೬. ಸರಕಾರದಲ್ಲಿ ಕನಿಷ್ಠವೆಂದರೂ ತಿಂಗಳಲ್ಲಿ ೨೫ ದಿನಗಳು ಇಲ್ಲವೆ ೨೮ ದಿನಗಳವರೆಗೆ ಹಾಡಿಕೆಯಲ್ಲಿರಬೇಕಾಗುತ್ತದೆ. ವರ್ಷದಲ್ಲಿ ಹನ್ನೆರಡು ತಿಂಗಳೂ ಹಾಡಿಕೆಯಿರುವುರಿಂದ ಮನೆಗೆ ಹಿಂದಿರುಗುವುದು ಕಷ್ಟವಾಗುತ್ತದೆ. ತಂದೆ-ತಾಯಿ, ಮಕ್ಕಳು, ಗೆಳತಿಯರು-ಹೀಗೆ ಊರೊಟ್ಟಿಗಿನ ತಾಯಿ ಬೇರಿನ ಸಂಬಂಧವೇ ಕಳಚಿಕೊಳ್ಳುತ್ತದೆ. ಖಾಸಗಿ ಹಾಡಿಕೆಯಲ್ಲಾದರೆ ಜಾತ್ರೆಗಳ ಕಾಲದಲ್ಲಿ ನಾಲ್ಕು ತಿಂಗಳ ಅವಧಿಯಲ್ಲಿ ಹಾಡಿನ ದುಡಿಕೆಗಾಗಿ ಸ್ವಂತ ಊರು ಬಿಟ್ಟು ದೂರ ಇರುವ ಅನಿವಾರ್ಯತೆಗೆ ಹೊಂದಿಕೊಂಡಿದ್ದಾರೆ. ವರ್ಷದಲ್ಲಿ ಎಂಟು ತಿಂಗಳಾದರೂ ಕುಟುಂಬದ ಸದಸ್ಯರೊಂದಿಗೆ, ಗೆಳತಿಯರೊಂದಿಗೆ ಜೀವನದ ಕಾಲ ಕಳೆಯಬಹುದು. ಇವರೊಂದಿ ಹಂಚಿಕೊಂಡ ಪ್ರೀತಿಯ ನೆನಪನ್ನು ಬುತ್ತಿಯಾಗಿಸಿಕೊಂಡು, ನಾಲ್ಕು ತಿಂಗಳವರೆಗೆ ಊರಿನಿಂದ, ಕುಟುಂಬದಿಂದ ದೂರವಿರುತ್ತಾರೆ. ಸರಕಾರಿ ಹಾಡಿಕೆಯು ಖಾಸಗಿಯ ಹಾಗಲ್ಲ. ಹೀಗಾಗಿ ಕುಟುಂಬದೊಂದಿಗಿನ, ಊರಿನೊಂದಿಗಿನ ಹೊಕ್ಕುಳ ಬಳ್ಳಿ ಸಂಬಂದ ಕಳೆದುಕೊಂಡು ಇರಲಾಗುವುದಿಲ್ಲ. ಹೀಗಾಗಿಯೇ ಸರಕಾರದಿಂದ ಮತ್ತೆ, ಮತ್ತೆ ಆಹ್ವಾನ ಬಂದರೂ ಹಲಿಯಾಳದ ರತ್ನವ್ವ ನಿರಾಕರಿಸಿದ್ದು. ಪುರುಷ ಹಾಡುಗಾರರು ಕೂಡ ಸರಕಾರಿ ಹಾಡಿಕೆಯನ್ನು ನಿರಾಕರಿಸಲು ಮಹಿಳಾ ಹಾಡುಗಾರರು ನೀಡಿದ ಕಾರಣವನ್ನೇ ನೀಡಿದರು. ಆಳಂದದ ವಿಲಾಸ ತಳವಾರನು ಸರಕಾರಿ ಹಾಡಿಕೆಯನ್ನು ನಿರಾಕರಿಸಲು ಹೇಳಿದ ಕಾರಣ ಕುತೂಹಲಕರವಾದದ್ದು. ಐದಾರು ತಿಂಗಳವರೆಗೆ ಸರಕಾರಿ ಹಾಡಿಕೆಗೆ ಹೋದ ವಿಲಾಸನು ಹೆಂಡತಿಯನ್ನು ನೆನಪಿಸಿಕೊಂಡು ಮನೆಗೆ ಬಂದನಂತೆ, ಹೆಂಡತಿ ಬೇರೆಯವನೊಟ್ಟಿಗೆ ಸಂಬಂಧ ಹೊಂದಿದ್ದಳಂತೆ. ಅದನ್ನು ಕಣ್ಣಾರೆ ಕಂಡನಂತೆ. ಊರಿನ ಹಿರಿಯರು ಹಾಗೂ ಆಕೆಯ ಸಂಬಂಧಿಗಳ ಎದುರಿಗೆ ಆಕೆಯ ಸೀರೆಯ ಸೆರಗನ್ನು ಹರಿದು ಸಂಬಂಧ ಮುರಿದುಕೊಂಡನಂತೆ. ತಾಯಿಯ ಒತ್ತಾಯಕ್ಕೆ ಮಣಿದು ಮತ್ತೊಂದು ಮದುವೆಯಾದನಂತೆ. ಸರಕಾರಿ ಹಾಡಿಕೆಗಾಗಿ ನಾಲ್ಕೈದು ತಿಂಗಳು ಹೊರಗೆ ಉಳಿಯಬೇಕಾಯಿತಂತೆ. ಮೊದಲ ಹೆಂಡತಿಯ ಘಟನೆಯನ್ನು ನೆನಪಿಸಿಕೊಂಡು ತಕ್ಷಣವೇ ಹಿಂದುರಿಗದನಂತೆ. ಆಕೆಯೂ ಅನ್ಯ ಪುರುಷನೊಟ್ಟಿಗೆ ಸಂಬಂಧ ಹೊಂದಿದ್ದಳಂತೆ. ಇದರಿಂದ ರೋಸಿ ಹೋದ ಆತ ಆಕೆಯನ್ನು ತವರಿಗೆ ಬಿಟ್ಟು ಬಂದನಂತೆ. ಹುಡುಗಿಯ ಮನೆಯವರು ಇನ್ನೊಮ್ಮೆ ಇಂತಹ ತಪ್ಪು ಮಾಡಲಾರಳು; ಅವಳ ತಪ್ಪನ್ನು ಕ್ಷಮಿಸಿ, ಅವಳೊಂದಿಗೆ ಬಾಳುವಂತೆ ವಿನಂತಿಸಿಕೊಂಡರೆ. ವಿಲಾಸನೇ ದೊಡ್ಡ ಮನಸ್ಸು ಮಾಡಿ ಮತ್ತೆ ಅವಳನ್ನು ಹೆಂಡತಿಯಾಗಿ ಸ್ವೀಕರಿಸಿದನಂತೆ. ಹಾಡಿಕೆ ವೃತ್ತಿಯು ಅದರಲ್ಲಿಯೂ ಸರಕಾರಿ ಹಾಡಿಕೆ ವೃತ್ತಿಯು ಕುಟುಂಬಕ್ಕೆ ಹಿಂದುರಿಗಿಸಲು ಸಮಯ ನೀಡುವುದೇ ಇಲ್ಲ. ನಾಲ್ಕು, ಐದು ತಿಂಗಳು ಕಳೆದ ನಂತರ ಬಂದಾಗ, ಹೆಂಡತಿ ಬೇರೆಯವನೊಂದಿಗೆ ಹೋಗಿದ್ದಳಂತೆ. ಹೀಗಾಗಿ ಅವತ್ತಿನಿಂದ ಇವತ್ತಿನವರೆಗೂ ಮದುವೆ ಸಂಬಂಧದ ಬಗ್ಗೆ ತಲೆ ಕೆಡಿಸಿಕೊಂಡೇ ಇಲ್ಲವಂತೆ. ಮದುವೆ ಸಂಬಂಧ ಮುರಿಯಲು ಕಾರಣವಾದ ಸರಕಾರಿ ಹಾಡಿಕೆಯನ್ನೂ ಬಿಟ್ಟು, ಖಾಸಗಿ ಹಾಡಿಕೆಯಲ್ಲಿ ಮಾತ್ರ ತೊಡಗಿಸಿಕೊಂಡಿದ್ದಾನಂತೆ. ಒಂಟಿಯಾಗಿಯೇ ಜೀವನ ಸಾಗಿಸುತ್ತಿದ್ದಾನಂತೆ.

ವಿಲಾಸನ ಕುರಿತು ಮಹಿಳಾ ಹಾಡುಗಾರರು ಭಿನ್ನ ಕಥನಗಳನ್ನು ಹೇಳಿದರು. ಅವರ ಭಾಷೆಯಲ್ಲಿ ಹೇಳುವುದಾದರೆ “ಅವ್ನು ಬಾಳೆಗೇಡಿ. ಹೆಂಡತಿ ಅನ್ನು ಕನಿಕರಾ ಇಲ್ಲದವ್ನು. ಹೆಂಡತಿ ಎಲ್ಲಿ ಹೋದ್ರೂ ಸಂಶಯಾ ಪಡೋನು. ಸರಕಾರಿ ಹಾಡಿಕೆ ಅಂತ ಹೊರಗೋದ್ರ ಆರ ತಿಂಗ್ಲು, ವರ್ಷಾನಗಂಟ್ಲೆ ಮನಿಗೆ ಬರ್ತಿರ್ಲಿಲ್ಲ. ವಯಸ್ಸಿನ ಹುಡುಗಿ. ಅದು ಎಷ್ಟ ದಿವಸಂತ ಕಾಯ್ತದ? ಅದರ ಹೊಟ್ಟಿ-ಬಟ್ಟಿ ಯಾರ ನೋಡ್ಕೋಬೇಕು? ಅತ್ತಿ ಅನ್ನಕಿ ಆಕಿನ್ನ ಹುರದ ತಿಂತಿದ್ಲು. ಆಕಿ ದುಡ್ಡ ತಂದ ದುಡ್ಡನೂ ಅವ್ರ ಕಿತ್ಕೊತ್ತಿದ್ರು. ಆ ಹುಡಿಗsರ ಏನ ಮಾಡಿತು? ಪ್ರೀತಿ ಸಿಕ್ಕಲ್ಲಿ ಹೋಗ್ಯಾಳ. ಹೆಂಡ್ತಿ ಅಂದ್ರ ಸಾಕಿದ ನಾಯಿ ಅಂತ ಅನ್ಕೋಬಾರ್ದಲ್ಲಾ?” ಎಂದರು. ಈ ಹೇಳಿಕೆಗಳು ಪ್ರತ್ಯೇಕ ಚರ್ಚೆಯನ್ನು ಬಯಸುತ್ತಿದ್ದು ಅದು ಅಧ್ಯಯನಕ್ಕೆ ಪೂರಕವಾಗಿಲ್ಲದ ಕಾರಣಕ್ಕೆ ಅದರ ವಿಶ್ಲೇಷಣೆಯನ್ನು ಮಾಡುತ್ತಿಲ್ಲ. ಮಹಿಳಾ ಹಾಡುಗಾರರು, ಸರಕಾರಿಹಾಡಿಕೆಯು ಸೃಷ್ಟಿಸುವ ಅನಾಥತೆಯನ್ನು ಪ್ರಧಾನವಾಗಿ ಪರಿಗಣಿಸಿದ್ದಾರೆ. ಆದರೆ ಪುರುಷ ಹಾಡುಗಾರರು ಬಹಳ ಸಮಯದವರೆಗೆ ಕುಟುಂಬದಿಂದ ದೂರ ಉಳಿದರೆ, ಹೆಂಡತಿ ಅನ್ಯ ಸಂಬಂಧ ಹೊಂದುವ ಅಪಾಯವನ್ನೇ ಪ್ರಧಾನವಾಗಿ ಹೇಳಿದರು. ಭಾವನಾತ್ಮಕ ಸಂಬಂಧಗಳನ್ನು ಕಡಿದುಕೊಳ್ಳಬೇಕಾದ ಪರಿಸ್ಥಿತಿಯ ಕುರಿತು ಮಹಿಳಾ ಹಾಡುಗಾರರು ಭಯ ವ್ಯಕ್ತಪಡಿಸಿದರೆ; ಪುರುಷ ಹಾಡುಗಾರರು ಹೆಂಡತಿಯು ಲೈಂಗಿಕವಾಗಿ ಪರಿಶುದ್ಧವಾಗಿ ಉಳಿಯುವಳೇ ಎನ್ನುವ ಭಯವನ್ನು ವ್ಯಕ್ತಪಡಿಸಿದರು.

ಸರಕಾರದ ಹಾಡುಗಳನ್ನು ಸಮರ್ಥಿಸವವರು ಮೇಲೆ ಚರ್ಚಿಸಿದ ಕೆಲವು ಕಾರಣಗಳನ್ನು ನೀಡುತ್ತಾರೆ. ದನ್ಯಾಳದ ದುರುಗವ್ವನು “ಸರಕಾರಿ ಹಾಡ್ಕಿನs ಚಲೋರಿ. ಸರಕಾರಿ ಹಾಡ್ಕಿ ಅನ್ನೂದು ಸರಕಾರಿ ಕೆಲ್ಸ ಇದ್ದಂಗ” ಎಂದು ಹೇಳಿದಳು. ಆಕೆ ಸರಕಾರಿ ಕೆಲಸಗಳಿಗೂ ಸರಕಾರದಲ್ಲಿನ ಹಾಡಿಕೆ ಅವಕಾಶಗಳಿಗೂ ಸಮೀಕರಿಸಿಕೊಳ್ಳುತ್ತಾಳೆ. ದೈಹಿಕ ಹಾಗೂ ಮಾನಸಿಕ ಆಯಾಸವನ್ನು ನೀಡದೆ ವೇತನ ಕೊಡುವ ಸರಕಾರಿ ಹಾಡಿಕೆಯಲ್ಲಿ ಕೆಲವೇ ಕೆಲವು ಹರದೇಶಿ-ನಾಗೇಶಿ ಮಹಿಳಾ ಹಾಡುಗಾರರು ತೊಡಗಿಸಿಕೊಂಡಿದ್ದಾರೆ. ಇದಕ್ಕೆ ಕಾರಣ, ಅವರೇ ಹೇಳುವಂತೆ, ಸರಕಾರಿ ಇಲಾಖೆಗಳಿಗೆ ಸಂಪರ್ಕಿಸಲು ಸಾಧ್ಯವಾಗದೇ ಇದ್ದುದು, ಹಾಡಿಕೆಯ ಪೂರ್ವದಲ್ಲಿ ಹಣ ಹೂಡಿಕೆ ಸಾಮರ್ಥ್ಯವಿಲ್ಲದಿರುವುದು, ಹಾಗೂ ರಕ್ಷಣಾ ಜವಾಬ್ದಾರಿಯನ್ನು ಸರಕಾರ ತೆಗೆದುಕೊಳ್ಳದೇ ಇರುವುದು. ಹೀಗಾಗಿಯೇ ಏನೋ ಬಹುತೇಕ ಮಹಿಳಾ ಹಾಡುಗಾರರು ಖಾಸಗಿ ಹಾಡಿಕೆಯಲ್ಲಿಯೇ ಕೆಲಸ ನಿರ್ವಹಿಸುತ್ತಿದ್ದಾರೆ. ವಕ್ತೃಗಳ ನಿರೂಪಣೆಯನ್ನೇ ಆಧರಿಸಿ ಹೇಳುವುದಾದರೆ ಖಾಸಗಿ ಹಾಡಿಕೆಯಾಗಿರಬಹುದು, ಸರಕಾರಿ ಹಾಡಿಕೆಯಾಗಿರಬಹುದು. ಇವೆರಡೂ ಮಹಿಳಾ ಹಾಡುಗಾರರಿಗೆ ಸುರಕ್ಷಿತ ತಾಣಗಳೆನಿಸುವುದಿಲ್ಲ. ಎರಡೂ ಕಡೆಗೂ ಹಿಂಸೆ, ಅಪಮಾನಗಳು ತಪ್ಪಿದ್ದಲ್ಲ. ಅತ್ತ ದರಿ, ಇತ್ತ ಪುಲಿ ಎನ್ನುವಂತಿದೆ ಈ ಮಹಿಳಾ ಹಾಡುಗಾರರ ಜೀವನ. ಎರಡೂ ಹಾಡುಗಾರಿಕೆಯಲ್ಲಿ ಆರ್ಥಿಕ ಒತ್ತಡದೊಂದಿಗೆ ದೈಹಿಕ ಹಾಗೂ ಮಾನಸಿಕ ಒತ್ತಡಗಳನ್ನು ಎದುರಿಸುತ್ತಿರುತ್ತಾರೆ. ಖಾಸಗಿ ಹಾಡಿಕೆಯಲ್ಲಾದರೆ ಎದುರು ಹಾಡುಗಾರರು ಸಾರ್ವಜನಿಕವಾಗಿ ‘ಸೂಳೆ’, ‘ದೇವದಾಸಿ’ ಎಂದು ಅಪಮಾನಿಸುತ್ತಾರೆ. ಆದರೆ ಸರಕಾರದಲ್ಲಿ ಹಾಗಿಲ್ಲ. ಯೋಜನೆಗಳ ಪ್ರಚಾರ ಕಾರ್ಯಕ್ಕೆ ಬಳಸಿಕೊಳ್ಳುವ ಸರಕಾರಿ ಸಿಬ್ಬಂದಿಗಳು ‘ದೇವದಾಸಿ’, ‘ಸೂಳೆ’ ಎಂದು ಈ ಹಾಡುಗಾರರನ್ನೇನೂ ಕರೆದಿಲ್ಲ; ಆದರೆ ಕಂಡಿದ್ದಾರೆ. ಆ ಕಾರಣಕ್ಕಾಗಿಯೇ ಈ ಮಹಿಳಾ ಹಾಡುಗಾರರ ವಸತಿ ಸೌಲಭ್ಯದ ಬಗೆಗೆ ಆಸಕ್ತಿ ತೋರಿಸಿಲ್ಲ ಎನ್ನುವುದು ಅಷ್ಟೇ ಸತ್ಯ. ಸರಕಾರಿ ಹಾಡಿಕೆಗೆಂದು ಹೋದ ಊರುಗಳಲ್ಲಿ ಇವರ ಕೈಯಲ್ಲಿನ ದಪ್ಪು, ಚೌಡಿಕೆ ಕಂಡೇ, ಊರಿನ ಪುರುಷರು ಇವರ ಲೈಂಗಿಕತೆಯ ಮೇಲೆ ಹಕ್ಕು ಚಲಾಯಿಸಲು ಪ್ರಯತ್ನಿಸಿದ್ದಾರೆ. ಈ ಮಹಿಳಾ ಹಾಡುಗಾರರು ಎಲ್ಲಿ ಹೋದರೂ ‘ಜೋಗತಿ’, ‘ಸೂಳೆ’ ಎನ್ನುವ ಸಾಮಾಜಿಕ ಅಪಮಾನದ ಕಪ್ಪು ಛಾಯೆ ಬೆನ್ನಟ್ಟಿಕೊಂಡೇ ಬಂದಿದೆ.

ಹಾಡಿಕೆಯಿಂದಾಗಿ ಹಣ ಸಂಪಾದಿಸಬಹುದು. ಗೌರವ ಪಡೆದುಕೊಳ್ಳಬಹುದು ಎಂದು ಹಾಡಿಕೆ ಕಲಿಯುತ್ತಾರೆ. ಹೊಲದ ಕೆಲಸಗಳಲ್ಲಿ ಬರುವ ದಿನಗೂಲಿಗಿಂತಲೂ ಸ್ವಲ್ಪ ಹೆಚ್ಚು ಆದಾಯ ದೊರೆಯುತ್ತದೆ ಎಂದು ಬರುತ್ತಾರೆ. ಹೊಲದ ಕೆಲಸ, ಗಾರೆ ಕೆಲಸ ಮಾಡುವವರಿಗೆ ಒಂದು ಹಂತದ ವಿಶ್ರಾಂತಿ, ರಾತ್ರಿಯಿಡಿ ನೆಮ್ಮದಿಯ ನಿದ್ರೆ ದೊರೆಯುತ್ತದೆ. ತಮಗೆ ದಕ್ಕಿದ್ದನ್ನು ಹೊಟ್ಟೆ ತುಂಬ ಊಟ ಮಾಡುತ್ತಾರೆ. ಹಾಡಿಕೆಯವರದು ಹಾಗಲ್ಲ. ಹೊಟ್ಟೆ ತುಂಬ ಊಟವಿಲ್ಲ; ಕಣ್ತುಂಬ ನಿದ್ರೆಯಿಲ್ಲ; ಬಾಯಾರಿದರೂ ನೀರು ಕುಡಿಯುವಂತಿಲ್ಲ; ಆಸೆಯಾದರೂ ಅಪರೂಪಕ್ಕೆ ಜಾತ್ರೆಯಲ್ಲಿ ದೊರೆಯುವ ಸಿಹಿ ಊಟ ಮಾಡುವಂತಿಲ್ಲ. ನಿಸರ್ಗ ಸಹಜ ಕರೆಗಳಾದ ಮಲ, ಮೂತ್ರವನ್ನು ಮಾಡುವಂತಿಲ್ಲ. ಯಾರು ಎಂತಹ ಪ್ರಶ್ನೆಗಳನ್ನು ಕೇಳುತ್ತಾರೆ ಎನ್ನುವುದು ನಿರಂತರ ಮಾನಸಿಕ ಒತ್ತಡ. ನಿರಂತರ ಹಾಡಿಕೆಯು ಹೊಟ್ಟೆ, ಗಂಟಲು, ಕೈಕಾಲುಗಳಲ್ಲಿ ನೋವನ್ನುಂಟುಮಾಡುತ್ತದೆ. ಹಾಡುಗಾರರು ತಮ್ಮ ಶ್ರಮದ ಕುರಿತು ಲೆಕ್ಕಾಚಾರ ಮಾಡುವುದಿಲ್ಲ. ಒಂದು ರಾತ್ರಿ; ಇಲ್ಲವೆ ಒಂದು ರಾತ್ರಿ ಒಂದು ಹಗಲಿಗೆ; ಇಲ್ಲವೆ ಮೂರು ಹಗಲು, ಎರಡು ರಾತ್ರಿಗೆ; ಇಲ್ಲವೆ ಮೂರು ರಾತ್ರಿ ಎರಡು ಹಗಲಿಗೆ ದೊಡ್ಡ ಮೊತ್ತದ ವೇತನಕ್ಕೆ ಆಕರ್ಷಿತರಾಗುತ್ತಾರೆ. ಹಾಡಿಕೆಗೆಂದು ಕರೆಯಿಸಿದವರು ಕೊಡುವ ಸಂಬಳವನ್ನು ಮಾತ್ರ ಲೆಕ್ಕಕ್ಕೆ ತೆಗೆದುಕೊಳ್ಳುತ್ತಾರೆ. ಹಾಡುಗಾರರು ತಮ್ಮ ಶ್ರಮವನ್ನು ಗಣನೆಗೆ ತೆಗೆದುಕೊಳ್ಳುವುದೇ ಇಲ್ಲ. ಹಾಡುಗಾರರು ಹಾಡಿಕೆಯಲ್ಲಿ ಹಣ ಸಂಪಾದಿಸಬಹುದೆಂದು ಬರುತ್ತಾರೆ. ಇಲ್ಲಿ ನಿರಂತರ ಹಾಡಿಕೆ ಹಾಗೂ ಅಪಮಾನದಿಂದ ದಣಿಯುತ್ತಾರೆ. ಹೀಗೆ ದಣಿದ ಅವರು ಸರಕಾರಿ ಹಾಡಿಕೆ, ಸರಕಾರಿ ಕೆಲಸದಷ್ಟು ಹಗುರ ಎಂದು ಇಲ್ಲಿ ಬರುತ್ತಾರೆ.

ಹತ್ತು ಇಲ್ಲವೆ ಹದಿನೈದು ದಿನಗಳವರೆಗೆ ನಿರಂತರ ಹಾಡಿಕೆಯಿದ್ದಾಗ ಹಿಮ್ಮೇಳದೊಂದಿಗೆ ತಮ್ಮ ಬಸ್‌ಚಾರ್ಜ್‌, ಊಟದ ಖರ್ಚನ್ನು ನಿಭಾಯಿಸಬೇಕಾಗುತ್ತದೆ. ಕುಟುಂಬದಲ್ಲಿನ ಬಡತನದ ಒತ್ತಡವು ಅಂದಂದಿನ ಹಾಡಿಕೆಯ ಆದಾಯವನ್ನು ಅಂದೇ ಖರ್ಚು ಮಾಡಿಸುತ್ತದೆ. ಹೀಗಾಗಿ ಹಣ ಕೂಡಿಟ್ಟು ಶ್ರೀಮಂತರಾಗುವ, ಸಮಾನ ಅಂತಸ್ತು ಪಡೆಯುವ ಅವರ ಕನಸು ಕನಾಸಗಿಯೇ ಉಳಿಯುತ್ತದೆ. ಅನೇಕ ಮಹಿಳಾ ಹಾಡುಗಾರರು ಅವರಿವರನ್ನು ಕಂಡು ಕಾಡಿ ಬೇಡಿ ಪಡೆದ ಸರಕಾರಿ ಹಾಡಿಕೆಯ ಅವಕಾಶಗಳನ್ನು, ಪೂರ್ವದಲ್ಲಿನ ಖರ್ಚನ್ನು ಹೊಂದಿಸಿಕೊಳ್ಳಲಾರದ ಆರ್ಥಿಕ ಅಸಹಾಯಕತೆಯಿಂದ ಕೈಬಿಟ್ಟಿದ್ದಾರೆ. ನಾನು ಸಂದರ್ಶಿಸಿದ ಅನೇಕ ಮಹಿಳಾ ಹಾಡುಗಾರರು “ಸರಕಾರಿ ಹಾಡ್ಕಿ ನಿಮ್ಮ ಸರಕಾರ ಕೆಲಸದ್ಹಂಗ ಬಾಳs ಚಲೋರಿ. ಆದ್ರ ಹತ್ತು ಹದಿನೈದ ದಿನದ್ದ ಖರ್ಚನ್ನು ನಾವs ನೋಡ್ಕೋಬೇಕಲ್ಲಾ? ಅದಪಿರಿ (ತೊಂದರೆ) ಆಗೋದು. ಬಡವ್ರು ನಾವು. ನಮ್ಮಂಬಲ್ಲಿ (ನಮ್ಮ ಹತ್ತಿರ) ಅಷ್ಟ ರೊಕ್ಕಾ ಎಲ್ಲಿ ಬರಬೇಕು?” ಎನ್ನುವ ಅಸಹಾಯಕತೆಯನ್ನೇ ತೋಡಿಕೊಂಡರು. ಪೂರ್ವದ ಖರ್ಚನ್ನು ಹೊಂದಿಸಿಕೊಂಡವರು ಊರಿಂದೂರಿಗೆ ಅನಾಥರಂತೆ ಅಲೆಯುತ್ತ, ಅವರಿವರ ಋಣ ಭಾರದೊಂದಿಗೆ, ಹಣ ಹೊಂದಾಣಿಕೆಯ ಚಿಂತೆಯೊಂದಿಗೆ, ತಮ್ಮನ್ನು ತಾವು ಕಾಯ್ದುಕೊಳ್ಳುವ ಭಯದಲ್ಲಿ ತಿರುಗಿದ್ದೇ ಹೆಚ್ಚು. ನಾನು ಗಮನಿಸಿದಂತೆ ಸರಕಾರಿ ಹಾಡಿಕೆಯ ಸಂದರ್ಭದಲ್ಲಿಯೂ, ಮಹಿಳಾ ಹಾಡುಗಾರರು ತಾವು ವ್ಯಯಿಸುವ ಹಣವನ್ನು ಲೆಕ್ಕಕ್ಕಿಟ್ಟುಕೊಂಡಿಲ್ಲ. ಸರಕಾರಿ ಹಾಡಿಕೆಯಲ್ಲಿಯೂ ಹಾಡುಗಾರರಿಗೆ ಆಯಾ ದಿನದ ವೇತನ ಪೂರ್ಣ ಪ್ರಮಾಣದಲ್ಲಿ ಬರುವುದಿಲ್ಲ. ಅವರಿಗೆ ಹಣ ಸಂದಾಯ ಮಾಡುವವರು, ಸಂದಾಯವಾಗಬೇಕಾದ ಹಣದಲ್ಲಿ ಶೇಕಡಾ ಮುವತ್ತರಷ್ಟು ಹಿಡಿದಿಟ್ಟುಕೊಳ್ಳುತ್ತಾರೆ. ಅಷ್ಟು ಹಣ ಕೊಡಲೊಪ್ಪಿದರೆ ಮಾತ್ರ ಹಾಡುಗಾರರ ಕೈಗೆ ಹಣ ಸೇರಿಸುತ್ತದೆ. ಇಲ್ಲದಿದ್ದರೆ ಕಡತ ಪರಿಶೀಲನೆಯಲ್ಲಿದೆ, ಅವರು ಸಹಿ ಮಾಡಬೇಕು, ಇವರು ಸಹಿ ಮಾಡಬೇಕು ಎಂದು ಸತಾಯಿಸುತ್ತಾರೆ. ಬರಬೇಕಾಗಿದ್ದ ಹಣಕ್ಕಾಗಿ ಹಾಡುಗಾರರು ತಮ್ಮ ಊರಿನಿಂದ ತಾಲೂಕು ಇಲ್ಲವೆ ಜಿಲ್ಲಾ ಕೇಂದ್ರಗಳಿಗೆ ಅಲೆದಾಡಬೇಕಾಗುತ್ತದೆ. ಇದಕ್ಕಾಗಿಯೇ ಶ್ರಮ, ಸಮಯ, ಹಣವನ್ನು ವ್ಯಯಿಸಬೇಕಾಗುತ್ತದೆ. ಇದು ಇಷ್ಟಕ್ಕೆ ಮುಗಿಯುವುದಿಲ್ಲ. ಲಂಚದ ವಿಷಯದಲ್ಲಿ ಸಹರಿಸದ ಹಾಡುಗಾರರಿಗೆ ಮತ್ತೆಂದಿಗೂ ಹಾಡಿಕೆಗೆ ಅವಕಾಶ ದೊರೆಯುವುದಿಲ್ಲ. ಈ ಎಲ್ಲ ಕಾರಣಗಳಿಂದಾಗಿ ಮಹಿಳಾ ಹಾಡುಗಾರರು ಲಂಚದಂತಹ ಸಂಗತಿಗಳನ್ನು ಅಸಹಾಯಕತೆಯಿಂದ ಒಪ್ಪಿಕೊಳ್ಳುತ್ತಾರೆ. ಪುರುಷ ಹಾಡುಗಾರರು ತಮಗೆ ಬರಬೇಕಾದ ಹಣವನ್ನು ಕಡ್ಡಾಯವಾಗಿ ಕೇಳುತ್ತಾರೆ. ಅದುವರೆಗೆ ತಾವು ಮಾಡಿದ ಖರ್ಚು-ವೆಚ್ಚಗಳನ್ನು ಹಾಗೂ ಸಿಬ್ಬಂದಿಗಳು ಕೇಳುವ ಲಂಚವನ್ನು ಕಳೆದು, ತಮಗೆ ಯಾವ ಲಾಭವಾಗಿದೆ ಎಂದುಲಂಚ ಕೇಳಿದವರನ್ನೇ ಪ್ರಶ್ನಿಸುತ್ತಾರೆ. ಕ್ಷೇತ್ರಾಧ್ಯಯನದಿಂದ ತಿಳಿದು ಬಂದ ಸಂಗತಿಯೆಂದರೆ ಪುರುಷ ಹಾಡುಗಾರರು ಹೀಗೆ ಪ್ರಶ್ನಿಸುವ ಕಾರಣದಿಂದಾಗಿಯೇ, ಅವರಿಗೆ ಸರಕಾರಿ ಹಾಡಿಕೆಯಲ್ಲಿ ಅವಕಾಶಗಳಿರುವುದಿಲ್ಲ. ನಾನು ಸಂದರ್ಶಿಸಿದ ಹರದೇಶಿ-ನಾಗೇಶಿ ಪುರುಷ ಹಾಡುಗಾರರು, ತಾವು ದುಡಿದ ದುಡ್ಡನ್ನು ಅವರಿಗೇಕೆ ಕೊಡಬೇಕೆಂದು ಪ್ರಶ್ನಿಸಿದ್ದೇ ಹೆಚ್ಚು. ಖಾಸಗಿ ಹಾಡಿಕೆಯಲ್ಲಿ ಲಂಚದ ಪ್ರಶ್ನೆಯೇ ಬರುವುದಿಲ್ಲ. ಆದ್ದರಿಂದ ಬಹುತೇಕ ಪುರುಷ ಹಾಡುಗಾರರು ಖಾಸಗಿ ಹಾಡಿಕೆಯಲ್ಲಿಯೇ ಮುಂದುವರೆಯಲು ಇಷ್ಟಪಡುತ್ತಾರೆ. ಸರಕಾರಿಹಾಡಿಕೆಯ ಅವಕಾಶಗಳಿಂದ ವಂಚಿತರಾಗುವ ಭಯದಿಂದ ಮಹಿಳೆಯರು ಮೌನವಾಗಿ ತಮ್ಮ ದುಡಿಮೆಯ ಇಪ್ಪತ್ತೈದರಿಂದ ಮೂವತ್ತು ಭಾಗದಷ್ಟು ಹಣ ಲಂಚ ಕೇಳಿದವರಿಗೆ ಕೊಡುತ್ತಾರೆ. ತಿಂಗಳ ಮುಟ್ಟು, ಹೆರಿಗೆ, ಹಸಿವು ಕಟ್ಟುವಿಕೆ ಮೊದಲಾದ ಕಾರಣಗಳಿಂದ ಮುಪ್ಪಾದ ಹರದೇಶಿ-ನಾಗೇಶಿ ಮಹಿಳಾ ಹಾಡುಗಾರರು ಕಡಿಮೆ ಶ್ರಮದ ದುಡಿಮೆಯನ್ನು ಬಯಸಿ ಸರಕಾರಿ ಹಾಡಿಕೆಗೆ ಕಾಲಿಡುತ್ತಾರೆ. ಸರಕಾರ ಕೊಡುವ ದಿನದ ಸಂಬಳಕ್ಕೆ ಮಾತ್ರ ಆಕರ್ಷಿತವಾಗಿರುವರು.

ಖಾಸಗಿ ಸಂದರ್ಭದಲ್ಲಾಗಿರಬಹುದು, ಸರಕಾರದ ಸಂದರ್ಭದಲ್ಲಾಗಿರಬಹುದು-ಅಲ್ಲಿ ಅವರು ನೀಡುವ ಸಂಬಳವನ್ನು ಮಾತ್ರ ಪರಿಗಣನೆಗೆ ತೆಗೆದುಕೊಳ್ಳುವ ಮಹಿಳಾ ಹಾಡುಗಾರರು, ತಾವು ಹಾಕಿದ ಶ್ರಮಕ್ಕೆ ಬಂದ ಲಾಭವೆಷ್ಟು ಎನ್ನುವುದನ್ನು ಲೆಕ್ಕಹಾಕುವುದಿಲ್ಲ. ಇದಕ್ಕೆ ಎರಡು ಕಾರಣಗಳನ್ನು ಗುರುತಿಸಬಹುದು. ೧. ಬಡತನವು ಹಣವನ್ನು ಕನಸಾಗಿಸಿರುವುದು ೨.ಇವರ ಪುರುಷ ಸಂಬಂಧಿಗಳು ಅಪ್ಪ-ಅಣ್ಣ-ತಮ್ಮ-ಗೆಳೆಯ ಇವರು ಮಹಿಳೆ ಎನ್ನುವ ಕಾರಣದಿಂದ ಹಣದ ವ್ಯವಹಾರದಿಂದ ಹಾಡಿಕೆ ಮಹಿಳೆಯರನ್ನು ದೂರ ಇಟ್ಟಿರುವುದು. ಹೀಗಾಗಿಯೇ ಏನೋ ಮಹಿಳಾ ಹಾಡುಗಾರರು, ತಾವು ಪಡೆಯುವ ಬಿದಾಯಿ(ಸಂಬಳ)ಯನ್ನು ಮಾತ್ರ ಪರಿಗಣನೆಗೆ ತೆಗೆದುಕೊಳ್ಳುತ್ತಾರೆ; ಅದಕ್ಕೆ ತಾಗವು ಹಾಕುವ ಶ್ರಮವನ್ನು ಲೆಕ್ಕಕ್ಕೆ ತೆಗೆದುಕೊಳ್ಳುವುದೇ ಇಲ್ಲ.

ಹಣದ ವ್ಯವಹಾರಿಕತೆಯಲ್ಲಿ ಹರದೇಶಿ-ನಾಗೇಶಿ ಹಾಡುವ ಪುರುಷ ಹಾಡುಗಾರರು ಹಾಡುವ ಮಹಿಳೆಯರಿಗಿಂತ ಭಿನ್ನವಾಗಿದ್ದಾರೆ. ಹಾಡಿಕೆಗಾಗಿ ಪಡೆಯುವ ಸಂಬಳವನ್ನು ಅದರ ಜೊತೆ ಯಲ್ಲಿಯೇ ತಮ್ಮ ಶ್ರಮವನ್ನು ತೂಗಿ ನೋಡುತ್ತಾರೆ. ತಮ್ಮ ಶ್ರಮ ಹೆಚ್ಚಾಯಿತು, ವೇತನ ಕಡಿಮೆಯಾಯಿತು ಎಂದೇ ಗೊಣಗುತ್ತಿರುತ್ತಾರೆ. ಹರದೇಶಿ-ನಾಗೇಶಿ ಹಾಡಿಕೆಗೆ ಊರಿನ ದೂರ ಹಾಗೂ ಹಾಡಿಕೆಯ ಅವಧಿಯನ್ನು (ಹಗಲು, ರಾತ್ರಿ ಹಾಗೂ ದಿನಗಳನ್ನು) ಪರಿಗಣಿಸಿಯೇ ಸಂಬಳವನ್ನು ಪಡೆಯುತ್ತಾರೆ. ಸಂಬಳದ ಜೊತೆಯಲ್ಲಿ, ತಮ್ಮ ಶ್ರಮವನ್ನು ತಾಳೆ ಹಾಕಿ ನೋಡಿ, ಕಡಿಮೆಯಾಯಿತು ಎಂದು ಗೊಣಗಿಕೊಳ್ಳುತ್ತಾರೆ. ಮಹಿಳಾ ಹಾಡುಗಾರರಿಗೆ ತಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುತ್ತಿಲ್ಲ ಎನ್ನುವ ಅರಿವು ಕಡಿಮೆ. ಮೇಳದ ಲೆಕ್ಕದಲ್ಲಿ ಕೊಡುವ ದೊಡ್ಡ ಮೊತ್ತದ ಸಂಬಳಕ್ಕೆ ಆಕರ್ಷಿತರಾಗುತ್ತಾರೆ. ಅದು ಮೇಳದ ವ್ಯಕ್ತಿಗಳ ಸಂಖ್ಯೆಗಳಿಗನುಗುಣವಾಗಿ ವಿಂಗಡನೆಗೊಂಡು ಇವರ ಕೈ ಸೇರುವುದು ತುಂಬ ಕಡಿಮೆ ಮೊತ್ತ. ಹೀಗಾಗಿ ಹಾಡುಗಾರರ ಬಡತನ, ಅವರು ಸರಕಾರಿ ಹಾಡಿಕೆಯಲ್ಲಿದ್ದರೂ ಇರುತ್ತದೆ, ಖಾಸಗಿ ಹಾಡಿಕೆಯಲ್ಲಿದ್ದರೂ ಇರುತ್ತದೆ.

ಧ್ವನಿ ಮುದ್ರಣ ಮಾರುಕಟ್ಟೆ ಮತ್ತು ಹರದೇಶಿ-ನಾಗೇಶಿ ಹಾಡುಗಾರರು

ಕೆಲ ಜನಪದ ಅಧ್ಯಯನ ಆಸಕ್ತರೊಂದಿಗೆ ಧ್ವನಿ ಮುದ್ರಣ ಮಾರುಕಟ್ಟೆಯ ಕುರಿತು ಚರ್ಚಿಸುತ್ತಿದ್ದೆ. ಜನಪದ ಗಾಯಕ-ಗಾಯಕಿಯರು ಜಾಗತೀಕರಣ ಮಾರುಕಟ್ಟೆಗೆ ಆಕರ್ಷಿತರಾಗುತ್ತಿದ್ದಾರೆ ಎಂದು ಅವರು ಹೇಳಿದರು. ಮೊದಲಿನ ಹಾಗೆ ಹಾಡುಗಾರಿಕೆಯನ್ನು ಪ್ರದರ್ಶನ ಕಲೆಯಾಗಿ ಪರಿಭಾವಿಸುವ ಪರಂಪರೆ ಹಳ್ಳಿಗಳಲ್ಲಿ ಕಡಿಮೆಯಾಗುತ್ತಿದೆ. ಅವರು ಕ್ಯಾಸೆಟ್ ಮಾರುಕಟ್ಟೆಗೆ ಮಾರುಹೋಗಿದ್ದಾರೆ. ಹಾಡುಗಾರರೂ ಕೂಡ ಕ್ಯಾಸೆಟ್ ಮಾರುಕಟ್ಟೆಗೆ ಆಕರ್ಷಿತರಾಗುತ್ತಿದ್ದಾರೆ. ಧ್ವನಿ ಮುದ್ರಣ ಸಂಸ್ಥೆಯವರು ಹಾಡುಗಾರರಿಗೆ ಮೂವತ್ತರಿಂದ ನಲ್ವತ್ತು ಸಾವಿರ ರೂಪಾಯಿಗಳನ್ನು ಸಂಭಾವನೆಯಾಗಿ ನೀಡುತ್ತಾರೆ. ಇಷ್ಟು ದೊಡ್ಡ ಮೊತ್ತದ ಸಂಭಾವನೆಗೆ ಹಾಡುಗಾರರು ಆಕರ್ಷಿತರಾಗುತ್ತಿದ್ದಾರೆ. ಒಂದು ಬಾರಿ ಮಾತ್ರ ಹಾಡುಗಾರರಿಗೆ ಹಣ ನೀಡುವ ಧ್ವನಿ ಮುದ್ರಣ ಮಾರಾಟಗಾರರು, ಅನಂತರ ಅವುಗಳನ್ನೇ ಮರು ಧ್ವನಿ ಮುದ್ರಣ ಮಾಡಿಕೊಂಡು ಮಾರಾಟ ಮಾಡುತ್ತಿದ್ದಾರೆ. ಅದರ ಲಾಭಾಂಶವನ್ನು ಹಾಡುಗಾರರಿಗೆ ನೀಡದೇ ತಾವೇ ಅನುಭವಿಸುತ್ತಿದ್ದಾರೆ. ಹೀಗೆ ಜನಪದ ಹಾಡುಗಾರರನ್ನು ಜಾಗತಿಕ ಮಾರುಕಟ್ಟೆ ಶೋಷಣೆಗೊಳಪಡಿಸುತ್ತಿದೆ ಎಂದು ಹೇಳಿದರು. ಈ ವಾದದ ಸತ್ಯಾಸತ್ಯತೆಯನ್ನು ಹರದೇಶಿ-ನಾಗೇಶಿ ಹಾಡುಗಾರರನ್ನುಮತ್ತು ಧ್ವನಿ ಮುದ್ರಣ ಮಾರುಕಟ್ಟೆಯನ್ನು ಗಮನದಲ್ಲಿಟ್ಟುಕೊಂಡು ವಿಶ್ಲೇಷಿಸಬೇಕಿದೆ. ಹಾಗೆಯೇ ಈ ಹಾಡುಗಾರರ ಆರ್ಥಿಕ ವಿಸ್ತರಣೆಗೆ ಇಲ್ಲವೆ ಆರ್ಥಿಕ ಕುಂಠಿತಕ್ಕೆ ಧ್ವನಿ ಮುದ್ರಣ ಮಾರುಕಟ್ಟೆಯು ಹೇಗೆ ಹಾಗೂ ಎಷ್ಟರಮಟ್ಟಿಗೆ ಪ್ರಭಾವಿಸಿದೆ ಎಂಬುದನ್ನು ಕೂಡ ಚರ್ಚೆಗೆ ಒಳಪಡಿಸಿದೆ.

ತಮ್ಮನ್ನು ಯಾವ ಧ್ವನಿಮುದ್ರಣ ಮಾರುಕಟ್ಟೆಯವರೂ ಸಂಪರ್ಕಿಸಿಲ್ಲ ಎಂದು ಸಂದರ್ಶಿಸಲ್ಪಟ್ಟ ಬಹುತೆಕ ಹಾಡುಗಾರರು ಹೇಳಿದ್ದಾರೆ. ಹರದೇಶಿ-ನಾಗೇಶಿ ಹಾಡುಗಾರಿಕೆಯಲ್ಲಿ ಯಾರು ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿರುತ್ತಾರೋ, ಅಂತಹ ಹಾಡುಗಾರರನ್ನು ಧ್ವನಿ ಮುದ್ರಣ ಮಾರಾಟ ಸಂಸ್ಥೆಯವರು ಸಂಪರ್ಕಿಸಿದ್ದಾರೆ. ಅವರ ನಿರೂಪಣೆಯಿಟ್ಟುಕೊಂಡೇ ಧ್ವನಿ ಮುದ್ರಣ ಮಾರುಕಟ್ಟೆಯನ್ನು ಹಾಗೂ ಹಾಡುಗಾರರ ಆರ್ಥಿಕತೆಯನ್ನು ಚರ್ಚಿಸಬೇಕಿದೆ.

“ಸಾಂಗ್ಲಿಯವ್ರು, ಅಕ್ಕಲಕೋಟಿಯವ್ರು, ಬೆಂಗಳೂರಿನವ್ರು ನನ್ನ ಹಾಡಕಿನ ಕ್ಯಾಸೆಟ್ ಮಾಡ್ತಿನಂತ ಬಂದಿದ್ರು. ಸಾಂಗ್ಲಿಯವ್ರು ನಲ್ವತ್ತು ಸಾವಿರ ಕೊಡ್ತೇನಂದ್ರ, ಅಕ್ಕಲಕೋಟೆಯವ್ರು ಐವತ್ತು ಸಾವಿರ ಕೊಡ್ತೇನೆಂದ್ರು. ನನಗ ಯಾಕೋ ಹಾಡಕಿನs ಕಾಸೆಟ್ ಮಾಡೂದು ಬ್ಯಾಡಾ ಅನಸ್ತು. ಕ್ಯಸೆಟ್ ಮಾಡಿದ್ರ ಡಿಮಾಂಡ ಉಳಿಯಲ್ಲ. ಆಕ್ಯಾs…! ಕಂಬಾಗಿ ಹನುಮವ್ವ ಕ್ಯಾಸೆಟ್ಟ್ಯಿನ್ಯಾಗ ಹಾಡಿದ್ದ ಹಾಡ್ತಾಳ ತಗೊ ಅಂತಾರು, ಆಮ್ಯಾಲಿ ನಮ್ಮನ್ಯಾರು ಹಾಡಕಿಗೆ ಕರಿತಾರು? ಚಾಜಾ ಬರೂದು s ಕಮ್ಮಿಯಾಗಿ ಬಿಡತಾವ” – ಕಂಬಾಗಿ ಹನುಮವ್ವ

ಅಕ್ಕಲಕೊಟಿಯವ್ರು ನನ್ನ ಹಾಡ್ಕಿ ಕ್ಯಾಸೆಟ್ ಮಾಡ್ತೇನಂತ ಬಂದಿದ್ರು. ಒಟ್ಟು ಇಪ್ಪತ್ತು ಸಾವಿರಾ ಕೊಡ್ತೇವಂದ್ರು; ಮತ್ತೊಬ್ರು ನಲ್ವತ್ತು ಸಾವಿರ ಕೊಡ್ತೇನಂದ್ರು, ಹಾಡಕ್ಯಾಗ ಬದುಕಿದ್ರ ಅದು ದುಡಿಮಿ ಅನಸ್ಕೋಳ್ತದ. ಅದs ಹಾಡ್ಕಿನ್ನ ಕ್ಯಾಸೆಟ್ ಮಾಡಿದ್ರ ಅದು ಮಾರಾಟಾ ಅನಸ್ಕೋತದ. ಕಲಿ(ಕಲೆ) ಯಾಕ ಮಾರೂದು? ಸರಸೋತಿ ನಮ್ಮನ್ನ ಸಾಕಿ ಸಲವ್ಯಾಳ. ಅಕಿನ್ನ ಮಾರಾಟಾ ಮಾಡೂದಂದ್ರ ತಾಯಿನ್ನ ಮಾರಾಟಾ ಮಾಡಿದ್ಹಂಗ. ಹೀಗಾಂಗಿ ನಾನು ಒಪ್ಪಲಿಲ್ಲ. – ಗಣಿಯಾರದ ರೇಣುಕಾ ಮಾದರ

“ಕ್ಯಾಸೆಟ್ಟಿನವ್ರು ನಲ್ವತ್ತು ಸಾವಿರ ಕೊಡ್ತೇನು, ಇಪ್ಪತ್ತು ಸಾವಿರ ಕೊಡ್ತೇನು, ಐವತ್ತು ಸಾವಿರ ಕೊಡ್ತೇನು ಅಂತಾರ. ಎಲ್ಲಾ ಸುಳ್ಳು. ಕೊಳ್ಳೂರು ಯಲ್ಲವ್ವ ನಾಗೇಶಿ ಹಾಡಾ ಹಾಡ್ತಾಳು. ಆಕಿಗಿ ಅಕ್ಕಲಕ್ವಾಟಿಯವ್ರು. ನಿನ್ನ ಹಾಡ್ಕಿಗಿ ನಲ್ವತ್ತು ಸಾವಿರ ಕೊಟ್ಟು ಕ್ಯಾಸೆಟ್ ಮಾಡ್ಕೊತೇವಿ ಅಂತಂದ್ರು. ಮೂರು ದಿನ ಹಾಡ್ಕಿಗಿ ಐದ ಸಾವಿರ ರೂಪಾಯಿ, ತಗೊಂಡ ಯಲ್ಲವ್ವ, ನಲ್ವತ್ತ ಸಾವಿರ ಕೇಳಿದಕೂಡ್ಲೆ ಹೌಹಾರಿದ್ಲು, ಕಾಸೆಟ್ ಮಾಡಿದ್ರ ಹಳ್ಳ್ಯಾವ್ರ ಅಷ್ಟs ಕೇಳಲ್ಲ, ಪಟ್ಟಣದಾಗೂ ಕೇಳ್ತಾರು, ಬ್ಯಾರೆ ಬ್ಯಾರೆ ದೇಶದಾಗೂ ಕೇಳ್ತಾರು ಅಂತ ಆಕಿಗಿ ಹವಾ ಹಾಕಿದ್ರು. ಇದು ಹುಚ್ಚಪ್ಯಾಲಿ ಉಬ್ಬಿಕೇಸಿಂದ ಒಪ್ಪಕೊಂಡ್ತು. ಹಾಡ್ಕಿ ಕ್ಯಾಸೆಟ್ ಮಾಡ್ಕೊಂಡಿಂದ ಯಲ್ಲವ್ವಗ ಹತ್ತುಸಾವಿರ ರೂಪಾಯಿ ಕೊಟ್ಟ ಕಳ್ಸಿದ್ರು. ಉಳಿದ ರೊಕ್ಕಾ ಆಮ್ಯಾಲಿ ಕೊಡ್ತೇನು ಅಂತಂದ್ರು. ಕ್ವಾಣ ಯಲ್ಲವ್ವ ಅಕ್ಕಲಕೋಟಿಗೆ ಉಳಿದ ರೊಕ್ಕದ ಸಲವಂದ ಬಸ್ಚಾರ್ಜ್ ಹಾಕ್ಕೊಂಡು ಹೋಗೇ ಹೋಗ್ತು. ಪಸ್ಟ ಪಸ್ಟಿಗೆ ಈಗ ರೊಕ್ಕ ಇಲ್ಲ, ಆಮ್ಯಾಲೆ ಕೊಡ್ತೇವು ಅಂತ ಹೇಳಕೋಂತ ಬಂದ್ರು. ಆಮ್ಯಾಲತ್ತ ನಿನ್ನ ಕ್ಯಾಸೆಟ್ ಹಂಗ್ ಬಿದ್ದಾವು, ಯಾರೂ ತಗೊಂಡಿಲ್ಲ. ನಮಗ ಲಾಸ್ ಆಗೇದಿ. ಉಳಿದ ರೊಕ್ಕಾ ಕೊಡಂದ್ರ ಎಲ್ಲಿದು ಕೊಡಾನು?’ ಅಂತಂದ್ರು.ಕಾಸೆಟ್ ಆಗಿಂದ ಆಕಿಗಿ ಚಾಜಾ ಬರೂದು ಕಮ್ಮಿ ಆದ್ವು. ಆಮ್ಯಾಲತ್ತ ವಿಜಾಪುರದಾಗಿನ ಕವಿಗೊಳ ಹತ್ರ ಗುಲಬರ್ಗಾದಾಗಿನ ಕವಿಗೋಳ ಹತ್ರ ಹೋಗಿ ರೊಕ್ಕಾ ಕೊಟ್ಟು ಹೊಸ ಪದಗಳನ್ನು ಕಲ್ತಳು. ನನ್ನ ಹಾಡಾ ಎಲ್ಲಾರಿಗಿಂತ ಬ್ಯಾರೆ ಅದಾವು ಅಂತ ತನ್ನ ಪ್ರಚಾರ ತಾನಾ ಮಾಡಕೊಂತ ತಿರುಗಾಡಿದ್ಲು. ಈ ಅನೂಲಿ (ತೊಂದರೆ) ಯಾಕ ಬೇಕಿತ್ತು? – ಶಂಕರಪ್ಪ ಮಾದರ, ಮದನಹಳ್ಳಿ

“ನನ್ನ ಹಾಡ್ಕಿ ನಾಕೈದು ಕ್ಯಾಸೆಟ್ಟಾಗಿ ಬಂದಾವು. ಕೊಲ್ಲಾಪುರ್ದ ಪದ್ಮಿನಿ ಕ್ಯಾಸೆಟ್ ಸೆಂಟರ್ನ್ಯಾಗ ಹಾಡ್ಕಿ ಮಾಡೇನಿ. ಹಂಗs ಅಕ್ಕಲಕೋಟಿ ಕಾಸೆಟ್ ಸೆಂಟರ್ನ್ಯಾಗೂ ಹಾಡೇನಿ. ನನ್ನ, ಸೇಶದಾಗ ಪರಿಚಾರಾ ಮಾಡ್ತೇನಂದ್ರು. ಅದಕ್ಕs ಕ್ಯಾಸೆಟ್ಟಿಗಿ ಹಾಡೇನಿ. ನಾಲ್ಕು ಕ್ಯಾಸೆಟ್ಟಿಗೆ ಹತ್ತು ಸಾವಿರ ಕೊಟ್ಟಾರು. ನಮ್ಮ ಹಾಡ್ಕಿಯವ್ರು ತಮ್ಮ ಡಿಮ್ಯಾಂಡ್ ಐತಿ ಅಂತ ಹೇಳಕೊಳ್ಳಾಕ ಒಂದ ಕ್ಯಾಸೆಟ್ಗೆ ನಲ್ವತ್ತು ಸಾವಿರ ಕೊಡ್ತೇನಂದ್ರು, ಐವತ್ತು ಸಾವಿರ ಕೊಡ್ತೇನಂದ್ರು ಅಂತ ಹೇಳ್ತಾರ. ಎಲ್ಲಾ ಸುಳ್ಳು, ಎಷ್ಟ ಪೇಮಸ್ ಹಾಡುಗಾರರಾದ್ರು ಹತ್ತ ಸಾವಿರಗಿಂತ ಜಾಸ್ತಿ ಕೊಡಲ್ಲ. ನಾನs ಕವಿ ಅದೇನಿ. ಇದು ನನ್ನ ಕರಿಯೋ ಜನಕ್ಕೂ ಗೊತ್ತೈತಿ. ಕ್ಯಾಸೆಟ್ಟನ್ಯಾಗ ಹಾಡಿದ್ದ ಬಿಟ್ಟು ಬ್ಯಾರೆ ಹಾಡಾ ಬರಿತೇನಿ, ಹಾಡ್ಕಿ ಮಾಡತೇನಿ. ಹಾಡ ಕಲಿಬೇಕಂದ್ರವ್ರಿಗಿ ಕಲಿಸ್ತೀನಿ. ಹೀಗಾಂಗಿ ನನಗ ಮೊದಲ ಹ್ಯಾಂಗ ಚಾಜಾ ಬರ್ತಿದ್ವೊ ಹಂಗs ಬರತಾವು. – ಖೇಡಗಿ ಭಾಗಣ್ಣ

ಉಲ್ಲೇಖಿತ ಮೇಲಿನ ವಕ್ತೃಗಳ ನಿರೂಪಣೆಯನ್ನಾಧರಿಸಿ ಹಾಡುಗಾರರು ಹಾಗೂ ಧ್ವನಿ ಮುದ್ರಣ ಮಾರುಕಟ್ಟೆಯನ್ನು ಮೂರು ನೆಲೆಗಳಲ್ಲಿ ವಿಂಗಡಿಸಿಕೊಳ್ಳಲಾಗಿದೆ. ೧. ಕಲೆ ಮತ್ತು ಮಾರಾಟ ೨. ಹಾಡಿಕೆ ವೃತ್ತಿ ಮತ್ತು ಧ್ವನಿ ಮುದ್ರಣ ಮಾರುಕಟ್ಟೆ ೩. ಪ್ರಸಿದ್ಧಿ ಮತ್ತು ಧ್ವನಿ ಮುದ್ರಣ ಪ್ರಪಂಚ.

ಕಲೆ ಮತ್ತು ಮಾರಾಟ

ಗಣಿಯಾರದ ರೇಣುಕೆಯ ಹಾಗೆ ಅನೇಕ ಮಹಿಳಾ ಹಾಡುಗಾರು ಹರದೇಶಿ-ನಾಗೇಶಿ ಹಾಡುಗಳನ್ನು ಧ್ವನಿಮುದ್ರಣ ಮಾಡಿ ಮಾರಾಟ ಮಾಡುವುದೆಂದರೆ ಸರಸ್ವತಿಯನ್ನೇ ಮಾರಾಟ ಮಾಡಿದಂತೆ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದರು. ‘ಹಾಡಿಕೆ ಅಂದ್ರ ಸರಸೋತಿ. ಆ ದೇವಿನ್ನ ನಾಲಗ್ಯಾಗ ಇಟ್ಕೊಬೇಕು. ಕ್ಯಾಸೆಟ್ಟನಾಗ ಹಾಕಬಾರ್ದು. ದೇವಿ ಸರಸೋತಿನ ಮನಷ್ಯಾರು ಮಾರಾಟ ಮಾಡಾಕಾಗ್ತೈತೇನು? ಮಾರಾಟ ಮಾಡಿ ಯಾ ಪಾಪಕ ಹೋಗ್ಬೇಕು?” ಎಂದು ಸಾವಳಿಗಿಯ ಲಕ್ಕವ್ವ ಹೇಳಿದಳು. ಬಹುತೇಕ ಮಹಿಳಾ ಹಾಡುಗಾರರು ತಾವು ಹಾಡುವ ಪದಗಳನ್ನು ದೈವವೆಂದೇ ಭಾವಿಸುವರು. ಕೆಲವರು ಸರಸ್ವತಿಯನ್ನು ತಾಯಿಯೆಂದೇ ಪರಿಗಣಸಿಸುವರು. ತಾಯಿಯ ಹಾಗೆ, ದೇವಿಯ ಹಾಗೆ ಹರದೇಶಿ-ನಾಗೇಶಿ ಪದಗಳು ತಮ್ಮನ್ನು ಸಲವುತ್ತವೆ ಎಂದೇ ಹೇಳಿದರು. ಹಾಡಿಕೆಯ ಕುರಿತ ಅವರಲ್ಲಿನ ಈ ದೈವ ಭಕ್ತಿ ಧ್ವನಿ ಮುದ್ರಣ ಮಾರಾಟ ಸಂಸ್ಥೆಗಳಿಂದ ದೂರ ಉಳಿಯುವಂತೆ ಮಾಡಿವೆ. ಹರದೇಶಿ-ನಾಗೇಶಿ ಪುರುಷ ಹಾಡುಗಾರರು, ಹಾಡಿಕೆಯನ್ನು ಗೌರವಿಸುತ್ತಾರೆ, ನಿಜ. ಆದರೆ ತಾವು ಹಾಡುವ ಹಾಡುಗಳನ್ನು ಮಹಿಳಾ ಹಾಡುಗಾರರಂತೆ ತಾಯಿಯೊಂದಿಗೆ ಸಮೀಕರಿಸಿಕೊಂಡಿಲ್ಲ. ನಮ್ಮ ಸಂಸ್ಕೃತಿಯಲ್ಲಿ ವಿದ್ಯೆಯನ್ನು ಸರಸ್ವತಿಯೆಂದೇ ಗೌರವಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿಯೇ ಹರದೇಶಿ-ನಾಗೇಶಿ ಪುರುಷ ಹಾಡುಗಾರರು ಸರಸ್ವತಿ ಎಂದು ಪೂಜಿಸುತ್ತಾರೆ; ಗೌರವಿಸುತ್ತಾರೆ. ಸಂದರ್ಶಿಸಿದ ಕೆಲ ಪುರುಷ ಹಾಡುಗಾರರು ಮಹಿಳಾ ಹಾಡುಗಾರರಿಗಿಂತ ಭಿನ್ನವಾದ ಅಭಿಪ್ರಾಯವನ್ನು ಹೇಳಿದರು. “ನೀವು, ಕಲ್ತಂತೋರು ಪುಸ್ತಕಾ ಬರುದು ಮಾರಾಟಾ ಮಾಡ್ಕೋತಿರಿಲ್ಲೊ? ಹಂಗs ನಾವು ಕ್ಯಾಸೆಟ್ಟಿಗೆ ಹಾಡಿದ್ರ ತಪ್ಪೇನೈತಿ? ಕಲ್ತ ವಿದ್ಯಾ ಬಗ್ಗಿ ಗೌರವ ಇದ್ದ ಇರ್ತದ. ಆದ್ರ ಅದಕ್ಕೂ ಮಾರಾಟಕ್ಕೂ ಸಂಬಂಧವೇನು?” ಎಂದು ಅಂದೇವಾಡದ ಗೈಬಿಸಾಬ್ ಪ್ರಶ್ನಿಸಿದನು. ಹಾಡುಗಳ ಧ್ವನಿ ಮುದ್ರೀಕರಣದ ಕುರಿತು ಬಹುತೇಕ ಪುರುಷ ಹಾಡುಗಾರರು ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಹರದೇಶಿ-ನಾಗೇಶಿ ಮಹಿಳಾ ಹಾಡುಗಾರರು ಕಲಿತ ವಿದ್ಯೆ ಜೊತೆ ದೈವಿ ಇಲ್ಲವೆ ಭಾವನಾತ್ಮಕ ಸಂಬಂಧವನ್ನು ಹೊಂದಿದ್ದರೆ; ಪುರುಷ ಹಾಡುಗಾರರು ವ್ಯವಹಾರಿಕ ಸಂಬಂಧವನ್ನು ಹೊಂದಿದ್ದಾರೆ.

. ಹಾಡಿಕೆ ವೃತ್ತಿ ಮತ್ತು ಧ್ವನಿ ಮುದ್ರಣ ಮಾರುಕಟ್ಟೆ

ಹರದೇಶಿ-ನಾಗೇಶಿಯ ಬಹುತೇಕ ಮಹಿಳಾ ಹಾಡುಗಾರರು ತಮ್ಮ ಹಾಡುಗಳ ಕಾಸೆಟ್ಟೀಕರಣವು ವೃತ್ತಿ ಬೇಡಿಕೆಯನ್ನು ಕುಗ್ಗಿಸುತ್ತದೆ ಎಂದೇ ಅಭಿಪ್ರಾಯ ಪಟ್ಟಿರುವರು. ಒಂದು ಬಾರಿ ಕೊಡುವ ನಲ್ವತ್ತು ಸಾವಿರ ಇಲ್ಲವೆ ಐವತ್ತು ಸಾವಿರ ರೂಪಾಯಿಗಳು ಸಾಯುವವರೆಗಿನ ಜೀವನ ನಿರ್ವಹಣೆಗೆ ಸಹಾಯವಾಗುವುದಿಲ್ಲ ಎನ್ನುವುದು ಖಚಿತ ನಿಲುವು. ಒಂದು ಬಾರಿ ಅವರ ಹಾಡುಗಳು ಧ್ವನಿ ಮುದ್ರಣಗೊಂಡು ಕ್ಯಾಸೆಟ್ ರೂಪದಲ್ಲಿ ಬಂದರೆ, ಚಾಜ ಬರುವ ಪ್ರಮಾಣ ಕಡಿಮೆಯಾಗುತ್ತದೆ. ಒಂದು ವೇಳೆ ಹಾಡಿಕೆಗೆ ಆಹ್ವಾನ ಬಂದರೂ ಆಕೆ ಹೊಸ ಹಾಡುಗಳನ್ನು ಹೇಳಿದರೂ ಕ್ಯಾಸಿಟ್ಟಿನ್ಯಾಗ ಹಾಡಿದ್ದನ್ನ ಹಾಡ್ತಾಳ ಎನ್ನುತ್ತಾರಂತೆ. ಜಾತ್ರೆಗಳು ಹಾಗೂ ಇನ್ನಿತರ ಕಾರ್ಯಕ್ರಮಗಳಲ್ಲಿ ಅವಳು ಹಾಡುವ ಹಾಡುಗಳು ಕ್ಯಾಸೆಟ್‌ನಲ್ಲಿ ಹೇಳದೇ ಇದ್ದ ಹಾಡುಗಳಾಗಿರಬಹುದು. ಆದರೂ ಒಂದು ಬಾರಿ ಅವಳ ಹಾಡುಗಳು ಕ್ಯಾಸೆಟ್ಟೀಕರಣಗೊಂಡರೆ, ಅವಳು ಹೊಸ ಹಾಡುಗಳನ್ನು ಹೇಳಿದರೂ, ಕ್ಯಾಸೆಟ್ಟಿನಲ್ಲಿದ್ದವುಗಳೇ ಎನ್ನುವ ಸರಳ ತೀರ್ಮಾನಕ್ಕೆ ಜನತೆ ಬರುತ್ತಾರೆ. ಹೀಗೆ ಕಾಸೆಟ್ಟೀಕರಣವು ವೃತ್ತಿ ಬೇಡಿಕೆಯನ್ನು ಕುಗ್ಗಿಸುವುದರೊಂದಿಗೆ ಪ್ರೇಕ್ಷಕರಲ್ಲಿನ ಆಕಸ್ತಿಯನ್ನು ಕುಗ್ಗಿಸುತ್ತದೆ ಎನ್ನುವುದು ಮಹಿಳಾ ಹಾಡುಗಾರರ ಅನುಭವದ ಮಾತು.

ಧ್ವನಿ ಮುದ್ರಕರು ನಾಲ್ಕೈದು ಕ್ಯಾಸೆಟ್ಟುಗಳಿಗೆ ನಲ್ವತ್ತು ಸಾವಿರ ಇಲ್ಲವೆ ಐವತ್ತು ಸಾವಿರ ರೂಪಾಯಿಗಳನ್ನು ಕೊಟ್ಟರೂ, ಅದು ವೃತ್ತಿಯ ವಾರ್ಷಿಕ ಆದಾಯಕ್ಕೆ ಸರಿ ಸಮವಾಗುವುದಿಲ್ಲ. ಅವರೇ ಹೇಳುವಂತೆ “ಹಾಡ್ಕಿ ಸೀಜನ್ದಾಗ (ಫೆಬ್ರವರಿಯಿಂದ ಮೇ ವರೆಗಿನ ನಾಲ್ಕು ತಿಂಗಳು ಏನಿಲ್ಲಂದ್ರೂ ಅರವತ್ತು ಸಾವಿರದಿಂದ ಲಕ್ಷದ ತನಾ ಗಳಸ್ತೀವಿ. ಒಮ್ಮೊಮ್ಮಿ ಒಂದೂವರೆ ಲಕ್ಷದತನಾನೂ ಗಳಿಸ್ತೀವಿ, ಕ್ಯಾಸೆಟ್ಟಿಗಿ ಬೆನ್ನುಹತ್ತಿದರೆ, ಸೀಜನ್‌ನ್ಯಾಗ ಗಳಿಸು ಗಳಿಕಿಗಿ ನಾವs ಕಲ್ಲ ಒಕ್ಕೊಂಡಂಗ ಆಗತ್ತ” ಎನ್ನುವ ವ್ಯವಹಾರಿಕ ಜ್ಞಾನವು ಅವರನ್ನು ಧ್ವನಿ ಮುದ್ರಣ ಮಾರುಕಟ್ಟೆಯಿಂದ ದೂರವಿಟ್ಟಿದೆ. ಸರಕಾರಿ ಹಾಡಿಕಿ ಇಲ್ಲವೆ ಖಾಸಗಿ ಹಾಡಿಕೆಯ ಸಂದರ್ಭದಲ್ಲಿ ಪಡೆದುಕೊಳ್ಳುವ ಒಟ್ಟು ಮೊತ್ತವನ್ನು ಬಹಳ ಉಮೇದಿಯಿಂದ ಹೇಳುತ್ತಿದ್ದ ಮಹಿಳಾ ಹಾಡುಗಾರರು ಅದರಲ್ಲಿ ತಮ್ಮ ಖರ್ಚು ವೆಚ್ಚವನ್ನು ಕಳೆದು ಆಗುವ ಲಾಭಾಂಶದ ಕುರಿತು ಮಾತನಾಡಲಿಲ್ಲ. ಮೇಳವೊಂದಕ್ಕೆ, ಇಲ್ಲವೆ ಎರಡೂ ಮೇಳಗಳಿಗೆ ಬರುವ ಸಂಬಳವನ್ನು ಸಂಭ್ರಮದಿಂದ ಹೇಳುತ್ತಿದ್ದರು. ಅದೇ ಮಹಿಳಾ ಹಾಡುಗಾರರು ಧ್ವನಿ ಮುದ್ರಣ ಮಾರುಕಟ್ಟೆಯ ಕುರಿತು ಮಾತನಾಡುವಾಗ ಲಾಭ-ನಷ್ಟನ್ನು ಗಮನದಲ್ಲಿಟ್ಟುಕೊಂಡಿದ್ದರು. ಜಾತ್ರೆ, ಮಂಗಲ ಕಾರ್ಯ ಮೊದಲಾದವು ಸಾಂಸ್ಕೃತಿಕ ಹಿನ್ನೆಲೆಗಳನ್ನು ಹೊಂದಿವೆ; ಅವುಗಳು ದೈವ ಹಾಗೂ ಅದಕ್ಕೆ ಸಂಬಂಧಿಸಿದ ಆಚರಣೆಗಳೊಂದಿಗೆ ಸಮೀಕರಣಗೊಂಡಿವೆ. ಇಂತಹ ವೇದಿಕೆಗಳಿಗೆ ಆಹ್ವಾನಿಸುವ ಸಂಯೋಜಕರು ಅವರ ವೃತ್ತಿಯನ್ನು ದೈವದೊಂದಿಗೆ ಸಮೀಕರಿಸಿರುತ್ತಾರೆ. ಹೀಗೆ ಜಾತ್ರೆಯಂತಹ ದೈವಿ ಸಂಬಂಧಿ ಆಚರಣೆಗಳು, ಮಂಗಲಕಾರ್ಯಗಳು ಹಾಡುಗಾರಿಕೆಯನ್ನು ವ್ಯವಹಾರದ ನೆಲೆಗೆ ಕೊಂಡೊಯ್ದು ಚರ್ಚೆಗೆ ಒಳಪಡಿಸಿದಂತೆ ನೋಡಿಕೊಳ್ಳುತ್ತದೆ. ಜಾತ್ರೆ, ಗಣ್ಯರ ತಿಥಿ ಮೊದಲಾದ ಸಂದರ್ಭದಲ್ಲಿ ಸಂಬಳ ಪಡೆದು ಹಾಡುವ ಮಹಿಳಾ ಹಾಡುಗಾರರಿಗೆ ವೃತ್ತೆಯೆನ್ನುವುದು ತೆಳುವಾಗಿರುತ್ತದೆ; ಸಾಂಸ್ಕೃತಿಕ ಸಂಗತಿಗಳು ಢಾಳಾಗಿರುತ್ತವೆ. ಸರ್ಕಾರಿ ಹಾಡಿಕೆಗಳು ಸಮಾಜ ಕಲ್ಯಾಣ ಆಶಯದೊಂದಿಗೆ ಸಮೀಕರಣಗೊಂಡಿವೆ. ‘ಸಮಾಜ ಕಲ್ಯಾಣ ಎನ್ನುವ ಪರಿಭಾಷೆಯೇ, ಸರ್ಕಾರಿ ಹಾಡಿಕೆಯನ್ನು ವೃತ್ತಿಯಾಗಿ ಪರಿಭಾವಿಸಿದಂತೆ ನೋಡಿಕೊಳ್ಳುತ್ತದೆ; ‘ಸಮಾಜ ಸೇವೆ’ ಎನ್ನುವ ಅರ್ಥದಲ್ಲಿಯೇ ವೃತ್ತಿಯನ್ನು ಪರಿಭಾವಿಸುವಂತೆ ಮಾಡುತ್ತದೆ. ಹೀಗಾಗಿಯೇ ಏನೊ ಮಹಿಳಾ ಹಾಡುಗಾರರಿಗೆ ಹಾಡಿಕೆಯನ್ನು ಸಂಪೂರ್ಣವಾಗಿ ವೃತ್ತಿಯಾಗಿ ಪರಿಭಾವಿಸಲು ಸಾಧ್ಯವಾಗಿಲ್ಲ. ಧ್ವನಿ ಮುದ್ರಣ ಮಾರಾಟವು ನೇರವಾಗಿ ಮಾರುಕಟ್ಟೆಯೊಂದಿಗೆ ಸಂಬಂಧ ಹೊಂದಿದ್ದರಿಂದ ಮಹಿಳಾ ಹಾಡುಗಾರರು ಸ್ವಲ್ಪಮಟ್ಟಿಗೆ ಆಲೋಚಿಸಲು ಸಾಧ್ಯವಾಗಿರಬಹುದು.

ಮಹಿಳಾ ಹಾಡುಗಾರರು ತಮ್ಮ ಹಾಡುಗಳು ಧ್ವನಿ ಮುದ್ರಣಗೊಳ್ಳುವುದನ್ನು ನಿರಾಕರಿಸಲು ಇನ್ನೂ ಒಂದು ಕಾರಣವಿದೆ. ಅದೆಂದರೆ ಪದಗಳನ್ನು ಖರೀದಿಸುವ ಸಂಗತಿ. ಕುಟುಂಬದ ಸದಸ್ಯರು ಇಲ್ಲವೆ ಗೆಳೆಯನು ಪದ ಖರೀದಿ ಮಾಡಿ ಈ ಹಾಡುಗಾರಳಿಗೆ ತಂದು ಕೊಡುತ್ತಾರೆ. ತಮಗೆ ವ್ಯವಹಾರ ಜ್ಞಾನದ ಕೊರತೆಯಿದೆ ಎಂದು ಹೇಳಿಕೊಳ್ಳುವ ಅವರು ಲೈಂಗಿಕ ದುರ್ಬಳಕೆಯ ಅಪಾಯಗಳ ಕುರಿತು ಆಲೋಚಿಸುತ್ತಾರೆ. ಹೀಗಾಗಿ ಕವಿಗಳೊಂದಿಗೆ ವ್ಯವಹರಿಸಲು ಮಹಿಳಾ ಹಾಡುಗಾರರು ಹಿಂಜರಿಯುವರು. ಬೇರೆ ಬೇರೆಯವರ ಸಹಾಯದಿಂದ ಕಷ್ಟಪಟ್ಟು ಸಂಗ್ರಹಿಸಿದ ಹಾಡುಗಳನ್ನು ಏಕಾಏಕಿ ಕ್ಯಾಸೆಟ್ಟಿನವರಿಗೆ ಮಾರಲು ಹಿಂಜರಿಯುತ್ತಾರೆ. ಹೊಸ ಹಾಡುಗಳನ್ನು ಸಂಗ್ರಹಿಸಲು ಹಾಗೂ ಸಂಗ್ರಹಿಸಿದ ಹಾಡುಗಳನ್ನು ಕಲಿಯಲು ಮಹಿಳಾ ಹಾಡುಗಾರರು ಹೆದರುತ್ತಾರೆ. ಎರಡು ಹಗಲು ಮೂರು ರಾತ್ರಿಗೆ ಹಾಡುವಷ್ಟು ಹಾಡುಗಳನ್ನು ಹೊಸದಾಗಿ ಕಲಿಯಲು ಹದರಿದ ಹಾಡಿಕೆ ಮಹಿಳೆಯರು ಧ್ವನಿ ಮುದ್ರಣ ಮಾರುಕಟ್ಟೆಯಿಂದ ದೂರ ಉಳಿಯುತ್ತಾರೆ.

ಸಾಮಾನ್ಯವಾಗಿ ಜಾತ್ರಿ ಹಾಡಿಕೆಯಲ್ಲಿ ಎಷ್ಟು ಹಣ ಕೊಡುವುದೆಂದು ನಿಗದಿಯಾಗಿರುತ್ತದೆಯೋ ಅಷ್ಟೇ ಮೊತ್ತದ ಹಣವನ್ನು ಹಾಡುಗಾರರು ಪಡೆಯುತ್ತಾರೆ. ಮಾತನಾಡಿದ ಮೊತ್ತದಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ. ಧ್ವನಿ ಮುದ್ರಣ ಮಾರಾಟ ಸಂಸ್ಥೆಯೊಂದಿಗೆ ಸಂಬಂಧವಿಟ್ಟುಕೊಂಡ ಮಹಿಳಾ ಹಾಡುಗಾರರ ಸಂಖ್ಯೆಯೇ ಕಡಿಮೆ. ಹಾಡಿಕೆ ಮಹಿಳೆಯರಿಗೆ ಧ್ವನಿ ಮುದ್ರಣ ಮಾರಾಟ ಸಂಸ್ಥೆಯವರಿಂದ ಭಿನ್ನ ಅನುಭವವಾಗಿದೆ. ಧ್ವನಿ ಮುದ್ರಣ ಮಾಡಿಕೊಳ್ಳುವವರು ಸಂಭಾವನೆ ಕುರಿತಂತೆ ಹಾಡುಗಾರರಿಗೆ ಕೊಡುತ್ತೇನೆಂದು ಹೇಳಿದ ಮೊತ್ತಕ್ಕಿಂತಲೂ ಬಹಳ ಕಡಿಮೆ ಹಣ ನೀಡಿದ್ದಾರೆ. ಧ್ವನಿ ಮುದ್ರಣ ಮಾಡಿ ಕೊಳ್ಳುವವರು ಕೊಟ್ಟ ಮಾತಿನಂತೆ ಹಣವನ್ನು ಕೊಟ್ಟಿಲ್ಲ. ಅಲ್ಲಿಯೂ ಕೂಡ ಮಹಿಳಾ ಹಾಡುಗಾರರ ನಿರೀಕ್ಷಿತ ಆದಾಯಕ್ಕೆ ಪೆಟ್ಟು ಬಿದ್ದಿದೆ. ಅವಳ ಹಾಡುಗಳು ಕಾಸೆಟ್ಟೀಕರಣಗೊಂಡ ಕಾರಣಕ್ಕಾಗಿ ಚಾಜವೂ ತಪ್ಪಿದೆ. ತಮ್ಮ ಚಾಜ ಪಡೆದುಕೊಳ್ಳುವುದಕ್ಕಾಗಿ ಹೊಸ ಹಾಡುಗಳನ್ನು ಕವಿಗಳು ಕೇಳಿದಷ್ಟು ಹಣ ಕೊಟ್ಟು ಖರೀದಿಸಬೇಕು. ಎರಡು ಹಗಲು ಮೂರು ರಾತ್ರಿಗೆ; ಇಲ್ಲವೆ ಎರಡು ರಾತ್ರಿ ಮೂರು ಹಗಲಿಗೆ ಬೇಕಾದಷ್ಟು ಹಾಡುಗಳನ್ನು ಶಾಲೆಗೆ ಹೊಸದಾಗಿ ಪ್ರವೇಶಿಸಿದ ವಿದ್ಯಾರ್ಥಿನಿಯರಂತೆ ಕಲಿಯಬೇಕು. ಹಾಡಿಕೆಯ ಆರಂಭದಲ್ಲಿಕಲಿತಂತೆ ಒಂದು ಹಗಲು, ಒಂದು ರಾತ್ರಿಯ ಅವಧಿಯನ್ನು ಅನುಲಕ್ಷಿಸಿ ಹಾಡು ಕಲಿಯುವಂತಿಲ್ಲ. ವೃತ್ತಿ ಕ್ಷೇತ್ರದಲ್ಲಿ ಹಲವು ವರ್ಷಗಳ ಅನುಭವವಿರುವವರು ಎರಡು ರಾತ್ರಿ ಮೂರು ಹಗಲು; ಇಲ್ಲವೆ ಮೂರು ರಾತ್ರಿ ಎರಡು ಹಗಲಿನ ಅವಧಿಯು ಹಾಡಿಕೆಯನ್ನು ನಿರ್ವಹಿಸುವಷ್ಟು ಹಾಡುಗಳು ಬರಲೇಬೇಕು. ಒಂದು ರಾತ್ರಿಯ ಹಾಡಿಗೆ ಐದರಿಂದ ಎಂಟು ಸಾವಿದವರೆಗೆ ಕವಿಗಳು ಕೇಳುತ್ತಾರೆ. ಹೀಗೆ ಎರಡು ಹಗಲು, ಮೂರು ರಾತ್ರಿ ಇಲ್ಲವೆ ಎರಡು ರಾತ್ರಿ, ಮೂರು ಹಗಲಿಗೆ ಬೇಕಾಗುವಷ್ಟು ಹಾಡುಗಳನ್ನು ಖರೀದಿಸಲು ಮೂವತ್ತೈದು ಸಾವಿರಗಳಿಂದ ನಲ್ವತ್ಮೂರು ಸಾವಿರ ರೂಪಾಯಿಗಳ ಅಗತ್ಯ ಬೀಳುತ್ತದೆ. ನಲ್ವತ್ತು ಸಾವಿರ ಕೊಡುತ್ತೇನೆಂದ ಧ್ವನಿ ಮುದ್ರಣ ಮಾರಾಟಗಾರರು ಹತ್ತು ಸಾವಿರ ಕೊಟ್ಟು ಬಿಟ್ಟರೆ ಆಕೆಯ ಗತಿಯೇನು? ಮತ್ತೆ ಪದಗಳ ಖರೀದಿಗೆ ಇಷ್ಟು ದೊಡ್ಡ ಮೊತ್ತ ಹಣ ಹೊಂದಿಸಿಕೊಳ್ಳುವುದು ಕಷ್ಟವಾಗುತ್ತದೆ. ಹೀಗಾಗಿಯೇ ಮಹಿಳಾ ಹಾಡುಗಾರರು ತಮ್ಮ ವಿದ್ಯೆ, ಮಾರಾಟ ಪ್ರಪಂಚ ಪ್ರವೇಶಿಸುವುದನ್ನು ನಿರಾಕರಿಸುತ್ತಾರೆ. ಧ್ವನಿ ಮುದ್ರಣ ಮಾರಾಟ ಸಂಸ್ಥೆಯೊಂದಿಗಿನ ಸಮಸ್ಯೆಯ ಕುರಿತು ಮಹಿಳಾ ಹಾಡುಗಾರರು ಹೇಳಿಕೊಂಡಂತೆ ಪುರುಷ ಹಾಡುಗಾರರು ಹೇಳಿಕೊಳ್ಳಲೇ ಇಲ್ಲ.

. ಪ್ರಸಿದ್ಧಿ ಮತ್ತು ಧ್ವನಿ ಮುದ್ರಣ ಪ್ರಪಂಚ.

ಯಾವ ಹಾಡುಗಾರರು ಸ್ವತಃ ಕವಿಗಳಾಗಿರುತ್ತಾರೋ ಅವರು ಪ್ರಸಿದ್ಧಿಯ ಬಿಸಿಲು ಕುದುರೆ ಏರಿ ಧ್ವನಿ ಮುದ್ರಣ ಮಾರಾಟ ಪ್ರಪಂಚವನ್ನು ಪ್ರವೇಶಿಸುತ್ತಾರೆ. ಪುರುಷ ಹಾಡುಗಾರರಲ್ಲಿ ಪ್ರಸಿದ್ಧಿಯ ಬಿಸಿಲು ಕುದುರೆಯನ್ನು ಸೃಷ್ಟಿಸಿದವರು ಧ್ವನಿ ಮುದ್ರಣ ಮಾರಾಟಗಾರರೇ. ಹೀಗೆ ಕ್ಯಾಸೆಟ್ಟುಗಳಿಗೆ ಹಾಡುವವರು ಕವಿಗಳೂ ಆಗಿದ್ದರಿಂದ, ಪದಗಳ ಖರೀದಿಗೆ ವ್ಯಯಿಸಬೇಕಾದ ಹಣದ ಕುರಿತು ಲೆಕ್ಕಾಚಾರ ಹಾಕಬೇಕಿಲ್ಲ. ಈ ಪುರುಷ ಹಾಡುಗಾರರು, ತಮಗೆ ಸಂದಾಯವಾಗಬೇಕಾದ ಹಣದ ಕುರಿತಂತೆ ಧ್ವನಿ ಮುದ್ರಣ ಮಾರಾಟದವರೊಂದಿಗೆ ಖಚಿತಪಡಿಸಿಕೊಂಡಿರುತ್ತಾರೆ. ಈ ಮಾರಾಟ ಸಂಸ್ಥೆಯವರು ನಲ್ವತ್ತು ಸಾವಿರ ಕೊಡುತ್ತೇನೆ, ಐವತ್ತು ಸಾವಿರ ಕೊಡುತ್ತೇನೆ ಎಂದರೆ ನಂಬುವುದೇ ಇಲ್ಲ. ಒಂದು ವೇಳೆ ಧ್ವನಿ ಮುದ್ರಣ ಮಾರಾಟ ಸಂಸ್ಥೆಯವರು ಅಷ್ಟು ದೊಡ್ಡ ಮೊತ್ತದ ಹಣ ಕೊಡುತ್ತೇನೆಂದು ಹೇಳಿದ್ದರೆ, ಅದನ್ನು ಪಡೆಯುವತನಕ ಇವರು ಬಿಡುವುದೇ ಇಲ್ಲ. ಹರದೇಶಿ-ನಾಗೇಶಿ ಹಾಡುವ ಮಹಿಳಾ ಹಾಡುಗಾರರಲ್ಲಿ ಹಾಡು ರಚಿಸುವುದನ್ನು ವೃತ್ತಿಯಾಗಿಸಿಕೊಂಡೇ ಇಲ್ಲ. ಅಕ್ಷರ ಜ್ಞಾನದ ಕೊರತೆ ಹಾಗೂ ಕೌಟುಂಬಿಕ ಒತ್ತಡಗಳಿಂದಾಗಿ ಓದಲು ಸಾಧ್ಯವಾಗುವುದೇ ಇಲ್ಲ. ಯಾರು ಏನೇ ಹೇಳಿದರೂ, ಹೇಳಿದ್ದನ್ನು ಹೇಳಿದ ಹಾಗೆಯೇ ನಂಬುವ ಇವರನ್ನು ಧ್ವನಿ ಮುದ್ರಣ ಮಾರಾಟ ಸಂಸ್ಥೆಯವರು ಬಹು ಬೇಗನೆ ಮೋಸಗೊಳಿಸುತ್ತಾರೆ. ಧ್ವನಿಮುದ್ರಣ ಮಾರಾಟ ಸಂಸ್ಥೆಯವರು ಮಹಿಳಾ ಹಾಡುಗಾರರಿಗೆ ತಾವು ಕೊಡುವ ಮೊತ್ತಕ್ಕಿಂತ ಹೆಚ್ಚು ಹೇಳುತ್ತಾರೆ. ಹಾಡಿಕೆ ಮಹಿಳೆಯರು ಜೀವನದಲ್ಲಿ ಕೇಳರಿಯದ, ಕಂಡರಿಯದ ನಲ್ವತ್ತು ಸಾವಿರ ಇಲ್ಲವೆ ಐವತ್ತು ಸಾವಿರ ರೂಪಾಯಿಗಳನ್ನು ಸಂಭಾವನೆ ಕೊಡುವುದಾಗಿ ಹೇಳುತ್ತಾರೆ. ಇಷ್ಟು ದೊಡ್ಡ ಮೊತ್ತವನ್ನು ಕೇಳಿಯೇ ಅವರು ಉದ್ವೇಗಕ್ಕೊಳಗಾಗುತ್ತಾರೆ. ತಮ್ಮ ಕೌಟುಂಬಿಕ ಕಷ್ಟಗಳಿಗೆ ಅಷ್ಟು ದೊಡ್ಡ ಮೊತ್ತದ ಹಣ ಸಹಾಯವಾಗುತ್ತದೆಂಬ ಆಸೆ, ನಿರೀಕ್ಷೆಯಿಂದ ಬಂದಿರುತ್ತಾರೆ. ಆದರೆ ಧ್ವನಿಮುದ್ರಣ ಮಾರಾಟ ಸಂಸ್ಥೆಯವರು ಬಹಳ ಕಡಿಮೆ ಮೊತ್ತ ಕೊಟ್ಟು ಕಳುಹಿಸುತ್ತಾರೆ. ಅಂದರೆ ಧ್ವನಿಮುದ್ರಣ ಮಾರಾಟ ಸಂಸ್ಥೆಯವರು ಮಹಿಳಾ ಹಾಡುಗಾರರಿಗೆ ಕೊಡುವುದಕ್ಕಿಂತ ಹೆಚ್ಚು ಹೇಳುತ್ತಾರೆ, ಆದರೆ ಹೇಳಿದ್ದಕ್ಕಿಂತ ಕಡಿಮೆ ಕೊಡುತ್ತಾರೆ. ಪುರುಷ ಹಾಡುಗಾರರ ವಿಷಯದಲ್ಲಿ ಧ್ವನಿ ಮುದ್ರಣ ಮಾರಾಟ ಸಂಸ್ಥೆಯವರು ಹಾಗೆ ನಡೆದುಕೊಳ್ಳುವುದಿಲ್ಲ. ಒಪ್ಪಿಕೊಂಡ ಸಂಭಾವನಾ ಮೊತ್ತವನ್ನು ಯಾವ ತಕರಾರಿಲ್ಲದೆ ಕೊಡುತ್ತಾರೆ. ಮಾರಾಟ ಸಂಸ್ಥೆಯವರೊಂದಿಗೆ ಮಾತನಾಡುವಷ್ಟು ವ್ಯವಹಾರ ಜ್ಞಾನದ ಕೊರತೆ ಈಕೆಗಿರುವುದರಿಂದ ಧ್ವನಿ ಮುದ್ರಣ ಪ್ರಪಂಚದಿಂದ ದೂರ ಉಳಿದಿದ್ದಾಳೆ.

ಸ್ಥಿರಾಸ್ತಿ ಮತ್ತು ಚರಾಸ್ತಿ

ಹೊಲ ಕೆಲಸ, ಗಾರೆ ಕೆಲಸಗಳಲ್ಲಿನ ಕೂಲಿಗಿಂತ ಹರದೇಶಿ-ನಾಗೇಶಿ ಹಾಡಿಕೆಯಲ್ಲಿ ಹೆಚ್ಚು ಕೂಲಿಯನ್ನು ಪಡೆದುಕೊಳ್ಳುತ್ತಾರೆ. ಕೂಲಿಯ ಜೊತೆಯಲ್ಲಿಯೇ ಭಕ್ಷೀಸನ್ನು ಪಡೆದುಕೊಂಡಿರುತ್ತಾರೆ. ಸವಾಲ್-ಜವಾಬ್ ಬಿಡಿಸಿ ಪಂಥಕ್ಕಿಟ್ಟ ಬಹುಮಾನವನ್ನು ಗೆಲ್ಲುತ್ತಾರೆ. ಹರದೇಶಿ-ನಾಗೇಶಿ ಹಾಡಿಕೆಯಲ್ಲಿನ ಈ ಎಲ್ಲ ಪ್ರಕ್ರಿಯೆಗಳು ಅವರ ವರಮಾನ, ಅವರದೇ ಸಮುದಾಯದಲ್ಲಿನ ಹೊಲ ಕೆಲಸ, ಗಾರೆ ಕೆಲಸ ಮಾಡುವವರಿಗಿಂತ ಹೆಚ್ಚು ಎನ್ನುವುದನ್ನು ನಿರೂಪಿಸುತ್ತದೆ. ದುಡಿದ ಹಣದಲ್ಲಿ ಹೊಟ್ಟೆ-ಬಟ್ಟೆಗೆ ಖರ್ಚಾಗಿ ಹೆಚ್ಚುವರಿಯಾದರೆ ಅದೇ ಆಸ್ತಿಯಾಗುತ್ತದೆ. ವಿಶಾಲ ನೆಲೆಯಲ್ಲಿ ಹರದೇಶಿ-ನಾಗೇಶಿ ಹಾಡುಗಾರರಿಗೆ, ಹಾಡುವ ಅವರ ವೃತ್ತಿಯೇ ಆಸ್ತಿಯಾಗಿರುತ್ತದೆ. ಹರದೇಶಿ-ನಾಗೇಶಿ ಹಾಡುಗಾರರ ಪ್ರಕಾರ ಅವರ ಆಸ್ತಿಯೆಂದರೆ ಅವರ ಕಂಠ ಹಾಗೂ ಹಣ ಕೊಟ್ಟು ಖರೀದಿಸಿದ ಹಾಡುಗಳು. ಹೀಗಾಗಿ ಅವರು ಈ ಎರಡನ್ನೂ ಬಹಳ ಜತನದಿಂದ ಜೋಪಾನ ಮಾಡುತ್ತಾರೆ. ಅವರು ಕಂಠ ಹಾಗೂ ಹಾಡುಗಳನ್ನು ಆಸ್ತಿಯೆಂದು ಪರಿಭಾವಿಸಿರುವುದಕ್ಕೆ ಅವರ ಸಾಮಾಜಿಕ ಹಾಗೂ ಆರ್ಥಿಕ ಹಿನ್ನೆಲೆಯೇ ಕಾರಣವಾಗಿದೆ. ಕೆಳಜಾತಿಯ ಹಾಗೂ ಕೆಳವರ್ಗಗಳ ಜನರನ್ನು ಸೇವಕಿ/ಕ ನೆಲೆಯಲ್ಲಿಯೇ ಅರ್ಥೈಸಲಾಗಿದೆ. ಸೇವೆ ಮಾಡಿಸಿಕೊಳ್ಳುವವರಿಗೆ ಆಸ್ತಿ ಇರುತ್ತದೆಯೇ ಹೊರತು ಸೇವೆ ಮಾಡುವವರಿಗಲ್ಲ. ಹರದೇಶಿ-ನಾಗೇಶಿ ಹಾಡುಗಾರರು ಅದರಲ್ಲೂ ಮಹಿಳಾ ಹಾಡುಗಾರರು ಕೆಳಜಾತಿ, ಕೆಳವರ್ಗಗಳಿಗೆ ಸೇರಿದವರಾಗಿರುವುದರಿಂದ ಸಾಂಪ್ರದಾಯಿಕ ಪರಿಕಲ್ಪನೆಯ ಸ್ಥಿರಾಸ್ತಿ ಮತ್ತು ಚರಾಸ್ತಿ ಮಾಡಿಕೊಳ್ಳಲು ಸಾಧ್ಯವೇ ಇಲ್ಲ. ಹೀಗಾಗಿ ಹಾಡಿಕೆ ಮಹಿಳೆಯರು ತಮ್ಮ ಕಂಠ ಹಾಗೂ ಸಂಗ್ರಹಿಸಿ ಕಲಿತ ಹಾಡುಗಳು ತಮ್ಮ ಆಸ್ತಿ ಎಂದು ಪರಿಭಾವಿಸುತ್ತಾರೆ. ಆದರೆ ಇವರನ್ನು ಲೈಂಗಿಕ ಮೂಲದಿಂದ ನೋಡುವ ಮೇಲ್ಜಾತಿ-ಮೇಲ್ವರ್ಗದವರು, ಅವರನ್ನು ಸಾರ್ವಜನಿಕರ ಆಸ್ತಿಯೆಂದೇ ಪರಿಗಣಿಸುತ್ತಾರೆ.

ಜಾಗತಿಕ ಮಾರುಕಟ್ಟೆಯ ಸಾಂಪ್ರದಾಯಿಕ ಆಸ್ತಿ ಪರಿಕಲ್ಪನೆಯನ್ನು ಒಡೆದು ವಿಸ್ತರಿಸಿದೆ. ಈ ಕುರಿತು ಪ್ರತ್ಯೇಕ ಅಧ್ಯಯನವೇ ನಡೆಯಬೇಕಿದೆ. ಜಾಗತೀಕರಣಕ್ಕೆ ಒಳಗಾಗದ, ಸಾಂಪ್ರದಾಯಿಕ ನೆಲೆಯಲ್ಲಿಯೇ ಆಲೋಚಿಸುವ ತಳಸಮುದಾಯದ ಮಹಿಳೆಯರು ಆಸ್ತಿ ಪರಿಕಲ್ಪನೆಯನ್ನು ಸಾಂಪ್ರದಾಯಿಕ ನೆಲೆಗಳಲ್ಲಿಯೇ ಗ್ರಹಿಸುತ್ತಾರೆ. ಮನೆ, ಹೊಲ ಹಾಗೂ ಚಿನ್ನ ಇವುಗಳಾಚೆ ಆಸ್ತಿ ಪರಿಕಲ್ಪನೆಯನ್ನು ವಿಸ್ತರಿಸಿಕೊಳ್ಳುವುದೇ ಇಲ್ಲ. ಅವರ ಈ ಆಲೋಚನಾ ಮಿತಿಗೆ ಅವರ ಪ್ರಾದೇಶಿಕ, ಶೈಕ್ಷಣಿಕ, ಹಾಗೂ ಆರ್ಥಿಕ ಹಿನ್ನೆಲೆಗಳು ಕಾರಣವಾಗಿರುತ್ತವೆ. ಆಸ್ತಿ ಕುರಿತು ಕೇಳಿದಾಗ ಅವರ ನಿರೂಪಣೆಗಳು ಹೊಲ-ಮನೆಗಳನ್ನೇ ಕೇಂದ್ರವಾಗಿಸಿಕೊಂಡಿದ್ದವು.