ಗುರುವಿನಾಶೀರ್ವಾದ ಹರಹಿರಲು ಬಾನಂತೆ
ನಿಂತಿರುವೆ ನಡೆಗಲಿವ ಹಸುಳೆಯಂತೆ.
ನಾನೆತ್ತ ಸುತ್ತಿದರು ಎಲ್ಲೆಲ್ಲಿಯೂ ಬಾನು ಹಬ್ಬಿ
ರಕ್ಷೆಯೊಲು ಹರಡಿಹುದು ವಿಶ್ವವನು ತಬ್ಬಿ.

ಇರುಳ ತಮ ದಟ್ಟಯಿಸಿ, ನನ್ನ ಕಂಗಳ ತುಂಬಿ
ಮುಂದಕಡಿಯಿಡದಂತೆ ಮುಸುಕಿ ಬರಲು,
ಪುಣ್ಯದೊಬ್ಬುಳಿಯಂತೆ ಆದರ್ಶಜ್ಯೋತಿಯೊಲು
ರಾಜಿಪವು ತಾರೆಗಳು ಬಾನ ತುಂಬಿ.

ಒಮ್ಮೊಮ್ಮೆ ತಣ್ಗದಿರ ಜೊನ್ನಬಿಂಬವು ಮೂಡಿ
ಜೊನ್ನದಲಿ ಬಾನ್‌ಬುವಿಯನೊಂದುಮಾಡಿ
ತೇಲುತ್ತ ಬರುವಾಗ ನನ್ನ ಮನವೂ ಹಾಡಿ
ಜೊನ್ನವಾಗುವುದೊಮ್ಮೆ ಜೊನ್ನದಲಿ ಕೂಡಿ.

ಭುವನ ಜೀವನ ನಯನವರಳುವುದು ಮೂಡಗಿರಿ
ಶೃಂಗದಲಿ ನವಭವ್ಯವಿಭವದಲ್ಲಿ.
ಮತ್ತೆ ಸಂಜೆಗೆ ‘ಕಣ್ಣು’ ಎವೆಮುಚ್ಚಿ ಮಲಗುವುದು
ಪಡುಗಡಲಿನನಂತಶಯನದಲ್ಲಿ.

ನಿಮ್ಮ ಹರಕೆಯ ಬಾನು ದಿನದಿನವು ಶಶಿ ಸೂರ್ಯ
ತಾರಾದಿಗ್ರಹಗತಿಗೆ ಹಾದಿಯಾಗಿ
ಹರಹಿರಲು, ನಾ ಕೆಳಗೆ ದಿನದಿನವು ನಡೆಯುವೆನು
ನಿಮ್ಮ ಕರುಣದ ಕಿರಿಯ ಕಂದನಾಗಿ.