ತಾಲೀಮು

ಹಾಡಿಕೆಗಾಗಿ ಹಾಡುಗಾರರು ನಡೆಸುವ ತಾಲೀಮನ್ನು ಎರಡು ನೆಲೆಗಳಲ್ಲಿ ಗುರುತಿಸಬಹುದು. ೧. ಕಲಿಕಾ ಹಂತದ ತಾಲೀಮು ೨. ವೃತ್ತಿ ಹಂತದ ತಾಲೀಮು.

ಕಲಿಕಾ ಹಂತದ ತಾಲೀಮು

“ನನ್ನ ಹನ್ನೆರಡನೇ ವಯಸ್ಸಿಗೆ ಹಾಡಕಿ ಕಲಿಯಾಕ ಚಾಲೂ ಮಾಡಿದ್ಯಾ. ಬೆಳಗಿನ ಜಾಂವಾ ನಾಕಕ್ಕ ಹಾಡಕಿ ಕಲಿಯಾಕ ಹತ್ತಿದ್ರ ಮುಂಜಾನಿ ಆರ ಏಳರತನ ಹಾಡ್ತಿದ್ನಿ. ಗುರುಗಳು ಹೇಳಿಕೊಟ್ಟ ಹಾಡನ್ನು ಪ್ರಾಕ್ಟೀಸು ಮಾಡ್ತಿದ್ನಿ. ನನಗ ಅಕ್ಷರಾ ಬರಾಂಗಿಲ್ಲ. ಅದಕ್ಕ ಗುರುಗಳು ನನ್ನ ನಾಲಗ್ಯಾಗ ಹಾಡ ಕೂಡತನಾ ಹೇಳಕೊಡವ್ರು” ಎಂದು ಕಂಬಾಗಿ ಹನುಮವ್ವ ಹೇಳಿದರೆ, ಕುಂಬಾರಹಳ್ಳಿಯ ಪಾತಾಳೆವ್ವ ಹೇಳಿದ್ದು ಹೀಗೆ. “ನಾನು ಅಕ್ಷರ ಕಲಿಯದಾಕಿ. ನಮ್ಮ ಗುರುಗಳು ಹಾಡಕಿ ಬರಾತನಕ ಹೇಳವ್ರೆ ಹೇಳವ್ರು. ಹತ್ತಿಪ್ಪತ್ತು ಸಲ ಹೇಳಿದ್ರೂ ನನಗ ಹಾಡಾಕ ಬರಲಾಕಂದ್ರ ಚಬಕಿ ತಗೊಂಡು ನನ್ನ ಹೊಡಿತಿದ್ರು. ಗುರು ಎಷ್ಟs ಹೊಡದ್ರೂ ಬಡದ್ರೂ ಸಿಟ್ಟಿಗಿ ಏಳುವಂಗಿಲ್ಲ. ಬೆಳಗಿನ ಜಾಂವಾ ಮೂರು ಗಂಟೆಗೆ ಎಬ್ಬಸವು; ನಾಲ್ಕು ಗಂಟಿಗಿ ಎಬ್ಬಸವು; ಹಾಡಿಸವ್ರು. ರಾತ್ರಿ ಏಳೆಂಟಕ್ಕ ಕಲಿಸಾಕ ಚಾಲು ಮಾಡಿದ್ರ ರಾತ್ರಿ ಹತ್ತ ಗಂಟಿಗಿ ಮುಗಿಯುದು”

ಹಾಡುವ ಕುಳಲಿ ಯಲ್ಲವ್ವನು “ಗುರುಗಳನ್ನ ಮನಿಯಾಗ ಇಟಕೊಂಡು ಕಲಿಯೋ ತಾಕತ್ತು ಇರ್ಲಿಲ್ಲ. ಹೀಗಾಂಗಿ ವಾರಕ್ಕ ಮೂರು ಸಲಾ ನಮ್ಮನಿಗಿ ಗುರುಗೊಳು ಬರಾವ್ರು. ಹಾಡಿಕೆ ಹೇಳಕೊಡವ್ರು. ಮ್ಯಾಳದವರನ್ನು ಸೇರಿಸಿಯೇ ಪ್ರಾಕ್ಟೀಸು ಮಾಡಸ್ತಿದ್ರು. ನಾ ಚೌಡಕಿ ಬಾರಸಕೋಂತ ಹಾಡಿದ್ರ ನನ್ನ ಜೋಡಿ ತುಂತುಣಿ ಬಾರಿಸ್ಕೋಂತ ಸೂರು ಕೊಡಾಕ ಇನ್ನೊಬ್ಬಕ್ಕಿ ಇರ‍್ತಾಳ. ನಮ್ಮಿಬ್ಬರ ಹಿಂದ ತಾಳ ಬಾರಸಕಿ ಒಬ್ಬಕಿ ಇದ್ರ; ರಾಗಾ ಹಚ್ಚಕಿ ಇನ್ನೊಬ್ಬಕಿ ಇರತಾಳು. ಹೀಂಗ ಮ್ಯಾಳದ ಜೋಡಿ ಹಾಡಿದ್ರ ಕಲಿತ ಹಾಡು ಜಲ್ದಿ ತಲ್ಯಾಗ ಕೂಡತಾವು. ನಾಲಿಗ್ಯಾಗ ಉಳಿತಾವು. ಗಂಡಸರು ಕಣ್ಣಾಗ ನಿದ್ದಿ ಕಟಗೊಂಡು ತ್ರಾಸ ತಗೊಂಡು ಉಪವಾಸ ಇದ್ದು ಕಲಿಯಂಗಿಲ್ಲ. ಅದಕ್ಕ ನಾವು ಹೆಣ್ಣ-ಹೆಣ್ಣ ಮಕ್ಕಳ ಹರದೇಶಿ-ನಾಗೇಶಿ ಹಾಡಾ ಹಾಡ್ತೀವಿ” ಎಂದಳು. ಮುಧೋಳ, ಜಮಖಂಡಿ, ಮಹಾಲಿಂಗಪೂರ ಈ ಭಾಗದಲ್ಲಿ ಹರದೇಶಿ-ನಾಗೇಶಿ ಎರಡು ಹಾಡುಗಳನ್ನು ಹೆಣ್ಣು ಮಕ್ಕಳೇ ಹಾಡುತ್ತಾರೆ. ಆದರೆ ಗುಲ್ಬರ್ಗಾ, ವಿಜಾಪುರ, ಸೋಲಾಪುರ ಮೊದಲಾದ ಭಾಗಗಳಲ್ಲಿ ಹೆಂಗಸರು, ಗಂಡಸರು ಇಬ್ಬರೂ ಈ ಹಾಡುಗಳನ್ನು ಹಾಡುತ್ತಾರೆ. ಹೆಣ್ಣು ಮಗಳಿಗೆ ಹೆಣ್ಣು ಮಗಳೇ ಎದುರಾಗಿ ಹರದೇಶಿ-ನಾಗೇಶಿ ಹಾಡುಗಳನ್ನು ಹಾಡುವ ಮೇಳಗಳಿಗೆ ಚೌಡಕಿ ಮೇಳ ಎಂದರೆ, ಸ್ತ್ರೀ-ಪುರುಷರು ಎದುರಾಗಿ ಹಾಡುವ ದಪ್ಪಿನ ಹಾಡುಗಳಿಗೆ ದಪ್ಪಿನ ಹಾಡುಗಳು, ಶಾವರಕಿ ಹಾಡುಗಳು ಎನ್ನುತ್ತಾರೆ. ಇಬ್ಬರೂ ಹಾಡುವ ಸಾಹಿತ್ಯ ಒಂದೇಯಾಗಿದ್ದು, ಬಳಸುವ ವಾದ್ಯಗಳು ಭಿನ್ನವಾಗಿರುತ್ತವೆ. ಮುಧೋಳ, ಜಮಖಂಡಿ ಹಾಗೂ ಮಹಾಲಿಂಗಪುರದಲ್ಲಿ ಬರುವ ಚೌಡಕಿ ಮೇಳದೊಂದಿಗೆ ಹಾಡುವ ಮಹಿಳಾ ಹಾಡುಗಾರರೆಲ್ಲರೂ “ಹೆಣ್ಣು ಮಕ್ಕಳಲ್ಲಿ ಚಂಚಲತೆ ಇರುವುದಿಲ್ಲ. ತಾಳ್ಮೆ, ಕಲಿಕೆಯ ಹಂಬಲ ಮಹಿಳೆಯಲ್ಲಿಯೇ ಇದೆ” ಎಂದು ಅಭಿಪ್ರಾಯ ಪಡುತ್ತಾರೆ.

ಗಣಿಯಾರ ರೇಣುಕಾಬಾಯಿ ತನ್ನ ಆರಂಭದ ರಂಗ ತಾಲೀಮಿನ ಬಗೆಗೆ ಹೀಗೆ ಹೇಳಿದಳು: “ಮೊದಲು ಹಾಡುವುದನ್ನು ಕಲ್ತೀನಿ, ಆಮ್ಯಾಲಿ ಬಾರಿಸೋದನ್ನ ಕಲ್ತೀನಿ. ಎರಡೂ ಹಂತ ಕಲ್ತ ಮ್ಯಾಲತ್ತ ದಪ್ಪ ಬಾರಿಸ್ಕೋಂತ ಹಾಡೇನಿ. ಹೀಂಗ ಕಲ್ತ ಹಾಡು ಒಂದ ರಾತ್ರಿ ಒಂದ ಹಗಲು ಹಾಡಾಕ ಬಂತಂದ್ರ ಪ್ರೋಗಾಂ ಕೊಡಾಕ ನಾವು ರೇಡಿಯಾಗಿದೇವಿ ಅಂತ ಅಂದಂಗ” ಬಬಲೇಶ್ವರದ ಬಂಗಾರವ್ವನು “ಓದಾಕ ಬರಿಯಾಕ ಬರೂವಷ್ಟ ಶಾಲಿ ಒದೇನಿ. ಮೊದಲಿಗೆ, ಹಾಡು ಬರದ ಕೊಟ್ಟು ಅದರ ದಾಟಿ ಹೇಳೀಕೊಡವ್ರು. ಅದನ್ನ ಆ ದಾಟ್ಯಾಗ ಹಾಡಕೊಂತ ಕಂಠ ಪಾಠ ಮಾಡ್ತಿದ್ದೆ. ಹೀಂಗ ಕಲಿಯಾಕ ಹಗಲಿ ರಾತ್ರಿ ವ್ಯತ್ಯಾಸ ಮಾಡಿಲ್ಲ ನಾನು” ಎಂದಳು. ಶಿರಬೂರದ ಮುತ್ತಬಾಯಿಯು “ತಾಯಿ, ನಾನು ಅಕ್ಷರ ಕಲ್ತಕಿ ಅಲ್ಲ. ದಪ್ಪ ಬಾರಸ್ಕೊಂತ ಗುರುಗಳು ಹೇಳಿಕೊಟ್ಟಂಗ ಹಾಡ್ಕಿ ಕಲ್ತೇನಿ, ಬಾರಿಸೋ ದಪ್ಪು, ಹಾಡಿನ ದಾಟಿ ಇವೆರಡೂ ಏನ ಹಾಡಬೇಕಂತ ದಾರಿ ತೋರಿಸ್ತಾವ. ಕೂಳ ಇಲ್ದ, ನೀರಿಲ್ದ, ನಿದ್ದಿ ಇಲ್ದ ಈ ಹಾಡ್ಕಿ ಕಲಿತೇನಿ. ನನ್ನ ಒಂದ ಕೋಲ್ಯಾಗ ಮಾಸ್ತರು ಕೂಡಿ ಹಾಕ್ತಿದ್ರು; ತಾವು ಕುಂತಗೊಂಡು ನನಗ ನಿಲ್ಲಿಸ್ತಿದ್ರು. ಒಂದs ಬೈಠಕಿಗಿ ಮೂರ‍್ನಾಲ್ಕು ಪದ ಹೇಳಿಕೊಡ್ತಿದ್ರು. ಅದನ್ನ ಕಲ್ತು ಒಪ್ಪಿಸು ಮಟಾ ನನ್ನ ಕೂಡಿಸ್ತಿರಲಿಲ್ಲ. ಬೆಳಗಿನ ಜಾವ ಕಲಿಸಿದ್ದನ್ನ ಸಂಜೀಕಿ ಒಪ್ಪಿಸಲಾಕಂದ್ರ ನಮ್ಮ ಗುರುಗೋಳು ಲಕ್ಕಿ ಜಬರ‍್ಲೆ ಹೊಡಿತಿದ್ರು. ಬೆಳಗಿಂದನ್ನ ಸಂಜಿಕ ಒಪ್ಪಿಸಿದ್ರೆ ಹೊಡತ ಬಿಳ್ತಿರಲಿಲ್ಲ. ಬೈಗುಳ ಇದ್ದೆ ಇರ್ತಿದ್ದವು. ನಾವು ಎಷ್ಟs ಕಲ್ತರೂ ಅವ್ರಿಗೆ ತೃಪ್ತಿ ಇರ್ತಿಲಿಲ್ಲ. ಕೋಲ್ಯಾಗಿಂದ ಹೊರಗ ಬರಬೇಕಿದ್ರೆ ಮೈಯಾಗ ಬೆವರು ಬರೋದು. ಅಷ್ಟು ಕಷ್ಟ ಪಟ್ಟೇನಿ” ಎಂದಳು.

‘ನಮ್ಮ ಗುರುಗೋಳು ಬೆಳಗಿನ ಜಾವಾ ಐದರಿಂದ ಮುಂಜಾನಿ ಒಂಭತ್ತರ ತನಕ ಹಾಡಕಿ ಹೇಳಿಕೊಡ್ತಿದ್ರು. ಹೋಗುವಾಗ ಹಾಡಾ ಬರದ ಕೊಟ್ಟ ಹೋಗವ್ರು. ಅವರು ಹೋಗಿಂದ ಮನಿ ಕೆಲ್ಸಾ ಮಾಡಿ ದೆವರ ಜಗಲಿಗಿ ಸನಮ(ನಮಸ್ಕಾರ) ಮಾಡಿ ಪಾಠಾ ಕಲಿತಿದ್ದೆ. ಮಳ್ಳಾದಿನ ಒಪ್ಪಸ್ತಿದ್ದೆ. ಕಂಠ ಪಾಠ ಮಾಡಿದ ನಂತರವೇ ಸ್ವರಾ ಕೂಡಸತಿದ್ರು. ನನಗ ಕನ್ನಡ ಬರಿಯಾಕ ಬರಲ್ಲ. ಹೀಗಾಂಗಿ ಮರಾಠಿ ಲಿಪಿಯಾಗ ಕನ್ನಡ ಸಾಹಿತ್ಯ ಕಲ್ತೇನಿ’ ಎಂದು ಮಂದರೂಪ ಈರಮ್ಮ ಕಾಂಬಳೆ ಹೇಳಿದರು.

ಮೇಲಿನ ಈ ಎಲ್ಲ ನಿರೂಪಣೆಗಳು ಹರದೇಶಿ-ನಾಗೇಶಿ ಮಹಿಳಾ ಹಾಡುಗಾರರ ಕಲಿಕಾ ಶ್ರಮವನ್ನು ನಿರೂಪಿಸುತ್ತವೆ. ನಾನು ಸಂದರ್ಶಿಸಿದ ಬಹುತೇಕ ಕಲಾವಿದೆಯರು ಹರದೇಶಿ-ನಾಗೇಶಿ ಹಾಡುಗಾರಿಕೆಯನ್ನು ಅವರ ಒಂಭತ್ತು ಇಲ್ಲವೆ ಹತ್ತನೆಯ ವಯಸ್ಸಿಗೆ ಕಲಿಯಲು ಪ್ರಾರಂಭಿಸಿದವರು. ಮತ್ತೆ ಕೆಲವರು ಹದಿನಾಲ್ಕು, ಹದಿನೈದು ಇಲ್ಲವೆ ಇಪ್ಪತ್ತೈದರ ನಂತರವೂ ಕಲಿಕೆ ಪ್ರಾರಂಭಿಸಿದವರು. ಹಾಡಿನ ಕಲಿಕೆಯಲ್ಲಿ ತೊಡಗಿದ ಅವರು ರಾತ್ರಿ ಹಗಲು ಹಾಡಿಕೆ ಧ್ಯಾನದಲ್ಲಿಯೇ ಇರುತ್ತಾರೆ. ಹಾಡಿಕೆಯು ಅವರಿಗೆ ವೃತ್ತಿ ವಿದ್ಯೆಯಾಗಿದ್ದರಿಂದ, ಧ್ಯಾನವಿಟ್ಟು ಕಲಿಯುತ್ತಾರೆ. ಬೆಳಗಿನ ಜಾವ ನಾಲ್ಕರಿಂದ ಆರು ಇಲ್ಲವೆ ಏಳರವರೆಗೆ, ರಾತ್ರಿ ಎಂಟರಿಂದ ಹತ್ತರವರೆಗೆ ಕಲಿಯುವ ವೇಳೆಯನ್ನು ನಿಗದಿಪಡಿಸಿಕೊಂಡರೂ ಈ ನಿಗದಿತ ವೇಳೆಯಲ್ಲಿ ಮಾತ್ರ ಹಾಡಿನ ಬಗ್ಗೆ ಧ್ಯಾನಿಸುತ್ತಿದ್ದರು; ಉಳಿದ ವೇಳೆಯಲ್ಲಿ ಕೌಟುಂಬಿಕ ಚಟುವಟಿಕೆಯಲ್ಲಿರುತ್ತಿದ್ದರು ಎಂದರ್ಥವಲ್ಲ. ನಿಗದಿತ ಕಲಿಕಾ ವೇಳೆಯಲ್ಲಿ ಕಲಿಸುವ ಗುರುಗಳು ಎದುರಿಗೆ ಇರುತ್ತಿದ್ದರು. ಗುರುಗಳು ಗೈರುಹಾಜರಿಯಲ್ಲಿ ಶಿಷ್ಯೆಯರು ಮನೆಯ ಕೆಲಸ ಇಲ್ಲವೆ ಹೊಲದ ಕೆಲಸಗಳಲ್ಲಿ ತೊಡಗಿಕೊಂಡರೂ ಹಾಡಿಕೆ ನಾದದಲ್ಲಿಯೇ ಇರುತ್ತಾರೆ. ಬಹುತೇಕ ತಮ್ಮ ಮಗಳು ಹರದೇಶಿ ಇಲ್ಲವೆ ನಾಗೇಶಿ ಹಾಡಿನ ಕಲಿಕೆಯಲ್ಲಿ ತೊಡಗಿಕೊಂಡರೆ ಅವರನ್ನು ಕೂಲಿ ಕೆಲಸಕ್ಕೆ ಕಳುಹಿಸುವುದಿಲ್ಲ. ಹೊರಗಡೆ ಬಿಸಿಲು ಹಾಗೂ ಗಾಳಿಗೆ ಮೈ ಬಣ್ಣ ಕಪ್ಪಾಗುತ್ತದೆ ಎನ್ನುವ ಕಾರಣದಿಂದ ಕಲಿಯುವ ಹುಡುಗಿಗೆ ಸಾಮಾನ್ಯವಾಗಿ ಮನೆಯಲ್ಲಿಯೇ ಉಪಚರಿಸುತ್ತಾರೆ. ಈ ಉಪಚಾರವೂ ಹಾಡುವ ಹುಡುಗಿಯ ಮೈ ಬಣ್ಣವನ್ನು ಗಮನಿಸಿಯೇ ನಡೆಯುತ್ತದೆ. ನಾನು ಸಂದರ್ಶಿಸಿದ ಕಪ್ಪಗಿದ್ದ ಮಹಿಳಾ ಹಾಡುಗಾರರೆಲ್ಲರೂ ಕೂಲಿ ಕೆಲಸವನ್ನು ನಿರ್ವಹಿಸಿಕೊಂಡೇ ಹಾಡಿಕೆಯನ್ನು ಕಲಿತಿದ್ದಾಗಿ ಹೇಳಿದರೆ; ಗೋದಿ ಮೈ ಬಣ್ಣ, ಗುಲಾಬಿ ಮೈಬಣ್ಣವುಳ್ಳ ಮಹಿಳೆಯರು ಹಾಡಿಕೆ ಕಲಿಯಲು ಪ್ರಾರಂಭಿಸಿದ ಮೇಲೆ ತಮ್ಮನ್ನು ಹೊರಗಡೆ ಕಳುಹಿಸಲೇ ಇಲ್ಲ ಎಂದು ಹೇಳಿದರು.

ಹಾಡಿಕೆಗೆ ತೊಡಗಿಸಬೇಕೆಂದಿರುವ ಇಲ್ಲವೆ ತೊಡಗಿಸಿಕೊಂಡಿರುವ ಹುಡುಗಿ ತುಸು ಕಪ್ಪಗಿದ್ದರೆ ಇಲ್ಲವೆ ಬೆಳ್ಳಗಿದ್ದರೆ, ಆಕೆ ಬಿಸಲಿಗೆ ಮೈಯೊಡ್ಡದಂತೆ ನೋಡಿಕೊಳ್ಳಲಾಗುತ್ತದೆ. ಹಾಡು ಕಲಿಯುವವಳು ಮನೆಯಲ್ಲಿರಲಿ, ಕೂಲಿ ಕೆಲಸ ನಿರ್ವಹಿಸುತ್ತಿರಲಿ ಹಗಲು ಮತ್ತು ರಾತ್ರಿ ಎರಡೂ ಹೊತ್ತಿನಲ್ಲಿಯೂ ಹಾಡು ಬಿಟ್ಟರೆ ಬೇರೇನೂ ಧ್ಯಾನ ಮಾಡವುದಿಲ್ಲ. ಕೆಲವರು ಮೊದಲು ಹಾಡು, ನಂತರ ದಪ್ಪು ಬಾರಿಸುವುದು, ಕೊನೆಯಲ್ಲಿ ದಪ್ಪಿನೊಂದಿಗೆ ಹಾಡುವುದು ಹೀಗೆ ಮೂರು ಹಂತಗಳಲ್ಲಿ ಹಾಡಿಕೆಯಲ್ಲಿ ಪ್ರಾವೀಣ್ಯತೆ ಸಾಧಿಸಲು ಪ್ರಯತ್ನಿಸಿದರೆ; ಮತ್ತೆ ಕೆಲವರು ದಪ್ಪು ಮತ್ತು ಹಾಡುಗಾರಿಕೆಯನ್ನು ಒಟ್ಟೊಟ್ಟಿಗೆ ಕಲಿಯುತ್ತಾರೆ. ಸಂದರ್ಶಿಸಿದ ವಕ್ತೃಗಳ ಹೇಳಿಕೆಗಳ ಆಧಾರದ ಮೇಲೆ ಹೇಳುವುದಾದರೆ ಅಕ್ಷರ ಬಲ್ಲವರು ಮೊದಲು ಸಾಹಿತ್ಯವನ್ನು ಹಾಡುತ್ತ ಕಲಿತರೆ; ಅಕ್ಷರ ಬರದೆ ಇರುವವರು ದಪ್ಪು ಇಲ್ಲವೆ ಚೌಡಕೆಯೊಂದಿಗೆ ಹಾಡಿಕೆ ಕಲಿಯುತ್ತಾರೆ. ಮತ್ತೆ ಕೆಲವರು ಪೂರ್ಣ ಮೇಳದೊಂದಿಗೆ ಎಂದರೆ ತುಂತುಣಿ, ತಾಳ ವಾದ್ಯದವರೊಂದಿಗೆ ಹಾಡು ಕಲಿಯುತ್ತಾರೆ. ಸಂಗೀತ ವಾದ್ಯಗಳ ಸಾಹಿತ್ಯವನ್ನು ಸುಲಭವಾಗಿ ಗ್ರಹಿಸುವಂತೆ ಸಹಾಯ ಮಾಡುತ್ತವೆ ಎನ್ನುವುದು ಅವರ ಅನುಭವದ ಮಾತು. ಶಿರಬೂರದ ಮುತ್ತಾಬಾಯಿಯ ಹೇಳಿಕೆಯು ಹಾಡು ಕಲಿಯುವಿಕೆಯು ಶ್ರಮದ ಕೆಲಸ ಎನ್ನುವುದನ್ನು ನಿರೂಪಿಸುತ್ತದೆ. ಕಲಿಸಿದ ಹಾಡು ಒಪ್ಪಿಸುವವರೆಗೂ ಗುರುಗಳು ನಿಲ್ಲಿಸುತ್ತಿದ್ದರು. ನಿಂತುಕೊಂಡೇ ಹಾಡಿ ನಿಂತು ಆಯಾಸವಾದ ಮುತ್ತಾಬಾಯಿ ಕಲಿಕೆಯ ಉದ್ದಕ್ಕೂ ಬೆವರು ಸುರಿಸಿದ್ದೇ ಹೆಚ್ಚು. ಮುತ್ತಾಬಾಯಿ ಹಾಗೂ ಮುತ್ತಬಾಯಿಯಂತಹ ಹಾಡುಗಾರರು ಹೇಳಿಕೊಂಡ ಬೆವರು ಸುರಿಸುವಿಕೆಯು ಹಾಡಿನ ಕಲಿಕಾ ಶ್ರಮವನ್ನು ಹೇಳುತ್ತದೆ. ಇದರೊಂದಿಗೆ ಹಾಡಿಕೆ ಹುಡುಗಿಯರ ಬಾಲ್ಯ ಹಾಗೂ ಶೋಡಷ ಅವಧಿಯು ಕಲಾ ಜ್ಞಾನ ಹಾಗು ಕಲಾ ಧ್ಯಾನದೊಂದಿಗೆ ಅನ್ಯೋನ್ಯ ಸಂಬಂಧ ಹೊಂದಿದ್ದನ್ನು ಹೇಳುತ್ತದೆ. ಈ ಕಲೆ ಕಲಿಯುವ ಮೊದಲೇ ಇವರೆಲ್ಲ ‘ಜೋಗತಿ’ ಯಾಗಿದ್ದರು. ‘ಬಸವಿ’ಯಾಗಿದ್ದರು. ‘ಜೋಗತಿ’ ಹಾಗೂ ‘ಬಸವಿಯರ’ ಬದುಕು ಸಾಮಾಜಿಕ ಗ್ರಹಿಕೆಗಿಂತ ಭಿನ್ನವಾಗಿದ್ದುದು ಅವರು ಹೇಳಿದರು ವಿವರಗಳಿಂದಲೇ ತಿಳಿದುಕೊಳ್ಳಬಹುದು. ಹಾಡುಗಾರ್ತಿಯರು ಕುಟುಂಬದವರು ‘ಜೋಗತಿ’ಯಾಗಿ ಲೈಂಗಿಕ ಸೇವೆಯನ್ನು ಹೇಗೆ ನಿರ್ವಹಿಸಬೇಕು ಎಂದು ಹೇಳಿಕೊಡುವುದಿಲ್ಲ. ಅದಕ್ಕಾಗಿ ಅವರಿಗೆ ಕಲಿಕಾ ಕೇಂದ್ರಗಳೂ ಇರುವುದಿಲ್ಲ. ಪ್ರಬಲ ಸಮಾಜದ ಪುರುಷರು ತಮ್ಮ ಬಯಕೆ ಹಾಗೂ ಪ್ರವೃತ್ತಿಗಳನ್ನು ಈಡೇರಿಸಿಕೊಳ್ಳಲು ಕೆಲವು ಸಮುದಾಯದ ಮಹಿಳೆಯರನ್ನು ದೇವರಿಗೆ ಮೀಸಲಿರಿಸಿ, ಅವರನ್ನು ಲೈಂಗಿಕ ಸೇವೆಯ ನೆಲೆಯಲ್ಲಿಯೇ ಅರ್ಥೈಸುತ್ತದೆ. ಜಾತಿಯಲ್ಲಿ ಪ್ರಬಲ ಎಂದು ಅರ್ಥೈಸಿ ಕೊಂಡವರು ಹಾಗೂ ಪುರುಷತನದಿಂದಲೇ ಬಲಿಷ್ಠರು ಎಂದರು ಗುರುತಿಸಿಕೊಂಡವರು ಮಹಿಳಾ ಹಾಡುಗಾರರನ್ನು ‘ಸೂಳೆಯರು’, ‘ಲೈಂಗಿಕ ಚಪಲವುಳ್ಳವರು’ ಎಂದು ತಮ್ಮ ಅಪೇಕ್ಷೆ ಹಾಗೂ ಬಯಕೆಗೆ ಅನುಗುಣವಾಗಿ ನಿರ್ವಚಿಸುತ್ತಾರೆ.

ವೃತ್ತಿ ಹಂತದ ತಾಲೀಮು

ಒಂದು ರಾತ್ರಿ ಒಂದು ಹಗಲು ಹಾಡಲು ಬರುವಷ್ಟು ಕಲಿತರೆ ಸಾಲದು. ಹರದೇಶಿ-ನಾಗೇಶಿ ಹಾಡುವ ಕ್ಷೇತ್ರದಲ್ಲಿ ನಿರಂತರವಾಗಿ ಹೊಸ ಹಾಡುಗಳು ಸೇರ್ಪಡೆಯಾಗುತ್ತಿರುತ್ತವೆ. ಹೊಸ ಹಾಡುಗಳನ್ನು ಕವಿಯಿಂದ ತಂದು ತಾವೇ ಅದಕ್ಕೆ ಶೃತಿ ಹೊಂದಿಸಿಕೊಳ್ಳುತ್ತಾರೆ. ಕಲಿಕೆಯ ಮೊದಲ ಹಂತದಲ್ಲಿ ಸಾಹಿತ್ಯ ಹಾಗೂ ಅದನ್ನು ಹಾಡಲು ಬೇಕಾದ ಸೂರು ಎರಡನ್ನು ಕಲಿಯಬೇಕಾಗುತ್ತದೆ. ಕಲಿಕಾ ಹಂತವನ್ನು ದಾಟಿ ವೃತ್ತಿ ಹಂತಕ್ಕೆ ಕಾಲಿಟ್ಟಾಗ ಸಾಹಿತ್ಯವನ್ನು ನಿರಂತರವಾಗಿ ಸಂಗ್ರಹಿಸುತ್ತಾ ಅದನ್ನು ಕಲಿಯುತ್ತಾರೆ. ಅದಕ್ಕೆ ಸೂರನ್ನು ತಾವೇ ಕಂಡು ಕೊಳ್ಳುತ್ತಾರೆ. ವೃತ್ತಿ ಹಂತ ತಾಲೀಮಿನ ಬಗೆಗೆ ಮಹಿಳಾ ಹಾಡುಗಾರರು ಹೇಳಿಕೊಂಡಿದ್ದು ಹೀಗೆ.

“ಒಂದ ಸಲ ಹಾಡಕಿ ವಿದ್ಯಾದಾಗ ಬಿದ್ದೀವಿ ಅಂದ್ರ ಕಲಿಕಿಗಿ ಕೊನಿ ಅನ್ನೂದ ಇರಲ್ಲ. ಈ ವಿದ್ಯಾ ಹ್ಯಾಂಗದ ಅಂದ್ರ ಸಾಯು ತನಕ ನಮ್ಮನ್ನ ತನ್ನ ಗುಂಗಿನ್ಯಾಗ ಇಟ್ಟಕೊತೈತಿ. ಬ್ಯಾರೆ ಕಡೆ ಚಿತ್ತಾ ಹಾಯ್ಸಿಕೊಡುದಿಲ್ಲ. ದೇವದಾಸಿ ಮುತ್ತವ್ವ ಹೋಗಿ ಹಾಡಕಿ ಮುತ್ತವ್ವ ಅನಿಸಿಕೊಬೇಕಿದ್ರ ಸುಮ್ಮನ ಐತೇನು? ಇಡೀ ಜೀವನಾನ ಹಾಡಕಿ ತೇಯ್ದಿನಿ. ಅದು ನನಗ ಮರ್ಯಾದಿ ತಂದುಕೊಟ್ಟೈತಿ. ಈಗ ನನಗ ಮೂರ ಇಪ್ಪತ್ತರ ಮ್ಯಾಲ(ಅರವತ್ತು ವರ್ಷದ ಮೇಲೆ) ವಯಸ್ಸಾಗೈತಿ. ಈಗ್ಲೂ ಸಾಹಿತ್ಯಾ ತಂದು ಹಾಡಕಿ ಕಲಿತೇನಿ. ನಮ್ಮ ಕವಿಗಳು ಹೊಸಾ ಹೊಸಾ ಹಾಡು ಕಟ್ಟಿತಿರತಾರು. ಪ್ರತಿ ಸಲಾನು ಹೊಸಾ ಸವಾಲು ಎದುರಾಗ್ತದ. ಅದಕ್ಕ ಉತ್ತರಿಸಬೇಕಂದ್ರ ಕವಿ ಕಟ್ಟಿದ ಹೊಸಾ ಹಾಡು ಗೊತ್ತಿರಬೇಕಾಗೈತಿ. ಸೋಲಾಪುರದಾಗ ನಮ್ಮಜ್ಜಿ ಮನಿಯಾಗ ಬೆಳೆದು ದೊಡ್ಡವಳಾದೆ. ಅದಕ್ಕ ಮರಾಠಿ ಬರ್ತದ. ಲಿಪಿ ಮರಾಠಿ, ಸಾಹಿತ್ಯ ಕನ್ನಡದ್ದು. ನನ್ನ ಮೊಮ್ಮಕ್ಕಳು ಇಲ್ಲೆ ವಿಜಾಪುರದಾಗೆ ಓದ್ಯಾರು. ಅವರಿಗೆ ಕನ್ನಡಾ ಬರ್ತದ. ಕವಿಗಳಿಂದ ಹೊಸಾ ಸಾಹಿತ್ಯ ತಂದು ಮೊಮ್ಮಕ್ಕಳ ಕಡಿಯಿಂದ ಓದಿಸಿಕೊಂಡು ಅದನ್ನ ಮರಾಠಿ ಲಿಪಿಗಿ ತಂದ್ಕೊಂಡು ಹಾಡಕಿ ಕಲಿತಿರತೀನಿ. ನಮ್ಮ ಹಾಡಕಿ ಕ್ಷೇತ್ರ ಸಮುದ್ರ ಇದ್ಹಂಗ. ಎಷ್ಟ ಕಲಿತರೂ ನಮಗ ಅದು ನಿಂಗ ಏನೂ ಗೊತ್ತಿಲ್ಲ ಅಂತಿರದ .- ಶಿರಬೂರದ ಮುತ್ತವ್ವ

“ಗುರುಗೋಳು ಎಷ್ಟೇ ಕಲಿಸಿದ್ರೂ ಎಲ್ಲಾ ವಿದ್ಯಾ ಹೇಳಿ ಕೊಡೂದಿಲ್ಲ. ಸ್ವಲ್ಪ ತನ್ನ ಹತ್ರ ಇಟಕೊಂಡೇ ಕೊಡತಾರು. ನಮ್ಮ್ಯಾಗ ಬೇಕಾದಷ್ಟು ಪ್ರೀತಿ ಇರ್ಲಿ. ಪೂರ್ಣ ವಿದ್ಯಾ ಹೇಳಿಕೊಡಲ್ಲ. ಗುರು ನಮಗ ಕಲಿಯೋ ಹಸಿವು ಅನ್ನೋದು ಉಳಿಸಿ ಹೋಗ್ತಾನು. ಅದು ಎಂಥಾ ಹಸಿವು ಅಂದ್ರ ಉಸಿರು ಇರಾಗಂಟಾ ಕಲಿತರೂ ತಣಿಲಾರದಂಥಾ ಹಸಿವು. ಹದಿನೈದನೇ ವಯಸ್ಸಿಗೆ ಹಾಡಕಿ ಕ್ಷೇತ್ರಕ್ಕೆ ಬಂದ್ಯಾ. ಈಗ ನನಗ ಅರವತ್ತು ವರ್ಷ ವಯಸ್ಸು. ಅಂದ್ರ ಹಾಡಕಿ ಮಾಡಕ್ಹತ್ತಿ ನಲವತ್ತೈದು ವರ್ಷ ಆದ್ರೂ ಕಲಿಕಿ ನಿಂತಿಲ್ಲ. ಇವೊತ್ತಿಗೂ ದಿನಾ ರಾತ್ರಿ ಎರಡು ಮೂರು ತಾಸು ರಂಗ ತಾಲೀಮು ಮಾಡ್ತೀನಿ. ಕಲ್ತ ಸಾಹಿತ್ಯ ನೆನಪ ಉಳಿಬೇಕಲ್ಲ. ಹಾಡಕೋಂತ ಇದ್ರ ಸರಸೋತಿ ನಮ್ಮ ಸಂಗಾಟ ಇರ್ತಾಳ. ಇಲ್ಲಾ ಹಾಡಕಿ ಬಂದಾಗಷ್ಟ ಹಾಡ್ತಿವಿ ಅಂತರಂದ್ರ ಸರಸ್ವತಿ ನಮ್ಮನ್ನ ಒದ್ದು ಕೂಳಾ ನೀರಾ ಇಲ್ಲದ್ದ ಜಾಗಾಕ ಕೆಡವುತಾಳು. ನಮ್ಮ ಸಂಗಾಟ ಆಕಿ ಇರಬೇಕಂದ್ರ ನಾವು ಆಕಿ ಧ್ಯಾನದಾಗ ಇರಬೇಕು. ನಾವು ಸರಸ್ವತಿ ನಿತ್ಯ ಧ್ಯಾನಾ ಮಾಡೋರು. ನಮ್ಮದು ಬಾಳ ಪವಿತ್ರವಾದ ಕೆಲ್ಸ. – ಬಬಲೇಶ್ವರದ ಬಂಗಾರವ್ವ

“ಮೂವತ್ತು ಸಖಿ, ಮೂವತ್ತು ಪಟ್ಟೆ, ಮೂವತ್ತು ಖ್ಯಾಲಿ ನಮಗ ಹೇಳಾಕ ಬಂದ್ರ ಪಂಡಿತ ಅಂತ ಅಂತಾರು. ಇಪ್ಪತ್ತು ಹಗಲಾ, ಇಪ್ಪತ್ತು ರಾತ್ರಿ ಹಾಡಿದ್ದನ್ನ ಮತ್ತ ಹೇಳಲಾರದ ಹಾಡಾಕ ಬಂದ್ರ ಖರೇ ಶಾವಿರಕೈಕಿ ಅಂತಾರ; ಕಲಾವಂತಿ ಅಂತಾರ. ಇದಕ್ಕs ಜೀವನದ ಉದ್ದಕ್ಕೂ ತಪಾ ತಗೀಬೇಕು. ಹಾಡಕಿಗಿ ಹೋದಾಗೊಮ್ಮೆ ಹೊಸಾ ಸವಾಲ್ ಎದುರಾಗುತಾವು. ಸವಾಲ್ಗೆ ಉತ್ತರಾ ಹುಡಕೊಂಡು ಕವಿಗಳ ಹತ್ರ ಹೋಗಿ ಉತ್ತರಾ ಹಾಡಿನ ರೂಪದಾಗ ಬರಸ್ಕೊಂಡು ಹೊಸಾ ಸವಾಲ್ ಕಲಕೊಂಡು ಬರತೇವಿ. ಒಂದ ಸಲ ಕಲ್ತದ್ದನ್ನ ಇಟಕೊಂಡು ನಾವು ಹಾಡಕಿ ಮಾಡ್ತೀವಿ ಅಂದ್ರ ಆಗಲ್ಲ. ಹಂಗ ಮಾಡಿದ್ರ ಮುಖಕ್ಕೆ ಮಸಿ ಹಚ್ಚಿಸಿಕೊಂಡು ಖಾಯಮಾಗಿ ಮನಿಯಾಗ ಕೂಡಬೇಕಾಗತೈತಿ. – ಜನವಾಡದ ಬುದ್ದವ್ವ

ಮೇಲೆ ವಿವರಿಸಿದ ವ್ಯಕ್ತೃಗಳ ಹೇಳಿಕೆಗಳನ್ನು ಆಧರಿಸಿ ಹೇಳುವುದಾದರೆ ಕಲಾ ಬದುಕು ಕಲಿಕೆಯಿಂದ ಪ್ರಾರಂಭವಾಗಿ ರಂಗ ತಾಲೀಮಿಗೆ ವಿಸ್ತರಿಸಿಕೊಳ್ಳುತ್ತದೆ. ಹರದೇಶಿ-ನಾಗೇಶಿ ಹಾಡುಗಳನ್ನು ಒಂದು ರಾತ್ರಿ, ಒಂದು ಹಗಲು ಹಾಡಲು ಬರುವಷ್ಟು ಸಾಹಿತ್ಯವನ್ನು ಕಲಿಯಲು ಮೂರು ತಿಂಗಳ ಅವಧಿಯನ್ನು ಕೆಲವರು ತೆಗೆದುಕೊಂಡರೆ, ಮತ್ತೆ ಕೆಲವರು ಆರು ತಿಂಗಳ ಅವಧಿ ತೆಗೆದುಕೊಳ್ಳುವರು. ಈ ವಿದ್ಯೆಯಲ್ಲಿ ಹೆಚ್ಚು ಹೆಚ್ಚು ಪಾಂಡಿತ್ಯ ಪಡೆಯಲು ಬೇರೆ ಬೇರೆ ಗುರುಗಳಿಂದ ಜ್ಞಾನವನ್ನು ಸಂಗ್ರಹಿಸುತ್ತಿರುತ್ತಾರೆ. ಅವರ ಒಟ್ಟು ಬದುಕಿನ ಅವಧಿ ಹಾಡಿಕೆ ವಿದ್ಯೆಯನ್ನು ಪಡೆಯುವ ಹಾಗೂ ಬೆಳೆಸುವ ಪಡಿಪಾಟಲನ್ನೇ ಹೊಂದಿದೆ. ಅನ್ಯ ಸಂಗತಿಗಳಿಗೆ ಅವರಲ್ಲಿ ಅವಕಾಶವಾಗಲಿ, ವೇಳೆಯಾಗಲಿ ಇಲ್ಲ. ಅವರ ಇಡೀ ಬದುಕಿನ ಧ್ಯಾನ ಹಾಡಿನ ಕಲಿಕೆ ಹಾಗೂ ವಿದ್ಯಾ ಸಂಗ್ರಹ ಇವುಗಳಲ್ಲೇ ಕೇಂದ್ರಿತವಾಗಿರುತ್ತದೆ.

ಹರದೇಶಿ-ನಾಗೇಶಿ ಮಹಿಳಾ ಹಾಡುಗಾರರ ಪ್ರಕಾರ ಅವರಲ್ಲಿ ಕಲಿಕೆ ಎನ್ನುವುದು ತಣಿಯದ ಹಸಿವು. ಆ ಹಸಿವು ಅವರನ್ನು ಕಲಿಕೆಯಲ್ಲಿ ನಿರಂತರತೆಯನ್ನು ಕಾಯ್ದುಕೊಳ್ಳುವಂತೆ ಮಾಡುತ್ತದೆ. ಎಲ್ಲ ವೃತ್ತಿಗಳಲ್ಲಿರುವಂತೆ ಇವರ ವೃತ್ತಿಯಲ್ಲಿಯೂ ಸಾಧನೆ ಇರುತ್ತದೆ. ಮೂವತ್ತು ಸಖಿ, ಮೂವತ್ತು ಪಟ್ಟೆ, ಮೂವತ್ತು ಖ್ಯಾಲಿ[1] ಕಲಿಯಲು, ಕಲಿತದ್ದನ್ನು ಉಳಿಸಿಕೊಳ್ಳಲು ನಿರಂತರವಾಗಿ ರಂಗ ತಾಲೀಮಿನಲ್ಲಿಯೇ ಇರುತ್ತಾರೆ. ಹೆಚ್ಚು ಹಾಡುಗಳನ್ನು ಕಲಿತರೆ ಪಂಡಿತ ಎಂದು ಗುರುತಿಸಲಾಗುತ್ತದೆ. ಜ್ಞಾನವು ಪುರುಷ ಕೇಂದ್ರಿತವಾಗಿಯೇ ಗುರುತಿಸಲ್ಪಟ್ಟಿದ್ದರಿಂದ ಹಾಡಿಕೆಯಲ್ಲಿ ಸಾಧನೆಯ ಶಿಖರಕ್ಕೇರಿದವರನ್ನು ‘ಪಂಡಿತ’ ಎಂದೇ ಗುರುತಿಸಲ್ಪಡುತ್ತಾರೆ. ‘ಶಾಹಿರ್’[2] ಎಂದೇ ಗುರುತಿಸುತ್ತಾರೆ. ‘ಶಾಹಿರ್’ ಕೂಡ ಪಂಡಿತ ಎನ್ನುವ ಅರ್ಥವನ್ನು ಕೊಡುತ್ತದೆ. ಈ ಬಗೆಯ ಗುರುತಿಸುವಿಕೆಗಾಗಿ ಎಲ್ಲ ಕಲಾವಿದರು ಹಪಾ ಹಪಿಸುತ್ತಿರುತ್ತಾರೆ. ಅದಕ್ಕಾಗಿ ನಿರಂತರ ರಂಗ ತಾಲೀಮಿನಲ್ಲಿ ತೊಡಗಿಕೊಂಡಿರುತ್ತಾರೆ. ‘ಶಾಹಿರ್’ ಎಂದು ಗುರುತಿಸಿಕೊಂಡ ಕಲಾವಿದೆಯರ ಬಗ್ಗೆ ಉಳಿದ ಕಲಾವಿದೆಯರಲ್ಲಿ ಬೆರಗಿದೆ. ಈ ಕ್ಷೇತ್ರದಲ್ಲಿ ಸಾಧನೆಯ ಹಾದಿಯಲ್ಲಿರುವ ಮಹಿಳೆಯರಿಗೆ ಸಾಧನೆಯ ಉತ್ತುಂಗಕ್ಕೇರಿದವರು ಮಾದರಿಯಾಗಿರುತ್ತಾರೆ.

ಜೊತೆಗಾರನ ಆಯ್ಕೆ

ಶಿರಬೂರದ ಮುತ್ತವ್ವ, ಒಬಲೇಶ್ವರದ ಬಂಗಾರವ್ವ ಹಾಗೂ ಜನವಾಡ ಬುದ್ಧವ್ವನ ಹಾಗೆ ಎಲ್ಲ ಹರದೇಶಿ-ನಾಗೇಶಿ ಮಹಿಳಾ ಹಾಡುಗಾರರು ವೃತ್ತಿ ಹಂತದಲ್ಲಿರಬೇಕಾದರೆ ರಂಗ ತಾಲೀಮಿನ ಕುರಿತು ಬೆಳೆಸಿಕೊಳ್ಳಬೇಕಾದ ನಿಷ್ಠೆಯನ್ನೇ ಒತ್ತಿ ಹೇಳಿದರು. ಹರದೇಶಿ-ನಾಗೇಶಿ ಮಹಿಳಾ ಹಾಡುಗಾರರೆಲ್ಲರೂ ತಮ್ಮ ಜೀವನದ ಬಹುತೇಕ ಅವಧಿಯನ್ನು ರಂಗ ತಾಲೀಮಿನಲ್ಲಿಯೇ ಕಳೆಯುವರು. ಈ ಹಾಡುಗಾರರನ್ನು ಸಮಾಜದವರು ‘ದೇವದಾಸಿ’ಯೆಂದೇ ಗುರುತಿಸುತ್ತದೆ. ಆದರೆ ವಸ್ತುಸ್ಥಿತಿ ಹಾಗಿರುವುದಿಲ್ಲ. ಇವರು ಲೈಂಗಿಕ ಸಂಬಂಧವನ್ನು ಮಕ್ಕಳನ್ನು ಪಡೆಯುವುದಕ್ಕಾಗಿ ಮಾತ್ರ ಹೊಂದಿರುತ್ತಾರೆ. ಲೈಂಗಿಕ ಸಂಬಂಧ ಇವರ ಪ್ರಧಾನ ಅಪೇಯಾಗಿರುವುದಿಲ್ಲ. ಕೇವಲ ಮಕ್ಕಳನ್ನು ಪಡೆಯುವುದಕ್ಕಾಗಿ ಪುರುಷರೊಂದಿಗೆ ಸಂಬಂಧವನ್ನು ಹೊಂದುತ್ತಾರೆಯೇ ಹೊರತು ದೈಹಿಕ ಕಾಮನೆಯಿಂದಲ್ಲ.

“ತಂಗಿs ರಂಗ ತಾಲೀಮಿಗೆ ವ್ಯಾಳಾ ಸಿಗಲ್ಲ. ಹಾಡ ಬಿಟ್ಟರ ತಲ್ಯಾಗ ಮತ್ತೇನು ಯೋಚನಿನs ಬರಂಗಿಲ್ಲ. ವಯಸ್ಸಿನ್ಯಾಗ ಬಾಳ ಚಲುವಿ ನಾನು. ಊರ ಗೌಡಾ ಇಟಗೋತೀನಿ ಅಂತ ಬಂದಾ. ನಾನs ಉಡಿ ತುಂಬತೇನಿ ಅಂದಾ. ಆದ್ರ ನಾನು ಒಪ್ಪಲಿಲ್ಲ. ರೊಕ್ಕಾ ಇರೋವರು ತಮ್ಮ ಹೆಂಡ್ತಿನ ಹ್ಯಾಂಗ ಮನಿಯ್ಯಾಗ ಕೂಡಿ ಹಾಕಿರ‍್ತಾರು. ಹಂಗs ನಮ್ಮನ್ನೂ ಕೂಡ ಹಾಕತಾರು. ಹೊರಗಿನ ಬೆಳಕs ನೋಡಗೊಡಂಗಿಲ್ಲ. ಕಷ್ಟಾಪಟ್ಟು ಹಗಲು ರಾತ್ರಿ ಅನ್ನದ ಹಾಡಕಿ ಕಲ್ತೇನು. ಆ ಹಾಡಕಿ ಉಳಿಯಾಕ ಹಗಲು ರಾತ್ರಿ ರಂಗತಾಲೀಮು ಮಾಡಬೇಕಾಗ್ತದ. ಊರೂರಿಗೆ ಶಾವರಿಕಿಗೆ ಹೋಗಬೇಕಾಗ್ತದೆ. ಅದಕ್ಕೆಲ್ಲಾ ರೊಕ್ಕ ಇದ್ದವ್ರು ಬಿಡಾಂಗಿಲ್ಲ. ಅದಕ್ಕs ನಮ್ಮಂಥಾ ಕಲಾಕಾರರು ಬಡವರೊಂದಿಗೆ ಸಂಬಂಧಾ ಹೊಂದತೇವು. ಇಲ್ಲಾ ಹರದೇಶಿ-ನಾಗೇಶಿ ಹಾಡಕಿ ಮಾಡುವವನ ಜೊತಿಗೆ ಇಲ್ಲಾ ಸೂರ ಹಾಕುವನ ಜೊತಿ ಇರ‍್ತೀವಿ. ಹಂಗಂದ್ರ ನಮ್ಮ ವಿದ್ಯಾ ಬೆಳಿತದ. ರೊಕ್ಕ ಇದ್ದವರೊಂದಿಗೆ ಸಂಬಂಧ ಇಟಕೊಂಡ್ರ ಅವ್ರು ಕರದಾಗ ಬರಬೇಕಂತಾರ” ಎಂದು ತಿಗಣಿಬಿದರಿಯ ಯಮನವ್ವ ಹೇಳಿದರೆ, ಬಬಲೇಶ್ವರದ ಬಂಗಾರವ್ವನು” ಈ ವಯಸ್ಸಿನ್ಯಾಗ ನನ್ನ ಮೈ ಬಣ್ಣಾ ರೂಪಾ ಹಿಂಗೈತಿ ಅಂದ್ರ ವಯಸ್ಸಿನ್ಯಾಗ ಹ್ಯಾಂಗ ಇರಬೇಕೆಂತ ನೀವ ತಿಳಕೊಳ್ಳಿರಿ. ಇದ್ದುಳ್ಳವರು ನಾ ಉಡಿ ತುಂಬಿ ಆಕಿನ ಖಾಯಮಾಗಿ ಇಟಗೋತೇನಿ, ಆಕಿಗಿ ಮನಿ ಕಟ್ಟಿಸಿಕೊಡತೇನು, ಹೊಲಾ ಕೊಡತೇನು, ಮೈಮ್ಯಾಲ ಬಂಗಾರು ಹಾಕತೇನು, ರಾಣಿ ಹಂಗ ನೋಡ್ಕೊತೇನು ಅಂತ ನಮ್ಮಜ್ಜಿನ ದುಂಬಾಲು ಬಿದ್ದಿದ್ರು. ಅದಕ್ಕ ನಮ್ಮಜ್ಜಿನೂ ಒಪ್ಪಲ್ಲಿಲ್ಲ. ನಾನೂ ಒಪ್ಪಲಿಲ್ಲ. ನಮ್ಮಾವ ರಾಮ ನನ್ನ ಹಿಂದ ಸೂರು ಹಾಕೊಂಡು ಬರ್ತಿದ್ದ. ಅವನ ಜೋತೇನ ಇದ್ದೇನಿ. ಅವ್ನೂ ಮದ್ವಿ ಆಗಿಲ್ಲ. ಗಂಡಾ-ಹೆಂಡತಿಯಂಗ ಬಾಳ್ತಾ ಇದ್ದೀವಿ. ನಾವು ಕಲಾದಾಗ ಮುಂದವರಿಬೇಕಂದ್ರ ಕಲಾಕಾರರ ಜೋಡಿ ಇದ್ದ್ರ ಅನುಕೂಲ ಆಗ್ತದ. ಮಕ್ಕಳ ಹುಟ್ಟಾಕಂತ ಸಂಬಂಧ ಹೊಂದತೇವು. ಕಾಮಕ್ಕಾಗಿಯೇ ಅಂತ ಸಂಬಂಧ ಇಟಕೊಳ್ಳಲ್ಲ ನಾವು. ನಮ್ಮ ತಾಕ ಸರಸ್ವತಿ ಉಳಿಬೇಕಂದ್ರ ನಾವು ಅಕಿ ಬಲ್ಲ್ಯೆ ಕೂಡಬೇಕಾಗ್ತೈತಿ. ಗಂಡಸರ ಬಲ್ಲಿ ಅಲ್ಲ” ಎಂದು ಹೇಳಿದಳು. ಇದೇ ಅಭಿಪ್ರಾಯವನ್ನು ಹರದೇಶಿ-ನಾಗೇಶಿ ಕಲಾವಿದೆಯರೆಲ್ಲರೂ ಅಭಿವ್ಯಕ್ತಿಸಿದರು. ಅವರಲ್ಲಿ ಹರದೇಶಿ ಇಲ್ಲವೆ ನಾಗೇಶಿ ಹಾಡುಗಾರಿಕೆಯಲ್ಲಿ ಬೆಳೆಯುವ ಹಂಬಲ, ಸಾಧಿಸುವ ಛಲವಿತ್ತು.

ಸವಾಲ್-ಜವಾಬ್ ಹೇಳುವ ಈ ಹಾಡುಗಾರಿಕೆ ಪ್ರತಿ ಪ್ರದರ್ಶನವೂ ಸವಾಲಾಗಿಯೇ ಇರುತ್ತದೆ. ಎದುರು ಹಾಡುಗಾರರಿರಬಹುದು, ಇಲ್ಲವೆ ಪ್ರೇಕ್ಷಕರಲ್ಲಿಬಹುದು- ಇವರಿಬ್ಬರೂ ಯಾವ ರೀತಿಯ ಸವಾಲ್ ಹಾಕುತ್ತಾರೆ ಎನ್ನುವುದು ಊಹಿಸಲಿಕ್ಕಾಗುವುದಿಲ್ಲ. ಹೀಗಾಗಿ ಹಾಡುವ ಪ್ರತಿ ಸಂದರ್ಭವೂ ಸವಾಲ್ ಆಗಿರುತ್ತದೆ. ಅವರ ಈ ಹಾಡುಗಾರಿಕೆಯ ವೃತ್ತಿ ಸಂರಚನೆಯೇ ಸವಾಲ್‌ನಿಂದ ಕೂಡಿದ್ದಾಗಿರುತ್ತದೆ. ಎದುರು ಹಾಡುಗಾರರು ಹೇಗೆ ಸವಾಲ್ ಹಾಕುತ್ತಾರೆ ಹಾಗೂ ಪ್ರೇಕ್ಷಕರು ಏನು ಸವಾಲ್ ಹಾಕಬಹುದು ಎನ್ನುವ ಆತಂಕ ಹಾಗೂ ಕುತೂಹಲಗಳು ಈ ಹಾಡುಗಾರರನ್ನು ನಿರಂತರ ಕಲಿಕಾ ಹಂತದಲ್ಲಿಯೇ ಇಟ್ಟಿರುತ್ತದೆ.

ಹರದೇಶಿ-ನಾಗೇಶಿ ಮಹಿಳಾ ಹಾಡುಗಾರರು ತಮ್ಮ ಜೊತೆಗಾರರನ್ನು ಎಚ್ಚರಿಕೆಯಿಂದಲೇ ಆಯ್ದುಕೊಳ್ಳುತ್ತಾರೆ. ‘ದೇವದಾಸಿ’ಯರನ್ನು ಸಮಾಜ ‘ಸೂಳೆಯರು’ ಎಂದು ಹೀಗಳೆಯುತ್ತ ಅವರು ‘ಹಣದ ಹಿಂದೆ ಬಿದ್ದವರು’, ‘ವಂಚಕರು’, ‘ದುರಾಸೆ ಉಳ್ಳವರು’, ‘ಮನೆ ಮುರುಕರು’ ಎಂದು ನಿರ್ವಚಿಸುತ್ತದೆ.. ಹರದೇಶಿ-ನಾಗೇಶಿ ಮಹಿಳಾ ಹಾಡುಗಾರರು ‘ಜೋಗತಿ’ ಹಾಗೂ ‘ಬಸವಿ’ಯರಾದ ಕಾರಣ, ಊರಿನಲ್ಲಿರುವ ಪ್ರಮುಖರು, ಹಣವಿದ್ದವರು ತಾವೆ ಉಡಿ ತುಂಬಿ (ಮೊದಲ ರಾತ್ರಿ) ಅವಳೊಂದಿಗೆ ಕೊನೆಯತನಕ ಇರುವುದಾಗಿ ಭರವಸೆ ನೀಡಿದರೂ, ಈ ಹಾಡುಗಾರರು ಹಣವಂತ ಪುರುಷರೊಂದಿಗೆ ಸಂಬಂಧ ಹೊಂದುವುದನ್ನು ನಿರಾಕರಿಸುತ್ತಾರೆ. ಚಲನವಲನದ ಸ್ವಾತಂತ್ರ್ಯ ಹಾಗೂ ವೃತ್ತಿ ಆಯ್ಕೆ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಲು ಹಣವಂತ ಪುರುಷರೊಂದಿಗೆ ಸಂಬಂಧ ಹೊಂದಲು ನಿರಾಕರಿಸುತ್ತಾರೆ. ಊರೊಳಗಿನ ಉತ್ತಮ ಜಾತಿಯವರು ಎಂದು ಹೇಳಿಕೊಳ್ಳುವ ಹಣವಂತ ಪುರುಷರ ಮನೋಸ್ಥಿತಿಯನ್ನು ಊರಾಚೆ ಇರುವ ಹಾಡಿಕೆ ಮಹಿಳೆಯರು ಚೆನ್ನಾಗಿಯೇ ಅರ್ಥಮಾಡಿಕೊಂಡಿದ್ದಾರೆ. ಹಣವಂತ ಪುರುಷರು ತಮ್ಮ ಹೆಂಡಂದಿರನ್ನು ನಡೆಸಿಕೊಳ್ಳುವ ರೀತಿ ಒಟ್ಟು ಮಹಿಳೆಯರ ಬಗೆಗೆ ಹೊಂದಿದ ಮನೋಸ್ಥಿತಿಯನ್ನೇ ರೂಪಿಸುತ್ತದೆ.

ಹಾಡಿಕೆ ಮಹಿಳೆಯರು ಹಣವಂತ ಪುರುಷರನ್ನು ಮಹಿಳಾ ಹಕ್ಕುಗಳನ್ನು ಹಾಗೂ ಆಯ್ಕೆಗಳನ್ನು ಕಿತ್ತುಕೊಳ್ಳುವವರು, ಹೆಣ್ಣನ್ನು ಲೈಂಗಿಕ ನೆಲೆಯಲ್ಲಿಯೇ ಪರಿಭಾವಿಸುವವರು ಎಂದು ಅರ್ಥೈಸಿಕೊಂಡಿದ್ದಾರೆ. ಹಣವಿಲ್ಲದ ಪುರುಷರು ಇಲ್ಲವೆ ತಮ್ಮದೇ ವೃತ್ತಿಯಲ್ಲಿ ತೊಡಗಿಕೊಂಡಿರುವ ಪುರುಷರನ್ನು ಮಹಿಳಾ ಹಕ್ಕು ಹಾಗೂ ಆಯ್ಕೆಗಳನ್ನು ಗೌರವಿಸುವವರು ಹಾಗೂ ಕಲೆಯನ್ನು ಗೌರವಿಸುವವರು ಎಂದು ಅರ್ಥೈಸಿಕೊಂಡಿದ್ದಾರೆ. ಹೀಗಾಗಿ ಅವರು ಲೈಂಗಿಕ ಸಂಬಂಧವನ್ನು ಹಣವಿಲ್ಲದ ಪುರುಷನೊಂದಿಗೆ ಇಟ್ಟುಕೊಳ್ಳುತ್ತಾರೆ. ಶಾಶ್ವತವಾಗಿ ಒಬ್ಬ ಪುರುಷನೊಂದಿಗೆ ಮಾತ್ರ ಲೈಂಗಿಕ ಸಂಬಂಧ ಹೊಂದುತ್ತಾರೆ. “ಗಂಡಸರು ಮೊದಲ ತಮ್ಮದs ನಡೀಬೇಕು ಅಂತಿರತಾರ. ಅಂಥಾ ಗಂಡಸರಿಗಿ ಜಾತಿ ಬಲಾ, ಹಣದ ಬಲಾ ಇತ್ತಂದ್ರ ಮುಗೀತು. ಅವ್ರು ನಮ್ಮನ್ನ ಸಾಕಿದ ಮಂಗ್ಯಾನಂಗ ಆಟಾ ಆಡಿಸ್ತಾರ. ಇಂಥವರ ಜೋಡಿ ಸಂಬಂಧ ಇಟಕೊಂಡರ ನಾವು ಖರೇನ ಸೂಳೇರ ಆಗಬೇಕಾಗ್ತದ. ಮೂರ ಹೊತ್ತು ಇವ್ರ ಮಗ್ಗಲಾಗ ಮಲಗಬೇಕಾಗ್ತೈತಿ. ಥೂ, ಅದೆಂಥಾ ಜೀವನಾ? ನಾವು ಸರಸ್ವತಿ ಹೆಸರ್ನ್ಯಾಗ ಅನ್ನಾ ತಿಂತೇವಿ. ನಾವು ಸರಸ್ವತಿ ಹತ್ರ ಇರೋ ಸ್ವಾತಂತ್ರ್ಯಾ ಉಳಿಸ್ಕೋಳ್ಳಾಕ ಬಡವನೊಂದಿಗೆ ಸಂಬಂಧ ಇಟ್ಕೋತಿವಿ. ಮಕ್ಕಳು ಮರಿ ಬೇಕಲ್ಲಾ?” ಎನ್ನುವ ಕಂಬಾಗಿ ಹನುಮವ್ವನ ಮಾತುಗಳನ್ನು ಗಮನಿಸಬೇಕು. ಹಾಡಿಕೆ ಮಹಿಳೆಯರು ಲೈಂಗಿಕತೆಯನ್ನು ಪ್ರಧಾನವಾಗಿ ಪರಿಗಣಿಸದೇ ಇರುವುದನ್ನು ನಿರೂಪಿಸುತ್ತವೆ. ಹಣ ಬಲ, ಜಾತಿ ಬಲ ಹಾಗೂ ಪುರುಷ ಬಲ-ಈ ಮೂರನ್ನೂ ತಮ್ಮ ಕಲಾ ಸಾಧನೆಗೆ ತಡೆಗೋಡೆಗಳೇ ಎಂದು ಈ ಮಹಿಳಾ ಹಾಡುಗಾರರು ಪರಿಭಾವಿಸುತ್ತಾರೆ. ಪುರುಷರನ್ನು, ಅದರಲ್ಲೂ ಹಣವಂತ ಪುರುಷರನ್ನು ‘ಮನಸ್ಸನ್ನು ಅಸ್ಥಿರಗೊಳಿಸುವ ಶಕ್ತಿ’ಗಳೆಂದು ಪರಿಭಾವಿಸುವುದಿಲ್ಲ. ಧ್ಯಾನ ಹೆಣ್ಣಿನ ಶಕ್ತಿಕೇಂದ್ರವಾದರೆ, ಚಂಚಲತೆ ಗಂಡಿನ ಅಶಕ್ತ ಸ್ಥಿತಿಯಾಗಿದೆ. ಅದಕ್ಕಾಗಿಯೇ ಚಂಚಲತೆಯಿಂದ ಧ್ಯಾನದೆಡೆಗೆ ಸಾಗಲು ಪುರುಷನು ತನ್ನ ಚಂಚಲತೆಗೆ ಕಾರಣಗಳನ್ನು ಹೆಣ್ಣು-ಹೊನ್ನು-ಮಣ್ಣೆಂದು ಗುರುತಿಸಿಕೊಳ್ಳುತ್ತಾನೆ. ಪುರುಷನು ಹೆಣ್ಣು-ಹೊನ್ನು-ಮಣ್ಣು ನಿರಾಕರಣೆಯ ಸಿದ್ಧಾಂತವೇ ಅವನ ಚಿತ್ತ ಎಂತಹ ವಿಷಯಗಳ ಸುತ್ತ ಗಿರಕಿ ಹೊಡೆಯುತ್ತಿರುತ್ತದೆ ಎನ್ನುವುದನ್ನು ನಿರೂಪಿಸುತ್ತದೆ. ಸಾಧನೆಯ ಹಾದಿ ಹಿಡಿಯಲು ಚಿತ್ತ ಚಂಚಲತೆಯ ಕಾರಣಗಳನ್ನು ಮೀರುವ ಪ್ರಮೇಯವೇ ಆಕೆಗೆ ಬರುವುದಿಲ್ಲ. ಯಾಕೆಂದರೆ ಅವಳೇ ಧ್ಯಾನ ಕೇಂದ್ರ, ಸರಸ್ವತಿ. ಧ್ಯಾನ ಕೇಂದ್ರವನ್ನು ನಿರಾಕರಿಸಿ ದೇಹ ಮೂಲದಿಂದ ನೋಡುವ ಉಪಭೋಗ ಸಂಸ್ಕೃತಿಯನ್ನೇ ಆಕೆ ತಿರಸ್ಕರಿಸುತ್ತಾಳೆ. ಇದಕ್ಕೆ ಕಾರಣರಾದ ಜಾತಿ-ಹಣ ಎರಡೂ ಸಮೀಕರಣಗೊಂಡ ಪುರುಷರನ್ನು ನಿರಾಕರಿಸುತ್ತಾಳೆ. ಹಾಡಿಕೆ ಮಹಿಳೆಯರು ತಮ್ಮನ್ನು, ಮಕ್ಕಳನ್ನು ಹೆರುವ ಯಂತ್ರವಾಗಿ ಗುರುತಿಸಿಕೊಳ್ಳಲು ಇಚ್ಚಿಸುವುದಿಲ್ಲ; ಭೋಗಕ್ಕೆ ಮಾತ್ರ ಯೋಗ್ಯವಾದವಳು ಎಂದು ಪರಿಗಣಿತವಾಗುವುದನ್ನು ವಿರೋಧಿಸುತ್ತಾರೆ. ಜ್ಞಾನ ನೆಲೆಯಲ್ಲಿಯೇ ಗುರುತಿಸಿಕೊಳ್ಳ ಬಯಸುವ ಇವರು ಪುರುಷರನ್ನು ಮಕ್ಕಳ ಹುಟ್ಟುವಿಕೆ ಪರಿಕರವಾಗಿ ಪರಿಗಣಿಸಿ ಆ ನೆಲೆಯಲ್ಲಿಯೇ ಅವರೊಂದಿಗೆ ಸಂಬಂಧ ಹೊಂದುತ್ತಾರೆ. ತಮ್ಮ ಧ್ಯೇಯ ಧೋರಣೆಗಳಿಗೆ ಅಡ್ಡಿ ಪಡಿಸದ, ತಮ್ಮನ್ನು ಗೌರವಿಸುವ, ಬಡತನದಲ್ಲಿರುವ ಪುರುಷನನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.

ಹಾಡಿಕೆ ಪುರುಷರಿಗೆ ಕಲಾ ಸಾಧನೆಯ ಹಸಿವು ಇರುವುದರಿಂದ ಅವರು ಈ ಮಹಿಳಾ ಹಾಡುಗಾರರ ರಂಗ ತಾಲೀಮಿಗಿರುವ ಸ್ಥಳ ಮತ್ತು ವೇಳೆ ಎರಡನ್ನೂ ಗೌರವಿಸುತ್ತಾರೆ. ಹೀಗಾಗಿ ಹರದೇಶಿ-ನಾಗೇಶಿ ಮಹಿಳಾ ಹಾಡುಗಾರರು ತಾಳ ಬಾರಿಸುವ ಇಲ್ಲವೆ ಸೂರು ಹಾಕುವ ಕಲಾಕಾರನೊಂದಿಗೆ ಸಂಬಂಧವಿಟ್ಟುಕೊಂಡಿರುತ್ತಾರೆ. ಮಹಿಳೆ ನಾಗೇಶಿ ಪಂಥಧ ಹಾಡುಗಳನ್ನು ಹೇಳುತ್ತಿದ್ದು, ಅವಳೊಟ್ಟಿಗೆ ಲೈಂಗಿಕ ಸಂಬಂಧ ಹೊಂದಿದ ಪುರುಷನು ಹರದೇಶಿ ಹಾಡುತ್ತಿದ್ದರೆ ಅಥವಾ ಮಹಿಳೆ ಹರದೇಶಿ ಪಂಥಧ ಹಾಡುಗಳನ್ನು ಹೇಳುತ್ತಿದ್ದು, ಅವಳೊಂದಿಗೆ ಸಂಬಂಧವಿಟ್ಟುಕೊಂಡವನು ನಾಗೇಶಿ ಹಾಡುಗಳನ್ನು ಹಾಡುತ್ತಿದ್ದರೆ, ಇಬ್ಬರೂ ಒಟ್ಟಿಗೆ ಒಂದೇ ಊರಿಗೆ ಹಾಡಿಕೆಗೆ ಹೋಗುತ್ತಾರೆ.

ವೃತ್ತಿ ನಿರಂತರತೆ: ವ್ಯವಹಾರ ಕುಶಲತೆ

ಹರದೇಶಿ-ನಾಗೇಶಿ ಹಾಡುಗಳನ್ನು ಹಾಡುವುದು ಒಂದು ವೃತ್ತಿಯಾಗಿ ಪರಿಗಣಿಸಲ್ಪಟ್ಟಿದ್ದರಿಂದ ಈ ವೃತ್ತಿಯಲ್ಲಿ ಸಾಧಕಿ ಎಂದು ಗುರುತಿಸಿಕೊಳ್ಳಲು ರಂಗ ತಾಲೀಮಿನೊಂದಿಗೆ ಜನ ಸಂಪರ್ಕವೂ ಇರಬೇಕಾಗುತ್ತದೆ. ಯಾಕೆಂದರೆ ಕಲಿತ ವಿದ್ಯೆ ಪ್ರದರ್ಶನಗೊಳ್ಳಲೇಬೇಕು. ಪ್ರದರ್ಶನಗೊಳ್ಳಲು ವೇದಿಕೆ ಬೇಕು. ವೇದಿಕೆ ಸಿಗಲು ಜನ ಸಂಪರ್ಕ ಬೇಕು. ಈ ಹಾಡುಗಾರರಲ್ಲಿಯೂ ಜನಸಂಪರ್ಕ ಪುರುಷನಿಗೆ ಸಾಧ್ಯವಾದಷ್ಟು ಸುಲಭವಾಗಿ ಮಹಿಳೆಗೆ ಸಾಧ್ಯವಾಗುವುದಿಲ್ಲ ಎನ್ನುವ ನಂಬಿಕೆಯಿದೆ. ಬೇರೆ ಬೇರೆ ಊರುಗಳಿಗೆ ಹಾಡಿಕೆಗೆ ಹೋಗಲು ಆಹ್ವಾನ ಪಡೆಯುವುದನ್ನು ‘ವೀಳ್ಯ ಹಿಡಿಯುವುದು’ ಎಂದು ಇವರು ಕರೆಯುತ್ತಾರೆ. ‘ವೀಳ್ಯೆ ಹಿಡಿಯುವುದು’, ‘ವೀಳ್ಯೆ ಪಡೆಯುವುದು’ ಈ ಎರಡೂ ಪದಗಳು ಹರದೇಶಿ- ನಾಗೇಶಿ ಹಾಡುಗಾರರಲ್ಲಿ ಬಳಕೆಗೊಳ್ಳುತ್ತಿದ್ದು, ಅವೆರಡೂ ಭಿನ್ನ ಭಿನ್ನ ಸಂದರ್ಭಗಳಲ್ಲಿ ಹೇಳಲ್ಪಡುತ್ತವೆ. ಹರದೇಶಿ-ನಾಗೇಶಿ ಹಾಡುಗಾರರನ್ನು ಊರಿನವರೇ ಆಹ್ವಾನಿಸಿದರೆ ಅದಕ್ಕೆ ‘ವೀಳ್ಯೆ ಪಡೆಯುವುದು’ ಎನ್ನಲಾಗುತ್ತದೆ. ಕಾಲೆಂಡರ್‌ನ ಮೂಲಕ ಆಯಾ ಊರುಗಳ ಜಾತ್ರೆಗಳನ್ನು ಗುರುತಿಸಿಕೊಂಡು ಊರ ಮುಖಂಡರನ್ನು ಫೋನ್ ಮೂಲಕ ಇಲ್ಲವೆ ಪತ್ರದ ಮೂಲಕ ಸಂಪರ್ಕಿಸಿ ಆಹ್ವಾನವನ್ನು ಪಡೆದುಕೊಳ್ಳುತ್ತಾರೆ. ಅದಕ್ಕೆ ‘ವೀಳ್ಯ ಹಿಡಿಯುವುದು’ ಎನ್ನುತ್ತಾರೆ. ಹಾಡಿಕೆ ಕ್ಷೇತ್ರದಲ್ಲಿ ‘ವೀಳ್ಯ ಪಡೆಯುವ’ ಸಂದರ್ಭಕ್ಕಿಂತ ‘ವೀಳ್ಯ ಹಿಡಿಯುವ’ ಅನಿವಾರ್ಯತೆ ಹೆಚ್ಚಾಗಿವೆ. ತಮ್ಮ ವೃತ್ತಿಯಲ್ಲಿ ನಿರಂತರತೆಯನ್ನು ಕಾಯ್ದುಕೊಳ್ಳಲು ಹಾಗೂ ಹಣ ಸಂಪಾದಿಸಲು ವೀಳ್ಯ ಹಿಡಿಯಲೇ ಬೇಕಾಗುತ್ತದೆ. ಇದಕ್ಕೆ ಜನ ಸಂಪರ್ಕ ಬೇಕಾಗುತ್ತದೆ. ಗೀಗೀ ಮೇಳಗಳನ್ನು ಜಾತ್ರೆಗಳಲ್ಲಿ ಊರ ಮುಖಂಡರೇ ಆಹ್ವಾನಿಸುತ್ತಾರೆ. ಹಣ ಹಾಗೂ ಜಾತಿ ನೆಲೆಗಳಲ್ಲಿ ಸಮೀಕರಣಗೊಂಡ ಪುರುಷರನ್ನು ನಿರಾಕರಿಸುವ ಈ ಹಾಡುಗಾರ್ತಿಯರು ಹಾಡಿಕೆಗಾಗಿ ಮುಖಂಡರನ್ನು ಕಾಣುವುದಕ್ಕೆ ನಿರಾಕರಿಸುತ್ತಾರೆ. ಸಾಮಾಜಿಕವಾಗಿ ಪ್ರಬಲವಾಗಿದ್ದ ಪುರುಷರೇ ಇಂತಹ ಕಾರ್ಯಕ್ರಮಗಳನ್ನು ನಡೆಸಿಕೊಂಡು ಹೋಗುತ್ತಿದ್ದುದರಿಂದ ಮತ್ತು ಇವರಲ್ಲಿ ಬಹುತೇಕರು ಹಾಡುಗಾರ್ತಿಯರನ್ನು ಉಪಭೋಗದ ನೆಲೆಯಲ್ಲಿಯೇ ಪರಿಭಾವಿಸುತ್ತಾರೆ. ಇಂಥವರೊಟ್ಟಿಗೆ ಹಾಡುಗಾರ್ತಿಯರಿಗೆ ಸಂಬಂಧ ಹಾಗೂ ಸಂಪರ್ಕ ಇಟ್ಟುಕೊಳ್ಳುವುದು ಕಷ್ಟಸಾಧ್ಯವೆನಿಸಿದೆ. ವೃತ್ತಿ ನಿರಂತತೆಯನ್ನು ಕಾಯ್ದುಕೊಳ್ಳುವುದಕ್ಕಾಗಿ ಪುರುಷ ಕಲಾವಿದರೊಂದಿಗೆ ಸಂಬಂಧವಿಟ್ಟುಕೊಳ್ಳಲು ಬಯಸುತ್ತಾರೆ.

ಹಾಗಂತ ಎಲ್ಲ ಹಾಡಿಕೆ ಮಹಿಳೆಯರು ತಮ್ಮ ಜೊತೆಯಲ್ಲಿನ ಪುರುಷ ಕಲಾವಿದರನ್ನೇ ಅವಲಂಬಿಸಿರುವುದಿಲ್ಲ. ಕಂಬಾಗಿ ಹನುಮವ್ವ, ಮದನಹಳ್ಳಿ ಭೀಮಾಭಾಯಿ, ತಿಗಣಿಬಿದರಿ ಗಂಗವ್ವನಂತಹ ಅನೇಕ ಮಹಿಳೆಯರು ತಮ್ಮ ವೃತ್ತಿಯನ್ನು ಸ್ವತಂತ್ರವಾಗಿ ಹಾಗೂ ಯಶಸ್ವಿಯಾಗಿ ನಿಭಾಯಿಸಿದ್ದಾರೆ; ನಿಭಾಯಿಸುತ್ತಿದ್ದಾರೆ. ಯಾರು ಹಾಡಿಕೆ ಕ್ಷೇತ್ರದಲ್ಲಿ ಪ್ರಸಿದ್ಧಿಯನ್ನು ಹಾಗೂ ಜನಪ್ರೀಯತೆಯನ್ನು ಪಡೆದಿರುತ್ತಾರೋ, ಅವರಿಗೆ ಸಹಜವಾಗಿ ವಿಪುಲವಾದ ಅವಕಾಶಗಳು ದೊರೆಯುತ್ತವೆ. ಹಾಡಿಕೆ ಗೊತ್ತಿದ್ದು, ವ್ಯವಹಾರ ಚಾಣಾಕ್ಷತೆಯಿದ್ದವರೂ ಹಾಡಿಕೆಯಲ್ಲಿ ಅವಕಾಶಗಳನ್ನು ಕಂಡುಕೊಳ್ಳುತ್ತಾರೆ. ಮತ್ತೆ ಕೆಲವರು ಹಾಡುವುದು ಚೆನ್ನಾಗಿ ಗೊತ್ತಿದ್ದು ವ್ಯವಹರಿಸಲು ಹೆದರುತ್ತಾರೆ. ಅಂಥವರು ಪುರುಷ ಕಲಾವಿದರನ್ನು ಅವಲಂಬಿಸುತ್ತಾರೆ. ಮುಧೋಳ, ಜಮಖಂಡಿ ತಾಲೂಕುಗಳಲ್ಲಿ ಮಹಿಳೆಯರು ಚೌಡಕಿಯಲ್ಲಿ ಹರದೇಶಿ-ನಾಗೇಶಿ ಹಾಡುಗಳನ್ನು ಹಾಡುತ್ತಾರೆ; ಅವರು ತಮ್ಮ ವೃತ್ತಿಯನ್ನು ಸ್ವತಂತ್ರವಾಗಿ ನಿಭಾಯಿಸುತ್ತಾರೆ. ನಾನು ಸಂದರ್ಶಿಸಿದ ಹಾಡಿಕೆ ಮಹಿಳೆಯರು ತಲೆಯ ಮೇಲೆ ಸೆರಗು ಹೊತ್ತುಕೊಂಡು ನಗುತ್ತ- ನಗುತ್ತ ‘ನಮಸ್ಕಾರ ಮೇಡಂ ಬರ್ರಿ’ ಎಂದು ಸ್ವಾಗತಿಸುತ್ತಿದ್ದರು. ನನ್ನ ಹೆಸರು, ಊರು, ಅಧ್ಯಯನ ಉದ್ದೇಶ ತಿಳಿದುಕೊಳ್ಳುತ್ತಿದ್ದರು. ನಂತರ ನನ್ನ ಅವರ ಸಂಭಾಷಣೆ ಹೇಗೆ ನಡೆಯುತ್ತಿತ್ತೆಂದರೆ ಎಷ್ಟೋ ವರ್ಷಗಳ ಪರಿಚಯವಿದ್ದವರ ಹಾಗೆ. ಮತ್ತೆ ಕೆಲವರು ತಾಳ ಬಾರಿಸುವವನನ್ನು ಇಲ್ಲವೆ ಎದುರು ಹಾಡುಗಾರರನ್ನು ಕರೆಸುತ್ತಿದ್ದರು. ಅವರು ಸಂದರ್ಶನ ಕೊಡು ಎಂದರೆ ಮಾತ್ರ ನನ್ನೊಂದಿಗೆ ಮಾತಿಗಿಳಿಯುತ್ತಿದ್ದರು. “ಏನು ಹೇಳಬೇಕಂತ ಗೊತ್ತಾಗುವುದಿಲ್ಲ. ನೀನು ಇಲ್ಲೇ ಇರು” ಎಂದು ಪುರುಷ ಕಲಾವಿದರನ್ನು ತಮ್ಮ ಜೊತೆಯಲ್ಲಿ ಉಳಿಸಿಕೊಳ್ಳುತ್ತಿದ್ದರು. ಇನ್ನು ಕೆಲವು ಸಲ, ಪುರುಷ ಹಾಡುಗಾರರರು ತಮ್ಮ ಎದುರಿನಲ್ಲಿಯೇ ಮಹಿಳಾ ಹಾಡುಗಾರರನ್ನು ಸಂದರ್ಶಿಸಲು ಹೇಳುತ್ತಿದ್ದರು. ಮಹಿಳಾ ಹಾಡುಗಾರರು ನನ್ನನ್ನು ಎದುರುಗೊಳ್ಳುವ ಹಾಗೂ ಸಂದರ್ಶನ ನೀಡುವ ಸಂದರ್ಭಗಳೇ ವೃತ್ತಿಯಲ್ಲಿನ ಅವರ ವ್ಯವಹಾರ ಕುಶಲತೆಯನ್ನು ಹಾಗೂ ಅವಲಂಬನೆಯನ್ನು ನಿರೂಪಿಸುತ್ತಿದ್ದವು.

ಮಹಿಳಾ ಹಾಡುಗಾರರಲ್ಲಿ ಅಲೌಕಿಕತೆ

ಹಾಡಿಕೆಗಾಗಿ ಊರೂರು ಅಲೆಯುವ ಸಂದರ್ಭದಲ್ಲಿ ಅನೇಕ ದೌರ್ಜನ್ಯಗಳು ತಮ್ಮ ಮೇಲೆ ನಡೆದರೂ ಅದನ್ನು ಅಲಕ್ಷಿಸುವ ಇಲ್ಲವೆ ಮೆಟ್ಟಿ ನಿಲ್ಲುವ ಮನೋಸ್ಥೈರ್ಯ ಸೃಷ್ಟಿಯಾದದ್ದು ಅವರಲ್ಲಿನ ಕಲಾ ತನ್ಮಯತೆಯಿಂದ. ಎದುರು ಹಾಡುಗಾರರಿಂದ ಅಪಮಾನಕ್ಕೆ ಒಳಗಾದಾಗ ಇಲ್ಲವೆ ಹಾಡಿಕೆಗೆ ಹೋದಲ್ಲಿ ಆ ಊರಿನ ಪುರುಷರು ಅವಮಾನಿಸಿದರೆ ಕೆಲವು ಮಹಿಳಾ ಹಾಡುಗಾರರು ಹಾಡಿಕೆ ಕ್ಷೇತ್ರವನ್ನೇ ಬಿಟ್ಟಿದ್ದಾರೆ; ಅಂಥವರು ನಾಟಕ ಇಲ್ಲವೆ ಚೌಡಕಿ ಹಾಡಿಗೆ ಹೊರಳಿದ್ದಾರೆ. ಮತ್ತೆ ಕೆಲವರು ಹರದೇಶಿ-ನಾಗೇಶಿ ಹಾಡಿಕೆಯಲ್ಲಿಯೇ ಉಳಿದಿದ್ದಾರೆ. ಹೀಗೆ ಉಳಿದವರು ಬಡತನದ ಕಾರಣಕ್ಕಾಗಿ ಅವಮಾನ ಸಹಿಸಿಕೊಂಡು ವೃತ್ತಿ ಮುಂದುವರೆಸಿದ್ದಾರೆ. ಇನ್ನು ಕೆಲವರು ಆಧ್ಯಾತ್ಮದ ನೆಲೆಯಲ್ಲಿ ಹಾಡಿಕೆಯನ್ನು ಸ್ವೀಕರಿಸಿದವರೂ ಇದ್ದಾರೆ.

“ತಾಯಿ ನಮ್ಮ ಹಾಡುಗಳನ್ನು ವಾಚ್ಯಾರ್ಥದಾಗ ತಗೋಬಾರದು. ಇದರಾಗ ಶರೀರಕ್ಕ, ಜೀವಾತ್ಮಕ್ಕ ನ್ಯಾಯ ನಡೀತದ. ಹಾಡ್ತಾ ಹಾಡ್ತಾ ಆಧ್ಯಾತ್ಮಕ ಹೋಗ್ತೇನಿ. ಯಾರು ನಗ್ತಾರ, ಯಾರು ಬಿಡತಾರು ಅವನ್ನೆಲ್ಲಾ ಲಕ್ಷ ಕೊಡಾಕ ಆಗಲ್ಲ. ಪ್ರಪಂಚ ಮಾಡ್ತ ಇದ್ರ ಗುರು ಸಿಗಾಂಗಿಲ್ಲ. ಪ್ರಪಂಚದಾಗ ಸುಖಾನ ಸಿಗುದಿಲ್ಲ ಅನಿಸಿಂದ ಗುರು ಸಿಗ್ತಾನು. ಪ್ರಪಂಚಕ ರೂಢಿ ಗಂಡ ಬೇಕು. ಅದಕ್ಕ ರೂಢಿಗೆ ಲಗ್ನಾ ಮಾಡ್ಯಾರು. ನಮಗ ರೂಢಿ ಗಂಡ ಬೇಕಿಲ್ಲ. ಶರೀರ ಹೆಂಡತಿಯಾದ್ರ ಜೀವಾತ್ಮ ಗಂಡ. ಬ್ಯಾರೆ ಗಂಡ ಬ್ಯಾಡಾ. ಗುರುವಿನ ಕಡಿಂದ ವಿದ್ಯಾ ಕಲಕೊಂತ ಅದನ್ನ ಪರಿಚಾರ(ಪ್ರಬಾರ) ಮಾಡಕೋಂತ ಮುಕ್ತಿ ಕಾಣ್ತೇನಿ. ಗೀಗೀ ಪದದಂತಾ ಸವಿ ಮತ್ತಾವುದರಾಗೂ ಇಲ್ಲ” ಎಂದು ಶಿರಬೂರ ಮುತ್ತಾಬಾಯಿ ಹೇಳಿದರೆ, ಗಣಿಯಾರದ ರೇಣುಕಾಬಾಯಿ ಹೀಗೆ ಹೇಳಿದಳು. “ಹರದೇಶಿ-ನಾಗೇಶಿ ಹಾಡ ಅಂದ್ರ ಅದು ಶರೀರದೊಳಗಿನ ಶೋಧ; ಬೈಗುಳ ಅಲ್ಲ. ನಾಗೇಶಿ ದೇಹಾ ಹೆಚ್ಚಂದ್ರ, ಹರದೇಶಿ ಜೀವಾ ಹೆಚ್ಚು ಅನ್ತದ. ಹರದೇಶಿ-ನಾಗೇಶ್ಯಾಗ ಪ್ರಶ್ನಾ, ಉತ್ತರ, ಪ್ರಶ್ನಾ ಇರ್ತಾವು. ದೇಹ-ಜೀವದ ಜಗಳ ಅದು, ನಮ್ಮ ಜಗಳ ಅಲ್ಲ. ದೇಹದ ಶೋದಾರ್ಥ ಮಾಡಿಕೊಂಡೇ ಈ ವಿದ್ಯಾ ಕಲಿಬೇಕು. ಅಲ್ಲಿ ಸಿಟ್ಟಿಲ್ಲ. ಅಪಮಾನ ಇಲ್ಲ. ಜೀವಕ್ಕ ನಾಗೇಶಿಯವರು ಬೈದರೆ, ದೇಹಕ್ಕ ಹರದೇಶಿಯವರು ಬೈತಾರೆ. ನಾನೆಂದೂ ಇದನ್ನ ವೈಯಕ್ತಿಕ ತಗೊಂಡಿಲ್ಲ. ಇದು ನೌಕರಿ ಇದ್ದಂಗ. ಇದನ್ನ ಬೆಳಸಬೇಕು. ಅದಕ್ಕ ನಾವು ಕಲಾವಂತರು ತಪಾ ತಗೀಬೇಕು”.

ನಾನು ಸಂದರ್ಶಿಸಿದ ನೂರಾರು ಹಾಡುಗಾರರಲ್ಲಿ ಗಣಿಯಾರದ ರೇಣುಕಾ ಹಾಗೂ ಶಿರಬೂರದ ಮುತ್ತವ್ವ ಮಾತ್ರ ವೃತ್ತಿಯನ್ನು ಆಧ್ಯಾತ್ಮಿಕ ನೆಲೆಯಲ್ಲಿ ಸ್ವೀಕರಿಸಿದ್ದರು.ಉಳಿದವರು ಲೌಕಿಕಾರ್ಥದಲ್ಲಿಯೇ ಸ್ವೀಕರಿಸಿದ್ದರು.ಸಾಮಾಜಿಕವಾಗಿ ಪ್ರಬಲರಾಗಿದ್ದವರು ಗ್ರಹಿಸಿದ ಹಾಗೆ,ಅವರ ಜೀವನ ಕ್ರಮವಿಲ್ಲ.ಬಹುತೇಕ ಮಹಿಳಾ ಹಾಡುಗಾರರು ಹಾಡಿಕೆಯನ್ನು ವೃತ್ತಿಯಾಗಿ ಸ್ವೀಕರಿಸಿದ್ದಾರೆ.ಹರದೇಶಿ-ನಾಗೇಶಿ ಹಾಡುಗಾರಿಕೆಯನ್ನು ವಿದ್ಯೆಯಾಗಿಯೇ ಪರಿಗಣಿಸಿದ್ದರಿಂದ ಅವುಗಳನ್ನು ಕಲಿಯುವುದಕ್ಕಾಗಿ,ರಂಗ ತಾಲೀಮಿಗಾಗಿ ಸ್ಥಳ ಮತ್ತು ವೇಳೆ ಬೇಕಾಗುತ್ತದೆ.ಕಲಿಕೆಗೆ ಸ್ಥಳ ಹಾಗೂ ವೇಳೆಯ ಜೊತೆಯಲ್ಲಯೇ ಧ್ಯಾನವೂ ಅಗತ್ಯವಾಗುತ್ತದೆ.ಹಾಡಿನ ಮೂಲಕ ಇಲ್ಲವೆ ವ್ಯಕ್ತಿಗಳ ಮೂಲಕ ನಡೆಯುವ ಸಾಮಾಜಿಕ ಅಪಮಾನವನ್ನು ಮರೆಯಲು ಹಾಗೂ ಮೀರಲು ತಮ್ಮನ್ನು ತಾವೇ ಸಾಮಾಜಿಕ ನೆಲೆಯಿಂದ ಆಧ್ಯಾತ್ಮದ ಕಡೆಗೆ ಚಲನೆಗೆ ಒಳಪಡಿಸಿಕೊಂಡ ಹಾಡಿಕೆ ಮಹಿಳೆಯರು ಇದ್ದಾರೆ.ಕೌಟುಂಬಿಕವಾಗಿ ಹಾಗೂ ಸಾಮಾಜಿಕವಾಗಿ ಬದುಕುವ ಅವಕಾಶಗಳನ್ನು ವ್ಯವಸ್ಥೆಗಳು ಸಂಕುಚಿತಗೊಳಿಸಿದರೆ ಮಹಿಳೆಯರು ಆಧ್ಯಾತ್ಮದೆಡೆಗೆ ವಾಲುತ್ತಾರೆ.ಕಾಣುವ ಹಾಗೂ ಬದುಕುವ ಲೋಕಗಳು ಕ್ರೂರವೆನಿಸಿದರೆ;ಬದುಕುವುದೇ ಕಷ್ಟ ಎನಿಸಿದರೆ;ಬದುಕುವ ಆಸೆಗಾಗಿ ಕಾಣದೆ ಇರುವಂತಹ ಆಧ್ಯಾತ್ಮ ಲೋಕದೆಡೆಗೆ ಮಹಿಳೆಯರು ಆಕರ್ಷಿತರಾಗುತ್ತಾರೆ.ಅಕ್ಕಮಹಾದೇವಿ ಹಾಗೂ ಲಲ್ಲಾದೇವಿ ಇವರು ಇದಕ್ಕೆ ಅತ್ಯುತ್ತಮ ಉದಾಹರಣೆಗಳಾಗುತ್ತಾರೆ.ಅವರು ಎದುರಿಸಿದ ಸಾಮಾಜಿಕ ಅಪಮಾನಗಳು ಗಣಿಯಾರ ರೇಣುಕಾ ಹಾಗೂ ಶಿರಬೂರ ಮುತ್ತವ್ವನಿಗಿಂತ ಭಿನ್ನವಾದವುಗಳು.ಆ ಅಪಮಾನಗಳು ಹೇಗೆ ಭಿನ್ನವಾದವುಗಳು ಎನ್ನುವುದನ್ನು ಅವರವರ ಸಾಮಾಜಿಕ ಹಿನ್ನೆಲೆಯೇ ಉತ್ತರಿಸುತ್ತದೆ.ಹೀಗಾಗಿ ಅದರ ವಿವರಣೆ ಅಗತ್ಯವಿಲ್ಲವೆನಿಸುತ್ತದೆ.ಲಲ್ಲಾದೇವಿ,ಅಕ್ಕಮಹಾದೇವಿ ಇವರು ಆಧ್ಯಾತ್ಮದ ಉತ್ತುಂಗಕ್ಕೇರಿದ ಸಂತರಾಗಿ ಗುರುತಿಸಿ ಗೌರವಿಸಲ್ಪಟ್ಟಿದ್ದಾರೆ.ಈ ಬಗೆಯ ಗುರುತಿಸುವಿಕೆಗೆ ಹಾಗೂ ಗೌರವಕ್ಕೆ ಅವರ ಪ್ರಯತ್ನದೊಂದಿಗೆ ಅವರು ಹುಟ್ಟಿ ಬಂದ ಸಾಮಾಜಿಕ ಹಿನ್ನೆಲೆಯೂ ಕಾರಣವಾಗಿದೆ.ಶಿರಬೂರದ ಮುತ್ತವ್ವ ಹಾಗೂ ಗಣಿಯಾರದ ರೇಣುಕೆಯನ್ನು ಸಂತರೆಂದು ಯಾರೂ ಗುರುತಿಸುವುದಿಲ್ಲ.ಹಾಗೆ ಗುರುತಿಸಲಿ ಎಂದು ಇವರು ಬಯಸುವುದೂ ಇಲ್ಲ.ಆಧ್ಯಾತ್ಮದ ಹಂಬಲವನ್ನು ತೀವ್ರವಾಗಿ ವ್ಯಕ್ತಪಡಿಸುವ,ಆ ಕುರಿತಂತೆ ಗಂಭೀರವಾಗಿ ಮಾತನಾಡುವ ಇವರಿಗೆ ಜಾತಿ ಹಿನ್ನೆಲೆಯೊಂದಿದ್ದರೆ ಖಂಡಿತವಾಗಿಯೂ ಮಹಿಳಾ ಸಂತರಾಗಿ ಗುರುತಿಸಿ ಗೌರವಿಸಲ್ಪಡುತ್ತಿದ್ದರು.

 

[1] ‘ಸಖಿ’ ಎಂದರೆ ದೇವರ ಸ್ತುತಿ ಪದ್ಯ. ‘ಪಟ್ಟೇವು’ ಎಂದರೆ ಪಠ್ಯ. ಇಲ್ಲಿ ಮುಖ್ಯ ಕಥನವಿರುತ್ತದೆ. ‘ಖ್ಯಾಲಿ’ ಎಂದರೆ ಹಾಡಿನ ಮುಕ್ತಾಯ. ಈ ಸ್ವರೂಪದಲ್ಲಿಯೇ ಹರದೇಶಿ-ನಾಗೇಶಿ ಹಾಡುಗಳು ಇರುತ್ತವೆ. ಪಠ್ಯದಲ್ಲಿ ಕನಿಷ್ಠ ಎಂದರೆ ೧೮ ನುಡಿಗಳಿರುತ್ತವೆ. ಗರಿಷ್ಠ ಎಂದರೆ ಹಾಡುಗಾರರೇ ಹೇಳಿಕೊಂಡಂತೆ ಒಂದು ಗಂಟೆ ಇಲ್ಲವೆ ಎರಡು ಗಂಟೆಗಳವರೆಗೆ ಮುಖ್ಯ ಕಥನ ವಿಸ್ತರಿಸಿಕೊಳ್ಳುತ್ತದೆ. ಹೀಗೆ ಗಂಟೆಗಳವರೆಗೆ ವಿಸ್ತರಿಸಿಕೊಳ್ಳುವ ಕಥನದಲ್ಲಿ ನೂರಾರು ನುಡಿಗಳಿರುತ್ತವೆ.

[2] “ನಾಟಕದಾಗ, ಸಿನಿಮಾದಾಗ ಯಾರ ಚಂದ ಇರ್ತಾರ, ಅವ್ರಿಗೆ ಎಲ್ಲಾರೂ ಕರ‍್ದ ಅವಕಾಶಾ ಕೊಡ್ತಾರ; ಹಾಂಗ ನಮ್ಮ ಹಾಡಿಕೆ. ಹಾಡಿಕೆಗಿ ಕರೆಸುವಾಗ, ಊರಿನ ಸಭಾಕ್ಕ ಮರ್ಯಾದಿ ಕಾಯುವಂಗ ನೋಡಾಗ ಚಂದ ಇದ್ದು, ಚಂದ ಹಾಡಿಕೆ ಮಾಡುವ ಹುಡುಗಿಯನ್ನs ಕರಸ್ತಾರ. ಹುಡುಗಿ ಚಂದ ಇದ್ದಷ್ಟೂ ಹಾಡಿಕೆಗಿ ಹೆಚ್ಚು ಚಾವಾ ಸಿಗ್ತಾವು. ಅದಕ್ಕಂತ ನಮಗ ಎಷ್ಟs ಬಡತನಾ ಇದ್ರೂ ಕೆಂಪಗಿರುವ ಹಾಡುವ ಹುಡುಗಿಯರನ್ನು ನಾವು ಕೆಲಸಕ್ಕ ಕಳ್ಸಂಗಿಲ್ಲ” ಎಂದು ಹೇಳಿದವರೇ ಹೆಚ್ಚು. ಅವರ ಉದ್ದೇಶವಿಷ್ಟೆ. ರಂಗದ ಮೇಲೆ ಕಾಣಿಸಿಕೊಳ್ಳುವವರು ಆಕರ್ಷಕವಾಗಿ ಕಾಣಬೇಕು.

ಹಾಡಿಕೆ ಮಹಿಳೆಯರ ಕುಟುಂಬದವರು ಹಾಡುವ ಹುಡುಗಿಯ ಸೌಂದರ್ಯಕ್ಕೂ ಲೈಂಗಿಕ ಆಕರ್ಷಣೆಗೂ ಸಂಬಂಧ ಕಲ್ಪಿಸಿಕೊಂಡಿಲ್ಲ. ಹಾಡಿಕೆಯನ್ನು ವೃತ್ತಿಯಾಗಿ ಪರಿಗಣಿಸಿದ್ದರಿಂದ, ಪ್ರೇಕ್ಷಕರ ಆಕರ್ಷಣೆಯನ್ನು ಉಳಿಸಿಕೊಳ್ಳಬೇಕಾಗುತ್ತದೆ. ಪ್ರೇಕ್ಷಕರ ಆಕರ್ಷಣೆಯನ್ನು ಹಾಡಿಕೆ ವೃತ್ತಿ ಆಕರ್ಷಣೆಗೆ ಮಾತ್ರ ಸೀಮಿತಗೊಳಿಸಿಕೊಂಡಿದ್ದಾರೆ. ಪ್ರೇಕ್ಷಕರೂ ಹಾಡಿಕೆಯವರ ಹಾಗೆ, ಹಾಡುವ ಹುಡುಗಿಯನ್ನು ಇಲ್ಲವೆ ಮಹಿಳೆಯನ್ನು ಸ್ವೀಕರಿಸುತ್ತಾರೆ ಎಂದು ಹೇಳಲಾಗುವುದಿಲ್ಲ. ‘ಪ್ರೇಕ್ಷಕರು’ ಎನ್ನುವುದನ್ನು ಪುರುಷ ಪ್ರೇಕ್ಷಕರು ಎನ್ನುವ ಅರ್ಥದಲ್ಲಿಯೇ ಬಳಸಲಾಗಿದೆ. ಯಾಕೆಂದರೆ ಹರದೇಶಿ-ನಾಗೇಶಿ ಹಾಡುಗಳನ್ನು ಕೇಳುವವರು ಸಾಮಾನ್ಯವಾಗಿ ಪುರುಷರೇ ಆಗಿರುತ್ತಾರೆ. ಪುರುಷರೇ ಯಾಕೆ ಪ್ರೇಕ್ಷಕರಾಗಿರುತ್ತಾರೆ ಎನ್ನುವುದನ್ನು ‘ಕಲೆಯ ಹಿಂದಿನ ಕ್ರೌರ್ಯ’ ಅಧ್ಯಾಯದಲ್ಲಿ ಚರ್ಚಿಸಲಾಗಿದೆ.

ಆಕರ್ಷಕವಾಗಿರುವ ಹಾಡಿಕೆ ಹುಡುಗಿ ಇಲ್ಲವೆ ಮಹಿಳೆ, ಎಷ್ಟೇ ಸುಶ್ರಾವ್ಯವಾಗಿ ಹಾಡಿದರೂ ಹಾಡಿನಲ್ಲಿ ಸಮಾಜವೇ ರೂಪಿಸಿದ ನೀತಿ ನಿಯಮಗಳನ್ನು ಹೇಳುತ್ತಿದ್ದರೂ ಎಲ್ಲ ಪ್ರೇಕ್ಷಕರು ಹಾಡನ್ನು ಅರ್ಥ ಮಾಡಿಕೊಳ್ಳುತ್ತಿರುತ್ತಾರೆ; ಅವಳ ಕಂಠವನ್ನು ಆನಂದಿಸುತ್ತಿರುತ್ತಾರೆ ಎಂದಲ್ಲ. ಪ್ರೇಕ್ಷಕರಲ್ಲಿ ಕೆಲವರು ಅವಳ ಹಾಡಿಕೆಯನ್ನು ಆಸ್ವಾದಿಸುತ್ತಿದ್ದರೆ, ಮತ್ತೆ ಕೆಲವರಿಗೆ ಆಕೆ ಲೈಂಗಿಕ ಆಕರ್ಷಣೆಯ ಕೇಂದ್ರ ಬಿಂದುವಾಗಿರಬಹುದು. ಈ ಹಿನ್ನೆಲೆಯಲ್ಲಿ ಹಾಡುಗಳನ್ನು ಕೇಳುವ ಪ್ರೇಕ್ಷಕರನ್ನು ಎರಡು ನೆಲೆಗಳಲ್ಲಿ ವಿಂಗಡಿಸಿಕೊಳ್ಳಬಹುದು. ೧. ಕಲೆಯನ್ನು ಅಸ್ವಾದಿಸುವವರು ೨. ಕಲಾಕಾರಳನ್ನು ಆಸ್ವಾದಿಸುವವರು. ಕ್ಷೇತ್ರಕಾರ್ಯ ಅಧ್ಯಯನದ ಹಿನ್ನೆಲೆಯಲ್ಲಿ ಹೇಳುವುದಾದರೆ ಕಲೆಯನ್ನು ಆಸ್ವಾದಿಸುವವರಿಗಿಂತ, ಕಲಾಕಾರಳನ್ನು ಆಸ್ವಾದಿಸ ಬಯಸುವವರೇ ಹೆಚ್ಚು. ಕಪ್ಪಗಿರುವ ಹಾಡುವ ಮಹಿಳೆಯರು, ಬಿಳಿ ಇಲ್ಲವೆ, ಗೋದಿ ಮೈಬಣ್ಣ, ತೆಳು ಕಪ್ಪಗಿರುವ ಹಾಡುವ ಮಹಿಳೆಯರಂತೆ ದೃಷ್ಟಿ ದೌರ್ಜನಕ್ಕೆ (ಮಹಿಳೆಯನ್ನು ಕಾಮ ವಾಂಛೆಯಿಂದ ನೋಡುವುದು ಎನ್ನುವ ಅರ್ಥದಲ್ಲಿ ಈ ಪದವನ್ನು ಬಳಸಲಾಗಿದೆ) ಬಲಿಯಾಗುವುದಿಲ್ಲ ಎಂದಲ್ಲ. ಸಾರ್ವಜನಿಕರ ಭೋಗಾಸಕ್ತಿಗೆ ರೂಪಗೊಂಡವಳು ಎನ್ನುವ ನೆಲೆಯಲ್ಲಿಯೇ ‘ದೇವದಾಸಿ’ಯರನ್ನು ಅರ್ಥೈಸಿದ್ದರಿಂದ ಅವರು ಹೇಗೆ ಇರಲಿ, ಎಷ್ಟೇ ಪ್ರತಿಭಾನ್ವಿತರಾಗಲಿ ಅದ್ಯಾವುದೂ ಪರಿಗಣನೆಗೆ ಬರುವುದಿಲ್ಲ. ಪ್ರೇಕ್ಷಕರಲ್ಲಿನ (ಪುರುಷರು) ಲೈಂಗಿಕ ವಿಷಯಾಸಕ್ತಿಯು ಹಾಡುಗಾರಳ ಪ್ರತಿಭೆ, ರೂಪ ನಗಣ್ಯವಾಗುವಂತೆ ಮಾಡುತ್ತದೆ. ಹಾಡುವ ಮಹಿಳೆಯರನ್ನು, ಆಕೆಯ ಕುಟುಂಬದವರಾಗಲಿ, ಆಕೆಯ ಸಮುದಾಯದವರಾಗಲಿ ಲೈಂಗಿಕ ಆಕರ್ಷಣೆಯ ನೆಲೆಯಲ್ಲಿ ಪರಿಭಾವಿಸಿಕೊಳ್ಳಲು ಬಯಸುವುದಿಲ್ಲ. ಸಭೆಯ ಶೋಭೆಯಾಗಿ ಹಾಗೂ ಹೆಚ್ಚು ಚಾಜ ಪಡೆದುಕೊಳ್ಳುವ ಹಾಡಿಕೆ ವೃತ್ತಿ ಆಕರ್ಷಣೆಯಾಗಿ ಹಾಡುವ ಹುಡುಗಿಯ ಸೌಂದರ್ಯವನ್ನು ಆಕೆಯ ಸಮುದಾಯದವರು ಪರಿಭಾವಿಸುತ್ತಾರೆ.