(ಬಾಡಿಗೆ ಕೊಡಲೆಂದೇ ಕಟ್ಟಿಸಿದ ಸಣ್ಣ ಮನೆ. ನಮಗೆ ಕಾಣುತ್ತಿರುವುದು ಆ ಎತ್ತರ ಮನೆಯ ಎರಡನೆಯ ಅಂತಸ್ತು ಮಾತ್ರ. ಇಕ್ಕಟ್ಟಾದ ಸ್ಟೇರ್ ಕೇಸ್ ಮುಗಿಯುವಲ್ಲಿ ಪ್ರೇಕ್ಷಕರ ಎಡಬದಿಗೆ ಮುಂಬಾಗಿಲಿದೆ, ಮುಕ್ಕಾಲು ರಂಗಭೂಮಿ ಮನೆಯ ಹಾಲ್ ಮತ್ತು ಬೆಡ್ ರೂಂನಿಂದ ತುಂಬಿದೆ. ನೇಪಥ್ಯದ ಕಡೆ ಬೆಡ್ ರೂಮಿನಲ್ಲೊಂದು ಫ್ರೆಂಚ್ ವಿಂಡೋ ಇದೆ. ಅದನ್ನು ತೆರೆದಾಗ ದೂರದಲ್ಲಿಯ ಉಪ್ಪರಿಗೆಯ ಮನೆಗಳ ಹಿಂಭಾಗ ಮತ್ತು ಒಂದೆರಡು ಮರಗಳತುದಿ ಕಾಣಿಸುತ್ತವೆ. ಅವುಗಳಾಚೆಗಿನ ಆಕಾಶ ಖಂಡಿತ ಕಾಣಿಸುವುದಿಲ್ಲ. ಆ ಮನೆಗಳ ಮಧ್ಯೆ ಇಕ್ಕಟ್ಟಾದ ಸಂದಿ ಇರುವುದನ್ನು, ಅಲ್ಲಿ ಬೆಳಕು ಸಾಲದ್ದನ್ನು ಅವುಗಳ ವಿನ್ಯಾಸವೇ ಸೂಚಿಸುತ್ತದೆ. ಹಾಲಿಗಂಟಿ ಕಿಚನ್ನಿದೆ. ನೋಡಿದೊಡನೆ ಈ ಮನೆ ಮಧ್ಯಮ ವರ್ಗದವರದೇ ಎಂದು ತೋರುವಂತೆ ಅಸಹ್ಯ ಅಭಿರುಚಿಯಿಂದ ಸಿಂಗರಿಸಿರಬೇಕು. ಅಲ್ಲಿ ಬೆಲೆಬಾಳುವ ವಸ್ತುಗಳ ಅನಗತ್ಯ ಪ್ರದರ್ಶನವಿದೆ. ಕೃತಕತೆ ಮತ್ತು ಶ್ರೀಮಂತಿಕೆಯ ಅನುಕರಣೆ ಇದೆ. ಕಿಚನ್ ಬಾಗಿಲ ಬಳಿ ಒಂದು ಫ್ರಿಜ್ಜಿದೆ. ನೇಪಥ್ಯದ ಗೋಡೆಗಂಟಿ ಒಂದು ಟೇಬಲ್ಲಿದೆ. ಅದರ ಮೇಲೊಂದು ರೇಡಿಯೋ ಸೆಟ್ಟಿದೆ. ಟೇಬಲ್ಲಿನ ಅಕ್ಕಪಕ್ಕ ಎರಡು ಬೆತ್ತದ ಕುರ್ಚಿಗಳಿವೆ. ಹಾಲಿನಲ್ಲಿ ರತ್ನಗಂಬಳಿ ಹಾಸಿದ್ದು ಮಧ್ಯೆ ಒಂದು ಸೋಫಾ ಸೆಟ್ಟಿದೆ. ಫೋನಿದೆ. ಬೆಡ್ರೂಮಿನಲ್ಲಿ ಉಮರ್ ಖಯ್ಯಾಂ ಮತ್ತು ಅವನ ಹೆಂಗಸಿನ ಚಿತ್ರವಿದೆ. ಒಂದು ಡ್ರೆಸ್ಸಿಂಗ್ ಟೇಬಲ್ಲಿದೆ. ಈ ಮನೆಗೆ ಹೊರತಾಗಿ ರಂಗದ ಒಂದು ಮೂಲೆಯಲ್ಲಿ ಸದಾ ಕತ್ತಲೆಯಲ್ಲಿರುವ ಒಂದು ಶೂನ್ಯ ಸ್ಥಳವಿದೆ. ಅಲ್ಲಿ ಒಂದು ಫೋನಿದೆ. ಅಗತ್ಯಬಿದ್ದಾಗ ಅಲ್ಲಿ ಆಯಾ ವ್ಯಕ್ತಿಗಳು ಬಂದು ಮಾತಾಡುತ್ತಾರೆ. ತೆರೆ ಸರಿದಾಗ ಸೋಫಾದಲ್ಲಿ ಕೂತ ಪ್ರಕಾಶ್ ಪದ್ಯ ಬರೆಯುತ್ತಿರುವುದು ಕಾಣಿಸುತ್ತದೆ. ಬರೆದದ್ದನ್ನು ಓದುತ್ತಾನೆ, ತಿದ್ದುತ್ತಾನೆ, ಧ್ಯಾನಿಸುತ್ತಾನೆ. ವಯಸ್ಸು ಮೂವತ್ತೈದು. ಹೊರಗಡೆ ಹೋಗುವುದಕ್ಕೆ ಸಿದ್ಧನಾಗಿದ್ದಾನೆ. ಆದರೆ ಅಗತ್ಯಕ್ಕಿಂತ ಮುಂಚೆಯೇ ಸಿದ್ಧನಾಗಿರುವುದರಿಂದ ಆ ಸಮಯವನ್ನು ತನ್ನ ಇತ್ತೀಚಿನ ಪದ್ಯ ತಿದ್ದುವುದರಲ್ಲಿ ಕಳೆಯುತ್ತಿದ್ದಾನೆ. ಸುಮಾರು ಸಂಜೆ ಏಳು ಗಂಟೆ. ತಿದ್ದಿದ ಮೇಲೆ ಗಟ್ಟಿಯಾಗಿ ಓದುತ್ತಾನೆ).
ಪ್ರಕಾಶ್ : ಚಿನ್ನ,
ಕಣ್ಣಿಂದ ಪಿನ್ನು ಚುಚ್ಚಿ ಗೋಡೆಗಂಟಿಸಬೇಡ ನನ್ನ
ಉಟ್ಟ ಮುಗ್ಧತೆ ಕಳಚಿ ಬೆತ್ತಲೆ ಮಾಡಿ
ಒಳಗಿನ ಗೂಢ ದುಡುಕುಗಳ ಕೆಡಕುಗಳ
ಪತ್ತೆ ಹಚ್ಚಿ ತೋರಿಸಬೇಡ
ನಿನ್ನ ನೋಟಕ್ಕೆ ತಕ್ಕ ಆಟವಾಡಿಸುತ್ತ
ನನ್ನನ್ನ ಆತ್ಮಹತ್ಯೆಗೆ ಒತ್ತಾಯಿಸಬೇಡ.
ಬದುಕುವ ಒಪ್ಪಂದಗಳಿಗೆ ಸಹಿಹಾಕುವ
ಪುಕ್ಕ ನಾನೆಂದು ನೀಬಲ್ಲೆ.
ವಿದೂಷಕನಿಗೆ ರಾಜನ ಪಾರ್ಟು ಕೊಡಬೇಡ.
ನಾನು ಮುಂದೆ ಆಗಲಿರುವುದಕ್ಕೆ,
ಎತ್ತರವೇರಲಿಕ್ಕೆ, ಪಾತಾಳಕ್ಕಿಳಿಯಲಿಕ್ಕೆ-
ಇಲ್ಲವೇ ನಿನ್ನ ಕಣ್ಣ ಪಿನ್ನುಗಳಿಂದ ಸಾಯಲಿಕ್ಕೆ
ನೀನೇ ಕಾರಣವೆಂದು ಹೆಮ್ಮೆ ಪಡಬೇಡ,
ಆದರೆ ಇದೂ ನಿನಗೆ ತಿಳಿದಿರಲಿ;
ಹಾಗಾಗಲಿಕ್ಕೆ ಆರಿಸಿಕೊಂಡವನು
ಮತ್ತು ಹಾಗೆ ಆದವನು ನಾನೇ ಮತ್ತು
ನಾನು ಮಾತ್ರವೆಂದು,
(ಹೀಗೆ ಓದುತ್ತಾ ತಿದ್ದುತ್ತಿರುವಂತೆ ಸರೋಜಾ ಬರುತ್ತಾಳೆ, ವಯಸ್ಸು ಮೂವತ್ತು. ಮಧ್ಯಮವರ್ಗದ ಎಲ್ಲ ತೆವಲುಗಳ ಪರಿಣಾಮಗಳನ್ನು ಅವಳಲ್ಲಿ ಕಾಣಬಹುದು. ಆಫೀಸಿನಿಂದ ಬಂದರೂ ಯಾವ ಆಯಾಸವೂ ಅವಳ ಮುಖದಲ್ಲಿಲ್ಲ. ಲಿಪ್ಸ್ಟಿಕ್, ಪೌಡರ್ ತಾಜಾ ಇವೆ. ಬಾಬ್ಕಟ್ ನೀಟಾಗಿದೆ, ಸೀರೆ ಕೂಡ ಈಗಷ್ಟೆ ಉಟ್ಟಿರುವಂತಿದೆ. ಅವಳನ್ನು ಕಂಡೊಡನೆ ಪ್ರಕಾಶ್ ಕಳೆಕಳೆಯಾಗುತ್ತಾನೆ. )
ಸರೋಜ : ಹಾಯ್ ಹನಿ.
ಪ್ರಕಾಶ್ : ರೋಜಿ, ಒಂದ್ನಿಮಿಷ. ಹೊಸಾ ಪದ್ಯ ಬರೆದಿದೇನೆ; ಕೇಳು.
ಸರೋಜ : ಇರಿ ಇರಿ, ಬಂದೆ . ಸೀರೆ ಕೊಳೆಯಾಗುತ್ತೆ. ಬಟ್ಟೆ ಬದಲಾಯ್ಸಿ ಬರ್ತೀನಿ.
ಪ್ರಕಾಶ್ : ಬಾರೇ ಒಂದು ನಿಮಿಷ, ಪ್ಲೀಸ್.
ಸರೋಜ : (ಕೂರುತ್ತ) ನೀವಿನ್ನೂ ಬಟ್ಟೆ ಬದಲಾಯಿಸಿಲ್ಲ, ಹೊರಗಡೆ ಹೊರಟಹಾಗಿದೆ?
ಪ್ರಕಾಶ್ : ಮೊದಲು ಪದ್ಯ ಕೇಳು. (ಓದುವನು)
ಕಣ್ಣಿಂದ ಪಿನ್ನು ಚುಚ್ಚಿ ಗೋಡೆಗಂಟಿಸಬೇಡ ನನ್ನ
ಉಟ್ಟ ಮುಗ್ಧತೆ ಕಳಚಿ ಬೆತ್ತಲೆ ಮಾಡಿ……..
(ಅಷ್ಟರಲ್ಲಿ ಎಡರಂಘದ ಅಭ್ಯರ್ಥಿಗೆ ನಿಮ್ಮ ಮತ, ಎಡರಂಗಕ್ಕೆ ಮತ, ದೇಶಕ್ಕೆ ಹಿತ, ತಪ್ಪಿದ ತಾಳ, ಆಳುವ ಮೇಳ–ಇತ್ಯಾದಿ ಗುಂಪು ಘೋಷಣೆಗಳು ಕೇಳಿ ಬರುತ್ತವೆ. ಇಬ್ಬರೂ ಅಸಹ್ಯಪಟ್ಟವರಂತೆ ಮುಖ ಕಿವುಚಿ ಘೋಷಣೆಗಳು ಕರಗಿದ ಮೇಲೆ ಮಾತಾಡುತ್ತಾರೆ.)
ಸರೋಜ : ಕಣ್ಣಿಂದ ಪಿನ್ನು ಚುಚ್ಚೋಳು, ಯಾರ್ರೀ ಅವಳು?
ಪ್ರಕಾಶ್ : ಆಹ್ಹಾ ಯಾರಿರ್ಬೇಕು ಹೇಳು ನೋಡೋಣ.
ಸರೋಜ : ನಿಮ್ಮ ಕಾಲೇಜಲ್ಲಿ ಯಾವ್ಯಾವ ಹುಡ್ಗೇರಿದ್ದಾರೊ, ನಿಮ್ಮ ಮೇಲೆ ಎಂಥೆಂಥಾ ಬಲೆ ಬೀಸಿದಾರೊ ನನಗೇನ್ರಿ ಗೊತ್ತು? ನೋಡಿ, ನಮ್ಮೆ ಜಮಾನ್ರು ನನ್ಮೇಲೆ ತುಂಬಾ ಪ್ರೀತಿ ಅಂತ ನಿಶ್ಚಿಂತಳಾಗಿ ನನ್ನ ಆಫೀಸಾಯ್ತು, ಮನೆಯಾಯ್ತು, ಅಂತ ಇದ್ರೆ, ನೀವೇನೇನೋ ರೊಮಾನ್ಸ್ ಮಾಡ್ತಿದೀರಾ.
ಪ್ರಕಾಶ್ : (ಖುಷಿಯಾಗಿ) ಲೇಲೇ ಈ ಪದ್ಯದ ಹೀರೋಯಿನ್ ನೀನೇ ಕಣೆ. ನಿನಗಿದು ಗೊತ್ತಿದೆ. ಆದ್ರೂ ಸುಳ್ಳು ಹೇಳಿ ಆಟ ಆಡಿಸ್ತೀಯಾ; ಪ್ರಿಯೆ ಕಳ್ಳುಲ ಕುಡಿಸಿದ ಹಾಗೆ ನಿನ್ನ ಸುಳ್ಳು.
ಸರೋಜ : (ವಯ್ಯಾರ ಮಾಡುತ್ತಾ) ನಿಜ ಹೇಳಿ; ಕಣ್ಣಿಂದ ಪಿನ್ನು ಚುಚ್ಚಿ…ಅಂತ ಏನೇನೋ ಹೇಳಿದಿರಲ್ಲಾ, ನಾನೆಂದಾದರೂ ಹಾಗೆ ಮಾಡಿದ್ದೀನಾ?
ಪ್ರಕಾಶ್ : (ಪದ್ಯ ಸರಿಸಿ ನೆಲದ ಮೇಲೆ ಕೂತು ಅವಳ ತೊಡೆ ಮೇಲೆ ಮುಖ ಇಟ್ಟು ಅವಳನ್ನೇ ನೋಡುತ್ತಾ) ಅಲ್ಲಾ ಈ ಮಾದಕ ಕಣ್ಣುಗಳಿಂದ ನನ್ನ ಹೃದಯಾನ ಇರಿಯೋದಿಲ್ವಾ ನೀನು? ಹಾರಿಸುವ ಹುಬ್ಬಿನಿಂದ ನನ್ನ ತಿವಿಯೋದಿಲ್ವಾ ನೀನು?
ಎಲೆ ನೀರೆ ನೀ ಎನ್ನ ಮದಿರೆ
ವೈನಿನಂತೊಳಗಿಂದ ಪರಿಮಳವ ಬೀರೆ
ನೊರೆಗರೆವ ನಗೆಯವಳೆ ಗ್ಲಾಸಿನೊಳಗಿನ ಬೀರೆ
ಸರೋಜ : ಥೂ ಹೋಗಿಯಪ್ಪಾ, ನಿಮಗೆ ಕಾವ್ಯದ ನಶೆ ಏರಿದರೆ ಏನೇನೋ ಅಂತೀರ. ಮಕ್ಕಳ ಥರಾ ಕೆಳಗಡೆ ಉರುಳಾಡಿದರೆ ಬಟ್ಟೆ ಕೊಳೆ ಆಗೋದಿಲ್ವಾ? ಎದ್ದು ಮೇಲೆ ಕೂತ್ಕೊಳ್ಳಿ; ರೀ ನಿಮಗೆ ನನ್ನಲ್ಲೇನೊ ಛೇಂಜ್ ಕಾಣಲಿಲ್ವಾ?
ಪ್ರಕಾಶ್ : (ಎದ್ದು ನಿಂತು ಅವಳನ್ನು ನೋಡುತ್ತಾ) ಇಲ್ವಲ್ಲ. ದಿನಾ ಇರೋ ಹಾಗೇ, ಪುಟ್ಟ ಗೊಂಬೆ ಥರ ಇದ್ದೀಯಾ.
ಸರೋಜ : ಹಾಗಾದರೆ ನೀವು ನನ್ನ ಪ್ರೀತಿಸೋದೆಲ್ಲ ಸುಳ್ಳು,
ಪ್ರಕಾಶ್ : (ಪರೀಕ್ಷಿಸಿ ನೋಡುತ್ತ) ಹಾಳಾದ್ದು ಏನೂ ಬದಲಾವಣೆ ಕಾಣ್ತಾ ಇಲ್ವಲ್ಲಾ. ಅದೇ ಮುಖ, ಅದೇ ಕಣ್ಣು, ಅದೇ ತುಟಿ, ಆದರೆ …..
ಸರೋಜ : (ಎರಡೂ ಕೈ ವಯ್ಯಾರದಿಂದ ತಿರುವಿ ತೋರಿಸುತ್ತಾ) ಕೈ ಅವೇನಾ? ಚಿನ್ನದ ಬಳೆ ಕಾಣಿಸ್ಲಿಲ್ವಾ?
ಪ್ರಕಾಶ್ : (ಚಕಿತನಾಗಿ) ಚಿನ್ನದ ಬಳೇನಾ? ಯಾವಾಗ ಕೊಂಡೆ? ನನಗೆ ಹೇಳ್ಳೇ ಇಲ್ಲ.
ಸರೋಜ : ಸಾಲಮಾಡಿ ತಂದೆ (ಪ್ರಕಾಶ್ ಚಿಂತಾಮಗ್ನನಾಗುತ್ತಾನೆ).
ಪ್ರಕಾಶ್ : ಸಾಲದ ಮೇಲೆ ಸಾಲ; ಮತ್ತೆ ಇದನ್ಯಾಕೆ ತಂದೆ? ಸ್ಕೂಟರ್ ಸಾಲ, ಫ್ರಿಜ್ ಸಾಲ, ಹಳೇ ಸಾಲ ತೀರ್ಸೋಕೇ ಆಗ್ತಾ ಇಲ್ಲ. ಇನ್ನು ಇದು ಬೇರೆ.
ಸರೋಜ : ಚೇಷ್ಟೆಗೆ ಹಾಗಂದೆ. ನಿಜಾ ಅಂತ ಅಂದ್ಕೋಬೇಡಿ ಮಾರಾಯ್ತೆ. ಇದು ಉಮಾ ಗೋಲ್ಡ್ ಬಳೆ.
ಪ್ರಕಾಶ್ : ಸಧ್ಯ!
(ಅಷ್ಟರಲ್ಲಿ ಹೊರಗಡೆ ಘೋಷಣೆಗಳು ಕೇಳಿಸುತ್ತವೆ. ಅದರ ಅಬ್ಬರ ಕಡಿಮೆ ಆಗುವ ತನಕ ನಿಂತು ಆಮೇಲೆ ಮಾತಾಡುವರು.)
ಪ್ರಕಾಶ್ : ರೋಜಾ, ನಿಜ ಹೇಳೆ; ನನ್ನ ಪದ್ಯ ಕೇಳಿ ನಿನಗೆ ಸಂತೋಷ ಆಗಲಿಲ್ವಾ?
ಸರೋಜ : ಇಲ್ಲ (ಏಳುವಳು).
ಪ್ರಕಾಶ್ : ಸುಳ್ಳು.
ಸರೋಜ : ನಿಮ್ಜೊತೆ ಏನ್ ಮಾತು.
ಪ್ರಕಾಶ್ : ಇರೆ, ಏನೋ ಹೇಳ್ತೀನಿ (ನಿಲ್ಲುವಳು, ಪ್ರಕಾಶ್ ಅವಳ ಮುಖವನ್ನೇ ನೋಡುವನು).
ಸರೋಜ : ಏನೋ ಹೇಳ್ತೀನಿ ಅಂತೀರಾ ಬರೀ ನನ್ಮುಖ ನೋಡ್ತೀರಾ, ಈಗೇನು ಹೇಳ್ತೀರಾ ಇಲ್ವಾ?
ಪ್ರಕಾಶ್ : ಹೇಳ್ತೀನಿ ನೀನು ಆ ಕಡೆ ಮುಖ ಮಾಡು.
ಸರೋಜ : (ಮುಖ ಓರೆ ಮಾಡಿ) ಸರಿ. ಅದೇನು ಬೇಗ ಹೇಳಿ.
ಪ್ರಕಾಶ್ : ಏನೋ ಹೇಳ್ಬೇಕಂತಿದ್ದೆ. ಮರೆತ್ಹೋಯ್ತು.
ಸರೋಜ : ಸರಿ ನಿತ್ಯದ ನಿಮ್ಮ ಕಿರಿ ಕಿರಿ ಸುರುವಾಯ್ತು.
ಪ್ರಕಾಶ್ : ಏನೋ ಹೇಳ್ಬೇಕಂತೀನಿ ಅಂದ್ರೆ.
ಸರೋಜ : ನಂಗೊತ್ತು ನೀವೇನ್ ಹೇಳ್ತೀರಿ ಅಂತ.
ಪ್ರಕಾಶ್ : ಹಾಗಿದ್ರೆ ಹೇಳ್ಲಾ? ಬೇಡ್ವಾ?
ಸರೋಜ : ಹೇಳಿ.
ಪ್ರಕಾಶ್ : ಎಲ್ಲಿಂದ ಶುರು ಮಾಡ್ಬೇಕು ಅಂತ….
(ಸರೋಜ ಹೊರಡುವಳು) ಹಾ ಗೊತ್ತಾಯ್ತು ಹೇಳ್ಲಾ?
ನಿನ್ನ ಹತ್ರ ಇದ್ರೆ ಬೆಳದಿಂಗಳಲ್ಲಿ ಇದ್ದ ಹಾಗೆ ಅನ್ಸತ್ತೆ.
ಸರೋಜ : ಇಷ್ಟೇನಾ?
ಪ್ರಕಾಶ್ : ಆಹಾ ಹೌದು (ನಗುವನು)
ಸರೋಜ : ಥೂ ನಗೋದನ್ನ ನಿಲ್ಲಿಸ್ತೀರಾ?
ಪ್ರಕಾಶ್ : ನಿಲ್ಲಿಸ್ತೀನಿ, ಆದ್ರೆ ನಿನ್ನ ಹತ್ರ ಇದ್ದಾಗೆಲ್ಲ ನನಗೆ ಸಂತೋಷ ಆಗುತ್ತೆ. ಅದನ್ನು ಹ್ಯಾಗೆ ನಿಲ್ಲಿಸಲಿ?
ಸರೋಜ : (ಹುಸಿಕೋಪದಿಂದ ಬೆಡ್ ರೂಮಿನ ಕಡೆ ಹೋಗುತ್ತಾ) ನಿಲ್ಲಿಸ್ಬೇಡಿ ನಗ್ತಾ ಇರಿ, (ಮಾತಿನ ಧಾಟಿ ಬದಲಿಸಿ) ಹೊರಗಡೆ ಹೋಗ್ತಿದೀರಾ?
ಪ್ರಕಾಶ್ : ಹೌದು.
ಸರೋಜ : ಅದೇನೊ ಇವೊತ್ತು ಭಾರಿ ಗಲಾಟೆ ಆಗೋ ಹಾಗಿದೇರಿ ಕಾಲೇಜ್ ಗ್ರೌಂಡ್ನಲ್ಲಿ ಭಾರ ಈ ಜನ ಸೇರೋಂಡ್ಕಿದಾರೆ. ಅಷ್ಟೇ ಜನ ಪೋಲೀಸರಿದ್ದಾರೆ. ಎರಡೂ ಪಾರ್ಟಿಯವರು ಎದುರೆದುರಿಗೇ ಪೆಂಡಾಲ್ ಹಾಕಿದ್ದಾರೆ…
ಪ್ರಕಾಶ್ : ಮತ್ತು ಇಬ್ಬರೂ ಏಕಕಾಲಕ್ಕೆ ಒಂದೇ ಭಾಷಣ ಮಾಡ್ತಾರೆ, ಜೋಡಾಟದ ಹಾಗೆ.
ಸರೋಜ : ಜೋಡಾಟ ಅಂದ್ರೆ?
ಪ್ರಕಾಶ್ : ಮಲೆನಾಡ ಕಡೆ ಜೋಡಾಟ ಅಂತ ಆಡ್ತಾರೆ. ಎದುರು ಬದುರು ಎರಡು ಸ್ಟೇಜು, ಎರಡು ತಂಡ; ಆದರೆ ಒಂದೇ ಅಡಿಯನ್ಸು, ಇಬ್ರೂ ಆಡೋದು ಒಂದೇ ಆಟ. ಇವರಾಡಿದ್ದನ್ನೇ ಅವರಾಡ್ತಾರೆ. ಅವರಾಡಿದ್ದನ್ನೇ ಇವರಾಡ್ತಾರೆ. ಆಡಿಯನ್ಸ್ ನಕ್ಕೂ ನಕ್ಕೂ ಸುಸ್ತಾಗಬಹುದು.
ಸರೋಜ : ಗಲಾಟೆ ಆಗಬಹುದೋ ಏನೋ ಯಾಕ್ಹೋಗ್ತೀರಿ? ಸುಮ್ನೆ ಕೂತಿರ್ ಬಾರ್ದ?
ಪ್ರಕಾಶ್ : ಜನ ಇದ್ದಲ್ಲಿ ಕವಿ, ಜನವಾಣಿ ಬೇರು, ಕವಿವಾಣಿ ಹೂವು. (ಈ ಸಲ ಮತ್ತೆ ಘೋಷಣೆಗಳು ಕೇಳುತ್ತವೆ. ಆದರೆ ಅಬ್ಬರ ಮೊದಲಿನಷ್ಟಿಲ್ಲ.)
ಸರೋಜ : ಈ ಎಲೆಕ್ಷನ್ ಅಗತ್ಯ ಇತ್ತು ಅಂತೀರಾ?
ಪ್ರಕಾಶ್ : ಮತ್ತೆ ಪ್ರಜಾಪ್ರಭುತ್ವ ಅಂದ್ರೆ ಬಿಟ್ಟಿ ಅಂದ್ಕೊಂಡ್ಯೇನು?
ಸರೋಜ : ಬಿಟ್ಟೀನೋ ತುಟ್ಟೀನೊ! ಆರಿಸಿ ಬರೊ ಪಾರ್ಟಿ ಯಾವ್ದು ಅಂತ ಗೊತ್ತೇ ಇದೆ . ಸುಮ್ನೆ ಈಗಿದ್ದವರೇ ಆಳಿಕೊಂಡು ಹೋದರಾಯ್ತಪ್ಪ. ಐದು ವರ್ಷಕ್ಕೊಮ್ಮೆ ಈ ನಾಟಕ ಯಾಕೆ ಬೇಕು? ದುಡ್ಡೂ ದಂಡ ಟೈಮೂ ಹಾಳು.
ಪ್ರಕಾಶ್ : ಈ ಸಲ ಏನೇನೋ ಬದಲಾವಣೆ ಕಾಣ್ತಾ ಇದೆ. ಜನ ರೋಶಿ ಹೋಗಿದಾರೆ ಕಣೆ. ರೂಲಿಂಗ್ ಪಾರ್ಟಿ ಕಂಡ್ರೆ ಒಳಗೊಳಗೇ ಕುದೀತಿದಾರೆ, ರಾಜಕೀಯ ಭಾಷಣಗಳಿಗೆ ಜನ ಈ ರೀತಿ ಸೇರಿದ್ದನ್ನ ಎಂದಾದ್ರೂ ಕಂಡಿದ್ಯಾ?
ಸರೋಜ : ಜನ ಸೇರೋದು ರಾಜಕೀಯ ಭಾಷಣ ಕೇಳಲಿಕ್ಕಲ್ಲ. ಶ್ರೀಕಾಂತಜೀನ್ನ ನೋಡಲಿಕ್ಕೆ.
ಪ್ರಕಾಶ್ : ಅದಕ್ಕೇ ಸೇರಲೇಳು. ರೂಲಿಂಗ್ ಪಾರ್ಟಿ ಕಡೆ ಗ್ಲಾಮರ್ ಇದೆ. ಇತ್ತ ಶ್ರೀಕಾಂತಜೀ ಭಾರಿ ಸಿನೇಮಾ ನಟ. ಅವನಿಗೂ ಗ್ಲಾಮರ್ ಇದೆ. ಮುಳ್ಳಿನಿಂದ ಮುಳ್ಳು ತೆಗೆಯೋ ಹಾಗೆ, ಗ್ಲಾಮರ್ ನಿಂದ ಗ್ಲಾಮರ್ ತೆಗೀತಾರೆ. ತಪ್ಪೇನು? ಮುಯ ರೂಲಿಂಗ್ ಪಾರ್ಟೀನ್ನ ಇರೀಬೇಕು. ಅದಕ್ಕಾಗಿ ವಿರೋಧ ಪಕ್ಷಗಳಿಗೆ ಒಂದು ಸರಿಯಾದ ಆಯುಧ ಬೇಕಿತ್ತು. ಶ್ರೀಕಾಂತಜೀ ಸಿಕ್ಕ, ಅಷ್ಟೆ. ನೋಡು, ಅಕ್ಕಪಕ್ಕ ರಾಜ್ಯಗಳಲ್ಲಿ ಏನಾಗಿದೆ? ಅಂಥಾದ್ದು ನಮ್ಮಲ್ಲೂ ಅಗೋ ಹಾಗಿದ್ರೆ ಆಗ್ಲೇಳು. ಶ್ರೀಕಾಂತಜೀ ರಾಜಕೀಯ ಸೇರಿದಾಗಿನಿಂದ ಎಲೆಕ್ಷನ್ ಸೀನೇ ಛೇಂಜಾಗಿದೆ ಗೊತ್ತಾ?
ಸರೋಜ : ಸರಿ ಬಿಡಿ. ನಿಮ್ಮ ಓಟು ಯಾರಿಗೆ ಅಂತ ಗೊತ್ತಾಯ್ತು. ಈ ಸಲ ಓಟು ಹಾಕಿಯೇ ಬಿಡ್ತೀರೊ ಏನೊ.
ಪ್ರಕಾಶ : ಹಾಕೋಣ ಅದಕ್ಕೇನಂತೆ.
ಸರೋಜ : ಆ ಕೊಳಕು ಜನಗಳ ಸಾಲಿನಲ್ಲಿ ತಾಸುಗಟ್ಟಳೆ ಕ್ಯೂ ನಿಂತು ಓಟು ಹಾಕೋದು ನನ್ನಿಂದಾಗಲ್ಲಪ್ಪ, ಬೇಕಾದ್ರೆ ನೀವು ಹಾಕಿ ಬನ್ನಿ. ಯಾಕೆಂದ್ರೆ ನೀವು ಕವಿಗಳು, ಬದ್ಧತೆ, ಮಲಬದ್ಧತೆ ಅಂಥಾ ಏನೇನೋ ಹೇಳ್ತೀರಾ.
ಪ್ರಕಾಶ್ : ಅದನ್ನ ಆಮೇಲೆ ತೀರ್ಮಾನ ಮಾಡೋಣ, ಹಾ, ನೆನಪಾಯ್ತು ರೋಜಿ. ನನಗೊಂದು ಕನಸು ಬಿದ್ದಿತ್ತು. ಕನಸಿನಲ್ಲಿ ಭಾರತ ಮಾತೆ ಬಂದಿದ್ಲು.
ಸರೋಜ : ಏನು, ಭಾರತಮಾತೇನಾ? (ನಗುವಳು)
ಪ್ರಕಾಶ್ : ನಗಬೇಡ, ಸೀರಿಯಸ್. ಇಬ್ರೂ ಮನೇಲಿದ್ವಿ. ಜೋರಾಗಿ ಮಳೆ ಬರ್ತ ಇತ್ತು. ಇದ್ದಕ್ಕಿದ್ದ ಹಾಗೆ ಬಾಗಿಲು ನಾಕ್ಕಾಯ್ತು ಹೋಗಿ ತೆಗೀಬೇಕನ್ನೋದರಲ್ಲಿ ಬಾಗಿಲು ತಂತಾನೆ ತೆರೆದು ಒಳಕ್ಕೆ ಒಬ್ಬಳು ಹೆಂಗಸು ಬಂದಳು.
ಸರೋಜ : ಎಂತ ಸೀರೆ ಉಟ್ಟಿದ್ದಳು?
ಪ್ರಕಾಶ್ : ಬಹುಶಃ ಬಿಳೀದಿತ್ತು.
ಸರೋಜ : (ತಾತ್ಸಾರದಿಂದ) ಅದೆ, ಖದ್ದರ್ ತಾನೆ?
ಪ್ರಕಾಶ್ : ಸುಮ್ನೆ ಕೇಳು.
ಸರೋಜ : ಗೊತ್ತು ಕಣ್ರೀ ನಿಮ್ಮನ್ನ ಆಕೆ ಯಾವುದೊ ಪ್ರತಿಷ್ಠಾನದ ಛೇರ್ಮನ್ ಮಾಡಿದ್ಳು. ಕರು, ಬಾರು, ಅಶೋಕ ಹೋಟ್ಲಲ್ಲಿ ನಮಗೆ ಡಿನ್ನರ್ ಪಾರ್ಟಿ, ಸನ್ಮಾನ…. ಸರಿ ತಾನೆ?
ಪ್ರಕಾಶ್ : ಹೆಚ್ಚೂಕಮ್ಮಿ ಹೀಗೇ ಅನ್ನು. ನನ್ನ ಹೃದಯವನ್ನು ಮಾತ್ರವಲ್ಲ. ನನ್ನ ಕನಸನ್ನೂ ಕದ್ದು ನೋಡ್ತೀಯಲ್ಲೆ. ರೋಜಾ ಐ ಲವ್ ಯೂ. ಛೇ ನೀನು ಒಮ್ಮೆಯೂ ಹೀಗೆ ಅನ್ನಿದಿಲ್ವಲ್ಲಾ?
ಸರೋಜ : ನನಗೆ ಕೆಲಸ ಇದೆ, ನಿಮಗಿಲ್ಲ ನೀವಂತೀರಿ. (ಫೋನ್ ರಿಂಗಾಗುವುದು. ಸರೋಜ ಎತ್ತಿ ಕೇಳಿ ರಾಂಗ್ ನಂಬರ್ ಎಂದು ಕುಕ್ಕುವಳು) ಫೋನ್ ಎತ್ತಿದಾಗೊಮ್ಮೆ ರುದ್ರಪ್ಪ ಇದಾರ ಅಂತ ಕೇಳ್ತಾರಲ್ಲ, ಯಾರ್ರೀ ಆ ರುದ್ರಪ್ಪ?
ಪ್ರಕಾಶ್ : ವಿರೋಧ ಪಕ್ಷದ ನಾಯಕ ಕಣೆ. ಈ ಮನೆ ನಮಗೆ ಬಾಡಿಗೆ ಕೊಡಿಸಿದರಲ್ಲ, ಅವ್ರು. ನಾವು ಬರೋಕೆ ಮುಂಚೆ ಇಲ್ಲಿ ಅವರ ಸ್ನೇಹಿತ ಇದ್ದರಂತೆ. ಎಡರಂಗ ಗೆದ್ದು ಬಂದರೆ ಅವರೂ ಮಂತ್ರಿ ಆಗೋರು ಗೊತ್ತಾ? ರೋಜಾ, ಫೋನ್ ಬಿಲ್ ಬಂತಾ?
ಸರೋಜ : ಬಂದಿಲ್ಲ. ಬಂದ್ರೆ ನಾವು ಕಟ್ಟೋದು ಸಾಧ್ಯ ಇಲ್ಲ. ಸಾವಿರಾರು ರೂಪಾಯಿ ಒಮ್ಮೆಲೇ ಬಿಲ್ ಬಂದ್ರೆ ಕಟ್ಟೋರು ಯಾರು? ಫೋನ್ ಬೇಡ ಅಂತ ಹೇಳಿ ವರ್ಷ ಆಯಿತು. ಆದ್ರೂ ಕಿತ್ಕೊಂಡು ಹೋಗಲ್ಲ ಅಂದ್ರೆ ಏನರ್ಥ? ಮೊದಲೇ ಮೈ ತುಂಬಾ ಸಾಲ. ಅದರಲ್ಲಿ ಇದು ಬೇರೆ ದಂಡ.
ಪ್ರಕಾಶ್ : ರೋಜಾ ನಮ್ಮ ಫೋನ್ ಬಿಲ್ಲು ಬೇರೆ ಯಾರಾದ್ರೂ ಕಟ್ಟಿರಬಹುದು?
ಸರೋಜ : ಹಾಗೇ ನಂಬಿಕೊಂಡಿರಿ. ಒಂದು ದಿನ ಇದ್ದಕ್ಕಿದ್ದ ಹಾಗೆ ಬಿಲ್ ಬರ್ಲಿ. ಆವಾಗ ಗೊತ್ತಾಗುತ್ತೆ. ನೀವ್ಯಾಕಿನ್ನೂ ವಿಚಾರಿಸಿಲ್ಲ?
ಪ್ರಕಾಶ್ : ಫೋನ್ಮಾಡಿದ್ದೆ ಮಾರಾಯ್ಳೆ. ಬಿಲ್ ಬಂದಿಲ್ಲ ಅಂದ ಮೇಲೆ ನೀವ್ಯಾಕೆ ತಲೆ ಕೆಡಿಸಿಕೊಳ್ತೀರಿ ಸಾರ್ ಅಂತ ಅವ ಫೋನ್ ಕೆಳಗಿಟ್ಟ. ಪೋಸ್ಟ್ ಆಫೀಸಿನಲ್ಲಿ ಕೇಳಿದೆ. ಆ ಪೋಸ್ಟ್ಮಾಸ್ಟರ್ ನನ್ನನ್ನು ಒಂದು ಸಲ ನೋಡಿ ತನ್ನ ಹಳದಿ ಹಲ್ಲಿನ ಅಖಂಡ ಸಾಲು ಕಾಣೋ ಹಾಗೆ ನಕ್ಕು ತನ್ನ ಪಾಡಿಗೆ ತಾನು ತಲೆ ಕೆಳಗ್ಹಾಕಿ ಬರೀತಾ ಕೂತ! ಮನೆ ಯಜಮಾನ ಕಟ್ಟಿರಬಹುದಾ, ಅಂತ ಕೇಳಿ ನೋಡಿದೆ. ಅವನು ಹುಬ್ಬು ನೆತ್ತಿಗೇರಿಸಿ- ‘ನಾನು ಟಾಟಾ ಬಿರ್ಲಾ ಅಲ್ಲಾ ಸ್ವಾಮಿ, ಹಾಗಾದಾಗ ನೋಡೋಣ’ ಅಂತ ನಕ್ಕ. ಅದ್ಯಾಕೆ ಆ ಥರ ನಗತಾರೆ? ಅವರ ಮುಖದ ಮೇಲೆ ವಾಂತಿ ಮಾಡಿಕೊಳ್ಳೋಣ ಅನ್ನಿಸತ್ತೆ. (ಎದ್ದು ಭಾವುಕನಾಗಿ ಭಾಷಣ ಮಾಡುವ ಸ್ಟೈಲಿನಲ್ಲಿ) ಈ ದೇಶ ಅನಾಥವಾಗಿದೆಯೇ! ಇಲ್ಲಿ ಏನೂ ಆಗಬಹುದು. ಏನೂ ನಡೆಯಬಹುದು. ಒಂದಕ್ಕೂ ಕಾರ್ಯಕಾರಣ ಸಂಬಂಧ ಇಲ್ಲ. ಈ ಜನಗಳ ನಿರ್ಲಕ್ಷದಿಂದ ನಮ್ಮಲ್ಲಿ ನಾಚಿಕೆ ಕೂಡ ಉಳಿದಿಲ್ಲ.
ಸರೋಜ : ಭಾಷಣ ಮಾಡ್ರೀರಾ? ಇರಿ, ಒಂದು ಟೇಬಲ್ ತರ್ತೀನಿ.
(ನಗುವಳು. ಆತ ಹಾಗೇ ಮುಂದುವರಿಸುವನು.)
ಪ್ರಕಾಶ್ : ಈ ದೇಶದಲ್ಲಿ ಕಪ್ಪು ಹಣ ಕೊಟ್ಟು ದೇವರನ್ನ ಸಾಕ್ಷಾತ್ಕಾರ ಮಾಡಿಕೊಳ್ಳಬಹುದು. ಭಾಷಣ ಒದರಿ ಮಳಲಿನಲ್ಲಿ ಹಸಿರು ಕ್ರಾಂತಿ ಮಾಡಬಹುದು. ಬಾರಿನಲ್ಲಿ ಕ್ರಾಂತಿಯ ಡಿಸ್ಕೊ ಕುಣಿಯಬಹುದು.
ಸರೋಜ : ಯಜಮಾನರು ಕದ್ದು ಸಿಗರೇಟು ಸೇದಬಹುದು.
ಪ್ರಕಾಶ್ : (ವಾಸ್ತವಕ್ಕಿಳಿದು) ಯಾಕೆ, ಈ ಹೊತ್ತೂ ಸಿಗರೇಟು ತುಂಡು ಸಿಕ್ಕಿತ್ತಾ?
ಸರೋಜ : ಅಕಾ ಅಲ್ಲಿ, ಇನ್ನೂ ಬಿದ್ದಿದೆ ನೋಡಿ.
ಪ್ರಕಾಶ್ : ನಿಜ ಹೇಳ್ತೀನಿ ಮಾರಾಯಳೆ ನಾನು ಸಿಗರೇಟು ಸೇದೋಲ್ಲ. ಯಾರಾದ್ರೂ ಸ್ನೇಹಿತರು ಬಂದಿದ್ರಾ?
ಸರೋಜ : ನಾನಿದ್ದಾಗ ಬಂದಿಲ್ಲ.
ಪ್ರಕಾಶ್ : ಭೂತ ಚೇಷ್ಟೆ ಇರಲಾರದು. ಸಿಗರೇಟಿನ ತುಂಡು ಹ್ಯಾಗ್ಬರುತ್ವೆ ಇಲ್ಲಿ? (ಹೊರಗಡೆ ಜಯಕಾರ, ಘೋಷಣೆಗಳು ಕೇಳಿಸುತ್ತವೆ) ಮೆರವಣಿಗೆ ಬಂತೂ ಅಂತ ಕಾಣ್ಸುತ್ತೆ. ಇರು ಭಾಷಣ ಕೇಳಿ ಬರ್ತೀನಿ. (ಹೊರಡುವನು) ಬಂದ ಮೇಲೆ ಸಿಗರೇಟು ತುಂಡಿನ ಬಗ್ಗೆ ಅನ್ವೇಷಣೆ ಮಾಡೋಣ.
ಸರೋಜ : ನೀವು ಭಾಷಣ ಕೇಳಲಿಕ್ಕೆ ಹೊರಟಿಲ್ಲ ಅಂತ ಗೊತ್ತು.
ಪ್ರಕಾಶ್ : ಆಯ್ತು. ಶ್ರೀಕಾಂತಜೀನ್ನ ನೋಡಲಿಕ್ಕೇ ಹೊರಟೀನಿ ಅಂತ ಇಟ್ಕೊ. ಆ ಮನುಷ್ಯನ್ನ ಬೆಳ್ಳೀತೆರೆ ಮೇಲೆ ನೋಡಿದೇನೆ. ನಿಜ ಜೀವನದಲ್ಲಿ ಹ್ಯಾಗಿದಾನೆ, ನೋಡಿ ಬರ್ತೀನಿರು. ಬೇಕಾದ್ರೆ ನೀನೂ ಬಾ.
ಸರೋಜ : ನನಗೆ ಹಸಿವಾಗಿದೆ. ಇನ್ನೂ ಅನ್ನ ಸಾರು ಬೇಯಿಸಬೇಕು. ಇಂಥ ಗಲಾಟೇಲಿ ನೀವಾದ್ರೂ ಯಾಕೆ ಹೋಗ್ತೀರಿ?
ಪ್ರಕಾಶ್ : ಬೇಗ ವಾಪಸ್ ಬರ್ತೀನಿ. (ಹೋಗುವನು)
Leave A Comment