(ಅದೇ ಮನೆ, ಮಾರನೆಯ ದಿನ. ಸರೋಜ ಒಬ್ಬಳೇ ನೈಟ್ ಗೌನಿನಲ್ಲಿದ್ದು ಫೆಮಿನಾ ಪತ್ರಿಕೆ ಓದುತ್ತಿದ್ದಾಳೆ. ರೇಡಿಯೋದಲ್ಲಿ ಎತ್ತರದ ದನಿಯಲ್ಲಿ ಹಿಂದೀ ಚಿತ್ರಗೀತೆ ಕೇಳಿಸುತ್ತಿದೆ. ಅಷ್ಟರಲ್ಲಿ ಫೋನ್ ರಿಂಗಾಗುತ್ತದೆ. ಸರೋಜ ಎತ್ತಿಕೊಳ್ಳುತ್ತಾನೆ. ಶೂನ್ಯ ಪ್ರದೇಶದಲ್ಲಿ ಮಾರ್ವಾಡಿ ಕಾಂತಿಲಾಲ್ ಕಾಣಿಸಿಕೊಳ್ಳುತ್ತಾನೆ. ಅವನ ಹಿಂದೆ ಶೀನಿ ಇದ್ದಾನೆ.)

ಸರೋಜ : ಹಲೋ.

ಕಾಂತಿಲಾಲ್‌ : ಯಾರು ಸರೋಜಮ್ಮನಾ?

ಸರೋಜ : ಹೌದು, ನೀವ್ಯಾರು?

ಕಾಂತಿಲಾಲ್‌ : ನಮಸ್ಕಾರ ಮೇಡಂ. ನಾನು ಕಾಂತಿಲಾಲ್‌.

ಸರೋಜ : ನಮಸ್ಕಾರ, ಏನ್ಸಮಾಚಾರ ಶೇಟಜೀ?

ಕಾಂತಿಲಾಲ್‌ : ಇಕ್ಕಟ್ಟಿಗೆ ಬಂದಿಟ್ಟಿದೆ ಅಮ್ಮಾ. ದೇವರೇ ಕಾಪಾಡಬೇಕು.

ಸರೋಜ : ಯಾಕೆ ಏನಾಯಿತು?

ಕಾಂತಿಲಾಲ್‌ : ಸರ್ಕಾರಕ್ಕೆ ನಮ್ಮ ಮೇಲೆ ಭೋ ಕೋಪ ಮಾಡಿಕೊಂಡೈತೆ. ನಾವು ಪಾರ್ಟಿ ಫಂಡ್‌ ಕೊಡ್ಲಿಲ್ಲಾ ಅಂತ ನಮ್ದುದುಕಾನ್‌ ಮೇಲೆ ರೇಡ್‌ ಮಾಡೈತೆ. ನಮ್ಮನೆಗೂ ರೇಡ್‌ ಮಾಡೈತೆ.

ಸರೋಜ : ಅಯ್ಯೋ ದೇವರೆ! ಹೌದಾ? ವೆರಿ ಸಾರಿ ಕಾಂತಿಲಾಲ್‌ಜಿ.

ಕಾಂತಿಲಾಲ್‌ : ಸಾರಿನೂ ಇಲ್ಲ. ಸೀರಿನೂ ಇಲ್ಲ ಮೇಡಂ. ಈಗ ಬಚಾವಾಗಾಕೆ ಒಂದೇ ರಾಸ್ತಾ ಇರೋದು. ಪಚಾಸ್‌ ಹಜಾರ್ ಲಂಚ ಕೊಟ್ರೆ ತಗೊಂಡದ್ದನ್ನೆಲ್ಲಾ ವಾಪಸ್‌ ಕೊಡ್ತಾರೆ. ಇಲ್ದೆ ಹೋದ್ರೆ ಮೂರು ನಾಮ ಹಾಕ್ತಾರೆ. ನನಗೆ ಜೈಲೇ ಗತಿ ನೋಡಿ ಮೇಡಂ. ಈಗ ನಮ್ಮ ಹುಡುಗನ್ನ ಕಳಿಸ್ತೇನೆ. ನಮ್ಮ ಸಾಲ ತೀರಿಸ್ಬಿಡಿ. ಪ್ಲೀಸ್‌.

ಸರೋಜ : ನೋಡಿ ಕಾಂತಿಲಾಲ್‌ಜಿ (ಕಾಂತಿಲಾಲ್ ಫೋನಿಡುವನು. ಸರೋಜ ಗಾಬರಿಯಾಗಿ ಏನು ಮಾಡಬೇಕೆಂದು ತೋಚದೆ ಹಲೋ ಹಲೋ ಎಂದು ಹೇಳಿ ಉತ್ತರ ಬಾರದ್ದಕ್ಕೆ ಮತ್ತೆ ಫೋನ್ ಮಾಡುವಳು. ಲೈನ್ ಸಿಕ್ಕುವುದಿಲ್ಲ. ಮತ್ತೆ ಮತ್ತೆ ಫೋನ್ ಮಾಡಿ ಕೊನೆಗೂ ಲೈನ್ ಸಿಕ್ಕಿತೆಂದಾಗ ಕಾಂತಿಲಾಲ್ ಫೋನ್ ಎತ್ತಿಕೊಳ್ಳುವನು.)

ಹಲೋ ಹಲೋ ಕಾಂತಿಲಾಲ್‌ ಇದಾರ?

ಕಾಂತಿಲಾಲ್‌ : (ದನಿ ಬದಲಿಸಿ) ಅವರು ಈಗಷ್ಟೇ ಹೊರಗಡೆ ಹೋದರು. (ಫೋನ್ ಕುಕ್ಕುವನು. ಸರೋಜ ಇನ್ನೂ ಭೀತಳಾಗಿ ಏನು ಮಾಡಬೇಕೆಂದು ತೋಚದೆ ಅಲೆದಾಡುತ್ತಿದ್ದಾಗ ಕಾಲಿಂಗ್ ಬೆಲ್ಲಾಗುತ್ತದೆ . ಹೋಗಿ ಬಾಗಿಲು ತೆಗೆಯುತ್ತಾಳೆ. ಒಳಗೆ ಮಾರ್ವಾಡಿ ವೇಷದ, ಆದರೆ ಅದು ಅವನ ಉಡುಪಲ್ಲವೆಂಬಂತೆ ಧರಿಸಿರುವ ವ್ಯಕ್ತಿ ಬರುತ್ತಾನೆ.)

ವ್ಯಕ್ತಿ : ನಮಸ್ಕಾರ ಮೇಡಂ

ಸರೋಜ : ನೀವು ಕಾಂತಿಲಾಲ್‌ ಕಡೆಯವರಾ?

ವ್ಯಕ್ತಿ : ಹೌದು , ಯಜಮಾನರು ಫೋನ್‌ ಮಾಡಿದ್ರ ಮೇಡಂ?

ಸರೋಜ : ಹೌದು : ಆದ್ರೆ ನಾನು ಮತ್ತೆ ಫೋನ್‌ ಮಾಡಿದ್ದೆ. ಅವರು ಸಿಗಲಿಲ್ಲ.

ವ್ಯಕ್ತಿ : ಅಯ್ಯೋ ಎಲ್ಲಿ ಸಿಗ್ತಾರೆ? ಓಡಾಡೋದರಲ್ಲೇ ಸಾಕಾಗಿ ಹೋಗಿದೆ. ನನಗೆ ದುಡ್ಡು ಕೊಟ್ರೆ, ತಗೊಂಡ್ಹೋಗ್ತೀನಿ.

ಸರೋಜ : ನೋಡಿ ಇದ್ದಿದ್ರೆ ಕೊಡ್ತಿದ್ದೆ. ನನ್ಹತ್ರ ಹಣ ಇಲ್ಲ. ಸಾಲ ತರೋವಾಗ ಕಂತಿನಿಂದ ವಾಪಸ್‌ ಕೊಡೋದು ಅಂತ ಕರಾರಾಗಿರೋದು. ಎಲ್ಲಾ ಖರ್ಚಾದ ಮೇಲೆ ಒಮ್ಮೆಲೇ ದುಡ್ಡು ಬೇಕೂಂತ ಕೂತ್ರೆ ಎಲ್ಲಿಂದ ತರೋದು? ಕಾಂತಿಲಾಲರಿಗೆ ಹೋಘಿ ಹೇಳಿ. ನಾನೂ ಫೋನ್‌ ಮಾಡ್ತೀನಿ.

ವ್ಯಕ್ತಿ : (ಒಮ್ಮೆಲೆ ದನಿ ಎತ್ತರಿಸಿ) ಮನೆ ದುಕಾನೆಲ್ಲ ರೇಡಾಗಿ ರಾಂ ರಾಂ ಅಂತ ನಾವ್‌ ಕೂತಿದ್ರೆ ದುಡ್ಡೆಲ್ಲಿಂದ ತರ್ಲಿ ಅಂತೀರಲ್ರೀ! ಕರಾರು ಮಾಡಿ ನಿಮಗೆ ದುಡ್ಡೆಣಿಸುವಾಗ ಹೀಗೆಲ್ಲಾ ರೈಡಾದೀತು ಅಂತ ನಮಗ್ಗೊತ್ತಿತ್ತಾ? ಪಾಪರಾಗಿ ಹೆಂಡತಿ ಮಕ್ಕಳು ಬೀದೀಲಿ ನಿಂತೀವಿ. ಕೊಡೋ ದುಡ್ಡು ಕೊಡೀ ಅಂದ್ರೆ ಆಗೋದಿಲ್ಲ ಅಂತೀರಾ. ಇದರ ಜೊತೆ ನಾವು ಸಾಲಗೀಲ ಕೊಟ್ಟದ್ದು ಗೊತ್ತದರಂತೂ ಪೋಲೀಸಿನವರು ಇನ್ನೊಂದು ಕೇಸು ಹಾಕ್ತಾಋಷ್ಟೆ.

ಸರೋಜ : ನೋಡಿ ಗಲಾಟೆ ಮಾಡಬೇಡಿ. ಇಲ್ಲಿ ಯಾರು ತಗೊಂಡ ದುಡ್ಡನ್ನು ತಗೊಂಡಿಲ್ಲ ಅಂತ ಹೇಳ್ತಾ ಇಲ್ಲ.

ವ್ಯಕ್ತಿ : ಕೊಡೋ ದುಡ್ಡು ಕೊಟ್ರೆ ನಾ ಯಾಕ್ರೀ ಗಲಾಟೆ ಮಾಡ್ಲಿ? ನನಗೇನು ತವಲಾ?

ಸರೋಜ : ಬಾಯಿ ಸ್ವಲ್ಪ ಕಮ್ಮಿ ಮಾಡಿ. ಮನೇಲಿ ನಾನೊಬ್ಬಳೇ ಇದ್ದೀನಿ. ಯಜಮಾನರಿಲ್ಲ.

ವ್ಯಕ್ತಿ : ನೋಡಿ ನೋಡಿ. ಅದಕ್ಕೇ ನನಗೆ ಕೋಪ ಬರೋದು. ದುಡ್ಡು ತರೋವಾಗ ಯಜಮಾನರಿರಲಿಲ್ಲ. ಈಗ ನೆಪ್ಪಾದರ ನಿಮಗೆ? ಸಂಕಟ ಬಂದಿದೆ. ನಮ್ಮ ದುಡ್ಡು ನಮಕ್ಕೊಡಿ ಅಂತ ಕೇಳಿದರೆ ಏನೇನೋ ಆಡ್ತೀರ. ಇದು ನ್ಯಾಯವಾ? ಕಂಡೋರು ನಾಲ್ಕು ಜನ ನ್ಯಾಯ ಹೇಳಲಿ. ಸಾಳ ತಗೊಂಡೋರು ನೀವು ಆರಾಮಾಗಿ ಮನೇಲಿರಿ. ಕೊಟ್ಟೋರು ನಾವು ಕಂಬಿ ಎಣಿಸ್ತೀಔಇ.

ಸರೋಜ : ನೋಡಿ, ಜಾಸ್ತಿ ಬಾಯಿ ಮಾಡಬೇಡಿ. ಇದ್ದಕ್ಕಿದ್ದ ಹಾಗೆ ಬಂದು ಕೇಳಿದರೆ ಎಲ್ಲಿಂದ ತರ್ಲಿ?

ವ್ಯಕ್ತಿ : (ಇನ್ನೂ ದನಿ ಏರಿಸಿ) ಏನ್ರೀ ಈ ಥರಾ ಮಾತಾಡ್ರೀರಿ? ಇದ್ದಕ್ಕಿದ್ದ ಹಾಗೆ ನೀವು ಬಂದು ಕೇಳಿದಾಗ ನಾವು ದುಡ್ಡು ಎಣಿಸಲಿಲ್ವಾ? ಎಲ್ಲಿಂದ ತರ್ಲೀ ಅಂದಿವಾ?

ಸರೋಜ : ಜನ ಸೇರಲಿ ಅಂಥ ಕೂಗಾಡ್ತೀರಾ?

ವ್ಯಕ್ತಿ : ನಾ ಕೂಗಾಡೋ ಹಾಗೆ ಮಾಡ್ತಾ ಇರೋರೇ ನೀವು. ಹಣ ಕೇಳಿದರೆ ಕೂಗಾಟ ಅಂತೀರ. ಹಣ ಕೊಟ್ಟಿದ್ದೇ ತಪ್ಪಾ? ಕೊಟ್ಟದನ್ನು ಕೇಳೊದೇ ತಪ್ಪಾ?

ಸರೋಜ : (ಹೋಗಿ ಬಾಗಿಲಿಕ್ಕಿ ಬಾಗಿಲಿಗೆ ಬೆನ್ನಾತು ನಿಂತು) ಹಣಕೊಟ್ಟಿದ್ದೀರಿ ನನಗ್ಗೊತ್ತು. ನನ್ನ ಹತ್ರ ಈಗಿಲ್ಲ, ಸ್ವಲ್ಪ ಟೈಂ ಕೊಡಿ.

ವ್ಯಕ್ತಿ : ಮತ್ತೆ ಅದನ್ನೇ ಮಾತಾಡ್ತೀರರ್ಲಿ. ಅಣ್ಣ ಪೋಲೀಸ್‌ ಸ್ಟೇಷನ್‌ನಲ್ಲಿ ಒದ್ದಾಡ್ತಿದಾನೆ ಅಂತ ಹೇಳಿದರೆ ಕೇಳಿಸೋದಿಲ್ವಾ ನಿಮಗೆ?

ಸರೋಜ : ಹಣ ಈಗಿಲ್ಲ ಬೇಕಾದರೆ ಈ ಹಾಳು ಬಳೇನ್ನ ತಗೊಂಡ್ಹೋಗಿ.

ವ್ಯಕ್ತಿ : ಯಾರಿಗೆ ನಾಮ ಹಾಕ್ಬೇಕಂತೀರ‍್ರಿ? ಉಮಾಗೋಲ್ಡ್‌ ಬಳೆ ಕೊಟ್ಟು ನನ್ನನ್ನು ಫೂಲ್‌ ಮಾಡಬೇಕಂತೀರಾ? (ಇವನು ಮಾತಾಡುತ್ತಿರುವಂಥೆಯೇ ಸರೋಜ ಫೋನು ಮಾಡುವಳು, ಲೈನ್ಸಿಕ್ಕುವುದಿಲ್ಲ, ನಿರಾಶಳಾಗಿ ಹಿಂದಿರುಗುವಳು) ನೋಡಿ ಮೇಡಂ ನೀವೇನೋ ದೊಡ್ಡ ಆಫೀಸರಾಗಿರಭೌದು. ಆದರೆ ಈ ಮಾರ್ವಾಡಿಗೂ ತುಸು ಬುದ್ಧಿ ಇದೆ ಅಂಥ ನೀವು ಒಪ್ಕೋಬೇಕು, ನಮ್ಮ ಹಣ ಹರಾಮಿ ಅಲ್ಲ. ಪೋಲೀಸರಿಗೆ ಫೋನ್‌ ಮಾಡಿ ನನ್ನನ್ನು ಹೆದರಸ್ತೀನಂತ ತಿಳ್ಕೊಂಡಿರಬಹುದು. ಆದರೆ….

(ಕೋಲಿನಿಂದ ಬಾಗಿಲು ಕುಟ್ಟುವ ಶಬ್ದ ಕೇಳಿ ಇಬ್ಬರೂ ಸ್ತಬ್ಧರಾಗುತ್ತಾರೆ. ಹೊರಗಡೆ ಒಬ್ಬ ಪೋಲೀಸ್ಇನ್ ಸ್ಪೆಕ್ಟರ್, ಒಬ್ಬ ಫೋಟೋಗ್ರಾಫರ್. ಇಬ್ಬರು ಪೇದೆಗಳು ಬಂದಿದ್ದಾರೆ.)

ಸರೋಜ : ಯಾರು?

ಇನ್‌ಸ್ಪೆಕ್ಟರ್ : ಪೋಲೀಸ್‌, ಬಾಗಿಲು ತೆಗೆಯಿರಿ.

ವ್ಯಕ್ತಿ : ಅಯ್ಯಯ್ಯ೬ಓ ಪೋಲೀಸರು! ಪೋಲೀಸರು! ದಯವಿಟ್ಟು ಹೇಳಬೇಡಿ ಮೇಡಂ. ಕೈಕಾಲು ಬೀಳ್ತೀನಿ. ನಾ ಬಂದಿದ್ದೆ ಅಂಥ ಹೇಳಬೇಡಿ. (ಎನ್ನುತ್ತಾ ಅಡಗುವುದಕ್ಕೆ ಸ್ಥಳ ಹುಡುಕುತ್ತಾ ಬೆಡ್ರೂಮಿನೊಳಗೆ ನುಗ್ಗಿ ಬಾಗಿಲಿಕ್ಕಿ ಕೊಂಡು ಅಡಗುವನು. ಸರೋಜ ಮುಂಬಾಗಿಲು ತೆಗೆಯುವಳು. ಎಲ್ಲರೂ ಒಳಗೆ ಬರುವರು)

ಸರೋಜ : (ಗಾಬರಿಯಲ್ಲಿ) ಏನು ಸಾರ್?

ಇನ್‌ಸ್ಪೆಕ್ಟರ್ : (ಮಾರ್ಮಿಕವಾಗಿ ಅವಳನ್ನು ನೋಡುತ್ತಾ) ಏನು ಗಲಾಟೆ?

ಸರೋಜ : ಏನಿಲ್ಲವಲ್ಲಾ!

ಇನ್‌ಸ್ಪೆಕ್ಟರ್ : ರಂಪಾಟ ಬೀಧಿಗೆ ಕೇಳಿಸ್ತಾ ಇದ್ರೆ ಏನೂ ಇಲ್ಲ. ಅಂತೀರಲ್ರಿ, ಯಾರಿದ್ದಾರೆ ಒಳಗೆ?

ಸರೋಜ : ಒಳಗೆ? ಯಾರೂ ಇಲ್ಲವಲ್ಲಾ… ಯಾರಿಲ್ಲ… ನಮ್ಮ ಫ್ರೆಂಡ್‌

ಇನ್‌ಸ್ಪೆಕ್ಟರ್ : (ಪೇದೆಗೆ ಸನ್ನೆ ಮಾಡಿ) ಹುಡುಕು (ಮನೆಯನ್ನು ಪರೀಕ್ಷಿಸಿ ನೋಡುತ್ತಾ) ಎಲ್ಲಿ ಕೆಲಸ ಮಾಡ್ತೀರಿ?

ಸರೋಜ : ವಿಧಾನ ಸೌಧದಲ್ಲಿ; ಫೈನಾನ್ಸ್‌ ಪಾರ್ಟ್‌ಮೆಂಟ್‌. ನನ್ನ ಯಜಮಾನ್ರು ಲೆಕ್ಚರರ್.

ಇನ್‌ಸ್ಪೆಕ್ಟರ್ : ಗಳಿಕೆ ಚೆನ್ನಾಗಿರೋ ಹಾಗಿದೆ.
(ಅಷ್ಟರಲ್ಲಿ ಪೇದೆಯೊಬ್ಬ ಬೆಡ್ರೂಮಿನಿಂದ ನಡುಗುತ್ತಿರುವ ವ್ಯಕ್ತಿಯನ್ನು ಹಿಡಿದು ತರುತ್ತಾನೆ. ಇನ್ಸ್ಪೆಕ್ಟರನ ವ್ಯಂಗ್ಯ ಇನ್ನೂ ಮೊನೆಗೊಳ್ಳುತ್ತದೆ) ಇವ್ನೇನೋ ಫ್ರೆಂಡು?

ಸರೋಜ : ಹೌದು ಕೆಲಸ ಇತ್ತು ಬಂದಿದ್ರು .

ಇನ್‌ಸ್ಪೆಕ್ಟರ್ : ಬಾಗಿಲು ಹಾಕ್ಕೊಂಡು ಕೆಲ್ಸ ಮಾಡ್ತಿದ್ನೋ?

ಸರೋಜ : (ನೊಂದು) ನೋಡೀ ನೀವೀಥರ ಮಾತಾಡೋದು ಒಳ್ಳೆಯದಲ್ಲ. ಇದು ಮರ್ಯಾದಸ್ತರ ಮನೆ.

ಇನ್‌ಸ್ಪೆಕ್ಟರ್ : ಮುಚ್ಕೊಳ್ಳೆ ಗೊತ್ತು. ನಿನ್ನ ಗಂಡನಾ ಇವ್ನು?

ಸರೋಜ : ಆಗ್ಲೇ ಹೇಳಿದ್ದೀನಿ ಫ್ರೆಂಡು ಅಂತ.

ಇನ್‌ಸ್ಪೆಕ್ಟರ್ : ತಗಳಪ್ಪ. ಬಾಗಿಲು ಮುಚ್ಚಿಕೊಂಡು ಒಳಗಡೆ ಇವಳು ಗಂಡನಿಂದಲ್ಲ ಫ್ರೆಂಡ್‌ನಿಂದ ಕೆಲಸ ತಗೀತಾಳಂತೆ. ನಿನ್ನ ಯಜಮಾನ ಎಲ್ಲಿ?

ಸರೋಜ : ಕಾಲೇಜಲ್ಲಿದ್ದಾರೆ.

ಇನ್‌ಸ್ಪೆಕ್ಟರ್ : ಒಳ್ಳೆ ಟೈಮೇ ನೋಡ್ಕೊಂಡಿದೀಯಾ (ವ್ಯಕ್ತಿಗೆಲೋ ಲೌಡಿ ಮಗನೇ ಬಾಯಿ ಬಿಡ್ತೀಯಾ. ಬೇಕಾ ಗೂಸ?

ಸರೋಜ : ಸ್ವಾಮಿ ನಾನಂಥವನಲ್ಲ. ಏನೋ ಕೆಲ್ಸ ಇತ್ತು ಅಣ್ಣ ಕಳಿಸಿದ್ದ.

ಇನ್‌ಸ್ಪೆಕ್ಟರ್ : ಅಣ್ಣ ತಮ್ಮ ಇಬ್ಬರನ್ನೂ ನಿಭಾಯಿಸ್ತಾಳಾ ಇವಳು? ಒಳ್ಳೆ ಮಾರ್ವಾಡಿ ಗಿರಾಕಿ ನಯ್ಯಾ. ನೀನಂದು ಮೊನ್ನೆ ಬಳೇಪೇಟೆ ಚಿಕ್ಕೀರಿ ಮನೇಲಿ ಸಿಕ್ಕಿಬಿದ್ದೆ, ಇವತ್ತಿಲ್ಲಿ! ಅದೇ ಅಂದೇ ಈ ಕಾರ್ಪೆಟ್ಟೋ ಈ ಫ್ರಿಜ್ಜೊ, ಈ ಸ್ಟೀರಿಯೋ ಸೆಟ್ಟು-ಹೋಗ್ಲಿ ಪೋಲೀಸಿನವರಿಗೆ ಮಾಮೂಲಿ ಕೊಡೋವಷ್ಟದರೂ ನಿಯತ್ತು ಬ್ಯಾಡವಾ ನಿಂಗೆ?

ಸರೋಜ : ಏನ್‌ ಮಾತಾಡ್ತಿದೀರಿ ನೀವು!

ಇನ್‌ಸ್ಪೆಕ್ಟರ್ : ಮುಚ್ಕೊಳ್ಳೆ ಗೊತ್ತು (ಫೋಟೋಗ್ರಾಫರನಿಗೆ) ಏ ಏನ್‌ ನೋಡ್ತಿಯಾ ಹಿಡ್ಕೋ ಫೋಟೋ (ಫೋಟೋಗ್ರಾಫರ್ ಅವಳ ಮತ್ತು ವ್ಯಕ್ತಿಯ ಹಾಗೂ ಬೆಡ್ರೂಮಿನ ಫೋಟೋ ತೆಗೆಯುವನು, ಸರೋಜಳಲ ಗಾಬರಿ ಹೆಚ್ಚಾಗುತ್ತದೆ.)

ಸರೋಜ : ನೋಡಿ ನೀವು ಪೋಲೀಸ್‌ ಇನ್‌ಸ್ಪೆಕ್ಟರಾಗಿರಬಹುದು. ಯಜಮಾನರಿಲ್ಲದಾಗ ಹೀಗೆ ಮನೆ ನುಗ್ಗಿ ತೊಂದರೆ ಕೊಟ್ರೆ ಒಳ್ಳೆಯದಾಗಲಿಲಕ್ಕಿಲ್ಲ.

ಇನ್‌ಸ್ಪೆಕ್ಟರ್ : ಯಜಮಾನರಿಲ್ಲದಾಗ ಇವನು ಬರಬಹುದೋ? ನಿನ್ನ ಹೆಸರೇನು?

ಸರೋಜ : ನಾನು ಹೇಳೋದನ್ನ ಕೇಳಿ ಇನ್‌ಸ್ಪೆಕ್ಟರೇ.

ಇನ್‌ಸ್ಪೆಕ್ಟರ್ : (ಗದರಿ) ಕೇಳಿದಷ್ಟು ಹೇಳು. ಹೆಸರೇನು?

ಸರೋಜ : (ಗಾಬರಿಯಾಗಿ) ಸರೋಜ. (ಇನ್ನೊಬ್ಬ ಪೋಲೀಸ್ಬರೆದುಕೊಳ್ಳುವನು)

ಇನ್‌ಸ್ಪೆಕ್ಟರ್ : ವಯಸ್ಸು?

ಸರೋಜ : ಮೂವತ್ತು, ನೋಡಿ ಯಾವ್ದೋ ಬೀದಿ ಹೆಂಗಸಿನ ಥರಾ ನನ್ನನ್ನ ಟ್ರೀಟ್‌ ಮಾಡಿದರೆ ನಾನ್‌ ಸುಮ್ನೆ ಇರೋದಿಲ್ಲ. ಇಲ್ಲೀ ತನಕ ಮರ್ಯಾದೆ ಕೊಟ್ಟು ಮಾತಾಡ್ಸಿದೀನಿ (ಇನ್ಸ್ಪೆಕ್ಟರ್ ಥಟ್ಟನೆ ಅವಳ ಕೆನ್ನೆಗೆ ಬಿಗಿಯುವನು)

ಇನ್‌ಸ್ಪೆಕ್ಟರ್ : ನನಗೊತ್ತಿಲ್ಲ ಅಂತೀಯಾ? ಎಷ್ಟು ವರ್ಷ ಸರ್ವೀಸಾಗಿದೆ ನನಗೆ! ಮರ್ಯಾದೆ ಬೇರೆ ಕೇಡು ನಿನಗೆ.
(ಪೇದೆಗೆ) ಏನೇನಿದೆಯೋ?

ಪೇದೆ : ಒಂದು ನಿರೋದ್‌ ಪಾಕೆಟ್ಟಿದೆ; ನೋಟಿನ ಕಂತೆ ಇದೆ.

ಇನ್‌ಸ್ಪೆಕ್ಟರ್ : (ಅವನ್ನು ಇಸಿದುಕೊಂಡು ನೋಟಿನ ಕಂಥೆ ನೋಡುತ್ತಾ)
ಸಾಕೆ ಸಾಕ್ಷಿ ಪುರಾವೆ?

ವ್ಯಕ್ತಿ : ಅದು ನನ್ನ ಹಣ ಸ್ವಾಮಿ,

ಸರೋಜ : (ಭಾರಿ ಅವಮಾನಿತಳಾಗಿ ಕುಸಿದು ಅಳುತ್ತಾ) ನಿಮ್ಮ ಕೈ ಮುಗೀತೇನೆ. ನನ್ನ ಮಾತು ಕೇಳಿ; ನಾನು ಅಂಥವಳಲ್ಲ, ಇವರು ನನ್ನ ಹತ್ರ ಹಣ ಕೇಳೋಕೆ ಬಂದಿದ್ರು.

ಇನ್‌ಸ್ಪೆಕ್ಟರ್ : ಇದನ್ನೆಲ್ಲಾ ಸ್ಟೇಷನ್ನಿನಲ್ಲೇ ಹೇಳೀಯಂತೆ ಬಾ.ಎಳ್ಕೊಂಡು ನಡಿಯೋ (ತಕ್ಷಣ ಏನೋ ಹೊಳೆದಂತೆ ಸರೋಜ ಫೋನಿಗೆ ಓಡುವಳು. ಅವಸರದಲ್ಲಿ ಫೋನ್ಮಾಡುವಳು ಶೂನ್ಯ ಸ್ಥಳದಲ್ಲೊಬ್ಬ ಕ್ಲಾರ್ಕ್ ಕಾಣಿಸುವರು)

ಸರೋಜ : ಹಲೇ ಹಲೋ,

ಕ್ಲಾರ್ಕು : ಹಲೋ ಗೌರ್ನಮೆಂಟ್‌ ಆರ್ಟ್ಸ್ ಕಾಲೇಜ್‌.

ಸರೋಜ : ಅಲ್ಲಿ ಪ್ರೊ. ಪ್ರಕಾಶ್‌ ಇದಾರಾ ನೋಡಿ. ನಾನು ಅವರ ಮಿಸ್ಸೆಸ್‌. ಅರ್ಜೆಂಟ್‌ ಪ್ಲೀಸ್‌.

ಕ್ಲಾರ್ಕ್ : ಅವರನ್ನು ಹುಡುಕಿಕೊಂಡು ಯಾರ್ರೀ‍ ಹೋಗ್ತಾರೆ? (ಫೋನ್ಕುಕ್ಕುವನು)

ಸರೋಜ : ಹಲೋ ಹಲೋ ದಯವಿಟ್ಟು ನೋಡಯಪ್ಪಾ, ಪ್ಲೀಸ್‌.
(ಉತ್ತರ ಸಿಗದ್ದಕ್ಕೆ ಫೋನಿಟ್ಟು ನಿರಾಶೆಯಿಂದ ತಿರುಗುವಳು. ಬಾಗಿಲಲ್ಲಿ ರುದ್ರಪ್ಪ ಕಾಣಿಸಿಕೊಳ್ಳುವನು)

ರುದ್ರಪ್ಪ : ಏನು ಸಮಾಚಾರ? ಏನಿದು ಇನ್‌ಸ್ಪೆಕ್ಟರೆ?

ಸರೋಜ : (ಓಡಿಬಂದು ರುದ್ರಪ್ಪನ ಮುಂದೆ ಕೈ ಜೋಡಿಸಿ ನಿಂತು ಅಳುತ್ತಾ) ನೋಡಿ ಸಾರ್ ನೀವಾದ್ರೂ ಹೇಳಿ, ಇದ್ದಕ್ಕಿದ್ದಹಾಗೆ ಮನೆಗೆ ನುಗ್ಗಿ ಸ್ಟೇಷನ್ನಿಗೆ ಬಾ ಅಂತಿದಾರೆ. ನಾ ಅಂಥವಳಾ? ನನ್ನ ಯಜಮಾನರು ಕಾಲೇಜು ಪ್ರೊಫೆಸರ್. ನನಗೆ ವಿಧಾನಸೌಧದಲ್ಲಿ ಕೆಲಸ ಇದೆ; ಏನಂದಕೊಂಡಿದಾರೆ ಇವ್ರು ನಮ್ಮನ್ನ? ಹೇಳೋರು ಕೇಳೋರು ಯಾರೂ ಇಲ್ವಾ? ನಾವು ಬದ್ಕೋದೆ ತಪ್ಪಾ? ಯಜಮಾನರು ಬರೋತನಕ ಕಾಯಿರಿ ಅಂದ್ರೂ ಕೇಳ್ತಾ ಇಲ್ಲ, ಏನ್ಸಾರ್ ಇದರರ್ಥ? ನಮಗೇನು ಮಾನ ಮರ್ಯಾದೆ ಇಲ್ವಾ?

ರುದ್ರಪ್ಪ : ಏನಿದು ಇನ್‌ಸ್ಪೆಕ್ಟರೇ?

ಇನ್‌ಸ್ಪೆಕ್ಟರ್ : ನೋಡಿ ಸಾರ್, ನಾವು ಪೋಲೀಸಿನೋರು, ವಿನಾಕಾರಣ ಯಾರದೋ ಮನೆ ನುಗ್ಗಿದರೆ ನಾಳೆ ಜನ, ಸರ್ಕಾರ ನಮ್ಮನ್ನ ಹಾಗೇ ಬಿಡ್ತಾರಾ? ನೀವು ಸುಮ್ನಿರ್ತೀರಾ? ಈ ಮನೇಲೇನೋ ನಡೀತಿದೆ ಅಂತ ತುಂಬಾ ದಿನದಿಂದ ನಾವೂ ವಾಚ್‌ ಮಾಡ್ತಾ ಇದ್ವಿ. ಈಗ ಕೆಲವು ದಿನಗಳ ಹಿಂದೆ ಯಾವನೊ ಒಬ್ಬ ರಾತ್ರಿ ಎಂಟು ಗಂಟೆ ಸುಮಾರಿಗೆ ಬಂದ. ಬಾಗಿಲು ತೆಗೀತು. ಮುಚ್ಚಿ ಕೊಂಡಿತು, ಸರಿರಾತ್ರಿಗೆ ವಾಪಸ್ಸು ಹೋದ. ದಿನಾ ನಡೀತಾನೆ ಇದೆ ಇದು. ನೋಡಿ ನೋಡಿ ಸಾಕಾಗಿ ಹೋಯ್ತು, ಇವರು ಕಲಿತವರು ನೋಡಿ ಸಾಕ್ಷಿ ಪುರಾವೆ ಬೇಕು. ಅದಕ್ಕೆ ಕಾಯ್ತಾ ಇದ್ವಿ. ಈವೊತ್ತು ಈ ನನ್ಮಗ ಸಿಕ್ಕ.

ಸರೋಜ : ಏನೋ ವ್ಯವಹಾರ ಇತ್ತು ಮಾತಾಡ್ಲಿಕ್ಕೆ ಬಂದಿದ್ರು. ಬೇಕಾದ್ರೆ ನೀವೇ ಕೇಳಿ ನೋಡಿ ಸಾರ್.

ಇನ್‌ಸ್ಪೆಕ್ಟರ್ : ನೋಡಿ ಸಾರ್. ಇವ್ನು ಯಜಮಾನನಲ್ಲ ಫ್ರೆಂಡ್, ಅಂತೆ. ಹಾಡಾಹಗಲೊತ್ತಿನಲ್ಲಿ ಫ್ರೆಂಡ್‌ನ ಕರ್ಕೊಂಡು ಯಾರಾದರೂ ಬಾಗಿಲ ಹಾಕ್ಕೊಂಡಿರ್ತಾರಾ ಸ್ವಾಮಿ? ನೀವು ಆಪೋಸಿಟ್‌ ಪಾರ್ಟಿ ಲೀಡರು. ನಾಳೆ ನಿಮ್ಮ ಪಾರ್ಟಿ ಗೆದ್ದು ಬಂದ್ರೆ ಮಂತ್ರಿ ಆಗೋರು, ನೀವೇ ಹೇಳಿ.

ರುದ್ರಪ್ಪ : ಇದು ಪ್ರೊ. ಪ್ರಕಾಶ್‌ ಅವರ ಮನೆ ಅಲ್ವೆ?

ಸರೋಜ : ಹೌದು ಸಾರ್, ನಾನು ಅವರ ಹೆಂಡತಿ.

ರುದ್ರಪ್ಪ : ಪ್ರಕಾಶ್‌ ಇಲ್ವಾ?

ಸರೋಜ : ಇಲ್ಲ ಸಾರ್ ಎಲ್ಲಿ ಹಾಳಾಗಿ ಹೋಗಿದಾರೋ. ಕಾಲೇಜಿನಲ್ಲೂ ಇಲ್ಲ.

ರುದ್ರಪ್ಪ : ಇನ್ಸ್‌ ಪೆಕ್ಟರ್, ನನ್ನ ಮೇಲೆ ನಿಮಗೆ ನಂಬಿಕೆ ಇದೆಯಾ?

ಇನ್‌ಸ್ಪೆಕ್ಟರ್ : ಇಡಾನ ಸಾರ್ ಅದಕ್ಕೇನಂತೆ, ಆದರೆ ನಾನು ನಿಮಗೆ ಹೇಳೋದು ಇಂಥ ಕೇಸಿನಲ್ಲಿ ತಾವು ತಲೆ ಹಾಕೋದು ಒಳ್ಳೇದಲ್ಲಾಂತ. ನಾಳೆ ಏನೇನೋ ಆಗಬೇಕಾದವರು . ನಿಮಗ್ಯಾಕೆ ತರಲೆ ತಾಪತ್ರಯ? ನಾಳೆ ಈ ಕೇಸು ಹೆಂಗೆಂಗೋ ಟರ್ನಾಗೋಣ, ನೀವು ಸಿಕ್ಕಿ ಬೀಳೋಣ, -ಸುಮ್ನೆ ನಿಮಗ್ಯಾಕೆ….

ರುದ್ರಪ್ಪ : ಪಾಪ ಮನೇಲಿ ಒಬ್ಬರೇ ಇದ್ದಾರೆ. ಪ್ರೊ. ಪ್ರಕಾಶ್‌ ಬರಲಿ, ಆಮೇಲೆ ಬೇಕಾದರೆ ಇಬ್ಬರೂ ಸ್ಟೇಷನ್‌ಗೆ ಬರ್ತಾರೆ.

ಇನ್‌ಸ್ಪೆಕ್ಟರ್ : ಏನು ಮಾತು ಸಾರ್ ಇದು! ಸಿಕ್ಕಾಗಲೆ ಇವರು ನಡೆದದ್ದನ್ನು ಒಪ್ಪಿಕೊಳ್ತಾ ಇಲ್ಲ. ಆಮೇಲೆ ತಾವೇ ಬಂದು ಒಪ್ಪಕೊಳ್ತಾರಾ?

ರುದ್ರಪ್ಪ : ನೋಡಿ ಇನ್‌ಸ್ಪೆಕ್ಟರ್, ಪ್ರಕಾಶ್‌ ನನ್ನ ಸ್ನೇಹಿತ ಅವರು ಬಂದ ಮೇಲೆ ವಿಚಾರ ಮಾಡಿ ಖಂಡಿತಾ ನಾನೇ ಕರ್ಕೊಂಬರ್ತೀನಿ. ಕೊನೇ ಪಕ್ಷ ಉಸಿರಾಡೋದಕ್ಕಾದರೂ ಟೈಂ ಕೊಡೀಯಪ್ಪ.

ಇನ್ ಸ್ಪೆಕ್ಟರ್ : ಏನೋ ನೀವು ಹೇಳತೀರಿ, ದೊಡ್ಡವರು, ಹೋಗಿರ‍್ತೇನೆ, ಕೇಸು ಹಾಕಾಗಿದೆ. ಅವರನ್ನ ಕರ್ಕಂಬಂದು ಸ್ಪೇಷನ್‌ಗೆ ಹಾಜರ್ಮಾಡೋದು ನಿಮ್ಮ ಜವಾಬ್ದಾರಿ. ನಮಸ್ಕಾರ.
(ಇನ್ಸ್ಪೆಕ್ಟರ್ ಮತ್ತು ಅವನ ಪರಿವಾರ ವ್ಯಕ್ತಿಯೊಂದಿಗೆ ಹೋಗುವರು. ಸರೋಜ ಸೋಫಾದಲ್ಲಿ ಕುಳಿತು ಅಳುತ್ತಿದ್ದಾಳೆ. ದುಃಖವನ್ನು ನಿಯಂತ್ರಿಸಿ ಮತ್ತೆ ಫೋನ್ಮಾಡಿ ಪ್ರೊ. ಪ್ರಕಾಶ್ಬಂದ್ರಾ ಎಂದು ಕೇಳಿ ನಿರಾಶಳಾಗಿ ಬಂದು ಸೋಫಾದಲ್ಲಿ ಕುಸಿಯುವಳು)

ರುದ್ರಪ್ಪ : ನಾನು ರುದ್ರಪ್ಪ ಅಂತ. ವಿರೋಧ ಪಕ್ಷದ ನಾಯಕ ಪ್ರೊ. ಪ್ರಕಾಶ್‌ ಸ್ನೇಹಿತ.

ಸರೋಜ : ಗೊತ್ತು ಸಾರ್.

ರುದ್ರಪ್ಪ : ಏನಮ್ಮ ಇದೆಲ್ಲ?

ಸರೋಜ : ನೀವೇ ನೋಡಿ ಸಾರ್! ಮಾರ್ವಾಡಿ ಹತ್ತಿರ ನಾನು ಸಾಲ ತಂದಿದ್ದೆ. ಅವನ ಮನೆ ರೇಡ್‌ ಆಗಿದೆಯಂತೆ. ಈಗ್ಲೇ ಹಣ ಬೇಕೂಂತ ತಮ್ಮ ನನ್ನ ಕಳಿಸಿದ್ದ. ನಾವ್‌ ನಾವು ಮಾತಾಡಿಕೊಳ್ತಿದ್ರೆ ಪೋಲೀಸರು ಬಂದವರೆ ನಾನು ಕೆಟ್ಟ ಹೆಂಗಸು ಅಂತ ಕೇಸಿಉ ಹಾಕಿದರು. ಇದು ನ್ಯಾಯವಾ ಸಾರ್?

ರುದ್ರಪ್ಪ : ಬಾಗಿಲು ಹಾಕಿತ್ತು ಅಂತ ಹೇಳಿದ್ರಲ್ಲಾ?

ಸರೋಜ : ನಿಜ ಸಾರ್ : ನನ್ನ ಹತ್ತಿರ ಹಣ ಇರ್ಲಿಲ್ಲ. ಆ ಮಾರ್ವಾಡಿ ಈಗ್ಲೇ ಹಣ ಬೇಕು ಅಂತ ಒದರಾಡ್ಲಿಕ್‌ ಸುರು ಮಾಡಿದ. ಅಕ್ಕಪಕ್ಕ ಕೇಳಿಸಿಕೊಳ್ತಾರೆ ಅಂತ ಬಾಗಿಲು ಹಾಕಿದ್ದೆ, ತಪ್ಪ?

ರುದ್ರಪ್ಪ : ಪ್ರೊಫೆಸರ್ ಗೆ ಇದು ಗೊತ್ತ?

ಸರೋಜ : (ದುಃಖದಿಂದ) ಅದೇ ನಾನು ಮಾಡಿದ ತಪ್ಪು ಸಾರ್. ಸುಲಭ ಕಂತಿನಿಂದ ತಿಂಗಳೂ ತಿಂಗಳೂ ಹಣ ಕೊಡಬಹುದು ಅಂತ ಹೇಳಿದ್ದರಿಂದ ಸಾಲ ಮಾಡಿ ಬಳೆ ತಕ್ಕೊಂಡೆ. ಪ್ರಕಾಶ್‌ ಎದುರಿಗೆ ಉಮಾಗೋಲ್ಡಂತ ಸುಳ್ಳು ಹೇಳಿದೆ.

ರುದ್ರಪ್ಪ : ಈಗ ಈ ಕೇಸು ಭಾರಿ ಜಟಿಲ ಅನ್ನಿಸುತ್ತೆ. ಆ ಮಾರ್ವಾಡಿ ಪರಿಚಯ ಪ್ರಕಾಶ್‌ಗಿಲ್ಲ. ಹಗಲೊತ್ತಿನಲ್ಲಿ ನೀವಿಬ್ಬರೂ ಒಳಗಿದ್ದಾಗ ಹಿಡಿದಿದ್ದೀವಿ ಅಂತ ಪೋಲೀಸರು ಹೇಳ್ತಾರೆ. ಕೇಸು ದಾಖಲಾಯಿತು. ಫೋಟೋ ಕೂಡ ಹಿಡ್ಕೊಂಡರು. ನಡೆದದ್ದನ್ನ ನಡೆದ ಹಾಗೇ ಹೇಳಿದಿರಿ ಅಂತಿಟ್ಕೊಳ್ಳೋಣ. ನಾನೇನೊ ಎಲ್ಲಾ ನೋಡ್ದೆ. ನಂಬಿದೆ ಪ್ರಕಾಶ್‌ ನಂಬ್ತಾರೆಯೇ ಅಂತ.

ಸರೋಜ : (ಹೊಸ ಗಾಬರಿಯಲ್ಲಿ) ಸಾರ್!

ರುದ್ರಪ್ಪ : ನೋಡಿ, ನೀವೇ ಯೋಚನೆ ಮಾಡಿ. ನನ್ನ ಹೆಂಡತಿ ಇದೇ ಕಥೆಯನ್ನ ಹೀಗೇ ಹೇಳಿದ್ದರೂ ನಾನು ನಂಬುತ್ತಿರಲಿಲ್ಲ ಅನ್ನಿಸುತ್ತೆ.

ಸರೋಜ : ಇರೋ ವಿಷಯ ಎಲ್ಲ ಹೇಳ್ತೀನಿ, ನಂಬದಿದ್ದರೆ ಮಾರ್ವಾಡಿ ಹತ್ರ ಕರೆದೊಯ್ತೀನಿ.

ರುದ್ರಪ್ಪ : ಅದೇನೋ ಸರಿಯೇ. ಆದರೆ ಮಾರ್ವಾಡಿ ಮನೆ ರೇಡ್‌ ಆಗಿ ಅವನೇ ಭಗವಂತಾ ಅಂತ ಕೂತಿರೋವಾಗ ನಿಮಗೆ ಎಷ್ಟರಮಟ್ಟಿಗೆ ಸಹಾಯ ಮಾಡ್ತಾನೆ ಅನ್ನೋದು ಅನುಮಾನ. ಸಹಾಯ ಮಾಡಿದ ಅನ್ನೋಣ. ಪೋಲೀಸರು ಈಗ ಇನ್ನೊಂದು ಕಥೆ ಹೇಳ್ತಿದಾರೆ ಆ ಇನ್ನೊಂದು ಕಥೆ ಏನದು?

ಸರೋಜ : ಸಾರ್!

ರುದ್ರಪ್ಪ : ನೋಡಿ, ಕೇಸು ಪೋಲೀಸ್‌ ತನಕ ಹೋಗಿದೆ. ಅಂದ ಮೇಲೆ ಪ್ರಕಾಶ್‌ ಪೋಲೀಸ್‌ ಸ್ಟೇಷನ್ನಿಗೆ ಹೋಗಲೇಬೇಕು. ಆಗ್ಲಾದರೂ ಆ ಇನ್ನೊಂದು ಕಥೆ ಬಯಲಿಗೆ ಬಂದೇ ಬರುತ್ತೆ, ಆವಾಗ ನೀವು ಏನು ಹೇಳಿದರೂ ಪ್ರಕಾಶ್‌ ನಂಬೋದು ಕಷ್ಟ. ಹಾಲಿನಂಥ ಸಂಸಾರ ವ್ಯರ್ಥ ಒಡೆದು ಹೋಗುತ್ತಲ್ಲಾ ಅಂತ ಬೇಜಾರಾಗುತ್ತೆ. ಪ್ರಕಾಶ್‌ ಕವಿ ಬೇರೆ, ತುಂಬ ಸೆನ್ಸಿಟಿವ್.

ಸರೋಜ : (ದುರಂತದ ಅಂದಾಜಿನಿಂದ ಗಾಬರಿಯಾಗಿ) ನಾನೇನು ಮಾಡ್ಲಿ ಸಾರ? ನೀವೇ ಕಾಪಾಡಿ ಹೀಗಾಗುತ್ತೆ ಅಂತ ಗೊತ್ತಿದ್ರೆ…

ರುದ್ರಪ್ಪ : ಈಗಿನ ಕಥೆ ಹೇಳಿದ ಹಾಗೆ ಮೊದಲ್ನೇ ಕಥೆಯನ್ನೂ ವಿವರವಾಗಿ ಹೇಳಿದ್ರೆ ನಾನು ಯಾವ ರೀತಿ ನಿಮಗೆ ಸಹಾಯ ಮಾಡಬಹುದು ಅಂತ ಯೋಚಿಸಬಲ್ಲೆ. ಇಂಥ ಕೇಸುಗಳಲ್ಲಿ ನನಗೆ ಆಸಕ್ತಿ ಕಡಿಮೆ. ಹೇಳಬಹುದು ಅಂತ ಅನ್ನಿಸಿದರೆ ಹೇಳಿ. ಯಾಕೆ ಅಂದ್ರೆ ಪೋಲೀಸರಲ್ಲಿ ಈ ಕೇಸಾಗಲೇ ದಾಖಲಾಗಿದೆ.

ಸರೋಜ : ಯಾವ್ದು ಸಾರ್?

ರುದ್ರಪ್ಪ : ಅದೇ ರಾತ್ರಿ ಎಂಟು ಗಂಟೆ ಸುಮಾರಿಗೆ ಯಾರೋ ಬಂದು ಮನೆ ಹೊಕ್ರು.
ಬಾಗಿಲಿಕ್ಕಿತು ಅಂತ ಇನ್‌ಸ್ಪೆಕ್ಟರ್ ಏನೋ ಹೇಳಿದರಲ್ಲ ಹೋಗ್ಲಿ, ನಿಜಾನಾ ಅದು?

ಸರೋಜ : ನಿಜ.

ರುದ್ರಪ್ಪ : ಏನದು?

ಸರೋಜ : (ಮೌನ)

ರುದ್ರಪ್ಪ : ಒತ್ತಾಯ ಮಾಡ್ತಾ ಇಲ್ಲ. ಅದರಿಂದ ನಿಮಗೆ ನೋವಗೋ ಹಾಗಿದ್ರೆ ಹೇಳೋದೆ ಬೇಡ. ಈ ಕೇಸಿನಲ್ಲಿ, ಪೋಲೀಸರು ಅದನ್ನೂ ಸೇರಿಸಿರೋದ್ರಿಂದ ಕೇಳಿದೆ ಅಷ್ಟೆ. ಬೇಕಾದ್ರೆ ಯಾವುದಕ್ಕೂ ಪ್ರಕಾಶ್‌ ಜೊತೆ ಮಾತಾಡಿ ಆ ಮೇಲೆ ನನಗೆ ಫೋನ್‌ ಮಾಡಿ (ರುದ್ರಪ್ಪ ಎದ್ದು ಹೊರಡುವನು.)

ಸರೋಜ : ಒಂದ್ನಿಮಿಷ ಸಾರ್, ಎಲ್ಲಾ ಹೇಳ್ತೀನಿ (ರುದ್ರಪ್ಪ ಮತ್ತೆ ಕೂರುವನು) ಯಾರೆದುರಿಗೆ ಬಾಯಿಬಿಟ್ಟರೂ ನಮ್ಮೆಜಮಾನರನ್ನ ಕೊಲೆ ಮಾಡ್ತೀನಿ ಅಂತ ಹೇಳಿದ್ದಾರೆ ಸಾರ್.

ರುದ್ರಪ್ಪ : ನಾನು ಬೇರೆಯವರೆದುರಿಗೆ ಬಾಯಿಬಿಡಲ್ಲ ಮತ್ತು ನನಗೆ ಹೇಳೊದ್ರಿಂದ ನಿಮಗೆ ಸಹಾಯ ಆಗುತ್ತೆ ಅಂತ ನಂಬಿಕೆ ಇದ್ರೆ ಹೇಳಿ, ನನ್ನ ಪರವಾಗಿ ಇಷ್ಟನ್ನು ಹೇಳಬಲ್ಲೆ; ನಿಮ್ಮ ಗುಟ್ಟು ಕಾಪಾಡುವುದು ನನ್ನ ಹೊಣೆ.

ಸರೋಜ : ಅದು ನಿಮಗೂ ಸಂಬಂಧಪಟ್ಟಿದೆ ಸಾರ್.

ರುದ್ರಪ್ಪ : ಹೇಳಿ.

ಸರೋಜ : ಆ ದಿನ ನಿಮ್ಮ ಪಾರ್ಟಿಯವನೇ ಸಿದ್ದಲಿಂಗು ಬಂದಿದ್ದ.

ರುದ್ರಪ್ಪ : (ನಿರ್ಭಾವದಿಂದ) ಸರಿ.

ಸರೋಜ : ಹಾಗಲ್ಲ ಸಾರ್. ಶ್ರೀಕಾಂತಜೀ ಕೊಲೆ ಮಾಡಿ ಬಂದೀನಿ; ಆಶ್ರಯ ಬೇಕು ಅಂತ ಬಂದ.

ರುದ್ರಪ್ಪ : ಶ್ರೀಕಂಆತಜೀನ್ನ ಕೊಲೆ ಮಾಡಿದ್ದು ಅವನಲ್ಲವಲ್ಲ. ನಿಜ ಹೇಳಬೇಕಂದ್ರೆ ಕೊಲೆಗಾರನ ಪತ್ತೆ ಆಗೇ ಇಲ್ಲ. ಸಿದ್ದಲಿಂಗೂನೇ ಕೊಲೆಗಾರ ಅಂತ ಯಾರಿಗೂ ಅನುಮಾನ ಕೂಡ ಬಂದಿಲ್ಲ.

ಸರೋಜ : ಅದೇನ ಓ ನನಗೆ ತೊತಿಲ್ಲ ಸರ್, ಪ್ರಕಾಶ್‌ ಶ್ರೀಕಾಂತಜೀ ಭಾಷಣ ಕೇಳೋಕ್ಹೋಗಿದ್ದರು. ಮನೇಲಿ ಒಬ್ಬಳೇ ಇದ್ದೆ. ಕಾಲಿಂಗ್‌ ಬೆಲ್‌ ಆಯಿತು. ಇವರೇ ಬಂದಿರಬೇಕು ಅಂತ ಹೋಗಿ ಬಾಗಿಲು ತೆಗೆದೆ, ಒಳಗಡೆ ಬಂದವನೇ ನನ್ನ ಬಾಯಿ ಹಿಡಿದು ಕಟ್ಟಿ ಸೋಫಾದಲ್ಲಿ ಕೂರಿಸಿದ. ‘ನನ್ನ ಹೆಸರು ಸಿದ್ದಲಿಂಗು, ಶ್ರೀಕಾಂತಜೀ ಕೊಲೆ ಮಾಡಿ ಬಂದೆ. ರಾತ್ರಿ ಹನ್ನೊಂದಲು ಗಂಟೆ ತನಕ ಪೋಲೀಸರಿಂದ ರಕ್ಷಣೆ ಬೇಕು’ ಅಂದ. ಬಾಯಿ ಮಾಡಿದರೆ, ಗಂಡನಿಗೆ ಹೇಳಿದರೆ, ಪ್ರಕಾಶನ್ನ ಕೊಲೆ ಮಾಡ್ತೀನಿ ಅಂತ ಹೆದರಿಸಿದ. ಅಡಗಿದ. ಆಮೇಲೆ ಪ್ರಕಾಶ್‌ ಬಂದ್ರು, ಗಾಬರಿಯಿಂದ ನಾನು ಯಾರಿಗೂ ಹೇಳಲಿಲ್ಲ. ಸ್ವಲ್ಪ ಹೊತ್ತು ಇದ್ದು ಅವನೇ ಹೋಗಿಬಿಟ್ಟ.

ರುದ್ರಪ್ಪ : ಹೋಗುವಾಗ ಪ್ರಕಾಶನ ಕಣ್ಣಿಗೆ ಬೀಳಲಿಲ್ಲವಾ?

ಸರೋಜ : ಇಲ್ಲ ಸಾರ್ ಕಿಟಕಿಯಿಂದ ಹಾರಿಹೋದ.

ರುದ್ರಪ್ಪ : ಸರಿ. ಆ ಹೆದರಿಕೆಯಿಂದ ನೀವಿನ್ನೂ ಪ್ರಕಾಶನಿಗೆ ಈ ಸುದ್ದಿ ಹೇಳಿಲ್ಲ.

ಸರೋಜ : ಇಲ್ಲ ಸಾರ್.

ರುದ್ರಪ್ಪ : ನೀವು ತೆಗೊಂಡಸ ರಿಸ್ಕೇನೋ ದೊಡ್ಡದೇ. ನೋಡಿ ಇದನ್ನೆಲ್ಲ ನೀವು ಪೋಲೀಸರಿಗೆ ವಿವರಿಸಲಿಕ್ಕೂ ಆಗೋದಿಲ್ಲ. ಪ್ರಕಾಶ್‌ನೆದುರಿಗೂ ಹೇಳಲಿಕ್ಕಾಗೋದಿಲ್ಲ, ಹಾಗಂತ ಬಾಯ್ಮುಚ್ಚಿಕೊಂಡ್ರೆ ಮಾನನಷ್ಟ. ಏನು ಮಾಡಬೇಕು ಅಂತೀರಿ?

ಸರೋಜ : ಪ್ರಕಾಶ್‌ ಎದುರಿಗೆ ಎಲ್ಲಾ ಹೇಳಿಬಿಡೋದೊಂದೇ ದಾರಿ.

ರುದ್ರಪ್ಪ : ಸರಿಯೇ, ಆದರೆ ಕೇಸು ಪೋಲೀಸರ ತನಕ ಹೋಗಿದೆಯೇ! ಪೋಲೀಸರಿಗೆ ಈ ಸೂಕ್ಷ್ಮಗಳೆಲ್ಲ ಗೊತ್ತಿಲ್ಲ. ಅವರು ಹೇಳೋ ಕಥೇನೇ ಬೇರೆ, ಅದು ನಿಮಗೂ ಗೊತ್ತಿದೆ. ಈಗಿರೋ ಸಮಸ್ಯೆ ಇದು; ನೀವು ಪ್ರಕಾಶ್‌ನೆದುರಿಗೆ ಮನಸ್ಸು ಬಿಚ್ಚಿ ಎಲ್ಲಾ ಹೇಳಿದಿರಿ ಅಂತಲೇ ಇಟ್ಕೊಳ್ಳಿ, ಪ್ರಕಾಶ್‌ ನಂಬ್ತಾರಾ? ನಂಬಿದರಂತಲೇ ಇಟ್ಕೊಳ್ಳೋಣ. ಸಿದ್ದಲಿಂಗು ಯಾವ ಕೇಸಿನಲ್ಲಿ ಸಿಕ್ಕುಬಿದ್ದು ಇಲ್ಲಿಗೆ ಬಂದಿದ್ದನೋ, ಅಥವಾ ಅವನು ಹೇಳೋ ಹಾಗೆ ಶ್ರೀಕಾಂತ್‌ಜೀ ಕೊಲೇನೇ ಮಾಡಿದ್ದಾನೋ ಗೊತ್ತಿಲ್ಲ. ಅದೇನಿದ್ರೂ ಅವನಿಂದ ಅಪಾಯ ತಪ್ಪಿದ್ದಲ್ಲ, ನೋಡಿ. ಸಿದ್ದಲಿಂಗು ಇಲ್ಲೇನಾದ್ರೂ ಮರೆತುಬಿಟ್ಟು ಇಟ್ಟು ಹೋಗಿದ್ದಾಣೋ?

ಸರೋಜ : ಇಲ್ಲ ಸಾರ್,

ರುದ್ರಪ್ಪ : ನನಗನ್ನಿಸೋ ಹಾಗೆ ಈಗ್ಲೂ ನೀವು ಇದೆಲ್ಲದರಿಂದ ಪಾರಾಗಬಹುದು.
ಪ್ರಕಾಶ್‌ನಿಗೂ ಹೇಳದೆ, ಪೋಲೀಸರಿಗೂ ಹೇಳದೆ,

ಸರೋಜ : ಹ್ಯಾಗೆ ಹೇಳಿ ಸಾರ್,

ರುದ್ರಪ್ಪ : ಮೊದಲು ಪೋಲೀಸ್‌ ಕೇಸು ರದ್ದಾಗಬೇಕು. ಅಂದ್ರೆ ಮುಂದೆ ಏನಾದ್ರೂ ಮಾಡಬಹುದು, ದಾನಪ್ಪ ಅಂತ ಅಸೆಂಬ್ಲಿ ಮೆಂಬರ್ ಗೊತ್ತಾ ನಿಮಗೆ?

ಸರೋಜ : ನೋಡಿದೀನಿ ಸಾರ್, ಪರಿಚಯ ಇಲ್ಲ.

ರುದ್ರಪ್ಪ : ಇರಬೇಕಾದ್ದಿಲ್ಲ, ದಾನಪ್ಪ ತುಂಬ ಒಳ್ಳೆಯವನು ಅವನಿಗೂ ಈ ಇನ್ಸ್‌ಪೆಕ್ಟರ್ ಗೂ ತುಂಬಾ ಸ್ನೇಹ. ದಾನಪ್ಪನ ಮಾತನ್ನು ಇನ್‌ಸ್ಪೆಕ್ಟರ್ ತೆಗೆದುಹಾಕೋದಿಲ್ಲ. ಯಾಕೆ ಅಂದ್ರೆ ಇವನು ಇನ್ಸ್‌ಪೆಕ್ಟರ್ ಆದದ್ದೇ ದಾನಪ್ಪನಿಂದ.

ಸರೋಜ : ಸಾರ್ ನೀವೆ ಒಂದು ಮಾತು ಹೇಳಬಹುದಲ್ಲ.

ರುದ್ರಪ್ಪ : ಹೇಳ್ತಿದ್ದೆ. ರಾಜಕೀಯ ಹೀಗೆ ಅಂತ ಹೇಳೋಕಾಗೋಲ್ಲ ನೋಡಿ; ಅವನಿಗೂ ನನಗೂ ಈಗ ಸರಿ ಇಲ್ಲ. ಇನ್ಸ್‌ಪೆಕ್ಟರ್ ನನ್ನ ಜೊತೆ ಹ್ಯಾಗೆ ಒರಟಾಗಿ ನಡಕೊಂಡ, ನೀವೇ ನೋಡಿದಿರಲ್ಲ. ಅಷ್ಟೇ ಅಲ್ಲ, ನನ್ನ ಹೆಸರು ಹೇಳಿದರೆ ಈ ಕೆಲಸ ಆಗೋಲ್ಲ. ಇಲ್ಲದಿದ್ರೆ ಈ ಸಮಯದಲ್ಲಲ್ಲದೆ ಇನ್ಯಾವಾಗ ಸಹಾಯ ಮಾಡೋದು? ಆದರೆ ದಾನಪ್ಪನ ಬಗ್ಗೆ ನಿಮಗೆ ಅನುಮಾನ ಬೇಡ, ಯಾರೇ ಹೋಗಿ ಸಹಾಯ ಕೇಳಿದರೂ ಮುಂದೆ ಬರ್ತಾನೆ. ಅವನು ಅಲ್ಲಿಂದಲೇ ಇನ್ಸ್‌ಪೆಕ್ಟರಿಗೊಂದು ಫೋನ್‌ ಮಾಡಿದರೆ ಸಾಕು. ಇವನು ಕೇಸ್‌ ಕೈ ಬಿಡ್ತಾನೆ. ಕೇಸ್‌ ಒಮ್ಮೆ ರದ್ದಾದರೆ ಪ್ರಕಾಶನನ್ನ ನಿಭಾಯಿಸೋದು ಕಷ್ಟ ಅಲ್ಲ. ಹಾಗೂ ಪ್ರಕಾಶ್‌ ಮೊಂಡುತನ ಮಾಡಿದರೆ ಇಷ್ಟರಲ್ಲೇ ಸಿದ್ದಲಿಂಗೂ ನಿಮಗೂ ಫೋನ್‌ ಮಾಡಬಹುದು. ನಮ್ಮ ಸಂಸಾರ ಹಾಳಾಗ್ತಾ ಇದೆ. ನೀನೇ ಖುದ್ದಾಗಿ ಬಂದು ನಮ್ಮೆಜಮಾನರಿಗೆ ಹೇಳಪ್ಪ ಅಂತ ಹೇಳಿ. ಈಗ ದಾನಪ್ಪನ ಕಡೆಗೆ ಹೋಗ್ತೀರಾ? ಬೇಕಾದ್ರೆ ಅವನು ಎಲ್ಲಿದಾನೆ ಅಂತ ಹೇಳ್ತೀನಿ ಇರಿ. (ಉತ್ತರಕ್ಕೂ ಕಾಯದೆ ಫೋನ್ಮಾಡುವನು, ಶೂನ್ಯ ಸ್ಥಳದಲ್ಲಿ ಶೀನಿ ಫೋನ್ತಕೊಳ್ಳುವನು).

ರುದ್ರಪ್ಪ : ಶೀನೀನಾ?

ಶೀನಿ : ಹೌದು, ನೀವ್ಯಾರು?

ರುದ್ರಪ್ಪ : ನಾನು ರುದ್ರಪ್ಪ, ದಾನಪ್ಪ ಎಲ್ಲಿ?

ಶೀನಿ : ಎಲ್ಲ ರೆಡಿ ಸಾರ್. ದಾನಪ್ಪ ಜನರಲ್ ಹಾಸ್ಟಲ್‌ ಎಂಟನೇ ರೂಂನಲ್ಲಿದಾರೆ.

ರುದ್ರಪ್ಪ : ಸರಿ. (ಫೋನ್ಕೆಳಗಿಡುವನು) ನೋಡಿಯಮ್ಮ ನೀವು ಕೂಡ್ಲೆ ಜನರಲ್ ಹಾಸ್ಟೆಲ್‌ಗೆ ಹೋಗಿ. ದಾನಪ್ಪ ಎಂಟನೇ ರೂಮಿನಲ್ಲಿ ಇದಾನಂತೆ.

ಸರೋಜ : ಬೇರೆ ದಾರಿ ಇಲ್ಲಾ ಅಂತೀರಾ ಸಾರ್?

ರುದ್ರಪ್ಪ : ಇರಬಹುದು. ಆದರೆ ಅಪಾಯ ಇಲ್ಲದ ದಾರಿ ಅಂದ್ರೆ ಇದೊಂದೇ. ದೇವರ ಮೇಲೆ ಭಾರ ಹಾಕಿ ಹೋಗಿ. ದೇವರು ಒಳ್ಳೇದ್ನ ಮಾಡ್ಲಿ. ನಾನು ಬರ್ತೀನಿ ಆದರೆ ಹುಷಾರಾಗಿರಿ, ದಾನಪ್ಪನ ಮುಂದೆ ಮರೆತು ಕೂಡ ನನ್ನ ಹೆಸರು ಹೇಳಕೂಡದು. ಹೇಳಿದರೆ ಕೆಲಸ ಕೆಟ್ಟ ಹಾಗೆ, ಇಷ್ಟರಲ್ಲೇ ಸಿದ್ದಲಿಂಗು ಫೋನ್‌ ಮಾಡಿದರೆ ಮನೆಗೇ ಕರೆಸಿ ಪ್ರಕಾಶನಿಗೆ ಹೇಳಿಸಿ,
(ರುದ್ರಪ್ಪ ಹೋಗುವನು. ಸರೋಜ ಮತ್ತೆ ಮತ್ತೆ ಯೋಚಿಸಿ ಸೀರೆ ಬದಲಿಸಿ ಹೊರಡುವಳು. ಅಷ್ಟರಲ್ಲಿ ಪ್ರಕಾಶ್ಬರುವನು)

ಪ್ರಕಾಶ್‌ : ಎಲ್ಲೋ ಹೊರಟಿದ್ದೀಯ?

ಸರೋಜ : ಬಂದೆ ಇರಿ.

ಪ್ರಕಾಶ್‌ : ಏನವಸರ? ಫೋನ್‌ ಮಾಡಿದ್ದೆಯಂತೆ ಕಾಲೇಜಿಗೆ?

ಸರೋಜ : ಮಾಡಿದ್ದೆ. ಬರ್ತೀನಿ ಇರಿ.

ಪ್ರಕಾಶ್‌ : ನಾನೂ ಬರಲಾ?

ಸರೋಜ : ಬೇಡ. (ಅವಸರದಲ್ಲಿ ಹೋಗುವಳು.)