ಈ ನಾಟಕವನ್ನು ನಾನು ಬೆಂಗಳೂರಿನ ಉಪಭಾಷೆಯಲ್ಲಿ ಬರೆದಿರುವುದಕ್ಕೆ ಕಾರಣ ಸ್ಪಷ್ಟವಿದೆ. ಇಲ್ಲಿಯ ಘಟನೆಗಳೆಲ್ಲ, ಅವು ಕಲ್ಪಿತವಾಗಿದ್ದರೂ ಘಟಿಸುವುದು ಬೆಂಗಳೂರಿನಲ್ಲಿ. ಮಧ್ಯಮ ವರ್ಗ ಸ್ಪಷ್ಟವಾಗಿ ಗೋಚರಿಸುವುದೂ ಬೆಂಗಳೂರಿನಂಥ ಸಿಟಿಗಳಲ್ಲಿ. ಈ ನಾಡಿನ ರಾಜಕೀಯ ಚಟುವಟಿಕೆಗಳ ಕೇಂದ್ರವೂ ಇದೇ. ಅಥವಾ ಪೂರ್ತಿ ಓದಿದ ಮೇಲೆ ಯಾರಿಗಾದರೂ ಹೊಳೆಯಬೇಕಾದ ಮಾತಿದು.

ಈ ಘಟನೆಗಳು ಕಾಲ್ಪನಿಕವೆಂದುದರಿಂದ – ಅಸಂಭಾವ್ಯ ಎಂಬಂಥ ದಡ್ಡ ಕಲ್ಪನೆ ಮಾಡಿಕೊಂಡ ವಿಮರ್ಶಕರಿಗೆ ಒಂದು ಮಾತನ್ನಂತೂ ಹೇಳಲೇಬೇಕು. ಫ್ರೆಂಚ್‌ ವಿಂಡೋ (ಇರುವ ಮನೆಗಳು ಈಗೀಗ ಕಡಿಮೆ ಅಥವಾ ಇಲ್ಲ ಅಲ್ಲವೇ? ಹೀಗಿದ್ದಾಗ ಇಂಥದೊಂದು ಘಟನೆ ನಡೆಯುವುದು ಹ್ಯಾಗೆ ಸಾಧ್ಯ-ಇಂಥ ಪ್ರಶ್ನೆ ಕೇಳುವವರಿಗೆ ಏನು ಹೇಳಲಾದೀತು? ಅಂಥದೊಂದು ಮಧ್ಯಮ ವರ್ಗದ ಮನೆ ಇದೆ ಅಂತ ತಿಳಿದು ಮುಂದುವರಿಯಬೇಕು ಅಷ್ಟೆ. ಕಲೆಗಳಲ್ಲಿ ಕಾವ್ಯ ನ್ಯಾಯ ಎನ್ನುವುದೊಂದು ಇರುತ್ತಲ್ಲ?

ಈ ನಾಟಕದಲ್ಲಿ ‘ಮನೆ’ ‘ಮನೆತನ’ ‘ಗೃಹಿಣಿ’ ‘ಗೃಹಸ್ಥ’ – ಈ ಕಲ್ಪನೆಗಳನ್ನು ವ್ಯಾಪಕವಾಗಿ ಬಳಸಿಕೊಂಡಿದ್ದೇನೆ. ಈ ಮನೆಯೊಳಕ್ಕೆ ಮುಂಬಾಗಿಲು ಕಿಟಕಿ, ಫೋನು ಹಾಗೂ ರೇಡಿಯೋಗಳ ಮೂಲಕ ಹೊರ ಪ್ರಪಂಚ ಪ್ರವೇಶಿಸುತ್ತ, ಖಾಸಗಿಯೆಂದು ಭ್ರಮಿಸಿದ್ದ ಮನೆ ಸಾರ್ವಜನಿಕವಾಗುತ್ತ ಹೋಗುತ್ತದೆ. ‘ಹರಕೆಯ ಕುರಿ’ಯ ಬಲಿಯಿಂದ ಈ ಮನೆಯಲ್ಲೊಂದು ಬೆಳಕು ಮೂಡುತ್ತದೆ. ನಮ್ಮ ಬದುಕಿಗೆ ಇದು ಪ್ರಾರಂಭವಾಗಬೇಕು. ಇದು ಲೀ ನಾಟಕದ ಉದ್ದೇಶ.

ಈ ನಾಟಕಕ್ಕೆ ಉಪಯುಕ್ತವಾದ ಮುನ್ನುಡಿ ಬರೆದ ಶ್ರೀ ಕೀರ್ತಿನಾಥ ಕುರ್ತಕೋಟಿ ಅವರಿಗೆ ಆಭಾರಿಯಾಗಿದ್ದೇನೆ. ಇದನ್ನು ಪ್ರಕಟ   ಮಾಡಿದ ‘ಅಂಕಿತ ಪುಸ್ತಕ’ದ ಪ್ರಕಾಶ್‌ ಕಂಬತ್ತಳ್ಳಿ ದಂಪತಿಗಳಿಗೆ , ಮುದ್ರಿಸಿದ ಸ್ವ್ಯಾನ್‌ ಪ್ರಿಂಟರ್ಸ್ ಅವರಿಗೆ ಕೃತಜ್ಞನಾಗಿದ್ದೇನೆ.

– ಚಂದ್ರಶೇಖರ ಕಂಬಾರ