(ಮಾರನೆಯ ದಿನ ಅದೇ ಮನೆ. ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಪ್ರಕಾಶ್ಮನೆಗೆ ಬರುತ್ತಾನೆ. ಕೀಲಿ ತೆಗೆದು ಬಂದವನು ಡ್ರೆಸ್ಕೂಡ ಕಳಚದೆ ಜೇಬಿನಿಂದ ಪದ್ಯವೊಂದನ್ನು ತೆಗೆದು ಓದುತ್ತಾ ತಿದ್ದುತ್ತಾ ಕೂರುತ್ತಾನೆ.)

ಪ್ರಕಾಶ್‌ : ಕಾಡಿನಲ್ಲೊಂದು ಹುಲಿಯ ಕಾಣುತ್ತೇನೆ
ಹುಲಿಯು ನನ್ನನ್ನು, ನಾನು ಹುಲಲಿಯನ್ನ
ತಿನ್ನಬಯಸಿ ಪರಸ್ಪರ ಹೊಂಚುತ್ತಾ
ನಿಲ್ಲುತ್ತೇವೆ.
ಆದರೆ ಗೆದ್ದವನು ನಾನೇ ಎಂದು ಹುಲಿಯ ಹಿಡಿದು
ಬಾಯಲ್ಲಿ ಹಾಕಿಕೊಂಡು ಅರ್ಧ ತಿಂದಾಗ,
ಒಂದು ಕ್ಷಣ ಯೋಚನೆಗೆ ನಿಲ್ಲುತ್ತೇನೆ,-
ಯಾಕೆಂದರೆ ನಾನು ಬುದ್ಧಿಜೀವಿ.
ಆದರೆ ಅಷ್ಟರಲ್ಲಿ ಮೈಮರೆತ ನನ್ನನ್ನು
ಹುಲಿಯೇ ತಿಂದು ಮುಗಿಸಿರುತ್ತದೆ,
ಹೀಗೆ ಸತ್ಯದ್ದು ಗೊತ್ತಾಗದಂತೆ ಓಡುತ್ತೇನೆ.
ನಿಂತರೆ ಸತ್ತದ್ದು ನೆನಪಾಗಬಹುದಾದ್ದರಿಂದ
ಬಿಟ್ಟೂಬಿಡದೆ ಓಡುತ್ತೇನೆ,
ಅಥವಾ ಹೀಗಿರಬಹುದೆ :
ಹುಲಿಯ ಕಾಣುವ ಮುನ್ನ ಇಡಿಯಾಗಿದ್ದವನು
ಈಗ ಎರಡಾಗಿದ್ದೇನೆ : ಸತ್ತವನೊಬ್ಬ.
ಓಡುವವನೊಬ್ಬ
ನೋಡುವವನೊಬ್ಬ ಓಡುವವನೊಬ್ಬ!
ಇಬ್ಬರ ಭೇಟಿ ಸಾಧ್ಯವಿಲ್ಲವೆ!
ಸಾಧ್ಯವಿಲ್ಲವೆ?

(ಓದಿ ಮತ್ತೆ ತಿದ್ದತೊಡಗುತ್ತಾನೆ. ಬಾಗಿಲಲ್ಲಿ ರುದ್ರಪ್ಪ ಯಾವಾಗಲೋ ಬಂದು ನಿಂತಿದ್ದವನು ಇವನ ಓದು ಮುಗಿದೊಡನೆ ಚಪ್ಪಾಳೆ ತಟ್ಟುತ್ತಾನೆ ಅವನನ್ನು ನೋಡಿ ಪ್ರಕಾಶ್ಎದ್ದು ನಿಲ್ಲುತ್ತಾನೆ.)

ಪ್ರಕಾಶ್‌ : ಅರೆ! ಬನ್ನಿ ಸಾರ್. ಎಷ್ಟು ಅಪರೂಪ ನಿಮ್ಮನ್ನೊಡೋದು!

ರುದ್ರಪ್ಪ : ಹೊರಗಡೆ ಎಲೆಕ್ಷನ್‌ ಕೌಂಟಿಂಗ್‌ ನಡೀತಾ ಇದೆ. ಜನಗಳಲ್ಲಿ ಎಷ್ಟೊಂದು ಟೆನ್ಸನ್‌ ಇದೆ. ನೀವಿಲ್ಲಿ ನಿರುಮ್ಮಳ ಕೂತು. ಪದ್ಯ ಬರೀತಿದೀರಲ್ಲಾ ಸ್ವಾಮಿ,- ಒಳ್ಳೇ ಕವಿಗಳು.

ಪ್ರಕಾಶ್‌ : ರಾಜಕೀಯ ನಮ್ಮಂಥವರಿಗ್ಯಾಕೆ ಸಾರ್? ನನಗೆ ಅದು ಅರ್ಥವಾಗೋದೂ ಇಲ್ಲ.

ರುದ್ರಪ್ಪ : ಇದೊಳ್ಳೇದಾಯ್ತೆ! ನಿಮ್ಮ ರಾಜ್ಯ, ನಿಮ್ಮ ಸರ್ಕಾರ. ಎಡ ಬಲ ಅಂತ ಬೆಟ್‌ ಕಟ್ಟಿ ಮತ ಚಲಾಯಿಸಿದ್ದೀರಿ. ಪರಿಣಾಮದ ಬಗ್ಗೆ ಆಸಕ್ತಿ ಇಲ್ವೆ?

ಪ್ರಕಾಶ್‌ : ನೀವಿದೀರಲ್ಲ ಸಾರ್, ಅದನ್ನೆಲ್ಲಾ ನೋಡ್ಕೋಳ್ಳೋದಿಕ್ಕೆ,

ರುದ್ರಪ್ಪ : ಅದು ನಮ್ಮ ಕರ್ಮ, ನೋಡಿಕೊಳ್ಳತೀವಿ, ನೀವು?

ಪ್ರಕಾಶ್‌ : ಆಳಿಸಿಕೊಳ್ಳೋದು ನಮ್ಮ ಕರ್ಮ.

ರುದ್ರಪ್ಪ : ಹ್ಹ ಹ್ಹಾ ಭಾರಿ ಜಾಣರು ನೀವು, ಕವಿಗಳಲ್ಲವೆ? ಎಲ್ಲಿ ನಿಮ್ಮ ಮನೆಯವರು ಕಾಣಿಸೋದಿಲ್ಲ?

ಪ್ರಕಾಶ್‌ : ಯಾರನ್ನೋ ನೋಡೋದಕ್ಕೆ ಹೋಗಿದಾರೆ. ಕೌಂಟಿಂಗ್‌ ನಡೆದಾಗ ನೀವು ನಮ್ಮನೆಗೆ ಬಂದಿರಲ್ಲ. ಏನಾದ್ರೂ ಕೆಲ್ಸ ಇತ್ತಾ ಸಾರ್?

ರುದ್ರಪ್ಪ : ಇಲ್ಲಪ್ಪ ಟೆನ್ಸನ್‌ ಇದೆಯಲ್ಲ…ನಿಮ್ಮೊಂದಿಗೆ ಹರಟೆ ಹೊಡೀತಾ ಅದನ್ನ ಮರೆಯೋದಕ್ಕೆ ಬಂದೆ. ನಿಮಗೆ ನಾನು ಡಿಸ್ಟರ್ಬ್‌ ಮಾಡ್ತಾ ಇಲ್ಲ ತಾನೆ?

ಪ್ರಕಾಶ್‌ : ಖಂಡಿತಾ ಇಲ್ಲ ಸಾರ್. ಎಲೆಕ್ಷನ್‌ ಸೀನು ಹ್ಯಾಗಿದೆ ಸಾರ್?

ರುದ್ರಪ್ಪ : ಅದನ್ನ ನೀವು ಹೇಳಬೇಕಪ್ಪ, ಈಗ ಗೊತ್ತಾಗಿರೋ ಸುದ್ದಿ ಪ್ರಕಾರ ನಮ್ಮವರೇ ಮುಂದಿದಾರೆ. ಹನ್ನೆರಡು ಸೀಟು ಅನೌನ್ಸಾಯ್ತು. ಅದರಲ್ಲಿ ನಮ್ಮವರು ಏಳು ಜನ ಬಂದಿದಾರೆ.

ಪ್ರಕಾಶ್‌ : ಹೌದಾ ಸಾರ್, ಕಂಗ್ರಚುಲೇಷನ್ಸ್‌!

ರುದ್ರಪ್ಪ : ಕೌಂಟಿಂಗ್‌ ನಡೀತಾ ಇದೆ. ಅದರಲ್ಲೂ ಮುಂದಿದಾರೆ, ಏನಾಗುತ್ತೋ ನೋಡೋಣ.

ಪ್ರಕಾಶ್‌ : ಈ ಸಲ ನಿಮ್ಮ ಪಾರ್ಟಿ ಬರೋದು ಗ್ಯಾರಂಟಿ ಸಾರ್.

ರುದ್ರಪ್ಪ : ಹಾಗಂತ ನಾವೂ ನಂಬಿದೀವಿ, ನೋಡಿ ಕೊನೆ ಗಳಿಗೇಲಿ ಏನೇನೋ ಆಗಬಹುದು. ಜನ ಹೀಗೆ ಅಂತ ಹೇಳ್ಳಕ್ಕಾಗಲ್ಲ.

ಪ್ರಕಾಶ್‌ : ಪಾಪ ಈಗ ಶ್ರೀಕಾಂತಜೀ ಇದ್ದಿದ್ರೆ ಚೆನ್ನಾಗಿರೋದು.

ರುದ್ರಪ್ಪ : ನಮ್ಮ ದುರ್ದೈವ ಅವರನ್ನ ಕಳೆದುಕೊಂಡ್ವಿ, ಅದು ನೆನಪಾದರೆ ಸಾಕು. ಈ ಎಲೆಕ್ಷನ್ನೆಲ್ಲಾ ಯಾರಿಗೆ ಬೇಕು ಅಂತ ಅನ್ಸತ್ತೆ.

ಪ್ರಕಾಶ್‌ : ಅವರನ್ನ ಕೊಲೆ ಮಾಡಿದವರು ಯಾರು ಅಂತ , ಏನಾದರೂ ಪತ್ತೆ ಆಯ್ತಾ ಸಾರ್?

ರುದ್ರಪ್ಪ : ಅದು ಅಷ್ಟು ಸುಲಭವಾ ಹೇಳಿ? ಒಂದು ಅಂದಾಜಿನ ಪ್ರಕಾರ ಬಲಪಕ್ಷದವರು ಕೊಲೆಗಾರನನ್ನ ಬಚ್ಚಿಟ್ಟಿದಾರೆ ಅಂತೆ. ಕೈಯಲ್ಲಿ ಸರ್ಕಾರ ಇರೋವಾಗ ಇದು ಕಷ್ಟ ಅಲ್ಲ. ಒಂದು ಮುಚ್ಚಿ ಒಂದನ್ನ ಹೇಳಬಹುದು. ಸರ್ಕಾರ ಹೆಂಗಸಿದ್ದ ಹಾಗೆ. ಮನಸ್ಸಿನ ವಿಕಾರ ಮುಚ್ಚೋದಕ್ಕೆ ಮಾತಾಡಬಹುದು, ಇದನ್ನೂ ಮೀರಿದರೆ ಕರೆದಾಗ ಬರೋ ಕಣ್ಣಿರಂತೂ ಇದ್ದೇ ಇದೆ. ದನಿ ತೆಗೆದು ಅತ್ತರೆ ನಾವೀ ಗಂಡಸರೆಲ್ಲ ಕಣ್ಣೀರು ಒರೆಸ್ತಾರೆ ಅಂತ ಅವಳಿಗ್ಗೊತ್ತು.

ಪ್ರಕಾಶ್‌ : ಚೆನ್ನಾಗಿ ಹೇಳಿದಿರಿ ಸಾರ್, ಆದರೆ ಅವರೇನೋ ತಿಳಿದುಕೊಂಡು ಶ್ರೀಕಾಂತಜೀನ್ನ ಕೊಂದರೆ-ಅದಿನ್ನೇನೋ ಆಯ್ತಲ್ವ? ಅಥವಾ ಹೀಗಾಗ್ತದೆ ಅಂತ ಗೊತ್ತಿದ್ದರೆ ಕೊಲ್ಲುತ್ತಿದ್ರೋ ಇಲ್ವೊ.

ರುದ್ರಪ್ಪ : ಏನಂದ್ರಿ, ತಿಳೀಲಿಲ್ಲ.

ಪ್ರಕಾಶ್‌ : ಅಲ್ಲ ಸಾರ್, ವಿರೋಧ ಪಕ್ಷಗಳಲ್ಲಿ ಇಮೇಜಿರೋದು ಶ್ರೀಕಾಂತಜೀ ಒಬ್ಬರಿಗೆ ಮಾತ್ರ. ಅವರನ್ನೇ ತೆಗೆದರೆ ಸಲೀಸಾಗಿ ಎಲೆಕ್ಷನ್‌ ಗೆಲ್ಲಬಹುದು-ಅಂತ ರೂಲಿಂಗ್‌ ಪಾರ್ಟಿಯವರು ತಿಳಿದುಕೊಂಡರು. ಕೊಲ್ಲೋದೇನೋ ಕೊಂದ್ರು ಆದರೆ ಜನರ ಸಹಾನುಭೂತಿ ವಿರೋಧ ಪಕ್ಷದ ಕಡೆ ವಾಲಿತು. ಅಷ್ಟರಮಟ್ಟಿಗೆ ಅವರ ಲೆಕ್ಕಾಚಾರ ತಪ್ಪಾಯ್ತಲ್ಲ.

ರುದ್ರಪ್ಪ : ಜನರ ಸಹಾನುಭೂತಿ ನಮ್ಮ ಕಡೆ ವಾಲಿದೆ. ಇಲ್ಲ-ಅಂತ ಆಮೇಲೆ ಹೇಳಬಹುದು.

ಪ್ರಕಾಶ್‌ : ಆದರೆ ಜನ ಮಾತ್ರ ಕೊಲೆಗಾರನನ್ನ ಕ್ಷಮಿಸೋದು ಸಾಧ್ಯವೇ ಇಲ್ಲ ಸಾರ್.

ರುದ್ರಪ್ಪ : ಹಾಗಂತೀರೇನು?

ಪ್ರಕಾಶ್‌ : ನಾವು, ಪೇಟೆ ಜನಕ್ಕೆ ನೆನಪಿನ ಶಕ್ತಿ ಕಮ್ಮಿ. ಆದರೆ ಸಾಮಾನ್ಯ ಜನ ಅಷ್ಟು ಸುಲಭವಾಗಿ ಮರೀತಾರಾ? ಶ್ರೀಕಾಂತಜೀ ಅವರ ಸಿನೇಮ ನೋಡಿದಾರೆ. ಜನರಾಡುವ ಮಾತುಗಳನ್ನ ಶ್ರೀಕಾಂತಜೀ ತೆರೆಯ ಮೇಲೆ ಆಡಿದಾರೆ. ಅವರೆಲ್ಲ ಭಾವನೆಗಳಿಗೆ ಅಭಿವ್ಯಕ್ತಿ ಕೊಟ್ಟಿದ್ದಾರೆ. ಅವರ ಕನಸುಗಳಿಗೆ ಬಣ್ಣ ಆಕಾರ ಕೊಟ್ಟಿದಾರೆ . ಗಾಂಧೀಜಿ ತರುವಾಯ ಆ ಸಂಖ್ಯೆಯಲ್ಲಿ ಈ ನಾಡಿನ ಜನರನ್ನ ಆಕರ್ಷಿಸಿದವರು ಶ್ರೀಕಾಂತಜೀ ಒಬ್ಬರೇ ಅಂತ ಪೇಪರಿನವರೇ ಬರೆದಿದ್ದಾರೆ. ಅಂಥವರನ್ನ ಜನ ಮರೀಬಹುದೇ ಸಾರ್? ಕೊಂದವರು ಗೊತ್ತಾಗೋದಿರಲಿ, ಒಬ್ಬನ ಮೇಲೆ ಅನುಮಾನ ಬಂದರೂ ಬಿಡೋದಿಲ್ಲ.

ರುದ್ರಪ್ಪ : ಅದು ಸರಿಯಪ್ಪ, ಕೊಲೆಗಾರ ಸಿಕ್ಕರೆ ನೀವೇನು ಮಾಡ್ತೀರಿ?

ಪ್ರಕಾಶ್‌ : ನಾನೇನು ಮಾಡ್ಲಿಕ್ಕಾದೀತು ಸಾರ್? ಆಫೀಸು, ಮನೆ, ಬೋರಾದರೆ ಪಿಕ್ಚರು, ಅದೂ ಬೇಡಾದ್ರೆ ಪದ್ಯ.

ರುದ್ರಪ್ಪ : ನೀವು ಬಿಡೀಪ್ಪ, ಪಿಕ್ಚರ್ ನಲ್ಲಿ ಪಿಸ್ತೂಲು ಕಂಡ್ರೆ ಅವಾಸ್ತವ ಅಂತ ಮೂಗು ಮುರಿಯೋರು. ನಾ ಹೇಳೋದು ಅದಲ್ಲ. ಅಥವಾ ಹೀಗನ್ನೋಣ : ಶ್ರೀಕಾಂತ ಜೀನ್ನ ಕೊಂದೋನು ನೇರವಾಗಿ ನಿಮ್ಮ ಮನೆಗೆ ಬಂದ ಅಂತಿಟ್ಕೊಳ್ಳಿ.

ಪ್ರಕಾಶ್‌ : ಅಯ್ಯೋ ಬಿಟ್ತು ಅನ್ನಿ ಸಾರ್, ನಮಗ್ಯಾಕೆ?

ರುದ್ರಪ್ಪ : ಹಾಗಂತ ಇಟ್ಕೊಳ್ಳಿಯಪ್ಪ.

ಪ್ರಕಾಶ್‌ : ಹೋಗಿ ಹೋಗಿ ಅದನ್ಯಾಕೆ ಸಾರ್ ಇಟ್ಕೊಬೇಕು?

ರುದ್ರಪ್ಪ : ಹಾ. ಅದಕ್ಕೇ ಅವನು ಇಲ್ಲಿಗೆ ಬರೋದು. ಇವರು ನಿರುಪದ್ರವಿಗಳು. ಪಿಸ್ತೂಲು ಕಂಡ್ರೆ ಹೆದರೋರು, ತರಲೆ ತಾಪತ್ರಯ ಒಲ್ಲದವರು. ಪದ್ಯದ ಮಾತಿನಲ್ಲಿ ಹೇಳೋದಾದ್ರೆ ಥೇಟ್‌ ಹಸುವಿನಂಥೋರು ಮುಂದೆ ಬಂದರೆ ಹಾಯಲ್ಲಾ ಹಿಂದೆ ಬಂದರೆ ಒದಿಯಲ್ಲಾ. ಕೆಚ್ಚಲಲ್ಲಿ ಹಾಲಿಲ್ಲದಿದ್ದರೂ ಮಟನ್‌ ಮಾರ್ಕೆಟ್‌ನಲ್ಲಾದ್ರೂ ಇದಕ್ಕೆ ಬೆಲೆ ಇದೆ ಅಂತ ಅವನಿಗೆ ಗೊತ್ತು, ಇಲ್ಲಿ ಒಬ್ಬ ಕೊಲೆಗಾರ ಅಡಗಿದರೆ ಪೋಲೀಸರಿಗೆ ಅನುಮಾನ ಬರೋಲ್ಲ. ಹೀಗೆ ಯೋಚನೆ ಮಾಡಬಹುದಲ್ಲ !

ಪ್ರಕಾಶ್‌ : ಮಾಡಬಹುದು. ಆದರೆ ಈತ ಆಶ್ರಯ ಕೊಡಬೇಕಲ್ಲ.

ರುದ್ರಪ್ಪ : ಇದೊಳ್ಳೆ ಮಾತೆ! ಅಲ್ಲ ಮಾರಾಯಾ, ಪಿಸ್ತೂಲು ಹಿಡಿದುಕೊಂಡವನು ಕಾಲಿಂಗ್‌ ಬೆಲ್ಲೊತ್ತಿ ಮೇ ಐ ಕಮಿನ್‌ ಸಾರ್ ಅಂತ ನಿಮ್ಮಪ್ಪಣೇ ಕೇಳಿಬರ್ತಾನೋ? ಕಿಟಕೀನೋ ಬಾಗಿಲಾನೋ ಮುರಿದು ಒಳಗಡೆ ನುಗ್ತಾನೆ. ಪಿಸ್ತೂಲು ತೋರಿಸ್ತಾನೆ. ಆವಾಗ ಏನ್ಮಾಡ್ತೀರಿ?

ಪ್ರಕಾಶ್‌ : ದೇವರೇ ಕಾಪಾಡ್ಬೇಕು

ರುದ್ರಪ್ಪ : ನಿಮಗ್ಗೊತ್ತಿದೆ. ದೇವರು ಆ ದಂಧೆ ಬಿಟ್ಟಿದಾನೆ.

ಪ್ರಕಾಶ್‌ : ಹಾಗಿದ್ರೆ ಆ ಕೊಲೆಗಾರನೇ ಕಾಪಾಡ್ಬೇಕು.

ರುದ್ರಪ್ಪ : ಇದೀಗ ನಿಮ್ಮ ಮಾತಾಯಿತು. ನಿಮ್ಮ ಮನೆಯವರೊಬ್ಬರೇ ಇದಾರೆ ಅಂತ ಇಟ್ಕೊಳ್ಳಿ. ಆಗ್ಲೇ ಹೇಳಿದ ಹಾಗೆ ಕೊಲೆಗಾರ ಬಂದ. ಇವರೇನ್ಮಾಡಬಹುದು?

ಪ್ರಕಾಶ್‌ : ಸುಮ್‌ಸುಮ್ನೆ ಇದನ್ನೆಲ್ಲಾ ಯಾಕೆ ಯೋಚನೆ ಮಾಡೋದು ಸಾರ್?

ರುದ್ರಪ್ಪ : ಸುಮ್‌ಸುಮ್ನೆ ಅಂದ್ರೆ ಏನ್ರೀ ಪ್ರಕಾಶ್ ? ಇದು ಯಾವುದೇ ಕುಟುಂಬದಲ್ಲಿ ಯಾವುದೇ ಕ್ಷಣ ನಡೆದಿರಬಹುದಾದ ಘಟನೆ. ಹುಡುಗಾಟೀಕೇನಾ? ಅಷ್ಟಾಗಿ ಸಂದರ್ಭಕ್ಕೆ ತಕ್ಕ ಪ್ರತಿಕ್ರಿಯೆಗಳನ್ನ ಊಹಿಸೋದರಲ್ಲಿ ತಪ್ಪಿಲ್ಲವಲ್ಲ.

ಪ್ರಕಾಶ್‌ : ಅದು ಅವರವರ ಅಂತಸ್ತುಗಳನ್ನು ಅವಲಂಬಿಸಿರುತ್ತೆ ಅಂತ ನನ್ನ ಅಭಿಪ್ರಾಯ.
ನೀವೇನಂತೀರಿ?

ರುದ್ರಪ್ಪ : ಅಂದ್ರೆ ಹ್ಯಾಗೆ?

ಪ್ರಕಾಶ್‌ : ನೋಡಿ, ಆತ ಹೊಕ್ಕಿದ್ದು ಆರ್ಡಿನರಿ ಬಡವರ ಮನೆಯಾದರೆ ಆ ಹೆಂಗಸು ಅಸಭ್ಯವಾಗಿ ಬಯ್ಯಬಹುದು. ಅವಳೇ ಹೊಡೆಯಬಹುದು. ಗಲಾಟೆ ಮಾಡಬಹುದು. ಸಹಾಯಕ್ಕಗಿ ಅಕ್ಕ ಪಕ್ಕ ಕರೆದು ಆತನನ್ನು ಹೆದರಿಸಿ ಓಡಿಸಬಹುದು.

ರುದ್ರಪ್ಪ : ನಿಜ. ಒಪ್ಪಿಕೊಂಡೆ ನಿಮ್ಮ ಗ್ರಹಣಶಕ್ತಿ ತುಂಬಾ ಚುರುಕು.

ಪ್ರಕಾಶ್‌ : ಇನ್ನು ಉಪ್ಪರಿಗೆ ಮನೆಗಂತೂ ಅವನು ಹೋಗೋದೇ ಇಲ್ಲ. ಯಾಕೆಂದರೆ ವಾಚ್‌ಮನ್‌ ಇರ್ತಾನೆ. ನಾಯಿಗಳಿರುತ್ತವೆ, ನಾಲ್ಕೈದು ಕಡೆ ಫೋನುಗಳಿರುತ್ತವೆ.

ರುದ್ರಪ್ಪ : ಭಲೆ ಭಲೆ, ಆಮೇಲೆ?

ಪ್ರಕಾಶ್‌ : ಇನ್ನು ಮಧ್ಯಮ ವರ್ಗದ ಹೆಂಗಸು. ಅವರೂ ಆರ್ಡಿನರಿ ಹೆಂಗಸರ ಹಾಗೆ ಕಿರುಚಿ, ಒದರಿ ಅಕ್ಕಪಕ್ಕದ ಜನರನ್ನು ಕೂಡಿಸಬಹುದು.

ರುದ್ರಪ್ಪ : ಇದನ್ನು ನಾನು ಒಪ್ಪೋದಿಲ್ಲ. ಇವರು ಸುಶಿಕ್ಷಿತರು. ರೇಡಿಯೋ ಇದ್ದವರು , ರೇಡಿಯೋದ ‘ಹೊಸ ರುಚಿ’ ಕೇಳಿಯೇ ಅಡಿಗೆ ಮಾಡೋದನ್ನ ಕಲಿತವರು. ಒಟ್ಟಾರೆ ತಾತ್ಪರ್ಯ; ಮನೇಲಿದ್ದಾಗೆಲ್ಲ ರೇಡಿಯೋ ಕೇಳೋರು. ನಿಮಗೇ ಗೊತ್ತಿದೆ. ರೇಡಿಯೋದಲ್ಲಿ ಭಕ್ತಿಗೀತೆ ಜಾಸ್ತಿ ಮತ್ತು ಆ ಗೀತೆಗಳಲ್ಲ ಕಿರುಚುತ್ತವೆ. ಈಕೆ ಕಿರುಚಿದರೆ ಅಕ್ಕ ಪಕ್ಕ ಏನಂದ್ಕೊಳ್ತಾರೆ? ರೇಡಿಯೋ ವಾಲ್ಯೂಂ ಜಾಸ್ತಿ ಇಟ್ಟಿದಾರೆ ಅಂಥ. ಇವಳ ಕಿರುಚಾಟ ಜಾಸ್ತಿಯಾದರೆ ಅವ್ರೂ ತಮ್ಮ ರೇಡಿಯೋ ವಾಲ್ಯೂಂ ಜಾಸ್ತಿ ಇಟ್ಕೊಳ್ತಾರೆ ಅಷ್ಟೆ. ನಿಮಗೆ ಇದೂ ಗೊತ್ತು; ;ಉಪ್ಪರಿಗೆ ಮನೆಯೋರು ಬೇಕಾದರೆ ಹತ್ತು ಗುಡಿಸಲ ಮಧ್ಯೆ ಇದ್ದಾರು. ಆದರೆ ಮಾಧ್ಯಮ ವರ್ಗದವರು ಅಕ್ಕ ಪಕ್ಕ ತಮ್ಮಂಥೋರು ಇದ್ದಲ್ಲೇ, ಕೊನೆಪಕ್ಷ ತಮಗಿಂತ ದೊಡ್ಡೋರಿರೋವಲ್ಲೇ ಇರೋದು. ಒಬ್ಬರ ಸಹಾಯಕ್ಕೆ ಒಬ್ಬರು ಬರೋ ಜನ ಅಲ್ಲ ಅವರು.

ಪ್ರಕಾಶ್‌ : ಸಾರ್ ನೀವೇನು ಹೇಳಬೇಕಂತೀರಿ?

ರುದ್ರಪ್ಪ : ಹೇಳ್ತಾ ಇಲ್ಲಪ್ಪ, ಕೇಳ್ತಾ ಇದೀನಿ.
(ವಾಚ್ನೋಡಿಕೊಂಡು, ಇರಿ, ಒಂದ್ನಿಮಿಷ, ಒಂದು ಫೋನ್ಮಾಡ್ತೇನೆ)
(
ಫೋನ್ಮಾಡುವನು ಶೂನ್ಯ ಸ್ಥಳದಲ್ಲಿ ಚಿಂತಾಮಗ್ನನಾಗಿರುವ ದಾನಪ್ಪ ಫೋನೆತ್ತಿ ಕೊಳ್ಳುವನು)

ರುದ್ರಪ್ಪ : ಯಾರು, ದಾನಪ್ಪನವರಾ?

ದಾನಪ್ಪ : ಹೌಂದ್ರೀ, ನೀವ್ಯಾರು?

ರುದ್ರಪ್ಪ : ನಾನು ರುದ್ರಪ್ಪ ಸ್ವಾಮಿ. ಅಭಿನಂದನೆಗಳು. ಏನು ಸ್ವಾಮಿ ನಿಮ್ಮ ಪಾರ್ಟಿ ಜಯಭೇರಿ ಹೊಡೀತಾ ಇದ್ರೆ ನೀವಿನ್ನೂ ರೂಮಿನಲ್ಲೇ ಇದ್ದೀರಾ!

ದಾನಪ್ಪ : ಎಲ್ಲಿ ಹೋಗಿದ್ರಿ ಸಾಹೇಬರs? ಐದಾರು ಬಾರಿ ನಿಮಗೆ ಫೋನ್‌ ಮಾಡಿದ್ದೆ.
ಎರಡು ಬಾರಿ ನಿಮ್ಮ ಮನೀಗಿ ಬಂದಿದ್ದೆ.

ರುದ್ರಪ್ಪ : ಯಾಕೆ? ಏನಾದರೂ ಅರ್ಜೆಂಟಿತ್ತೇನು?

ದಾನಪ್ಪ : ಏನಿಲ್ರೀ… ನಿಮ್ಗೇನರೆ ಸುದ್ದಿ ಕಿವಿಗೆ ಬಿದ್ದೈತೇನ್ರಿ?

ರುದ್ರಪ್ಪ : ಹಾ ಏನೋ ಗಲಾಟೆ ಆಯ್ತಂತಲ್ಲ?

ದಾನಪ್ಪ : ಅದsರೀ, ಸಾಹೇಬರ, ಯಾವ್ದೋ ಒಂದು ಹೆಂಗಸು ಬಂದು ಹಿಂಗಿಂಗ್ರೀ ಸಾಹೇಬರ, ನನ್ ಮ್ಯಾಲ ಸುಳ್ಳಕೇಸ್‌ ಹಾಕ್ಯಾರ, ಇನ್ ಸ್ಪೆಕ್ಟರಗ ನೀವೊಂದು ಮಾತ ಹೇಳಿದರ ಉಪಕಾರ ಆಗತೈತ್ರಿ ಅಂದಳು.

ರುದ್ರಪ್ಪ : ಆಹಾ.

ದಾನಪ್ಪ : ಇನ್ಸ್ಪೆಕ್ಟರಗ ಫೋನು ಮಾಡಿ ಕೇಸ್‌ ನಿಕಾಲಿ ಮಾಡಿಸಿದೆ. ಆಗ, ಉಪಕಾರಾತ್ರೀ ಸಾಹೇಬರ ಅಂತ ಕಾಲು ಹಿಡ್ಯಾಕ ಬಂದಳ್ರೀ, ಆಗಂದ್ರ ಸಾಹೇಬರ, ಕೇಳಾಕ್ಹತ್ತೀರೇನ್ರೀ.

ರುದ್ರಪ್ಪ : ಹೂ ಹೂ

ದಾನಪ್ಪ : ಆಗ ನೋಡ್ರೀ ಸಾಹೇಬರ, ದೇವರಂತ ತಿಳಿದು ನಿಮ್ಮ ಮುಂದ ಖರೆ ಹೇಳ್ತೀನು, -ಯಾರೋ ಪೇಪರ್ ನವರು ಫೋಟೋ ಹಿಡ್ಕೊಂಬಿಟ್ಟರು.

ರುದ್ರಪ್ಪ : ಛೇ ಛೆ ಇಂಥ ಹೊತ್ನಲ್ಲಿ ಇದೇನು ಮಾತಿಕೊಂಡ್ರೀ ದಾನಪ್ಪ; ನಿಮ್ಮ ಗಲಾಟೆನೆಲ್ಲಾ ರೆಕಾರ್ಡ್ ಮಾಡಿಕೊಂಡಿದಾರಂತೆ.

ದಾನಪ್ಪ : (ಗಾಬರಿಯಾಗಿ) ಹೌಂದ್ರೀ? ನನಗ್ಗೊತ್ತಿsಲ್ರೀ ಸಾಹೇಬರ ನೀಔಏನಾರ ಮಾಡಿ ಕಾಪಾಡಕsಬೇಕ್ರೀ… ಆ ಪೇಪರ್ ನವರು ಹೆಂಗೂ ನಿಮ್ಮ ಮಾತು ಮೀರೋದಿಲ್ಲ.

ರುದ್ರಪ್ಪ : ನಡದದ್ದೇನು?

ದಾನಪ್ಪ : ನೀವೆಲ್ಲಿಂದ ಮಾತಾಡ್ರೀರಿ ಸಾಹೇಬರS? ಬೇಕಾದರ ನಾ ಅಲ್ಲಿಗೇ ಬರ್ತೀನಿ.

ರುದ್ರಪ್ಪ : ಅಲ್ಲಿಂದಲೇ ಹೇಳಿ, ಪರವಾಗಿಲ್ಲ.

ದಾನಪ್ಪ : ಸಾಹೇಬರS ನೀವು ನನ್ನ ತಂದಿ ಸಮ. ನಿಮ್ಮ ಮುಂದ ಮುಚ್ಚಿಟ್ಟುಕೊಳ್ಳುವಂಥಾದ್ದೇನೈತ್ರೀ? ಆ ಹೆಂಗಸು ಬಂದಳು ನೋಡಾಕ ಚೆಂದಿದ್ದಳಲು ಅನ್ರಿ! ಪೊಲೀಸ್‌ ಕೇಸಾಗೇತಿ, ಕಾಲ್‌ ಬೀಳ್ತೀನಿ ತಗಸ್ರೀ ಅಂದಳು. ಫೋನ್‌ ಮಾಡಿ ಕೇಸ ತೆಗೆಸಿದೆ. ನಾವಂಚೂರು ಗುಂಢಾಕಿದ್ದೆ ಸಾಹೇಬರ… ಮೈಮರತು ಏನೋ ಕೈ ಹಾಕಿದೆ; ಆ ಹೆಂಗಸು ಚೀರ್ಯಾಡಿ ತಪ್ಪಿಸ್ಕಂಡು ಓಡಿಹೋದಳು! ಇಷ್ಟುs ನಡೆದದ್ರೀ ಸಾಹೇಬರ. ದೇವರಾಣಿ ಇನ್ನೇನೂ ನಡೀಲಿಲ್ರೀ.

ರುದ್ರಪ್ಪ : ಮತ್ತೆ ಅದೇ ಹೊತ್ತಿಗೆ ಕೃಷ್ಣಪ್ಪ ಬಂದನಂತೆ.

ದಾನಪ್ಪ. ಹೌಂದು ಹೌಂದ್ರೀ ಸಾಹೇಬರs!

ರುದ್ರಪ್ಪ : ನೋಡಿ….ಮಾತಾಡಿದ್ದೆಲ್ಲ ರೆಕಾರ್ಡಾಗೋದು, ಫೋಟೋ ಹಿಡಿಯೋದು, ಹೊತ್ತಿಗೆ ಸರಿಯಾಗಿ ಕೃಷ್ಣಪ್ಪ ಬರೋದು, ಇದೆಲ್ಲ ಮುಂಚೆ-ಪ್ಲಾನ್‌ ಮಾಡಿದ್ದು ಅಂತ ಅನ್ನಿಸೋದಿಲ್ವಾ ನಿಮ್ಗೆ?

ದಾನಪ್ಪ : ಅಂದ್ರ ಹೆಂಗಂದಿರಿ ಸಾಹೇಬರ?

ರುದ್ರಪ್ಪ : ನೀವು ಮುಗ್ಧರು ಅನ್ನೋದು ಇದಕ್ಕೇ ನೋಡಿ. ನಾನೇನೋ ಮೊನ್ನೆ ನಿಮಗೆ ಶ್ರೀಕಾಂತಜೀ ಕೊನೆ ಆಸೆ ಹೇಳಿದ್ದೆ. ನೀವು ಅದನ್ನ ಯಾರ್ಯಾರಿಗೋ ಹೇಳಿದ್ದೀರಿ.

ದಾನಪ್ಪ : ನಾ ಯಾರ್ಮುಂದೂ ಬಾಯಿ ಬಿಟ್ಟಿಲ್ಲರೀ ಸಾಹೇಬರ!

ರುದ್ರಪ್ಪ : ಹೇಳಿರ್ಲೆಬೇಕು. ನೀವು ಮುಖ್ಯಮಂತ್ರಿ ಸ್ಪರ್ಧೆಗೆ ನಿಲ್ತೀರಿ ಅಂತ ಯಾವಾಗ ಗೊತ್ತಾಯ್ತೋ? ಕೃಷ್ಣಪ್ಪನಿಗೆ, ಆವಾಗ್ಲೆ ಇದೆಲ್ಲ ಆಗಿರೋದು.

ದಾನಪ್ಪ : (ಖಾತ್ರಿಯಾಗಿ ತಲೆಯಲ್ಲಿ ಬೆಳಕು ಹೊಳೆದಂತೆ) ಆಹಾ ಹಾಹಾ.. ಹೌಂದ್ರೀ ಸಾಹೇಬರ! ಏನ್‌ ಖೊಟ್ಟಿ ಮಗಾರೀ ಆ ಕೃಷ್ಣಪ್ಪ! ಸಾಹೇಬರs, ನಾ ಮಂತ್ರಿ ಆಗ್ಲಿ ಬಿಡ್ಲಿ ಆ ಕೃಷ್ಣ್ಯಾ ಅದ್ಹೆಂಗ ಮುಖ್ಯಮಂತ್ರಿ ಆಗ್ತಾನೊ ನೋಡೇ ಬಿಡ್ತೀನಿ. ಸಾಹೇಬರ ಈ ಪೇಪರ್ ಕೇಸೊಂದು ಬರದಾಂಗ ಮಾಡ್ರೀ ಅಷ್ಟೆ.

ರುದ್ರಪ್ಪ : ಪೇಪರ್ ನವರಿಗೆ ಹೇಳ್ತೀನಿ, ಅದು ಬೇರೆ ಮಾತು,-

ದಾನಪ್ಪ : ಅಷ್ಟಾದರ ಸಾಕ್ರೀ ಸಾಹೇಬರ. ನೀವs ನಮ್ಮ ಮುಖ್ಯಮಂತ್ರಿಗೋಳು. ನೀವು ಪ್ರಮಾಣ ವಚನ ಸ್ವೀಕರಿಸಿದ ಕೂಡಲೆ ಪೈಲಾ ಮಾಲಿ ನಂದs  ನೋಡ್ರಿ.

ರುದ್ರಪ್ಪ : ಈ ಸಿದ್ದಲಿಂಗೂ…….

ದಾನಪ್ಪ : ಏ ಬಿಡ್ರೀ. ನೀವೆಲ್ಲಿದ್ದೀರಿ ಹೇಳ್ರಿ. ಈಗ ಬಂದ್ಬಿಡ್ತೀನಿ. ಮಾತಾಡೋಣು.

ರುದ್ರಪ್ಪ : ಮನೆ ಕಡೆ ಬನ್ನಿ. ನಮಸ್ಕಾರ,

ದಾನಪ್ಪ : ಈಗ್ಭಂದ ಬಡ್ತೀನಿ ನೋಡ್ರಿ.
(ಇಬ್ಬರೂ ಫೋನಿಡುವರು. ರುದ್ರಪ್ಪ ಬಂದು ಮತ್ತೆ ಮೊದಲಿನಂತೆಯೇ ಕೂರುತ್ತಾ)

ರುದ್ರಪ್ಪ : ಕೇಳಿದಿರೇನಪ್ಪ ರಾಜಕೀಯ?

ಪ್ರಕಾಶ್‌ : ನನಗೇನೂ ಅರ್ಥವಾಗಲಿಲ್ಲ ಸಾರ್.

ರುದ್ರಪ್ಪ : ಅಯ್ಯೋ ಬಿಡಿ, ಪಾಪ ನಿಮಗ್ಯಾಕೆ? ಮೂಲ ಸಮಸ್ಯೆಗೆ ಬರೋಣ, ನೀವು ಅಥವಾ ನಿಮ್ಮಂಥೋರು ಮನೆಯಲ್ಲಿದ್ದಾಗ ಅಂದರೆ ನಿಮ್ಮ ಹೆಂಗಸರು ಅಥವಾ ಮಧ್ಯಮ ವರ್ಗದ ಹೆಂಗಸು ಒಬ್ಬಳೆ ಮನೆಯಲ್ಲಿದ್ದಾಗ ಶ್ರೀಕಾಂತಜೀನ್ನ ಕೊಂದವನು ಬಂದ. ಬಂದರೆ ಆವಾಗ ಇವರು ಏನು ಮಾಡ್ತಾರೆ?

ಪ್ರಕಾಶ್‌ : ಮೂರ್ಛೆ ಬೀಳಬಹುದು. ಸಾಯಬಹುದು. ಅಥವಾ ಬಾಯಿ ಮುಚ್ಚಿಕೊಂಡು ಅವನಿಗೆ ಆಶ್ರಯ ಕೊಡಬಹುದು, ಆಗದಿರೋ ಮಾತಿಗೆ ನಾವ್ಯಾಕೆ ತಲೆ ಕೆಡಿಸಿಕೋಬೇಕು? ನಿಮ್ಮ ಮಾತು ಕೇಳಿದರೆ,  ನನ್ನಿಂದ ನಿಮಗೆ ಯಾವುದೋ ಒಂದು ಉತ್ತರಬೇಕು; ಅದು ಸಿಕ್ತಾ ಇಲ್ಲ ಸಿಕ್ಕೋ ತನಕ ನೀವು ಬಿಡೋದಿಲ್ಲ. ಅಥವಾ ಅದು ಯಾವ ಉತ್ತರ ಅಂತ ಹೇಳಿದರೆ ಅದನ್ನೇ ಹೇಳಿ ಬಿಡಬಹುದು. ಸುಮ್ನೆ ಎಷ್ಟಂತ ಶಬ್ದಗಳನ್ನು ಎಳೆದಾಡೋದು?

ರುದ್ರಪ್ಪ : ಸಿಟ್ಟಿಗೇಳಬೇಡೀಪ್ಪಾ, ನೀವು ಬುದ್ಧಿ ಜೀವಿಗಳು, ಮಾತೆತ್ತಿದರೆ ಜನ, ದೇಶ, ಸಂಸ್ಕೃತಿಯನ್ನ ಬಯ್ಯಬೇಕಾದವರು, ಇಂಥಾದ್ದನ್ನೆಲ್ಲಾ ವೈಯಕ್ತಿಕವಾಗಿ ತಗೊಂಡರೆ ಹೇಗೆ? ನೀವೇ ಹೇಳಿ, ನಾನೆಂದಾದರೂ ಹರಟೆ ಹೊಡೆಯೋ ಪೈಕೀನಾ? ಆಕಳಿಸೋದಕ್ಕೂ ಟೈಮಿಲ್ಲಾಂತೀನಿ ಖಂಡಿತ ನಾನೇನೊ ನಿಮ್ಮನ್ನ ಕೇಳಬೇಕಾದ್ದಿದೆ. ಮತ್ತು ಅದಕ್ಕಾಗಿ ಸಂಕೋಚವಾಗ್ತಾ ಇದೆ.

ಪ್ರಕಾಶ್‌ : ನನ್ಹತ್ರ ನಿಮಗ್ಯಾಕೆ ಸಾರ್ ಸಂಕೋಚ? ನಿಮಗೂ ಗೊತ್ತಿದೆ-ನಾನು ನಿಮ್ಮನ್ನ ಇಷ್ಟ ಪಡ್ತೀನಿ. ನಾಳೆ ನೀವು ಮಂತ್ರಿ ಆದ್ರೆ ನಿಮ್ಮೆಲ್ಲ ಅಭಿಮಾನಿಗಳ ಹಾಗೆ ನನಗೂ ಸಂತೋವಾಗ್ತದೆ. ನಿಸ್ಸಂಕೋಚವಾಗಿ ಹೇಳಿ.

ರುದ್ರಪ್ಪ : ಹೇಳಿದೆನಲ್ಲ ಕವಿಗಳೇ,

ಪ್ರಕಾಶ್‌ : ಏನಂತ, ಆ ಕೊಲೆಗಾರ ನಾನಿಲ್ಲದಾಗ ನನ್ನ ಮನೆಗೆ ಬಂದಿದ್ದಾಂತ್ಲ?

ರುದ್ರಪ್ಪ : ಹೌದು.

ಪ್ರಕಾಶ್‌ : (ಆಘಾತದಿಂದ ಎದ್ದು ನಿಂತು)  ಏನಂದ್ರಿ ಸಾರ್!

ರುದ್ರಪ್ಪ : ಇವೊತ್ತು ಪೋಲೀಸ್‌ ಇನ್‌ಸ್ಪೆಕ್ಟರ್ ಫೋನ್‌ ಮಾಡಿದ್ರು. ಶ್ರೀಕಾಂತಜೀನ್ನ ಕೊಂದ ವ್ಯಕ್ತಿ ಆ ದಿನ ನಿಮ್ಮ ಮನೆಯಲ್ಲಿ ಅಂದ್ರೆ ಈ ಮನೆಯಲ್ಲಿ ಬಚ್ಚಿಟ್ಟು ಕೊಂಡಿದ್ದ ಅಂತ ಅವರಿಗೆ ಗೊತ್ತಾಗಿದೆ. ನಿಮ್ಮ ಬಗ್ಗೆ ನನ್ನನ್ನ ಕೇಳಿದರು. ಇದು ಸಾಧ್ಯವಿಲ್ಲ ನಾನೊಂದು ಸಲ ಮಾತಾಡಿ ಹೇಳ್ತೀನಿ ಅಂದೆ. ಸುಮ್ಮನಾಗಿದಾರೆ. ಪೋಲೀಸರು ಮತ್ತು ನಿಮ್ಮ ಮಧ್ಯೆ ಮೂಗು ತೂರೋದಕ್ಕೆ ನನಗೆ ಇಷ್ಟ ಇಲ್ಲ. ಆದರೆ ನೀವು ನನ್ನ ಜನ ಈ ಮನೆಯನ್ನ ನಿಮಗೆ ಕೊಡಿಸಿದವ ನಾನು. ಅಥವಾ ಈ ಕೇಸಿನಲ್ಲಿ ನೀವ್ಯಾಕೆ ತಲೆ ಹಾಕಬೇಕು ಅಂತ ನೀವು ಹೇಳೋದಾದರೆ, ಇಗೋ ಹೊರಟೆ.

ಪ್ರಕಾಶ್‌ : (ಭೀತನಾಗಿ) ಸಾರ್ ಇದು ಶುದ್ಧ ಸುಳ್ಳು. ಆ ದಿನ ನಾನು ಮನೆಯಲ್ಲೇ ಇದ್ದೆ.

ರುದ್ರಪ್ಪ : ನೀವು ಮನೆಯಲ್ಲಿದ್ದಿರಿ ಅಂದರೆ ಆ ಮಾತು ಅಲ್ಲಿಗೆ ಮುಗೀತು.

ಪ್ರಕಾಶ್‌ : ಪೋಲೀಸರು?

ರುದ್ರಪ್ಪ : ನಿಜ, ಪೋಲೀಸರು ಅನುಮಾನಪಡೋದಕ್ಕೆ ಕಾರಣ ಇರಬೇಕಲ್ಲ?

ಪ್ರಕಾಸ್‌ : ಏನಿದ್ದೀತು?

ರುದ್ರಪ್ಪ : ಅದು ನಿಮಗ್ಗೊತ್ತಿರಬೇಕು. ಅದನ್ನೇ ಕೇಳ್ತಾ ಇದೀನಿ. ಆದರೆ ನೀವು ಈ ಥರಾ ಖಂಡಿತಾ ಗಾಬರಿಯಾಗಬಾರದು. ನೀವೆಂಥ ಜನ ಅಂತ ನನಗ್ಗೊತ್ತು. ನೀವು ನಿಧಾನವಾಗಿ ಆ ದಿನ ನಡೆದದ್ದನ್ನ ಹೇಳಿದರೆ ನಾನು ನಿಮಗೆಲ್ಲ ಸಹಾಯ ಮಾಡಬಲ್ಲೆ-ಅಂತ ತಿಳ್ಕೋಬಹುದು. ದಿನಾ ಬೆಳಗಾದರೆ ನೋಡಿ. ಎಷ್ಟೊಂದು ಕೆಟ್ಟ ಸುದ್ದಿ ಕಿವಿಗೆ ಬೀಳುತ್ತವೆ. ಅದಕ್ಕೆಲ್ಲಾ ನಾ ಬೆಚ್ಚಿ ಬೀಳ್ತೀನಾ? ಕೇಳಿದ ಕೂಡಲೆ ನಕ್ಕು ಬಿಡ್ತೇನೆ ಅಷ್ಟೆ. ನೀವೂ ಹಾಗಿರಬೇಕು.

ಪ್ರಕಾಶ್‌ : ಅದರಿದು ಸತ್ಯ ಅಲ್ಲ ಸಾರ್. ಆ ದಿನ ನಾನು ಮನೆಯಲ್ಲಿದ್ದೆ.

ರುದ್ರಪ್ಪ : ಶ್ರೀಕಾಂತಜೀ ಭಾಷಣ ಕೇಳಲಿಕ್ಕೆ ಹೋಗಿರ್ಲಿಲ್ವಾ?

ಪ್ರಕಾಶ್‌ : ಹೋಗಿದ್ದೆ.

ರುದ್ರಪ್ಪ : ನೋಡಿ, ನೋಡಿ-ಮನೇಲೂ ಇದ್ರಿ, ಶ್ರೀಕಾಂತಜೀ ಭಾಷಣ ಕೇಳಲಿಕ್ಕೂ ಹೋಗಿದ್ರಿ! ನೀವು ಒಂದೇ ಉಸಿರಿನಲ್ಲಿ ಎರಡಭಿಪ್ರಾಯದ ಮಾತು ಹೇಳಿದರೆ ಹ್ಯಾಗೆ?

ಪ್ರಕಾಶ್‌ : ಭಾಷಣಕ್ಕೆ ಹೋಗಿದ್ದೆ. ಗಲಾಟೆ ಆದ ಕೂಡಲೇ ಮನೆಗೆ ಬಂದೆ. ಮನೇಲಿ ಸರೋಜ ಬಿಟ್ಟು ಯಾರೂ ಇರಲಿಲ್ಲ.

ರುದ್ರಪ್ಪ : ಅಂದ್ರೆ ಶ್ರೀಕಾಂತಜೀ ಕೊಲೆ ಆದ ಮೇಲೆ ನೀವು ಮನೆಗೆ ಬಂದ್ರಿ .

ಪ್ರಕಾಶ್‌ : ಹೌದು. ಆದರೆ ಕೊಲೆಗಾರ ಇಲ್ಲಿಗೆ ಬಂದಿದ್ದ ಅನ್ನೋದಕ್ಕೆ ಪೋಲೀಸರ ಹತ್ತಿರ ಸಾಕ್ಷಿ ಏನಿದೆ? ಅಥವಾ ಕೊಲೆ ಆದ ಮೇಲೆ ಓಡಿ ಓಡಿ ಮನೆಗೆ ಬಂದೆ. ನನ್ನನ್ನೇ ಕೊಲೆಗಾರ ಅಂದ್ಕೊಂಡ್ರೋ!

ರುದ್ರಪ್ಪ : ನಿಮ್ಮ ಬಗ್ಗೆ ಅಂಥ ಅನುಮಾನ ಸಾಧ್ಯ ಇಲ್ಲ. ಆದರೂ ಆಧಾರ ಇಲ್ಲದೆ ಪೋಲೀಸರು ಅನುಮಾನಪಡಲಾರರು. ಅಥವಾ ಸ್ಟೇಷನ್‌ಗೆ ಜೊತೆಯಲ್ಲಿ ಬರ್ತೀರೇನು? ವಿಚಾರಿಸೋಣ.

ಪ್ರಕಾಶ್‌ : ಬನ್ನಿ ಹೋಗೋಣ
(ಪ್ರಕಾಶ್ಅವಸರದಲ್ಲಿ ಚಪ್ಪಲಿ ಹಾಕಿಕೊಂಡು ಸಿದ್ಧನಾಗುವನು. ಆದರೆ ಮತ್ತೆ ರುದ್ರಪ್ಪನ ಬಳಿಗೆ ಬಂದು)
ಸಾರ್ ಇಲ್ಲಿಂದಲೇ ನೀವು ಫೋನು ಮಾಡಿದರೆ?-

ರುದ್ರಪ್ಪ : ಹಾಗೂ ಆದೀತು.
(ರುದ್ರಪ್ಪ ಫೋನ್ಮಾಡುವನಲು. ಶೂನ್ಯ ಸ್ಥಳದಲ್ಲಿ ಒಬ್ಬ ಹೆಂಗಸು ಬರುವಳು)

ರುದ್ರಪ್ಪ : ಹಲೋ, ಇನ್‌ಸ್ಪೆಕ್ಟರಿದ್ದಾರೇನು?

ಹೆಂಗಸು : ಹಲೋ, ಯಾರು ಬೇಕಿತ್ತು?

ರುದ್ರಪ್ಪ : ಸ್ವಲ್ಪ ಇನ್‌ಸ್ಪೆಕ್ಟರನ್ನ ಕರೀತೀರಾ? ಅಜೇಂಟ್‌ ಪ್ಲೀಸ್‌.

ಹೆಂಗಸು : ಇದು ಇನ್‌ಸ್ಪೆಕ್ಟರ್ ಮನೆ ಅಲ್ವಲ್ಲ. ಯಾವ ನಂಬರ್ ಬೇಕಿತ್ತು ನಿಮಗೆ?

ರುದ್ರಪ್ಪ : ಹಲೋ ಇನ್‌ಸ್ಪೆಕ್ಟರ್. ನಮಸ್ಕಾರ ಹ್ಯಾಗಿದ್ದೀರಿ ಸ್ವಾಮಿ?

ಹೆಂಗಸು : ಯಾರು ನೀವು?

ರುದ್ರಪ್ಪ : ಮತ್ತೆ ಯಾರ ಮೇಲೆ ಬಲೆ ಬೀಸಿದ್ದೀರಿ? ಯಾರಾದರೂ ಸಿಕ್ಕರಾ? ನೀವು ಬಿಡಿ, ಎಷ್ಟೆಷ್ಟು ಜನ ಸಿಕ್ಕರೆ ಅಷ್ಟಷ್ಟೂ ಹಿಡಿದುಕೊಂಡು ಹಿಂಡ್ತೀರಾ.

ಹೆಂಗಸು : ಹಲೊ ರಾಂಗ್‌ ನಂಬರ್ (ಫೋನು ಕುಕ್ಕುವಳು)

ರುದ್ರಪ್ಪ : ನಾನು ರುದ್ರಪ್ಪ ಸ್ವಾಮಿ. ಆಪೋಸಿಟ್‌ ಪಾರ್ಟಿ ಲೀಡರ್. ಗುರುತಾಯ್ತಾ? ಆದಾಯ್ತಲ್ಲ-ಇವೊತ್ತು ಬೆಳಿಗ್ಗೆ ನನಗೇನೋ ಹೇಳಿದಿರಲ್ಲಾ ಅದೇ ನಮ್ಮ ಮಿಸ್ಟರ್ ಪ್ರಕಾಶ್‌ ಮನೆಯಲ್ಲಿ ಶ್ರೀಕಾಂತಜೀ ಕೊಲೆಗಾರ ಬಚ್ಚಿಟ್ಟುಕೊಂಡಿದ್ದ ಅಂತ… ಹಾಹಾ ಆ ವಿಚಾರಾನೇ ಕೇಳ್ತಾ….ಅಲ್ಲಾ ಸ್ವಾಮಿ ಆ ಕೊಲೆಗಾರ ಇಲ್ಲೇ ಅಡಗಿದ್ದ ಅನ್ನೋಕೆ ನಿಮ್ಮಲ್ಲೇನಾದರೂ ಸಾಕ್ಷಿ ಪುರಾವೆ ಇದೆಯಾ?… ಪಿಸ್ತೂಲು… ಅಂಥಾದ್ದೇನೂ ಇಲ್ಲ ಸ್ವಾಮಿ, ಸ್ವತಃ ನಾನೇ ನೋಡಿದೆ… ಯಾರದೋ ಮಾತು ಕೇಳಿಕೊಂಡು ನನ್ನ ಸ್ನೇಹಿತರ ಬಗ್ಗೆ ಅನುಮಾನ ಪಟ್ಟರೆ ಹೇಗೆ?…ಹೂ…ಹೂಹೂ… ಥ್ಯಾಂಕ್ಸ್‌ (ಫೋನ್ಕೆಳಗಿಡುವನು) ಅವರು ಹೇಳಿದ್ದು ಕೊಲೆಗಾರ ಬಚ್ಚಿಟ್ಟುಕೊಂಡಲ್ಲೆ ಪಿಸ್ತೂಲು ಬಚ್ಚಿಟ್ಟಿದ್ದಾನಂತೆ. ಅದು ಇದ್ರೆ ನೋಡಿ ಅಂಥ ಹೇಳಿದ್ರು, ಇಲ್ಲಿಲ್ಲಾ ಅಂದೆ.

ಪ್ರಕಾಶ್‌ : (ದೊಡ್ಡ ಭಾರ ಇಳುವಿದ ಹಾಗೆ) ಸಧ್ಯ!

ರುದ್ರಪ್ಪ : ಯಾವುದಕ್ಕೂ ಒಂದ್ಸಲ ಮನೆ ಹುಡುಕಿ ನೋಡಿ; ಪೋಲೀಸರಿಗೆ ಅನುಮಾನ ಇದ್ದ ಮೇಲೆ…

ಪ್ರಕಾಶ್‌ : ಇದ್ರೆ ತಾನೆ ಏನಾದ್ರೂ ಸಿಕ್ಕೋದು?

ರುದ್ರಪ್ಪ : ಅದು ಸರಿ, ಮಧ್ಯೆ ನಾನು ನಿಂತಿರೋದರಿಂದ ನನ್ನ ಸಮಾಧಾನಕ್ಕಾಗಿಯಾದರೂ ಒಂದು ಸಲ ನೋಡಿಯಪ್ಪಾ.

ಪ್ರಕಾಶ್‌ : ನೀವೇ ನೋಡ್ಕೊಳ್ಳಿ ಸಾರ್

ರುದ್ರಪ್ಪ : ಮನೆ ನಿಮ್ಮದು. ನೀವು ನೋಡಿ.

ಪ್ರಕಾಶ್‌ : (ಆತಂಕರಹಿತನಾಗಿ ಒಂದೊಂದನ್ನೇ ರುದ್ರಪ್ಪನಿಗೆ ಸಾಕ್ಷಿಗಾಗಿ ಎಂಬಂತೆ ತೋರಿಸುವನು) ನೋಡಿ ಸಾರ್ ಇದು ಬೀರು. ಸರಿಯಾ? ಇದು ಡ್ರಾಯರ್ ಸರಿಯಾ? ಇದು ಡ್ರೆಸ್ಸಿಂಗ್‌ ಟೇಬಲ್‌ ಸರಿಯಾ?

ರುದ್ರಪ್ಪ : ನಾನಿನ್ನು ಬರ್ತೇನೆ ಪ್ರಕಾಶ್‌, ನೋಡಿ ನಿಮಗೆ ಖಾತ್ರಿ ಆದರಾಯ್ತು-ಹಾಗೇ ಹಾಸಿಗೆ ಕೆಳಗೆಲ್ಲ ನೋಡಿ. ಸಿಕ್ಕರೆ ಸರಿ ಸಿಗದಿದ್ದರೆ ಇನ್ನೂ ಸರಿ.
(ರುದ್ರಪ್ಪ ಮೆಲ್ಲಗೆ ಹೊರಡುವನು . ಪ್ರಕಾಶ್ಹಾಗೇ ಹುಡುಕುತ್ತಾ ಹಾಸಿಗೆ ಎತ್ತುವನು. ಅದರ ಕೆಳಗೆ ಪಿಸ್ತೂಲನ್ನು ಕಂಡು ಸಾರ್ ಎಂದು ಕಿರಚುವನು. ರುದ್ರಪ್ಪನೂ ಹೋಘಿ ನೋಡಿ ಆಘಾತವನ್ನು ಅಭಿನಯಿಸಿವನು. ಪ್ರಕಾಶ್ಹಾಸಿಗೆ ಮೇಲೆ ಅಲ್ಲೇ ಕುಸಿಯುತ್ತಾನೆ.)

ರುದ್ರಪ್ಪ : ಧೈರ್ಯ ತಗೋಬೇಕು ಪ್ರಕಾಶ್‌. ನೀವು ಮುಗ್ಧರು ಅಂತ ನಾನು ಬಲ್ಲೆ, ಹಾಗಂತ ಯಾರ ಎದುರಿಗೂ ಸಾಕ್ಷಿ ಹೇಳಬಲ್ಲೆ. ಬೆನ್ನ ಹಿಂದೇನೋ ಮೋಸ ನಡೆದಿರಬೇಕು. ಯಾವುದಕ್ಕೂ ನಾನಿದ್ದೀನಿ ಅಂತ ನಿಮಗೆ ನೆನಪಿರಲಿ. ನನಗೂ ಇದು ಆಘಾತವೆ. ನಿಮಗಾದದ್ದು ನನಗಾಗಿದ್ದರೆ ಇಷ್ಟೊತ್ತಿನಲ್ಲಿ ನಾಕೈದು ಬಾರಿ ಮೂರ್ಛೆ ಬಿದ್ದಿರುತ್ತಿದ್ದೆ. ನೀವು ಬುದ್ದಿ ಜೀವಿಗಳು ಧೈರ್ಯ ತಂದ್ಕೋಬೇಕು. ನಿಮ್ಮ ಮನೆಯವರ ಜೊತೆ ಈ ಬಗ್ಗೆ ಮಾತಾಡಿದ್ದೀರಾ?

ಪ್ರಕಾಶ್‌ : (ನಿರಾಶೆಯಿಂದ) ಎಲ್ಲ ಸಾರ್,

ರುದ್ರಪ್ಪ : ಅಥವಾ ಅವರೇ ಏನಾದರೂ ಹೇಳಿದರಾ?

ಪ್ರಕಾಶ್‌ : ಇಲ್ಲ ಸಾರ್.

ರುದ್ರಪ್ಪ : ನೀವು ಸಿಟ್ಟಾಗೋಲ್ಲ ಅಂದ್ರೆ ಒಂದು ಮಾತು ಕೇಳ್ತೀನಿ.

ಪ್ರಕಾಶ್‌ : ಕೇಳಿ ಸಾರ್.

ರುದ್ರಪ್ಪ : ನಿಮ್ಮ ಮನೆಯವರ ಮೇಲೆ ನಿಮಗೆ ನಂಬಿಕೆ ಇದೆಯಾ?

ಪ್ರಕಾಶ್‌ : ಸಾರ್!

ರುದ್ರಪ್ಪ : ಇದು ನನಗೆ ಮುಖ್ಯ ಈಗಷ್ಟೇ ಇನ್‌ಸ್ಪೆಕ್ಟರಿಗೆ ಮನೆಯೆಲ್ಲ ನಾನೇ ಹುಡುಕಿದೆ ಅಂತ ಹೇಳಿದೆ . ಈಗ ನೋಡಿದರೆ ನಾ ಎಂಥ ದಡ್ಡ ಅನ್ನಸ್ತಿದೆ. ಎಲ್ಲರ ಆತ್ಮಗಳು ಕಪ್ಪಾಗಿವೆ ಪ್ರಕಾಶ್‌ ಇದ್ದುದರಲ್ಲಿ ಪಾಲಿಷ್‌ ಮಾಡಿಕೊಂಡು ತೋರಿಸಬೇಕು.

ಪ್ರಕಾಶ್‌ : ಸಾರ್ ನನ್ನ ಹೆಂಡತಿ ಮೇಲೆ ನನಗೆ ವಿಶ್ವಾಸ ಇದೆ.

ರುದ್ರಪ್ಪ : ಹಾಗಿದ್ದರೆ ಇದು ಪಿಸ್ತೂಲಲ್ವಾ?

ಪ್ರಕಾಶ್‌ : (ಮೌನ).

ರುದ್ರಪ್ಪ : ಇಬ್ಬರಲ್ಲಿ ಒಬ್ಬರಿಗೂ ಗೊತ್ತಿಲ್ಲದೆ ಇದಿಲ್ಲಿ ಬಂದಿರಲಾರದು ಅಲ್ವಾ?

ಪ್ರಕಾಶ್‌ : (ಮೌನ).

ರುದ್ರಪ್ಪ : ಹೆಂಗಸು ಅನೇಕ ಅರ್ಥಗಳಲ್ಲಿ ಅಪಾಯಕಾರಿ ಪ್ರಕಾಶ್‌. ಕೆನ್ನೆ ಮೇಲೆ ರೇಜರ್ ಆಡಿಸಿದ ಹಾಗೆ ಹೆಂಗಸನ್ನ ಆಡಿಸಬೇಕು, ತುಸು ಎಚ್ಚರ ತಪ್ಪಿದರೂ ಆಯ್ತು ರಕ್ತ ಸುರಿಸಬೇಕಾಗ್ತದೆ. ಅಥವಾ ಇಂಥ ಮಾತನ್ನ ನಾನು ಯಾಕೆ ಹೇಳ್ತಾ ಇದೀನಂತಲೂ ನೀವು ಬುದ್ಧಿಜೀವಿಗಳು ತಿಳ್ಕೊಬೇಕು. ಇಷ್ಟಾಗಿ ನೀವು ದಡ್ಡನಾಗಿರಬೇಕಂತ ತೀರ್ಮಾನ ಮಾಡಿದ್ದರೆ ನಾನೇನೂ ಮಾಡ್ಲಿಕ್ಕಾಗೋದಿಲ್ಲ. ಗಂಡ ಹೆಂಡತಿ ಇಬ್ಬರೂ ಮಾತಾಡಿಕೊಂಡು ನನಗೆ ಆಮೇಲೆ ತಿಳಿಸಿ. ಈ ಮಧ್ಯೆ ಕೊಲೆಗಾರನೇನಾದರೂ ಈ ಕಡೆ ಬಂದರೆ – ನೆನಪಿರಲಿ. ಪೋಲೀಸರಿಗೆ ಫೋನ್‌ ಮಾಡಬೇಡಿ. ಯಾವುದರಲ್ಲೂ ನನ್ನ ಹೆಸರು ತರಬೇಡಿ, ತಂದರೆ ಖಂಡಿತಾ ನಿಮಗೆ ಅಪಾಯ ತಪ್ಪಿದ್ದಲ್ಲ. ನಾನು ಬಂದಿದ್ದೆ ಅಂತ ಕೊಲೆಗಾರನಿಗೂ ಹೇಳಬೇಡಿ. ನಿಮ್ಮ ಹೆಂಡತಿಗೂ ಅಷ್ಟೆ. ಕೊನೇಪಕ್ಷ ನಿಮ್ಮನ್ನು ಉಳಿಸೋದಕ್ಕಾದರೂ ನಾನು ಶುದ್ಧನಾಗಿರಬೇಕು.
(ಹೋಗುವನು, ಪ್ರಕಾಶ್ಕಂಗಾಲಾಗಿ ಕೂರುವನು.)