(ಪ್ರಸ್ತಾವನೆ ಆಗಿ ಅರ್ಧ ಗಂಟೆ ಆಗಿದೆ. ಬೆಡ್ರೂಂನಲ್ಲಿ ಲೈಟ್ ಇಲ್ಲ. ಹಾಲಿನಲ್ಲಿ ಮಂದ ಬೆಳಕಿದೆ, ಕಿಚನ್ ರೂಂನಲ್ಲಿ ಸರೋಜ ಅಡಿಗೆ ಮಾಡುತ್ತಿದ್ದು ಈಗವಳು ನೈಟ್ ಗೌನಿನಲ್ಲಿದ್ದಾಳೆ. ರೇಡಿಯೋ ಒಂದು ಹಾಡನ್ನು ಗುಸುಗುಟ್ಟುತ್ತಿದ್ದು ಅದು ಮುಗಿದು ಸುದ್ದಿ ಪ್ರಸಾರ ಸುರುವಾಗುತ್ತದೆ.)

ರೇಡಿಯೋ : ಆಕಾಶವಾಣಿ ಬೆಂಗಳೂರು ಭದ್ರಾವತಿ ಕೇಂದ್ರಗಳಿಂದ. ಸುದ್ದಿ ಪ್ರಸಾರ. ಓದುತ್ತಿರುವವರು ಆಂಜನೇಯಸ್ವಾಮಿ. ಆಳುವ ಬಲ ಪಕ್ಷದ ಅಧ್ಯಕ್ಷ ಶ್ರೀರಾಮದೇವ ಅವರು ಇಂದು ಮಧ್ಯಾಹ್ನ ತಮ್ಮ ಚುನಾವಣಾ ಪ್ರಚಾರ ಕಾರ್ಯವನ್ನು ಧಾರವಾಡದಲ್ಲಿ ಪ್ರಾರಂಭಿಸಿದರು. ಕಡಪ ಮೈದಾನದಲ್ಲಿ ಸೇರಿದ ಬೃಹತ್‌ ಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತ ಈಗ ದೇಶಕ್ಕೆ ಬೇಕಿರುವುದು ಭದ್ರ ಸರ್ಕಾರ ಮತ್ತು ಅಂಥ ಭದ್ರ ಸರ್ಕಾರವನ್ನು ಕೊಡುವುದು ತಮ್ಮ ಪಕ್ಷಕ್ಕೆ ಮಾತ್ರ ಸಾಧ್ಯವೆಂದು ಹೇಳಿದರು. ಎಡರಂಗದ ವಿರೋಧ ಪಕ್ಷಗಳ ಐಕ್ಯ ಕೇವಲ ತಾತ್ಕಾಲಿಕವಾದದ್ದು, ಅವರ ಹತ್ತಿರ ರಚನಾತ್ಮಕವಾದ ಯಾವುದೇ ಕಾರ್ಯಕ್ರಮ ಇಲ್ಲ. ನಮ್ಮ ಪಕ್ಷವನ್ನು ಅಧಿಕಾರದಿಂದ ಇಳಿಸುವುದೊಂದೇ ಅವರ ಗುರಿ ಎಂದು ಹೇಳಿ ಈ ಚೌ ಚೌ ಪಕ್ಷಗಳನ್ನು ಹಿಂದೊಮ್ಮೆ ಅಧಿಕಾರಕ್ಕೆ ತಂದಾಗ ದೇಶ ಎಷ್ಟು ಹಾಸ್ಯಾಸ್ಪದವಾಯಿತೆಂಬುದನ್ನು ಜನ ಮರೆಯಲಾರದೆಂದು ಅವರು ಹೇಳಿದರು….

(ಅಷ್ಟರಲ್ಲಿ ಸರೋಜ ಬಂದು ರೇಡಿಯೋ ಆಫ್ ಮಾಡುವಳು. ಬಾಗಿಲು ಬಡಿದ ಸದ್ದಾಗುತ್ತದೆ. ಸರೋಜ ಇದ್ದಲ್ಲಿಂದಲೇ ಯಾರು?’ ಎಂದು ಕೂಗುವಳು. ಉತ್ತರವಾಗಿ ಮತ್ತೆ ಬಾಗಿಲು ಬಡಿದ ಸಪ್ಪಳ ಕೇಳುವುದು. ಸಾರಿ ಎದ್ದು ಹೋಗಿ ಬಾಗಿಲು ತೆರೆಯುವಳು. ಸರ‍್ರನೆ ಒಬ್ಬ ಎಳೇ ಹುಡುಗ, ಒರಟ ಮತ್ತು ತೀಕ್ಷ್ಣವಾದ ಕಣ್ಣುಳ್ಳವನು, ಒಳನುಗ್ಗಿ ಸರೋಜಳ ಬಾಯಿ ಮುಚ್ಚಿ ಬಿಗಿ ಹಿಡಿದು, ಬಾಗಿಲಿಕ್ಕಿಕೊಳ್ಳುವನು. ಸರೋಜ ಗಾಬರಿಯಿಂದ ಒದ್ದಾಡುತ್ತಾಳೆ. ಮಧ್ಯೆ ಮಧ್ಯೆ ಬಾಯಿ ಬಿಡಿಸಿಕೊಂಡು ಮಾತಾಡುತ್ತಾಳೆ).

ಸರೋಜ : ಯಾರು? ಯಾರು ನೀನು?

ಸಿದ್ದಲಿಂಗು : ಕಿರಚಬೇಡ,

ಸರೋಜ : ಯಜಮಾನ್ರು ಹೊರಗ್ಹೋಗಿದಾರೆ. ನಾ ಪೋಲೀಸರನ್ನ ಕರೀತೀನಿ.

ಸಿದ್ಧಲಿಂಗು : ನಾ ಹೇಳೋದನ್ನ ಕೇಳು. ದಯವಿಟ್ಟು ಕಿರಚಬೇಡ.

ಸರೋಜ : (ಕಿರುಚುತ್ತಾ) ಏನ್ರೀ ಕೇಳೋದು? ಗಂಡಸರಿಲ್ಲದಾಗ ಮನೆಗೆ ನುಗ್ಗಿ ಮತ್ತೆ ನೀವು ಹೇಳಿದ ಹಾಗೆ ಕೇಳ್ಬೇಕಾ? (ಸರೋಜ ಬಿಡಿಸಿಕೊಂಡು ಓಡಿಹೋಗಿ ಫೋನ್ ಎತ್ತುತ್ತಾಳೆ. ಸಿದ್ದಲಿಂಗು ಪಿಸ್ತೂಲು ತೋರಿಸುತ್ತಾನೆ, ಸರೋಜ ಗಾಬರಿಗೊಂಡು ಸ್ತಬ್ಧಳಾಗುತ್ತಾಳೆ).

ಸಿದ್ದಲಿಂಗು : ನಾನು ಹೇಳಿದ ಹಾಗೆ ಕೇಳಿದರೆ ಖಂಡಿತ ಅಪಾಯ ಇಲ್ಲ.

ಸರೋಜ : (ನಡುಗುತ್ತಾ) ನಿನಗೇನು ಬೇಕು?

ಸಿದ್ದಲಿಂಗು : ನಾ ಕಳ್ಳನಲ್ಲ. ಖಂಡಿತ ನನಗೇನೂ ಬೇಡ.  ನೀನು ಸ್ವಲ್ಪ ಸಾವರಿಸಿಕೊಳ್ಳುವುದಾದರೆ ಹೇಳ್ತೀನಿ. ಎರಡು ಗಂಟೆ ಆಶ್ರಯಬೇಕು. ಬಚ್ಚಿಟ್ಟುಕೊಳ್ಳಲಿಕ್ಕೆ ಸ್ಥಳ ಬೇಕು.

ಸರೋಜ : ನಮ್ಮೆಯಜಮಾನ್ರ ಬಂದ ಮೇಲೆ ….

ಸಿದ್ದಲಿಂಗು : ಹೆದರಬೇಡ ….

ಸರೋಜ : ಏನು ಮಾಡಲಿ?

ಸಿದ್ದಲಿಂಗು : ಹೇಳ್ಲಿಲ್ಲವೇ, ಏನೂ ಮಾಡ್ಬೇಡ ಅಂತ. (ಮೆಲ್ಲನೆ ಅವಳು ಬಾಗಿಲ ಕಡೆಗೆ ಹೋಗುತ್ತಿದ್ದಾಗ ಅವಳನ್ನು ಹಿಡಿದು ಕೈಕಟ್ಟಿ ಕುರ್ಚಿಯಲ್ಲಿ ಕುಕ್ಕರಿಸುವಂತೆ ಮಾಡಿ)

ಸಿದ್ದಲಿಂಗು : ಹೆದರ್ಕೊ ಬೇಡ . ನನಗೆ ನಿನ್ನ ವೈಯಾರದ ಮೈ ಬೇಡ, ನಿನ್ನ ಉಮಾ ಗೋಲ್ಡ್‌ ಬಳೆ ಬೇಡ. ದುಡ್ಡು ಖಂಡಿತಾ ಬೇಡ . ನನ್ನ ಹೆಸರು ಸಿದ್ದಲಿಂಗೂ ಅಂತ. ನಾನೂ ಖ್ಯಾತನೆ. ಒಂದೆರಡು ಗೂಂಡಾಗಿರಿ ಕೇಸಿನಲ್ಲಿ ಸಿಕ್ಕಿಬಿದ್ದು ಪೇಪರ್ ನಲ್ಲಿ ನನ್ನ ಹೆಸರೂ ಫೋಟೋ ಬಂದಿತ್ತು. ನೆನಪಿದೆಯಾ? (ಹೆದರಿಕೆಯಿಂದ ಕತ್ತು ಹಾಕುವಳು) ಹಾಗಿದ್ದರೆ ನೀನು ಸಹಕರಿಸುವುದಕ್ಕೆ ಅದು ಸಹಾಯ ಮಾಡಬೇಕು. ಇಲ್ಲಿ ಕೇಳು, ಯಾರನ್ನೊ ಖೂನಿ ಮಾಡಿ ಬಂದಿದೀನಿ. ಎರಡು ಗಂಟೆ ಬಚ್ಚಿಟ್ಟುಕೊಂಡಿರ್ತೀನಿ. ರಾತ್ರಿ ಹನ್ನೊಂದಕ್ಕೆ ನನ್ನ ಪಾಡಿಗೆ ನಾನು ಹೊರಟ್ಹೋಗ್ತೀನಿ. ಅಲ್ಲೀತನಕ ಮುಚ್ಚಕೊಂಡು ಬಿದ್ಕೊ  (ಜನರ ಓಡಾಟ ಒಮ್ಮೆ ಹತ್ತಿರ, ಒಮ್ಮೆ ದೂರ ಕೇಳಿಸುತ್ತದೆ. ಸಿದ್ದಲಿಂಗು ಎಚ್ಚರಿಕೆಯಿಂದ ಕೇಳುತ್ತಾನೆ. ಅದು ಹೊರ ಹೋಗಿ ಅಪಾಯವಿಲ್ಲವೆಂದಾಗ ಅವಳ ಕಡೆ ತಿರುಗುತ್ತಾನೆ. ಅವಳು ಚಡಪಡಿಸುತ್ತಿದ್ದಾಳೆ.)

ಸರೋಜ : ನಾನು ಕಿರಚೋದಿಲ್ಲ, ಕೈ ಬಿಡು.

ಸಿದ್ದಲಿಂಗು : (ಸ್ವಲ್ಪ ನೆಮ್ಮದಿಯಿಂದ) ವಿಧಾನ ಸೌಧದಲ್ಲಿ ಕೆಲಸಕ್ಕಿದ್ದವಳು, ಸಾಮಾನ್ಯ ಹುಡುಗಿ ಅಲ್ಲ ನೀನು. ನಿನ್ನ ಗಂಡ ಬರೋ ಟೈಂ ಆಯ್ತು. ಗಂಡ ಬಂದ ಕೂಡಲೆ ತಬ್ಬಿಕೊಂಡು ಕಳ್ಳ ಹೇಗೆ ಬಂದ, ಹ್ಯಾಗೆ ಕೈ ಬಾಯಿ ಕಟ್ಟಿದ, ಆದರೂ ನಿನ್ನ ಪಾತಿವ್ರತ್ಯ ಹ್ಯಾಗೆ ಉಳಿಸಿಕೊಂಡೆ ಅಂತ ಸೀನ್‌ ಮಾಡೊ ಪೈಕಿ ಅಲ್ಲ ನೀನು. ಅಥವಾ ಲೈಟ್‌ ಆರಿಸಿ ಗಂಡನ ಮೈ ಮೇಲೆ ಬೆರಳಾಡಿಸುತ್ತ ಇಂದಿನ ಗೂಂಡಾಗಿರಿ ಬಗ್ಗೆ ಹೇಳೋ ಪೈಕೀನೋ ಅಲ್ಲ. ತುಂಬಾ ಜಾಣೆ ನೀನು. ಇನ್ನೂ ಜಾಣೆಯಾಗೊ ಅವಕಾಶ ಇದೆ-ನನ್ನ ಮಾತು ಕೇಳೋದಾದರೆ,-

ಸರೋಜ : ನಿನ್ನಿಂದ ನಾನು ಕಲಿಬೇಕಾದ್ದೇನಿಲ್ಲ.

ಸಿದ್ಧಲಿಂಗು : ಅದ್ರೂ ಹೆದರ್ಕೊಂಡಿದ್ದೀಯಾ, ಹೇಳಿದೇನೆ : ನನ್ನಿಂದ ಅಪಾಯ ಇಲ್ಲ. ಹೇಳಿದ ಹಾಗೆ ಕೇಳದಿದ್ದರೆ ಈ ಪಿಸ್ತೂಲಿನಷ್ಟೇ ಅಪಾಯಕಾರಿ ನಾನು. ಮೆಲ್ಲಗೆ ಮಾತಾಡು. ಮತ್ತು ಮಾತಾಡಿದ್ದನ್ನು ಕೇಳು. ನಾ ಇಲ್ಲಿ ಬಂದದ್ದನ್ನು ಯಾರಿಗೂ ಹೇಳಕೂಡದು.

ಸರೋಜ : (ಕಿರುಚಿ ಮಾತಾಡುತ್ತ) ಯಾಕೆ ಹೇಳಬಾರದು? ಹೇಳತೀನಿ. (ಸಿದ್ದಲಿಂಗು ಹೋಗಿ ಕೆನ್ನೆಗೆ ಬಾರಿಸಿ ಮತ್ತೆ ಬಾಯಿ ಕಟ್ಟುವನು.)

ಸಿದ್ಧಲಿಂಗು : ನನ್ನ ಮಾತು ನಂಬು. ನೀನು ಕಿರುಚಿದರೂ ಅಕ್ಕಪಕ್ಕ ಯಾರಿಗೂ ಕೇಳಿಸೋದಿಲ್ಲ. ಕೇಳಿಸ್ಕೊಂಡ್ರೂ ಯಾರು ಬರೋದಿಲ್ಲ. ಬಂದರೆ ನಡೆದದ್ದನ್ನು ಹೇಳೋದಕ್ಕೆ ನೀನು ಜೀವಂತ ಇರೋದಿಲ್ಲ. ಅರ್ಥವಾಯಿತಾ? (ಕತ್ತು ಹಾಕುವಳು.) ಈಗ ಕೇಳು : ನಿನ್ನ ಗಂಡ ಬರ್ತಾನೆ. ನಾನು ಬೆಡ್‌ ರೂಂನಲ್ಲಿರ್ತೀನಿ ಈಗಷ್ಟೇ ಕಾಲೇಜ್‌ ಗ್ರೌಂಡ್‌ನಲ್ಲಿ ಕೊಲೆಯಾಗಿದೆ. ಆ ದಿಗಿಲಿನಲ್ಲೇ ಬಂದು, ಕೊಲೆ ಹ್ಯಾಗಾಯ್ತು, ಯಾರು ಮಾಡಿದರು, ರೂಲಿಂಗ್‌ ಪಾರ್ಟಿ ನೀಚತನ, ಜನರ ಷಂಡತನ-ಅಯ್ಯೊ ದೇಶ ಎಲ್ಲಿಗೆ ಬಂತು-ಅಂತೆಲ್ಲಾ ಮಾತಾಡ್ತಾನೆ ಏನ್‌ ಕೇಳೋಕ್ಕೂ ನಿನಗೆ ಬಿಡೋದೇ ಇಲ್ಲ ಅವನು. ನಾನು ಬೆಡ್‌ ರೂಂನಲ್ಲಿರೋದರಿಂದ ನಿನಗೆ ಭಯ, ಆತಂಕ ಇದ್ದೇ ಇರುತ್ತೆ. ಆತ ಕೊಲೆ ಅಂದ ಕೂಡಲೇ ಕಣ್ಣು ಅಗಲ ಮಾಡಿರ್ತೀಯಲ್ಲ, ಹಾಗೆ ಇಟ್ಕೊಂಡಿರು. ಕೊಲೆ ಸುದ್ದಿ ಕೇಳಿ ಎಷ್ಟು ಗಾಬರಿ ಆದಳಲ್ಲಾ-ಆಹಾ ಎಂಥ ಕೋಮಲೆ ನನ್ನ ನಲ್ಲೆ ಅಂದ್ಕೊಂಡು ಸುಮ್ಮನಾಗ್ತಾನೆ. ಈಗ ಯಾರಿಗೂ ಅಪಾಯ ಇಲ್ಲ. ಅದು ಬಿಟ್ಟು ಒಳಗೆ ಯಾರೋ ಇದಾರೆ ಅಂತ ಸನ್ನೆ ಮಾಡಿದೆ ಅಂತ ಇಟ್ಟುಕೊ. ಅವನೂ ಬೆಡ್‌ ರೂಂಗೆ ಬರೋದಕ್ಕೆ ನೋಡ್ತಾನೆ. ನಾನು ಬಾಗಿಲು ಬೋಲ್ಟ್‌ ಹಾಕೋದಿಲ್ಲ. ಅವನೇನಾದರೂ ಒಳಗೆ ಬಂದರೆ ನೋಡು ಒಂದೇ ನಿಮಿಷದಲ್ಲಿ ನೀನು ವಿಧವೆ ಆಗ್ತೀಯಾ, ಹುಷಾರ್, ಅರ್ಥವಾಯಿತಾ? (ಕತ್ತು ಹಾಕುವಳು) ಬೋಲ್ಟ್‌ ಯಾಕೆ ಹಾಕೋದಿಲ್ಲ ಗೊತ್ತಾ? ಬಾಗಿಲು ತೆಗೆಸೋದಕ್ಕೆ ನೀವು ಅಕ್ಕಪಕ್ಕದ ಜನರನ್ನ ಕರೆತರಬಹುದು. ಒಂದು ದಿನದಲ್ಲಿ ಅನೇಕರನ್ನ ಕೊಲ್ಲೋದಕ್ಕೆ ನನಗೆ ಇಷ್ಟ ಇಲ್ಲ. ನಿನ್ನ ಮೇಲೆ ನನಗೆ ನಂಬಿಕೆ ಇದೆ. ಬೋಲ್ಟ್‌ ಹಾಕೋದಿಲ್ಲ. ಆದರೂ ರಾತ್ರಿ ಹನ್ನೊಂದು ಗಂಟೆ ತನಕ ಇಬ್ಬರ ಪೈಕಿ ಯಾರಾದರೂ ಹೊರಗಡೆ ಅಥವಾ ಬೆಡ್‌ರೂಮಿಗೆ ಬಂದರೆ-ಅಪಾಯ ತಪ್ಪಿದ್ದಲ್ಲ. ಇನ್ನೊಂದು ಸಾರಿ ಹೇಳ್ತೇನೆ. ನಿನ್ನ ಮೇಲೆ ನಂಬಿಕೆ ಇದೆ. ಏಳಬೇಡ ಅಲ್ಲೇ ಕೂತ್ಕೋ (ಬಾಯಿ ಬಿಚ್ಚುವನು).

ಸರೋಜ : (ಅಳುತ್ತಾ) ನಿಮ್ಮ ದಮ್ಮಯ್ಯ ಅಂತೀನಿ. ನಮ್ಮ ಪಾಡಿಗೆ ನಮ್ಮನ್ನು ಬಿಟ್ಟು ನೀವು ಹೊರಟ್ಹೋಗಿ ಇಲ್ಲಿಂದ.

ಸಿದ್ದಲಿಂಗು : ಖಂಡಿತ ಹೊರಟ್ಹೋಗ್ತೀನಿ. ಆ ತನಕ ಮತ್ತು ಆಮೇಲೂ ಈ ಗುಟ್ಟು ಕಾಪಾಡೋದು ನಿನ್ನ ಹೊಣೆ. ಇಷ್ಟು ಸಭ್ಯನಾಗಿ ನಾನೆಲ್ಲೂ ನಡೆದುಕೊಂಡಿಲ್ಲ ಗೊತ್ತಾ? ನನಗೆ ಥ್ಯಾಂಕ್ಸ್‌ ಹೇಳಬೇಕು ನೀನು.

ಸರೋಜ : ಥ್ಯಾಂಕ್ಸ್‌. ದಯವಿಟ್ಟು ಇನ್ನು ಹೊರಡ್ತೀರಾ? ಬೇಕಾದರೆ ಕಿಟಕಿಯಿಂದ ಹಾರಿ ಹೋಗಿ; ನನಗೆ ಭಯ ಆಗ್ತಿದೆ.

ಸಿದ್ದಲಿಂಗು : (ಬೆಡ್ರೂಮಿನ ಕಿಟಕಿ ಬಳಿ ಹೋಗಿ ಬಾಗಿಲು ತೆಗೆದು ಹೊರಗೆ ಇಣುಕುವನು) ಉಪಾಯವೇನೋ ಒಳ್ಳೆಯದೆ. ಆದರೂ ಜನರ ಸುಳಿವು ಕಮ್ಮಿ ಆಗೋತನಕ ನಾನು ಹೊರಗಡೆ ಹೋಗೋ ಹಾಗಿಲ್ಲ. ಇನ್ನೊಂದು ಮಾತು, ಥೂ ಅಳಬೇಡ. ನೀನೇ ಕೊಲೆ ಮಾಡಿದ ಹಾಗೆ ಆಡ್ತೀಯಲ್ಲ. ಚಿನ್ನದ ಬಳೆ, ವಿಧಾನಸೌಧ, ನರಪೇತಲ ಗಂಡ ಬಿಟ್ಟರೆ ನಿನಗೇನೂ ಗೊತ್ತಿಲ್ಲ. ನಿಮ್ಮಂಥೋರು ಇರೋದರಿಂದಲೇ ದೇಶ ಕೊಳೀತಾ ಇರೋದು. ನಿನ್ನ ಮುಖದಲ್ಲಿ ಸರಿಯಾದ ಸಿಟ್ಟು ಕೂಡ ಕಾಣಿಸೋದಿಲ್ಲ. ಇಲ್ಲಿ ಕೇಳು. ನಾ ಇಲ್ಲಿ ಬಂದಿರೋದು ಕೊಲೆಮಾಡಿ-

ಸರೋಜ : (ಅಳುತ್ತಾ) ಗೊತ್ತು.

ಸಿದ್ದಲಿಂಗು : ಏನು ಗೊತ್ತು? ನಾನು ಮಾಡಿರುವುದಕ್ಕೆ ಹೆಸರು ರಾಜಕೀಯ ಕೊಲೆ. ನಟಸಾರ್ವಭೌಮ ಶ್ರೀಕಾಂತಜೀಯ ಹೆಸರು ಕೇಳಿದ್ದೀಯಾ ಮರಿ?

ಸರೋಜ : ಅವನ ಕೊಲೆ ಮಾಡಿದೆಯಾ?

ಸಿದ್ದಲಿಂಗು : ಹೌದು.

ಸರೋಜ : ಅದಕ್ಕೆ ನೀನು ನಮ್ಮ ಮನೆಗೆ ಯಾಕೆ ಬರಬೇಕು?

ಸಿದ್ದಲಿಂಗು : ಕಾರಣ ಇದೆ. ಕೊಲೆ ಮಾಡಿದ ಮೇಲೆ ಎಲ್ಲಿಗೆ ಹೋಗಬೇಕಂತ ನನ್ನ ಕಾಲಿಗೆ ಗೊತ್ತಿತ್ತು. ಗಂಡ ಹೆಂಡತಿ; ಮಧ್ಯಮ ವರ್ಗದ ಉಗುರು ಬೆಚ್ಚಗಿನ ಸಂಸಾರ. ನಿಮಗೆ ದೊಡ್ಡಧೈರ್ಯ ಇಲ್ಲ. ದೊಡ್ಡ ನಿರಾಶೆ ಇಲ್ಲ. ಒಬ್ಬರ ತಂಟೆ ತಕರಾರಿಲ್ಲ. ನಿಮ್ಮ ಬಗ್ಗೆ ಯಾರೂ ಆಡಿಕೊಳ್ಳೋದಿಲ್ಲ. ಎಲ್ಲಾ ಸುವರ್ಣ ಮಾಧ್ಯಮ. ಪೌರನೀತಿಯ ಎಲ್ಲಾ ಪಾಠಗಳನ್ನ ಉರುಹೊಡೆದು ಅನುಸರಿಸುವಂಥ ಸತ್ಪ್ರಜೆಗಳು ನಈವು. ಈ ಚಿಕ್ಕ ಮತ್ತು ಚೊಕ್ಕ ಸಂಸಾರದದೇ ಒಂದೇ ಒಂದು ಕೊರತೆ ಅಂದ್ರೆ ಸಂತಾನ ಸೌಭಾಗ್ಯ. ಅದಕ್ಕೂ ನಿನ್ನ ಗಂಡ ಕಷ್ಟಪಡಬೇಕಾಗಿದ್ದಿಲ್ಲ. ತುಂಬಾ ಫಲಭರಿತವಾಗಿದ್ದೀಯ. ದೇಶಕ್ಕೇನಾದರೂ ಸಂಭವಿಸಿದರೆ ನಿಮಗೇನೂ ಆತಂಕವಾಗೋದಿಲ್ಲ. ನೀವು ದಿನಾ ಪೇಪರ್ ಓದೋದು ಡಿ.ಎ. ಜಾಸ್ತಿ ಆಯ್ತಾ? ಸೆಂಟ್ರಲ್‌ ಡಿ.ಎ. ಕೊಟ್ರಾ? ಅಂತ ನೋಡೋದಕ್ಕೆ ಇಲ್ಲಿ ನಾನು ಅಡಗಿದರೆ ಪೋಲೀಸಿನೋರು ಇರಲಿ, ಅಕ್ಕಪಕ್ಕದವರಿಗೂ ಅನುಮಾನ ಬರುವುದಿಲ್ಲ.

ಸರೋಜ : (ಜೋರಾಗಿ) ನಾವೆಂಥವರು ಅಂತ ನೀವೇನೂ ಜಾಸ್ತಿ ಮಾತಾಡೋ ಅಗತ್ಯ ಇಲ್ಲರಿ.

ಸಿದ್ದಲಿಂಗು : ಸಾಧ್ಯವಾದರೆ ಯಾರಿಗಾದರೂ ಕೇಳಿಸಲಿ ಅಂತ ತಾನೇ ನೀನು ಜೋರಾಗಿ ಮಾತಾಡೋದು? ನಿನ್ನ ಗಂಡ ಬರೋದಕ್ಕೆ ಇನ್ನೂ ಐದು ನಿಮಿಷ ಇದೆ. ಅಲ್ಲೀತನಕ ನಿನಗೆ ಮನರಂಜನೆ ಸಿಗಲೀ ಅಂತ ಮಾತಾಡುತ್ತಿದ್ದೇನೆ. ಹೇಳು ನೋಡೋಣ, ಸಟಸಾರ್ವಭೌಮನ ಕೊಲೆ ಮಾಡಿಸೋಕೆ ನನ್ನನ್ನ ಯಾರು ಕಳುಸಿರಬಹುದು?

ಸರೋಜ : ಯಾರು ಕಳುಹಿಸಿದರೆ ನನಗೇನಾಗಬೇಕಾಗಿದೆ?

ಸಿದ್ದಲಿಂಗು : ಏನೂ ಆಗಬೇಕಾಗಿದ್ದಿಲ್ಲ? ರೂಲಿಂಗ್‌ ಪಾರ್ಟಿ ಯಾರು? ವಿರೋಧ ಪಾರ್ಟಿ ಯಾರು? ಎಲೆಕ್ಷನ್‌ನಲ್ಲಿ ಇಬ್ಬರೂ ಕೊಡೋ ಭರವಸೆಗಳೇನು? ಈಡೇರಿಸೋದೇನು?-ಏನೂ ಬೇಕಿಲ್ವ? ಸರೋಜ, ನೀನು ನನಗೆ ತುಂಬಾ ನಿರಾಶೆ ಮಾಡ್ಡೆ ಆರ್ಡಿನರಿ. ಯೂ ಆರ್ ವೆರಿ ಆರ್ಡಿನರಿ.

ಸರೋಜ : ನಮ್ಮೆ ಜಮಾನ್ರು ಬರೋತನಕ ನಾ ಹೊರಗಡೆ ನಿಂತಿರಲಾ?

ಸಿದ್ಧಲಿಂಗು : ಕುಂತ್ಕಳೆ ಸಾಕು, ಕೇಳು : ಸ್ವಲ್ಪ ಕಾಮನ್‌ಸೆನ್ಸ್‌ ಆದರೂ ಜಾಸ್ತಿ ಆಗಲಿ. ಶ್ರೀಕಾಂತಜೀ ಕೊಲೆ ಮಾಡೋದಕ್ಕೆ ನನ್ನನ್ನು ಕಳುಹಿಸಿದವರು ನೀನಂದುಕೊಂಡ ಹಾಗೆ ರೂಲಿಂಗ್‌ ಪಾರ್ಟಿ ಜನ ಅಲ್ಲ. ಶ್ರೀಕಾಂತಜೀ ಪಾರ್ಟಿಯವರೆ, ಯಾಕೆ ಅಂತ ಕೇಳು,

ಸರೋಜ : (ದುಃಖದಿಂದ ಯಾಕೆ?)

ಸಿದ್ಧಲಿಂಗು : ಶ್ರೀಕಾಂತಜೀನ್ನ ಯಾರು ಕೊಲೆ ಮಾಡಿದ್ದರೂ ರೂಲಿಂಗ್‌ ಪಾರ್ಟಿಯವರೇ ಕೊಲೆ ಮಾಡಿರ್ತಾರೆ ಅಂತ ಜನ-ನಿಮ್ಮಂಥ ಆರ್ಡಿನರಿ ಜನ ನಂಬ್ತಾರೆ, ಅವರ ಸಹಾನುಭೂತಿ ಸಹಜವಾಗಿ ಆಪೋಸಿಟ್‌ ಪಾರ್ಟಿ ಮೇಲೆ ಉಂಟಾಗುತ್ತೆ. ರುದ್ರಪ್ಪನ ಪಾರ್ಟಿಗೆ ಜನ ಓಟು ಹಾಕ್ತಾರೆ. ರೂಲಿಂಗ್‌ ಪಾರ್ಟಿ ಬೀಳುತ್ತೆ : ಆಪೋಸಿಟ್‌ ಪಾರ್ಟಿ ಅಧಿಕಾರಕ್ಕೆ ಬರುತ್ತೆ (ಸರೋಜ ಚಕಿತಳಾಗುತ್ತಾಳೆ) ಇವೆಲ್ಲ ರಾಜಕೀಯ ತಂತ್ರ ಅಂತಿಟ್ಕೊ.

ಸರೋಜ : ನನಗೆ ನಿಮ್ಮ ರಾಜಕೀಯ ಬೇಕಿಲ್ಲ.

ಸಿದ್ದಲಿಂಗು : ಒದರಬೇಡ; ನಿನ್ನ ಮನರಂಜನೆಗೆ ನನ್ನಲ್ಲಿನ್ನೂ ಸರಕಿದೆ. ನೀನು ಏನೇನೋ ಇಲ್ಲಿ ನಡೆದದ್ದನ್ನು ಹೇಳಿದೆ. ಅಂತಿಟ್ಕೊ. ನಾಳಿ ನಿನ್ನ ಗಂಡ ನಿನ್ನ ಮಾತನ್ನ ನಂಬಿದ ಅಂತಾನೂ ಇಟ್ಕೊ. ಇಬ್ಬರೂ ಕೂಡಿಕೊಂಡು ಪೋಲೀಸ್‌ ಸ್ಟೇಷನ್‌ಗೆ ಹೋಗ್ತೀರಿ. ಶ್ರೀಕಾಂತಜೀ ಕೊಲೆ ಮಾಡಿದ ಸಿದ್ದಲಿಂಗು ನಿನ್ನೆ ನಮ್ಮ ಮನೆಗೆ ಬಂದಿದ್ದ, ಹಾಗಿದ್ದ ಹೀಗಿದ್ದ – ಅಂತ ವರ್ಣನೆ ಮಾಡ್ತೀರಿ.. ಏನಾಗುತ್ತೆ ಹೇಳ್ಳಾ? ಪೋಲೀಸ್‌ ಇನ್‌ಸ್ಪೆಕ್ಟರ್ ಶಾಂತವಾಗಿ ಎಲ್ಲ ಕೇಳ್ಕೋತಾನೆ. ಆಮೇಲೆ ಕೂಲಾಗಿ ಹೇಳ್ತಾನೆ ‘ಎಸ್‌. ಮಿಸ್ಟರ್ ಪ್ರಕಾಶ್‌. ತುಂಬಾ ದಿನದಿಂದ ನಾವು ನಿಮ್ಮ ಮೇಲೆ ಕಣ್ಣಿಟ್ಟಿದ್ದೀವಿ. ಈಗ ನೀವಾಗೇ ಬಂದಿದೀರಿ. ಒಳ್ಳೆಯದಾಯ್ತು. ಈಗ ಸಿದ್ದಲಿಂಗೂನ ಹಿಡಿದುಕೊಡ್ತೀರೋ, ಇಲ್ಲ ನೀವೇ ಜೈಲು ಸೇರ್ತೀರೊ. ನಿನಗೆ ಗೊತ್ತಿಲ್ಲ ಹುಡುಗಿ. ಪೋಲೀಸಿನವರಿಗಾಗಲೇ ಆಪೋಸಿಟ್‌ ಪಾರ್ಟಿನೇ ಗೆಲ್ಲೋದು ಅಂತ ಗೊತ್ತಾಗಿದೆ. ಅವರಾಗಲೆ ರುದ್ರಪ್ಪನಿಗೆ ಸಾಮೀಲಾಗಿದಾರೆ.

ಸರೋಜ : ಈಗ ನನ್ನನ್ನೇನು ಮಾಡೂಂತೀರಿ?

ಸಿದ್ದಲಿಂಗು : ಕಥೆ ಕೇಳು, ಪಾಪ ನೀನು ತುಂಬ ಕೋಮಲೆ. ನೊಂದೆಯಾ ಚಿನ್ನಾ? ನಾ ಹೇಳೋದೆಲ್ಲ ನಿನ್ನ ಹಿತಕ್ಕಾಗಿ. ಈ ಕಥೆ ಕೇಳು : ಇದು ಶ್ರೀಕಾಂತನಿಗೇನಾದರೂ ಸಿಕ್ಕಿದ್ದರೆ ತಕ್ಷಣ ಸಿನೇಮಾ ಮಾಡಿಬಿಡ್ತಿದ್ದ. ಬೇಕಾದರೆ ಹಕ್ಕು ಬಿಟ್ಕೊಡ್ತೀನಿ, ನಿನ್ನ ಗಂಡನ ಹೆಸರಿಂದ ಅಚ್ಚು ಹಾಕಿಸು. ಕಥೆ ಹೀಗಿದೆ : ಸಿನೇಮಾ ನಡೀತಿದೆ ಅಂತಿಟ್ಕೊ. ನಿನ್ನ ಹಾಗೆ ಮಧ್ಯಮ ವರ್ಗದ ಒಬ್ಬ ಹೆಂಗಸು. ಹುಡುಗಿ ಅನ್ನು. ಮಕ್ಕಳಿಲ್ಲ, ಚೆಲುವೆ ಕಣ್ಣೊಳಗಿನ ಹನಿಮೂನಿನ್ನೂ ಮಾಸಿಲ್ಲ, ಗಂಡ ಹೊರಗಡೆ ಹೋಗಿದಾನೆ, ಮನೇಲಿ ಒಬ್ಬಳೆ. ರಾತ್ರಿ ಎಂಟು ಗಂಟೆಯ ಸಮಯ. ನಮ್ಮ ಕಥಾನಾಯಕಿ ಸಿನಿಮಾ ಹಾಡು ಗುನುಗುತ್ತಿರುವಳು. ಅಷ್ಟರಲ್ಲಿ ಬಾಗಿಲು ನಾಕ್ಕಾಯಿತು. ಹೋಗಿ ಬಾಗಿಲು ತೆರೀತಾಳೆ, ಒಬ್ಬ ಕಳ್ಳ! ನನ್ನಂಥವನು, ಕೊಲೆಗಾರ ಅಂದುಕೊ, ನುಗ್‌ತಾನೆ! ಬಾಗಿಲು ಹಾಕ್ಕೋತಾನೆ, ಎಲ್ಲಾ ಇವತ್ತಾದ ಹಾಗೆ. ಪ್ರೇಕ್ಷಕರು ಅಂದ್ಕೊತಾರೆ; ಹುಡ್ಗೀನ್ನ ಕಟ್ಟಿಹಾಕಿ ಈ ನನ್ಮಗ ಕದೀತಾನೆ ಅಂತ. ಅವನು ಕದಿಯೋದೇ ಇಲ್ಲ. ಈಗ ಅಂದ್ಕೊಳ್ತಾರೆ : ಕೊನೇಪಕ್ಷ ಅವನು ಅವಳನ್ನ ರೇಪ್‌ ಮಾಡ್ತಾನೆ ಅಂತ, ಅವನು ಅದೂ ಮಾಡೋದಿಲ್ಲ. ಜನಕ್ಕೆ ಬೋರಾಗಿ ಆಕಳಿಸ್ತಾರೆ. ಇವೆನೆಂಥ ಕಳ್ಳಬಡ್ಡಈ ಮಗನೊ? ಏನೂ ಮಾಡೋದೇ ಇಲ್ಲ ಅಂತಾರೆ. ಇನ್ನೇನು ಹೊರಗಡೆ ಹೋಗೋದಕ್ಕೆ ರೆಡಿ ಆಗಿರ್ತಾರೆ. ಅಷ್ಟರಲ್ಲಿ ಬಾಗಿಲು ನಾಕ್ಕಾಗುತ್ತೆ. ಕೊಲೆಗಾರ ಗಡಿಯಾರ ನೋಡಿ ಕೊಳ್ತಾನೆ. ‘ಥ್ಯಾಂಕ್ಸ್‌ ಸ್ವಲ್ಪ ಹೊತ್ತು ಪೋಲೀಸರನ್ನು ತಪ್ಪಿಸಿ ಬಚ್ಚಿಟ್ಕೊಬೇಕಾಗಿತ್ತು. ನಾ ಬರ್ತೀನಿ  ಬೈ ಬೈ’ ಅಂತಾನೆ. ಅಂದು ಬಾಗಿಲು ತೆಗೆದು ತನ್ನ ಪಾಡಿಗೆ ತಾನು ಹೊರಟ್ಹೋಗ್ತಾನೆ. ಈಗ ಒಳಗಡೆ ಬಂದವನು ಗಂಡ! ಆಹ್ಹಾ, ಮುಂದಿನ ಕಥೆ ನೀನು ಹೇಳು. ಗಂಡ ಹೆಂಡತಿ ವಿಷಯದಲ್ಲಿ ನನಗೆ ಅನುಭವ ಸಾಲದು.

ಸರೋಜ : ನೋಡಿ , ನನ್ನ ಗಂಡನಿಗೆ ನನ್ನ ಮೇಲೆ ಪೂರ್ತಿ ನಂಬಿಕೆ ಇದೆ. ನೀವು ಬ್ಲಾಕ್‌ ಮೇಲ್‌ ಮಾಡೋ ಅಗತ್ಯ ಇಲ್ಲ.

ಸಿದ್ದಲಿಂಗು : ಇದೊಳ್ಳೆದಾಯ್ತು! ಗಂಡ ಬಂದಾಗ ಬಾಗಿಲಿಕ್ಕಿದೆ. ತೆರೆದಾಗ ಪರಪುರುಷನೊಬ್ಬ ಸಾರಿ ಅಂದು ಮುಖ ಮುಚ್ಕೊಂಡು ಮರೆಯಾಗ್ತಾನೆ. ಒಳಗಡೆ ಗಾಬರಿಯಲ್ಲಿರೋ ಹೆಂಡ್ತಿ ಇದಾಳೆ. ಒಳಗೆ ಬಂದ ಗಂಡ ‘ಹಾ ಪ್ರಿಯತಮೆ. ಎಂಥ ಒಳ್ಳೆ ಕೆಲ್ಸ ಮಾಡ್ದೆ! ಅಂತ ಸಂತೋಷದಿಂದ ತಬ್ಬಿಕೊಳ್ಳುತ್ತಾನೇನು? ಪ್ರಕಾಶ್‌ ಅಂಥವನಲ್ಲ ಅಂದ್ಕೊಂಡಿದೇನೆ.

ಸರೋಜ : ರೀ ಮಿಸ್ಟರ್, ನಿಮ್ಮ ಮನಸ್ಸಿನಲ್ಲಿ ಏನಿದೆ ಅಂತ ಗೊತ್ತಾಯ್ತು. ನಮ್ಮ ಸಂಸಾರದಲ್ಲಿ ಹುಳೀ ಹಿಂಡಲಿಕ್ಕೇ ಅಂತ ಬಂದಿದ್ರಾ , ಇಲ್ಲಿ?

ಸಿದ್ದಲಿಂಗು : ಇದೀಗ ಸರಿ ದಾರಿ ಹಿಡಿದೆ ನೀನು. ನಿನಗೆ ಸಣ್ಣ ಸ್ವಾಭಿಮಾನ ಕೂಡ ಇದೆ ಅಂತ ನನಗ್ಗೊತ್ತು. ನಿಮ್ಮ ಸಂಸಾರ ಕೆಡಿಸೋದು ನನಗೆ ಇಷ್ಟ ಇಲ್ಲ. ನಿನ್ನ ಗಂಡನ್ನ ಕೊಲೆ ಮಾಡೋದು ಇಷ್ಟ ಇಲ್ಲ. ಆದರೆ ಎರಡೂ ಆಗದ ಹಾಗೆ ನೋಡಿಕೊಳ್ಳೋದು ನಿನ್ನ ಕೈಲಿದೆ.

ಸರೋಜ : (ಅಳುತ್ತಾ) ಹ್ಯಾಗೆ?

ಸಿದ್ದಲಿಂಗು : ಹೀಗೆ : ನಿನ್ನ ಗಂಡ ಇನ್ನೇನು ಬರೋ ಹೊತ್ತು. ಆತ ಬೆಡ್‌ರೂಮಿನ ಕಡೆ ಬರದ ಹಾಗೆ ನೋಡಿಕೊಳ್ಳೋ ಜವಾಬ್ದಾರಿ ನಿಂದು. ಆತ ಬಂದದ್ದೇ ಆದರೆ ಎರಡು ರೀತಿ ಆಗಬಹುದು. ಒಂದು : ಆತ ಸಾಯ್ತಾನೆ, ಎರಡು : ನಾನು ನಿನ್ನ ಹೆಂಡ್ತೀ ಮಿಂಡ ಅಂತಾ ಹೇಳ್ತೇನೆ. ಇಲ್ಲಿ ಕೇಳು, ನಾ ಇಲ್ಲಿ ಬಂದದ್ದನ್ನು ಆತನ ಮುಂದೆ ಯಾವಾಗ್ಲೂ ಹೇಳಕೂಡದು. (ಕಾಲಿಂಗ್ ಬೆಲ್ ಸಪ್ಪಳವಾಗುತ್ತದೆ. ಅವಳ ಕೈ ಬಿಟ್ಟು ಮೆಲ್ಲಗೆ ಏಳುತ್ತಾನೆ) ಕೊನೆ ಮಾತು. ನಾನು ಹೋಗಲಿಕ್ಕೆ ಮುಂಬಾಗಿಲು ತೆರೀಬೇಕಾದ್ದಿಲ್ಲ. ಈ ಕಿಟಕಿ ಹಾರಿ ಹೋಗ್ತೀನಿ ಅಥವಾ ಈ ಕಿಟಕಿ ಬಾಗಿಲು ತೆರೆದುಕೊಂಡಿದ್ರೆ ನಾನು ತೊಲಗಿದೀನಿ ಅಂತ ಅರ್ಥ. ತಿಳೀತಾ (ಸರೋಜ ಕತ್ತು ಹಾಕುವಳು) ಹುಷಾರ್, ಈ ವಿಷಯ ನಿನ್ನ ಗಂಡನಿಗೆ ಎಂದೆಂದಿಗೂ ತಿಳೀಬಾರ್ದು ತಿಳಿದರೆ ಗೊತ್ತಲ್ಲ? (ಕೆನ್ನೆ ತಟ್ಟಿ ಬೆಡ್ ರೂಮಿನ ಬಾಗಿಲು ಮುಂದೆ ಮಾಡಿ ಬಚ್ಚಿಟ್ಟುಕೊಳ್ಳುವನು. ಸರೋಜ ಬಾಗಿಲು ತೆರೆಯುವಳು. ಬಿಟ್ಟ ಬಾಣದ ಹಾಗೆ ಪ್ರಕಾಶ್ ಒಳ ಬಂದು ಏದುಸಿರು ಆರಿಸಿಕೊಳ್ಳುತ್ತಾ ಕುರ್ಚಿಯಲ್ಲಿ ಕುಸಿಯುವನು. ಸರೋಜ ಈಗ ಬಹಳ ಎಚ್ಚರಿಕೆಯಿಂದ ಇರುವಳು. ಆಗಾಗ ಬೆಡ್ ರೂಮಿನ ಕಡೆ ಕಳ್ಳ ನೋಟ ಬೀರುತ್ತಾ ಪ್ರಕಾಶನ ಮಾತುಗಳನ್ನಾಲಿಸುತ್ತಾ ಸಂದರ್ಭಕ್ಕೆ ತಕ್ಕಂತೆ ಕೃತಕತೆಯನ್ನು ಅಭಿನಯಿಸುವಳು. ಅವಳ ಮಾತಿನಲ್ಲಿ ಅವಳಿಗೇ ಆಶ್ಚರ್ಯವಾಗುವಂಥ ಕೃತಕತೆ ಇದೆ.)

ಪ್ರಕಾಶ್‌ : ಅಬ್ಬ !

ಸರೋಜ : ಏನಾಯ್ತು?

ಪ್ರಕಾಶ್‌ : ಕೊಲೆ! ಕೊಲೆ ಕಣೆ; ಶ್ರೀಕಾಂತಜೀ ಕೊಲೆ!

ಸರೋಜ : ಶ್ರೀಕಾಂತಜೀ?

ಪ್ರಕಾಶ್‌ : ಹೌದು?

ಸರೋಜ : ಕೊಲೆ ಆಯ್ತಾ?

ಪ್ರಕಾಶ್‌ : ಹೌದು, ಪಾಪ ಸ್ಥಳದಲ್ಲೇ ಸತ್ತ. ಏನು ಜನ! ಏನು ಕೂಗಾಟ! ಕಿರಿಚಾಟ! ಪೋಲೀಸ್‌ರ‍್ಯಾರೋ, ಜನ ಯಾರೋ! ಯಾರನ್ನ ಯಾರು ಹೊಡೆದರೋ! ಓಡಿದವರ್ಯಾರು ಸಿಕ್ಕದವರ್ಯಾರೋ! ಛೇ ಛೇ ತಪ್ಪಿಸಿಕೊಂಡು ಎಲ್ಲೆಲ್ಲೋ ಹೋಘಿ ಇಲ್ಲಿಗೆ ಬಂದೆ. ನಾನು ಜೀವಸಹಿತ ಬಂದದ್ದೇ ಹೆಚ್ಚು. ಗುಂಡು ಹಾರಿಸಿದವರ್ಯಾರು ಗೊತ್ತಾ?

ಸರೋಜ : ಮೊದಲು ಸುಧಾರಿಸಿಕೊಳ್ಳಿ. ಆಮೇಲೆ ಮಾತಾಡುವಿರಂತೆ,

ಪ್ರಕಾಶ್‌ : ಇಲ್ಲಿ ಕೇಳೆ, ಕೊಂದ ವ್ಯಕ್ತಿ….

ಸರೋಜ : ಥೂ. ನನಗೆ ಭಯ ಆಗುತ್ತಪ್ಪಾ. ಅದನ್ನೆಲ್ಲಾ ನೀವು ಹೇಳೋದೇ ಬೇಡ.

ಪ್ರಕಾಶ್‌ : ಪ್ರತ್ಯಕ್ಷ ಕಂಡವನು ನಾನೇ ಹೀಗಿದೀನಿ. ನೀನಾಗಲೇ ಬೆದರಿ ಬೆವರಲಿಕ್ಕೆ ಶುರು ಮಾಡಿದ್ದೀಯಲ್ಲೇ ಇಲ್ಲಿ ಕೇಳು.

ಸರೋಜ : ನೀವು ಹೇಳೋದು ಬೇಡ. ನಾನು ಕೇಳೋದೂ ಬೇಡ. ಅಡಿಗೆ ಮನೆಗೆ ಬನ್ನಿ. ಕಾಫಿ ಮಾಡಿಕೊಡ್ತೀನಿ.

ಪ್ರಕಾಶ್‌ : ಇಷ್ಟು ಹೊತ್ತಿನಲ್ಲಿ ಕಾಫಿ ಯಾರು ಕುಡೀತಾರೆ?

ಸರೋಜ : ಹಾಗಿದ್ದರೆ ಸುಮ್ನೆ ಕೂತ್ಕೊಳ್ಳಿ.

ಪ್ರಕಾಶ್‌ : ಚೆನ್ನಾಗಿದೆಯೇ! ಲೇ ಎಂಥೆಂಥ ಕೊಲೆಯ ಸತ್ಯಗಳನ್ನು ಕಂಡು ಬಂದಿದ್ದೀನಿ ಈವೊತ್ತು! ಹೇಳಿ ನಿನ್ನ ಥ್ರಿಲ್‌ ಮಾಡೋಣ ಅಂದ್ರೆ …..

ಸರೋಜ : ಅದೆಲ್ಲಾ ಆಮೇಲೆ, ಈಗ ಬೇಕಾದ್ರೆ ನಿಮ್ಮ ಪದ್ಯ ಓದಿ.

ಪ್ರಕಾಶ್‌ : (ಬೂಟು ಬಿಚ್ಚುತ್ತಾ) ನೀನು ತುಂಬಾ ಕೋಮಲೆ, ಸರಿ ಏಳು ಲೂಟ ಮಾಡೋಣ.

ಸರೋಜ : ನನಗೆ ಹಸಿವಿಲ್ಲ. ಅನ್ನ ಸಾರು ಇದೆ. ನೀವೇ ಊಟ ಮಾಡಿ.

ಪ್ರಕಾಶ್‌ : ಯಾಕೆ ಒಂಥರ ಇದ್ದೀಯಲ್ಲಾ?

ಸರೋಜ : ಇಲ್ವಲ್ಲ ನೋಡಿ.

ಪ್ರಕಾಶ್‌ : ಏನ್‌ ನೋಡೋದು? ಕನ್ನಡಿ ನೋಡಿಕೊಂಡಿದ್ದೀಯಾ? ತಾಳು ಬಟ್ಟೆ ಕಳಚಿಬಿಟ್ಟು ಬರ್ತೀನಿ. (ಬೆಡ್ ರೂಮಿನ ಕಡೆ ಹೊರಡುವನು ತಕ್ಷಣ ಸರೋಜ ಅಡ್ಡ ಬರುವಳು.)

ಸರೋಜ : ನೋಡಿ, ಇಲ್ಲಿ ಬನ್ನಿ ಪ್ಲೀಸ್‌. (ಕರೆದೊಯ್ದು ಮತ್ತೆ ಅದೇ ಕುರ್ಚಿಯಲ್ಲಿ ಕೂರಿಸುವಳು) ಈಗ ಹೇಳಿಅದೇನೋ ಕೊರೆಯುವ ಸತ್ಯಗಳಲು ಅಂದ್ರಲ್ಲಾ.

ಪ್ರಕಾಶ್‌ : ನಿನ್ನ ತಲೆ, ಏನ್‌ ಹೇಳ್ಳಿ?

ಸರೋಜ : ಏನಾದ್ರೂ ಹೇಳಿ. ಪದ್ಯ ಯಾಕೆ ಓದ್ತಾ ಇಲ್ಲ? ಆ ಕಣ್ಣಿಂದ ಪಿನ್ನು ಚುಚ್ಚಿ ಅಂತ ಎಷ್ಟೊಂದು ಚೆನ್ನಾಗಿತ್ತು. ನನಗೆ ನವ್ಯ ಕಾವ್ಯ ಅಂದ್ರೆ ಎಷ್ಟು ಇಷ್ಟ ಗೊತ್ತಾ? ಅರ್ಥವಾಗೋದಿಲ್ಲವಾದ್ರೂ ಮೈ ಜುಂ ಅನ್ನುತ್ತೆ. ಓದಿ ಪ್ಲೀಸ್‌ ಪ್ರಕಾಶ್‌.

ಪ್ರಕಾಶ್‌ : ಮತ್ತೆ ಕೊರೆಯೋ ಸತ್ಯ ಹೇಳು ಅಂದೆ.

ಸರೋಜ : ಹೋಗ್ಲಿ. ಅದನ್ನೆ ಮೊದ್ಲು ಹೇಳಿಯಪ್ಪ. ನೀವ್‌ ಇಲ್ಲಿಂದ ಹೋದ್ರಲ್ಲ ಆಗ್ಲೇ ಜನ ಸೇರಿದ್ರಾ?

ಪ್ರಕಾಶ್‌ : ಮತ್ತೆ, ಶ್ರೀಕಾಂತಜೀ ಅಂದ್ರೆ ಏನಂದ್ಕೊಂಡಿದ್ದೀಯಾ? ಏನು ಜನ! ಏನು ಜನ! ನಾನು ದೂರ ನಿಂತ್ಕೊಂಡಿದ್ದೆ. ಶ್ರೀಕಾಂತಜೀ ಇನ್ನೂ ಡಯಾಸ್‌ ಮೇಲೆ ಬಂದಿರಲಿಲ್ಲ. ಜನ ಥರಾವರಿ ಮಾತಾಡ್ತಿದ್ರು; ರೂಲಿಂಗ್‌ ಪಾರ್ಟಿ ಧೂಳಿಪಟ ಆಯ್ತು . ಆಪೋಸಿಟ್‌ ಪಾರ್ಟಿ ಅಧಿಕಾರಕ್ಕೆ ಬಂತೂ-ಹೀಗೆ ಏನೇನೋ. ಅಷ್ಟರಲ್ಲಿ ಈ ಕಡೆ ರೂಲಿಂಗ್‌ ಪಾರ್ಟಿಯವರು ಡಯಾಸ್‌ ಹಾಕಿದ್ರಲ್ಲ, ಅವರು ಯಾವಾಗಲೋ ಸಭೆ ಸುರು ಮಾಡಿದ್ರು. ಪಾಪ, ಅವನ್ಯಾವನೋ ದಿಲ್ಲಿಯವನಂತೆ, ಭಾಷಣಂ ಎತ್ಕೊಳ್ತಾನೇ ಶ್ರೀಕಾಂತಜೀ ಹೆಸರು ತಗೊಂಡ. ಹಾಗಂದದ್ದೇ ತಡ ಜನ ಕೇಳ್ತಾರಾ? ಹೊ ಅಂತ ಕಲ್ಲು ಚಪ್ಪಲಿ ತೂರಲಿಕ್ಕೆ ಸುರು. ಅದ್ಯಾಕಪ್ಪ ನಾ ಇಲ್ಲಿಗೆ ಬಂದೆ ಅಂದ್ಕೊಂಡೆ. ಸದ್ಯ ಅವರು ಸಭೆ ಮುಗಿಸಿ ಓಡಿದ್ರು. ಆ ನನ್ಮಕ್ಕಳಿಗೆ ಸೇಡು ಉಳಿಯಿತು ನೋಡು.

ಸರೋಜ : ಯಾರಿಗೆ?

ಪ್ರಕಾಶ್‌ : ಇನ್ಯಾರಿಗೆ ರೂಲಿಂಗ್‌ ಪಾರ್ಟಿ ಜನಕ್ಕೆ.

ಸರೋಜ : ಯಾಕೆ?

ಪ್ರಕಾಶ್‌ : ಯಾಕೆಂದ್ರೆ ಅವರು ಮಾಡೋ ಸಭೆಗಳಿಗಾದ್ರೆ ಜನಾನೇ ಇಲ್ಲ. ಜನಾ ಅಂತ ಬಂದವರು ಕಲ್ಲು ಚಪ್ಪಲಿ ತೂರ್ತಾರೆ!

ಸರೋಜ : ಹಾಗೆ ಮಾಡೋದು ತಪ್ಪಲ್ವಾ?

ಪ್ರಕಾಶ್‌ : ಯಾಕೆ ಹೇಳು?

ಸರೋಜ : ಯಾಕಿಲ್ಲ ಆಮೇಲೆ ಹೇಳ್ತೇನೆ. ಮುಂದೆ ಹೇಳಿ.

ಪ್ರಕಾಶ್‌ : ಆಮೇಲೇನು ಶ್ರೀಕಾಂತಜೀನ ಕೊಲ್ಲೋದಕ್ಕೆ ಸೀಕ್ರೆಟ್ಟಾಗಿ ಪ್ಲಾನು ಮಾಡಿ ಕಳಿಸಿದರು ರೌಡಿಗಳನ್ನ.

ಸರೋಜ : ಆಮೇಲೆ?

ಪ್ರಕಾ‌ಶ್‌ : ಜನ ಸೇರಿದ್ದಾರೆ. ಅಷ್ಟರಲ್ಲಿ ಶ್ರೀಕಾಂತಜೀ ಬಂದ. ಜಯ ಜನಕಾರ ಕೂಗಿದರು. ಕುಣಿದರು. ಇನ್ನೇನು ಶ್ರೀಕಾಂತಜೀ ಡಯಾಸ್‌ ಹತ್ತಬೇಕು. ಕರೆಂಟ್‌ ಹೋಯ್ತು!

ಸರೋಜ : ಮುಂದಿನದೆಲ್ಲ ನನಗ್ಗೊತ್ತು. ಯಾರೋ ಶ್ರೀಕಾಂತಜೀ ಮೇಲೆ ಗುಂಡು ಹಾರಿಸಿದರು.

ಪ್ರಕಾಶ್‌ : ಹೌದು.

ಸರೋಜ : ಶ್ರೀಕಾಂತಜೀ ಅಲ್ಲೇ ಸತ್ತು ಬಿದ್ದ, ಜನ ಗಲಾಟೆ ಮಾಡಿದ್ರು.

ಪ್ರಕಾ‌ಶ್‌ : ಹೌದು.

ಸರೋಜ : ನೀವು ತಪ್ಪಿಸಿಕೊಂಡು ಎಲ್ಲೆಲ್ಲೋ ಸುತ್ತಾಡಿ ಇಲ್ಲಿಗೆ ಬಂದ್ರಿ. ಸರಿ ತಾನೆ?

ಪ್ರಕಾಶ್‌ : ಹೌದು. ನಿನಗೆ ಇದೆಲ್ಲ ಹ್ಯಾಗೆ ಗೊತ್ತಾಯ್ತು?

ಸರೋಜ : ಇಷ್ಟೂ ಗೊತ್ತಾಗೋದಿಲ್ವಾ? ಜನ ಮಾತಾಡಿಕೊಂಡು ಹೋಗ್ತಾ ಇದ್ರು ಕೇಳ್ವೆ ಹೋಗ್ಲಿ ಈಗ್ಲಾದ್ರೂ ಪದ್ಯ ಓದ್ತೀರಾ?

ಪ್ರಕಾಶ್‌ : ಪದ್ಯ ಈಗ ಬೇಡ. ನಿನ್ನ ಕಾಮನ್‌ಸೆನ್ಸ್‌ಗೆ ಕೊನೇ ಪಕ್ಷ ಒಂದು ಕಿಸ್‌ ಕೊಡಬೇಕು.

ಸರೋಜ : ಥೂ ನಿಮಗೊಂಚೂರೂ ನಾಚ್ಕೆ ಇಲ್ಲ, ಯಾರಾದರೂ ನೋಡಿದರೆ ….

ಪ್ರಕಾಶ್‌ : ಇದೊಳ್ಳೆ ಚೆನ್ನಾಗಿದೆಯೆ! ನಾವಿಬ್ರೂ ಇರೋ ಮನೇಲಿ ಇನ್ಯಾರೆ ನೋಡೋಕ್ಬರ ಬೇಕು?

ಸರೋಜ : ಯಾರೂ ಇಲ್ಲಾ ಅನ್ನೋಣ. ಆದರೆ ಯಾವುದಕ್ಕೂ ಹೊತ್ತು ಗೊತ್ತು ಅಂಥ ಇರಲ್ವಾ?

ಪ್ರಕಾಶ್‌ : ಆಯ್ತು  ಮಹರಾಯಳೆ ಊಟ ಬೇಡ ಅಂತಿ. ನನಗೂ ಹಸಿವಿಲ್ಲ ಬೇಡ, ಪದ್ಯ ಬೇಕೂ ಅಂತಿ. ನನಗೇನೋ ಅನುಮಾನವೆ. ಹೋಗ್ಲಿ ಇನ್ನು ಮಲಗಬಹುದಲ್ಲ, (ಏಳುವನು. ತಕ್ಷಣ ಸರೋಜ ಅಡ್ಡ ಬರುವಳು.)

ಸರೋಜ : ನೋಡಿ ನಿಮ್ಜೊತೆ ನಾನು ಚರ್ಚೆ ಮಾಡಬೇಕು. ನೀವಿಲ್ಲದಾಗ ನಿಮ್ಮ ಪದ್ಯ ಓದಿದೆ, ನನಗೆ ಅರ್ಥ ಆಗ್ಲಿಲ್ಲ, ಒಂದ್ಚೂರು ಹೇಳಿಕೊಡ್ತೀರಾ?

ಪ್ರಕಾಶ್‌ : ಓದಿದೆಯಾ? ಯಾವುದು ನಿನಗೆ ಅರ್ಥ ಆಗ್ಲಿಲ್ಲ ಹೇಳು.

ಸರೋಜ : ಕಣ್ಣಿಂದ ಪಿನ್ನು ಚುಚ್ಚಿ ಅಂಥ ಏನೇನೋ ಇದೆಯಲ್ಲ ಮಹರಾಯರೆ, ಅದನ್ನೇ ಹೇಳಿದ್ದು.

ಪ್ರಕಾಶ್‌ : ಇವೊತ್ತೇನೋ ಆಗಿದೆಯೆ ನಿನಗೆ, ಶ್ರೀಕಾಂತಜೀ ಕೊಲೆ ಸುದ್ಧಿ ಹೇಳೂ ಅಂತಿ. ಬೇಡಾ ಅಂತಿ.

ಸರೋಜ : ಹೇಳಿ ಹೇಳಿ ಅದನ್ನೇ ಮಾತಾಡೋಣ . ಬೇಕಾದ್ರೆ ಆ ಘಟನೆ ಬಿಟ್ಟು ಬರೀ ರಾಜಕೀಯ ಮಾತಾಡಬಹುದಲ್ಲಾ?

ಪ್ರಕಾಶ್‌ : ನಿನಗ್ಗೊತ್ತಿದೆ ನಮ್ಮಿಬ್ಬರಿಗೂ ಅದರಲ್ಲಿ ಆಸಕ್ತಿ ಇಲ್ಲಾ ಅಂತ.

ಸರೋಜ : ಯಾಕಿಲ್ಲ, ಇದೆ. ನೋಡಿ ನೀವು ಹೇಳೋದು ಶ್ರೀಕಾಂತಜೀ ಕೊಲೆ ಮಾಡ್ಸೋದಿಕ್ಕೆ ರೂಲಿಂಗ್‌ ಪಾರ್ಟಿಯವರು ಕಳಿಸಿದರೂ ಅಂತ, ಅಲ್ವಾ?

ಪ್ರಕಾಶ್‌ : ಹೌದು.

ಸರೋಜ : ಹೀಗೂ ಇರಬಹುದಲ್ಲ. ಆಪೋಸಿಟ್‌ ಪಾರ್ಟಿಯವರೇ ಕಳಿಸಿರಬಹುದು.

ಪ್ರಕಾಶ್‌ : ಅಂದ್ರೆ?

ಸರೋಜ : ಶ್ರೀಕಾಂತಜೀನ್ನ ಯಾರು ಕೊಂದ್ರೂ ರೂಲಿಂಗ್‌ ಪಾರ್ಟಿಯವರೇ ಕೊಲ್ಲಿಸಿದರೂ ಅಂತ ಜನ ನಂಬ್ತಾರೆ. ಆಗ ಜನರ ಸಹಾನುಭೂತಿ ಆಪೋಸಿಟ್‌ ಪಾರ್ಟಿಯವರಿಗೆ ಸಿಕ್ಕು ಅವರು ಗೆದ್ದು ಬರ್ತಾರೆ.

ಪ್ರಕಾಶ್‌ : ನೀನು ಹೇಳೋದು ಅರ್ಥವಾಗಲಿಲ್ಲ.

ಸರೋಜ : ಅರ್ಥವಾಗದ್ದೇನಿದೆ ಇದರಲ್ಲಿ? ಆಪೋಸಿಟ್‌ ಪಾರ್ಟಿಯವರೇ ಶ್ರೀಕಾಂತಜೀನ ಕೊಲ್ಲಿಸಿದರೂ ಅಂತ (ಈಗ ಬೆಡ್ ರೂಮಿನಲ್ಲಿದ್ದ ಸಿದ್ದಲಿಂಗು ಕಿಟಕಿ ಬಾಗಿಲು ತೆರೆದು ಪರಾರಿ ಆಗುವನು.)

ಪ್ರಕಾಶ್‌ : (ಆಶ್ಚರ್ಯಭರಿತನಾಗಿ) ಛೇ ಏನು ಹೆಣ್ಣು ಬುದ್ಧಿ ಇದು. ನೀನು ಹೇಳಿದ ಹಾಗೆಯೇ ಇದ್ದಿರಲೂಬಹುದು. (ಮಲಗುವುದಕ್ಕೆ ರೆಡಿ ಆಗುತ್ತಾ) ಆದರೂ ಸರೋಜ ನಾನು ಬುದ್ಧಿವಂತನೇ.

ಸರೋಜ : ಹ್ಯಾಗೆ?

ಪ್ರಕಾಶ್‌ : ಬುದ್ಧಿವಂತಿಕೆ ಅಂದ್ರೇನು ಗೊತ್ತಾ? ಹೆಣ್ಣು ಯಾವುದು, ಹಣ್ಣು ಯಾವುದೂ ಅಂತ ತಿಳಿಯೋದು. ನನ್ನ ಕೇಳು (ಅವಳನ್ನು ತೋರಿಸುತ್ತ) ಇದೇನು ಅಂತ. ಇದು ನನ್ನ ಸೇಬುಹಣ್ಣು (ಎನ್ನುತ್ತ ಅವಳನ್ನು ಎತ್ತಿಕೊಳ್ಳುವನು. ತಕ್ಷಣ ಇಳಿಸಿ) ಇದೇನೆ ಮೈ ಸುಡ್ತಾ ಇದೆ, ಜ್ವರಾನಾ?

ಸರೋಜ : ಇರ್ಬೇಕು. ನೀವು ಹೋದಾಗಿನಿಂದ ಒಂದು ಥರಾ ಆಗ್ತಿದೆ.

ಪ್ರಕಾಶ್‌ : ಅದೇ ಅಂದ್ಕೊಂಡೆ, ಈವೊತ್ತು ಒಂಥರಾ ಇದ್ದೀಯಲ್ಲಾ. ನಾ ಬಂದಕೂಡ್ಲೆ ಹೇಳ್ಬಾರದಾ?

ಸರೋಜ : ಅಷ್ಟಿರಲಾದರೂ ಅಂದ್ಕೊಂಡೆ.

ಪ್ರಕಾಶ್‌ : ಸರಿ. ಜೊತೆ ಬರ್ತೀಯಾ ಅಥವಾ ಡಾಕ್ಟರನ್ನು ಕರೆತರಲಾ? (ಎಂದು ಹೊರಡುವನು. ಸರೋಜ ಹೋಗಿ ಬಾಗಿಲಿಗೆ ಅಡ್ಡ ನಿಂತು ಬೇಡಿ ಎಂದು ಹೇಳುತ್ತಾ ಬೆಡ್ರೂಮಿನ ಬಾಗಿಲನ್ನು ಸರಿಸಿ ನೋಡುತ್ತಾಳೆ. ಕಿಟಕಿಯ ಬಾಗಿಲು ನಿಚ್ಚಳವಾಗಿ ತೆರೆದಿದೆ. ಸಿದ್ದಲಿಂಗು ಇಲ್ಲದ್ದು ಖಾತ್ರಿಯಾಗಿ ಲೈಟ್ ಹಾಕುತ್ತಾಳೆ.)

ಸರೋಜ : ಅಥವಾ ಸುಮ್ನೆ ಯಾಕೆ? ರೆಸ್ಟ್‌ ತಗೊಂಡರೆ ಸರಿ ಹೋಗಬಹುದು ಬಿಡಿ. (ಹೋಗಿ ಮಲಗುವಳು. ಪ್ರಕಾಶ್ ಮೆಲ್ಲಗೆ ಬೆಡ್ರೂಮಿನ ಕಡೆ ಹೊರಡುವನು)