ಲಾವಣಿ ಅಥವಾ ಗೀಗೀ ಸಾಹಿತ್ಯ ಸಂಗ್ರಹಣೆ ಫ್ಲೀಟರಿಂದ ೧೮೮೫ ರಿಂದ ಪ್ರಾರಂಭವಾಗಿವೆ. ಎಲ್ಲಾ ಲಾವಣಿ ಸಾಹಿತ್ಯವು ಕಲ್ಗಿ-ತುರಾಯಿ, ಇಲ್ಲವೆ ಹರದೇಶಿ-ನಾಗೇಶಿ; ಇಲ್ಲವೇ ಸವಾಲ್-ಜವಾಬ್‌ಗೆ ಸೇರಿದವುಗಳಾಗಿರುವುದಿಲ್ಲ. ಚಿಟಕೆ ಲಾವಣಿ, ಒಂಟಿ ಲಾವಣಿ, ಮೇಳ ಲಾವಣಿ ಹೀಗೆ ಅನೇಕ ರೀತಿಯಲ್ಲಿ ಲಾವಣಿಯು ರೂಪಾಂತರ ಹೊಂದಿದೆ. ಪ್ರಸ್ತುತ ಅಧ್ಯಯನವು ಲಾವಣಿಯಿಂದ ಪ್ರತ್ಯೇಕಗೊಂಡು ಬೆಳೆದ ದಪ್ಪಿನ ಪದದ ಕುರಿತಾಗಿದೆ. ಈ ದಪ್ಪಿನ ಪದಗಳನ್ನು ಹರದೇಶಿ-ನಾಗೇಶಿ ಹಾಡುಗಳು, ಕಲ್ಗಿ-ತುರಾಯಿ ಹಾಡುಗಳು, ಸವಾಲ್-ಜವಾಬ್‌ಹಾಡುಗಳು ಎಂದು ಕರೆಯಲಾಗುತ್ತದೆ. ಗಂಡ್ಹೆಚ್ಚು-ಹೆಣ್ಣ್ಹೆಚ್ಚು ಎನ್ನುವ ಹಾಡಿನ ಹೆಸರೇ ಸೂಚಿಸುವಂತೆ ಹಾಡುವ ಸಾಹಿತ್ಯದಲ್ಲಿ, ಹಾಡುಗಾರರಲ್ಲಿ ಸಹಜವಾದ ಸ್ಪರ್ಧೆಯಿರುತ್ತದೆ.

ಹರದೇಶಿ-ನಾಗೇಶಿ ಹಾಡುಗಳ ಸಂಪಾದಿತ ಕೃತಿಗಳು, ಹಾಡು ಪ್ರದರ್ಶನಗೊಳ್ಳುವ ಆಚರಣೆ ಹಾಗೂ ಸಂದರ್ಭಗಳನ್ನು ಒಳಗೊಂಡು ಸಂಗ್ರಹವಾಗಿವೆಯೇ ಅಥವಾ ಹೊರತುಪಡಿಸಿ ಸಂಗ್ರಹವಾಗಿವೆಯೇ ಎನ್ನುವುದನ್ನು ಗಮನಿಸಬೇಕಿದೆ.

ಅಧ್ಯಯನಕಾರರಾದ ಸಂಗಮೇಶ ಬಿರಾದಾರ ಅವರು ‘ಚಾಪ ಹಾಕತೀವ ದಪ್ಪಿನ ಮ್ಯಾಲ’ ತರಂಗ ೨ರಲ್ಲಿ ತಮ್ಮ ಹರದೇಶಿ-ನಾಗೇಶಿ ಹಾಡುಗಳ ಸಂಪಾದನೆಯ ಕುರಿತು ಹೀಗೆ ಹೇಳಿದ್ದಾರೆ. “ಇಲ್ಲಿ ಪೌರಾಣಿಕ ಲಾವಣಿಗಳನ್ನು ಸಂಗ್ರಹಿಸಲಾಗಿದೆ. ರಾಮಾಯಣ, ಮಹಾಭಾರತ, ಭಾಗವತ ಮತ್ತು ಇನ್ನುಳಿದ ಪುರಾಣಗಳಲ್ಲಿ ಬಂದ ಕಥೆಗಳನ್ನು ಆಧರಿಸಿ ಬರೆದ ಅಪ್ರಕಟಿತ ಹಾಡುಗಳನ್ನು ಪ್ರಕಟಿಸಿದೆ. ಪ್ರಾತಿನಿಧಿಕ ಎಲ್ಲ ಕವಿಗಳ ಮಾದರಿಗಳನ್ನು ತೆಗೆದುಕೊಳ್ಳಲಾಗಿಲ್ಲ. ಏಕೆಂದರೆ… ಗಾತ್ರ ಕೈ ಮೀರುತ್ತದೆ. ಆದ್ದರಿಂದ ಹದಿನೈದು ಪದಗಳನ್ನು ಮಾತ್ರ ಆರಿಸಿಕೊಂಡಿದ್ದೇನೆ” (ಸಂಗಮೇಶ ಬಿರಾದಾರ, ೧೯೮೧, ಪು.೬) ಸಂಗಮೇಶ ಬಿರಾದಾರ ಅವರು ಸವಾಲ್-ಜವಾಬ್ ಹಾಡುಗಳಲ್ಲಿ ಪೌರಾಣಿಕ ಲಾವಣಿಗಳೆನ್ನುವುದನ್ನು ನಿರ್ದಿಷ್ಟವಾಗಿ ಗುರುತಿಸಿಕೊಂಡಿದ್ದಾರೆ; ಅಪ್ರಕಟಿತ ಎನ್ನುವುದಕ್ಕೆ ಹೆಚ್ಚು ಒತ್ತು ನೀಡಿದ್ದಾರೆ; ಪ್ರಕಟಿಸಬೇಕೆಂದ ಸಂಪಾದಿತ ಕೃತಿಯ ಗಾತ್ರವನ್ನು ಗಮನದಲ್ಲಿಟ್ಟುಕೊಂಡೇ ಹಾಡುಗಳನ್ನು ಸಂಗ್ರಹಿಸಿದ್ದಾರೆ.

ಹರದೇಶಿ ಹಾಡುಗಾರರಾದ ಕಾಶಿನಾಥ ಅವರು ‘ಉತ್ತರ ಕರ್ನಾಟಕದ ಕಲ್ಗಿ-ತುರಾಯಿ, ಗೀ, ಗೀ ಪದಗಳು” ಎನ್ನುವ ಸಂಪಾದಿತ ಕೃತಿಯನ್ನು ಹೊರತಂದಿದ್ದಾರೆ. ‘ಅರಿಕೆ’ಯಲ್ಲಿ ಅವರು ಹೇಳಿಕೊಂಡದ್ದು ಹೀಗೆ “ನನ್ನ ಬಡತನದ ಬಾಳಿನಲ್ಲಿ ಮುದ್ರಿಸಿದ ಈ ಹಾಡುಗಳು ಓದುಗರನ್ನು ದೃಷ್ಟಿಯಲ್ಲಿಟ್ಟುಕೊಂಡು ಪೌರಾಣಿಕ ಮತ್ತು ಆಧ್ಯಾತ್ಮಿಕವಾದ ೨೭ ಪದಗಳನ್ನು ಅರಿಸಿ ಮುದ್ರಿಸಿದ್ದೇನೆ.” (ಕಾಶಿನಾಥ ಚವ್ಹಾಣ, ೧೯೯೫, ಪು.IV) ಕಾಶಿನಾಥ ಅವರು ಓದುಗರಿಗೆ ಒತ್ತು ನೀಡಿದ್ದಾರೆ. ಓದುಗರನ್ನು ಸುಶಿಕ್ಷಿತರೆಂದೇ ಅರ್ಥೈಸಲಾಗುತ್ತದೆ. ಸುಶಿಕ್ಷಿತ ವರ್ಗವನ್ನು ಜನಪದ ಹಾಡುಗಾರರು ‘ಮಡಿವಂತಿಕೆ ಮನೋಭಾದವರು’ ಎಂದೇ ನೋಡುತ್ತಾರೆ. ನಾನು ಅವರನ್ನು ಸಂದರ್ಶಿಸುತ್ತಿದ್ದ ದಿನದಂದು ಮಾಗಾಂವದಲ್ಲಿ ಹಾಡಿಕೆ ಇತ್ತು. ‘ಅವು ನೀವು ಕೇಳುವಂಗ ಇರೂದಿಲ್ಲ. ಕೆಟ್ಟ ಹೊಲಸ ಮಾತಾಡ್ತಾರು. ಒಬ್ಬರಿಗೊಬ್ಬರು ಬೈದಾಡಿ ಹಾಡ್ತಾರ. ನೀವು ಕಲ್ತವರು… ನೋಡೋದು ಬಿಡೋದು ನಿಮಗೆ ಬಿಟ್ಟಕೊಟ್ಟಿದ್ದು” ಎಂದು ಮಾಗಾಂವದಲ್ಲಿನ ಹಾಡಿಕೆಯ ಕುರಿತು ಕಾಶಿನಾಥ ಚವ್ಹಾಣ ಹೇಳಿದರು. ಕಾಶಿನಾಥ ಚವ್ಹಾಣ ಅವರು ಹರದೇಶಿ-ನಾಗೇಶಿ ಹಾಡುಗಾರರೂ ಹೌದು; ತಾವು ಹೇಳುವ ಹಾಡುಗಳನ್ನು ಸಂಪಾಸಿದ ಸಂಪಾದಕರೂ ಹೌದು. ಉಲ್ಲೇಖಿತ ಅವರ ಮೇಲಿನ ಮಾತುಗಳು ಹರದೇಶಿ-ನಾಗೇಶಿ ಹಾಡುಗಳ ವಾಸ್ತವ ಸ್ವರೂಪವನ್ನು ತಿಳಿಸುತ್ತದೆ. ಅಂದರೆ ಸಂಪಾದಿತ ಹರದೇಶಿ-ನಾಗೇಶಿ ಹಾಡುಗಳ ಹಾಗೆ ಪ್ರದರ್ಶನ ಸಂದರ್ಭದಲ್ಲಿನ ಹರದೇಶಿ-ನಾಗೇಶಿ ಹಾಡುಗಳು ಇರುವುದಿಲ್ಲ ಎನ್ನುವುದು. ಹರದೇಶಿ-ನಾಗೇಶಿಯಂತಹ ಹಾಡುಗಳನ್ನು ಲಠ್ಠೆ ಅವರಂತಹ ಜನಪದ ವಿದ್ವಾಂಸರು ಸಂಪಾದಿಸಿದ್ದಿರಬಹುದು; ಇಲ್ಲವೆ ಕಾಶಿನಾಥ ಚವ್ಹಾಣ ಅವರಂತಹ ಜನಪದ ಹಾಡುಗಾರರೇ ಸಂಪಾದಿಸಿದ್ದಾಗಿರಬಹುದು- ಇವರು ಹರದೇಶಿ-ನಾಗೇಶಿಯಂಥ ಹಾಡುಗಳನ್ನು ಸಂಪಾದಿಸುವಾಗ ಓದುಗ ವರ್ಗವನ್ನು ಗಮನದಲ್ಲಿಟ್ಟುಕೊಳ್ಳುತ್ತಾರೆ. ಓದುಗರನ್ನು ‘ಸುಶಿಕ್ಷಿತರು’, ‘ಭಾಷಾ ಮಡಿವಂತಿಕೆಯುಳ್ಳವರು’ ಎಂದೇ ಪರಿಭಾವಿಸುತ್ತಾರೆ. ಹೀಗೇ ಓದುಗರ ಕುರಿತಿರುವ ಪೂರ್ವ ಕಲ್ಪನೆಗಳು ಹರದೇಶಿ-ನಾಗೇಶಿಯಂತಹ ಹಾಡುಗಳನ್ನು ಸಂಪಾದಿಸುವವರಿಗೆ ಮಡಿವಂತಿಕೆಯ ಗಡಿ ರೇಖೆಯನ್ನು ಹಾಕಿಕೊಳ್ಳುವಂತೆ ಒತ್ತಾಯಿಸುತ್ತದೆ.

ಇದುವರೆಗೆ ಸಂಗ್ರಹಿತವಾದ ಜನಪದ ಸಾಹಿತ್ಯವು ಪ್ರದರ್ಶನ ಸಂದರ್ಭದಲ್ಲಿ ಹಾಡುಗಾರರು ಹೇಳಿದ ಹಾಡುಗಳನ್ನು ಅನುಲಕ್ಷಿಸಿ ಸಂಗ್ರಹಿಸಿಲ್ಲ. ಹರದೇಶಿನಾಗೇಶಿ ಹಾಡುಗಳು ಇದಕ್ಕೆ ಹೊರತಾಗಿಲ್ಲ. “ನಿಮ್ಮ ಹಾಡ್ಕಿನ ಪ್ರಸಿದ್ಧ ಮಾಡತೇವು ಅಂತ್ಹೇಳಿ ನಮ್ಮ ಬಲ್ಲೆಯಿದ್ದ (ಹತ್ತಿರವಿದ್ದ) ಹೆಣ್ಣೆಚ್ಚು ಮಾಡೋ ಹಾಡು, ಗಂಡ ಹೆಚ್ಚು ಮಾಡೋ ಹಾಡಾನ್ನ ಹೆಂಡಿ ಸಾಹೇಬ್ರು ತಗೊಂಡು ಹೋದ್ರು, ಹರಿಶ್ಚಂದ್ರ ಅವರೂ ತಗೊಂಡು ಹೋದ್ರು. ಅವನ್ನ ಪ್ರಿಂಟ್ ಮಾಡ್ಸಾರ” ಎಂದು ಗುಲ್ಬರ್ಗಾದಲ್ಲಿನ ಮೋದಿನ್‌ಸಾಬರು ಹೇಳಿದರು. ಕಾಶಿನಾಥ ಚವ್ಹಾಣ ಅವರು ಮೋದಿನ್‌ಸಾಬರ ಅಭಿಪ್ರಾಯವನ್ನೇ ಹೇಳಿದರು. ಹರದೇಶಿ-ನಾಗೇಶಿ ಸಾಹಿತ್ಯ ಸಂಗ್ರಹ ಕಾರ್ಯ ನಡೆದದ್ದು ಬಹಳ ಕಡಿಮೆ. ಹೀಗೆ ವಿರಳವಾಗಿ ಸಂಪಾದಿಸಲ್ಪಟ್ಟ ಹರದೇಶಿ-ನಾಗೇಶಿ ಸಾಹಿತ್ಯವೂ ಕೂಡ, ಆ ಸಾಹಿತ್ಯ ಪ್ರದರ್ಶನಗೊಳ್ಳುವ ಸಂದರ್ಭವನ್ನು ಗಮನಿಸಿಯೇ ನಡೆದದ್ದಲ್ಲ, ಆ ಸಾಹಿತ್ಯವನ್ನು ರಚಿಸುವ ಕವಿಗಳು ಹಾಗೂ ಹಾಡುವ ಹಾಡುಗಾರರು ಸಂಗ್ರಹಿಸಿಕೊಂಡ ಸಾಹಿತ್ಯವನ್ನು ಒಂದೆಡೆಗೆ ಕಲೆ ಹಾಕಿದ್ದಾರೆ. ಹೀಗೆ ಸಂಗ್ರಹಿಸಿದ ಸಾಹಿತ್ಯವನ್ನು ಹಾಡುಗಾರರು ನಡೆಸುವ ಸವಾಲ್-ಜವಾಬ್-ಪ್ರತಿ ಸವಾಲ್‌ನ್ನು ಲಕ್ಷದಲ್ಲಿಟ್ಟುಕೊಂಡು ಈ ವಿದ್ವಾಂಸರೇ ವಿಷಯಾನುಸಾರ ಹೊಂದಿಸಿಕೊಂಡು ಸಂಪಾದಿಸಿದ್ದಾರೆ. ಅಂದರೆ ಹರದೇಶಿ-ನಾಗೇಶಿ ಹಾಡುಗಳನ್ನು ಸಂಪಾದಿಸಿರುವ ವಿದ್ವಾಂಸರಾರೂ ಅದು ಹುಟ್ಟುವ ಸಂದರ್ಭವನ್ನು ಗಮನಿಸಿಲ್ಲ. ಯಾವ ಆಚರಣೆಯ ಭಾಗವಾಗಿ ಅದು ಪ್ರದರ್ಶಿಸಲ್ಪಡುತ್ತದೆ ಎಂಬುದನ್ನು ಗಮನಿಸಿಲ್ಲ. ಹರದೇಶಿ-ನಾಗೇಶಿ ಹಾಡುಗಳು ಪುಸ್ತಕದಲ್ಲಿದ್ದ ಹಾಗೆಯೇ ಪ್ರದರ್ಶನಗೊಳ್ಳುತ್ತವೆ ಎಂದಲ್ಲ. ಹಾಡುಗಾರರು ತಮ್ಮ ಕಲಾ ಪ್ರದರ್ಶನದ ವೇದಿಕೆಯನ್ನು ಪ್ರತಿಭಾ ಪ್ರದರ್ಶನದ ವೇದಿಕೆಯನ್ನಾಗಿಸಿಕೊಳ್ಳುತ್ತಾರೆ. ಅವರೊಳಗೆ ಸ್ಪರ್ಧೆ ಏರ್ಪಡುತ್ತದೆ. ಹೀಗೆ ಏರ್ಪಡುವ ಸ್ಪರ್ಧೆಗೆ ಇನ್ನಷ್ಟು ಹುರುಪನ್ನು ಪ್ರೇಕ್ಷಕರು ನೀಡುತ್ತಾರೆ. ಇದರಿಂದ ಉತ್ತೇಜಿತರಾದ ಹಾಡುಗಾರರು ಮತ್ತಷ್ಟು ಸ್ಪರ್ಧಾತ್ಮಕ ಮನೋಭಾವದಿಂದ ಹಾಡತೊಡಗುತ್ತಾರೆ.

“ಜನ ಹೋ…. ಅಂತ ಅಂದಾಗೆಲ್ಲ ನಮಗ ಇನ್ನಷ್ಟು ಚಂದ ಹಾಡಬೇಕು ಅನುಸೂದು. ಹುರುಪೆದ್ದು ಅಗದಿ ತುರಿಸಿಲೆ (ಸ್ಪರ್ಧಾ ಮನೋಭಾವ) ಹಾಡ್ತಿದ್ವಿ. ನಾನು ತುರಿಸಿಲೆ ಹಾಡಾಕತ್ತಿಂದ, ಎದುರಿನವರು ತುರಸಿಲೇ ಹಾಡೋರು. ಇದಕ್ಕ ಜನಾ ಹುಚ್ಚೆದ್ದು ಕುಣಿತಿತ್ತು. ತುರಿಸಿಲೆ ಹಾಡುವ ನಮ್ಮ ಹಾಡ್ಕಿ ಕೇಳಿ ಜನಾನೂ ನಮ್ಗ ಸವಾಲ್ ಹಾಕ್ತಿದ್ರು” ಎಂದು ಬಹುತೇಕ ಹಾಡುಗಾರರು ಹೇಳಿದರು. ಹೀಗೆ ತೀವ್ರ ಸ್ಪರ್ಧಾತ್ಮಕ ಮನೋಭಾವದಿಂದ ಪ್ರದರ್ಶನಗೊಳ್ಳುವ ಹರದೇಶಿ-ನಾಗೇಶಿ ಹಾಡುಗಾರಿಕೆಯು ಪ್ರದರ್ಶನಗೊಳ್ಳುವ ಸಂದರ್ಭವನ್ನು ಮಾತ್ರ ಅವಲಂಬಿಸಿರುವುದಿಲ್ಲ. ಎದುರು ಹಾಡುಗಾರರ ಸವಾಲ್‌ಗಳಿಂದಲೂ ಸಂದರ್ಭಗಳು ಹುಟ್ಟಿಕೊಳ್ಳುತ್ತವೆ. ಹಾಗೆಯೇ ಪ್ರೇಕ್ಷಕರ ಪ್ರತಿಕ್ರಿಯೆ ಹಾಗೂ ಅವರು ಹಾಕುವ ಸವಾಲ್‌ಗಳೂ ಕೂಡ ಹಾಡುವ ಸಂದರ್ಭವನ್ನು ಸೃಷ್ಟಿಸುತ್ತಿರುತ್ತವೆ.

ಜಾತ್ರೆಗಳು, ಪುಣ್ಯ ತಿಥಿಗಳು, ಊರ ಗೌಡರ ಮನೆಯ ಮಂಗಲ ಕಾರ್ಯಗಳು, ಮನೆಯ ಪ್ರವೇಶಿಸುವ ಕಾರ್ಯಕ್ರಮಗಳಲ್ಲಿ ಹರದೇಶಿ-ನಾಗೇಶಿ ಹಾಡುಗಳನ್ನು ಹಾಡಿಸುವರು. ಪುಣ್ಯ ತಿಥಿಗಳಲ್ಲಿ ಸಾಮಾನ್ಯವಾಗಿ ಶರಣೆ/ಣರ ಚರಿತ್ರೆಗಳನ್ನು, ಪುರಾಣ-ಪುಣ್ಯ ಕಥೆಗಳನ್ನು ಹಾಡಿಸುತ್ತಾರೆ. ಇಂತಹ ಸಂದರ್ಭಗಳಲ್ಲಿ ಸವಾಲ್-ಜವಾಬ್‌ಗಳನ್ನು ಹಾಡುವುದಿಲ್ಲ ಅಥವಾ ಹಾಡಿಸುವುದಿಲ್ಲ. ಜಾತ್ರೆಗಳಲ್ಲಿ, ಗಣ್ಯರ ಮನೆಯ ಮಂಗಲ ಕಾರ್ಯಗಳಲ್ಲಿ, ಮನೆಯ ಪ್ರವೇಶಿಸುವ ಸಂದರ್ಭಗಳಲ್ಲಿ ಹಾಡಲು ಆಹ್ವಾನಿಸಿದವರು ಹಾಗೂ ಪ್ರೇಕ್ಷಕರು ಯಾವ ಬಗೆಯ ಹಾಡುಗಳನ್ನು ಬಯಸುತ್ತಾರೋ ಅಂತಹ ಹಾಡುಗಳನ್ನು ಹಾಡುತ್ತಾರೆ. ಪ್ರೇಕ್ಷಕರು ಅಥವಾ ಕಾರ್ಯಕ್ರಮ ಆಯೋಜಿಸಿದವರು ಚರಿತ್ರೆ, ಪುರಾಣಗಳಿಗೆ ಸಂಬಂಧಿಸಿದ ಹಾಡುಗಳನ್ನು ಕೇಳಲು ಅಪೇಕ್ಷಿಸಿದರೆ, ಇಲ್ಲವೆ, ಸವಾಲ್-ಜವಾಬ್‌ಗಳ ಹಾಡುಗಳನ್ನು ಬಯಸಿದರೆ ಅಂತಹ ಹಾಡುಗಳನ್ನು ಹಾಡುಗಾರರು ಹಾಡುವರು. ಜಾತ್ರೆ ಮೊದಲಾದಂತಹ ಮಂಗಲ ಕಾರ್ಯಕ್ರಮಗಳಲ್ಲಿ ಈ ಕಾರ್ಯಕ್ರಮಗಳ ಆಯೋಜಕರು ಹಾಗೂ ಪ್ರೇಕ್ಷಕರು ಬಯಸಿದ ನೆಲೆಗಳಲ್ಲಿಯೇ ಹರದೇಶಿ-ನಾಗೇಶಿ ಹಾಡುಗಾರರು ಹಾಡುವರು. ಕೇಳುವವರ ಅಪೇಕ್ಷೆಯ ಮೇರೆಗೆ ತಾವು ಕಲಿತ ಸಾಹಿತ್ಯವನ್ನು ಸವಾಲ್‌ಗಳಿಗೆ ಅನುಗುಣವಾಗ ಜೋಡಿಸಿಕೊಂಡು ಹಾಡುಗಳನ್ನು ಹಾಡುಗಾರರು ಹಾಡುತ್ತಿರುತ್ತಾರೆ.

ಹೀಗೆ ಅವರಲ್ಲೊಂದು ಸ್ಪರ್ಧೆಯ ವಾತಾವರಣ ನಿರ್ಮಾಣವಾಗಿಬಿಡುತ್ತದೆ. ಈ ಸ್ಪರ್ಧೆಯು ಸವಾಲ್-ಜವಾಬ್‌ಹಾಡುಗಳ ಸ್ವರೂಪಗಳನ್ನು ರೂಪಿಸುತ್ತಿರುತ್ತದೆ. ಆಚರಣಾ ಸಂದರ್ಭದಲ್ಲಿ ಹಾಡಲ್ಪಡುವ ಈ ಹಾಡುಗಳ ಸ್ವರೂಪವು ಎರಡು ನೆಲೆಗಳಲ್ಲಿ ಸಂರಚನೆಗೊಳ್ಳುತ್ತಿರುತ್ತದೆ.

೧. ಎದುರು ಹಾಡುಗಾರರು ಹಾಕುವ ಸವಾಲ್‌ಗಳು. ೨. ಪ್ರೇಕ್ಷಕರ ಪಾಲ್ಗೊಳ್ಳುವಿಕೆ.

. ಎದುರು ಹಾಡುಗಾರರು ಹಾಕುವ ಸವಾಲ್ಗಳು

ಹರದೇಶಿ-ನಾಗೇಶಿ ಹಾಡುಗಾರರು ಸಾಮಾನ್ಯವಾಗಿ ‘ಚಾಜ’ ಪಡೆಯುವಾಗ ಎದುರು ಹಾಡುಗಾರರಾಗಿ ಯಾರು ಬರುವರು ಎನ್ನುವುದನ್ನು ತಿಳಿದುಕೊಳ್ಳುವರು. ಎದುರು ಹಾಡುಗಾರರು ಹಾಡಿಕೆಯಲ್ಲಿ ಪ್ರಸಿದ್ಧಿ ಪಡೆದವರಿದ್ದರೆ ಚಾಜ ಪಡೆದುಕೊಂಡ ದಿನದಿಂದಲೇ ಗಂಭೀರವಾಗಿ ರಂಗ ತಾಲೀಮಿನಲ್ಲಿ ತೊಡಗಿಸಿಕೊಳ್ಳುತ್ತಾರೆ. ಎದುರು ಹಾಡುಗಾರರು ಸಾಹಿತ್ಯದ ಎಂಥ ಪ್ರಸಂಗಗಳನ್ನು ಹಾಡಿನ ತಾತ್ವಿಕತೆಯನ್ನು ವಿಸ್ತರಿಸಲು ಬಳಸುತ್ತಾರೆ ಎನ್ನುವುದರ ಪೂರ್ವ ಸೂಚನೆ ಆಯಾ ಹಾಡುಗಾರರ ಅಭ್ಯಾಸದ ಹಿನ್ನೆಲೆಯೇ ಸ್ಪಷ್ಟ ಪಡಿಸುತ್ತಿರುತ್ತದೆ. ಒಂದೇ ವೃತ್ತಿಯಲ್ಲಿರುವ ಈ ಹಾಡುಗಾರರಿಗೆ ಪ್ರತಿ ಹಾಡುಗಾರರ ಅಭ್ಯಾಸದ ಹಾಗೂ ಆಸಕ್ತಿಯ ಹಿನ್ನೆಲೆಗಳ ಪರಿಚಯವಿರುತ್ತದೆ. ಈ ಬಗೆಯ ಹಾಡುಗಾರರ ಅಧ್ಯಯನದ ಹಿನ್ನೆಲೆಯ ಪರಿಚಯವು ಚಾಜ ಪಡೆದ ಹಾಡುಗಾರರ ರಂಗ ತಾಲೀಮಿನ ತೀವ್ರತೆಯನ್ನು ನಿರ್ಧರಿಸುತ್ತದೆ. ತಮ್ಮ ಎದುರು ಹಾಡುಗಾರರನ್ನು ಎಂಥಹ ಸವಾಲ್‌ನ ಮೂಲಕ ಮಣಿಸಬಹುದು ಎನ್ನುವುದರ ಪೂರ್ವ ತಯಾರಿಯನ್ನು ಪ್ರತಿಯೊಬ್ಬ ಎದುರು ಹಾಡುಗಾರರು ಮಾಡಿಕೊಂಡಿರುತ್ತಾರೆ. ಎದುರು ಹಾಡುಗಾರರ ಹಾಡಿಕೆ ಕ್ಷೇತ್ರದಲ್ಲಿ ಸಾಧಕರು ಎಂದು ಗುರುತಿಸಿಕೊಂಡಿರದಿದ್ದರೆ, ಸಾಹಿತ್ಯದ ಅಭ್ಯಾಸವನ್ನು ಮಾಡುವುದಿಲ್ಲ. ರಂಗ ತಾಲೀಮಿನ ಅವಧಿಯನ್ನು ವಿಸ್ತರಿಸಿಕೊಳ್ಳದೆ, ದಿನ ನಿತ್ಯದಂತೆ ರಂಗ ತಾಲೀಮು ಮಾಡುತ್ತಾರೆ.

ಎದುರು ಹಾಡುಗಾರರ ಸಂಗೀತ ಹಾಗೂ ಸಾಹಿತ್ಯ ಅಭ್ಯಾಸದ ಗುಣಮಟ್ಟದ ಅನುಗುಣವಾಗಿಯೇ ಸವಾಲ್-ಜವಾಬ್‌ಗಳು ರೂಪಗೊಳ್ಳುತ್ತಿರುತ್ತವೆ. ಹೀಗೆ ರೂಪುಗೊಳ್ಳುವ ಸವಾಲ್-ಜವಾಬ್‌ಗಳು ಹಾಡುಗಾರರ ಪ್ರತಿಭೆ ಹಾಗೂ ಅಭ್ಯಾವನ್ನು ಅವಲಂಬಿಸಿರುತ್ತದೆ. ಹಾಡುಗಾರರ ಎಂಥಹ ಸವಾಲ್‌ಗಳನ್ನು ಬೇಕಾದರೂ ಹಾಕಬಹುದು. ಎದುರಾಗುವ ಸವಾಲ್‌ಗಳಿಗೆ ಅನುಗುಣವಾಗಿ ಜವಾಬ್‌ಗಳು ಹಾಗೂ ಪ್ರತಿ ಸವಾಲ್‌ಗಳು ರೂಪುಗೊಳ್ಳುತ್ತಿರುತ್ತವೆ. ಇಂಥ ಸವಾಲ್‌ಗೆ ಇಂಥದೆ ಜವಾಬು ಬರುತ್ತದೆ ಎಂದಾಗಲಿ; ಅಥವಾ ಇಂಥದೇ ಪ್ರತಿ ಸವಾಲು ಬರುತ್ತದೆ ಎಂದಾಗಲಿ ಹಾಡುಗಾರರನ್ನೊಳಗೊಂಡು ಯಾರೂ ಊಹಿಸಿಕೊಳ್ಳಲಾಗುವುದಿಲ್ಲ. ಹಾಡಿಕೆಯಲ್ಲಿನ ಹಾಡುಗಾರರ ತನ್ಮಯತೆಯೇ ಸವಾಲ್-ಜವಾಬ್-ಪ್ರತಿ ಸವಾಲ್‌ಗಳನ್ನು ರೂಪಿಸುತ್ತಿರುತ್ತದೆ.

. ಪ್ರೇಕ್ಷಕರ ಪಾಲ್ಗೊಳ್ಳುವಿಕೆ

ಎದುರು ಹಾಡುಗಾರರ ಸವಾಲ್-ಜವಾಬ್-ಪ್ರತಿ ಸವಾಲ್‌ಗಳು ತೀವ್ರಗೊಂಡಂತೆ ಪ್ರೇಕ್ಷಕರು ತಮಗೆ ಅರಿವು ಇಲ್ಲದಂತೆಯೇ ಎರಡು ತಂಡಗಳಿಗೆ ಸವಾಲ್ ಹಾಕುವ ಮೂಲಕ ಪ್ರತಿ ಸ್ಪರ್ಧಿಯಾಗಿ ನಿಲ್ಲುತ್ತಾರೆ. ಆಗ ತ್ರಿಕೋನ ನೆಲೆಗಳಲ್ಲಿ ಸ್ಪರ್ಧೆ ನಡೆಯುತ್ತದೆ. ಹರದೇಶಿ-ನಾಗೇಶಿ ಹಾಡುಗಾರರು ಒಬ್ಬರಿಗೊಬ್ಬರು ಸ್ಪರ್ಧಿಯಾಗಿರುತ್ತಾರೆ. ಹೀಗೆ ಎರಡೂ ತಂಡಗಳ ಹಾಡು ಗಾರರನ್ನು ಗಮನದಲ್ಲಿಟ್ಟುಕೊಂಡು ಹೇಳುವುದಾದರೆ ಸ್ಪರ್ಧೆ ಎರಡು ನೆಲೆಗಳಲ್ಲಿ ನಡೆಯುತ್ತದೆ. ಪ್ರೇಕ್ಷಕರು ಎದುರು ಹಾಡುಗಾರರಿಗೆ ಎದುರು ನಿಂತು ಸವಾಲ್ ಕೇಳಲು ಪ್ರಾರಂಭಿಸಿದರೆ ಆಗ ಸ್ಪರ್ಧೆ ತ್ರಿಕೋನ ನೆಲೆಗಳ ಸ್ವರೂಪವನ್ನು ಪಡೆದುಕೊಳ್ಳುತ್ತದೆ. ಆಗ ದಪ್ಪಿನ ಹಾಡಿನಲ್ಲಿ ಸ್ಪರ್ಧೆಯ ತೀವ್ರತೆ ತಾರಕಕ್ಕೇರುತ್ತದೆ. ಊಹಿಸಿಕೊಳ್ಳಲಿಕ್ಕೂ ಆಗದ ರೀತಿಯಲ್ಲಿ ಸವಾಲ್-ಜವಾಬ್‌ಗಳು ಸ್ವರೂಪಗಳನ್ನು ಪಡೆದುಕೊಳ್ಳುತ್ತಿರುತ್ತವೆ.

ಆಚರಣೆಯ ಸಂದರ್ಭಗಳು, ಎದುರು ಹಾಡುಗಾರರ ಸವಾಲ್‌ಜವಾಬ್ ಹಾಗೂ ಪ್ರತಿ ಸವಾಲ್‌ಸಂದರ್ಭಗಳು, ಪ್ರೇಕ್ಷಕರ ಪಾಲ್ಗೊಳ್ಳುವಿಕೆಯ ಸಂದರ್ಭಗಳಲ್ಲಿ ದಿಪ್ಪಿನ ಹಾಡುಗಳನ್ನು ಅದರಲ್ಲಿಯೂ ಸವಾಲ್-ಜವಾಬ್ ಹಾಡುಗಳನ್ನು ರೂಪಿಸುತ್ತಿರುತ್ತವೆ.

ಮೂಲ-ಖೊಟ್ಟಿ

ಜನಪದ ಸಾಹಿತ್ಯದಲ್ಲಿ ಗಾದೆಗಳು, ಒಗಟುಗಳು, ಒಡಪುಗಳು, ಕಥನ ಗೀತೆಗಳು, ಸತಿ ಗೀತೆಗಳು, ಮಹಾಕಾವ್ಯಗಳು, ಹಂತಿ ಹಾಡುಗಳು ಹೀಗೆ ಅನೇಕ ಪ್ರಕಾರಗಳಿವೆ. ಇವುಗಳಾವುವೂ ಹರದೇಶಿ-ನಾಗೇಶಿ ಹಾಡುಗಳು ಎದುರಿಸಿದ ಶ್ಲೀಲ-ಅಶ್ಲೀಲ ಪ್ರಶ್ನೆಗಳು ಎದುರಿಸಿಲ್ಲ ಅಥವಾ ಮೂಲ-ಖೊಟ್ಟಿ ಎಂದು ವಿಂಗಡನೆಗೊಂಡಿಲ್ಲ. ಹರದೇಶಿ-ನಾಗೇಶಿ ಸಾಹಿತ್ಯವು ಮೂಲ-ಖೊಟ್ಟಿ ಎಂದು ವಿಂಗಡನೆಗೊಂಡಿದೆ; ಹಾಗೂ ಶ್ಲೀಲ-ಅಶ್ಲೀಲದ ಪ್ರಶ್ನೆಯನ್ನು ಎದುರಿಸಿದೆ. ಹರದೇಶಿ-ನಾಗೇಶಿ ಸಾಹಿತ್ಯವನ್ನು ಮೂಲ-ಖೊಟ್ಟಿ ಎಂದು ವಿಂಗಡನೆಗೊಳಿಸಿದ ರಾಜಕಾರಣವನ್ನು ಆರು ನೆಲೆಯಲ್ಲಿ ಗುರುತಿಸಿ ವಿಶ್ಲೇಷಿಸಲಾಗಿದೆ. ಅವುಗಳೆಂದರೆ ೧. ರಾಷ್ಟ್ರೀಯತಾವಾದದ ನೆಲೆಯಿಂದ ೨. ಪುರುಷ ಹಾಡುಗಾರರ ನೆಲೆಯಿಂದ ೩. ಮಹಿಳಾ ಹಾಡುಗಾರರ ನೆಲೆಯಿಂದ ೪. ಪ್ರೇಕ್ಷಕರ ನೆಲೆಯಿಂದ ೫. ಸ್ಥಳೀಯ ಕಲಾ ಮಾರುಕಟ್ಟೆ ನೆಲೆಯಿಂದ ೬. ಮೌಲ್ಯಗಳಿಂದ ನೆಲೆಗಳಿಂದ.

. ರಾಷ್ಟ್ರೀಯತಾವಾದದ ನೆಲೆಯಿಂದ

ಹರದೇಶಿ-ನಾಗೇಶಿ ಹಾಡುಗಳಿಗೆ ಅಂಟಿದ ಶ್ಲೀಲ-ಅಶ್ಲೀಲದ ಶಾಪವನ್ನು ೧೯ನೇ ಶತಮಾನದ ಆದಿ ಭಾಗದಲ್ಲಿ ರೂಪಿತವಾದ ರಾಷ್ಟ್ರೀಯತಾವಾದದ ಹಿನ್ನೆಲೆಯಲ್ಲಿ ವಿಶ್ಲೇಷಣೆಗೆ ಒಳಪಡಿಸಬೇಕಿದೆ. “…. ತನ್ನ ಕೋಣೆಯಲ್ಲಿರುವ ಗುಮಾಸ್ತ, ಅಂಗಡಿಯಲ್ಲಿರುವ ವ್ಯಾಪಾರಿ, ಹೊಲದಲ್ಲಿ ಊಳುತ್ತಿರುವ ರೈತನನ್ನು ಈ ರಾಷ್ಟ್ರೀಯತೆ ಕೂಗಿ ಕರೆಯುತ್ತದೆ. ಅದು ದೇವಾಲಯದಲ್ಲಿರುವ ಬ್ರಾಹ್ಮಣನನ್ನು, ಹೀನ ಸ್ಥಿತಿಯಲ್ಲಿರುವ ಹೊಲೆಯನನ್ನು ಕೈ ಹಿಡಿದು ಕರೆಯುತ್ತದೆ. ಕಾಲೇಜಿನಲ್ಲಿರುವ ವಿದ್ಯಾರ್ಥಿ, ಶಾಲಾ ಹುಡುಗನನ್ನೂ ತಟ್ಟುತ್ತದೆ. ತಾಯಿಯ ತೋಳ್ತೆಕ್ಕೆಯಲ್ಲಿರುವ ಮಗುವನ್ನು ಅದು ಮುಟ್ಟುತ್ತದೆ… ಅದರ ಕಣ್ಣುಗಳು ಕಾಡಿನಲ್ಲಿ ವಾಸಿಸುವ ಸಂತಾಲನಿಗಾಗಿ ಅರಸುತ್ತಿವೆ, ಗುಡ್ಡಗಾಡುಗಳಲ್ಲಿರುವ ಬುಡಕಟ್ಟು ಜನರನ್ನು ಹುಡುಕಿಕೊಂಡು ಬೆಟ್ಟ-ಗುಡ್ಡಗಳಲ್ಲಿ ಸಂಚರಿಸುತ್ತದೆ. ಅದು ವಯಸ್ಸು, ಲಿಂಗ, ಜಾತಿ, ಸಂಪತ್ತು, ಶಿಕ್ಷಣ ಪ್ರತಿಷ್ಠೆಗಳನ್ನು ಲೆಕ್ಕಿಸುವುದಿಲ್ಲ” (ಶ್ರೀ ಅರವಿಂದರು, ೨೦೦೩, ಪು.೪೯) ರಾಷ್ಟ್ರೀಯತೆಯ ಸ್ವರೂಪದ ಕುರಿತು ೧೯೦೮ರ ಅವಧಿಯಲ್ಲಿ ಅರವಿಂದರು ಈ ಮೇಲಿನಂತೆ ಹೇಳಿದ್ದಾರೆ. ಈ ಹೊತ್ತಿಗಾಗಲೇ ಭಾರತದಲ್ಲಿ ವಿದೇಶಿಯರು ಭಾರತೀಯ ಮಾಹಿತಿಗಳನ್ನು ಆಧರಿಸಿ ಓರಿಯಂಟಲಿಸಮ್ ರೂಪಿಸಿದ್ದರು. ಇಂತಹ ಒರಿಯಂಟಲಿಸಮ್‌ವು ಭಾರತೀಯ ಮೌಲ್ಯಗಳನ್ನು ಶ್ರೇಷ್ಠ-ಕನಿಷ್ಠ, ನಾಗರೀಕ-ಅನಾಗರೀಕ ಎಂದು ವಿಂಗಡಿಸಿ ವೇದ ಕಾಲೀನ ಸಾಮಾಜಿಕ ವಾತಾವರಣ ಈಗಿಲ್ಲವಾದ್ದರಿಂದ ಬ್ರಿಟಿಷ್ ಆಡಳಿತದ ಅಗತ್ಯತೆ ಇದೆ ಎನ್ನುವುದನ್ನು ನಿರೂಪಿಸುತ್ತಿದ್ದವು. ಆಗ ಭಾರತೀಯರಿಗೆ ತಮ್ಮ ಸಂಸ್ಕೃತಿಯನ್ನು ನಿರೂಪಿಸುವ, ಸಮರ್ಥಿಸುವ ಸವಾಲು ಎದುರಾಗಿತ್ತು. ಆ ಮೂಲಕವೇ ರಾಷ್ಟ್ರೀಯತೆಯನ್ನು ಕಟ್ಟಿಕೊಳ್ಳುವ ಅನಿವಾರ್ಯವೂ ಇತ್ತು. ಜಾತಿ, ಧರ್ಮ, ಲಿಂಗ, ಭಾಷೆ, ಭೇದವಿಲ್ಲದೆ ಗ್ರಾಮೀಣ ಹಾಗೂ ನಗರ ಪ್ರದೇಶದವರು, ಶಿಕ್ಷಣ ಪಡೆದವರು, ಶಿಕ್ಷಣ ಪಡೆಯದೇ ಇರುವವರು ಎಲ್ಲರೂ ಒಟ್ಟಾಗುವ ಇಲ್ಲವೆ ಒಂದುಗೂಡುವ ಅನಿವಾರ್ಯತೆ ಇತ್ತು. ಅಕ್ಷರ ಸಂಸ್ಕೃತಿಯುಳ್ಳವರು ಮಾತ್ರ ಸಂಸ್ಕೃತಿಯನ್ನು ಹೊಂದಿದ್ದಾರೆ, ಅವರಲ್ಲಿ ಮಾತ್ರ ಮೌಲ್ಯಗಳಿವೆ ಎಂದು ಏಕ ಪಕ್ಷೀಯವಾಗಿ ಸಂಸ್ಕೃತಿ ನಿರ್ವಚನಗೊಳ್ಳುವುದನ್ನು ಅಂದಿನ ರಾಷ್ಟ್ರೀಯವಾದವೇ ವಿರೋಧಿಸುತ್ತಿತ್ತು. ಅಕ್ಷರ ಬರದವರ ಹಾಗೂ ಗ್ರಾಮೀಣ ಜನರಲ್ಲಿಯೂ ಮೌಲ್ಯಗಳಿವೆ ಎನ್ನುವುದನ್ನು ಒಪ್ಪಿಕೊಳ್ಳುವ ಚಾರಿತ್ರಿಕ ಒತ್ತಡ ಸೃಷ್ಟಿಯಾಗಿತ್ತು. ಗ್ರಾಮೀಣ ಜನರು ಯಾವುದನ್ನು ಮೌಲ್ಯವಾಗಿ ಪರಿಭಾವಿಸುತ್ತಾರೆ ಎನ್ನುವ ಪ್ರಶ್ನೆಯನ್ನು ರಾಷ್ಟ್ರೀಯವಾದಿಗಳು ಮುಖ್ಯವಾಗಿಸಿಕೊಳ್ಳಲಿಲ್ಲ. ಅದರ ಬದಲು ಅವರೇ ನಿರ್ವಚಿಸಿಕೊಂಡ ತಾತ್ವಿಕತೆಗೆ ಒಗ್ಗುವ, ಹೊಂದಿಕೊಳ್ಳುವ ಗ್ರಾಮೀಣ ಜೀವನದಲ್ಲಿನ ಸಂಗತಿಗಳನ್ನು ಮೌಲ್ಯವಾಗಿಸಿದರು. ಈ ಆಶಯದ ನೆಲೆಗಳಲ್ಲಿ ಗರತಿ ಹಾಡು, ಮಲ್ಲಿಗೆ ದಂಡೆ ಮೊದಲಾದ ಸಂಪಾದಿತ ಕೃತಿಗಳು ಮುನ್ನುಡಿ, ಹರಕೆಯೊಂದಿಗೆ, ಪ್ರಕಟಗೊಂಡವು. ಇದೇ ಸಂದರ್ಭದಲ್ಲಿ ಸಂಗ್ರಹಿತವಾದ ‘ಜೀವನ ಸಂಗೀತ’ದಲ್ಲಿನ ಮುನ್ನುಡಿಯನ್ನು ಗಮನಿಸಬೇಕು. “ಶೃಂಗಾರ ಲಾವಣಿಗಳಲ್ಲಿ ಬರುವ ಗ್ರಾಮ ರೀತಿಯ ಕೆಲವು ಸಂಗತಿಗಳು ಅಸುಶಿಕ್ಷಿತರಿಗೆ ಸೌಜನ್ಯವೆಂದು ತೋರಬಹುದು. ಆದರೆ ನಾವಿಲ್ಲಿ ಹೇಳುವುದೇನೆಂದರೆ ಅಲ್ಲಲ್ಲಿ ಕಾಣುವ ಕವಿ ಕಲ್ಪನೆಯ ಅಗಾಧ ವೈಖರಿಯನ್ನು ತೋರಿಸಿಕೊಡುವುದಷ್ಟೆ ನಮ್ಮ ಉದ್ದೇಶವಾಗಿದೆ… ಲಾವಣಿ ಕವಿಗಳು ಶೃಂಗಾರ ಪದಗಳನ್ನೇ ಅತಿಶಯವಾಗಿ ಬಳಸುತ್ತಿದ್ದರೂ ಅವರ ಜೀವನವು ಕೇವಲ ದೇಹಾತ್ಮ ಬುದ್ಧಿಯಕೊಳೆಯಲ್ಲೇ ಹೊರಳಾಡಿ ಹಾಳಾಗಲಾರದೆಂಬ ಅಂಶವನ್ನು “ಪ್ರಾರ್ಥನೆ” ಮತ್ತು “ನಿನ್ನ ಹೊರತು ದೇವರೇ ಇಲ್ಲ” ಕಿರಿ ಹಾಡುಗಳಲ್ಲಿ ಸ್ಪಷ್ಟವಾಗಿ ಕಂಡುಕೊಳ್ಳುವೆವು… ಶ್ರೀ ಕೃಷ್ಣ ಭಗವಂತನು ಇಂಥ ಜೀವನ ಸಂಗೀತದ ಆದಿಗುರುವು, ಅವನ ಲೀಲೆಯ ಪ್ರಥಮ ಭಾಗವು ಶೃಂಗಾರಮಯ; ಕೊನೆಯದು ವೀರ ಆಧ್ಯಾತ್ಮ. ಅಂತೆ ಆ ಮುರುಳೀಧರನು ಜೀವನ ಸಂಗೀತದ ಆದಿ ಪ್ರವರ್ತಕನು. ಆ ರಾಧಾ-ಕೃಷ್ಣರ ಪ್ರತಿನಿಧಿಗಳೇ ನಮ್ಮ ಲಾವಣಿಕಾರರ ನರ-ನಾರಿಯರು. ಜೀವನದ ಪೂರ್ವರಂಗದ ರತಿ-ಸುರತಿಯರಿವರು. ಇವರ ಓಂಕಾರ ಬೀಜವೇ ಶೃಂಗಾರ ರಸವು. ಆದುದರಿಂದ ಶೃಂಗಾರವೆಂದ ಕೂಡಲೆ ಹಾರಿ ನಿಲ್ಲುವ ಮಡಿವಂತಿಕೆಯೂ ಹೆಸರು ಕೇಳಿದೊಡನೆ ಎಸರೊಸರುವ ಜೊಲ್ಲೆ ತನವೂ ನಮ್ಮ ದೃಷ್ಟಿಯಿಂದ ತ್ಯಾಜ್ಯವೆಂದೇ ಒತ್ತಿ ಆಡಿ ಬಿಡುವೆವು” (ಸಿಂಪಿ ಲಿಂಗಣ್ಣ ಮತ್ತು ಪಿ.ಧೂಲಾ, ೨೦೦೦, ಪು. ೧೦೭-೧೦೮) ಶೃಂಗಾರ ಲಾವಣಿಗಳ್ಲಿ ‘ಅಸೌಜನ್ಯ’ ಇದೆ; ಲಾವಣಿಗಳಲ್ಲಿನ ಶೃಂಗಾರ ಪದಗಳ ಬಳಕೆ ಅತಿಶಯವಾಗಿದೆ ಎನ್ನುವನದನ್ನು ಒಪ್ಪಿಕೊಳ್ಳುತ್ತಾರೆ. ಅಸೌಜನ್ಯ, ಶೃಂಗಾರ ಪದಗಳ ಅತಿಶಯ ಬಳಕೆ ಇವೆರಡೂ ಫದಗಳು ಭಾಷೆಯೊಳಗಿನ, ಸಾಹಿತ್ಯದೊಳಗಿನ ಆ ಮುಲಕ ಜೀವನದೊಳಗಿನ ಅಥವಾ ಸಮಾಜದೊಳಗಿನ ಮೌಲ್ಯವೆಂದು ಒಪ್ಪಿತವಾಗದ್ದು; ಅಂದರೆ ಮೈಲಿಗೆ ಇಲ್ಲವೆ ಕನಿಷ್ಠ ಎಂದು ಗುರುತಿಸಲ್ಪಟ್ಟದು. ಯಾವುದು ಮೈಲಿಗೆಯಾಗಿರುತ್ತದೆಯೋ ಅದು ಕನಿಷ್ಠವಾಗಿರುತ್ತದೆ. ಹೀಗಾಗಿಯೇ ಅವು ಸಂಸ್ಕೃತಿ ನಿರ್ವಚನದ ಪರಧಿಯ ಹೊರಗಡೆಯೇ ಉಳಿದು ಬಿಡುತ್ತವೆ. ರಾಷ್ಟ್ರೀಯವಾದಿಗಳು ವಸಾಹತು ವಿರೋಧಿ ನೆಲೆಯಲ್ಲಿ ರಾಷ್ಟ್ರೀಯತೆಯನ್ನು ಕಟ್ಟಿಕೊಳ್ಳುವಾಗ ಎಲ್ಲರನ್ನು, ಎಲ್ಲವನ್ನು ತೆಗೆದುಕೊಂಡು ಮೌಲ್ಯೀಕರಿಸಬೇಕಾಗಿತ್ತು; ನಾಗರೀಕಗೊಳಿಸಬೇಕಾಗಿತ್ತು. ಹೀಗಾಗಿಯೇ ಲಾವಣಿ ಹಾಡುಗಳಲ್ಲಿನ ಅಸೌಜನ್ಯ ಹಾಗೂ ಶೃಂಗಾರ ಪದಗಳ ಅತಿಶಯ ಬಳಕೆ ಹೊರಗಿರಿಸಿ, ಅದರೊಳಗಿನ ಕವಿ ಕಲ್ಪನೆಯನ್ನು, ಆಧಾತ್ಮವನ್ನು ತೆಕ್ಕೆಗೆ ತೆಗೆದುಕೊಂಡಿದ್ದಾರೆ. ಹೀಗೆ ಹೊರಗುಳಿಸಲ್ಪಟ್ಟ ಶೃಂಗಾರವು ರಾಷ್ಟ್ರೀಯ ಪರಿಕಲ್ಪನೆಯಲ್ಲಿ ಮೌಲ್ಯವಾಗುವುದು ಅಸಾಧ್ಯವೆನಿಸಿತು. ಹೀಗಾದಾಗ ಶ್ರೀಕೃಷ್ಣನನ್ನು ಪ್ರತಿಮೆಯಾಗಿಸಿಕೊಂಡು, ಲಾವಣಿಯನ್ನು ಎರಡು ಭಾಗಗಳನ್ನಾಗಿಸಿಕೊಳ್ಳುತ್ತಾರೆ. ಒಂದನೆಯದು ಶೃಂಗಾರ ಭಾಗವಾದರೆ, ಎರಡನೆಯದು ವೀರ ಆಧ್ಯಾತ್ಮ. ಪ್ರಥಮ ಭಾಗದಲ್ಲಿನ ಶೃಂಗಾರವು ಕೊನೆಯ ಭಾಗವಾದ ವೀರ ಆಧ್ಯಾತ್ಮಕ್ಕೆ ಸ್ಥಿತ್ಯಂತರಗೊಳಿಸಿಕೊಳ್ಳುವ ಇಲ್ಲವೆ ಪಲ್ಲಟಗೊಳಿಸುವ ಆಶಯವನ್ನೇ ಲಾವಣಿ ಸಂಗ್ರಹಕಾರರು ಹೊಂದಿದ್ದಾರೆ. ಈ ಆಶಯದ ಹಿನ್ನೆಲೆಯಲ್ಲಿಯೇ ಲಾವಣಿಯಲ್ಲಿನ ಶೃಂಗಾರದ ಕುರಿತ ಮಡಿವಂತಿಕೆ ಇಲ್ಲವೆ ವ್ಯಾಮೋಹ ಎರಡನ್ನೂ ನಿರಾಕರಿಸಲಾಗಿದೆ. ಹೀಗೆ ಶೃಂಗಾರ ಪ್ರಧಾನವೆಂದು ಗುರುತಿಸಲ್ಪಟ್ಟ ಲಾವಣಿಗಳನ್ನು ರಾಷ್ಟ್ರೀಯವಾದವು ಅಪೇಕ್ಷಿಸುವ ಮೌಲ್ಯಗಳಿಗೆ ಪರಿವರ್ತಿಸಿಕೊಳ್ಳುವ ಪ್ರಯತ್ನವು ನಡೆಯಿತು.

“ಅಖಿಲ ಕರ್ನಾಟಕದಲ್ಲಿ ಮೊದಲಿನಿಂದಲೂ ರೂಢಿಯೊಳಗಿದ್ದ ಗೀಗೀ ಪದಗಳು ಕಾಲಮಾನ ಪರಿಸ್ಥಿತಿಗೆ ಅನುಸರಿಸಿ ಆಧ್ಯಾತ್ಮಿಕ, ಸಾಮಾಜಿಕ, ಧಾರ್ಮಿಕ, ನೈತಿಕ ವಿಷಯಗಳ ಪ್ರಚಾರ ಮಾಡುತ್ತ ಬಂದ ಸಂಗತಿಯು ತಮ್ಮೆಲ್ಲರಿಗೆ ಗೊತ್ತಿರಲಿಕ್ಕೆ ಸಾಕು. ಆದರೆ ಇತ್ತೀಚೆಗೆ ದೇಶವು ಪಾರತಂತ್ರದಲ್ಲಿ ಪಾರಾಗಿ ಪಾರಮಾರ್ಥಿಕ ವಿಷಯವನ್ನು ಮರೆತು ವಿಷಯಾಸಕ್ತರಾಗಿ ಶೃಂಗಾರ ಪದಗಳಿಗೆ ಮೋಹಿತರಾದ್ದರಿಂದ ಪದಗಳನ್ನು ಮಾಡುವವರೂ ಹಾಡುವವರೂ ಬೀಭತ್ಸ ಶಬ್ದಗಳಿಂದ ಕೂಡಿದ ಶೃಂಗಾರ ಪದಗಳನ್ನು (ಹರದೇಶಿ-ನಾಗೇಶಿ ಅಥವಾ ಕಲ್ಗಿ-ತುರಾಯಿಯೆಂಬ) ಹಾಡತೊಡಗಿದರು. ಹಳ್ಳಿಯ ಜನರಂತೂ ತಮ್ಮ ವಿರಾಮ ಕಾಲವನ್ನು ಇಂಥ ಪದಗಳನ್ನು ಕೇಳುವುದರಲ್ಲಿಯೇ ಕಳೆದರಲ್ಲದೆ ಬೇರೊಂದು ವಿಷಯವನ್ನು ತಿಳಿದುಕೊಳ್ಳದಷ್ಟು ಅಸಮರ್ಥರಾದರು (ಹ.ಬ.ಮಿರ್ಜಿ, ಉದೃತ: ಬಸವರಾಜ ಮಲಶೆಟ್ಟಿ, ೧೯೯೮, ಪು.೯೧೦). ‘ರಾಷ್ಟ್ರೀಯ ಗೀಗೀ ಪದಗಳು’ ಎನ್ನುವ ಪುಟ್ಟ ಪುಸ್ತಕದ ಆರಂಭದಲ್ಲಿ ಮಿರ್ಜಿ ಅವರು ೧೯೩೦ರ ಅವಧಿಯಲ್ಲಿ ಬರೆದ ಮೇಲಿನ ಮಾತುಗಳನ್ನು ಅವಲೋಕಿಸಬೇಕು. ಪಾರಮಾರ್ಥಿಕ ಆಸಕ್ತಿಯಿಂದ ವಿಷಯಾಸಕ್ತಿಗೆ ಪಲ್ಲಟಗೊಂಡ ಜನರು ಪ್ರಸ್ತುತ ದೇಶದ ಸಂಕಷ್ಟಗಳನ್ನು ಅರ್ಥಮಾಡಿಕೊಳ್ಳುತ್ತಿಲ್ಲ ಎನ್ನುವುದು ಮಿರ್ಜಿಯವರ ಕೊರಗಾಗಿದೆ. ಹರದೇಶಿ-ನಾಗೇಶಿ ಹಾಡುಗಳು ಭೀಭತ್ಸ ಶಬ್ದಗಳಿಂದ ಕೂಡಿದ ಶೃಂಗಾರ ಪದಗಳೆಂದು ಹೀಗಳೆಯಲ್ಪಟ್ಟವು. ಶೃಂಗಾರವು ಲೌಕಿಕ ಬದುಕಿನ ಆಕರ್ಷಣೆಯಾಗಿದೆ. ಪ್ರಭುತ್ವ ಕೇಂದ್ರಿತ ಹೋರಾಟವಾಗಿರಬಹುದು, ಸಮುದಾಯ ಕೇಂದ್ರಿತ ಹೋರಾಟವಾಗಿರಬಹುದು-ಇವೆರಡೂ ಲೌಕಿಕ ಆಕರ್ಷಣೆಯಿಂದ ದೂರ ಉಳಿಯುವಂತೆ ಒತ್ತಾಯಿಸುತ್ತವೆ. ಹೋರಾಟ ಯಾವಾಗಲೂ ಸಾರ್ವಜನಿಕ ಹಿತಾಸಕ್ತಿಯ ಹೆಸರಿನಲ್ಲಿ ನಡೆಯುತ್ತದೆ. ಸಾರ್ವಜನಿಕ ಹಿತಾಸಕ್ತಿ ಅಥವಾ ದೇಶದ ಹಿತಾಸಕ್ತಿ ಯಾವಾಗಲೂ ವೈಯಕ್ತಿಕ ಹಿತಾಸಕ್ತಿಯನ್ನು ಅಥವಾ ಕೌಟುಂಬಿಕ ಹಿತಾಸಕ್ತಿಯನ್ನು ನಿರಾಕರಿಸುತ್ತದೆ. ಶೃಂಗಾರಕ್ಕೂ ಮೋಹಕ್ಕೂ ನೇರವಾದ ಸಂಬಂಧವಿದೆ. ಮೋಹ ಯಾವಾಗಲೂ ತ್ಯಾಗವನ್ನು ನಿರಾಕರಿಸುತ್ತದೆ. ತ್ಯಾಗವನ್ನು, ಹೋರಾಟವನ್ನು ಅಪೇಕ್ಷಿಸುತ್ತಿದ್ದ ಸ್ವಾತಂತ್ರ್ಯ ಚಳವಳಿಯು ತನ್ನ ಅಗತ್ಯಕ್ಕೆ ಹಾಗೂ ಆಶಯಕ್ಕೆ ಪೂರಕವಾಗಿಲ್ಲದ್ದನ್ನು; ತಾನು ರೂಪಿಸಿಕೊಳ್ಳುತ್ತಿದ್ದ ಮೌಲ್ಯಗಳಿಗೆ ಹೊಂದಿಕೆಯಾಗದೇ ಇದ್ದುದನ್ನು ಶೃಂಗಾರ ಇಲ್ಲವೆ ವಿಷಯಾಸಕ್ತ ಎಂದು ತಿರಸ್ಕರಿಸಿತು.

ಭಾರತವನ್ನು ತಾಯಿಯಾಗಿ ನಿರ್ವಚಿಸಿಕೊಂಡದ್ದರಿಂದ ‘ಭಾರತ ಮಾತೆ’ಯಾದಳು. ಮಾತೃ ದೇವೋಭವ ಆಗಿದ್ದರಿಂದ ತಾಯಿ ‘ದೇವಿ’ಯಾದಳು. ಈ ‘ದೇವಿ’ ವಿದೇಶಿಯರಿಂದ ಬಂಧಿಯಾಗಿದ್ದಳು. ಆಕೆಯನ್ನು ಬಿಡುಗಡೆಗೊಳಿಸುವುದು ಭಾರತದಲ್ಲಿ ಹುಟ್ಟಿದ ಭಾರತ ಮಾತೆಯ ಮಕ್ಕಳೆಲ್ಲರ ಆ‌ದ್ಯ ಕರ್ತವ್ಯವಾಯ್ತು. ‘ಭಾರತ-ಮಾತೆ’ ಪರಿಕಲ್ಪನೆಯು ಪಾರಮಾರ್ಥಿಕ ನೆಲೆಯಲ್ಲಿ ಅರ್ಥೈಸಲ್ಪಟ್ಟರೆ, ಸ್ವಾತಂತ್ರ್ಯ ಚಳುವಳಿಯು ಹೋರಾಟದ ನೆಲೆಯಲ್ಲಿ ಅರ್ಥೈಸಲ್ಪಟ್ಟಿತು. ಶೃಂಗಾರವು ಬದುಕಿನಲ್ಲಿ ಪ್ರೀತಿ ಹುಟ್ಟಿಸುತ್ತಿತ್ತು. ಗ್ರಾಮೀಣ ಜನರಲ್ಲಿದ್ದ ಬದುಕಿನ ಪ್ರೀತಿಯನ್ನು ದೇಶದ ಪ್ರೀತಿಯಾಗಿ ಮಾರ್ಪಡಿಸುವ ಸಂಕ್ರಮಣ ಕಾಲ ಸ್ವಾತಂತ್ರ್ಯ ಚಳುವಳಿಯ ಸಂದರ್ಭದಲ್ಲಿತ್ತು. ಹೀಗಾಗಿಯೇ ಬದುಕಿನೆಡೆಗೆ ಆಕರ್ಷಿಸುವ ಶೃಂಗಾರ ರಸವನ್ನು ವೀರ ಆಧ್ಯಾತ್ಮದ ಮೌಲ್ಯವಾಗಿಸಿಕೊಳ್ಳುವ ಪ್ರಯತ್ನವನ್ನು ರಾಷ್ಟ್ರೀಯವಾದದಲ್ಲಿ ಕಾಣಬಹುದು. ಇಂಥ ಪ್ರಯತ್ನದ ಫಲವಾಗಿ “…. ಬೆಳಗಾವಿ ಜಿಲ್ಲೆಯ ಹುಲಗುಂದ ಗ್ರಾಮದಲ್ಲಿ ರಾಷ್ಟ್ರೀಯವಾದಿ ಲಾವಣಿಕಾರರ ಗುಂಪು ತಲೆ ಎತ್ತಿತ್ತು” (ಬಸವರಾಜ ಮಲಶೆಟ್ಟಿ, ೧೯೯೮, ಪು.೯)” ರಾಷ್ಟ್ರೀಯವಾದವನ್ನು ಲಾವಣಿಕಾರರು ಮೈಗೂಡಿಸಿಕೊಂಡ ಬಗೆಯನ್ನು ಮಿರ್ಜಿಯವರ ಮಾತಿನಲ್ಲಿಯೇ ಕೇಳಬೇಕು. “೧೯೩೦ನೇ ಇಸ್ವಿಯ ಜನೇವರಿ ೨೬ನೇ ತಾರೀಖಿಗೆ ಹುಲುಕುಂದಕ್ಕೆ ಬಂದು ನಮ್ಮೆಲ್ಲರಿಗೆ ಗಾಂಧೀಜಿ ವಿಚಾರಗಳನ್ನು ತಿಳಿಸಿ ವಿಧಾಯಕ ಕಾರ್ಯಕ್ರಮಗಳನ್ನು ಪ್ರಚಾರ ಮಾಡುವಂತೆ ಹುರಿದುಂಬಿಸಿದರು. ಇದರ ಪರಿಣಾಮವಾಗಿ ಹುಲಕುಂದದ ಬಸಪ್ಪ ಸಂಗಪ್ಪ ಬೆಟಗೇರಿ, ಹಣಮಪ್ಪ ಬಸಪ್ಪ ಮಿರ್ಜಿ, ಹುಲಕುಂದ ಪಟ್ಟಿದ್ದೇವರು (ಶಿವಲಿಂಗ ಕವಿ), ಸಿದ್ಧರಾಮ, ಗಿರಿಮಲ್ಲ, ಸಂಗಯ್ಯ ಮುಂತಾದವರು ರಾಷ್ಟ್ರೀಯ ಪದಗಳನ್ನು ರಚಿಸಿದರು. ಅದೇ ಗ್ರಾಮದ ಗೀಗೀ ಮೇಳ ತಯಾರಾಯಿತು. ‘ಆರು ನಾದ ಹಿಂದ ಗೀಗೀ ಮೇಳ’ ಎಂಬ ಹೆಸರಿನ ಮೇಳವು ರಾಷ್ಟ್ರೀಯ ವಿಚಾರಗಳ ಪ್ರಚಾರಕ್ಕೆ ಕಂಕಣ ಬದ್ಧವಾಯಿತು. ಬೆಳಗಾವಿ, ಧಾರವಾಡ, ವಿಜಾಪುರ, ಬಳ್ಳಾರಿ, ಕಾರವಾರ, ಸೊಲ್ಲಾಪುರ ಜಿಲ್ಲೆಗಳಲ್ಲಿ ಸಂಚರಿಸಿತು’ (ಹ.ಬ.ಮಿರ್ಜಿ, ಉದೃತ: ಬಸವರಾಜ ಮಲಶೆಟ್ಟಿ, ೧೯೯೮, ಪು.೧೦) ದೊರೆತ ದಾಖಲೆ ಪ್ರಕಾರ ಹರದೇಶಿ-ನಾಗೇಶಿ ಸಾಹಿತ್ಯದ ಕುರಿತಿರುವ ಶ್ಲೀಲ-ಅಶ್ಲೀಲದ ಪ್ರಶ್ನೆ ಹುಟ್ಟಿಕೊಂಡಿದ್ದು ೧೯೩೦ ರಿಂದೀಚೆಗೆ. ಆದರೆ ಫ್ಲೀಟರು ೧೮೮೫ ರಲ್ಲಿಯೇ ಸಂಗ್ರಹಿಸಿದ ಲಾವಣಿಗಳು ಹರದೇಶಿ-ನಾಗೇಶಿ ಹಾಡುಗಳಲ್ಲಿನ ಶ್ಲೀಲ-ಅಶ್ಲೀಲದ ಪ್ರಶ್ನೆಯ ಚರಿತ್ರೆಯನ್ನು ಮತ್ತಷ್ಟು ಹಿಂದಕ್ಕೆ ಕೊಂಡೊಯ್ಯುತ್ತದೆ. ಅದರರ್ಥ ಫ್ಲೀಟರು ಶ್ಲೀಲ-ಅಶ್ಲೀಲದ ಪ್ರಶ್ನೆಯೊಂದಿಗೆ ಲಾವಣಿಗಳನ್ನು ನೋಡಿದ್ದಾರೆ ಎಂದರ್ಥವಲ್ಲ. ಫ್ಲೀಟರು ಸಂಗ್ರಹಿಸಿದ ಲಾವಣಿಗಳು ಹೋರಾಟದ ವಿಭಿನ್ನ ಮುಖಗಳನ್ನು ದಾಖಲಿಸಿವೆ. ಶೃಂಗಾರದಿಂದ ವೀರ ಆಧ್ಯಾತ್ಮದೆಡೆಗೆ ಪಯಣಿಸಿದ ಕಥನವನ್ನೇ ಫ್ಲೀಟರಿಂದ ಸಂಗ್ರಹಿತವಾದ ಲಾವಣಿಗಳು ಹೇಳುತ್ತವೆ.

. ಪುರುಷ ಹಾಡುಗಾರರ ನೆಲೆಯಿಂದ

ಹರದೇಶಿ-ನಾಗೇಶಿ ಹಾಡುಗಾರನಾದ ಕಾಶಿನಾಥ ಚವ್ಹಾಣ ತಾನು ಸಂಪಾದಿಸಿದ ಪುಸ್ತಕವನ್ನು ಕೊಡುವಾಗ ಹೇಳಿದ ಮಾತನ್ನು ಗಮನಿಸಬೇಕು. “ನಿಮಗ ನಾ ಸಂಪಾದಿಸಿದ್ದ ಪುಸ್ತಕ ಕೊಟ್ಟನಲ್ಲಾ ಅದು ಖರೆ-ಖರೆ ಹರದೇಶಿ-ನಾಗೇಶಿ ಹಾಡು. ನೀವು ಈಗೇನು ಮಾಗಾಂವದಾಗ ಕೇಳಾಕ ಹೋಗ್ತೀವಿ ಅಂತಿರಲ್ಲಾ ಅವೆಲ್ಲಾ ಖೊಟ್ಟಿ ಹಾಡುಗಳು. ದೇವದಾಸೇರ ಬಂದಿಂದ ನಮ್ಮ ಹಾಡಗಳೆಲ್ಲಾ ಕುಲಗೆಟ್ಟು ಹೋದ್ವು” ಕಾಶಿನಾಥರ ಮಾತುಗಳು ಎರಡು ನೆಲೆಗಳಲ್ಲಿ ಹರದೇಶಿ-ನಾಗೇಶಿ ಹಾಡುಗಳನ್ನು ವಿಂಗಡಿಸಿಕೊಳ್ಳುವಂತೆ ಮಾಡುತ್ತದೆ. ೧. ದೇವದಾಸಿ ಪ್ರವೇಶ ಪೂರ್ವದ್ದು ೨. ದೇವದಾಸಿ ಪ್ರವೇಶ ನಂತರದ್ದು.

‘ದೇವದಾಸಿ’ ಪ್ರವೇಶ ಪೂರ್ವದಲ್ಲಿದ್ದ ಹರದೇಶಿ-ನಾಗೇಶಿ ಹಾಡುಗಳಲ್ಲಿ ಅಶ್ಲೀಲತೆ ಇರಲಿಲ್ಲ ಎನ್ನುವುದು ಅನೇಕ ಪುರುಷ ಹಾಡುಗಾರರ ಅಭಿಪ್ರಾಯವಾಗಿದೆ. ಅವರ ಈ ಆರೋಪಿತ ಅಭಿಪ್ರಾಯವನ್ನು ಆರ್ಥಿಕ ನೆಲೆಯಲ್ಲಿ ವಿಶ್ಲೇಷಿಸಬೇಕಿದೆ. ‘ದೇವದಾಸಿ’ ಪ್ರವೇಶ ಪೂರ್ವದಲ್ಲಿ ನಾಗೇಶಿ ಹಾಡುಗಳನ್ನು ಪುರುಷರೇ ಹಾಡುತ್ತಿದ್ದರು. ಯಾವಾಗ ದೇವದಾಸಿಯರು ನಾಗೇಶಿ ಹಾಡುಗಳನ್ನು ಹಾಡಲು ಪ್ರಾರಂಭಿಸಿದರೂ, ಆಗ ಪುರುಷ ನಾಗೇಶಿ ಹಾಡುಗಾರರ ಬೇಡಿಕೆ ಕುಗ್ಗಿತು. ಇದರಿಂದಾಗಿ ಪುರುಷ ನಾಗೇಶಿ ಹಾಡುಗಾರರು ಆರ್ಥಿಕ ಸಂಕಷ್ಟಕ್ಕೆ ಒಳಗಾದರು; ಸಂಕಷ್ಟಕ್ಕೆ ಒಳಗಾದ ಈ ಹಾಡುಗಾರರು ನಾಗೇಶಿ ಹಾಡಿಕೆಯ ವೃತ್ತಿಯನ್ನೇ ಅವಲಂಬಿಸಿದ್ದರು. ದುತ್ತೆಂದು ಎದುರಾದ ಈ ಬಗೆಯ ಆರ್ಥಿಕ ಸಂಕಷ್ಟಗಳು ಹಸಿವಿನ ಸಂಕಟಗಳನ್ನು ಎದುರುಗೊಳ್ಳುವಂತೆ ಮಾಡಿದವು. ಅವರೊಳಗೆ ಹುಟ್ಟಿದ ಈ ಹಸಿವಿನ ಸಂಕಟಗಳು ‘ದೇವದಾಸಿ’ಯರನ್ನು ದೂಷಿಸುವಂತೆ ಮಾಡಿರಬೇಕು. ಪುರುಷ ಹಾಡುಗಾರರಲ್ಲಿನ ವೃತ್ತಿ ಅತಂತ್ರತೆಯ ತಲ್ಲಣಗಳು, ಹಸಿವಿನ ಸಂಕಟಗಳು ಹರದೇಶಿ-ನಾಗೇಶಿ ಹಾಡುಗಳನ್ನು ‘ಮೂಲ’ ಮತ್ತು ‘ಖೊಟ್ಟಿ’ ಎಂದು ವಿಂಗಡಿಸಿಕೊಳ್ಳುವ ರಾಜಕೀಯ ಒತ್ತಾಸೆಗಳನ್ನು ಸೃಷ್ಟಿಸಿರಬೇಕು. ‘ಮೂಲ’ ಎನ್ನುವುದನ್ನು ‘ಶುದ್ಧ’ ಹಾಗೂ ‘ಶ್ಲೀಲ’ ಎನ್ನುವ ಅರ್ಥದಲ್ಲಿಯೇ ಬಳಸುತ್ತಾರೆ. ‘ಖೊಟ್ಟಿ’ ಎನ್ನುವುದಕ್ಕೆ ‘ಅಶುದ್ಧ’ ಹಾಗೂ ‘ಅಶ್ಲೀಲ’ ಎನ್ನುವ ಅರ್ಥ ನಿವರ್ಚನವನ್ನು ಪುರುಷ ಹಾಡುಗಾರರು ನೀಡುತ್ತಾರೆ. ನಾಗೇಶಿ ಹಾಡಿನೊಳಗೆ ‘ದೇವದಾಸಿಯರು’ ಪ್ರವೇಶಿಸುವ ಮುಂಚೆ ಮೂಲ-ಖೊಟ್ಟಿ, ಶುದ್ಧ-ಅಶುದ್ಧ, ಶ್ಲೀಲ-ಅಶ್ಲೀಲದ ಪ್ರಶ್ನೆಯೇ ಇರಲಿಲ್ಲ. ಇವರ ಪ್ರವೇಶದ ನಂತರವೇ ಈ ಪ್ರಶ್ನೆಗಳು ಹುಟ್ಟಿಕೊಂಡಿದ್ದರಿಂದ ಇಂತಹ ಪ್ರಶ್ನೆಗಳನ್ನು ಯಥಾವತ್ತಾಗಿ, ಸರಳವಾಗಿ ಹಾಗೂ ಸಹಜವಾಗಿ ಸ್ವೀಕರಿಸುವಂತಿಲ್ಲ, ಯಾಕೆಂದರೆ ಈ ಪ್ರಶ್ನೆಗಳು ಸಹಜ ಸ್ಥಿತಿಯನ್ನು ನಿರೂಪಿಸುವುದಕ್ಕಿಂತಲೂ ವೃತ್ತಿ ಅಸೂಯೆಯನ್ನು, ಪುರುಷ ಹಾಡುಗಾರರೊಳಗಿನ ಆರ್ಥಿಕ ಅತಂತ್ರತೆಯನ್ನು ಅನಾವರಣಗೊಳಿಸುತ್ತವೆ.

. ಮಹಿಳಾ ಹಾಡುಗಾರರ ನೆಲೆಯಿಂದ

ಹರದೇಶಿ-ನಾಗೇಶಿ ಸಾಹಿತ್ಯಕ್ಕೆ ಕರ್ತೃ ಇರುತ್ತಾರೆ; ಆದರೆ ಅದು ಕರ್ತೃ ರಚಿತ ರೀತಿಯಲ್ಲಿಯೇ ಪ್ರತಿ ಸಂದರ್ಭದಲ್ಲಿ ಪ್ರತಿ ಹಾಡುಗಾರರು ಹಾಡುತ್ತಾರೆಂದಲ್ಲ. ಹಾಡುಗಾರರೇ ಹೇಳಿಕೊಂಡಂತೆ ಹಾಡುವ ಸಂದರ್ಭದಲ್ಲಿನ ಒತ್ತಡದಿಂದಾಗಿ ಹಾಡುಗಾರರೇ ಹಾಡಿನ ಸಾಲುಗಳನ್ನು ಮರೆಯುವುದುಂಟು. ಆಗ ಹಾಡಿನ ವಿಷಯಕ್ಕೆ ಅನುಗುಣವಾಗಿ ಸಾಹಿತ್ಯವನ್ನು ಜೋಡಿಸಿಕೊಂಡು ಹಾಡುತ್ತಾರೆ. ಹೀಗೆ ವಿಷಯ ಜೋಡಿಸಿಕೊಂಡು ಹಾಡುವಾಗ ಎದುರು ಹಾಡುಗಾರರು ಪ್ರಬಲ ಸ್ಪರ್ಧೆಯನ್ನು ಒಡ್ಡಿದರೆ, ಸೋಲುವ ಅಸಹಾಯಕತೆಯು ಹಾಡುಗಾರರಲ್ಲಿ ಅಶ್ಲೀಲ ಪದಗಳನ್ನು ಬಳಸುವ ಒತ್ತಡಕ್ಕೆ ಒಳಗಾಗಿಸುತ್ತದೆ. ಈ ವಿಷಯವನ್ನು ನಾನು ಸಂದರ್ಶಿಸಿದ ಬಹುತೇಕ ಮಹಿಳಾ ಹಾಡುಗಾರರು ಹಂಚಿಕೊಂಡಿದ್ದಾರೆ.

ಬಂಗಾರವ್ವ ಹೇಳಿದ್ದು ಹೀಗೆ: “ತಾವು ಸೋಲ್ತೀವಿ ಅಂತ ಎದರ ಹಾಡಕಿಯವ್ರಿಗೆ ಅನ್ಸಿದ್ರೆ, ನಮ್ಮನ್ನ ಬಾಯಿಗಿ ಸಿಕ್ಕಂಗ ಬೈಯಾಕ ಚಾಲೂ ಮಾಡವ್ರು. ಸೂಳಿ, ಹಾದಾರಾ ಮಾಡು ಹೆಂಗ್ಸು ಅಂತೆಲ್ಲಾ ಹಾಡಕ್ಯಾಗ ಜೋಡ್ಸಿಕೊಂಡು ಹಾಡವ್ರು. ಇದಕ್ಕೂ ನಾವು ಬಗ್ಗಲಾಕಂದ್ರ ನಮ್ಮ ಕಡಿ ಕೈಮಾಡಿ ಲಟಗಿ ಮುರಿಯವ್ರು. ಒಂದೂರಾಗಂತು ನಮ್ಮ್ಯಾಗ ಮಣ್ಣ ತೂರ್ಯಾರು. ನಾವು ಹಾಡಾಗ ಬಂದ ಕೂಡ್ಲೆ ಜನಮೆಚ್ಚಗಿ ನಮ್ಮ ಕಡೆ ತಿರಗ್ತಿತ್ತು. ಭಕ್ಷೀಸು ನಮಗೆ ಜಾಸ್ತಿ ಕೊಡತಿದ್ರು. ಇದಕ್ಕೆ ನಮ್ಮ ಎದರ ಹಾಡಕಿಯವರು ಹೊಟ್ಟಿ ಉರಿತಿದ್ದರು” ಬಹುತೇಕ ಮಹಿಳಾ ಹಾಡುಗಾರರು ಬಂಗಾರವ್ವನ ಅಭಿಪ್ರಾಯವನ್ನೇ ಹೇಳಿದರು. ಹಾಡಿಕೆಯಲ್ಲಿ ಎದುರು ಹಾಡುಗಾರರು ಮಹಿಳೆಯಾಗಿದ್ದು ಅವರು ಪ್ರಬಲ ಸ್ಪರ್ಧೆಯನ್ನು ಒಡ್ಡಿದರೆ ಅಥವಾ ಹೆಚ್ಚು ಜನಪ್ರಿಯತೆಯನ್ನು ಗಳಿಸಿದರೆ ಅಥವಾ ಹೆಚ್ಚು ಭಕ್ಷೀಸನ್ನು ಪಡೆದುಕೊಂಡರೆ ಪುರುಷ ಹಾಡುಗಾರರು ಕೆರಳುತ್ತಿದ್ದರು. ಅವರೊಳಗಿನ ಕೆರಳುವಿಕೆಯು ಕೂಡ ಸ್ಪರ್ಧೆಯಲ್ಲಿ ಗೆಲ್ಲಲಾರದ ಅಸಹಾಯಕತೆ ಹಾಗೂ ಹೆಚ್ಚು ಭಕ್ಷೀಸು ಪಡೆಯಲಾಗದ ಆರ್ಥಿಕ ಅಸಹಾಯಕತೆಯೊಳಗಿನಿಂದ ಹುಟ್ಟಿದ್ದು. ಹೀಗೆ ಹುಟ್ಟಿಕೊಂಡ ಕೆರಳುವಿಕೆಯು ಶ್ಲೀಲದ ಗಡಿಯನ್ನು ದಾಟುವಂತೆ ಮಾಡುತ್ತಿರಬೇಕು. ಶ್ಲೀಲದ ಗಡಿದಾಟಿದ ಮಾತುಗಳು ಬೈಗುಳಾಗಿ ಪರಿವರ್ತಿತಗೊಳ್ಳುತ್ತಿರಬೇಕು. ಹರದೇಶಿ-ನಾಗೇಶಿ ಹಾಡುಗಳಲ್ಲಿ ಬಳಕೆಗೊಳ್ಳುವ ಅಶ್ಲೀಲ ಪದಗಳು ‘ದೇವದಾಸಿ’ ಪ್ರವೇಶದಿಂದಾಗಿ ಹುಟ್ಟಿಕೊಂಡವುಗಳಲ್ಲ. ಹಾಡಿಕೆ ವೃತ್ತಿಯಲ್ಲಿ ಉಳಿದುಕೊಳ್ಳಲಾಗದ ಅಸಹಾಯಕತೆಗಳು, ಕೀಳರಿಮೆಗಳು ಪುರುಷ ಹಾಡುಗಾರರನ್ನು ಬೈಗುಳದ ಅಖಾಡಕ್ಕೆ ಇಳಿಸಿವೆ.

“ಅವು ಹರದೇಶಿ ಹಾಡೋರು ಹೇಳೋ ಬೈಗಳಲ್ಲ ಅವು. ಕವಿನs ಹಂಗ ಬರದಿತರಾನು. ಅದನ್ನs ಅವರ ಹಾಡತಾರು” ಎನ್ನುವ ರೇಣುಕಾ ಹಾಗೂ ಭೀಮಾಬಾಯಿ ಇವರ ಮಾತುಗಳನ್ನು ಗಮನಿಸಬೇಕು. ‘ದೇವದಾಸಿ’ಯರ ಪ್ರವೇಶವಾದ ನಂತರ ಹರದೇಶಿ-ನಾಗೇಶಿ ಸಾಹಿತ್ಯ ಸ್ವರೂಪದಲ್ಲಿ ಬದಲಾವಣೆ ಬಂದಿರಬೇಕು; ಅಂದರೆ ಕೇವಲ ಬೈಗುಳಗಳಷ್ಟೇ ಹಾಡುಗಳಲ್ಲಿ ಪ್ರವೇಶಿಸಲಿಲ್ಲ. ದ್ವಂದ್ವಾರ್ಥವುಳ್ಳ ಸಾಹಿತ್ಯ ರಚನೆಯೂ ಪ್ರಾರಂಭವಾಗಿರಬೇಕು ‘ದೇವದಾಸಿ’ಯರ ಕುರಿತಂತೆ ಕವಿಯೊಳಗಿರುವ ಹಗುರವಾದ ಸಾಮಾಜಿಕ ಧೋರಣೆಯೇ ಸಾಹಿತ್ಯವನ್ನು ಸಡಿಲುಗೊಳಿಸಿರಬಹುದು. ಈ ಹಿನ್ನೆಲೆಯನ್ನು ಇಟ್ಟುಕೊಂಡು ಕೆಲ ಪುರುಷ ಹಾಡುಗಾರರು ಹಾಡಿಕೆ ಸಾಹಿತ್ಯವನ್ನು ‘ಮೂಲ’ ಮತ್ತು ‘ಖೊಟ್ಟಿ’ ನೆಲೆಗಳಲ್ಲಿ ವಿಂಗಡಿಸಿಕೊಳ್ಳುತ್ತಿರಬೇಕು.

. ಪ್ರೇಕ್ಷಕರ ನೆಲೆಯಿಂದ

ಹಾಡಿಕೆ ಕಾರ್ಯಕ್ರಮದ ಆಯೋಜಕರು ಹಾಗೂ ಪ್ರದರ್ಶನವನ್ನು ವೀಕ್ಷಿಸುವವರು ಹರದೇಶಿ-ನಾಗೇಶಿ ಹಾಡುಗಳನ್ನು ಅಶ್ಲೀಲ ಹಾಡುಗಳೆಂದೇ ಕರೆಯುತ್ತಾರೆ. ‘ನಾವು ಜಾತ್ರಿ ಹಾಡ್ಕಿಗಂತ ಕರಸಿರ‍್ತೀವ್ರಿ. ಅವ್ರು ಅಂಥಾವ್ರು ಹಾಡಿದ್ರ ಏನ ಮಾಡ್ಲಾಕ ಆಗ್ತೈತಿ? ಜಾತ್ರ‍್ಯಾಗ ಎಂಥಾ ಹಾಡುಗಳನ್ನು ಹಾಡಬೇಕು, ಎಂಥಾ ಹಾಡುಗಳನ್ನು ಹಾಡಬಾರ್ದು ಅಂತ ಹಾಡ್ಕಿಯವ್ರು ತಿಳಕೋಬೇಕು. ನ್ಯಾಲಿಗಿ ಕುಲಾನ್ನ ಹೇಳತ್ತ ಅಂತಾರಲ್ಲರಿ. ಇವನ್ನ ಹಾಡವರ್ಯಾರು ಅಂತ ನಿಮಗ ಗೊತ್ತ ಐತಿ. ಅಂಥವ್ರ ಬಾಯಾಗ ಎಂಥಾ ಹಾಡ್ಕಿ ಬರಬೇಕು ಅಂಥಾವ ಬರ್ತಾವರಿ’ ಎಂದ ಬಸವಗೌಡರ ನಿಲುವನ್ನೇ ಪ್ರೇಕ್ಷಕರು ಹಾಗೂ ಆಯೋಜಕರು ವ್ಯಕ್ತಪಡಿಸಿದರು. ಪ್ರೇಕ್ಷಕರು ಇಲ್ಲವೆ ಕಾರ್ಯಕ್ರಮದ ಆಯೋಜಕರಾರೂ ಹಾಡಿಕೆಯನ್ನು ಮೂಲ-ಖೊಟ್ಟಿ ಎಂದು ವಿಂಗಡಿಸಿ ಹೇಳಲಿಲ್ಲ. ಹಾಡುಗಳು ಅಶ್ಲೀಲವಾಗಿರುವುದಕ್ಕೆ ‘ದೇವದಾಸಿ’ಯರೇ ಕಾರಣ ಎಂದವರು ಆರೋಪಿಸ ಆರೋಪಿಸಲಿಲ್ಲ. ಪ್ರೇಕ್ಷಕರು ಹಾಡಿಕೆಯಲ್ಲಿನ ಅಶ್ಲೀಲತೆಗೂ ಜಾತಿಗೂ ಸಂಬಂಧ ಕಲ್ಪಿಸುತ್ತಾರೆ. ಲಿಖಿತ-ಅಲಿಖಿತ ಪರಂಪರೆಯುಳ್ಳ ಸಾಹಿತ್ಯವು ಕೂಡ ಭಾಷೆ, ಜಾತಿ, ಧರ್ಮ ಹಾಗೂ ಸಮುದಾಯಗಳಿಗೆ ಅನುಗುಣವಾಗಿ ವಿಂಗಡನೆಗೊಂಡಿದೆ. ಶುದ್ಧ-ಅಶುದ್ಧ, ಶ್ಲೀಲ-ಅಶ್ಲೀಲ ಹಿನ್ನೆಲೆಯಲ್ಲಿಯೇ ಭಾಷೆ ಹಾಗೂ ಸಾಹಿತ್ಯವನ್ನು ಆಧರಿಸಿ ಜನಪದ -ಶಿಷ್ಟ ಪದಗಳು ಕಾಣಿಸಿಕೊಂಡವು. ಭಾಷೆಯೊಳಗಿನ, ಸಾಹಿತ್ಯದೊಳಗಿನ ಈ ವಿಂಗಡನೆಗಳು ಶುದ್ಧ-ಅಶುದ್ಧ, ಶ್ಲೀಲ-ಅಶ್ಲೀಲ ಎನ್ನುವ ಮೌಲ್ಯಗಳನ್ನು ಸೃಷ್ಟಿಸಿದವು. ಹಾಡಲು ಕರೆಸುವವರು ಜಾತಿ ಶ್ರೇಣೀಕರಣದಲ್ಲಿ ತಾವು ‘ಉತ್ತಮರು ಎಂದು ಕರೆದುಕೊಳ್ಳುವವರು. ಹಾಡಲು ಹೋಗುವವರು ಸಾಮಾನ್ಯವಾಗಿ ‘ಕೆಳಜಾತಿ’ಯವರೆಂದು ಗುರುತಿಸಲ್ಪಟ್ಟವರು. ಜಾತಿಯಲ್ಲಿ ‘ಉತ್ತಮರು’ ಎಂದು ಕರೆದುಕೊಳ್ಳುವವರು ಯಾವಾಗಲೂ ‘ಕೆಳಜಾತಿ’ಯವರನ್ನು, ಅವರ ಆಚರಣೆ ಸಂಪ್ರದಾಯಗಳನ್ನು, ಭಾಷೆಯನ್ನು ಹಾಗೂ ಸಾಹಿತ್ಯವನ್ನು ಯಾವಾಗಲೂ ಅಶುದ್ಧ ಹಾಗೂ ಅಶ್ಲೀಲತೆಯ ನೆಲೆಯಲ್ಲಿಯೇ ಅರ್ಥೈಸುತ್ತಿರುತ್ತಾರೆ. ಹರದೇಶಿ-ನಾಗೇಶಿ ಹಾಡುಗಾರರಲ್ಲಿ ಬಹುತೇಕರು ಕೆಳಜಾತಿಗಳಿಂದಲೇ ಬಂದವರಾಗಿದ್ದುದರಿಂದ ಇವರು ಹೇಳುವ ಸಾಹಿತ್ಯವನ್ನು ಅಶ್ಲೀಲ ಎಂದು ಕರೆಯಲಾಯಿತು. ಇದು ಜಾತಿ ರಾಜಕಾರಣದಿಂದ ಹುಟ್ಟಿಕೊಂಡ ಭಾಷಾ ರಾಜಕಾರಣವಾಗಿದೆ.

ಹೀಗೆ ಹರದೇಶಿ-ನಾಗೇಶಿ ಹಾಡುಗಳು ಪುರುಷ ಹಾಡುಗಾರರ ನೆಲೆಯಲ್ಲಿ ಮೂಲ-ಖೊಟ್ಟಿ ಎನ್ನುವ ವಿಂಗಡನೆಗಳನ್ನು ಪಡೆದುಕೊಂಡರೆ; ಕಾರ್ಯಕ್ರಮ ಆಯೋಜಕರ ಹಾಗೂ ಪ್ರೇಕ್ಷಕರ ನೆಲೆಯಲ್ಲಿ ಅವುಗಳು ಅಶ್ಲೀಲ ಎಂದು ಗುರುತಿಸಲ್ಪಟ್ಟಿವೆ. ಹಾಡುಗಳಲ್ಲಿ ಅಶ್ಲೀಲತೆ ಇದೆ ಎಂದು, ಅದಕ್ಕೆ ಇವರೆ ಹೊಣೆಗಾರರೆಂದು ಪುರುಷ ಹಾಡುಗಾರರು, ಮಹಿಳಾ ಹಾಡುಗಾರರನ್ನು ದೂರಿದರೆ, ಮಹಿಳಾ ಹಾಡುಗಾರರು ಪುರುಷ ಹಾಡುಗಾರರನ್ನು ದೂರುತ್ತಾರೆ; ಕಾರ್ಯಕ್ರಮ ಆಯೋಜಕರು ಹಾಗೂ ಪ್ರೇಕ್ಷಕರು ಮಹಿಳಾ ಹಾಡುಗಾರರನ್ನು ಹಾಗೂ ಪುರುಷ ಹಾಡುಗಾರರನ್ನು ಇಬ್ಬರನ್ನೂ ದೂರುತ್ತಾರೆ. ಹಾಡುಗಾರರ ಜಾತಿಗಳನ್ನು ಕೇಂದ್ರವಾಗಿರಿಸಿಕೊಂಡು ಅವರಾಡುವ ಭಾಷೆ ಹಾಗೂ ಅವರು ಹೇಳುವ ಸಾಹಿತ್ಯ ಅಶ್ಲೀಲವಾಗಿದೆ ಎಂದು ಆರೋಪಿಸುತ್ತಾರೆ.