. ಗುರುಗಳಲ್ಲಿ ಜೀತಕ್ಕಿರುವುದು

ಹರದೇಶಿ ಇಲ್ಲವೆ ನಾಗೇಶಿ ಹಾಡುಗಳನ್ನು ಕಲಿಸುವ ಗುರುಗಳಿಗೆ ಸಂಬಳ ಕೊಡಲಿಕ್ಕೆ ಆಗದವರು ಗುರುಗಳ ಮನೆಯಲ್ಲಿಯೇ ಜೀತಕ್ಕಿದ್ದು ಕಲಿಯುವ ಪದ್ಧತಿ ಈಗಲೂ ಚಾಲ್ತಿಯಲ್ಲಿದೆ. ಜೀತಕಿದ್ದು ಹಾಡುಗಳನ್ನು ಕಲಿಯುವ ಸಂದರ್ಭದಲ್ಲಿ ಶಿಷ್ಯೆ/ಷ್ಯರಿಬ್ಬರೂ ಭಿನ್ನ ಸಮಸ್ಯೆಗಳನ್ನು ಎದುರಿಸುತ್ತಾರೆ. ಹಾಡು ಕಲಿಯುವುದಕ್ಕೆ ಸಂಬಳ ಕೊಡಲಿಕ್ಕಾಗದ ಶಿಷ್ಯರು ಗುರುಗಳ ಮನೆಯಲ್ಲಿ ಹಾಡು ಕಲಿಯುವ ಸಂದರ್ಭಗಳನ್ನು ಹೊರತು ಪಡಿಸಿದಂತೆ ಉಳಿದ ಸಮಯದಲ್ಲಿ ಅವರ ಮನೆಕೆಲಸಗಳನ್ನು, ಹೊಲದ ಕೆಲಸಗಳನ್ನು ನಿರ್ವಹಿಸುತ್ತಿರುತ್ತಾರೆ. ಅಂದರೆ ಗುರುಗಳಿಗೆ ಸಂಬಳ ಕೊಡಲು ಆಗದ್ದಕ್ಕಾಗಿ, ಶಿಷ್ಯರು ಗುರುಗಳಿಂದ ಯಾವ ವೇತನವನ್ನು ನಿರೀಕ್ಷಿಸದೇ ತಮ್ಮ ಶ್ರಮದಾನ ಮಾಡುತ್ತಿರುತ್ತಾರೆ. ಹೀಗೆ ಶಿಷ್ಯರು ಆರು ತಿಂಗಳು ಇಲ್ಲವೆ ಒಂದು ವರ್ಷದ ಅವಧಿಯವರೆಗೆ ವೇತನ ರಹಿತ ಶ್ರಮದಾನ ಮಾಡಿ, ಹಾಡುಗಳನ್ನು ಕಲಿತುಕೊಳ್ಳುತ್ತಾರೆ. ಹಾಡು ಕಲಿತುಕೊಂಡು ಹೊರಬಂದ ನಂತರ ನೇರವಾಗಿ ತಮ್ಮ ಹಾಡುವ ವೃತ್ತಿಯನ್ನು ಆರಂಭಿಸುತ್ತಾರೆ.

ಅತ್ಯಂತ ಆರ್ಥಿಕ ಸಂಕಷ್ಟದಲ್ಲಿರುವ ಮಹಿಳೆಯರು ಹರದೇಶಿ-ನಾಗೇಶಿ ಹಾಡುಗಳನ್ನುಕಲಿಯಲು ಬಯಸಿದರೆ, ಅವಳೆದುರಿಸಬೇಕಾದ ಸಮಸ್ಯೆಗಳು ಪುರುಷರಿಗಿಂತ ಭಿನ್ನವಾಗಿರುತ್ತವೆ ಎನ್ನುವುದು ನನ್ನ ಊಹೆ. ನನ್ನ ಊಹೆಯನ್ನು ಸ್ಪಷ್ಟಪಡಿಸಿಕೊಳ್ಳಲು ಎರಡು ಪ್ರಕರಣ ಅಧ್ಯಯನಗಳನ್ನು ಉಲ್ಲೇಖಿಸ ಬಯಸುವೆ.

ನನ್ನ ಸಣ್ಣ ವಯಸ್ಸಿನಾಗ ಅವ್ವನ ಕಳಕೊಂಡ್ಯಾ. ನಮ್ಮವ್ವಗೂ ದೇವರಿಗೆ ಬಿಟ್ಟಿದ್ದಕ್ಕ ನನಗ ಅಪ್ಪ ಇರ್ಲಿಲ್ಲ. ತಾಯಿ ಇಲ್ದ ತಬ್ಬಲಿ ಅಂತ ನಮ್ಮ ಚಿಗವ್ವ ಜ್ವಾಪಾನ ಮಾಡಾಕಂತ ಸೊಲ್ಲಾಪುರಕ್ಕ ಕರಕೊಂಡು ಹೋದ್ಲು. ನನಗ ತಮ್ಮ ಇದ್ದ್ರೂ ಒಂದs ಮಗನ್ನ ನಂಬುವಂಗಿಲ್ಲ ಅಂತ ನನ್ನ ಎಲ್ಲವ್ವಗ ಬಿಟ್ಟ್ರು. ಸೊಲ್ಲಾಪುರದಾಗ ಹಾಡ್ಕಿ ಸಿದ್ದವ್ವ ಇದ್ದ್ಲು. ಹಾಡ್ಕಿಯಿಂದ ಆಕಿ ಚಲೋ ಗಳಸ್ತಿದ್ಲು. ಅದಕ್ಕ ನಮ್ಮ ಚಿಗವ್ವ ನನ್ನನ್ನು ಸಿದ್ದವ್ವನ ಮನ್ಯಾಗ ಬಿಟ್ಟ್ಲು. ಸಿದ್ದವ್ವಗ ಪಗಾರ ಕೊಡು ಶಕ್ತಿಯಿಲ್ಲದ್ದಕ ಆಕಿ ಮನ್ಯಾಗ ಕೆಲಸ ಮಾಡಿಕೊಂಡು ಎರಡು ವರ್ಷ ಕಲ್ತೇನಿ. ಎರಡ ವರ್ಷ ಆಗಿಂದ ಸಿದ್ದವ್ವ ವಿಜಾಪುರಕ್ಕ ಹೋದ್ಲು. ಆಮ್ಯಾಲೆ ರೆಹಮಾನ್ ಅವರು ಹಾಡ್ಕಿ ಕಲಸಿದ್ರು. ಅವ್ರು ಕಲ್ಸು ವ್ಯಾಳಾಕ ನಂದು ಉಡಿ ತುಂಬೋ ಕಾರ್ಯಾ ಇತ್ತು. ಹಾಡ್ಕಿ ಕಲ್ತಕೊಳ್ಳಾಕ ರೊಕ್ಕ ಇರ್ಲಿಲ್ಲ. ಅದಕ್ಕ ರೆಹಮಾನ್ ಅವರ ಜೋಡಿ ನನ್ನ ಮೊದಲ ರಾತ್ರಿ ಆಯ್ತು. ಹದಿಮೂರು ವರ್ಷ ವಯಸ್ಸಿನಾಗ ದೊಡ್ಡೇಕಿ ಆಗೇನಿ. ಅದs ವಯಸ್ಸಿಗಿ ರೆಹಮಾನ್ ಅವ್ರ ಜೊತೆ ಉಡಿ ತುಂಬಿಸಿಕೊಂಡೇನಿ. ಆಗ ರೆಹಮಾನ್ ಅವರ್ದು ನಲ್ವತ್ತು ವರ್ಷ ವಯಸ್ಸು. ನಮ್ಮಿಬ್ಬರ ಒಡನಾಟ ಹೆಂಗ ಬೆಳಿತೈತಿ? ಹಾಡ್ಕಿ ಕಲಿಬೇಕು ಅಂತ ಅವರ ಜೋಡಿ ಸಂಬಂಧ ಬೆಳಿಸಿದ್ಯಾ. ಬ್ಯಾರೆ ಗಂಡಿ ನ ಜೋಡಿ ಉಡಿ ತುಂಬಕೊಂಡಿದ್ರ ಅಂವ ಯಾಕ ನನಗ ಹಾಡ್ಕಿಗಿ ಬಿಡತಾನು? ರೆಹಮಾನ ಅವ್ರು ನನ್ನ ಜೋಡಿ ಸಂಬಂಧ ಇಟ್ಕೊಂಡಿದ್ದು ಅವ್ರ ಹೆಂಡತಿಗೂ ಗೊತ್ತಿತ್ತು. ನಾನು ಅವ್ರ ಮನ್ಯಾಗ ಎಂಟು ವರ್ಷ ಇದ್ದ್ಯಾ. ನನ್ನ ಮಕ್ಕಳ ಹೊಟ್ಟೆ-ಬಟ್ಟಿ ನೋಡ್ಯಾರ. ರೆಹಮಾನ್ ಅವ್ರು ನಾಗೇಶಿ ಹಾಡ ಹಾಡ್ತಿದ್ರು. ತಮಗ ಹಾಡ್ಕಿಗಿ ಎಲಿ (ಆಹ್ವಾನ) ಬಂದಾಗ, ಎದುರು ಹಾಡಾಕ, ನನಗೂ ಎಲಿ ಕೊಡ್ಸಿ ಕರಕೊಂಡು ಹೋಗ್ತಿದ್ರು. – ಶಿವಮ್ಮ

ನಾನು ಹುಟ್ಟಿ ಬೆಳೆದ ಊರು ಸೊಲ್ಲಾಪುರದ ಹತ್ತಿರದ ಮಂದರೂಪ. ನಮ್ಮವ್ವ ಅಪ್ಪಗ ನಾವು ಆರು ಜನಾ ಮಕ್ಕಳು. ನಾಕ ಮಂದಿ ಹೆಣ್ಣಮಕ್ಕಳಿದ್ರ ಇಬ್ಬರು ಗಣಮಕ್ಕಳು. ಎಲ್ಲಾರೊಳಗೆ ನಾನs ಹಿರೇಕಿ. ಬಾಳ ಬಡತನ ನಮ್ಮದು. ನಮ್ಮ ಚಿಗವ್ವಗ ಮಕ್ಕಳs ಇರ್ಲಿಲ್ಲ. ನಮ್ಮನ್ಯಾಗ ದೇವಿ ಕಾಟಾನೂ ಇತ್ತು. ಹೀಂಗಾಗಿ ನನ್ನ ದೇವಿ ಪಟ್ಟಕ್ಕ ಹಾಕಿದ್ದ್ರು. ಸಣ್ಣ ವಯಸಿನ್ಯಾಗ ಊಟ ಇಲ್ಲದ್ದಕ ಒಂದೊಂದು ದಿನಾ, ಎರಡೆರಡ ದಿನಾ ಉಪಾಸ ಇದ್ದೇನಿ. ನನ್ನ ತಂಗ್ದೇರು, ತಮಗೋಳು ಉಪಾಸ ಇರ್ತಿದ್ರು. ನಮಗ ಉಪಾಸ ಇರೂದ ಬಿಟ್ಟ್ರ ಬ್ಯಾರೆ ದಾರಿ ಇರ್ಲಿಲ್ಲ. ಹಾಡಿಕಿ ಕಲ್ತರ ದುಡಿಕಿ ಚೆನ್ನಾಗಿ ಆಗತ್ತಂತ ಹೇಳಿದ್ದಕ್ಕೆ ನನ್ನನ್ನು ಗುರಗೋಳ ಹತ್ತಿರ ಹಾಡಿಕಿ ಕಲಿಯಾಕ ಇಟ್ಟ್ರು. ನಾನು ಹಾಡಕಿ ಕಲಿಯೋದು ಕೂಡಾ ನಾಲ್ಕಾರು ಹಿರಿ ಮಂದ್ಯಾಗ ಮಾತುಕತೆ ಆಗಿತ್ತು. ‘ಸುಂದರವ್ವ ನನ್ನ ಹತ್ರ ಆರ ವರ್ಷ ಇರಬೇಕು. ಹಾಡಕಿ ಕಲಿಸಿಂದ ನಾನs ಅಕಿನ್ನ ಊರೂರಿಗೆ ಹಾಡಾಕ ಕರಕೊಂಡು ಹೋಗ್ತಿನಿ. ಆಕಿಗಿ ಭಕ್ಷೀಸು ಬರ್ಲಿ, ಪಗಾರ ಬರ್ಲಿ ಅದನ್ನು ನಾನs ತಗೋತಿನಿ. ಅಂದ್ರ ಈಕಿಗಿ ಪಗಾರ ತಗೊಳಾರ್ದ ಕಲಸ್ತೀನಿ, ಅಂತ ಶರತ್ ಹಾಕಿ ಮಾತಾಡಿದ್ರು. ಮತ್ತ ಅದ್ನ ಪೇಪರ್ನಾಗ ಬರೆದು ನಮ್ಮವ್ವ ಅಪ್ಪನ ಕಡಿಂದ ಹೆಬ್ಬೆಟ್ಟು ಒತ್ತಿಸಿಕೊಂಡಾ. ಮಂದರೂಪದಾಗ ನಮ್ಮವ್ವ ಅಪ್ಪಾ ಇದ್ದ್ರೂ ನಾನು ಅವ್ರು ಹತ್ರ ಹೋಗುವಂಗಿರಲಿಲ್ಲ. ನನ್ನ ಕಲಿಸಾಕ ಮಾಡಿದ ಶರತ್ಗಳಲ್ಲಿ ಇದು ಒಂದು. ಅವ್ರ ಹೊಲಮನಿ ಕೆಲಸ ಮಾಡಕೊಂತ, ಹಾಡಕಿ ಕಲಕೊಂಡ ಇದ್ದ್ಯಾ. ಹಾಡಕಿ ಕಲಿಯಾಕ ಹೋದಾಗ ನನ್ನ ವಯಸ್ಸು ಹನ್ನೆರಡು ವರ್ಷ ಇತ್ತು. ಹದಿಮೂರನೇ ವರ್ಷ ವಯಸ್ಸಿಗೆ ಗುರಗೊಳ ಮನ್ಯಾಗ ದೊಡ್ಡೇಕಿ ಆದ್ಯಾ. ದೊಡ್ಡೇಕಿ ಆಗಿ ಎರಡು ಸಲ ಮುಟ್ಟ ಆಗಿದ್ದ್ಯಾ ಅಷ್ಟs. ಒಂದ ರಾತ್ರಿ ಮಲಗಿದ್ದಾಗ ಮಲಿಕಾರ್ಜೂನಪ್ಪ ನನ್ನ ಮ್ಯಾಲೆ ಕ್ವಾಣ ಎಗರಿದಂಗ ಎಗರಿ ಹಾಳ ಮಾಡಿದಾ. ನನ್ನ ಮ್ಯಾಗ ಎನ ನಡಿತದ ಅನ್ನೋದು ಗೊತ್ತಾಗೂ ಮುಂಚೇನ ಎಲ್ಲಾ ಅನ್ಯಾಯ ನಡದ ಹೋಗಿತ್ತು. ನನಗ ಬಾಳs ತ್ರಾಸ ಆಯ್ತು. ಯಾರ ಮುಂದ ಏನ್ನೂ ಮಾತಾಡುವಂಗಿರಲಿಲ್ಲ. ಹೀಂಗ ನನ್ನ ಮ್ಯಾಲ ಎರಡ ವರ್ಷ ತನಕ ಅತ್ಯಾಚಾರ ಮಾಡಿದಾ. ನಮ್ಮವ್ವ ಅಪ್ಪಗ ಹೇಳಬೇಕು, ಎಲ್ಲಾ ಹಿರಿಯಾರ ಎದರಿಗೆ ಮಾತನಾಡಿಯೇ ನನ್ನ ಇಲ್ಲಿ ಹಾಡಕಿಗಿ ಬಿಟ್ಟಿದ್ದು, ಎಲ್ಲೂ ನನ್ನ ಬಳಸ್ಕೊಬಹುದು ಅಂತ ಮಾತುಕತೆ ಆಗಿರ್ಲಿಲ್ಲ ಅನ್ನು ತಿಳುವಳಿಕಿ ಆ ವಯಸ್ಸಿಗಿ ನನಗೆಲ್ಲಿ ಬರ್ಬೇಕು? ನನ್ನ ಹಾಡಕಿಗೆ ಕರಕೊಂಡು ಹೋದ್ರೂ ಅಲ್ಲಿ ಬಂದ ರೊಕ್ಕಾನ ತಾನ ತಗೊತಿದ್ದಾ. ನಿಮ್ಮವ್ವಾ ಅಪ್ಪಗ ನಾ ಮಾಡೂದು ಹೇಳಿದ್ರ ನಿನಗ ಹಾಡಕಿ ಕಲ್ಸೂದು ಬಿಟ್ಟ ಬಿಡತೇನು. ಆಗ ಮಂದಿ ಹಲಕ್ಕ ಕೂಲಿ ಕೆಲಸಕ್ಕ ಹೋಗಬೇಕಾಗ್ತೈತಿ ಅಂತಿದ್ದಾ. ಹಾಡಕಿ ಕಲಿಯೋದು ಬಿಟ್ಟ್ರ ಉಪಜೀವನಕ್ಕ ಕಷ್ಟ ಆಗುತ್ತಂತ ಎರಡು ವರ್ಷ ಮಟಾ ಅವನಿಂದ ಎಷ್ಟೇ ಹಿಂಸೆಯಾದ್ರೂ ತಡಗೊಂಡ್ಯಾ. ಆಮ್ಯಾಲಾ ಯಾಕೋ ಇಂವಾ ಕೊಡು ಹಿಂಸೆನ ತಡಕೊಳ್ಳಾಕಾಗ್ಲಿಲ್ಲ. ಅವ್ವಗ ಹೇಳಿದ್ಯಾ. ಅವ್ವ ಅಪ್ಪಗ ಹೇಳಿದ್ಲು. ಇಬ್ಬರೂ ಗಾಬರಿಯಾದ್ರು. ಯಾಕಂದ್ರ ನಮ್ಮನ್ನ ದೇವ್ರಿಗಿ ಬಿಟ್ಟಿದ್ರೂ, ಉಡಿ ತುಂಬುತನಕ ಯಾವ ಗಂಡಸರ್ನೂ ಮುಟ್ಟಿಸ್ಕೊಬಾರದು. ಮುಟ್ಟಸ್ಕೊಂಡ್ರ ದೇವಿಗೆ ಅಪಚಾರಾ ಮಾಡಿದ್ಹಂಗ ಅಂತ ನಂಬತೇವಿ. ಬಡತನಾ, ನಮ್ಮವ್ವಾ, ಅಪ್ಪನ್ನ ಬಾಯಿನ್ನ ಕಟ್ಟಿತ್ತು. ಎಂಟ ದಿನಾ ಕುಂತು ವಿಚಾರ ಮಾಡಿ ಹಾಡಕೀನ ಬ್ಯಾಡಾ, ಕೂಲಿ ನಾಲಿ ಮಾಡ್ಕೊಂಡು ತಿನ್ನುವಂತೆ, ಹಾಡಕಿ ಕಲಿಯೂದು ಬಿಟ್ಟ ಬಾ ಅಂದ್ರು. ಅಷ್ಟೊತ್ತಿಗಾಲೇ ಹಾಡಕ್ಯಾಗ ಹೆಸರ ಮಾಡಿದ್ನಿ. ಉಪಜೀವನಕ ತೊಂದರಿ ಆಗ್ಲಿಲ್ಲ. ಈಗ ಗುಲ್ಬರ್ಗಾಕ ಬಂದ ತಳಾ ಊರೇನಿ. – ಸುಂದವ್ವ ಗುಲ್ಬರ್ಗಾ

ನಮ್ಮವ್ವಗ ನಾವು ಏಳು ಜನ ಮಕ್ಳು. ನಾನs ಮೊದ್ಲೆದಕಿ. ಉಳಿದವರೆಲ್ಲ ನಾಲ್ಕು ಜನ ತಂಗಿದೇರು. ಉಳಿದ ಇಬ್ಬ್ರು ತಮ್ಮದೇರು. ನಮ್ಮದು ಬಡತನಾ ಅಂದ್ರ ಬಡತನಾ. ಅವ್ರಿವ್ರು ತಿಪ್ಪ್ಯಾಗ ಉಂಡು ಬಿಟ್ಟ ಎಲಿಯಾಗಿನ ಮುಸುರಿ ತಿಂದ ಹೊಟ್ಟಿ ತುಂಬಿಸ್ಕೊಂಡೇವಿ. ನಿನ್ನ ಮಗಳಿಗಿ ಹಾಡಿಕೆ ಕಲ್ಸಿ ಮಸ್ತಂಗ ರೊಕ್ಕ ಗಳಿಸುವಂಗ ಮಾಡ್ತೇನಿ ಅಂತ ಮಲ್ಲಿಕಾರ್ಜುನ ನಮ್ಮವ್ವಗ ಬಂದ ಹೇಳದ್ರು. ಮತ್ತೊಬ್ಬರ ಎಂಜಲಾ ತಿಂದು ಬದುಕು ಕರ್ಮದಾಗಿಂದ ಹೊರಗ ಬಂದ್ರ ಸಾಕು ಅಂತ ನಮ್ಮವ್ವ ನನಗ ಹಾಡಿಕೆ ಕಲಿಯಾಕ ಹಚ್ಚಿದ್ಲು. ನಾನೇನು ಮಲ್ಲಿಕಾರ್ಜುನ ಅವ್ರ ಮನಿಯಾಗ ಇರ್ಲಿಲ್ಲ. ನಮ್ಮ ಗುಡಿಸಲಕ್ಕ ಅವ್ರ ಬಂದ ಹೇಳಿಕೊಟ್ಟು ಹೋಗ್ತಿದ್ರು. ಅದs ದೊಡ್ಡೇಕಿ ಅಗಿದ್ನಿ. ನಸಕಿನ್ಯಾಗ ಕಲ್ಸಾಕ ಬಂದಾಗ ನನ್ನ ಹಾಳ ಮಾಡಿದ್ರು. ಆಗ ನಂಗ ಗುರುಗೋಳು ಹಾಳ ಮಾಡ್ತಾರ ಅನ್ನೋದು ಗೊತ್ತಾಗಲಿಲ್ಲ. ನಂಗ ಬ್ಯಾಡಾದದ್ದನ್ನು ಮಾಡ್ತಾರ ಅನ್ನೋದು ಮಾತ್ರ ಗೊತ್ತಾಗ್ತಿತ್ತು. ಅವ್ವಗ ಹೇಳ ಬ್ಯಾಡಾ ಅಂದಿದ್ರು. ಆದ್ರ ಅವ್ವಗ ಒಂದಿನಾ ಗೊತ್ತಾಗ್ಹೋಯ್ತು. ನಮ್ಮವ್ವಾ ಒದರಾಡಿದ್ಲು. ‘ಹಾಡಿಕೆ ಕಲ್ಸೂದು ಬಿಟ್ಟ ಬಿಡ್ತೇನಿ, ಕೂಳ-ಕೂಳ ನೀರ-ನೀರ ಅಂದ್ರ ಸಾಯ್ತಿ’. ಅಂತ ನಮ್ಮವ್ವನ್ನ ವಾಪಸ್ ಬೈದಾ. ಹೆಂಗಿದ್ರೂ ಉಡಿ ತುಂಬ್ತಿರಲ್ಲಾ ಅದು ನಂಗs ಮಾಡೇನಿ ಅನಕೊಳ್ರಿ ಅಂತಂದಾ. ಅದಕ್ಕೂ ಒಂದು ಪದ್ದುತ ಇರ್ತದ ಅಂತ ನಮ್ಮವ್ವ ಹುಚ್ಚ ಹಿಡದ್ಹಂಗ ಅಳಾಕತ್ತಿದ್ಲು. ಬ್ಯಾರೆ ದಾರಿ ಕಾಣ್ದ ಒಂದು ಮೂರ್ತಾ ನೋಡಿ ಅಂವನ ಜೋಡಿನs ಉಡಿ ತುಂಬಿದ್ಲು. ಮುಂದ ನಮ್ಮವ್ವ ಯಾವ್ದೊ ಜಡ್ಡ ಬಂದ ಸತ್ತ್ಲು. ನನಗ ಉಡಿ ತುಂಬು ಮೊದ್ಲು ಮಲ್ಲಾಕಾರ್ಜುನ ಹಾಳ ಮಾಡಿದ್ದಕ್ಕ ದೇವಿ ಸಿಟ್ಟಾಗಿ ಜಡ್ಡ ತಂದಾಳ ಅನಕೊಂತ ಸತ್ತ್ಲು. ಹತ್ತ ವರ್ಷ ಆಯ್ತು ಅವನ ಜೊತೇನ ಅದೇನಿ. ಅಂವಗ ಈಗ ೫೫ ವರ್ಷ ವಯಸ್ಸು. ನಂಗೀಗ ೨೫ ವರ್ಷ ವಯಸ್ಸು. ಹಾಡಿಕ್ಯಾಗ ದುಡಕೋಂತ ಹೊಂಟೇನಿ. – ನೀಲಮ್ಮ ಕಾಂಬಳೆ, ಮಂದರೂಪ

ಮೇಲಿನ ಮೂರೂ ಅನುಭವ ಕಥನಗಳು ಹರದೇಶಿ-ನಾಗೇಶಿ ಮಹಿಳಾ ಹಾಡುಗಾರರಿಗೆ ತಂದಿಟ್ಟ ಸಂಕಟಗಳನ್ನೇ ಅನಾವರಣಗೊಳಿಸುತ್ತವೆ. ಕಲಿಕೆಯ ಸಂದರ್ಭಗಳಲ್ಲಿ ಪುರುಷ ಹಾಡುಗಾರರ್ಯಾರೂ ಮಹಿಳಾ ಹಾಡುಗಾರರು ಎದುರಿಸಿದ ಸಮಸ್ಯೆಗಳನ್ನು ಎದುರಿಸಿಲ್ಲ. ಗುರುಗಳಿಗೆ ಸಂಬಳ ಕೊಟ್ಟು ಹಾಡುಗಳನ್ನು ಕಲಿಯಲಿಕ್ಕಾಗದ ಪುರುಷರು ಅವರ ಹೊಲ ಮನೆಗೆಲಸಗಳನ್ನು ಮಾಡಿ ಕಲಿತಿದ್ದಾರೆ. ಅಂದರೆ ವೇತನ ರಹಿತ ಶ್ರಮ ದಾನವನ್ನು ಪುರುಷ ಹಾಡುಗಾರರು ಮಾಡಿದ್ದಾರೆ. ಆದರೆ ಅವರಿಗೆಂದೂ ಲೈಂಗಿಕವಾಗಿ ದುರ್ಬಳಕೆಗೊಳ್ಳುವ ಪ್ರಸಂಗಗಳು ಎದುರಾಗಲೇ ಇಲ್ಲ. ಮಹಿಳೆಯರನ್ನು ಅದರಲ್ಲೂ ತಳ ಸಮುದಾಯಗಳ ಮಹಿಳೆಯರನ್ನು ಲೈಂಗಿಕವಾಗಿ ದುರ್ಬಳಕೆಗೊಳಿಸುವದನ್ನು ಧಾರ್ಮಿಕ ನೆಲೆಯಲ್ಲಿ ಅಧಿಕೃತಗೊಳಿಸಲಾಗಿದೆ. ದೇವರಿಗೆ ಮೀಸಲಿರಿಸಿದ ಹುಡುಗಿ ಇಲ್ಲವೆ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತದೆ ಎಂಬುದನ್ನು ಕಾನೂನು ಹಾಗೂ ಸಮಾಜ ಎರಡೂ ಆಲೋಚಿಸುವುದಿಲ್ಲ. ಇಡೀ ಸಮಾಜದಲ್ಲಿನ ಪುರುಷರಿಗೆ ಅವರ ಮೇಲೆ ಲೈಂಗಿಕ ಹಕ್ಕು ಇರುತ್ತದೆ ಎಂದು ಪರಿಭಾವಿಸಿದ್ದರಿಂದಲೇ ಅವರ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತದೆ ಎಂಬುದನ್ನು ಯಾರೂ ಆಲೋಚಿಸುವುದಿಲ್ಲ. ಪುರುಷರು ಲೈಂಗಿಕವಾಗಿ ದುರ್ಬಳಕೆಗೊಳ್ಳುವ ಪ್ರಸಂಗಗಳೇ ಎದುರಾಗವುದಿಲ್ಲ. ಯಾಕೆಂದರೆ ಲೈಂಗಿಕ ದುರ್ಬಳಕೆಗೆ ಒಳಗಾಗುವವರು ಮಹಿಳೆಯರು, ಲೈಂಗಿಕ ದುರ್ಬಳಕೆಗೆ ಒಳಪಡಿಸುವವರು ಪುರುಷರಾಗಿರುತ್ತಾರೆ. ಪುರುಷನನ್ನು ಲೈಂಗಿಕ ಸ್ವೇಚ್ಛಾಚಾರದ ನೆಲೆಯಲ್ಲಿಯೇ ನಿರ್ವಚಿಸಲಾಗಿದೆ. ಮಹಿಳೆಯರಲ್ಲಿ ಕೆಲವರನ್ನು ಜಾತಿಗನುಗುಣವಾಗಿ ಲೈಂಗಿಕ ಪಾವಿತ್ರ್ಯದ ನಿರ್ಬಂಧಕ್ಕೆ ಒಳಪಡಿಸಿದ್ದಾರೆ. ಮತ್ತೆ ಕೆಲವರಿಗೆ ಲೈಂಗಿಕತೆಯನ್ನೇ ಸೇವೆಯಾಗಿಸಿ, ಅವರನ್ನು ಸಾರ್ವಜನಿಕ ಸ್ವತ್ತನ್ನಾಗಿಸಲಾಗಿದೆ. ಹೀಗಾಗಿ ಪುರುಷರು ಲೈಂಗಿಕ ದುರ್ಬಳಕೆಗೆ ಒಳಪಡುವುದು, ಬಿಡುವುದು ಚರ್ಚಿತ ವಿಷಯವಾಗುವುದೇ ಇಲ್ಲ. ಈ ವಿಷಯ ಚರ್ಚೆಗೆ ಬಂದರೆ ಭಾರತೀಯ ಕುಟುಂಬಗಳಿಗಿರುವ ಪಾವಿತ್ರ್ಯ ಪ್ರಶ್ನಾರ್ಹವಾಗುತ್ತದೆ. ಕುಟುಂಬಗಳ ಪಾವಿತ್ರ್ಯವನ್ನು ಕಾಯ್ದುಕೊಳ್ಳಬೇಕಿದ್ದರೆ ಮದುವೆಯ ಚೌಕಟ್ಟಿನೊಳಗೆ ಬರುವ ಮಹಿಳೆಯರು ಲೈಂಗಿಕ ಪಾವಿತ್ರ್ಯತೆಯನ್ನು ಹಾಗೂ ನಿಷ್ಠೆಯನ್ನು ಕಾಯ್ದುಕೊಳ್ಳಬೇಕು. ಇದೇ ನಿರ್ಬಂದ ಹಾಗೂ ನಿರೀಕ್ಷೆಗಳು ಮದುವೆಯ ಚೌಕಟ್ಟಿನ ಹೊರಗೆ ಬರುವ ಮಹಿಳೆಯರ ಕುರಿತಿರುವುದಿಲ್ಲ. ಅವರ ದೇಹದ ಮೇಲೆ ಎಲ್ಲ ಪುರುಷರಿಗೂ ಹಕ್ಕಿದೆ ಎಂದೇ ನಂಬಲಾಗಿದೆ. ಲೈಂಗಿಕ ಸಂಬಂಧವನ್ನು ಬಯಸಿ ಬಂದ ಪುರುಷರೆಲ್ಲರ ಬಯಕೆಗಳನ್ನು ಪೂರ್ಣಗೊಳಿಸುವುದು ಇವರ ಕರ್ತವ್ಯವಾಗಿರುತ್ತೆ ಎಂದು ನಂಬಿಸಲಾಗಿದೆ. ‘ಜೋಗತಿಯರು’, ‘ಬಸವಿಯರು’ ತಮ್ಮ ಕುರಿತಿರುವ ಸಮಾಜದ ಗ್ರಹಿಕೆಯ ಹಾಗೆ ಲೈಂಗಿಕ ಕೇಂದ್ರಿತವಾಗಿ ಬದುಕನ್ನು ಪರಿಭಾವಿಸಿರುವುದಿಲ್ಲ. ಸಮಾಜದ ಗ್ರಹಿಕೆಯ ಹಾಗೆ ಲೈಂಗಿಕತೆಯೇ ಅವರ ದುಡಿಮೆಯಾಗಿರುವುದಿಲ್ಲ. ಲೈಂಗಿಕತೆಯನ್ನೇ ಪ್ರಧಾನ ದುಡಿಮೆಯಾಗಿಸಿಕೊಳ್ಳಬೇಕೆಂಬ ಸಾಮಾಜಿಕ ಒತ್ತಡ ಅವರ ಮೇಲಿದ್ದರೂ, ಆ ಒತ್ತಡವನ್ನು ಮೀರಿ ತಮಗೆ ಬೇಕಾದ ಬದುಕನ್ನು ಕಟ್ಟಿಕೊಳ್ಳಬಯಸುತ್ತಾರೆ. ಹರದೇಶಿ-ನಾಗೇಶಿ ಹಾಡುಗಾರಿಕೆಯ ಕ್ಷೇತ್ರಕ್ಕೆ ಅವರು ಪ್ರವೇಶಿಸಿದ್ದು ‘ದೇವದಾಸಿ’ ಎನ್ನದೆ ‘ಕಲಾಕಾರಳು’ ಎಂದು ಗೌರವ ಪಡೆಯುವ ಹಾಗೂ ತಮ್ಮ ಆರ್ಥಿಕ ಹಿನ್ನೆಲೆಯನ್ನು ಸುಧಾರಿಸಿಕೊಳ್ಳುವ ಬಯಕೆಯ ಹಿನ್ನೆಲೆಯಲ್ಲಿ. ದುರಂತ ಎಂದರೆ ಇಲ್ಲೂ ಅವರ ಮೇಲೆ ಸಾಮಾಜಿಕ ಗ್ರಹಿಕೆಯೇ ಪ್ರಬಲವಾಗಿ ದಬ್ಬಾಳಿಕೆ ನಡೆಸುತ್ತದೆ. ‘ಜೋಗತಿ’ ಇಲ್ಲವೆ ‘ಬಸವಿ’ಯರಾದ ಕಾರಣಕ್ಕೆ ಹಾಡಿಕೆ ಕಲಿಯುವ ಸಂದರ್ಭದಲ್ಲಿ ಗುರುಗಳಿಂದಲೇ ಅಪ್ರಾಪ್ತ ವಯಸ್ಸಿನಲ್ಲಿ ಅತ್ಯಾಚಾರಕ್ಕೊಳಗಾಗಿದ್ದಾರೆ. ಇಂತಹ ಭೀಕರ ಘಟನೆಗಳು ಸುದ್ದಿಯಾಗುವುದೇ ಇಲ್ಲ. ಇದನ್ನುಯಾವ ಮಹಿಳಾ ಚಳುವಳಿಗಾರರೂ ಪ್ರತಿಭಟಿಸುವುದಿಲ್ಲ. ನನಗೆ ತಿಳಿದ ಮಟ್ಟಿಗೆ ಮಹಿಳಾ ಚಳುವಳಿಗಾರರಿಗೆ, ಮಹಿಳಾ ಅಧ್ಯಯನಕಾರರಿಗೆ ತಳ ಸಮುದಾಯಗಳ ಅಪ್ರಾಪ್ತ ವಯಸ್ಸಿನ ಬಾಲಕಿಯರು ಇಂತಹ ಭೀಕರ ಅತ್ಯಾಚಾರಗಳಿಗೆ ನಿತ್ಯ ಒಳಗಾಗುತ್ತಾರೆ ಎನ್ನುವ ತಿಳುವಳಿಕೆಯೇ ಇಲ್ಲ; ಇನ್ನು ಪ್ರತಿಭಟನೆಯ ಮಾತು ದೂರ ಉಳಿಯಿತು. ಬೇಕೋ ಬೇಡವೋ ಹಸಿವಿನಿಂದಲೇ ಸಾಯಬೇಕಾದ ಬದುಕಿನ ಒತ್ತಡಗಳನ್ನು ಮೀರಲು, ತಂದೆ ಇಲ್ಲವೆ ತಾತನ ವಯಸ್ಸಿನ ಗುರುಗಳನ್ನು ತಮ್ಮ ಬದುಕಿನ ಸಂಗಾತಿಗಳಾಗಿ ಒಪ್ಪಿಕೊಂಡಿದ್ದಾರೆ. ಪ್ರತಿಭಟಿಸಲು ದಾರಿ ಕಾಣದೆ ಗುರುಗಳಿಂದ ನಿತ್ಯ ಅತ್ಯಾಚಾರಕ್ಕೊಳಗಾದ ಉದಾಹರಣೆಗಳು ಬೇಕಾದಷ್ಟಿವೆ.

ಹರದೇಶೀ-ನಾಗೇಶಿ ಹಾಡುಗಳನ್ನು ಕಲಿಸುವುದು ಹಾಗೂ ಅದರ ರಂಗ ತಾಲೀಮು ನಡೆಯುವುದು ಬೆಳಗಿನ ಜಾವ ನಾಲ್ಕರಿಂದ ಇಲ್ಲವೆ ಐದರಿಂದ ಏಳರವರಗೆ, ರಾತ್ರಿ ಎಂಟರಿಂದ ಇಲ್ಲವೆ ಒಂಬತ್ತರಿಂದ ಹತ್ತು ಹನ್ನೊಂದರವರಗೆ. ಶ್ರಮ ಪ್ರಧಾನವಾದ ದುಡಿಮೆಯನ್ನೇ ನಂಬಿದ ತಳಸಮುದಾಯದ ಜನತೆ ರಾತ್ರಿ ಎಂಟರೊಳಗೆ ಮಲಗುತ್ತಾರೆ. ಬೆಳಿಗ್ಗೆ ಐದು ಇಲ್ಲವೆ ಆರು ಗಂಟೆಯೊಳಗಡೆ ಏಳುತ್ತಾರೆ. ಮಲಗಿದವರು ಸತ್ತವರು ಇಬ್ಬರೂ ಒಂದೇ ಎನ್ನುವ ಆಡುನುಡಿಯೊಂದು ನಮ್ಮಲ್ಲಿ ಚಾಲ್ತಿಯಲ್ಲಿದೆ. ಶ್ರಮಪ್ರಧಾನದ ದುಡಿಮೆಯು ಹಾಡಿಕೆ ಹುಡುಗಿಯರ ಕುಟುಂಬದವರನ್ನು ಆಳವಾದ ನಿದ್ರೆಗೆ ತಳ್ಳಿರುತ್ತದೆ. ಹೀಗಾಗಿ ಮನೆಯ (ಗುಡಿಸಲು)ಲ್ಲಿಯೇ ತಮ್ಮ ಅಪ್ರಾಪ್ತ ವಯಸ್ಸಿನ ಮಗಳ ಮೇಲೆ ಅತ್ಯಾಚಾರ ನಡೆಯುತ್ತಿದ್ದರೂ, ಅದರ ಪರಿವೆಯಿಲ್ಲದೆ ಬದುಕು ಸಾಗಿಸುತ್ತಿರುತ್ತಾರೆ. ಹಾಡು ಕಲಿಯ ಬಯಸುವ ಅಪ್ರಾಪ್ತ ಬಾಲಕಿ ತೀರ ಅಸಹಾಯಕಳಾಗಿ ತನ್ನ ಮೇಲಿನ ಅನ್ಯಾಯಗಳನ್ನು ಸಹಿಸಿಕೊಳ್ಳುತ್ತಿರುತ್ತಾಳೆ. ಈ ಸಹಿಸುವಿಕೆಯನ್ನು ‘ಒಪ್ಪಿಗೆ’ ಎಂದು ಅರ್ಥಯಿಸುವುದು ಮಾನವೀಯತೆ ಎನಿಸಿ ಕೊಳ್ಳುವುದಿಲ್ಲ. ಹೀಗೆ ಹಾಡು ಕಲಿಯಲು ಬಯಸಿದ ಹುಡುಗಿಯರ ಮೇಲೆ ನಿತ್ಯ ಅತ್ಯಾಚಾರ ವೆಸಗುವ ಗುರುಗಳಿಗೆ ತಾವು ಅನ್ಯಾಯ ಮಾಡುತ್ತಿದ್ದೇವೆ ಎಂದೆನಿಸುವುದೇ ಇಲ್ಲ. ಗುರುಗಳ ಹೊಲ, ಮನೆಗೆಲಸಗಳಲ್ಲಿ ವೇತನ ರಹಿತವಾಗಿ ಹುಡುಗಿ ದುಡಿಯುವುದನ್ನು ಹಾಗೂ ಹುಡುಗಿ ಹಾಡುವ ಸಂದರ್ಭದಲ್ಲಿ ಬಂದಂತಹ ಹಣವನ್ನು ತೆಗೆದುಕೊಳ್ಳುವುದನ್ನು ಇವ್ಯಾವುಗಳನ್ನು ಗುರುಗಳು ಲೆಕ್ಕಕ್ಕೆ ಹಿಡಿಯುವುದಿಲ್ಲ. ಹುಡುಗಿಯರು ಇಲ್ಲವೆ ಮಹಿಳೆಯರ ಶ್ರಮದಾಯಕ ದುಡಿಮೆಯನ್ನು ಸಮಾಜವು ದುಡಿಮೆಯೆಂದು ಪರಿಗಣಿಸುವುದೇ ಇಲ್ಲ. ದೇವರಿಗೆ ಮೀಸಲಿರಿಸಿದ ಮಹಿಳೆಯರ ದುಡಿಮೆಯನ್ನು ಲೈಂಗಿಕ ನೆಲೆಯಲ್ಲಿಯೇ ನಿರ್ವಚಿಸಿದ್ದರಿಂದ ಅವರ ದುಡಿಮೆಯನ್ನು ಲೈಂಗಿಕ ನೆಲೆಯಲ್ಲಿಯೇ ಅರ್ಥೈಸಲಾಗಿದೆ. ಹಾಗಾಗಿಯೋ ಏನೋ ಹಾಡು ಕಲಿಯುವ ಆಸೆ ಹಾಗೂ ಉದ್ದೇಶಕ್ಕಾಗಿ ಸಂಬಳ ಕೊಡಲಿಕ್ಕಾಗದೇ ತಮ್ಮ ಮನೆಯಲ್ಲಿ ಜೀತಕ್ಕಿದ್ದ ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳ ಮೇಲೆ ಕಲಿಸುವ ಗುರುಗಳು ಲೈಂಗಿಕ ಹಲ್ಲೆ ನಡೆಸುತ್ತಾರೆ. ಹೀಗೆ ಅಪ್ರಾಪ್ತ ವಯಸ್ಸಿನ ಮುಗ್ಧ ಬಾಲಕಿಯರ ಮೇಲೆ ಹಲ್ಲೆ ನಡೆಸುವ ಅವರು ತಮಗೆ ಬರಬೇಕಾದ ಸಂಬಳವನ್ನು ಇವರೊಂದಿಗಿನ ಲೈಂಗಿಕ ಸಂಬಂಧದೊಂದಿಗೆ ಸಮೀಕರಿಸಿ ಕಲಿಕೆಯ ಸಂಬಳವನ್ನು ಮಾಫ್ ಮಾಡುತ್ತಾರೆ. ಮುಂದೊಂದು ದಿನ ಭಾರಿ ಪ್ರಮಾಣದಲ್ಲಿ ಹಣ ಗಳಿಸುವ ವಿದ್ಯೆಯನ್ನು ಸಂಬಳವಿಲ್ಲದೆ ಕಲಿಸುವುದರಿಂದ ಅವಳನ್ನು ಬಳಸಿಕೊಂಡರೆ ತಪ್ಪೇನು ಎನ್ನುವುದು ಅವರ ಧೋರಣೆಯಾಗಿದೆ. ಅಷ್ಟಕ್ಕೂ ಅವಳು ‘ದೇವದಾಸಿ’ ಎನ್ನುವ ಅವರೊಳಗಿನ ಹಗುರವಾದ ನಿಲುವು ಅವರ ಧೋರಣೆಯನ್ನು ಸಮರ್ಥಿಸುತ್ತದೆ. ದೇವರಿಗೆ ಬಿಟ್ಟ ಅವಳು ಸರ್ವರ ಸೊತ್ತು ಎನ್ನುವ ಸಾಮಾಜಿಕ ಗ್ರಹಿಕೆ ಈ ಗುರುಗಳಲ್ಲಿ ಅಪರಾಧಿ ಪ್ರಜ್ಞೆಯನ್ನು ಹುಟ್ಟುಹಾಕುವುದೇ ಇಲ್ಲ. ಮದುವೆಯ ಚೌಕಟ್ಟಿನೊಳಗೆ ಬರುವ ಮಹಿಳೆಯರಿಗೆ ಲೈಂಗಿಕ ಜೀವನ ಪ್ರವೇಶಿಸಲು ‘ಮದುವೆ’ ಎನ್ನುವ ಪದ್ಧತಿ ಇದ್ದಂತೆ, ‘ಜೋಗತಿ’, ‘ಬಸವಿ’ಯರಲ್ಲಿ ‘ಉಡಿ ತುಂಬುವ’ ಇಲ್ಲವೆ ‘ಹೆಣ್ಣು ಮಾಡುವ’ ಪದ್ದತಿ ಇರುತ್ತದೆ ಎಂಬುದನ್ನು ಯಾರೂ ಗಣನೆಗೆ ತೆಗೆದುಕೊಳ್ಳುವುದೇ ಇಲ್ಲ. ಅವರು ಇರುವುದೇ ಸಂಭೋಗಕ್ಕಾಗಿ, ಯಾರು ಬೇಕಾದರೂ ಯಾವಾಗ ಬೇಕಾದರೂ ಅವರನ್ನು ಬಳಸಿಕೊಳ್ಳಬಹುದು ಎನ್ನುವ ಹಗುರ ಧೋರಣೆ ಚಾಲ್ತಿಯಲ್ಲಿದೆ. ಹಾಡಿಕೆ ಮಹಿಳೆಯರು ನಂಬಿದ ಪದ್ಧತಿಗಳನ್ನು ಗಾಳಿಗೆ ತೂರಿ ಅವರ ಮೇಲೆ ಲೈಂಗಿಕ ಆಕ್ರಮಣಗಳು ನಡೆಯುತ್ತವೆ. ಇದರಿಂದಾಗಿ ಈ ಸಮುದಾಯದ ಜನರ ಭಾವನೆಗಳು ಘಾಸಿಗೊಳ್ಳುತ್ತವೆ. ಮಂದರೂಪದ ನೀಲಮ್ಮ ಕಾಂಬಳೆ ಅವರ ತಾಯಿಯು ತನ್ನ ಮಗಳೊಂದಿಗೆ ಉಡಿ ತುಂಬಿಕೊಳ್ಳಲಾರದೇ ಲೈಂಗಿಕ ಸಂಬಂಧ ಹೊಂದಿದ್ದಕ್ಕಾಗಿ ದೇವಿ ಸಿಟ್ಟಾಗಿದ್ದಾಳೆ ಎಂದು ಕೊರಗಿ, ಕೊರಗಿ ಮರಣಿಸಿದ ಪ್ರಕರಣವನ್ನು ಗಮನಿಸಬೇಕು. ಉಡಿ ತುಂಬುವ ಇಲ್ಲವೆ ಹೆಣ್ಣು ಮಾಡುವ ಕಾರ್ಯಕ್ರಮದ ಮೂಲಕ ತಮ್ಮ ಉದ್ದೇಶಕ್ಕೆ ಅನುಕೂಲವಾಗುವ ಗಂಡಿನೊಂದಿಗೆ ಶಾಶ್ವತ ಸಂಬಂಧವನ್ನು ಹೊಂದುತ್ತಾರೆ. ಸಾಮಾಜಿಕ ಗ್ರಹಿಕೆಯ ಹಾಗೆ ಲೈಂಗಿಕ ಸಂಬಂಧವನ್ನು ಅಪೇಕ್ಷಿಸಿ ಬಂದವರೊಂದಿಗೆ ಸಂಬಂಧ ಹೊಂದುವುದನ್ನು ಅವರು ನಿರಾಕರಿಸುತ್ತಾರೆ.

ಆದರೆ ನಾನು ಸಂದರ್ಶಿಸಿದ ಕೆಲ ಗುರುಗಳು ಚಿತ್ತ ಶುದ್ಧೀಕರಣಕ್ಕಾಗಿ ತಾವು ಹಾಡು ಕಲಿಯಲು ಬಂದ ಹುಡುಗಿಯರೊಂದಿಗೆ ಸಂಬಂಧ ಹೊಂದುತ್ತೇವೆ ಎಂದೇ ತಮ್ಮನ್ನು ಸಮರ್ಥಿಸಿಕೊಂಡರು. ಚಿತ್ತ ಚಂಚಲವಾದರೆ ಸರಸ್ವತಿ ವಿದ್ಯೆ ತಮ್ಮಲ್ಲಿ ಉಳಿಯುವುದಿಲ್ಲವೆಂದರು. ‘ದೇವದಾಸಿಯರು’ ಇರೋದೆ ನಮ್ಮಂಥ ಗಂಡಸರಿಗೆ. ತಾವು ಕುಟುಂಬಸ್ಥ ಮಹಿಳೆಯರನ್ನು ಹಾಳು ಮಾಡಿಲ್ಲವಲ್ಲ, ಎಂಬುದು ಅವರ ಸಮರ್ಥನೆಗೆ ಕಾರಣವಾಗಿದೆ. ಹರದೇಶಿ-ನಾಗೇಶಿ ಹಾಡುಗಳನ್ನು ಕಲಿತು, ಆರ್ಥಿಕವಾಗಿ ಸದೃಢವಾಗುವ ಕನಸು ಕಂಡು, ಈ ಹಾಡಿಕೆಗೆ ಕಾಲಿರಿಸಿದ ಅಪ್ರಾಪ್ತ ವಯಸ್ಸಿನ ಬಹುತೇಕ ಹುಡುಗಿಯರು ಜೀವನ ಅರ್ಥವಾಗುವ ಮುನ್ನವೇ ಕಮರಿಹೋಗುತ್ತಿದ್ದಾರೆ. ಎಲ್ಲಾ ಮಹಿಳಾ ಹಾಡುಗಾರರು ಇಂತಹ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆಎಂದು ಹೇಳಲಾಗುವುದಿಲ್ಲ. ಹಾಡು ಕಲಿಯ ಬಯಸುವ ಹುಡುಗಿಯ ಕುಟುಂಬ ಸಂಬಳ ಕೊಡುವಷ್ಟು ಶಕ್ತವಾಗಿದ್ದರೆ, ಗುರುಗಳು ಅವಳೊಂದಿಗೆ ಅನುಚಿತವಾಗಿ ವರ್ತಿಸುವುದಿಲ್ಲ. ಕಲಿಕೆಗೆ ಸಂಬಳ ಕೊಡಲಿಕ್ಕಾಗದವರು ಮಗಳನ್ನು ಗುರುಗಳ ಹತ್ತಿರ ಜೀತಕ್ಕಿಟ್ಟಿದ್ದರೆ, ಅಂತಹ ಎಳೆಯ ಹುಡುಗಿಯರು ಗುರುಗಳ ಕ್ರೂರತೆಗೆ ಬಲಿಯಾಗಿದ್ದಾರೆ/ಬಲಿಯಾಗುತ್ತಾರೆ. ಗುರುಗಳು ತಮ್ಮ ಮೇಲೆ ಎಸಗಬಹುದಾದ ದೌರ್ಜನ್ಯವನ್ನು ಮೊದಲೇ ಗ್ರಹಿಸಿಕೊಂಡ ಕೆಲವರು ಶಿವಮ್ಮನ ಹಾಗೆ ಕಲಿಸುವ ಗುರುವಿನೊಂದಿಗೆ ಉಡಿ ತುಂಬಿಸಿಕೊಂಡೇ, ಅವರ ಮನೆಯಲ್ಲಿ ಏಳೆಂಟು ವರ್ಷಗಳವರೆಗೆ ಕಲಿಕೆಗೆ ತಂಗಿದ್ದಾರೆ. ಗುರುವಿನೊಂದಿಗೆ ಉಡಿ ತುಂಬಿಸಿಕೊಂಡಿದ್ದರಿಂದ ಹುಡುಗಿಯ ಕುಟುಂಬದವರು, ಅವರ ಸಂಬಂಧವನ್ನು ಒಪ್ಪಿಕೊಂಡಿದ್ದಾರೆ. ಮದುವೆಯಾದ ನಂತರ ಗಂಡನೊಟ್ಟಿಗೆ ಇರುವುದು ಹೇಗೆ ನ್ಯಾಯಯುತಗೊಂಡಿರುವುದೋ ಹಾಗೆಯೇ ‘ಜೋಗತಿ’ ಇಲ್ಲವೆ ‘ಬಸವಿ’ಯರು ಉಡಿ ತುಂಬಿಸಿಕೊಂಡವರೊಂದಿಗೆ ಇರುವುದು ನ್ಯಾಯದ್ಧವೆನಿಸಿಕೊಂಡಿದೆ. ಹುಡುಗಿ ಈ ಸಂಬಂಧವನ್ನು ಹೇಗೆ ಸ್ವೀಕರಿಸಿದ್ದಾಳೆ ಅಥವಾ ಇಂತಹ ಸಂಬಂಧವನ್ನು ಸ್ವೀಕರಿಸುವ ವಯಸ್ಸು ಅವಳದೇ ಎನ್ನುವುದನ್ನು ಆಕೆಯ ಕುಟುಂಬದವರಾಗಲಿ, ಸಂಬಂಧವಿರಿಸಿಕೊಂಡ ಗುರುವಾಗಲಿ ಆಲೋಚಿಸುವುದೇ ಇಲ್ಲ. ನಲವತ್ತು ವರ್ಷ ವಯಸ್ಸಿನ ಗುರು ರೆಹಮಾನ್ ಅವರೊಂದಗೆ ಹದಿಮೂರು ವರ್ಷ ವಯಸ್ಸಿನ ಶಿವಮ್ಮ ಸಂಬಂಧ ಹೊಂದುವಾಗ ಗಾಬರಿಗೊಂಡಿದ್ದಾಳೆ. ಉಡಿ ತುಂಬಿಸಿಕೊಂಡ ಕಾರಣದಿಂದಾಗಿ ಬಹಳ ಯಾಂತ್ರಿಕವಾಗಿ ಅವರೊಂದಿಗೆ ಜೀವನ ಕಳೆದಿದ್ದಾಳೆ. ಆದರೂ ಯಾವ ಕಾರಣಕ್ಕಾಗಿ ತಾನು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುವ ಸಾಧ್ಯತೆಗಳು ಹೆಚ್ಚಾಗಿದ್ದವೋ, ಆ ಸಾಧ್ಯತೆಗಳನ್ನು ಮುಂಚಿತವಾಗಿಯೇ ಗ್ರಹಿಸಿ ಆ ಗುರುವಿನೊಂದಿಗೇ ಉಡಿ ತುಂಬಿಸಿಕೊಂಡಿದ್ದಾಳೆ. ಹೀಗೆ ತಮ್ಮ ಮೇಲಿನ ಸಾಮಾಜಿಕ ಅನ್ಯಾಯವನ್ನು ಮನಸಿಲ್ಲದಿದ್ದರೂ ತಮ್ಮ ಸಂಪ್ರದಾಯದ ತೆಕ್ಕೆಗೆ ತೆಗೆದುಕೊಂಡು ಮೌನವಾಗಿ ಸಹಿಸಿಕೊಂಡಿದ್ದಾರೆ. ಅವರ ದಿವ್ಯ ಮೌನವನ್ನು ಒಪ್ಪಿಗೆ ಎಂದು ಅರ್ಥೈಸುವುದು ಸಾಮಾಜಿಕ ಅಪರಾಧವಾಗುತ್ತದೆ.

. ಕಲಾವಿದರೆಯರ ಉಡುಪು: ವೃತ್ತಿ ಮರ್ಯಾದೆ

ದಪ್ಪಿನಲ್ಲಿ ಇಲ್ಲವೆ ಚೌಡಕಿಯಲ್ಲಿ ಹರದೇಶಿ-ನಾಗೇಶಿ ಹಾಡುಗಳನ್ನು ಹೇಳುವುದು ಪ್ರದರ್ಶನ ಕಲೆಯಾಗಿ ಗುರುತಿಸಿಕೊಂಡಿದೆ. ಹೀಗಾಗಿ ಸಾರ್ವಜನಿಕರೆದುರಿಗೆ ಪ್ರದರ್ಶನಗೊಳ್ಳುವ ಕಲೆ ಇದಾಗಿದ್ದರಿಂದ ಕಲಾವಿದೆಯರು ಉಡುವ ಬಟ್ಟೆಯೆಡೆಗೆ ಆಸಕ್ತಿ ವಹಿಸುತ್ತಾರೆ. ಹರಿದ ಸೀರೆಯನ್ನು ಉಟ್ಟುಕೊಂಡು ಮನೆಯಲ್ಲಿದ್ದರೆ, ಕೂಲಿಗೆ ಹೋದರೆ ಕಲಾವಿದೆಯರನ್ನು ಒಳಗೊಂಡಂತೆ ಬೇರೆಯವರೂ ಅದನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ನಾಲ್ಕಾರು ಜನರೆದುರಿಗೆ ನಿಲ್ಲುವಾಗ ಒಳ್ಳೆಯ ಬಟ್ಟೆಯನ್ನು ಆಶಿಸುವುದು ತಪ್ಪೇನಲ್ಲ. ಒಳ್ಳೆಯ ಅಂದರೆ ಹರಿಯದ ಹಾಗೂ ಮಾಸದ ಸೀರೆಯನ್ನು ಉಟ್ಟುಕೊಂಡು ಜನರೆದುರಿಗೆ ಹಾಡುವುದಕ್ಕಾಗಿ ಅವರು ಪರಿತಪಿಸಿದ ರೀತಿಯನ್ನು ಅವರ ಮಾತುಗಳಲ್ಲಿ ಕೇಳಬೇಕು.

“ಹರಿದ ಮೂರು ಸೀರಿಗಳಲ್ಲಿನ ಹರಿಯದ ಭಾಗಗಳನ್ನು ಸೇರಿಸಿ ಒಂದು ಸೀರಿಮಾಡ್ಕೊಂಡು ಉಡುತಿದ್ದ್ಯಾ. ಇಂಥಾ ಸೀರಿ ಉಟ್ಕೊಂಡು ನೂರಾರು ಜನರೆದುರಿಗೆ ಹಾಡ್ಕಿ ಹ್ಯಾಂಗ ಮಾಡಾಕಾಗ್ತೈತಿ? ಆಗ ಹಾಡಕ್ಯಾಕ ಪ್ರಸಿದ್ಧಿ ಪಡೆದ ಹೆಣ್ಣಮಕ್ಕಳು ಹಾಡಿಕೆ ಮಾಡುವಾಗ ತೋಪಿನ ಸೆರಗಿನ ಸೀರಿ, ಕರಿ ಚಂದ್ರಕಾಳಿ ಸೀರಿ ಉಡತಿದ್ದರು. ನಮ್ಮ ಹರಿಜನ ಕೇರ್ಯಾಗ ಹಾಡ್ಕಿ ಮಾಡಿದ ಅಜ್ಜಿ ಇದ್ದಳು. ಆಕಿ ಹತ್ರ ಇಂಥಾವು ಎಂಟ ಸೀರಿ ಇದ್ದ್ವು. ಬ್ಯಾರೆ ಬ್ಯಾರೆ ಊರಿಗಿ ಹಾಡ್ಕಿಗಿ ಹೋದಾಗೊಮ್ಮೆ ಆಕಿ ಬ್ಯಾರೆ ಬ್ಯಾರೆ ಸೀರಿ ಕೊಡತಿದ್ಲು. ಆಗಿನ ಕಾಲಕ್ಕ ಒಂದ ಸೀರಿ ಐದು ರೂಪಾಯಿ ಬಾಡಿಗಿ ತಗೋತಿದ್ಲು. ಹಾಡ್ಕಿ ನಿಲ್ಲಿಸಿದ ಆಕಿದೂ ಜೀವನಾ ನಡಿಬೇಕಲ್ಲ? ಕೈಯಾಗ ರೊಕ್ಕ ಹರಿದ್ಯಾಡಾಕ್ಹತ್ತಿಂದ ನಾನೂ ಸೀರಿ ತಗೊಂಡಾ. ಒಂದೆರಡು ಕಡಗಿ, ಹಾಡ್ಕಿಗಿ ಕರೆದವರೇ ಒಂದೊಂದು ಸೀರಿ ಆಯೇರಿ ಮಾಡಿದ್ರು. ಹೀಂಗಾಗಿ ನನ್ನ ಹತ್ರಾ ಈಗ ಎಳೆಂಟು ಒಳ್ಳೆ ಸೀರಿ ಅವಾ”. – ಬಬಲೇಶ್ವರದ ಬಂಗಾರವ್ವ

“ನನ್ನ ಮೊದಲ ಹಾಡನ್ನು ನೂಲಿನ ಸೀರಿ ಉಟ್ಕೊಂಡು ಹಾಡೇನಿ. ನನಗಾಗ ಹದಿಮೂರು ವರ್ಷ ವಯಸ್ಸು. ಸೀರಿ ಉಟ್ಟಾಗ ಒಳಗ ಪರಕಾರs ಇರ್ಲಿಲ್ಲ. ಪರಕಾರ ಹಾಕಿದ್ರ ಒಳಗಿನ ಮೈಯಿ ಕಾಣಂಗಿಲ್ಲ. ಪರಕಾರ ಇಲ್ದ ಸೀರಿ ಉಟ್ಕೊಂಡು ಹಾಡಿದ್ದಕ್ಕ ಎಲ್ಲಾ ಜನರೆದುರಿಗೆ ನನ್ನ ಮಾನಾ ಹೋದಂಗಾಗಿತ್ತು. ಮೊದ್ಲ ನಾನು ಸಣ್ಣಕ್ಕಿದ್ದಾಗಿಂದ ಗುಂಡಗುಂಡಕ ಇದ್ದ್ಯಾ. ಅಂಥಾ ದುಂಡನ್ನ ದೊಡ್ಡ ಮೈಯನ್ನ ಗುಬ್ಬಿಯಂಗ ಮುದುರಿಕೊಂಡು ಹಾಡ್ತಿದ್ದ್ಯಾ. ಹಂಗ್ಯಾಕ ಮೈ ಬಿಗಿ ಹಿಡಿದ ಹಾಡ್ತಿ, ಸರಳ ನಿಂತ ಹಾಡಾಕ ಬರಲೇನ ಅಂತ ಎಲ್ಲಾರೂ ಅನ್ನವ್ರು. ಅವ್ರೀಗೇ ಅರ್ಥ ಆಗಬೇಕಿತ್ತು. ಮಾನಾ ಹೋದ್ಹಂಗ ಅನಸ್ತದ ಅಂತ ನಾನು ಹ್ಯಾಂಗ ಬಾಯಿ ಬಿಟ್ಟ ಹೇಳ್ಲಿ? ದೊಡ್ಡ ಮಂದಿಯಂಗ ನಾವು ಒಳಗ ಚಡ್ಡಿ ಹಾಕಿರಲ್ಲ. ಅದರಾಗ ಪರಕಾರ ಇಲ್ದ ಸೀರಿ ಉಟ್ಕೊಂಡು ಎಲ್ಲಾರೆದುರಿಗೆ ಹಾಡಬೇಕಾದಾಗ ನಮಗ ಹ್ಯಾಂಗ ಅನಿಸಿರಬೇಕು? ನಮ್ಮ ಊರಾಗಿನ ಹೆಣ್ಣಮಕ್ಕಳಿಗೆ ನನ್ನ ನೋಡಿ ಪಾಪ ಅನಿಸಿರಬೇಕು. ಅವ್ರು ತಾವು ಉಟ್ಟ ಬಿಟ್ಟಿದ್ದು ಅಷ್ಟರಾಗ ಚಲೊ ಇರೊ ಹನ್ನೆರಡು ಮೊಳದ ಸೀರಿ ಕೊಟ್ಟ್ರು. ಇಂಥ ಸೀರಿ ಉಟ್ಕೊಂಡ ಹತ್ತ ಹನ್ನೆರಡು ವರ್ಷಗಳತನಾ ಹಾಡಿಕೆ ಮಾಡೇನಿ. ಆಮ್ಯಾಕ ರೊಕ್ಕ ಬರಾಕ ಚಾಲೂ ಮಾಡಿಂದ ನಾಲ್ಕಾರು ಒಳ್ಳೆ ಸೀರಿ ತಗೊಂಡ್ಯಾ, ಒಳಗ ಪರಕಾರ್ನು ಹಾಕಾಕ ಹತ್ತಿದ್ಯಾ. ಇತ್ತೀಚಿಗೆ ಪ್ಯಾಷನ್ ಸೀರಿ ಬಂದಾವು. ಆ ಪತ್ಲಾನೂ ಉಡ್ತೇನು”. – ಚಿನ್ನಬಾಯಿ

“ನೋಡ ತಂಗಿ ಹಾಡಿಕೆ ಚಾಲೂ ಮಾಡಿದಾಗ ನಾನೂ ಅವರಿವರು ಉಟ್ಟಬಿಟ್ಟು ಕೊಟ್ಟ ಸೀರೀನ ಉಡತಿದ್ದ್ಯಾ. ಹೀಂಗ ಐದಾರು ವರ್ಷ ಕಳೆದೇನಿ. ಹಾಡ್ಕ್ಯಾಗ ದುಡಿಮಿ ಚಂದಂಗ ಹೊಂಟ್ತು. ನಾನು ಪತ್ಲಾ ಉಡಕಾ ಚಾಲೂ ಮಾಡಿದ್ದ್ಯಾ. ಜನಾ ಸೂಳೀತನ ಮಾಡಾಕ ಹೇಂಗ ಮೇಕಪ್ಪ ಮಾಡ್ಕೊಂಡು ಬರತಾಳ ನೋಡು ಅಂದ್ರು. ಸಭಾಗ ನಿಂತ ಹಾಡತೀವಿ ಅಂತ ಒಳ್ಳೆ ಸೀರಿ ಉಟಕೊಂಡು, ತಲಿ ಬಾಚ್ಕೊಂಡು ಪೌಡರ್ ಹಚ್ಚಕೊಂಡ್ರ ನಮ್ಮನ್ನ ಸೂಳಿ ಅಂತಾರು. ಮನ್ಯಾಗ ಹ್ಯಾಂಗ ಹರಕಾ-ಮರಕಾ ಸೀರಿ ಉಟ್ಕೊಂಡು ಇರ್ತಿವೊ ಹಂಗs ಸಭಾಕ್ಕ ಬರಬೇಕೇನು? ಅದು ಶೋಭೆ ಅನಸ್ತದಾ?” – ಮದನಳ್ಳಿ ಭೀಮಾಬಾಯಿ

“ತಾಯಿ ಹಾಡ್ಕಿಗಿ ಹೋಗುವಾಗ ಮೈಮ್ಯಾಲ ಚಂದಂಗ ಬಟ್ಟಿ ಹಾಕ್ಕೊಂಡು ಹೋದ್ರ ಹಾಡ್ಕಿ ಹಾಡಿಸುವವರು ಸ್ವಲ್ಪ ಮರ್ಯಾದಿ ಕೊಡುತಾರು. ಹಾಡ್ಕಿ ಸುರು ಮಾಡಿದಾಗ ನನ್ನ ಹತ್ರ ಸೀರಿನs ಇರ್ಲಿಲ್ಲ. ನಮ್ಮವ್ವ ಎರಡು ಸಿರಿ ಹರ್ದು ಅದರಾಗ ಚಂದಂಗ ಇದ್ದದ್ದನ್ನು ಜೋಡ್ಸಿ ಕೊಟ್ಟಿದ್ದಳು. ಅಂಥಾ ಸೀರಿ ಉಟ್ಕೊಂಡು ಹಾಡ್ಕಿಗಿ ಹೋಗ್ಬೇಕಾಗಿತ್ತು. ಸಭಾದಾಗ ಹೋಗ್ಬೇಕಾದರೆ ನಾನು ಇಂಥಾ ತ್ಯಾಪಿ ಸೀರಿ ಉಡತಿದ್ರ, ನಮ್ಮವ್ವ, ನಮ್ಮಾಯಿ ಎಂಥಾ ಸೀರಿ ಉಡತಿದ್ರು ನೀವಾ ಲೆಕ್ಕಹಾಕ್ರಿ? ಅವರ ಮೈ ಮ್ಯಾಲಿನ ಸೀರಿ ಕೌದಿ ಇದ್ದಂಗ ಇರೋದು. ಹಾಡ್ಕಿ ಪ್ರಚಾರಾ ಆಗ್ಲಿ ಅಂತ ಇದ್ದ ತ್ಯಾಪಿ ಹಚ್ಚಿದ ಸೀರಿ ಉಟ್ಕೊಂಡು ಹೋದ ಕೂಡ್ಲೆ ನನ್ನ ತೊನ್ನು ಹತ್ತಿದ ನಾಯಿ ಹಂಗ ಕಾಣೋರು. ಅವ್ರು ಪಟ್ಟ್ಯಾಗ ಐವತ್ತು ರೂಪಾಯಿ ಕೊಟ್ಟು ಕಳಸವ್ರು. ಹಾಡ್ಕಿ ಜೊತೆ ಹಾಡವ್ರು ಕಣ್ಣಿಗಿ ಚಂದಂಗ ಕಾಣಬೇಕಂತ ಸಭಾದವ್ರು ಬಯಸ್ತಾರ. ಅವ್ರ ಬಯಕಿಯಂಗ ಇದ್ದ್ರ ಭಕ್ಷೀಸು ಬರತದ. ಇಲ್ಲಾಂದ್ರ ಅದಕ್ಕೂ ಕಲ್ಲ ಬೀಳ್ತದ. ಇಂಥಾ ಕೆಟ್ಟ ಬಡತನ ಇಟ್ಕೊಂಡ ಎಂಟ ವರ್ಷ ಹಾಡ್ಕಿ ಮಾಡೇನಿ. ಎಂಟ ವರ್ಷ ಆಗಿಂದ ಪ್ರಸಿದ್ಧಿ ಆದ್ಯಾ. ಅವಾಗ ರೊಕ್ಕ ಬರಾಕಹತ್ತಿದ್ವು. ನನ್ನ ಇಪ್ಪತ್ತೊಂದನೇ ವರ್ಷ ವಯಸ್ಯಾಗ ಜೀವನದಾಗ ಮೊದ್ಲಿಗೆ ಯಾರೂ ಉಡ್ಲಾರದಂಥಾ ಹೊಸ ಸೀರಿ ಉಟ್ಟೇನಿ. ಹೊಸ ಸೀರಿ ಉಟ್ಟ ಗಳಿಗ್ಯಾಗ ಗಳಗಳ ಅತ್ತ ಬಿಟ್ಟೇನಿ. ಹೊಸ ಸೀರಿ ಉಟ್ಟ್ನಂತ ಅತ್ತ್ನೊ, ಬಡತನ ಕಳಿತ ಅಂತ ಅತ್ತ್ನೊ ಎರಡೂ ನನಗ ಗೊತ್ತಿಲ್ಲ. ಒಟ್ನಾಗ ಅವತ್ತ ತಾಸತನಕ ಅತ್ತಿದ್ದು ನೆನಪು. ನಮ್ಮಜ್ಜಿ ಸತ್ತ ಹೋಗಿದ್ಲು. ಹುಚ್ಚ ಹುಡುಗಿ ಯಾಕ ಅಳತಿ? ಸುಮ್ಮನಿರು ಅಂತ ಸಮಾಧಾನ ಮಾಡಕೊಂಡ ನಮ್ಮವ್ವನೂ ಅತ್ತಿದ್ಲು. ಇದನ್ನೆಲ್ಲಾ ಹ್ಯಾಂಗ ಮರಿಯಾಕ ಆಗ್ತೈತಿ?” – ರಾಣವ್ವ ಸೊಲ್ಲಾಪುರ

ಮೇಲಿನ ಎಲ್ಲ ವಕ್ತೃಗಳ ಅನುಭವಗಳೂ ಮಹಿಳಾ ಹಾಡುಗಾರರ ಬಡತನ ಹಾಗೂ ಅದರಿಂದಾಗಿ ಅವರೆದುರಿಸಿದ ಅಪಮಾನಗಳನ್ನು ಅನಾವರಣಗೊಳಿಸುತ್ತವೆ. ಪುರುಷ ಹಾಡುಗಾರರು ಬಟ್ಟೆಯನ್ನು ಕೇಂದ್ರವಾಗಿಟ್ಟುಕೊಂಡು ಅಪಮಾನದ ಅನುಭವವನ್ನು ಹೇಳಲೇ ಇಲ್ಲ. ಸೂರು ಹಾಕುವ ಬಬಲೇಶ್ವರದ ರಾಮಚಂದ್ರ ಮಲ್ಲಪ್ಪ(ರಾಮಣ್ಣ) ಅವರು ಮಾತ್ರ “ಒಂದs ಒಂದು ಶರ್ಟ ಹಾಗೂ ಧೋತರ ಚಂದ ಇತ್ತು. ಅದನ್ನ ಹಾಡಕಿಗಿ ಹೋದಾಗ ಹಾಕೊತಿದ್ದೆ. ಅದನ್ನ ಬಿಟ್ಟು ಬ್ಯಾರೆ ಬಟ್ಟೆ ನನ್ನ ಹತ್ರ ಇರ್ಲಿಲ್ಲ. ಮನ್ಯಾಗ ಹರಕ ಧೋತರ, ಹರಕ ಟಾವೆಲ್ಲ ಸುತ್ತಕೊಂತಿದ್ದ್ಯಾs. ಚಂದ ಇದ್ದ ಒಂದs ಅಂಗಿ ಮತ್ತ ಧೋತ್ರಾನ್ನ ಹತ್ತ ವರ್ಷ ತನಕ ಉಟ್ಟೇನು. ಅಂಥಾ ಬಡತನ ನಮಗಿತ್ತು” ಎಂದು ಹೇಳಿದರು. ತೊಡುವ ಬಟ್ಟೆಯ ಬಗ್ಗೆ ರಾಮಣ್ಣ ಹೇಳಿದ ಮಾತು ಬಡತನದ ತೀವ್ರತೆಯನ್ನು ಹೇಳುತ್ತದೆ. ಆದರೆ ಮಹಿಳಾ ಹಾಡುಗಾರರ ಹಾಗೆ ಪುರುಷ ಹಾಡುಗಾರರಾರೂ ಜೈವಿಕ ಮುಜುಗರ ಹಾಗೂ ಸಾಮಾಜಿಕ ಅಪಮಾನವನ್ನು ಎದುರಿಸಿಲ್ಲ.

ಹೆಣ್ಣಿನ ದೇಹ ರಚನೆಯು ಪುರುಷ ದೇಹರಚನೆಗಿಂತ ಭಿನ್ನವಾಗಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ದೇಹ ರಚನೆಗನುಗುಣವಾಗಿಯೇ ಮಾನಾಪಮಾನಗಳು ನಿರ್ವಚಿತವಾಗಿವೆ. ಆರ್ಥಿಕ ಕಾರಣದಿಂದಾಗಿ ಪೂರ್ಣ ಬಟ್ಟೆಯನ್ನು ತೊಡಲಿಕ್ಕಾಗದ ಪುರುಷರು ಸೊಂಟದ ಭಾಗವನ್ನು ಮುಚ್ಚಿಕೊಳ್ಳಲು ಟವಲೊಂದನ್ನು ಸುತ್ತಿಕೊಂಡರೂ ಸಾಕಾಗುತ್ತದೆ. ಅವರು ಸುತ್ತಿಕೊಂಡ ಟವಲು ಆತನ ಬಡತನವನ್ನು ಹಾಗೂ ಕೂಲಿ ಕಾರ್ಮಿಕ ವರ್ಗಕ್ಕೆ ಸೇರಿರುವುದನ್ನು ಪ್ರತಿನಿಧೀಕರಿಸುತ್ತದೆ. ಅರೆ ಬೆತ್ತಲೆಯಾಗಿದ್ದುದರ ಕಾರಣಕ್ಕೇ ಮಾನ ಹೋಯಿತು ಎಂದು ಪೇಚಾಡುವ ಪರಿಸ್ಥಿತಿಯನ್ನು ಸಮಾಜ ಆತನಿಗೆ ನಿರ್ಮಿಸಿಲ್ಲ. ಹಾಗೆಯೇ ಅರೆಬೆತ್ತಲೆಯಾದ ಕಾರಣಕ್ಕೆ ಕಣ್ಣೋಟದ ಅತ್ಯಾಚಾರವನ್ನು ಅವನು ಎದುರಿಸಬೇಕಿಲ್ಲ. ಹೆಣ್ಣು-ಗಂಡಿನ ದೇಹವನ್ನು ಕೇಂದ್ರಿತವಾಗಿಟ್ಟುಕೊಂಡು ನಡೆದ ನಿರ್ವಚನೆಯೇ ಅರೆಬೆತ್ತಲೆಯಾಗಿದ್ದರೂ ಮಾನಯುತವಾಗಿ ಬದುಕುವ ಸಾಮಾಜಿಕ ವಾತಾವರಣವನ್ನು ಪುರುಷನಿಗೆ ನಿರ್ಮಿಸಿದೆ; ಹಾಗೆಯೇ ಮೈತುಂಬ ಬಟ್ಟೆಯಿಲ್ಲದ ಕಾರಣಕ್ಕಾಗಿ ಕಣ್ಣೋಟದ ಅತ್ಯಾಚಾರವನ್ನು ಎದುರಿಸುತ್ತಲೇ, ಅಪಮಾನಿತ ಬದುಕನ್ನು ಸಾಗಿಸಬೇಕಾದ ಅನಿವಾರ್ಯತೆಯನ್ನು ಮಹಿಳೆಗೆ ಸೃಷ್ಟಿಸಿದೆ. ಕಡು ಬಡತನದಿಂದಾಗಿ ಅರೆ ಬೆತ್ತಲೆಯಾಗಿರಬೇಕಾದ ಅನಿವಾರ್ಯ ಸ್ಥಿತಿಯೇ, ಅವಳ ದೇಹದ ಮೇಲೆ ಸಮಾಜದ ಪುರುಷರೆಲ್ಲರೂ ಅಧಿಕಾರ ಚಲಾಯಿಸಬಹುದು ಎನ್ನುವ ಮನೋಭಾವಕ್ಕೆ ಪುಷ್ಠಿನೀಡುತ್ತಿರುತ್ತದೆ. ಭಾರತದ ಸಂದರ್ಭದಲ್ಲಿ ಬಡತನಕ್ಕೂ, ಜಾತಿಗೂ ಹಾಗೂ ಹೆಣ್ಣಿನ ಮೇಲಿನ ಲೈಂಗಿಕ ದೌರ್ಜನ್ಯಕ್ಕೂ ನೇರವಾದ ಸಂಬಂಧವಿದೆ. ಆರ್ಥಿಕವಾಗಿ ಹಾಗೂ ಜಾತಿ ನೆಲೆಯಿಂದ ಅಸಹಾಯಕರಾಗಿರುವ ವಯಸ್ಸಿನ ಹುಡುಗಿಯರು, ಮಹಿಳೆಯರು ಅನುಭವಿಸುವ ಮುಜುಗರ, ಮಾನಸಿಕ ಕಿರಿಕಿರಿ, ಅಪಮಾನ ಹಾಗೂ ಅತ್ಯಾಚಾರಗಳನ್ನೆ ವಕ್ತೃಗಳ ಉಲ್ಲೇಖಿತ ಅನುಭವಗಳು ಅನಾವರಣಗೊಳಿಸುತ್ತವೆ. ಚಿನ್ನಾಬಾಯಿಯ ಅನುಭವ ಕಥನವು ಅರೆ ಬಟ್ಟೆಯಲ್ಲಿ ವಯಸ್ಸಿನ ಹುಡುಗಿಯೊಬ್ಬಳು ಎದುರಿಸುವ ಮಾನಸಿಕ ಹಾಗೂ ಸಾಮಾಜಿಕ ಸಂಕಷ್ಟಗಳನ್ನು ತೆರೆದಿಡುತ್ತದೆ. ಅರೆಬಟ್ಟೆಯಿಂದಾಗಿ ಆಕೆ ಅನುಭವಿಸುವ ಮುಜುಗರ ಹಾಗು ಸಂಕಟಗಳನ್ನು ಅರ್ಥಮಾಡಿಕೊಂಡಿದ್ದು ಮಹಿಳೆಯರೇ. ಆರ್ಥಿಕ ಸ್ವಾತಂತ್ರ್ಯ ಹಾಗೂ ಸಬಲೀಕರಣವನ್ನು ಹೊಂದಿರದ ಮೇಲು ಜಾತಿಯ ಮಹಿಳೆಯರು ತಾವು ಉಡುವ ಬಟ್ಟೆಯನ್ನು ಕೊಡಲು ಮಾತ್ರ ಶಕ್ತರು. ಕೆಳ ಜಾತಿಯಲ್ಲಿರುವ ಮಹಿಳೆಯರೆಲ್ಲರೂ ತೀವ್ರ ಬಡತನವನ್ನೆದುರಿಸುತ್ತಿದ್ದು ತನ್ನಂತೆ ಇರುವ ಇತರ ಮಹಿಳೆಯರಿಗೆ ಸಹಾಯ ಮಾಡದ ಅಸಹಾಯಕ ಪರಿಸ್ಥಿತಿಯಲ್ಲಿರುತ್ತಾರೆ. ನನ್ನ ಕ್ಷೇತ್ರಕಾರ್ಯಾನುಭವನದಲ್ಲಿ ಯಾವ ಪುರುಷರೂ ಮಹಿಳಗೆ ಮೈ ಮುಚ್ಚಿಕೊಳ್ಳಲು ಬಟ್ಟೆಯನ್ನಾಗಲಿ ಅಥವಾ ಬಟ್ಟೆ ಖರೀದಿಸಲು ದುಡ್ಡನ್ನಾಗಲಿ ನೀಡಿದ ಮಾಹಿತಿ ದೊರೆಯಲೇ ಇಲ್ಲ. ವಯಸ್ಸಿನ ಹುಡುಗಿಗೆ ಅಥವಾ ಮಹಿಳೆಗೆ ಹಣ ಹಾಗೂ ಬಟ್ಟೆಯನ್ನು ನೀಡುವುದು; ಹೀಗೆ ಪುರುಷರಿಂದ ಹಣ ಅಥವಾ ಬಟ್ಟೆಯನ್ನು ಮಹಿಳೆ ಪಡೆಯುವುದು ಸಮಾಜದಲ್ಲಿ ನಿಷೇಧಿತವಾಗಿದೆ. ಈ ಪ್ರಕ್ರಿಯೆಯನ್ನು ಸಮಾಜವು ಅವರಿಬ್ಬರಲ್ಲಿ ಲೈಂಗಿಕ ಸಂಬಂಧವಿದೆ ಎಂದು ಅರ್ಥೈಸುವುದೆಂದು ಪುರುಷ ಹಾಗೂ ಮಹಿಳಾ ವಕ್ತೃಗಳಿಬ್ಬರೂ ಹೇಳಿದರು. ಅವಲಂಬಿಯಾಗಿಯೇ ಗುರುತಿಸಲ್ಪಡುವ ಹೆಣ್ಣು ಮಕ್ಕಳ ಹೊಟ್ಟೆ -ಬಟ್ಟೆಯ ಜವಾಬ್ದಾರಿಯನ್ನು ತಂದೆ ಇಲ್ಲವೆ ಅಣ್ಣ-ತಮ್ಮಂದಿರು, ಗಂಡುಮಕ್ಕಳು ಹಾಗೂ ಮದುವೆಯಾದವನು ಮಾತರ ನೋಡಿಕೊಳ್ಳಲು ಸಾಮಾಜಿಕ ಸಮ್ಮತಿಯಿದೆ. ಇವರಲ್ಲದ, ಅನ್ಯ ಪುರುಷರು ಹುಡುಗಿಯ ಇಲ್ಲವೆ ಮಹಿಳೆಯ ಹೊಟ್ಟೆ-ಬಟ್ಟೆಯ ಬಗ್ಗೆ ಆಸಕ್ತಿ ತೋರುವುದು ಸಮಾಜವು ಅನೈತಿಕ ನೆಲೆಗಟ್ಟಿನಲ್ಲಿಯೇ ನೋಡುತ್ತದೆ ಹಾಗೂ ಅರ್ಥೈಸುತ್ತದೆ. ಹೀಗಾಗಿಯೇ ಮದುವೆಯ ಚೌಕಟ್ಟಿನಲ್ಲಿ ಬರುವ ‘ವಿಧವೆಯರು’ ತೀವ್ರ ಅನಾಥತೆಯನ್ನು ಅನುಭವಿಸುತ್ತಿರುತ್ತಾರೆ. ಮದುವೆ ಚೌಕಟ್ಟಿಗೆ ಬರದ ಮಹಿಳೆಯರ ಬದುಕಿನ ಪರಿಸ್ಥಿತಿ ಇವರಿಗಿಂತ ಭಿನ್ನವಾಗಿರುತ್ತದೆ. ಜಾತಿ ಪ್ರಧಾನವಾದ ಸಮಾಜವು ಇವರನ್ನು ಸಾಮಾಜಿಕ ಹಾಗೂ ಆರ್ಥಿಕ ಸ್ವಾತಂತ್ರ್ಯದ ನೆಲೆಯಲ್ಲಿಯೇ ಅರ್ಥೈಸಿರುತ್ತದೆ. ಆದರೆ ವಸ್ತು ಸ್ಥಿತಿ ಹಾಗಿರುವುದಿಲ್ಲ. ದುಡಿಮೆಯನ್ನೇ ನಂಬಿದ ತಳ ಸಮುದಾಯಗಳಲ್ಲಿ ಹುಡುಗಿಯರು ಮತ್ತು ಮಹಿಳೆಯರು ದುಡಿಯುತ್ತಿದ್ದರೂ, ಅವರ ಸಂಪಾದನೆಯ ಮೇಲೆ ಅವರಿಗೆ ಹಕ್ಕಿರುವುದಿಲ್ಲ. ದುಡಿಮೆಯಿಂದ ಬಂದ ಇವರ ಆದಾಯದ ಮೇಲೆ ತಂದೆ ಇಲ್ಲವೆ ಅಣ್ಣ ತಮ್ಮಂದಿರು ಇಲ್ಲವೆ ಇವರೊಂದಿಗೆ ಉಡಿ ತುಂಬಿಸಿಕೊಂಡವರು ಹಕ್ಕು ಚಲಾಯಿಸುತ್ತಿರುತ್ತಾರೆ. ಹೀಗಾಗಿ ಮದುವೆಯ ಚೌಕಟ್ಟಿಗೆ ಬರದ ಈ ಮಹಿಳೆಯರ ಹೊಟ್ಟೆ ಬಟ್ಟೆಯನ್ನು ಅವರ ತಂದೆ ಇಲ್ಲವೆ ಅಣ್ಣ-ತಮ್ಮಂದಿರು ಇಲ್ಲವೆ ಉಡಿ ತುಂಬಿಸಿಕೊಂಡವರು ನೋಡಿಕೊಳ್ಳುತ್ತಾರೆ ಎಂದೇ ನಂಬಿಸಲಾಗಿದೆ. ಈ ನಾಲ್ವರನ್ನು-ತಂದೆ, ಅಣ್ಣ, ತಮ್ಮಂದಿರು, ಉಡಿ ತುಂಬಿಸಿ ಕೊಂಡವನನ್ನು ಹೊರತುಪಡಿಸಿ-ಅನ್ಯ ಪುರುಷರು ಸಹಾಯ ಮಾಡಿದರೆ ಲೈಂಗಿಕ ಸಂಬಂಧಕ್ಕೆ ಆಸಕ್ತಿ ತೋರಿದ ನೆಲೆಯಲ್ಲಿಯೇ ಅರ್ಥೈಸಲಾಗುತ್ತದೆ. ಅನ್ಯ ಪುರುಷರು ನೀಡಿದ ಹಣ ಅಥವಾ ಬಟ್ಟೆಯನ್ನು ಇಂತಹ ಮಹಿಳೆಯರು ತೆಗೆದುಕೊಂಡರೆ, ಅವರೊಂದಿಗೆ ಈ ಮಹಿಳೆಯರ ಲೈಂಗಿಕ ಸಂಬಂಧವಿದೆ ಎಂದೇ ಅರ್ಥೈಸಲಾಗುತ್ತದೆ. ಜಾತಿ ಶ್ರೇಣೀಕರಣದಲ್ಲಿ ‘ಪ್ರಧಾನ’ವೆಂದು ಗುರುತಿಸಿಕೊಂಡಿರುವ ಜಾತಿಯವರು ಮದುವೆಯ ಚೌಕಟ್ಟಿನ ಹೊರಗೆ ಬರುವ ಮಹಿಳೆಯರನ್ನು ಎಲ್ಲ ಪುರುಷರ ಲೈಂಗಿಕ ಬಯಕೆಯನ್ನು ಪೂರ್ಣಗೊಳಿಸಲೆಂದೇ ಇರುವವರು ಎಂದೇ ಅರ್ಥೈಸಿದ್ದಾರೆ. ಆದರೆ, ಇವರು ಅರ್ಥೈಸಿದ ಹಾಗೆ ಈ ಮಹಿಳೆಯರು ಹಾಗೂ ಇವರ ಸಮಾಜದವರು ಇರುವುದಿಲ್ಲ. ಇವರಲ್ಲೂ ಲೈಂಗಿಕ ಸಂಬಂಧದಲ್ಲಿ ಮಡಿವಂತಿಕೆ ಹಾಗೂ ನಿರ್ಬಂಧಗಳಿವೆ. ‘ಬಸವಿ’ ಇಲ್ಲವೆ ‘ಜೋಗತಿ’ಯ ಕುಟುಂಬದವರಾಗಲಿ ಅಥವಾ ಅವರ ಸಮಾಜದವರಾಗಲಿ ಉಡಿತುಂಬಿಸಿಕೊಂಡವರನ್ನು ಬಿಟ್ಟು ಬೇರೆಯವರೊಂದಿಗೆ ಲೈಂಗಿಕ ಸಂಬಂಧ ಹೊಂದುವುದನ್ನು ನಿರಾಕರಿಸುತ್ತಾರೆ ಹಾಗೂ ತಿರಸ್ಕರಿಸುತ್ತಾರೆ. ಮಂದರೂಪದ ಬಳಿ ಬರುವ ನಿಂಬರಗಿಯ ಕಾಂತಾಬಾಯಿ ಹಾಡಿಕೆ ವೃತ್ತಿಯನ್ನು ನಿರ್ವಹಿಸುತ್ತಿದ್ದಾಗ, ಬಯಸಿ ಬಂದ ಪುರುಷರೆಲ್ಲರೊಂದಿಗೂ ದೇಹ ಸಂಬಂಧ ಹೊಂದಿದ ಕಾರಣಕ್ಕಾಗಿ ಕುಟುಂಬದಿಂದ ಹಾಗೂ ಮಾದರ ಕೇರಿಯ ಸಮಾಜದವರಿಂದ ತಿರಸ್ಕಾರಕೊಳಗಾದಳು. ಈ ಕಾರಣಕ್ಕಾಗಿಯೇ ಹುಟ್ಟಿದ ಊರು ಬಿಟ್ಟು ಗೋವಾಕ್ಕೆ ಹೋಗಬೇಕಾಗುತ್ತದೆ. ಈ ಬಗೆಯ ಘಟನೆಗಳು ‘ಜೋಗತಿ’ ಮತ್ತು ‘ಬಸವಿ’ಯರು ಸತಿಯಾಗಲು ಸಾಧ್ಯವಿರದಿದ್ದರೂ ಸತೀತ್ವವನ್ನು ಪಾಲಿಸಬೇಕೆಂಬ ಒತ್ತಡವನ್ನು ಹೇರುತ್ತಿರುತ್ತದೆ. ಹೇರಿದ ಒತ್ತಡಕ್ಕೆ ಅನುಗುಣವಾಗಿಯೇ ‘ಜೋಗತಿ’, ‘ಬಸವಿಯರು’ ಬದುಕು ಸಾಗಿಸಬೇಕೆಂದು ನಿರೀಕ್ಷಿಸುತ್ತಿರುತ್ತವೆ. ಹೀಗಾಗಿ ಹರದೇಶಿ-ನಾಗೇಶಿ ಹಾಡಿಕೆ ಕ್ಷೇತ್ರದಲ್ಲಿರುವ ಮಹಿಳೆಯರು ಮೈ ತುಂಬ ತೊಡಲು ಬಟ್ಟೆಯಿಲ್ಲದಿದ್ದರೂ, ಅವರು ಅನ್ಯ ಪುರುಷರಿಂದ ಹಣವನ್ನಾಗಲಿ, ಬಟ್ಟೆಯನ್ನಾಗಲಿ ಯಾವುದನ್ನೂ ಪಡೆಯುವುದಿಲ್ಲ ಮಹಿಳೆ, ಮಹಿಳೆಯ ನಡುವಿನ ಸಂಬಂಧವನ್ನು ಅಪನಂಬಿಕೆಯಿಂದ ನೋಡುವುದಿಲ್ಲ. ಹೀಗಾಗಿಯೇ ಬಡತನದಲ್ಲಿರುವ ತಳ ಸಮುದಾಯದ ಮಹಿಳೆಯರು ಮೇಲ್‌ಸ್ತರದಲ್ಲಿ ಗುರುತಿಸಿಕೊಂಡ ಮಹಿಳೆಯರು ನೀಡಿದ ಸಹಾಯವನ್ನು ಯಾವ ಅಪನಂಬಿಕೆಯಿಲ್ಲದೆ ಪ್ರೀತಿಯಿಂದ ಸ್ವೀಕರಿಸುತ್ತಾರೆ. ಹೀಗೆ ಊರಿನ ಹಾಗೂ ಕೇರಿಯ ಮಹಿಳೆಯರು ಪುರುಷ ಪ್ರಧಾನ ಜಾತಿ ಶ್ರೇಣೀಕರಣವನ್ನು ಮೀರಿ, ಅವುಗಳು ಸೃಷ್ಟಿಸಿದ ನಿರ್ವಾತಗಳನ್ನು ಒಡೆದು ಒಬ್ಬರಿಗೊಬ್ಬರು ಪ್ರೀತಿಯಿಂದ ಪಿಸುಗುಟ್ಟುತ್ತಾರೆ; ಕಷ್ಟಗಳಿಗೆ ಸ್ಪಂದಿಸುತ್ತಾರೆ. ಹಾಗಂತ ಎಲ್ಲ ಮಹಿಳೆಯರೂ ಜಾತಿ ಶ್ರೇಣೀಕರಣವನ್ನು ಮೀರಿದ್ದಾರೆಂದು ಹೇಳಲಾಗುವುದಿಲ್ಲ. ಪುರುಷ ಪ್ರಧಾನ ಹಾಗೂ ಜಾತಿ ಪ್ರಧಾನ ಮೌಲ್ಯಗಳನ್ನು ಅನೇಕ ಮಹಿಳೆಯರು ಸಮರ್ಥಿಸುತ್ತಾರೆ. ಬಹುತೇಕ ಮಹಿಳೆಯರು ಜೈವಿಕವಾಗಿ ಹೆಣ್ಣಾದರೂ ಭಾವನೆಯಲ್ಲಿ, ಆಲೋಚನೆಯಲ್ಲಿ ಪಕ್ಕಾ ಪುರುಷರಾಗಿರುತ್ತಾರೆ.

ಮೈಮುಚ್ಚುವ ಬಟ್ಟೆಯಿಲ್ಲದ ಕಾರಣಕ್ಕಾಗಿ ಕಣ್ಣೋಟದ ಅತ್ಯಾಚಾರ ಹಾಗೂ ಸಾಮಾಜಿಕ ತಿರಸ್ಕಾರವನ್ನು ಎದುರಿಸಿದ ಹರದೇಶಿ-ನಾಗೇಶಿ ಮಹಿಳಾ ಹಾಡುಗಾರರು, ಹೊಸ ಸೀರೆ ಉಟ್ಟರೆ ‘ಸೂಳೆಯರು’ ‘ಗಂಡಸರನ್ನು ದಾರಿ ತಪ್ಪಿಸುವವರು’ ಎಂದು ನಿಂದನೆಗೆ ಗುರಿಯಾಗುವರು. ಹರದೇಶಿ-ನಾಗೇಶಿ ವೃತ್ತಿ ಜೀವನದಲ್ಲಿ ಹದಿನಾಲ್ಕು ಇಲ್ಲವೆ ಹದಿನೈದು ವರ್ಷಗಳ ವಯಸ್ಸಿನಲ್ಲಿ ಪ್ರವೇಶಿಸಿದರೆ, ಅವರು ಆ ಕ್ಷೇತ್ರದಲ್ಲಿ ಪ್ರಸಿದ್ಧಿ ಪಡೆಯಲು ಎಂಟು ಇಲ್ಲವೆ ಹತ್ತು ವರ್ಷಗಳನ್ನು ತೆಗೆದುಕೊಳ್ಳುತ್ತಾರೆ. ಬಡತನವನ್ನೇ ಬೆನ್ನಿಗೆ ಕಟ್ಟಿಕೊಂಡು ಹುಟ್ಟಿದ ಈ ಹೆಣ್ಣುಮಕ್ಕಳಿಗೆ ಹೊಸ ಬಟ್ಟೆಯನ್ನು ತೊಡುವ ಭಾಗ್ಯ ಸಿಗುವುದೇ ವೃತ್ತಿ ಜೀವನದಲ್ಲಿ ಯಶಸ್ಸು ಸಾಧಿಸಿದಾಗ. ಹೊಸ ಸೀರೆ ಕೊಳ್ಳುವಾಗಲೂ ಕೌಟುಂಬಿಕ ಜವಾಬ್ದಾರಿಗಳನ್ನು ಗಮನಿಸಿಯೇ ಸೀರೆ ಖರೀದಿಸುತ್ತಾರೆ. ನಾನು ಗಮನಿಸಿದಂತೆ ಭಾರಿ ಬೆಲೆಯದ್ದು ಎಂದು ಇವರು ಉಟ್ಟುಕೊಳ್ಳುವ ಸೀರೆಯ ಬೆಲೆ ಐದುನೂರು ಇಲ್ಲವೆ ಆರನೂರು ರೂಪಾಯಿಗಳನ್ನು ದಾಟಿರುವುದಿಲ್ಲ. ರೇಷ್ಮೇ ಸೀರೆಯ ಹಾಗೆ ತೋರುವ ಮಿಂಚಿನ ಸೀರೆಯನ್ನು ಇವರು ಉಡುತ್ತಾರೆ. ಇವರ ಕಲಾ ಪ್ರದರ್ಶನವು ಹೆಚ್ಚಾಗಿ ರಾತ್ರಿ ಹೊತ್ತಿನಲ್ಲಿಯೇ ಇರುವುದರಿಂದ ಮಿಂಚಿನ ಸೀರೆ ಉಡಲು ಆಶಿಸುತ್ತಾರೆ. ಮಿಂಚುವ ಸೀರೆಗಳನ್ನು ಚಂದದ ಸೀರೆಗಳೆಂದೇ ಪ್ರೀತಿಸುವರು. ಅವರೆಂದೂ ಶುದ್ಧ ರೇಷ್ಮೆ ಸೀರೆಗಳನ್ನು ಉಟ್ಟವರೇ ಅಲ್ಲ. ಶುದ್ಧ ರೇಷ್ಮೆ ಸೀರೆಯನ್ನು ಕೊಂಡುಕೊಳ್ಳಲಿಕ್ಕೆ ಹಣ ಇವರ ಬಳಿ ಇರುವುದಿಲ್ಲ. ಶ್ರೀಮಂತ ಮನೆತನದ ಹೆಣ್ಣುಮಕ್ಕಳಂತೆ ವಿವಿಧ ಬಗೆಯ ರೇಷ್ಮೆ ಸೀರೆಗಳನ್ನು ಉಡಲು ಆಶಿಸಿದವರೂ ಅಲ್ಲ. ಅಂತಹ ಕನಸನ್ನು ಕಲ್ಪಿಸಿಕೊಂಡವರೂ ಅಲ್ಲ. ಇವರು ಒಳ್ಳೆಯ ಸೀರೆಯ ಜೊತೆಯಲ್ಲಿ ಹಣ ಕೂಡಿಟ್ಟುಕೊಂಡು ಬೋರಮಳಸರ, ಕಿವಿಯೋಲೆ ಹಾಗೂ ಕಿವಿಚೈನನ್ನು ಖರೀದಿಸಿ ಧರಿಸುತ್ತಾರೆ. ಬಹುತೇಕ ಶ್ರೀಮಂತ ಹಾಗೂ ಮೇಲ್ಮಧ್ಯಮ ವರ್ಗದ ಮಹಿಳೆಯರು ಆರ್ಥಿಕವಾಗಿ ಕುಟುಂಬದ ಪುರುಷರನ್ನೇ ಅವಲಂಬಿಸಿರುತ್ತಾರೆ. ಅವರು ಖರೀದಿಸಿಕೊಟ್ಟಸೀರೆ ಹಾಗೂ ಒಡೆವೆಗಳನ್ನು ತೊಡುತ್ತಾರೆ. ಆದರೆ ಹರದೇಶಿ-ನಾಗೇಶಿ ಮಹಿಳಾ ಹಾಡುಗಾರರು ಉಡುವ ಬಟ್ಟೆಯನ್ನು ಹಾಗೂ ತೊಡವು ಆಭರಣವನ್ನು ತಮ್ಮ ಸ್ವಂತ ದುಡಿಮೆಯಿಂದಲೇ ಖರೀದಿಸಿರುತ್ತಾರೆ. ಹೀಗೆ ಸ್ವಂತ ದುಡಿಮೆಯಿಂದಲೇ ಇಷ್ಟ ವಸ್ತುಗಳನ್ನು ಖರೀದಿಸುವ ಇವರಲ್ಲಿ ಯಾರಲ್ಲೂ ಕಾಣದ ಆತ್ಮವಿಶ್ವಾಸವನ್ನು ಗುರುತಿಸಿದ್ದೇನೆ. ಸಾರ್ವಜನಿಕ ಸಭೆಯೊಳಗೆ ಹಾಡುವ ಇವರು ಸಭೆಗೂ ಹಾಗೂ ತಮಗೂ ಶೋಭೆ ಬರಲೆಂದು ಆಸಕ್ತಿವಹಿಸಿ ಸ್ವಲ್ಪ ಅಲಂಕರಿಸಿ ಕೊಂಡಿರುತ್ತಾರೆ. ಮದುವೆ, ಸೀಮಂತ ಮಗುವಿನ ಹೆಸರಿಡುವುದು, ಜಾತ್ರೆ ಮೊದಲಾದ ಕೌಟುಂಬಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಎಲ್ಲ ಜಾತಿಯ ಮಹಿಳೆಯರೂ ಹೊಸ ಬಟ್ಟೆಯನ್ನು ಧರಿಸಿ ಸಂಭ್ರಮಿಸುತ್ತಿರುತ್ತಾರೆ. ಅಂದರೆ ಕೌಟುಂಬಿಕ ಕಾರ್ಯಕ್ರಮಗಳಾಗಿರಬಹುದು, ಜಾತ್ರೆ ಹಬ್ಬಹರಿದಿನಗಳಂತಹ ಸಾಮಾಜಿಕ ಕಾರ್ಯಕ್ರಮಗಳಾಗಿರಬಹುದು-ಅಲ್ಲಿ ಹೆಣ್ಣು ಮಕ್ಕಳು ಹೊಸಬಟ್ಟೆ ಉಟ್ಟುಕೊಂಡು ಅಲಂಕರಿಸಿಕೊಳ್ಳುವುದು ಒಪ್ಪಿತವಾಗಿದೆ ಹಾಗೂ ಸಹಜವೆನಿಸಿಕೊಂಡಿದೆ. ಜಾತ್ರೆ-ಹಬ್ಬ ಹರಿದಿನಗಳಲ್ಲಿ ಸಾರ್ವಜನಿಕರೆದುರು ಹರದೇಶಿ-ನಾಗೇಶಿ ಹಾಡುಗಳನ್ನು ಹಾಡುವ ಮಹಿಳೆಯರು ಒಳ್ಳೆಯ ಬಟ್ಟೆ ತೊಟ್ಟುಕೊಂಡು, ಕಷ್ಟಪಟ್ಟು ಮಾಡಿಸಿದ ಒಡವೆಗಳನ್ನು ಧರಿಸುತ್ತಾರೆ. ಒಳ್ಳೆ ಬಟ್ಟೆ ಧರಿಸುವುದು ನಾಗರೀಕತೆ ಎನ್ನುವುದಾದರೆ, ಅದು ಬಡ ಮಹಿಳೆಗೆ ಅದರಲ್ಲೂ ದೇವರಿಗೆ ಮೀಸಲಿರಿಸಿದ ಮಹಿಳೆಯರಿಗೂ ಅನ್ವಯಿಸುತ್ತದೆ. ಆದರೆ ಮಾಸದ ಹೊಸ ಬಟ್ಟೆಯುಟ್ಟ ಕಾರಣಕ್ಕಾಗಿಯೇ ಈ ಮಹಿಳೆಯರು ‘ಸೂಳೆಯರು’, ‘ಪುರುಷರ ಚಿತ್ತ ಚಂಚಲ ಮಾಡುವುದಕ್ಕೆಂದೇ ಅಲಂಕರಿಸಿಕೊ‌ಳ್ಳುತ್ತಾರೆ’, ‘ಕುಟುಂಬ ಮುರಿಯುವವರು’ ಎನ್ನುವ ನಿಂದನೆಗೆ ಗುರಿಯಾಗಬೇಕಾಗುತ್ತದೆ. ಹರಕು ಸೀರೆಯನ್ನು ಉಟ್ಟುಕೊಂಡು ಹೋದ ಹುಡುಗಿಯರಿಗೆ, ಮಹಿಳೆಯರಿಗೆ ಹಾಡಲು ವೇದಿಕೆಯನ್ನು ಕೊಟ್ಟಿಲ್ಲ. ಸಭೆಗೆ ಶೋಭೆ ತರುವ ನಿಟ್ಟಿನಲ್ಲಿ ಉಡುಪು, ಒಡವೆ ಹಾಕಿಕೊಂಡರೆ ‘ಬಣ್ಣದ ಸೂಳೆಯರು’ ಎಂದು ಅವಹೇಳನಕ್ಕೆ ಒಳಗಾಗುತ್ತಾರೆ.

“ಲೈಂಗಿಕವಾಗಿ ಪುರುಷರನ್ನು ಆಕರ್ಷಿಸಲು ದೇವರಿಗೆ ಮೀಸಲಿರಿಸಿದ ಮಹಿಳೆಯರು ಅಲಂಕರಿಸಿಕೊಳ್ಳುತ್ತಾರೆ. ಹೀಗೆ ಅಲಂಕಾರದ ಮೂಲಕ ಹೆಚ್ಚು ಹೆಚ್ಚು ಗಿರಾಕಿಗಳನ್ನು ಆಕರ್ಷಿಸಿ, ಹಣ ಸಂಪಾದಿಸುತ್ತಾರೆ” ಎನ್ನುವ ಸಾಮಾಜಿಕ ಗ್ರಹಿಕೆ ಹಿಂದೆಂದಿನಂತೆ ಈಗಲೂ ಚಾಲ್ತಿಯಲ್ಲಿದೆ. ಇವತ್ತಿನ ಗ್ರಾಮೀಣ ಪ್ರದೇಶಗಳಲ್ಲಿ ಮೇಲ್ಜಾತಿ ಹಾಗೂ ಮಧ್ಯಮ ಜಾತಿಯ ಮಹಿಳೆಯರಿಗೆ ಅಲಂಕಾರ ಕುರಿತು ನನ್ನಜ್ಜಿಯ ಕಾಳದ ಹಾಗೆ ತೀವ್ರ ನಿಬಂರ್ಧಗಳೇನೂ ಇಲ್ಲ.[1] ಆದರೂ ಇಂದಿಗೂ ಗ್ರಾಮೀಣ ಪ್ರದೇಶಗಳಲ್ಲಿ ಅಲಂಕಾರಕ್ಕೂ ದೇವರಿಗೆ ಮೀಸಲಿರಿಸಿದ ಮಹಿಳೆಯರಿಗೂ ಸಂಬಂಧ ಕಲ್ಪಿಸಿಯೇ ನೋಡಲಾಗುತ್ತದೆ. ದೇವರಿಗೆ ಮೀಸಲಿರಿಸಿದ ಮಹಿಳೆಯರ ಅಲಂಕಾರವೂ ಕೂಡ ಅವಹೇಳನೆಗೆ ಗುರಿಯಾಗುತ್ತದೆ. ದೇವರಿಗೆ ಮೀಸಲಿರಿಸಿದ ಮಹಿಳೆಯ ಕುರಿತು ಬಲಾಢ್ಯ ಸಮುದಾಯಗಳು ದ್ವಂದ್ವ ಗ್ರಹಿಕೆಗಳನ್ನು ಕಟ್ಟಿಕೊಂಡಿವೆ. ಅಲಂಕಾರಕ್ಕೂ ದೇವರಿಗೆ ಮೀಸಲಿಸಿರಿದ ಮಹಿಳೆಯರಿಗೆ ಸಮೀಕರಿಸಿ ನೋಡುವ ಪ್ರಕ್ರಿಯೆಯು, ಈ ಮಹಿಳೆಯರು ಅಲಂಕರಿಸಿಕೊಳ್ಳುವ ಸಾಮಾಜಿಕ ಸಮ್ಮತಿ ಇದೆ ಎನ್ನುವುದನ್ನು ಸ್ಪಷ್ಟಪಡಿಸುತ್ತದೆ. ಅದೇ ಮಹಿಳೆಯರು ಸಾರ್ವಜನಿಕ ಸಭೆಗಳಲ್ಲಿ, ಕಲಾ ಪ್ರದರ್ಶನ ನೀಡುವ ಸಂದರ್ಭದಲ್ಲಿ ಅಲಂಕರಿಸಿಕೊಂಡರೆ ಗಂಡಸರನ್ನು ‘ಅಡ್ಡದಾರಿಗೆಳೆಯುವವರು’, ‘ದಂದೆ ಮಾಡುವವರು’ ಎಂದು ಅವಹೇಳನಕ್ಕೆ ಬಲಿಯಾಗಿಸಲಾಗುತ್ತದೆ. ಈ ಮಹಿಳೆಯರ ಅಲಂಕಾರದ ಕುರಿತು ಏಕಕಾಲದಲ್ಲಿ ಸಾಮಾಜಿಕ ಸಮ್ಮತಿ, ನಿರಾಕರಣೆ ಹಾಗೂ ತಿರಸ್ಕಾರ ಈ ಮೂರು ಸಂಗತಿಗಳು ಮುಪ್ಪರಿಗೊಂಡಿವೆ.

ದೇವರಿಗೆ ಮೀಸಲಿರಿಸಿದ ಮಹಿಳೆಯರು ಸತಿಯಾಗಲು ಸಾಧ್ಯವಿರದಿದ್ದರೂ ಸತಿತ್ವವನ್ನು ಪಾಲಿಸಬೇಕೆಂಬ ನಿರೀಕ್ಷೆಯಿರುತ್ತದೆ; ಅಪೇಕ್ಷೆಯಿರುತ್ತದೆ. ಸತಿತ್ವ ಪರಿಕಲ್ಪನೆ ಬಂದ ತಕ್ಷಣ ಅಲ್ಲಿ ಅಲಂಕಾರ; ನಿರಾಕರಣೆಗೆ ಒಳಪಡುತ್ತದೆ. ಹೀಗಾಗಿ ಹರದೇಶೀ-ನಾಗೇಶಿ ಹಾಡುವ ಮಹಿಳೆಯರ ಅಲಂಕಾರವು ಅವಹೇಳನ ಹಾಗೂ ಅಪಹಾಸ್ಯಕ್ಕೆ ಗುರಿಯಾಗಿರಬಹುದು.

 

[1] ನನ್ನ ಅಜ್ಜಿ ನನ್ನ ಹದಿವಯಸ್ಸಿನ ಅನುಭವಗಳನ್ನು ತೇವಗಣ್ಣಿನಿಂದ ಹೇಳಿದ್ದು ನೆನಪು. ಚಿಕ್ಕವಳಿರುವಾಗ ಮನೆಯಲ್ಲಿ ಗಾಢ ಬಣ್ಣದ ಬಟ್ಟೆಗಳನ್ನು ಧರಿಸಲು ನಿಷೇಧವಿತ್ತಂತೆ. ಹಾಗೆಯೇ ಪ್ರತಿನಿತ್ಯ ತಲೆ ಬಾಚಿಕೊಳ್ಳುವುದು, ಸ್ನಾನ ಮಾಡುವುದು ಮಾನ್ಯವೆನಿಸಿರಲಿಲ್ಲವಂತೆ. ಹಾಗೊಂದು ವೇಳೆ ನಿತ್ಯ ತಲೆ ಬಾಚಿಕೊಂಡರೆ, ಸ್ನಾನ ಮಾಡಿದರೆ, ಸ್ವಲ್ಪ ಅಲಂಕರಿಸಿಕೊಂಡರೆ ನನ್ನ ಅಜ್ಜಿಯ ತಾಯಿ, “ಗಂಡಸರ ಕಣ್ಣು ಕುಕ್ಕುವಂಗ ಅಲಂಕಾರ ಮಾಡ್ಕೊಬಾರ್ದು. ಮನಿತನಸ್ಥ ಹೆಣ್ಣು ಮಕ್ಕಳು ಹಿಂಗಿರಾಕ ಬರಲ್ಲ. ಹೀಂಗ ಅಲಂಕಾರ ಮಾಡಿಕೊಂಡ್ರ ‘ದೇವದಾಸಿ’ ಹೆಣ್ಣ ಮಗಳಂಗ ಹ್ಯಾಂಗ ಸಿಂಗರಿಸಿಕೊಂಡಾಳು ನೋಡು ಅಂತ ಆಡ್ಕೊತಾರವ್ವಾ ಅಂತ ಬುದ್ಧಿವಾದಾ ಹೇಳತಿದ್ಲು. ನಾನು ಚಂದ ಕಾಣಬೇಕು ಅಂತ ಆಸೆ ಇದ್ರೂ ಅವ್ವ ಹಾಂಗ ಮಾಡ್ಕೊಳ್ಳಾಗ ಬಿಡ್ತಿರಲಿಲ್ಲ. ಕನ್ನಡ್ಯಾಗ ಮುಖಾ ಕೂಡ ಮ್ಯಾಲಿಂದ ಮ್ಯಾಲ ನೋಡ್ಕೊಬಾರ್ದು ಅಂತಿದ್ಲು. ತವರ ಮನೀದು ಈ ಕತಿಯಾದ್ರ; ಗಂಡಮನೀದು ಬ್ಯಾರೆದು. ನಾನು ಮದ್ವಿಯಾಗಿ ಎಂಟು ಮಕ್ಕಳಾ ಹಡದ್ರೂ ಗಂಡನ ಮುಖಾನ ನೋಡಿರಲಿಲ್ಲ. ನನ್ನ ಮುಖಾ ಕಾಣ್ಲಾದಂಗ ಮುಖಕ್ಕೆ ಸೀರಿ ಸೆರಗ ಇರೋದು. ದನಿಯೊಂದರಿಂದನs ಗಂಡನ್ನ ಗುರುತಿಸುತಿದ್ದ್ಯಾ. ನಿಮ್ಮಜ್ಜ ಮೂರು ಮಂದಿನ (ಮಹಿಳೆಯರು) ಮದವಿ ಆಗಿದ್ದಾ. ಅವ್ರಿಗಿ ಮಕ್ಕಳಿರ್ಲಿಲ್ಲ. ಆಸ್ತಿಯೆಲ್ಲಾ ನನ್ನ ಮಕ್ಕಳ ಹೆಸರ‍್ಲೆ ಆಗತ್ತಂತ ಮೊದಲನೆ ಹೆಣ್ತಿ ನಿಮ್ಮಜ್ಜನ ಕೊಲ್ಲಿಸಿದ್ಲು ಅಂತ ಹೇಳ್ತಾರ. ನಿಮ್ಮ ಅಜ್ಜ ಪರೂರಾಗ ಸತ್ತಿದ್ದಕ ಊರಿನ ಜನಾನ ಮಣ್ಣ ಮಾಡಿದ್ರು. ಹೀಂಗಾಗಿ ನಿಮ್ಮಜ್ಜನ ಸತ್ತ ಮ್ಯಾಲೂ ನೋಡಾಕಾಗಲಿಲ್ಲ. ತವರ ಮನಿಯ್ಯಾಗ ನಮ್ಮವ್ವ ಹಾಕಿದ ಸಂಸ್ಕಾರದ್ಹಂಗ ಇರತಿದ್ದಾ. ತವರ ಮನಿಯಾಗ ಇದ್ದಾಗ ಎಲ್ಲರಿಗೂ ಮುಖಾ ಕಾಣುವಂಗ ಇರತಿದ್ದೆ. ಗಂಡನ ಮನ್ಯಾಗ ಯಾರಿಗೂ ಮುಖಾ ಕಾಣ್ಲಾರ‍್ದಂಗ ಸೆರಗ ಹಾಕೊಂಡು ಇರತಿದ್ದ್ಯಾ. ನಿಮ್ಮಜ್ಜ ಇದ್ದಾಗ ಅಲಂಕಾರಾ ಮಾಡ್ಕೊಬಾರ್ದು ಅಂತಿದ್ರು. ನಿಮ್ಮಜ್ಜ ಸತ್ತ ಮ್ಯಾಲ ಏನು ಹೇಳೂದೈತಿ?” ಎಂದಿದ್ದಳು. ಮೇಲ್ಜಾತಿ ಹಾಗೂ ಮಧ್ಯಮ ಜಾತಿಗಳಲ್ಲಿನ ಮಹಿಳೆಯರಿಗೂ ಅಲಂಕಾರದ ಕುರಿತು ನಿರ್ಬಂಧವಿರುವುದು ನನ್ನಜ್ಜಿಯ ಅನುಭವ ಕಥನದಿಂದ ತಿಳಿದುಬರುತ್ತದೆ. ಅಂದರೆ ಮೊದಲಿನಿಂದಲೂ ‘ಹೆಣ್ಣಿನ ಅಲಂಕಾರವು ಪುರುಷನ ಚಿತ್ತವನ್ನು ಚಂಚಲ ಮಾಡುತ್ತದೆ’ ಎನ್ನುವ ನೆಲೆಯಲ್ಲಿಯೇ ಅರ್ಥೈಸಿ ಅದನ್ನು ‘ದೇವದಾಸಿ’ಯರೊಂದಿಗೆ ಸಮೀಕರಿಸಲಾಗಿದೆ.