(ಅದೇ ಮನೆ. ಹಗಲು ಹನ್ನೆಎರಡು ಗಂಟೆಯ ಸಮಯ. ಎಲ್ಲಾ ನೀಟಾಗಿವೆ. ಪ್ರಕಾಶ್ ಮತ್ತು ಸರೋಜ ಕೆಲಸಕ್ಕೆ ಹೋಗಿರುವುದರಿಂದ ಬಾಗಿಲಿಗೆ ಕೀಲಿ ಇದೆ. ತುಸು ಸಮಯದ ಬಳಿಕ ಬೆಡ್ ರೂಮಿನ ಕಿಟಕಿ ಬಾಗಿಲನ್ನು ಹೊರಗಿನಿಂದ ಮೊಳೆ ತೂರಿಸಿ ತೆಗೆಯಲಾಗುತ್ತದೆ. ಅದು ತೆರೆದೊಡನೆ ಮೆಲ್ಲಗೆ ರುದ್ರಪ್ಪ ಬರುತ್ತಾನೆ. ಉದ್ದ ತೋಳಿನ ಖಾದಿ ಜುಬ್ಬಾ ಮತ್ತು ಧೋತರ ಉಟ್ಟ ಗಂಭೀರ ಕುಳ, ತುಂಬಾ ಕಂಡುಂಡವನು. ವಿರೋಧ ಪಕ್ಷದ ನಾಯಕ. ಯಾವುದರಿಂದಲೂ ಅವನಿಗೆ ಆಘಾತವಾಗುವುದಿಲ್ಲ. ಮನೆಯಲ್ಲಿ ಅನೇಕ ವರ್ಷ ವಾಸಿಸಿದವನಂತೆ ನಾರ್ಮಲ್ಲಾಗಿದ್ದಾನೆ, ಕಿಟಕಿ ಬಾಗಿಲು ಮುಚ್ಚಿ ಕಿಚನ್ನಿಗೆ ಹೋಗಿ ಗ್ಲಾಸು ತರುತ್ತಾನೆ. ಸೋಫಾದ ಮೇಲೆ ಕುಳಿತು ಜೇಬಿನಿಂದ ವಿಸ್ಕಿಯ ಕ್ವಾರ್ಟರ್ ಬಾಟ್ಲಿ ತೆಗೆದುಕೊಂಡು ಕುಡಿಯತೊಡಗುವನು. ಸಿಗರೇಟು ಹತ್ತಿಸಿ ಫೋನ್ ಮಾಡುವನು. ಶೂನ್ಯ ಸ್ಥಳದಲ್ಲಿ ಕೃಷ್ಣಪ್ಪ ಫೋನೆತ್ತಿಕೊಳ್ಳುವನು.)

ರುದ್ರಪ್ಪ : ಹಲೋ ಕೃಷ್ಣಪ್ಪನವರಾ?

ಕೃಷ್ಣಪ್ಪ : ಹೌದು. ತಾವ್ಯಾರು?

ರುದ್ರಪ್ಪ : ನಾನು ರುದ್ರಪ್ಪ. ನಮಸ್ಕಾರ ಸ್ವಾಮಿ.

ಕೃಷ್ಣಪ್ಪ : ನಮಸ್ಕಾರ ಸಾ. ಹೆಲ್ಲಿಂದ ಮಾತಾಡ್ತಿದ್ದೀರಿ?

ರುದ್ರಪ್ಪ : ಯಾರೋ ಸ್ನೇಹಿತರ ಮನೆಯಿಂದ. ಹ್ಯಾಗಿದೆ ಸ್ವಾಮಿ ಚುನಾವಣೆ ಸೀನು?

ಕೃಷ್ಣಪ್ಪ : ಬಂಬಾಟಾಗಿದೆ ಸಾ. ಇನ್ನೂರ ಐವತ್ತರ ಪೈಕಿ ಇನ್ನೂರು ಸೀಟು ನಮ್ಮ ಪಾಟಿಗೆ ಕಂಡಿತ. ಈಗ ಸಿರ್ಕಾಂತಜೀ ಇರಬೇಕಿತ್ತು ಸಾ. ಜನ ರೂಲಿಂಗ್‌ ಪಾರ್ಟಿಗೆ ಉಗೀತಿದಾರೆ. ಸಿರ್ಕಾಂತಜೀನ್ನ ಕೊಂದ ಪಾರ್ಟಿಗೆ ಓಟು ಬರೀಬ್ಯಾಡಿ ಅಂತ ಹೆಂಗಸರು ಹೊಳಹೊಳಗೆ ಪ್ರಚಾರ ಮಾಡ್ತಿದಾರೆ. ಸಿರ್ಕಾಂತಜೀ ಕೊಲೆ ಹಾಯ್ತು. ಹಾಯ್ತು ಆ ಪಾರ್ಟಿ ನನ್ಮಕ್ಕಳು ಸೆಗಣಿ ತಿಂದರು ಸಾ. ನಾವ್‌ ಗೆಲ್ಲೋದು ನೂರಕ್ಕೆ ಸೆಂಟ್‌ ಪರ್ಸೆಂಟ್‌ ಗ್ಯಾರಂಟಿ.

ರುದ್ರಪ್ಪ : ಈವೊತ್ತಿನ ಪೇಪರ್ ನಲ್ಲಿ ನೀವೇನೋ ಹೇಳಿಕೆ ಕೊಟ್ಟಿದ್ದೀರಲ್ಲಾ ಸ್ವಾಮಿ?

ಕೃಷ್ಣಪ್ಪ : ಸರೀಗಿದೆಯಾ ಸಾ?

ರುದ್ರಪ್ಪ : ಅಲ್ಲಾಸ್ವಾಮಿ. ಇದು ಆಲೋ ಪಕ್ಷದ ಕುತಂತ್ರ ಅಂತಾ ನಾನು ಹಿಂದೆ ಹೇಳಿಕೆ ಕೊಟ್ಟಿದ್ದೆ. ಈಗ ನೀವು ಈ ಥರಾ ಹೇಳಿಕೆ ಕೊಟ್ಟರೆ ನಮ್ಮ ನಮ್ಮಲ್ಲೇ ಕಚ್ಚಾಟ ಇದೆ ಅಂತ ಜನ ಅಂದ್ಕೊಳ್ಳೋದಿಲ್ವಾ? ಶ್ರೀಕಾಂತಜೀ ನಮ್ಮ ಪಾರ್ಟಿಯವರು ನಾವೇ ಅವರನ್ನ ಕೊಲೆ ಮಾಡಸ್ತೀವಾ?

ಕೃಷ್ಣಪ್ಪ : ಅಂಗಲ್ಲಾ ಸಾ ನಾ ಏಳೀದ್ದು. ನಿನ್ನೆ ಮುಕ್ಕಮಂತ್ರಿ ಏನೇಳಿಕೆ ಕೊಟ್ಟವ್ನೆ, ನೀವ್‌ ನೋಡ್ಲಿಲ್ವಾ? ನಟಸಾರ್ವಭೌಮ ಸಿರ್ಕಾಂತಜೀ ಕೊಲೆಯಿಂದ ಎಡರಂಗದ ಹೊಳಗಿನ ಹೊಳ ಜಗಳ ಬಯಲಿಗೆ ಬಂದಿದೆ ಹಂತ. ಹದಕ್ಕೆ ನಾ ಏಳಿದ್ದು ನಾವೇ ಕೊಲೆ ಮಾಡಿರ್ಲಿ, ಹವ್ರೇ ಮಾಡಿರ್ಲಿ, ಕೊಲೆಗಾರ ಸಿಕ್ರೆ ತಾನೇ ಗೊತ್ತಾಯ್ತದೆ-ಅಂತ. ಸರಿ ಅಲ್ವಾ?

ರುದ್ರಪ್ಪ : ಸರಿ ಸ್ವಾಮಿ. ಈ ಟೈಂನಲ್ಲಿ ಇಂಥ ಹೇಳಿಕೆ ನೀವು ಕೊಡಬಾರ್ದಿತ್ತು.

ಕೃಷ್ಣಪ್ಪ : ಬಿಡಿ ಸಾ. ಓಟಿಂಗೆಲ್ಲ ಮುಗಿದೋಗದೆ, ಜನ ಗುಜು ಗುಜು ಮಾತಾಡಿಕೋತಾರೆ. ನಾವ್‌ ಸುಮ್ನಿರಾಕಾಯ್ತದಾ?

ರುದ್ರಪ್ಪ : ಆದ್ರೆ ನಮ್ಮ ಪಾರ್ಟಿಯವರ್ಯಾರೂ ಕೊಲೆಗಾರರಲ್ವಲ್ಲ.

ಕೃಷ್ಣಪ್ಪ : ಅಧೆಂಗೇಳಾದು? ಪೋಲೀಸರೇಳತವ್ರ; ಸಿರ್ಕಾಂತಜೀನ್ನ ಕೊಂದವನು ಸಿದ್ದಲಿಂಗೂನೇ ಅಂತ. ನಾವು ಬ್ಯಾಡ ಅಂತ ಬಡ್ಕೊಂಡ್ರೂ ನೀವ್‌ ಬ್ಯಾರೆ ಅವನ್ನ ಪಾರ್ಟಿಗೆ ಸೇರಿಸ್ಕಂಡ್ರಿ ಆ ನನ್ಮಗ ಬಚ್ಚಿಟ್ಕೊಂಡವ್ನು ಒರಕ್ಬಂದಿಲ್ಲ. ಏನ್ಮಾಡಾದೇಳಿ.

ರುದ್ರಪ್ಪ : ಸಿದ್ದಲಿಂಗೂನ್ನ ನಾನೇ ಪಾರ್ಟಿಗೆ ಸೇರಿಸ್ಕೊಂಡೆ ಸರಿ, ಅದರರ್ಥ ನಾನೂ ಕೊಲೆ ಸಂಚಿನಲ್ಲಿ ಸೇರ್ಕೊಂಡಿದೀನಿ ಅಂತ ನಿಮ್ಮ ಅಭಿಪ್ರಾಯ ಅಲ್ವಲ್ಲ? ಇಷ್ಟಾಗಿ ಸಿದ್ದಲಿಂಗೂನೆ ಶ್ರೀಕಾಂತಜೀನ್ನ ಕೊಲೆ ಮಾಡ್ದ ಅಂತ ಏನ್‌ ಸಾಕ್ಷಿ ಇದೆ?

ಕೃಷ್ಣಪ್ಪ : ನಿಮ್ಗೂ ಅದಕ್ಕೂ ಸಂಬಂಧ ಐತೆ ಅಂತ ಏಳ್ಗಿಲ್ಲ ಸಾ. ಸಿದ್ದಲಿಂಗೂ ಸಿಕ್ರೆ ಅದೇನಿದ್ರೂ ಗೊತ್ತಾಯ್ತದಲ್ವ? ಇಷ್ಟ್ರಾಗೆ ಪಾರ್ಟಿ ಮೀಟಿಂಗೆ ಬಂದು ಎಲ್ಲಾ ಏಳತಿವ್ನಿ ಅಂತ ದಾನಪ್ಪನಿಗೆ ಕಾಗದ ಬೇರೆ ಬರದವ್ನೆ.

ರುದ್ರಪ್ಪ : (ಚಕಿತನಾಗಿ) ಒಳ್ಳೇದಾಯ್ತು ಬಿಡಿ. ಸತ್ಯ ಏನಿದೆ ಅಂತ ಆಗ್ಲಾದ್ರೂ ಎಲ್ರಿಗೂ ಗೊತ್ತಾಗಬಹುದು. ಕೊನೇಪಕ್ಷ, ಆತ ಬರೋವರೆಗಾದರೂ ನಾವ್‌ ನಾವ್‌ ಕಚ್ಚಾಡೋದು ಸರಿ ಅಲ್ಲ, ಅಲ್ವಾ?

ಕೃಷ್ಣಪ್ಪ : ಅಂಗೇ ಮಾಡಾನೇಳಿ. ನಮಸ್ಕಾರ. (ಕೃಷ್ಣಪ್ಪ ಫೋನ್ ಕೆಳಗಿಡುವನು. ರುದ್ರಪ್ಪನೂ ಕೆಳಗಿಡುತ್ತಾನೆ. ಈಗ ಇವನ ಮುಖದ ಮೇಲೆ ಚಿಂತೆ ಮೂಡುತ್ತದೆ. ಆಗಾಗ ಸೋಫಾದ ಬಳಿಗೆ ಹೋಗಿ ಕುಡಿದು ಸಿಗರೇಟು ಸೇದುತ್ತಾ ಅತ್ತಿತ್ತ ಅಲೆದಾಡುವನು, ಅಷ್ಟರಲ್ಲಿ ಕಿಟಕಿಯ ಬಾಗಿಲು ಮೆಲ್ಲಗೆ ತೆರೆದುಕೊಳ್ಳುವುದು. ರುದ್ರಪ್ಪ ಅಡಗುವನು. ಈಗ ಬಂದವನು ಶೀನಿ ನೀಟಾಗಿ ಬುಶ್ಯರ್ಟ್ ಪ್ಯಾಂಟ್ ಹಾಕಿದ್ದರೂ ಅವನ ಮುಖದ ಒರಟುತನವನ್ನು ಮುಚ್ಚಲಿಕ್ಕಾಗಿಲ್ಲ, ಅವನು ರುದ್ರಪ್ಪನ ಬೇಹುಗಾರ. ಒಳಗೆ ಬಂದೊಡನೆ ತುಂಬ ಚಟುವಟಿಕೆಯಿಂದ ಬೆಡ್ ರೂಮನ್ನು ಹುಡುಕುತ್ತಾ ಹಾಸಿಗೆ ಎತ್ತಿದಾಗ ಅವನಿಗೆ ಪಿಸ್ತೂಲು ಕಾಣಿಸುತ್ತದೆ . ಸಂತೋಷ ಮತ್ತು ಆಶ್ಚರ್ಯವಾಗುತ್ತದೆ. ಹಾಸಿಗೆ ಹಾಗೇ ಇಟ್ಟು ಹುಡುಕುತ್ತಾ ಹಾಲಿಗೆ ಬಂದಾಗ ಟೀ ಪಾಯ್ ಮೇಲಿನ ಗ್ಲಾಸು ಮತ್ತು ವಿಸ್ಕಿ ಬಾಟ್ಲಿ ನೋಡಿ ಚಕಿತನಾಗುತ್ತಾನೆ, ತಕ್ಷಣ ಹೋಗಿ ಕಿಚನ್, ಬಾತ್ರೂಮಿನಲ್ಲಿ ಯಾರು ಇಲ್ಲದ್ದನ್ನು ಖಾತ್ರಿ ಮಾಡಿಕೊಂಡು ಮುಂಬಾಗಿಲು ಜಗ್ಗಿ ನೋಡುತ್ತಾನೆ. ಯಾರು ಇಲ್ಲವೆಂದು ಖಾತ್ರಿ ಆದಮೇಲೆ ಸೋಫಾ ಬಳಿ ಬಂದು ಗ್ಲಾಸಿಗೆ ಉಳಿದ ವಿಸ್ಕಿ ಬಗ್ಗಿಸಿ ಖಾಲಿ ಮಾಡಿ ಮತ್ತೆ ಹುಡುಕತೊಡಗಿದಾಗ ರುದ್ರಪ್ಪ ಕಾಣಿಸಿಕೊಳ್ಳುತ್ತಾನೆ. ತಕ್ಷಣ ಶೀನಿ ಚಾಕು ತೆಗೆಯುವನು. ಎದುರಿಸಬೇಕೆಂದಾಗ ರುದ್ರಪ್ಪನನ್ನು ಗುರುತಿಸಿ ಗಾಬರಿಯಾಗಿ ಚಾಕು ಒಳಗಿಟ್ಟುಕೊಂಡು ಸಾರ್ ಸಾರ್ ಎಂದು ತೊದಲುತ್ತಾನೆ.)

ರುದ್ರಪ್ಪ : ಇಲ್ಲಿಗ್ಯಾಕೆ ಬಂದೆ?

ಶೀನಿ : ತಾವಿಲ್ಲಿದ್ದದ್ದು ಗೊತ್ತಿರಲಿಲ್ಲ ಸಾರ್. ಸಿದ್ದಲಿಂಗು ಆ ದಿನ ಇಲ್ಲೇ ಅಡಗಿದ್ದ.

ರುದ್ರಪ್ಪ : (ಚಕಿತನಾಗಿ) ಏನು?

ಶೀನಿ : ಹೌದು ಸಾರ್. ಅವನ ಹಿಂದಿನಿಂದಲೇ ನಾನೂ ಓಡಿ ಬಂದೆ. (ರುದ್ರಪ್ಪ ತನ್ನ ಆಶ್ಚರ್ಯವನ್ನು ನಿಯಂತ್ರಿಸಿಕೊಂಡು ಕೂರುವನು.)

ರುದ್ರಪ್ಪ : ಒಳಗಡೆ ಹೋಗಿ ಒಂದು ಗ್ಲಾಸ್‌ ತಗೊಂಬಾ (ಶೀನಿ ಕಿಚನ್ನಿಗೆ ಹೋಗಿ ಎಡಕ್ಕೆ ತಿರುಗುವನು.) ಎಡಗಡೆ ಅಲ್ಲ. ಈ ಕಡೆ ಬಲಕ್ಕೆ ಹೋಗು. ಷೋಕೇಸ್‌ ಕಾಣ್ಸತ್ತಲ್ಲ, ಅದರಲ್ಲಿದೆ. (ಶೀನಿ ಒಳಗಿನಿಂದ ಗ್ಲಾಸು ತರುವನು. ರುದ್ರಪ್ಪ ಇನ್ನೊಂದು ಜೇಬಿನಿಂದ ಮತ್ತೊಂದು ಕ್ವಾರ್ಟರ್ ಬಾಟ್ಲಿ ತೆಗೆದು ಇಬ್ಬರಿಗೂ ಸುರಿಯುವನು. ಶೀನಿ ತೆಗೆದುಕೊಳ್ಳದೆ ಸಂಕೋಚದಿಂದಿರುವಾಗ ನಾಚ್ಕೋಬೇಡ ತಗೊ’…. ಎಂದು ಹೇಳಲು ಕುಡಿಯುವನು. ತನ್ನ ಗುಟ್ಟು ಗೊತ್ತಾಗಿರುವುದರಿಂದ ಉಪಚಾರ ಮಾಡಿಸಿಕೊಳ್ಳುವುದು ಸಲ್ಲದೆನಿಸಿ ಪ್ರೇಕ್ಷಕರತ್ತ ತಿರುಗಿ ಒಂದೇ ಗುಟುಕಿಗೆ ಕುಡಿದು ಗ್ಲಾಸನ್ನು ಟೀಪಾಯಿಯ ಮೇಲಿಡುವನು.)

ರುದ್ರಪ್ಪ : ಸಿದ್ದಲಿಂಗು ಆ ದಿನ ಇಲ್ಲಿಗೆ ಬಂದಿದ್ನ?

ಶೀನಿ : ಹೌದು ಸಾರ್.

ರುದ್ರಪ್ಪ : ಮತ್ತೆ ಈ ಮುಂಚೆ ನನಗ್ಯಾಕೆ ಹೇಳಲಿಲ್ಲ?

ಶೀನಿ : ಮನೆ ರಾತ್ರಿ ನೋಡಿದ್ದೆ. ಕತ್ತಲಿತ್ತು. ಲೋಕೇಶನ್‌ ಬಗ್ಗೆ ಅನುಮಾನ ಇತ್ತು. ಏನಾದರೂ ಸುಳಿವು ಸಿಕ್ಕರೆ ಖಾತ್ರಿ ಮಾಡಿಕೊಂಡು ಹೇಳೋಣ ಅಂತಿದ್ದೆ.

ರುದ್ರಪ್ಪ : ಸಿಕ್ಕಿತಾ ಏನಾದ್ರೂ?

ಶೀನಿ : ಸಿದ್ದಲಿಂಗು ತನ್ನ ಪಿಸ್ತೂಲು ಇಲ್ಲೇಬಿಟ್ಟಿದಾನೆ.

ರುದ್ರಪ್ಪ : ಎಲ್ಲಿದೆ?

ಶೀನಿ : ಹಾಸಿಗೆ ಕೆಳಗೆ (ತಕ್ಷಣ ಇಬ್ಬರೂ ಎದ್ದು ಬೆಡ್ರೂಮಿಗೆ ಬರುವರು. ಶೀನಿ ಹಾಸಿಗೆ ಎತ್ತಿ ತೋರಿಸುವನು)

ರುದ್ರಪ್ಪ : ಇನ್ನೇನಾದ್ರೂ ಸಿಕ್ಕಿತಾ?

ಶೀನಿ : ಇಲ್ಲ.

ರುದ್ರಪ್ಪ : ಈ ಮನೆಯವರಿಗೆ ಇದು ಗೊತ್ತಾ?

ಶೀನಿ : ನನಗಿನ್ನೂ ಅಂದಾಜಾಗಿಲ್ಲ. (ಇಬ್ಬರೂ ತಿರುಗಿ ಹೋಗಿ ಮತ್ತೆ ಅದೇ ಭಂಗಿಯಲ್ಲಿ ಕೂರುವರು.)

ರುದ್ರಪ್ಪ : ಸಿದ್ದಲಿಂಗು ಇಲ್ಲಿಗೆ ಬಂದಾಗ ಮನೇಲಿ ಯಾರಿದ್ರು?

ಶೀನಿ : ಹೆಂಗಸಿತ್ತು. ಇವನು ಬಂದು ಕಾಲಿಂಗ್‌ ಬೆಲ್ಲೊತ್ತಿದಾಗ ಅವಳೇ ಬಾಗಿಲು ತೆಗೆದಳು. ತಕ್ಷಣ ಬಾಗಿಲು ಮುಚ್ಚಿಕೊಂಡಿತು. ಒಳಗಡೆ ಏನಾದರೂ ಗಲಾಟೆ ಆಗುತ್ತ ಅಂತ ಕಾದು ನೋಡಿದೆ. ಬಹುಶಃ ಇವನು ಅವಳ ಬಾಯಿ ಹಿಡಿದಿರಬೇಕು. ಇಲ್ಲ ಇಬ್ಬರೂ ಪರಿಚಿತರಾದರೂ ಇರಬೇಕು. ಎಷ್ಟೊತ್ತಾದರೂ ನನಗೇನೂ ಕೇಳಿಸಲೇ ಇಲ್ಲ. ಅಷ್ಟರಲ್ಲಿ ಈ ಮನೆ ಕಡೆ ಯಾರೋ  ಓಡಿ ಬರೋದು ಕಂಡಿತು. ಅಡಗಿಕೊಂಡು ಪಾರಾದೆ.

ರುದ್ರಪ್ಪ : ಬಂದವರು ಯಾರು?

ಶೀನಿ : ಈ ಮನೆ ಯಜಮಾನ.

ರುದ್ರಪ್ಪ : ಗೊತ್ತಾ ನಿನಗವನು?

ಶೀನಿ : ಗೊತ್ತಿಲ್ಲ. ನಿನ್ನೆಯಲ್ಲಾ ವಿಷಯ ತಿಳಿದುಕೊಂಡೆ. ಅದಕ್ಕೇ ನಿಮ್ಮನ್ನ ನೋಡ್ಲಿಕ್ಕೆ ಆಗ್ಲಿಲ್ಲ. ಅವನು ಸರ್ಕಾರಿ ಕಾಲೇಜಿನಲ್ಲಿ ಲೆಕ್ಚರರ್, ಪ್ರಕಾಶ್‌ ಅಂತ ಹೆಸರು. ಅವನು ಪರವಾಗಿಲ್ಲ. ಅವನ ಹೆಂಡತಿ ವಿಧಾನ ಸೌಧದಲ್ಲಿ ಸೆಕೆಂಡ್‌ ಡಿವಿರ್ಜ ಕ್ಲಾರ್ಕು. ಫೈನಾನ್ಸ್‌ ಡಿಪಾರ್ಟ್‌ಮೆಂಟ್‌.

ರುದ್ರಪ್ಪ : ಇಬ್ಬರೂ ಹ್ಯಾಗೆ; ವೀಕ್‌ ಪಾಯಿಂಟೇನಾದರೂ ಇದೆಯಾ?

ಶೀನಿ : ಇವಳಿಗೆ ಆಸೆ ಜಾಸ್ತಿ. ಸಾಲ ಮಾಡಿ ಫ್ರಿಜ್‌ ತಂದಿದಾಳೆ. ಬಣ್ಣದ ಟಿ.ವಿ. ಮೇಲೆ ಕಣ್ಣಿದೆ. ಇತ್ತೀಚೆಗೆ ಗಂಡನಿಗೆ ಹೇಳದೆ ಸಾಲ ಮಾಡಿ ಚಿನ್ನದ ಬಳೆ ಮಾಡ್ಸಿದಾಳೆ. ಈ ಹೆಂಗಸನ್ನು ನಾವು ಹಿಡೀಬಹುದು.

ರುದ್ರಪ್ಪ : ಹ್ಯಾಗೆ?

ಶೀನಿ : ಇವಳಿಗೆ ಸಾಲಕೊಟ್ಟವನು, ಕಾಂತಿಲಾಲ್‌.

ರುದ್ರಪ್ಪ : ನಮ್ಮ ಬ್ರೋಕರ್ ಕಾಂತಿಲಾಲ್‌?

ಶೀನಿ : ಹೌದು. ಹಿಂದೊಮ್ಮೆ ಪೋಲೀಸ್‌ ಕೇಸ್‌ನಲ್ಲಿ ಅವನನ್ನು ನೀವೇ ಬಚಾವ್‌ ಮಾಡಿದ್ರಿ. (ರುದ್ರಪ್ಪ ಫೋನ್ ಮಾಡುವನು. ಶೂನ್ಯ ಸ್ಥಳದಲ್ಲಿ ಇನ್ಸ್ಪೆಕ್ಟರ್ ಫೋನೆತ್ತಿಕೊಳ್ಳುವನು)

ರುದ್ರಪ್ಪ : ಯಾರು ಇನ್ಸ್ಪೆಕ್ಟರಾ?

ಇನ್‌ಸ್ಪೆಕ್ಟರ್ : ಹೌದು. ನೀವ್ಯಾರು?

ರುದ್ರಪ್ಪ : ನಾನು ರುದ್ರಪ್ಪ. ಆಪೋಸಿಟ್‌ ಪಾರ್ಟಿ ಲೀಡರ್.

ಇನ್‌ಸ್ಪೆಕ್ಟರ್ : ನಮಸ್ಕಾರ ಸಾರ್. ಏನ್ಸಾರ್ ಅಪರೂಪ?

ರುದ್ರಪ್ಪ : ಮನೆ ಕಡೆ ಬರ್ತೀರೇನು?

ಇನ್‌ಸ್ಪೆಕ್ಟರ್ : ಓಯಸ್‌, ಈಗ್ಲೇ ಹೊರಟೆ. (ಇಬ್ಬರೂ ಫೋನಿಡುವರು)

ರುದ್ರಪ್ಪ : ಪಾರ್ಟಿ ಆಫೀಸ್‌ ಕಡೆ ಹೋಗಿದ್ದೆಯಾ?

ಶೀನಿ : ಹೋಗಿದ್ದೆ. ಮೊದಮೊದಲು ಯಾರಿಗೂ ಭರವಸೆ ಇರಲಿಲ್ಲ. ಆದರೆ ಈಗ ಮಾತ್ರ ನಂ ಪಾರ್ಟಿನೇ ಗೆಲ್ಲೋದು ಅಂತ ಎಲ್ರೂ ಹೇಳ್ತಿದಾರೆ. ಆಗಲೇ ಮುಖ್ಯಮಂಥ್ರಿ ಯಾರು ಆಗಬೇಕಂತ ಒಳಗೊಳಗೇ ಚರ್ಚೆ ಮಾಡ್ತಾ ಇದ್ದಾರೆ.

ರುದ್ರಪ್ಪ : ಯಾರ್ಯಾರಂತೆ?

ಶೀನಿ : ಆ ದಾನಪ್ಪ ಬಹಳ ಚುರುಕಾಗಿ ಕೃಷ್ಣಪ್ಪನ ಹೆಸರನ್ನು ಹೇಳಿಕೊಂಡು ಓಡಾಡ್ತಿದ್ದಾನೆ. ಈ ಸಲ ಹಿಂದುಳಿದ ವರ್ಗದವರೇ ಮುಖ್ಯಮಂತ್ರಿ ಆಗ್ಬೇಕು. ಅದಕ್ಕೆ ಕೃಷ್ಣಪ್ಪನೇ ಸರಿ ಅಂತ ಪ್ರಚಾರ ಮಾಡ್ತಿದಾನೆ. ನಿಮ್ಮ ಹೆಸರನ್ನೇನೋ ಕೆಲವರು ಹೇಳ್ತಾರೆ, ಆದ್ರೆ….

ರುದ್ರಪ್ಪ : ಏನಾದರೆ?

ಶೀನಿ : ಸಿದ್ದಲಿಂಗೂನೆ ಶ್ರೀಕಾಂತಜೀನ ಕೊಂದದ್ದೂ ಅಂತ ಪುಕಾರಾಗಿದೆ. ಅವನನ್ನು ಪಾರ್ಟಿಗೆ ಸೇರಿಸಿಕೊಂಡವರು ನೀವು. ನಿಮ್ಮ ನಿಮ್ಮಲ್ಲೇ ಏನೋ ಕನೆಕ್ಷನ್ನಿರಬೇಕು ಅಂತ ದಾನಪ್ಪ ಕದ್ದಾಡ್ತಿದಾನೆ.

ರುದ್ರಪ್ಪ : ಆ ದಾನಪ್ಪ ಹ್ಯಾಗೆ?

ಶೀನಿ : ಕೈ ಶುದ್ಧ, ಆದರೆ ಕಚ್ಚೆ ಅಲ್ಲ.

ರುದ್ರಪ್ಪ : ಆಯ್ತು, ಹಿಂದೆ ಸುಶೀಲ ಕೇಸಾಯ್ತಲ್ಲ, ಹಾಗೇ ಆಗ್ಬೇಕು.  ಕಾಂತಿಲಾಲನ್ನ ಮನೆ ಕಡೆ ಬರಹೇಳು.

ಶೀನಿ : ಎಸ್ಸಾರ್ (ಶೀನಿ ನಮಸ್ಕರಿಸಿ ಕಿಟಕಿ ಹಾರಿ ಹೋಗುವನು. ರುದ್ರಪ್ಪ ಫೋನೆತ್ತಿಕೊಳ್ಳುವನು. ಶೂನ್ಯ ಸ್ಥಳದ ಫೋನಿನಲ್ಲಿ ದಾನಪ್ಪ ಬರುವನು. ಆತನ ಪಕ್ಕದಲ್ಲಿ ಕೃಷ್ಣಪ್ಪನೂ ಕೂತಿದ್ದಾನೆ.)

ರುದ್ರಪ್ಪ : ಯಾರು ದಾನಪ್ಪನವರೇನು? ನಮಸ್ಕಾರ, ನಾನು ರುದ್ರಪ್ಪ ಸ್ವಾಮಿ.

ದಾನಪ್ಪ : ನಮಸ್ಕಾರೀ ಸಾಹೇಬರ.

ರುದ್ರಪ್ಪ : ಹ್ಯಾಗಿದೆ ಸ್ವಾಮಿ ಎಲೆಕ್ಷನ್‌ ಸೀನು ?

ದಾನಪ್ಪ : ಅಯ್ಯೋ, ಏನ್‌ ಹೇಳ್ತೀರಿ ನನ್ಮಕ್ಕಳು ರೂಲಿಂಗ್‌ ಪಾರ್ಟಿಯವರು ಮಣ್ಣು ತಿಂದ್‌ ಹ್ವಾದದ್ರೀ ಸಾಹೇಬರ.

ರುದ್ರಪ್ಪ : ಶ್ರೀಕಾಂತಜೀ ಜೀವಂತವಾಗಿದ್ದಿದ್ರೆ.

ದಾನಪ್ಪ : ಅಯ್ಯೋ ಯಾಕ್‌ ನೆನಪು ಮಾಡ್ತೀರ್ರಿ‍. ಅವರಿದ್ದಿದ್ದರ ಅವರು ನಮ್ಮ ಮುಖ್ಯಮಂತ್ರಿ ಆಗಿರೋದು. ನಮ್ಮ ದುರ್ದೈವರೀ ಸಾಹೇಬರ, ನಮ್ಮ ನಾಡಿನ ಕಲಾ ಪ್ರಪಂಚಕ್ಕೆ ತುಂಬಿ ಬಾರದ ನಷ್ಟ ಆಯ್ತು.

ರುದ್ರಪ್ಪ : ಆದ್ರೆ ಅವರ ಮನಸ್ಸಿನಲ್ಲಿರೋದನ್ನ ನಾವು ಪೂರೈಸಬೇಕು ದಾನಪ್ಪ. ನಿಮಗೆ ಗೊತ್ತಲ್ಲ : ಶ್ರೀಕಾಂತಜೀ ಮತ್ತು ನಾನು ಹ್ಯಾಗೆ ಹಾಲುಜೇನು ಇದ್ದ ಹಾಗೆ ಇದ್ವಿ ಅಂತ. ಇಬ್ಬರೂ ಭಾಷಣಕ್ಕೆ ಹೋದ್ರೆ ಜನ ನಮ್ಮನ್ನು ರಾಮಲಕ್ಷ್ಮಣ ಅಂತ ಕೂಗೋರು. ಆವೊತ್ತು ಶ್ರೀಕಾಂತಜೀ ಶವಸಂಸ್ಕಾರದ ಹೊತ್ನಲ್ಲಿ ಅತ್ತೂ ಅತ್ತೂ ಭಾಷಣ ಮಾಡಿದೆ, ಕೇಳಿದಿರಲ್ಲಾ?

ದಾನಪ್ಪ : ಹೌದ್ರಿ ಸಾಹೇಬರs ನಿಮ್ಮ ಭಾಷ್ಣ ಕೇಳಿ ಕೂಡಿದವರೆಲ್ಲ ಮುದಿಕೇರತ್ತ್ಹಂಗ ಅತ್ತರಲ್ಲರಿ!

ರುದ್ರಪ್ಪ : ಶ್ರೀಕಾಂತಜೀ ಬರೇ ನನ್ನ ಸ್ನೇಹಿತರಾಗಿರಲಿಲ್ಲ ದಾನಪ್ಪ, ಆತ್ಮವಾಗಿದ್ದರು. ನಮ್ಮೆಲ್ಲರ ಆಶಾಜ್ಯೋತಿಯಾಗಿದ್ದರು. ಈ ನಾಡಿನ ಸೌಭಾಗ್ಯವಾಗಿದ್ದರು. ಅವರ ಆಶೆ ಈಡೇರಿಸುವುದು ನಮ್ಮೆಲ್ಲರ ಪವಿತ್ರ ಕರ್ತವ್ಯ.

ದಾನಪ್ಪ : ಹೌದ್ರೀ ಸಾಹೇಬರ ಅಂದ್ಹಂಗ ನಮ್‌ ಸರ್ಕಾರ ಬಂದಮ್ಯಾಲ ವಿಧಾನಸೌಧದ ಮ್ಯಾಲ ಅವರದೊಂದು ಕಂಚಿನ ಪ್ರತಿಮಾ ನಿಲ್ಲಿಸಬೇಕ್ರೀ ಸಾಹೇಬರ.

ರುದ್ರಪ್ಪ : ನಿಲ್ಲಿಸೋಣ. ಆದ್ರೆ ಅವರ ಕೊನೆ ಆಸೆ ಈಡೇರಿಸೋದೂ ಅಷ್ಟೇ ಅಥವಾ ಅದಕ್ಕಿಂತ ಹೆಚ್ಚು ಮುಖ್ಯ.

ದಾನಪ್ಪ : ಈಡೇರಿಸೋಣ ತಗೊಳ್ರೆಲಾs. ಅದೇನಿತ್ತು ಹೇಳೇ ಬಿಡ್ರಿ ಅವರ ಕಡೀ ಆಸೆ.

ರುದ್ರಪ್ಪ : ಇದನ್ನೆಲ್ಲಾ ಮರೆತು ನಾನೇ ಶ್ರೀಕಾಂತಜೀ ಕೊಲೆ ಮಾಡ್ಸಿದ್ದು ಅಂತ ಹೇಳ್ತಿದಾರಲ್ಲ ಸ್ವಾಮಿ, ನ್ಯಾಯವಾ?

ದಾನಪ್ಪ : (ಭೀತನಾಗಿ) ಛೇ ಛೇ ಯಾವೋನರಿ ಹಂಗಂದಾಂವಾ?

ರುದ್ರಪ್ಪ : ಯಾರೋ ಯಾರು ಸ್ವಾಮಿ, ನಮ್ಮ ಸ್ನೇಹಿತ್ರೆ. ಅಂದ್ರೆ ನೀವೇ. ನೀವು ಯಾರ್ಯಾರ್ ಮುಂದೆ ಹೇಳಿದ್ದಿರೋ ಅವರೆಲ್ಲ ಬಂದು ಹೇಳಿದರು. ನೀವು ಕೇಳಿದರೆ ನಮಗೆ ರುದ್ರಪ್ಪನವರು ಸಿಕ್ಕಿಲ್ಲ ಅಂತಲೆ ಬುರುಡೆ ಬಿಡ್ತಾರೆ ಅನ್ನಿ. ನೋಡಿ, ಶ್ರೀಕಾಂತಜೀ ತಮ್ಮ ಆಸೆ ತೋಡಿಕೊಂಡಾಗಲೇ ನಾನು ಮುಖ್ಯಮಂತ್ರಿ ಆಗಬಾರದು ಅಂತ ತೀರ್ಮಾನಿಸಿಬಿಟ್ಟೆ. ಅವರೇನು ಹೇಳಿದರು ಗೊತ್ತಾ? ನೋಡಿ ರುದ್ರಣ್ಣ ನಿಮಗೂ ಗೊತ್ತಲ್ಲ-ಶ್ರೀಕಾಂತಜೀ ನನಗೆ ಅಣ್ಣಾ ಅಂತಿದ್ರು ನೋಡಿ ರುದ್ರಣ್ಣ, ಸ್ವಾತಂತ್ಯ್ರ ಬಂದು ಮೂವತ್ತು ವರ್ಷ ಆಯ್ತು. ಒಬ್ಬರೂ ಹಿಂದುಳಿದ ವರ್ಗದವರು ಮುಖ್ಯಮಂತ್ರಿ ಆಗಲಿಲ್ಲ. ನಮ್ಮ ಪಾರ್ಟಿ ಅಧಿಕಾರಕ್ಕೆ ಬಂದರೆ ಒಬ್ಬ ಹಿಂದುಳಿದ ವರ್ಗದವರನ್ನು ಮುಖ್ಯಮಂತ್ರಿ ಮಾಡಿದರೆ ಒಳ್ಳೇದಲ್ಲವಾ-ಅಂದ್ರು. ಹಾಗಂದಿದ್ದವರು ಈಗಿಲ್ಲ. ಆದರೆ ಅವರ ಆಸೆ ಈಡೇರಿಸಬೇಕು ಅನ್ನೋ ಮನುಷ್ಯ ನಾನು.

ದಾನಪ್ಪ : ಮುತ್ತಿನಂಥ ಮಾತ್ರೀ ಸಾಹೇಬರಾs ಅವ್ರಲ್ಲದ ಹಿಂಗ ವಿಚಾರ ಮಾಡೋವ್ರು ಯಾರದಾರ ಹೇಳ್ರೆಲಾ?

ರುದ್ರಪ್ಪ : ನಾನಿದ್ದೀನಲ್ಲಪ್ಪ.

ದಾನಪ್ಪ : ನೀವ್‌ ಬಿಡ್ರಿ ಸಾಹೇಬರ. ನಮ್ಮ ಗಾಂಧಿ ಅಜ್ಜ ಇದ್ದಾಂಗ. ನೀವು ನಮ್ಮಂಥೋರಿಗೆ ಆಶೀರ್ವಾದ ಮಾಡ್ಬೇಕು. ತಪ್ಪ ಮಾಡಿದ್ರ ಒದ್ದು ಬುದ್ಧಿ ಕಲಿಸ್ಬೇಕು.

ರುದ್ರಪ್ಪ : ಅದಕ್ಕೇ ಈಗ ಫೋನ್‌ ಮಾಡಿದ್ದು. ಶ್ರೀಕಾಂತಜೀ ತಮ್ಮ ಆಸೆ ಹೇಳ’ಇದಾಗ ನಾ ಹೇಳಿದೆ : ಹಾಗಿದ್ರೆ ಶ್ರೀಕಾಂತಜೀ ನೀವೇ ಒಬ್ಬರನ್ನು ಆರಿಸಿಬಿಡಿ, ನಾಳೆ ನಮ್ಮ ನಮ್ಮಲ್ಲಿ ಜಗಳ ಬೇಡ ಅಂದೆ. ಅವರಾಗಲೆ ಒಬ್ಬನ್ನ ಆರಿಸಿದ್ದರು. ಹೇಳಿದ್ರು : ನೋಡಿದಿರಾ ಆ ಹುಡುಗನ್ನ ರುದ್ರಣ್ಣ? ಥಳ ಥಳ ಹೊಳೆಯುವ ಆತನ ಕಣ್ಣುಗಳನ್ನು ಕಂಡಾಗಲೆಲ್ಲ ನನಗೆ ಸಂತೋಷವಾಗುತ್ತದೆ. ಹುಡುಗ ಚೂಟ. ಚುರುಕಾಗಿ ಓಡಾಡ್ತಾನೆ. ಪ್ರಾಮಾಣಿಕ. ಪಾರ್ಟಿಗಾಗಿ ಪ್ರಾಣ ಕೊಡ್ತಾನೆ. ಆಮಿಷಕ್ಕೆ ಒಳಗಾಗಲ್ಲ. ನಿಷ್ಠೆ ಅವನಿಗೆ ಮಾರಾಟದ ಸರಕಲ್ಲ. ಹಿಂದುಳಿದ ವರ್ಗದವನು. ಅವರ ಹಿತರಕ್ಷಣೆ ಅವನಲ್ಲದೆ ಇನ್ನು ಯಾರು ತಾನೆ ಮಾಡಬಲ್ಲರು… ಅಂತ ಒಬ್ಬನ ಹೆಸರು ಹೇಳಿ ನನ್ನ ಮುಖ ನೋಡಿದರು.

ದಾನಪ್ಪ : ಹೌಂದ್ರೀ? ನೋಡ್ರಿ ಸಾಹೇಬರs ನೀವs ನೋಡಿದ್ದೀರಿ ನಾ ಎಂಥ ಹುಟ್ಟು ಹೋರಾಟಗಾರ ಅಂತ, ಎಷ್ಟು ಬಂಡಾಯ ಮಾಡೀನಿ. ಎಷ್ಟು ಖ್ರಾಂತಿ ಮಾಡೀನಿ! ನನಗಂತೂ ಅಧಿಕಾರದ ಆಸೆ ಇಲ್ಲ. ಆದ್ರ ಜವಾಬ್ದಾರಿ ಅಂತ ನೀವು ಒಂದು ಕೆಲ್ಸ ಕೊಟ್ರ ಇಲ್ಲನ್ನೋ ಪೈಕಿ ಅಲ್ಲ. ಹಿಂಗೆ ಮಾಡಂತ, ನೀವು ಕಾಲ್ನಿಂದ ತೋರಿಸಬೇಕು. ನಾ ನೆತ್ಯಾಗಿಟಕೊಂಡ ಮಾಡಬೇಕು. ಅಂದ್ಹಾಂಗ ಸಾಹೇಬರs ಶ್ರೀಕಾಂತಜೀ ಯಾರ ಹೆಸರು ಹೇಳಿದರು?

ರುದ್ರಪ್ಪ : ಹೇಳಿ ಯಾರಿರಬೇಕು?

ದಾನಪ್ಪ : (ಕೃಷ್ಣಪ್ಪನನ್ನು ನೋಡುತ್ತಾ) ನಮ್ಮ ಕೃಷ್ಣಪ್ಪನವರೇನ್ರೀ ಸಾಹೇಬರಾS?

ರುದ್ರಪ್ಪ : ಕ್ಷಮಿಸಬೇಕು, ಕೃಷ್ಣಪ್ಪನವರೂ ಅಲ್ಲೇ ಇದಾರೋ ಏನೋ

ದಾನಪ್ಪ : ಇಲ್ಲಿ… ಹೆಹೆ… ಹೆಹೆ …

ರುದ್ರಪ್ಪ : ಇದ್ರೂ ನನಗೆ ಯೋಚನೆ ಇಲ್ಲ. ಶ್ರೀಕಾಂತಜೀ ಹೇಳಿದ್ದು ನಿಮ್ಮ ಹೆಸರನ್ನು!

ದಾಣಪ್ಪ : (ಸಂತೋಷ ತಡೆಯಲಾರದೆ ಎದ್ದು, ಕೃಷ್ಣಪ್ಪನ ಕಡೆ ನೋಡಿ ಮತ್ತೆ ಫೋನಿನಲ್ಲಿ) ಏನಂದ್ರೀ ಸಾಹೇಬರs ಖರೇ ಏನ್ರೀ? ಯಾಕಂದ್ರ ಇಲ್ಲ ಈ ತನಕ ತಾವು ಇದನ್ನು ಹೇಳಲೇ ಇಲ್ಲ.

ರುದ್ರಪ್ಪ : ಶ್ರೀಕಾಂತಜೀ ಹೇಳಿದ್ದು ಅಕಸ್ಮಾತ್‌ ನಮ್ಮ ಪಾರ್ಟಿ ಗೆದ್ದು ಬಂದರೆ ಹೀಗೆ ಮಾಡೋಣ ಅಂತ. ಶ್ರೀಕಾಂತಜೀ ಗೋರಿ ಮೇಲಿನ ಮಣ್ಣು ಅರಿಲ್ಲ. ಎಲೆಕ್ಷನ್‌ ರಿಸಲ್ಟ್‌ ಇನ್ನೂ ಗೊತ್ತಾಗಿಲ್ಲ. ಅದಕ್ಕೇ ಇದು ಸಕಾಲ ಅಲ್ಲ ಅಂತ ನಾನು ಹೇಳಲಿಲ್ಲ. ಅಷ್ಟರಲ್ಲೇ ನೀವು ಯಾರ್ಯಾರನ್ನೋ ಮುಖ್ಯಮಂತ್ರಿ ಅಂತ ಕೂಗಾಡಿದರೆ ನಾನೇನ್ಮಾಡಲಿ? ನಿಮಗೂ ಗೊತ್ತಿದೆ. ಹೂಂ ಅಂತೀರಂತ ಸುಳ್ಳು ಹೇಳೋ ಪೈಕಿ ಅಲ್ಲ ನಾಣು.

ದಾನಪ್ಪ : (ರೋಮಾಂಚಿತನಾಗಿ ಕಳ್ಳನಂಥೆ ಕೃಷ್ಣಪ್ಪನನ್ನು ನೋಡುತ್ತಾ) ಸಾಹೇಬರಾS ಅಲ್ಲಿಗೇ ಬರ್ತೀನಿ ಪ್ರೈವೇಟಾಗಿ ಭೇಟಿಯಾಗೋಣ. ಹಾ ಅನ್ನೋದರಾಗ ಬಂದು ಬಿಡ್ತೀನ್ರಿ.

ರುದ್ರಪ್ಪ : ಮನೆಗೆ ಬನ್ನಿ. (ತಕ್ಷಣ ದಾನಪ್ಪ ಫೋನು ಇಟ್ಟು ಹೊರಡುವನು. ಕೃಷ್ಣಪ್ಪ, ಏನ್ ಸಮಾಚಾರ ಎಂದು ತಡೆದು ಕೇಳಿ ವಿಷಯ ತಿಳಿಯಲು ಪ್ರಯತ್ನಿಸುವನು. ಅವನನ್ನು ನಿವಾರಿಸಿ ಅವರಸರಲ್ಲಿ ತಡಿರಿ ತಡೀರಿಎಂದು ಹೇಳುತ್ತಾ ದಾನಪ್ಪ ಮರೆಯಾಗುವನು. ರುದ್ರಪ್ಪ ಖಾಲಿ ಬಾಟ್ಲಿಗಳನ್ನು ಜೇಬಿಗಿಳಿಬಿಟ್ಟು ಕಿಟಕಿಯ ತನಕ ಹೋಗುವನು. ಮತ್ತೆ ನೆನಪಾಗಿ ತಿರುಗಿ ಬಂದು ಸೋಫಾ ಪಕ್ಕದ ಮರೆಯಲ್ಲಿ ಒಂದು ಖಾಲಿ ಬಾಟ್ಲಿಯನ್ನು ಇಟ್ಟು, ಕಿಟಕಿಯಿಂದ ನಿರ್ಗಮಿಸುತ್ತಾನೆ.)