(ಅದೇ ಮನೆ. ಮಾರನೇ ದಿನದ ಸಂಜೆ. ಸರೋಜಾ ಮತ್ತು ಪ್ರಕಾಶ್ರೇಡಿಯೋದ ಅಕ್ಕಪಕ್ಕ ಕೂತಿದ್ದಾರೆ. ಪರಸ್ಪರ ನೋಡುತ್ತಿಲ್ಲ. ರೇಡಿಯೋದಲ್ಲಿ ಹಿಂದೀ ಚಿತ್ರಗೀತೆ ಎತ್ತರದ ದನಿಯಲ್ಲಿ ಕೇಳಿಸುತ್ತಿದೆ. ಅಷ್ಟರಲ್ಲಿ ಬಾಗಿಲು ತಟ್ಟಿದ ಸಪ್ಪಳಾಗುತ್ತದೆ. ಆದರೆ ರೇಡಿಯೋ ಅವಾಜದಲ್ಲಿ ಅದು ಸ್ಪಷ್ಟವಾಗಿ ಕೇಳಿಸುವುದಿಲ್ಲ. ಇನ್ನಷ್ಟು ಜೋರಾಗಿ ತಟ್ಟಿದಾಗ ರೇಡಿಯೋ ನಿಲ್ಲಿಸಿ ಕೇಳುತ್ತಾರೆ. ಮತ್ತೆ ಶಬ್ದವಾದೊಡನೆ ಪರಸ್ಪರ ಮುಖ ನೋಡಿಕೊಳ್ಳುತ್ತಾರೆ. ಸಪ್ಪಳಾಗುತ್ತಿದ್ದುದು ಕಿಟಕಿಯಲ್ಲಾದ್ದರಿಂದ ತುಸು ಗೊಂದಲಗೊಂಡು ಕೊನೆಗೂ ಪ್ರಕಾಶ್ಹೋಗಿ ಕಿಟಕಿ ಬಾಗಿಲು ತೆರೆಯುತ್ತಾನೆ. ಸರೋಜ ಬೆಡ್ ರೂಮಿನ ಬಾಗಿಲಲ್ಲಿ ನಿಂತಿದ್ದಾಳೆ. ಕಿಟಕಿಯಿಂದ ಸಿದ್ದಲಿಂಗು ಒಳಬಂದು ಇಬ್ಬರೂ ಗಂಭೀರವಾಗಿರುವುದನ್ನು ಗಮನಿಸುತ್ತಾನೆ.)

ಸಿದ್ದಲಿಂಗು : ನಮಸ್ಕಾರ

ಪ್ರಕಾಶ್‌ : ಯಾರು ನೀನು?

ಸರೋಜ : ಫೋನ್‌ ಮಾಡಿದವರು ಇವರೇ.

ಪ್ರಕಾಶ್‌ : ಓಹೋ ನೀವೂ!

ಸಿದ್ದಲಿಂಗು : ಬನ್ನಿ ಅಂತಿಲ್ಲ. ಕೂತ್ಕೊಳ್ಳಿ ಅಂತಿಲ್ಲ. ಟೀ ಕಾಫಿ ಏನ್ಬೇಕು ಅಂತಿಲ್ಲ. ಅತಿಥಿ ದೇವರು ಅಂತಾರೆ. ಖಂಡಿತ ಇದು ಅತಿಥಿಯನ್ನ ಸತ್ಕರಿಸೋ ರೀತಿ ಅಲ್ಲ. ಪ್ರಕಾಶ್‌ ನೀನು ಬಾರೀ ಕೆಟ್ಟ ಗೃಹಸ್ಥ.

ಪ್ರಕಾಶ್‌ : ಅದನ್ನೆಲ್ಲಾ ತಮ್ಮಿಂದ ಕಲಿಯೋಣ ಅಂತ ಕೂತಿದ್ದೆ.

ಸಿದ್ದಲಿಂಗು : ಕಲಿಸೋಣ ಅದಕ್ಕೇನಂತೆ. ಮೊದಲನೇ ಪಾಠ; ನನ್ನಂಥ ಗೌರವಾನ್ವಿತ ಸಭ್ಯನೊಬ್ಬ ನಿಮ್ಮ ಮನೆಗೆ ಬಂದು ತನ್ನ ಪರಿಚಯ ಹೇಳಿದೊಡನೆ ‘ಹಲೋ, ದಯವಿಟ್ಟು ಒಳಗೆ ಬನ್ನಿ; ಯೂ ಆರ್ ವೆಲ್‌ಕಂ’ ಅನ್ನಬೇಕು. ಹೇಳಲಾ? ನನ್ನ ಹೆಸರು ಸಿದ್ದಲಿಂಗು. ನಟಸಾರ್ವಭೌಮ ಶ್ರೀಕಾಂತಜೀ ಕೊಲೆ ಮಾಡಿದವನು,
(ಕೈ ಚಾಚುವನು. ಪ್ರಕಾಶ್ಕೈ ತಿರಸ್ಕರಿಸಿ ಸಿಟ್ಟಿನಿಂದ ನೋಡುವನು) ಅರೆ, ನಿನಗೆ ಅಘಾತವಾಗುತ್ತೆ, ಮೂರ್ಛೆ ಬೀಳುತ್ತಿ ಅಂದುಕೊಂಡಿದ್ದೆ, ನಿನಗೆಲ್ಲ ಗೊತ್ತು ಹಾಗಾದರೆ. ಹೋಗಲಿ ಕೂತುಕೊಳ್ಳಲಾ?

ಪ್ರಕಾಶ್‌ : ತಾವು ಈ ಮನೆಗೆ ಹೊಸಬರಲ್ಲವಲ್ಲ.

ಸಿದ್ದಲಿಂಗು : ವ್ಯಂಗ್ಯ ಗೊತ್ತು ನಿನಗೆ; ಕವಿಯಲ್ಲವೆ? ನಿನ್ನ ಲೇಟೆಸ್ಟ್‌ ಪ್ರೇಮಗೀತೆ ಓದು ಕೇಳೋಣ.

ಪ್ರಕಾಶ್‌ : (ಕನಲಿ) ತಲೆಹರಟೆ ಬೇಡ, ನೇರವಗಿ ಮಾತಾಡಿ. ಎಷ್ಟು ದಿನದಿಂದ ನೀವು ಸರೋಜನ್ನ ಬಲ್ಲಿರಿ?

ಸಿದ್ದಲಿಂಗು : ಇರೋ ರಾಜಾ ಸುಧಾರಿಸಿಕೋತೀನಿ, ಹ್ಯಾಗಿದ್ದೀ ಸರೋಜಾ?

ಸರೋಜ : ಪ್ರಕಾಶ್‌ ಏನೋ ಕೇಳ್ತಿದಾರೆ; ಉತ್ತರ ಹೇಳಿ.

ಸಿದ್ದಲಿಂಗು : ಹೇಳತೀನಿ ಹೇಳಲಿಕ್ಕೇ ಬಂದೀನಿ, ಮೊದಲು ನಿಮಗೆ ಥ್ಯಾಂಕ್ಸ್‌ ಹೇಳಬೇಕು ಕಟ್ಟುನಿಟ್ಟಾಗಿ ಗುಟ್ಟನ್ನ ಕಾಪಾಡಿದ್ದಕ್ಕೆ. ಈತನ ವಿಷಯ ನನಗಿರಲಿ, ಏನಯ್ಯಾ ರಾಜಕುಮಾರ?

ಪ್ರಕಾಶ್‌ : ಮರ್ಯಾದೆ ಕೊಟ್ಟು ಮಾತಾಡಿ, ನೀನು ತಾನು ನನಗಾಗೋದಿಲ್ಲ.

ಸಿದ್ದಲಿಂಗು : ನಾನು ಮಾತಾಡೋದೆ ಹೀಗೆ. ಈಗೇನು ಮಾತಾಡ್ಲಾ ಬೇಡವ?

ಪ್ರಕಾಶ್‌ : ನೀವು ಹಾಗೇ ಮಾತಾಡೋದಾದರೆ ನಾನು… ನಾನೂ ಒರಟಾಗಿ…

ಸಿದ್ದಲಿಂಗು : ಮಾತಾಡಬೇಕಾಗುತ್ತೆ. ಅಷ್ಟೇ ತಾನೆ? ಇದಕ್ಕೆ ಅಷ್ಟೊಂದು ಯಾಕೆ ಬೆವರಬೇಕು?

ಪ್ರಕಾಶ್‌ : ನನ್ನ ತಾಳ್ಮೆ ಪರೀಕ್ಷೆ ಮಾಡ್ತಾ ಇದ್ದೀ ನೀನು (ಸಿಟ್ಟಿನಿಂದ ಕೈ ಕುಟ್ಟುವನು.)

ಸಿದ್ದಲಿಂಗು : ಯಾಕೆ ಫಿಟ್ಸ್‌ ಬಂತ? ತುಂಬ ಕೋಮಲ ನೀನು, ಲಾಲ್‌ಬಾಗ್‌ನಲ್ಲಿ ಪ್ರೀತಿಸಲಿಕ್ಕೆ ಹುಟ್ಟಿದವನು. ನಿನ್ನ ನೀನೇ ಯಾಕೆ ಹಿಂಸೆ ಮಾಡಿಕೊಳ್ತೀಯ? ಎದುರಿಗೆ ನಾನಿಲ್ಲವ? ಹೇಳು ನಿನಗೇನು ವಿಷಯಬೇಕು?

ಪ್ರಕಾಶ್‌ : ನಿನಗೂ ಸರೋಜಳಿಗೂ ಏನು ಸಂಬಂಧ?

ಸಿದ್ದಲಿಂಗು : ಸರೋಜಾ ಹೆಣ್ಣು, ನಾನು ಗಂಡು!

ಪ್ರಕಾಶ್‌ : (ಹತಾಶರಾಗಿ ಉತ್ತರ ಸಿಕ್ಕಂತೆ ಸರೋಜಳ ಕಡೆ ನೋಡಿ) ಆಯ್ತಲ್ಲ!

ಸರೋಜ : ಏನ್ರೀ ನೀವು ಹೇಳೋದು?

ಸಿದ್ದಲಿಂಗು : ನೀವಿಬ್ಬರು ದೊಡ್ಡ ಮನಸ್ಸು ಮಾಡಿ ಚಪ್ಪಾಳೆ ತಟ್ಟೋದಾದರೆ ನಾನು ಒಂದು ಭಾಷಣ ಮಾಡುತ್ತೇನೆ.

ಸರೋಜ : ರೀ ನಿಮ್ಮ ಚೇಷ್ಟೆಗೆ ನಗೋ ಸ್ಥಿತಿಯಲ್ಲಿ ಇಲ್ಲಾರೀ ನಾವು. ಅದೇನು ಬೊಗಳ್ತೀರೋ ಬೇಗನೆ ಬೊಗಳಿ.

ಪ್ರಕಾಶ್‌ : ಹೇಳೋದಿನ್ನೇನಿದೆ!

ಸಿದ್ದಲಿಂಗು : ಅಯೋಗ್ಯ ಮುಂಡೇದೆ. ನೀನು ಹೀಗೇ ಇರಬೇಕಂತ ಅಂದುಕೊಂಡಿದ್ದೆ :
ನೀನು ಏನನ್ನ ಮೆಚ್ಚಬಲ್ಲೆ, ಎಲ್ಲಿ ಸಿಟ್ಟಿಗೇಳಬಲ್ಲೆ,-ಎಲ್ಲಿ ಹಸ್ತ ಹೊಸೀ ಬಲ್ಲೆ,- ಎಲ್ಲಾ ತದ್ರೂಪು, ನಿನ್ನ ಲೇಟೆಸ್ಟ್‌ ಪದ್ಯದ ಹೆಸರು ಹೇಳಲಾ? ಚೆಂಗುಲಾಬಿ! ಅಥವಾ ಇನ್ನಾವುದೋ ಹೂವಿನ ಹೆಸರಿರಬೇಕು. ಅಥವಾ ಚೆಂಗುಲಾಬಿಯೂ ದುಂಬಿಯೂ-ಅಂತಿರಬೇಕು. ಪದ್ಯದ ಸಾಲುಗಳೇ ನಿನಗೆ ಜೀವನ ತೋರಿಸಬೇಕು, ಹೆಂಡತಿ ಬಗೆಗಿನ ಅನುಮಾನ ಕೂಡ ನೀನು ಕಂಡುಕೊಂಡದ್ದಲ್ಲ; ಯಾರಿಂದಲೋ ಬಂದದ್ದು! ಸರಿತಾನೆ? ಸರಿ ಅಂತ ಒದರು.

ಪ್ರಕಾಶ್‌ : ನನಗೂ ಕಣ್ಣಿವೆ.

ಸಿದ್ದಲಿಂಗು : ಅದು ಸುಳ್ಳು ಕವಿಯ ಜಂಬದ ಮಾತು.

ಪ್ರಕಾಶ್‌ : ನಾ ಕೇಳಿದ್ದು ಅದಲ್ಲ.

ಸಿದ್ದಲಿಂಗು : ನನಗ್ಗೊತ್ತು. ಅದಕ್ಮುಂಚೆ ನಾ ಕೇಳಿದ್ದಕ್ಕೆ ಉತ್ತರ ಕೊಡು. ನನಗೂ ಸರೋಜಂಗೂ ಸಂಬಂಧ ಇದೆ ಅಂತ ಹೇಳಿದವರ್ಯಾರು?

ಪ್ರಕಾಶ್‌ : ನನಗೂ ಕಣ್ಣಿವೆ ಅಂತ ಹೇಳಿದ್ದಾಯ್ತು.

ಸಿದ್ದಲಿಂಗು : ನಿನಗೆ ಸ್ವಂತ ಕಣ್ಣಿಲ್ಲ ಅಂತ ನಾನೂ ಹೇಳಿದ್ದಾಯ್ತು. ಹೇಳಲು ನನಗೆ ಯಾರು ಹೇಳಿದ್ದು?

ಸರೋಜ : ನೀವು ಬಿಟ್ಟ ಪಿಸ್ತೂಲಿದೇರಿ.

ಸಿದ್ದಲಿಂಗು : ಪಿಸ್ತೂಲು ಇಲ್ಲಿದೆ ಅಂತ ಹೇಳಿದವರ್ಯಾರು?

ಸರೋಜ : ಹಾಸಿಗೆ ಕೆಳಗಿಟ್ಟರೆ ಮಲಗಿದವರಿಗೆ ಗೊತ್ತಾಗೋದಿಲ್ಲವೇನ್ರಿ?

ಸಿದ್ದಲಿಂಗು : ಐದಾರು ದಿನ ಮಲಗಿದ್ದೀರಿ. ನಿನ್ನೆ ಮಾತ್ರ ಗೊತ್ತಾಯ್ತಲ್ಲವ? ನಿನಗೆ ಸರೋಜಾ ಹೇಳಿಲ್ಲಂತ ನನಗ್ಗೊತ್ತು.

ಪ್ರಕಾಶ್‌ : ಅಷ್ಟೊಂದು ವಿಶ್ವಾಸ ಅಲ್ಲವೆ ಅವಳ ಮೇಲೆ?

ಸಿದ್ದಲಿಂಗು : ಅದನ್ನೇ ಕೇಳ್ತಾ ಇದ್ದೀನಿ. : ವಿಶ್ವಾಸ ಇದೆ ಅಂತ ನಿನಗ್ಯಾರು ಹೇಳಿದ್ದು?
ಬಾಯಿ ಬಿಡದಿದ್ದರೆ, ಬಾಯಿ ಬಿಡಿಸೋದು ಹ್ಯಾಗಂತ ನನಗ್ಗೊತ್ತು. ಶ್ರೀಕಾಂತಜೀನ್ನ ಕೊಂದವನಿಗೆ ನೀನು ಈಡಲ್ಲ ಮರಿ. ಬಾಯಿ ಬಿಡು.

ಪ್ರಕಾಶ್‌ : ಗುಂಡಾಗಿರಿ ಮಾಡ್ರೀರೇನ್ರಿ?

ಸಿದ್ದಲಿಂಗು : ಅದು ನನ್ನ ಕಸಬು. ಅದನ್ನ ಮಾಡೋದಕ್ಕೆ ನೀನೇ ಕೇಳಿಕೊಳ್ತಿದೀಯಾ.

ಪ್ರಕಾಶ್‌ : ಈ ಕ್ಷಣವೇ ನಿನ್ನನ್ನ ಪೋಲೀಸರಿಗೆ ಕೊಡಬಲ್ಲೆ.

ಸಿದ್ದಲಿಂಗು : ಅಷ್ಟು ಧೈರ್ಯ ಇದೆಯೆ ಬಾ.
(ಹೋಗಿ ಸಿದ್ದಲಿಂಗು ಫೋನೆತ್ತಿ ಅವನ ಕೈಗೆ ಕೊಡಲು ಹಿಡಿಯುವನು. ಪ್ರಕಾಶ್ಹೋಗುವುದಿಲ್ಲ.)
ನಿನಗೆ ಆ ತಾಕತ್ತಿಲ್ಲ ಅಂತ ಗೊತ್ತು. ಈಗ ಬಾಯಿ ಬಿಡತೀಯಾ? ಇಲ್ಲದಿದ್ದರೆ ಹಲ್ಲು ಉದುರಿಸ್ತೀನಿ.
(ಎನ್ನುತ್ತ ಪ್ರಕಾಶನನ್ನು ಸೋಫಾದ ಮೇಲೆ ನೂಕುವನು. ಪ್ರಕಾಶ್ಕುಕ್ಕರಿಸಿದವನು ಗಾಬರಿಯಿಂದ ಅವನನ್ನು ನೋಡುವನು.)

ಸರೋಜ : ಏನ್ರೀ ಇದು?

ಸಿದ್ದಲಿಂಗು : ತಾವು ದಯವಿಟ್ಟು ಬಾಯಿ ಮುಚ್ಚಿಕೋಬೇಕು. (ಪ್ರಕಾಶನಿಗೆ) ಹೇಳೋ ಮಹಾ ಕವಿ, ಸುಲಿಯೂ ಸುತ್ತಿಕೊಂಡ ಸುಳ್ಳನ್ನ,ಲ ಭಯವ? ಸತ್ಯನಾ ಹೇಳಲಾ? ನಿನ್ನೆ ಸರೋಜಾ ಇಲ್ಲದೇ ಇದ್ದಾಗ ಯಾವನೋ ಬಂದಿದ್ದ, ನಿಜವ?

ಪ್ರಕಾಶ್‌ : (ಗಾಬರಿಯಲ್ಲಿ) ಹೌದು.

ಸಿದ್ದಲಿಂಗು : ಯಾರು ಬಂದಿದ್ದರು?

ಪ್ರಕಾಶ್‌ : ಯಾರೋ ಸ್ನೇಹಿತರು ಬಂದಿರಬಹುದು.

ಸಿದ್ದಲಿಂಗು : ಸಾಮಾನ್ಯನಲ್ಲ. ಅಸಾಮಾನ್ಯ ಸ್ನೇಹಿತ ಅವನು.

ಪ್ರಕಾಶ್‌ : ಇರಬಹುದು.

ಸಿದ್ದಲಿಂಗು : ಆ ಚಾಡಿಕೋರನ ಮಾತನ್ನ ನಂಬತಿ. ಈ ನಿನ್ನ ಅರ್ಧಾಂಗಿಯ ಮಾತನ್ನ ನಂಬೋದಿಲ್ಲ, ಅಲ್ಲವೆ? ನಿನ್ನ ಸ್ನೇಹಿತನಿಗೆ ಅದ್ಯಾಕೋ ನಿನ್ನ ಬಗ್ಗೆ ಮಾತ್ರ ಕಾಳಜಿ ಇದೆ, ಅಲ್ಲವ?

ಪ್ರಕಾಶ್‌ : ನಿನಗೆ ಸರೋಜಳ ಬಗ್ಗೆ ಮಾತ್ರ ಕಾಳಜಿ ಇದ್ದ ಹಾಗೆ.

ಸಿದ್ದಲಿಂಗು : ನೀನು ಕವಿ ಅಂತ ಗೊತ್ತು ನನಗೆ. ಪ್ರಶ್ನೆಗೆ ಉತ್ತರ ಬೇಕು.

ಪ್ರಕಾಶ‌ : ಉತ್ತರ ಬೇಕಾದ್ದು ನನಗೆ.

ಸಿದ್ದಲಿಂಗು : ಓಹೋ, ನಾನಿನ್ನೂ ನಿನಗೆ ಉತ್ತರ ಕೊಟ್ಟೇ ಇಲ್ಲ; ಅಲ್ಲವ? ನೀನೇನೋ ಬುದ್ಧಿವಂತನೆ, ಆದರೆ ನಿನ್ನ ಬುದ್ಧಿಯೆಲ್ಲ ಬೇರೆಯವರಿಂದ ಬಂದದ್ದು. ಎರವಲು ಬುದ್ಧಿ ಉಪಯೋಗಿಸಿ ಎಷ್ಟೆಷ್ಟು ವಿಚಾರ ಮಾಡ್ತಿಯೋ, ಅಷ್ಟಷ್ಟೂ ನಿನ್ನ ಅಂಗಿ ಕೊಳೆಯಾಗಿ ಕಾಣುತ್ತಪ್ಪ, ಅಂಗಿ ಕೊಳೆಯಾದರೆ ನಿನಗೆ ಅವಮಾನದ ಭಯ, ಅಂತಸ್ತು ಕುಸಿಯುವ ಭಯ, ಹೆಚ್ಚೇನು ನಿನ್ನ ವ್ಯಕ್ತಿತ್ವ ನಿಂತದ್ದೇ ನಿನ್ನ ಈ (ಸರೋಜಳನ್ನು ತೋರಿಸುತ್ತಾ) ಟೆರಿಲಿನ್‌ ಅಂಗೀ ಮೇಲೆ, ನಿನ್ನ ಅರ್ಧಾಂಗೀನ್ನ ಚೆನ್ನಾಗಿ ಇಟ್ಟಕೊಂಡಿದೀಯ; ಬಾಬ್‌ಕಟ್‌ ಮಾಡಿಸಿದೀಯ, ಹಲೋ ಹೌಡುಯುಡು ಕಲಿಸಿದೀಯ, ಪಾರ್ಟೀಲೀ ಯಾರ್ಯಾರಿಗೋ ಪರಿಚಯಿಸಿ ಹೆಮ್ಮೆ ಪಟ್ಟಿದ್ದೀಯ, ಕ್ಲಬ್ಬಲ್ಲಿ ಸರಿಕರ ಹಸಿದ ಕಣ್ಣು ಇದರ ಬೆನ್ನಿನಿಂದ ಕೆಳಗಿಳಿದಾಗೆಲ್ಲ ಅಸೂಯೆಯಿಂದ ಆನಂದಪಟ್ಟಿದೀಯ ಅದಕ್ಕೊಂದು ಆತ್ಮ ಇದ್ದಿದ್ದರೆ ಆ ಕಥೆ ಬೇರೆ ಇತ್ತು.

ಪ್ರಕಾಶ್‌ : ನನಗೆ ನೇರ ಉತ್ತರ ಬೇಕು.

ಸಿದ್ದಲಿಂಗು : ಅದನ್ನೇ ಹೇಳ್ತಾ ಇದ್ದೀನಿ. ಮುಚ್ಚಿಕೊಂಡು ಕೇಳು. ಈ ಗೊಂಬೇನ್ನೋಡಿ ಬೇರೆಯವರು ನಿನ್ನ ಬಗ್ಗೆ ಅಸೂಯೆ ಪಡಬೇಕೂಂತ ನಿನ್ನಾಸೆ. ನಿನಗೆ ನಿರಾಸೆ ಮಾಡ್ತಾ ಇರೋದಕ್ಕೆ ಕ್ಷಮಿಸು, ನನ್ನಲ್ಲಂಥ ಅಸೂಯೆ ಇಲ್ಲ. ನನ್ನಂಥವನ ಒಂದು ಒದ್ದೆ ಕನಸಿಗೂ ಲಾಯಖ್ಕಾದವಳಲ್ಲ ನಿನ್ನ ಹೆಂಡತಿ! ಯಾಕೆಂದರೆ ನಿನ್ನ ಹಾಗೆ ಅವಳಲ್ಲಿಯೂ ಆತ್ಮ ಇಲ್ಲ. ಕೇಳು! ಶ್ರೀಕಾಂತಜೀನ್ನ ಕೊಂದ ದಿನ ನಾನು ಇಲ್ಲಿಗೆ ಬಂದದ್ದು ನಿಜ. ನಿನ್ನ ಹೆಂಡತೀನ್ನ ಹೆದರಿಸಿದ್ದೂ ನಿಜ,ನೀನು ಹಾಲ್‌ನಲ್ಲಿ ಶ್ರೀಕಾಂತಜೀ ಕೊಲೆ ಸುದ್ದಿ ಹೇಳೋವಾಗ ನಿನ್ನ ಬೆಡ್‌ ರೂಮಿನಲ್ಲಿದ್ದೆ ನಾನು. ಆ ವಿಷಯ ಸರೋಜಾ ನಿನಗೆ ಹೇಳದೇ ಇರೋದಕ್ಕೆ ಕಾರಣನಾನು, ಯಾಕೆಂದರೆ ಅವಳು ಹೇಳಿದ್ದರೆ ನಿನ್ನ ಕೊಲೆ ಮಾಡ್ತೀನಂತ ನಾನೇ ಹೆದರಿಸಿದ್ದೆ, ಅಷ್ಟೇ ಅಲ್ಲ ಕೇಳು; ಆಗೇನಾದರೂ ನೀನು ಸಾಹಸ ಮಾಡಿದ್ದರೆ ನಿನ್ನನ್ನು ಕೊಂದೂ ಬಿಡುತ್ತಿದ್ದೆ, ಆಮೇಲೂ ಹೇಳಿದರೆ ನಿನ್ನ ಗಂಡ ಆಫೀಸಿನಿಂದ ವಾಪಸ್‌ ಬರೋದಿಲ್ಲ ಅಂತ ಹೇಳಿದ್ದೆ. (ಪ್ರಕಾಸ್ಏನೋ ಕೇಳಬೇಕೆಂದು ಪ್ರಯತ್ನಿಸುತ್ತಾನೆ) ನೀನೇನು ಕೇಳಬೇಕಂತಿದ್ದೀ ನನಗ್ಗೊತ್ತು ಈ ಕಥೆಯನ್ನ ಹ್ಯಾಗೆ ನಂಬಲಿ-ಅಂತ ತಾನೆ.

ಪ್ರಕಾಶ್‌ : ಹೌದು.

ಸಿದ್ದಲಿಂಗು : ನಂಬೋದು ಬಿಡೋದು ನಿನ್ನ ಕರ್ಮ. ನನ್ನಲ್ಲಿರೋ ಸತ್ಯ ಹೇಳಿಯಾಯ್ತು.
ಈಗ ನೀನು ಬಿಚ್ಚಬೇಕು.ಪಿಸ್ತೂಲು ಇಲ್ಲಿದೆದ ಅಂತ ನಿನಗೆ ಹ್ಯಾಗೆ ಗೊತ್ತಾಯ್ತು?

ಪ್ರಕಾಶ್‌ : ಹ್ಯಾಗಂದರೆ ನನಗೆ ಕಣ್ಣಿಲ್ಲವ?

ಸಿದ್ದಲಿಂಗು : ಮತ್ತೆ ಮತ್ತೆ ದಾಸಯ್ಯನ ಹಾಗೆ ಅದನ್ನೇ ಹಾಡಬೇಡ. ಕೊನೇ ಸಲ ಕೇಳತೇನೆ ಹೇಳದಿದ್ದರೆ ಮುಂದಿನ ಅನಾಹುತಕ್ಕೆ ನೀನೇ ಕಾರಣ. ನಾನೂ ಕವಿಯೆ, ನನ್ನಲ್ಲಿ ಕೋಪ ಇದೆ. ಆದರೆ ನಾನು ನಿನ್ನಷ್ಟು ದೊಡ್ಡ ಕವಿಯಲ್ಲ. ನೀನೋ ಸಿಹಿಯಾದ ಭ್ರಾಂತಿಗಳನ್ನುಂಡು ಸಕ್ಕರೆ ಕಾವ್ಯ ಬರೆಯೋನು ನಿನ್ನ ಕಾವ್ಯ ಕೀರ್ತಿಯಾಗಿ, ಘೋಷಣೆಯಾಗಿ, ಸಾಪ್ತಾಹಿಕ ಪುರವಣಿಗಳಲ್ಲಿ ವಿಜೃಂಭಿಸುತ್ತದೆ, ನನಗೆ ಆ ಭಾಗ್ಯ ಇಲ್ಲಪ್ಪ. ನನ್ನ ಕಾವ್ಯ ಇನ್ನೊಬ್ಬರ ಕಿವಿ ಒಳಗಡೆ ಇಳಿಯೋದೇ ಇಲ್ಲ. ಅದಕ್ಕೇ ನಾನು ಬರೀಲಿಲ್ಲ. ಆದರೂ ಒಬ್ಬ ಮಹಾಕವಿ ಮತ್ತು ಒಬ್ಬ ಮರಿ ಕವಿಯ ಚಾರಿತ್ರಿಕ ಭೇಟಿ ಇದು, ಕವಿಗೆ ಕವಿ ಸುಳ್ಳು ಹೇಳಬರದು. ನನ್ನ ಪಾಲಿನ ಮರಿ ಸತ್ಯ ಹೇಳಿದ್ದಾಯ್ತು. ಅದರಲ್ಲಿ ನಿಮ್ಮಿಬ್ಬರ ಸಂಬಂಧದ ಗುಟ್ಟು ಮಾತ್ರ ಇತ್ತು. ಆದರೆ ನೀನು ಮಹಾಕವಿ ಹೇಳೋ ಸತ್ಯದಲ್ಲಿ ದೊಡ್ಡ ಗುಟ್ಟಿರಬಹುದು, ಹೇಳು.

ಪ್ರಕಾಶ್‌ : ಈ ಸಮಸ್ಯೆ ಇರೋದು ನಿಮ್ಮಿಬ್ಬರ ಸಂಬಂಧದದ ಬಗ್ಗೆ. ನೀವಿಬ್ಬರೂ ಇಲ್ಲಿದ್ದೀಋಇ, ಮೂರನೆಯವ ಯಾಕೆ ಬೇಕು?

ಸಿದ್ದಲಿಂಗು : ಯಾಕೆಂದರೆ ಆ ಮೂರನೆಯಾತ ಇಲ್ಲಿದ್ದಾನೆ. ನೀನು ಉಸಿರಾಡ್ತ ಇರೋದು ನಿನ್ನ ಕಿವಿಯಲ್ಲಿ ಆತ ಊದಿದ ಗಾಳಿಯನ್ನ, ನಿನ್ನೊಳಗಿರೋ ಆ ಪ್ರೇತದ ಉಸಿರನ್ನ ಜಾಸ್ತಿ ಹೊತ್ತು ಕುಡೀಲಾರೆ ನಾನು. ಬೇಗ ಹೇಳು.

ಪ್ರಕಾಶ್‌ : ಹೇಳೋದಿಲ್ಲ.

ಸಿದ್ದಲಿಂಗು : ಹೇಳೋದಿಲ್ಲವ? (ಉಕ್ಕಿ ಬಂದ ಸಿಟ್ಟನ್ನು ನಿಯಂತ್ರಿಸಿಕೊಳ್ಳುತ್ತ) ಒಂದು ಜೋಕ್‌ ಹೇಳಿ ನಿನ್ನ ನಗಿಸಲಾ ಕವಿ? -ನೀನೊಬ್ಬ ವಂಚಕ. ಇದು ಜೋಕು; ತಾವೂ ನಗಬೇಕು.

ಪ್ರಕಾಶ್‌ : ಸಣ್ಣ ಮನುಷ್ಯ ಸ್ವಾಮೀ ನಾನು; ಇಂಥಾ ದೊಡ್ಡ ಜೋಕಿಗೆ ಹ್ಯಾಗೆ ನಗಲಿ?

ಸಿದ್ದಲಿಂಗು : ನಿನ್ನಿಂದ ಅದೂ ಸಾಧ್ಯವಿಲ್ಲ. ನೀನು ಯಾರದೋ ಹೆಸರನ್ನ ಬಚ್ಚಿಟ್ಟುಕೊಂಡು ಸರೋಜಾಗೆ ಮೋಸ ಮಾಡಬಹುದಂತೆ. ನಿನ್ನ ಜೀವಕ್ಕಾಗಿ ಅವಳು ನನ್ನ ಹೆಸರ‍್ಹೇಳಲಿಲ್ಲ. ಅದು ನಿನಗೆ ದೊಡ್ಡ ಮೋಸವಾಗಲಿ ಕಂಡಿತಲ್ಲವ? ಆತ ನಿನಗೆ ಪೋಲೀಸರ ಭಯ ಹಾಕಿರಬಹುದು. ಅಥವಾ ನಾನು ಮತ್ತು ಆತ-ಇಬ್ಬರಲ್ಲಿ ಯಾರಿಗೆ ದ್ರೋಹ ಮಾಡಿದರೆ ನಿನಗೆ ಹೆಚ್ಚು ಲಾಭ-ಅಂತ ಯೋಚಿಸಿರಬಹುದು. ಹೆಂಡತಿ ಮತ್ತು ಕಾವ್ಯ ನಿನ್ನ ಮರ್ಮಸ್ಥಳ ಅಂದುಕೊಂಡಿದ್ದೆ, ಕೆರಿಯರೊಂದೇ ನಿನ್ನ ಮರ್ಮಸ್ಥಳ ಕಣೊ, ಅದನ್ನೀಗ ಜಡೀತೇನೆ. ಹೇಳು, ಯಾರು ಬಂದಿದ್ದರು?

ಪ್ರಕಾಶ್‌ : (ಮೌನ)

ಸಿದ್ಧಲಿಂಗು : ಹೇಳೋದಿಲ್ಲವ?
(ರಭಸದಿಂದ ಪ್ರಕಾಶನ ಕೆನ್ನೆಗೆ ಬಾರಿಸುವನು. ಪ್ರಕಾಶ್ಏಟು ತಾಳಲಾರದೆ ಕುಸಿಯುವನು. ಸರೋಜಾ ಓಡಿಹೋಗಿ ಇಬ್ಬರ ಮಧ್ಯೆ ನಿಂತು.)

ಸರೋಜ : (ಗಾಬರಿಯಿಂದೇಳುತ್ತ) ಏನ್ರೀ ನೀವು ಮಾಡ್ತಿರೋದು?

ಸಿದ್ದಲಿಂಗು : ಅನ್ಯಾಯವಾಗ್ತಿರೋದು ನಿನಗೆ, ನೀನು ಬಾಯಿಮುಚ್ಚಿ ಕೂತಿರಬೇಕು ಸ್ವಲ್ಪ ಹೊತ್ತು. (ಅವಳನ್ನು ನಿವಾರಿಸಿ ಮತ್ತೆ ಪ್ರಕಾಶನ ಮೇಲೇರಿ ಹೋಗಿ) ಹೇಳೋದಿಲ್ಲವಾ

ಪ್ರಕಾಶ್‌ : (ಗಾಬರಿಯಿಂದ) ಹೇಳತೀನಿ.

ಸಿದ್ದಲಿಂಗು : ಹೇಳು.

ಪ್ರಕಾಶ್‌ : ರು…ರುದ್ರಪ್ಪ ಬಂದಿದ್ದರು!
(ಸಿದ್ಧಲಿಂಗು, ಸರೋಜಾ ಇಬ್ಬರಿಗೂ ದಿಗಿಲಾಗುತ್ತದೆ.)

ಸಿದ್ದಲಿಂಗು : ಯಾವ ರುದ್ರಪ್ಪ; ವಿರೋಧ ಪಕ್ಷದ ಲೀಡರ್ ರುದ್ರಪ್ಪನ?

ಪ್ರಕಾಶ್‌ : ಹೌದು

ಸಿದ್ದಲಿಂಗು : ನಿಜ ಹೇಳು. ಸುಳ್ಳಿಗೆ ನಾ ಕೇಳೋ ಬೆಲೆ ಜಾಸ್ತಿ; ನಿನ್ನ ಪ್ರಾಣ ಕೊಡಬೇಕಾದೀತು.

ಪ್ರಕಾಶ್‌ : ನಿಜ, ನಿಜ, ನಿಜ ಅವರಿದ್ದಾಗಲೇ ಈ ಮನೆ ಹುಡುಕಿದ್ದು, ಹಾಸಿಗೆ ಕೆಳಗೆ ಪಿಸ್ತೂಲು ಸಿಕ್ಕಿದ್ದೂ ಅವರಿದ್ದಾಗಲೇ ನಿಮ್ಮಿಬ್ಬರಿಗೂ ತನ್ನ ಹೆಸರನ್ನ ಹೇಳಕೂಡದೆಂತಲೂ ಅವನೇ ಹೇಳಿದ್ದು.
(ಈಗ ಮೂವರೂ ಸ್ತಬ್ಧರಾಗುತ್ತಾರೆ. ಸಿದ್ದಲಿಂಗೂನ ಮುಖದಲ್ಲಿ ಆತಂಕ ಚಿಂತೆಗಳಿದ್ದರೆ, ಸರೋಜಾ ತನ್ನ ಪಾಡಿಗೆ ತಾನು ಹಿಂದಿನ ಘಟನೆಗಳನ್ನು ತಾಳೆ ಹಾಕುತ್ತಿದ್ದಾಳೆ. ಪ್ರಕಾಶ್ಸಿದ್ದಲಿಂಗೂನ ಮುಖವನ್ನೇ ನೋಡುತ್ತಿದ್ದಾನೆ.)

ಸಿದ್ದಲಿಂಗು : ನಿಮ್ಮ ಮನೆಯಲ್ಲಿ ಸಿಗರೇಟು ತುಂಡು ಬೀಳುತ್ತವೆ?

ಸರೋಜ : ಹೌದು.

ಸಿದ್ದಲಿಂಗು : ಬಹುಶಃ ನೀವು ಫೋನ್‌ ಬಿಲ್‌ ಕಟ್ಟಿಲ್ಲ. ಆದರೆ ಫೋನ್‌ ಬಿಲ್‌ ಬಂದೇ ಇಲ್ಲ, ಅಲ್ಲವ?

ಸರೋಜ : ಹೌದು.

ಸಿದ್ದಲಿಂಗು : (ಪಶ್ಚಾತ್ತಾಪದಿಂದ ಕುಸಿಯುತ್ತಾ) ಛೇ, ಇದು ರುದ್ರಪ್ಪನ ಖಾಸಗಿ ಆಫೀಸಂತ ಗೊತ್ತಾಗಲೇ ಇಲ್ಲ.

ಪ್ರಕಾಶ್‌ : ಅಂದರೆ?

ಸಿದ್ದಲಿಂಗು : ಅಂದರೆ ನೀವಿಬ್ಬರೂ ಆಫೀಸಿಗೆ ಹೋದಾಗ ಈ ಮನೆಯನ್ನಾತ ತನ್ನ ಖಾಸಗಿ ಆಫೀಸಿನ ಥರ ಉಪಯೋಗಿಸ್ತಿದಾನೆ ಅಂತ.

ಸರೋಜ : ಬಾಗಿಲು ಕೀಲಿ ಹಾಕಿರೋದಿಲ್ಲವ?

ಸಿದ್ದಲಿಂಗು : ನಾನು ಬಂದ ಹಾಗೆ ಕಿಟಕಿಯಿಂದ ಹಾರಿ ಬರಬಹುದು. ಅಥವಾ ಆತ ದಾರಿಯಿಲ್ಲದಲ್ಲಿ ದಾರಿ ಹುಡುಕಬಲ್ಲ. ಅಥವಾ ದಾರಿ ಇಲ್ಲವೇ ಇಲ್ಲ ಅನ್ನೋಣ. ಗಾಳಿಗುಂಟ ಬಂದು ನಿಮ್ಮ ಮನೆ ಮತ್ತು ಮನಸ್ಸನ್ನ ಆಕ್ರಮಿಸಬಲ್ಲ, ಎಂಥಾ ಮೂರ್ಖ ಕವಿ ನೀನು! ಆ ಚಂಡಾಲ ರುದ್ರಪ್ಪನ ಮಾತನ್ನ ನಂಬಿದೆ; ನಿನ್ನ ಹೆಂಡತೀನ್ನ ನಂಬಲಿಲ್ಲ, ಅಲ್ಲವೆ? ಈ ಊರ್ನಲ್ಲಿ ಅವನ ಇಂಥ ಆಫೀಸುಗಳ ಗುಟ್ಟು ಗೊತ್ತಿತ್ತು ನನಗೇ ಇದೊಂದನ್ನ ಬಿಟ್ಟು.

ಪ್ರಕಾಶ್‌ : ಅವನಿಗೇನು ಮನೆ ಇಲ್ಲವೆ? ಆಫೀಸಿಲ್ಲವೆ? ಎಲ್ಲ ಬಿಟ್ಟು ನನ್ನ ಮನೆಯನ್ನ, ಅದೂ ಕಳ್ಳನ ಹಾಗೆ ಬಂದು ಉಪಯೋಗಿಸ್ತಾನೆ ಅಂದರೆ….ನಾನಿದನ್ನ ನಂಬೋದಿಲ್ಲ.

ಸಿದ್ದಲಿಂಗು : ರಾಜಕೀಯದ ರಹಸ್ಯಗಳನ್ನ ಒಬ್ಬನೇ ಬಲ್ಲವನ ಹಾಗೆ ಒದರಬೇಡ. ನಿಮ್ಮಂಥಾ ಮಧ್ಯಮ ವರ್ಗದ ಬಕರಾಗಳ ಮನೆ ಬೇಕವನಿಗೆ. ಯಾಕೆಂದರೆ ಚಂಡಾಲ ಕೆಲಸ ಮಾಡೋದಕ್ಕೆ. ನಾನು ಮತ್ತು ಅವನು ಸೇರಿ ಶ್ರೀಕಾಂತಜೀನ್ನ ಕೊಲೆ ಮಾಡೋದಕ್ಕೆ ಹೊಂಚಿದ್ದು ಇಂಥಾದ್ದೊಂದು ಮನೆಯಲ್ಲಿ. ಆ ಮನೆ ಬಕರಾ ನಿಮ್ಮ ಹಾಗೆ ಆಫೀಸಿಗೆ ಹೋದ ಸಮಯದಲ್ಲಿ.  ಅವರ ಮನೆಯಲ್ಲೂ ಸಿಗರೇಟು ತುಂಡು ಬೀಳುತ್ತವೆ. ಆಗಾಗ ಖಾಲಿ ಬಾಟ್ಲಿ ಕೂಡ. ಫೋನಿಲ್ಲ ಅಷ್ಟೆ. ಥೂ ನಿಮ್ಮ ದಡ್ಡತನಕ್ಕೆ ನನಗೆ ಹೇಸಿಗೆ ಕೂಡ ಬರ್ತಾ ಇಲ್ಲ.
( ತನಕ ಚಕಿತಳಾಗಿ ಇವರ ಸಂಭಾಷಣೆ ಕೇಳುತ್ತಿದ್ದ ಸರೋಜಾಳ ದುಃಖದ ಕಟ್ಟೆ ಒಡೆದು ಅಳುವಾಗಿ ಹೊಮ್ಮುತ್ತದೆ.)

ಸರೋಜ : ನಾಶ ನಾಶ ಸತ್ಯನಾಶವಾಯ್ತು. ಹಾಳಾದ್ವಿ ಪ್ರಕಾಶ್‌, ನಾವು ಹಾಳಾದ್ವಿ. ನನ್ನ ಹತ್ರಾನೂ ಆ ಶನಿ ರುದ್ರಪ್ಪ ಬಂದಿದ್ದ.

ಪ್ರಕಾಶ್‌ : ಯಾವಾಗ ಬಂದಿದ್ದ?

ಸರೋಜ : ಮೊನ್ನೆ ನೀವು ಕಾಲೇಜಿನಲ್ಲಿದ್ದಾಗ.

ಸಿದ್ದಲಿಂಗು : ಹಾಗಿದ್ರೆ ನೀನು ಪ್ರಕಾಶನಿಂದ ಬಚ್ಚಿಟ್ಟುಕೊಂಡ ಖಾಸಗಿ ಗುಟ್ಟಿರಬೇಕು.

ಸರೋಜ : ಹೌದು ಈ ಹಾಳಾದ ಬಳೆ ಉಮಾ ಗೋಲ್ಡಂತ ಪ್ರಕಾಶ್‌ ನಿನಗೆ ಸುಳ್ಳು ಹೇಳಿದೆ, ಆದರಿದು ಚಿನ್ನದ್ದು. ನಿಮಗೊತ್ತಾಗದ ಹಾಗೆ ಸಾಲ ಮಾಡಿ ತಂದಿದ್ದೆ.

ಸಿದ್ದಲಿಂಗು : ಅದು ಅವನಿಗೆ ಗೊತ್ತಾಗಿ ಬ್ಲಾಕ್‌ ಮೇಲ್‌ ಮಾಡಿದ.

ಸರೋಜ : ಹೌದು, ಪ್ರಕಾಶ್‌ ಮುಂದೆ ನಾನು ಬಂದದ್ದನ್ನು ಹೇಳಿದರೆ ಸಂಸಾರ ಹಾಳಾಗ್ತದೆ, ಹೇಳಬೇಡ ಅಂದ…ಅಯ್ಯೋ ಎಷ್ಟು ಕಷ್ಟಪಟ್ಟೆ,
(ಈಗ ಅವನಿಗೆಲ್ಲಾ ನಿಚ್ಚಳವಾಗಿ ಹೊಳೆಯುತ್ತದೆ, ಆದರೂ ಕೆಲವು ಅನುಮಾನಗಳೊಂದಿಗೆ)

ಪ್ರಕಾಶ್‌ : ನಮ್ಮಿಬ್ಬರ ಮಧ್ಯೆ ಜಗಳ ತಂದಿಟ್ಟ ನಿಜ, ಅವನಂದುಕೊಂಡಂತೆ ಜಗಳಾಡಿ ನಾವು ದೂರಾದಿವಿ ಅಂತಲೆ ಇಟ್ಕೊಳ್ಳೋಣ ಇದರಿಂದ ಅವನಿಗೇನು ಲಾಭ?

ಸಿದ್ದಲಿಂಗು : ನಿಮ್ಮಿಬ್ಬರಲ್ಲಿ ಕ್ಷಮೆ ಕೇಳಿಕೊಳ್ತೇನೆ : ತಪ್ಪು ನಂದೂ ಇದೆ. ಪ್ರಕಾಶ್‌ ಬಹುಶಃ ನಾನು ಆ ದಿನ ನಿಮ್ಮ ಮನೆಯಲ್ಲಿ ಬಚ್ಚಿಟ್ಟುಕೊಳ್ಳದಿದ್ದರೆ ನಿಮಗೆ ತೊಂದರೆ ಇರುತ್ತಿರಲಿಲ್ಲ. ಯಥಾಪ್ರಕಾರ ಅವನು ಆಗಾಗ ಬರುತ್ತಿದ್ದ, ಹೋಗುತ್ತಿದ್ದ. ನೀವು ನೆಮ್ಮದಿಯಿಂದಲೇ ಇರುತ್ತಿದ್ದಿರಿ,-ಒಮ್ಮೊಮ್ಮೆ ಸಿಗರೇಟಿನ ತುಂಡು ಸಿಕ್ಕರೂ, ಬಿಲ್‌ ಕಟ್ಟದ ಫೋನಿದ್ದರೂ. ನಿಮ್ಮ ಮೂಲಕ ನನ್ನನ್ನು ಹಿಡಿಯುವ ಉದ್ದೇಶ ಆತನದಿರಬೇಕು.

ಸರೋಜ : (ಕನಲಿ) ನಮ್ಮ ಮನೆ ವ್ಯವಹಾರ ನಾವು ನೋಡಿಕೊಳ್ಳುತ್ತಿದ್ವಿ. ಬಚ್ಚಿಟ್ಟು ಕೊಳ್ಳೋದಕ್ಕೆ ನಮ್ಮ ಮನೇನೆS ಸಿಕ್ಕಿತಾ ನಿನಗೆ? ಇನ್ನೆಲ್ಲಾದರೂ ಯಾಕೆ ಹಾಳಾಗಿ ಹೋಗಲಿಲ್ಲ.

ಪ್ರಕಾಶ್‌ : ನನ್ನನ್ನು ಜೇಲಿಗೆ ಕಳಸಿಬೇಕಂತ ಹೊಂಟಿದ್ದೇನಪ್ಪಾ? ಅಂಥಾದ್ದೇನು ನಾನು ನಿನಗೆ ಮಾಡಿದ್ದು? ಶ್ರೀಕಾಂತಜೀ ಕೊಲೆಗಾರನಿಗೆ ಆಶ್ರಯ ಕೊಡೋದು ಅಂದ್ರೆ ಸಣ್ಣ ಮಾತಾಯ್ತಾ? ಕೊಲೆಯಲ್ಲಿ ನಾನೂ ಷಾಮೀಲಾಗಿದ್ದೆ ಅಂತ ತಾನೆ ಅದರರ್ಥ? ತುಂಬ ಉಪಕಾರ ಮಾಡಿದೆ ಮಾರಾಯ, ಕವಿಯಾಗಿ ಖ್ಯಾತನಾಗಲಿಲ್ಲ, ನಿನಗೆ ಆಶ್ರಯ ಕೊಟ್ಟೆವಲ್ಲ. ಈಗ ತಗಳಪ್ಪ,-ಇಡೀ ದೇಶದ ತುಂಬ ನನ್ನ ಕೀರ್ತಿ! ಈ ಟೆನ್‌ಷನ್ನು ಈ ಗೋಳು ಥೂ! ನಿಮ್ಮ ನಿಮ್ಮ ರಾಜಕೀಯದ ತೀಟೆಗೆ ನಾವು ಬಲಿಪಶುಗಳಾಗಬೇಕು, ಅಲ್ಲವೆ?

ಸಿದ್ದಲಿಂಗು : ಸಿಟ್ಟಾಗಬೇಡ ಕವಿ, ನಾನೂ ನಿನ್ನ ಹಾಗೆ ಬಲಿಪಶು. ದೇವತೆಯೊಬ್ಬ ದೂರದಲ್ಲಿ ನಿಂತುಕೊಂಡು ನಮ್ಮ ಮೂವರ ಸೂತ್ರಗಳನ್ನು ಆಡಿಸ್ತಿದಾನೆ ಗೊತ್ತಾ? ದಪ್ಪ ಹೊಟ್ಟೆಯ ಆ ದೇವರು ಉಪ್ಪರಿಗೆಯ ಮನೆಯಲ್ಲಿದ್ದಾನೆ. ಸ್ಲಮ್ಮಿನ ಬಡವರು ಬಾಡಿಗೆ ಮನೆ ಮಧ್ಯಮವರ್ಗದವರು ಎರಡೂ ಇಲ್ಲದೆ ಬೀದಿ ಪಾಲಾದವರು- ಇವರೆಲ್ಲ ಆತನ ಒಕ್ಕಲು. ಭಕ್ತರನ್ನಾತ ಹೆದರಿಸ್ತಾನೆ, ಇಲ್ಲ ತಬ್ಬಿಕೊಳ್ತಾನೆ. ಹೆದರಿಸಿದಾಗ ಕುರಿಯಾಗ್ತೀವಿ. ತಬ್ಬಿಕೊಂಡಾಗ ಕೋಳಿಗಳಾಗತೀವಿ. ಕುರಿ ಕೋಳಿ ಎರಡರಿಂದಲೂ ಪಲಾವ್‌ ಮಾಡಿಕೊಂಡು ತಿಂತಾನೆ. ಆ ದೇವರು ನಿನ್ನನ್ನು ಎಷ್ಟು ಚೆನ್ನಾಗಿ ಬಲ್ಲ ನೋಡು, ಆತನ ಹೆಸರು ಕೇಳೋ ಕುತೂಹಲ ಕೂಡ ನಿನ್ನಲ್ಲಿಲ್ಲ. ಬಹುಶಃ ನನ್ನ ಕಾವ್ಯ ಶಕ್ತಿಗೆ ನೀನು ಅಸೂಯೆ ಪಡುತ್ತಿರಬಹುದು.

ಪ್ರಕಾಶ್‌ : ನನಗಿನ್ನೂ ಅರ್ಥವಾಗಲಿಲ್ಲ.

ಸಿದ್ದಲಿಂಗು : ಅರ್ಥವಾಗೋದೂ ಇಲ್ಲ. ಅದಕ್ಕೇ ಬಕರಾ ಅನ್ನೋದು. ಆ ದೇವರು ಮೇಲಿದ್ದು ಕೊಂಡೇ ಕಾಲ ಕಾಲಕ್ಕೆ ಮಳೆ ಬೆಳೆ, ಸಮ ಹವಮಾನ, ಹಸಿರು ಹುಲ್ಲು ಚೆಲ್ಲುತ್ತಾ ನಮ್ಮನ್ನ ಬೆಳೆಸ್ತಾನೆ. ಯಾವುದೋ ಕುರಿ ಚೆನ್ನಾಗಿ ಕೊಬ್ಬಿದೆ ಅನ್ನು, ತಿನ್ನಬೇಕನಿಸ್ತದೆ. ಮೊದಮೊದಲು ಸಿಗರೇಟು ತುಂಡು ಚೆಲ್ಲಿ ಕೃಪೆ ತೋರುತ್ತಾನೆ. ಬರ್ತಾ ಬರ್ತಾ ಖಾಲಿ ವಿಸ್ಕಿ ಬಾಟ್ಲಿ ಬೀಳುತ್ತವೆ. ಅಷ್ಟಾದರೆ ನಿಮ್ಮ ಮೇಲೆ ದೇವರ ಕೃಪೆ ಸಂಪೂರ್ಣವಾಗಿ ಆಗಿದೆ ಅಂತ ಅರ್ಥ. ನೀನೊಬ್ಬ ಕವಿ. ಆ ದೇವರ ನೆರಳಿನಲ್ಲೇ ಬದುಕುತ್ತಾ ಅವನು ಪ್ರಾಂಪ್ಟ್‌ ಮಾಡಿದ್ದನ್ನೇ ಪದ್ಯ ಬರೆಯುತ್ತಾ-ನನ್ನದು ಸ್ವತಂತ್ರ ಧ್ವನಿ ಅಂತ ಭ್ರಮೆಯಲ್ಲಿ ಕೊಬ್ಬಿ ಬಲೂನಾದವನು.

ಪ್ರಕಾಶ್‌ : ನನ್ನ ಕಾವ್ಯ ಏನೂಂತ ನನಗ್ಗೊತ್ತಪ್ಪಾ. ಒಬ್ಬ ಕೊಲೆಗಾರನಿಂದ ನಾನು ಬರೆಯೋದನ್ನ ಕಲೀಬೇಕಾದ್ದಿಲ್ಲ.

ಸಿದ್ಧಲಿಂಗು : ನೀನು ಕಲೀಬೇಕಾದ್ದಿದೆ, ಅಷ್ಟೇ ಅಲ್ಲ, ಕಲಿಸಬೇಕಾದ್ದು ನನ್ನಲ್ಲಿದೆ. ಕಾವ್ಯದ ಗುಟ್ಟನ್ನು ಹೇಳ್ತೇನೆ ಬೇಕಾದ್ರೆ ನೋಟ್ಸ್ ಮಾಡಿಕೊ ಕವಿ. ನಿನ್ನ ಕಾವ್ಯ ಸ್ವಂತ ನಿನ್ನಿಂದ ಸುರುವಾಗಬೇಕಿತ್ತು, ನೀನು ಯಾವ ಜನಗಳ ಮಧ್ಯೆ ಇದ್ದಿಯೋ ಆ ಜನಗಳಿಂದ ಸುರುವಾಗಬೇಕಿತ್ತು. ಆ ಜನ ಜೀವನ ಅಂದರೆ ಹೊಟ್ಟೆಗಿಂತ ದೊಡ್ಡದು ಅಂತ ಗೊತ್ತಿಲ್ಲದವರು. ಇವರ ಬಗ್ಗೆ ನಿನ್ನ ಕಾವ್ಯ ಕನ್ನಿಕೆ ಎಂದೂ ಕಳವಳ ಪಡೋದಿಲ್ಲ. ಆ ಜನ ಹೊಟ್ಟೆಗಾಗಿ ರುದ್ರಪ್ಪನ ಮಾತಿನ ಮೋಡಿಗೆ ಕಿವಿಯಾದವರು, ಅವನ ಕಾರುಬಾರು ವೈಭವದ ಬಣ್ಣಗಳಿಗೆ ಕಣ್ಣಾದವರು. ದಡ್ಡತನ ಮತ್ತು ಮುಗ್ಧತೆಗಳಿಂದ ಆತನ ಒಕ್ಕಲಾದವರು. ಆತನ ಹರಕೆಯ ಕುರಿಗಳಾದವರು. ಈ ಬಗ್ಗೆ ನಿನ್ನ ಕಾವ್ಯ ಕನ್ನಿಕೆಗೆ ಕೋಪವಿಲ್ಲ, ಕೇಳು ಕವಿ : ನಿನ್ನ ಕಾವ್ಯ ಕಾವ್ಯವೇ ಆಗಿದ್ದರೆ ಈ ಗೋಳಿನಿಂದ ಸುರುವಾಗಬೇಕಿತ್ತು. ಆದರೆ ಎಷ್ಟು ಬೆಂಕಿ ಹಾಕಿದರೂ ಕುದಿಕಯಲಾರದ ಕವಿ ನೀನು, ಮಧ್ಯಮ ವರ್ಗದ ಸಣ್ಣ ಸಮಾಧಾನಗಳಲ್ಲಿ ಬೆಳೆದವನು. ನಿನಗೆ ರುದ್ರಪ್ಪನ ತಾರತಮ್ಯ ಬೇಕು. ಈ ವ್ಯವಸ್ಥೆ ಬೇಕು, ನಾಳೆ ರುದ್ರಪ್ಪ ಮುಖ್ಯಮಂತ್ರಿಯಾಗುತ್ತಾನೆ. ಅವನ ವೈಭವ ನೋಡಿ ನೀನು ಬೆರಗಾಗ್ತೀಯ. ಅವನಿಂದ ಹ್ಯಾಗೆ ಪ್ರಯೋಜನ ಪಡಿಯಬೇಕಂತ ಚಿಂತನೆ ಮಾಡ್ತೀಯ, ಯಾವುದೋ ಪ್ರತಿಷ್ಠಾನ, ಇಲ್ಲ ಮಂಡಳಿಗೆ, ಇಲ್ಲ ಬೋರ್ಡಿಗೆ ಅಧ್ಯಕ್ಷನಾಗಬೇಕಂತ ಹೊಂಚ್ತೀಯಾ. ಗೊತ್ತೋ ರಾಜ ನಿನ್ನ ಕನಸಿನ ಯೋಗ್ಯತೆ.
(ಪ್ರಕಾಶ್ ಮಾತುಗಳಿಂದ ನೋಯುತ್ತಾನೆ. ಸಿದ್ದಲಿಂಗು ಹೇಳಿದ ಸತ್ಯದ ಖಾತ್ರಿಯಾದರೂ ಹೊರಗಡೆ ಒಪ್ಪಿಕೊಳ್ಳದೆ ಮಾತು ಮುಂದುವರೆಸುತ್ತಾನೆ.)

ಪ್ರಕಾಶ್‌ : ಆಯ್ತು ಸ್ವಾಮಿ. ಉಪದೇಶ ಮಾಡಿದಿರಿ. ದೇಶದ ಬಗ್ಗೆ ನಮ್ಮ ಕಾಮನ್‌ಸೆನ್ಸ್‌ ಜಾಸ್ತಿ ಮಾಡಿದಿರಿ. ನಾವು ಬರೀ ಬಲಿಪಶುಗಳು, ನಿಮ್ಮ ಭಾಷಣಕ್ಕೆ ಯೋಗ್ಯರಲ್ಲ ಅಂತ ಗೊತ್ತಾಯ್ತಲ್ಲ? ಇನ್ನಾದರೂ ನಮ್ಮ ಪಾಡಿಗೆ ನಮ್ಮನ್ನ ಬಿಟ್ಟು ತಾವು ಹೋಗಬಹುದಲ್ಲ?

ಸಿದ್ದಲಿಂಗು : ನೋಯಿಸಿದ್ದರೆ ಕ್ಷಮಿಸು ಕವಿ. ನಿಮ್ಮನ್ನ ನೋಯಿಸೋದು ನನ್ನ ಮನಸ್ಸಲ್ಲಿರಲಿಲ್ಲ.
ನನ್ನಿಂದಾಗಿ ನಿಮ್ಮಿಬ್ಬರ ಸಂಶಾರ ಹಾಳಾಗಬಾರದಂತ ಕಾಳಜಿಯಿಂದ ಬಂದೆ,

ಪ್ರಕಾಶ್‌ : ನಿಮ್ಮಂಥ ದೊಡ್ಡ ಮನುಷ್ಯನಿಗೆ ನಮ್ಮಂಥ ಸಣ್ಣ ಜನರ ಮೇಲೆ ಕರುಣೆ ಮೂಡಿದ್ದು ನಮ್ಮ ಭಾಗ್ಯ ಸ್ವಾಮಿ, ರುದ್ರಪ್ಪ ನಮ್ಮ ಮನೆಯನ್ನ ಆಫೀಸಾಗಿ ಬಳಸಿಕೊಳ್ಳೊದು ನಮ್ಮ ಭಾಗ್ಯ. ತಾವು ನಮ್ಮ ಮನೆಯಲ್ಲಿ ಬಚ್ಚಿಟ್ಟುಕೊಂಡದ್ದೂ ನಮ್ಮ ಭಾಗ್ಯ. ತಾವು ರಾಜಕಾರಣಿಗಳು. ಪ್ರತಿಯೊಂದಕ್ಕೂ ಕಾರಣ ಹೇಳಬಲ್ಲಿರಿ. ಬಹುಶಃ ನೀವು ಶ್ರೀಕಾಂತಜೀ ಕೊಲೆ ಮಾಡಿದ್ದೂ ಕೂಡ ದೇಶೋದ್ಧಾರಕ್ಕೆ!

ಸಿದ್ದಲಿಂಗು : ಖಂಡಿತಾ ಹೌದು ಕೇಳು : ತಲೆ ಇದ್ದರೆ ಅರ್ಥಮಾಡಿಕೊ, ಶ್ರೀಕಾಂತಜೀ ಕೊಲೆ ಮಾಡಿದವರು ಇಬ್ಬರು, ಅವರವರ ಕಾರಣಕ್ಕೆ, ಕೊಲೆ ಮಾಡಿದವನು ನಾನಾದರೆ ಮಾಡಿಸಿದವನು ರುದ್ರಪ್ಪ. ಆ ದಿನ ಕರೆಂಟ್‌ ಆಫ್‌ ಮಾಡಿಸಿದವನು ಅವನು. ಶ್ರೀಕಾಂತಜೀ ನಮ್ಮ ಪಾರ್ಟೀಲಿದ್ದರೂ ರುದ್ರಪ್ಪ ಯಾಕೆ ಕೊಲೆ ಮಾಡಿಸಿದ ಗೊತ್ತಾ? ಶ್ರೀಕಾಂತಜೀನ್ನ ಯಾರು ಕೊಂದರೂ ರೂಲಿಂಗ್‌ ಪಾರ್ಟಿಯವರೇ ಕೊಂದರು ಅಂತ ಜನ ಭಾವಿಸ್ತಾರೆ, ಸಹಾನುಭೂತಿಯಿಂದ ನಮ್ಮ ಪಾರ್ಟಿಗೆ ಮತ ಕೊಡ್ತಾರೆ-ಅಂತ. ರುದ್ರಪ್ಪನ ಊಹೆ ನಿಜವಾಯ್ತು ನೋಡು, ಜನ ಮತ ಕೊಟ್ಟರು ಹೌದಾ? ಶ್ರೀಕಾಂತಜೀ ಇದ್ದಿದ್ದರೆ ರುದ್ರಪ್ಪ ಮುಖ್ಯಮಂತ್ರಿ ಆಗ್ತಿರ್ಲಿಲ್ಲ. ಈಗ ಅವನ ದಾರಿ ಸುಗಮವಾಯ್ತು ಸಿಂಹಾಸನಕ್ಕೆ, ಹೌದಾ?

ಪ್ರಕಾಶ್‌ : ಇಷ್ಟೆಲ್ಲ ಗೊತ್ತಿದ್ದವನು, ರುದ್ರಪ್ಪ ಖಳನಾಯಕ ಅಂತ ಗೊತ್ತಿದ್ದೋನು ನೀನ್ಯಾಕೆ ಅವನ ಜೊತೆ ಷಾಮೀಲಾದೆ?

ಸಿದ್ದಲಿಂಗು : ಶ್ರೀಕಾಂತಜೀ ರುದ್ರಪ್ಪನ ಶತ್ರುವಾದರೆ ನನಗೆ ಅವರಿಬ್ಬರೂ ಶತ್ರುಗಳು. ಇಬ್ಬರೂ ನಮ್ಮ ದಡ್ಡತನದಿಂದಲೆ ಬೆಳೆದವರು, ಈ ದೇಶದಲ್ಲಿ ಶುದ್ಧವಾಗಿದ್ದದ್ದು ಬಡತನ ಒಂದೇ, ಅದನ್ನೂ ಭ್ರಷ್ಟಗೊಳಿಸುತ್ತಿದ್ದ ಶ್ರೀಕಾಂತಜೀ, ಹೊಸ ಬಟ್ಟೆ ಹರಿದು ಚಿಂದಿ ಮಾಡಿ ಧರಿಸಿ ಬಡತನವನ್ನು ಅಭಿನಯಿಸುತ್ತಿದ್ದ. ಸುಂದರವಾಗಿ ಆರ್ಕೆಸ್ಟ್ರಾ ಸಮೇತ ಹಾಡುತ್ತಾ ತೆರೆಯ ಮೇಲೆ ಭಿಕ್ಷೆ ಬೇಡುತ್ತಿದ್ದ. ದೇವತೆಯಾಗಿ ಆಶೀರ್ವಾದ ಮಾಡುತ್ತಾ, ಭಕ್ತಿಯ ಅಫೀಮು ತಿನ್ನಿಸುತ್ತ, ಈ ಜನ-ಸಾಮಾನ್ಯ ಜನ ತಮ್ಮ ಬಡತನವನ್ನ ಹಸಿವನ್ನ ಮರೆಯೋ ಹಾಗೆ ಮಾಡುತ್ತಿದ್ದ. ಅವರೆಂದೂ ಕೋಪಗೊಳ್ಳದ ಹಾಗೆ ಮಾಡುತ್ತಾ ರುದ್ರಪ್ಪನ ವ್ಯವಸ್ಥೆಯನ್ನು ಕಾಪಾಡುತ್ತಿದ್ದ. ಅದಕ್ಕೇ ಅವನನ್ನು ಕೊಲ್ಲಬೇಕೆಂದಿದ್ದೆ-ಕೊಂದೆ. ಶ್ರೀಕಾಂತಜೀ ಗುಂಡಿನಿಂದ ಸಾಯಬಲ್ಲವನಾಗಿದ್ದ ಸತ್ತ. ಆದರೆ ಇನ್ನೊಬ್ಬ ಇದಾನಲ್ಲ. ಉಪ್ಪರಿಗೆ ದೇವರು ರುದ್ರಪ್ಪ, ಅವನು ಗುಂಡಿನಿಮದ ಸಾಯೋದಿಲ್ಲ. ರಕ್ತ ಬೀಜಾಸುರ ಇದ್ದ ಹಾಗೆ, ಸಪ್ತ ಸಮುದ್ರ ದಾಟಿ ನಡುಗಡ್ಡೆಯ ಆಲದ ಮರದ ಪೊಟರೆಯಲ್ಲಿರೋ ಗಿಳಿಯಲ್ಲಿ ತನ್ನ ಜೀವ ಇಟ್ಟಿದ್ದಾನೆ. ಆ ಹಕ್ಕಿ ಎಲ್ಲಿದೆ ಅಂತ ಪತ್ತೆ ಮಾಡಿದೆ, ಎಲ್ಲಿದೆ ಗೊತ್ತಾ? ನನ್ನ ನಿನ್ನ ಎದೆಯಲ್ಲಿ ನಮ್ಮ ದಡ್ಡತನ ಮತ್ತು ಮುಗ್ಧತೆಗಳ ರಕ್ಷಣೆಯಲ್ಲಿ. ಇಡೀ ದೇಶ ಅವನ ಖಾಸಗಿ ಆಸ್ತಿ, ಯಾರ್ಯಾರದೋ ಮನೆಗೆ ನುಗ್ಗಿ ಬೇಕಾದಾಗ ಅದನ್ನು ತನ್ನ ಆಫೀಸಾಗಿ ಬಳಸಬಲ್ಲ. ಹಾಗೇ ಮನಸ್ಸುಗಳನ್ನು ಕೂಡ. ಇಂಥವನನ್ನು ಸುಲಭವಾಗಿ ಕೊಲ್ಲೋದು ಸಾಧ್ಯವಿಲ್ಲ. ಕೊಂದರೂ ಅವನ ನೆತ್ತರ ಹನಿ ಬಿದ್ದಲ್ಲೆಲ್ಲಾ ಅವನ ವಂಶದ ಸಾವಿರ ಜನ ರಾಕ್ಷಸರು ಹುಟ್ಟುತ್ತಾರೆ, ಅವನನ್ನು ಈ ತನಕ ಪೋಷಿಸುತ್ತಿದ್ದ ನಾವೆಲ್ಲ ನಾಲಿಗೆ ಚಾಚಿ ಅದರ ಮೇಲೆ ಅವನನ್ನು ಕೊಂದು, ನೆಲಕ್ಕೆ ರಕ್ತ ಬೀಳದ ಹಾಗೆ ಕುಡಿಯಬೇಕು.

(ತಕ್ಷಣ ತಾನು ಅಗತ್ಯಕ್ಕಿಮತ ಹೆಚ್ಚು ಭಾವುಕನಾಗಿ ಮಾತಾಡುತ್ತಿದ್ದುದು ಸಿದ್ದಲಿಂಗೂನ ಗಮನಕ್ಕೆ ಬರುತ್ತದೆ. ಪ್ರಕಾಶ್ಮತ್ತು ಸರೋಜಾ ಕೂಡ ಅಷ್ಟೇ ಭಾವುಕರಾಗಿ, ಆಶ್ಚರ್ಯಭರಿತರಾಗಿ ಕೇಳುತ್ತ ತಮ್ಮ ಅಸಮಾಧಾನವನ್ನು ಮೆಚ್ಚುಗೆಗೆ ತಿರುಗಿಸಿದ್ದಾರೆ. ಪಿಳಿ ಪಿಳಿ ಕಣ್ಣು ಬಿಟ್ಟು ಅವನನ್ನೇ ನೋಡುತ್ತಿದ್ದಾಗ ಸಿದ್ದಲಿಂಗು ತನ್ನ ಉದ್ವೇಗವನ್ನು ನಿಯಂತ್ರಿಸಿಕೊಂಡು ಗಡಿಯಾರ ನೋಡಿಕೊಂಡು ಹೇಳುತ್ತಾನೆ.)

ಇದು ನನಗೆ ಶುಭ ದಿನ ಪ್ರಕಾಶ್‌. ಅವನನ್ನು ಬೇಟೆಯಾಡುವ ಕಾರ್ಯ ಈಗ ಸುರು ಮಾಡುತ್ತೇನೆ.  ಈಗ ಪಾರ್ಟಿ ಮೀಟಿಂಗಿದೆ, ಮುಖ್ಯಮಂತ್ರಿಯನ್ನ ಆರಿಸೋದಕ್ಕೆ ಅವನನ್ನೇ ಆರಿಸ್ತಾರೆ. ಅದರಲ್ಲಿ ಸಂದೇಹವಿಲ್ಲ; ಅಂಥ ಕಂತ್ರಿ ಅವನು. ಆರಿಸಿದ ಜನಕ್ಕೆ ಹೇಳ್ತೇನೆ; ನೋಡಿ ನಿಮ್ಮ ಮುಖ್ಯಮಂತ್ರಿ ಎಂಥಾ ಸಂಪನ್ನ, ಶ್ರೀಕಾಂತಜೀನ ಕೊಂದವನು ಇವನೇ ಅಂತ ಹೇಳ್ತೇನೆ. ಯಾಕೆ ಕೊಂದ ಅಂಥ ಹೇಳ್ತೇನೆ. ಅವನ ಚಂಡಾಲ ಕೆಲಸಗಳನ್ನೆಲ್ಲಾ ಬಣ್ಣಿಸುತ್ತೇನೆ. ಎಲ್ಲರೂ ನನ್ನ ಮಾತನ್ನ ನಂಬುತ್ತಾರೆ ಅಂತ ಭ್ರಮೆ ಇಲ್ಲ ನನಗೆ. ನನ್ನ ಮಾತು ಕೇಳಿದ ಮೇಲೂ ಆತ ಮುಖ್ಯಮಂತ್ರಿ ಆಗಲೂಬಹುದು. ಆದರೆ ಕೆಲವರಲ್ಲಾದರೂ ಅನುಮಾನ ಉಳೀತದೆ, ಜನಕ್ಕೆ ಗೊತ್ತಾಗ್ತದೆ, ಇಷ್ಟಾದರೆ ಅದೊಂದು ಒಳ್ಳೇ ಪ್ರಾರಂಭವೆ. ಆಮೇಲೆ ಅವನು ನನ್ನನ್ನು ಕೊಂದರೂ ನನಗೆ ಪಶ್ಚಾತ್ತಾಪವಾಗುವುದಿಲ್ಲ. ಆ ದಿನ ನಡೆದದ್ದು ಇಷ್ಟೇ ಪ್ರಕಾಶ್‌ : ನನ್ನಲ್ಲಿರೋ ಸತ್ಯವನ್ನೆಲ್ಲಾ ಹೇಳಿದ್ದೇನೆ. ತೊಂದರೆ ಕೊಟ್ಟದ್ದಕ್ಕೆ ಮತ್ತು ಬೋರ್ ಮಾಡಿದ್ದಕ್ಕೆ ಕ್ಷಮಿಸಿ. ನಾನೀಗ ಅಲ್ಲಿಗೆ ಹೋಗಬೇಕು. ನಮಸ್ಕಾರ.

(ಸರೋಜ ತನ್ನ ಅಸಮಾಧಾನ ಮರೆತು ಸಿದ್ದಲಿಂಗುವನ್ನೆ ಮೆಚ್ಚುಗೆಯಿಂದ ನೋಡುತ್ತಿದ್ದಾಳೆ. ಪ್ರಕಾಶ್ತನ್ನ ಜಂಭಗಳನ್ನು ಸುಲಿದುಕೊಂಡು ಸಿದ್ದಲಿಂಗೂನ ಸತ್ಯಕ್ಕೆ ಶರಣಾಗುತ್ತಾನೆ. ಇಬ್ಬರೂ ಕಣ್ಣಲ್ಲಿ ಮೆಚ್ಚುಗೆ ಸೂಚಿಸುತ್ತಾರೆ. ಸಿದ್ದಲಿಂಗು ಪಿಸ್ತೂಲು ತೆಗೆದುಕೊಂಡು ಬಟ್ಟೆಯೊಳಘೆ ಬಚ್ಚಿಟ್ಟುಕೊಳ್ಳುತ್ತಾನೆ. ಹೆಲ್ಮೆಟ್ಧರಿಸಿಕೊಂಡು ಧೀರನಾಗಿ ಹೊರಡುತ್ತಾನೆ.)

ಸಿದ್ದಲಿಂಗು : ಇನ್ನು ಮೇಲೆ ತೊಂದರೆ ಕೊಡೋದಿಲ್ಲ.

ಪ್ರಕಾಶ್‌ : ನಿನ್ನ ಹೆಸರು ಸಿದ್ದಲಿಂಗು ಅಲ್ಲ?

ಸಿದ್ದಲಿಂಗು : ಹೌದು.

ಪ್ರಕಾಶ್‌ : (ಕೈಕುಲುಕಿ) ಗುಡ್‌ಲಕ್‌ ಸಿದ್ದಲಿಂಗು.

ಸಿದ್ದಲಿಮಗು : ಥ್ಯಾಂಕ್ಯೂ ಸರ್.

ಸರೋಜ : ಗುಡ್‌ಲಕ್‌ ಸಿದ್ದಲಿಂಗು,

ಸಿದ್ದಲಿಂಗು : ಥ್ಯಾಂಕ್ಯೂ ಸಿಸ್ಟರ್,
(ಧೀರನಾಗಿ ಬೆಡ್ರೂಮಿನತ್ತ ನಡೆಯುತ್ತಾನೆ. ಬಾಗಿಲಲ್ಲಿ ಆಘಾತದಿಂದ ನಿಲ್ಲುತ್ತಾನೆ . ಬೆಡ್ರೂಮಿನ ಕಿಟಕಿಯ ಗಾಜಿನ ಮೇಲೆ ಪಿಸ್ತೂಲು ಹಿಡಿದು ಕೊಲೆಗೆ ಸಿದ್ಧರಾದ ಇಬ್ಬರ ನೆರಳು ಮೂಡಿದೆ. ಕಂಡು ಮೂವರೂ ಗಾಬರಿಯಾಗುತ್ತಾರೆ. ಸಿದ್ದಲಿಂಗು ತಕ್ಷಣ ಮುಂಬಾಗಿಲ ಬೋಲ್ಟ್ತೆಗೆದು ಬಾಗಿಲೆಳೆಯುವನು. ಹೊರಗಡೆ ಲಾಕ್ಕಾಗಿದ್ದದ್ದು ಗೊತ್ತಾಗಿ ಮೂವರಿಗೂ ದಿಗಿಲಾಗುತ್ತದೆ. ಪರಸ್ಪರ ಮುಖ ನೋಡಿಕೊಳ್ಳುತ್ತಾರೆ. ಸಿದ್ದಲಿಂಗು ಅನುಮಾನದಿಂದ ಪ್ರಕಾಶ್ಕಡೆಗೆ ನೋಡುತ್ತಾನೆ.)

ಪ್ರಕಾಶ್‌ : ನನ್ನನ್ನ ನಂಬು ಸಿದ್ದಲಿಂಗು. ಖಂಡಿತಾ ನನಗೂ ಇದು ಗೊತ್ತಿರಲಿಲ್ಲ. ರುದ್ರಪ್ಪ ಮನೆಗೆ ಬಂದದ್ದು ನಿಜ. ಹಾಸಿಗೆ ಕೆಳಗಿನ ಪಿಸ್ತೂಲು ತೋರಿಸಿ ಸರೋಜಳ ಬಗ್ಗೆ ಅನುಮಾನ ಪಡೋ ಹಾಗೆ ಮಾಡಿದ್ದೂ ನಿಜ. ನನ್ನ ಕಾಳಜಿ ಇದ್ದದ್ದು ಅಷ್ಟಕ್ಕೆ ಮಾತ್ರ, ನಿನ್ನನ್ನ ಹಿಡಿದುಕೊಡೊ ವಿಚಾರ ನಾನು ದೇವರಾಣೆ ಮಾಡಿರಲಿಲ್ಲ.

ಸರೋಜ : (ದುಃಖದಿಂದ) ಅಯ್ಯೋ ನಾನೇ ಕಾರಣಾರಿ, ಆ ಚಂಡಾಲ ರುದ್ರಪ್ಪನೇ ನನಗೂ ಹೇಳಿದದ, ಸಿದ್ದಲಿಂಗು ಫೋನ್‌ ಮಾಡಿದರೆ ಅವನನ್ನು ಕರೆಸಿ ಪ್ರಕಾಶ್‌ಗೆ ಭೇಟಿ ಮಾಡಿಸಿ, ಎಲ್ಲಾ ಸರಿಹೋಗುತ್ತೆ ಅಂತ.

ಸಿದ್ದಲಿಂಗು : (ನಿರಾಶೆಯಿಂದ) ಸರಿಹೋಯ್ತಲ್ಲ.

ಸರೋಜ : ಸರಿಹೋಗಲಿಲ್ಲ. ನಿನ್ನ ಕೊಲ್ತಾರೆ. ಪ್ರಕಾಶ್‌ ಏನಾದ್ರೂ ಮಾಡಿ ಸಿದ್ದಲಿಂಗೂನ ಪಾರುಮಾಡಿ. ಈ ಹುಡುಗ ಸಾಯೋದು ಬೇಕಿಲ್ಲ ನನಗೆ,
(ಪ್ರಕಾಶ್ಫೋನಿಗೆ ಓಡುವನು. ಎಷ್ಟು ಪ್ರಯತ್ನಿಸಿದರೂ ಲೈನ್ಸಿಕ್ಕುವುದಿಲ್ಲ. ನಿರಾಶೆಯಿಂದ)

ಪ್ರಕಾಶ್‌ : ಲೈನ್‌ ಕಟ್ಟಾಗಿದೆ.

ಸಿದ್ದಲಿಂಗು : (ವಿಷಾದದಿಂದ) ನನ್ನ ಜೀವಮಾನದಲ್ಲಿಯೇ ಪರಿಶುದ್ಧ ದಿನಗಳ ಒಡೆಯನಾಗಬೇಕಂತ ಆಸೆ ಇಟ್ಕೊಂಡಿದ್ದೆ. ಆದರೆ..

ಪ್ರಕಾಶ್‌ : ಛೇ ಏನಾದರೂ ಉಪಾಯ ಮಾಡಲೇಬೇಕು.

ಸಿದ್ದಲಿಂಗು : ಈಗ ಮೀಟಿಂಗ್‌ ನಡೀತಾ ಇದೆ. ಇಷ್ಟರಲ್ಲೇ ರುದ್ರಪ್ಪ ಮುಖ್ಯಮಂತ್ರಿ ಆಗ್ತಾನೆ. ಅವನ ಒಂದೊಂದು ಹೆಜ್ಜೆಗೂ ಒಂದೊಂದು ಬಲಿ ಆಗ್ಬೇಕು. ಒಂದಾದ ಮೇಲೆ ಇನ್ನೊಂದು ಮತ್ತೊಂದು-ಹೀಗೆ ನಮ್ಮಲ್ಲಿ ಎಚ್ಚರಿಕೆ ಮೂಡೋತನಕ ಈ ಯಜ್ಞ ನಡೀತಿರೋದೆ ಬರ್ತೀನಿ.
(ಬೆಡ್ರೂಮಿನ ಕಿಟಕಿಯ ಕಡೆಗೆ ಹೊರಡುವನು. ತಕ್ಷಣ ಪ್ರಕಾಶ್ಅವನನ್ನು ಕೈಹಿಡಿದು ಈಚೆ ಎಳೆಯುವನು.)

ಪ್ರಕಾಶ್‌ : ಹೋಗಕೂಡದು ಅಂದೆ.

ಸಿದ್ದಲಿಂಗು : ಎಷ್ಟು ಹೊತ್ತೂಂತ ಹೀಗೆ ಕೂಡಿ ಹಾಕ್ಕೊಂಡಿರ್ತೀರಿ?

ಸರೋಜ : ನಾಳೆ ಬೆಳಗಾಗತ್ತೆ.

ಸಿದ್ದಲಿಂಗು : ಅಷ್ಟರಲ್ಲೇ ಬೇಟೆ ಸುರುವಾಗಿರತ್ತೆ.

ಪ್ರಕಾಶ್‌ : ನನ್ನ ಪ್ರಾಣ ಹೋದ್ರೂ ನೀನು ಹೊರಗಬಡೆ ಹೋಗಿಕೂಡದು,

ಸಿದ್ದಲಿಂಗು : ರುದ್ರಪ್ಪನಿಗೆ ಬೇಕಾಗಿರೋದು ನನ್ನ ಪ್ರಾಣ ಪ್ರಕಾಶ್‌. ನನಗೋಸ್ಕರ ಈ ಮನೆಯಲ್ಲಿ ನಿಮ್ಮ ಕೊಲೆಯಾಗೋದು ಬೇಕಿಲ್ಲ ನನಗೆ. ನಿನ್ನೆ ಒಂದು ಕನಸು ಕಂಡೆ. ಸರೋಜ, ಪ್ರಕಾಶ್‌ ನೀವಿದನ್ನು ಕೇಳಲೇಬೇಕು : ಕನಸಿನಲ್ಲಿ ಪೇಪರ್ ಓದುತ್ತಾ ಇದ್ದೆ, ಪೇಪರ್ನಲ್ಲಿ ಯಾರ್ದೊ ಒಂದು ಫೋಟೋ ಇತ್ತು. ಅದರ ಮುಖದ ತುಂಬಾ ಡಾಟ್ಸ್ ಇದ್ದುದರಿಂದ ಯಾರದ್ದೂ ಅಂತ ಗುರುತಾಗಲಿಲ್ಲ. ಪೇಪರ್ಗೆ ಬೆಂಕಿ ಹಚ್ಚಿದೆ! ನೀವು ನಂಬುತ್ತೀರೋ ಇಲ್ವೋ, -ಆ ಫೋಟೋದೊಳಗಿಂದ ಒಬ್ಬ ಹೆಂಗಸು, -ಕೊಳೆಯಾದ ಕನ್ನಡಿ ಮತ್ತು ಫ್ರೇಮಿನಿಂದ ಮೆಲ್ಲಗೆ ಎದ್ದುಬಂದಂತೆ ಬಂದಳು. ಬಂದು ಎದುರಿಗೇ ನಿಂತಳು! ಉರಿಯೋವಾಗ ಇಂಡಿಯಾ ಮ್ಯಾಪು ನಡುಗುತ್ತಲ್ಲ, ಆ ಥರಾ ನಡಗುತ್ತಿದ್ದಳು! ಒಮ್ಮೆಲೆ ಆಕೆ ನನ್ನ ಕತ್ತಿಗೆ ಕೈ ಹಾಕಿ ಹಿಸುಕಿಬಿಟ್ಟಳು.
(ಹೀಗೆನ್ನುತ್ತ ಬೆಡ್ರೂಮಿನಲ್ಲಿ ಕಾಲಿಡುತ್ತಾನೆ. ತಕ್ಷಣ ಪ್ರಕಾಶ್ಅವನ ಕೈಹಿಡಿದೆಳೆಯುತ್ತಾನೆಶಕ್ತಿಸಾಲೋದಿಲ್ಲ. ಸರೋಜಳೂ ಓಡಿ ಬಂದು ಅವನ ಕೈ ಹಿಡಿದಳೆಯುತ್ತಾಳೆ. ಹೋರಾಟ ಹಾಗೇ ಮುಂದುವರೆಯುತ್ತದೆ.)

ಸರೋಜ : ಬೇಡ ಸಿದ್ದಲಿಂಗು ನನ್ನಾಣೆ.

ಸಿದ್ದಲಿಂಗು : ದಯವಿಟ್ಟು ನನ್ನನ್ನು ಬಿಡಿ.

ಪ್ರಕಾಶ್‌ : ನಿನ್ನ ಜೊತೆ ನಾನೂ ಬರ್ತೀನಿ.

ಸಿದ್ದಲಿಂಗು : ಪ್ರಕಾಶ್‌ ನಿಮಗೆ ಹುಚ್ಚು ಹತ್ತಿದೆಯಾ?

ಸರೋಜ : ಸಿದ್ದಲಿಂಗು, ಸಿದ್ದಲಿಂಗು.

ಸಿದ್ದಲಿಂಗು : ಪ್ರಕಾಶ್‌.
(ಹಾಲಿನಲ್ಲಿ ತುಂಬ ಹೋರಾಡಿ ಇಬ್ಬರನ್ನೂ ದೂಕಿ ಸಿದ್ದಲಿಂಗು ಬೆಡ್ರೂಮಿಗೆ ನುಗ್ಗಿ ಅವರು ಒಳಗೆ ಬಾರದ ಹಾಗೆ ಬಾಗಿಲಿಕ್ಕಿ ಬೋಲ್ಟ್ಹಾಕಿಕೊಳ್ಳುತ್ತಾನೆ ಇಬ್ಬರೂ ನಿರಾಶೆ ಮತ್ತು ಭಯಗಳಿಂದ ಬಾಗಿಲು ಬಡಿಯುತ್ತಾ ಸಿದ್ದಲಿಂಗೂ ಸಿದ್ದಲಿಂಗೂ ಎಂದೂ ಕಿರಚುತ್ತಾರೆ. ಸಿದ್ದಲಿಂಗು ವಿಷಾದದಿಂದ ಬಾಗಿಲಿಗೆ ಬೆನ್ನು ಮಾಡಿ ನಿಂತು)

ಸಿದ್ದಲಿಂಗು : ಸಾಯೋದಕ್ಕೆ ನನಗೂ ದುಃಖವಾಗ್ತಾ ಇದೆ ಪ್ರಕಾಶ್‌. ಹಾಗಂತ ನೀವು ನನ್ನ ಸಾವನ್ನ ಹಂಚಿಕೊಳ್ಳೊದು ನನಗಿಷ್ಟವಿಲ್ಲ. ಸಾಯೋ ಮುನ್ನ ಜನಕ್ಕೆ ಕೆಲವು ಸತ್ಯ ಹೇಳಬೇಕಂತಿದ್ದೆ. ನನಗೆ ಅಷ್ಟೊಂದು ನಿರಾಶೆ ಇಲ್ಲ. ನಿಮ್ಮಿಬ್ಬರಿಗೂ ಹೇಳಿದ್ದೇನೆ. (ವೇದನೆಯನ್ನು ಮುಚ್ಚಿಕೊಳ್ಳುವುದಕ್ಕೆ ದನಿ ಎತ್ತರಿಸಿ) ಕವಿ ನೀವು ಪ್ರಕಾಶ್‌, ನಾವು ಕಂಡುಕೊಂಡ ಸತ್ಯದ ಹಕ್ಕುದಾರ. ಇನ್ನು ಮೇಲೆ ಅದನ್ನ ನೀವು ಜನಕ್ಕೆ ಹೇಳಿ.

ಸರೋಜ : (ವೇದನೆಯಿಂದ ಸಿದ್ದಲಿಂಗೂ ಕೈ ಮುಗಿತೇನೆ ಬಾಗಿಲು ತೆಗಿ.

ಪ್ರಕಾಶ್‌ : ಸಿದ್ದಲಿಂಗೂ ಪ್ಲೀಸ್‌.

ಸಿದ್ದಲಿಂಗು : (ಉಕ್ಕಿಬರುವ ವೇದನೆಯನ್ನು ತಡೆದುಕೊಂಡು) ಆಳು ಸರೋಜ, ಆಳು ಪ್ರಕಾಶ್‌, ಅಳು ನನ್ನ ನಗರವೇ, ದೇಶವೇ, ದುಃಖಿಸಿರೆನ್ನ ಬಾಂಧವರೇ-ರಿಪೇರಿ ಮಾಡದ ಅನ್ಯಾಯಕ್ಕೆ. ಮಾಗದ ಗಾಯಕ್ಕೆ ಮತ್ತು ನಾವೇ ತಂದುಕೊಮಡ ಈ ಅನಿವಾರ್ಯಕ್ಕೆ ದುಃಖಿಸಿ.
(ಈಗ ಸರೋಜ ಮತ್ತು ಪ್ರಕಾಶ್ನಿಜವಾಗಿಯೂ ಅಳುತ್ತಿದ್ದಾರೆ)

ಸರೋಜ : ಸಿದ್ದಲಿಂಗೂ ಪ್ಲೀಸ್‌ ಬಾಗಿಲು ತೆಗೆ.

ಸಿದ್ದಲಿಂಗು : ನನ್ನ ಕನಸಿನ್ನೂ ಮುಗಿದಿಲ್ಲ ಸರೋಜ. ಪ್ರಕಾಶ್‌ ಕೇಳಿಸುತ್ತಾ ಇದೆಯಾ? ದಯವಿಟ್ಟು ಕೇಳಿ : ಆ ಹೆಂಗಸು ನನ್ನ ಕತ್ತು ಹಿಸುಕಿದಳಲ್ಲಾ, ನಾನು ಸಾಯಲಿಲ್ಲ. ಕತ್ತು ಬಿಡಿಸಿಕೊಂಡು ಹೇಳಿದೆ :
ನಾವು ಅನೇಕರು ತಿಳಿದಂತೆ
ನೀನು ಸಂತೋಷದಿಂದ ಇಲ್ಲ ತಾಯೆ
ಗಾಯವಾಗಿದೆ ನಿನ್ನ ಬಾಯಿಗೆ, ಆದರೂ ನಗುವೆ
ಬೆಳಕಿದ್ದಲ್ಲಿ ಕತ್ತಲೆ ಚೆಲ್ಲುವ ನಿನ್ನ ನಗೆ
ಹಾಡುವ ನನ್ನ ಹಕ್ಕನ್ನು ನಡುಗಿಸುತ್ತಿದೆ,
( ಮಧ್ಯೆ ಕಿಟಕಿಯಲ್ಲಿ ನೆರಳಾಗಿದ್ದ ಕೊಲೆಗಡುಕರು ಮೆಲ್ಲಗೆ ಬಾಗಿಲು ತೆಗೆದು ಸಿದ್ದಲಿಂಗೂನಿಗೆ ಗುರಿಯ ಹಿಡಿಯುತ್ತಾರೆ. ಅವರನ್ನೆ ನೋಡುತ್ತಾ ಕಣ್ಣೀರು ಸುರಿಸುತ್ತಾ ಸಿದ್ದಲಿಂಗೂ ಮುಂದಿನ ಮಾತು ಹೇಳುತ್ತಾನೆ.)

ಆದರೂ ನಿನಗಿದು ತಿಳಿದಿರಲಿ ತಾಯೆ,
ನಾವೆಲ್ಲ ನಿನ್ನ ಕೊನೆಯ ದಿನಗಳನ್ನ
ಬದುಕುತ್ತಿದ್ದೇವೆ.
ಮೈಲುದ್ದ ನಾಲಿಗೆ
ದೇಶದ ಉದ್ದಗಲ ಕೋರೆಹಲ್ಲು ಚಾಚಿ
ಗುಡಿಗುಡಿಯಲ್ಲಿ ಸಿಡಿಯಾಡುವೆ ತಾಯೆ!
ಈ ದೇಶದ ಕಲ್ಲಿನ ದೈವಗಳೆಲ್ಲ
ನಿನ್ನ ನಗೆಯನ್ನೇ ನಗುತ್ತಿವೆ.
ನೀನು ಪೂತನಿಯೆಂದು ಬಂದ ಬಾಲಗೋಪಾಲರು
ನಿನ್ನ ಮೊಲೆ ಕುಡಿದು ಸ್ತಬ್ಧರಾಗಿದ್ದಾರೆ.
ಇಕೋ-
ಸ್ತಬ್ಧಗೊಳಿಸು ನನ್ನನ್ನೂ
ಅರ್ಪಿಸಿಕೋ ಈ ಹರಕೆಯ ಕುರಿಯನ್ನು.

(ಕೊಲೆಗಡುಕರು ಗುಂಡು ಹಾರಿಸುತ್ತಾರೆ . ಸಿದ್ದಲಿಂಗು ಹಾಗೇ ಕುಸಿಯುತ್ತಾನೆ. ಪ್ರಕಾಶ್ಗಾಬರಿಯಿಂದ ಕಣ್ಣು ಕಿಸಿದವನು ಗೊಂಬೆಯಂತೆ ಹಾಗೇ ನಿಲ್ಲುತ್ತಾನೆ. ಸರೋಜ ಕಿಟಾರನೆ ಕಿರುಚಿ ಹಾಗೇ ಕುಸಿಯುತ್ತಾಳೆ. ಇಡೀ ಮನೆ ಒಂದು ಕ್ಷಣ ಶೂನ್ಯವಾಗುತ್ತದೆ. ತುಸು ಸಮಯದ ಬಳಿಕ ದೂರದಲ್ಲಿಮುಖ್ಯಮಂತ್ರಿ ರುದ್ರಪ್ಪನವರಿಗೆ ಜಯವಾಗಲಿಎಂಬ ಘೋಷಣೆಗಳು ಕೇಳುತ್ತಿದದಂತೆ ತರೆ.)