||೫||

ಅನಿತಿರೊಳ್ ಕುವಲೆಯೆಂಬಯವಳೋರ್ವಳಾ ಸುಧ |
ನ್ವವ ಸಹೋದರಿ ತಂದಳಾರತಿಯನನುಜ ಕೇ |
ಳನುವರದೊಳಿಂದು ಶೌರಿಗೆ ವಿಮುಖನಾಗಿ ನೀಂ ಬಂದೆಯಾದೊಡೆ ||
ಮನೆಯೊಳಾಂ ತಲೆಯೆತ್ತಿ ನಡೆವೆಂತದರಿಂದೆ |
ವನಜಾಕ್ಷನಂ ಮೆಚ್ಚಿಸಾಹವದೊಳೆಂದು ಚಂ |
ದನದ ನುಣ್ಪೆಟ್ಟು ಕಪ್ಪುರವೀಳೆಯಂಗೊಟ್ಟು ಕಳುಹಿದಳ್ ಸೇಸೆದಳೆದು ||೬||

ಅರಸೆ ಕೇಳಾ ಸುಧನ್ವಂ ಬಳಿಕ ಜನನಿಸೋ |
ದರಿಯರಂ ಬೀಳ್ಕೊಂಡು ಪೊರಮಟ್ಟು ತನ್ನ ಮಂ |
ದಿರದ ಪೊರೆಗೈತರಲ್ಕಿದಿರಾಗಿ ಪೊಂದಟ್ಟಯೊಳ್ ಸಂಪಗೆಯ ಪೂವನು ||
ಸರಸ ಪರಿಮಳಗಂಧ ಕರ್ಪೂರವೀಟಿಕೆಯ |
ನಿರಿಸಿಕೊಂಡೊಲವಿಂದೆ ಬಂದಳಂಗಜನ ಜಯ |
ಸಿರಿ ತಾನೆನಲ್ ಪ್ರಬಾವತಿಯೆನಿಪವನರಾಣಿ ಸುಶ್ರೇಣಿ ಸರ್ಪವೇಣಿ ||೭||

ಚಂದ್ರಮಂಡಲ ಸದೃಶ ವದನದೆಳನಗೆಯ ನವ |
ಚಂದ್ರಿಕೆಯೆನಲ್ ಮೇಲುದಿನ ದುಕೂಲಂ ಮೆರೆಯೆ |
ಚಂದ್ರತಿಲಕದ ರಾಗಮುಂ ಚಿತ್ತದನುರಾಗಮಂ ಸೂಚಿಪಂತೆ ಸೊಗಸೆ |
ಇಂದ್ರನೀಲದ ಮಣಿಯ ಮಿರುಗದ ಲಲಿತಕಾಂತಿ |
ಸಾಂದ್ರಮಾದವೊಲೆಸೆವಳಕಪಾಶದಿಂದೆ ನಯ |
ನೇಂದ್ರಿಯವನುರೆ ಕಟ್ಟಿ ಕೆಡಪದಿರಳೆಂಬಿನಂ ರಂಜಿಸಿದಳಾ ಮೃಗಾಕ್ಷಿ ||೮||

ಸುರಿಸುವೊಳ್ದೊಡೆಯ ಬೆಡಗಿನ ನಡೆಯ ನಿರಿಯ ಸಿಂ |
ಗರದುಡೆಯ ತೆಳ್ವಾದಸಿಯ ಪೊಡೆಯ ಚೆಲ್ವುದಳೆ |
ದುರದೆಡೆಯ ನಿಂಬುಗೊಂಡಿಟ್ಟೆಡೆಯ ಬಲ್ಮೊಲೆಯ ಪೊಳೆವ ಕಣ್ಮಲರ ಕಡೆಯ ||
ತ್ವರಿಪ ಭೂಜವಲ್ಲರಿಯ ತೊಡವುಗಳ ಮೈಸಿರಿಯ |
ಬಿರಿಮುಗುಳ ಕಬರಿಯ ಕಲೆಗಳಿಡಿದ ಸೌಂದರಿಯ |
ದರಸಿ ನಿಜಪತಿಯ ಮುಂದಚ್ಚರಿಯ ಬಗೆಗೊಂಡಳಂದು ಬೇರೊಂದು ಪರಿಯ ||೯||

ಮುಡಿದು ಪೊಸಮಲ್ಲಿಗೆಯ ಸೂಸುವೆಳನಗೆಯ ಸವಿ |
ನುಡಿಯ ದಾಯ್ದೆರೆಯ ಹೊಳೆಹೊಳೆವ ದಶನದ ಮಿಸಿಪ |
ಕಡೆಗಣ್ಣ ತೊಳಗುವ ನಖಾವಳಿಯ ಥಳಥಳಿಪ ಕಂಠಮಾಲೆಯ ಮುತ್ತನ ||
ತೊಡವುಗಳ ಘನಸಾರದನುಲೇಪನದ ಸಣ್ಣ |
ಮಡಿದುಕೂಲದ ಬೆಳ್ವೊಗರ್ ಕೋಮಲಾಂಗದೊಳ್ |
ಬಿಡದೆ ಪಸರಿಸೆ ಚಂದ್ರಕಾಂತದಿಂ ನಿರ್ಮಿಸಿದ ಪುತ್ತಳಿವೊಲವಳೆಸೆದಳು ||೧೦||

ಕರಯುಗದೊಳಾಂತ ಪೊಂದಟ್ಟೆಯನದರ ಮೇಲೆ |
ಪರೆಪಿರ್ದ ಸಂಪಗೆಯ ಪೂಗಳಂ ತನ್ನ ಮೆ |
ಯ್ಯೊರಳೆ ಸರಿಯಾದಪುವೆ ನೋಡೆಂದು ತೋರ್ಪಂತೆ ಕೊಂಡುಬಂದಿದಿರೆ ನಿಂದ ||
ತರಳೆಯಂ ಕಡೆಗಣ್ಣೊಳೊಯ್ಯನೀಕ್ಷಿಸಿ ನಗುತೆ |
ಸರಸ ಪರಿಮಳ ನವ್ಯ ಕುಸುಮಂಗಳಂ ಕೊಂಡು |
ಭರದಿಂದೆ ಕೊಳುಗುಳಕೆ ಪೊರಮಡುವ ಗಮನದಿಂ ಕಾಂತೆಗವನಿಂತೆಂದನು ||೧೧||

ಕಾಂತೆ ಕೇಳೆಂದು ಸಮರದೊಳರ್ಜುನಂಗೆ ಮಾ |
ರಾಂತವನ ಬಿಂಕಮಂ ಮುರಿವೆನಾ ಹರಿಬಕಸು |
ರಾಂತಕಂ ಬಂದೊಡತನ ಮುಂದೆ ತೋರಿಸುವೆನೆನ್ನ ಭುಜವಿಕ್ರಮನು ||
ನಾಂ ತಳೆವೆನಾರ್ಪಿಂದೆ ವಿಜಯಮಂ ವಿರ್ದೊಡೆ ಭ |
ವಾಂತರವನೈದಿ ಸನ್ಮುಕ್ತಿಯಂ ಪಡೆದಪೆಂ |
ನೀಂ ತಳಮಳಿಸದಿರೆಂದಿನಿಯಲಂ ಸಂತೈಸಿ ಪೊರವಡಲ್ ತಡೆದೆಂದಳು ||೧೨||

ಯುಕ್ತಮಲ್ಲಿದು ರಮಣ ನಿನಗೆ ಕೇಳ್ ಕಾದುವಾ |
ಸಕ್ತಿಯಿಂ ಚಕ್ರಿಗಭಿಮುಖನಾದ ಬಳಿಕಲ್ಲಿ |
ಮುಕ್ತಿಯಲ್ಲದೆ ಬೇರೆ ಜಯಮುಂಟೆ ಜನಿಸದು ವಿವೇಕಸಂತತಿ ನಿನ್ನೊಳು ||
ವ್ಯಕ್ತದಿಂ ತನಗೊಂದಪತ್ಯಮುಲದಯಿಸದೊಡೆ ವಿ |
ರಕ್ತಿಯಿಂ ಕೈವಲ್ಯಮಾದಪುದೆ ಸಮರಕು |
ದ್ಯುಕ್ತನಪ್ಪಾತಂಗೆ ಸಂತಾನಮಿಲ್ಲದಿರಪ್ಪುದೇ ಹೇಳೆಂದಳು ||೧೩||

ಅದರಿಂದಮಾತ್ಮಜವಿವೇಕಮಿಲ್ಲದೊಡೆ ನನ |
ಗಿದುವೆ ಜಲದೋದಯದ ಋತುಸಮಯವಿ ಪದದೊ |
ಳುದುಭವಿಸುವುದು ನಿನ್ನ ಭೂಮಿಗೊಳ್ ಬೀಜಮಂ ಬಿತ್ತಿದೊಡೆ ಬೆಳೆ ಬಾಳ್ಕೆಗೆ ||
ಕದನಕೈದುವವೇಳೆಯಲ್ಲೆನಲವಂ ಮುಂದೆ |
ಬೆದೆಗಾಲಮುಂಟೆಂದೊಡವಳೆಣೆಸಿ ಮಳೆಗಳಂ |
ತುದಿವಿಶಾಖೆಗೆ ಬಂದುದಿನ್ನು ಮೇಲಂಕುರಿಸಲರಿಯದೆನಲಿಂತೆಂದನು ||೧೪||

ರಮಣಿ ನೀನೆಂಬುದನುನಯಮಪ್ಪುದಾದೊಡಂ |
ಸಮಯಮಲ್ಲಿದು ಮೊಳಗುತಿದೆ ಭೇರಿ ಪೊರೆಮಟ್ಟು |
ಸಮರಕಯ್ಯಂ ಪೋದನುಳಿದೆನಾದೊಡೆ ತಾತನಾಜ್ಞೆಗೊಳಗಾಗದಿರೆನು ||
ಕ್ರಮವನರಿಯದಳೆ ನೀನೆಗೆ ಸೈರಿಸಲಳವೆ |
ಗಮನಕನುಕೂಲೆಯಾಗೆನುತ ಗಲ್ಲಂಬಿಡಿದು |
ಕಮಲಾಕ್ಷಿಯಂ ಮುದ್ದುಗೈದು ಬೀಳ್ಕೊಳ್ವಿನಂ ಕಾತರಿಸಿ ಮೇಲ್ಪಾಯ್ದಳು ||೧೫||

ಅಂಗಮಿಲ್ಲದ ಸಮರಂಗಮಂ ಪುಗಲಂಜಿ |
ತುಂಗವಿಕ್ರಮವಿಜಯಸಂಗರಕೆಳಸುವನೆಂ |
ಬಂಗವಣೆಯೆಂತುಂಟೆಂದಂಗನೆ ಬಲಾತ್ಕಾರದಿಂ ಗುರುಕುಚದ್ಪಯವನು ||
ಸಂಗಡಿಸುವಂತಾರ್ಪಿನಿಂ ಗಾಢತರದೊಳಾ |
ಲಿಂಗನಂಗೈದು ಕುಡಿಗಂಗಳಿಂದವನ ಮೊಗ |
ದಿಂಗಿತವನಾರೈವ ಶೃಂಗಾರಚೇಷ್ಟೆಯ ಬೆಡಂಗನದನೇವೇಳ್ವೆನು ||೧೬||

ಮಿಡಿದೊಡೊಡೆವಮತಮೃತರಸದಿಂದೆ ಮೆರೆವ ಪೊಂ |
ಗೊಡಮೊಲೆಯನವನ ವಕ್ಷಸ್ಥಳದೊಳಿಟ್ಟೊತ್ತಿ |
ದೊಡೆಹಿಸಿದೊಳಗಣ ತನುಸುಧೆಯೊಸರ್ದುತೊಟ್ಟಿಡುವ ಬಿಂದುಗಳ ಸಾಲಿದೆನಲು ||
ಕಡಿಕಿ ಪರಿದುಗುವ ಹಾರದ ಮುತ್ತುಗಳ ಮಣಿಗ |
ಳೆಡೆವಿಡದೆ ಸುಸುತಿರೆ ಸೊಕ್ಕುದೆಕ್ಕೆಯಳ್ ಸೊಗಸು |
ವಡೆದಳಾಕಾಂತೆ ಪ್ರಿಯನಂಗದೊಳ್ ಮೋಹನೋತ್ಸಮಗದೊಳ್ ಬಗೆಗೊಳಿಸುತೆ ||೧೭||

ಪ್ರಿಯನ ತನುಚಂದನಮಹೀಜಮಂ ಸುತ್ತಿದ ಫ |
ಣಿಯೊ ವಲ್ಲಭಾಂಗದಾಸ್ತಂಭಮಂ ತೊಡ |
ರ್ದಯುಗಶರಕರಿಯ ಸುಂಡಿಲೊ ಕಾಂತಕಾಯಬಲಮಂ ಬಂಧಿಸಿದ ಮದನನ ||
ಜಯಪಾಶಮೋ ರಮಣ ದೇಹ ಕಲ್ಪ ದ್ರುಮಾ |
ಶ್ರಯದ ಕೋಮಲಲತೆಯೊ ಪೊಸತಾದುಂದೆಂಬತಿ |
ನಿಯನನಪ್ಪಿದ ಹರಿಣಲೋಚನೆಯ ನಳಿತೋಳ್ಗಳೆಸೆದುವತಿಗಾಢದಿಂದೆ ||೧೮||

ಕಣ್ಮಲರ್ ಕಾತರಿಸೆ ಮುಡಿ ಪೂಗಳಂ ಸೂಸೆ |
ನುಣ್ಮೊಗಂ ಬೇರೊಂದು ಪಯಾಗೆ ನುಡಿ ದೈನ್ಯ |
ಮುಣ್ಮೆ ಹೀನಸ್ವರದೊಳೆಸೆಯೆ ಕೈಕಲೆಗಳೊಳ್ ಸೋಂಕೆ ಮೈ ಪುಳಕದಿಂದೆ ||
ಪೊಣ್ಮೆ ಮದನಾತುರಂ ತಲೆದೋರೆ ಮೇಲುದಂ |
ಬಿಣ್ಮೊಲೆಗಳೋಸರಿಸೆ ನಿರಿಯ ಬಿಗಿ ಪೈಸರಿಸೆ |
ಪೆಣ್ಮಂಚದಂಚೆದುಪ್ಪುಳ್ವಾಸಿಗೆಳೆದೊಯ್ದಳಿನಿಯನಂ ಬಲ್ಪಿನಿಂದೆ ||೧೯||

ಸತಿಗೆ ಷೋಡಶದ ಋತುಸಮಯಮೇಕಾದಶೀ |
ವ್ರತಮಲಂಘ್ಯಶ್ರಾದ್ಧಮಿನಿತೊಂದುದಿನಮೆ ಸಂ |
ಗತಮಾದೊಡೆಂತು ಕರ್ತವ್ಯಮೆನೆ ಪೈತೃಕದ ಶೇಷಾನ್ನಮಾಘ್ರಾಣಿಸೆ ||
ಕೃತಭೋಜ ಮಾದಪುದು ನಡುವಿರುಳ್ಗಳಿದಾ ವ |
ನಿತೆಯನೊಡಗೂಡಬಹುದದರಿಂದ ದರ್ಮಪ್ಪ |
ದ್ಧತಿಯನೀಕ್ಷಿಸಲಿವಳಿನಿಂದು ವಿರುವುದು ಮತವಲ್ಲೆಂದವಂ ತಿಳಿದನು ||೨೦||

ತಾತನಾಜ್ಞೆಯನುಳಿದು ಕೃಷ್ಣ ದರ್ಶನಕೈದ |
ದೀತರಳೆಗಿಂದು ಋತುದಾನಮಂ ಮಾಡಿದೊಡೆ |
ಪಾತಕಂ ತನಗಿಲ್ಲಮೆಂದು ನಿಶ್ಚಯಸಿ ಬಳಿಕಾ ಸುಧನ್ವಂ ಮನದೊಳು ||
ಭೀತಿಯಂ ತೊರೆದು ಕಾಂತೆಯ ಕೂಡೆ ರವಿಸಿದಂ |
ಪ್ರೀತಿಯಿಂದುಗುರೊತ್ತು ಸರಸ ಚುಂಬನ ಲಲ್ಲೆ |
ವಾತುಗಳಿರವ ನೇಮಗಲೆ ತಾಡನಪ್ರೌಢಿ ಬಂಧ ಸಮ್ಮೋಹನದೊಳು ||೨೧||

ನಾಣ್ಮೇಸಲಳಿದವಯವದ ಭೇದಮಂ ಮರೆದು |
ಜಾಣ್ಮೆಗಳ ಬಂಧಂಗಳೊಳ್ ಬಳಸಿ ಸೊಗಯಿಸುವ |
ಗೋಣ್ಮೊಳಗಿನಿಂಚರಂಗಳನೆಸಗಿ ಮೊನೆವಲ್ಲ ಕರ್ದಂಕನುಗುರೊತ್ತನು ||
ಮಾಂಣ್ಮಾಣೆನಲ್ ಕೈಗೊಳಿಸಿ ಲಲ್ಲೆಗೈದೊಲವ |
ನಾಣ್ಮಂಗೆ ಕಾಣಿಸಿದಳವಳೊಡನೆ ಕೂರ್ಮೆಯಿಂ |
ಮೇಣ್ಮಾನಿನಿಗೆ ಮದನಕಲೆಗಳಂ ತೋರಿಸಿದನವನಂದು ಸಮ್ಮೋಹನದೊಳು ||೨೨||

ಒದವಿದ ಸೊಬಗಿನ ಶೃಂಗಾರದಾತುರದ ವೀ |
ರದ ಲಲ್ಲೆವಾತಿನ ಕರುಣದ ನಗೆಮೊಗದ ಹಾ |
ಸ್ಯದ ನಖಕ್ಷತದ ರೌದ್ರದ ಕಾತುರದ ಭಯದ ಬೆಮರೊಗೆದ ಭೀಭತ್ಸದ |
ಪುದಿದ ರೋಮಾಂಚದದ್ಭುತದ ಸೊಗಸಿನ ಮೋಹ |
ನದ ಶಾಮತದೆಸೆವ ನವರಸದೇಳ್ಗೆಯಾದ ಸುರ |
ತದ ನವರಸವನುರೆ ಸವಿದು ಸೊಕ್ಕಿ ಮರೆದರನ್ಯೋನ್ಯಭಾವವನವರ್ಗಳು ||೨೩||

ಕೂರುಗುರ್ಗಳ ಗೆರೆಯ ಸೂತ್ರಬಂಧದೊಳೆಸೆವ |
ತೋರಮೊಲೆಗಳ ಕುಂಭಸಮಸ್ಥಾಪನಂಗೈಯ್ದು |
ಚಾರುತರ ಗಳರವದ ಮಂತ್ರದಿಂ ರೋಮಾಂಚನದ ಕುಶಾಗ್ರಂಗಳಿಂದೆ ||
ವೀರರತಿ ಸಾಮಾಜ್ಯಪಟ್ಟದೊಳ್ ಬೆಮರ್ವನಿಯ |
ವಾರಿಸೇಚನದಿಂದೆ ಕೃತಕೃತ್ಯನಾದಂತೆ |
ರಾರಾಜಿಸಿದನವಂ ಮೆಲ್ಪಾಸಿನೊಳ್ ಮೆರೆವ ಮಣಿಮಂಚದಾಸನದೊಳು ||೨೪||

ಪ್ರಕಟಿಸಿದ ಕಟಿ ತಳ್ಳುವಳ್ಳೆ ಬೆಂಡಾದ ಮೈ |
ಸುಕಲೆಗಲನಾಂತ ಮೊಲೆ ಕದಡುಲೇಪದ ಬೆಮರ್ |
ವಿಕಸಿತಸುಖದೊಳದ್ದ ಮನವೆದ್ದ ರೋಮಾಂಚಮಸವಳಿದಕೈ ಮಸುಳ್ದ ||
ಮಕರಪತ್ರದ ಕದಪು ಮಾಣ್ದ ರವದೊಳ್ಗೊರಲ್ |
ಮುಕುಳಿತವಿಲೋಚನಂ ನರುಸುಯ್‌ನಿಮಿರ‍್ದ ನಾ |
ಸಿಕಮಳಿದ ತಿಲಕಂ ಪರೆದ ಕುರುಳ್ ಸೊಪ್ಪಾದಧರಮೊಪ್ಪಿತಾ ಕಾಂತೆಗೆ ||೨೫||

ಮನ್ವಾದಿಋಷಿಗಳಭಿಮತಮಿದೆಂದರಿದಾ ಸು ||
ಧನ್ವಂ ಋತುಸ್ವಾತೆಯಂ ವಿರದೊಡಗುಡಿ |
ತನ್ವಿಯಂ ಬೀಳ್ಕೊಂಡು ಸಮರಕನುವಾಗಲಿರಲಿತ್ತ ಕುರುಕುಲದ ನೃಪರ ||
ಅನ್ವಯಕೆ ತೊಡಲಾದ ನರನ ಹಯಮಂ ಕಟ್ಟು |
ವನ್ವೇಷಣದೊಳಾಹವಕೆ ನಡೆಯುತತಿಬಲ ಸ |
ಮನ್ವಿತಕುಮಾರನಂ ಸೇನೆಯೊಳ್ ಕಾಣದೆ ಕೆರಳ್ದ ಮರಾಳಕೇತು ||೨೬||

ಪೊರೆಯೊಳಿಹ ಸಚಿವರಂ ನೋಡುತವರೊಳ್ ಸುಮತಿ |
ಗರಸಂ ನಿರೂಪಿಸಲವಂ ಕಡುಗಡಿದರಾದ |
ಚರರನಟ್ಟಿದೊಡವರ್ ಬರೆಸೆಳೆದು ನಗುತಿಹ ಸುಧವ್ವನಂ ತುಡಿಕಿ ಪಿಡಿದು ||
ಕರಯುಗಳಮಂ ನೇಣ್ಗಳಿಂ ಬಿಗಿದು ತಂದರತಿ |
ಭರದಿಂದೆ ರಾಯನಿದ್ಧಡೆಗಾಗಿ ಪೌರಜನ |
ಪುರಜನಂ ಬೆರಗಾಗೆ ಕದ್ದಾತನಂ ಕೊಂಡುಬರ್ಪಂತೆ ನಿಷ್ಠುರದೊಳು ||೨೭||

ಕಟ್ಟುಸಹಿತಾ ಸುಧನ್ವಂ ತಾತನಡಿಗೆ ಪೊಡ |
ಮಟ್ಟೊಡೆ ಕೆರಳ್ದೆಲವೊ ಮೂಢಾತ್ಮ ನೀನೆನ್ನ |
ಕಟ್ಟಳೆಯನರಿದು ಕೃಷ್ಣನ ದೀಕ್ಷೆಯಂ ಮರೆದು ರಣದುತ್ಸವವನೆ ತೊರೆದು ||
ಪಟ್ಟಣದೊಳೇಕೆ ತಳುವಿದೆಯೆಂದು ಕುವರನಂ |
ಧಟ್ಟಿನ ಮರಾಳಧ್ವಜಂ ಕೇಳ್ದೊಡಡಿಗಿಟ್ಟ |
ದಿಟ್ಟಿಯಿಂದಂಜುತೊಯ್ಯನೆ ಲಜ್ಜೆವೆರಸೆ ಬಿನ್ನೈಸಿದನವಂ ಪಿತಂಗೆ ||೨೮||

ಸತಿ ಸಂತತಿಗೆ ಬಯಸಿ ದಿನಗಳೆದುದಿನ್ನಿಲ್ಲ |
ಋತುಸಮಯಮೆಂದೆನಗೆ ಪೇಳ್ದೊಡಲ್ಲಿದ್ದೆನೆನೆ |
ಕೃತಕಮಿದು ನೂಕೀತನಂ ಕೃಷ್ಣದರ್ಶನದ ಕಾಲಮೊದಗಿರಲಿತ್ತಲು ||
ಇತರಧರ್ಮದ ವೇಳೆ ಗಡ ತನಗೆ ಕರೆ ಪುರೋ |
ಹಿತ ಶಂಖ ಲಿಖಿತರಂ ಬೆಸಗೊಳ್ವೆನಿದಕೆ ನಿ |
ಷ್ಕೃತಿಯನೆನಲರಸಾಜ್ಞೆಯೊಳವರ ಪೊರೆಗೆ ಚರರೈತಂದದಂ ಪೇಳ್ದರು ||೨೯||

ಆ ಚರರ ನುಡಿಗೇಳ್ದು ಶಂಖಲಿಖಿತರ್ ಬಂದು |
ವಾಚಿಸಿದರೆಲೆ ಹಂಸಕೇತು ನೀನೇನನಾ |
ಳೋಚಿಸುವೆ ನಿನ್ನ ತನಯನ ಮೇಲಣಾಶೆಯಿಂ ಭಾಷೆದಪ್ಪಿದೆಯಾದೊಡೆ ||
ಈ ಚಂಪಕಾಪುರದೊಳಿಹುದಿಲ್ಲ ನಾವು ಸ ||
ತ್ಯಾಚರಣೆಗಾಗಿ ರುಕ್ಮಾಂಗದ ಹರಿಶ್ಚಂದ್ರ |
ಭೂಚಕ್ರಪಾಲರಾತ್ಮಜರ ಮೊಗನೋಡಿದರೆ ಹೇಳೆಂದು ನುಡಿದರವರು ||೩೦||

ಬಳಿಕರಸನಾ ಸುಮತಿಯಂ ಕರೆದು ಪೇಳ್ದನೀ |
ಖಳನಂ ಕಟಾಹ ತಪ್ತತೈಲದೊಳ್ |
ಮುಳುಗಿಸೆನಲವನೊಡೆಯನಾಜ್ಞೆಯಂ ವಿರದಾತನ ಕೈಗಳಂ ಕಟ್ಟಿಸಿ ||
ತಳಪಳನೆ ಕುದಿವೆಣ್ಣೆಗೊಪ್ಪರಿಗೆ ಕಾಯ್ವಲ್ಲಿ |
ಗೆಳತರಿಸಿ ಮತ್ತೆ ಪೊತ್ತವೊಲುರಿವ ಪೆರ್ಗೊರಡು |
ಗಳನಿಡಿಸಿ ಕಳಕಳಿಸುತಿಹ ಸುಧನ್ವಂಗೆ ಮರುಗುತೆ ಸಚಿವನಿಂತೆಂದನು ||೩೧||

ತಾತ ನಿನಗಿಂತಾಗಬಹುದೆ ಲೋಕೈಕ ವಿ |
ಖ್ಯಾತನಭಿಮಾನಿ ಹರಿಸೇವಕಂ ಸುಂದರಂ |
ಮಾತಾಪಿತೃಪ್ರಿಯಂ ಕೋವಿದಂ ಕೋಮಲ ಸುಖಿ ಸಕಲಸಜ್ಜನಸಖಂ |
ನೀತಿವಿದನಾಚಾರಸಂಪನ್ನ ನುತ್ತಮಂ |
ಡಾತನೆಂಬಿನಿಸು ಗುಣಮುಳ್ಳ ಕುವರಂ ನಿನ್ನ |
ನೀತಪ್ತತೈಲದೊಳಗೆಂತಕಟ ಬೀಳಿಸುವೆನೆಂದೊಡವನಿಂತೆಂದನು ||೩೨||

ಅಂಜಬೇಡೆಲೆ ಸುಮತಿ ನೀನೀಗಳಿದಕೆ ಮನ |
ಮಂ ಜರಿವಿಡುವನಲ್ಲ ತಾನಿನ್ನೆಗಂ ಧರ‍್ಮ |
ಮಂ ಜಡಿದು ನಡೆದುದಿಲ್ಲಾಹವದೊಳುಹಿತರೊಳ್ ಪೊಯ್ದಾಡಿ ಮಡಿವೊಡಲಿದು ||
ಜಂಜಡದೊಳಳಿವುದೆಂಬೊಂದು ಭಯಮಿಹುದಾದೊ |
ಡಂ ಜನಾರ್ದನನಂ ಶರಣ್ಬುಗುವೆನಳುಕದೆ |
ನ್ನಂ ಜನಕನಾಜ್ಞೆದಪ್ಪದೆ ಹಾಯ್ಕಿಸೆನಲವಂ ತೆಗೆದೆತ್ತಿ ಬಿಸುಡಿಸಿದನು ||೩೩||

ಭೋ ಯೆಂದುದಖಿಳ ಪರಿವಾರ ಮಡಿಗಡಿಗೆ ಹಾ |
ಹಾ ಯೆಂದು ಮರುಗಿದುದು ನೀನಿಂತಳಿವರೆ ತಾ |
ತಾ ಯೆಂದು ಪೊರಳ್ದು ದೊಡೆತನಕೆ ಬೇಸತ್ತು ಸತ್ತಾಯೆಂದು ಸೈಗೆಡೆದುದು ||
ವಾಯಕಿಂತಕಟ ಸುಕುಮಾರನಂ ಕೊಂದನೀ |
ರಾಯನರಿವಂ ನೆರೆ ಸುಡಲಿ ಶಂಖಲಿಖಿತರೆಂ |
ಜೀ ಯಮೋಪಮರೇಕೆ ಜನಿಸಿದರೊ ಭೂಸುರರೊಳೆಂದು ಮೊರೆಯಿಡುತಿರ್ದುದು ||೩೪||

ಹಿಂದೆ ಪ್ರಹ್ಲಾದನಂ ಪಾಲಿಸಿದೆ ಗಡ ದ್ರುಪದ |
ನಂದನೆಯ ಮಾನಮಂ ಕಾದೆ ಗಡ ಭಕ್ತರ್ಗೆ |
ಬಂದೆಡರನಾವಗಂ ಪರಿಹರಿಪೆ ಗಡ ದೇವ ನಿನ್ನಂ ಪೆಸರ್ಗೊಂಡೊಡೆ ||
ಇಂದು ಮೊರೆವೊಗುವೊಡಾರಂ ಕಾಣಿನಕಟ ಗೋ |
ವಿಂದ ನೀನಲ್ಲದೆ ವಿಚಾರಿಸುವರಿಲ್ಲ ಸಲ |
ಹೆಂದವಂ ಚಿತ್ತದೊಳ್ ಕೃಷ್ಣನಂ ಧಾನಿಸುತೆ ವಿರ್ಭಯದೊಳಿರುತಿರ್ದನು ||೩೫||

ಜಯಜಯ ಜನಾರ್ಧನ ಮುಕುಂದ ಮುರಮರ್ದನ ವಿ |
ಜಯಮಿತ್ರ ಪೀತಾಂಬರ ಪಕ್ಷಿವಾಹನ ಕಮಲ |
ನಯನ ಪೀತಾಂಬರ ಘನಸ್ಯಾಮ ಹರಿ ಕೃಷ್ಣ ವೈಕುಂಠ ನಾರಾಯಣ ||
ಕ್ಷಯರಹಿತ ರಾಮ ಲಕ್ಷ್ಮೀರಮಣ ನತಸುರಾ |
ಲಯಧೇನು ಭಕ್ತವತ್ಸಲ ಕೃಪಾಕರ ಮಹಾ |
ಭಯನಿವಾರಣ ನೃಸಿಂಃ ತ್ರಹಿಯೆನುತಿರ್ದನಾ ಸುಧನ್ವ ಮರೆಯದೆ ||೩೬||

ಅರಸ ಕೇಳಾಶ್ಚರ್ಯಮಂ ನೋಡಲೆವೆ ಸೀವೋ |
ಲುರಿಗೊಂಡು ಕಡುಗಾಯ್ದು ತಳಪಳದೆ ಕುದಿದುಕ್ಕಿ |
ಮೊರೆವುರುಕಟಾಹತೈಲಂ ಮೈಗೆ ಸೊಗೆಯಿಸುವ ಬಾವನ್ನದಣ್ನಾಗಿರೆ ||
ಕೊರಗದಾತನ ರೋಮ ವಡಗದಂಗದ ಸೊಂಪು |
ಕೊರಳ ತುಲಸಿಯ ದಂಡೆ ಬಾಡದು ಮುಡಿದ ಪೂಗ |
ಳರೆಗಂದವರಳ್ದುದು ಸುಧನ್ವನ ಮೂಕಾಂಬುಜಮಿನೋದಯದ ಕಮಲದಂತೆ ||೩೭||

ಕಂಡು ಬೆರಗಾದುದೆಲ್ಲಾ ಜನಂ ಸ್ತುತಿಸಿದರ್ |
ಪುಂಡರೀಕಾಕ್ಷನ ಬಳಿಕ ಲಿಖಿತಂ ಖಾತಿ |
ಗೊಂಡಿವಂ ಬಲ್ಲನಗ್ನಿಸ್ತಂಭಮಂ ನಾರಿಕೇಳಂಗಳಂ ತರಿಸೆನೆ ||
ಕೊಂಡು ಬಂದೆಳನೀರ್ಗಳಂ ಸುರಿಯಲುರಿ ನಭೋ |
ಮಂಡಲವನಪ್ಪಳಿಸೆ ಹೊಡೆದವು ಪುರೋಹಿತರ |
ಗಂಡಸ್ಥಳಂಗಳಂ ಸಿಡಿವೋಳ್ಗಳಾಗಳುಂ ನಗುತಿರ್ದನಾಕುವರನು ||೩೮||

ನಿಶ್ಚಲಹೃದಯನಾಗಿ ವಿಷ್ಣುನಾಮಂಗಳ ಪು |
ನಶ್ಚರಣೆಯಿಂದವಂ ಸುಖದೊಳಿರುತಿರೆ ಕಂಡು |
ಪಶ್ಚಾದ್ವಿವೇಕದಿಂದುರೆ ನೊಂದು ಹರಿಕಿಂಕರದ್ರೋಹಮಂ ಮಾಡಿದ ||
ದುಶ್ಚರಿತಕಾವುದುಂ ನಿಷ್ಕೃತಿಗಳಿಲ್ಲೆಂಬ |
ನಿಶ್ಚಯದೊಳಾಗ ಮರಣಾಂತವೇ ತನಗೆ ಪ್ರಾ |
ಯಶ್ಚಿತ್ತಮೆಂದಾಕಟಾಹದೊಳ್ ಕುದಿವೆಣ್ಣೆಯೊಳ್ ಬಿದ್ದನಾ ಲಿಖಿತನು ||೩೯||

ಆ ತಪ್ತತೈಲದ ಕಟಾಹದೆಡೆ ಲಿಖಿತಂಗೆ |
ಶೀತಳಸ್ಥಳಮಾದುದಾ ಸುಧನ್ವನ ಸಂಗ |
ಮೇತರತಿಶಯಮೊ ಹರಿಭಕ್ತರಂ ಸಾರ್ದಂಗೆ ತಾಪಮಿರ್ದೆಪುದೆ ಬಳಿಕ ||
ಆತಗಳ್ ಕುದಿವೆಣ್ಣೆಯೊಳ್ ಸುಖದೊಳಿರೆ ಹಂಸ |
ಕೇತು ವಿಸ್ಮಿತನಾಗಿ ಮಂತ್ರಿಗಳೊಡನೆ ಬಂದು |
ಪ್ರೀತಿಯಿಂದವರೀರ್ವರಂ ತೆಗೆದು ತಕ್ಕೈಸಿದಂ ಸುತಪುರೋಹಿರನು ||೪೦||

ಪನ್ನೀರಮಿಂದು ದಿವ್ಯಾಂಬರವನುಟ್ಟು ಬಾ |
ವನ್ನದಿಗುರಂ ಗೆಲ್ದು ಕಮ್ಮಲರ್ಗಳಂ ಸೂಡಿ |
ಸನ್ನುತ ಸುಯಕ್ಷಕರ್ದಮವನನುಕರಿಸಿ ಕತ್ತುರಿತಿಲಕವಿಟ್ಟು ಪಣಿಗೆ ||
ರನ್ನದೊಡವುಗಳನಳವಡಿಸಿ ವೀಳೆಯಗೊಂಡು |
ತನ್ನನುಳುಹಿದ ದೇವಪುರದ ಲಕ್ಷ್ಮೀಪತಿಯ |
ನಿನ್ನು ಕಂಡಪೆನೆಂಬ ಹರ್ಷದಿಂ ಕಳೆಯೇರಿ ಮೆರೆದಂ ಸುಧನ್ವನಂದು ||೪೧||