ದೋಸೆ ಖಾನ : ಇದು ವೀಳ್ಯದೆಲೆ ತೋಟದಲ್ಲಿ ಆಚರಿಸುವ ವಿಶೇಷ ಆಚರಣೆ. ಹಿಂದಿನ ದಿನವೇ ದೋಸೆ ಹಿಟ್ಟನ್ನು ರುಬ್ಬಿಕೊಳ್ಳಬೇಕು. ಬೆಳಿಗ್ಗೆ ತಿಂಡಿಯನ್ನು ವೀಳ್ಯದೆಲೆ ತೋಟದಲ್ಲಿ ಮಾಡಬೇಕು. ಅದಕ್ಕಾಗಿ ತೋಟದ ಮಧ್ಯೆ ಆಯ್ದ ಜಾಗದಲ್ಲಿ ಒಲೆ ಹೂಡುವುದು, ಹೆಂಚಿಟ್ಟು ದೋಸೆ ಹಾಕುತ್ತಾ (ಹೊಯ್ಯತ್ತಾ) ಬರುವುದು. ದೋಸೆಯ ಪರಿಮಳ ತೋಟಪೂರ್ತಿ ತುಂಬುತ್ತದೆ. ಜೊತೆಗೆ ಹೊಗೆ ಕೂಡ. ಈ ಆಚರಣೆ ವರ್ಷಕ್ಕೊಮ್ಮೆ ಮಾತ್ರ. ಚಳಿಗಾಲದ ಪ್ರಾರಂಭ ಅಥವಾ ಮಧ್ಯದಲ್ಲಿ ನಡೆಯುತ್ತದೆ. ಅಂದು ಮನೆಯವರೆಲ್ಲರೂ ನೆಂಟರು, ಬಂಧು-ಬಳಗ ಎಲ್ಲಾ ಸೇರುತ್ತಾರೆ. ದೋಸೆ ಸಡಗರ ಒಮ್ಮೊಮ್ಮೆ ಮಧ್ಯಾಹ್ನವರೆಗೂ ಆಗುತ್ತದೆ. (ತುಮಕೂರು ಪ್ರದೇಶ)

ಕೆಲವು ಜಾತಿಯ ಸೊಳ್ಳೆಗಳು, ನೊಣಗಳು, ಚಳಿಯಿಂದಾಗುವ ಸಮಸ್ಯೆಗಳ ನಿವಾರಣೆಗೆ ಈ ಪದ್ದತಿ.

ಅನ್ನಶಾಂತಿ : ತೆಂಗು, ಅಡಿಕೆ ತೋಟದಲ್ಲಿ ಪ್ರತಿ ವರ್ಷ ನಡೆಸುವ ಹಬ್ಬವಿದು. ಒಂದು ರೀತಿಯಲ್ಲಿ ಹಿರಿಯರಿಗೆ (ಸತ್ತುಹೋದವರಿಗೆ) ಅನ್ನ ನೀಡುವ ದಿನವೂ ಹೌದು. ಇದನ್ನು ತೋಟದ ದಕ್ಷಿಣ ದಿಕ್ಕಿನಲ್ಲಿ ನಡೆಸುತ್ತಾರೆ. ಕೆಲವರು ಪಶ್ಚಿಮ ದಿಕ್ಕನ್ನು ಆರಿಸಿಕೊಳ್ಳುತ್ತಾರೆ.

ಪೂರ್ವದ ಕಡೆ ಅಡುಗೆಮನೆ. ತೋಟದಲ್ಲಿಯೇ ಅನ್ನ ಸಾಂಬಾರು ಒಂದು ಸಿಹಿ (ಪಾಯಸ) ಒಂದು ಖಾರ (ಪುಳಿಯೋಗರೆ, ಚಿತ್ರಾನ್ನ) ಕರಿದ ವಡೆ, ಅಂಬೋಡೆ ಇವುಗಳು ಆಗಲೇಬೇಕು. ಶ್ರೀಮಂತರು ಇನ್ನೂ ಹೆಚ್ಚು ವಿಧಗಳನ್ನು ಮಾಡಿಸುತ್ತಾರೆ. ಬಾಳೆಲೆ, ಮುತ್ತಗದ ಎಲೆಗಳಲ್ಲಿ ಊಟ. ಊಟಕ್ಕೂ ಮೊದಲು ಎಲ್ಲಾ ಮರಗಳ ಬುಡಕ್ಕೂ ಅನ್ನ ಹಾಕುವ ಪದ್ದತಿ ಇತ್ತಂತೆ. ಆಮೇಲೆ ಅದು ನಿಂತಿದೆ. ಊಟಕ್ಕೆ ನೂರು ಜನ ಮಿನಿಮಮ್ ಆಗುತ್ತಾರೆ. ಸಾವಿರ ಜನರು ಆಗಿದ್ದೂ ಇದೆ. ಊಟವಾದ ಮೇಲೆ ಯಾವ ಕಾರ್ಯಕ್ರಮವೂ ಇಲ್ಲ. ಅಂದು ಹಿಂತಿರುಗುವಾಗ ತೋಟದಿಂದ ಏನನ್ನೂ ಒಯ್ಯಬಾರದು. ಅಡುಗೆ ಮಾಡಿದ ಪಾತ್ರೆಗಳನ್ನು ಸಹ ಮರುದಿನ ಒಯ್ಯುತ್ತಾರೆ.

ಅನ್ನ ಇನ್ನಿತರ ಆಹಾರಕ್ಕಾಗಿ ಬರುವ ಹಕ್ಕಿಪಕ್ಷಿಗಳು, ಪ್ರಾಣಿಗಳು ಹಾನಿಮಾಡುವ ಕೀಟಗಳನ್ನು ಇತರ ಸಮಸ್ಯೆಯನ್ನು ನಿವಾರಿಸುತ್ತವೆ. ಗಿಡದ ಬುಡದಲ್ಲಿ ಹಾಕುವ ಅನ್ನವು ಬೇರಿನ ಚಟುವಟಿಕೆ ಹೆಚ್ಚಿಸುತ್ತದೆ ಎನ್ನುವುದು ಇಲ್ಲಿಯ ನಂಬಿಕೆ. (ತುಮಕೂರು ಪ್ರದೇಶ)

ಹಚ್ಚಂಬ್ಲಿ, ಎಡೆ ಇಡುವುದು : ಇದು ಭೂಮಿಹುಣ್ಣಿಮೆಯ ದಿನ ನಡೆಸುವ ಆಚರಣೆ. ತೋಟದ ಮರಗಳಿಗೆಲ್ಲಾ ಪೂಜೆ ಮಾಡುತ್ತಾರೆ. ಅದರೊಂದಿಗೆ ಗೂಳಿ ಎಡೆ, ಭೂಮಿ ಎಡೆ, ಮನುಷ್ಯರ ಎಡೆ, ದೇವರ ಎಡೆ ಎಂದು ಐದು ಎಡೆ ಇಡುತ್ತಾರೆ. ಎಡೆಯಲ್ಲಿ ಅಂದು ಮಾಡಿದ ಎಲ್ಲ ರೀತಿಯ ಅಡುಗೆಗಳೂ ಇರುತ್ತವೆ. ೧೦೮ ರೀತಿಯ ಸೊಪ್ಪಿನ ಪದಾರ್ಥಗಳು, ತರಕಾರಿ ಪದಾರ್ಥಗಳು ಇರುತ್ತವೆ. ಗೂಳಿ (ಕಾಗೆ) ಎಡೆಯನ್ನು ಕಾಗೆಗೆ, ಇಲಿ ಎಡೆಯನ್ನು ಇಲಿ ಬಿಲದ ಬಳಿ ಇಡುತ್ತಾರೆ. ಭೂಮಿ ಎಡೆಯನ್ನು ಬಸಿಗಾಲುವೆಯ ಅಡಿಯಲ್ಲಿ ಹುಗಿಯುತ್ತಾರೆ. ಮನುಷ್ಯರದು ಮನುಷ್ಯರಿಗೆ, ದೇವರದು ಮನೆಗೆ ತಂದು ನೆಂಟರಿಗೆ ಹಂಚುತ್ತಾರೆ. ಭೂಮಿಯೊಳಗೆ ಇಟ್ಟ ಎಡೆಯನ್ನು ದೀಪಾವಳಿಯ ದಿನ ತೆಗೆದು ಭೂಮಿಯ ಪ್ರಸಾದ ಎಂದು ತಿನ್ನುತ್ತಾರೆ. ಇದು ಚೆನ್ನಾಗಿದ್ದರೆ ಫಸಲೂ ಚೆನ್ನ, ಹಾಳಾಗಿದ್ದರೆ ಫಸಲೂ ಹಾಳೆನ್ನುವ ನಿರ್ಧಾರ ಕೃಷಿಕರದು.(ಶಿವಮೊಗ್ಗ ಪ್ರದೇಶ)

೧೦೮ ರೀತಿಯ ಸೊಪ್ಪನ್ನು ತಂದು ಅನ್ನದೊಂದಿಗೆ ಬೇಯಿಸುತ್ತಾರೆ. ಪೂಜೆಯಾದ ಮೇಲೆ ಹುಚ್ಚಂಬ್ಲಿ, ಹಾಲಂಬ್ಲಿ, ಬೆಟ್ಟದಾಗಿನ ನೆಲ್ಲಿಕಾಯಿ, ಹಿತ್ಲಾಗಿನ ಹೀರೆಕಾಯಿ, ತ್ವಾಟದಾಗಿನ ಅಡಿಕೆಕಾಯಿ ಉಳಿಲ್ಲೋ– ಹೋಯ್ ಎಂದು ಕೂಗುತ್ತಾ ತೋಟದ ತುಂಬಾ ಬೀರುತ್ತಾರೆ.

ಇದೆಲ್ಲಾ ಕ್ರಿಮಿಗಳು, (ಎರೆಹುಳು, ಸೂಕ್ಷ್ಮಜೀವಿಗಳು) ಹೆಚ್ಚಲು ಬಳಸುವ ಮಾಧ್ಯಮ.

ಹೊಸತು ಪೂಜೆ: ತೆಂಗು, ಅಡಿಕೆಗಳು ಮೊದಲ ಫಲ, ಹೊಸಫಲ ಬಿಟ್ಟಾಗ ಅದಕ್ಕೆ ಪೂಜೆ ಸಲ್ಲಿಸುತ್ತಾರೆ. ಮರಕ್ಕೆ ಸೀರೆ ಉಡಿಸಿ ಮುಖ ಬರೆದು, ಅಲಂಕಾರ ಮಾಡಿ, ಬೆಳಿಗ್ಗೆ, ಮಧ್ಯಾಹ್ನ ದೊಳಗೆ ಪೂಜೆ ಮಾಡುತ್ತಾರೆ. ಹೆಂಗಳೆಯರಿಗೆ ಬಾಗೀನ, ಪಂಚಾಮೃತ ನೈವೇದ್ಯ, ಸಪಾದಪಕ್ಷ ನೈವೇದ್ಯ ಅರ್ಪಿಸಿ ಎಲ್ಲರಿಗೂ ಹಂಚುತ್ತಾರೆ. ಪಂಚಾಮೃತವನ್ನು ಮರದ ಬುಡಕ್ಕೆ ಹಾಕುತ್ತಾರೆ. ಮುಂದೆ ಹೊಸಫಲ ಬಲಿತ ಮೇಲೆ ಮನೆದೇವರಿಗೆ ಅರ್ಪಣೆ.ಪ್ರತಿ ವರ್ಷದ ಫಸಲನ್ನು ಸಹ ಇದೇ ರೀತಿ ಪೂಜಿಸಿ ಮಾರುಕಟ್ಟೆಗೆ ಮಾರುಲು ಕಳುಹಿಸುತ್ತಾರೆ.

ಧೂಪದ ಆರತಿ: ಧೂಪದ ಮರವನ್ನು ಗೀರಿದರೆ ಮೇಣ ಹೊರಬರುತ್ತದೆ. ಅದು ತುಂಬಾ ಸುವಾಸನೆ. ಮೇಣವನ್ನು ಸಂಗ್ರಹಿಸಿ ಇಟ್ಟುಕೊಳ್ಳಬೇಕು. ಕೊಯ್ಲು ಮುಗಿದ ಮೇಲೆ ಮಾಗಿ ಚಳಿ ಬೀಳುವಾಗ ಈ ದೂಪವನ್ನು ನಿಗಿ ನಿಗಿ ಉರಿಯುವ ಕೆಂಡದ ಮೇಲೆ ಹಾಕುತ್ತಾ ತೋಟವೆಲ್ಲಾ ತಿರುಗುತ್ತಾರೆ. ಧೂಪ ಬಿದ್ದಾಗ ದಟ್ಟವಾದ, ಸುಗಂಧ ಭರಿತ ಹೊಗೆ ಸುತ್ತಲೂ ಅವರಿಸುತ್ತದೆ. ಇದೇ ಧೂಪಾರತಿ ಪೂಜೆ. ಇದು ಮುಖ್ಯವಾಗಿ ಸಿಂಗರಕ್ಕೆ ಬರುವ ಸೊಳ್ಳೆಗಳಿಗೆ ಮಾರಕಾಯುಧ.(ಮಧ್ಯ ಕರ್ನಾಟಕ)

ಹೊಸ್ತು, ತೋರಣ : ಉಗಾದಿಯ ಸಮಯಕ್ಕೆ ಚಾಲಿ ಅಡಿಕೆಯೆಲ್ಲಾ ಒಳ ಸೇರುತ್ತದೆ. ತೆಂಗು ಸಹ ಒಣಗಲು ಇಡುತ್ತಾರೆ. ಎಲ್ಲಾ ರೀತಿಯ ಫಸಲುಗಳ ಕೊಯ್ಲು ಮುಗಿದಿರುತ್ತದೆ. ಅದೆನ್ನೆಲ್ಲಾ ಕಣಜದಲ್ಲಿ, ಪಣತದಲ್ಲಿ, ಚೀಲದಲ್ಲಿ, ಕೋಣೆಯೊಳಗೆ ಸಂಗ್ರಹಿಸುವುದು, ಕೆಡದಂತೆ ಉಪಚರಿಸಿ ಇಡುವುದೂ ವಾರ್ಷಿಕ ಕೆಲಸ. ಹೀಗೆ ಸೇರುವೆಯಾದ ಫಸಲನ್ನು , ಕಣದಲ್ಲಿ, ಜಗುಲಿಯಲ್ಲಿ ಅಥವಾ ಅಂಗಳದಲ್ಲಿ ಪೂಜಿಸುತ್ತಾರೆ. ಪೂಜೆಗೆ ಮಾವಿನ ಚಂಡೆ, ಗುಡ್ಡೇಗೇರಿನ ಚಂಡೆಯನ್ನು ತರಲೇ ಬೇಕು. ಆಮೇಲೆ ಫಸಲು ಶೇಖರಿಸುವ ತಾಣದಲ್ಲಿ ಇವೆರಡನ್ನೂ ಸುತ್ತಲೂ ತೋರಣದಂತೆ ಕಟ್ಟುತ್ತಾರೆ.ಮಾವಿನ ಸೊಪ್ಪು ಗಾಳಿಯನ್ನು ಶುದ್ದ ಮಾಡುತ್ತದೆ. ಗುಡ್ಡೆಗೇರು ಕೀಟಗಳ ನಿವಾರಣೆ ಮಾಡುತ್ತದೆ ಎನ್ನುವ ನಂಬಿಕೆ. (ಶಿವಮೊಗ್ಗ ಪ್ರದೇಶ)

ಬಲು ಪೇಚಾಟ, ಪ್ರಾಣಿಗಳ ಕಾಟ ಕಾಟ

ಎಲ್ಲಾ ರೀತಿಯ ಬೆಳೆಗಳಿಗೂ, ಹಣ್ಣುಗಳಿಗೂ ನಮ್ಮ ಪೂರ್ವಜರು ಪಾಲು ಕೇಳಲು ಥಟ್ಟನೆ ಬರುತ್ತಾರೆ. ಕೇಳುವುದಕ್ಕೆಲ್ಲಿ ಸಮಯ? ಹೊತ್ತುಕೊಂಡು ಹೋಗೇಬಿಡುತ್ತಾರೆ. ಇವರ ನಿಯಂತ್ರಣ ದೊಡ್ಡ ಸಮಸ್ಯೆ.

ಅಂಟು ಕಡ್ಡಿ ; ಚೂಪಾದ ಬಿದಿರುಕಡ್ಡಿಗಳನ್ನು ತಯಾರಿಸಿ, ಅದರ ಒಂದು ದಿಕ್ಕಿನಲ್ಲಿ ಧೂಪದ ಅಂಟು, ಅಥವಾ ಹಲಸಿನ ಅಂಟನ್ನು ಹಚ್ಚಿರಿ. ಚೂಪಾದ ತುದಿಯನ್ನು ಬಾಳೆಗೊನೆಯ ಮಧ್ಯದ ದಿಂಡಿಗೆ ಚುಚ್ಚಿರಿ. ಇಡೀ ಗೊನೆಗೂ ಹೀಗೆ ಚುಚ್ಚಬೇಕು. ಮಂಗ ಬಂದು ಗೊನೆಯ ಮೇಲೆ ಕೂರುತ್ತದೆ. ಕಾಯಿಗೆ ಕೈ ಹಾಕಿದಾಗ ಕಡ್ಡಿ ಅಡ್ಡ ಬಂದು ಅಂಟಿಕೊಳ್ಳುತ್ತದೆ. ಮತ್ತೊಂದು ಕೈಯಿಂದ ಬಿಡಿಸಲು ಹೋಗಿ ಎರಡೂ ಕೈಗೂ ಅಂಟು ಅಂಟು. ವಿಪರೀತ ಕಿರಿಕಿರಿಯಾಗಿ ಮಂಗ ತಲೆಕೆಡಿಸಿಕೊಳ್ಳತೊಡಗುತ್ತದೆ.

ಮೀನು / ಮೀನು ಬಲೆ

ಅದೇಕೋ ಮಂಗಗಳಿಗೆ ಮೀನೆಂದರೆ ಆಗದು. ಗೊನೆಯ ಬಳಿ, ಕೊಂಬೆಗಳಲ್ಲಿ ಅಲ್ಲಲ್ಲಿ ಮೀನು ಕಟ್ಟಿದರೆ ಮಂಗಗಳು ಕಾಲಿಡದು. ಆದರೆ ಮೀನು ತಿನ್ನಲು ಏನೆಲ್ಲಾ ಹಕ್ಕಿ ಪ್ರಾಣಿಗಳು ಬಂದು ಮತ್ತೊಂದು ಸಮಸ್ಯೆಯಾದರೆ? ಬದಲು ಮೀನು ಹಿಡಿಯಲು ಬಳಸಿದ ಬಲೆ ಉತ್ತಮ. ಇದರಲ್ಲಿ ಮೀನಿನ ವಾಸನೆ ಸುಟ್ಟರೂ ಹೋಗದು. ಹತ್ತಿರ ಹೋದರೆ ವಾಸನೆ ಮೂಗಿಗೆ ಅಂಟಿಕೊಳ್ಳುತ್ತದೆ. ಮಂಗಕ್ಕೂ ಕಿರಿಕಿರಿ. ಹಾಗೇ ಬಲೆ ದಾಟಿ ಹೋಗುವುದೂ ಕಷ್ಟ. ಎತ್ತರವಿದ್ದರೆ ಹಾರಲಾಗದು. ಗೊನೆಗೆ ಕಟ್ಟಿದರೆ ಕೈಹಾಕಿ ಹಣ್ಣನ್ನು ತೆಗೆಯಲಾಗದು. ಗೊಂಚಲಿಗೂ ಕಟ್ಟಬಹುದು. ಸಿಗಡಿ ಮೀನನ್ನೂ ಇದಕ್ಕೆ ಬಳಸಬಹುದು. ಮಂಗಗಳನ್ನು ಬೋನಿನಲ್ಲಿ ಹಿಡಿದು ಕಾಡಿಗೆ ಬಿಡುವ ಉಪಾಯ. ನಾಯಕಮಂಗವನ್ನು ಕೊಂದು ನೇತು ಹಾಕುವ ಉಪಾಯ, ಪಟಾಕಿ ಹೊಡೆಯುವುದು, ಸಿಡ್ಡಿಮದ್ದು ಸಿಡಿಸುವುದು, ಕೋವಿಯಲ್ಲಿ ಕಲ್ಲು ತುಂಬಿ ಸಿಡಿಸುವಿಕೆ, ಚಿರತೆ, ಹುಲಿ ಚರ್ಮವನ್ನು ಹೊದ್ದುಕೊಂಡು ಮಂಗ ಬರುವ ಜಾಗದಲ್ಲಿ ಕೂರುವುದು. ಕಿರುಬನ ಧರ್ಮವೂ ಆದೀತು. ಹುಲಿಯ ಗೊಂಬೆ ಮಾಡಿ ಇಡುವುದು. ಹಣ್ಣಿನ ಪಕ್ಕ ಬೆಣೆ ಸಿಕ್ಕಿಸಿದ ರೀಪನ್ನಿಟ್ಟು ಬೆಣೆ ತೆಗೆದಕೂಡಲೇ ಕೈ ಸಿಕ್ಕಿಹಾಕಿಕೊಳ್ಳುವಂತೆ ಮಾಡುವುದು, ಮರಕ್ಕೆ ಬಲೆ ಸುತ್ತವುದು, ಮರದ ಮಧ್ಯೆ ಸೀರೆ, ಪ್ಯಾಂಟು ತೊಡಿಸಿದ ಬೆರ್ಚಪ್ಪಗಳನ್ನು ಕೂರಿಸುವುದು. ಒಂದು ವಿಫಲವಾದಂತೆ ಮತ್ತೊಂದು ನಡೆಯುತ್ತವೆ.

ಗ್ಲಿರಿಸೀಡಿಯಾ ಎಲೆಗಳನ್ನು ಸುರಿದು ಅನ್ನಕ್ಕೆ ಕಲಿಸಿ ಜೊತೆಗೆ ಬೋಂಡ ಅಥವಾ ಕರಿದ ಪದಾರ್ಥಗಳನ್ನು ಸೇರಿಸಿಟ್ಟರೆ ತಿಂದ ಇಲಿಗಳು ಸಾಯುತ್ತವೆ.

ಶೇಂಗಾ, ಪುಟಾಣಿಹಿಟ್ಟನ್ನು ಒಂದೆರೆಡು ದಿನ ಹಾಗೇ ಚೆಲ್ಲುವುದು, ನಾಲ್ಕನೇ ದಿನ ಅದರೊಂದಿಗೆ ವಿಷದ ಪುಡಿ ಬೆರಸಿಟ್ಟರೆ ಉರ್ತೆ (ಅಳಿಲು)ಗಳು ಗೊಟಕ್. ಬೇಲಿಗೆ ಉರುಲು ಜೋಡಿಸಿ ಇಲಿ ಬರುವ ದಾರಿಯಲ್ಲಿ ಅಳವಡಿಕೆ. ಎಳೆನೀರಿಗಾಗಿ ಮರಹತ್ತುವ ಹೆಗ್ಗಣಗಳಿಗೆ ಮರಕ್ಕೆ ಮುಳ್ಳು ಕಟ್ಟುವುದು, ತಗಡು ಕಟ್ಟುವುದು ಮಾಡುತ್ತಿದ್ದರು.

ತೆಳುವಾದ ಚಪ್ಪಡಿಕಲ್ಲನ್ನು ಕಡ್ಡಿಯ ಆಧಾರದಲ್ಲಿ ಒಂದು ಬದಿ ಎತ್ತಿ ನಿಲ್ಲಿಸಬೇಕು. ಮತ್ತೊಂದು ಬದಿ ನೆಲಕ್ಕೆ. ಆ ಕಡ್ಡಿಗೆ ಮತ್ತೊಂದು (ದಾರ) ಕಡ್ಡಿ ಆಧಾರ. ಅದರ ಬುಡಕ್ಕೆ ಆಹಾರ, ಅಕ್ಕಿ ಕಾಳು, ಇತ್ಯಾದಿ. ಉರುತೆ, ಇಲಿಗಳು ಬಂದು ಕಾಳು ತಿನ್ನುವ ರಭಸಕ್ಕೆ ದಾರ(ಕಡ್ಡಿ) ಎಳೆದು ಅದಕ್ಕಂಟಿದ ಆಧಾರಕಡ್ಡಿಯೂ ಎಳೆದು ಕ್ಷಣಾರ್ಧದಲ್ಲಿ ಚಪ್ಪಡಿಯು ತಲೆಯ ಮೇಲೆ, ಇಲಿ ನರಕಕ್ಕೆ. ಇಲಿ ಬಿಲಗಳನ್ನು ಅಗೆಯುವುದು. ಬಿಲಗಳ ಬಾಯಿಗೆ ಬೆಂಕಿ ಹಾಕುವುದು. ಇಲಿ ಹಿಡಿದು ಗೆಜ್ಜೆ ಕಟ್ಟಿಬಿಡುವುದು, ಇಲಿಗೆ ಮಲದ್ವಾರದಲ್ಲಿ ಹತ್ತಿ ತುರುಕಿ ಮಲವಿಸರ್ಜನೆ ಆಗದಂತೆ ಮಾಡಿ ಹುಚ್ಚು ಹಿಡಿಸುವುದು ಹಾಗೂ ಗೂಬೆ ಸಾಕುವುದು, ಕೆರೆ ಹಾವುಗಳಿದ್ದರೆ ಇರಲು ಬಿಡುವುದು, ಇವೆಲ್ಲಾ ಉಪಾಯಗಳು ಫಲಪ್ರದ. ಆದರೆ ಇಲಿಗಳ ಸಂಖ್ಯಾವೇಗ ಜಾಸ್ತಿ ಇರುವ ಕಾರಣ ಏನೇ ಮಾಡಿದರೂ ಮತ್ತೆ ಮತ್ತೆ ಹೆಚ್ಚುತ್ತಲೇ ಇರುತ್ತದೆ.

ಹಕ್ಕಿಗಳಿಗೆ, ಬಾವಲಿಗಳಿಗೆ ನಿಯಂತ್ರಣ ಹೇರುವುದಕ್ಕಿಂತಲೂ ಒಂದಿಷ್ಟ್ಟು ಪಾಲು ಬಿಟ್ಟುಕೊಡುವುದೇ ಒಳ್ಳೆಯದು.

ಕಾಟ ಜಾಸ್ತಿ ಇದ್ದರೆ ಸಣ್ಣ ಕಣ್ಣಿನ ಬಲೆ ತಂದು ಬೆಳೆಯ ಸುತ್ತಲೂ ಹಾಕಿಸಬಹುದು. ಬೆರ್ಚಪ್ಪಗಳನ್ನು ಮಾಡಿ ಕೂರಿಸಬಹುದು. ಮಾವಿನಮರದಲ್ಲಿ ಕೊಂಬೆಗಳಿಗೆ, ಗೆಲ್ಲುಗಳಿಗೆ ಅಲ್ಲಲ್ಲಿ ದಪ್ಪಗೆ ಅಂಟನ್ನು ಬಳಿದರೆ ಮಂಗಗಳಿಗೂ ಕಿರಿಕಿರಿ, ಹಕ್ಕಿಗಳು ಅಂಟಿಕೊಳ್ಳುತ್ತದೆ. ಆಮೇಲೆ ಎರಡೂ ಅತ್ತ ಸುಳಿಯುವುದಿಲ್ಲ. ಕೊಂಬೆಗಳ ಮೇಲೂ ಉರುಲು ಕಟ್ಟುತ್ತಾರೆ. ಕೋಲು ಜಾಗಟೆ ಕಟ್ಟುವುದು, ಡಬ್ಬಿ ಕಟ್ಟಿ ಅದಕ್ಕೊಂದು ಬಡಿಗೆ ಕಟ್ಟುವುದು. ಜೋರಾಗಿ ಗಾಳಿ ಬಂದಾಗ ಕೋಲು ಜಾಗಟೆಗೆ, ಬಡಿಗೆ ಡಬ್ಬಿಗೆ ಹೊಡೆದುಕೊಳ್ಳವಂತಿರಬೇಕು. ಇದರ ಶಬ್ದಕ್ಕೆ ಮಂಗಗಳು, ಹಕ್ಕಿಗಳು ಎರಡೂ ಬರುವುದಿಲ್ಲ.

ಕಾವಲು ಕಾಯಿಸುವುದು, ಚಾಟಿಬಿಲ್ಲು, ಕವಣೆಕಲ್ಲು, ಬಿಲ್ಲುಬಾಣ, ಚೂಪಾದ ಪೆಟ್ಲು ಇವೆಲ್ಲಾ ಮಂಗ, ಹಕ್ಕಿಗಳನ್ನು ಓಡಿಸಲು ಸಹಕಾರಿ. ನಾಯಿಯ ಕಾವಲು ಸಹ (ಅದು ಕೂಗಿದರೆ) ಪರಿಣಾಮಕಾರಿಯಾಗಿರುತ್ತದೆ.

ಹಂದಿಗಳಿಗೆ ಬೇಲಿಸಾಲಿನಲ್ಲಿ ಹಗ್ಗದ ಉರುಲು ಕಟ್ಟುತ್ತಾರೆ. ಬರುವ ದಾರಿ ಗುರುತಿಸಿ ಕೈಬಾಂಬ್ ಇಟ್ಟು ಸಿಡಿಸುತ್ತಾರೆ. ಅದನ್ನು ಬಾಂಬ್ ಕಟ್ಟಿ ನುಂಗಿದ ಮೇಲೆ ಸಿಡಿಯುವುದೂ ಉಂಟು.