(ಅದೇ ಮನೆ . ಪ್ರಕಾಶ್ ಕಂಗಾಲಾಗಿ ಕೂತಿದ್ದಾನೆ. ತುಸು ಹೊತ್ತು ಯೋಚಿಸಿ ಮತ್ತೆ ಎದ್ದು ಮನೆಯಲ್ಲಿ ಇನ್ನೇನಿದೆ ಎಂದು ಹುಡುಕತೊಡಗುತ್ತಾನೆ. ಸಿಗರೇಟಿನ ತುಂಡು ಸಿಕ್ಕುತ್ತದೆ. ಮತ್ತೆ ಹುಡುಕುತ್ತಾನೆ. ವಿಸ್ಕಿಯ ಖಾಲಿ ಬಾಟ್ಲಿ ಸಿಕ್ಕುತ್ತದೆ. ಆಘಾತವನ್ನು ಸಹಿಸಲಾರದೆ ಕೂರುತ್ತಾನೆ. ಬಹಳ ಹೊತ್ತು ಯೋಚಿಸಿ ಕೊನೆಗೆ ಅದನ್ನು ಜೇಬಿನಲ್ಲಿ ತುರುಕಿಕೊಂಡು ನಿರ್ವಿಣ್ಣನಾಗಿ ಕೂತಿದ್ದಾಗ ಸರೋಜ ಬರುತ್ತಾಳೆ. ಪೋಲೀಸ್ ಕೇಸು, ದಾನಪ್ಪನೊಂದಿಗೆ ಹೆಣಗಿದ್ದು – ಇದೆಲ್ಲದರಿಂದ ಹೈರಾಣಾದ ಅವಳ ಮುಖದಲ್ಲಿ ಗೆಲುವೆಂಬುದೇ ಇಲ್ಲ. ಪ್ರಕಾಶ್ ಅವಳ ಚಲನವಲನಗಳನ್ನು ತೀಕ್ಷ್ಣವಾಗಿ ಗಮನಿಸುತ್ತಿದ್ದಾನೆ.)
ಸರೋಜ : ಈಗಷ್ಟೇ ಬಂದಿರೋ ಹಾಗಿದೆ. ಬಟ್ಟೆ ಕೂಡ ಬದಲಾಯಿಸಿಲ್ಲ.
(ಸರೋಜ ವ್ಯಾನಿಟಿ ಬ್ಯಾಗನ್ನು ಟೇಬಲ್ ಮೇಲಿಟ್ಟು ಬೆಡ್ ರೂಮಿನ ಕಡೆ ಹೋಗುತ್ತಿದ್ದಾಗ)
ಪ್ರಕಾಶ್ : ಹೂ.
ಸರೋಜ : ಬಟ್ಟೆ ಬದಲಾಯಿಸಬಾರದೆ?
ಪ್ರಕಾಶ್ : ಹೂ.
ಸರೋಜ : ಮತ್ತೆ ಇನ್ನೂ ಹಾಗೇ ಕೂತಿದೀರಿ, ಯಾಕೆ ಒಂಥರಾ ಇದ್ದೀರಿ? ಕಾಲೇಜಿನಲ್ಲೇನಾದರೂ ಜಗಳಾಡಿದಿರಾ?
ಪ್ರಕಾಶ್ : ಇಲ್ಲ.
ಸರೋಜ : ಮತ್ಯಾಕೆ ಹೀಗಿದೀರಿ? ಮೈಯಲ್ಲಿ ಹುಷಾರಿಲ್ಲೇನು?
(ತಿರುಗಿ ಬಂದು ಕಾಳಜಿಯಿಂದ ಅವನ ಮೈ ಮುಟ್ಟಿ ನೋಡಲು ಹೋದೊಡನೆ ಪ್ರಕಾಸ್ ಮೆಲ್ಲಗೆ ನಿವಾರಿಸುವನು)
ಪ್ರಕಾಶ್ : ಕಾಫಿ ಮಾಡು.
ಸರೋಜ : ಯಾಕೆ, ಏನಾಯ್ತು ಹೇಳೀಂದ್ರೆ?
ಪ್ರಕಾಶ್ : ಯೋಚನೆ ಮಾಡ್ತಾ ಇದೀನಿ. ನಾನು ಯೋಚನೆ ಮಾಡಿದರೆ ನಿನಗೆ ತಲೆ ನೋವೇನೂ ಬರೋದಿಲ್ವಲ್ವಾ?
(ಸರೋಜ ಚಕಿತಳಾಗಿ ಅವನನ್ನೇ ನೋಡುತ್ತಾ ಕಿಚನ್ನಿಗೆ ಹೋಗುವಳು. ಪ್ರಕಾಶ್ ರೇಡಿಯೋ ಆನ್ ಮಾಡುವನು.)
ರೇಡಿಯೋದಲ್ಲಿ : ಮತಗಳ ಎಣಿಕೆ ಮುಂದುವರಿದಲ್ಲೆಲ್ಲಾ ಎಡರಂಘದ ಉಮೇದುವಾರರು ತಮ್ಮ ಎದುರಾಳಿಗಿಂತ ಮುಂದೆ ಇರುವುದು ಕಂಡುಬಂದಿದೆ. ಈಗ ಬಂದ ಸುದ್ದಿಯ ಪ್ರಕಾರ ಎಡರಂಗದ ಉಮೇದುವಾರರಾದ….
(ತಕ್ಷಣ ಪ್ರಕಾಶ್ ರೇಡಿಯೋ ಆಫ್ ಮಾಡುವನು ಸರೋಜ ಕಿಚನ್ ಬಾಗಿಲಿಗೆ ಬಂದು ಪ್ರಕಾಶ್ನನ್ನೇ ಹೆದರಿಕೆಯಿಂದ ನೋಡುತ್ತಿದ್ದಾಳೆ.)
ಪ್ರಕಾಶ್ : ಸರೋಜ, ಒಬ್ಬ ಹುಡುಗಿ ಅನೇಕ ಕಥೆಗಳಿಗೆ ಹೀರೋಯಿನ್ ಆಗಬಹುದಲ್ವಾ?
ಸರೋಜ : (ಮುಖ ಒರೆಸಿಕೊಳ್ಳುತ್ತಾ) ಏನಂದ್ರೀ.
ಪ್ರಕಾಶ್ : ಏನಿಲ್ಲ, ಎಷ್ಟು ಪೌಡರ್ ಬಳಿದುಕೊಂಡಿದ್ದೀ! ಇಷ್ಟು ದಪ್ಪ ಪೌಡರ್ ಬಳಿದುಕೊಂಡರೆ ನಿನ್ನ ನಿಜವಾದ ಬಣ್ಣ ಗೊತ್ತಾಗೋದೇ ಇಲ್ಲ!
ಸರೋಜ : (ಆತಂಕವಿದ್ದರೂ ಧೈರ್ಯ ತೆಗೆದುಕೊಂಡು) ಈಗ್ಲೂ ಪೌಡರ್ ಇದೆಯಾ? ಇವೊತ್ತು ಯಾಕೋ ನಿಮ್ಮ ಕಣ್ಣು ಸರಿ ಇಲ್ಲ. ಇವೊತ್ತೇನಾಗಿದೆ ನಿಮಗೆ?
ಪ್ರಕಾಶ್ : ನನಗೆ?
ಸರೋಜ : ಕನ್ನಡೀಲಿ ಮುಖ ನೋಡಿಕೊಂಡ್ರಾ?
ಪ್ರಕಾಶ್ : ಇಲ್ಲ, ಯಾಕೆ?
ಸರೋಜ : ಹೊಗೆ ಹಿಡಿದ ಹಾಗೆ ಕಪ್ಪಿಟ್ಟಿದೆ. ಹೇಳಿ ನನ್ಮುಂದೆ ಹೇಳಬಾರದಂಥ ಯೋಚನೆ ಏನದು?
ಪ್ರಕಾಶ್ : ಏನಿಲ್ಲವಲ್ಲ.
ಸರೋಜ : (ಒತ್ತಾಯದಿಂದ ನಗೆ ತಂದುಕೊಂಡು) ಬೆಂಕಿ ಇದೆ ಅನ್ನೋದಕ್ಕೆ ಹೊಗೆ ಬಿಟ್ಟು ಬೇರೆ ಸಾಕ್ಷಿ ಬೇಕಾ?
ಪ್ರಕಾಶ್ : ದಿನಾ ಮಧ್ಯಾಹ್ನ ನಾನಿಲ್ಲದೇ ಇರೋವಾಗ ಮನೇಗೆ ಬರ್ತೀ ಅಂತೆ ಹೌದಾ?
ಸರೋಜ : ನಿಮಗ್ಗೊತ್ತು ನನಗೆ ಬಿಡುವಾಗೋದಿಲ್ಲಾ ಅಂತ.
ಪ್ರಕಾಶ್ : ನೇರವಾಗಿ ಉತ್ತರ ಹೇಳು ಇವೊತ್ತು ಬಂದಿದ್ದೆಯಾ ಇಲ್ವಾ?
ಸರೋಜ : ಯಾಕೆ, ಏನಾದರೂ ಕಳುವಾಗಿದೆಯಾ?
ಪ್ರಕಾಶ್ : ಸುತ್ತು ಬಳಸಿದಷ್ಟೂ ನೀನೂ ಜಾರಿಕೊಳ್ಳೋ ಅವಕಾಶ ಕಮ್ಮಿ (ಕಿರುಚಿ) ನನಗೆ ನೇರ ಉತ್ತರ ಕೊಡು.
ಸರೋಜ : (ಗಾಬರಿಯಾಗಿ) ಇವೋತ್ತೇನಾಗಿದೆ ನಿಮಗೆ? ಯಾಕೆ ಈಥರಾ ಮಾತಾಡ್ತಾ ಇದೀರಿ?
ಪ್ರಕಾಶ್ : (ಕಣ್ಣು ಕಿಸಿದು ಅವಳ ಭುಜ ಗಟ್ಟಿಯಾಗಿ ಹಿಡಿದು) ಹೇಳ್ತಿಯೋ ಇಲ್ಲವೋ?
ಸರೋಜ : ಏನಂತ?
ಪ್ರಕಾಶ್ : ಮನೆಗೆ ಬಂದಿದ್ದೆಯಾ?
ಸರೋಜ : ಹೇಳಿದೆನಲ್ಲಾ ಇಲ್ಲಾಂತ.
ಪ್ರಕಾಶ್ : (ನೂಕಿ) ಈಗ ಈ ಮಾತನ್ನ ನಾನು ನಂಬೋದಿಲ್ಲ.
ಸರೋಜ : ಅಂದ್ರೆ ನಾನು ಮನೆಗೆ ಬಂದಿದ್ದೇ ಅಂತ್ಲ ನೀವು ಹೇಳೋದು?
ಪ್ರಕಾಶ್ : ಹೌದು.
ಸರೋಜ : ಇಲ್ಲಾರೀ ನಾ ಖಂಡಿತಾ ಬಂದಿರ್ಲಿಲ್ಲ. ಇವೊತ್ತು ಬುಧವಾರ ಅಲ್ವಾ? ಕೈ ತುಂಬಾ ಕೆಲಸ.
ಪ್ರಕಾಶ್ : ಸುಳ್ಳು ಹೇಳಬೇಡ, ಇದು ಕೋರ್ಟಲ್ಲ.
ಸರೋಜ : ಏನು ಹಾಗಂದ್ರೆ?
ಪ್ರಕಾಶ್ : (ಜೇಬಿನಿಂದ ಖಾಲಿ ಬಾಟ್ಲಿ ತೆಗೆದು ತೋರಿಸುತ್ತಾ) ಜ್ಞಾಪಕ ಆಯ್ತಾ? ಏನಾಗಿದೆ ಅಂತಾ ಗೊತ್ತಾಯಿತಾ?
ಸರೋಜ : (ಇನ್ನೂ ಗಾಬರಿಯಿಂದ) ಕುಡಿಯೋದಕ್ಕೂ ಸುರು ಮಾಡಿದಿರಾ? ಅದಕ್ಕೇ ಈ ಥರಾ ಮಾತಾಡ್ತಿರೋದು.
ಪ್ರಕಾಶ್ : ಇದು ನಾನು ಕುಡಿದದ್ದಲ್ಲ.
ಸರೋಜ : ಇನ್ನೇನು, ಬೇರೆಯವರು ಕುಡಿದು ಖಾಲಿ ಮಾಡಿದ್ದನ್ನ ಜೇಬಿಗೆ ಇಟ್ಕೊಂಡು ಬಂದಿರಾ?
ಪ್ರಕಾಶ್ : ಹೌದು ನನಗೆ ಖಾಲಿ ಬಾಟ್ಲಿ, ಸಿಗರೇಟಿನ ತುಂಡು ಕಲೆಕ್ಟ್ ಮಾಡೋ ಹವ್ಯಾಸ ಇದೆ. ಇಗಾ ನೋಡು (ಜೇಬಿನಿಂದ ಸಿಗರೇಟು ತುಂಡು ತೋರಿಸವನು)
ಸರೋಜ : ನೀವು ಮುಂಚಿನಿಂದಲೂ ಸಿಗರೇಟು ಸೇದುತೀರಿ ಅಂತ ನನಗೆ ಅನುಮಾನ ಇತ್ತು.
ಪ್ರಕಾಶ್ : ಎಷ್ಟು ವಿಷಯೊ ತಿಳಕೊಂಡೀಯೆ! ಕಣ್ಣೀರಿನಿಂದ ಮೋಸ ಮಾಡಬಹುದು ಅಂತ್ಲೂ ತಿಳಕೊಂಡಿದ್ದೀ ಅಲ್ವಾ?
ಸರೋಜ : (ಚಕಿತಳಾಗಿ) ಯಾಕೆ ಸುತ್ತೂ ಬಳಸಿ ಮಾತಾಡ್ತೀರಿ? ನೇರಾವಾಗಿ ಮಾತಾಡಬಾರದಾ?
ಪ್ರಕಾಶ್ : ಮಾತಾಡ್ತೀನಿ. ಕೇಳು : ಹೊರಗಡೆ ಕಣ್ಣೀರು ಸುರಿಸುತ್ತಾ ಒಳಗಡೆ ನನ್ನ ಫೂಲ್ ಮಾಡಿ ನಗ್ತಾ ಇದ್ದೀಯ. ಕೊರೆಯೋ ಸತ್ಯಗಳನ್ನ ಒಳಗಿಟ್ಟುಕೊಂಢು ಬೆಚ್ಚನೆಯ ಸುಳ್ಳುಗಳನ್ನ ನನ್ನ ಕಣ್ಣಿಗೆ ಲೇಪಿಸುತ್ತ ಇದ್ದೀಯಾ. ಛೆ! ಪತಿವ್ರತೆ ಆಗೋದು ಈ ದೇಶದಲ್ಲಿ ಎಷ್ಟು ಸುಲಭ, – ಒಂದು ತಾಳಿ, ಹಣೆ ಮೇಲೆ ಕುಂಕುಮ – ಇಷ್ಟು ಮೇಕಪ್ಪಿದ್ದರಾಯ್ತು.
ಸರೋಜ : (ಭಾರಿ ಆಘಾತ ಹೊಂದಿ ಆದರೂ ಕೂಲಾಗಿ) ನಾನು ನಿಮ್ಮನ್ನ ಫೂಲ್ ಮಾಡಿದೆನಾ? ಪತಿವ್ತೆ ಹಾಗೆ ಮೇಕಪ್ ಮಾಡಿಕೊಂಡು ಸುಳ್ಳು ಹೇಳಿದೆನಾ? ನೀವೇನು ಮಾತಾಡ್ತಾ ಇದ್ದೀರಂತ ನಿಮಗ್ಗೊತ್ತಾ? ನನ್ನನ್ನ ನಂಬಿ ಪ್ರಕಾಶ್. ನಿಮ್ಮ ಜೊತೆ ನಾನು ತುಂಬಾ ಮಾತಾಡಬೇಕು. ನಾನೆಲ್ಲ ನಿಮಗೆ ಹೇಳ್ತೇನೆ ಬನ್ನಿ (ಹೋಗಿ ಬಾಗಿಲು ಹಾಕಿಕೊಂಡು ಬರುವಳು).
ಪ್ರಕಾಶ್ : ಇವೊತ್ತು ಯಾರೋ ನನ್ನನ್ನು ಸ್ಕೂಟರ್ ಮೇಲೆ ಫಾಲೋ ಮಾಡ್ತಿದ್ರು.
ಸರೋಜ : (ಗಾಬರಿಯಿಂದ ಹೌಹಾರಿ) ಹಾ! ಯಾರು?
ಪ್ರಕಾಶ್ : ಯಾರಂತ ನಿನಗೇನಾದರೂ ಗೊತ್ತಾ?
ಸರೋಜ : ನಿಮ್ಮನ್ನು ಫಾಲೋ ಮಾಡಿದವರು ನನಗೆ ಹ್ಯಾಗೆ ಗೊತ್ತು?
ಪ್ರಕಾಶ್ : ಕೊಲೆ ಮಾಡ್ತೀವಿ ಅಂತ ಹೆದರಿಸೋ ಫೋನ್ ಬರುತ್ತವೆ. ಕಾಲೇಜಿಗೆ.
ಸರೋಜ : (ಗಕ್ಕನೆ ಪ್ರಕಾಶನನ್ನು ತಬ್ಬಿ ಅಳುತ್ತಾ) ಪ್ರಕಾಶ್ ಪ್ರಕಾಶ್ ನಿಮಗೇನೂ ಆಗಿಲ್ಲ ತಾನೆ?
ಪ್ರಕಾಶ್ : ಕಣ್ಣೀರಿನ ಮಹಾಪೂರದಲ್ಲಿ ಕೊಚ್ಚಿ ಹೋಗ್ತೀನಿ ಅಂದ್ಕೊಂಡ್ಯಾ?
ಸರೋಜ : (ಅದೆ ಗಾಬರಿಯಲ್ಲಿ) ಪೋಲೀಸರಿಗೆ…ಅಥವಾ ಪೋಲೀಸರಿಗೆ ಹೇಳಿದರೆ ಇನ್ನೇನಾಗುತ್ತೋ… ಅಯ್ಯೋ ಏನಾಗ್ತಿದೆ.
ಪ್ರಕಾಶ್ : ತುಂಬಾ ಮಾತಾಡ್ಬೇಕು ಅಂದೆ.
ಸರೋಜ : ನಾನಾ? ಏನಿಲ್ಲವಲ್ಲ….
ಪ್ರಕಾಶ್ : ಈ ಪಿಸ್ತೂಲು ಹ್ಯಗೆ ಬಂತಿಲ್ಲಿ?
ಸರೋಜ : ಪಿಸ್ತೂಲು? ಇಲ್ಲಿತ್ತ? ಹ್ಯಾಗೆ ಬಂತೋ ನನಗೇನು ಗೊತ್ತು? ನೋಡಿ, ಯಾರ್ಯಾರೋ ಏನೇನೋ ಹೇಳಿ ನಿಮ್ಮ ತಲೆ ಕೆಡಿಸಿದಾರೆ, ನಿಜ ನಿಮಗ್ಗೊತ್ತಿಲ್ಲ…
ಪ್ರಕಾಶ್ : ಆಯ್ತು, ಅವರು ಸುಳ್ಳು ಹೇಳ್ತಾರೆ ಅಂತಿಟ್ಕೊಳ್ಳೋಣ. ನಿಜ ಏನಂತ ನೀ ಹೇಳಬಹುದಲ್ಲ?
ಸರೋಜ : ಕಾಲ ಬಂದಾಗ ಹೇಳ್ತೀನಿ.
ಪ್ರಕಾಶ್ : ಇದಲ್ವಾ ಕಾಲ? ಹೇಳೆ, ಇಷ್ಟು ದಿನ ಕುರುಡಾಗಿದ್ದೆ. ಈಗ ನೀನು ಹೇಳೋ ಫಳ ಫಳ ಹೊಳೆಯುವ ಸತ್ಯದಿಂದ ಈ ಪಾಮರನಿಗೆ ಕಣ್ಣಾದರೂ ಬರಲಿ, ಹೇಳು.
ಸರೋಜ : ನಿಮ್ಮ ಬುದ್ಧಿ ಸರಿಯಿಲ್ಲ.
ಪ್ರಕಾಶ್ : ನಿಜ, ಇಲ್ಲೀ ತನಕ ಬುದ್ಧಿಗೆ ರಜಾ ಕೊಟ್ಟಿದ್ದೆ, ಈಗ ನನಗೆಲ್ಲಾ ತಿಳೀತಾ ಇದೆ. ಈಗ ನೀನು ಶಬ್ದ ಮತ್ತು ವೈಯಾರಗಳಿಂಧ ಆಟ ಆಡೋದು ಸಾಧ್ಯ ಇಲ್ಲ ಸರೋಜ. ನನಗೆ ಈಗ ಬುದ್ಧಿ ಬಂದಿದೆ; ಹೇಳಲಾ? ಇದೂ ಇಲ್ಲಿದೆಯಲ್ಲಾ ಇದು ಪಿಸ್ತೂಲು. ನೀನು ನನ್ನ ಹೆಂಡತಿ. ನನಗೆ ಬುದ್ಧಿ ಬಂದ ಬಗ್ಗೆ ಖಾತ್ರಿ ಆಯ್ತಾ? ಅಷ್ಟೇ ಅಲ್ಲ ನೀ ಹೇಳದಿದ್ದರೂ ನಿನ್ನ ಬಗ್ಗೆ ನನಗೆ ನನ್ನದೇ ಆದ ಸ್ವಂತ ಅಭಿಪ್ರಾಯ ಕೂಡ ಇದೆ; ಗೊತ್ತಾ?
ಸರೋಜ : ನೀವು ಗಂಡಸರು, ಬೇಕಾದ್ದರೆ ಬಗ್ಗೆ ಅಭಿಪ್ರಾಯ ಕೊಡಬಲ್ಲಿರಿ.
ಪ್ರಕಾಶ್ : ಹೌದು, ಈಗ ನನ್ನ ಅಭಿಪ್ರಾಯ ಏನಂದರೆ, ನೀನು ಸೂಳೆ! ಯೂ ಆರ್ ಎ ಬಿಚ್.
(ಸರೋಜ ಅಳಲಾರದೆ ಸುಮ್ಮನಿರಲಾರದೆ ಏಳಲಾರದೆ ಎದ್ದು ಪ್ರಕಾಶನೆದುರು ಹೋಗಿ ನೊಂದ ಧ್ವನಿಯಲ್ಲಿ ಹೇಳುತ್ತಾಳೆ)
ಸರೋಜ : ಪ್ರಕಾಶ್, ನೀವಾ ಈ ಮಾತು ಹೇಳಿದ್ದು? ನನ್ನ ಮುಖ ನೋಡಿ…
ಪ್ರಕಾಶ್ : ಥೂ! (ತಿರುಗಿ ನಿಲ್ಲುತ್ತಾನೆ)
ಸರೋಜ : (ಗದ್ಗದಳಾಗಿ) ನನ್ನ ಮುಖ ನೋಡಿ ಹೇಳಿ. ನಾನು ಸೂಳೇನಾ? ಈ ಮಾತು ಯಾರು ಹೇಳಿದ್ದುದು ನಿಮಗೆ?
ಪ್ರಕಾಶ್ : ಹಾಗಾದರೆ ನಾನು ಹೇಳಿದ್ದು ನಿಜ ತಾನೆ? ಹೇಳು : ಶ್ರೀಕಾಂತಜೀ ಕೊಲೆ ಆದ ದಿವಸ ಯಾವ ಬೋಳೀಮಗ ಬಂದಿದ್ದ? ಯಾವನ್ನ ಬೆಡ್ ರೂಮಿನಲ್ಲಿಟ್ಟುಕೊಂಡು ನನ್ನ ಜೊತೆ ಆಟ ಆಡ್ತಿದ್ದೆ? ಯಾ ಬೋಳೀಮಗ ನನ್ನ ಕೊಲ್ತಿನಂತ ಫೋನ್ ಮಾಡ್ತಿದಾನೆ?
ಸರೋಜ : (ಅಳುತ್ತಾ) ಪ್ರಕಾಶ್, ಪ್ಲೀಸ್ ಕೇಳಬೇಡಿ, ನನ್ನ ನಂಬಿ.
ಪ್ರಕಾಶ್ : ಇನ್ನೂ ನಂಬಬೇಕಾ? ನಾನು ಆಫೀಸಿನಲ್ಲಿದ್ದಾಗ ನೀನು ಯಾರ್ದೊ ಜೊತೆ, ಇಲ್ಲಿ ಮನೇಲಿ ಚಕ್ಕಂದ ಆಡ್ತಾ ಇದ್ದರೆ, – ಆಹಾ ನನ್ನ ಮಡದಿ ಎಂಥಾ ಪತಿವ್ರತೆ ಅಂತ ನಂಬಿದೆ. ಸಾಲದಾ? ನನಗೆ ಸಂದೇಹ ಬರದ ಹಾಗೆ ನನ್ನ ಮುಂದೆ ಥರಾವರಿ ವೈಯಾರದ ಆಟ ಆಡಿದೆ. ಆಹಾ ನನ್ನ ಹೆಂಡತಿ ಎಷ್ಟು ಗಾಢವಾಗಿ ಪ್ರೀತಿಸ್ತಾಳೆ ನನ್ನ! ಅಂತ ನಂಬಿದೆ, ಸಾಲದಾ? ಇನ್ನೆಷ್ಟು ನಂಭಬೇಕು? ಅಥವಾ ಅವನು ಮನೆಗೆ ಬಂದೊಡನೆ ಕಂಡೂ ಕಾಣದ ಹಾಗೆ ಹೋಗಿಬಿಡಲಾ?
(ಬೆಡ್ರೂಂ ಕಿಟಕಿಯ ಮೇಲೆ ಯಾರದೋ ನೆರಳು ಸರಿದು ಹೋಗುತ್ತದೆ. ಅದು ಅವಳಿಗೆ ಮಾತ್ರ ಕಾಣಿಸುತ್ತದೆ.)
ಹೇಳೇ ಆ ನಿನ್ನ ಮಿಂಡನ ಹೆಸರು ಹೇಳು.
ಸರೋಜ : (ಅಳುತ್ತಾ) ಪ್ರಕಾಶ್ ದಯವಿಟ್ಟು ಕೇಳಬೇಡಿ. ಆಮೇಲೆ ಒಂದು ದಿನ ಎಲ್ಲ ಹೇಳ್ತೇನೆ. ನನ್ನನ್ನು ನಂಬಿ, ಪ್ಲೀಸ್.
ಪ್ರಕಾಶ್ : ಕಂತು ಕಂತಾಗಿ ಸತ್ಯ ಬೇಡವೆ. ಇಡಿಯಾಗಿ ಈ ಕ್ಷಣವೇ ಬೇಕು.
ಸರೋಜ : ನಾನೆಲ್ಲ ಆಮೇಲೆ ಹೇಳ್ತೇನೆ ಅಂದ್ರೆ ಯಾಕೆ ನಂಬೋದಿಲ್ಲ ನೀವು?
(ಹೋಗಿ ಕುಸಿದು ಕಾಲು ತಬ್ಬಿಕೊಳ್ಳುವಳು. ಪ್ರಕಾಶ್ ಜಿಗುಪ್ಸೆಯಿಂದ ಅವಳನ್ನು ದೂರಕ್ಕೆ ತಳ್ಳಿ ವೇದನೆಯನ್ನು ಸಹಿಸಿಕೊಳ್ಳಲಾರದೆ ತನ್ನ ತಾನೇ ಎಂಬಂತೆ ಆಡಿಕೊಳ್ಳುತ್ತಾನೆ.)
ಪ್ರಕಾಶ್ : ಥೂ ಹೆಣ್ಣೆ, ಸೊನ್ನೆ ತುಂಬಿದ ನನ್ನ ಬಾಳಿಗೆ ಹೊಸ ಬಣ್ಣ ಬಳಿದವಳು ನೀನು ಅಂದುಕೊಂಡೆ. ನನ್ನ ಆತ್ಮಕ್ಕೆ ಹೊಸ ಹುಟ್ಟುಕೊಟ್ಟವಳು ಅಂದುಕೊಂಡೆ. ನನ್ನೆಲ್ಲ ಕನಸುಗಳಿಗಿಮತ ನಿನ್ನೊಂದಿಗಿನ ಒಂದು ಕ್ಷಣದ ಜೀವನ ದೊಡ್ಡದು ಅಂದುಕೊಂಡೆ. ನಿನ್ನ ಸಣ್ಣ ತಕರಾರುಗಳನ್ನು ಪ್ರೀತಿಯ ಗೀತೆ ಮಾಡಿ ಹಾಡಿದೆ. ಸಾಮಾನ್ಯಳಲ್ಲ ನೀನು, ಎಲ್ಲ ಋತುಮಾನಗಳನ್ನು ತೀವ್ರವಾಗಿ ಪ್ರೀತಿಸಬಲ್ಲ ದೇವತೆ. ನಿನ್ನ ಕಣ್ಣಿನಲ್ಲಿ ನೀಲಿ ರತ್ನಗಳಿವೆ. ಪ್ರಪಂಚದ ಎಲ್ಲ ದನಿ ಸಪ್ಪಳಗಳು, ವಾಸನೆ, ಸ್ಪರ್ಶಗಳು, ಬಿಸಿಬಿಸಿಯಾದ ಅರ್ಥಗಳು, ಹೊರಡೋದು ಅಲ್ಲಿಂದ ಅಂದುಕೊಂಡೆ…. ಆದರೆ ಹೆಣ್ಣೇ ನಿನ್ನ ಮುಖ ಯಾವುದೋ! ಬೆನ್ನು ಎಲ್ಲಿದೆಯೋ? ಬೆನ್ನಿನಲ್ಲಿ ಇನ್ನೇನಿದೆಯೋ! ಮುಖದಲ್ಲಿ ನಿನಗೆ ಎರಡೇ ಕಣ್ಣಾದರೆ ಬೆನ್ನಿನಲ್ಲಿ ಸಾವಿರ ಕಣ್ಣು! ಮುಖದ ಕಣ್ಣಿನ ಹೊಳಪಿಗೇ ಕುರುಡಾದವನು, ಬೆನ್ನಿನ ಕಣ್ಣಿಗೆ ಬೆಳಕಿಗೆ ಏನಾಗುವೆನೋ! ದೇವರೇ! ದೇವರೇ! ಈಗ ದೊಡ್ಡ ಮಳೆಯಾಗಿ ಮಳೆಯಲ್ಲಿ ನಿಂತು ನಾನು ನೆನೆಯೋ ಹಾಗಾದರೆ!… ರಪರಪ ಹೊಯ್ದು ಮಳೆಯಲ್ಲಿ ಒದ್ದೆಯಾಗಿ ಬಿದ್ದುಕೊಂಡರೆ!.. ಬಿದ್ದ ನೀರನ್ನು ತುಂಬಿಕೊಂಡು, ಇಡೀ ಹಗಲನ್ನು ಕನ್ನಡಿ ಮಾಡಿ ನನ್ನ ಬಿಂಬ ನೋಡಿಕೊಳ್ಳೊ ಹಾಗಾದರೆ! ಮಳೆ ಬರಲಿ ದೇವರೇ ಮಳೆ ಬರಲಿ!
(ಕುರ್ಚಿಯಲ್ಲಿ ಕುಸಿದು ಮುಖ ಮುಚ್ಚಿಕೊಳ್ಳುವನು. ತುಸು ಹೊತ್ತು ನೀರವ, ಸರೋಜ ಮೆಲ್ಲಗೆ ಎದ್ದು ಬರುವಳು. ಈಗ ಗಂಭೀರವಾಗಿದ್ದಾಳೆ.)
ಸರೋಜ : ಪ್ರಕಾಶ್ ನಿಮಗೆ ಸತ್ಯ ಬೇಕಲ್ಲವೆ?
ಪ್ರಕಾಶ್ : ಹೌದು.
ಸರೋಜ : ಈಗಲೇ ಬೇಕಲ್ಲವೆ?
ಪ್ರಕಾಶ್ : ಹೌದು. ಹೌದು.
ಸರೋಜ : (ಪಿಸ್ತೂಲು ತೆಗೆದುಕೊಂಡು ಅವನ ಕೈಗಿಡುತ್ತಾ) ತಗೊಳ್ಳಿ ನನ್ನನ್ನ ಕೊಂದುಹಾಕಿ.
ಪ್ರಕಾಶ್ : ಓಹೋ! ಪ್ರೇಮಿಗೋಸ್ಕರ ಪ್ರಾಣಾರ್ಪಣೆಯೋ? ನಿನ್ನ ಮಾತಿನ ಕವರಿನಲ್ಲಿ ಏನಿದೆ, ನಾ ಬಲ್ಲೆ ನಿನಗ್ಗೊತ್ತಿದೆ ನಾನಿನ್ನ ಕೊಲ್ಲೋದಿಲ್ಲ ಅಂತ. ನನಗೆ ನಿನ್ನನ್ನು ಕೊಲ್ಲೋ ತಾಕತ್ತಿಲ್ಲ ಅಂತ. ನನ್ನ ಕನಸನ್ನ ನಾನೇ ಕೈಯಾರ ಕೊಲ್ಲಲಾರೆ ಅಂತ. ಆದ್ರೂ ಕೇಳ್ತಾ ಇದ್ದೀ ನೋಡು! ಈ ಬಣ್ಣ ನೀನೇ ಹಚ್ಚಿಕೊಂಡಿದ್ದೋ ಅಥವಾ ಇನ್ಯಾರಾದರೂ ಹಚ್ಚಿದ್ದೋ? ನನ್ನಿಂದಾಗೋಲ್ಲ.
ಸರೋಜ : ಯಾಕಾಗೋಲ್ಲ?
ಪ್ರಕಾಶ್ : ಯಾಕಂದ್ರೆ ನನ್ಹತ್ರ ಇದ್ದಬಿದ್ದದ್ದನ್ನೆಲ್ಲಾ ನಿನ್ನ ಪ್ರೀತಿ ಮೇಲೆ ಪಂದ್ಯ ಕಟ್ಟಿ ಹಾಳಾಗಿದ್ದೀನಿ.
ಸರೋಜ : ನನ್ನನ್ನ ನಾನೇ ಕೊಂದುಕೊಳ್ಳಲಾ?
ಪ್ರಕಾಶ್ : ನಿನ್ನ ಪ್ರೇಮಿಗೋಸ್ಕರ ಪ್ರಾಣ ಕೋಡೋದಕ್ಕೂ ಸಿದ್ಧಳಾಗಿದ್ದೀಯಾ; ನನಗೋಸ್ಕರ ಒಂದು ಸಣ್ಣ ಸತ್ಯ ಹೇಳೋದಕ್ಕೂ ಸಿದ್ಧಳಿಲ್ಲ, ಅಲ್ವಾ? ಇಟ್ಟುಕೊಂಡವ ನಿಜ ನಿನಗೆ, ಕಟ್ಟಿಕೊಂಡವ ನಾನು ಏನೂ ಅಲ್ಲವ? ಛೆ! ಅವನ್ಯಾರೋ ದೊಡ್ಡ ಮನುಷ್ಯನೇ ಇರಬೇಕು. ಪ್ರಾಣ ಕೂಡ ಕ್ಷುದ್ರವಗಿ ಕಾಣೋ ಹಾಗೆ ಪ್ರೀತ್ಸಿದಾನೆ ನೋಡು. ಕೊನೇ ಪಕ್ಷ ಅವನ ಹೆಸರಾದರೂ ಹೇಳು, -ಅವನಿಗೆ ಧನ್ಯವಾದಗಳನ್ನಾದರೂ ಹೇಳ್ತೇನೆ.
ಸರೋಜ : (ಅಳುತ್ತಾ) ಕಾಲಿಗೆ ಬೀಳ್ತೇನೆ ನನ್ನನ್ನ ಒತ್ತಾಯ ಮಾಡಬೇಡಿ ಪ್ರಕಾಶ್,
ಪ್ರಕಾಶ್ : ಹೇಳದಿದ್ರೆ… ಹೇಳದಿದ್ದರೇ ನಾನೇ ಸಾಯ್ತೇನೆ.
(ತಕ್ಷಣ ಪಿಸ್ತೂಲು ತೆಗೆದುಕೊಂಡು ತನ್ನ ಎದೆಗೆ ಗುರಿ ಹಿಡಿದುಕೊಂಡು ನಿಲ್ಲುತ್ತಾನೆ. ಸರೋಜಳಿಗೆ ಆಘಾತವಾಗಿ ಬಿಡಿಸಿಕೊಳ್ಳಲು ಮುಂದೆ ಬರುತ್ತಾಳೆ.)
ಸರೋಜ : ಪ್ರಕಾಶ್.
ಪ್ರಕಾಶ್ : ಒಂದು ಹೆಜ್ಜೆ ಮುಂದೆ ಬಂದ್ರೆ ಸಾಯ್ತೇನೆ.
(ಸರೋಜ ಅಪ್ರತಿಭಳಾಗಿ ನಿಲ್ಲುತ್ತಾಳೆ. ಇಬ್ಬರಲ್ಲೂ ಟೆನ್ಶನ್ ಇದೆ. ಪ್ರಕಾಶ್ ಸಂಕಟವನ್ನನುಭವಿಸಿ ಮೆಲ್ಲಗೆ ಪಿಸ್ತೂಲು ಕೆಳಗೆ ಬಿಡುತ್ತಾನೆ.)
ಪ್ರಕಾಶ್ : ಸಾಯಲಿಕ್ಕೂ ತಾಕತ್ತಿಲ್ಲ ನನಗೆ, ಕೊಲ್ಲೋದಕ್ಕಿಲ್ಲ; ಬದುಕಲಿಕ್ಕೂ ಇಲ್ಲ. ನನ್ನಿಂದೇನೂ ಆಗೋದಿಲ್ಲ. ಈ ಮನೇಲಿರೋದು ಸಾಧ್ಯವಿಲ್ಲ. ಆದರೆ ಇದನ್ನು ಬಿಟ್ಟು ಬೇರೆ ಕಡೆ ಇರೋದೂ ಸಾಧ್ಯ ಇಲ್ಲ. ಇದು ಬಿಟ್ಟು ನನಗೆ ಇರೋದಕ್ಕೆ ಬೇರೆ ಸ್ಥಳ ಬೇಕು. ಆದರೆ ಆ ಸ್ಥಳ ಈ ಜತ್ತಿನಲ್ಲೇ ಇಲ್ಲ.
(ವಿಕಾರವಾಗಿ ಮುಖ ಮಾಡಿಕೊಂಡು ಕುರ್ಚಿಯಲ್ಲಿ ಕುಸಿಯುತ್ತಾನೆ.)
ಸರೋಜ : (ಅಳುತ್ತಾ) ನಾನೇ ಸಾಯ್ತೀನಿ. ಇದಕ್ಕೆಲ್ಲಾ ನಾನೇ ಕಾರಣ. ನಾನು ಸತ್ತರೆ ಇದೆಲ್ಲ ಸರಿಹೋಗುತ್ತದೆ. ನಾನು ಸೂಳೆ ಅಲ್ಲ. ಖಂಡಿತವಾಗಿಯೂ ನಾನು ನಿಮಗೆ ದ್ರೋಹ ಮಾಡಿಲ್ಲ ಪ್ರಕಾಶ್ ….
(ದನಿ ತೆಗೆದು ಅಳುತ್ತಿರುವಾಗ ಫೋನ್ ರಿಂಗಾಗುತ್ತದೆ. ಸರೋಜ ಗಡಿಬಿಡಿಸಿ ಎದ್ದು ಹೋಗಿ ಫೋನೆತ್ತುತ್ತಾಳೆ. ಶೂನ್ಯ ಸ್ಥಳದ ಪಬ್ಲಿಕ್ ಫೋನಿನಲ್ಲಿ ಸಿದ್ದಲಿಂಗೂ ಕಾಣಿಸಿಕೊಳ್ಳುತ್ತಾನೆ.)
ಸಿದ್ದಲಿಂಗು : ಯಾರು? ಸರೋಜಾನ?
ಸರೋಜ : ಹೌದು, ನೀವ್ಯಾರು?
ಸಿದ್ದಲಿಂಗು : ಹ್ಯಾಗಿದೀರಿ ಮೇಡಂ?
ಸರೋಜ : ನಿವ್ಯಾರೂಂದ್ರೆ?
ಸಿದ್ದಲಿಂಗು : ಯಾಕೆ ಗುರ್ತು ಸಿಕ್ಕಿಲ್ವಾ? ನಾನು ನಿಮ್ಮ ಕಥೆಯಲ್ಲಿ ಬರುವ ವಿಲನ್, ಖಳನಾಯಕ! ಹಾಹಾಹಾ ಗೊತ್ತಾಯ್ತಾ ಯಾರೂ ಅಂತ?
ಸರೋಜ : ಸಿದ್ದಲಿಂಗೂ ಏನ್ರೀ!
ಸಿದ್ದಲಿಂಗು : ಈಗ ಗುರ್ತಾಯಿತೋ? ಏನಂತಾನೆ ಹೀರೋ?
ಸರೋಜ : ಥೂ. ನೀವು ಮನುಷ್ಯರೇನ್ರೀ? ನಾವಿಲ್ಲಿ ಗಂಡ ಹೆಂಡ್ತಿ ಪರಸ್ಪರ ಹಿಂಸೆ ಕೊಟ್ಕೊಂಡು ಸಾಯ್ತಾ ಇದ್ದೀವಿ. ನೀವ್ ಬಚಾವ್ ಆಗಿ ಆಹಾಹಾ ಅಂಥ, ನಗ್ತಾ ಇದೀರಿ. ನಿಮಗೆ ನಾಚಿಕೆ ಆಗೋಲ್ವೇನ್ರೀ? ನೀವೇನೇನೋ ಕೆಟ್ಟ ಕೆಲ್ಸ ಮಾಡಿದಕ್ಕೆ ನಾವ್ಯಾಕ್ರೀ ಒದ್ದಾಡಬೇಕು.?
ಸಿದ್ದಲಿಂಗು : ನೀವು ಪ್ರಕಾಶ್ ವಿಷಯ ತಾನೇ ಹೇಳ್ತಾ ಇರೋದು? ಅಯ್ಯೋ ಒಂದು ಪದ್ಯ ಬರೆದರೆ ತಾನೇ ಸರಿಹೋಗ್ತಾನೆ ಬಿಡಿ ಮೇಡಂ.
ಸರೋಜ : ಪದ್ಯ ಬರೆದರೆ ಸಂಸಾರ ಸರಿ ಹಗೋದುಂಟೇನ್ರೀ? ಭಾರಿ ಬುದ್ಧಿಜೀವಿ ಥರಾ ಮಾತಾಡ್ತಿದೀರಿ. ನಮ್ಮ ಸಂಸಾರ ಎಂಥಾ ಪೇಚಿಗೆ ಸಿಕ್ಕೊಂಡಿದೆ ಅಂತಾ ನಿಮಗೇನ್ರೀ ಗೊತ್ತು? ನೋಡಿ ನಮ್ಮ ಸಂಸಾರದಲ್ಲಿ ಹುಳಿ ಹಿಂಡಿದೋರು ನೀವು. ಈಗ ನೀವೇ ಬಂದು ಸರಿಪಡಿಸಬೇಕು. (ಕಿರಚಿ ಅಳುವ ಧ್ವನಿಯಲ್ಲಿ) ಇಲ್ಲದಿದ್ರೆ ನಾನು ಖಂಡಿತಾ ಹುಚ್ಚಿ ಆಗ್ತೇನೆ.
ಸಿದ್ದಲಿಂಗು : ಈಗಾಗ್ಲೆ ಆಗಿದೀರ. ನನ್ನ ಮಾತು ಸ್ವಲ್ಪ ಕೇಳಿ. ನಾನು ಬರೋವಾಗ ನಿಮ್ಮ ಮನೆಯಲ್ಲಿ ನನ್ನ ಪಿಸ್ತೂಲು ಮರೆತು ಬಂದಿದೇನೆ.
ಸರೋಜ : ಅದರಿಂದಲೇ ಇಷ್ಟೆಲ್ಲಾ ಆದದ್ದು.
ಸಿದ್ಧಲಿಂಗು : ಆ ಪಿಸ್ತೂಲು ತೆಗೆದು ಜಾಗ್ರತೆಯಾಗಿ ಯಾರಿಗೂ ತೋರಿಸದೆ ಮುಚ್ಚಿಡಿ. ಏನೇ ಆದರೂ ರುದ್ರಪ್ಪನಿಗೆ ಅದರ ಸುಳಿವು ಹತ್ತಬಾರದು . ಹತ್ತಿದರೆ ನಾವಿಬ್ಬರೂ ನಾಶವಾದ ಹಾಗೆ.
ಸರೋಜ : ನಾನು ಕೇಳ್ತಾ ಇರೋದು, -ನೀವು ಯಾವಾಗ ಬಂದು ನಮ್ಮ ಜಗಳ : ಬಗೆ ಹರಿಸ್ತೀರಿ ಅಂತ?
ಸಿದ್ದಲಿಂಗು : ನಾಳೆ ರಾತ್ರಿ ಎಂಟು ಗಂಟೆಗೆ ಬರ್ತೀನಿ, ಆದೀತಾ?
ಸರೋಜ : ಅಲ್ಲೀ ತನಕ ಪ್ರಕಾಶ್ಗೆ ಏನಾದ್ರೂ ಆದರೆ? ಏನ್ರೀ ಕೊಲೆ ಮಾಡ್ತೀವಿ ಅಂತ ಪ್ರಕಾಶ್ಗೆ ಫೋನ್ ಮಾಡ್ತೀರಾ? ಸ್ಕೂಟರ್ ನಲ್ಲಿ ಫಾಲೋ ಮಾಡ್ತೀರಾ? ಆಶ್ರಯ ಕೊಟ್ಟು ಉಪಕಾರ ಮಾಡಿದ್ದಕ್ಕೆ ಈ ರೀತೀನಾ ನೀವು ಉಪಕಾರ ತೀರಿಸೋದು?
ಸಿದ್ದಲಿಂಗು : (ಚಕಿತನಾಗಿ) ನೋಡಿ, ನಾಳೆ ನಾನು ಇನ್ನೂ ಬೇಗನೆ ಬರ್ತೀನಿ ಆಯ್ತಾ?
ಸರೋಜ : ಅಲ್ಲೀತನಕ ನಾ ಹ್ಯಾಗೆ ಬದುಕಿರಲಿ? ಈಗ ಪ್ರಕಾಶ್ ಕೈಲಿ ಫೋನು ಕೊಡ್ತೀನಿ ಮಾತಾಡಿ.
ಸಿದ್ದಲಿಂಗು : ಎಲ್ಲಾ ನಾಳೆ.
(ಸಿದ್ದಲಿಂಗು ಫೋನಿಟ್ಟು ಮಾಯವಾಗುತ್ತಾಣೆ. ಹಲೋ ಹಲೋ ಎಂದು ಸರೋಜ ಕಿರಚಿ ನಿರಾಶೆಯಿಂದ ಅವಳೂ ಫೋನಿಟ್ಟು ಬರುತ್ತಾಳೆ. ಪ್ರಕಾಶ್ ಅವಳ ಮುಖವನ್ನೇ ನಿರಾಶೆಯಿಂದ ನೋಡುತ್ತಾನೆ. ದುಃಖ ಒತ್ತರಿಸಿ ಬಂದು ಸರೋಜ ಅಳುತ್ತಾ)
ಸರೋಜ : ನಾಳೆ ರಾತ್ರಿ ಎಂಟು ಗಂಟೆಗೆ ಸತ್ಯ ತಿಳಿಯುತ್ತೆ. ನಿಮಗೆ ಸತ್ಯ ತಗಿಳಿಸಿಯೇ ಸಾಯ್ತೇನೆ, ಆಯ್ತಾ? ಅಲ್ಲೀತನಕ ಬದುಕಲಿಕ್ಕೆ ಬಿಡೀಯಪ್ಪ.
(ಎಂದು ಅಳುತ್ತಾ ಬೆಡ್ರೂಮಿಗೆ ಹೋಗಿ ಹಾಸಿಗೆಯ ಮೇಲೆ ಉರುಳಿ ದುಖಿಸುವಳು. ಪ್ರಕಾಶ್ ಮೆಲ್ಲನೆ ರೇಡಿಯೋ ಆನ್ ಮಾಡುವನು.)
ರೇಡಿಯೋದಲ್ಲಿ : ಜನಮತ ಗೆಲ್ಲಲು ವಿಫಲವಾದ ಬಲಪಕ್ಷವು ಸ್ವಾತಂತ್ಯ್ರಾನಂತರ ಮೊದಲ ಬಾರಿಗೆ ರಾಜ್ಯದಲ್ಲಿ ಇಂದು ಅಧಿಕಾರ ಪೀಠದಿಂದ ಕೆಳಗಿಳಿಯಿತು. ಚಿಂಚಿಲೀಪುರದಲ್ಲಿ ಮುಖ್ಯಮಂತ್ರಿ ಶ್ರೀ ಎಸ್.ಎಂ. ನಾಯಕ್ ಅವರು ಸೋತು ಕೂಡಲೇ ಇಂದು ರಾಜೀನಾಮೆ ಸಲ್ಲಿಸಿದರು. ನಾಲ್ಕು ವಿರೋಧಪಕ್ಷಗಳು ಸೇರಿದ ಎಡ ರಂಗವು ಹಲವೆಡೆ ಬಲ ಪಕ್ಷದ ಪ್ರಮುಖರನ್ನು ಬಲಿ ತೆಗೆದುಕೊಂಡು ವಿಧಾನ ಸಭೆಯಲ್ಲಿ ಅತಿ ದೊಡ್ಡ ಪಕ್ಷವಾಗಿ ಉದಯಿಸಿದೆ. ಈವರೆಗೆ ಪ್ರಕಟವಾದ ಇನ್ನೂರ ಮೂವತ್ತು ಸ್ಥಾನಗಳ ಪೈಕಿ ನೂರಾಮೂವತ್ತೆಂಟು ಸ್ಥಾನಗಳನ್ನು ಗಳಿಸಿರುವ ಎಡರಂಗವು ಸರಕಾರ ರಚಿಸುವ ಸನ್ನಾಹದಲ್ಲಿವೆ.
ಚುನಾವಣೆಯಲ್ಲಿ ಸೋಲು ಅನುಭವಿಸಿದ ಮುಖ್ಯಮಂತ್ರಿ ಶ್ರೀ ಎಸ್.ಎಂ. ನಾಯಕ್ ಅವರು ಇಂದು ತಮ್ಮ ರಾಜೀನಾಮೆ ಸಲ್ಲಿಸಿದರು. ಅವರ ರಾಜೀನಾಮೆಯನ್ನು ಅಂಗೀಕರಿಸಿದ ರಾಜ್ಯಪಾಲರು ಮುಂದಿನ ವ್ಯವಸ್ಥೆ ಆಗುವ ತನಕ ಅಧಿಕಾರದಲ್ಲಿ ಮುಂದುವರಿಯಬೇಕೆಂದು ಅವರಿಗೆ ಸೂಚಿಸಿದ್ದಾರೆ. ನಾಲ್ಕು ವಿರೋಧಪಕ್ಷಗಳು ಕೂಡಿದ ಎಡರಂಗದ ನಾಯಕ ಶ್ರೀ ರುದ್ರಪ್ಪ ಅವರು ಇದು ತಮ್ಮ ಪಕ್ಷದ ಜಯವಲ್ಲ ಜನತಾದ ಜಯವೆಂದು ಹೇಳಿದರು. ಆಳುವ ಪಕ್ಷದ ಎಲ್ಲ ಆಮಿಷಗಳನ್ನು ಮೀರಿ ತಮಗೆ ಮತ ನೀಡಿದ ಜನತೆಯನ್ನು ಅವರು ಅಭಿನಂದಿಸಿ ಜನತೆ ತಮ್ಮ ಮೇಲೆ ಇರಿಸಿರುವ ವಿಶ್ವಾಸಕ್ಕೆ ತಾವೆಂದೂ ದ್ರೋಹ ಬಗೆಯುವುದಿಲ್ಲವೆಂದು ಹೇಳಿದರು. ಆಗಲೇ ಬಹುಮತ ಗಳಿಸಿರುವ ಎಡರಂಗದ ಗೆದ್ದು ಬಂದ ಸದಸ್ಯರು ನಾಳೆಯೇ ಸಭೆ ಸೇರಿ, ವಿಧಾನ ಸಭೆಯಲ್ಲಿ ತಮ್ಮ ನಾಯಕನನ್ನು ಆರಿಸುವರೆಂದು ಅವರು ಹೇಳಿದರು.
Leave A Comment