. ಹಾಡುಗಾರಳ ಕೌಟುಂಬಿಕ ಕಲಾ ಹಿನ್ನೆಲೆ

ಹರದೇಶಿ-ನಾಗೇಶಿ ಹಾಡುವ ವೃತ್ತಿಯಲ್ಲಿ ದಪ್ಪು ಬಾರಿಸುತ್ತ ಇಲ್ಲವೆ ಚೌಡಿಕೆ ನುಡಿಸುತ್ತ ಹಾಡುವ ಕಲೆಯಲ್ಲಿ ಪಳಗಿದರೆ ಸಾಕು ಎನ್ನುವಂತಿಲ್ಲ. ಈ ಕಲೆ ಮೇಳದೊಂದಿಗೆ ಪ್ರದರ್ಶನಗೊಳ್ಳುವುದರಿಂದ, ಹಾಡುಗಾರರು ದಪ್ಪು ಬಾರಿಸಿ ಹಾಡುತ್ತಿದ್ದರೆ ಸೂರು, ತಾಳ ಹಾಕುವವರು ಬೇಕಾಗುತ್ತದೆ. ಇತ್ತೀಚಿಗೆ ಸೋಲಾಪುರದ ಭಾಗದಲ್ಲಿ ಪಿಟೀಲು ಬಾರಿಸುವವರು ಈ ಮೇಳದಲ್ಲಿರುವುದು ಕಂಡುಬಂದಿತು. ಚೌಡಿಕೆಯಲ್ಲಿ ಹರದೇಶಿ-ನಾಗೇಶಿ ಹಾಡುತ್ತಿದ್ದರೆ ಅಲ್ಲಿ ತುಂತುಣಿ, ತಾಳ ಹಾಗೂ ಡೋಲಕ ಬಾರಿಸುವವರು ಹಿಮ್ಮೇಳವಾಗಿ ಇರುತ್ತಾರೆ. ಅಂದರೆ ಹರದೇಶಿ-ನಾಗೇಶಿ ಹಾಡುಗಾರಿಕೆಯು ಏಕವ್ಯಕ್ತಿಯಿಂದ ಪ್ರದರ್ಶನಗೊಳ್ಳುವುದಿಲ್ಲ. ಅದು ಮೇಳದೊಂದಿಗೆ ಪ್ರದರ್ಶನಗೊಳ್ಳುವ ಕಲೆಯಾಗಿದೆ. ಹೀಗಾಗಿ ಹಾಡುಗಾರರ ಕುಟುಂಬದಲ್ಲಿಯೇ ತಂದೆಯೋ, ತಾಯಿಯೋ, ಅಣ್ಣನೋ, ತಮ್ಮನೋ ತಾಳ ಇಲ್ಲವೆ ಸೂರು ನುಡಿಸುತ್ತಾರೆ; ಅಥವಾ ತಾಳ ಮತ್ತು ಸೂರು(ತುಂತುಣಿ) ಎಡನ್ನೂ ನುಡಿಸುತ್ತಾರೆ; ತಾಳ ಇಲ್ಲವೆ ಡೋಕ ನುಡಿಸುತ್ತಾರೆ; ಅಥವಾ ತಾಳ ಮತ್ತು ಡೋಲಕ ಎರಡನ್ನೂ ನುಡಿಸುತ್ತಾರೆ. ಹೀಗೆ ಕುಟುಂಬದ ಸದಸ್ಯರೇ ಹಿಮ್ಮೇಳವಾಗಿದ್ದರೆ ಹಾಡುಗಾರರ ಕಲಾ ಜೀವನಕ್ಕೆ ಅನುಕೂಲವಾಗುತ್ತದೆ. ಇದರಿಂದಾಗಿ ಹಿಮ್ಮೇಳದವರಿಗೆ ಪ್ರತ್ಯೇಕ ಕೂಲಿ ಕೊಟ್ಟು ಕರೆದುಕೊಂಡು ಹೋಗುವ ಆರ್ಥಿಕ ಹೊರೆ ಹಾಡುಗಾರರ ಮೇಲೆ ಬೀಳುವುದಿಲ್ಲ. ಹಾಡುಗಾರಿಕೆಗೆ ಸಂಬಳ ಕೊಡದೇ ಇರುವುದು ವೃತ್ತಿಯ ಆರಂಭದಲ್ಲಿ ಆರ್ಥಿಕ ಹಿನ್ನಡೆಯನ್ನುಂಟು ಮಾಡಿದರೂ, ಅದು ಆರ್ಥಿಕ ಹೊರೆಯಾಗುವುದಿಲ್ಲ. ಹಿಮ್ಮೇಳದವರಿಗೆ ಕೊಡುವ ಕೂಲಿಯು ಉಳಿಯುತ್ತದೆ. ಆದರೆ ಹಾಡುವುದಕ್ಕೆ ದೂರದ ಊರಿಗೆ ಹೋದರೆ ಬಸ್‌ಚಾರ್ಜಿಗೆಂದು ಸಾಲ ಮಾಡುವುದು ಇವರಿಗೆ ತಪ್ಪುದಿಲ್ಲ. ಹಿಮ್ಮೇಳದವರಿಗೆ ಕೊಡುವ ಕೂಲಿಗಾಗಿ ಸಾಲ ಮಾಡಬೇಕಾದ ಒತ್ತಡದಿಂದ ಮಾತ್ರ ಇವರು ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತದೆ. ದಪ್ಪು ಹಿಡಿದು ಹಾಡುವವರು ಮಹಿಳೆಯಾಗಿದ್ದು ಹಿಮ್ಮೇಳದಲ್ಲಿ ಅಣ್ಣ ಇಲ್ಲವೆ ಅಪ್ಪ ಇರಬಹುದು; ಅಥವಾ ಅಣ್ಣ ಮತ್ತು ಅಪ್ಪ ಇಬ್ಬರೂ ಇರಬಹುದು; ಅಣ್ಣ ಇಲ್ಲವೆ ತಮ್ಮ ಇರಬಹುದು; ಅಥವಾ ಅಣ್ಣ ಮತ್ತು ತಮ್ಮ ಇಬ್ಬರೂ ಇರಬಹುದು. ಇವರು ಬಂದ ಭಕ್ಷೀಸನ್ನು, ಇಲ್ಲವೆ ಜಾತ್ರೆಯವರು ಕೊಟ್ಟ ನೂರಿನ್ನೂರು ರೂಪಾಯಿಗಳನ್ನು ಹಾಡಿಕೆ ಮಹಿಳೆಗೆ ಕೊಡುವುದಿಲ್ಲ. ಮಗಳು ಇಲ್ಲವೆ ಮೊಮ್ಮಗಳಿಗೆ ಹರದೇಶಿ-ನಾಗೇಶಿ ಹಾಡುಗಳನ್ನು ಕಲಿಯಲು ಹಣ ಹೂಡಿರುತ್ತಾರೆ. ಹೀಗಾಗಿ ಇವಳಿಗೆ ಬಂದ ಹಣವನ್ನು ಬಳಸಿಕೊಳ್ಳಲು ಹಕ್ಕಿದೆ ಎಂಬುದು ಇವರ ನಿಲುವು. ಹೀಗಾಗಿ ಬಡತನದ ಕುಟುಂಬದಲ್ಲಿ ಆಕೆ ತನ್ನ ಜೊತೆಯಿರುವ ಪುರುಷನಿಗಿಂತ (ಅಪ್ಪ, ಅಣ್ಣ, ತಾತ, ತಮ್ಮ, ಮಾವ) ತೀವ್ರ ಬಡತನವನ್ನು ಎದುರಿಸುತ್ತಾಳೆ. ಜೊತೆಗೆ ಪುರುಷನಂತೆ ದುಡಿದ ಹಣದ ಮೇಲೆ ಹಕ್ಕು, ಅದನ್ನು ಖರ್ಚು ಮಾಡುವ ಇಲ್ಲವೆ ವಿತರಿಸುವ ಸ್ವಾತಂತ್ರ್ಯದಿಂದ ಈಕೆ ವಂಚಿತಳಾಗಿರುತ್ತಾಳೆ.

. ಸ್ವತಂತ್ರ ವೃತ್ತಿ ನಿರ್ವಹಣೆ

ದಪ್ಪು ಬಾರಿಸುತ್ತಾ ಹರದೇಶಿ-ನಾಗೇಶಿ ಹಾಡುಗಳನ್ನು ಹಾಡುವ ಮಹಿಳೆಗೆ ತನ್ನ ಹಿಂದೆ ಇರುವ ಸೂರಿನವರಿಗೆ ಹಾಗೂ ತಾಳದವರಿಗೆ ಕೂಲಿಕೊಟ್ಟು ಅವರನ್ನು ಖಾಯಮಾಗಿ ತಮ್ಮ ಮೇಳದಲ್ಲಿ ಉಳಿಸಿಕೊಳ್ಳುವ ಜವಾಬ್ದಾರಿಯಿರುತ್ತದೆ. ಇಂತಹ ಜವಾಬ್ದಾರಿಯನ್ನು ಪುರುಷ ಹಾಡುಗಾರನಿಗೆ ನಿಭಾಯಿಸುವುದು ಸುಲಭವಾಗುತ್ತದೆ. ಕೇವಲ ಹಾಡುವ ದುಡಿಮೆಯನ್ನು ಮಾತ್ರ ಆತ ನಂಬಿಕೊಂಡಿರುವುದಿಲ್ಲ. ಹಾಡುವ ಈ ವೃತ್ತಿಯ ಜೊತೆಯಲ್ಲಿಯೇ ಹೊಲದ ಕೆಲಸವನ್ನು, ತರಕಾರಿ, ಚಾಪೆ ಇಲ್ಲವೆ ಮೊರ ಮಾರುವ ಮೊದಲಾದ ವೃತ್ತಿಯನ್ನು ನಿರ್ವಹಿಸುತ್ತಿರುತ್ತಾನೆ. ಹೀಗಾಗಿ ಹಿಮ್ಮೇಳದವರಿಗೆ ಕೂಲಿ ಕೊಟ್ಟು ಹಾಡುವುದಕ್ಕೆ ಕರೆದು ಕೊಂಡು ಹೋಗುವುದು ವೃತ್ತಿ ಆರಂಭದಲ್ಲಿ ಮಹಿಳಾ ಹಾಡುಗಾರರಿಗೆ ಹೊರೆಯೆನಿಸಿದಂತೆ, ಪುರುಷ ಹಾಡುಗಾರರಿಗೆ ಹೊರೆಯೆನಿಸುವುದಿಲ್ಲ. ಜಮಖಂಡಿಯ ಹತ್ತಿರ ಬರುವ ಕುಂಬಾರ ಹಳ್ಳಿಯ ಪಾತಾಳವ್ವ ಮಾಂಗ ದಪ್ಪು ಹಿಡಿದುಕೊಂಡೇ ನಾಗೇಶಿ ಹಾಡುಗಳನ್ನು ಹೇಳುತ್ತಿದ್ದಳು. ಆರಂಭದಲ್ಲಿ ಹಾಡುವ ವೃತ್ತಿಯಲ್ಲಿ ಉತ್ಪಾದನೆ ಆಕರ್ಷಕವಾಗಿರುವುದಿಲ್ಲ. ಅಂದರೆ ಹಾಡುವುದರಿಂದ ಆಕರ್ಷಕ ಸಂಬಳವನ್ನು ಪಡೆಯಲಾಗುವುದಿಲ್ಲ. ಹೀಗಾಗಿ ಜೊತೆಯಲ್ಲಿ ಬರುವ ಇತರ ಕಲಾವಿದರಿಗೆ ಪಾತಾಳವ್ವನೇ ಕೂಲಿ ಕೊಟ್ಟು ಕರೆದುಕೊಂಡು ಹೋಗುತ್ತಿದ್ದಳು. ಆಕೆ ಕೊಡುವ ಕೂಲಿ ಸೂರು ಹಾಕುವವನಿಗೆ ಹಾಗೂ ತಾಳ ಬಾರಿಸುವವನಿಗೆ ಸಾಕಾಗುತ್ತಿರಲಿಲ್ಲ. ಇಡೀ ಕುಟುಂಬವೇ ಈ ಪುರುಷರ ದುಡಿಮೆಯನ್ನು ಅವಲಂಬಿಸಿತ್ತು. ವೃತ್ತಿಯ ಆರಂಭದಲ್ಲಿ ಪಾತಾಳವ್ವ ನೀಡುವ ಕೂಲಿ ಕುಟುಂಬ ನಿರ್ವಹಣೆಗೆ ಸಾಲದೇ ಇದ್ದಾಗ ಅವರು ಉಪಜೀವನಕ್ಕೆ ಬೇರೆ ಕೆಲಸವನ್ನು ನೋಡಿಕೊಂಡರು. ಇವಳು ಹಾಡಿಕೆಗೆ ಕರೆದಾಗ ಹಿಮ್ಮೇಳದವರು ತಾವು ನಿರ್ವಹಿಸುತ್ತಿದ್ದ ವೃತ್ತಿಯನ್ನು ಬಿಟ್ಟು ಬರಲಾಗಲಿಲ್ಲ. ಪಾತಾಳವ್ವನಿಗೆ ಈ ಇಬ್ಬರು ಪುರುಷ ಕಲಾವಿದರು ತಮಗೆ ಬರುವ ಕೂಲಿಯನ್ನು ಕೊಟ್ಟರೆ ಮಾತ್ರ ಸೂರು ಹಾಕಲು, ತಾಳ ಬಾರಿಸಲು ಬರುವುದಾಗಿ ಹೇಳಿದರು. ಹಳ್ಳಿಗಳಲ್ಲಿ ಹೊಲ ಇಲ್ಲವೆ ಇತರ ಕೆಲಸಗಳಿಗೆ ಕೂಲಿಯನ್ನು ಲಿಂಗಾಧಾರಿತ ನೆಲೆಯಲ್ಲಿಯೇ ವಿಭಜಿಸಿ ವಿತರಿಸುತ್ತಾರೆ. ಯಾವಾಗಲೂ ಮಹಿಳೆಯರಿಗಿಂತ ಪುರುಷರು ಹೆಚ್ಚು ಕೂಲಿಯನ್ನು ಪಡೆಯುತ್ತಿರುತ್ತಾರೆ. ಹೀಗಾಗಿ ಪಾತಾಳವ್ವ ಪುರುಷರು ಬಯಸುವ ಕೂಲಿಯನ್ನು ಕೊಡಲಿಕ್ಕಾಗದೇ ನಾಗೇಶಿ ಹಾಡುಗಳನ್ನು ದಪ್ಪಿನಲ್ಲಿ ಹಾಡುವುದನ್ನು ಕೈಬಿಟ್ಟಳು. ವೃತ್ತಿಯ ಆರಂಭದಲ್ಲಿ ಈ ಬಗೆಯ ಆರ್ಥಿಕ ಹಿನ್ನಡೆಗಳನ್ನು ಹಾಗೂ ಸಂಕಷ್ಟಗಳನ್ನು ಪುರುಷ ಹಾಡುಗಾರರು ಎದುರಿಸಿದ್ದು ಕ್ಷೇತ್ರಾಧ್ಯಯನದಲ್ಲಿ ಕಂಡುಬರಲೇ ಇಲ್ಲ. ಹಿಮ್ಮೇಳದ ಪುರುಷರು ಬಯಸುವಷ್ಟು ಕೂಲಿಯನ್ನು ಕೊಡಲಿಕ್ಕಾಗದ ಪಾತಾಳವ್ವ ಚೌಡಕಿಯನ್ನು ಹಿನ್ನೆಲೆಯಾಗಿಟ್ಟುಕೊಂಡು ನಾಗೇಶಿ ಹಾಡುಗಳನ್ನು ಹಾಡಬೇಕಾಯಿತು.

ದಪ್ಪಿನ ಬದಲು ಚೌಡಕಿಯನ್ನು ಹಿನ್ನೆಲೆಯಾಗಿಟ್ಟುಕೊಂಡ ಹರದೇಶಿ-ನಾಗೇಶಿ ಹಾಡುಗಳನ್ನು ಹಾಡುವ ಮೇಳಗಳಲ್ಲಿ ಸ್ತ್ರೀಯರೇ ಇರುತ್ತಾರೆ. ಹೆಣ್ಣುಮಕ್ಕಳು ಪುರುಷರು ಬಯಸುವಷ್ಟು ಕೂಲಿಯನ್ನು ಕೇಳದೇ ಇರುವುದರಿಂದ ಇವರನ್ನು ಇಟ್ಟುಕೊಂಡು ಮೇಳ ನಿಭಾಯಿಸುವುದು ಸುಲಭ ಎನ್ನುವುದು ಪಾತಾಳವ್ವನಂತಹ ಕಲಾವಿದೆಯರ ಅಭಿಪ್ರಾಯ. ಹರದೇಶಿ-ನಾಗೇಶಿ ಹಾಡುಗಳನ್ನು ಹಾಡುವ ಚೌಡಕಿ ಮೇಳಗಳಲ್ಲಿ ಡೋಲಕ ಬಾರಿಸುವುದು ಮೊದಲು ಇರಲಿಲ್ಲವಂತೆ. ಹೀಗಾಗಿ ಪಾತಾಳವ್ವನಿಗೆ ವೃತ್ತಿ ಆರಂಭದಲ್ಲಿ ಹೆಣ್ಣುಮಕ್ಕಳನ್ನೇ ಬಳಸಿಕೊಂಡು ಮೇಳ ಕಟ್ಟಿಕೊಂಡು ಹಾಡುವುದು ಆರ್ಥಿಕ ಹೊರೆಯೆನಿಸಲಿಲ್ಲವಂತೆ.

ವೃತ್ತಿಯ ಆರಂಭದಲ್ಲಿ ಹಿಮ್ಮೇಳದ ಕಲಾವಿದರಿಗೆ ಕೊಡುವ ಕೂಲಿಯ ಜೊತೆಯಲ್ಲಿ, ಹಾಡುವುದಕ್ಕಾಗಿ ದೂರದ ಊರಿಗೆ ಹೋಗಿ ಬರಬೇಕಾದಾಗ ಬಸ್‌ಚಾರ್ಜನ್ನು ಸಾಲವಾಗಿ ಪಡೆಯಬೇಕಾದ ದುರ್ದಿನಗಳನ್ನು ಕೆಲವು ಹಾಡಿಕೆ ಮಹಿಳೆಯರು ಎದುರಿಸಿದ್ದಾರೆ ಹಿಮ್ಮೇಳದವರಿಗೆ ಕೊಡುವ ಕೂಲಿಗೆ ಹಾಗೂ ಬಸ್‌ಚಾರ್ಜ್‌‌ಗೆ ಸಾಲವನ್ನು ಸಾಮಾನ್ಯವಾಗಿ ಊರ ಗೌಡತಿಯರಿಗೇ ಕೇಳುತ್ತಾರೆ. ಗೌಡರಿಗೆ ಅಥವಾ ಊರಿನಲ್ಲಿನ ಇತರ ಮುಖಂಡರಿಗೆ ಸಾಲವನ್ನು ಕೇಳುವುದಿಲ್ಲ. ಪುರುಷರ ಹತ್ತಿರ ಸಾಲ ಕೇಳುವುದರಿಂದ ಸಾಲದ ನೆಪದಲ್ಲಿ ತಾವು ದುರ್ಬಳಕೆಗೊಳ್ಳುವ ಅಪಾಯವನ್ನು ಈ ಮಹಿಳಾ ಹಾಡುಗಾರರ ಅರಿತಿದ್ದಾರೆ. ಗೌಡತಿಯರು ಇಲ್ಲವೆ ಊರಿನಲ್ಲಿನ ಇತರ ಶ್ರೀಮಂತ ಕುಟುಂಬಗಳಲ್ಲಿನ ಮಹಿಳೆಯರಿಂದ ಸಾಲ ದೊರೆಯದಿದ್ದರಿಂದಾಗಿ, ಆಸೆಪಟ್ಟು ಕಲಿತ ಹಾಡುವ ವೃತ್ತಿಯನ್ನು ಬಿಟ್ಟವರು ಬೇಕಾದಷ್ಟಿದ್ದಾರೆ. ಆದರೆ ಪುರುಷ ಹಾಡುಗಾರರಿಗೆ ಊರಿನಲ್ಲಿನ ಶ್ರೀಮಂತ ಮಹಿಳೆಯರನ್ನೇ ಕೇಳಬೇಕು ಇಲ್ಲವೆ ಪುರುಷರನ್ನೇ ಕೇಳಬೇಕು ಎನ್ನುವ ಯಾವ ಒತ್ತಡಗಳೂ ಇಲ್ಲ. ಯಾರನ್ನು ಸಾಲ ಕೇಳಿದರೆ, ಯಾವ ಅಪಾಯಗಳು ಎದುರಾಗಬಹುದು ಎನ್ನುವ ಲೆಕ್ಕಾಚಾರವನ್ನು ಇವರು ಮಾಡಬೇಕಾಗಿಲ್ಲ. ಅನೇಕ ಪುರುಷ ಹಾಡುಗಾರರಿಗೆ ಅಲ್ಪಸ್ವಲ್ಪ ಭೂಮಿಯಿದೆ. ಇದನ್ನು ಲಕ್ಷಿಸಿಯೇ ಇವರಿಗೆ ಸಾಲವನ್ನು ಕೊಡುತ್ತಾರೆ. ಸಾಲ ಪಡೆಯುವ ಇವರು ಋಣಭಾರದಲ್ಲಿ ಬಳಲಬೇಕಿಲ್ಲ. ಸಂದರ್ಭ ಬಂದರೆ ಹೊಲ ಇಲ್ಲವೆ ಮನೆಯನ್ನು ಒತ್ತೆಯಿಟ್ಟು ಹಾಡುವ ವೃತ್ತಿ ಆರಂಭಿಸುವ ಇವರು ಮಹಿಳಾ ಹಾಡುಗಾರರಂತೆ ಸಾಲ ಕೊಟ್ಟವರ ಋಣಭಾರದಲ್ಲಿ ವ್ಯಕ್ತಿತ್ವವನ್ನು ಕುಬ್ಜಮಾಡಿಕೊಳ್ಳಬೇಕಿಲ್ಲ. ಹಾಡಲು ಕರೆಸುವವರು ಸಂಬಳ ಕೊಡಲು ಪ್ರಾರಂಭಿಸಿದರೆ ಸುಲಭವಾಗಿ ಸಾಲವನ್ನು ಬಗೆಹರಿಸಬಹುದು ಎನ್ನುವುದು ಪುರುಷ ಹಾಡುಗಾರರ ಆತ್ಮವಿಶ್ವಾಸ. ಮಹಿಳಾ ಹಾಡುಗಾರರ ಹಾಗೆ ಸಾಲ ಮಾಡುವುದಕ್ಕೆ ಹೆದರಿಯೇ ಹಾಡುವ ವೃತ್ತಿಯನ್ನು ಬಿಡಬೇಕಾದ ಪ್ರಮೇಯ ಇವರಿಗೆ ಎದುರಾಗಿಯೇ ಇಲ್ಲ. ಬಂಗಾರವ್ವನ ಹಾಗೆ ಸಾಲಕ್ಕೆ ಹೆದರಿ ಯಾವ ಪುರುಷ ಹಾಡುಗಾರರೂ ಊರನ್ನು ಬಿಟ್ಟು ಪರ ರಾಜ್ಯಕ್ಕೆ ಹೋಗಿಲ್ಲ.

ಮೇಳ ಕಟ್ಟುವುದು, ಮೇಳ ಉಳಿಸಿಕೊಳ್ಳುವುದು

ಹರದೇಶಿ-ನಾಗೇಶಿ ಹಾಡುವ ಕ್ಷೇತ್ರದಲ್ಲಿ ಮೇಳಗಳನ್ನು ಕಟ್ಟುವುದು, ಕಟ್ಟಿದ ಮೇಳಗಳನ್ನು ಉಳಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಈ ಹಾಡುಗಾರರು ಹಾಡುಗಳಲ್ಲಿ ಎಷ್ಟೇ ನೈಪುಣ್ಯತೆ ಪಡೆದರೂ ವಾರಕ್ಕೆ ಎರಡು ಬಾರಿಯಾದರೂ ಎಲ್ಲರೂ ಸೇರಿ ರಂಗ ತಾಲೀಮು ನಡೆಸ ಬೇಕಾಗುತ್ತದೆ. ಅವರ ಯಾವುದೇ ಕೌಟುಂಬಿಕ ಒತ್ತಡಗಳೂ ರಂಗ ತಾಲೀಮುಗಳನ್ನು ತಡೆಹಿಡಿಯುವುದಿಲ್ಲ. ವೃತ್ತಿಯಲ್ಲಿ ಹೆಸರು ಕಾಯ್ದುಕೊಳ್ಳುವುದಕ್ಕೆ ಅವರಿಗೆ ರಂಗ ತಾಲೀಮು ಅಗತ್ಯವಾಗುತ್ತದೆ. ಮೇಳದಲ್ಲಿ ಒಂದೇ ಕುಟುಂಬದವರಿದ್ದರೆ ರಂಗ ತಾಲೀಮು ಸುಲಭವಾಗುತ್ತವೆ. ಹಾಡುಗಾರರೇ ಹೇಳುವ ಹಾಗೇ ಅದು ಕುಟುಂಬದ ವರಮಾನವನ್ನು ಹೆಚ್ಚಿಸುತ್ತದೆ. ಹಿಮ್ಮೇಳದವರು ಕುಟುಂಬದವರಾಗಿರದೆ ದೂರದ ಸಂಬಂಧಿಯಾಗಿದ್ದರೂ ಮೇಳದೊಳಗೆ ವೃತ್ತ ಸೌಹಾರ್ದತೆ ಉಳಿಯುತ್ತದೆ. ಹೊರಗಿನವರಾದರೆ ಅಲ್ಲಿ ಕಟ್ಟುನಿಟ್ಟಿನ ವ್ಯವಹಾರಿಕತೆ ಇರುತ್ತದೆ. ಹಾಡಿಕೆಗೆ ಹೋದಲ್ಲಿ ಆದಾಯದಲ್ಲಿ ಹೆಚ್ಚು ಕಡಿಮೆಯಾದರೆ, ಹಾಡುವವರು ತಮಗೆ ಅನಾನುಕೂಲ ಮಾಡಿಕೊಂಡು ಹಿಮ್ಮೇಳದವರು ಅತೃಪ್ತರಾಗದಂತೆ ನೋಡಿಕೊಳ್ಳಬೇಕಾಗುತ್ತದೆ. ಹರದೇಶಿ-ನಾಗೇಶಿ ವೃತ್ತಿ ವ್ಯವಹಾರಿಕತೆಯಲ್ಲಿನ ಸರ್ಕಸ್ಸನ್ನು ಎಲ್ಲ ಹಾಡುಗಾರರು ಎದುರಿಸಿದರೂ ಈ ಕುರಿತಂತೆ ಮಹಿಳಾ ಹಾಡುಗಾರರು ಪುರುಷ ಹಾಡುಗಾರರಿಗಿಂತ ಭಿನ್ನವಾದ ಸನ್ನಿವೇಶ ಹಾಗೂ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಇದನ್ನು ವಕ್ತೃಗಳ ಅನುಭವ ಕಥನಗಳ ಮೂಲಕ ಸ್ಪಷ್ಟಪಡಿಸಿಕೊಳ್ಳಬಹುದು.

“ಪಸ್ಟ ನಾ ಹಾಡ್ಕಿ ಚಾಲೂ ಮಾಡಿದಾಗ ನಮ್ಮಣ್ಣ ಸೂರು ಹಾಕ್ತಿದ್ದಾ, ಕಾಕಾ ತಾಳಾ ಬಾರಸ್ತಿದ್ದಾ. ದುಡಿಮಿ ಚಾಲು ಆದ ಮೊದಲಿಗೆ ಅಷ್ಟ ಆದಾಯಾ ಇರ್ತಿರಲಿಲ್ಲ. ಎಷ್ಟರ ಬರ್ಲಿ, ಅದರಾಗ ಜೀವನಾ ಹೊಂದಿಸಿಕೊಂಡು ಹೋಗತಿದ್ವಿ. ಆಗ ಕೂಡು ಕುಟುಂಬಾ ನಮ್ದು. ಹೀಂಗಾಗಿ ಅಷ್ಟು ಇಷ್ಟು ಬಂದ್ರೂ ಅದರಾಗ ಹೊಂದಿಕಿ ಮಾಡ್ಕೊಂಡು ಜೀವನಾ ಸಾಗಿಸತಿದ್ವಿ. ತಾಳಾ ಹಾಕು ನಮ್ಮ ಕಾಕಾ ಯಾವ್ದೊ ಜಡ್ಡ ಬಂದ ತೀರ್ಕೊಂಡಾ. ಸೂರು ಹಾಕು ಅಣ್ಣ ಆಕ್ಸಿಡೆಂಟ್ನಾಗ ಸತ್ತಾ. ಆಮ್ಯಾಲೆ ಹೊಸ ಮ್ಯಾಳ ಕಟಿದ್ನಿ. ಯಪ್ಪಾ-ಯಣ್ಣಾ ಅನಕೋಂತ ಅವ್ರ್ನ ಸಂಬಾಳ್ಸೂದ ಸಾಕಾಗಿ ಹೋಯ್ತು. ಅಣ್ಣಾ, ಅಪ್ಪ, ಕಾಕಾಗೋಳು, ಮ್ಯಾಳದಾಗ ಇದ್ರ ನಮ್ಗೆ ಕಿರಿಕಿರಿ ಅನ್ನುದುs ಇರಂಗಿಲ್ಲ. ಮನಿಯಾನವ್ರ ಕಾಳಜಿ ಹೊರಗಿನವರ್ಗಿ ಹ್ಯಾಂಗ ಬರ್ತೈತಿ? ಹಿಮ್ಮೇಳದವ್ರು ತೋರ್ಸು ದಿಮಾಕ ಜಾಸ್ತಿ ಆದ್ವು. ಅವರನ್ನೆಲ್ಲಾ ಸಂಬಾಳಿಸ್ಕೊಂಡು ಮ್ಯಾಳ ಉಳಿಸ್ಕೊಳಾಕಾಗ್ಲಿಲ್ಲ ನಂಗೆ. ಅದೂ ಅಲ್ದ ಹಾಡ್ಕಿಗೆ ಹೋದಾಗ ಬಾಳ ಕೆಟ್ಟ ಘಟನಾಗಳು ನಡೆದ್ವು. ನಮ್ಮ ಕಾಕಾ, ಇಲ್ಲಾ ನಮ್ಮಣ್ಣ, ಇದ್ರ ನನ್ನ ಮುಟ್ಟಾಕ ಬಂದವ್ರ್ನ ಕಡದ ಹೆಡಗಿ ತುಂಬ್ತಿದ್ರು. ಇವರ್ಯಾಕ ನಮ್ಮಣ್ಣ ಕಾಕಾನಂಗ ಕಾಳ್ಜಿ ತೋರಸ್ತಾರು? ಅದಕ್ಕ ಹಾಡ್ಕಿ ಬಿಟ್ಟು ಅಮ್ಚೋರ್ ನಾಟಕಕ್ಕ ಹ್ವಾದಾ”. – ಜಮಖಂಡಿ ದುರ್ಗವ್ವ

“ನಾನು ದಪ್ಪ ಬಾರ್ಸಿ ಹಾಡತಿದ್ದರ ನಮ್ಮಕ್ಕ ಯಮನವ್ವ ತಾಳಾ ಬಾರಸ್ತಿದ್ಲು. ನಮ್ಮ ಸೋದರ ಮಾವ ಭೀಮಪ್ಪ ಅಂತ ಇದ್ದಾ. ಅಂವಾ ಸೂರು ಹಾಕ್ತಿದ್ದಾ. ಬ್ಯಾರೆ ಹೊರಗಿನವರ್ಯಾರೂ ನಮ್ಮ ಮ್ಯಾಳ್ದಾಗ ಇರ್ಲಿಲ್ಲ. ನಮ್ಮಕ್ಕ ಮತ್ತು ನನಗ ಇಬ್ಬರ್ಗೂ ಮಕ್ಕಳಾಗ್ಲಿಲ್ಲ. ದುಡದ್ದೆಲ್ಲಾ ಮನಿಗಿ ತಂದುಕೊಡ್ತಿತಿದ್ವಿ. ನಮ್ಮ ಅರವತ್ತನೆ ವರ್ಷ ವಯಸ್ಸಿನತನ ಹಾಡಿದ್ರೂ ನಮ್ಮ ಮ್ಯಾಳಕ್ಕ ಬ್ಯಾರೆದವರ್ನ ಸೆರಸ್ಕೊಳ್ಳು ಪರಸಂಗಾನ ಬರ್ಲಿಲ್ಲ”. – ತಿಗಣಿಬಿದರಿ ಗಂಗವ್ವ

“ನನ್ನ ಹಾಡ್ಕಿಗಿ ನಮ್ಮಾವ (ಅಕ್ಕನ ಗಂಡ) ತಾಳಾ ಬಾರಿಸ್ತಿದ್ದರ, ತಮ್ಮ ಸೂರು ಹಾಕ್ತಿದ್ದ. ಸಣ್ಣಕಿ ಇದ್ದಾಗ ದುಡುದ್ದೆಲ್ಲಾ ನಮ್ಮಪ್ಪ, ಅಣ್ಣಂದಿರು ಇಸ್ಕೊತಿದ್ರು. ಮುಂದ ನನ್ಗೂ ಮೂರುಮಕ್ಕ್ಳಾ ಆದ್ವು. ನಮ್ಮ ತಮ್ಮಂದೂ ಮದುವಿಯಾಯ್ತು. ಮದ್ವಿಯಾಗಿಂದ ಅವ್ನ ಸಂಸಾರ ಖರ್ಚು ಅವ್ನ ನೋಡ್ಕೊಬೇಕಲ್ಲ? ಅವ್ನು ತನ್ನ ಮನಿ ಖರ್ಚಿಗಂತ ತನ್ನ ಪಾಲಿಗಿ ಬಂದ ರೊಕ್ಕಾನ ತಾಣಾ ಇಟ್ಕೊಳಾಕ್ಹತ್ತಿದಾ. ನಮ್ಮಾವ ಮೊದ್ಲಿಂದ್ಲೂ ತನ್ನ ಪಾಲಿಗೆ ಪಗಾರಾ ತಗೊತಿದ್ದಾ. ನನ್ನ ತಮ್ಮ ಮದ್ವಿಯಾಗೋ ಮೊದ್ಲು ನಮ್ಮಿಬ್ಬರ ಪಗಾರ ಒಂದs ಕುಟುಂಬಕ್ಕ ಬಳಸ್ತಿದ್ರು. ಅಂವಾ ಮದ್ವಿಯಾಗಿಂದ ಬ್ಯಾರೆ ಮನಿ ಮಾಡಿದಾ. ಹೀಂಗಾಗಿ ಹಾಡ್ಕ್ಯಾಗಿನ ತನ್ನ ಪಗಾರಾನೂ ತಾನs ತಗೋತಿದ್ದ; ನಂಗೂ ನಿನ್ನ ಪಗಾರ ಕೊಡು ಅಂತಕೇಳ್ತಿದ್ದಾ. ಈಕಾಡಿ ಅವ್ವಾ ಅಪ್ಪಾನೂ ಹಾಡ್ಕ್ಯಾಗಿನ ಪಗಾರಾ ಕೇಳೋರು. ನನಗಂತ ಏನೂ ಉಳಿತಿರ್ಲಿಲ್ಲ. ನನ್ನ ಮಕ್ಳು ದೊಡ್ಡು ಆಗಾಕತ್ತಿದ್ವು. ನನ್ನ ನಂಬ್ಕೊಂಡ ಮಕ್ಕಳ್ಗಿ ನಾನೂ ಏನಾರ ಮಾಡಬೇಕಲ್ಲ? ಅದಕ್ಕ ನನ್ನ ಪಗಾರಾ ನಾನು ಯಾರ್ಗೂ ಕೊಡ್ಲಿಲ್ಲ. ತಮ್ಮ ಇಸಟ್ಟಾಗಿ ಮ್ಯಾಳ ಬಿಟ್ಟ. ಬಿಟ್ಟ್ರ ಬಿಡ್ಲಿ ಅಂತ ತಮ್ಮನ ಬದ್ಲಿ ಸೂರಿಗಿ ಬ್ಯಾರೆದವರ್ನ ಕರಕೊಂಡಾ. ನಮ್ಮ ಮ್ಯಾಳದಾಗಿನ ಪದ್ಧತಿಯಂಗ ಅವಂಗ ಪಗಾರಾ ಕೊಟ್ನಿ. ತಮ್ಮ, ನನ್ನ ಮ್ಯಾಳ ಬಿಡೂ ವ್ಯಾಳ್ಯಾದಾಗ ನಂಗೂ ಅರ್ಧ ವಯಸ್ಸಾಗಿತ್ತು. ಹ್ಯಾಂಗ ಮ್ಯಾಳಾ ಕಟ್ಟಬೇಕಂತ ಗೊತ್ತಾಗಿತ್ತು. ತೆಲಿ ಕೆಡ್ಸಿಕೊಳ್ಲಿಲ್ಲ. ಮಾತು, ವ್ಯವಾರಾ ಸುದ್ದ ಇದ್ರ ಹಾಡ್ಕಿ ನಡ್ಸೋದೇನು ಅಂಥಾ ಸಮಸ್ಯೆ ಆಗಲ್ಲ”. – ಕಂಬಾಗಿ ಹನುಮವ್ವ

“ನಮ್ಮವ್ವ ಲಕ್ಷ್ಮೀಬಾಯಿನೂ ಹಾಡ್ತಿದ್ದಳು. ಆಕಿ ಹಾಡ್ಕಿಗಿ ಆಕಿ ಅಣ್ಣ ಭೀಮಪ್ಪ ತಾಳಾ ಬಾರ್ಸಿತಿದ್ದ. ನಮ್ಮ ಕೇರಿ ಯಲ್ಲಪ್ಪ ಸೂರು ಬಾರಿಸ್ತಿದ್ದ. ನಮ್ಮ-ನಮ್ಮವ್ರು ಇರೂದ್ಕ ಮ್ಯಾಳ ಮುರಿಲಿಲ್ಲ. ನಮ್ಮವ್ವಗ ನಾ ಒಬ್ಬಾಕಿನಾ ಮಗಳು, ನನ್ನೂ ದೇವರಿಗೆ ಬಿಟ್ಟ್ಲು. ನನಗೂ ಹಾಡ್ಕಿ ಕಲಿಸಿದ್ಲು. ನಾನು ಹಾಡ್ಕಿ ಸುರು ಮಾಡಿಂದ ನಮ್ಮವ್ವ ಸೂರು ಹಾಕ್ತಿದ್ಲು, ಆಕಿ ಮಾಂವಾ ತಾಳಾ ಹಾಕ್ತಿದ್ದ. ನಮ್ಮವ್ವ, ಆಕಿ ಮಾಂವಾ ಇಬ್ರೂ ಸತ್ತ್ರು. ಅತ್ತಿಂದ ನಂಗ ಹಾಡ್ಕಿ ಮಾಡಾಕ ಆಗ್ಲಿಲ್ಲ. ಹೊಸಾ ಮ್ಯಾಳಾ ಕಟ್ಟೂದು ದುಸ್ತರ ಆಯ್ತು. ಹಾಡ್ಕಿ ಬಿಟ್ಟು ಏಳ ವರ್ಷ ಆಯ್ತು. ಹಾಡ್ಕಿ ಬಿಟ್ಟ ಬ್ಯಾರೆ ದಗದ ಗೊತ್ತಿಲ್ಲ. ನಿಂತ-ನಿಂತ ಹಾಡಿದ್ದಕ್ಕ ಕಾಲಾಗ ಶಕ್ತಿನs ಇಲ್ಲ. ಹಾಡಿ-ಹಾಡಿ ಹೊಟ್ಟೆ ನೋಯ್ತದ, ದಪ್ಪ ಬಡದ್ಬಡದ ಕೈಯಾಗೂ ಶಕ್ತಿಯಿಲ್ಲ. ಇಂಥಾದ್ರಾಗ ಎಂಥಾ ಕೂಲಿ ಕೆಲ್ಸ ಮಾಡ್ಬೇಕು? ನಮಂಥಾ ಕೈಲಾಗ್ಲಾರ್ದ ಮೂಳಿಗೆ ಯಾರ ಕರ್ದ ಕೂಲಿ ಕೊಡ್ತಾರ? ನನ್ಮಗಾ ದುಡದ್ರ ಹೊಟ್ಟಿ ತುಂಬ್ತದ. ಹೊಟ್ಟಿ ಹೊರಿಯಾಗಿ ಕುಂತೇನಿ”. – ಶೆಟ್ಟೆವ್ವ ಮಾದರ, ಇಂಡಿ

ಉಲ್ಲೇಖಿತ ಮೇಲಿನ ಅನುಭವ ಕಥನಗಳು ಮಹಿಳೆಯು ಸ್ವತಂತ್ರವಾಗಿ ಮೇಳ ಕಟ್ಟಿಕೊಳ್ಳುವುದು ಸುಲಭವಲ್ಲ ಎನ್ನುವುದನ್ನು ನಿರೂಪಿಸುತ್ತವೆ. ಯಾವ ಪುರುಷ ಹಾಡುಗಾರರೂ ಮೇಳ ಕಟ್ಟುವುದು ಕಷ್ಟವೆಂದಾಗಲಿ, ಮೇಳ ಮುರಿದ ಕಾರಣಕ್ಕಾಗಿ ಹಾಡುವ ವೃತ್ತಿ ನಿಲ್ಲಿಸಿದೆ ಎಂದಾಗಲಿ ಅಥವಾ ಬದಲಿ ವೃತ್ತಿಯನ್ನು ಆಯ್ಕೆ ಮಾಡಿಕೊಂಡೆ ಎಂದಾಗಲಿ ಹೇಳಲೇ ಇಲ್ಲ. ಅಪ್ಪ ಹಾಡುಗಾರನಾದರೆ ಮಗ ತಾಳ ಬಾರಿಸುತ್ತಾನೆ. ಮತ್ತೊಬ್ಬ ಮಗ ಸೂರು ಹಾಕುತ್ತಾನೆ. ದಲಿತ ಸಮುದಾಯಗಳು ಮೇಲ್ಜಾತಿ, ಮೇಲ್ವರ್ಗದವರಂತೆ ಗಂಡುಮಕ್ಕಳನ್ನು ಮನೆಯ ಸದಸ್ಯರೆಂದು ಪರಿಗಣಿಸಿವೆ. ಹೀಗಾಗಿ ಅವರು ಅನ್ಯರಾಗದ ಕಾರಣ ಅವರ ದುಡಿಮೆ ಒಂದೇ ಕುಟುಂಬಕ್ಕೆ ಬಂದ ಆದಾಯವಾಗಿ ಪರಿಗಣಿತವಾಗುತ್ತದೆ. ಮನೆಯ ಮಗಳನ್ನು ‘ಜೋಗತಿ’ ಇಲ್ಲವೆ ‘ಬಸವಿ’ಯಾಗಿಸಿದ್ದರೆ ಅವಳನ್ನು ಮನೆ ಮಗನೆಂದು ಪರಿಗಣಿಸುವರು. ಹೀಗಾಗಿ ಅವಳ ದುಡಿಮೆಯನ್ನು ಕುಟುಂಬ ದುಡಿಮೆಯಾಗಿ ಅರ್ಥೈಸಲಾಗಿದೆ. ‘ಜೋಗತಿ’ ಇಲ್ಲವೆ ‘ಬಸವಿ’ಯದು ತಂದೆ ಮೂಲದ ಕುಟುಂಬವಾದರೆ, ತಂದೆ ಹಾಗೂ ಅಣ್ಣ-ತಮ್ಮಂದಿರ ದುಡಿಮೆಯ ಹಣದ ಹಾಗೆ ಇವಳ ದುಡಿಮೆಯ ಹಣ ಪಿತೃಕೇಂದ್ರಿತ ಆಸ್ತಿಯಾಗಿಯೇ ಸಂಚಯಗೊಳ್ಳುತ್ತದೆ. ತಾಯಿ ಮೂಲದ ಹಿನ್ನೆಲೆ ಹೊಂದಿದ್ದರೆ ಮಾತ್ರ ಆಸ್ತ ಮಾತೃ ಕೇಂದ್ರಿತವಾಗಿ ಸಂಚಯಗೊಳ್ಳುತ್ತದೆ. ಪುರುಷ ಹಾಡುಗಾರರಲ್ಲಿ ಕೇವಲ ದಲಿತರಿಲ್ಲ, ಬ್ರಾಹ್ಮಣರನ್ನು ಹೊರತು ಪಡಿಸಿದಂತೆ ಉಳಿದೆಲ್ಲ ಜಾತಿಗಳವರು ಇದ್ದಾರೆ. ಹಾಗೂ ಮುಸ್ಲಿಂ ಧರ್ಮದವರು ಇದ್ದಾರೆ. ಈ ಎಲ್ಲ ಜಾತಿ, ಧರ್ಮದವರು ಪಿತೃಪ್ರಧಾನ ಸಮಾಜ ಮೂಲದವರಾಗಿದ್ದಾರೆ. ಹೀಗಾಗಿ ಇವರೆಲ್ಲರೂ ದುಡಿಮೆಯಿಂದ ಬಂದ ಹಣವೆಲ್ಲವನ್ನೂ ಒಂದೇ ಕುಟುಂಬದ ಆದಾಯವಾಗಿ ನೋಡುತ್ತಾರೆ. ಒಂದು ರಾತ್ರಿಯ ಹಾಡಿಕೆಗೆ ಮೂರು ಸಾವಿರ ರೂಪಾಯಿಗಳು ಬಂದಿದ್ದರೆ ಒಂದೇ ಕುಟುಂಬದ ಹಿನ್ನೆಲೆಯಿಂದ ನೋಡಿದರೆ ಆದಾಯ ಹೆಚ್ಚಿಗೆ ಕಾಣುತ್ತದೆ. ಆದಾಯವನ್ನು ತೆಕ್ಕೆಗೆ ತೆಗೆದುಕೊಳ್ಳುವಾಗ ಮಾತ್ರ ಹಾಡಿಕೆ ಮಹಿಳೆಯರನ್ನು ಗಂಡುಮಕ್ಕಳಂತೆ ಪರಿಗಣಿಸುತ್ತಾರೆ. ಹಾಡಿಕೆ ಮಹಿಳೆಯರ ಹಣದ ಮೇಲೆ ಒತ್ತಡವನ್ನು ಹಾಗೂ ವಿತರಣಾ ಹಕ್ಕನ್ನು ಬಹುತೇಕ ಸಂದರ್ಭಗಳಲ್ಲಿ ಆ ಕುಟುಂಬದಲ್ಲಿನ ಪುರುಷರೇ ನಿರ್ವಹಸುತ್ತಿರುತ್ತಾರೆ. ಹೀಗಾಗಿ ಮಹಿಳಾ ಹಾಡುಗಾರರು ದುಡಿದರೂ ದುಡಿಮೆಯಿಂದ ಬಂದ ಹಣದ ಮೇಲೆ ಒಡೆತನ ಹಾಗೂ ವಿತರಣಾ ಹಕ್ಕನ್ನು ಪಡೆದುಕೊಂಡಿರುವುದಿಲ್ಲ. ಅದಕ್ಕಾಗಿ ಮಹಿಳಾ ಹಾಡುಗಾರರು ಕುಟುಂಬದ ಸಹಾಯವಿಲ್ಲದೆ ಸ್ವತಂತ್ರವಾಗಿ ಮೇಳಗಳನ್ನು ಕಟ್ಟಿಕೊಳ್ಳಲು ಆಗುತ್ತಿಲ್ಲ.

ಮಹಿಳಾ ಹಾಡುಗಾರರು ಮೇಳ ಕಟ್ಟುವುದು ಸುಲಭವಲ್ಲವೆನ್ನುವುದಕ್ಕೆ ಅವರು ನೀಡಿದ ಕಾರಣಗಳು ಇವು.

೧. ಹಿಮ್ಮೇಳದಲ್ಲಿರುವ ಪುರುಷರು ಸಂಬಂಧಿಗಳಾಗದಿದ್ದರೆ, ಬೆಳಗಿನ ಜಾವದಲ್ಲಾಗಲಿ, ರಾತ್ರಿಯಲ್ಲಾಗಲಿ ನಡೆಸುವ ರಂಗ ತಾಲೀಮಿಗೆ ಕರೆಯುವುದ ಕಷ್ಟವೆನ್ನುತ್ತಾರೆ. ಯಾಕೆಂದರೆ ಅವರ ಖಾಸಗಿ ಸಮಯದಲ್ಲಿ ರಂಗ ತಾಲೀಮಿಗೆ ಕರೆಯುವುದು ಮುಜುಗರವನ್ನುಂಟು ಮಾಡುತ್ತದೆ ಎನ್ನುತ್ತಾರೆ.

೨. ಡಪ್ಪು ಹಿಡಿದು ಹಾಡುವಾಕೆಯನ್ನು ಮುಖಂಡಳಾಗಿ ಗುರುತಿಸುವ ಪ್ರಕ್ರಿಯೆಯು ಹಿಮ್ಮೇಳದ ಪುರುಷರಲ್ಲಿ ಕೀಳರಿಮೆಯನ್ನು ಸೃಷ್ಟಿಸುತ್ತದೆ. ಹೀಗೆ ಸೃಷ್ಟಿಯಾಗುವ ಕೀಳರಿಮೆಯು,ಹಾಡಿಕೆಗೆ ಒಪ್ಪಿಕೊಂಡ ದಿನದಂದು ಬರಲಾಗುತ್ತಿಲ್ಲ ಎಂದು ಹೇಳುವ ಮನಸ್ಥಿತಿಗೆ ಅವರನ್ನು ಪ್ರೇರೇಪಿಸುತ್ತದೆ. ಹಾಡಿಕೆಯಲ್ಲಿ ಪ್ರಸಿದ್ಧರಾದ ಮಹಿಳೆಯರು ಇಂತಹ ಸನ್ನಿವೇಶಗಳನ್ನು ಸಾಮಾನ್ಯವಾಗಿ ಎದುರಿಸುತ್ತಾರೆ. ಮೇಲಿಂದ ಮೇಲೆ ಎದುರಾಗುವ ಇಂತಹ ಸನ್ನಿವೇಶಗಳು ವೃತ್ತಿಯಲ್ಲಿ ಹತಾಶೆಯನ್ನು ಸೃಷ್ಟಿಸುತ್ತದೆ. ಇಂತಹ ಹತಾಶೆಗಳು ಮಹಿಳಾ ಹಾಡುಗಾರರಲ್ಲಿ ವೃತ್ತಿ ವೈರಾಗ್ಯವನ್ನುಂಟು ಮಾಡುತ್ತದೆ.

೩. ಹಿಮ್ಮೇಳದವರು ಮಹಿಳಾ ಹಾಡುಗಾರರಿಗಿಂತ ಹೆಚ್ಚು ಸಂಬಳವನ್ನು ಅಪೇಕ್ಷಿಸುತ್ತಾರೆ. ಮಹಿಳೆಯರ ಕೂಲಿಗಿಂತ, ಪುರುಷರ ಕೂಲಿ ಹೆಚ್ಚಾಗಿರುತ್ತದೆ. ಹಾಡುವ ಮಹಿಳೆಗೆ ಸಂಬಳವಲ್ಲದೆ ಹಾಡನ್ನು ಮೆಚ್ಚಿಕೊಂಡವರು ಹಣವನ್ನು ಬಹುಮಾನವಾಗಿ ಕೊಡುತ್ತಾರೆ. ಈ ಬಹುಮಾನವನ್ನು ಅವರು “ಭಕ್ಷೀಸು” ಎಂದು ಕರೆಯುತ್ತಾರೆ. ಹೀಗಾಗಿ ಹಾಡುಗಾರಳಿಗಿಂತ ಹೆಚ್ಚು ಸಂಬಳವನ್ನು ಅಪೇಕ್ಷಿಸುತ್ತಾರೆ. ಪುರುಷ ಹಾಡುಗಾರರ ಹಿಮ್ಮೇಳದವರಾರೂ ಹೆಚ್ಚು ಸಂಬಳವನ್ನು ಕೇಳುವುದಿಲ್ಲ. ಪುರುಷರ ಹಾಡುಗಾರರ ಹಿಮ್ಮೇಳದವರು ಭಕ್ಷೀಸನ್ನು ಗಣನೆಗೆ ತಂದು ಕೊಳ್ಳುವುದಿಲ್ಲ. ಮೇಳಕ್ಕೆ ಗೊತ್ತುಪಡಿಸಿದ ಹಣದಲ್ಲಿಯೇ ಎಲ್ಲರೂ ಸಮನಾಗಿ ಹಂಚಿಕೊಳ್ಳುವರು.

೪. ಹಾಡಿಕೆಗಾಗಿ ಪರಸ್ಥಳಕ್ಕೆ ಹೋದಲ್ಲಿ ಅಘಟಿತ ಘಟನೆಗಳನ್ನು ಈ ಹಾಡುಗಾರ್ತಿಯರು ಎದುರಿಸಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಹಿಮ್ಮೇಳದವರು ಬಂಧು-ಬಳಗದವರಾದರೆ ಹಾಡುಗಾರ ಮಹಿಳೆಯರಿಗೆ ಬೆಂಗಾವಲಾಗಿ ನಿಲ್ಲುತ್ತಾರೆ. ಹಿಮ್ಮೇಳದವರು ಸಂಬಂಧಿಯಾಗಿರದಿದ್ದರೆ ಇವರ ಮಾನಸಿಕ ಹಾಗೂ ದೈಹಿಕ ಅಪಮಾನಗಳಿಗೆ ಪ್ರತಿಕ್ರಿಯಿಸದೇ ಇದ್ದು ಬಿಡುತ್ತಾರೆ. ಹಿಮ್ಮೇಳದವರ ಈ ಬಗೆಯ ತಣ್ಣನೆಯ ಪ್ರತಿಕ್ರಿಯೆಯು ಹಾಡುಗಾರಳಲ್ಲಿ ಅನಾಥತೆಯನ್ನು ಸೃಷ್ಟಿಸುತ್ತದೆ.

೫. ಹಿಮ್ಮೇಳದವರು ಕುಟುಂಬದವರಾದರೆ ಜನರನ್ನು ಸಂಪರ್ಕಿಸಿ ಅವರೇ ಬೇರೆ ಬೇರೆ ಊರಿನ ಜಾತ್ರೆಗಳಿಗೆ ಚಾಜವನ್ನು ಪಡೆದುಕೊಳ್ಳುತ್ತಾರೆ. ಇದರಿಂದಾಗಿ ಹಾಡಿಕೆ ವೃತ್ತಿಯು ನಿರಂತರವಾಗಿ ನಿರಾತಂಕವಾಗಿ ಸಾಗುತ್ತದೆ. ಸಂಬಂಧಿಗಳಲ್ಲದವರು ಹಿಮ್ಮೇಳದಲ್ಲಿದ್ದರೆ ಚಾಜ ಹಿಡಿಯುವಲ್ಲಿ ನೆರವಾಗುವುದೇ ಇಲ್ಲ. “ನಮ್ಮ ಕರ‍್ದ ಮ್ಯಾಳಾ ಮಾಡ್ಕೊಂಡಿ, ಹಾಡ್ಕಿಗಿ ಚಾಜಾ ಸಿಕ್ಕೈತೆ, ಇಲ್ಲ? ಮ್ಯಾಳಾ ನಡಸೂ ತಾಕತ್ತ ಇಲ್ದರ ಮ್ಯಾಳಾ ಯಾಕ ಕಟ್ಟಿದಿ? ನಿನ್ನ ನೆಂಬಿ ನಾವು ನಮ್ಮ ಹೆಂಡ್ರಮಕ್ಕಳ್ನ ಉಪಾಸಾ ಇಡಬೇಕಾಗೇದ” ಎಂದು ಮೂದಲಿಸುತ್ತಾರೆ. ಪದೇ ಪದೇ ಎದುರಾಗುವ ಇಂತಹ ಮೂದಲಿಕೆಗಳು ವೃತ್ತಿ ಜೀವನದಲ್ಲಿ ಕೀಳರಿಮೆಯನ್ನು ಸೃಷ್ಟಿಸಿ ಹಾಡುಗಾರಳೇ ವೃತ್ತಿಗೆ ವಿದಾಯ ಹೇಳುವಂತೆ ಮಾಡಲಾಗುತ್ತದೆ.

೬. ಹಾಡಿಕೆ ಜೀವನದಲ್ಲಿ ಪ್ರತಿನಿತ್ಯ ಹೊಸ ಸವಾಲು ಎದುರಾಗುತ್ತಿರುತ್ತವೆ. ಹೊಸ ಹಾಡುಗಳನ್ನು ಅವರು ಕಲಿಯಬೇಕಾಗುತ್ತದೆ. ಹಾಡುಗಳನ್ನು ತರಲು ಅವರು ಕವಿಯ ಮನೆಗೆ ಹೋಗಬೇಕಾಗುತ್ತದೆ. ಕವಿ ಎನ್ನುವ ಪುರುಷವಾಚಕ ಪದವನ್ನು ಯಾಕೆ ಬಳಸಿದೆನೆಂದರೆ ಹರದೇಶಿ-ನಾಗೇಶಿ ಸಾಹಿತ್ಯ ಕ್ಷೇತ್ರದಲ್ಲಿ ಯಾವ ಮಹಿಳೆಯೂ ಹಾಡುಗಳನ್ನು ಬರೆದು ಮಾರುವ ವೃತ್ತಿಯಲ್ಲಿಲ್ಲ. ಹಾಡಿಕೆ ವೃತ್ತಿ ಜೀವನದ ಅಲೆದಾಟವನ್ನು ಒಪ್ಪಿಕೊಳ್ಳುವ ಮಹಿಳಾ ಹಾಡುಗಾರರು, ಹಾಡಿಕೆಗೆ ಸಂಬಂಧಿಸಿದ ಸಾಹಿತ್ಯ ಸಂಗ್ರಹಣಾ ಕೆಲಸವು ಪುರುಷರದೆಂದೇ ಭಾವಿಸಿಕೊಳ್ಳುತ್ತಾರೆ. ಯಾವ ಹಾಡುಗಾರಳೂ ತಾನೇ ನೇರವಾಗಿ ಕವಿಯ ಬಳಿ ಹೋಗಿ ಸಾಹಿತ್ಯ ಸಂಗ್ರಹಣೆ ಮಾಡಿದ್ದರ ಬಗ್ಗೆ ಹೇಳಲಿಲ್ಲ. ಎಲ್ಲ ಮಹಿಳಾ ಹಾಡುಗಾರರು ಅಪ್ಪನ, ಅಣ್ಣನ, ತಮ್ಮನ ಹೀಗೆ ಕುಟುಂಬ ಸಂಬಂಧಿಗಳ ಹಾಗೂ ಗೆಳೆಯನ ಸಹಾಯದಿಂದ ಹಾಡುಗಳನ್ನು ತರಿಸಿಕೊಂಡಿದ್ದಾರೆ. ಇದಕ್ಕೆ ಇವರು ಎರಡು ಕಾರಣಗಳನ್ನು ಕೊಡುತ್ತಾರೆ. ೧. ಹಾಡು ಕೊಡುವ ನೆಪದಲ್ಲಿ ಹೊಸ, ಹೊಸ ಹಾಡು ರಚಿಸಿ ಹಾಡಿಕೆ ಕ್ಷೇತ್ರದಲ್ಲಿಯೇ ಪ್ರಸಿದ್ಧಿ ಮಾಡುವೆ ಎನ್ನುವ ಆಕರ್ಷಣೆಯಿಂದ ತಮ್ಮನ್ನು ಲೈಂಗಿಕವಾಗಿ ದುರುಪಯೋಗಪಡಿಸಿಕೊಳ್ಳುವ ಅಪಾಯದ ಸಾಧ್ಯತೆಗಳು ಹೆಚ್ಚಾಗಿವೆ. ೨. ಇದರ ಜೊತೆಯಲ್ಲಿಯೆ ಒಂದು ಹಾಡಿಗೆ ಹೆಚ್ಚು ದುಡ್ಡು ಹೇಳಿ ಆರ್ಥಿಕ ಹೊರೆಯನ್ನು ಸೃಷ್ಟಿಸಬಹುದು. ಪುರುಷರಾದರೆ ವ್ಯವಹಾರದ ಮೂಲಕ ಒಂದು ಹಾಡನ್ನು ಕಡಿಮೆ ದುಡ್ಡಿಗೆ ಬರೆಯಿಸಿಕೊಂಡು ಬರುವರು. ಇದು ಆರ್ಥಿಕ ಉಳಿತಾಯವನ್ನುಂಟು ಮಾಡುತ್ತದೆ. ಈ ಎಲ್ಲಾ ಕಾರಣಗಳನ್ನು ನೀಡಿದ ಮಹಿಳಾ ಹಾಡುಗಾರರು ಕುಟುಂಬದವರೇ ಮೇಳದವರಾದರೆ ಹಾಡಿಕೆ ವೃತ್ತಿ ನಿರಾತಂಕವಾಗಿ ಮುಂದುವರೆಯುತ್ತದೆ ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಅನಿವಾರ್ಯ ಕಾರಣಗಳಿಂದಾಗಿ ಕುಟುಂಬದವರನ್ನು ಹೊರತುಪಡಿಸಿ ಮೇಳ ಕಟ್ಟಲು ಪ್ರಯತ್ನಿಸಿ ಅದರಲ್ಲಿ ಸೋತು ಹಾಡಿಕೆ ವೃತ್ತಿಯನ್ನೇ ಕೈ ಬಿಟ್ಟಂತಹ ಶೆಟ್ಟವ್ವನಂತಹ ಉದಾಹರಣೆಗಳು ಹೇರಳವಾಗಿ ಸಿಗುತ್ತವೆ.

ಮೇಲೆ ಉಲ್ಲೇಖಿಸಿದ ಬೇರೆ ಬೇರೆ ಕಾರಣಗಳನ್ನು ನೀಡಿ ಮಹಿಳಾ ಹಾಡುಗಾರರು ಕುಟುಂಬದವರನ್ನು ಇಲ್ಲವೆ ಜೊತೆಗಾರರನನ್ನು ಹಿತೈಶಿಗಳಾಗಿಯೇ ಕಂಡಿದ್ದಾರೆ. ಯಾರಿಂದ ತನಗೆ ಆರ್ಥಿಕ ಅನುಕೂಲ ಹಾಗೂ ಬೆಳವಣಿಗೆ ಆಗುತ್ತಿದೆ ಎಂದು ಭಾವಿಸಿಕೊಂಡಿರುತ್ತಾಳೋ, ಅವರೇ ಶೋಷಕರಾಗಿರುವ ಸಂಗತಿಗಳನ್ನೂ ಮೇಲಿನ ಅನುಭವ ಕಥನಗಳೇ ಬಯಲುಗೊಳಿಸುತ್ತವೆ. ತಿಗಣಿಬಿದರಿ ಗಂಗವ್ವನ ಅನುಭವ ಕಥನಗಳನ್ನು ಗಮಿನಿಸಿದಾಗ ಹಾಡುವ ಗಂಗವ್ವನಿಗೆ, ತಾಳ ಬಾರಿಸುವ ಯಮುನವ್ವನಿಗೆ ಮಕ್ಕಳೇ ಆಗದ ಕಾರಣಕ್ಕಾಗಿ, ಅವರಿಬ್ಬರೂ ದುಡಿದ ದುಡ್ಡನ್ನು ಕೂಡಿಡಲೇ ಇಲ್ಲ. ಊಟ, ಬಟ್ಟೆಯ ಖರ್ಚನ್ನು ಹೊರತುಪಡಿಸಿ, ಹೆಚಚಿನದೇನನ್ನು ಅವರು ಅಪೇಕ್ಷಿಸಲಿಲ್ಲ. ತಾವು ದುಡಿದು ತಂದ ಹಣದ ಮೇಲೆ ಒಡೆತನವನ್ನು ಸಾಧಿಸಲಿಲ್ಲ. ದಿನನಿತ್ಯದ ಅಗತ್ಯದ ಖರ್ಚನ್ನು ಹೊರತುಪಡಿಸಿ ಹಣ ಸಂಗ್ರಹವಾದರೆ ಅದು ಆಸ್ತಿಯೆನಿಸಿಕೊಳ್ಳುತ್ತದೆ. ಹೀಗೆ ಮಹಿಳೆಯು ಆಸ್ತಿ ಮಾಡಿಕೊಂಡರೆ ಕುಟುಂಬದಲ್ಲಿ ಪುರುಷರಿಂದ ವಿರೋಧ, ಈರ್ಷೆ ಎದುರಿಸಬೇಕಾಗುತ್ತದೆ. ಆಸ್ತಿಯ ಬಗೆಗೆ ಆಲೋಚಿಸದ ಯಮುನವ್ವ, ಗಂಗವ್ವನಂತವರನ್ನು ಕುಟುಂಬದವರೆಲ್ಲರೂ ಪ್ರೀತಿಸುತ್ತಾರೆ.

ಮೂವರು ಮಕ್ಕಳ ತಾಯಿಯಾದ ಕಂಬಾಗಿ ಹನುಮವ್ವ, ಮಕ್ಕಳ ಕಾರಣಕ್ಕಾಗಿ ಆಸ್ತಿ ಬಗೆಗೆ ಆಸಕ್ತಿ ತೋರಿದ್ದರಿಂದ, ಆಕೆ, ತಂದೆ ಹಾಗೂ ತಮ್ಮಂದಿರಿಂದ ತಿರಸ್ಕರಿಸಲ್ಪಟ್ಟಳು. ಮೇಲ್ಜಾತಿ, ಮೇಲ್ವರ್ಗಗಳ ಕುಟುಂಬದವರಾಗಿರಬಹುದು, ಕೆಳಜಾತಿ, ಕೆಳವರ್ಗಗಳ ಕುಟುಂಬ ದವರಾಗಿರಬಹುದು-ಅವರು ಮಹಿಳೆ ಸ್ವಂತ ಆಸ್ತಿಯ ಬಗೆಗೆ ಆಸಕ್ತಿ ತೋರುವುದನ್ನು ವಿರೋಧಿಸುತ್ತಾರೆ. ಎಲ್ಲಾ ಜಾತಿ, ಧರ್ಮ, ಸಮುದಾಯಗಳವರೂ ಮಹಿಳೆಯನ್ನೇ ಆಸ್ತಿಯಾಗಿ ಪರಿಭಾವಿಸಿದ್ದರಿಂದ, ಆಸ್ತಿ ಮಾಡಿಕೊಳ್ಳುವ ಆಕೆಯ ಹಂಬಲವನ್ನು ಅವರು ಹತ್ತಿಕ್ಕುತ್ತಾರೆ. ಈ ವಿರೋಧದ ಕಾರಣದಿಂದಾಗಿಯೇ ಕಂಬಾಗಿ ಹನುಮವ್ವನ ಮೇಳ ಮುರಿಯಿತು. ತಮ್ಮ ಸಂತೋಷ, ಹನುಮವ್ವ ಆಸ್ತಿ ಮಾಡಿಕೊಳ್ಳುವುದನ್ನು ವಿರೋಧಿಸಿ ದೂರ ಸರಿದಾಗ ಆಕೆಗೆ ಮೂವತ್ತರ ಹರೆಯ. ವೃತ್ತಿ ಕ್ಷೇತ್ರದಲ್ಲಿ ಪಳಗಿದ್ದ ಆಕೆ ಎದೆಗುಂದದೆ ಸ್ವತಂತ್ರ ಮೇಳ ಕಟ್ಟಿಕೊಂಡಿದ್ದಾಳೆ. ಕಳೆದ ಇಪ್ಪತ್ತು ವರ್ಷಗಳಿಂದ ಸ್ವತಂತ್ರವಾಗಿ ಮೇಳಗಳನ್ನು ಕಟ್ಟಿಕೊಂಡು ತನ್ನ ವೃತ್ತಿ ಕ್ಷೇತ್ರದಲ್ಲಿ ಹೆಸರುಗಳಿಸಿದ್ದಾಳೆ. ಹೀಗೆ ಮಹಿಳಾ ಹಾಡುಗಾರರು ವೃತ್ತಿಯನ್ನು ಸ್ವತಂತ್ರವಾಗಿ, ಯಶಸ್ವಿಯಾಗಿ ನಿರ್ವಹಿಸಿದ ಅಥವಾ ನಿರ್ವಹಿಸಿಕೊಂಡು ಹೋಗುವ ಉದಾಹರಣೆಗಳು ದೊರೆಯುತ್ತವೆಯಾದರೂ, ಅವು ವಿರಳವಾಗಿವೆ. ಹರದೇಶಿ-ನಾಗೇಶಿ ಹಾಡುವ ವೃತ್ತಿಯು ಪುರುಷ ಕೇಂದ್ರಿತವಾಗಿಯೇ ಪರಿಗಣಿಸಲ್ಪಟ್ಟಿದ್ದರಿಂದ, ಮೇಳ ಕಟ್ಟುವುದು ಕೂಡ, ಕಟ್ಟಿದ ಮೇಳವನ್ನು ನಿಭಾಯಿಸಿಕೊಂಡು ಹೋಗುವುದು ಪುರುಷ ಕಲಾವಿದರ ಕೆಲಸಗಳಾಗಿ ಪರಿಗಣಿತವಾಗಿವೆ. ನಾನು ಇದುವರೆಗೆ ಚರ್ಚಿಸಿದ್ದು ದಪ್ಪಿನ ಹಾಡಿನ ಮೇಳದ ಕುರಿತು, ಹರದೇಶಿ-ನಾಗೇಶಿ ಹಾಡುಗಳನ್ನು ಹಾಡುವ ಚೌಡಕಿ[1] ಮೇಳ ಪ್ರತ್ಯೇಕ ಚರ್ಚೆಯನ್ನು ಬಯಸುತ್ತದೆ.

ಚೌಡಕಿ ಮೇಳ: ದಪ್ಪಿನ ಹಾಡುಗಳನ್ನು ಹಾಡುವ ವೃತ್ತಿಯು ಪುರುಷ ಕೇಂದ್ರಿತವಾಗಿ ಗುರುತಿಸಲ್ಪಟ್ಟರೆ, ಚೌಡಕಿಯಲ್ಲಿ ಹರದೇಶಿ-ನಾಗೇಶಿ ಹಾಡುಗಳನ್ನು ಹಾಡುವ ವೃತ್ತಿಯು ಮಹಿಳಾ ಕೇಂದ್ರಿತವಾಗಿ ಗುರುತಿಸಲ್ಪಟ್ಟಿದೆ. ದಪ್ಪಿನ ಮೇಳದಲ್ಲಿದ್ದ ಮಹಿಳೆಯರು ಅನಿವಾರ್ಯ ಕಾರಣಗಳಿಂದ ಮೇಳ ಮುರಿದಾಗ, ಮುರಿದ ಮೇಳವನ್ನು ಮತ್ತೆ ಕಟ್ಟಿಕೊಳ್ಳಲಿಕ್ಕಾಗದವರು, ತಾವು ಕಲಿತ ಹಾಡುಗಳನ್ನೇ ಚೌಡಕಿಯೊಂದಿಗೆ ಹಾಡತೊಡಗಿದರು. ಹೀಗೆ ಬೇರೆ ಬೇರೆ ಕಾರಗಳಿಂದ ದಪ್ಪಿನ ಹಾಡಿನ ವೃತ್ತಿ ನಿರ್ವಹಿಸಲು ಸಾಧ್ಯವಾಗದೇ ಇದ್ದ ಮಹಿಳೆಯರು ಕಂಡುಕೊಂಡ ಪರ್ಯಾಯವೇ ಚೌಡಕಿ ಮೇಳ. ಸೂರು ಹಾಕುವನ ಬದಲಾಗಿ ಶ್ರುತಿ ನುಡಿಸುವವಳನ್ನು, ತಾಳದವನ ಬದಲಾಗಿ, ತಾಳ ಬಾರಿಸುವವಳನ್ನು ಹೀಗೆ ದಪ್ಪಿನ ಮೇಳದ ರೂಪವನ್ನು ಹಾಗೆಯೇ ಉಳಿಸಿಕೊಂಡು ಪುರುಷರ ಬದಲಾಗಿ, ಸ್ತ್ರಿಯರನ್ನು ಸೇರಿಸಿಕೊಂಡರು.[2] ಹಾಡಿಕೆ ಮಹಿಳೆ ಸೃಷ್ಟಿಕೊಂಡದ್ದೆಂದರೆ ರಾಗ ಹಾಡಲು ಮತ್ತೊಬ್ಬ ಮಹಿಳೆಯನ್ನು ಸೇರಿಸಿಕೊಂಡದ್ದು, ದಪ್ಪಿನ ಹಾಡಿನ ಮೇಳದಲ್ಲಿ ಮೂವರಿರುತ್ತಾರೆ; ಅವರೆಂದರೆ ದಪ್ಪು ಬಾರಿಸಿ ಹಾಡುವವರು, ಸೂರು ಹಾಕುವವರು, ತಾಳ ಬಾರಿಸುವವರು. ಚೌಡಕಿ ಮೇಳದಲ್ಲಿ ನಾಲ್ಕು ಜನರಿರುತ್ತಾರೆ. ದಪ್ಪಿನ ಮೇಳದಲ್ಲಿ ದಪ್ಪು ಬಾರಿಸುತ್ತಾ ಹಾಡುವವರು ಮಹಿಳೆಯರೂ ಇರುತ್ತಾರೆ, ಪುರುಷರೂ ಇರುತ್ತಾರೆ. ಹಿಮ್ಮೇಳದಲ್ಲಿ ಮಾತ್ರ ಪುರುಷರೇ ಇರುತ್ತಾರೆ. ಅಪರೂಪಕ್ಕೆ ತಿಗಣಿಬಿದರಿ ಯಮುನವ್ವನಂಥವರು ತಾಳ ಬಾರಿಸಿದ ಉದಾಹರಣೆ ದೊರೆಯುತ್ತದೆ. ಚೌಡಕಿ ಮೇಳದಲ್ಲಿ ಹಾಗಲ್ಲ. ಚೌಡಕಿ ನುಡಿಸುತ್ತ ಹರದೇಶಿ-ನಾಗೇಶಿ ಹಾಡುಗಳನ್ನು ಹಾಡುವವರು ಮಹಿಳೆಯರೇ ಆಗಿರುತ್ತಾರೆ. ಎಲ್ಲಮ್ಮನ ಸೇವೆಗೆ ಮೀಸಲಿದ್ದ ಮಹಿಳೆಯರು ಎಲ್ಲಮ್ಮನಿಗೆ ಸೇವೆ ಸಲ್ಲಿಸುವುದು ಚೌಡಕಿ ನುಡಿಸುವ ಮೂಲಕ ಹಾಗೂ ಚೌಡಕಿ ಹಾಡುಗಳನ್ನು ಹಾಡುವ ಮೂಲಕ. ಹೀಗಾಗಿ ಚೌಡಕಿಯು ಮಹಿಳಾ ವಾದ್ಯವಾಗಿ ಗುರುತಿಸಲ್ಪಟ್ಟಿದೆ. ಹರದೇಶಿ-ನಾಗೇಶಿ ಹಾಡುಗಳನ್ನು ಚೌಡಕಿಗೆ ಹೊಂದಿಸಿಕೊಂಡಾಗ ಹಿಮ್ಮೇಳದಲ್ಲಿ ಮಹಿಳೆಯರೇ ಪ್ರವೇಶಿಸಿದರು. ಹೀಗೆ ಚೌಡಕಿ ಮೇಳವು ಮಹಿಳಾ ಪ್ರಧಾನವಾಗಿಯೇ ರಚಿತವಾಯಿತು. ಚೌಡಕಿ ಹಿಡಿದು ನಾಗೇಶಿ ಹಾಡುಗಳನ್ನು ಹಾಡಿದರೆ, ಅವರ ಎದುರಾಗಿ ದಪ್ಪಿನಲ್ಲಿ ಹರದೇಶೀ ಹಾಡುಗಳನ್ನು ಹಾಡಲಾಗುವುದಿಲ್ಲ. ಚೌಡಕಿ ಬಾರಿಸುವವರು ಹಾಗೂ ದಪ್ಪು ಬಾರಿಸುವವರು ಎದುರುಬದುರಾಗಿ ನಿಲ್ಲಲು ಬರುವುದಿಲ್ಲವಂತೆ. ಚೌಡಿಕೆಯಲ್ಲಿ ಈ ಎರಡೂ ವಾದ್ಯಗಳು ಭಿನ್ನವಾಗಿದ್ದರಿಂದ ಇಬ್ಬರೂ ಹರದೇಶಿ-ನಾಗೇಶಿ ಹಾಡುಗಳನ್ನೇ ಹಾಡುತ್ತಿದ್ದರೂ ಇವರು ಒಂದೇ ವೇದಿಕೆಯಲ್ಲಿ ಹಾಡಲು ಬರುವುದಿಲ್ಲವಂತೆ. ಹರದೇಶಿ-ನಾಗೇಶಿ ಎರಡೂ ಹಾಡುಗಳನ್ನು ಮಹಿಳೆಯರೇ ಹಾಡುತ್ತಾರೆ. ಅಂದರೆ ಹರದೇಶಿ-ನಾಗೇಶಿ ಹಾಡುಗಳ ಸ್ವರೂಪ ಯಥಾವತ್ತಾಗಿ ಉಳಿದುಕೊಂಡಿತು. ದಪ್ಪಿನ ಹಾಡಿನ ಮಹಿಳೆಯರು ವಾದ್ಯ ಬದಲಿಸಿಕೊಂಡರೆ ಹೊರತು ಸಾಹಿತ್ಯವನ್ನಲ್ಲ. ಚೌಡಕಿ ಪ್ರವೇಶದಿಂದಾಗಿ ಹರದೇಶಿ-ನಾಗೇಶಿ ಸಾಹಿತ್ಯ ಸ್ವರೂಪದಲ್ಲಿ ಬದಲಾವಣೆಗಳು ನಡೆಯಲಿಲ್ಲ. ಹಾಗೂ ಸಾಹಿತ್ಯ ರಚಿಸುವ ಮಹಿಳೆಯರು ಸೃಷ್ಟಿಯಾಗಲಿಲ್ಲ. ಸಾಹಿತ್ಯ ರಚನೆಯು ಪುರುಷ ಕ್ಷೇತ್ರವೆಂದೇ ಚೌಡಕಿ ಮೇಳದವರೂ ಪರಿಭಾವಿಸುತ್ತಾರೆ. ದಪ್ಪಿನ ಮೇಳಗಳನ್ನು ಚೌಡಕಿಗೆ ಬದಲಾಯಿಸಿಕೊಂಡಾಗ ವಕ್ತೃಗಳ ಹಿನ್ನೆಲೆಯಲ್ಲಿಯೇ ಹೇಳುವುದಾದರೆ ಈ ವೃತ್ತಿಯಲ್ಲಿ ಹೆಚ್ಚು ಸಂಖ್ಯೆಯಲ್ಲಿ ಮಹಿಳೆಯರು ತೊಡಗಿಕೊಳ್ಳುವಂತಾಯಿತು. ಇದರಿಂದ ಅವರ ಆದಾಯವೂ ಉತ್ತಮಗೊಂಡಿತು. ಒಂದು ರಾತ್ರಿ ಹಾಡಿಕೆಗೆ ಹದಿನೈದು ನೂರರಿಂದ ಮೂರು ಸಾವಿರ ರೂಪಾಯಿಗಳನ್ನು ಪಡೆಯುತ್ತಾರೆ. ಅಂದರೆ ಮೇಳದಲ್ಲಿ ನಾಲ್ಕೂ ಜನ ಮಹಿಳೆಯರಿಗೆ ತಲಾ ಒಬ್ಬರಿಗೆ ಐದನೂರು ರೂಪಾಯಿಗಳು ಸಿಗುತ್ತದೆ. ಅವರವರ ಬಸ್‌ಚಾರ್ಜ್‌ ಹಾಗೂ ಊಟ-ತಿಂಡಿಯ ಖರ್ಚನ್ನು ತೆಗೆದರೂತಲಾ ಒಬ್ಬರಿಗೆ ಇನ್ನೂರರಿಂದ ನಾನ್ನೂರರವರೆಗೆ ಉಳಿಯುತ್ತದೆ. ಗ್ರಾಮಗಳಲ್ಲಿ ಆಗಿರಬಹುದು, ಪಟ್ಟಣಗಳಲ್ಲಿ ಆಗಿರಬಹುದು-ಕಟ್ಟಡ ಹಾಗೂ ರಸ್ತೆ ನಿರ್ಮಾನದಂತಹ ಕೆಲಸದಲ್ಲಿ, ಹೊಲ-ಮನೆ ಕೆಲಸಗಳಲ್ಲಿ ದಿನವೊಂದಕ್ಕೆ ಇಷ್ಟು ಮೊತ್ತದ ಆದಾಯ ಯಾರಿಗೂ ಸಿಗುವುದಿಲ್ಲ. ಹೊಲಗದ್ದೆಗಳಲ್ಲಿ, ಗಾರೆ ಕೆಲಸಗಳಲ್ಲಿ ತೊಡಗಿಕೊಂಡಿದ್ದ ‘ಜೋಗತಿಯರು’, ‘ಬಸವಿಯರು’ ಈ ವೃತ್ತಿಗೆ ಪಲ್ಲಟಗೊಂಡಿದ್ದರಿಂದ, ಅದು ಅವರಿಗೆ ಲಾಭವೆಂದೇ ತೋರಿದೆ. ಸಂಗೀತ ದುಡಿಮೆಯಲ್ಲಿ ಈ ಬಗೆಯ ಲಾಭಗಳು ಅವರಿಗೆ ಎದುರಾಗುವ ಸಾಮಾಜಿಕ ಅಪಮಾನಗಳನ್ನು ನುಂಗಿಕೊಳ್ಳುವಂತೆ ಮಾಡಿದೆ.

ಚೌಡಕಿ ಮೇಳದಲ್ಲಿ ನಾಲ್ಕು ಜನ ಮಹಿಳೆಯರು ಇರುತ್ತಾರೆ. ಅವರು ಬಹುತೇಕವಾಗಿ ಕುಟುಂಬದವರು ಇಲ್ಲವೆ ಸಂಬಂಧಿಗಳಾಗಿರುತ್ತಾರೆ. ಅವರಲ್ಲಿ ಒಂದು ಸೌಹಾರ್ದಯುತ ಸಂಬಂಧವಿದೆ. ಮೇಳದೊಳಗೆ ಕೇವಲ ಮಹಿಳೆಯರೇ ಇದ್ದುದರಿಂದ ದಪ್ಪಿನ ಮೇಳದಲ್ಲಿನ ಹಾಗೇ ಹಿಮ್ಮೇಳದಲ್ಲಿನ ಪುರುಷ ಕಲಾವಿದನಿಂದ ಲೈಂಗಿಕ ಕಿರುಕುಳದ ಭಯವನ್ನು ಇವರು ಎದುರಿಸಬೇಕಾಗಿಲ್ಲ.

ಚೌಡಕಿ ಮೇಳದಲ್ಲಿ ಇತ್ತೀಚಿಗೆ ಡೋಲಕ ಬಾರಿಸುವವರು, ಮಾಸ್ತರ ಸೇರ್ಪಡೆಯಾಗಿದ್ದಾರೆ. ಡೋಲಕ ಬಾರಿಸುವವರು ಪುರುಷರೇ ಆಗಿರುತ್ತಾರೆ. ಮೇಳದವರ ಪ್ರಕಾರ ಹಾಗೂ ಸಮಾಜದವರ ಪ್ರಕಾರ ಮಹಿಳೆಯರು ಡೋಲಕ ಬಾರಿಸುವುದು ಶೋಭೆಯೆನಿಸುವುದಿಲ್ಲವಂತೆ. ‘ಮಾಸ್ತರ’ ಹೆಸರೇ ಸೂಚಿಸುವಂತೆ ಅವರು ಪುರುಷರೇ ಆಗಿರುತ್ತಾರೆ. ಡೋಲಕ ಬಾರಿಸುವವರಿದ್ದರೆ ಮೇಳ ಇನ್ನೂ ಕಳೆ ಕಟ್ಟುತ್ತದೆ ಎನ್ನುವುದು ಚೌಡಕಿ ಮೇಳದವರ ಅಭಿಪ್ರಾಯ. ಕಾಲ ಬದಲಾದಂತೆ ಜನರ ಅಭಿರುಚಿಯೂ ಬದಲಾಗುತ್ತದೆ. ಹೀಗಾಗಿ ಜನರ ಅಭಿರುಚಿಗೆ ತಕ್ಕಂತೆ ಹಾಗೂ ತಮ್ಮ ವೃತ್ತಿಗೆ ಆಧುನಿಕ ಮೆರಗನ್ನು ನೀಡಲು ಡೋಲಕ ಬಾರಿಸುವವನನ್ನು ತಮ್ಮ ಚೌಡಕಿ ಮೇಳದೊಳಗೆ ತೆಗೆದುಕೊಂಡರಂತೆ.

ದಪ್ಪಿನ ಹಾಡುಗಳನ್ನು ಚೌಡಕಿಗೆ ಹೊಂದಿಸಿಕೊಂಡ ಮಹಿಳೆಯರಿಗೆ ಪುರಾಣ ಓದುವ, ಕೇಳುವ ಹಾಗೂ ಓದಿದ್ದನ್ನು ಇಲ್ಲವೆ ಕೇಳಿದ್ದನ್ನು ಚರ್ಚಿಸುವ ಹವ್ಯಾಸವಿತ್ತು. ಹೀಗಾಗಿ ಹಾಡಿಕೆ ಮಹಿಳೆಯರು ಎದುರು ಹಾಡುಗಾರರು ಹಾಗೂ ಜನ ಸಮುದಾಯದಿಂದ ಬಂದ ಸವಾಲ್‌ಗೆ ಉತ್ತರಿಸುತ್ತಿದ್ದರು. ಇವರ ನಂತರ ಕಾಣಿಸಿಕೊಂಡ ಚೌಡಕಿ ಮೇಳದ ಮಹಿಳೆಯರಲ್ಲಿ ಈ ಬಗೆಯ ಹವ್ಯಾಸಗಳು, ಆಸಕ್ತಿಗಳು ಕಂಡುಬರಲಿಲ್ಲ. ಯಾಕೆಂದರೆ ಅವರು ಹಾಡಿಕೆ ವೃತ್ತಿಯ ಜೊತೆಯಲ್ಲಿ ಹೊಲದ ಕೆಲಸಗಳನ್ನು ಮಾಡುತ್ತಾರೆ. ಮನೆಗೆಲಸ ಮಾಡುವುದು, ರಂಗ ತಾಲೀಮು ಮಾಡುವುದು, ಹಾಡಿಕೆ ಇಲ್ಲಿದಿದ್ದರೆ ಹೊಲದ ಕೆಲಸ ನಿರ್ವಹಿಸುವುದು, ಇವುಗಳಲ್ಲಿಯೇ ಅವರ ದಿನ ಅವಧಿ ಪೂರ್ಣಗೊಳ್ಳುತ್ತದೆ. ದುಡಿದು ದಣಿದ ದೇಹ ವಿಶ್ರಾಂತಿ ಬಯಸುತ್ತದೆಯಾದ್ದರಿಂದ ಕೆಲವರಿಗೆ ಅಕ್ಷರ ಗೊತ್ತಿದ್ದರೂ ಓದುವ ಆಸಕ್ತಿಯನ್ನು ಕಳೆದುಕೊಳ್ಳುತ್ತಾರೆ. ಚೌಡಕಿ ಹಾಡುವವರಲ್ಲಿ ಅನಕ್ಷರಸ್ತರೇ ಹೆಚ್ಚು.ಹೀಗಾಗಿ ಅವರು ಸವಾಲ್‌ಗೆ ಜವಾಬ್ ನೀಡಲು ಮಾಸ್ತರನ್ನು ಅವಲಂಬಿಸಿರುತ್ತಾರೆ. ಈ ಹಾಡುಗಾರರಿಗೆ ಎದುರಾಗುವ ಸವಾಲ್‌ಗಳಿಗೆ ಉತ್ತರ ಹೇಳಿಕೊಡುವವರಿಗೆ ‘ಮಾಸ್ತರ’ ಎನ್ನುತ್ತಾರೆ. ಹೀಗೆ ಹರದೇಶಿ-ನಾಗೇಶಿ ಚೌಡಕಿ ಹಾಡಿಕೆಯಲ್ಲಿ ‘ಮಾಸ್ತರ’ ವೃತ್ತಿ ನಿರ್ವಹಿಸುವವರು, ಮಾಸ್ತರಿಕೆಯನ್ನೇ ಉಪಜೀವನದ ವೃತ್ತಿಯಾಗಿಸಿಕೊಂಡಿರುವುದಿಲ್ಲ; ಅವರು ಶಾಲಾ ಶಿಕ್ಷಕರಾಗಿರುತ್ತಾರೆ; ವ್ಯಾಪಾರಸ್ತರಾಗಿರುತ್ತಾರೆ; ಇಲ್ಲವೆ ತಮ್ಮ ಕೃಷಿಕರಾಗಿರುತ್ತಾರೆ. ಒಟ್ಟಿನಲ್ಲಿ ‘ಮಾಸ್ತರ’ ಎನಿಸಿಕೊಂಡವರು ಪುರಾಣ, ಪುಣ್ಯ ಕಥೆಗಳನ್ನು ಓದಿಕೊಂಡವರಾಗಿರುತ್ತಾರೆ. ‘ಮಾಸ್ತರ’ ಕುರಿತು ಹುಲಿಯಾಳದ ರತ್ನವ್ವಮಾದರ ಹೇಳಿದ ಮಾತುಗಳನ್ನು ಗಮನಿಸಬೇಕು”.

“ಅಕ್ಷರ ಸರಸೋತಿ ಗೊತ್ತಿಲ್ಲ. ನಾವು ಬಾಯಿತೊಂಡಿ ಜನಾ. ಪುರಾಣಗಿರಾಣಾ ಕೇಳಾಕ ವ್ಯಾಳ್ಯಾನೂ ಇಲ್ಲ. ನಮ್ಮ ಮರ್ಯಾದಿ ಉಳಿಸಿಕೊಳ್ಳಾಗ ಮಾಸ್ತರ್ನ ಹಾಡ್ಕಿಗಿ ಕರಕೊಂಡು ಹೋಗ್ತಿವಿ. ಒಂದ ರಾತ್ರಿಗಿ ಎರಡು ಸಾವಿರ ಇಲ್ಲಾ ಮೂರು ಸಾವಿರ ಬಂದ್ರ ನಮ್ಮ ಮ್ಯಾಳ್ದಾಗಿನ ಐದೂ ಜನಾ ಹಂಚಕೋತಿವಿ. ನಾವು ನಾಕೂ ಮಂದಿ ಹೆಣ್ಣುಮಕ್ಳು ನಮ್ಮ ಬಸ್‌ಚಾರ್ಜ್‌ಖರ್ಚ ನಾವs ಹಾಕೋತಿವಿ. ಆದರೆ ಡೋಲ್ಕಾ ಬಾರಿಸೋನಿಗೆ, ಮಾಸ್ತರಿಗೆ ನಾವೂ ನಾಕೂ ಜನಾ ಸೇರಿ ಬಸ್ ಚಾರ್ಜ್‌ಹಾಕಿ ಕರ್ಕೊಂಡು ಹೋಗ್ತೀವಿ. ಅವ್ರ ಚಾಪಾನಿ ಖರ್ಚಾನೂ ನೋಡ್ಕೋತೀವಿ. ಮ್ಯಾಳಕ್ಕ ಬಾಳ ಪಗಾರ ಬರ್ಲಿ, ಸೊಲ್ಪರ ಬರ್ಲಿ, ನಾವು ಕೊಡು ರೊಕ್ಕಾ ಕೊಡಾಕ ಬೇಕಾಗ್ತೈತಿ. ಒಮ್ಮೊಮ್ಮಿ ಸಮೀಪದ ಊರಿನವರು ಒಂದು ರಾತ್ರಿಗಿ ಎರಡುಸಾವಿರ ರೂಪಾಯಿ ಪಗಾರ ಕೊಡ್ತಾರಾ. ತಲಿಗೊಬ್ಬರ‍್ಗಿ ನಾನ್ನೂರು ರೂಪಾಯಿ ಬರ‍್ತೈತಿ. ಆದ್ರ ಅವ್ರು ತಗೊಳಲ್ಲ. ಎಲ್ಲಾ ವ್ಯಾಳಾದಗೂ ಅವಿಗ್ರಿ ಐದ್ನೂರು ಇಲ್ಲಾ ಆರ‍್ನೂರು ರೂಪಾಯಿ ಕೊಡಬೇಕಾಗ್ತೈತಿ. ಅವರಿಗೆ ಯಾಕ ಹೆಚಚ ಪಗಾರ ಕೊಡಬೇಕು ಅಂತ ಬಿಟ್ಟ್ರ ಸಭಾದಾಗ ಮರ್ಯಾದಿನೂ ಹೋಗುತ್ತ. ಬರು ಎಲಿನೂ ತಪ್ತಾವು. ಹಾಡ್ಕ್ಯಾಗ ಹೆಸರ ಕೆಡತೈತಿ” ಎಂದಳು ಹುಲಿಯಾಳದ ರತ್ನವ್ವ. ಆಕೆಯ ಒಟ್ಟು ಮಾತು ಹರದೇಶಿ-ನಾಗೇಶೀ ಚೌಡಕಿ ಮೇಳದಲ್ಲಿ ಪುರುಷರು ಮಹತ್ವ ಪಡೆದುಕೊಂಡದ್ದನ್ನು ಅನಾವರಣಗೊಳಿಸುತ್ತದೆ. ದಪ್ಪಿನ ಹಾಡಿಕೆಯಲ್ಲಿ ಹಿಮ್ಮೇಳದಲ್ಲಿರುವ ಪುರುಷರ ಅಹಂಕಾರವನ್ನು, ತಿರಸ್ಕರಿಸಿಯೇ ಚೌಡಕಿ ಮೇಳ ಕಟ್ಟಿಕೊಂಡ ಹಿರಿಯ ತಲೆಮಾರಿನ ಮಹಿಳೆಯರ ನಂತರದಲ್ಲಿ ಬಂದ ಮಹಿಳಾ ಹಾಡುಗಾರರು ಅಕ್ಷರ ಜ್ಞಾನ ಹಾಗೂ ಪುರಾಣ ಜ್ಞಾನದ ಕೊರತೆಯಿಂದಾಗಿ ‘ಮಾಸ್ತರ’ನ್ನು ಅವಲಂಬಿಸಬೇಕಾಯಿತು. ಅವರ ಈ ಜ್ಞಾನದ (ಸವಾಲ್-ಜವಾಬ್‌ಗೆ ಸಂಬಂಧಿಸಿದ್ದು) ಅವಲಂಬನೆಯು ಅವರೇ ಕಟ್ಟಿಕೊಂಡ ಮೇಳದಲ್ಲಿ ಅವರನ್ನು ಎರಡನೆಯ ದರ್ಜೆಗೆ ಇಳಿಸಿತು. ಹೆಣ್ಣುಮಕ್ಕಳು ಮಾತ್ರ ಮೇಳದಲ್ಲಿದ್ದಾಗ ಸಮಾನ ವೇತನ ನೀತಿ ಜಾರಿಯಲ್ಲಿತ್ತು. ಯಾವಾಗ ಈ ಮೇಳದಲ್ಲಿ ಪುರುಷರ ಪ್ರವೇಶವಾಯಿತೋ ಲಿಂಗಾಧಾರಿತ ವೇತನ ತಾರತಮ್ಯ ನೀತಿ ಚಾಲ್ತಿಗೆ ಬಂದಿತು. ಈ ವೇತನ ತಾರತಮ್ಯ ನೀತಿ ಮಹಿಳಾ ಅಪೇಕ್ಷೆ ನೆಲೆಯಿಂದ ಹುಟ್ಟಿಕೊಂಡದ್ದಲ್ಲ; ಮೇಳಕ್ಕೆ ಸೇರ್ಪಡೆಯಾದ ಪುರುಷರ ಒತ್ತಡದಿಂದ ಸೃಷ್ಟಿಯಾದದ್ದು. ಅಸಂಘಟಿತ ವಲಯದಲ್ಲಿನ ಯಾವುದೇ ವೃತ್ತಿಗೆ ಪುರುಷ ಪ್ರವೇಶಿಸಲಿ, ಅವನು ಹೆಚ್ಚು ವೇತನ ಪಡೆಯುವ ಮೂಲಕ ತನ್ನ ಅಧಿಕೃತತೆಯನ್ನು ಹಾಗೂ ಮಹತ್ವವನ್ನು ಸ್ಥಿರೀಕರಿಸುತ್ತಾನೆ. ಹರದೇಶಿ-ನಾಗೇಶಿ ಚೌಡಕಿ ಮೇಳದಲ್ಲಿ ‘ಗುರು’ ಎನ್ನುವ ಪರಿಕಲ್ಪನೆಯೇ ಇರಲಿಲ್ಲ. ಈ ಮಹಿಳೆಯರು ಹಾಡುವುದು ಕಲೆಯಾಗಿ ಪರಿಗಣಿಸಲ್ಪಟ್ಟಿದೆ; ಜ್ಞಾನವಾಗಿ ಅಲ್ಲ. ಜ್ಞಾನವಾಗಿ ಗುರುತಿಸಿಕೊಂಡ ‘ಮಾಸ್ತರ’ ಮೇಳಗಳ ಗುರುವಾಗಿ ಬೆಳೆದು ನಿಂತ. ಡೋಲಕ ಬಾರಿಸುವವನು ಈ ಚೌಡಕಿ ಮೇಳದಲ್ಲಿ ಹೇಗೆ ಪ್ರವೇಶೀದನೋ ಗೊತ್ತಿಲ್ಲ. ಚೌಡಕಿ ಮೇಳದಲ್ಲಿರುವ ಮಹಿಳೆಯರ ಅಪೇಕ್ಷೆಗನುಗುಣವಾಗಿ ಸ್ಥಾನ ಪಡೆದುಕೊಂಡನೋ ಅಥವಾ ಅವರ ಸಮಾಜದಲ್ಲಿನ ಪುರುಷರ ಸಲಹೆಯ ಮೇರೆಗೆ ಮೇಳದಲ್ಲಿ ಒಬ್ಬನಾದನೋ ಗೊತ್ತಿಲ್ಲ. ಅಂತೂ ಈ ಇಬ್ಬರು ಪುರುಷರು ಚೌಡಕಿ ಮೇಳದಲ್ಲಿ ಹೆಚ್ಚು ವೇತನವನ್ನು ಪಡೆದುಕೊಳ್ಳುವ ಮೂಲಕ ಪ್ರಾಧಾನ್ಯತೆಯನ್ನು ಪಡೆದುಕೊಂಡಿರುವರು.

ಹರದೇಶಿ-ನಾಗೇಶಿ ಚೌಡಕಿ ಮೇಳದಲ್ಲ ಪುರುಷ ಪ್ರವೇಶದಿಂದಾಗಿ ಹಾಡಿಕೆಯ ಎಲ್ಲ ಆರ್ಥಿಕ ಲಾಭಗಳು ಮೇಳದಲ್ಲಿನ ಮಹಿಳೆಯರಿಗೆ ದಕ್ಕುತ್ತಿಲ್ಲ. ಇವರು ದಪ್ಪಿನ ಮೇಳದವರ ಹಾಗೆ ತಮ್ಮ ಹಾಡಿಕೆಗೆ ಚಾಜ ಪಡೆದುಕೊಳ್ಳಲು ಪುರುಷರನ್ನು ಅವಲಂಬಿಸಬೇಕಿಲ್ಲ. ಹರದೇಶಿ-ನಾಗೇಶಿ ಚೌಡಕಿ ಮೇಳದವರು ತಾವೇ ಚಾಜವನ್ನು ಪಡೆದುಕೊಳ್ಳುತ್ತಾರೆ. ಪ್ರತಿನಿತ್ಯ ರಂಗ ತಾಲೀಮು ಮಾಡುತ್ತಾರೆ. ಹೊಸ ಹೊಸ ಹಾಡುಗಳನ್ನು ಕಲಿಯುತ್ತಿರುತ್ತಾರೆ. ಇವರ ಮೇಳದಲ್ಲಿರುವ ಪುರುಷ ಕಲಾವಿದರು ಚಾಜ ಹಿಡಿಯಬೇಕಿಲ್ಲ. ರಂಗ ತಾಲೀಮಿನಲ್ಲಿ ಇರಬೇಕಿಲ್ಲ ಇವರು ನೇರವಾಗಿ ಕಾಣಿಸಿಕೊಳ್ಳುವುದು ರಂಗದ ಮೇಲೆಯೇ. ಅಂದರೆ ಹರದೇಶಿ-ನಾಗೇಶಿ ಹಾಡಿಕೆ ವೃತ್ತಿಗೆ ಅಗತ್ಯವಾದ ಯಾವ ಶ್ರಮವನ್ನು ಹಾಕದೆ ಈ ಪುರುಷ ಕಲಾವಿದರು, ಮಹಿಳಾ ಕಲಾವಿದರಿಗಿತ ಹೆಚ್ಚಿನ ವೇತನವನ್ನು ಮೂಲಕ ಪಡೆದುಕೊಳ್ಳುವರು. ಹಾಡಿಕೆ ಕ್ಷೇತ್ರವು ಸವಾಲ್‌ಗೆ ಜವಾಬ್ ನೀಡದೇ ಇರುವುದನ್ನು ಮರಣಕ್ಕೆ ಸಮೀಕರಿಸಿಕೊಂಡಿದೆ. ಹೀಗಾಗಿ ಜವಾಬ್‌ಹೇಳಿಕೊಡುವ ‘ಮಾಸ್ತರ’ ಮೇಳದ ಮಹಿಳೆಯರಿಗೆ ಸಂಜೀವಿನಿಯಾಗಿರುವನು. ಲಿಂಗಾಧಾರಿತ ವೇತನ ತಾರತಮ್ಯದ ಪರಿಕಲ್ಪನೆಯನ್ನಿಟ್ಟುಕೊಂಡು, ಮಾಸ್ತರ ಹೆಚ್ಚು ವೇತನವನ್ನು ನಿರೀಕ್ಷಿಸುವುದು ಅನ್ಯಾಯ ಎಂದು ನಾವು ಹೇಳೀದರೆ, ಮಹಿಳಾ ಹಾಡುಗಾರರು ತಮ್ಮ ವೃತ್ತಿ ನಿರಂತರತೆಗೆ ಕಾರಣರಾದ ಮಾಸ್ತರರಿಗೆ ತಮಗಿಂತಲೂ ಹೆಚ್ಚಿನ ಸಂಬಳ ನೀಡುವುದು ನ್ಯಾಯವೆನ್ನುತ್ತಾರೆ. ಈ ಅಭಿಪ್ರಾಯ ಮೇಳದ ಮಹಿಳೆಯರ ಅಂತರಂಗದಿಂದ ಬಂದುದಲ್ಲ. ಸವಾಲ್-ಜವಾಬ್‌ನ್ನು ಸಾವು-ಬದುಕಿನೊಂದಿಗೆ ಸಮೀಕರಿಸಿದ ಸಾಮಾಜಿಕ ಪ್ರಕ್ರಿಯೆಯೇ ಇಂತಹ ಅಭಿಪ್ರಾಯಗಳಿಗೆ ಒತ್ತಾಸೆಯಾಗಿ ನಿಂತಿದೆ.

ದಪ್ಪಿನ ಹಾಡಿನವರ ಆರ್ಥಿಕ ಆದಾಯಕ್ಕೂ, ಚೌಡಕಿ ಹಾಡಿನವರ ಆರ್ಥಿಕ ಆದಾಯಕ್ಕೂ ವ್ಯತ್ಯಾಸವಿದೆ. ದಪ್ಪಿನವರು ಸಾಮಾನ್ಯವಾಗಿ ಮೇಳವೊಂದಕ್ಕೆ ಎರಡು ಸಾವಿರದ ಐದು ನೂರರಿಂದ ಮೂರು ಸಾವಿರ ರೂಪಾಯಿವರೆಗೆ ಪ್ರಾರಂಭವಾಗಿ ನಾಲ್ಕು ಸಾವಿರ ರೂಪಾಯಿಗಳಿಂದ ಐದು ಸಾವಿರ ರೂಪಾಯಿಗಳವರೆಗೆ ಸಂಬಳ ಪಡೆಯುತ್ತಾರೆ. ಎರಡು ರಾತ್ರಿ ಒಂದು ಹಗಲು ಇಲ್ಲವೆ ಒಂದು ಹಗಲು ಎರಡು ರಾತ್ರಿ ಹಾಡಿಕೆಗೆ ಒಂದು ಮೇಳದವರು ಐದು ಸಾವಿರ ರೂಪಾಯಿಗಳಿಗಿಂತಲೂ ಹೆಚ್ಚಿಗೆ ಸಂಬಳವನ್ನು ಪಡೆದುಕೊಳ್ಳುತ್ತಾರೆ. ದಪ್ಪಿನ ಮೇಳಗಳಲ್ಲಿ ಒಂದು ಮೇಳದಲ್ಲಿ ಮೂವರು ಇದ್ದರೆ, ಚೌಡಕಿ ಮೇಳದಲ್ಲಿ ಆರು ಜನರಿರುತ್ತಾರೆ. ಸೊಲ್ಲಾಪುರ ಭಾಗದಲ್ಲಿ ಇತ್ತೀಚಿಗೆ ದಪ್ಪಿನ ಮೇಳದಲ್ಲಿ ಸೂರು ಹಾಗೂ ತಾಳದವರ ಜೊತೆಯಲ್ಲಿ ಪಿಟೀಲು ಬಾರಿಸುವನು ಸೇರಿಕೊಂಡಿದ್ದಾನೆ. ಇದನ್ನು ಗಮನಿಸಿದರೆ ದಪ್ಪಿನ ಮೇಳದಲ್ಲಿ ನಾಲ್ಕು ಜನರಾಗುತ್ತಾರೆ. ಆದರೂ ಒಂದು ಮೇಲದಲ್ಲಿ ಸಂಖ್ಯಾ ದೃಷ್ಟಿಯಿಂದ ದಪ್ಪಿನವರಿಗಿಂತಲೂ, ಚೌಡಕಿಯಲ್ಲಿಯೇ ಹಿಮ್ಮೇಳದವರು ಹೆಚ್ಚಿರುತ್ತಾರೆ. ಮುಧೋಳ, ಜಮುಖಂಡಿ ಭಾಗಗಳಲ್ಲಿ ಒಂದು ರಾತ್ರಿ ಹಾಡಿಕೆಗೆ ಮೇಳವೊಂದಕ್ಕೆ ಒಂದು ಸಾವಿರದ ಐದುನೂರು ರೂಪಾಯಿಯಿಂದ ಪ್ರಾರಂಭವಾಗಿ ಎರಡು ಸಾವಿರದ ಐದು ನೂರು ರೂಪಾಯಿಗಳವರೆಗೆ ವಿಸ್ತರಿಸಿಕೊಳ್ಳುತ್ತದೆ. ಚೌಡಕಿಯ ಒಂದು ಮೇಳದಲ್ಲಿ ಆರು ಜನರಿರುವುದರಿಂದ, ಡೋಲಕ ಬಾರಿಸುವವನು ಹಾಗೂ ಮಾಸ್ತರ ಹೆಚ್ಚು ಸಂಬಳ ಅಪೇಕ್ಷಿಸುವುದರಿಂದ (ನಾಲ್ಕು ನೂರರಿಂದ ಆರು ನೂರುರೂಪಾಯಿಗಳ ವರೆಗೆ) ಇಬ್ಬರ ಸಂಬಳವನ್ನು ಹೊರತು ಪಡಿಸಿದರೆ ತಲಾ ಒಬ್ಬೊಬ್ಬರಿಗೆ ನೂರಾ ಎಪ್ಪತ್ತೈದು, ಇನ್ನೂರ ಎಂಬತ್ತು ರೂಪಾಯಿಗಳವರೆಗೆ ಇವರಿಗೆ ಆದಾಯ ಬರುತ್ತದೆ. ಈ ಆದಾಯದೊಳಗೆ ತಮ್ಮ ಬಸ್‌ಚಾರ್ಜ್‌ಹಾಗೂ ಊಟದ ಖರ್ಚನ್ನು ಹಾಗೂ ಡೋಲಕ ಬಾರಿಸುವ ಮಾಸ್ತನ ಬಸ್‌ಚಾರ್ಜ್‌, ಊಟದ ಖರ್ಚುಗಳನ್ನು ಕಳೆದರೆ ಇವರಿಗೆ ದೊರೆಯುವ ಆದಾಯ ಬಹಳ ಕಡಿಮೆ. ದಪ್ಪಿನ ಮಹಿಳೆಯರು ಚೌಡಿಕೆಯವರಿಗಿಂತ ಸ್ವಲ್ಪ ಆದಾಯ ಹೆಚ್ಚು ಪಡೆಯುವುದರಿಂದ, ಅವರ ಆರ್ಥಿಕ ಸ್ಥಿತಿ ಇವರಿಗಿಂತ ಸ್ವಲ್ಪ ಉತ್ತಮವಾಗಿದೆ. ಹೀಗಾಗಿ ಚೌಡಕಿಯಲ್ಲಿ ಹರದೇಶಿ-ನಾಗೇಶಿ ಹಾಡುಗಳನ್ನು ಮುಧೋಳ, ಜಮುಖಂಡಿ ಭಾಗದ ಮಹಿಳೆಯರು ಹಾಡಿಕೆ ವೃತ್ತಿಯೊಂದನ್ನೇ ಅವಲಂಬಿಸಿಲ್ಲ. ತಮ್ಮ ಮನೆಯ ಕೆಲಸದ ಜೊತೆಯಲ್ಲಿ ಹೊಲದ ಕೂಲಿ ಕೆಲಸಗಳಿಗೂ ಹೋಗುತ್ತಾರೆ. ಹೀಗೆ ಮೂರು ಬಗೆಯ ಕೆಲಸದ ಒತ್ತಡಗಳು ಈ ಮಹಿಳೆಯರಿಗೆ ಓದಲು ಹಾಗೂ ಪುರಾಣಗಳನ್ನು ಕೇಳಲು ವೇಳೆ ಕೊಡುವುದಿಲ್ಲ. ಹೀಗಾಗಿ ಚೌಡಕಿ ಮೇಳ ಮಹಿಳೆಯರದ್ದೆ ಆಗಿದ್ದರೂ, ಅಲ್ಲಿ ಸವಾಲ್-ಜವಾಬ್ ಹೇಳಿಕೊಡುವ ‘ಮಾಸ್ತರ’ ಗುರುವಾಗಿಬಿಟ್ಟನು. ಗುರುವಾಗುವ ಮೂಲಕವೇ ತನ್ನ ಅನಿವಾರ್ಯತೆಯನ್ನು ಸೃಷ್ಟಿಸಿದನು.

 

[1] ಚೌಡಿಕೆ ಎನ್ನುವುದು ಒಂದು ವಾದ್ಯ. ಹರದೇಶಿ-ನಾಗೇಶಿ ಹಾಡುಗಾರರು ಚೌಡಿಕೆಯನ್ನು ‘ಚೌಡಕಿ’ ಎಂದು ಹೇಳುತ್ತಾರೆ. ಅವರು ಬಳಸುವ ‘ಚೌಡಕಿ’ ಎನ್ನುವ ಪರಿಭಾಷೆಯನ್ನು ಅಧ್ಯಯನದಲ್ಲಿ ಯಥಾವತ್ತಾಗಿ ಉಳಿಸಿಕೊಳ್ಳಲಾಗಿದೆ.

[2] ಪುರುಷರು ತುಂತುಣಿಯನ್ನು ಅಡ್ಡ ಹಿಡಿದು ಬಾರಿಸಿದರೆ, ಸ್ತ್ರೀಯರು ನೇರವಾಗಿ ಹಿಡಿದು ಬಾರಿಸುತ್ತಾರೆ. ಗಂಡಸರು ಬಾರಿಸುವ ತಾಳಕ್ಕಿಂತ ಹೆಂಗಸರು ಬಾರಿಸುವ ತಾಳಗಳು ಚಿಕ್ಕವಾಗಿರುತ್ತವೆ. ಡೋಲಕವನ್ನು ಮಾತ್ರ ಪುರುಷರೇ ಬಾರಿಸಬೇಕು. ಹೆಣ್ಣುಮಕ್ಕಳು ಬಾರಿಸುವುದು ಶೋಭೆ ಎನಿಸುವುದಿಲ್ಲ ಎನ್ನುವುದು ಚೌಡಿಕೆ ಮೇಳದವರ ಅಭಿಪ್ರಾಯ.