ಬಾನಾಬಾಯಿ ಹೆಣ್ಣುಮಕ್ಕಳು ವೇದಿಕೆಗೆ ಬಂದರು. ಅವರಲ್ಲಿ ಒಬ್ಬಳು ದಪ್ಪು ಬಾರಿಸಿ ಹಾಡುತ್ತಿದ್ದರೆ, ಒಬ್ಬಳು ಸೂರು ಹಾಕುತ್ತಿದ್ದಳು; ಮತ್ತೊಬ್ಬಳು ತಾಳ ಬಾರಿಸುತ್ತಿದ್ದಳು. ಹುಡುಗಿ ಏನು ಹಾಡುತ್ತಿದ್ದಾಳೆಂದು ನನಗೆ ಅರ್ಥವಾಗಲೇ ಇಲ್ಲ. ಸಭಿಕರು ಮಾತ್ರ ಆ ಹೆಣ್ಣುಮಗಳ ಹಾಡನ್ನು ಆಸಕ್ತಿಯಿಂದಲೇ ಆಲಿಸುತ್ತಿದ್ದಂತೆ ಕಂಡುಬಂದಿತು. ಹುಡುಗಿಯ ಹಾಡು ಸಭಿಕರಿಗೆ ಅರ್ಥವಾಗುತ್ತಿದೆಯೆ? ಎನ್ನುವ ಪ್ರಶ್ನೆ ಹುಟ್ಟಿಕೊಂಡಿತು. ನನಗೆ ಸಂಗೀತ ಜ್ಞಾನ ಇಲ್ಲ. ಆದರೂ ಆ ಹುಡುಗಿಯ ಸ್ವರ ಹಾಗೂ ಆಲಾಪ ಎರಡೂ ಸುಶ್ರಾವ್ಯವಾಗಿಲ್ಲ ಎನ್ನುವುದು ಸ್ಪಷ್ಟವಾಗಿತ್ತು. ಹುಡುಗಿಯ ಹಾಡು ಅರ್ಥವಾಗುತ್ತಿರಲಿಲ್ಲ. ಆಕೆಯ ಕಂಠ ಸುಶ್ರಾವ್ಯವಾಗಿರಲಿಲ್ಲ. ಆಕೆಯ ಆಲಾಪ ಶುದ್ಧವಾಗಿರಲಿಲ್ಲ. ಆದರೂ ಜನ ಕೇಳುತ್ತಿದ್ದರು. ಹುಡುಗಿಯ ಹಾಡಿನ ಕುರಿತು ಅಭಿಪ್ರಾಯಗಳನ್ನು ಕೂಡಿ ಹಾಕುವ ಕುತೂಹಲ ಸಣ್ಣಗೆ ಚಿಗರೊಡೆಯಿತು. ನಾನು ಚಲಿಸಿದಲ್ಲಿಗೆ ಜನರ ದೃಷ್ಟಿ ಚಲಿಸುತ್ತಿತ್ತು. ಇದರಿಂದ ತಪ್ಪಿಸಿಕೊಂಡು, ನಾನು ಅಭಿಪ್ರಾಯ ಕಲೆಹಾಕಲು ಉಪಾಯ ಕಂಡುಕೊಂಡೆನು. ನನ್ನ ಜೊತೆ ಬಂದ ಭೀಮೇಶನಿಗೆ ನನಗೆ ಬೇಕೆಂದಿರುವ ಮಾಹಿತಿಯನ್ನು ಕಲೆಹಾಕಲು ಹೇಳಿದೆ. ಯಾಕೆಂದರೆ ಮಾಗಾಂವಿ ಜನತೆಗೆ ಭೀಮೇಶನು ಅನ್ಯ ಎನಿಸಲೇ ಇಲ್ಲ. ಅಲ್ಲಿಯ ಯುವಕರೊಂದಿಗೆ ಬೆರೆತುಕೊಂಡಿದ್ದನು. ವಯಸ್ಸಾದವರನ್ನು, ಯುವಕರನ್ನು ಮಧ್ಯವಯಸ್ಕ ಗಂಡಸರನ್ನು ಮಾತನಾಡಿ ಕಲೆಹಾಕಿದ ಮಾಹಿತಿ ಏನೆಂದರೆ ಆ ಹುಡುಗಿ ಚೆನ್ನಾಗಿಯೇ ಹಾಡುತ್ತಿದ್ದಾಳೆ ಎನ್ನುವುದು. ಹುಡುಗಿ ಏನನ್ನು ಹಾಡುತ್ತಿದ್ದಾಳೆ ಎಂದರೆ ಹೇಳಲಿಕ್ಕಾಗುವುದಿಲ್ಲ ಎಂದರಂತೆ. ಪ್ರೇಕ್ಷಕರು ಬಹಿರಂಗವಾಗಿ ಆ ಹುಡುಗಿ ಚೆನ್ನಾಗಿ ಹಾಡುತ್ತಾಳೆ ಎಂದು ಹೇಳಿದರೂ, ಅವರ ಅಂತರಂಗವು ಅದನ್ನು ನಿರಾಕರಿಸಿರಬೇಕು. ಹೀಗಾಗಿಯೇ ಹುಡುಗಿಯ ಹಾಡಿಕೆಯನ್ನು ಹೆಚ್ಚಿ ಯಾರೂ ಭಕ್ಷೀಸನ್ನು ನೀಡಲೇ ಇಲ್ಲ. ಆದರೂ ಆ ಹುಡುಗಿಯ ಹಾಡಿಕೆಯು ಸುಮಾರು ಮುನ್ನೂರರಿಂದ ನಾನ್ನೂರವರೆಗಿನ ಸಭಿಕರನ್ನು ಸರಿಸುಮಾರಾಗಿ ನಲವತ್ತು ನಿಮಿಷಗಳವರೆಗೆ ಹಾಗೆಯೇ ಹಿಡಿದಿತ್ತು ಎನ್ನುವುದು ಸತ್ಯ. ನನ್ನ ಪಕ್ಕದಲ್ಲಿ ಬಂದು ಕುಳಿತ ಅಜ್ಜನಿಗೆ ಹುಡುಗಿಯ ಹಾಡಿನ ಕುರಿತು ಪ್ರಶ್ನಿಸಿದ್ದೆ. ಅಜ್ಜ ಮಜಬೂತಾಗಿ ನಕ್ಕು ಹೇಳಿದ್ದು ಹೀಗೆ: “ಹರೆsಕ ಬಂದ್ರ ಹಂದಿ ಮರಿ ಚಂದಂತ. ಹರೆದ ಹುಡುಗಿ ಚಂದ ಹಾಡ್ತಾಳ ಅನ್ನು ಪ್ರಶ್ನೇನ ಬರೂದಿಲ್ಲ. ವಯಸ್ಸಿಗಿ ಬಂದ ಹುಡುಗರು, ಚಟಾ ಇರು ಗಂಡಸರು ಹಾಡ ಕೇಳಿದಂಗ ಮಾಡಕೊಂಡ ಅವ್ರ‍್ನ ನೋಡಿತಿರತಾವು. ನಮ್ಮಂಥಾ ವಯಸ್ಸಾದರು ಏನೋ ಎಳಿ ಮಕ್ಕಳು ಹಾಡತಾವ, ಹಾಡ್ಲಿ ಅಂತ ಸುಮ್ಮ ನಿರತೇವು… ಯಾರ್ಯಾರ ಭಾವಾ (ಭಾವನೆ) ಹ್ಯಾಂಗಿರ್ತದೋ ಹಂಗ ಕೇಳ್ತಿರತರಾರ ತಾಯಿ ಕೇಳೂರು ಒಂದ ನಮೂನಿ ಇರೂದಿಲ್ಲ” ಎಂದನು.

ಈ ಹುಡುಗಿಯರ ಹಾಡಿನ ನಂತರ ಮತ್ತೆ ವಿಲಾಸನು ಹಾಡಲು ರಂಗಕ್ಕೆ ಬಂದನು. ಮಗಳು ಹೇಗೆ ಹಾಡಿದರೂ ಸಂತೋಷದಿಂದ ಕೇಳಿದ ಬಾನಾಬಾಯಿ ಹಾಗೂ ಆಕೆಯ ಗಂಡನ ಮುಖ ಮೊರದಗಲವಾಗಿತ್ತು.

“ಏನು ಹಾಡಕಿ ಹಾಡ್ತೀರಿ ನೀವು
ತಾಯಿ ಮಕ್ಕಳು?
ಗೀಗೀ ಪದದ ಮರ್ಯಾದಿ
ಯಾಕ ತಗಿತಿರಿ’
ಎಂದು ಹಾಡುತ್ತ ವೇದಿಕೆಯನ್ನು ಪ್ರವೇಶಿಸಿದನು.
ಪಾತರಗಿತ್ತಿ ಏರ್ಯಾಳ ಪಲ್ಲಕ್ಕಿ
(ಬಾನಾಬಾಯಿ ಹಾಗೂ ಆಕೆಯ ಹೆಣ್ಣಮಕ್ಕಳನ್ನು ತೋರಿಸುತ್ತ)
ಇಕಿನಂಥವರು, ಇಕಿನ ಮಕ್ಕಳಂಥವ್ರು
ಪತಿವ್ರತ್ಯಾರು ಹೋಗ್ಯಾರು
ಮಣ್ಣುಗೂಡಿ
ಅದಕ್ಕ ನಡದೈತ್ರಿ ಜಗತ್ ಪ್ರಳಯಾ…”

ಹೀಗೆ ವಿಲಾಸನು ಹಾಡುವಾಗ ಹಾಡಿನ ಮಧ್ಯದಲ್ಲಿಯೇ ಸಭಿಕರಲ್ಲಿ ಒಬ್ಬನು ವೇದಿಕೆಗೆ ಬಂದನು. “ಫ್ಯಾನ್ಸಿ ಹಾಡ ಬಿಟ್ಟು ಸಂಪ್ರದಾಯದ ಹಾಡಾ ಹಾಡು. ಹರದೇಶಿ ಹಾಡ ಬರ‍್ಲಾಕಂದ್ರ ಕೆಳಗ ದಪ್ಪಿಟ್ಟು ಹೋಗು” ಎಂದು ಹೇಳಿದನು. ವಿಲಾಸನು ಸ್ವಲ್ಪ ವಿಚಲಿತನಾದಂತೆ ಕಂಡು ಬಂದನು. ತಕ್ಷಣವೇ ಸಾವರಿಸಿಕೊಂಡು “ಮಾಸ್ತರ ಹೊಟ್ಟ್ಯಾಗ ಮಾಸ್ತರ ಹುಟ್ಟುದಿಲ್ಲ. ಡಾಕ್ಟರ್ ಹೊಟ್ಟ್ಯಾಗ ಡಾಕ್ಟರ್ ಹುಟ್ಟುದಿಲ್ಲ. ಹಾಂಗ ಕವಿ ಹೊಟ್ಟ್ಯಾಗ ಕವಿ ಹುಟ್ಟುದಿಲ್ಲ. (ಜನತೆಯನ್ನು ನೋಡಿ ನಗುತ್ತ) ಇದನ್ನ ಹಾಡ ಅಂದ್ರ ಹಾಡ್ತೇನಿ. ಬ್ಯಾರೇದು ಹಾಡಂದ್ರ ಹಾಡ್ತೇನಿ. ನಿಮ್ಮ ಇಚ್ಚಾ”. ಅಂದನು. ಕುಳಿತ ಸಭಿಕರೆಲ್ಲರೂ ಈಗ ಹಾಡುವುದನ್ನೇ ಮುಂದುವರೆಸಬೇಕೆಂದು ಕೇಳಿಕೊಂಡರು.

ಅವನು ಹಾಡಬೇಕೆನ್ನುವಾಗಲೇ ವಿದ್ಯುತ್ ಶಕ್ತಿ ಹೋಯಿತು. ಬಾನಾಬಾಯಿಯನ್ನು ತೋರಿಸುತ್ತಾ “ಕರೆಂಟ್ ಅಂದ್ರ ಇಟಕೊಂಡ ರಂಡಿ ಇದ್ದಂಗ ಈಕಿನಂಗ; ಚಿಮಣಿ ಐತೆಲ್ಲಾ ಅದು ಎಲ್ಲಾ ಕಾಲಕ್ಕೂ ಕಾಯಮಾಗಿ ಇರ್ತದ; ಮಾಗಾಂವಿ ಮುತ್ತೈದೆರಂಗ. ಆಧುನಿಕ ಯುಗಕ್ಕ ನಮಗ ಕಾಂಪಿಟೇಷನ್ ಬಿದ್ದೈತಿ” ಎನ್ನುತ್ತ

“ದೊಡ್ಡ ಕುಂಕುಮಾ ಹಚ್ಚಿದ್ರ
ಗಂಡನ ಆಯುಷ್ಯ ಹೆಚ್ಚತದ
ಅದಕ ಹಿರೇರು ಹೇಳತಾರಿ
ಟಿಕಳಿ ಇಡs ಬ್ಯಾಡ್ರಿ ಅಂತ”

ಎಂದು ಹಾಡಿದನು. ವಿಲಾಸನು ಹಾಡಿದ ಎರಡನೆಯ ಹಾಡು ಕೂಡ ಆಧುನಿಕತೆಯನ್ನು, ಆ ಮೂಲಕ ‘ಆಧುನಿಕ ಮಹಿಳೆ’ಯನ್ನು ನಿರಾಕರಿಸುವ ನಿಲುವಿಗೆ ಬದ್ಧವಾಗಿತ್ತು. ಹಾಡು ಮುಗಿದು ಕೆಳಗಿಳಿಯುವಾಗ “ನಲವತ್ತೈದು ವರ್ಷ ಹಾಡಕಿ ಮಾಡೇನ್ರಿ. ಸ್ಟೇಜಿನ್ಯಾಗ ನಾನು ಬಾರಿ ಶ್ರೀಮಂತರಿ. ನಾಳೆ ಮತ್ತು ಸ್ಟೇಜ್ ಮ್ಯಾಗ ನಿಂತ ಹಾಡಾಕಂತ ಬಟ್ಟಿ ಒಕ್ಕೊಳ್ಯಾಕ (wash) ಹೋದ್ರ ಬಟ್ಟಿಗಿ ಹಚ್ಚಾಕ ಸಾಬಾನ (soap) ಇಲ್ಲ. ಸಾಬಾನ ತರಾಕ ರೊಕ್ಕ ಇಲ್ಲರಿ” ಎಂದು ಹೇಳಿದನು. ವಿಲಾಸ ಕೊನೆಯ ಮಾತಿನಲ್ಲಿ ಕಲಾವಿದನ ಬಡತನದ ವಿವರಣೆಯಿದೆ. ಆತನ ಬಡತನದ ವಿವರಣೆ ಒಳಗೆ ಭಕ್ಷೀಸಿನ ಅಪೇಕ್ಷೆಯು ನೇಯ್ದುಕೊಂಡಿದೆ. ವಿಲಾಸನು ಬಾನಾಬಾಯಿಯ ಹೆಣ್ತನದ ಮೇಲೆ ಪದೆ ಪದೆ ನಡೆಸುವ ಆಕ್ರಮಣ ಆಕೆಯನ್ನು ಪಾತಾಳಕ್ಕೆ ತಳ್ಳಿದಂತೆ ಕಾಣುತ್ತಿತ್ತು. ಆಕೆಯ ಹೆಣ್ತನದ ಮೇಲಿನ ಆಕ್ರಮಣ, ಆಕೆಯ ಹೆಣ್ಣುಮಕ್ಕಳಿಗೂ ವಿಸ್ತರಿಸಿಕೊಂಡಾಗ ಅತ್ಯಂತ ಅಸಹಾಯಕಳಾದಂತೆ ತೋರಿತು. ವೇದಿಕೆಯ ಮೇಲೆ ಬಂದ ಆಕೆ ಮೊದಲಿನ ಹಾಗೆ ಆಕ್ರಮಣ ನಡೆಸುವ ಚಿರತೆಯಂತೆ ವೇದಿಕೆ ತುಂಬಾ ಓಡಾಡಿ ಪಂಥಾಹ್ವಾನ ನೀಡಲಿಲ್ಲ, ಅತ್ಯಂತ ಆಯಾಸದ ದನಿಯಲ್ಲಿಯೇ “ಸೂಳಿಗೇರಿ ಸೂಳೇರ್ನ ಹಾಡುವ ಮುನವಳ್ಳೆವ್ನ ನಂಬಬಾರದು” ಎಂದು ಹಾಡು ಪ್ರಾರಂಭಿಸಿದ ಬಾನಾಬಾಯಿ ಹಾಡ ಹಾಡುತ್ತಲೆ ಚೇತರಿಸಿಕೊಂಡಳು. ಐದು ನಿಮಿಷದವರೆಗೆ ದಪ್ಪು ಬಿಟ್ಟು ಬಿಡದೇ ಬಾರಿಸಿದಳು. ಆಕೆ ಬಾರಿಸಿದ ದಪ್ಪಿನ ಲಯ ಜೋರಾಗಿತ್ತು; ತೀಕ್ಷ್ಣವಾಗಿತ್ತು. ದಪ್ಪು ಜೋರಾದ ಹಾಗೆ ಆಕೆಯಲ್ಲಿ ಬತ್ತಿಹೋದ ಆತ್ಮವಿಶ್ವಾಸ ಜೀವ ತುಂಬಿಕೊಂಡಿತು. ಆನಂತರ ಆಲಾಪನೆ ಪ್ರಾರಂಭಿಸಿದ ಆಕೆ ನಿರಂತರವಾಗಿ ಸುಮಾರು ೧೦ ನಿಮಿಷಗಳವರೆಗೆ ಆಲಾಪನೆ ಮಾಡಿದಳು. ಆಕೆಯೊಳಗಿನ ಆತ್ಮವಿಶ್ವಾಸ, ಚೇತನ ನಳ-ನಳಿಸತೊಡಗಿದಂತೆ ವಿಲಾಸನೆಡೆಗೆ ನೋಡಿ ನಕ್ಕು ದೇಹದ ಮಹತ್ವವನ್ನು ನಿರೂಪಿಸುವ ಹಾಡನ್ನು ಹಾಡಿದಳು. ನಾಗೇಶಿ ಪಂಥವು ದೇಹವನ್ನು ಹೆಣ್ಣಿನೊಂದಿಗೆ ಸಮೀಕರಿಸಿಕೊಂಡಿದೆ; ದೇಹವನ್ನು ನಿಷ್ಠೆಗೆ ಸಂಕೇತವಾಗಿಕೊಂಡಿದೆ; ದೇಹವು ಹುಟ್ಟುತ್ತದೆ; ಸಾಯುತ್ತದೆ. ದೇಹಕ್ಕೆ ಒಂದು ಜನ್ಮ ಮಾತ್ರ, ಆತ್ಮ ಹಾಗಲ್ಲ. ಹೀಗಾಗಿ ಆತ್ಮವನ್ನು ‘ಮಿಂಡಗಾರ’ ಎಂದು ಕರೆದಳು. ಹರದೇಶಿಯವರು ತಮ್ಮನ್ನು ನಶ್ವರವಿಲ್ಲದ ಆತ್ಮಕ್ಕೆ ಸಂಕೇತವಾಗಿಸಿಕೊಳ್ಳುತ್ತಾರೆ. ನಾಗೇಶಿ ಈ ಹಾಡುಗಾರ್ತಿಯು ಪುನರ್ಜನ್ಮದ ಹಿನ್ನೆಲೆಯುಳ್ಳ ಜೀವಾತ್ಮನನ್ನು ‘ಮಿಂಡಗಾರ’ ಎಂದು ಕರೆದಳು. ‘ಮಿಂಡಗಾರ’ ಎನ್ನುವ ಪದವನ್ನು ವಿಲಾಸನನ್ನು ನೋಡುತ್ತಲೇ ಹೇಳಿದಳು; ನಕ್ಕಳು. ಹಾಗೆ ಹೇಳಿದಾಗ ಆಕೆಯಲ್ಲಿ ಪ್ರತಿಕಾರ ತೀರಿಸಿಕೊಂಡ ನೆಮ್ಮದಿಯಿತ್ತು. ಅವಳು ಬಳಸಿದ ಪದ ತನ್ನನ್ನು ಕುರಿತದ್ದಲ್ಲ ಎನ್ನುವಂತೆ ಭಾವ ರಹಿತನಾಗಿ ವಿಲಾಸನು ಕುಳಿತುಕೊಂಡಿದ್ದನು. ಹೀಗಾಗಿಯೇ ಏನೋ ಹಾಡಿನ ಕೊನೆಯಲ್ಲಿ “ನಿಮ್ಮೆದುರಿಗೆ ನಿಮ್ಮ ಹೆಣ್ಣಮಗಳ ಮಾನಾ ತಗದ್ರು, ಹಂಗs ಕುಂತಿರಲ್ಲ್ರಿ. ನೀವೂ ಅವ್ನ ಜೋಡಿ ಸೇರ‍್ಕೊಬ್ಯಾಡ್ರಿ. ಮಾನಾ ಕಾಪಾಡು ಊರ ಇದ್ದದ್ದಕ್ಕ ಮಾಗಾಂವ ಅಂತ ಹೆಸರ ಬಂದೈತಿ” ಎಂದು ಹೇಳುತ್ತ.

“ನಾನ ನಿಮ್ಮ ಉಡಿಯಾನ ಕೂಸು
ಕಾಯಿರಪ್ಪ ನನ್ನ ಮುನವಳ್ಳಿ ಕ್ವಾಣನಿಂದ.”

ಎಂದು ಸೆರಗೊಡ್ಡಿ ಹತ್ತಾರು ಬಾರಿ ಕೇಳಿದಳು. ಹೌದೆನ್ನುವಂತೆ ತಲೆಯಲ್ಲಾಡಿಸಿದ ಜನ ಕರಗಿದಂತೆ ಕಂಡು ಬಂದರು. ಲಾಲ್ ಅಹಮ್ಮದ್ ಮಾಸ್ತರ ವೇದಿಕೆಗೆ ಬಂದನು. ಆತನು ಮಾಗಾಂವದ ಸ್ಥಳಿಕನಾಗಿದ್ದು, ನಾಗೇಶಿ ಹಾಡುಗಳನ್ನು ಬರೆಯುವ ಕವಿ. ಬಾನಾಬಾಯಿಯ ಹಾಡು ಮುಗಿದ ತಕ್ಷಣ ವೇದಿಕೆಗೆ ಬಂದು ಆಕೆಯನ್ನು ಕಂಠವನ್ನು ಹೊಗಳಿದನು. “ಮುಂದೆ ವೇದಿಕೆಗೆ ಬರುವ ವಿಲಾಸನು ಸಂಪ್ರದಾಯ ಬದ್ಧವಾಗಿ ಹಾಡಿಕೆಯನ್ನು ಮಾಡಲಿ. ಇಲ್ಲಿ ಯುನಿವರ್ಸಿಟಿಯವರು ಬಂದು ಕುಂತಾರ. ಹುಚ್ಚರ‍್ಹಂಗ ನೀನು ಹಾಡೋದs ಹರದೇಶಿ ಹಾಡಕಿ ಅಂತ ತಿಳಿಬಾರ್ದು. ನಿನ್ನವು ಹರದೇಶಿ ಹಾಡಲ್ಲಂತ ನಮಗ ಗೊತ್ತಾಗತೈತಿ, ಅವ್ರಿಗಲ್ಲ. ಮತ್ತೊಬ್ಬರ್ನ ಸುಮ್ಮ-ಸುಮ್ಮನ ಹಾದಿ ತಪ್ಪಿಸೂದು ಪಾಪದ ಕೆಲ್ಸಾನ ಅನಿಸ್ಕೋತದ. ನೀನು ಹೇಳುದ ಅರ್ಥ ಆಗ್ತೈತಿ. ನಮ್ಮಪ್ಪ ಬರ‍್ದಂಗ ನನಗ ಪದಾ ಬರ್ಯಾಕ ಬರಲ್ಲ. ನೀ ಹೇಳಿದಂಗ ಕವಿ ಹೊಟ್ಟ್ಯಾಗ ಕವಿ ಹುಟ್ಟುದಿಲ್ಲ. ಹಂಗ ಹಾಡಗಾರ್ನ ಹೊಟ್ಟ್ಯಾಗ ಹಾಡಗಾರ‍್ನೂ ಹುಟ್ಟೂದಿಲ್ಲ. ನಾನಂದ ಮಾತು ನಿಂಗೂ ಅರ್ಥ ಆಗಿರಬೇಕು. ಸಭಾಕ್ಕ ಮರ್ಯಾದಿ ಕೊಟ್ಟು ಹಾಡು. ಇಲ್ಲಾ ದಪ್ಪ ಕೆಳಗಿಟ್ಟು ಹೋಗು” ಎಂದನು. ವಿಲಾಸನ ತಂದೆ ಪ್ರಸಿದ್ಧ ಗೀಗೀ ಹಾಡುಗಾರನಂತೆ. ವಿಲಾಸನು ಲಾಲ್ ಅಹಮ್ಮದ್ ಮಾಸ್ತರನ ತಂದೆಯ ಪ್ರತಿಭೆಯನ್ನು ಹಿನ್ನೆಲೆಯಾಗಿಟ್ಟುಕೊಂಡು ಆತನನ್ನು ಬಹಿರಂಗವಾಗಿ ನಿಂದಿಸಿದರೆ; ಲಾಲ್ ಅಹಮ್ಮದ್ ಮಾಸ್ತರನು ವಿಲಾಸನ ತಂದೆ ಹಾಡಿನ ಪ್ರತಿಭೆಯನ್ನು ಮುಂದಿಟ್ಟು ವಿಲಾಸನನ್ನು ಜರಿದನು. ಅಂದರೆ ಒಬ್ಬರಿಗೊಬ್ಬರು ಜರಿಯುವ ಇಲ್ಲವೆ ನಿಂದಿಸುವ ಪ್ರಕ್ರಿಯೆ ಹಾಡುಗಾರರ ಮಧ್ಯದಲ್ಲಿ ಮಾತ್ರ ನಡೆಯುವುದಿಲ್ಲ. ಪ್ರೇಕ್ಷಕರು ಹಾಗೂ ಹಾಡುಗಾರರ ಮಧ್ಯದಲ್ಲಿಯೂ ನಡೆಯುತ್ತದೆ. ಹಾಡಿಕೆ ನಂತರ ಬಾನಾಬಾಯಿ ಸುಮಾರು ೨೦೦ ರೂಗಳಷ್ಟು ಮತ್ತೆ ಭಕ್ಷೀಸು ಪಡೆದಳು. ಅವಳಿಗೆ ಸಂದ ಭಕ್ಷೀಸಿಗೆ ಲಾಲ್ ಅಹಮ್ಮದ್ ಮಾಸ್ತರನ ಬೆಂಬಲವೇ ಪ್ರಮುಖ ಕಾರಣ ಎಂದು ಹೇಳಲಾಗದು. ಶ್ರುತಿ ಬದ್ಧವಾಗಿ ಬಾರಿಸಿದ ದಪ್ಪು, ಸ್ವರ ಬದ್ದವಾಗಿ ತೆಗೆದ ಆಲಾಪ ಸಭಿಕರನ್ನು ಕಲಾ ಲೋಕಕ್ಕೆ ಕೊಂಡೊಯ್ದದಂತೂ ನಿಜ. ಹೆಚ್ಚು ಭಕ್ಷೀಸನ್ನು ಪಡೆದ ಬಾನಾಬಾಯಿ ಖುಷಿಯಿಂದ ಬಾನಗಲ ಬಾಯಿ ತೆಗೆದುಕೊಂಡು ನನ್ನ ಬಳಿ ಬಂದು ಕುಳಿತಳು. ಸಾರಾಯಿ ವಾಸನೆ ನನ್ನ ಮೂಗಿಗೆ ಅಪ್ಪಳಿಸಿತು. ‘ಕುಡಿದಿರುವೆಯಾ?’ ಎಂದು ಕೇಳಿದೆ ‘ಇಲ್ಲ’ ಎಂದಳು. ‘ಸುಳ್ಳು ಹೇಳಬೇಡ’ ಎಂದೆ. “ಮಾನಗೇಡಿ, ರಂಡಿ ಅಂತ ಬೈಸ್ಕೊಂಡು ಸಾಕಾಗಿ ಹೋಗದೆ. ಹಾಡ್ದ ಹೊಟ್ಟಿ ತುಂಬಂಗಿಲ್ಲ. ಸಭಾದಾಗ ಮಾನಗೇಡಿ ಆಗಿದ್ದನ್ನ ಮರಿಯಾಕ ಕುಡಿತೀನಿ. ಮಾನಾ ಕಳಕೊಂಡಕೊಡ್ಲೆ ಕೈಕಾಲಾಗ ಶಕ್ತಿ ಕಳಕೊಂಡಂಗೆ ಆಗ್ತೈತಿ. ಹಾಡು ಮನಸ್ಸೂ ಸಾಯತೈತಿ. ಮನಸ್ಸಿನ್ಯಾಗ, ಕೈಕಾಲಾಗ ಶಕ್ತಿ ತಗೊಳ್ಳಾಕ ಕುಡಿತೀನಿ. ತಪ್ಪೇನು?” ಎಂದಳು. ನನಗೆ ಮಾತೇ ಹೊರಡಲಿಲ್ಲ. ಸುಮ್ಮನಾದೆ. ಗಂಡಸರು ಹೀಗೆಯೇ ಕುಡಿಯುವುದಕ್ಕೆ ಕಾರಣಗಳನ್ನು ಕೊಡುತ್ತಾರಲ್ಲ. ಇದ್ದರೂ ಇರಬಹುದೇನೋ?! ಆಕೆಯ ಹೆಣ್ತನದ ಮೇಲೆ ಪ್ರತಿಸಲವೂ ನಡೆಯುವ ದಾಳಿ ಆಕೆಯ ಕಲಾಕಾರಳು ಎನ್ನುವ ಆಸ್ಮೀತೆಯನ್ನು ಕಿತ್ತುಕೊಂಡು ಚಾರಿತ್ರ್ಯ ಹೀನಳು ಎನ್ನುವುದನ್ನು ನಿರೂಪಿಸುವುದಕ್ಕೆ ಒತ್ತು ನೀಡುತ್ತಿತ್ತು.

ವೇದಿಕೆಗೆ ಬಂದ ವಿಲಾಸನು ಆವೇಶದಲ್ಲಿ ಇದ್ದಂತೆ ತೋರುತ್ತಿತ್ತು. ಬಾನಾಬಾಯಿಗೆ ಧಾರಾಳವಾಗಿ ಹರಿದು ಬಂದ ಭಕ್ಷೀಸು, ಆಕೆಗೆ ದೊರೆತ ಜನ ಬೆಂಬಲವನ್ನು ಸೂಚಿಸುತ್ತಿತ್ತು. ಎಷ್ಟು ಸಾರಿ ಹಾಡಿದರೂ ಬಾನಾಬಾಯಿಗೆ ಬಂದಷ್ಟು ಭಕ್ಷೀಸು ವಿಲಾಸನಿಗೆ ಬರಲೇ ಇಲ್ಲ.

‘‘ಹೌದು ತಂಗಿ ನೀ ಹೇಳೂದು ಖರೆವೈತಿ. ನಿಮ್ಮ ದೇಹದಾಗ ಇದ್ದು ನಿಮಗ ಮಾತಾಡಾಕ ಶಕ್ತಿ ಕೊಡುವ ನಾನು ನೀ ಹೇಳಿದಂಗ ನಾನು ಖರೇನ ಮಿಂಡಗಾರ. ಆದ್ರ ನಿಮ್ಮಂತಹ ಹೆಂಗಸರ ಹಿಂದ ತಿರುಗು ಷಂಡಂತೂ ಅಲ್ಲ. ನನಗ ಹಾಡಕಿ ಬರೂದಿಲ್ಲೇನ್ರಿ ಮಾಸ್ತರ. ತಾಕತ್ತಿದ್ರ ನನ್ನ ಹಾಡಕಿ ಅರ್ಥಾ ಮಾಡಕೊಳ್ರಿ” ಎಂದವನೆ ಹಾಡಲು ಪ್ರಾರಂಭಿಸಿದನು.

“ಹುಡುಗನ ಕೂಡ ಹುಡುದಿ ಆಡಕೊಂತ ಹೋದಿ
ಅಡತಾರ ಹೆಣ್ಣ ಕಡತಾರ ಮಾಡಕೊಂತ ಹೋದಿ”

ಎಂದು ಹಾಡತೊಡಗಿದನು. ಜೀವಾತ್ಮದ ಮಹತ್ವವನ್ನು ನಿರೂಪಿಸುವ ಪದ ಅದಾಗಿತ್ತು. ಹಾಡೂದಿದ್ದ್ರ ನನ್ನ ಮೀರಿಸುವ ಹಾಡಾ ಹಾಡು ಎಂದನು. ಕೊನೆಯಲ್ಲಿ

“ಉಡದಾರ ಇಲ್ಲದ ಮುಡದಾರ ಹೆಣ್ಣ
ಎಲ್ಲಿ ನೀ ರಣ ಕಡದಿ?”

ಎಂದು ಪ್ರಶ್ನಿಸಿದನು. “ರೊಕ್ಕ ಅನ್ನೂದು ಲಕ್ಷ್ಮೀ ಇದ್ದಂಗರಿ. ಕುಡದು ಕತ್ತಲಾಗ ಸೀರಿ ಕಳಕೊಂಡು ಬೀಳೋ ಹೆಂಗಸಗಿ ಕೊಟ್ಟು, ಅಪಮಾನಾ ಮಾಡಬ್ಯಾಡಿ. ಇಷ್ಟS ನಾ ನಿಮಗ ಕೈ ಮುಗಿದು ಕೇಳಕೋತಿನಿ” ಎಂದನು. ಜನ ಎಲ್ಲಾ ಆತನ ಹಾಡಿಗೆ ಖುಷಿಯಾದರು. ಸುಮಾರು ೨೫೦ ರೂಪಾಯಿಗಳವರೆಗೆ ಭಕ್ಷೀಸನ್ನು ನೀಡಿದರು. ವಿಲಾಸನು ಸಂತೋಷಗೊಂಡನು. ಅಷ್ಟರಲ್ಲಿ ವೇದಿಕೆಯ ಮೇಲೆ ಬಂದ ಕಾರ್ಯಕ್ರಮದ ಆಯೋಜಕರು ಕಡಲೆ ತಳಿಯ ಪರಿಚಯ ಕಾರ್ಯಕ್ರಮ ಇದೆ ಎಂದರು. ಕೃಷಿ ಸಂಶೋಧನಾ ಕೇಂದ್ರ ಗುಲ್ಬರ್ಗಾ, icar ನ್ಯೂ ದೆಹಲಿ, icrisat, ಹೈದರಾಬಾದ್ ಹಾಗೂ ಅಕ್ಕಮಹಾದೇವಿ ಟ್ರಸ್ಟ ಮಾಗಾಂವ ಇವರ ಸಂಯುಕ್ತ ಆಶ್ರಯದಲ್ಲಿ ಬೆಳೆ ಕ್ಷೇತ್ರೋತ್ಸವ ಕಾರ್ಯಕ್ರಮ ನಡೆಯಿತು. ರಾತ್ರಿ ೧೦ ಗಂಟೆಗೆ ಮತ್ತೆ ಹಾಡಿಕೆಯು ಪ್ರಾರಂಭವಾಗುವುದು ಎಂದರು. ಬಿಡುವಿನಲ್ಲಿ ಬಾನಾಬಾಯಿ ಜೊತೆ ಮಾತನಾಡಬೇಕೆಂದಿದ್ದೆ. ಆದರೆ ವಿಲಾಸನ ಮಾತಿನಿಂದ ನೊಂದುಕೊಂಡ ಆಕೆ ರೊಯ್ಯನೆ ಎದ್ದು ಬೀಸು ಹೆಜ್ಜೆ ಹಾಕುತ್ತ ಹೊರಟು ಹೋದಳು. ವಿಲಾಸನ ಜೊತೆ ಮಾತನಾಡಲು ಕುಳಿತೆ. ಅವನೂ ಕುಡಿದಿದ್ದ. ತಾನು ಮಹಾಕವಿ ಎಂದೂ ಮಹಾನ್ ಹಾಡುಗಾರನೆಂದೂ ಹೇಳಿಕೊಂಡನು. ಕ್ಷೇತ್ರಕಾರ್ಯ ದೈಹಿಕ ಆಯಾಸವನ್ನುಂಟು ಮಾಡಿದ್ದರೆ, ಬಾನಾಬಾಯಿಯ ಮೇಲಣ ಆಕ್ರಮಣ ನನ್ನಲ್ಲಿ ಮಾನಸಿಕ ದಣಿವನ್ನುಂಟು ಮಾಡಿತ್ತು. ರಾತ್ರಿ ಹಾಡನ್ನು ವೀಕ್ಷಿಸುವ ಮೂಡಿನಲ್ಲಿ ನಾನಿರಲಿಲ್ಲ. ಎಲ್ಲ ಹಾಡುಗಾರರೊಂದಿಗೆ ಮಾತನಾಡಿ ಗುಲ್ಬರ್ಗಾದೆಡೆಗೆ ಮುಖಮಾಡಿದೆ.

ಪ್ರದರ್ಶನ ೨

ಸಿಂದಗಿಯ ಮದನಹಳ್ಳಿಯಲ್ಲಿ ನಡೆದ ಹರದೇಶಿ-ನಾಗೇಶಿ ಪ್ರದರ್ಶನ ಕಲೆಯನ್ನು ವೀಕ್ಷಿಸಿದೆನು. ಎರಡನೆಯ ಪ್ರದರ್ಶನವೂ ನಾನು ಹೋಗುವ ಮುಂಚೆಯೇ ಪ್ರಾರಂಭವಾಗಿತ್ತು. ಹರದೇಶಿ ಹಾಡುಗಾರ ನಬಿಸಾಬರು ಹಾಡುತ್ತಿದ್ದರು.

“ಎಲ್ಲಮ್ಮ ಹೆಚ್ಚೆಂದು
ಬಲ್ಲಂಗ ಸಭೆಯಲಿ
ಗುಲ್ಲ ಮಾಡಿ ಹಾಡ್ಲಾಕ ನಿಂತಿ
ನಿನ ಎಲ್ಲವ್ವಗ ಮನಿ ಮಾನ ಇಲ್ಲೇನ?
ಕಾನನದಲ್ಲಿ ಅಕಿಂದ್ಯಾಕ ವಸ್ತಿ?
ಶ್ರೇಷ್ಠ ಮಾಯಿ ಅಕಿ
ಸೃಷ್ಟಿ ಉದ್ದಾರಕ ಹುಟ್ಟ ಬಂದಾಳಂತಿ
ದಿಗಮಲ್ಲಿ ಹೆಂಗ್ಸ ಗಂಡಂದ್ಯಾಕ
ಕೊಯ್ಸಾಳ ಶಿರ ಹೇಳು
ಆಕಿ ಹೆಸರ್ಲಿ ಸೂಳಿತನ
ಮಾಡು ನಿಮಗ ಗಂಡಂಗೇನು
ಮಹತ್ವ ಗೊತ್ತೈತಿ?”

ಎಂದು ಹೀಯಾಳಿಸಿದನು. ನಾಗೇಶಿ ಹಾಡುಗಾರಳು ‘ದೇವದಾಸಿ’ ಸಂಪ್ರದಾಯಕ್ಕೆ ಒಳಗಾಗಿದ್ದಳು. ಎಲ್ಲಮ್ಮ ದೇವತೆಯಾಗಿ ಆರಾಧನೆಗೆ ಒಳಗಾಗುವ ದೈವ, ನಿಜ. ಆದರೂ ಹೆಣ್ಣಿಗೆ ಆರೋಪಿಸಲ್ಪಟ್ಟ ಲೌಕಿಕ ಮೌಲ್ಯಗಳ ನೆಲೆಯಲ್ಲಿಯೇ ಎಲ್ಲಮ್ಮನನ್ನು ಹೀಗಳೆಯಲಾಗಿದೆ. ಈ ಮೂಲಕವೇ ಎಲ್ಲಮ್ಮನನ್ನು ಮಹಿಳೆಗೆ ಮಾದರಿಯಾಗದಂತೆ ನೋಡಿಕೊಳ್ಳಲಾಗಿದೆ. ಮುತ್ತು ಕಟ್ಟಿಸಿಕೊಂಡವಳನ್ನು, ಮದುವೆಯಾದವಳನ್ನು ಇಬ್ಬರನ್ನೂ ಒಂದೇ ತಕ್ಕಡಿಯಲ್ಲಿಟ್ಟು ಶ್ಲೀಲ-ಅಶ್ಲೀಲ ಮೌಲ್ಯಗಳಡಿಯಲ್ಲಿ ತೂಗಿ ನೋಡಲಾಗಿದೆ. ಈ ಮೌಲ್ಯಗಳಡಿಯಲ್ಲಿಯೇ ನಾಗೇಶಿ ಹಾಡುಗಾರಳನ್ನೂ ಅಪಮಾನಿಸಲಾಗಿದೆ. ನಾನು ಹಾಡುಗಾರಳ ಪಕ್ಕದಲ್ಲಿಯೇ ಕುಳಿತುಕೊಂಡಿದ್ದೆನು. ಹಾಡಿಕೆ ಅಕ್ಕಮ್ಮ ತಣ್ಣಗೆ ಕುಳಿತಿದ್ದಳು. ಹಾಡುಗಾರನ ಮಾತು ಅವಳಿಗೆ ನೋಯಿಸಿವೆ ಎಂಬುದು ನನ್ನ ಗಟ್ಟಿ ನಂಬಿಕೆ. ಆಕೆ ತಣ್ಣಗೆ, ಕುಳಿತುಕೊಂಡದ್ದು ನನ್ನನ್ನು ಗಲಿಬಿಲಿಗೊಳಿಸಿತ್ತು. ‘ನಿಮಗೆ ನೋವಾಗಿಲ್ವೆ’? ಎಂದು ಪ್ರಶ್ನಿಸಿದ್ದೆ. ತೀಕ್ಷ್ಣವಾಗಿ ನೋಡಿದ ಆಕಿ ತಣ್ಣಗೆ ಹೇಳಿದ್ದು ಹೀಗೆ “ಒಂದ ಸಲ ಅಂದ್ರ ನೋಯ್ತದ; ಎರಡ ಸಲ ನೋಯ್ತದ. ಹೀಂಗs ವರ್ಷಗಟ್ಟಲ ಅನಿಸ್ಕೊಂಡು ಬಂದೇನಿ. ಒಂದ ಪೆಟ್ಟ, ಎರಡ ಪೆಟ್ಟ ಅಷ್ಟs ನೋವ ಅನಿಸ್ತದ. ಹಂಗs ಮ್ಯಾಲಿಂದ ಮ್ಯಾಲಿ ನಲ್ವತ್ತ ವರ್ಷಗಟ್ಟಲೆ ಪೆಟ್ಟ ಬಿದ್ದ್ರ ನೋವಾಗೂದಿಲ್ಲ. ದಡ್ಡ ಬಿದ್ದಂಗ ಆಗ್ತೈತಿ. ಯಾವುದೋ ಜನ್ಮದ ಪಾಪ. ಕಲಾಕಾರ‍್ಳು ಅಂತ ಅನಿಸ್ಕೋಬೇಕಂತ ಬಂದ್ರೂ ಸೂಳಿ ಅನ್ನು ಬಿರುದು ತಪ್ಪೂದಿಲ್ಲ. ಸೂಳಿ ಅನ್ನುವುದು ಅವ್ರಿಗಿ ಧರ್ಮ ಆದ್ರ, ಅನಿಸ್ಕೊಳ್ಳುದು ನಮ್ಮ ಕರ್ಮ” ಎಂದು ಹಣೆಯ ಮೇಲೆ ಕೈಯಿಟ್ಟುಕೊಂಡು, ಶಿವಾ ಎಂದು ಮುಗಿಲು ನೋಡಿದಳು. ಹಾಡಿಕೆ ಮುಗಿದ ನಂತರ ನಬಿಸಾಬರಿಗೆ ಇನ್ನೂರು ರೂಪಾಯಿಗಳ ವರೆಗೆ ಭಕ್ಷೀಸು ಬಂದಿತು. ಧಾರಾಳವಾಗಿ ಹರಿದು ಬಂದ ಭಕ್ಷೀಸು ಹರದೇಶಿ ಹಾಡುಗಾರನ ಸಂತೋಷವನ್ನು ಇಮ್ಮಡಿಗೊಳಿಸಿತ್ತು.

ವೇದಿಕೆಗೆ ಬಂದ ಅಕ್ಕಮನು ಪಾರ್ವತಿಯೇ ಆದಿಶಕ್ತಿ ಎಂದು ನಿರೂಪಿಸಿದಳು. ಅವಳೇ ಜಗತ್ತಿನ ತಾಯಿ ಎಂದು ಹಾಡಿದಳು. ಅವಳ ಹಾಡಿನಲ್ಲಿ ‘ಅಶ್ಲೀಲ’ವೆಂದು ಗುರುತಿಸಲ್ಪಡುವ ಪದಗಳು ಬಳಕೆಗೊಂಡದ್ದು ಬಹಳ ಕಡಿಮೆ. ಗತ್ತಿನಿಂದಲೇ ದಪ್ಪು ಬಾರಿಸುತ್ತ ಸುಶ್ರಾವ್ಯವಾಗಿ ಹಾಡಿದಳು. ಆದರೂ ಆಕೆಗೆ ಐವತ್ತರಿಂದ ಅರವತ್ತು ರೂಪಾಯಿಗಳ ವರೆಗೆ ಮಾತ್ರ ಭಕ್ಷೀಸು ದೊರೆಯಿತು.

ಎದುರು ಹಾಡುಗಾರನು ಪಾರ್ವತಿ ಪಾತಿವ್ರತ್ಯವನ್ನು ಪ್ರಶ್ನಿಸುವ ಕಥನವನ್ನು ಹೇಳಿದನು. ಪಾರ್ವತಿ ಗಂಡನಿಗೆ ಮೋಸ ಮಾಡಿ ಸಿಂಪಿಗನೊಂದಿಗೆ ಕೂಡಿದವಳು. ಪಾತಿವ್ರತ್ಯ ಮುರಿದ ಹೆಂಗಸು ಪಾಪ ಕೂಪಕ್ಕೆ ತಳ್ಳಲ್ಪಡುತ್ತಾಳೆ. ಅಂಥವಳು ಹೇಗೆ ಆದಿಶಕ್ತಿ ಆದಾಳು ಎನ್ನುವ ಆತನ ಪ್ರಶ್ನೆಗೆ ಜನರೆಲ್ಲ ಹೋ ಎಂದು ಹರದೇಶಿ ಹಾಡುಗಾರನಿಗೆ ಬೆಂಬಲ ನೀಡಿದರು. “ಕಂಡ ಕಂಡ ಗಂಸರಿಗೆ ಪಲ್ಲಂಗ ಬದಲಿಸುವ ನಿಮಗೆ ಪಾತಿವ್ರತ್ಯ ಅರ್ಥವಾಗೂದಿಲ್ಲ” ಎಂದು ಕೈ ಮಾಡಿ ಮೂದಲಿಸಿದನು. ಅದಕ್ಕೂ ಜನರು ಕೇಕೇ ಹಾಕಿ ನಕ್ಕರು. ಹರದೇಶಿ ಹಾಡುಗಾರನಿಗೆ ಇನ್ನೂರಕ್ಕೂ ಹೆಚ್ಚು ಭಕ್ಷೀಸು ಬಂದಿತು. ಅವನು ಮತ್ತಷ್ಟು ಖುಷಿಗೊಂಡನು.

ಹರದೇಶಿ ಹಾಡುಗಾರನ ಮೂದಲಿಕೆಯು ಆಕೆಯನ್ನು ಕೂದಲೆಳೆಯಷ್ಟು ಅಧೀರಳನ್ನಾಗಿಸಲಿಲ್ಲ. ಮುಪ್ಪಿನ ವಯಸ್ಸಿನಲ್ಲಿ ಇಂಥ ಮಾತುಗಳನ್ನು ಕೇಳಿಸಿಕೊಳ್ಳುವುದು ಕಷ್ಟ. ಜನ ಎಲ್ಲರೂ ನಬಿಸಾಬರಿಗೆ ಭಕ್ಷೀಸು ಕೊಡುವ ಖುಷಿಯಲ್ಲಿದ್ದರು. ಇದೇ ಸಮಯವನ್ನು ಕಾಯ್ದುಕೊಂಡಿದ್ದ ನಾನು ಅವಳಿದ್ದಲ್ಲಿಗೆ ಮೆಲ್ಲಗೆ ಹೋದೆನು. “ನಬಿಸಾಬರು ಹೀಗೆ ಹೇಳಬಾರದಿತ್ತು. ಪಾತಿವ್ರತ್ಯದ ಬಗ್ಗೆ ಏನು ಬೇಕೋ ಹಾಗೆ ಮಾತನಾಡಿಕೊಳ್ಳಲಿ ಅದನ್ನು ಇಟ್ಟುಕೊಂಡು ನಿಮ್ಮನ್ನು ನೋಯಿಸಬಾರದಿತ್ತು” ಎಂದಿದ್ದೆ. ಅದಕ್ಕವಳು ನಕ್ಕು ಪ್ರತಿಕ್ರಿಯಿಸಿದ್ದಳು. “ಸೂಳೇರು, ಸೂಳೇರು ಅಂತ ನಮ್ಮ ಬಗ್ಗೆ ಅಷ್ಟs ಮಾತಾಡ್ತಾರಂತ ಅಂದ್ಕೊಂಡಿಯೇನವ್ವ? ಪಾರ್ವತಿನ್ನೂ ಬಿಡೂದಿಲ್ಲ, ಎಲ್ಲಮ್ಮನನ್ನು ಬಿಡೂದಿಲ್ಲ. ಹೆಂಗ್ಸರ ಅಂದ್ರೆ ಸಾಕು, ಹಾದರಕ್ಕ ನಿಂತವರಂಗ ಮಾತಾಡ್ತಾವು. ಅದನ್ನ ಬಿಟ್ಟರ ಬೇರೆ ಗ್ಯಾನಾನ ಇಲ್ಲ ಇವ್ಕೆ. ಮುಪ್ಪಿನಾಗೂ ಸ್ವಾಟಿ ತಿವಸ್ಕೊಂಡು ಇಂಥಾ ಮಾತು ಅನಿಸ್ಕೊ ಬೇಕಲ್ಲಾ ಅಂಬುದು ಒಂದs ಸಂಕ್ಟ ನಂಗ. ಏನು ಮಾಡೂದು? ಹೊಟ್ಟಿ ತಿಪಲ. ಅನಿಸ್ಕೊಬೇಕು. ಹಾಡಬೇಕು ಅಷ್ಟs” ಎಂದ ನಿಟ್ಟುಸಿರಿಟ್ಟು ಮುಗಿಲೆಡೆಗೆ ಮುಖಮಾಡಿದಳು.

ಪಾಳೆಯ ಪ್ರಕಾರ ಬಂದ ಅಕ್ಕಮ್ಮ ಹಾಡಿದ್ದು ಸೀತೆಯ ಪಾತಿವ್ರತ್ಯವನ್ನು ವೈಭವೀಕರಿಸುವ ಹಾಡನ್ನು. ಜೊತೆಯಲ್ಲಿ ರಾಮನ ಕ್ರೂರತೆಯನ್ನು ಕುಟುಕಿದ್ದಳು. ರಾವಣ, ದುರ‍್ಯೋಧನ ಮೊದಲಾದವರು ಕೆಟ್ಟ ಗಂಡಸರು ಎಂದಳು. ಪ್ರತಿಯೊಬ್ಬ ಗಂಡಸಿನಲ್ಲಿಯೂ ರಾವಣ, ದುರ‍್ಯೋಧನರಿದ್ದಾರೆ ಎಂದಳು. ಸೀತೆಯಂತಹ ಪತಿವ್ರತೆಯಿಂದಲೇ ಜಗತ್ತು ಪ್ರಳಯ ಆಗುವುದು ತಡೆದಿದೆ ಎಂದಳು. ಇದಕ್ಕೆ ಎಲ್ಲ ಸಭಿಕರೂ ಹೌದೆಂದು ತಲೆ ಅಲ್ಲಾಡಿಸಿದರು.

ಹಾಡುಗಾರಳು ವೇದಿಕೆಯ ಮೇಲೆ ಬಂದು ಹಾಡುತ್ತಿದ್ದ ಅವಳ ಹಾಡಿನೊಳಗೆ, ರಾಗದೊಳಗೆ ಕ್ರಿಯಾಶೀಲತೆ ಇತ್ತು. ಆದರೆ ಅವಳೊಳಗಿನ ಕ್ರಿಯಾಶೀಲತೆಯಲ್ಲಿ ಜೀವ ಸೆಲೆಯಿರಲಿಲ್ಲ. ಬಡತನ ಆಕೆಯನ್ನು ಹಾಡಿಕೆಗೆ ಕರೆದುಕೊಂಡು ಬಂದಿದೆ. ಹಸಿವು, ಅಪಮಾನವನ್ನು ನುಂಗಿಕೊಂಡು ಹಾಡುವ ಒತ್ತಡವನ್ನು ನಿರ್ಮಿಸಿದೆ. ಈವಾಗಲೂ ಆಕೆಗೆ ಬಂದ ಭಕ್ಷೀಸು ಐವತ್ತು ರೂಪಾಯಿಗಳ ಗಡಿ ದಾಟಲಿಲ್ಲ.

ನಂತರ ಬಂದ ನಬಿಸಾಬರು ಸೀತೆ, ರಾಮನಂತಹ ಗಂಡನಿದ್ದೂ ರಾವಣನ ಮೇಲೆ ಮನಸ್ಸು ಮಾಡಿದಳು. ಆಕೆಯೂ ಪತಿವ್ರತೆಯಲ್ಲ ಎಂದು ಹಾಡಿದನು. ರಾವಣ ದುರ‍್ಯೋಧನರು ಕೆಟ್ಟವರಲ್ಲ. ಅವರನ್ನು ಕೆಟ್ಟವರನ್ನಾಗಿ ಮಾಡಿದವರೇ ಹೆಂಗಸರು ಎಂದು ಹಾಡಿದಳು. ಸೂಳಿತನ ಮಾಡುವ ನಿನಗೆ ಪಾತಿವ್ರತ್ಯದ ಮಹತ್ವದ ಗೊತ್ತಾಗುವುದಿಲ್ಲ ಎಂದು ಹೀಗಳೆದನು. ನಂತರ ತಾಳ ಬಾರಿಸುವವನು ವೇದಿಕೆಯ ಒಂದು ಮೂಲೆಯಲ್ಲಿ ಕುಳಿತ ಅಕ್ಕಮ್ಮನೆದುರಿಗೆ ಜೋರಾಗಿ ತಾಳ ಬಾರಿಸುತ್ತ ಕುಣಿದನು. ಜನರು ಇದನ್ನು ಆನಂದಿಸಿದರು. ಇದಕ್ಕೆ ಅಕ್ಕಮ್ಮ ಪ್ರತಿಕ್ರಿಯೆ ಮಂಜುಗಡ್ಡೆಯಷ್ಟೇ ತಣ್ಣಗಿತ್ತು. ಜನರು ಇದಕ್ಕೂ ಹೌದೆಂದು ತಲೆಯಲ್ಲಾಡಿಸಿದರು.

“ಕೇಳ ಜಾಣಿ ಗುಣಮಣಿ ಪಣವೇಣಿ
ಬಾಳವ್ವ ಗುರು ಸ್ಮರಣಿ ಕೇಳಜಾಣಿ
ಎಪ್ಪತ್ತೆರಸು ಸಾವಿರದಾ ಅಂಗದ ಕೀಲಾ

ತಿಳಿಯ ಮೂಲಾ” (ಹೀಗೆನ್ನುವಾಗ, ವೇದಿಕೆಯ ಒಂದು ಮೂಲೆಯಲ್ಲಿ ಕುಳಿತ ಆಕೆಯ ಮುಂದೆ ಬಂದು ಜೋರಾಗಿ ದಪ್ಪು ಬಾರಿಸಿದನು)

“ಮಾಡಿದ ಮಾದೇವ
ನಿನಗ್ಯಾಕ ಹ್ಯಾವ
ಎಲವಿನ ಹಂದರದ ಜೋಡಕಿ
ನರ ಮಾಂಸದ ಹಡಕಿ
ಮ್ಯಾಲ ಮುಚ್ಚಾರ ಚರ್ಮದ ಹೊದಕಿ
“ಪಾಪ ದೇಹಾ ನೆಚ್ಚಕೊಂಡs ಜೀವನಾ
ಮಾಡಕಿ ನೀನು, ಗಂಡಸರ ಬಗಲಾಗ
ಮಲಕೊಂಡ ರೊಕ್ಕಾ ತಗೊಳ್ಳು ನಿನಗ
ದೇಹ ನಶ್ವರ ಅನ್ನೂದು ಅರ್ಥಾ ಆಗೂದಿಲ್ಲ”

ಎಂದನು. ಅವನು ಪಾತಿವ್ರತ್ಯವನ್ನು ನಿರಾಕರಿಸುತ್ತ ದೇಹ ನಶ್ವರತೆಯನ್ನು ಪ್ರತಿಪಾದಿಸಿದನು. ಹಾಡಿನ ಮಧ್ಯದಲ್ಲಿ ಹಾಡುಗಾರನು ಅಕ್ಕಮ್ಮನನ್ನು ತೋರಿಸುತ್ತ ದಪ್ಪು ಬಾರಿಸುತ್ತ ಆಕೆಯ ಎದುರು ಕುಣಿದದ್ದು ಆಕೆಯ ಒಳಗಿನ ಹೆಪ್ಪುಗಟ್ಟಿದ ದುಃಖ ಕರಗಿ ಹೊರಚಿಮ್ಮುವಂತೆ ಮಾಡಿತ್ತು. ಮುಸುಮುಸು ಅತ್ತಳು. ಬಾನಾಬಾಯಿಯ ಹಾಗೆ ಹಾಡುಗಾರನನ್ನು ಸಾಪಳಿಸಲಿಲ್ಲ. ಬದಲಾಗಿ ಸಣ್ಣ ದನಿಯಲ್ಲಿ “ದೇವ್ರು ನನ್ನ ಹಣಿಬಾರ‍್ದಾಗ ಬರ‍್ದಿದ್ದ ಇಷ್ಟು” ಎಂದು ಗೊಣಗಿ ಕೊಂಡಳು. ಈ ಸಲವೂ ಅವನಿಗೆ ಧಾರಾಳವಾಗಿ ಭಕ್ಷೀಸು ದೊರೆಯಿತು. ಸರದಿ ಪ್ರಕಾರ ಅಕ್ಕಮ್ಮ ಹಾಡತೊಡಗಿದಳು. ಹಾಡಿನಲ್ಲಿ ಆಕೆಯ ಧ್ಯಾನ ಕೇಂದ್ರಿಕೃತವಾಗಿಲ್ಲ ಎನ್ನುವುದು ನನಗೂ ಅರ್ಥವಾಯಿತು. ಕೂಡಲೇ ಸಭಿಕರಲ್ಲಿ ಒಬ್ಬನು ಎದ್ದು ನಿಂತು ‘ಯಾಕs ಬೇಸೂರಿ ಹಾಡ್ತಿಯವ್ವಾ. ಸರೀಗಿ ಸೂರ ತಗದು ಹಾಡು” ಎಂದರೆ; ಮತ್ತೊಬ್ಬನು “ಏಯ್ ಬಾಯಿ (ಹೆಣ್ಣುಮಗಳು) ತಂತ್ಯಾಗ ಹಾಡು. ನಿನ್ನ ಸ್ವರಾ ಮಲಪ್ರಭಾ ನದಿ ಕಡಿಗಿ ಹೊಂಟೈತಿ. ಅದನ್ನ ತಂತ್ಯಾಗ ಕೂಡಿಸ್ಕೊಂಡು ಹಾಡು. ಜೀವನ್ದಾಗ ದಾರಿ ಬಿಟ್ಟಂಗ ಹಾಡಿನಾಗ ದಾರಿ ಬಿಡಬ್ಯಾಡಾ” ಎಂದನು. ಹೀಗೆ ಹೇಳಿದವರಲ್ಲಿ ಒಬ್ಬನು ಪಾರಿಜಾತ ಕಲಾವಿದನಾಗಿದ್ದರೆ; ಮತ್ತೊಬ್ಬನು ಭಜನಾ ಪದ ಹಾಡುವವನಾಗಿದ್ದನು. ಹಾಡಿನ ಮಧ್ಯದಲ್ಲಿ ಸಭಿಕರಿಂದ ಅದೂ ಕಲಾವಿದರಿಂದ ಬಂದ ಪ್ರತಿಕ್ರಿಯೆ ಹಾಡುಗಾರಳನ್ನು ಮತ್ತಷ್ಟು ಕಂಗೆಡಿಸಿದಂತೆ ಕಂಡಿತು. ಕೂಡಲೆ ಸಾವರಿಸಿಕೊಂಡು ತುಂತುಣಿಯ ಶೃತಿಯೊಂದಿಗೆ ದಪ್ಪಿನ ಪೆಟ್ಟು ಜೋಡಿಸಿಕೊಂಡು ಹಾಡತೊಡಗಿದಳು.

“ಎಲೋ ಘಾತಕ ಏನಂದಿ ಬಾಯಿಲಿ
ಹೊತ್ತ ಹಡದ ತಾಯಿ
ನಿಮ್ಮಪ್ಪನ ಆಯಿಗಿ
ಹೆತ್ತವ್ವನ ಮನ ನೊಂದಿಸಿ
ಹಾಡಲಾಕ ಹ್ಯಾಂಗ ಬಂತ ಬಾಯಿಗಿ
ಅವಳ ಪೂರ್ವಕ ನಿಮ್ಮ ತಂದಿದು
ನಂದು ಆತು ಲಗ್ನ
ಅದು ನಿನಗ ಏನು ಗೊತ್ತಣ್ಣ?
ಹನ್ನೆರಡು ದೇವರ್ನ ಹರಕೆ ಹೊತ್ತ
ನಾ ಪಡಕೊಂಡಿನ ನಿನ್ನಂತಹ ಪುತ್ರನ್ನ”

(ಎದುರು ಹಾಡುಗಾರನು ಕಡೆಗೆ ಕೈಮಾಡಿ ತೋರಿಸುತ್ತ ಹೇಳಿದಳು)

“ನಿಮ್ಮಂತಹ ಪುತ್ರರ್ನ” ಎಂದು ಸಭಿಕರನ್ನು ಉದ್ದೇಶಿಸಿ ಹೇಳಿದಳು. ಹಾಡುತ್ತಲೇ ಅಕ್ಕಮ್ಮನು ಪಾತಿವ್ರತ್ಯದ ಹೆಚ್ಚಳಿಕೆಯಿಂದ ತಾಯ್ತನದ ಕಡೆಗೆ ಹೊರಳಿದಳು. ಪಾತಿವ್ರತ್ಯ ಪಶ್ನೆಗೀಡಾಗ ಬಹುದು. ತಾಯ್ತನ ಹಾಗಲ್ಲ. ಮಾತೃತ್ವವನ್ನು ಯಾರೂ ಸಂದೇಹಿಸಲಾರರು. ಅದಕ್ಕೆಂದೆ ಹಾಡುಗಾರಳು ಪುರಾಣ ಹೇಳುವ ಪತಿವ್ರತೆಯ ಚರಿತ್ರೆಯಿಂದ ಮಾತೃತ್ವದೆಡೆಗೆ ಮುಖ ಮಾಡಿದಳು. ತಾಯಿಯ ಕುರಿತು ಹಾಡುತ್ತಲೇ ತಾನೇ ತಾಯಿಯಾಗಿ ನಿಂತಳು. ತಾನೇ ತಾಯಿ ಆಗುವ ಮೂಲಕ ಎದುರು ಹಾಡುಗಾರನನ್ನು, ಸಭಿಕರನ್ನು ತೆಕ್ಕೆಗೆ ತೆಗೆದುಕೊಂಡಳು. ಪ್ರೇಕ್ಷಕರು ಕರಗಿದರು. ಧಾರಾಳವಾಗಿ ಭಕ್ಷೀಸು ಅಕ್ಕಮ್ಮನ ಕೈ ಸೇರಿತು. ಎದುರು ಹಾಡುಗಾರನಿಂದ ಅಪಮಾನದಿಂದ ನೊಂದು ವೇದಿಕೆ ಪ್ರವೇಶಿಸಿದ ಅಕ್ಕಮ್ಮ ತಾಯ್ತನದ ಕುರಿತ ಹಾಡು ಹಾಡುತ್ತ ತಾನೇ ತಾಯಿಯಾಗಿ ನಿರಾಳವಾಗಿ ವೇದಿಕೆಯಿಂದ ಹೊರಬಂದಿದ್ದಳು.

ಎದುರು ಹಾಡುಗಾರನು. ತಂದೆಯ ಮಹತ್ವವನ್ನು ನಿರೂಪಿಸುವ ಹಾಡು ಹಾಡಿದನು. ಈ ಸಂದರ್ಭದಲ್ಲಿ ಅವನು ಅಕ್ಕಮ್ಮನ ಮೇಲೆ ಹಾಡಿನ ಮೂಲಕ ನೈತಿಕ ಪ್ರಶ್ನೆ ಮುಂದೆ ಮಾಡಿ ಆಕ್ರಮಣ ನಡೆಸಲಿಲ್ಲ; ಸೌಮ್ಯವಾಗಿದ್ದಂತೆ ಕಂಡು ಬಂದನು.

“ತಂದೆಯೇ ಹೌದು, ತಂದೆಯ ನಾಮವೇ ಹೌದು
…………………………………………………..
ನೀಲಕಂಠ ನಿಗಮ ಗೋಚರ ನಿಷ್ಕಲ ಹೌದೋ
ನಿರುಪಮ ನಿರಾಬಾರಿ ನಿರ್ಗಿಣಿ ಹೌದೊ
ತಂದೆ, ತಂದೆ ನೀಲಕಂಠನೇ ಹೌದೋ”

ಎಂದನು. ೬೫ರ ಹರೆಯದ ಅಕ್ಕಮ್ಮ ೪೦ರ ಹರೆಯದ ನಬಿಸಾಬನಿಗೆ ನಿಜಕ್ಕೂ ತಾಯಿಯಾಗಿಯೇ ಕಂಡಿರಬೇಕು. ಸಭಿಕರು ನಬಿಸಾಬ್ ಹಾಡಿಗೂ ತಲೆ ಅಲ್ಲಾಡಿಸಿದರು. ಈ ಬಾರಿಯೂ ಚೆನ್ನಾಗಿಯೇ ಭಕ್ಷೀಸನ್ನು ಪಡೆದನು. ತಾಯಿಯ ಮಹತ್ವದ ಕುರಿತ ಹಾಡನ್ನು ಅಕ್ಕಮ್ಮ ಹಾಡತೊಡಗಿದಳು. ಇದಕ್ಕೆ ಎದುರಾಗಿ ನಬಿಸಾಬನು ತಂದೆಯ ಮಹತ್ವದ ಕುರಿತು ಹಾಡ ತೊಡಗಿದನು. ಮೊದಲಿನ ಹಾಗೆ ನಾಗೇಶಿ ಹಾಡುಗಾರ್ತಿಯು ಒಬ್ಬ ಮಹಿಳೆಯ ಪಾತಿವ್ರತ್ಯ ಚರಿತ್ರೆಯನ್ನು ಕಟ್ಟುವುದು; ಎದುರು ಹಾಡುಗಾರನು ಕಥಾ ನಾಯಕಿಯ ಚಾರಿತ್ರ್ಯ ಹರಣ ಮಾಡುವ ಪ್ರಕ್ರಿಯೆ ಮುಂದಿನ ಹಾಡಿಕೆಯಲ್ಲಿ ಕಂಡುಬರಲಿಲ್ಲ.

ಇದ್ದಕ್ಕಿದ್ದಂತೆ ಪ್ರೇಕ್ಷಕರಲ್ಲಿ ಒಬ್ಬನು ಎದ್ದು ನಿಂತನು. ನಿಂತಲ್ಲಿಯೇ ಓಲಾಡುತ್ತಿದ್ದನು. ಬಹುಶಃ ಕುಡಿದಿದ್ದಿರಬಹುದು. “ನೀನು ಇಂಥಾವೆಲ್ಲಾ ಹಾಡಿದ್ರ, ಮಜಾ ಬರಲ್ಲ, ಹರದೇಶಿ ಹಾಡಿಕೇನ ಹಾಡು, ಮಜಾ ಬರುವಂಥಾವು ಹಾಡು” ಎಂದನು. ತಲೆ ಅಲ್ಲಾಡಿಸಿ ನಬಿಸಾಬನು ಹಾಡಿದ್ದು ಹೀಗೆ.

“ಹರದಿದಿ ಹಚ್ಚು ತೆರದದಿ ಮುಚ್ಚು
ನಿನಗಂತಿನಿ ಗರತಿ
ಹರೆಯದ ಮಬ್ಬಿನ್ಯಾಗ
ಹರಕೊಂಡ ಹೋಗಬ್ಯಾಡ
ವಗತನ ಹಿಡಿ ಗಚ್ಚಿ…”

ಈ ಹಾಡನ್ನು ಹಾಡಲು ಪ್ರಾರಂಭಿಸಿದ ತಕ್ಷಣ ಎಲ್ಲರ ಮುಖದಲ್ಲಿ ತೆಳು ನಗೆ ಮೂಡಿತ್ತು. ಮುದುಕರೂ ಕೂಡ ಬಚ್ಚ ಬಾಯಗಲಿಸಿಕೊಂಡು ಕುಳಿತಿದ್ದರು. ಯುವಕರು ಬಾಯಲ್ಲಿ ಎಲ್ಲಾ ಹಲ್ಲು ಕಾಣುವ ಹಾಗೆ ಬಾಯಗಲಿಸಿ ನಗುತ್ತಿದ್ದರು. ಇದ್ಯಾವುದೂ ತನಗೆ ಸಂಬಂಧವೇ ಇಲ್ಲವೆನ್ನುವಂತೆ ಅಕ್ಕಮ್ಮ ಕುಳಿತಿದ್ದಳು ೬೫ರ ಗಡಿಯಲ್ಲಿನ ಆಕೆ ಇಂತಹ ಅದೆಷ್ಟು ಹಾಡುಗಳನ್ನು ಹಾಡಿಕೆ ಜೀವನ ಉದ್ದಕ್ಕೂ ಕೇಳುತ್ತಾ ಬಂದಿದ್ದಳು. ಅಕ್ಕಮ್ಮನತ್ತಲೇ ಕೈ ತೋರಿಸುತ್ತಾ ಅಭಿನಯ ಪೂರ್ಣವಾಗಿ ಹಾಡುಗಾರನು ಹಾಡುತ್ತಿದ್ದನು. ಕುಳಿತಲ್ಲಿಂದಲೇ ಅಕ್ಕಮ್ಮನು “ಹೋಗ ಮೂಳ ಕಾಣಂಗಿಲ್ಲೇನು? ನಾನು ಹರೆದಯ ಮಬ್ಬಿನ್ಯಾಗ ಇಲ್ಲ. ಮುದಕರ್ನ ತೋರಿಸಿ ಹರೆದವರು ಅಂತ ಹಾಡ್ತಾನ. ತಿಳಿಗೇಡಿ ತಂದ ತಿಳಿಗೇಡಿ” ಎಂದು ಗೊಣಗಿದಳು. ಎದುರು ಹಾಡುಗಾರರನ್ನು ನೋಡಿ ನಕ್ಕಳು. ತನ್ನ ವಯಸ್ಸನ್ನು ಗಮನಿಸದೇ ಎದುರು ಹಾಡುಗಾರನು ತನ್ನನ್ನು ಲೇವರಿ ಮಾಡುವ ರೀತಿ ಆಕೆಯಲ್ಲಿ ನಗೆ ಮೂಡಿಸಿತ್ತು. ಈ ಬಾರಿ ಹಾಡುಗಾರನಿಗೆ ಹಿಂದಿನಗಿಂತ ಹೆಚ್ಚು ಭಕ್ಷೀಸು ದೊರೆಯಿತು. ನಂತರ ವೇದಿಕೆಗೆ ಬಂದ ಅಕ್ಕಮ್ಮನು

“ಹರದದ್ದ ಹಚ್ಚಿಲ್ಲ, ತೆರೆದದ್ದ ಮುಚ್ಚಿಲ್ಲ
ನೀ ಹ್ಯಾಂಗ ಹುಟ್ಟಿದಿ?
ಕಂದನಾಗಿ ನೀ ಹ್ಯಾಂಗ ಬಂದಿ
……………………………”

ಎಂದು ಕುಣಿಯುತ್ತಲೇ ಹಾಡಿದಳು. ಜನರು ಇದಕ್ಕೂ ಕೇಕೇ ಹಾಕಿದರು. ಧಾರಳವಾಗಿ ಭಕ್ಷೀಸನ್ನು ನೀಡಿದರು. ಪೇಟ ಸುತ್ತಿಕೊಂಡ ವ್ಯಕ್ತಿ ವೇದಿಕೆ ಪ್ರವೇಶಿಸಿದನು. ಅವನು ಆ ಊರಿನ ಹಿರಿಯ ಗೌಡನಂತೆ “ಆಯ್ತು ಇಟ್ಟೊತ್ತನ ನಿಮಗ ಯಾವ ಹಾಡಾ ಬೇಕೋ ಕೇಳಿರಲ್ಲಾ? ಅಷ್ಟಸಾಕು. ಇನ್ನ ಮುಂದೆ ನೀವು ಶರಣರ ಹಾಡಾ ಹಾಡ್ತಿ. ಮತ್ತ ಬ್ಯಾರೆ ಎರಡೆರಡು ಅರ್ಥ ಇರು ಹಾಡಿಕೆ ಬ್ಯಾಡ” ಎಂದು ಆಜ್ಞೆ ಮಾಡಿದರು. ಸಭಿಕರು ಆ ಹಿರಿಯರ ಮಾತಿಗೆ ಎರಡು ಮಾತಿಲ್ಲದೆ ಒಪ್ಪಿಕೊಂಡರು. ಬಸವಣ್ಣ ಹಾಗೂ ಸಿದ್ಧರಾಮನ ಕುರಿತು ಹರದೇಶಿ ಹಾಡುಗಾರರು ಹಾಡಿದರೆ; ನಾಗೇಶಿ ಹಾಡುಗಾರಳು ಅಕ್ಕಮಹಾದೇವಿ ಹಾಗೂ ತಾಯಿ ಪಾರ್ವತಿಯ ಕುರಿತು ಹಾಡಿದಳು. ಕೊನೆಯಲ್ಲಿ ಮಂಗಳ ಪದವನ್ನು ಹಾಡಿದರು. ಹಾಡಿಕೆ ಕಾರ್ಯಕ್ರಮ ಮುಕ್ತಾಯವಾದಾಗ ಬೆಳಗಿನ ಜಾವ ೫.೩೦ ಆಗಿತ್ತು.

ಕೇವಲ ಎರಡು ಪ್ರದರ್ಶನಗಳನ್ನು ವೀಕ್ಷಿಸಿ ಇಡೀ ಹರದೇಶಿ-ನಾಗೇಶಿ ಹಾಡುಗಾರಿಕೆಯ ಕುರಿತು ಅಧಿಕೃತವಾಗಿ ಮಾತನಾಡಲು ಆಗುವುದಿಲ್ಲ. ಕನಿಷ್ಠ ೪೦ ಕಲಾ ಪ್ರದರ್ಶನವನ್ನಾದರೂ ವೀಕ್ಷಿಸಿ ಅಧ್ಯಯನಕ್ಕೆ ಒಳಪಡಿಸಿದಾಗ ಮಾತ್ರ ಹರದೇಶಿ-ನಾಗೇಶಿ ಕಲಾ ಪ್ರದರ್ಶನದ ಕುರಿತು ಥಿಯರಿಗಳನ್ನು ರೂಪಿಸಲು ಸಾಧ್ಯವಾಗುತ್ತೆ. ಹೀಗಾಗಿಯೆ ನಾನು ನೋಡಿದ ಹರದೇಶಿ-ನಾಗೇಶಿ ಹಾಡುಗಾರಿಕೆಯ ಎರಡು ಪ್ರದರ್ಶನದ ಕುರಿತು ವಿವರವನ್ನು ನೀಡಿದ್ದೇನೆ. ಈ ವಿವರಣೆಯ ಹಿನ್ನೆಲೆಯಲ್ಲಿಯೇ ಕೆಲವು ವಿಷಯಗಳನ್ನು ವಿಶ್ಲೇಷಿಸಿದ್ದೇನೆ.

ಮುಖ್ಯವಾಗಿ ನನ್ನ ಗಮನಕ್ಕೆ ಬಂದ ಸಂಗತಿಯೆಂದರೆ ವಿದ್ವಾಂಸರಿಂದ ಹಾಗೂ ಹಾಡುಗಾರ ಕಾಶಿನಾಥ ಅವರಿಂದ ಸಂಪಾದಿಸಲ್ಪಟ್ಟ ಹರದೇಶಿ-ನಾಗೇಶಿ ಹಾಡುಗಳಲ್ಲಿ ಆರಂಭವಾದ ಶುರುವಾದ ತರ್ಕವು ಕೊನೆಯವರೆಗೂ ವಿಸ್ತರಿಸಿಕೊಳ್ಳುತ್ತದೆ. ಎಷ್ಟೇ ಹಾಡುಗಳಿದ್ದರೂ ಅವು ಚೈನಿನಂತೆ ಒಂದರೊಳಗೊಂದು ಹೆಣೆದುಕೊಂಡಿರುತ್ತವೆ. ಆದರೆ ಪ್ರದರ್ಶನದ ಸಂದರ್ಭದಲ್ಲಿ ಆರಂಭದ ತರ್ಕವು ಹಾಡಿಕೆಯ ಕೊನೆಯವರೆಗೂ ಸಂಚರಿಸಿದ್ದು ಕಂಡು ಬರಲಿಲ್ಲ. ಹಾಡುಗಾರಳ/ನ ಪ್ರತಿ ಪ್ರವೇಶು ಹೊಸ ತಿರುವು ಪಡೆದುಕೊಳ್ಳುತ್ತಿದ್ದವು. ಹೀಗೆ ಪಡೆದುಕೊಳ್ಳುವ ಹೊಸ ತಿರುವು ಕೂಡ ಎದುರು ಹಾಡುಗಾರರು ಹಾಕುವ ಸವಾಲು, ಕೆಣಕುವ ರೀತಿ, ಬಳಸುವ ಭಾಷೆ, ಪಡೆಯುವ ಭಕ್ಷೀಸು ಹಾಗೂ ಪ್ರೇಕ್ಷಕರ ಅಭಿಲಾಷೆ ಹೀಗೆ ಎಲ್ಲವನ್ನು ಅವಲಂಭಿಸಿರುತ್ತದೆ.

ಮಹಿಳೆ-ಪುರುಷ ಹಾಡುಗಾರರಿಬ್ಬರೂ ದ್ವಂದ್ವಾರ್ಥವುಳ್ಳ ಭಾಷೆಯನ್ನೇ ಬಳಸಿದರು. ಪ್ರೇಕ್ಷಕರು ಅದನ್ನು ಆಸ್ವಾದಿಸಿದರು. ಹಾಡುಗಾರ ಅಕ್ಕಮ್ಮ ಹೇಳಿದ ಹಾಗೆ ಅವರವರ ಭಾವಕ್ಕೆ ತಕ್ಕ ಹಾಗೆ ಹಾಡಿಗೆ ಅರ್ಥ ಹೊಂದಿಸಿಕೊಂಡು ಆನಂದಿಸುತ್ತಾರೆ. ಲೈಂಗಿಕ ಲೇಪನವುಳ್ಳು ಭಾಷೆಯನ್ನು ಧಾರಳವಾಗಿ ಬಳಸಿದ ಬಾನಾಬಾಯಿ ಹೆಚ್ಚು ಭಕ್ಷೀಸನ್ನು ಪಡೆದರೆ, ಈ ಬಗೆಯ ಭಾಷೆಯನ್ನು ಬಳಸದ ಅಕ್ಕಮ್ಮ ಅತ್ಯಂತ ಕಡಿಮೆ ಭಕ್ಷೀಸನ್ನು ಪಡೆದಳು.