ಬೌದ್ಧಿಕ ದೌರ್ಜನ್ಯ

ಕೆಲವರು ಜಾತಿ ಹಾಗೂ ಲಿಂಗ ಬಲದಿಂದ ಹಾಡುಗಾರ್ತಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲು ಪ್ರಯತ್ನಿಸಿದರೆ; ಮತ್ತೆ ಕೆಲವರು ಜ್ಞಾನದ ಬಲದಿಂದ ಹಾಡುಗಾರ್ತಿಯರನ್ನು ಅಪಮಾನಿಸುವರು. ಇದನ್ನು ತಿಗಣಿಬಿದರಿ ಯಮನವ್ವನ ಮಾತಿನಲ್ಲಿಯೇ ಕೇಳಬೇಕು. “ತಂಗಿ ಸಭಾದಾಗ ಭಕ್ಷೀಸು ಕೊಡುವಾಗ, ನಾವು ಊರಾಗ ತಿರುಗಾಡುವಾಗ ಗಣಸೂರಿಂದ ಒಂಥರಾ ಕಷ್ಟ ಎದುರಿಸಿದ್ರ, ಸಭಾದಾಗ ಪ್ರಶ್ನೆ ಕೇಳೂರು ಇನ್ನೊಂಥರಾ ಹೆದರಸ್ತಾರೆ. ಒಬ್ಬರು ದೇಹದಿಂದ ಅಂಜಿಸಿದ್ರ; ಇನ್ನು ಕೆಲವ್ರು, ಬುದ್ಧಿಯಿಂದ ಅಂಜಸ್ತಾರು. ಹೀಂಗ ಪ್ರಶ್ನೆ ಕೇಳೂರು ನಾವು ಹಾಡ್ಕಿಗೆ ಹೋದ ಪ್ರತಿ ಊರಾಗೂ ಇರತಾರು. ಮೊದಲs ಊರ ಪರಿಚಯ ಇರ್ಲಾಕಂದ್ರೂ, ಹಾಡ್ಕಿಗೆ ಹೋಗ್ತ, ಹೋಗ್ತ ಗೊತ್ತಾಗತ್ತ. ನಮಕ್ಕಿಂತ ಪೈಲೆ ಹಾಡ್ಕಿಗಿ ಹೋದವರು ಇಂಥಾ ಊರಾಗ, ಇಂಥವ್ರು ಪ್ರಶ್ನಾದಾಗ ಅಂಜಸ್ತಾರ ಅಂತ ಹೇಳತಾರು. ಅದಕ್ಕ ‘ಯಪ್ಪಾ ನಮಗ ಹಾಡಾಗಿನವ ಪ್ರಶ್ನ ಕೇಳ್ರಿ, ಪುರಾಣದಾಗಿನ ಮೂಲ್ಯಾಗಿಂದ ಕೇಳಿದ್ರೆ ತಿಳಿಯಂಗಿಲ್ರಿ, ನಿಮ್ಮ ಬುದ್ಧಿವಂತಿಕೇನ ಹಂಚಕೊಳ್ರಿ. ಆದ್ರ ಸಭಾದಾಗ ಪ್ರಶ್ನಾ ಕೇಳಬ್ಯಾಡ್ರಿ ಅಂತಿದ್ವಿ. ‘ಪ್ರಶ್ನಾ ಕೇಳಬಾರ್ದು ಅಂತಂದ್ರ ನೀ ನನ್ನ ಹತ್ರ ಒಂದು ರಾತ್ರಿ ಇರಬೇಕು’ ಅನ್ನುವ್ರು. ನೀ ನನಗೆ ಅಪ್ಪಾ, ನಾ ನಿನ್ನ ಮಗಳ ಅದಮ್ಯಾಗ ಒಂದು ರಾತ್ರಿ ಯಾಕ ಇರಬೇಕು? ಎಲ್ಲಾರಿಗಿಂತ ಹೆಚ್ಚ ಓದ್ದವ್ರು ಅದಿರಿ. ಹೀಂಗ್ಯಾಕ ಮಾತನಾಡ್ತಿರಿ? ಅಂದ ಕೂಡ್ಲೆ ಸುಮ್ಮನಾಗೂರು. ಕೆಲವ್ರು ಸಿಟ್ಟಿಲೆ ಹೆಚ್ಚ ಪ್ರಶ್ನಾ ಕೇಳ್ತಿದ್ರು. ಇನ್ನ ಕೆಲವ್ರು ಸುಮ್ಮನಾಗ್ತಿದ್ರು, ಪ್ರಶ್ನಾಕ್ಕ ಉತ್ತರಾ ಹೇಳದಿದ್ರ ನಾವು ಸತ್ತ್ಹಂಗ ತಂಗಿ. ಏ ಆಕಿಗಿ ಉತ್ತರಾ ಕೊಡಾಕ ಬರಂಗಿಲ್ಲ, ಆಕಿನ ಕರೀಬ್ಯಾಡ್ರಿ ಅಂದ ಬಿಡವ್ರು. ನಮ್ಮ ಉಪಜೀವನಕ್ಕ ಕಲ್ಲ ಬೀಳತ್ತಂತ ಯಪ್ಪಾ, ಯಣ್ಣಾ ಅಂತ ಕೈ ಮುಕ್ಕೊಂಡು ಪಾರಾಗಿ ಬರ್ತಿದ್ವಿ”. ‘ಬುದ್ಧಿವಂತ ಪುರುಷರ’ ಲೈಂಗಿಕ ಕರೆಯನ್ನು ನಿರಾಕರಿಸಿದರೆ ಹಾಡುಗಾರ್ತಿಯರಿಗೆ ಸಭೆಯಲ್ಲಿ ಪ್ರಶ್ನೆಗಳ ಮೇಲೆ ಪ್ರಶ್ನೆ ಎದುರಾಗುವುದು. ಜಾತಿ ಪ್ರಧಾನತೆಯನ್ನು ನಿರಾಕರಿಸಿದರೆ, ಗಂಡಸು ಎನ್ನುವ ಪ್ರಬಲತೆಯನ್ನು ಅಲ್ಲಗಳೆದರೆ ಅವರಿಗೆ ಎದುರಾಗುತ್ತಿದ್ದುದು ಜ್ಞಾನದ ಬಲ. ಜಾತಿ, ಲಿಂಗ ಹಾಗೂ ಜ್ಞಾನ ಈ ಮೂರು ನೆಲೆಗಳಲ್ಲಿ ಪ್ರಬಲರಾಗಿದ್ದವರು ಮೇಲ್ಜಾತಿಗಳ ಪುರುಷರು. ಮೊದಲು ಜಾತಿಗೂ, ಜ್ಞಾನಕ್ಕೂ, ವೃತ್ತಿಗೂ ನೇರವಾದ ಸಂಬಂಧ ಇತ್ತು. ಆದರೆ ಈಗ ಜಾತಿಗೂ ಜ್ಞಾನಕ್ಕೂ ಇರುವ ಸಂಬಂಧದ ಗಾಢತೆ ಸಡಿಲಗೊಂಡಿದೆ. ಹೀಗಾಗಿ ಜ್ಞಾನದ ಬಲದಿಂದ ಹೆದರಿಸುತ್ತಿದ್ದ ಮೇಲ್ಜಾತಿಗಳೊಂದಿಗೆ ತಳ ಸಮುದಾಯದವರು ಸೇರಿಕೊಂಡಿದ್ದಾರೆ. ಈ ಕಲಾ ಕ್ಷೇತ್ರದಲ್ಲಿರುವ ಬಹುಸಂಖ್ಯಾತ ಮಹಿಳೆಯರು, ಅಕ್ಷರ ಜ್ಞಾನ ಇಲ್ಲದವರು. ಆದರೆ ಅಕ್ಷರ ಜ್ಞಾನವಿಲ್ಲದ ಪುರುಷರ ಸಂಖ್ಯೆ ಕಡಿಮೆ. ಅಕ್ಷರ ಜ್ಞಾನವಿಲ್ಲದ, ಪುರಾಣಗಳನ್ನು ಕರಗತ ಮಾಡಿಕೊಳ್ಳದ ಪುರುಷರಿದ್ದರೂ ಅವರ್ಯಾರು ಮಹಿಳಾ ಹಾಡುಗಾರರು ಎದುರಿಸುವ ಸಮಸ್ಯೆಗಳನ್ನು ಎದುರಿಸಿಲ್ಲ. ಮಹಿಳಾ ಹಾಡುಗಾರರು ತಮಗೇ ಎದುರಾಗುವ ಈ ಸಮಸ್ಯೆಗಳನ್ನು ಎರಡು ನೆಲೆಗಳಿಂದ ಬಿಡಿಸಿಕೊಳ್ಳಲು ಪ್ರಯತ್ನಿಸುವರು. ೧. ಮುಂಚಿತವಾಗಿಯೇ ಪ್ರಶ್ನೆ ಕೇಳದಂತೆ ಪ್ರಶ್ನೆ ಕೇಳುವ ಪುರುಷರನ್ನು ವಿನಂತಿಸಿಕೊಳ್ಳುವುದು. ೨. ಉತ್ತರಿಸದೇ ಇರುವುದು. ಅಂದರೆ ಸೋಲು ಹಾಗೂ ಸಾವನ್ನು ಸಮೀಕರಿಸಿಕೊಂಡಿರುವ ಈ ಹಾಡುಗಾರ್ತಿಯರು ಜ್ಞಾನ ಮೂಲದಿಂದ ನಡೆಯುವ ಅಪಮಾನಕ್ಕಿಂತಲೂ ದೇಹ ಮೂಲದಿಂದ ನಡೆಯುವ ಲೈಂಗಿಕ ಹಿಂಸೆಯನ್ನು ದೊಡ್ಡದಾಗಿ ಪರಿಭಾವಿಸುತ್ತಾರೆ. ಹರದೇಶಿ-ನಾಗೇಶಿ ಹಾಡುಗಾರ್ತಿಯರ ಹಾಗೆ ಇತರ ಎಲ್ಲ ಜಾತಿಗಳಲ್ಲಿನ “ಮಹಿಳೆಯರೂ ಜ್ಞಾನಕ್ಕಿಂತ ಮಾನ ದೊಡ್ಡದೆಂದುಕೊಳ್ಳುತ್ತಾಳೆ. ಗಂಡನ್ನು ‘ಜ್ಞಾನ’ದ ನೆಲೆಯಲ್ಲಿ ಹೆಣ್ಣನ್ನು ‘ಮಾನ’ದ ನೆಲೆಯಲ್ಲಿ ನಿರ್ವಚಿಸಿದ್ದರಿಂದ ಪ್ರತಿಯೊಬ್ಬ ಮಹಿಳೆ ಮಾನವನ್ನೇ ದೊಡ್ಡದೆಂದುಕೊಳ್ಳುತ್ತಾರೆ. ಮಹಿಳಾ ಸಂದರ್ಭದಲ್ಲಿ ಈ ‘ಮಾನ’ವು ದೇಹದ ಹಾಗೂ ಮನಸ್ಸಿನ ಪಾವಿತ್ರ್ಯಕ್ಕೆ ಮಾತ್ರ ಸೀಮಿತಗೊಂಡಿದೆ. ಮದುವೆ ಮುಂಚೆ ಕನ್ಯತ್ವವನ್ನು, ಮದುವೆಯ ನಂತರ ಪತಿ ನಿಷ್ಠೆಯನ್ನು ಕಾಯಬೇಕೆನ್ನುವುದು ಮದುವೆಯ ಚೌಕಟ್ಟಿನೊಳಗಿರುವ ಮಹಿಳೆಯರ ಕುರಿತಿರುವ ಅಪೇಕ್ಷೆಯಾದರೆ; ಮದುವೆಯ ಚೌಕಟ್ಟಿನ ಹೊರಗಿರುವ ಮಹಿಳೆಯ ಬಗ್ಗೆ ದೇವರಿಗೆ ಬಿಡುವ ಮುಂಚೆ ಕನ್ಯತ್ವವನ್ನು ಕಾಪಾಡಿಕೊಂಡಿರಬೇಕು, ದೇವರಿಗೆ ಬಿಟ್ಟ ನಂತರ ಲೈಂಗಿಕ ಸಂಬಂಧ ಹೊಂದಬೇಕು ಎನ್ನುವ ನೀತಿ ಇದೆ. ಮದುವೆಯ ಚೌಕಟ್ಟಿನ ಒಳಗೆ ಬರುವ ಮಹಿಳೆಯರಾಗಿರಬಹುದ, ಮದುವೆಯ ಚೌಕಟ್ಟಿನ ಹೊರಗೆ ಬರುವ ಮಹಿಳೆಯಾಗಿರಬಹುದು-ಇಬ್ಬರಿಗೂ ಮದುವೆ ಮುಂಚೆ, ದೇವರಿಗೆ ಬಿಡುವ ಮುಂಚೆ ಕನ್ಯತ್ವ ಕಾಪಾಡಿಕೊಂಡಿರಬೇಕೆಂಬ ಸಾಮಾಜಿಕ ನಿಯಮವಿದೆ. ಈ ಎರಡೂ ಚೌಕಟ್ಟಿನೊಳಗೆ ಬರುವ ಮಹಿಳೆಯರು ಜ್ಞಾನ ವಲಯದಿಂದ ನಿರಾಕರಿಸಲ್ಪಟ್ಟವರು. ಈ ಎರಡೂ ವಲಯಗಳಲ್ಲಿನ ಮಹಿಳೆಯರನ್ನು ದೇಹ ಮೂಲದಿಂದಲೇ ನೋಡಲಾಗಿದೆ. ಹರದೇಶಿ-ನಾಗೇಶಿ ಮಹಿಳಾ ಹಾಡುಗಾರರು “ವಾಗ್ವಾದ” (ಹೆಣ್ಣ್ಹೆಚ್ಚು-ಗಂಡ್ಹೆಚ್ಚು ಎಂದು ನಡೆಯುವ ಚರ್ಚೆ)ದ ಸಂದರ್ಭದಲ್ಲಿ ಪ್ರೇಕ್ಷಕರಿಂದ ಬಂದ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಾಗದೇ ಇರುವುದನ್ನು ಅಪಮಾನವೆಂದು ಪರಿಭಾವಿಸುತ್ತಾರೆ. ಆದರೂ ಪ್ರೇಕ್ಷಕರಾದವರು ‘ಕರೆದಾಗ ನೀನು ಬರದಿದ್ದರೆ ಪ್ರಶ್ನೆ ಕೇಳುತ್ತೇನೆ’ ಎಂದು ಹೆದರಿಸಿದ್ದರೆ, ಆಗ ಅವರು ಜ್ಞಾನ ಮೂಲದಿಂದ ನಡೆಯುವ ಅವಮಾನಕ್ಕಿಂತಲೂ ದೇಹ ಮೂಲದಿಂದ ನಡೆಯುವ ಅವಮಾನ ದೊಡ್ಡದು ಎಂದು ಪರಿಭಾವಿಸುತ್ತಾರೆ. ಅವರ ಪರಿಭಾವಿಸುವಿಕೆಗೆ ಒತ್ತಾಸೆಯಾಗಿ ನಿಂತಿದ್ದು ಈ ಸಮಾಜವೇ. ಪ್ರಶ್ನೆಗೆ ಉತ್ತರಿಸದೇ ಇರುವುದು, ಸಾವು ಎರಡನ್ನೂ ಹರದೇಶಿ-ನಾಗೇಶಿ ಮಹಿಳಾ ಹಾಡುಗಾರರು ಸಮೀಕರಿಸಿಕೊಂಡಿದ್ದಾರೆ. ಜ್ಞಾನದ ಸೋಲಿನಿಂದ ಆದ ಸಾವಿಗಿಂತಲೂ ಮತ್ತೊಬ್ಬನಿಗೆ, ಒಲ್ಲದವನಿಗೆ ದೇಹ ಒಪ್ಪಿಸುವುದು ಅತ್ಯಂತಿಕ ಸಾವೆನಿಸಿದೆ. ಹೀಗಾಗಿಯೇ ಅವರು ಜ್ಞಾನದ ಸೋಲಿನಿಂದಾದ ಸಾವನ್ನು ಒಪ್ಪಿಕೊಳ್ಳುತ್ತಾರೆ. ದೇಹ ಒಪ್ಪಿಸುವುದನ್ನು ನಿರಾಕರಿಸಿ ಬದುಕುತ್ತಾರೆ.

ಮಹಿಳಾ ಹಾಡುಗಾರರ ನೀತಿಗಳು

ಸಮಾಜವು, ಹರದೇಶಿ-ನಾಗೇಶಿ ಮಹಿಳಾ ಹಾಡುಗಾರರನ್ನು ಅನೈತಿಕ ನೆಲೆಯಲ್ಲಿಟ್ಟು ನೋಡುತ್ತಿರುತ್ತದೆ. ಆದರೆ ಈ ಹಾಡುಗಾರರು-ಪುರುಷರಾಗಿರಬಹುದು, ಸ್ತ್ರೀಯರಾಗಿರಬಹುದು. ಹಾಡುಗಾರರಿಗೆ ನೈತಿಕತೆ ಇರಬೇಕೆಂದು ಬಯಸುತ್ತಿರುತ್ತಾರೆ. ಹರದೇಶಿ-ನಾಗೇಶಿ ಮಹಿಳಾ ಹಾಡುಗಾರರು ವೃತ್ತಿಗಾಗಿ ಊರೂರು ಅಲೆಯುತ್ತಾರೆ. ಆದ್ದರಿಂದ ನೂರಾರು, ಸಾವಿರಾರು ಜನರ ಸಂಪರ್ಕವಾಗುತ್ತದೆ. ಹಾಡಲು ಯಾವುದೇ ಊರಿಗೆ ಹೋದರೂ ಅಲ್ಲಿ ಅನೇಕ ಗಂಡಸರು ಲೈಂಗಿಕ ಸಂಬಂಧ ಅಪೇಕ್ಷಿಸಿಯೇ ದುಂಬಾಲು ಬಿದ್ದಿರುತ್ತಾರೆ. ಗಂಗವ್ವ ಹೇಳುವ ಹಾಗೆ “ಹೋದ ಊರಾಗ ಹತ್ತಿಪ್ಪತ್ತು ಪಳಂಗ ಗಣಸರು ಬೆನ್ನ ಬಿದ್ದಿರ್ತಾರೆ. ಬೆನ್ನ ಬಿದ್ದ ಗಣಸರ ಹತ್ರ ಹೋದ್ರ ನಮ್ಮ ಗತಿ ಏನಾಗತೈತೆವ್ವಾ? ಸೂಳೆತನ ಮಾಡಾಕ ಊರೂರು ಅಲಿಬೇಕೇನು? ಹಲ್ಕಟ್ಟ ಕೆಲ್ಸದ ಹಿಂದ ಬಿದ್ದರ ಸರಸೋತಿ ನಮ್ಮ ಸಂಗಾಟ ಇರತಾಳೇನು? ಆಕಿ ಒದ್ದರ ನಮ್ಮ ನಾಲಗ್ಯಾಗ ಹಾಡ ಬರತಾವೇನು? ಹೋದ ಊರಾಗೆಲ್ಲಾ ಸಿಕ್ಕ ಸಿಕ್ಕ ಗಣಸರ ಜೋಡಿ ಹೋದ್ರ ಹಾಡ್ಕಿ ತಾಲೀಮಿಗೆ ವ್ಯಾಳ್ಯಾ ಎಲ್ಲಿ ಉಳಿತದ? ಹೊಸಾ ಹಾಡಗಳ್ನ ಹ್ಯಾಂಗ ಕಲಿಯಾಕ ಆಗ್ತೈತಿ? ಸರಸೋತಿ ನಮ್ಮೊಳಗೆ ಉಳಿಬೇಕೆಂದ್ರ ನಾವು ಆಕಿನ ಸೇವಾ ಮಾಡಬೇಕು. ನಾವು ಆಕಿನ ನಂಬಿದ್ರ, ಆಕಿ ನಮ್ಮನ್ನ ಸಲುವುತಾಳ. ಈ ಗಣಸೂರುದು ಏನು? ವಯಸ್ಸಿರುಗಂಟಾ ಬೆನ್ನ ಬೀಳತಾವು. ಅಮ್ಯಾಲೆ ನಮ್ಮ ಗತಿ ಏನು? ತಾಯಿ ಸರಸೋತಿ ನಮ್ಮನ್ನು ಸಾಯಗಂಟಾ ಸಲುವುತಾಳ. ಮರ್ಯಾದಿ ಕೊಡತಾಳ” ಎನ್ನುವುದು ಹಾಡಿಕೆ ಮಹಿಳೆಯರ ನಿಲುವು. ಹೀಗಾಗಿ ಹರದೇಶಿ-ನಾಗೇಶಿ ಮಹಿಳಾ ಹಾಡುಗಾರರು ‘ಜೋಗತಿ’ಯರಾದರೂ ಲೈಂಗಿಕ ನಿಯತ್ತನ್ನು ಕಾಯ್ದುಕೊಂಡಿರುತ್ತಾರೆ. ಅವರು ತಮ್ಮ ಹಾಡಿಕೆ ವಿದ್ಯೆಗೂ ಲೈಂಗಿಕ ನಿಯತ್ತಿಗೂ ಸಂಬಂಧ ಕಟ್ಟಿಕೊಳ್ಳುತ್ತಾರೆ. ನಿಂಬರಗಿಯ ಕಾಂತಾಬಾಯಿಯು ನೈತಿಕತೆ ಮೀರಿದ್ದರೆ ಪರಿಣಾಮಕ್ಕೆ ಉದಾಹರಣೆಯಾಗಿದ್ದಾಳೆ. ಕಾಂತಾಬಾಯಿ ನೋಡಲು ರೂಪವಂತೆ. ಕಂಠ ಕೂಡ ಮಧುರವಾಗಿತ್ತು. ಹದಿನೆಂಟನೇ ವಯಸ್ಸಿಗೆ ಹಾಡಿಕೆಗೆ ಬಂದಳು. ಎಲ್ಲ ಕಡೆಗೂ ಇವಳಿಗೆ ಹಾಡಿಕೆಗಾಗಿ ವೀಳ್ಯೆ ಇರುತ್ತಿತ್ತು. ರೂಪ ಮತ್ತು ಕಂಠಕ್ಕೆ ಪ್ರಸಿದ್ಧಿಯಾದ ಈಕೆಯನ್ನು ಒಲಿಸಿಕೊಳ್ಳಲು ಅನೇಕ ಗಂಡಸರು ಪ್ರಯತ್ನಿಸಿದರು. ಚಿಕ್ಕ ವಯಸ್ಸಿನ ಕಾಂತಬಾಯಿ ಗಂಡಸರ ದುರಾಸೆಗೆ ಬಲಿಯಾದಳು. ಹಾಡಿಕೆಗೆಂದು ಹೋದ ಊರಲ್ಲಿ ಬಯಸಿ ಬಂದ ಅನೇಕ ಗಂಡಸರೊಟ್ಟಿಗೆ ಸಂಬಂಧ ಬೆಳೆಸಿದಳು. ಎಲ್ಲಿಗೆ ಹೋದರೂ ಅವಳನ್ನು ಹುಡುಕಿಕೊಂಡು ಬಂದು ಹೋಗುವ ಗಂಡಸರ ಸಂಖ್ಯೆ ಹೆಚ್ಚಾಗುತ್ತ ಹೋಯಿತು. ನಾಗೇಶಿ ಹಾಡುಗಳ ತಾಲೀಮಿಗೆ ಸಮಯ ಸಿಗಲೇ ಇಲ್ಲ. ನಾಲ್ಕೈದು ಸಭೆಗಳಲ್ಲಿ ಹಾಡು ಅರ್ಧಕ್ಕೆ ನಿಂತು ಹೋಯಿತು. ಸಭೆಯಲ್ಲಿ ಮರ್ಯಾದೆ ಹೋದ ತಕ್ಷಣ ಕಾಂತಾಬಾಯಿ ಹೊಲದ ಕೆಲಸಕ್ಕೆ ಹೋದಳು. ಕಾಂತಾಬಾಯಿ ಹಾಡಿಕೆ ಬಿಟ್ಟು ಕೂಲಿ ಕೆಲಸಕ್ಕೆ ಹೋಗುವುದನ್ನು ನೋಡಿದ ಜನ ವ್ಯಂಗ್ಯವಾಡಿ ನಕ್ಕರು. ನೇರವಾಗಿ ಚುಚ್ಚು ಮಾತುಗಳನ್ನು ಹೇಳಿದರು. ಇದರಿಂದ ನೊಂದುಕೊಂಡ ಕಾಂತಾಬಾಯಿ ದೇಹ ವ್ಯಾಪಾರಕ್ಕಿಳಿದಳು. ಹಲಸಂಗಿ ಜಕ್ಕವ್ವನ ಕಥೆಯು ಕಾಂತಾಬಾಯಿಗಿಂತ ಭಿನ್ನವಾಗಿಯೇನೂ ಇಲ್ಲ. ಈ ಕಥೆಗಳು ಹರದೇಶಿ-ನಾಗೇಶಿ ಮಹಿಳಾ ಹಾಡುಗಾರರಿಗೆ ಯಾವುದೇ ಊರಿಗೆ ಹೋದರೂ ತಮ್ಮನ್ನು ತಾವು ರಕ್ಷಿಸಿಕೊಳ್ಳಲೇಬೇಕಾದ ಎಚ್ಚರಿಕೆಯನ್ನು ನೀಡುತ್ತಿರುತ್ತವೆ. ಹಾಡಿಕೆ ಮಹಿಳೆಯರು ‘ಜೋಗತಿ’ ಹಿನ್ನೆಲೆಯನ್ನು ಹೊಂದಿದ್ದರಿಂದ ಜನರು ಆಕೆಯನ್ನು ಭೋಗಕ್ಕೆ ಅರ್ಹಳೆಂದೇ ಪರಿಗಣಿಸುತ್ತಾರೆ. ಆದರೆ ಈ ಹಾಡುಗಾರರು ಬಹು ಲೈಂಗಿಕ ಸಂಬಂಧಗಳನ್ನು ನಿರಾಕರಿಸುತ್ತಾರೆ; ಹಾಢಿಕೆಯನ್ನು ಆರಾಧಿಸುತ್ತಾರೆ. ಆದರೂ ಇವರನ್ನು ‘ಮನೆ ಮುರಿಯುವವರು’, ‘ಸೂಳೆ’ ಎಂದೇ ಗುರುತಿಸುತ್ತಾರೆ. “ಹಾಡಿಕೆ ಹೆಂಗಸರ ಸಲವಂದ ಮಾಡಕೊಂಡ ಹೆಂಡರನ್ನ ಬಿಟ್ಟಾರ. ಹೀಂಗಾಗಿ ಇವರನ್ನು ಮನೆ ಮುರುಕರು ಅಂತಾರೆ” ಎಂದು ಹರದೇಶಿ ಹಾಡುಗಾರ ಗುಂಡಪ್ಪ ಹೂಗಾರ ಹೇಳಿದರೆ; ಮಾಗಾಂವದ ರೇಣುಕಾಬಾಯಿ ಹೇಳುವುದು ಹೀಗೆ. “ನಾವು ಯಾವ ಗಣಸರಿಗೂ ಆಕರ್ಷಣಾ ಮಾಡಾಕ ಹೋಗಂಗಿಲ್ಲ. ನಾಕ ಮಂದಿ ಎದುರಿಗಿ ನಿಲ್ತೀವಿ ಅಂತ ಇದ್ದದರಾಗ ಒಳ್ಳೆ ಸೀರೆ ಉಟ್ಟಿರತಿವಿ. ನಮ್ಮ ಹೊಟ್ಟಿ ತುಂಬಿಸ್ಕೊಳ್ಳುದಕ ಚಂದಗ ಹಾಡಾಕ ಬೇಕು. ಇದಕ್ಕ ಹುಚ್ಚ ಗಣಸರು ತೆಲಿ ಕೆಡಿಸಿಕೊಂಡು ಹೆಂಡ್ರು, ಮನಿ, ಮಕ್ಕಳು ಬಿಟ್ಟ ಬಂದ್ರ ನಾವೆನ ಮಾಡಾಕಾಗೈತಿ ತಾಯಿ? ನಾವೇನು ನಿನ್ನ ಹೆಣ್ತಿ ಬಿಡು, ಮಕ್ಕಳು ಬಿಡು ಅಂತ ಹೇಳಿರ್ತೇವಾ? ತಾವ ಬಿಟ್ಟ ಬಂದು, ಅದಕ್ಕ ನಮಗ ಗುನ್ನಾ (ಹೊಣೆಗಾರರು) ಮಾಡಿದ್ರ ಏನ ಮಾಡೂದೈತಿ? ಈ ಗಣಸರ ಪರಪಂಚಾನ ಇಷ್ಟ ತಂಗಿ? ತಾನೇನ ಮಾಡಿರ್ಲಿ; ಅದೆಲ್ಲಾ ನಮ್ಮ ತಲೀಗಿ ಕಟ್ಟತಾರು. ಹಾಡ್ಕಿ ಮುಗಿಸಿಕೊಂಡ ಕೂಡ್ಲೆ ಇದ್ದವೋ ಕೆಟ್ಟವೋ ಅಂತ ನಮ್ಮ ಊರಿಗಿ ಓಡಿ ಬರತೀವಿ. ನಮಗೆಲ್ಲ ಎಲ್ಲಿ ವ್ಯಾಳ್ಯಾ ಐತಿ ಇಂತಾವೆಲ್ಲ ಮಾಡಾಕ ತಂಗಿ”?. ಗುಂಡಪ್ಪನಂತಹ ಹಾಡುಗಾರರು ರೇಣುಕಾ ಬಾಯಿಯಂತಹ ಹಾಡುಗಾರರ ಜೊತೆಯಲ್ಲಿದ್ದರೂ ಒಂದೇ ಸಂಗತಿಯನ್ನು ಇವರಿಬ್ಬರೂ ಅರ್ಥೈಸಿದ್ದು ಭಿನ್ನವಾಗಿದೆ. ಇವರಿಬ್ಬರೂ ಸಮಾಜದಲ್ಲಿ ನಡೆಯುವ ಘಟನೆಗಳಿಗೆ ಸಾಕ್ಷಿದಾರರೇ. ಆದರೆ ಸಾಕ್ಷಿದಾರರ ಗ್ರಹಿಕೆಗಳು ಭಿನ್ನವಾಗಿವೆ. ಗುಂಡಪ್ಪನು ಮಹಿಳಾ ಹಾಡುಗಾರರನ್ನು ಹತ್ತಿರದಿಂದ ನೋಡಿದರೂ ಸಮಾಜದ ಗ್ರಹಿಕೆಗಿಂತ ಆತನ ಗ್ರಹಿಕೆ ಭಿನ್ನವಾಗಿಲ್ಲ. ಇದಕ್ಕೆ ಎರಡು ಕಾರಣಗಳನ್ನು ಗುರುತಿಸಬಹುದು. ಒಂದನೆಯದು; ಗುಂಡಪ್ಪನು ಲಿಂಗಾಯತ ಸಮುದಾಯಕ್ಕೆ ಸೇರಿದವನು; ಎರಡನೆಯದು; ಪುರುಷನಾದುದು. ಗುಂಡಪ್ಪ ಲಿಂಗಾಯತ ಸಮುದಾಯಕ್ಕೆ ಸೇರಿದವನು ಎನ್ನುವ ವಿಷಯವೇ ದಲಿತನಲ್ಲವೆನ್ನುವುದನ್ನು ಹೆಳುತ್ತದೆ. ಹರದೇಶಿ-ನಾಗೇಶಿ ಹಾಡುವ ಮಹಿಳೆಯರು ಜಾತಿಯ ನೆಲೆಯಿಂದ ದಲಿತರಾಗಿರುವುದು, ಲಿಂಗದ ನೆಲೆಯಿಂದ ಹೆಣ್ಣಾಗಿರುವುದು. ಗುಂಡಪ್ಪನಂತಹ ಹರದೇಶಿ-ನಾಗೇಶಿ ಹಾಡುಗಾರರು ಮತ್ತು ಆಯಾ ಊರಿನ ಜನರು ಘಟನೆಗಳನ್ನು ನೋಡಿದವರಾಗಿರುತ್ತಾರೆ. ಅದನ್ನು ಅವರವರ ಸಾಮಾಜಿಕ ಹಿನ್ನೆಲೆಯಲ್ಲಿ ಗ್ರಹಿಸುತ್ತಿರುತ್ತಾರೆ. ಆದರೆ ಅವರ್ಯಾರೂ ಫಲಾನುಭವಿಗಳಾಗಿರುವುದಿಲ್ಲ. ಹರದೇಶಿ-ನಾಗೇಶಿ ಮಹಿಳಾ ಹಾಡುಗಾರರು ನೇರವಾದ ಫಲಾನುಭವಿಗಳಾದುದರಿಂದ ಅವರ ಅನುಭವಗಳೇ ಅಧಿಕೃತವಾಗಿರುತ್ತವೆ. ಅನುಭವಗಳು ಬೇರೆ, ಗ್ರಹಿಕೆಗಳು ಬೇರೆ. ಗ್ರಹಿಕೆಗಳು ಸಾಮಾಜಿಕ ಸತ್ಯಗಳಾಗಬೇಕಿಲ್ಲ. ಆದರೆ ಅನುಭವಗಳನ್ನು ಸಾಮಾಜಿಕ ಸತ್ಯಗಳಲ್ಲ ಎಂದು ನಿರಾಕರಿಸಲಾಗುವುದಿಲ್ಲ.

ಆರೋಗ್ಯ

ಹರದೇಶಿ-ನಾಗೇಶಿ ಮಹಿಳಾ ಹಾಡುಗಾರರಿಗೆ ಹಾಡುಗಾರಿಕೆಯು ಸಾಮಾಜಿಕ ಅಪಮಾನಗಳನ್ನು, ಸಾಮಾಜಿಕ ಅನಾಥತೆಯನ್ನು, ಅತಂತ್ರತೆಯನ್ನು ಸೃಷ್ಟಿಸಿದರೆ; ಹಾಡಿಕೆ ವೃತ್ತಿ ಹಾಗೂ ಹೆಣ್ತನ ಈ ಎರಡೂ ಕಾರಣಗಳು ಹಲವು ಆರೋಗ್ಯ ಸಮಸ್ಯೆಗಳನ್ನು ಹುಟ್ಟುಹಾಕುತ್ತವೆ.

ಈ ಮಹಿಳಾ ಹಾಡುಗಾರರ ಆರೋಗ್ಯ ಸಮಸ್ಯೆಗಳನ್ನು ಮೂರು ನೆಲೆಗಳಲ್ಲಿ ಗುರುತಿಸಬಹುದು. ೧. ತಾಯ್ತನ, ೨. ದೈಹಿಕ ಸಮಸ್ಯೆಗಳು ೩. ಆಹಾರ.

. ತಾಯ್ತನ

ಹರದೇಶಿ-ನಾಗೇಶಿ ಹಾಡುವ ಮಹಿಳಾ ಹಾಡುಗಾರರು ತಾಯ್ತನದ ಸಂದರ್ಭದಲ್ಲಿ ಎರಡು ಹಂತಗಳಲ್ಲಿ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಾರೆ. ೧. ಗರ್ಭಿಣಿಯರಾಗಿದ್ದಾಗ, ೨. ಬಾಣಂತಿಯರಾಗಿದ್ದಾಗ, “ಯವ್ವಾ ಆಗಿನ ಕಾಲಕ್ಕ ಹಳ್ಳಿ=ಹಳ್ಳಿ ಹೋಗಾಕ ಈಗಿನಂತ ಬಸ್ಸಿನ ಅನುಕೂಲ ಇರ್ಲಿಲ್ಲ. ದೂರದ ಊರಿಗಷ್ಟೆ ಬಸ್ಸಿನ್ಯಾಗ ಹೋಗಾಕ ಅನುಕೂಲ ಇರ್ತಿತ್ತು. ದಿನಾ ತುಂಬುತನಕ ಹಾಡ್ಕಿಗೆ ಹೋಗೇನಿ. ದಿಮ್ಮನಸಳಿಗೆ (ಗರ್ಭಿಣಿ) ಏಕಟ (ಪೂರ್ಣ) ರಾತ್ರಿ ನಿಂತು ಹಾಡೂದು ಅಂದ್ರ ಸುಮ್ಮನ ಏನ ತಂಗಿ? ಏಕಟ ರಾತ್ರಿ ಎಚ್ಚರ ಇರಬೇಕು. ನಮ್ಮ ಪಾಳಿ ಬಂದಾಗ ಟೇಜು ಹತ್ತಬೇಕು. ಮುಗದಿಂದ ಇಳಿಬೇಕು. ಹೀಂಗs ಏಕಟ ರಾತ್ರಿ ಹತ್ತಿ ಇಳಿದು ಹಾಡೂದಂದ್ರ ದಿಮ್ಮನಸೇಳ ಗತಿ ಏನಾಗಿರಬೇಡ? ನೀವs ತಿಳಿಕೊಳ್ಳ್ರಿ. ಕಾಲು ಎಳಿತಿತ್ತು, ನಡಾ ನೋಯಿಸ್ತಿತ್ತು. ಬ್ಯಾರೆ ದಾರಿಯಿಲ್ಲ. ಹೊಟ್ಟೆ ತಿಪಲಗಿ ಎಲ್ಲಾ ತ್ರಾಸು ನುಂಕೊಂಡು ಹಾಡಬೇಕಿತ್ತರಿ. ಹಿಂದಿಂದ ನೆನಸಿಕೊಂಡ್ರ ಹೊಟ್ಟಿ ಉರಿತೈತಿ ತಂಗಿ” ಎಂದು ಮುದೋಳ ತಾಲೂಕಿನ ಸತ್ಯತ್ವ ಹೇಳಿದಳು. “ನಾಕೈದು ತಿಂಗಳಾಗಿಂದ ನಿಲ್ಲಾಕೂ ಆಗ್ತಿರಲಿಲ್ಲ. ಕೂಡಾಕೂ ಆಗ್ತಿರಲಿಲ್ಲ. ಬರೆ ಮಲಗಬೇಕು ಅನಸ್ತಿತ್ತು. ಮಲಗಿದರ ಸೂರು (ಧ್ವನಿ) ಹೋಗುತ್ತೆ ತಾಯಿ. ಕೈ ಕಾಲು ಬಳ ಬಳ ಅನ್ನುವು. ಇಡೀ ರಾತ್ರಿ ಹಾಡಬೇಕು. ಒಂದೊಂದೂರಾಗ ಒಂದೊಂದು ತರ ಟೇಜ್ ಹಾಕ್ತಾರೆ. ಕೆಲವರು ಟ್ಯಾಕ್ಟರಿಗೆ ಟೇಜ್ ಹಾಕ್ತಾರ. ಕೆಲವರು ಊರ ಅಗಸಿ ಕಟ್ಟಿಗೆ ಹಾಡಸ್ತಾರ. ಇನ್ನು ಕೆಲವರು ಊರ ಹೊರಗಿನ ಆಲದ ಮರದ ಕೆಳಗೆ ಹಾಡಸ್ತಾರ. ಟ್ಯಾಕ್ಟರ್ ಮ್ಯಾಗ ಟೇಜ ಹಾಕಿದ್ರ ಹತ್ತಿ ಇಳಿಯಾಕ ತ್ರಾಸ ಆಗೂದು. ಟ್ಯಾಕ್ಟರ್ ಮ್ಯಾಗ ಹತ್ತಿ ಇಳಿಯಾಕಂತ ಪಾಂವಂಟಣಿಗಿ ಹಾಂಗ ಒಂದರಮ್ಯಾಗ ಒಂದು ಗುಂಡಕಲ್ಲು ಇಡತಾರ. ಅದರ ಮ್ಯಾಗ ಪಳಿ ಇಟ್ಟರ ಇಟ್ಟರು, ಬಿಟ್ಟರ ಬಿಟ್ಟರು. ಸರ್ಕಸ್ಸಿನ್ಯಾಗಿನ್ಹಂಗ ಮ್ಯಾಲ ಹತ್ತಬೇಕು, ಹಾಡ್ಕಿ ಮುಗಿದಿಂದ ಇಳಿಬೇಕು. ಈಗೀಗ ಟೂಲ್ (ಸ್ಟೂಲ್) ಇಡಾಕತ್ಯ್ತಾರ. ಅದರ ಮ್ಯಾಗನೂ ಹತ್ತಿ ಇಳಿಯದು ಕಷ್ಟ. ಮಾಮೂಲಿಯಾಗಿದ್ದಾಗ ಅಂಜತೀವಿ. ದಿಮ್ಮನಸೇಳಾದಾಗ ಟ್ಯಾಕ್ಟರ್‌ಹತ್ತಿ ಹಾಡೋದು ಹಾಡು ಮುಗದಿಂದ ಇಳಿಯಾದು ಅಂದ್ರ ಜೀಂವಾ ಇರ್ತಿರ್ಲಿಲ್ಲ. ಅಗಸಿಕಟ್ಟಿಗೆ ಬಿಕಳಾ(ಬೀಕಲು)ದ ಪಾಂವಂಟನಿಗಿ ಎತ್ತರ್ಹಂಗ ಇರೋವು. ಅವ್ನೊ ಹತ್ತಿ ಇಳಿಯಾದುಕ ಜೀಂವಾ ಸುಸ್ತಾಗೋದು. ರಾತ್ರಿ ಹಾಡ್ಕಿಗೆಂದ್ರ ಈ ತ್ರಾಸು. ಒಮ್ಮೊಮ್ಮೆ ರಾತ್ರಿ ಹಗಲು ಎರಡೂ ವ್ಯಾಳ್ಯಾಕ್ಕ ಹಾಡ್ಕಿ ಇರೋದು. ರಾತ್ರಿ ಹಾಡ್ಕಿ ಬೆಳಗಿನ ಜಾಂವ ಐದಕ್ಕ, ಇಲ್ಲ ಆರಕ್ಕ ಮುಗಿಯೋದು. ಸ್ನಾನಾ ಮಾಡಿ ಚಾ ಕುಡುದು ಸ್ವಲ್ಪ ನಾಸ್ಟಾ ಮಾಡಿ ಮತ್ತ ಹತ್ತ ಗಂಟೆಕಂದ್ರ ಹಾಡ್ಕಿಗಿ ನಿಲ್ಲಬೇಕು. ರಾತ್ರಿಯೆಲ್ಲ ನಿದ್ದಗೆಟ್ಟು ಹಾಡ್ಕಿ ಮಾಡಿದ್ದಕ್ಕ ಮೈಯೆಲ್ಲಾ ವಜ್ಜ ಅನಸೂದು. ಬಿಸಿ ನೀರ ಜಳಕಾ ಮಾಡಬೇಕು ಅನಸೂದು. ಈ ಎಲ್ಲಾ ಅನುಕೂಲ ನಮಗೆಲ್ಲಿ ಸಿಗತಾವ ತಾಯಿ! ನದಿಯಾಗೋ, ಕೆರೆಯಾಗೋ, ಬಾಂವ್ಯಾಗಿನ ನೀರು ಸೇಯೋ ಒಂದಿಷ್ಟು ಮೈ ವದ್ದಿ ಮಾಡಕೊಂಡು ಮುಖಾ ತೊಳಕೋತಿದ್ವಿ, ನಮ್ಮ ಹಾಡ್ಕಿ ಮ್ಯಾಳದ ಗಣಸೂರು ನಮ್ಮ ಜೋಡೀನ ಇರೋರು. ಹೆಣ್ಣಿನ ಮಾನ ನೋಡು ತಂಗಿ. ಅವರೆದುರಿಗೆ ಮೈ ತಕ್ಕೊಬೇಕಾದ್ರು ಜೀಂವಾ ಹಿಡಿ ಆಗೂದು. ಏನೋ ಅನಿವಾರ್ಯ. ನೀರ್ಹಾಕೊಂಡು ಗುಬ್ಬಚ್ಚಿಹಂಗ ಮುದುಡಿಕೊಂಡು ಸೀರಿ ಬದಲ ಮಾಡಕೊಂಡು, ಚೂರಾ ಪಾರಾ ನಾಷ್ಟಾ ತಿಂತಿದ್ನಿ. ಯಾಕಂದ್ರ ಹೊಟ್ಟಿ ತುಂಬ ತಿಂದ್ರ ಕಣ್ಣ ತುಂಬಾ ನಿದ್ದಿ ಬರೂದು. ಅದಕ್ಕಂತ ಕಮ್ಮಿ ತಿಂತಿದ್ನಿ. ಹೊಟ್ಯಾಗಿನ ಕೂಸು ವಿಲವಿಲಾ ಅಂತ ಒದ್ದಾಡೋದು. ತಿಂದ್ರ ಹಾಡ್ಕಿ ಮಾಡಕ ಆಗ್ತಿರಲಿಲ್ಲ. ತಿನ್‌ದಿದ್ರ ಹೊಟ್ಟ್ಯಾಗ ಕೂಸಾ ಗಿರ್ರ ಅಂತ ತಿರಗೋದು. ಹೊಟ್ಯಾಗಿನ ಕೂಸಿನ ಸಂಕಟಾ ತಡಕೊಂಡು ಹಾಡ್ಕಿ ಮಾಡ್ತಿದ್ನಿ. ಯಾಕಂದ್ರ ನಾಳಿ ಹಾಡ್ಕಿ ನಿಂತ ಟಾಯಿಮಿನಾಗ ಯಾರ ಊಟಾ ಹಾಕ್ತಾರು? ಅದಕ್ಕೆ ದಿನಾ ತುಂಬುತನಕಾನು ಹಾಡ್ತಿದ್ವಿ. ಬಸರ ಅದೇನಿ ಅಂತ್ಹೇಳಿ ಮನ್ಯಾಗ ಕುಂತಕೊಂಡ್ರ ನಮ್ಮ ಉಪಜೀವನಾ ಏನಾಗಬೇಕು? ಏಳೆಂಟು ತಿಂಗಳಾ ಹಾಡ್ಕಿ ಬಿಟ್ಟ್ರ, ಅಯ್ ಅಕಿ ಹಾಡ್ಕಿ ಬಿಟ್ಟಾಳ ಅಂತ ನಮ್ಮನ್ನ ಕರಿಯಾದ ಬಿಡ್ತಾರು. ಎಲ್ಲಾ ಹೊಟ್ಟಿ ಸಂಕಟಾ. ನಮ್ಮಂಥರ ಹೊಟ್ಯಾಗ ಮಕ್ಕಳು ಹುಟ್ಟಬಾರದು ತಾಯಿ. ಅವು ಹೊಟ್ಟ್ಯಾಗಿದ್ದಾಗs ಅನೂಲಿ ಸೋಸ್ತಾವು. ಹೊರಗ ಬಂದಿಂದೂ ಅನೂಲಿ ಸೋಸ್ತಾವು” ಎಂದು ಕಣ್ಣಾಲಿಗಳನ್ನು ತುಂಬಿಕೊಂಡು ಜನವಾಡದ ಬುದ್ಧವ್ವ ಹೇಳಿದಳು. ಜನವಾಡದ ಬುದ್ಧವ್ವನ ಅನುಭವಗಳು ಎಲ್ಲಾ ಹಾಡಿಕೆ ಮಹಿಳೆಯರ ಅನುಭವಗಳಾಗಿವೆ. ಗರ್ಭಿಣಿ ಆರೋಗ್ಯದ ಸ್ಥಿತಿಯ ಬಗ್ಗೆ ಹೆಚ್ಚು ವಿವರಿಸಬೇಕಿಲ್ಲ. ದಿನ ತುಂಬಿದಂತೆಲ್ಲಾ ಕೊಡುವುದು, ನಡೆಯುವುದು, ನಿಲ್ಲುವುದು, ಮಲಗುವುದು ಎಲ್ಲವೂ ದೈಹಿಕ ಆಯಾಸ ತರುತ್ತವೆ. ಗರ್ಭಾವಸ್ಥೆ ಹಾಗು ಬಾಣಂತನದ ಸಂದರ್ಭದಲ್ಲಿ ಸಂಪೂರ್ಣ ವಿಶ್ರಾಂತಿ ಬೇಕು ಎನ್ನುವ ವಾದವೊಂದಿದ್ದರೆ, ಎರಡೂ ಸಂದರ್ಭಗಳಲ್ಲಿ ವಿಶ್ರಾಂತಿ ಅಗತ್ಯವಿಲ್ಲ ಎನ್ನುವ ವಾದ ಮತ್ತೊಂದಿದೆ. ಈ ಎರಡೂ ವಾದಗಳು ಮಧ್ಯಮ ಹಾಗೂ ಮೇಲ್ಮಧ್ಯಮ ವರ್ಗದ ಮಹಿಳೆಯರನ್ನು ಹಾಗೂ ಕೆಳವರ್ಗದ ಅತ್ಯಂತ ಕಡುಬಡತನದ ಮಹಿಳೆಯರನ್ನು ಅನುಲಕ್ಷಿಸಿಯೇ ಹುಟ್ಟಿಕೊಂಡವುಗಳು.

ಬಾಣಂತನ

ಗರ್ಭಿಣಿಯರಾಗಿದ್ದಾಗ ದಿನ ತುಂಬುವವರೆಗೆ (೯ ತಿಂಗಳು) ಹಾಡುವ ಈ ಹಾಡುಗಾರ್ತಿಯರಿಗೆ ಬಾಣಂತನ ಉಪಚಾರವು ದೊರೆಯುವುದು ಕಷ್ಟ. ಮಗು ಹೆತ್ತ ಹದಿನೈದು ಇಪ್ಪತ್ತು ದಿನದೊಳಗೆ ಮತ್ತೆ ಹಾಡಿಕೆಗಾಗಿ ಊರೂರು ಪಯಣಿಸುತ್ತಾರೆ. “ನಿಮ್ಮಂತಹ ಹೆಣ್ಣಮಕ್ಕಳಿಗಿ ಬಸರಿದ್ದಾಗ, ಬಾಣಂತನಕ್ಕ ಉಪಚಾರಾ ಸಿಗತೈತಿ. ವಿಶ್ರಾಂತಿನೂ ಸಿಗತೈತಿ. ನಮ್ಮದು ಹಂಗಲ್ಲ. ಮನಿ ಜವಾಬ್ದಾರಿಯೆಲ್ಲಾ ನಮ್ಮ್ಯಾಕ ಇರತೈತಿ. ನಾವು ಹಾಡ್ಕಿಗಿ ಹೊಗ್ಯಾಕ ಬೇಕು. ಇಲ್ಲಾಂದರ ಮನಿ ಮಂದಿಯೆಲ್ಲಾ ಉಪಾಸ ಕೂಡಬೇಕಾಗತೈತಿ. ಉಸಿರ ನಿಂತಿಂದ, ಇಲ್ಲಾಂದ್ರ ಕೈ ಕಾಲಾಗ ಶಕ್ತಿ ನಿಂತಿದ್ದ ನಾವು ಹಾಡ್ಕಿ ನಿಲ್ಲಸ್ತೀವಿ. ಮನಿಯ್ಯಾಗ ನಮ್ಮ ದುಡಿಮಿ ನೆಚ್ಚಕೊಂಡು ವಯಸ್ಸಾದವರು, ಮಕ್ಕಳು, ಮದುವಿಯಾದವರು, ಬಾಣಂತಿರು, ಬಸರ ಹೆಂಗಸರು ಇರತಾರ. ನಮ್ಮ ಬಾಣಂತನ ಚಂದಾಗಬೇಕು ಅಂತ ಕುಂತ್ರ ಮನಿ ಈ ಜವಾಬ್ದಾರಿಯೆಲ್ಲ ಯಾರ ನೋಡಕೋಂತಾರು? ಬಾಣಂತನ ಅಂತ ಮುರ‍್ನಾಕು ತಿಂಗಳಗಟ್ಟಲೆ ಮನಿಯಾಗ ಕುಂತ್ರ ನಾವು ಹಾಡ್ಕಿ ಬಿಟ್ಟಿವಿ ಅಂತ ನಮ್ಮನ್ನ ಹಾಡ್ಕಿಗೆ ಕರಿಯಾದ ಬಿಟ್ಟ ಬಿಡತಾರು. ನಮ್ಮನ್ಯಾಗ ಆಗ ನಮ್ಮಪ್ಪಗ ಏನೋ ಜಡ್ಡ ಬಂದಿತ್ತು. ಅವನ ದವಾಖಾನಿ ಖರ್ಚು ನೋಡ್ಕಬೇಕಿತ್ತು. ನಮ್ಮ ತಂಗಿ ಗಂಡನ ಮನಿಯಿಂದ ಹಡಿಯಾಕಂತ ಮನಿಗಿ ಬಂದಿದ್ಲು. ಸಣ್ಣ ಸಣ್ಣ ತಮ್ಮಗೋಳು ಓದ್ತಾ ಇದ್ರು. ಅವರ ಶ್ಯಾಲಿ ಖರ್ಚು ಇತ್ತು. ನಾ ಬಸರ ಅದೀನು, ನಾ ಹಡದೀನು ಅಂತ ಮನಿಯ್ಯಾಗ ಕುಂತ್ರ ಇವನ್ನೆಲ್ಲಾ ಯಾರ ನೋಡತಾರು? ದಿನಾ ತುಂಬುತನಕ ಹಾಡೇನಿ. ದಿನಾ ಸಮೀಪ ಬಂತಂತ ಹಾಡ್ಕಿ ಬಿಟ್ಟ್ಯಾ. ಹಾಡ್ಕಿ ಬಿಟ್ಟ ಎಂಟ ದಿನಕ್ಕ ಮಗಾ ಹುಟ್ಟಿದಾ. ಹಡದ ಒಂದು ಹತ್ತ ಹದಿನೈದು ದಿನಾ ಮನಿಯ್ಯಾಗ ಇದ್ದ್ಯಾ. ಇನ್ನು ನನ್ನ ಮೈಮ್ಯಾಲ ಸಣ್ಣಂಗ ರಕುತ ಹೋ‌ಗ್ತಿತ್ತು. ನನ್ನ ಮಗಾ ರಕ್ತದ ಕಣ್ಣಿ ಇದ್ದಂಗಿತ್ತು. ಹದಿನೈದು ದಿನದ ಕೂಸಂದ್ರ ಹ್ಯಾಂಗ ಇರತೈತಿ ತಂಗಿ? ಅದನ್ನ ಉಡಿಯಾಕ ಕಟಿಕೊಂಡು ತಿಂಗಳಾನಗಟ್ಟಲೆ ಊರೂರು ಅಲೆದು ಹಾಡ್ಕಿ ಮಾಡಕೊಂಡು ಬಂದ್ಯಾ. ಅದನ್ನು ನೆನಸಿಕೊಂಡ್ರ ಈಗೂ ಹೊಟ್ಟ್ಯಾಗ ಖಾರ ಕಲಿಸಿದ್ಹಂಗ ಸಂಕಟ ಆಗತೈತಿ” ಎಂದು ಕಣ್ತುಂಬಿಕೊಂಡು, ಗಂಟಲು ಬಿಗಿದುಕೊಂಡು ದನ್ಯಾಳದ ದುರುಗವ್ವ ಹೇಳಿದಳು. ಅವಳ ಮಾತು ಇಡೀ ಹರದೇಶೀ-ನಾಗೇಶಿ ಮಹಿಳಾ ಹಾಡುಗಾರರ ಬಾಣಂತನದ ಹಾಗೂ ಬದುಕಿನ ಸಮಸ್ಯೆಯನ್ನು ಕಟ್ಟಿಕೊಡುತ್ತದೆ. ನಾನು ಸಂದರ್ಶಿಸಿದ ಯಾವ ಮಹಿಳೆಯೂ ಬಾಣಂತನದ ಉಪಚಾರವನ್ನು ಹದಿನೈದು ಇಲ್ಲವೆ ಇಪ್ಪತ್ತು ದಿನಗಳಿಗಿಂತಲೂ ಹೆಚಚಿಗೆ ಪಡೆದಿಲ್ಲ. ಹಸಿ ಮೈಯಲ್ಲೆ ಹಾಡಿಕೆಗಾಗಿ ಬಯಲ ಗಾಳಿಗೆ ಮೈಯೊಡ್ಡಿ ನಿಂತಿದ್ದಾರೆ. ರಾತ್ರಿ ಹಾಡಿಕೆ ಇದ್ದರೆ ನಿದ್ರೆ ಬರುತ್ತದೆಂದು ಬಹಳ ಸ್ವಲ್ಪ ಅಂದರೆ ಒಬ್ಬ ವ್ಯಕ್ತಿ ತನ್ನ ಹಸಿವೆ ನೀಗಿಸಿಕೊಳ್ಳಲು ಉಣ್ಣುವ ಪ್ರಮಾಣಕ್ಕಿಂತಲೂ ಕಡಿಮೆ ಊಟ ಮಾಡಿದ್ದಾರೆ. ಹಾಡುವ ಸ್ಥಳದ ಒಂದು ಮೂಲೆಯಲ್ಲಿ ಇಲ್ಲವೆ ಹಾಡುವ ಸ್ಥಳಕ್ಕೆ ಹೊಂದಿಕೊಂಡಿರುವ ಮನೆಯಲ್ಲಿ ಎಳೆ ಕೂಸನ್ನು ಮಲಗಿಸಿ ಹಾಡಿದ್ದಾರೆ. ಮನೆಯಲ್ಲಿ ಹಿರಿಯರಿದ್ದರೆ ಜೊತೆಯಲ್ಲಿ ಕರೆದುಕೊಂಡು ಬಂದು ತಾವು ಹಾಡುವವರೆಗೂ ಮಗುವನ್ನು ಜೋಪಾನದಿಂದ ನೋಡಿಕೊಳ್ಳಲು ಕೇಳಿಕೊಂಡಿದ್ದಾರೆ. ಮತ್ತೆ ಕೆಲವರು ತಾವೇ ಬಡತನದಲ್ಲಿ ಬೇಯುತ್ತಿದ್ದರೂ ಮನೆಯಲ್ಲಿ ಹಿರಿಯರು ಇಲ್ಲದ ಕಾರಣ, ಇದ್ದರೂ ಅವರಿಗೆ ಮುಪ್ಪು ಆವರಿಸಿದ್ದರಿಂದ ಅಂಥವರು ತಿಂಗಳ ಕೂಲಿ ಕೊಟ್ಟು ಮಕ್ಕಳನ್ನು ನೋಡಿಕೊಳ್ಳಲು ಆಯಾಗಳನ್ನು ನೇಮಿಸಿದ್ದಾರೆ. ಅರ್ಧ ಗಂಟೆಗೊಮ್ಮೆ ಹಾಡಿಕೆಯ ಪಾಳೆ ಮುಗಿದಾಗೊಮ್ಮೆ ಎಳೆಗೂಸಿಗೆ ಹಾಲುಣಿಸುತ್ತಾರೆ. ಬಸಿರು-ಬಾಣಂತಿಯರು ಇಬ್ಬರ ಊಟವನ್ನು ಒಬ್ಬರೇ ಮಾಡ ಬೇಕೆನ್ನುತ್ತಾರೆ. ಕಾರಣ ಇಷ್ಟೇ, ತಾಯಿಯಾಗುತ್ತಿರುವವಳು, ತಾಯಿಯಾದವಳು ತನ್ನ ಜೊತೆಗೆ ಇನ್ನೊಂದು ಎಳೆ ಜೀವವನ್ನು ಬೆಳೆಸಬೇಕಾಗುತ್ತದೆ. ಮಗು ಗರ್ಭದಲ್ಲಿರುವಾಗ: ಗರ್ಭದಿಂದ ಹೊರಗೆ ಬಂದ ಕೆಲವು ತಿಂಗಳವರೆಗೆ, ಆಹಾರಕ್ಕಾಗಿ ತಾಯಿಯನ್ನೇ ಅವಲಂಬಿಸಿರುತ್ತದೆ. ಹೀಗಾಗಿ ಗರ್ಭಿಣಿಯಾದವಳು, ತಾಯಿಯಾದವಳು ತನ್ನ ಜೊತೆಗೆ ಶಿಶುವನ್ನು ಗಮನದಲ್ಲಿಟ್ಟುಕೊಂಡೇ ಆಹಾರ ತೆಗೆದುಕೊಳ್ಳಬೇಕಾಗುತ್ತದೆ. ಒಂದು ರಾತ್ರಿ, ಕೆಲವೊಮ್ಮೆ ಒಂದು ಹಗಲು ಒಂದು ರಾತ್ರಿ ಹಾಡುವ ಇವರು ನಿದ್ರೆಯಿಂದ ಹೊರಗುಳಿಯುವುದಕ್ಕಾಗಿ, ಧ್ವನಿಯನ್ನು ಕಾಯ್ದುಕೊಳ್ಳುವುದಕ್ಕಾಗಿ ಪೂರ್ಣ ಪ್ರಮಾಣದ ಊಟವನ್ನು ನಿರಾಕರಿಸುತ್ತಾರೆ; ಅರೆ ಹೊಟ್ಟೆಯಲ್ಲಿಯೇ ಇರುತ್ತಾರೆ. ಇವರ ವಿರೋಧಿ ಮೇಳದಲ್ಲಿರುವ ಪುರುಷರೂ ಅರೆ ಹೊಟ್ಟೆಯಲ್ಲಿರುತ್ತಾರೆ. ಆದರೆ ಗರ್ಭಾವಸ್ಥೆ, ಹೆರಿಗೆಯಂತಹ ಜೈವಿಕ ಅವಸ್ಥೆಗಳನ್ನು ಮಹಿಳೆಯರು ಮಾತ್ರ ದಾಟಬೇಕಾಗಿರುವುದರಿಂದ ಇವರ ಸಮಸ್ಯೆಗಳು ಪುರುಷರಿಗಿಂತ ಸಂಪೂರ್ಣ ಭಿನ್ನವಾಗಿವೆ. ಹೀಗಾಗಿ ಪುರುಷ ಮತ್ತು ಮಹಿಳಾ ಹಾಡುಗಾರರು ಇಬ್ಬರೂ ಅರೆ ಹೊಟ್ಟೆಯಲ್ಲಿದ್ದರೂ ಕೆಲವೊಂದು ಜೈವಿಕ ಅವಸ್ಥೆಗಳಿಂದಾಗಿ ಪುರುಷರಗಿಂತ ಭಿನ್ನವಾದ ಸಮಸ್ಯೆಗಳನ್ನು ಮಹಿಳೆಯರು ಎದುರಿಸಬೇಕಾಗುತ್ತದೆ. ತಾಯಿ-ಮಗುವಿನ ಸಂಬಂಧ ಕೇವಲ ಜೈವಿಕವಾದುದಲ್ಲ. ಭಾವನಾತ್ಮಕತೆಯೂ ಅಲ್ಲಿ ಗಾಢವಾಗಿರುತ್ತದೆ. ಹಾಡಿಕೆ ಮಹಿಳೆಯರು ಗರ್ಭಿಣಿಯರಾಗಿದ್ದಾಗಲೂ, ತಾಯಿಯಾಗಿದ್ದಾಗಲೂ ವೃತ್ತಿಗಾಗಿ ಅರೆ ಹೊಟ್ಟೆಯಲ್ಲಿರುವುದರಿಂದ ತಾಯಿ-ಮಗು ಇಬ್ಬರೂ ಹಸಿವಿನಿಂದ ನಲುಗುತ್ತಾರೆ. ಇವರ ಮಕ್ಕಳು ಹಸಿವನ್ನು ಎದುರಿಸುವ ಪಾಠವನ್ನು ಗರ್ಭಾವಸ್ಥೆಯಲ್ಲಿರುವಾಗಲೇ ಕಲಿತುಕೊಳ್ಳುತ್ತವೆ. ತಿಂಗಳ ಮುಟ್ಟು, ಗರ್ಭಾವಸ್ಥೆ, ಬಾಣಂತನದಂತಹ ಹೆಣ್ಣಿನ ಜೈವಿಕ ಸಂಗತಿಗಳು ಒಳ್ಳೆಯ ಹಾಗೂ ಪೂರ್ಣ ಪ್ರಮಾಣದ ಆಹಾರವನ್ನು ತೆಗೆದುಕೊಳ್ಳದಂತೆ ಒತ್ತಾಯಿಸುತ್ತಿರುತ್ತದೆ; ಆದರೆ ಹಾಡಿಕೆ ಮಹಿಳೆಯರಿಗೆ ಅವರ ವೃತ್ತಿಯು ಆಹಾರ ತೆಗೆದುಕೊಳ್ಳದಂತೆ ಒತ್ತಾಯಿಸುತ್ತದೆ; ಹೀಗಾಗಿ ಹಾಡಿಕೆ ಮಹಿಳೆಯರು ಹಾಗೂ ಅವರ ಮಕ್ಕಳು ರಕ್ತಹೀನತೆಯ ಸಮಸ್ಯೆಯನ್ನು ಎದುರಿಸುತ್ತಿರುತ್ತದೆ. ಗರ್ಭಾವಸ್ಥೆಯಲ್ಲಿರುವಾಗ ಶಿಶು ಹಸಿವಿನ ಸಂಕಟದಿಂದ ಒದ್ದಾಡುವಾಗ, ದೈಹಿಕ ಸಂಕಟದೊಂದಿಗೆ ಭಾವನಾತ್ಮಕ ಸಂಕಟಗಳನ್ನು ಹಾಡಿಕೆಯ ಮಹಿಳೆಯರು ಎದುರಿಸುತ್ತಾರೆ. ಹಾಗೆಯೇ ಎಳೆ ಕೂಸು ಕಟ್ಟಿಕೊಂಡು ಹಾಡುವಾಗಲೂ ಇದೇ ಬಗೆಯ ಅಂದರೆ ದೈಹಿಕ ಹಾಗೂ ಭಾವನಾತ್ಮಕ ನೋವುಗಳನ್ನು, ಸಂಕಟಗಳನ್ನು ಎದುರಿಸುತ್ತಿರುತ್ತಾರೆ. ಈ ಮಹಿಳಾ ಹಾಡುಗಾರರಿಗೆ ಕುಟುಂಬದಲ್ಲಿನ ಬಡತನ ದೈಹಿಕ ನೋವು ನುಂಗಿಕೊಳ್ಳುವಂತೆ ಭಾವನಾತ್ಮಕ ಹಿಂಸೆಗಳನ್ನು ಸಹಿಸಿಕೊಳ್ಳುವಂತೆ ಮಾಡುತ್ತವೆ.

. ದೈಹಿಕ ಸಮಸ್ಯೆಗಳು

ಮೇಲೆ ವಿಶ್ಲೇಷಿಸಿರುವ ಗರ್ಭಾವಸ್ಥೆ ಹಾಗೂ ಬಾಣಂತನದ ಸಮಸ್ಯೆ ದೈಹಿಕ ಸಮಸ್ಯೆಗಳಾದರೂ ಅವುಗಳು ತಾಯ್ತನಕ್ಕೆ ಸಂಬಂಧಿಸಿದವುಗಳಾಗಿದ್ದರಿಂದ ಅವುಗಳನ್ನು ದೈಹಿಕ ಸಮಸ್ಯೆಗಳಿಂದ ಪ್ರತ್ಯೇಕಿಸಿಕೊಂಡಿದೆ. ಗರ್ಭಾವಸ್ಥೆ ಮತ್ತು ಬಾಣಂತನ ಹಂತದಿಂದ ಹೊರತು ಪಡಿಸಿದ ಸಮಸ್ಯೆಗಳನ್ನು ದೈಹಿಕ ಸಮಸ್ಯೆಗಳು ಎಂದು ವಿವರಿಸಲಾಗಿದೆ. ಎಂಬತ್ತು ವರ್ಷ ವಯಸ್ಸಿನ ಜತ್ತದ ಅಹಲ್ಯ ಹಾಡಕೆಯು ದಿನಗಳಲ್ಲಿನ ದೈಹಿಕ ಸಮಸ್ಯೆಗಳನ್ನು ನೆನಪಿಸಿಕೊಂಡದ್ದು ಹೀಗೆ: “ಸೀಜನ್‌ದಾಗ ಎಂಟೆಂಡ್ ದಿನಗಟ್ಲೆ ಹಾಡಿಕೆಗೆ ವೀಳ್ಯ ಸಿಗ್ತಿತ್ತು. ನಡಬರಕ ಒಂದೂ ದಿನಾ ಬಿಡುವು ಇರ್ತಿರಲಿಲ್ಲ. ಹೀಗಾಗಿಹಗಲಿ ರಾತ್ರಿ ದಿನಾಲೂ ಬಿಟ್ಟೂ ಬಿಡದ ಹಾಡಿದ್ದಕ್ಕೆ ಗಂಟ್ಲ ಹಿಡಕೊತ್ತಿತ್ತು. ಹೀಂಗ ದನಿ ಕುಂತಂಗಾಗಿ ಹಾಡಾಕ ಬರ್ತಿರಲಿಲ್ಲ. ದನಿ ಸರಳ ಮಾಡಕೊಳ್ಳಾಕ ಇಂಜೆಕ್ಷನ್ ತಗೊಳ್ತಿದ್ವಿ, ಇಲ್ಲಾ ಗುಳಗಿ ತಗೋತಿದ್ವಿ. ನಮ್ಮ ದನಿ ಎಷ್ಟು ಕುಂತದ ಅನ್ನೋದರ ಮ್ಯಾಗ ಗುಳಗಿನೋ, ಇಂಜಕ್ಷನ್ನೋ ತಗೋತಿದ್ವಿ. ಹಾಡಿತಿದ್ವಿ, ಹಾಡಿಕೆಗೆ ಹೆಚ್ಚು ವೀಳ್ಯ ಬರೂದು ಸೀಜನ್ನಾಗ, ಮುಂದೂ ಬರತಾನಾದ್ರೂ ತಿಂಗಳಿಗೆ ಮೂರು ನಾಲ್ಕು. ಆದ್ರ ಸೀಜನ್ನಾಗ ಮೂರು ತಿಂಗಳ ನಿನ್ನ ದನಿ ಗಟ್ಟಿ ಇದ್ದ, ದಿನಾಲೂ ಹಾಡಬಹುದು, ಗಳಿಸಬಹದು. ಸೀಜನ್ನಾಗ ದುಡಿದು ಗಳಿಸಿಕೊಂಡ್ರ ಮುಂದ ಹಾಡಿಕೆಗೆ ವೀಳ್ಯ ಕಮ್ಮಿ ಬಂದ್ರೂ ನಡಿತದ. ಅದಕ್ಕಂತ ಬಿಟ್ಟುಬಿಡದ ಹಾಡಿದ್ರ ಗಂಟಲ ಕೇಳಬೇಕಲ್ಲ? ಆದರೂ ನಾವು ಹಾಡೋದು ಬಿಡ್ತಿರಲಿಲ್ಲ. ಗಣಸರಿಗೂ ದನಿ ಒಡಿತ್ತಿತ್ತು. ಆದ್ರೂ ಅವರ್ದು ನಮ್ಮಂಗಲ್ಲ. ಸೀಜನ್ನಾಗ ದುಡುಕೋಬೇಕು ಅಂತ ಒತ್ತಡಾ ಇರಲ್ಲ. ದನಿ ಸರಿ ಉಳಿಲಾಕಂದ್ರ ನಾಲ್ಕೈದು ದಿವಸ ಹಾಡಿಕೆ ಬಿಟ್ಟ ಕೂಲಿ ಕೆಲಸಕ್ಕ ಹೋಗುವ್ರು. ಇಲ್ಲಾ ಹೊಲ ಇತ್ತು ಅಂದ್ರ ತಮ್ಮ ಹೊಲದಾಗ ಕೆಲಸಾ ಮಾಡೋರು. ನಮ್ಮದು ಹಂಗಲ್ಲ. ನಾವು ಹೊಲದ ಕೆಲಸಕ್ಕೆ ಹೋದ್ರು ಆಗ ನಗತಿದ್ರು. ಅದಕ್ಕಂತ ಹಾಡಿಕ್ಯಾಗ ನಾವು ಉತ್ಪಾದನ ತಕ್ಕೋಬೇಕಿತ್ತು. ದನಿ ಬಿದ್ದ್ರೂ ಔಷಧ ತಗೊಂಡು ದನಿsಗ ಸೆಡ್ಡ ಹೊಡೆದು ಹಾಡಬೇಕಾಗ್ತಿತ್ತು”. ಬಂಗಾರವ್ವನು “ಬಡತನದ ಸಲವಂದ, ಕೈ ಒಡದು ರಕ್ತಾ ಬಂದರೊನು ಹಾಡಿಕಿದು ಬಿಡ್ತಿರಲಿಲ್ಲ. ಹೀಂಗ ಮೂವತ್ತು ಮೂವತ್ತೈದು, ವರ್ಷಗಳಿಂದ ಮಾಡಕೋಂತ ಬಂದೇನಿ. ಹಾಡುವಾಗ ದಪ್ಪ ಬಾರಿಸಬೇಕಲ್ಲಾ? ಹಗಲು ರಾತ್ರಿ (ನಿರಂತರ) ಏಕಟ ಎಂಟು ದಿನ ದಪ್ಪ ಬಾರಿಸಿದ್ದಕ್ಕ ಬಳ್ಳಾ(ಬೆರಳು) ಕೆಂಪಾಗಿ, ಒಡದು, ರಕ್ತಾ ಜಿನಗುತ್ತಾ ಇತ್ತು. ಆದ್ರೂ ದಪ್ಪು ಬಾರೂಸುದು ಬಿಡ್ಲಿಲ್ಲ. ಆದ್ರ ಬಾರಿಸಿ ಬಾರಿಸಿ ಬಳ್ಳಾಗಿಂದ (ಬೆರಳನಿಂದ) ರಕ್ತ ಸೋರುತ್ತಿತ್ತ ಖರೆ ನನ್ನ ದನಿ ಬೀಳ್ತಿರಲಿಲ್ಲ. ರಕ್ತ ಜಿನುಗುವಾಗ ಕೈ ಚೊಟ ಚೊಟ ಉರಿತಿತ್ತು. ಜೀಂವಾ ಸಂಕಟ ಇಕ್ಕೋದು. ಏನು ಮಾಡೋದು ಬಡತನ ನೆನಸ್ಕೊಳ್ಳೋದು ಬಾರಿಸೋದು” ಎಂದು ಕಣ್ಣೀರಿಟ್ಟಳು.

ತಾಯಿ ಈಗ ನನ್ನ ವಯಸ್ಸು ಅರವತ್ತೈದು ಈಗ್ಲೂ ಹಾಡ್ತೀನಿ. ವಯಸ್ಸಿನ್ಯಾಗ ಹಾಡಕಿ ಸಲವಂದ ಒಂದ್ಹೋತ್ತು ಮಾತ್ರ ಊಟಾಮಾಡು ಅಬ್ಯಾಸಾ ಮಾಡ್ಕೊಂಡಿನಿ. ಊಟ ಕಟ್ಟಿ-ಕಟ್ಟಿ ಹಾಡಿ-ಹಾಡಿ ಕರಳು ಬತ್ತಿದಾವು. ವಯಸ್ಸಿನ್ಯಾಗ ಹೋದ್ಹಂಗ ಈಗೇನೂ ಅಷ್ಟು ಹಾಡಕಿಗಿ ಹೋಗಲ್ಲ. ಒಂದ್ಹೊತ್ತು ಊಟಾ ಮಾಡಿ ರೂಢಿಯಾಗಿದ್ದಕ್ಕ ಈಗ ಎರಡ್ಹೋತ್ತರ ಊಟಾ ಮಾಡೂನು ಅಂತ ಅನಕೊಂಡ್ರೂ ಊಟ ಹೋಗಲ್ಲ. ಗ್ಯಾಸ್ ಹಿಡದದ ತಂಗಿ. ಅದಕ್ಕಂತ ದಿನಾಲೂ ಗುಳಗಿ ತಗೋತಿನಿ. – ಸಾವಳಗಿ ನಿಂಬವ್ವ

ಹಾಡಕಿ ದಿವಸ ಊಟಾನು ಕಮ್ಮಿ ಮಾಡ್ತಿದ್ವಿ. ನೀರೂ ಕಮ್ಮಿ ಕಮ್ಮಿ ಕುಡಿತಿದ್ವಿ, ನೀರು ಕುಡದರ ದನಿ ಹೋಗತೈತಂತ ತಾಯಿ. ಸೂರು ಹಾಡುವಾಗ ಮೂರು ಜೀಂವಾ ಒಂದಾಗಬೇಕು. ತೂಕಡಕಿ ಬಂದ್ರೂ ದನಿ ಪದ ಪದರ ಆಗತ್ತಂತ ಎಚ್ಚರ ಇರ್ತೀವಿ. ಮತ್ತ ಹಗಲ ಹಾಡಕಿ ಪ್ರಸಂಗ ಬಂದ್ರ ರಾತ್ರಿ ನಿದ್ದಿಕಟ್ಟಿದ್ರೂ ಹಾಡಾಕ ಹೋಗ್ತೀವಿ. – ಬ್ಯಾಗಿಹಳ್ಳಿ ಅಕ್ಕವ್ವ

ನಮ್ಮ ಹಾಡ್ಕಿ ಸೀಜನ್ ಬರೂದು ಬ್ಯಾಸಿಗ್ಯಾಗ. ದನಿ ಉಳಿಸ್ಕೊಳ್ಳಾಕಂತ ಬಿಸಿ ನೀರು ಅಳತಿಮ್ಯಾಗ ಕುಡಿತೀವಿ. ದನಿ ಬಿದ್ದಿದ್ರ ನೀರ ಜೋಡಿ ಊಟಾನೂ ಬಿಸಿ ಇರಬೇಕು. ಜಾತ್ರ್ಯಾಗ ಸೆಂವೆನ(ಸಿಹಿ) ಅಡುಗೆ ಮಾಡಿರತಾರ. ಸೆಂವೆಂದ ತಿಂದ್ರ ದನಿ ಹೋಗ್ತೈತಂತ. ಅನ್ನಾನೂ ತಿನ್ನುವಂಗಿಲ್ಲ; ತಿಂದ್ರ ಒಡಿತೈತಂತ. ಹೋದಲ್ಲಿ ತಂಗಳ ರೊಟ್ಟಿ ಕೊಡತಾರು. ಗಂಟಲು ನೋಂವ ಆದಾಗ ತಂಗಳದ್ದ ಊಟಾ ಮಾಡುವಂಗ ಆಗಂಗಿಲ್ಲ. ಒಂದೊಂದು ಊರಾಗ ಬಿಸಿ ಊಟಾ ಸಿಗಲಾಕಂದ್ರ ಉಪಾಸ ಇರತೇವು. ಸ್ಟೇಜ ಹತ್ತಿ ಇಳಿದು, ಕಾಲ ನೋಯಿಸತಾವು. ದಪ್ಪು ಹಿಡಿದು ಬಾರ್ಸೂದಕ ಎರಡೂ ಬುಜಾ, ಕೈ ನೊಯ್ತಿರತಾವು. ನಿಂತ ನಿಂತು ಸೊಂಟಾ ಕಾಲು ಎರಡೂ ಹೊಡಿತಿರತಾವು. ಮುಟ್ಟಾದಾಗಂತೂ ಕೇಳಬಾರ್ದು ನಮ್ಮ ಕತಿ. ಯಾರ್ಗೂ ಹೇಳ್ಕೋಳ್ಳಾಲಾರದಂತಹ ಸಂಕಟಾ ಅದು. ಬ್ಯಾಡಾ ಬಿಡು ಅದ್ನೇಲ್ಲಾ ಹೇಳಾಕಗಲ್ಲಾ. (ಕಣ್ಣೀರು, ಬಿಕ್ಕಳಿಕೆ ಮೊದಲಿನ ಸ್ಥಿತಿಗೆ ಬರಲು ಅರ್ಧ ಗಂಟೆ ತೆಗೆದುಕೊಂಡಳು) – ಜನವಾಡದ ಬುದ್ದವ್ವ

“ನಮ್ಮ ಮ್ಯಾಳದಾಗ ಇದ್ದ ಗಣಸರು ಕುಡಿತಿದ್ವು. ಕುಡಿದ ಅವರ್ನ ಒಂದಕ್ಕ ಎರಡಕ್ಕ (ಮೂತ್ರ-ಮಲ) ಕರಕೊಂಡ ಹೋಗಾಕ ಅಂಜಿಕಿ ಬರ್ತಿತ್ತು. ರಾತ್ರಿ ಒಬ್ಬಕೇನ ಒಂದಕ್ಕ, ಎರಡಕ್ಕ ಹೋಗಾಕ ಅಂಜಕೊಂಡು ಹೊತ್ತು ಹೊಂಟುತನಾ ಗಟ್ಟ್ಯಂಗ ಹಿಡಕೋತಿದ್ನಿ. ಜೀವಾ ಒದ್ದಾಡತ್ತ, ಮಾನಾ ನೆನ್ಸಿಕೊಂಡು ಜೀವಂದ ಸಂಕಟ ತಡಕೋತಿನಿ. – ಶೆಟ್ಟೆವ್ವ

ಮೇಲಿನ ಎಲ್ಲ ಕಥನಗಳೂ ಹರದೇಶಿ-ನಾಗೇಶಿ ಮಹಿಳಾ ಹಾಡುಗಾರರು ಎದುರಿಸುವ ದೈಹಿಕ ಸಮಸ್ಯೆಯ ಬಗೆಗಳನ್ನು ಅನಾವರಣಗೊಳಿಸುತ್ತವೆ. ಹಾಡಿಕೆ ಮಹಿಳೆಯರು ಕೂಲಿ ಕೆಲಸ ಮಾಡುವುದನ್ನು ಅಪಮಾನಿತ ಕೆಲಸವಾಗಿಯೇ ನೋಡುತ್ತದೆ ಸಮಾಜ. ಹೀಗಾಗಿ ಈ ಹಾಡುಗಾರ್ತಿಯರು ಧ್ವನಿ ಒಡೆದರೂ, ದಪ್ಪ ಬಾರಿಸುವ ಕೈ ಬೆರಳಿನಿಂದ ರಕ್ತ ಸುರಿದರೂ ಹೊಟ್ಟೆ, ಭುಜ, ನಡ, ಕಾಲು ನೋಯಿಸಿದರೂ ಅದನ್ನು ಪರಿಗಣನೆಗೆ ತಂದುಕೊಳ್ಳದೇ ಹಾಡಬೇಕಾಗಿದೆ. ಕೆಲವರು ಸಮಾಜದ ವ್ಯಂಗ್ಯವನ್ನು ಎದುರಿಸಿ ಕೂಲಿ ಮಾಡಿದವರಿದ್ದಾರೆ. ಹೀಗೆ ಹಾಡಿಕೆ ಇಲ್ಲದಾಗ ಕೂಲಿ ಕೆಲಸ ನಿರ್ವಹಿಸುವ ಹಾಡುಗಾರ್ತಿಯರು ತಮ್ಮ ಕ್ಷೇತ್ರದಲ್ಲಿ ಜನಪ್ರೀಯತೆಯನ್ನು ಪಡೆದುಕೊಳ್ಳದವರು. ಯಾರು ಜನಪ್ರಿಯತೆಯನ್ನು ಪಡೆದಿರುತ್ತಾರೋ ಅವರು ಕೂಲಿ ಕೆಲಸಕ್ಕೆ ಹೋದರೆ, ನಗೆಪಾಟಲಿನ ವಿಷಯವಾಗುತ್ತದೆ. ಏಕೆಂದರೆ ಹಾಡಿಕೆ ಕ್ಷೇತ್ರವನ್ನು ಉನ್ನತವೆಂದೇ ಗ್ರಾಮೀಣ ಸಮಾಜದವರು ಪರಿಭಾವಿಸುತ್ತಾರೆ. ಮೇಲ್ ಸ್ತರದಲ್ಲಿ ಚಲಿಸುತ್ತಿರುವವರು, ಕೆಳ ಸ್ತರಕ್ಕೆ ಬರುವುದನ್ನು ಸಾಮಾಜಿಕ ಅಪಮಾನವಾಗಿಯೇ ಪರಿಭಾವಿಸಲಾಗಿದೆ. ಹೀಗಾಗಿ ಮುಂಚೂಣಿಯಲ್ಲಿರುವ ಹಾಡುಗಾರ್ತಿಯರು ಹೊಲಮನೆಗಳ ಕೆಲಸಗಳಿಗೆ ಹೋಗುವುದನ್ನು ವ್ಯಂಗ್ಯವಾಡುತ್ತಾರೆ. ಹಾಡಿಕೆ ಕ್ಷೇತ್ರದಲ್ಲಿ ಪ್ರವೇಶಿಸಿದ್ದರಿಂದಾಗಿಯೇ ಬೇರೆ ವೃತ್ತಿಯಿಂದ ವಂಚಿತವಾಗಬೇಕಾದ ಸಮಸ್ಯೆಯನ್ನು ಇವರ ಜೊತೆಯಲ್ಲಿನ ಪುರುಷ ಹಾಡುಗಾರರು ಎದುರಿಸುವುದಿಲ್ಲ. ಪುರುಷರಾದ ಕಾರಣ ವೃತ್ತಿಯಲ್ಲಿ ಆಯ್ಕೆಗಳು ಸಾಕಷ್ಟಿವೆ. ಅವರು ಕೃಷಿ ಕೆಲಸಗಳನ್ನು ನಿರ್ವಹಿಸಿಕೊಂಡು ಹೋಗಬಹುದು; ಗೌಂಡಿ ಕೆಲಸದಲ್ಲಿ ತೊಡಗಬಹುದು; ಟೇಲರಿಂಗ್ ಮಾಡಬಹುದು; ಅಂಗಡಿ ಇಟ್ಟುಕೊಂಡು ವ್ಯಾಪಾರ ನಡೆಸಬಹುದು. ಬಹುತೇಕ ಪುರುಷ ಹಾಡುಗಾರರು ಹಾಡಿಕೆಗೆ ಬರುವ ಮುಂಚೆಯೇ ಕೃಷಿ, ಕಟ್ಟಡ ನಿರ್ಮಾಣ, ವ್ಯಾಪಾರದಂತಹ ವೃತ್ತಿಯಲ್ಲಿ ತೊಡಗಿಕೊಂಡವರು. ಇವುಗಳನ್ನು ನಿರ್ವಹಿಸುತ್ತಲೇ ಈ ಹಾಡಿಕೆ ಕ್ಷೇತ್ರಕ್ಕೆ ಕಾಲಿಟ್ಟವರು. ಹೀಗಾಗಿ ಧ್ವನಿ ಕೈಕೊಟ್ಟಾಗ, ದಪ್ಪು ಬಾರಿಸಿ ಬಾರಿಸಿ ಕೈ, ಭುಜ, ಕಾಲು ನೋವು ಬಂದರೆ ನಾಲ್ಕಾರು ದಿನ ಹೊಲ-ಮನೆಗಳಲ್ಲಿಯೇ ಕೆಲಸ ನಿರ್ವಹಿಸುತ್ತಾರೆ. ಧ್ವನಿ ಮೂಲ ಸ್ವರವನ್ನು ಪಡೆದುಕೊಂಡ ನಂತರ, ದೈಹಿಕ ಆಯಾಸ ನೀಗಿದ ನಂತರ ಹಾಡಿಕೆ ಕ್ಷೇತ್ರಕ್ಕೆ ಬರುತ್ತಾರೆ. ಹೀಗಾಗಿಯೇ ಧ್ವನಿ ಸರಿ ಪಡಿಸಿಕೊಳ್ಳುವುದಕ್ಕಾಗಿ ಆ ಪುರುಷರು ಔಷಧಗಳನ್ನು ಅವಲಂಬಿಸುವುದಿಲ್ಲ. ಬೆರಳಿಗೆ ರಕ್ತ ಬರುವವರೆಗೆ ದಪ್ಪು ಬಾರಿಸುವುದಿಲ್ಲ. ಹೊಟ್ಟೆ ತುಂಬಾ ಊಟಾ ಮಾಡೂದಕ್ಕೂ, ನೀರಡಿಸಿದಷ್ಟು ನೀರು ಕುಡಿಯುವುದಕ್ಕೂ, ಹಾಡಿಕೆಯಲ್ಲಿ ಧ್ವನಿ ಕೆಡುವುದಕ್ಕೂ ಸಂಬಂಧವನ್ನು ಕಟ್ಟಿಕೊಳ್ಳುತ್ತಾರೆ ಹಾಡಿಕೆ ಮಹಿಳೆಯರು. “ಈ ನಂಬಿಕೆ ಹಾಡು ಹೆಣ್ಣುಮಕ್ಕಳ ಹತ್ರ ಐತಿ. ನಮ್ಮಂಬಲ್ಲಿ ಇಲ್ಲ” ಎಂದ ಮೊಹಮ್ಮದ್ ಸಾಬ ಅವರ ಹೇಳಿಕೆಯನ್ನು ಗಮನಿಸಬೇಕು. ಹೆಣ್ಣುಮಕ್ಕಳಲ್ಲಿ ಹೆಚ್ಚು ಊಟ ಮಾಡಿದರೆ, ಹೆಚ್ಚು ನೀರು ಕುಡಿದರೆ ಸೂರು ಕೆಡುತ್ತದೆ ಎನ್ನುವ ನಂಬುಗೆ ಇದೆ. ಬಹುತೇಕ ಮಹಿಳೆಯರು ಗ್ಯಾಸ್ಟಿಕ್ ಸಮಸ್ಯೆ, ಮಂಡಿ ಹಾಗೂ ಸೊಂಟ ನೋವಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಸೂರು (ಕಂಠ) ಹಾಗೂ ಊಟದ ಕುರಿತಂತೆ ಒಂದೇ ವೃತ್ತಿಯಲ್ಲಿರುವ ಸ್ತ್ರೀ-ಪುರುಷ ಇಬ್ಬರಲ್ಲೂ ಭಿನ್ನ-ಭಿನ್ನ ನಂಬಿಕೆಗಳು ರೂಢಿಗೊಂಡಿವೆ. ರಾತ್ರಿ ಹೊತ್ತಿನಲ್ಲಿ ಮಲ -ಮೂತ್ರ ವಿಸರ್ಜನೆಗೆಂದು ಹೋದಾಗ ಪುರುಷರಿಂದ ನೂರಾರು ಬಗೆ ಸಮಸ್ಯೆಗಳನ್ನು ಎದುರಿಸಿದ್ದಾರೆ. ಇಂತಹ ಸಮಸ್ಯೆಗಳಿಗೆ ಪರಿಹಾರವನ್ನು ಎರಡು ನೆಲೆಗಳಲ್ಲಿ ಅವರು ಗುರುತಿಸಿಕೊಳ್ಳುತ್ತಾರೆ. ಒಂದು: ಅವರ ಮೇಳದ ಗಂಡಸರೊಟ್ಟಿಗೆ ಮಲ-ಮೂತ್ರ ವಿಸರ್ಜನೆಗೆ ಹೋಗುವುದು. ಎರಡು: ಜೊತೆಯ ಮೇಳದವರು ಕುಡುಕರಿದ್ದರೆ ಊಟ ಮಾಡುವುದು, ನೀರು ಕುಡಿಯುವುದು ಎರಡನ್ನೂ ನಿಯಂತ್ರಿಸುವುದು. ರಾತ್ರಿ ಹೊತ್ತು ಮಲ, ಮೂತ್ರ ವಿಸರ್ಜನೆಗಾಗಿ ಹೋಗುವಾಗ ಎದುರಾಗುವ ಸಾಮಾಜಿಕ ಅಪಾಯ ಹಾಗೂ ಅಪಮಾನಗಳಿಂದ ತಪ್ಪಿಸಿಕೊಳ್ಳಲು ಊಟಕ್ಕೂ ನೀರಿಗೂ ಸಂಬಂದ ಕಲ್ಪಿಸಿರಬೇಕು. ಹೊಟ್ಟೆ ತುಂಬ ಊಟ ಮಾಡಿದರೆ, ಬೇಕಾದಷ್ಟು ನೀರು ಕುಡಿದರೆ ಮಲ-ಮೂತ್ರ ವಿಸರ್ಜನೆಯನ್ನು ಮಾಡಬೇಕಾಗುತ್ತದೆ. ಅವುಗಳನ್ನೇ ನಿಯಂತ್ರಣದಲ್ಲಿಟ್ಟರೆ ಈ ಸಮಸ್ಯೆ ಇರುವುದೇ ಇಲ್ಲ. ತಮ್ಮರಕ್ಷಣೆಯನ್ನು ತಾವೇ ಮಾಡಿಕೊಳ್ಳಲು ಆಹಾರ ಹಾಗೂ ನೀರಿನ ಕುರಿತು ಈ ಬಗೆಯ ಮಿಥ್‌ಗಳನ್ನು ಹಿರಿಯ ಮಹಿಳಾ ಹಾಡುಗಾರರು ಸೃಷ್ಟಿಸಿರಬೇಕು. ಹಿರಿಯ ಮಹಿಳಾ ಹಾಡುಗಾರರು ಸಾಮಾಜಿಕ ಅಪಾಯಗಳಿಂದ ತಪ್ಪಿಸಿಕೊಳ್ಳಲು ಜೊತೆಯಲ್ಲಿನ ಪುರುಷರನ್ನು ಅವಲಂಬಿಸಿರಲಿಕ್ಕಿಲ್ಲ. ಅವರು ಸ್ವ ರಕ್ಷಣೆಗಾಗಿ ಮಾಡಿಕೊಂಡ ಇಂತಹ ತಂತ್ರಗಾರಿಕೆಯಿಂದಾಗಿ ಈ ಮಹಿಳೆಯರು ಗ್ಯಾಸ್ಟಿಕ್‌ನಂತಹ ಸಮಸ್ಯೆಯನ್ನು ಎದುರಿಸುವುದು ಸಾಮಾನ್ಯವಾಗಿದೆ. ಧ್ವನಿ ಕೆಟ್ಟರಂತೂ ಇವರು ದೈಹಿಕವಾಗಿ ಹಾಗೂ ಮಾನಸಿಕವಾಗಿ ಕುಸಿಯುತ್ತಾರೆ. ಧ್ವನಿಗಾಗಿ ವೈದ್ಯಕೀಯ ಉಪಚಾರ ಪಡೆದುಕೊಳ್ಳುವಾಗ ಬಿಸಿ ಊಟವೇ ಬೇಕೆನ್ನುತ್ತಾರೆ. ಇವರನ್ನು ಕರೆಸಿದ ಹಳ್ಳಿಗಳಲ್ಲಿ ಊಟದ ಬಗ್ಗೆ ಕಾಳಜಿ ವಹಿಸಿದ್ದರೆ ಬಿಸಿಯಾದ ಆಹಾರವನ್ನು ಸ್ವಲ್ಪ ಸೇವಿಸುತ್ತಾರೆ. ಇಲ್ಲದಿದ್ದರೆ ತೆಗೆದುಕೊಳ್ಳುವ ಮತ್ತು ಕೂಳಿಗೂ ಕಲ್ಲು ಬೀಳುತ್ತದೆ. ಆಹಾರ ಸೇವೆಯನ್ನು ನಿಯಂತ್ರಿಸಿ, ನಿಯಂತ್ರಿಸಿ ಕರಳು ಬತ್ತಿರುತ್ತವೆ; ಊಟವೇ ಹೋಗುವುದಿಲ್ಲ ಎನ್ನುತ್ತಾರೆ. ಆದರ ಸಂದರ್ಶಿಸಿದ ಪುರುಷ ಹಾಡುಗಾರರೂ, ಹಾಡುಗಾರ್ತಿಯರ ಅಭಿಪ್ರಾಯವನ್ನು ಹೇಳಲಿಲ್ಲ. ಹಾಡಿಕೆ ನಿಲ್ಲಿಸಿದ ಬಹುತೇಕ ಮಹಿಳೆಯರು ಈಗಲೂ ಒಂದ್ಹೋತ್ತು ಮಾತ್ರ ಊಟ ಮಾಡುತ್ತಾರೆ; ಎರಡು ಹೊತ್ತು ಊಟ ಮಾಡಿದರೆ ತೆಗೆದುಕೊಂಡ ಆಹಾರ ಜೀರ್ಣವಾಗುವುದೇ ಇಲ್ಲ ಎನ್ನುತ್ತಾರೆ.

. ಆಹಾರ

ಸಂಗೀತಗಾರರು ಸಾಮಾನ್ಯವಾಗಿ ಆಹಾರ ಸೇವನೆಯಲ್ಲಿ ಕಟ್ಟುನಿಟ್ಟಾಗಿರುತ್ತಾರೆ. ಪಾತರದವರಲ್ಲಿ ಸಂಗೀತಗಾರರು ತುಪ್ಪ ಹಾಗೂ ಎಣ್ಣೆಯಲ್ಲಿ ಕರಿದ ತಿಂಡಿಯ ಬಗ್ಗೆ ಕಟ್ಟುನಿಟ್ಟಾಗಿರುತ್ತಿದ್ದರು. ಹಾಗೆಯೇ ಹಾಡಿಕೆ ಮಹಿಳೆಯರಲ್ಲಿ ಊಟದ ಕುರಿತಂತೆ ಕೆಲವು ನಿಬಂಧನೆಗಳು ಕಂಡುಬಂದವು.

“ದನಿ ಬೀಳುತ್ತಂತ ಬದ್ನಿಕಾಯಿ ಪ್ಯ, ಅನ್ನ, ಸಾರು ಅಷ್ಟs ಊಟ ಮಾಡತಿದ್ವಿ. ಜಾತ್ರಿಗೆ ಹೋದ್ರೂ ಹೋಳಿಗಿ ತುಪ್ಪ ತಿನ್ನಂಗಿಲ್ಲ” – ಬಬಲೇಶ್ವರದ ಬಂಗಾರವ್ವ

ಅನ್ನಕ್ಕೂ ಸ್ವರಾ ಮುಬ್ಬರ ಆಗ್ತದಂತ ಅದ್ನೂ ತಿಂತಿರಲಿಲ್ಲ. ಜಾತ್ರ್ಯಾಗ ಯಾರ ರೊಟ್ಟಿ ಮಾಡತಾರು? ಕಟಿ ರೊಟ್ಟಿ ಸಾರಾ ಕಲಸಗೊಂಡ ತಿಂತಿದ್ವಿ. – ಶಿರಬೂರ ಮುತ್ತವ್ವ

ತಾಯಿ, ದನಿ ಹೋಗ್ತದಂತೇಳಿ ಹಾಡಕಿ ಬಿಡುತನಕಾ ಬಾಳೆ ಹಣ್ಣು, ಮಾವಿನ ಹಣ್ಣು ಮುಟ್ಟೆ ಇಲ್ಲ, ಸಣ್ಣಕಿದ್ದಾಂಗ ಇವನ್ನೆಲ್ಲಾ ತಿಂತಿದ್ನಿ. ಹಾಡಿಕಿ ಕಲಿತಿಂದ ತಿಂದ್ರ ಸೂರ ಹೋಗತ್ತಂತ. ಅದಕ್ಕಂತ ಮಾವಿನಹಣ್ಣು, ಬಾಳೆಹಣ್ಣು ತಿನ್ನಲಿಲ್ಲ. ಮನಸ ಬಾಳs ಗಟ್ಟಿ ಹಿಡಿದ ಅವನ್ನ ತ್ಯಾಗ ಮಾಡಿದ್ನಿ. ನನಗ ಹತ್ತೊರ್ಷ ಆಗುತನಕ ತಿಂದೇನಿ. ಆಮ್ಯಾಲ ಹಾಡಕಿ ಕಲಿಯಾಕ ಚಾಲೂ ಮಾಡಿದ್ಯಾ. ಅತ್ತಾಗಿಂದ ಈ ಎರ್ಡೂ ಹಣ್ಣ ತಿಂದಿರ್ಲಿಲ್ಲ. ಹಾಡಕಿsನ ನನ್ನ ಎಪ್ಪತ್ತೈದು ವಯಸ್ಸಿಗಿ ಬಿಟ್ಟ್ಯಾ, ಅಂದ್ರ ಐವತ್ತೈದು ವರ್ಷ ಆಗಿಂದ ಮಾವಿನಹಣ್ಣ ತಿಂದ್ಯಾ. ಹಣ್ಣ ತಿನ್ನುವಾಗ ಮತ್ತ ಹತ್ತ ವರ್ಷ ವಯಸ್ಸಿನ ಹುಡುಗಿ ಆಗಿದ್ದ್ಯಾ. – ತಿಗಣಿಬಿದರಿ ಗಂಗವ್ವ

ಮಲಗಿದರ ದನಿ ಬೇಸೂರಿ ಆಗಬಾರದಂತ ಹೊತ್ತ ಹೊಂಟುತನಕ, ಎಚ್ಚರ ಇರಾಕ ಚಾಪಾನಿ ತಗೋತಿನಿ… ರೊಟ್ಟಿ ಬದ್ನಿಕಾಯಿ ಪಲ್ಯ, ತೊಗರಿ ಬ್ಯಾಳಿ ಪಲ್ಯ ತಿಂತೇವು. ಚುರಮುರಿನೂ ತಿಂತೀವಿ. ಹೋಳಿಗಿ, ಹುಗ್ಗಿ, ಮೊಸರು, ಚಪಾತಿ ಏನ್ನೂ ತಿನ್ನಂಗಿಲ್ಲ ನಾನು.  – ವಿಜಾಪುರದ ಸಿದ್ದವ್ವ

ನಮಗೆ ಹೋಳಿಗಿ ಬಂಗಾರಾ. ಜಾತ್ರಿಗಿ ಹಾಡಿಕಿಗಿ ಹೋದ್ರೂ ಅವ್ರ ಹುಗ್ಗಿ ಹೋಳಿಗಿ ಕೊಟ್ರೂ ತಿನ್ನಂಗಿಲ್ಲ. ಅನ್ನ ತಂಪು ಅಂತಾರ, ಅದಕ್ಕ ತಿನ್ನಂಗಿಲ್ಲ. ಹುಳಿ ತಿನ್ನುವಂಗಿಲ್ಲ. ಜಡ್ಡನವರು ಪತ್ತೆ ಮಾಡಿದ್ಹಂಗ ನಾವು ಪತ್ತೆ ಮಾಡಬೇಕು. ಚಾ ತಗೋತಿವಿ. ಎಲಿ ಅಡಕಿ ತಿಂತಿವಿ. – ಜನವಾಡದ ಬುದ್ಧವ್ವ

ಮೇಲಿನ ನಿರೂಪಣೆಗಳು ಹೇಳುವ ಹಾಗೆ ಹರದೇಶಿ-ನಾಗೇಶಿ ಮಹಿಳಾ ಹಾಡುಗಾರರೆಲ್ಲರೂ ಆಹಾರ ಪಥ್ಯವನ್ನು ಪಾಲಿಸುತ್ತಾರೆ. ಕೆಲವರು ಅನ್ನ ಊಟ ಮಾಡಿದರೆ, ಕೆಲವರು ಅದನ್ನು ನಿರಾಕರಿಸುತ್ತಾರೆ. ಸಿಹಿ ಅಡುಗೆ, ಹುಳಿ ಪದಾರ್ಥ, ತಂಪು ಪದಾರ್ಥ ಈ ಆಹಾರವನ್ನು ಅವರು ತೆಗೆದುಕೊಳ್ಳುವುದಿಲ್ಲ. ನಾನು ಸಂದರ್ಶಿಸಿದ ಪುರುಷ ಹಾಡುಗಾರರು ತುಪ್ಪ ಹಾಗೂ ಎಣ್ಣೆ ಪದಾರ್ಥಗಳನ್ನು ತೆಗೆದುಕೊಳ್ಳುವುದಿಲ್ಲವೆಂದರು. ಅವರು ಹೋಳಿಗೆಯನ್ನು ಸಂಪೂರ್ಣ ನಿರಾಕರಿಸಿಲ್ಲ. ಧ್ವನಿ ಕಾಯ್ದುಕೊಳ್ಳುವುದರಲ್ಲಿ ಪುರುಷ ಹಾಡುಗಾರರು ಎಚ್ಚರಿಕೆ ವಹಿಸುತ್ತಾರೆ. ಆದರೆ ಮಹಿಳಾ ಹಾಡುಗಾರರಂತೆ ಕಟ್ಟುನಿಟ್ಟಿನ ಪಥ್ಯ ಪಾಲಿಸುತ್ತಿದ್ದುದು ಕಂಡುಬರಲಿಲ್ಲ. ಇದಕ್ಕೂ ಕಾರಣಗಳನ್ನು ಆರ್ಥಿಕ ನೆಲೆಯಲ್ಲಿಯೇ ಹುಡಕಬೇಕು. ಹರದೇಶಿ-ನಾಗೇಶಿ ಪುರುಷ ಹಾಡುಗಾರರಿಗಿರುವಂತಹ ವೃತ್ತಿ ಆಯ್ಕೆ ಅವಕಾಶಗಳು ಮಹಿಳಾ ಹಾಡುಗಾರರಿಗೆ ಇಲ್ಲದಿರುವುದು ಮಹಿಳೆಯರ ಕಟ್ಟುನಿಟ್ಟಿನ ಪಥ್ಯಕ್ಕೆ ಕಾರಣವಾಗಿರಬೇಕು. ಹರದೇಶಿ-ನಾಗೇಶಿ ಮಹಿಳಾ ಹಾಡುಗಾರರೆಲ್ಲರೂ ಬಡತನದ ಬೇಗೆಯಲ್ಲಿಯೇ ಬೆಂದು ಬಂದವರು. ಸಿಹಿ ಅಡುಗೆ ಅವರಿಗೆ ಕನಸು. ಜಾತ್ರೆಯಲ್ಲಿ ಸಿಹಿ ಅಡುಗೆಯನ್ನೇ ಮಾಡುತ್ತಾರೆ. ಊರಿನ ವಿಶೇಷವಾದ ಹಬ್ಬ ಹಾಗೂ ಜಾತ್ರೆಗಳ ಸಂದರ್ಭಗಳಲ್ಲಿಯೇ ಹಾಡಿಕೆಯವರು ಹಾಡುವರು. ಮಹಿಳಾ ಹಾಡುಗಾರರೇ ಹೇಳುವಂತೆ ಅವರ ಮನೆಗಳಲ್ಲಿ ನೂರಾರು ಆರ್ಥಿಕ ತೊಂದರೆಗಳು. ಹೀಗಾಗಿ ಮನೆಯಲ್ಲಿ ವಿಶೇಷವಾದ ಸಿಹಿ ಅಡುಗೆ ಮಾಡಿಕೊಳ್ಳುವುದು ಬಹಳ ವಿರಳ. ಅವರು ವಿಶೇಷವಾದ ಸಂದರ್ಭಗಳಲ್ಲಿ ಹಾಡುವುದಕ್ಕೆ ಬಂದಾಗ ವಿಶೇಷವಾದ ಅಡುಗೆ ಊಟ ಮಾಡುವ ಅವಕಾಶ ಇರುತ್ತದೆ. ಆದರೂ, ಧ್ವನಿ ರಕ್ಷಣೆಗಾಗಿ ಅವರೇ ಅದನ್ನು ನಿರಾಕರಿಸುತ್ತಾರೆ. ಬಬಲೇಶ್ವರದ ಬಂಗಾರವ್ವ ಹೇಳುವಂತೆ “ದನಿ, ಜೀಂವಾ ಎರಡೂ ಬ್ಯಾರೆ ಬ್ಯಾರೆ ಅಲ್ಲ”. ಜೀವದ ಹಾಗೆ ಅವರು ಧ್ವನಿಯನ್ನು ಅತ್ಯಂತ ಎಚ್ಚರದಿಂದ ರಕ್ಷಿಸುವರು. ಮನಸ್ಸಿನ ಚಪಲ, ಬಾಯಿ ಚಪಲ ಎರಡೂನಿಯಂತ್ರಿಸಿಕೊಂಡು ವೃತ್ತಿ ನಿರಂತರತೆಯನ್ನು ಕಾಯ್ದುಕೊಳ್ಳುತ್ತಾರೆ. ಪುರುಷ ಹಾಡುಗಾರರಿಗೆ ಸ್ಥಿರಾಸ್ತಿ, ಚರಾಸ್ತಿ ಅಂದರೆ ಭೂಮಿ, ದನಕರುಗಳು ಇದ್ದ ಹಾಗೆ ಮಹಿಳಾ ಹಾಡುಗಾರರಿಗೆ ಇದ್ದುದು ಕಂಡು ಬರಲಿಲ್ಲ. ಇವರಿಗೆ ಹಾಡಿಕೆ ಬಿಟ್ಟರೆ, ಚೌಡಕಿ ಮಾತ್ರ ಗೊತ್ತಿತ್ತು. ಚೌಡಕಿ ವಿದ್ಯೆ ಆದಾಯ ತರುವ ವಿದ್ಯೆಯಾಗಿಲ್ಲ. ಅಂದರೆ ಚೌಡಕಿ ವಿದ್ಯೆ, ದಪ್ಪಿನ ಹಾಡಿನ ಹಾಗೆ ವೃತ್ತಿಯಾಗಿ ಗುರುತಿಸಿಕೊಂಡಿಲ್ಲ. ಹಾಗೂ ಈ ಎರಡೂ ವಿದ್ಯೆಗಳಿಗೂ ಧ್ವನಿ ಬಹಳ ಮುಖ್ಯ. ಧ್ವನಿಯನ್ನು ಹೊರಗುಳಿಸಿ ಈ ವಿದ್ಯೆಯ ಪ್ರದರ್ಶನವನ್ನು ಕಲ್ಪಿಸಿ ಕೊಳ್ಳಲಾಗುವುದಿಲ್ಲ. ಹಾಡಿಕೆಯೇ ಅವರ ಉಪಜೀವನದ ಮಾರ್ಗವಾಗಿರುವುದರಿಂದ ಈ ಹಾಡುಗಾರ್ತಿಯರು ಧ್ವನಿಯನ್ನು ಕಾಯ್ದುಕೊಳ್ಳುತ್ತಾರೆ.

ಹಾಡಿಕೆ ಕಲಿತರೆ ‘ಸೂಳೆ’ ಪಟ್ಟದಿಂದ ಮುಕ್ತಿ ಹೊಂದಬಹುದೆಂಬ ಆಸೆಯಿಂದ ‘ದೇವದಾಸಿ’ಯರು ಕಾಲಿಟ್ಟರು. ಯಾವ ಕ್ರೌರ್ಯಗಳಿಂದ ಮುಕ್ತಿ ಹೊಂದಬೇಕೆಂದು ಹಾಡಿಕೆ ಕ್ಷೇತ್ರಕ್ಕೆ ಕಾಲಿಟ್ಟರೋ, ಅದೇ ಕ್ಷೇತ್ರ ಅವರನ್ನು ಕಲೆಯ ಹೆಸರಿನಲ್ಲಿ ಹುರಿದು ಮುಕ್ಕಿದೆ. ಅವರ ಮೇಲೆ ಭಾವನಾತ್ಮಕವಾಗಿ, ಲೈಂಗಿಕವಾಗಿ, ಬೌದ್ಧಿಕವಾಗಿ ಹಲ್ಲೆ ನಡೆಸಿವೆ. ಜೊತೆಯಲ್ಲಿ ಹಾಡಿಕೆಯು ಈ ಮಹಿಳೆಯರಲ್ಲಿ ದೈಹಿಕ ದಣಿವು ಸೃಷ್ಟಿಸಿದೆ. ಬಸಿರು, ಬಾಣಂತನ, ದಣಿವು, ಆಯಾಸ ಎನ್ನದೇ ನಿರಂತರ ಹಾಡಿಕೆ ಮಾಡುವ ಒತ್ತಡವನ್ನು ಹೇರಿದೆ. ಹೀಗೆ ಸಾಮಾಜಿಕ ಕ್ರೌರ್ಯಗಳು, ಕುಟುಂಬದಲ್ಲಿನ ಆರ್ಥಿಕ ತೊಳಲಾಟಗಳು ಹಾಡಿಕೆ ಮಹಿಳೆಯರನ್ನು ಪ್ರತಿಭಟಿಸಲಾರದಷ್ಟು ಮಾನಸಿಕವಾಗಿ ಹಾಗೂ ದೈಹಿಕವಾಗಿ ದಣಿಸಿವೆ, ಆಯಾಸಗೊಳಿಸಿವೆ.

* * *