ಗೆಳೆಯ ಚಂದ್ರಶೇಖರ ಕಂಬಾರರು ಈ ನಾಟಕದ ವಸ್ತುವನ್ನು ಕೆಲ ತಿಂಗಳುಗಳ ಹಿಂದೆ ನನಗೆ ವಿವರಿಸಿದ್ದರು. ಅವರ ವಿಶಿಷ್ಟವಾದ ಕಥನ ಶೈಲಿಯಲ್ಲಿ ನನಗೆ ಕೆಲವು ಅಂಶಗಳು ಆಗ ಮುಖ್ಯವಾಗಿ ಕಂಡಿದ್ದವು. ಈ ನಾಟಕದಲ್ಲಿ ರುದ್ರಪ್ಪ, ಸಿದ್ಧಲಿಂಗು ಮೊದಲಾದವರು ಪ್ರಕಾಶ್‌ – ಸರೋಜರ ಮನೆಯನ್ನು ತಮ್ಮ ಚಟುವಟಿಕೆಗಳಿಗಾಗಿ ಉಪಯೋಗಿಸಿಕೊಳ್ಳುವದು, ಸರೋಜ ತನ್ನ ಜೈನಿಗಾಗಿ ಬಂಗಾರದ ಬಳೆಗಳನ್ನು ಖರೀದಿ ಮಾಡಲು ಸಾಲ ತೆತೆಯುವದು ಇಂಥ ಕೆಲವು ಸಂಗತಿಗಳು ಸಹಜ ಜೀವನದ ಮೇಲೆ ರಾಜಕೀಯ ನಡೆಸಿದ ದುರಾಕ್ರಮಣವನ್ನು ಸೂಚಿಸುತ್ತವೆ. ರಾಜಕೀಯದಿಂದ ಬೇರ್ಪಡಿಸಿದರೆ ಪ್ರಕಾಶ್‌ ಮತ್ತು ಸರೋಜರ ಜೀವನ ಸೃಜನಶೀಲತೆಯ ಸಂಭಾವ್ಯತೆಗಳಿಂದ ತುಂಬಿಕೊಂಡದ್ದಾಗಿದೆ. ಪ್ರಕಾಶ್‌ ಕವಿ, ಸರೋಜ ಅವನಿಗೆ ಸ್ಪೂರ್ತಿ ಕೇಂದ್ರ, ಹೀಗೆಯೇ ಮುಂದುವರಿದರೆ ಅವರ ಬಾಳು ಸಾರ್ಥಕತೆಯನ್ನು ಪಡೆಯಬಲ್ಲುದು. ಆದರೆ ರಾಜಕೀಯ ಅವರ ದಾರಿ ಕಟ್ಟುತ್ತದೆ, ಅಡ್ಡದಾರಿಗೆ ಎಳೆದೊಯ್ಯುತ್ತದೆ. ರಾಜಕೀಯದ ಸ್ಪರ್ಶದ ಮಾಂತ್ರಿಕತೆ ಸೃಜನಶೀಲತೆಯನ್ನು ಹಾಳು ಮಾಡಬಲ್ಲದು. ಮಿಡಾಸನ ಸ್ಪಶದಂತೆ ಅದು ಜೀವನ ವಿರೋಧಿಯಾದ ತತ್ವವಾಗಿದೆ. ಆದರೂ ರಾಜಕೀಯದ ಶಕ್ತಿ ಮತ್ತು ವ್ಯಾಪ್ತಿಗಳು ಕೂಡ ಸೃಜನಶೀಲತೆಯಷ್ಟೇ ದೊಡ್ಡದಾಗಿವೆ ಎಂಬುದನ್ನು ಮರೆಯುವಂತಿಲ್ಲ.

ಕಂಬಾರರ ನಾಟಕ ಈ ಸತ್ಯವನ್ನು ಶಕ್ತಿಯುತವಾಗಿ ಮನಗಾಣಿಸುತ್ತದೆನ್ನುವುದರಲ್ಲಿ ಸಂಶಯವೇ ಇಲ್ಲ. ಪ್ರಕಾಶ ಮತ್ತು ಸರೋಜರ ಜೀವನದ ರೀತಿಯಲ್ಲಿ ಪಾಪ ಪುಣ್ಯಗಳ ದ್ವಂದ್ವಕ್ಕೆ ಅವಕಾಶವೇ ಇಲ್ಲ. ಸರೋಜ ಸಾಲ ಮಾಡಿ ಬಂಗಾರದ ಬಳೆಗಳನ್ನು ತಂದಿರದಿದ್ದರೆ ಅವಳ ಜೀವನದ ದುರಂತ ತಪ್ಪಬಹುದಾಗಿತ್ತೆಂದು ಖಚಿತವಾಗಿ ಹೇಳಬರುವದಿಲ್ಲ. ರಾಜಕೀಯದ ಅಕ್ಟೋಪಸ್‌ಹಿಡಿತ ಸರ್ವವ್ಯಾಪಿಯಾಗಿರುವುದರಿಂದ ಅದರಿಂದ ತಪ್ಪಿಸಿಕೊಳ್ಳಲು ಮಾರ್ಗವೇ ಇಲ್ಲ. ಪ್ರಕಾಶನ ಕಾವ್ಯ ನಿರ್ಜೀವವಾಗುತ್ತಿರುವುದು ಈ ಮಾತಿಗೆ ಒಳ್ಳೆಯ ಉದಾಹರಣೆಯಾಗಿದೆ. ಬಹುಶಃ ಇಂದಿನ ಯುಗದಲ್ಲಿ ರಾಜಕೀಯದಿಂದ ದೂರವಿರುವದೇ ಅಸಾಧ್ಯವೆಂಬಂತೆ ಇಲ್ಲಿಯ ಚಿತ್ರಣವಿದೆ.

ನಾಟಕದ ವಸ್ತು ಇದಿಷ್ಟೇ ಆಗಿದ್ದರೆ ಈ ನಾಟಕದ ಇತಿಮಿತಿಗಳನ್ನು ಕುರಿತು ಸ್ಪಷ್ಟವಾದ ನಿರ್ಣಯವನ್ನು ಹೇಳಿಬಿಡಬಹುದಾಗಿತ್ತು. ನಾವು ಇತಿಹಾಸವನ್ನು ಕಟ್ಟುತ್ತಿದ್ದೇವೆ ಎಂಬ ಭ್ರಮೆ ಜನಸಾಮಾನ್ಯರಿಗಿರುವಾಗ ರಾಜಕೀಯದ ಆಕ್ರಮಣದಿಂದ ವೈಯಕ್ತಿಕ ಜೀವನ ಹೇಗೆ ಹಾಳಾಗುತ್ತಿದೆಯೆಂದು ನಾಟಕ ತೋರಿಸುತ್ತದೆಂದು ಹೇಳಬಹುದಾಗಿತ್ತು. ಆದರೆ ರುದ್ರಪ್ಪ ಮತ್ತು ಸಿದ್ದಲಿಂಗು – ಈ ವ್ಯಕ್ತಿಗಳು ನಾಟಕದ ವಸ್ತುವನ್ನು ಇನ್ನೂ ಗಹನವಾಗಿಸುತ್ತಾರೆ. ಅವರಿಬ್ಬರಿಂದಾಗಿ ರಾಜಕೀಯ ಕೇವಲ ಒಂದು ವಿನಾಶಕ ಶಕ್ತಿಯಾಗಿ ಉಳಿಯುವುದಿಲ್ಲ. ಸಿಡುಬು, ಕಾಲರಾ ಪ್ಲೇಗುಗಳಂತೆ ರಾಜಕೀಯ ಒಂದು ಅದೃಶ್ಯ ಶಕ್ತಿಯಾಗಿದ್ದರೆ ಆ ಮಾತು ಬೇರೆ. ಬೆಂಕಿಯ ವಿನಾಶಕತೆ ಅದರ ದಾಹಕ ಶಕ್ತಿಯ ಮೇಲೆ ಅವಲಂಬಿಸಿರುವಂತೆ ಈ ವಿನಾಶಕ ಶಕ್ತಿಗಳು ಕೂಡ ಎಷ್ಟು ಉರಿದರೂ ಆರಲೇಬೇಕು. ರಾಜಕೀಯ ಮನುಷ್ಯ ನಿರ್ಮಿತವಾಗಿರುವುದರಿಂದ ಅದು ಒಂದು ಸಂಸ್ಥೆಯಾಗಿ ಉಳಿಯಬೇಕೆನ್ನುತ್ತದೆ. ಈ ಉಳಿವಿಗೆ ರಾಜಕೀಯ ಕೊಡಬೇಕಾದ ಬೆಲೆ ಮಾತ್ರ ಬಹಳ ದೊಡ್ಡದು. ಜೀವನದ ಮೌಲ್ಯಗಳನ್ನು ಪಣಕ್ಕಿಟ್ಟು ಸೋತರೆ, ಮೌಲ್ಯಗಳ ಸುಳ್ಳು ಪ್ರತಿಗಳನ್ನು ತಯಾರಿಸಿಯಾದರೂ ಬದುಕಬೇಕೆನ್ನುವ ಹಟ ಅದರದು. ಈ ಹಟದ ಎದುರಿಗೆ ಮನುಷ್ಯ ಜೀವನದ ಅಳಿವು-ಉಳಿವುಗಳು ಗಣನೀಯವಲ್ಲ.

ರುದ್ರಪ್ಪ ಮತ್ತು ಸಿದ್ದಲಿಂಗು ಇವರ ಸಂಬಂಧ ನಾಟಕ ಬೆಳೆದಂತೆಲ್ಲ ಸ್ಪಷ್ಟವಾಗುತ್ತ ಹೋಗುತ್ತದೆ. ಮೊದಲ ದೃಶ್ಯದಲ್ಲಿ ಬರುವ ಸಿದ್ದಲಿಂಗು ತಾನೊಬ್ಬ ರಾಜಕೀಯ ಕೊಲೆಗಾರ ಎಂಬ ಹಮ್ಮಿನಲ್ಲಿ ಬಂದರೂ ಅವನು ರುದ್ರಪ್ಪನ ಕೈಯ ಆಯುಧವೆಂದು ಆಮೇಲೆ ಗೊತ್ತಾಗುತ್ತದೆ. ಆಯುಧದಂತೆ ಅವನಿಗೆ ಸ್ವಂತವೆನ್ನಬಹುದಾದ ಮನಸ್ಸಿಲ್ಲ. ಆದರೆ ರುದ್ರಪ್ಪನ ಜಾಲ ವ್ಯಾಪಕವಾಗುತ್ತ ಸಂಬಂಧವಿಲ್ಲದವರನ್ನೂ ಪೇಚಿಗೆ ಸಿಲುಕಿಸಿದಾಗ ಸಿದ್ದಲಿಂಗು ಸ್ವತಂತ್ರವಾಗಿ ಯೋಚಿಸುತ್ತಾನೆ.  ಶ್ರೀಕಾಂತಜೀಯವರನ್ನು ಕೊಲೆ ಮಾಡಿದ್ದ ಸಿದ್ದಲಿಂಗು ತಾನೇ ಬಲಿಪಶು ಎಂಬ ನಿರ್ಧಾರಕ್ಕೆ ಬಂದು ತಲುಪುತ್ತಾನೆ. ಸಿದ್ಧಲಿಂಗುವಿನ ವ್ಯಕ್ತಿತ್ವದಲ್ಲಾಗುವ ಈ ಪರಿಣತಿ ಈ ನಾಟಕದ ಮಹತ್ವದ ಸಾರ್ಥಕತೆಯಾಗಿದೆ. ತಾನು ಬಲಿಯಾದರೂ ತನ್ನ ಆತ್ಮ ಸ್ವತಂತ್ರವಾಗಿದೆ ಎಂಬ ತಿಳುವಳಿಕೆ ಸಾಮಾನ್ಯವಾದ ಸಾರ್ಥಕತೆಯಲ್ಲ. ಸಿದ್ದಲಿಂಗುವಿನ ಸಾರ್ಥಕತೆಯ ಈ ಹೊತ್ತಿನಲ್ಲಿ ನಾಟಕ ವಾಸ್ತವತೆಯ ತಾರ್ಕಿಕತೆಯನ್ನು ಕೈ ಬಿಡುತ್ತದೆ. ಪ್ರಕಾಶನ ಕಾವ್ಯದ ನಿರ್ಜೀವತೆಯನ್ನು, ಪ್ರಕಾಶ ಮತ್ತು ಸರೋಜರ ಬದುಕಿನ ಅರ್ಥಹೀನತೆಯನ್ನು ವಿಮರ್ಶಿಸುವಂಥ ಪ್ರಜ್ಞೆ ಮತ್ತು ಸಂಸ್ಕಾರಗಳನ್ನು ಅವನು ಹೇಗೆ ಮತ್ತು ಎಲ್ಲಿಂದ ಪಡೆದ ಎಂಬ ಪ್ರಶ್ನೆಗಳು ಇಲ್ಲಿ ಗೌಣವಾಗುತ್ತವೆ. ಸಿದ್ಧಲಿಂಗುವಿನ ವ್ಯಕ್ತಿತ್ವ ಪವಾಡ ಸದೃಶವಾದ ಪುನರ್ಜನ್ಮವನ್ನು ಪಡೆಯುತ್ತದೆಂಬುದು ಇಲ್ಲಿ ಮುಖ್ಯವಾಗುತ್ತದೆ. ಕೊನೆಯ ಎರಡು ದೃಶ್ಯಗಳಲ್ಲಿ ಕಂಬಾರರು ಸಂಭಾಷಣೆಯ ಶೈಲಿಯನ್ನು ಬದಲಾಯಿಸಿ ಬಿಟ್ಟಿದ್ದಾರೆ. ಅಲ್ಲಿಯವರೆಗೆ ವಾಸ್ತವ ಜೀವನದ ತಾರ್ಕಿಕತೆಯನ್ನು ಸಂಭಾಷಣೆ ಒಳಗೊಂಡಿದ್ದರೆ ಕೊನೆ ಕೊನೆಗೆ ಅದು ಕಾವ್ಯದ ನಿಯಮಗಳನ್ನು ಅನುಸರಿಸುತ್ತದೆ. ಪ್ರಕಾಶನ ತಕರಾರಿನ ಮಾತಿಗೆ ಸಿದ್ದಲಿಂಗು ಕೊಡುವ ಈ ಉತ್ತರವನ್ನು ಗಮನಿಸಬೇಕು.

….ನಾನೂ ನಿನ್ನ ಹಾಗೆ ಬಲಿಪಶು. ದೇವತೆಯೊಬ್ಬ ದೂರದಲ್ಲಿ ನಿಂತುಕೊಂಡು ನಮ್ಮ ಮೂವರ ಸೂತ್ರಗಳನ್ನು ಆಡಿಸ್ತಿದಾನೆ ಗೊತ್ತಾ? ದಪ್ಪ ಹೊಟ್ಟೆಯ ಆ ದೇವರು ಉಪ್ಪರಿಗೆಯ ಮನೆಯಲ್ಲಿದ್ದಾನೆ…

ಇದು ರುದ್ರಪ್ಪನ ವಾಸ್ತವ ವರ್ಣನೆಯಲ್ಲ, ಸಾಮಾನ್ಯನಂತೆ ಕಾಣುವ ರುದ್ರಪ್ಪನ ವ್ಯಕ್ತಿತ್ವದಲ್ಲಿ ಹುದುಗಿದ ಅಸಾಮಾನ್ಯ ಕ್ರೌರ್ಯವನ್ನು, ನಿರ್ಘೃಣತೆಯನ್ನು ಸಾಂಕೇತಿಕವಾಗಿ ಇಲ್ಲಿ ಬಣ್ಣಿಸಲಾಗಿದೆ. ಬಲಿ ಕಾರ್ಯದ ಪ್ರತೀಕ ಈ ನಾಟಕದ ಅರ್ಥಕೇಂದ್ರವಾಗಿದೆ, ಅಥವಾ ಕಂಬಾರರ ಎಲ್ಲ ನಾಟಕಗಳ ಕೇಂದ್ರ ಪ್ರತೀಕವಾಗಿದೆಯೆಂದರೂ ತಪ್ಪಿಲ್ಲ. ‘ಋಷ್ಯಶೃಂಗ’ ನಾಟಕದ ಬಾಳಗೊಂಡ, ‘ಜೋಕುಮಾರ ಸ್ವಾಮಿ’ಯ ಬಸಣ್ಯಾ ಮತ್ತು ಈ ನಾಟಕದ ಸಿದ್ದಲಿಂಗು ಇವರೆಲ್ಲ ಬಲಿಪಶುಗಳು. ಬಲಿಯಾಗುವ ವ್ಯಕ್ತಿ ದೇವತೆಗಳ ಪಂಕ್ತಿಗೆ ಸೇರಬೇಕಾಗಿರುವುದರಿಂದ ಅವನು ಬಾಹ್ಯಾಭ್ಯಂತರಗಳಲ್ಲಿ ಪರಿಪೂರ್ಣನಾಗಿರಬೇಕು. ಆದರೆ ಕಂಬಾರರ ಈ ಮೂರೂ ನಾಯಕರು ಪರಿಪೂರ್ಣರಲ್ಲ ಮತ್ತು ಅವರು ಸೇರಬೇಕಾಗಿರುವ ದೇವತೆಗಳು ಸುಳ್ಳು ದೇವತೆಗ ಳು. ರಾಮಗೊಂಡನ ತಂದೆ ಒಬ್ಬ ರಾಕ್ಷಸನಾಗಿದ್ದನೆಂದು ‘ಹೇಳತೇನ ಕೇಳ’ದ ಕಥೆ ಹೇಳುತ್ತದೆ. ‘ಜೋಕುಮಾರ ಸ್ವಾಮಿ’ಯ ಗೌಡ ತನ್ನ ನಪುಂಸಕವಾದ ಆಕ್ರಮಣದಿಂದ ಇನ್ನೊಬ್ಬ ಸುಳ್ಳು ದೇವತೆಯಾಗುತ್ತಾನೆ. ಈ ನಾಟಕದ ರುದ್ರಪ್ಪ ಸಿದ್ದಲಿಂಗುವೇ ಹೇಳುವಂತೆ ಯೋಗ್ಯತೆಯಿಲ್ಲದೆ ಜೀವನ ಸೂತ್ರಗಳನ್ನು ಆಡಿಸುವ ಇನ್ನೊಬ್ಬ ರಾಕ್ಷಸ. ಇಂಥವರ ಕ್ರೌರ್ಯದಲ್ಲಿ ಬಂಜೆತನ ತುಂಬಿರುವುದರಿಂದ ಬಲಿ ಕಾರ್ಯ ಅರ್ಥವಿಲ್ಲದ ಕ್ರಿಯೆಯಾಗುತ್ತದೆ.

ಸಿದ್ದಲಿಂಗುವಿನ ಇನ್ನೊಂದು ಸಂಭಾಷಣೆಯಲ್ಲಿ ಕೂಡ ಇಂಥ ಪ್ರತೀಕಗಳು ಹೇರಳವಾಗಿ ತುಂಬಿಕೊಂಡಿವೆ :

‘ಶ್ರೀಕಾಂತಜೀ ರುದ್ರಪ್ಪನ ಶತ್ರುವಾದರೆ ನನಗೆ ಅವರಿಬ್ಬರು ಶತ್ರುಗಳು. ಇಬ್ಬರೂ ನಮ್ಮ ದಡ್ಡತನದಿಂದಲೇ ಬೆಳೆದವರು. ನಾವೆಲ್ಲ ನಾಲಿಗೆ ಚಾಚಿ ಅದರ ಮೇಲೆ ಅವನನ್ನು ಕೊಂದು, ನೆಲಕ್ಕೆ ರಕ್ತಬೀಳದ ಹಾಗೆ ಕುಡಿಯಬೇಕು.’

ಶ್ರೀಕಾಂತಜೀ ಮತ್ತು ರುದ್ರಪ್ಪ ಇವರಿಬ್ಬರ ವ್ಯಕ್ತಿ ಚಿತ್ರಣ ಇಲ್ಲಿ ದೊರೆಯುತ್ತಿದ್ದು ರಾಜಕೀಯ ವ್ಯಕ್ತಿಗಳನ್ನು ರೂಪಿಸುವ ಬಗೆಯನ್ನೂ ಇಲ್ಲಿ ಸೂಚಿಸಲಾಗಿದೆ. ರಾಜಕೀಯದ ಲೋಕ ನಮ್ಮ ಜಗತ್ತಿಗಿಂತ ಭಿನ್ನವಾದ, ಆದರೆ ಸಮಾನಾಂತರವಾಗಿರುವ ಲೋಕ. ಅಲ್ಲಿಯ ಬದುಕು, ಸಾವುಗಳೆರಡೂ ನಮಗೆ ವಿಸ್ಮಯಗಳು. ಶ್ರೀಕಾಂತಜೀ ಗುಂಡಿನಿಂದ ಸಾಯಬಲ್ಲವನಾಗಿದ್ದರಿಂದ ಸತ್ತ. ಆದರೆ ರುದ್ರಪ್ಪನ ಎದೆ ಗುಂಡುಗಳಿಗೆ ಅಭೇದ್ಯವಾದದ್ದು. ಅವನು ರಾಜಕೀಯ ಶಕ್ತಿಯ ಪ್ರತೀಕ, ರುದ್ರಪ್ಪನ ಜೀವ ನಮ್ಮ ನಿಮ್ಮ ಅಜ್ಞಾನಗಳಲ್ಲಿದೆ ಎಂದು ಹೇಳುವುದು ಒಪ್ಪತಕ್ಕ ಮಾತೇ. ಧಾರ್ಮಿಕ ಮೌಢ್ಯವಿರುವಂತೆ ರಾಜಕೀಯ ಮೌಢ್ಯವೂ ಇದೆ ಎಂಬ ಮಹತ್ವದ ಸತ್ಯವನ್ನು ಹೇಳಿದಂತಾಯಿತು ಆದರೆ ಕಂಬಾರರ ಪ್ರತೀಕ ಯೋಜನೆಯಲ್ಲಿಯ ಧ್ವನಿ ಇಲ್ಲಿಗೇ ನಿಲ್ಲುವುದಿಲ್ಲ. ಈ ಮಾತು ಹೇಳುವವನು ಸಿದ್ದಲಿಂಗು. ಅವನ ಅರಿವಿಗೆ ನಿಲುಕಿದ್ದನ್ನು ಅವನು ಹೇಳುತ್ತಾನೆ. ಆದರೆ ಹೊಸ ಯಾಂತ್ರಿಕತೆಯಂತೆ ಹೊಸ ರಾಜಕೀಯ ಕೂಡ ಈ ಮಾತಿಗಿಂತ ಹೆಚ್ಚು ಗಹನವಾಗಿದೆಯೆಂಬುದನ್ನು ಈ ಮಾತುಗಳು ಪ್ರತಿಧ್ವನಿಸುತ್ತವೆ.

‘ಹರಕೆಯ ಕುರಿ’ ನಾಟಕದ ವಸ್ತು ರಾಜಕೀಯವಾಗಿರುವುದರಿಂದ ಇಷ್ಟೆಲ್ಲ ಮಾತು ಹೇಳಬೇಕಾಯಿತು.  ವಿಶಾಖದತ್ತನ ‘ಮುದ್ರಾರಾಕ್ಷಸ’ ಶೇಕ್ಸ್‌ಪಿಯರನ – ‘ಜ್ಯೂಲಿಯಸ್‌ ಸೀಝರ್’,  ಸಾರ್ತ್ರನ ‘ನೆಕ್ರೊಸೊವ್‌’ ಇಂಥ ನಾಟಕಗಳಲ್ಲಿ ಕಂಡು ಬರುವ ಒಂದು ನಿರ್ಘೃಣತೆಯ ನಿರೂಪಣೆ ಇಲ್ಲಿಯೂ ಇದೆ. ಚಾಣಕ್ಯ, ಬ್ರೂಟಸ್‌ನಂಥ ಮಹಾವ್ಯಕ್ತಿಗಳು ಇಲ್ಲಿ ಇಲ್ಲ ನಿಜ. ವರ್ತಮಾನದ ರಾಜಕೀಯ ವಸ್ತುವಾಗಿರುವುದೇ ಇದಕ್ಕೆ ಕಾರಣವಾಗಿದೆ. ಆದರೆ ವ್ಯಕ್ತಿಗಳ ಗುಣ ಯಾವುದೇ ಆಗಿರಲಿ ಪ್ರಕ್ರಿಯೆ ಮಾತ್ರ ಒಂದೇ ಆಗಿದೆ.

ಸೀಝರನ ಕೊಲೆ ಒಂದು ತತ್ವದ ಸಮರ್ಥನೆಗಾಗಿ ಅನಿವಾರ್ಯವಾದ್ದರಿಂದ ಅದನ್ನು ಕೊಲೆ ಎಂದು ಕರೆಯದೆ ಬ್ರೂಟಸ್‌ ಬಲಿಕಾರ್ಯ ಎನ್ನುತ್ತಾನೆ. ಆದರೆ ಕೊಲೆಗಡುಕರು ಸೀಝರನ ರಕ್ತದ ಮಡುವಿನಲ್ಲಿ ಕೈ ಅದ್ದಿ ಕುಣಿದಾಡಿದಾಗ ತತ್ವದ ಹಿಂದಿನ ಬರ್ಬರತೆ ವಿಕರಾಳವಾಗಿ ಪ್ರತ್ಯಕ್ಷವಾಗುತ್ತದೆ. ರುದ್ರಪ್ಪ ಶ್ರೀಕಾಂತಜೀಯ ಕೊಲೆ ಮಾಡಿಸುವುದೂ ಅಂಥ ಒಂದು ಬರ್ಬರ ಕೃತ್ಯ. ಆದರೆ ಸಿದ್ದಲಿಂಗುವನ್ನು ಹೆಗ್ಗಣದಂತೆ ಬಡಿದು ಕೊಲ್ಲುವುದು ಇನ್ನೂ ಹೆಚ್ಚಿನ ಬರ್ಬರ ಕೃತ್ಯ. ಸಿದ್ದಲಿಂಗುವಿನ ಬಲಿ ತನ್ನ ಸಾರ್ಥಕತೆಯನ್ನು ಪಡೆಯದಿರುವುದು ಹೆಚ್ಚಿನ ದುರಂತ.

ಕಂಬಾರರ ಮೊದಲಿನ ನಾಟಕಗಳಿಗಿಂತ ಇಲ್ಲಿ ಹೆಚ್ಚಿನ ನಾಟ್ಯ ಕೌಶಲ ಕಾಣುತ್ತಿದೆಯೆಂದು ನನ್ನ ಅನಿಸಿಕೆಯಾಗಿದೆ. ಇದಕ್ಕೆ ಕಾರಣ ಹೀಗೂ ಇರಬಹುದು : ತಮ್ಮ ವಾಡಿಕೆಯ ಗೌಡ, ಸೂಳೆ ಮತ್ತು ಮಿಂಡರ ಜಗತ್ತನ್ನು ಬಿಟ್ಟು ಕಂಬಾರರು ಇನ್ನು ಹೆಚ್ಚು ಪರಿಷ್ಕೃತವಾದ ಮತ್ತು ಹೆಚ್ಚು ನಿರ್ದಯವಾದ ರಾಜಕೀಯದ ಲೋಕವನ್ನು ಪ್ರವೇಶಿಸಿದ್ದು. ಹಳ್ಳಿಗಾಡಿನ ರಾಜಕೀಯ ವ್ಯಕ್ತಿನಿಷ್ಠವಾದದ್ದು ಮತ್ತು ಅಲ್ಲಿಯ ಸೇಡು ಮತ್ತು ಕೊಲೆಗಳು ಜೀವನ ಮೌಲ್ಯಗಳ ಕದಡುವಿಕೆಯಿಂದ ಹುಟ್ಟಿ ಬಂದವುಗಳು. ಆದರೆ ಆಧುನಿಕ ರಾಜಕೀಯ ಯಾಂತ್ರಿಕತೆಯಂತೆ ಅವ್ಯಕ್ತವಾದ ಶಕ್ತಿಯ ಅದೃಶ್ಯಜಾಲವಾಗಿದೆ. ಇಲ್ಲಿ ಬದುಕು ಸಾವುಗಳು ಅನುಭವಗಳಲ್ಲ, ಸಂಗತಿಗಳು. ಇಡೀ ದೇಶವನ್ನೇ ತನ್ನ ಖಾಸಗೀ ಆಸ್ತಿಯನ್ನಾಗಿ ಮಾಡಬಲ್ಲ ರುದ್ರಪ್ಪ ಯಾರದೋ ಮನೆಯನ್ನು ತನ್ನ ಆಫೀಸನ್ನಾಗಿ ಮಾಡಿಕೊಂಡು ಅವರಿಗೆ ಗೊತ್ತಿಲ್ಲದಂತೆ ನಾಟಕವಾಡುವುದು ಇಂದಿನ ರಾಜಕೀಯದ ಚಿರಂತನ ಪ್ರತೀಕವಾಗಿದೆ. ಪ್ರಕಾಶ ಮತ್ತು ಸರೋಜರಿಗೆ ಗೊತ್ತಿರುವ ರಾಜಕೀಯ ಪಠ್ಯಪುಸ್ತಕದ ರಾಜಕೀಯದಂತೆ ತಾತ್ವಿಕವಾಗಿದ್ದರೆ ಪ್ರತ್ಯಕ್ಷವಾದ ರಾಜಕೀಯ ಜೀವನ ವೃಕ್ಷದ ಬೇರುಗಳಿಗೆ ಸುರುವಿದ ಕೆಂಡವಾಗುತ್ತದೆ. ರಾಜಕೀಯದ ಲೋಕದಲ್ಲಿ ಶಬ್ದ ಮತ್ತು ಪ್ರತೀಕಗಳಿಗೆ ನಿಶ್ಚಿತಾರ್ಥವೇ ಇಲ್ಲದಿರುವುದರಿಂದ ಹುಟ್ಟುವ ಮೌಲ್ಯಸಂಕರ ಭಯಾನಕವಾಗಿದೆ. ಒಬ್ಬ ವ್ಯಕ್ತಿಯ ದಬ್ಬಾಳಿಕೆ ನಿಂತು ಹೋಗಿ ಸಾರ್ವಜನಿಕ ಅಭಿಪ್ರಾಯದ, ಸ್ಲೋಗನ್ನುಗಳ, ಗುಂಪುಗಾರಿಕೆಯ, ಅರ್ಥವಾಗದ ಅರ್ಥಪ್ರಪಂಚದ ದಬ್ಬಾಳಿಕೆ ತಾನೇ ತಾನಾದಾಗ ವ್ಯಕ್ತಿ ದಿಗ್ಭ್ರಮೆಗೊಳ್ಳುವುದು ಸ್ವಾಭಾವಿಕವಾಗಿದೆ. ಅಂಥ ಒಂದು ಶಕ್ತಿಯುತವಾದ ಚಿತ್ರ ಈ ನಾಟಕದಲ್ಲಿದೆ.

ಕಂಬಾರರ ಈ ನಾಟಕ ಕನ್ನಡದಲ್ಲಿ ಮಹತ್ವದ ಪಾತ್ರವಹಿಸಬಲ್ಲದೆಂದು ನನ್ನ ನಂಬಿಕೆಯಾಗಿದೆ. ಅವರು ಇದಕ್ಕಿಂತ ಹೆಚ್ಚು ಅರ್ಥನಿಬಡತೆಯುಳ್ಳ ನಾಟಕಗಳನ್ನು ಸೃಷ್ಟಿಸಲಿ ಎಂಬ ಹಾರೈಕೆಯೊಂದಿಗೆ ಈ ಮುನ್ನುಡಿಯನ್ನು ಮುಗಿಸುತ್ತೇನೆ.

ಕೀರ್ತಿನಾಥ ಕುರ್ತಕೋಟಿ