ಹಾಡಿಕೆ: ದೈಹಿಕ ದಣಿವು

ಹರದೇಶಿ-ನಾಗೇಶಿ ಹಾಡುಗಾರರು ಜಾತ್ರೆ ಕಾಲದಲ್ಲಿ (ಅದಕ್ಕೆ ಹಾಡುಗಾರರು ಸೀಜನ್ ಎನ್ನುವರು.) ನಿರಂತರ ಹಾಡಿಕೆ ಮಾಡುತ್ತಿರುತ್ತಾರೆ. ಒಂದು ವಾರದ ಲೆಕ್ಕವನ್ನಿಟ್ಟುಕೊಂಡು ಹೇಳುವುದಾದಲ್ಲಿ ಏಳು ದಿನವೂ ಹಾಡುವುದರಿಂದ ಕಂಠಕ್ಕೆ ತೊಂದರೆಯಾಗುತ್ತದೆ. ಏಳು ದಿನಗಳೂ ರಾತ್ರಿ ಮಾತ್ರ ಹಾಡಿಕೆ ಮಾಡಿರುತ್ತಾರೆ ಎಂದು ಹೇಳಲಾಗುವುದಿಲ್ಲ. ಅವರು ಹಾಡಿಕೆಯು ಚಾಜ ಒಪ್ಪಿಕೊಂಡ ಸ್ವರೂಪದಲ್ಲಿ ಹಾಡಿಕೆ ಮಾಡಬೇಕಾಗುತ್ತದೆ. ಆಯಾ ಊರಿನ ಜಾತ್ರೆಯು ಎಷ್ಟು ದಿನ ನಡೆಯುತ್ತದೆ ಎನ್ನುವುದರ ಮೇಲೆ ಊರಿನವರು ಸಾಂಸ್ಕೃತಿಕ ಕಾರ್ಯಕ್ರಮವನ್ನು ರೂಪಸಿಕೊಂಡಿರುತ್ತಾರೆ. ಈ ಕಾರ್ಯಕ್ರಮದ ಆಧಾರದ ಮೇಲೆ ಹರದೇಶಿ-ನಾಗೇಶಿ ಹಾಡುಗಾರರನ್ನು ಒಂದು ರಾತ್ರಿ; ಇಲ್ಲವೆ ಒಂದು ಹಗಲು ಒಂದು ರಾತ್ರಿ; ಇಲ್ಲವೆ ಎರಡು ಹಗಲು, ಮೂರು ರಾತ್ರಿ ಹಾಡಿಕೆಗೆ ಕರೆದಿರುತ್ತಾರೆ. ರಾತ್ರಿ ಮಾತ್ರ ಹಾಡಿಕೆ ಇದ್ದರೆ ಹಗಲಿನಲ್ಲಿ ಕಂಠಕ್ಕೆ ವಿಶ್ರಾಂತಿ ಸಿಗುತ್ತದೆ. ರಾತ್ರಿ ಮತ್ತು ಹಗಲು ಇಲ್ಲವೆ ಎರಡು ಹಗಲು ಮೂರು ರಾತ್ರಿ ಹಾಡಿಕೆ ಇದ್ದರೆ ಹಾಡುಗಾರರ ಕಂಠಕ್ಕೆ ವಿಶ್ರಾಂತಿ ಸಿಗುವುದೇ ಇಲ್ಲ. ರಾತ್ರಿ ಹತ್ತು ಗಂಟೆಗೆ ಹಾಡಿಕೆ ಪ್ರಾರಂಭವಾದರೆ ಬೆಳಗಿನ ಜಾವ ಐದು ಇಲ್ಲವೆ ಆರು ಗಂಟೆಗೆ ಮುಗಿಯುತ್ತದೆ. ಹಾಡಿಕೆ ಮುಗಿದ ತಕ್ಷಣ ಹಾಡುಗಾರರು ಸ್ನಾನ ಮಾಡುತ್ತಾರೆ. ಜಾತ್ರೆ ನಡೆಸುತ್ತಿರುವವರು ಕೊಟ್ಟಂತದ್ದನ್ನು ಬೆಳಗಿನ ಉಪಹಾರ ಮಾಡುತ್ತಾರೆ. ಮತ್ತೆ ರಂಗಕ್ಕೆ ಬರಲು ತಯಾರಾಗುತ್ತಾರೆ. ಮಲಗಿದರೆ ಕಂಠ ಗಡಸು (ಅವರ ಭಾಷೆಯಲ್ಲಿಯೇ ಹೇಳುವುದಾದರೆ ದಪ್ಪ್‌) ಆಗುತ್ತದೆ. ಹೀಗಾಗಿ ಅವರಿಗೆ ಹಗಲು ಇಲ್ಲವೆ ರಾತ್ರಿ ನಿದ್ರೆ ಮಾಡಲು ವೇಳೆಯೇ ದೊರೆಯುವುದಿಲ್ಲ. ಒಂದು ಹಗಲು ಒಂದು ರಾತ್ರಿಯ ಹಾಡಿಕೆಯ ಕಥೆ ಇದಾದರೆ; ಎರಡು ಹಗಲು, ಮೂರು ರಾತ್ರಿ ಹಾಡಿಕೆಯ ಕಥೆ ಊಹೆಗೂ ಮೀರಿದ್ದು. ಹಾಡುವವರು ಕುಳಿತು ಕೊಂಡೇನೂ ಹಾಡುವುದಿಲ್ಲ. ಒಂದು ಮೇಳದ ಹಾಡಿಕೆ ಮುಗಿದ ನಂತರ, ಮತ್ತೊಂದು ಮೇಳದವರು ಹಾಡಿಕಿಗೆ ವೇದಿಕೆಯ ಮೇಲೆ ಬರುತ್ತಾರೆ. ಆ ವೇಳೆಯಲ್ಲಿ ಮಾತ್ರ ಮೊದಲು ಹಾಡಿದವರು ಕುಳಿತುಕೊಂಡು ವಿಶ್ರಾಂತಿ ಪಡೆಯಬಹುದು. ಸರದಿ ಪ್ರಕಾರ ಹಾಡುವುದರಿಂದ ಸರದಿ ಪ್ರಕಾರವಾಗಿಯೇ ಎರಡೂ ಮೇಳದವರಿಗೂ ಕುಳಿತುಕೊಳ್ಳುವಷ್ಟು ವಿಶ್ರಾಂತಿ ದೊರೆಯುತ್ತದೆ. ಪ್ರತಿ ಮೇಳದವರೂ ಹಾಡಲು ಇಪ್ಪತ್ತರಿಂದ ಮೂವತ್ತು ನಿಮಿಷಗಳವರೆಗೆ ಅವಧಿ ತೆಗೆದುಕೊಳ್ಳುತ್ತಾರೆ. ಇಷ್ಟು ಅವಧಿಯವರೆಗೆ ನಿಂತುಕೊಂಡೇ ಹಾಡಬೇಕಾಗುತ್ತದೆ. ಒಬ್ಬ ಹಾಡುಗಾರಳು/ನು ಒಂದು ರಾತ್ರಿಯ ಅವಧಿಯನ್ನೇ ತೆಗೆದುಕೊಂಡರೆ ನಾಲ್ಕರಿಂದ ಐದು ಗಂಟೆಯವರೆಗೆ ನಿಂತುಕೊಂಡು ಹಾಡಬೇಕಾಗುತ್ತದೆ. ತಮ್ಮ ಹಾಡಿಕೆ ಸರದಿ ಬಂದಾಗಲೊಮ್ಮೆ ರಂಗದ ಮೇಲೆ ಹೋಗಬೇಕಾಗುತ್ತದೆ. ಹೀಗೆ ರಂಗದ ಮೇಲೆ ಹತ್ತಿ ಇಳಿಯುವುದು, ದೀರ್ಘ ಅವಧಿಯವರೆಗೆ ನಿಲ್ಲುವುದು, ಹಾಡುವುದು – ಇವೆಲ್ಲವೂ ಹಾಡುಗಾರರಿಗೆ ತೀವ್ರವಾದ ದೈಹಿಕ ದಣಿವನ್ನು ತಂದಿರುತ್ತದೆ. ಹರದೇಶಿ ತಾತ್ವಿಕತೆಯನ್ನು ಹೇಳುವ ಹಾಡುಗಳನ್ನು ನಾಗೇಶಿ ತಾತ್ವಿಕತೆಯನ್ನು ಬೆಳೆಸುವ ಹಾಡುಗಳನ್ನು ಮಾತ್ರ ಮುಖಾ ಮುಖಿಯಾಗಿಸುವ ಪುರಾಣ ಕತೆಗಳನ್ನು ಕೇಳಲು ಕೆಲವು ಊರಿನವರು ಇಷ್ಟಪಡುತ್ತಾರೆ. ಆಗ ಹಾಡುಗಾರರಲ್ಲಿ ಸ್ಪರ್ಧಾತ್ಮಕ ಮನೋಭಾವವೇನೂ ಇರುವುದಿಲ್ಲ. ಒಂದು ರಾತ್ರಿ ಒಂದು ಹಗಲು ಇಲ್ಲವೆ ಮೂರು ರಾತ್ರಿ ಎರಡು ಹಗಲು ಹಾಡಿಕೆ ಇದ್ದಾಗ ಹಾಡಿನ ಏಕತಾನತೆ ಪ್ರೇಕ್ಷಕರಲ್ಲಿ ಮಾನಸಿಕ ಆಯಾಸ ಸೃಷ್ಟಿಸಬಹುದು. ಅದಕ್ಕಾಗಿ ಒಂದು ದಿನ ಪುರಾಣದ ಹಾಡುಗಳನ್ನು ಕೇಳಿದರೆ, ಮತ್ತೊಂದು ದಿನ ಅಥವಾ ರಾತ್ರಿ ಸವಾಲ್-ಜವಾಬ್ ಕೇಳ ಬಯಸುತ್ತಾರೆ. ಮತ್ತೆ ಕೆಲವು ಊರುಗಳಲ್ಲಿ ಕೇವಲ ಸವಾಲ್ -ಜವಾಬ್ ಹಾಡುಗಳನ್ನು ಮಾತ್ರ ಬಯಸುತ್ತಾರೆ.

ಹರದೇಶಿಯವರು ತಮ್ಮ ತಾತ್ವಿಕತೆಯನ್ನು ನಿರೂಪಿಸುತ್ತಾರೆ; ನಾಗೇಶಿಯವರಿಗೆ ಸವಾಲ್ ಹಾಕುತ್ತಾರೆ. ನಾಗೇಶಿಯವರು ಅವರ ಸವಾಲ್‌ನ್ನು ಬಿಡಿಸಿ ತಮ್ಮ ತಾತ್ವಿಕತೆಯನ್ನು ನಿರೂಪಿಸುತ್ತಾ, ಮರು ಸವಾಲ್‌ನ್ನು ಎದುರು ಹಾಡುಗಾರರಿಗೆ ಹಾಕುತ್ತಾರೆ. ಈ ಸಂದರ್ಭದಲ್ಲಿ ಪ್ರೇಕ್ಷಕರೂ ಎರಡೂ ಮೇಳದವರಿಗೂ ಸವಾಲ್ ಹಾಕುತ್ತಿರುತ್ತಾರೆ. ಇಂಥ ಸವಾಲ್-ಜವಾಬ್‌ಹಾಡುಗಳ ಸಂದರ್ಭದಲ್ಲಿ ಹಾಡುಗಾರರು ತೀವ್ರ ಮಾನಸಿಕ ಒತ್ತಡಗಳಲ್ಲಿ ಇರುತ್ತಾರೆ. ದೈಹಿಕ ದಣಿವಿನ ಜೊತೆ ಮಾನಸಿಕ ದಣಿವು ಹಾಡುಗಾರರನ್ನು ಮತ್ತಷ್ಟು ದಣಿಸಿ ಬಿಡುತ್ತದೆ.

ಹೀಗೆ ಸತತವಾಗಿ ಹಗಲು, ರಾತ್ರಿ ನಿರಂತರವಾಗಿ ಹಾಡಿದ ಹಾಡುಗಾರರ ಕಂಠ ತನ್ನ ಸುಶ್ರಾವ್ಯವನ್ನು ಕಳೆದುಕೊಳ್ಳುತ್ತದೆ. ಚಾಜ ಹಿಡಿದ ಕಾರಣಕ್ಕಾಗಿ ಒಪ್ಪಿಕೊಂಡ ಊರಿಗೆ ಹಾಡಿಕೆಗೆ ಹೋಗಲೇಬೇಕು. ನಿರಂತರವಾಗಿ ಹಾಡಿದ ಕಾರಣಕ್ಕಾಗಿ ಉಗುಳು ನುಂಗಲು ಕೂಡ ತೊಂದರೆ ಯಾಗುವಷ್ಟು ಗಂಟಲು ನೋವಿನಿಂದ ಇವರು ಬಳಲುತ್ತಿರುತ್ತಾರೆ. ಗಂಟಲು ನೋವಿಗೆ ಸಂಬಂಧಿಸಿದಂತೆ ಔಷಧಿ ಇಲ್ಲವೆ ಇಂಜೆಕ್ಷನ್‌ನಿಂದ ಚಿಕಿತ್ಸೆ ಪಡೆದುಕೊಂಡಿದ್ದರೂ ಅದು ಫಲಕಾರಿಯಾಗದೇ ಇದ್ದಾಗಹಾಡುಗಾರರು ಒಡೆದ ಕಂಠದಲ್ಲಿಯೇ ಹಾಡುವ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಹಾಡುಗಾರರು ಪ್ರೇಕ್ಷಕರಿಂದ ಹಾಗೂ ಕರೆಸಿದವರಿಂದ ತೀವ್ರ ಅಪಮಾನಕ್ಕೊಳಗಾಗುತ್ತಾರೆ. “ಹಾಡ್ಕಿ ನೀಗ್ಲಾಕಂದ್ರ ಚಾಜಾ ಯಾಕ ತಗೊಂಡಿ? ಪುಕ್ಕಟ ಹಾಡಾಕ ಬಂದಿರೇನು? ನಿಮಗ ನಾಕ ಸಾವಿರಾ ಕೊಟ್ಟೆತಿ. ರೊಕ್ಕೇನ ಪುಕ್ಕಟ ಬರ್ತಾವು? ಕೆಟ್ಟ ದನಿ ಇಟಕೊಂಡ ಹಾಡಿ, ನಮ್ಮೂರ ಮರ್ಯಾದಿ ತಗಿದ್ರಿ. ನಾಚ್ಕಿ ಆಗಲ್ಲಾ ನಿಮ್ಗ?” ಎಂದು ಇದಕ್ಕಿಂತಲೂ ಅಶ್ಲೀಲ ಭಾಷೆ ಬಳಸಿ ಹೀಗಳೆದ ಸಂದರ್ಭವನ್ನು ಕೊಳ್ಳೂರಿನ ನಸಿರುದ್ದೀನ್ ಕಣ್ಣಾಲಿಗಳನ್ನು ತುಂಬಿಕೊಂಡು ಭಾರವಾದ ಹೃದಯದಿಂದ ಹೇಳಿದನು. ಶಿರಬೂರದ ಮುತ್ತವ್ವನದು ನಸಿರುದ್ದೀನ್‌ಗಿಂತ ಭಿನ್ನ ಅನುಭವ. ಅದನ್ನು ಅವಳ ಮಾತುಗಳಲ್ಲಿಯೇ ಕೇಳಬೇಕು: “ಸೂರು ಕೆಟ್ಟೈತ್ತಂದ್ರ ಹಾಡ್ಕಿಗಿ ಯಾಕ ಬರ್ತಿಯವ್ವಾ? ರೊಕ್ಕದ್ಹಿಂದ ತಿರುಗು ಸೂಳೇರ‍್ಗಿ ಊರಿಗಿ, ಹಾಡ್ಕಿಗಿ ಕರಸದವ್ರಿಗಿ ಮಾನಾ ಮರ್ಯಾದಾ ಇರತೈತಿ ಅಂತ ನಿಮ್ಗೇನು ಗೊತ್ತಿರತೈತಿ? ದಂದಾ ಮಾಡುವ ಹೆಣ್ಣಮಕ್ಕಳಗಿ ರೊಕ್ಕದ ವಿಷಯ ಬಿಟ್ಟ ಇನ್ನು ಏನ ಗೊತ್ತರ‍್ತೈತಿ? ಕಾಲ ನೂಸ್ತಾವು, ಕೈ ನೂಸ್ತಾವು, ಗಂಟ್ಲ ನೂಸ್ತದ ಅಂದ್ರ ಹಾಡ್ಕಿಗಿ ಮಾಡೂದು ಬ್ಯಾಡಾ ಅಂತಿವಿ ಅಂತ ಅಂದ್ಕೊಂಡಿಯೇನು? ರೊಕ್ಕ ಬಿಟ್ಟಿ ಬಿದಿರ್ತಾವೇನು? ದಂದಾ ಮಾಡೋರ್ಗೆ ಇಂಥಾ ಹಾಡ್ಕಿ ಕೆಲ್ಸ ನೀಗಂಗಿಲ್ಲ. ಇದು ಗಣಸರ ಹತ್ರ ಮಕ್ಕೊಂಡಗಲ್ಲವ್ವ, ಏಳೇಳು? ಎದ್ದೇಳು. ಚಂದಂಗ ಹಾಡು. ಕಾಲ ನೂಸ್ತಾವಂತ, ಕೈ ನೂಸ್ತಾವಂತ ವಟಾ ವಟಾ ಪಿಟಿಪಿಟಿ ಅಂತಾರವ್ವ” ಎಂದು ಶಿರಬೂರ ಮುತ್ತವ್ವ ಕಣ್ಣಾಲಿ ತುಂಬಿಕೊಂಡು ಹೇಳುವಾಗ ಅಪಮಾನಗಳಲ್ಲಿ ಕಳೆದುಹೋಗಿದ್ದಳು. ನಿರಂತರ ಹಾಡುವಿಕೆಯಿಂದ ಕಂಠ ತನ್ನ ಮಧುರತೆಯನ್ನು ಕಳೆದುಕೊಳ್ಳುತ್ತದೆ, ದಪ್ಪು ಬಡಿದ ಬೆರಳುಗಳಲ್ಲಿ ರಕ್ತ ಜಿನುಗುತ್ತದೆ, ನಿದ್ದೆಗೆಟ್ಟು ಆರೋಗ್ಯ ಹದಗೆಡುತ್ತದೆ. ಹಾಡಲು ರಂಗ ಹತ್ತಿ ಇಳಿದು, ನಿಂತು ದೇಹ ದಣಿಯುತ್ತದೆ. ಹಾಡಿ, ಹಾಡಿ ಹೊಟ್ಟೆ ನೋಯುತ್ತದೆ. ಸವಾಲ್-ಜವಾಬ್‌ನಲ್ಲಿ ಮಾನಸಿಕ ಒತ್ತಡವಿರುತ್ತದೆ. ಇವೆಲ್ಲವನ್ನೂ ಬೇರೆ ಯಾರೂ ವಿವರಿಸಬೇಕಿಲ್ಲ. ಇವುಗಳು ಅವರ ಅನುಭವಕ್ಕೆ ದಕ್ಕಿದಂತವುಗಳು. ಆದರೂ ಚಿಕ್ಕಂದಿನಲ್ಲಿ ಹಸಿವಿನಿಂದಾಗಿಯೇ ಅಪ್ಪ ಅಮ್ಮನನ್ನು ಕಳೆದು ಕೊಂಡದ್ದು ನೆನಪಿಗೆ ಬರುತ್ತದೆ. ದನಗಳೂ ತಿನ್ನದೆ ಇರುವ ಸೊಪ್ಪನ್ನು ಬದುಕಲೆಂದೇ ಉಪ್ಪು, ನೀರು ಹಾಕಿ ಬೇಯಿಸಿ ಕುಡಿದಿದ್ದನ್ನು ಹೇಗೆ ಮರೆಯಲು ಸಾಧ್ಯ? ಹಾಡು ಕಲಿಸುವ ನೆಪದಲ್ಲಿ ಎಳೆಯ ವಯಸ್ಸಿನಲ್ಲಿಯೇ ತನ್ನ ಮೇಲೆ ಲೈಂಗಿಕ ಹಲ್ಲೆ ನಡೆಸಿದರೂ, ತಂದೆ ತಾಯಂದಿರಿಗೆ ಅದನ್ನು ಪ್ರಶ್ನಿಸದಿರುವ ಅಸಹಾಯಕತೆಯನ್ನು ಸೃಷ್ಟಿಸಿದ ಬಡತನ ಅವರ ಮನಸ್ಸನ್ನು ಸುಡುತ್ತಿರುತ್ತದೆ. ಹರಕು ಬಟ್ಟೆಯಿಂದ ಹೊರ ಚಿಮ್ಮುತ್ತಿದ್ದ ಹೊಸ ಹರೆಯನ್ನು ಮುಚ್ಚಿ ಕೊಳ್ಳಲಾಗದೆ, ಹಸಿದ ನೂರಾರು ದೃಷ್ಟಿಗಳನ್ನು ಎದುರಿಸಿದ್ದ ಅನುಭವ ಇನ್ನೂ ಹಸಿ -ಹಸಿಯಾಗಿಯೇ ಇದೆ. ಬಾಲ್ಯದಲ್ಲಿ ಬಡತನವು ತೆರೆದಿಟ್ಟ ಕಠೋರ ಸತ್ಯಗಳು ಹಾಗೂ ವರ್ತಮಾನದಲ್ಲಿನ ಕೌಟುಂಬಿಕ ಜವಾಬ್ದಾರಿಗಳು, ಬೇಡ ಬೇಡವೆಂದರೂ ಈ ವೃತ್ತಿಯಲ್ಲಿ ಉಳಿಯುವಂತೆ ಮಾಡುತ್ತವೆ. ನಿರಂತರ ಹಾಡಿಕೆಯಿಂದಾಗಿ ದೇಹದಣಿಯುತ್ತದೆ ಎಂದು ಗೊತ್ತಿದ್ದರೂ ಹಸಿವು ಬಡತನಗಳು ನಿರಂತರ ಹಾಡಿಕೆಯನ್ನು ಒಪ್ಪಿಕೊಳ್ಳುವಂತೆ ಒತ್ತಾಯಿಸುತ್ತದೆ. ಈ ಹಾಡಿಕೆ ದುಡಿಮೆ ಕೂಡ ಜಾತ್ರೆಗಳ ಕಾಲದಲ್ಲಿ (ಫೆಬ್ರವರಿಯಿಂದ ಮೇ) ಇರುತ್ತದೆ. ಸುಗ್ಗಿ ಕಾಲದಲ್ಲಿ ದುಡಿದು ವರ್ಷ ಪೂರ್ತಿ ಅದೇ ದುಡ್ಡಿನಲ್ಲಿ ಜೀವನವನ್ನು ನಿಭಾಯಿಸಬೇಕಾಗುತ್ತದೆ. ಜಾತ್ರೆಗಳ ಕಾಲವನ್ನು ಹೊರತು ಪಡಿಸಿದರೆ, ಉಳಿದ ಸಮದಯಲ್ಲಿ ಹಾಡಿಕೆಗೆ ಚಾಜ ಬರುವುದೇ ಇಲ್ಲ ಎಂದಲ್ಲ. ವಾರಕ್ಕೋ ಇಲ್ಲವೆ ಎರಡು ವಾರಕ್ಕೊ ಒಂದೆರಡು ಹೆಚ್ಚೆಂದರೆ ನಾಲ್ಕೈದು ಬಾರಿ ಹಾಡಿಕೆಗೆ ಚಾಜ ದೊರೆಯುತ್ತದೆ. ಇಂತಹ ವೃತ್ತಿಯನ್ನು ನಂಬಿ ಕೌಟುಂಬಿಕ ಜವಾಬ್ದಾರಿಯನ್ನು ನಿರ್ವಹಿಸುವುದು ಕಠಿಣವಾಗುತ್ತದೆ. ಹಾಡಿಕೆ ಬಿಟ್ಟು ಹೊಲ ಕೆಲಸಗಳಿಗೆ, ಗಾರೆ ಕೆಲಸಗಳಿಗೆ ಹೋದರೆ, ಊರಿನ ಜನರೇ ವ್ಯಂಗ್ಯ ನಗೆ, ಮೊನಚು ಮಾತಿನಿಂದ ಅಪಮಾನಿಸುತ್ತಾರೆ. ಹಾಡಿಕೆಯಲ್ಲಿ ದಿನವೊಂದಕ್ಕೆ ಏನಿಲ್ಲವೆಂದರೆ ಎರಡ ನೂರು ಇಲ್ಲವೆ ಮುನ್ನೂರು ರೂಪಾಯಿಗಳಿಂದ ಐದುನೂರು ಇಲ್ಲವೆ ಎಂಟುನೂರು ರೂಪಾಯಿಗಳವರೆಗೆ ಒಮ್ಮೊಮ್ಮೆ ಒಂದೂವರೆ ಸಾವಿರದವರೆಗೆ ಗಳಿಸುತ್ತಾಳೆ. ಆದರೆ ಹೊಲ ಕೆಲಸ, ಗಾರೆ ಕೆಲಸದಂತ ಕೆಲಸ ಮಾಡಿದರೆ ಎಂಭತ್ತರಿಂದ ನೂರು ರೂಪಾಯಿಗಳವರೆಗೆ ಕೂಲಿ ದೊರೆಯುತ್ತದೆ. ಖಾಸಗಿ ಹಾಗೂ ಸರಕಾರಿ ಸಂಸ್ಥೆಗಳಲ್ಲಿಯೂ ವೇತನ ಶ್ರೇಣಿಕರಣ ಹುದ್ದೆ ಶ್ರೇಣೀಕರಣವನ್ನೇ ಪ್ರತಿಪಾದಿಸುತ್ತದೆ. ಅದಕ್ಕಾಗಿಯೇ ಹಾಡಿಕೆಯವಳು ಕೂಲಿ ಕೆಲಸಕ್ಕೆ ಹೋದರೆ ಡಿಮೋಷನ್ ಹೊಂದಿದವಳಂತೆ ಕಾಣಲಾಗುತ್ತದೆ. ಹೀಗೆ ಇತರ ಕೆಲಸಗಳಿಗೆ ಹೋಗುವ ಸಾಮಾಜಿಕ ಅವಕಾಶಗಳಿಂದ ವಂಚಿತರಾದ ಹಾಡಿಕೆ ಮಹಿಳೆಯರು ಜಾತ್ರೆ ಕಾಲದಲ್ಲಿ ಹಣಗಳಿಸಲು ನಿರಂತರ ಹಾಡಿಕೆಗೆ ಒಪ್ಪಿಕೊಳ್ಳುತ್ತಾರೆ. ಸಾಮಾಜಿಕ ಹಾಗೂ ಆರ್ಥಿಕ ಒತ್ತಡಗಳು ಈ ಮಹಿಳೆಯನ್ನು ನಿರಂತರ ಹಾಡಿಕೆಯಲ್ಲಿಟ್ಟರೆ, ದೈಹಿಕ ದಣಿವು ಇವರನ್ನು ಸಮಾಜದವರಿಂದ ಅಪಮಾನಿಸುವಂತೆ ಮಾಡುತ್ತದೆ.

ಪದ ಖರೀದಿ

ಹರದೇಶಿ-ನಾಗೇಶಿ ಹಾಡುಗಾರಿಕೆಯ ವೃತ್ತಿಯನ್ನು ಕೇವಲ ಹಾಡುಗಾರರು ಹಾಗೂ ಹಿಮ್ಮೇಲದವರು ಅವಲಂಬಿಸಿರುವುದಿಲ್ಲ. ಹಾಡುಗಾರರಂತೆ, ಹಾಡು ಬರೆದುಕೊಡುವವರೂ ಈ ವೃತ್ತಿಯನ್ನು ನಂಬಿರುತ್ತಾರೆ. ಗುಲ್ಬರ್ಗಾದ ಮೋದಿನಸಾಬ್, ಬಿ.ಬಿ.ಇಂಗಳಗಿಯ ಲಾಲ್‌ಸಾಬ್ ಮಾಸ್ತರ, ಇಂಗಳೇಶ್ವರದ ನಬಿಸಾಬ್ ಇವರೆಲ್ಲರೂ ಹರದೇಶಿ-ನಾಗೇಶಿ ಹಾಡುಗಳನ್ನು ಬರೆಯುತ್ತಾರೆ. ಪದ ಬರೆಯುವ ಇವರು ಹಾಡುಗಾರರೆಲ್ಲರಿಗೂ ಗುರುವಿನ ಸ್ಥಾನದಲ್ಲಿ ನಿಲ್ಲುತ್ತಾರೆ. ಸಾವಳಗಿಯ ಮೊಮ್ಮದ್‌ಸಾಬ್ ಪುಣ್ಯತಿಥಿಯನ್ನು ಇಂದಿಗೂ ಎಲ್ಲ ಹಾಡುಗಾರರು ಹಣ ಹಾಕಿ ಮಾಡುತ್ತಾರೆ. ಅವತ್ತು ಹರದೇಶಿ-ನಾಗೇಶಿ ಹಾಡುಗಳನ್ನು ಹಾಡುತ್ತಾರೆ. ಹಾಡುಗಾರರು ಒಂದು ಜಾತ್ರೆಯಲ್ಲಿ ಒಂದು ರಾತ್ರಿ ಹಾಡಿದ್ದನ್ನು ಪುನರಾರ್ವತಿಸಿದರೆ ವೃತ್ತಿಯಲ್ಲಿ ಮುಂಚೂಣಿಯಲ್ಲಿ ಇರಲಾಗುವುದಿಲ್ಲ. ಹಾಡುಗಳು ಪುನರಾವರ್ತನೆ ಯಾಗದಂತೆ ನೋಡಿಕೊಳ್ಳುವುದರ ಜೊತೆಯಲ್ಲಿ ಹಾಡುಗಾರರಿಂದ ಹಾಗೂ ಸಭಿಕರಿಂದ ಎದುರಾಗುವ ಸವಾಲ್‌ಗಳು ಉತ್ತರಗಳನ್ನು ಕಂಡುಕೊಳ್ಳುವುದಕ್ಕೆ ಒತ್ತಡ ನಿರ್ಮಿಸುತ್ತವೆ. ವೃತ್ತಿಯಲ್ಲಿ ತಮ್ಮ ಮಹತ್ವ ಕಾಯ್ದುಕೊಳ್ಳಲು ಹೊಸ ಹೊಸ ಹಾಡುಗಳನ್ನು ಕಲಿಯಬೇಕಾಗುತ್ತದೆ. ಹೊಸ ಹಾಡುಗಳಿಗಾಗಿ, ಸವಾಲ್ ಹಾಕಲು ಹಾಗೂ ಜವಾಬ್ ಕಂಡುಕೊಳ್ಳಲು ಎಲ್ಲ ಹಾಡುಗಾರರು ಪದ ರಚಿಸುವ ಗುರುಗಳನ್ನೇ ಅವಲಂಬಿಸಿರುತ್ತಾರೆ. ಸಾಹಿತ್ಯ ಅಧ್ಯಯನ ಹಾಗೂ ಪದ ರಚಿಸುವುದು ಇವು ಕವಿಗಳನ್ನು ಮೇಲ್ ಸ್ತರದಲ್ಲಿಟ್ಟಿರುತ್ತದೆ. ಬಹುತೇಕ ಗುರುಗಳು ಪದ ರಚಿಸುವುದನ್ನು ರಚಿಸಿದ ಪದಗಳನ್ನು ಕಲಿಸುವುದನ್ನು ವೃತ್ತಿಯಾಗಿಸಿಕೊಂಡಿರುತ್ತಾರೆ. ಒಂದು ಪದಕ್ಕೆ ಎರಡುನೂರು ರೂಪಾಯಿಗಳಿಂದ ಐದನೂರು ರೂಪಾಯಗಳವರೆಗೆ ಪಡೆಯುತ್ತಾರೆ. ನೂರು ವರ್ಷಗಳ ಹಿಂದೆ ಒಂದು ಪದಕ್ಕೆ ಇಪ್ಪತ್ತರಿಂದ ಐವತ್ತು ರೂಪಾಯಿಗಳನ್ನು ಪಡೆಯುತ್ತಿದ್ದರಂತೆ. ಪದಗಳ ಖರೀದಿ ಕುರಿತು ದುರ್ಗಪ್ಪ ಹೇಳಿದ್ದು ಹೀಗೆ “ನಮ್ಮ ಮ್ಯಾಳದ ಪಾಳೆ ಪ್ರಕಾರ ಹಾಡಿದ್ರ ಒಂದ ರಾತ್ರಿಗಿ ಆರು ಪದಾ ಹಾಡಬೇಕಾಗತೈತಿ. ಒಂದ ಪದಕ್ಕ ಐನ್ನೂರು ರೂಪಾಯಿ ಇಸ್ಕೋತಾರ. ಒಂದ ರಾತ್ರಿ ಪದಕ್ಕೆ ಮೂರರಿಂದ ನಾಕಸಾವಿರ ರೂಪಾಯಿ ಕೇಳ್ತಾರ. ಒಂದ ಹಗಲು, ಒಂದು ರಾತ್ರಿ ಪದಕ್ಕೆ ಆರ ಸಾವಿರ‍್ದಿಂದ ಎಂಟ ಸಾವಿರತನಾ ಕೇಳ್ತಾರ. ಕೆಲವು ಗುರುಗಳು ಒಂದು ತೊಲಿ ಬಂಗಾರಾ ಕೊಟ್ಟು ಒಂದು ಹಗಲಾ ಒಂದ ರಾತ್ರಿ ಪದಾ ತಂಗೊಂಡ ಹೋಗ್ರಿ ಅಂತಾರ. ಪದಾನೂ ಬಾಳs ತುಟ್ಟಿ ಆಗ್ಯಾಂವ. ಗುರುಗಳು ನಮಗ ‘ನೀವು ಇಷ್ಟ ಕೊಟ್ಟ್ರ ಅದರ ನೂರುಪಟ್ಟ ಗಳಸ್ತೇರಲ್ಲಾ’ ಅಂತಾರ. ಬ್ಯಾರೆ ದಾರಿ ಇಲ್ಲ, ಚೌಕಾಸಿ ಮಾಡಿ ಪದಾ ಖರೀದಿ ಮಾಡ್ತೇವಿ” ಎಂದನು. ಹಿಂದೆ ಚರ್ಚಿಸಿದಂತೆ ಮಹಿಳಾ ಹಾಡುಗಾರರು ಬೇರೆ ಬೇರೆ ಕಾರಣಗಳಿಂದ ಗುರುಗಳನ್ನು ನೇರವಾಗಿ ಭೇಟಿಯಾಗುವುದಿಲ್ಲ. ಮೇಳದವರ ಸಹಾಯದಿಂದ ಇಲ್ಲವೆ ಸಂಬಂಧಿಕರ ಸಹಾಯದಿಂದ ಹಾಡು ಖರೀದಿಸುತ್ತಿರುತ್ತಾರೆ. ಅಂದರೆ ಈ ಹಾಡುಗಾರರ ವೃತ್ತಿ ಆದಾಯದಲ್ಲಿ ಪದ ಖರೀದಿಯ ಖರ್ಚನ್ನು ಕಳೆದು ಅವರ ಆದಾಯವನ್ನು ಪರಿಗಣಿಸಬೇಕಾಗುತ್ತದೆ.

ಖಾಸಗಿ ಹಾಡಿಕೆ-ಸರಕಾರಿ ಹಾಡಿಕೆ

ಸರಕಾರಿ ಯೋಜನೆಗಳನ್ನು ಜಾರಿಗೊಳಿಸುವ ಸಂದರ್ಭದಲ್ಲಿ, ಆ ಯೋಜನೆಯ ಪ್ರಚಾರಕ್ಕಾಗಿ ಜನಪದ ಕಲಾವಿದರನ್ನು ಬಳಸಿಕೊಳ್ಳಲಾಗುತ್ತದೆ. ದೇವದಾಸಿ ನಿಷೇಧ ಕಾಯ್ದೆ, ಕುಟುಂಬ ಯೋಜನೆ, ಎಚ್.ಐ.ವಿ. ಕರುತ ಜಾಗೃತಿ, ಮಹಿಳಾ ಶಿಕ್ಷಣದ ಅಗತ್ಯತೆ ಈ ಎಲ್ಲದರ ಕುರಿತು ಸಾಮಾನ್ಯ ತಿಳುವಳಿಕೆಯನ್ನು ಕೊಡುವುದರೊಂದಿಗೆ, ಸರಕಾರ ಕಲ್ಪಿಸಿಕೊಟ್ಟ ಅನುಕೂಲಗಳನ್ನು ಜನರಿಗೆ ತಲುಪಿಸಲು ಜನಪದ ಕಲೆಗಳನ್ನು ಮಾಧ್ಯಮವಾಗಿ ಬಳಸಿಕೊಳ್ಳಲಾಗುತ್ತಿದೆ. ಹರದೇಶಿ-ನಾಗೇಶಿ ಹಾಡುಗಾರರನ್ನು ತಮ್ಮ ಯೋಜನೆಗಳ ಪ್ರಚಾರಕ್ಕಾಗಿ ಶಿಕ್ಷಣ ಇಲಾಖೆಯವರು, ಆರೋಗ್ಯ, ಇಲಾಖೆಯವರು, ಸಮಾಜ ಕಲ್ಯಾಣ ಇಲಾಖೆಯವರು ಮೊದಲಾದವರು ದುಡಿಸಿ ಕೊಂಡಿದ್ದಾರೆ/ದುಡಿಸಿಕೊಳ್ಳುತ್ತಿದ್ದಾರೆ. ಮಹಿಳಾ ಹಾಡುಗಾರರು ಹಾಗೂ ಪುರುಷ ಹಾಡುಗಾರರಿಬ್ಬರೂ ಸರಕಾರಿ ಇಲಾಖೆಗಳಲ್ಲಿ ಹಾಡಿದ್ದರೂ ಇಬ್ಬರ ಅನುಭವಗಳು ಭಿನ್ನವಾಗಿವೆ.

“ಸರ್ಕಾರದ್ದು ಪ್ರಚಾರ ಮಾಡೇನಿ. ದಿನಕ್ಕ ಎರಡ ಸಾವಿರಾ ಕೊಡ್ತಿದ್ರು. ಹೀಂಗ ಒಂದ ವರ್ಷತನಾ ಹಾಡೇನಿ. ಒಂದು ಊರಾಗ ಎರಡ ತಾಸ ಹಾಡ್ಬೇಕು. ಒಂದ್ಹೊತ್ತಷ್ಟ ಊಟಾ ಕೊಡೋರು. ಮುಂಜಾನಿದು, ಸಂಜಿಕಿಂದ ನಾವs ನೋಡ್ಕೋಬೇಕು. ಹೊಳಿಯಾಗರ, ಬಾಂವ್ಯಾಗರ ಜಳ್ಕಾ ಮಾಡ್ತಿದ್ವಿ. ಹಾಡ್ಕಿಕಿಗಿ ಹೋಗುವೆಲ್ಲಾ ಸಮೀಪದ್ಹಳ್ಳಿನs ಆಗಿರಿತಿದ್ವು. ನಡಕೋಂತ ಹೋಗ್ತಿದ್ವಿ. ಒಂದೂರಿಂದ ಇನ್ನೊಂದೂರಿಗೆ ನೀರು ಬದಲು ಆಗುವು. ಆರಾಮs ಉಳಿತಿರ್ಲಿಲ್ಲ. ಊರೂರು ಹೋಗಬೇಕಾದ್ರ ಐದಾರು ಕಿಲೋಮೀಟರ್ ನಡಿಬೇಕಾಗಿತ್ತು. ದಿನಾ ಎರಡ ತಾಸ ಹಾಡಬೇಕಾಗಿತ್ತು. ಸೊಳ್ಳಿ-ಗಿಳ್ಳಿ, ಹುಳಾ-ಹುಪ್ಪಡಿ, ಕಡಿಸ್ಕೊಂತ ಪಂಚಾಯ್ತಿ ಕಟ್ಟ್ಯಾಗ ಇಲ್ಲಾ ಶಾಲ್ಯಾಗ ಮಲಗಬೇಕಾಗಿತ್ತು. ಮಲಗಿದ ಕೂಡ್ಲೆ ಗಂಡ್ಸರ ಕಾಟಾ. ನಮ್ಮನ್ನ ರಕ್ಷಣಾ ಮಾಡ್ಕೊಳ್ಳೂದ್ರಾಗ ಹೊತ್ತಹೊಂಟ್ತಿತ್ತು. ಜಳಕಕ್ಕೊದ್ರೂ ಸುತ್ತಮುತ್ತ ನೋಡಾಕ ನಿಲ್ಲವ್ರು. ಮಾನ ಮುಚ್ಕೊಂಡು ಜಲಖಾ ಮಾಡಿ ಬರೂದ್ಕ ದಣಿಕಿ ಆಗ್ತಿತ್ತು. ಊರಾಗಿರು ಹೊಟೆಲ್ದಾಗ ಮುಂಜಾನಿ ತಿನಕೊಂಡು ಹಾಡಕಿ ಹೋಗ್ತಿದ್ವಿ. ಮತ್ತ ಸಂಜ್ಯಾತಂದ್ರ ಸೊಳ್ಳಿ, ಗಂಡಸರ ಕಾಟಾ. ನಮ್ಮನಿಯಾಗಿನ ಬಡತನ ರೊಕ್ಕದ್ಹಿಂದ ಬೆನ್ನಹತ್ತುವ್ಹಂಗ ಮಾಡಿತ್ತು. ಸರಿಯಾಗಿ ಅನ್ನ ನೀರು ಇರಲಾರ್ದ, ಕಂಡ ಊರ ನೀರ ಕುಡಕೊಂತ ತಿರಗಿದ್ದಕ್ಕ ತೊನ್ನ ಹತ್ತಿದ ನಾಯಿಯಂಗ ಆಗಿದ್ದ್ಯಾ. ರೊಕ್ಕ ಹಿಡಕೊಂಡ ಹೊಡವಳ್ಳಿ ಊರಿಗಿ ಬಂದ್ಯಾ. ನನ್ನ ನೋಡ್ದ ಜನಾ ಸರಕಾರಿ ಹಾಡ್ಕಿಗಿ ಹೋಗಿ ಏನೋ ದೊಡ್ಡ ರೋಗ ಹಚ್ಚಕೊಂಡ ಬಂದಾಳು ಅಂತ ಅನ್ನಾಕ್ಹತ್ತಿದ್ರು. ಅದs ರೊಕ್ಕದಾಗ ಒಬ್ಬ ಅಣ್ಣಂದು, ಇಬ್ರ ತಂಗಿದೇರ್ದು ಮದುವಿ ಮಾಡ್ದ್ಯಾ. ಸರಕಾರಿ ಹಾಡ್ಕಿ ಅನೂಲಿ ಬಾಳs ಅನಸ್ತು. ಆಮ್ಯಾಲತ್ತ ಅವ್ರ ಕರದ್ರೂ ನಾ ಹೋಗ್ಲಿಲ್ಲ. ಈಗ ಜಾತ್ರಿಗಷ್ಟ ಹಾಡಕಿಗಿ ಹೋಗ್ತೀನಿ. – ಹುಲಿಯಾಳದ ರತ್ನವ್ವ

“ಜಾತ್ರಿ ಹಾಡ್ಕ್ಯಾಗ ಸ್ವಲ್ಪ ವ್ಯತ್ಯಾಸಾದ್ರ ಊರಾಗಿನ ಜನಾ ಎಲ್ಲಾ ನಮ್ಮ್ಯಾಗ ಉರದ ಬಿಳತಾರು. ಸರ್ಕಾರದಾಗ ಹಾಂಗಲ್ಲ. ವಾರ್ತಾ ಇಲಾಖಾದಗೂ ಹಾಡೇನಿ, ಆರೋಗ್ಯ ಇಲಾಕಾದಗೂ ಹಾಡೇನಿ. ಸರ್ಕಾರ್ದವ್ರು ನಮ್ಮ ಜೋಡಿ ಒಮ್ಮೊಮ್ಮಿ ಬರ್ತಿದ್ರು, ಒಮ್ಮೊಮ್ಮಿ ಇಲ್ಲ. ಅವ್ರ ಹೇಳಿದ್ದ ಊರಿಗಿ ನಾವs ಹಾಡ್ಕಿ ಮಾಡಕೊಂತ ಹೊಗ್ತಿದ್ವಿ. ಸರಕಾರದವ್ರು ತಾವs ಬರ್ದ ಹಾಡ ಕೊಟ್ಟು ಹಾಡಾಕ ಹೇಳ್ತಿದ್ರು. ಕೆಲವೊಮ್ಮಿ ಯೋಜನಾ ಬಗ್ಗಿ ಹೇಳಿ ಹೀಂಗಿಂಗ ನೀವs ಹೇಳ್ರಿ ಅಂತಿದ್ರು. ಆವಾಗ ನಾವs ಹಾಡಾಕಟ್ಟಿ ಹೇಳ್ತಿದ್ವಿ. ಕೇಂದ್ರ ಸರ್ಕಾರ್ದು ತಿಂಗಳಗಿ ಹತ್ತುದಿನಾ ಪೋಗ್ರಾಂ ಇರ್ತಿದ್ವು. ವಾರ್ತಾ ಇಲಾಕದವ್ರು ತಿಂಗ್ಳಿಗಿ ಮೂರ್ನಾಲ್ಕು ದಿನಾ ಪೋಗ್ರಾಂ ಮಾಡಾಕ ನಮಗ ಹೇಳ್ತಿದ್ರು. ಆರೋಗ್ಯ ಇಲಾಕಾದವ್ರು ತಿಂಗ್ಳಿಗಿ ಹದಿನೈದು ದಿನ ಪೋಗ್ರಾಂ ಕೊಡಬೇಕಂತ ಹೇಳವ್ರು. ಜಾತ್ರ್ಯಾಗಾದ್ರ ಇಡೀ ಒಂದ ರಾತ್ರಿ, ಇಲ್ಲ ಒಂದ ರಾತ್ರಿ ಒಂದ ಹಗಲ ಹೀಂಗ ಒಪ್ಪಿಕೊಂಡ್ಹಂಗ ಹಾಡ್ಕಿ ಮಾಡ್ಬೇಕಾಗ್ತಿತ್ತು. ಅದಕ್ಕವರು ಮ್ಯಾಳದ ಲೆಕ್ಕ ಹಿಡ್ದು ಸಾವಿರದ ಐದನೂರು, ಎರಡು ಸಾವಿರದ ಆರು ನೂರನೋ, ಮೂರು ಸಾವಿರನೋ, ನಾಲ್ಕು ಸಾವಿರನೋ ಕೊಡ್ತಿದ್ರು. ಸರ್ಕಾರ್ದಾದ್ರ ಹದನ ನಿಮಿಷ, ಅರ್ಧಾ ತಾಸು, ಒಂದೆರಡು ತಾಸ ಹಾಡಸ್ತಾರೆ, ಇದಕ್ಕವ್ರು ದಿನ ಲೆಕ್ಕಂದಗ ಐನೂರ್ದಿಂದ ಎರಡು ಸಾವಿರ ರೂಪಾಯಿತನ್ನ ಕೊಡ್ತಾರು. ಹಾಡ್ಕಿ ಕಡಿಮಿ, ಹಾಡ್ಕಿ ವ್ಯಾಳ್ಯಾ ಕಡಿಮಿ; ಆದ್ರ ಹೆಚ್ಚ ಪಗಾರಾ. ಇದs ಚಲೊ ಅಲ್ಲ? ಇದ್ರಾಗ ಬೈಯೊ (ಬೈಗುಳ) ಹಾಡ ಇರಂಗಿಲ್ಲ. ಜನಕ್ಕ ಬುದ್ಧಿ ಹೇಳ್ತೀವಿ. ಕುಡಿಬಾರ್ದು ಅಂತ ಹೇಳು ಪೋಗ್ರಾಂ ಇತ್ತು. ಆವಾಗ ಎಲ್ಲಾ ಕುಡಕ ಜನಾ ಕುಡಿಬಾರ್ದು ಅಂತ ನಮ್ಗ ಬುದ್ದಿ ಹೇಳಾಕ ನೀನಾರು ಅಂತಿದ್ರು. ಸರ್ಕಾದವ್ರು ಅಂತಾವ ಹಾಡ ಹೇಳ್ಬೇಕಂತ ಕಳಿಸಿರ್ತಿದ್ರು. ಅದಕ್ಕ ಊರಾಗಿನ ಕುಡಕ್ರು ಸಿಟ್ಟೆಗೇಳವ್ರು. ಒಮ್ಮೊಮ್ಮೆ ಹಾಡ್ಕಿ ಮಾಡಿಸ್ಲಾರ್ದ ಊರಿಂದ ಓಡಿಸ್ಯಾರು. ಸರ್ಕಾರಿ ಹಾಡ್ಕಿನೂ ಅಷ್ಟ ಸರಳ ಇರಲ್ಲ. ತಂಗಿ, ನಾವು ಸರ್ಕಾರ್ದವ್ರು ಹೇಳಿದ್ದ ಊರಾಗ ಹಾಡ್ಕಿ ಮಾಡೀವಿ ಅಂತ ಸಾಕ್ಷಿ ತೋರ್ಸಬೇಕಲ್ಲ. ಆ ಊರಾಗಿನ ಪಂಚಾಯ್ತಿಯೇವ್ರ ಕಡಿಲಿಂದ ಸೈ(ಸಹಿ) ಮಾಡಿಸ್ಕೋಬೇಕಾಗ್ತಿತ್ತು. ಒಂದೊಂದೂ ರಾಗ ಸೈ ಮಾಡಿಕೊಡಾವ್ರು. ಒಂದೊಂದೂರಾಗ ಕಾಡ್ಸೋರು. ‘ಎಷ್ಟ ರೊಕ್ಕ ಬರ್ತೈತಿ? ಅದರಾಗ ನಗಮೂ ಕೊಟ್ಟ್ರ ಸೈ ಮಾಡ್ತೀವಿ’ ಅಂತ ಅನ್ನೋರು. ಜನಕ್ಕ ನಮ್ಮ ಪರಿಸ್ಥಿತಾ ಏನ ಗೊತ್ತೈತಿ? ಜಾತ್ರಿಗಿ ಕರದವ್ರು ಬಸ್ಚಾರ್ಜ್‌‌ಗಂತ ಚಾಜಾ ಕೊಡುವಾಗ ಕೊಡ್ತಾರು. ಹಾಡ್ಕಿ ಮುಗದಿಂದ ತಡಾ ಮಾಡ್ಲಾರ್ದ ಹಿಂದ(ತಕ್ಷಣ) ರೊಕ್ಕಾ ಕೊಡತಾರು. ಸರ್ಕಾದವ್ರು ಊರೂರು ತಿರಿಗಿ ಹಾಡ್ಕಿ ಮುಗಿದಂದs ರೊಕ್ಕ ಕೊಡ್ತಾರು. ಆರೋಗ್ಯ ಇಲಾಕಾದವ್ರು ಕರ್ದಾಗ ಹದನ ದಿನದ ಗಂಟ್ಲೆ ಹಾಡ್ಕಿಗಿ ಹೋಗಿದ್ದ್ಯಾ. ಹತ್ತ ದಿನದ ಹಾಡ್ಕಿ ಆಗಿರ್ಲಿಲ್ಲ. ಕೈಯಾಗಿನ ರೊಕ್ಕ ಎಲ್ಲಾ ಖಾಲಿ ಯಾದ್ವು. ನನ್ನ ಹತ್ರ ಏಕ ಸರಾ ಇತ್ತು. ಅದು ಹಾಡ್ಕಿಗಿ ಬಂದ ಆಯೇರಿ(ಕಾಣಿಕಿ) ಆಗಿತ್ತು. ಅದನ್ನ ಒತ್ತಿ ಇಟ್ಟ ಹಾಡ್ಕಿ ಮುಗಿಸಾನೂ, ಮುಗಿಸಿಂದ ಬಂದ ರೊಕ್ಕಾನ ಕೊಟ್ಟು ಎಕಸರಾ ಬಿಡಿಸ್ಕೊಳ್ಳುವ ಲೆಕ್ಕಾ ಹಾಕಿದ್ನಿ. ಹಾಡ್ಕಿಗಿ ಹೋದ ಊರ್ನೋರು ಆರೋಗ್ಯ ಬಿಟ್ಟ ಬ್ಯಾರೆ ಹಾಡ ಅಂತ ದುಂಬಾಲು ಬಿದ್ದ್ರು. ಜನಕ್ಕ ಬೇಕಾದ್ದ ಹಾಡಿದ್ನಿ. ಅದಕ್ಕ ಎರಡ ಸಾವಿರ ರೂಪಾಯಿ ಆಯೇರಿ ಬಂದ್ವು. ಹಾಂಗೋ ಪೋಗ್ರಾಂ ಮುಗಿಸ್ಕೊಂಡು ರೊಕ್ಕಾ ತಗೊಂಡ್ವಿ. – ದನ್ಯಾಳ ದುರುಗವ್ವ

ಸರ್ಕಾರ್ದವ್ರು ನಮ್ಮನ್ನ ಹತ್ತ ದಿವ್ಸಗಂಟಲೆ ಪೋಗಾಮಕ್ಕ ಕರ್ಕೊಂಡು ಹೋದ್ರು ವಾಪಸ್ ಬಂದಿದ್ದ ಹಾಡ್ಕಿ ರೊಕ್ಕಾ ಕೇಳಿದ್ಕ, ನೀವು ಹಾಡಿರಂತ ಪಂಚಾಯ್ತವ್ರು ಸರ್ಟಿಫಿಕೇಟ್ ಕೊಟ್ಟಾರೇನ ಅಂತ ಕೇಳಿದ್ರು. ನಮ್ಮ ಜೋಡಿ ನಿಮ್ಮವರ ಇಬ್ಬ್ರ ಬಂದಿದ್ರಲ್ಲಾ? ನೀವ್ಹೇಳಿದ್ಹಂಗ ನಾವು ಹಾಡ್ಕಿ ಮಾಡಿದಿವಿಲ್ಲಂತ ಅವ್ರ್ನ ಕೇಳ್ರಿ ಅಂತ ಅಂದ್ವಿ. ಅದಕ್ಕವ್ರು ಅವೆಲ್ಲಾ ನಡಿಯಾಂಗಿಲ್ಲ ಅಂದ್ರು. ನಮ್ಮ ಜೋಡಿ ಬಂದ ಸರ್ಕಾದವ್ರು ಸರ್ಟಿಫಿಕೇಟ್ ತಗೋಬೇಕಂತ ನಮ್ಗೇನೂ ಹೇಳಿರ್ಲಿಲ್ಲ. ಯಾವ್ಯಾವ ಊರಿಗಿ ಹಾಡ್ಕಿ ಮಾಡ್ಕೊಂಡು ಹೋಗಿದ್ವೊ ಆ ಊರಿಗಿ ಮತ್ತ ಹೊಡಮಳ್ಳಿ(ಮರಳಿ) ಹೋದ್ವಿ. ಹೀಂಗಿಂದ್ಹಿಂಗ್ರಿ ಸರs ನಾವು ಹಾಡ್ಕಿ ಮಾಡಿದ್ದಕ ಸರ್ಟಿಪಿಕೇಟ್ ಬೇಕು ಅಂತ ಕೇಳಿಕೊಂಡ್ವಿ. ಕೆಲವ್ರು ಸುಮ್ನಕೊಟ್ಟ್ರು. ಇನ್ನ ಕೆಲವ್ರು ಕಾಡಿಸಿದ್ರು. ಅವ್ರಿಗಿ ಬೇಕಂದಿದ್ದ ಹಾಡ್ಕಿ ಮಾಡಿಂದs ಸರ್ಟಿಪಿಕೇಟ್‌ಕೊಟ್ಟ್ರು. ಕೆಲವೊಂದು ಸರ್ಕಾರಿ ಪೋಗ್ರಾಮದವ್ರು ಹಾಡ್ಕಿ ಉಗಿದ ಕೂಡ್ಲೆ ರೊಕ್ಕಾ ಕೊಟ್ಟಿದ್ರು. ಅವೆಲ್ಲಾ ಒಂದs ದಿನದ್ದ ಪೋಗ್ರಾಮ್ ಆಗಿದ್ವು. ಹತ್ತ ದಿನದ್ದ ಪೋಗಾಮದ್ದು ಬಾಳs ತ್ರಾಸ ಆಯ್ತು. ಸರಕಾರದವರೇನು ನಮಗ ಕಾರ್ಯಕ್ರಮಕ್ಕ ಮುಂಚಿಗಿನ ರೊಕ್ಕಾ ಕೊಟ್ಟಿರಂಗಿಲ್ಲ. ಹಾಡ್ಕಿಗಿ ಹೋದಾಗ್ನೂ ನಮ್ಮ ಖರ್ಚು ಹಾಕ್ಕೊಂಡ ಹೋಗಿದ್ವಿ. ಹೊಡಮಳ್ಳಿ ಸರ್ಟಿಪಿಕೇಟ ತರಾಕ ಹೋದಾಗ್ಲೂ ನಮ್ಮ ಖರ್ಚ ನಾವs ನೋಡ್ಕೊಂಡ್ವಿ. ಯಾಕs ಸರ್ಕಾರ್ದ ಹಾಡ್ಕಿ ಬಾಳs ಹಣದ್ಲಾ (ಕಷ್ಟ) ಅನಿಸ್ತು. ಈ ಹಣದ್ಲಾ ಬ್ಯಾಡಂತ್ಹೇಳಿ ಜಾತ್ರಿ ಹಾಡ್ಕಿ ಸುರು ಹಚ್ಕೊಂಡ್ವಿ. ಬೆಳೆತಾನ ಹಾಡಿದ್ರೂ ಪರ್ವಾಗಿಲ್ಲ. ಬೆಳಗಾದ ಕೂಡ್ಲೆ ಪಗಾರ ಕೊಡತಾರು. ಅವ್ರ ಕಡೆಯಿಂದ ಸರ್ಟಿಪಿಕೇಟ್ ತಗೊಂಬಾ, ಇವ್ರ ಕಡೆಯಿಂದ ಸರ್ಟಿಫಿಕೇಟ್ ತಗೊಂಬಾ ಅಂತಹೇಳಾಂಗಿಲ್ಲ, ಹಾಡ್ಕಿ ಮುಗದಿಂದ ಪಗಾರ ಕೊಡತಾರು, ಇದ ಚಲೊ ಅನ್ಸಿ ಈಗ ಜಾತ್ರಿ ಹಾಡ್ಕಿ ಮಾಡಾಕ್ಹತ್ತನಿ” – ಸತ್ಯವ್ವ ತೆಳಗೇರಿ

ಹೀಗೆ, ಉಲ್ಲೇಖಿತ ಮೇಲಿನ ಮೂರೂ ಅನುಭವ ಕಥನಗಳೂ ಸರಕಾರದ ಹಾಡಿಕಿ ಹಾಗೂ ಖಾಸಗಿ ಹಾಡಿಕೆಗಳ ಭಿನ್ನ ಸ್ವರೂಪದೊಂದಿಗೆ ಭಿನ್ನ ಸಮಸ್ಯೆಗಳನ್ನು ಅನಾವರಣಗೊಳಿಸುತ್ತವೆ. ಸರಕಾರಿ ಸಂಸ್ಥೆಗಳಲ್ಲಿ ಹಾಡುವ ಹಾಡುಗಳು ಹರದೇಶಿ-ನಾಗೇಶಿ ಹಾಡುಗಳಲ್ಲ. ಸರಕಾರಿಯೋಜನೆಗಳ ಉದ್ದೇಶಗಳಿಗನುಗುಣವಾಗಿ ರೂಪಗೊಂಡಂಥವುಗಳು. ಬಹುತೇಕ ಹಾಡುಗಳನ್ನು ಸರಕಾರದವರೇ ರಚಿಸಿ ತಮ್ಮ ಇಲಾಖೆಯ ಉದ್ದೇಶಕ್ಕೆ ಅನುಗುಣವಾಗಿ ಹಾಡುಗಾರರಿಗೆ ಸಾಹಿತ್ಯ ಒದಗಿಸಿರುತ್ತಾರೆ. ಕೆಲವೊಮ್ಮೆ ಹಾಡುಗಾರರಿಗೆ ಕಾರ್ಯಕ್ರಮದ ಉದ್ದೇಶ ಹೇಳಿ ಸಾಹಿತ್ಯ ರಚಿಸಿಕೊಂಡು ಹಾಡು ಹೇಳಲು ಸೂಚಿಸುತ್ತಾರೆ. ಹರದೇಶಿ-ನಾಗೇಶಿ ಹಾಡುಗಾರರೇ ತಾವು ನಿರ್ವಹಿಸಿಕೊಂಡು ಹೋಗುವ ಹಾಡಿಕೆ ವೃತ್ತಿಗಳನ್ನು ಜಾತ್ರಿ ಹಾಡಿಕೆ, ಸರಕಾರಿ ಹಾಡಿಕೆ ಎಂದು ಎರಡು ನೆಲೆಗಳಲ್ಲಿ ವಿಂಗಡಿಸಿಕೊಂಡಿದ್ದಾರೆ. ಈ ಹಾಡುಗಾರರು ಹೆಚ್ಚಾಗಿ ಜಾತ್ರೆಗಳಲ್ಲಿಯೇ ಹಾಡುತ್ತಿದ್ದರಿಂದ ಜಾತ್ರಿ ಹಾಡಿಕಿ ಎಂದು ಕರೆಯುತ್ತಾರೆ. ಆದರೆ ಹರದೇಶಿ-ನಾಗೇಶಿ ಹಾಡುಗಾರರು ಕೇವಲ ಜಾತ್ರೆಗಳಲ್ಲಿ ಮಾತ್ರ ಹಾಡುವುದಿಲ್ಲ. ಊರ ಮುಖಂಡರ ಮನೆಯ ಉದ್ಘಾಟನೆಯ ಸಂದರ್ಭದಲ್ಲಿ, ಸುಗ್ಗಿ ಕಾಲದಲ್ಲಿ, ಗಣ್ಯರ ತಿಥಿಯ ಸಂದರ್ಭದಲ್ಲಿ, ಮಂಗಲ ಕಾರ್ಯಗಳಲ್ಲಿ ಹರದೇಶಿ-ನಾಗೇಶಿ ಹಾಡುಗಳನ್ನು ಹಾಡುತ್ತಾರೆ. ಈ ಎಲ್ಲಾ ಸಂಗತಿಗಳನ್ನು ಅನುಲಕ್ಷಿಸಿ ಸರಕಾರೇತರ ಹಾಡುಗಳನ್ನು ‘ಖಾಸಗಿ ಹಾಡುಗಳು’ ಎಂದು ಗುರುತಿಸಿಕೊಂಡಿದ್ದೇನೆ. ಹರದೇಶಿ-ನಾಗೇಶಿ ಹಾಡುಗಾರರು ಗುರುತಿಸಿಕೊಂಡಂತೆ ‘ಸರಕಾರಿ ಹಾಡಿಕೆ’ಯನ್ನು ಯಥಾವತ್ತಾಗಿ ಅಧ್ಯಯನದಲ್ಲಿ ಬಳಸಿಕೊಂಡಿದ್ದೇನೆ.

“ಪಸ್ಟಿಗೆ ಸರಕಾರದವ್ರ ಹಾಡ್ಕಿಗಿ ರೊಕ್ಕದ ಸಲವಂದ ಒಪ್ಪಿಗೊಂಡಿದ್ದ್ಯಾ. ಆಮ್ಯಾಲತ್ತ ಸರ‍್ಕಾರಿ ಹಾಡ್ಕಿ ಅಂದ್ರ ಸಮಾಜದವ್ರಿಗಿ ನೀತಿ ಹೇಳು ಸೇವಾ ಕೆಲ್ಸ ಅಂತ ಅನಸಾಕತ್ತು. ದೇವದಾಸಿ ಬಿಡಬ್ಯಾಡ್ರಿ ಅಂತ ಹೇಳ್ತಿರತೀವಿ. ಅದನ್ನ ಹಾಡ್ಕಿ ಮಾಡ್ತಿರತೀವಿ. ಅವು ಪದ್ದುತೆಲ್ಲಾ (ಪದ್ಧತಿಗಳಲ್ಲ) ಅಂತ ಹೇಳ್ತಿರತೀವಿ. ನನಗ ಮಲ್ಲಯ್ಯನ ಪಟ್ಟಾಕಟ್ಟೇತಿ. ಅದಕ್ಕ ಸಂಬಂಧ ಪಟ್ಟಂಗ ಯಾವ ಆಚರಣಾನೂ ಮಾಡಲ್ಲ. ಯಾರರ ಸತ್ತಲ್ಲಿ ಹೋದ್ರ ಹೊಳ್ಳಿ ಮಲ್ಲಯ್ಯ ಪಟ್ಟಾ ಕಟಗೋಬೇಕು. ಆದ್ರ ಅವನ್ನೆಲ್ಲಾ ನಾನು ಮಾಡೂದು ಬಿಟ್ಟೇನಿ. ಸರಕಾರಿ ಹಾಡ್ಕ್ಯಾಗ ಇಂಥಾ ಪದ್ದುತಾ ಬ್ಯಾಡಂದು ಮನ್ಯಾಗ ಮಾಡಿದ್ರ ಆಚಾರ ಹೇಳಾಕೈತಿ, ಬುದ್ನಿಕಾಯಿ ತಿನ್ನಕಾಯ್ತದ ಅಂದಂಗಾಗತ್ತ ತಾಯಿ” ಎನ್ನುವ ಮದನಹಳ್ಳಿ ಭೀಮಾಬಾಯಿ ಮಾತುಗಳು ಸರಕಾರಿ ಹಾಡಿಕೆಯು ಹಾಡು ಕೇಳುವರ ಜೊತೆಯಲ್ಲಿ ಹಾಡು ಹಾಡುವವರಲ್ಲಿಯೂ ಜಾಗೃತಿ ಉಂಟುಮಾಡಿದ್ದನ್ನು ನಿರೂಪಿಸುತ್ತದೆ.

ಖಾಸಗಿ ಹಾಡಿಕೆ ಮಾಡುವವರೆಲ್ಲರಿಗೂ ಸರಕಾರಿ ಸಂಸ್ಥೆಗಳಲ್ಲಿ ಹಾಡುವ ಅವಕಾಶವಿದೆ ಎಂದು ಹೇಳಲಾಗುವುದಿಲ್ಲ. ಸರಕಾರಿ ಸಂಸ್ಥೆಗಳಲ್ಲಿ ಹಾಡಲು ಅವಕಾಶ ಪಡೆಯುವುದು ಅಷ್ಟು ಸುಲಭವಲ್ಲ. ಸರಕಾರದವರೇ ಈ ಹಾಡುಗಾರರನ್ನು ಸಂಪರ್ಕಿಸುವುದಿಲ್ಲ. ಹಾಡುಗಾರರೇ ಸರಕಾರದವರೊಂದಿಗೆ ಸಂಪರ್ಕ ಬೆಳೆಸಬೇಕಾಗುತ್ತದೆ. ಹಾಡುಗಾರರು ನೇರವಾಗಿ ಸರಕಾರಿ ಸಂಸ್ಥೆಗಳನ್ನು ಸಂಪರ್ಕಿಸಲು ಹಿಂಜರಿಯುತ್ತಾರೆ. ಹೀಗಾಗಿ ಅವರು ತಮ್ಮ ಊರಿನ ಮುಖಂಡರ ಇಲ್ಲವೆ ತಮಗೆ ಪರಿಚಯವಿದ್ದವರ ಸಹಾಯವನ್ನು ಯಾಚಿಸುತ್ತಾರೆ. ಪುರುಷ ಹಾಡುಗಾರರು ನೇರವಾಗಿ ಸರಕಾರದ ಬೇರೆ ಬೇರೆ ಇಲಾಖೆಯವರನ್ನು ಸಂಪರ್ಕಿಸಿ, ಹಾಡಿಕೆ ಅವಕಾಶವನ್ನು ಕೇಳುತ್ತಾರೆ. ಆಯಾ ಸರಕಾರಿ ಇಲಾಖೆಗಳ ಕುರಿತು ಸಾಮಾನ್ಯ ಜ್ಞಾನ ಹಾಗೂ ವ್ಯವಹಾರಿಕ ಜ್ಞಾನವಿರುವ ಪುರುಷ ಹಾಡುಗಾರರನ್ನು, ಸರಕಾರಿ ಸಂಸಥೆಗಳು ಬಳಸಿಕೊಳ್ಳುವುದು ಕಡಿಮೆ. ಕಾರಣ ಇವರು ತಮಗೆ ಬರಬೇಕಾದ ವೇತನವನ್ನು ಕಟ್ಟುನಿಟ್ಟಾಗಿ ಕೇಳುತ್ತಾರೆ. ಕಡ್ಡಾಯವಾಗಿ ಊಟ-ವಸತಿ ಅನುಕೂಲಗಳನ್ನು ಕಲ್ಪಿಸಲು ಒತ್ತಾಯಿಸುತ್ತಾರೆ. ಸರಕಾರಿ ಸಿಬ್ಬಂದಿಯವರು ಯಜಮಾನಿಕೆಯನ್ನು ಪ್ರದರ್ಶಿಸಿದರೆ ಪ್ರಶ್ನಿಸುತ್ತಾರೆ. ಹೀಗಾಗಿ ಸರಕಾರಿ ಇಲಾಖೆಯರವರು ಮಹಿಳಾ ಕಲಾವಿದರಿಗೆ ಆದ್ಯತೆ ಕೊಡುತ್ತಾರೆ. ಸಂದರ್ಶಿಸಿದ ಸರಕಾರಿ ಇಲಾಖೆಯ ಸಿಬ್ಬಂದಿಯವರ ಪ್ರಕಾರ ಮಹಿಳಾ ಹಾಡುಗಾರರು ಸಾಮಾನ್ಯವಾಗಿ ಯಾವುದನ್ನು ಪ್ರಶ್ನಿಸುವುದಿಲ್ಲ. ಹೆಚ್ಚಿನದನ್ನು ನಿರೀಕ್ಷಿಸುವುದಿಲ್ಲ. ಅವರು ಪುರುಷ ಕಲಾವಿದರ ಹಾಗೆ ಊರಿಂದೂರಿಗೆ ಹೋಗಲು ವಾಹನ ಸೌಲಭ್ಯವನ್ನು ನಿರೀಕ್ಷಿಸುವುದಿಲ್ಲ. ಸಮೀಪದ ಊರುಗಳಿದ್ದರೆ ನಡೆದುಕೊಂಡೇ ಬರುತ್ತಾರೆ. ಕೆಲಸದ ಒತ್ತಡದಲ್ಲಿ ಮಹಿಳಾ ಕಲಾವಿದರಿಗೆ ಹೀಗಳೆದರೂ ಅವರು ಪ್ರತಿಕ್ರಿಯಿಸುವುದಿಲ್ಲ. ಯಾವುದನ್ನು ಪ್ರಶ್ನಿಸದೇ, ಅವರ ನಿರೀಕ್ಷೆಯಂತೆ ನಡೆದುಕೊಳ್ಳುವ ಮಹಿಳಾ ಕಲಾವಿದರಿಗೆ, ಆದ್ಯತೆ ಕೊಟ್ಟು ಆಯ್ಕೆ ಮಾಡಿಕೊಳ್ಳುತ್ತಾರೆ. ಈ ಆಯ್ಕೆ ಪ್ರಕ್ರಿಯೆಯೂ ಸಾರ್ವಜನಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ವ್ಯಕ್ತಿಯ ಪ್ರಭಾವದ ಮೂಲಕ ನಡೆಯುತ್ತದೆ. ತಮ್ಮ ಕುರಿತು ಸಹಾನುಭೂತಿ ಹಾಗೂ ಗೌರವ ಇಟ್ಟುಕೊಂಡ ಮುಖಂಡರವನ್ನು, ಇಲ್ಲವೆ ಸರಕಾರಿ ಹುದ್ದೆಯಲ್ಲಿ ರುವವರನ್ನು ಮಾತ್ರ ಸಂಪರ್ಕಿಸುತ್ತಾರೆ. “ಸರಕಾರಿ ಹಾಡ್ಕಿ ಕೊಡಿಸ್ತೇನು. ಬೆಳ್ಳಬೆಳತನ ಹಾಡ್ಕಿ ಯಾಕ ಮಾಡಬೇಕು? ರೊಕ್ಕ ಜಗ್ಗಿ(ಹೆಚ್ಚು) ಬರೂದು, ಹಾಡ್ಕಿ ಕಮ್ಮಿ (ಕಡಿಮೆ) ಇರು ಸರ‍್ಕಾರಿ ಹಾಡ್ಕಿ ಕೊಡಿಸ್ತೇನು ಬಾ ಅಂತಾರು. ಅದನ್ನ ನಂಬಿ ಹೇಳಿದವ್ವನ ಹಿಂದ ಬೆನ್ನ ಹತ್ತಿ ಹೋಗಿದ್ದ್ಯಾ. ಆರೋಗ್ಯ ಇಲಾಖಾದಾಗ ಸುಮ್ನ ಅಕಾಡಿ-ಈಕಾಡಿ ಕರಕೊಂಡು ತಿರುಗಾಡಿ, ಹಾಡ್ಸು ಸಾಹೇಬ್ರಿಲ್ಲ. ನಾಳೆ ಬರ್ತಾರಂತ ಇವತ್ತ ಇಲ್ಲೆ ವಸ್ತಿ(ತಂಗುವುದು) ಮಾಡೂನು. ನಾಳಿ ಅವ್ರ‍್ನ ಕಂಡು ಹೋಗೂನು ಅಂತಂದಾ, ನನ್ನ ಕರಕೊಂಡು ಆಪೀಸಿ (ಆಫೀಸು) ನ್ಯಾಗ ಸುಮ್ಮಸುಮ್ಮನ ತಿರಗ್ಯಾಡಿಸುವಾಗನs ಸಂಶಾ(ಸಂಶಯ) ಬಂದಿತ್ತು. ವಸ್ತಿ ಮಾಡೂನು ಅಂತಂದ ಕೂಡ್ಲೆ ನನಗೆ ಖಾತ್ರಿಯಾಗಿ ಹೋಯ್ತು. ಈ ಮನಸ್ಯಾ ಸರಿಯಿಲ್ಲ ಅನ್ನೂದು ಗೊತ್ತಾಯ್ತು. ನನ್ನ ಮಗಳಿಗಿ ಹುಷಾರ ತಪ್ಪೇತಿ. ನಾನು ಹೊಡಮಳ್ಳಿ ಊರಿಗಿ ಹೋಗಾಕ ಬೇಕು ಅಂತಂದ್ಯಾ. ವಾಪಸ ಬಂದಿಂದ, ಅಂವಾ ಏಟು ಸಲಾ ಬಂದ್ರೂ ಒಂದೊಂದು ಸಬೂಬು ಹೇಳಿ ಕಳಿಸಿಬಿಟ್ಟಾ. ಯಾವ ಸರಕಾರಿ ಹಾಡ್ಕಿನs ಬ್ಯಾಡಾ ಅಂತ್ಹೇಳಿ ಜಾತ್ರಿ ಹಾಡ್ಕಿ ಮಾಡ್ಕೊಂತ ಹೊಂಟೇನಿ” ಎಂದು ಹೇಳಿದ ಜನವಾಡದ ಬುದ್ಧವ್ವನ ಮಾತುಗಳನ್ನು ಗಮನಿಸಬೇಕು. ಹಾಡಿಕೆಗೆ ಅವಕಾಶ ಕೊಡಿಸುವ ನೆಪದಲ್ಲಿ ದುರುಪಯೋಗ ಪಡಿಸಿಕೊಳ್ಳುವ ಮನೋಭಾವದ ಪುರುಷರೇ ಹೆಚ್ಚಾಗಿದ್ದರಿಂದಲೋ ಏನೋ ಮಹಿಳಾ ಹಾಡುಗಾರರು ಪುರುಷರನ್ನು ಸಂಪರ್ಕಿಸಲು ಹಿಂಜರಿಯುತ್ತಾರೆ. ಹೀಗಾಗಿಯೇ ಸರಕಾರಿ ಇಲಾಖೆಗಳ ಯೋಜನೆಯ ಅಡಿಯಲ್ಲಿ ಹಾಡುವ ಹರದೇಶಿ-ನಾಗೇಶಿ ಮಹಿಳಾ ಹಾಡುಗಾರರ ಸಂಖ್ಯೆ ಬಹಳ ಕಡಿಮೆ.

ಸರಕಾರಿ ಹಾಡಿಕೆಯಲ್ಲಿ ಶ್ರಮ ಕಡಿಮೆ, ಆದಾಯ ಹೆಚ್ಚು ಎನ್ನುವ ನಂಬಿಕೆಯಿಂದ ಬಂದ ಮಹಿಳಾ ಹಾಡುಗಾರರು ಎದುರಿಸಿದ ಕಷ್ಟಗಳೇ ಹೆಚ್ಚಾಗಿವೆ. ಮೂಲಭೂತ ಅಗತ್ಯಗಳಾದ ಊಟ, ವಸತಿ ಸೌಲಭ್ಯಗಳ ಕೊರತೆಯಿಂದಾಗಿ ಅನುಭವಿಸಿದ ಕಷ್ಟಗಳು ನೂರಾರು. ಖಾಸಗಿ ಹಾಡಿಕೆಯಲ್ಲಾದರೆ ಕರೆಯಿಸಿಕೊಂಡವರು ಊಟ, ವಸತಿ ಸೌಲಭ್ಯವನ್ನು ಒಗಿಸುತ್ತಾರೆ. ಸರಕಾರದವರು ಈ ಕುರಿತು ಆಲೋಚಿಸುವುದೇ ಇಲ್ಲ. ಹಾಡುಗಾರರು ಮಹಿಳೆಯಾದ ಕಾರಣಕ್ಕೆ ಅವಳಿಗೆ ರಕ್ಷಣೆ ಅಗತ್ಯವಿದೆ ಎಂದು ಸರಕಾರಿ ಇಲಾಖೆಯವರು ಆಲೋಚಿಸುವುದಿಲ್ಲ. ಶಾಲೆಯ ಯಾವುದೋ ಒಂದು ಮೂಲೆಯಲ್ಲಿ, ಪಂಚಾಯಿತಿ ಕಚೇರಿಯಲ್ಲಿ ಇರಲು ರೂಮು ಒದಗಿಸಿದರೆ ಒದಗಿಸಿದರು; ಇಲ್ಲದಿದ್ದರೆ ಇಲ್ಲ. ಈ ಮಹಿಳಾ ಹಾಡುಗಾರರಿಗೆ ಸರಕಾರದ ಅತಿಥಿ ಗೃಹದಲ್ಲಿ ವಸತಿ ಸೌಲಭ್ಯ ಕಲ್ಪಿಸಬಹುದು. ಆದರೆ ಸರಕಾರಿ ಕೆಲಸ ನಿರ್ವಹಿಸುವವರಲ್ಲಿಯೂ ಅವರು ‘ದೇವದಾಸಿಯರು’, ‘ಸಾರ್ವಜನಿಕರ ಸ್ವತ್ತು’, ‘ರಕ್ಷಣೆಯ ಅಗತ್ಯವಿಲ್ಲ’ ಎನ್ನುವ ಹಗುರ ಧೋರಣೆ ಇರುತ್ತದೆ. ಯಾಕೆಂದರೆ ಸರಕಾರಿ ಕೆಲಸದಲ್ಲಿದ್ದವರೆಲ್ಲರೂ ಜಾತಿ ಶ್ರೇಣಿಕರಣ ಹಾಗೂ ಲಿಂಗ ಶ್ರೇಣಿಕರಣ ಸಮಾಜದಲ್ಲಿ ಸಾಮಾಜೀಕರಣಗೊಂಡವರೇ. ಹೀಗಾಗಿ ಸರ್ಕಾರದಲ್ಲಿ ಕೆಲಸ ನಿರ್ವಹಿಸುವವರು ಮಹಿಳಾ ಹಾಡುಗಾರರನ್ನು ‘ದೇವದಾಸಿ’ ಹಿನ್ನೆಲೆಯಿಂದಲೇ ನೋಡುವುದರಿಂದ ಅವಳಿಗೆ ರಕ್ಷಣೆ ಒದಗಿಸುವುದು ತಮ್ಮ ಜವಾಬ್ದಾರಿ ಎಂದು ಭಾವಿಸುವುದೇ ಇಲ್ಲ. ಈ ಮಹಿಳೆಯರ ಕೈಯಲ್ಲಿನ ದಪ್ಪು ಇಲ್ಲವೆ ಚೌಡಕಿಯು ಅವರ ಹಿನ್ನೆಲೆಯನ್ನು ಬಹಿರಂಗಪಡಿಸುತ್ತದೆ. ಹೀಗಾಗಿ ಖಾಸಗಿ ಹಾಡಿಕೆಯ ಹಾಗೆ ಇಲ್ಲಿಯೂ ಹೋದ ಊರಲ್ಲೆಲ್ಲಾ ಕೆಲವರು ಇವರ ಮೇಲೆ ಲೈಂಗಿಕ ಹಕ್ಕು ಚಲಾಯಿಸಲು ಪ್ರಯತ್ನಿಸುತ್ತಾರೆ. ಸರಕಾರಿ ಹಾಡಿಕೆಯ ಸಂದರ್ಭದಲ್ಲಿ ಹಾಡುವುದರಿಂದಾಗಿ ದಣಿವು ಆಗದಿದ್ದರೂ, ಸ್ವ ರಕ್ಷಣೆಯ ಕಾರಣಕ್ಕಾಗಿ ರಾತ್ರಿಯಲ್ಲಿ ಅರೆ ನಿದ್ರಾವಸ್ಥೆಯಲ್ಲಿ ಇರಬೇಕಾದ ಸ್ಥಿತಿಯು ಅವರನ್ನು ಮತ್ತಷ್ಟು ದಣಿಸುತ್ತದೆ; ಇನ್ನಷ್ಟು ಕಂಗೆಡಿಸುತ್ತದೆ. ಇದಕ್ಕೆ ಹೆದರಿಯೇ ಹುಲಿಯಾಳದ ರತ್ನವ್ವನಂತೆ ಅದೆಷ್ಟೋ ಹಾಡುಗಾರರು ಸರಕಾರಿ ಹಾಡಿಕೆಗೆ ವಿದಾಯ ಹೇಳಿದ್ದಾರೆ; ಖಾಸಗಿ ಹಾಡಿಕೆಯನ್ನೆ ಒಪ್ಪಿಕೊಂಡಿದ್ದಾರೆ.

ಸರಕಾರಿ ಹಾಡಿಕೆ ಅನುಕೂಲ ಎನ್ನುವುದಕ್ಕೆ ಮಹಿಳಾ ಹಾಡುಗಾರರು ಈ ಕಾರಣಗಳನ್ನು ನೀಡುತ್ತಾರೆ.

೧. ಪದ ಖರೀದಿ ಇರುವುದಿಲ್ಲ. ಇದಕ್ಕಾಗಿ ಯಾವ ಪುರುಷರನ್ನು ಇಲ್ಲವೆ ಕವಿಗಳನ್ನು ಅವಲಂಬಿಸಬೇಕಿಲ್ಲ. ಪದ ಖರೀದಿಗಾಗಿ ವರ್ಷಕ್ಕೊಂದಕ್ಕೆ ಎಂಟರಿಂದ ಹತ್ತು ಸಾವಿರ ರೂಪಾಯಿ ಖರ್ಚು ಮಾಡಬೇಕಾಗುತ್ತದೆ. ಅಷ್ಟು ಖರ್ಚು ಗಳಿಕೆಯಾಗಿ ಉಳಿಯುತ್ತದೆ.

೨. ಹಾಡುವ ಅವಧಿಕ ಬಹಳ ಕಡಿಮೆ. ಕಡಿಮೆಯೆಂದರೆ ಹದಿನೈದು ನಿಮಿಷ, ಹೆಚ್ಚೆಂದರೆ ಎರಡು ಗಂಟೆ. ಚಿಕ್ಕ ವೇಳೆಯಲ್ಲಿ ಹಾಡಿದ್ದಕ್ಕೆ ಹೆಚ್ಚು ವೇತನವನ್ನು ನೀಡುತ್ತಾರೆ. ಐದು ನೂರರಿಂದ ಎರಡು ಸಾವಿದವರೆಗೆ ವೇತನ ಕೊಡುತ್ತಾರೆ. ಆದರೆ ಖಾಸಗಿಯವರು ಹಾಗಲ್ಲ. ಇಡೀ ರಾತ್ರಿ ಅಂದರೆ ಸರಿಸುಮಾರು ನಾಲ್ಕರಿಂದ ಐದು ಗಂಟೆಗಳವರೆಗೆ ಹಾಡಿಸಿಕೊಳ್ಳುತ್ತಾರೆ. ಆಯಾಸಗೊಂಡು ಕುಳಿತರೂ ಅದಕ್ಕವರು, ಅವಮಾನಿಸಿ ಹಾಡಲು ಒತ್ತಾಯಿಸುತ್ತಾರೆ. ಇಷ್ಟು ದೀರ್ಘ ಅವಧಿಯವರೆಗೆ ಹಾಡಿದರೂ ಅವರು ಕೊಡುವ ವೇತನ ಹದಿನೈದು ನೂರರಿಂದ ಆರು ಸಾವಿರದವರೆಗೆ; ಹೆಚ್ಚೆಂದರೆ ಹತ್ತು ಸಾವಿದವರೆಗೆ ವೇತನ ಕೊಡುತ್ತಾರೆ. ಇಷ್ಟು ಮೊತ್ತದ ಸಂಬಳ ಕೊಡುವುದು ಅಪರೂಪ. ಆರು ಸಾವಿರದವರೆಗೆ ವೇತನ ಕೊಡುವವರು, ಎರಡು ರಾತ್ರಿ, ಮೂರು ಹಗಲಿನವರೆಗೆ ಹಾಡಬೇಕೆಂದು ಶರತ್ತು ವಿಧಿಸಿರುತ್ತಾರೆ. ಹಗಲಿನಲ್ಲಿ ಒಂಭತ್ತು ಇಲ್ಲವೆ ಹತ್ತು ಗಂಟೆಯಿಂದ, ಸಾಯಂಕಾಲ ನಾಲ್ಕು ಇಲ್ಲವೆ ಐದು ಗಂಟೆಯವರೆಗೆ ಹಾಡಿಸಿಕೊಳ್ಳುತ್ತಾರೆ. ರಾತ್ರಿಯಲ್ಲಿ ಒಂಭತ್ತು ಇಲ್ಲವೆ ಹತ್ತು ಗಂಟೆಯಿಂದ ಪ್ರಾರಂಭಿಸಿದರೆ ನಸುಕಿನ ಐದು ಗಂಟೆ ಇಲ್ಲವೆ ಬೆಳಗಿನ ಆರು ಗಂಟೆಯವರೆಗೆ ಹಾಡಿಕೆ ನಡೆಯುತ್ತದೆ. ಎರಡು ರಾತ್ರಿ ಮೂರು ಹಗಲು ಅಥವಾ ಮೂರು ರಾತ್ರಿ ಎರಡು ಹಗಲಿನ ಹಾಡುವ ಅವಧಿಯ ಲೆಕ್ಕ ಹಿಡಿದರೆ ಇಪ್ಪತ್ತೈದು ಗಂಟೆಗಳವರೆಗೆ ಹಾಡಬೇಕಾಗುತ್ತದೆ. ಇದಕ್ಕೆ ಖಾಸಗಿಯವರು ಕೊಡುವ ವೇತನ ಆರರಿಂದ ಹತ್ತು ಸಾವಿರ ರೂಪಾಯಿಗಳನ್ನು ಮಾತ್ರ.

೩. ಖಾಸಗಿಯಲ್ಲಿ ಜಾತ್ರೆಗಳ ಕಾಲದಲ್ಲಿ (ಸೀಜನ್) ಮಾತ್ರ ಹಾಡಿಕಿಗೆ ಆಹ್ವಾನಗಳು ಹೆಚ್ಚಾಗಿ ಬರುತ್ತವೆ. ಉಳಿದ ಅವಧಿಯಲ್ಲಿ ತಿಂಗಳಿಗೆ ಏಳೆಂಟು ಆಹ್ವಾನಗಳು ಬರುತ್ತವೆ. ಸರಕಾರದಲ್ಲಿ ಹಾಗಲ್ಲ. ದನ್ಯಾಳ ದುರುಗವ್ವ ಹೇಳಿದ ಹಾಗೆ ತಿಂಗಳಲ್ಲಿ ಇಪ್ಪತ್ತೊಂಭತ್ತು ದಿನಗಳವರೆಗೆ ಯಾವ ಆಯಾಸವಿಲ್ಲದೆ ಹಾಡುವ ಅವಕಾಶವಿರುತ್ತದೆ. ಕೈತುಂಬ ಹಣವೂ ಬರುತ್ತದೆ.

ಹಾಡಿಕೆ ಸರಕಾರಿ ಬೇಕು ಎಂದರೆ ಹೇಳುವ ಮಹಿಳಾ ಹಾಡುಗಾರರು ಮೇಲಿನ ಕಾರಣಗಳನ್ನು ನೀಡಿದರೆ ಖಾಸಗಿ ಹಾಡಿಕೆ ಬೇಕು ಎನ್ನುವವರು ಈ ಕೆಳಗಿನ ಕಾರಣಗಳನ್ನು ನೀಡುತ್ತಾರೆ.

೧. ಖಾಸಗಿಯವರು ಸರಕಾರದವರ ಹಾಗೆ ಹಾಡಿದ್ದೇವೆ ಎನ್ನುವುದಕ್ಕೆ ಪ್ರಮಾಣಪತ್ರ ಕೇಳುವುದಿಲ್ಲ. ಪ್ರಮಾಣ ಪತ್ರ ಪಡೆದುಕೊಳ್ಳುವುದಕ್ಕಾಗಿ ಪಂಚಾಯ್ತಿಯವರಿಗೆ ತಗ್ಗಿ-ಬಗ್ಗಿ ನಡೆಯಬೇಕಾದ ಪ್ರಮೇಯವೇ ಬರುವುದಿಲ್ಲ. ಪ್ರಮಾಣ ಪತ್ರ ನೀಡುವ ಪಂಚಾಯ್ತಿಯವರು ಹಾಡುಗಾರರ ಹಾಡಿಕೆಯಿಂದ ಸರಕಾರದವರು ವೇತನ ನೀಡುತ್ತಾರೆ ಎಂದು ಭಾವಿಸುವುದೇ ಇಲ್ಲ. ಬದಲು ಅವರ ಪ್ರಮಾಣ ಪತ್ರದಿಂದ ಈ ಹಾಡುಗಾರರಿಗೆ ವೇತನ ಬರುತ್ತದೆಂದು ಭಾವಿಸಿರುತ್ತಾರೆ. ಹೀಗಾಗಿ ಒಂದು ಪ್ರಮಾಣ ಪತ್ರಕ್ಕೆ ಸಹಿ ಮಾಡಲು ನೂರು ಇಲ್ಲವೆ ಇನ್ನೂರು ರೂಪಾಯಿಗಳನ್ನು ಹಾಡುಗಾರರಿಂದ ನಿರೀಕ್ಷಿಸುತ್ತಾರೆ. ಸರಕಾದವರ ಹಾಗೆ ಖಾಸಗಿಯವವರು ಹಾಡಿಕೆ ಮುಗಿದ ನಂತರ ವೇತನ ಕೊಡುವುದಿಲ್ಲ. ಖಾಸಗಿಯವರು ಹಾಡಿಕೆಗೆ ಚಾಜ ಕೊಡುವಾಗ ಒಂದಿಷ್ಟು ಹಣವನ್ನು (ಬಸ್‌ಚಾರ್ಜ್‌‌ನ್ನು ಗಮನದಲ್ಲಿಟ್ಟುಕೊಂಡು) ಕೊಡುತ್ತಾರೆ. ಹಾಡಿಕೆ ಮುಗಿದ ತಕ್ಷಣ ಮುಂಗಡವಾಗಿ ಕೊಟ್ಟ ಹಣವನ್ನು ಕಳೆದು ಉಳಿದ ಹಣವನ್ನು ಯಾವ ಪ್ರಮಾಣ ಪತ್ರ ಕೇಳದೇ ಕೊಟ್ಟುಬಿಡುತ್ತಾರೆ.

೨. ಸರಕಾರದವರು ಎಷ್ಟು ದಿನಗಳವರೆಗೆ ಹಾಡಿಸುತ್ತಾರೊ, ಅಷ್ಟು ದಿನಗಳ ವೇತನವನ್ನು ಆಯಾ ದಿನಗಳಂದೇ ಕೊಡುವುದಿಲ್ಲ. ಹಾಡಿಕೆ ಮುಗಿದ ನಂತರ ಹಾಡಿದವರಿಂದ ಪ್ರಮಾಣ ಪತ್ರತ ಪಡೆದುಕೊಂಡು ಕೊನೆಯಲ್ಲಿ ವೇತನ ನೀಡುತ್ತಾರೆ. ಅಂದರೆ ಹಾಡುಗಾರರು ಎಷ್ಟು ದಿನಗಳವರೆಗೆ ಹಾಡುತ್ತಾರೋ ಅಷ್ಟು ದಿನಗಳ ಖರ್ಚನ್ನು ಅವರೇ ನಿಭಾಯಿಸಬೇಕಾಗುತ್ತದೆ. ಸರಕಾರಿ ಹಾಡಿಕೆಯನ್ನು ಒಂದು ಉದ್ಯಮ ಎಂದು ಪರಿಭಾವಿಸಿದರೆ, ಅದನ್ನು ಪ್ರಾರಂಭಿಸಲು ಹಣ ಹೂಡಿಕೆ ಮಾಡಬೇಕಾಗುತ್ತದೆ. ಬಡತನವನ್ನೇ ಹೊದ್ದು ಮಲಗಿದ ಇವರಿಗೆ ಒಂದು ತಿಂಗಳ ಅವಧಿಯವರೆಗೆ ಮೇಳದ ಖರ್ಚನ್ನು ಹೊಂದಿಸಿಕೊಳ್ಳುವುದು ಹಾಗೂ ನಿಭಾಯಿಸುವುದು ಕಷ್ಟವಾಗುತ್ತದೆ. ಹೀಗೆ ದೀರ್ಘ ಅವಧಿಯವರೆಗೆ ಹಣ ಹೂಡಿಕೆ ಮಾಡಬೇಕಾದ ಪ್ರಶ್ನೆ ಖಾಸಗಿ ಹಾಡಿಕೆಯಲ್ಲಿ ಎದುರಾಗುವುದೇ ಇಲ್ಲ.

೩. ಹಗಲು ರಾತ್ರಿ ಕಷ್ಟಪಟ್ಟು ಕಲಿತ ಹರದೇಶಿ ಇಲ್ಲವೆ ನಾಗೇಶಿ ಹಾಡುಗಳು ರಂಗ ತಾಲೀಮಿಗೆ ಅವಕಾಶವಿಲ್ಲದೆ, ಆ ಹಾಡುಗಳ ಪ್ರದರ್ಶನದ ಒತ್ತಡವಿಲ್ಲದೆ ಮರೆಯುವ ಅಪಾಯವಿದೆ. ಈ ಅಭಿಪ್ರಾಯವನ್ನು ಬಹುತೇಕ ಮಹಿಳಾ ಹಾಡುಗಾರರು ಅಭಿವ್ಯಕ್ತಿಸಿದರು.

೪. ಹಾಡಿಕೆಗೆಂದು ಕರೆಸಿದ ಜಾತ್ರೆಯವರು, ಹಾಡಬೇಡವೆಂದು ನಿರ್ಬಂಧಿಸುವುದಿಲ್ಲ. ಆದರೆ ಸರಕಾರಿ ಹಾಡಿಕೆಯಲ್ಲಿ ಪಾನ ನಿಷೇಧ, ಬಾಲ್ಯ ವಿವಾಹ ನಿಷೇಧದಂತಹ ಸಂಗತಿಗಳನ್ನು ಹಾಡಿದರೆ ವಿಶೇಷವಾಗಿ ಕುಡುಕರು ಈ ಹಾಡುಗಾರರನ್ನು ಅಕ್ಷರಶಃ ಹಾಡಿಸದೇ ಓಡಿಸಿದ್ದಾರೆ. ಇಂಥಹ ಸಂದರ್ಭಗಳಲ್ಲಿ ಸರಕಾರವು ಹಾಡುಗಾರರ ವೇತನವನ್ನು ಕಡತಗೊಳಿಸಿದರೆ; ಮತ್ತುಯಾಕೆ ಹಾಡಿಲ್ಲವೆಂದು ಹಾಡುಗಾರರನ್ನು ತರಾಟೆಗೆ ತೆಗೆದುಕೊಂಡಿದೆ. ಆದರೆ ಈ ಬಗೆಯ ಇಕ್ಕಟ್ಟುಗಳು ಖಾಸಗಿ ಹಾಡಿಕೆಯಲ್ಲಿ ಎದುರಾಗುವುದಿಲ್ಲ.

೫. ಖಾಸಗಿ ಹಾಡಿಕೆಗೆ ಚಾಜ ಕೊಟ್ಟು ಕರೆಯಿಸಿಕೊಂಡ ಮುಖಂಡರು ಈ ಮಹಿಳಾ ಹಾಡುಗಾರರ ಸಂಪೂರ್ಣ ಸಂರಕ್ಷಣಾ ಜವಾಬ್ದಾರಿಯನ್ನು ಹೊತ್ತುಕೊಂಡಿರುತ್ತಾರೆ. ಹಾಡಿಕೆಗೆ ಕರೆಯಿಸಿದವರು ಮಹಿಳಾ ಹಾಡುಗಾರರ ಮೇಲೆ ಏನಾದರೂ ಆದರೆ ಅದು ತಮ್ಮ ಊರಿಗೆ ಕೆಟ್ಟ ಹೆಸರು ಎಂದು ಭಾವಿಸುತ್ತಾರೆ. ಹೀಗಾಗಿ ಊರಿನ ಬಹುತೇಕ ಮುಖಂಡರು ಮಹಿಳಾ ಹಾಡುಗಾರರಿಗೆ ರಕ್ಷಣೆ ಒದಗಿಸುತ್ತಾರೆ. ಹೀಗಾಗಿಯೇ ಏನೋ ಜಮಖಂಡಿಯ ದುರ್ಗವ್ವವನ್ನು ಮುಟ್ಟಿದವನ ಕೈಯನ್ನು ಊರಿನ ಗೌಡ ಕುಡುಗೋಲಿನಿಂದ ಕಡಿದದ್ದು. ಕೆಲವು ಹಾಡುಗಾರರು -ಜನವಾಡದ ಬುದ್ದವ್ವ, ಮಂದರೂಪದ ಈರಮ್ಮ-ಹೇಳಿದ ಹಾಗೆ, ಚಾಜ ಕೊಡಲು ಬಂದವರಿಂದಲೇ ರಕ್ಷಣಾ ಪತ್ರ ಬರೆಯಿಸಿ ಸಹಿ ಮಾಡಿಸಿಕೊಳ್ಳುತ್ತಾರೆ. “ನಾವು ನಿಮ್ಮನ್ನು ನಮ್ಮೂರಿಗೆ (ಊರ ಹೆಸರುಉಲ್ಲೇಕವಾಗಿರುತ್ತದೆ) ಹಾಡಿಕೆಗೆ ಕರೆಯಿಸಿದ್ದೇವೆ. ನಿಮ್ಮ ಮೇಲೆ ಏನೂ ಆಗದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ. ನಿಮಗೆ ರಕ್ಷಣೆ ಕೊಡುತ್ತೇವೆ” ಎಂದು ರಕ್ಷಣಾ ಪತ್ರವನ್ನು ಚಾಜ ಕೊಡಲು ಬಂದವರಿಂದಲೇ ಬರೆಯಿಸಿಕೊಳ್ಳುತ್ತಾರೆ. ಚಾಜ ಕೊಡಲು ಬರುವವನು ಊರಿನ ತಳವಾರ. ಅವನಿಗೆ ಈ ಬಗೆಯ ರಕ್ಷಣಾ ಪತ್ರ ಬರೆದು ಕೊಡಲು ಆಯಾ ಊರಿನ ಗೌಡರು ಒಪ್ಪಿಗೆ ನೀಡಿರುತ್ತಾರೆ. ಹಾಡುಗಾರಿಕೆಗೆ ಹೋಗುವಾಗ ಈ ಬಗೆಯ ರಕ್ಷಣಾ ಪತ್ರ ಹಾಡುಗಾರರಲ್ಲಿ ಆತಂಕವನ್ನು ಕಡಿಮೆಯಾಗಿಸುತ್ತದೆ. ಎಲ್ಲ ಹರದೇಶಿ-ನಾಗೇಶಿ ಮಹಿಳಾ ಹಾಡುಗಾರರು ಈ ಬಗೆಯ ರಕ್ಷಣಾ ಪತ್ರ ಪಡೆದುಕೊಂಡೇ ಹಾಡಿಕೆಗೆ ಹೋಗಿರುವುದಿಲ್ಲ. ಬಹುತೇಕವಾಗಿ ಊರ ಮುಖಂಡರು ಅವಳ ರಕ್ಷಣೆಗಾಗಿ ತಳವಾರನನ್ನು ನೇಮಿಸಿರುತ್ತಾರೆ. ಇಲ್ಲವೆ ಹಾಡುಗಾರಳ ಜಾತಿಯ ವ್ಯಕ್ತಿಯನ್ನು ನೇಮಿಸಿರುತ್ತಾರೆ. ಈ ಬಗೆಯ ರಕ್ಷಣಾ ಜವಾಬ್ದಾರಿಯನ್ನು ಸರಕಾರ ಹೊತ್ತುಕೊಳ್ಳುವುದೇ ಇಲ್ಲ.

ಖಾಸಗಿಯವರು ಒಂದು ರಾತ್ರಿಯ ಹಾಡಿಕೆಯಿದ್ದರೂ ಹಾಡುಗಾರರಿಗೆ ವಿಶ್ರಾಂತಿ ಪಡೆದುಕೊಳ್ಳಲು ಹಾಗೂ ಹಾಡಿಕೆಗೆ ತಯಾರಾಗಲು (ಅಲಂಕರಿಸಿಕೊಳ್ಳಲು) ಒಂದು ಕೊಠಡಿಯನ್ನು ಕೊಟ್ಟಿರುತ್ತಾರೆ. ಶಾಲೆಯಲ್ಲಿ, ಇಲ್ಲವೆ ಸಮುದಾಯ ಭವನದಲ್ಲಿ, ಇಲ್ಲವೆ ಪಂಚಾಯಿತಿ ಕಛೇರಿಯಲ್ಲಿ ಈ ಹಾಡುಗಾರರಿಗೆ ಇಳಿದುಕೊಳ್ಳಲು ಕೋಣೆಗಳನ್ನು ಕೊಟ್ಟಿರುತ್ತಾರೆ. ಸರಕಾರದವರು ಈ ಬಗೆಯ ವ್ಯಕ್ತಿಗತ ಕಾಳಜಿಯನ್ನು ತೋರುವುದಿಲ್ಲ.