ಜಾತ್ರೆಗಳು: ಹಾಡಿಕೆ ಅವಕಾಶಗಳು

ಎಲೆ ಹಿಡಿಯುವುದಕ್ಕಾಗಿ ಅಂದರೆ ಹಾಡಿಕೆಗೆ ಆಹ್ವಾನ ಪಡೆಯುವುದಕ್ಕಾಗಿ ಹರದೇಶಿ-ನಾಗೇಶಿ ಹಾಡುವ ಎಲ್ಲ ಹಾಡುಗಾರರು ಪ್ರಯಾಸಪಡುತ್ತಾರೆ. ಆಹ್ವಾನ ಪಡೆಯುವುದಕ್ಕಾಗಿ ಪಡಬೇಕಾದ ಪ್ರಯಾಸದಿಂದಾಗಿ ಮಹಿಳಾ ಹಾಡುಗಾರರು ಪುರುಷ ಹಾಡುಗಾರರಿಗಿಂತ ಭಿನ್ನವಾದ ಸಮಸ್ಯೆಯನ್ನು ಎದುರಿಸುತ್ತಾರೆ. ವೃತ್ತಿ ಜೀವನದ ಅಭಿವೃದ್ಧಿಗಾಗಿ ಹಾಗೂ ಹೊಟ್ಟೆ ತುಂಬಿಸಿ ಕೊಳ್ಳುವುದಕ್ಕಾಗಿ ವೃತ್ತಿಯಲ್ಲಿ ನಿರಂತರತೆ ಕಾಯ್ದುಕೊಳ್ಳುವುದು ಇವರಿಗೆ ಅನಿವಾರ್ಯವಾಗಿರುತ್ತದೆ. ಆಹ್ವಾನ ಪಡೆಯುವುದಕ್ಕಾಗಿ ಹರದೇಶಿ-ನಾಗೇಶಿ ಹಾಡುಗಾರರಿಗೆ ಪ್ರಧಾನ ವೇದಿಕೆ ನೀಡುವ ಜಾತ್ರೆಗಳಿಗೆ ಎಲ್ಲ ಕಲಾವಿದರೂ ಹೋಗುತ್ತಾರೆ. ಜಾತ್ರೆಯವರೇನೂ ಇವರಿಗೆ ಹೆಚ್ಚಿನ ಸಂಬಳ ಇಲ್ಲವೆ ಭಕ್ಷೀಸನ್ನು ನೀಡುವುದಿಲ್ಲ. ದೊಡ್ಡ ದೊಡ್ಡ ಜಾತ್ರೆಗಳಿಗೆ ದೂರದ ಊರುಗಳಿಂದ ಭಕ್ತರು ಬರುತ್ತಾರೆ. ತಮ್ಮ ಕಲಾ ಪ್ರದರ್ಶನದಿಂದ ಜನರು ಸುಪ್ರೀತರಾದರೆ ತಮ್ಮೂರಿನ ಜಾತ್ರೆಗಳಿಗೆ ಕರೆಯಬಹುದು ಎನ್ನುವ ನಿರೀಕ್ಷೆಯೇ ಹರದೇಶಿ-ನಾಗೇಶಿ ಹಾಡುಗಾರರನ್ನು ಇಂತಹ ಜಾತ್ರೆಗಳು ಆಕರ್ಷಿಸುತ್ತದೆ. ಇಂತಹ ಆಕರ್ಷಣೆಯಿಂದಾಗಿ ಜಾತ್ರೆಗೆ ಬಂದ ಮಹಿಳೆಯರ ಅನುಭವ ಕಥನಗಳನ್ನು ಅವರ ಮಾತಿನಲ್ಲಿಯೇ ಕೇಳಬೇಕು.

“ವಿಜಾಪುರದಾಗ ಸಂಕ್ರಾಂತಿ ದಿವ್ಸ ಸಿದ್ಧರಾಮೇಶ್ವರ ಜಾತ್ರಿ ಆಗ್ತೈತಿ. ಈ ಜಾತ್ರಿನ್ನ ಔರಂಗಬಾದ್ನ ರಾಜುಗೌಡ್ರು ನಡೆಸಿಕೊಡತಿದ್ರು, ಅವ್ರು ಮುಂಜಾನಿ ಹತ್ತ ರೂಪಾಯಿ, ಸಂಜಿಕ ಹತ್ತ ರೂಪಾಯಿ ಹೋಟೆಲ ಖರ್ಚಿಗಂತ ಕೊಡ್ತೀದ್ರು. ನಮ್ಮ ಬಸ್ಸಿನ ಖರ್ಚಾ ಅವ್ರೇನೂ ನೋಡ್ಕೋತಿರಲಿಲ್ಲ. ಈ ಜಾತ್ರಿಗಿ ಶಾವರಿಕಿ ಹಾಡವರೆಲ್ಲಾ ಬರತಾರ. ಇಲ್ಲಿ ತಮ್ಮ ಕಲಾ ಪ್ರದರ್ಶನ ಮಾಡಿದ್ರ ಈಕಾಡಿ ಭಾಗದ್ದ ಜಾತ್ರಿ ಎಲ್ಲಿ ಬರತಾವಂತ ಅಸಾದಿಂದ (ಆಶೆಯಿಂದ) ಬರತಾರು. ಈ ಆಸಾದಿಂದ ಬಂದ ಹಂದಿಗನೂರಿನ ಗಂಗವ್ವ ಬಾಳs ಪರಿತಾಪಾ ಪಟ್ಟ್ಲು. ನಲ್ವತ್ತು ವರ್ಷಗಳಿಂದ ಈಕಾಡಿ ಬಸ್ಚಾರ್ಜ್ಕೊಡ್ತಾಯಿಲ್ಲ. ಮೂಡಲಿಗಿ ಹತ್ತಿರ ಬರು ಹಂದಿಗನೂರಿನಿಂದ ಗಂಗವ್ವ ಬಂದಿದ್ಲು. ಅಕಿ ಅದs ಈ ಹಾಡ್ಕಿ ಕೆಲ್ಸ ಸುರು ಹಚ್ಚಕೊಂಡಿದ್ಲು. ತನ್ನ ಹಿಂದ ಮ್ಯಾಳದವರನ್ನೂ ಕರಕೊಂಡ ಬಂದಿದ್ಲು. ತನ್ನ ಬಸ್‌ಚಾರ್ಜ್‌ಜೊತೆ ಅವ್ರ ಬಸ್ಚಾರ್ಜ್‌‌ನೂ ಹಾಕೊಂಡು ಬಂದಿದ್ಲು. ಆಕಿ ತನ್ನ ಹಾಡ್ಕಿ ಮುಗಿದಿಂದ ಜಾತ್ರಿ ನಡೆಸವ್ರಿಗಿ ಬಸ್‌ಚಾರ್ಜ್‌ಕೇಳಿದ್ಲು. ಅವ್ರು ಈಗ ಕೊಡೂದು ನಿಲ್ಸಿವಿ ಅಂದ್ರು. ಹಂಗಂದ ಕೂಡ್ಲೆ ಅಕಿ ಸುರುಸುರು ಅಳಾಕ ಚಾಲೂ ಮಾಡಿದ್ಲು. ನಮ್ಮ ಹಾಡ್ಕಿಗಿ ಮುನ್ನೂರು ರೂಪಾಯಿ ಭಕ್ಷೀಸು ಬಂದಿತ್ತು. ಸಣ್ಣ ವಯಸ್ಸಿನ ಹುಡುಗಿ, ಸಿಕ್ಕಸಿಕ್ಕವರ್ನ ರೊಕ್ಕಾ ಕೇಳಾಕಾಗಲ್ಲ. ಅದಕ್ಕಂತ ನಮಗ ಬಂದ ಮುನ್ನೂರು ರೂಪಾಯಿ ಭಕ್ಷೀಸನ್ನು ಆಕಿಗಿ ಕೊಟ್ಟು ಊರಿಗಿ ಕಳಸಿದ್ವಿ.” – ನಿಂಬೆವ್ವ ಐಹೊಳಿ, ವಿಜಾಪುರ

ಮಾರ್ಚ್ತಿಂಗಳದಾಗ ನಡಿಯು ಗುಲ್ಬರ್ಗಾದಾಗಿನ ಶರಣಬಸವೇಶ್ವರ ಜಾತ್ರಿಗಿ ನಾವು ತಪ್ಪದ ಹೋಗ್ತೀವಿ. ಈ ಜಾತ್ರ್ಯಾಗ ನಮಗ ಕ್ಯಾಲೆಂಡರ್, ಡೈರಿ, ನೂರು ರೂಪಾಯಿ ಇಷ್ಟನ್ನ ನಮಗ ಕೊಡತಾರು. ಪಗಾರ ಆಸೆ ಸಲವಂದ ನಾವು ಅಲ್ಲಿ ಹೋಗುದಿಲ್ಲ. ಎಲಿ ಬರತಾವಲ್ಲಾ? ಈ ಫಾಯಿದೆಯಿಂದ ನಾವಲ್ಲಿ ಹೋಗಿರತಿವಿ. ನಮ್ಮ ಹಾಡಕೇಳಿ ಪಸಂದ ಬಂದವರು ಅಲ್ಲಿಯೇ ಎಲಿ ಕೊಟ್ಟು ತಮ್ಮೂರ್ಗಿ ಕರಿತಾರು. ಗುಲ್ಬರ್ಗಾ ಜಾತ್ರಿ ಆಗಿಂದ ಅದರ ಬೆನ್ನಹಿಂದ ಬಿಟ್ಟುಬಿಡದ ಜಾತ್ರಿ ಶುರುವಾಗ್ತಾವು. ಶರಣ ಬಸಪ್ಪರ ಜಾತ್ರ್ಯಾಗ ಹಾಡ್ಕಿಗಿ ಬಂದವರೆಲ್ಲಾರ್ಗೂ ಹಾಡಾಕ ಟೇಜು ಕೊಡ್ತಾರು. ಮುಂದ ಸಿಗೋ ಚಾಜಾನ ಲಕ್ಷದಾಗ ಇಟಕೊಂಡು ತುರುಸಿಲೇ ಹಾಡ್ತೇವು. ಏಟ ಚಂದ ಹಾಡ್ತೇವು ಅಷ್ಟ ಹೆಚ್ಚು ಚಾಜಾ ಸಿಗ್ತಾವು. ಒಬ್ಬೊರಿಗೆ ಅರ್ಧಗಂಟಾ ವ್ಯಾಳಾ ಕೊಟ್ಟಿರ್ತಾವು. ಹಾಡ್ಕಿ ಮುಗಿಸಿ ಕೆಳಗ ಇಳಿಯದ್ಕ ಅಲ್ಲೆ ಮೂವತ್ತುನಲವತ್ತು ಚಾಜಾ ಸಿಗ್ತಾವು. ಹಾಂಗ ಚಾಜಾ ಸಿಕ್ಕಾಗ ಹೊಡಮಳ್ಳಿ ನಮ್ಮೂರ್ಗಿ ಹ್ಯಾಂಗ ಬರಾಕಗ್ತೆತಿ? ಬರು ಚಾಜಾ ಎಲ್ಲ ಗುಲ್ಬರ್ಗ ಸುತ್ತಮುತ್ತ. ಅದಕ್ಕ ಗುಲ್ಬರ್ಗಾದಾಗ ಠಿಕಾಣಿ ಹೂಡ್ತೇವು. ಈ ಜಾತ್ರಿಗಿ ಹೋದ್ರ ನಾನು ಮೂರ್ನಾಲ್ಕು ತಿಂಗಳ ಗುಲ್ಬರ್ಗಾದಾಗ ಇರತೇನು. ನಾ ಇರೋಧು ಜಮುಖಂಡ್ಯಾಗಿನ ಜನವಾಡ್ದಾಗ. ಇಲ್ಲಿಂದ ಗುಲ್ಬರ್ಗಾಕ್ಕ ಮ್ಯಾಲಿಂದ ಮ್ಯಾಲ ಒಡ್ಯಾಡಾಕಾಗಲ್ಲ. ಹಾದಿ ಹೈರಾನಾ ಆಗ್ತೈತಿ. ಹಂಗs ದುಡಿದದ್ದೆಲ್ಲಾ ಬಸ್ಚಾರ್ಜ್‌‌ಗೆ ಇಡಬೇಕಾಗ್ತೈತಿ. ದೂರದ ಊರಿಂದ ಬಂದಂತಹ ನನ್ನಂತವ್ರ ಹತ್ತ್ರ ರೊಕ್ಕ ಇದ್ರ ಸಣ್ಣ ಗುಡಿಸಲಾ ಬಾಡಗಿ ಹಿಡಿತೇವು. ರೊಕ್ಕ ಇಲ್ದವ್ರು ಊರಾಗಿನ ಗುಡಿಗುಂಡಾರ್ದಾಗ ಮಲಗತಾರು. ಗಂಡಸರ್ಗಿ ಹ್ಯಾಂಗೋ ನಡಿತೈತಿ. ನಮಂಥಾ ಹೆಣ್ಣಮಕ್ಕಳು ಬಯಲಾಗ ಮಲಗಿದ್ರ ಸಮಸ್ಯಾ ಬಂದs ಬರತಾವು. ಬಾಡ್ಗಿ ಮನಿ ಹಿಡಿಲಾರ್ದಕ್ಕೆ ಗುಡಿಯಾಗ ಮಲಗಿದ್ದ್ಯಾ. ನನ್ನ ಜೋಡಿ ಹಿಮ್ಮೇಳದವರು ಇದ್ದ್ರು. ಮಲಗಿದ ಮನಿಷ್ಯಾರು ಸತ್ತ ಮನಿಷ್ಯಾರು ಎರಡೂ ಒಂದs ಅಲ್ಲ ತಾಯಿ? ಯಾವ್ನೊ ಒಬ್ಬ ನನ್ನ ಮ್ಯಾಗ ಬಂದ ಬಿದ್ದಾ. ಮಲ್ಕೊಂಡ ನಾನು ಗಾಬರಾಸಿ ಎದ್ದು ಹೊಯ್ಕೊಂಡ್ಯಾ. ನನ ಜೋಡಿ ಬಂದವರು ಎದ್ದರು. ಆಗು ಅನಾಹುತ ತಪ್ತು. ಹೊಟ್ಟೆ ತಿಪ್ಪಲ ಸಲವಂದ ನೂರಾರು ಸಂಕಟಾ ನುಂಗೇವಿ. ಅದರಾಗ ಹೇಳ್ಲಾರ್ದಂತಾವ ಜಾಸ್ತಿ ಅವಾ”. – ಜನವಾಡದ ಬುದ್ಧವ್ವ

“ಶಾವರ್ಕಿ ಅವರು ಗುಲ್ಬರ್ಗಾದ ಶರಣಬಸಪ್ಪ ಜಾತ್ರಿಗಿ, ವಿಜಾಪುರ್ದ ಸಿದ್ರಾಮೇಶ್ವರ ಜಾತ್ರಿಗಿ ಸೇರ್ತಾರು. ನಮಗ ಅಲ್ಲಿ ಹಾಡ್ಕಿಗಿ ಕೊಡಲ್ಲ. ಚೌಡ್ಕ್ಯಾಗ ಹರದೇಶಿ-ನಾಗೇಶಿ ಹಾಡೋರೆಲ್ಲ ಕುಳಲಿ ಸಿದ್ಧಾರೂಢ ಮಠದ ಜಾತ್ರಿಗಿ ಸೇರಿರ್ತೀವಿ. ಜಮಖಂಡಿ, ಮುಧೋಳಾ, ಮೂಡಲಗಿ, ಮಾಲಿಂಗಪೂರಾ ಈಕಾಡೆಲ್ಲಾ ಹರದೇಶಿ-ನಾಗೇಶಿ ಚೌಡಕಿ ಮ್ಯಾಳಗಳs ಅದಾವು. ಮಠದವ್ರು ನಮಗ ಊಟಾ ಬಿಟ್ಟ್ರ ಏನೂ ಕೊಡಂಗಿಲ್ಲ. ಐದ ದಿನಾ ನಮ್ಮ ಹಾಡ್ಕಿ ಇರ್ತಾವು. ನಮ್ಮ ಹಾಡ್ಕಿ ಮುಗದಿಂದ ನಲ್ವತ್ತ ಐವತ್ತ ಕಡಿಗಿ ಚಾಜಾ ಸಿಗ್ತಾವು. ತಗೊಂಡು ನಮ್ಮೂರ್ಗಿ ಬರ್ತೀವಿ. ಹಾಡ್ಕಿಗಿ ಬಂದ ಎಲ್ಲಾ ಊರುಗಳೂ ನಮ್ಮ ಊರ್ಗಿ ಸಮೀಪ ಇರೋದ್ಕ ನಮ್ಮನಿಯಾಗ ಉಳ್ಕೋತೇವಿ, ಬ್ಯಾರೆ ಎಲ್ಲೂ ಹೋಗಲ್ಲ.” – ರೇಣುಕಾ ಮಾದರ, ಮುಧೋಳ

ಹೀಗೆ ಹರದೇಶಿ-ನಾಗೇಶಿ ಹಾಡುಗಳನ್ನು ಹೇಳುವ ಶಾವರಕಿ ಮೇಳದವರು (ದಪ್ಪಿನ ಹಾಡು) ಹಾಗೂ ಚೌಡಕಿ ಮೇಳದವರು ನಿಗದಿತ ಜಾತ್ರೆಗಳಲ್ಲಿ ಒಂದೆಡೆ ಸೇರುತ್ತಾರೆ. ಜಾತ್ರೆ ನಡೆಸುವವರೇ ಹರದೇಶಿ-ನಾಗೇಶಿ ಹಾಡುಗಾರರೆಲ್ಲರೂ ಒಂದೆಡೆ ಸೇರಲು ಸಾಂಸ್ಕೃತಿಕ ವೇದಿಕೆಯನ್ನು ಕಲ್ಪಿಸಿಕೊಟ್ಟಿರುತ್ತಾರೆ. ಹೀಗೆ ಹಾಡುಗಾರಿಕೆಗಾಗಿ ಒಂದೆಡೆ ಸೇರುವ ಇವರಿಗೆ ಜಾತ್ರೆ ನಡೆಯುವ ದೈವದೊಟ್ಟಿಗೆ ಯಾವುದೇ ರೀತಿಯ ಸಾಂಸ್ಕೃತಿಕ ಇಲ್ಲವೆ ಧಾರ್ಮಿಕ ಸಂಬಂಧಗಳಿರುವುದಿಲ್ಲ. ಎಲ್ಲ ಹಾಡುಗಾರರು ಅಲ್ಲಿ ಹೋಗುವುದು ಬೇರೆ ಬೇರೆ ಊರಿನ ಜಾತ್ರೆಗಳಲ್ಲಿ ಆಹ್ವಾನ ಪಡೆದುಕೊಳ್ಳುವುದಕ್ಕಾಗಿ. ಹೀಗೆ ಪಡೆದುಕೊಂಡ ಆಹ್ವಾನಗಳು ಅವರ ಇಡಿ ವರ್ಷದ ಉಪಜೀವನಕ್ಕೆ ನೆರವಾಗುತ್ತದೆ. ಜೀವನ ನಿರ್ವಹಣೆಗಾಗಿ, ವೃತ್ತಿಯಲ್ಲಿ ರುವುದಕ್ಕಾಗಿ ಹಾಡಿಕೆಗೆ ಆಹ್ವಾನ ಪಡೆಯುವ ಅಪೇಕ್ಷೆಯಿಂದ ಬಂದ ಇವರಲ್ಲಿ ಸ್ಪರ್ಧೆಯಿರುತ್ತದೆ. ಹರದೇಶಿ-ನಾಗೇಶಿ ಹಾಡುಗಳೊಳಗಡೆಯೇ ಶಿವ-ಶಕ್ತಿಯರ ನಡುವೆ ಸ್ಪರ್ಧೆಯಿರುತ್ತದೆ. ಹಾಡುಗಳೊಳಗಿನ ಸ್ಪರ್ಧೆಯ ಜೊತೆಗೆ, ಹೆಚ್ಚು ಹೆಚ್ಚು ಚಾಜ(ಅವಕಾಶ) ಗಳನ್ನು ಪಡೆದುಕೊಳ್ಳಬೇಕೆನ್ನುವ ವೃತ್ತಿಜೀವನದ ಒತ್ತಡವೂ ಈ ಸ್ಪರ್ಧೆಯನ್ನು ರಂಗೇರಿಸುತ್ತದೆ. ಬೇರೆ ಬೇರೆ ಜಾತ್ರೆಗಳಿಗೆ ವೀಳ್ಯ ಪಡೆಯಲು ಅವಕಾಶ ಸೃಷ್ಟಿಸುವ ಇಂತಹ ಜಾತ್ರೆಗಳು ಅವರ ಮಾತಿನಲ್ಲಿಯೇ ಹೇಳುವುದಾದರೆ “ಹ್ಯಾಂವ ಹುಟ್ಟಿಸ್ತೈತಿ”. ನೂರಾರು ಊರು, ಹಲವಾರು ಜಿಲ್ಲೆಗಳಿಂದ ಜಾತ್ರೆಗೆ ಬಂದವರು ತಮಗೆ ಇಷ್ಟವಾದ ಹರದೇಶಿ-ನಾಗೇಶಿ ಎರಡೂ ಮೇಳದವರಿಗೆ ವೀಳ್ಯದೆಲೆಯಲ್ಲಿ ಅಡಿಕೆ ಹಾಗೂ ಬಸ್‌ಚಾರ್ಜ್‌ ಹಣವನ್ನಿಟ್ಟು ಆಹ್ವಾನಿಸುತ್ತಾರೆ. ಸದಾ ಕ್ಯಾಲೆಂಡರ್ ಡೈರಿಯನ್ನು ಹತ್ತಿದಲ್ಲಿಟ್ಟುಕೊಳ್ಳುವ ಹಾಡಿಕೆಯವರು ಅದರಲ್ಲಿ ತಾವು ಜಾತ್ರೆಗೆ ಹೋಗಬೇಕಾದ ದಿನಾಂಕಗಳನ್ನು ಗೊತ್ತು ಮಾಡಿಕೊಂಡಿರುತ್ತಾರೆ.

ಚಾಜ ಹಿಡಿಯುವುದು ಮಹಿಳಾ ಹಾಡುಗಾರರಿಗೆ ಅಷ್ಟು ಸುಲಭವಾಗಿರುವುದಿಲ್ಲ. ಹಾಡುಗಾರರ ಕಲಾ ಪ್ರದರ್ಶನವನ್ನು ಅವಲಂಬಿಸಿಯೇ ಬೇರೆ ಬೇರೆ ಊರುಗಳಲ್ಲಿ ಹಾಡುವ ಅವಕಾಶಗಳು ಸಿಗುವುದಿಲ್ಲ. ಹಾಡುವ ಶಕ್ತಿಯ ಜೊತೆಯಲ್ಲಿ ಆಹ್ವಾನ ಪಡೆದುಕೊಳ್ಳುವ ತಂತ್ರಗಾರಿಕೆಯೂ ಗೊತ್ತಿರಬೇಕಾಗುತ್ತದೆ. ಹಾಡು ಕೇಳಲು ಕುಳಿತವರೊಂದಿಗೆ ಹಾಡುಗಾರರೇ ಹೋಗಿ ಮಾತನಾಡಿಸಿ, ತಮ್ಮನ್ನು ಪರಿಚಯಿಸಿಕೊಂಡು ಜಾತ್ರೆಗೆ ಬರುವ ಅಭೀಪ್ಸೆಯನ್ನು ವ್ಯಕ್ತಪಡಿಸುತ್ತಾರೆ. ಅದಕ್ಕೆ ಅವರು ಒಪ್ಪಿಕೊಂಡರೆ ಅವರೊಂದಿಗೆ ಮಾತುಕತೆ ಮುಂದುವರೆಸುತ್ತಾರೆ. ಅವರ ಅಕ್ಕಪಕ್ಕದ ಊರುಗಳ ಜಾತ್ರೆಗಳು, ಅವರ ಬಂಧು ಬಳಗದವರು ಇರುವ ಊರುಗಳಲ್ಲಿನ ಜಾತ್ರೆಗಳ ಕುರಿತು ಕೇಳುತ್ತಾರೆ. ಅಲ್ಲಿಯೂ ವೀಳ್ಯ ಪಡೆದುಕೊಳ್ಳಲು ಅವರ ಸಹಾಯ ಸಾಧ್ಯತೆಯ ಬಗೆಗೆ ವಿಚಾರಿಸುತ್ತಾರೆ, ಅಥವಾ ಯಾರನ್ನು ಸಂಪರ್ಕಿಸಿದರೆ ಅದು ಸಾಧ್ಯವಾಗಬಹುದು ಎನ್ನುವುದರ ಮಾಹಿತಿಯನ್ನು ಪಡೆದುಕೊಳ್ಳುತ್ತಾರೆ. ಚಾಜ ಇಲ್ಲವೆ ಎಲೆ ಕೊಡುವವರು ಕೂಡ ಹಾಡುಗಾರರಿಗೆ ಸುಮ್ಮನೆ ಎಲೆ ಕೊಡುವುದಿಲ್ಲ. ಹಾಡುಗಾರರ ಕಂಠದೊಂದಿಗೆ, ಅವರಿಗೆ ಕೊಡಬೇಕಾದ ಸಂಬಳವನ್ನು ಅಳೆದು ತೂಗಿ ನೋಡುತ್ತಾರೆ. ಕಂಠವು ಚೆನ್ನಾಗಿದ್ದು ಕೊಡಬೇಕಾದ ಸಂಬಳ ಇತರ ಹಾಡುಗಾರರ ಅಪೇಕ್ಷೆಗಿಂತ ಕಡಿಮೆಯಾಗಿದ್ದರೆ ಅಂತಹ ಹಾಡುಗಾರರಿಗೆ ಚಾಜ ಕೊಡುತ್ತಾರೆ. ಈ ಬಗೆಯ ವೃತ್ತಿ ವ್ಯವಹಾರಿಕತೆಯನ್ನು ಹರದೇಶಿ-ನಾಗೇಶಿ ಹಾಡುಗಳನ್ನು ಹೇಳುವ ಕೆಲವೇ ಕೆಲವು ಮಹಿಳೆಯರು ನಿರ್ವಹಿಸುತ್ತಾರೆ. ಬಹುತೇಕ ಮಹಿಳಾ ಹಾಡುಗಾರರು ವ್ಯವಹಾರದ ಮೂಲಕ ಚಾಜ ಪಡೆದುಕೊಳ್ಳುದಕ್ಕಾಗಿ ತಮ್ಮ ತಂಡದಲ್ಲಿರುವ ಅಥವಾ ಎದುರು ತಂಡಗಳಲ್ಲಿರುವ ಪುರುಷರನ್ನು ಅವಲಂಬಿಸಿರುತ್ತಾರೆ. ಬಹುತೇಕ ಮಹಿಳಾ ಹಾಡುಗಾರರ ಪ್ರಕಾರ ಚಾಜ ಪಡೆದುಕೊಳ್ಳುವ ವ್ಯವಹಾರ ಪುರುಷರು ಮಾತ್ರ ನಡೆಸುವಂಥದ್ದು. ಯಾಕೆಂದರೆ ಚಾಜದ ಆಸೆಯಿಂದ ಇವರು ಜಾತ್ರೆಗೆ ಬಂದವರೊಂದಿಗೆ ವ್ಯವಹರಿಸಲು ಹೋದರೆ, ‘ದೇವದಾಸಿ’ ಎಂದು ಹಗುರವಾಗಿ ನೋಡಿ ದುರುಪಯೋಗ ಮಾಡಿಕೊಳ್ಳುವ ಸಾಧ್ಯತೆಯೇ ಹೆಚ್ಚೆನ್ನುತ್ತಾರೆ. “ನನಗೆ ಗೊತ್ತಿರುವ ಜಾತ್ರೆಗಳ ಚಾಜಗಳನ್ನು ಕೊಡಿಸುತ್ತೇನೆ. ಇವೊತ್ತೂ ರಾತ್ರಿ ನನ್ನ ಜೊತೆ ಇರ್ತಿಯಾ” ಎನ್ನುತ್ತಾರಂತೆ. ಅದಕ್ಕಾಗಿ ಬಹುತೇಕ ಮಹಿಳಾ ಹಾಡುಗಾರರು ಹೆಚ್ಚು ಹೆಚ್ಚು ಚಾಜ ಪಡೆದುಕೊಳ್ಳುವುದಕ್ಕಾಗಿ ತಮ್ಮ ತಂಡದ ಪುರುಷರನ್ನು ಇಲ್ಲವೆ ಎದುರು ತಂಡದ ಪುರುಷರನ್ನು ಅವಲಂಬಿಸಿರುತ್ತಾರೆ.

ಹೀಗೆ ಜಾತ್ರೆಗೆ ಬಂದವರೆಲ್ಲರಿಗೂ ಚಾಜ ಸಿಗುತ್ತದೆ ಎಂದು ಹೇಳಲಾಗುವುದಿಲ್ಲ. ಹೆಚ್ಚೆಚ್ಚು ಚಾಜ ಪಡೆದುಕೊಳ್ಳುವ ಆಸೆಯಿಂದ ಬಂದ ಹಂದಿಗನೂರಿನ ಗಂಗವ್ವನಂತೆ ವಾಪಸು ಊರಿಗೆ ಹೋಗಲು ದುಡ್ಡಿಲ್ಲದೆ ಪರಿತಪಿಸುತ್ತಾ ಪರದಾಡಿದವರೂ ಇದ್ದಾರೆ. ಬಸ್‌ಚಾರ್ಜ್‌‌ಗಾಗಿ ಭೀಕ್ಷೆ ಕೇಳಲಾಗುವುದಿಲ್ಲ. ತಾವು ನಂಬಿದ ಆಚರಣೆಯ ಹಿನ್ನೆಲೆಯಲ್ಲಿ ಮಂಗಳವಾರ ಮತ್ತು ಶುಕ್ರವಾರ ಪಡ್ಡಲಿಗೆ ಹಿಡಿದು ಧರ್ಮ ಭೀಕ್ಷೆ ಕೇಳುತ್ತಾರೆ. ದೈವದ ಆಚರಣೆಯಾಗಿದ್ದಕ್ಕಾಗಿ ಅದನ್ನವರು ಹಾಗೂ ಅವರ ಸಮುದಾಯದವರು ಒಪ್ಪಿಕೊಳ್ಳುತ್ತಾರೆ. ಪಡ್ಡಲಿಗೆ ಹೊತ್ತು ಧರ್ಮಭೀಕ್ಷೆ ಕೇಳುವಾಗ ಬಡತನವಿದ್ದರೂ ಆರ್ಥಿಕ ಅನಾಥತೆಯನ್ನೇನೂ ಅವರು ಅನುಭವಿಸಿರುವುದಿಲ್ಲ. ಬೇರೆಯವರಿಗೆ ಹಣ ಕೇಳಬೇಕಾದ ಸಂದರ್ಭಗಳನ್ನು ಮಹಿಳಾ ಹಾಡುಗಾರರು ಕಲ್ಪಿಸಿಯೂ ಕೊಂಡಿರುವುದಿಲ್ಲ. ಇಂತಹ ಇಕ್ಕಟ್ಟಿನ ಪರಿಸ್ಥಿತಿಯಿಂದಾಗಿ ಅವರು ಕಂಗಾಲಾಗಿದ್ದಾರೆ. ಅನ್ಯ ಪುರುಷರ ಹತ್ತಿರ ಬಸ್‌ಚಾರ್ಜ್‌‌ಗೂ ದುಡ್ಡಿಲ್ಲ ಎಂದು ಇದ್ದ ಪರಿಸ್ಥಿತಿಯನ್ನು ಹಂಚಿಕೊಳ್ಳುವುದು ಹಾಗೂ ಅದಕ್ಕಾಗಿ ಹಣದ ಸಹಾಯ ಯಾಚಿಸುವುದು ಇವರಿಗೆ ಸಾಧ್ಯವಾಗಿಲ್ಲ. ಅವರ ಸಾಮಾಜಿಕ ಹಿನ್ನೆಲೆ ಹಾಗೂ ಜೈವಿಕತೆ ಇವುಗಳು ತಂದೊಡ್ಡುವ ಅಪಾಯಗಳು ಪುರುಷರೊಡನೆ ತಮ್ಮ ಸಮಸ್ಯೆಯ ಸಂವಾದ ನಡೆಸದಂತೆ ತಡೆ ಹಿಡಿದಿವೆ. ಹಿಮ್ಮೇಳವಾಗಿ ಬಂದ ಪುರುಷರು ತಮ್ಮ ತಂಡದ ನಾಯಕಿಯ ಹತ್ತಿರ ಹಣವಿಲ್ಲದಿದ್ದಾಗ ಬೆಂಬಲಿಸಿ, ಹಣ ಪಡೆಯುದಕ್ಕಾಗಿ ಸಹಾಯಕ್ಕಾಗಿ ನಿಲ್ಲುವುದು ತುಂಬಾ ವಿರಳ. ಸಹಾಯ ಮಾಡುವ ಬದಲು “ನಮ್ಮನ್ನು ನೀನು ಭೀಕ್ಷೆ ಕೇಳುವ ಪರಿಸ್ಥಿತಿಗೆ ತಂದಿಟ್ಟೆ” ಎಂದು ನಿಂದಿಸುತ್ತಾರೆ. ಅಲ್ಲದೆ ಭೀಕ್ಷೆ ಕೇಳುವ ಸ್ಥಿತಿಯಲ್ಲಿರುವ ಈಕೆ ಸಂಬಳ ಕೊಡಲಾರಳು ಎಂದುಕೊಂಡು ಮೇಳವನ್ನೇ ಬಿಟ್ಟು ಹೋಗಬಹುದು. ಹೀಗೆ ಅದೆಷ್ಟೋ ಹಿಮ್ಮೇಲದವರು ಹಾಡುಗಾರಳನ್ನು ಬಿಟ್ಟು ಹೋದ ಉದಾಹರಣೆಗಳು ಹೇರಳವಾಗಿವೆ. ಹಿಮ್ಮೇಲದವರು ಬಿಟ್ಟು ಹೋದರೆ ಮೇಳ ಮುರಿಯುತ್ತದೆ. ಮತ್ತೆ ಹೊಸ ಮೇಳವನ್ನು ಕಟ್ಟಿಕೊಳ್ಳುವುದು ಕಷ್ಟವಾಗಿ ಈ ವೃತ್ತಿಯನ್ನೇ ಕೈ ಬಿಟ್ಟವರೂ ಇದ್ದಾರೆ. ಹೀಗಾಗಿ ಬಸ್‌ಚಾರ್ಜ್‌‌ಗೆ ಹಣವಿಲ್ಲದಿದ್ದರೆ ಮಹಿಳಾ ಹಾಡುಗಾರರು ತಮ್ಮ ಹಿಮ್ಮೇಳದವರಿಗೂ ಹೇಳಿಕೊಳ್ಳಲಾಗದ ಸಂಕಟದಲ್ಲಿರುತ್ತಾರೆ. ಹರದೇಶಿ-ನಾಗೇಶಿ ಹಾಡುಗಾರಿಕೆಯ ವೃತ್ತಿ ಸಂಕಟದ ಪರಿಚಯವಿದ್ದ ಇತರ ಮಹಿಳಾ ಹಾಡುಗಾರರು ಇವರ ಸಹಾಯಕ್ಕೆ ನಿಲ್ಲುತ್ತಾರೆ. ಆ ಮೂಲಕ ಆಕೆಯ ವೃತ್ತಿ ನಿರಂತರತೆಗೆ/ಬದುಕಿಗೆ ಬೆನ್ನೆಲುಬಾಗಿ ನಿಲ್ಲುತ್ತಾರೆ.

ವಿಜಾಪುರ, ಬೆಳಗಾಂವಂತಹ ದೂರದ ಊರುಗಳಿಂದ ಗುಲ್ಬರ್ಗಾದ ಶರಣ ಬಸವೇಶ್ವರ ಜಾತ್ರೆಗೆ ಹಾಡಲೆಂದು ಬಂದವರು ಮತ್ತೆ ಮರಳಿ ತಮ್ಮೂರಿಗೆ ಹೋಗಲು ಇಷ್ಟಪಡುವುದಿಲ್ಲ. ಯಾಕೆಂದರೆ ಹಾಡಿಕೆಗೆ ಸಾಕಷ್ಟು ಚಾಜ ಪಡೆದುಕೊಂಡಿರುತ್ತಾರೆ. ಕೆಲವರು ಬೆಳಗಾಂವ ಜಿಲ್ಲೆಯ ಸಾಂಬ್ರಾದಲ್ಲಿ ಇಲ್ಲವೆ ಮಾವಿನಟ್ಟಿಯಲ್ಲಿ ಉಳಿಯುತ್ತಾರೆ. ಇಲ್ಲಿ ಉಳಿಯುವವರು ಬೆಳಗಾಂವ ಜಿಲ್ಲೆಯ ಸುತ್ತಮುತ್ತಲಿನ ಊರುಗಳಲ್ಲಿ ಹಾಡಿಕೆಗೆ ಒಪ್ಪಿಕೊಂಡಿರುತ್ತಾರೆ. ಬೆಳಗಾಂವ ಸುತ್ತಮುತ್ತ ಚಾಜ ಪಡೆದುಕೊಳ್ಳುವವರು ಗುಲ್ಬರ್ಗಾದ ಹಾಡಿಕೆಗೆ ಬರುವುದಿಲ್ಲ. ಗುಲ್ಬರ್ಗಾ ಸುತ್ತಮುತ್ತಲಿನ ಊರುಗಳಿಂದ ಚಾಜ ಪಡೆದವರು ಬೆಳಗಾಂವ ಜಿಲ್ಲೆಗಳಲ್ಲಿ ಹಾಡಿಕೆಗೆ ಹೋಗುವುದಿಲ್ಲ. ರಾಮದುರ್ಗದ ಹುಲಕುಂದಕ್ಕೆ ಹೋದವರು ರಾಮದುರ್ಗ ಹಾಗೂ ಸವದತ್ತಿಯ ಸುತ್ತಮುತ್ತಲಿನ ಊರುಗಳಲ್ಲಿನ ಹಾಡಿಕೆಗೆ ಒಪ್ಪಿಕೊಂಡಿರುತ್ತಾರೆ. ಯಾಕೆಂದರೆ ಪ್ರಾದೇಶಿಕವಾಗಿ ಎಲ್ಲಾ ಜಿಲ್ಲೆಗಳು ದೂರದಲ್ಲಿವೆ ಹಾಗೂ ಈ ಜಿಲ್ಲೆಗಳಲ್ಲಿ ಫೆಬ್ರವರಿಯಿಂದ ಮೇ ತಿಂಗಳಿನಲ್ಲಿಯೇ ಜಾತ್ರೆಗಳು ನಡೆಯುತ್ತವೆ. ಹಾಡಿಕೆಗಾಗಿ ಒಂದೆರಡು ದಿನಗಳ ಅಂತರದಲ್ಲಿ ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಪಯಣಿಸಲಾಗುವುದಿಲ್ಲ. ಬಸ್‌ಚಾರ್ಜ್‌ನೆಲೆಯಿಂದ ನೋಡುವುದಾದರೆ ಆರ್ಥಿಕ ಹೊರೆಯನ್ನು; ಆರೋಗ್ಯದ ನೆಲೆಯಿಂದ ನೋಡುವುದಾದರೆ ಆಯಾಸವನ್ನು ಸೃಷ್ಟಿಸುತ್ತದೆ. ಹೀಗಾಗಿಯೇ ಹಾಡುಗಾರರು ಬೆಳಗಾಂವ ಜಿಲ್ಲೆಗೆ ಹಾಡಿಕೆಗೆ ಹೋದರೆ ಸಾಂಬ್ರಾ ಇಲ್ಲವೆ ಮಾವಿನಟ್ಟಿಯಲ್ಲಿ ಮನೆಮಾಡುತ್ತಾರೆ. ಗುಲ್ಬರ್ಗಾದ ಹಾಡಿಕೆಗೆ ಹೋದವರು ಗುಲ್ಬರ್ಗಾದಲ್ಲಿ ಮನೆ ಮಾಡುತ್ತಾರೆ. ಹುಲಕುಂದದಲ್ಲಿರುವವರು ಬೆಳಗಾಂವ, ವಿಜಾಪುರ, ಸೊಲ್ಲಾಪುರ, ಗುಲ್ಬರ್ಗಾದ ಹಾಡಿಕೆಗೆ ಹೋಗುವುದಿಲ್ಲ. ಈ ಭಾಗಗಳಲ್ಲಿ ಶಾವರಕಿ ಮೇಳದವರೇ ಹಾಡಲು ಬರುವುದರಿಂದ ಹಿಮ್ಮೇಳದಲ್ಲಿ ಪುರುಷರೇ ಇರುತ್ತಾರೆ. ಹಾಡುಗಾರರು ಪುರುಷರಾದರೆ ಅವರ ತಂಗುದಾಣದ ಕುರಿತು ಗಂಭೀರವಾಗಿ ಆಲೋಚಿಸುವುದಿಲ್ಲ. ಹಾಡುಗಾರರು ಮಹಿಳೆಯರಾದರೆ ತಂಗುದಾಣದ ಪ್ರಶ್ನೆಯು ಎದುರಾಗುತ್ತದೆ. ಮನೆಯೆನ್ನುವುದು ಮಹಿಳೆಯ ಸುರಕ್ಷಿತ ಕ್ಷೇತ್ರವಾಗಿಯೇ ಗುರುತಿಸಲ್ಪಟ್ಟಿದೆ. ಅಡುಗೆ ಮಾಡಲು, ಸ್ನಾನ ಮಾಡಲು, ಚಿಕ್ಕ ಮಕ್ಕಳಿದ್ದರೆ ಅವರನ್ನು ಜೋಪಾನವಾಗಿ ನೋಡಿಕೊಳ್ಳಲು, ಮಲಗಲು ಈ ಎಲ್ಲ ಕಾರಣಗಳಿಗೆ ಮಹಿಳೆಯರಿಗೆ ಮನೆ ಸುರಕ್ಷಿತ ಕವಚವಾಗಿ ತೋರಿದೆ. ಹಾಡಲಿಕ್ಕೆಂದು ಮೂರು ನಾಲ್ಕು ತಿಂಗಳು ಪರ ಊರಿನಲ್ಲಿ ಉಳಿಯ ಬಯಸುವ ಮಹಿಳಾ ಹಾಡುಗಾರರು ಮಾತ್ರ ಗುಡಿಸಲನ್ನು ಇಲ್ಲವೆ ಪುಟ್ಟ ಮನೆಯನ್ನು ಅವರವರ ಆರ್ಥಿಕ ಹಿನ್ನೆಲೆಗನುಗುಣವಾಗಿ ಬಯಸುತ್ತಾರೆ. ಗುಲ್ಬರ್ಗಾದಲ್ಲಿ, ಹುಲಕುಂದದಲ್ಲಿ, ಸಾಂಬ್ರಾದಲ್ಲಿ, ಮಾವಿನಟ್ಟೆಯಲ್ಲಿ ಈ ಬಗೆಯ ಬಾಡಿಗೆ ಮನೆಗಳಿವೆ. ಬಹುತೇಕ ಪುರುಷ ಹಾಡುಗಾರರು ತಮ್ಮ ಹಿಮ್ಮೇಲದವರೊಂದಿಗೆ ಒಂದೇ ಮನೆಯಲ್ಲಿರುತ್ತಾರೆ. ಆದರೆ ಮಹಿಳಾ ಹಾಡುಗಾರರು ಮಾತ್ರ ಪ್ರತ್ಯೇಕ ಮನೆ ಮಾಡಿಕೊಂಡಿರುತ್ತಾರೆ. ಪುರುಷ ಹಾಡುಗಾರರಂತೆ ಒಂದೇ ಸೂರಿನಡಿ ತಮ್ಮ ಹಿಮ್ಮೇಳದವರೊಂದಿಗೆ ಇರಲಾಗುವುದಿಲ್ಲ. ಹಿಮ್ಮೇಳದವರು, ಆಕೆಯ ಕುಟುಂಬದವರು ಇಲ್ಲವೆ ಸಂಬಂಧಿಗಳಾದರೆ ಅವರೊಂದಿಗೆ ಇರುತ್ತಾಳೆ. ಹಿಮ್ಮೇಳದಲ್ಲಿ ಸೂರು ಇಲ್ಲವೆ ತಾಳದವರೊಂದಿಗೆ ಸಂಬಂಧ ಹೊಂದಿದ್ದರೆ ಅವನೊಟ್ಟಿಗೆ ಒಂದೆ ಸೂರಿನಲ್ಲಿರುತ್ತಾಳೆ. ಉಳಿದ ಒಬ್ಬನಿಗೆ ಮನೆ ಒದಗಿಸಿ ಕೊಡಬೇಕಾಗುತ್ತದೆ. ಇಲ್ಲದಿದ್ದರೆ ಇಬ್ಬರು ಹಿಮ್ಮೇಳದವರಿಗೆ ಮನೆ ಒದಗಿಸಿ ಕೊಡಬೇಕಾಗುತ್ತದೆ. ಆರ್ಥಿಕ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಹಿಮ್ಮೇಳದವರು ಗುಡಿ, ಪಂಚಾಯಿತಿ ಕಟ್ಟೆಯಲ್ಲಿ ಉಳಿದರೆ ಮುಖಂಡತ್ವ ವಹಿಸಿದ ಹಾಡುಗಾರಳಿಗೆ ಸಮಸ್ಯೆಯಾಗುವುದೇ ಇಲ್ಲ. ಆದರೆ ಅವರೂ ತಮಗೆ ಸೂರು ಬೇಕೆಂದರೆ ಹಾಡುಗಾರಳಿಗೆ ಸಮಸ್ಯೆಯಾಗುತ್ತದೆ. ಈ ಸಮಸ್ಯೆ ಬಿದಾಯಿ (ಸಂಬಳ)ಯನ್ನು ಹಂಚಿಕೊಳ್ಳುವುದರಲ್ಲಿಯೇ ಪರಿಹಾರವಾಗುತ್ತದೆ. ಹಾಡಲು ಕರೆಸುವವರು ಒಂದು ಮೇಳದವರಿಗೆ ಸಂಬಳವನ್ನು ನಿಗದಿ ಪಡಿಸಿರುತ್ತಾರೆಯೇ ಹೊರತು ವ್ಯಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಅಲ್ಲ. ಹೀಗೆ ಬಂದ ಹಣವನ್ನು ಮೂವರು ಸಮನಾಗಿ ಹಂಚಿಕೊಳ್ಳುತ್ತಾರೆ. ಅದಕ್ಕಾಗಿ ಹಿಮ್ಮೇಳದವರ ಬಾಡಿಗೆಯನ್ನು ಹಾಡುಗಾರಳು ಕೊಡಬೇಕಾಗಿಲ್ಲವಾದರೂ, ಮನೆ ಬಾಡಿಗೆ ಕೊಡುವುದಕ್ಕೆ ಐದು ನೂರು, ಇಲ್ಲವೆ ಸಾವಿರ ರೂಪಾಯಿಗಳನ್ನು ಮುಂಗಡವಾಗಿ ನೀಡಬೇಕಾಗುತ್ತದೆ. ಈ ಜವಾಬ್ದಾರಿ ಮುಖಂಡತ್ವ ವಹಿಸಿದ ಹಾಡುಗಾರಳ ಮೇಲೆಯೇ ಇರುತ್ತದೆ. ಹಾಡಿ ಹಾಡಿ ಸಂಬಳ ಪಡೆದಂತೆಲ್ಲಾ ತಂಡದ ನಾಯಕಿ ನೀಡಿದ ಮುಂಗಡ ಹಣವನ್ನು ಹಿಮ್ಮೇಳದವರು ಹಿಂದಿರುಗಿಸುತ್ತಾರೆ. ಅಂದರೆ ಮಹಿಳಾ ಹಾಡುಗಾರರಿಗೆ ಮನೆ ಹಿಡಿಯುವ ಹಂತದಲ್ಲಿ ಮಾನಸಿಕ ಹಾಗೂ ಆರ್ಥಿಕ ಒತ್ತಡಗಳೆರಡೂ ಇರುತ್ತವೆ. ಪುರುಷ ಹಾಡುಗಾರರು ಹಾಗೂ ಹಮ್ಮೇಳದವರು ಒಂದೇ ಸೂರಿನಡಿ ವಾಸಿಸುವುದರಿಂದ ಮಹಿಳಾ ಹಾಡುಗಾರರು ಎದುರಿಸಬೇಕಾದ ಮಾನಸಿಕ ಹಾಗೂ ಆರ್ಥಿಕ ಒತ್ತಡಗಳನ್ನು ಎದುರಿಸಬೇಕಾಗಿಲ್ಲ. ಈ ಬಗೆಯ ಆರ್ಥಿಕ ಒತ್ತಡಗಳಿಗೆ ಹೆದರಿ ಗುಡಿಗಳಲ್ಲಿ, ಮಠಗಲ್ಲಿ, ಪಂಚಾಯಿತಿ ಕಟ್ಟೆಗಳಲ್ಲಿ, ಸಮುದಾಯ ಭವನಗಳಲ್ಲಿ ಮಲಗಬೇಕಾದ ಅನಿವಾರ್ಯತೆಗೆ ಒಳಗಾದ ಹಾಡಿಕೆ ಮಹಿಳೆಯರು ಲೈಂಗಿಕ ದೌರ್ಜನ್ಯವನ್ನು ಎದುರಿಸಬೇಕಾಗುತ್ತದೆ.

ಗುಲ್ಬರ್ಗಾ, ಹುಲಕುಮದ, ಸಾಂಬ್ರಾ, ಮಾವಿನಟ್ಟಿಯಲ್ಲಿ ಮನೆಮಾಡಿದರೆ ಮಹಿಳಾ ಹಾಡುಗಾರರಿಗೆ ಸುರಕ್ಷೆ ದೊರೆಯಿತು ಎಂದಲ್ಲ. ಗುಲ್ಬರ್ಗಾ, ಹುಲಕುಂದ, ಸಾಂಬ್ರಾ, ಮಾವಿನಟ್ಟಿಯಿಂದ ದೂರ ಇರುವ ಊರುಗಳಿಗೂ ಹಾಡಿಕೆಗೆ ಹೋಗಬೇಕಾಗುತ್ತದೆ. ಆ ಊರಿನ ಹಾಡಿಕೆ ಮುಗಿದ ನಂತರ ಅದರ ಬೆನ್ನಹಿಂದೆಯೇ ಹಾಡಿಕೆಗಾಗಿ ಮತ್ತೊಂದು ಊರಿಗೆ ಪಯಣಿಸಬೇಕಾಗುತ್ತದೆ. ಹೀಗೆ ಮೇಲಿಂದ ಮೇಲೆ ಒಂದೂರಿನಿಂದ ಮತ್ತೊಂದೂರಿಗೆ ಪಯಣಿಸ ಬೇಕಾದ ಸಂದರ್ಭವು ಹಿಡಿದ ಬಾಡಿಗೆ ಮನೆಗೆ ಹಿಂದಿರುಗದಂತೆ ಮಾಡುತ್ತದೆ. ಇಂತಹ ಸಂದರ್ಭಗಳಲ್ಲಿ ಹಾಡುಗಾರರು ಆಯಾ ಊರುಗಳಲ್ಲಿನ ದೇವಸ್ಥಾನಗಳಲ್ಲಿ, ಸಮುದಾಯ ಭವನಗಳಲ್ಲಿ ಮಲಗುತ್ತಾರೆ. ಈಗಾಗಲೆ ಹೇಳಿದಂತೆ ಈ ಬಗೆಯ ತಂಗುವಿಕೆಯು ಪುರುಷ ಹಾಡುಗಾರರಿಗೆ ಸಮಸ್ಯೆಯಾಗುವುದಿಲ್ಲ. ಗುಲ್ಬರ್ಗಾ, ಹುಲಕುಂದ, ಸಾಂಬ್ರಾ, ಮಾವಿನಟ್ಟಿ ಯಲ್ಲಿನ ಬಾಡಿಗೆ ಮನೆಗೆ ಹೋಗಲು ಆಗದೆ ಇದ್ದಾಗ ಮಹಿಳಾ ಹಾಡುಗಾರರು ಲೈಂಗಿಕ ದೌರ್ಜನ್ಯಗಳನ್ನು ಎದುರಿಸಬೇಕಾಗುತ್ತದೆ.

ಹಾಡಿ ಹಾಡಿ ದಣಿದ ದೇಹಕ್ಕೆ ನಿರಮ್ಮಳವಾಗಿ ಬಯಲಲ್ಲಿ ಮಲಗಲು ಆಗುವುದೇ ಇಲ್ಲ. ದೇಹದ ದಣಿವು ಆರಿದರೆ ಕಂಠ ಸುಶ್ರಾವ್ಯವಾಗುತ್ತದೆ. ಮುಂದಿನ ಹಾಡಿಕೆಗೆ ಕಂಠ ಹಾಗೂ ದೇಹ ಎರಡೂ ಸಿದ್ಧಗೊಳ್ಳಲು ಸಹಾಯವಾಗುತ್ತದೆ. ಇಲ್ಲದಿದ್ದರೆ ವೃತ್ತಿಯಲ್ಲಿ ಹೆಸರು ಉಳಿಸಿಕೊಳ್ಳುವುದು ಕಷ್ಟವಾಗುತ್ತದೆ. ಹಾಗಂತ ಬಯಲಲ್ಲಿ ನೆಮ್ಮದಿಯಾಗಿ ಮಲಗಿಕೊಳ್ಳುವ ಅವಕಾಶ ಹೆಣ್ಣಾದ ಕಾರಣಕ್ಕಾಗಿ ಇಲ್ಲ. ಆದರೆ ಬದುಕಲು ಬಯಲಲ್ಲಾದರೂ ಮಲಗಿ ದೌರ್ಜನ್ಯವನ್ನು ಪ್ರತಿರೋಧಿಸುತ್ತಾ, ತಮ್ಮ ಒಳತನವನ್ನು ಉಳಿಸಿಕೊಂಡ ಜನವಾಡದ ಬುದ್ಧವ್ವನಂತಹ ಕಥನಗಳು ಹರದೇಶಿ-ನಾಗೇಶಿ ಹಾಡುಗಾರಿಕಾ ವೃತ್ತಿಯಲ್ಲಿ ಹೇರಳವಾಗಿವೆ.

ಮ್ಯಾಳ ಕಟ್ಟೋದು

ಹರದೇಶಿ-ನಾಗೇಶಿ ಹಾಡುಗಾರರು ಚಾಜ ಕೊಡಲು ಬಂದವರನ್ನೇ ಯಾವ ಊರಿನ ಎದುರು ಹಾಡುಗಾರರನ್ನು ಕರೆದಿದ್ದೀರಿ ಎಂದು ಕೇಳುತ್ತಾರೆ. ಎದುರು ಹಾಡುಗಾರರು ವೃತ್ತಿಯಲ್ಲಿ ಪ್ರಸಿದ್ಧಿಪಡೆದಿದ್ದರೆ, ಮನಸ್ಸಿನಲ್ಲಿ ಸ್ಪರ್ಧೆಯಿಟ್ಟುಕೊಂಡೇ ರಂಗ ತಾಲೀಮು ನಡೆಸುತ್ತಾರೆ. ಚಾಜ ಕೊಡಲು ಬಂದವರು ನಿಮ್ಮ ಎದುರು ಹಾಡುಗಾರರನ್ನು ನೀವೇ ಕರೆದುಕೊಂಡ ಬನ್ನಿ ಎಂದು ಹೇಳಿದರೆ, ಮೊದಲು ಚಾಜ ಪಡೆದುಕೊಂಡವರೇ ಎದುರು ಮೇಳದವರನ್ನು ಕರೆದುಕೊಂಡು ಹೋಗುತ್ತಾರೆ. ಈ ಎರಡನ್ನೂ ಹೊರತು ಪಡಿಸಿದಂತೆ ಮೇಳ ಕಟ್ಟುವ ಪದ್ದತಿ ಇವರಲ್ಲಿ ಜಾರಿಯಲ್ಲಿದೆ. ಜಾತ್ರೆ ಹಾಗೂ ಹಬ್ಬ ಹರಿದಿನ ಕಾಲವನ್ನು ಗಮನದಲ್ಲಿಟ್ಟುಕೊಂಡು (ಫೆಬ್ರವರಿಯಿಂದ ಮೇ ವರೆಗೆ) ಹರದೇಶಿ ಮೇಳದವರು, ನಾಗೇಶಿ ಮೇಳದವರು ಮೇಳ ಕಟ್ಟಿಕೊಳ್ಳುತ್ತಾರೆ. ಮೇಳ ಕಟ್ಟಿಕೊಳ್ಳುವುದೆಂದರೆ ಹರದೇಶಿ-ನಾಗೇಶಿ ಎರಡೂ ಮೇಳದವರಲ್ಲಿ ಯಾರೊಬ್ಬರಿಗೂ ಚಾಜ ಬಂದರೆ, ಅವರು ಈಗಾಗಲೇ ಒಪ್ಪಂದ ಮಾಡಿಕೊಂಡ ಎದುರು ಮೇಳದವರಿಗೆ ಚಾಜ ಕೊಡಲು ಹೇಳಬೇಕು. ಗೊತ್ತು ಮಾಡಿಕೊಂಡ ಮೇಳವನ್ನು ಹೊರತುಪಡಿಸಿ ಬೇರೆ ಮೇಳದೊಂದಿಗೆ ಹಾಡುವಂತಿಲ್ಲ. ಹಾಗೆ ಮಾಡಿದರೆ ಕಟ್ಟಿದ ಮೇಳ ಮುರಿಯುತ್ತದೆ. ಮಾಡಿಕೊಂಡ ಒಪ್ಪಂದವನ್ನು ಮುರಿದವರು ಹಾಡಿಕೆ ಮೇಳದವರಲ್ಲಿ ವಿಶ್ವಾಸ ಘಾತುಕರಾಗಿ ಪರಿಗಣಿಸಲ್ಪಡುತ್ತಾರೆ. ಒಪ್ಪಂದ ಮುರಿದವರಿಗೆ ಚಾಜ ಬರದಂತೆ ಒಪ್ಪಂದ ಮುರಿಯದವರು ನೋಡಿಕೊಳ್ಳಲು ಪ್ರಾರಂಭಿಸುತ್ತಾರೆ. ಹೀಗೆ ಎದುರಾಗುವ ವೃತ್ತಿ ತೊಡಕು ಅವರ ಉತ್ಪಾದನೆಯ ಮೇಲೆ ಪರಿಣಾಮ ಬೀರುತ್ತದೆ. ಅದಕ್ಕಾಗಿ ಮೇಳದವರು ಮಾಡಿಕೊಂಡ ಒಪ್ಪಂದವನ್ನು ಮುರಿಯುವುದಿಲ್ಲ. ಮೇಳ ಕಟ್ಟುವ ಕುರಿತು ಮದನಹಳ್ಳೀ ಭೀಮವ್ವ ಹೇಳಿದ್ದು ಹೀಗೆ “ಉಗಾದಿ ಮುಮದಿರೂದ್ಕ ಹರದೇಶೇರ ಜೊತ ಮ್ಯಾಳ ಕಟ್ಟ್ತೀವಿ. ಮಾನಮಿ ಆಗುತನಾ ಅದs ಮ್ಯಾಳದ ಜೊತಿ ಹಾಡ್ತೀವಿ, ಅವರ ಜೋಡಿ ನಮ್ದು ಹೊಂದ್ಕಿ ಆಯ್ತು ಅಂದ್ರ ಮುಂದುವರಿತೀವಿ. ಇಲ್ಲಾಂದ್ರ ಬ್ಯಾರೆಯವ್ರ ಜಾತಿ ಹಾಡ್ತೀವಿ”. ಎದುರು ಮೇಳದವರು ಹೊಂದಿಕೆಯಾಗದಿದ್ದರೆ ಒಪ್ಪಂದ ಮಾಡಿಕೊಂಡ ಅವಧಿ ಮುಗಿದ ತಕ್ಷಣ ಬೇರೆಯವರೊಂದಿಗೆ ಹಾಡುವ ಸ್ವಾತಂತ್ರ್ಯ ವನ್ನಿಟ್ಟುಕೊಂಡಿರುತ್ತಾರೆ. ಮೇಳ ಕಟ್ಟಿಕೊಳ್ಳುವಾಗ ಎರಡೂ ಮೇಲದವರು ಸೇರಿ ಮೌಖಿಕ ಒಪ್ಪಂದ ಮಾಡಿಕೊಂಡಿರುತ್ತಾರೆ. ಹೀಗೆ ಮೇಳ ಕಟ್ಟಿಕೊಳ್ಳುವುದು ವೃತ್ತಿಗೆ ಅನುಕೂಲ ಎನ್ನುವುದು ಅವರ ಅನುಭವದ ಮಾತು. ಮೇಳ ಕಟ್ಟಿಕೊಳ್ಳದಿದ್ದರೆ ಚಾಜ ಕೊಡಲು ಬಂದವರು ನೀವೇ ನಿಮ್ಮ ಎದುರು ಮೇಳದವರನ್ನು ಕರೆದುಕೊಂಡು ಬನ್ನಿ ಎಂದು ಹೇಳಿದರೆ ಸಮಸ್ಯೆ ಪ್ರಾರಂಭವಾಗುತ್ತದೆ. ಎದುರು ಮೇಳದವರಿಗೆ ಪೋನುಮಾಡಿ ಕೇಳಿ, ಅವರು ಆ ದಿನ ಯಾವ ಹಾಡಿಕೆಯನ್ನು ಒಪ್ಪಿಕೊಂಡಿರದಿದ್ದರೆ ಇವರಿಗೆ ಅನುಕೂಲ. ಸಾಮಾನ್ಯವಾಗಿ ಹಾಡುಗಾರರು ವೃತ್ತಿಯಲ್ಲಿ ನಿರಂತರತೆಯನ್ನು ಕಾಯ್ದುಕೊಳ್ಳಬಯಸುತ್ತಾರೆ. ಆದ್ದರಿಂದ, ಒಂದಲ್ಲ ಒಂದು ಕಡೆ ಚಾಜ ಪಡೆದುಕೊಂಡಿರುತ್ತಾರೆ. ಎದುರು ಹಾಡುಗಾರರು ಬೇಕೆಂದಾಗ ಅಷ್ಟು ಸುಲಭವಾಗಿ ಲಭ್ಯವಾಗುವುದಿಲ್ಲ. ಫೋನು, ಮೊಬೈಲಗಳ ಸೌಲಭ್ಯಗಳಿಲ್ಲದಿದ್ದಾಗ ಮೇಳ ಕಟ್ಟಿಕೊಳ್ಳುವ ಪದ್ಧತಿ ಹರದೇಶಿ-ನಾಗೇಶಿ ಹಾಡುಗಾರರಿಗೆ ಅನುಕೂಲವಾಗಿಯೇ ಇತ್ತು. ಮೊಬೈಲಗಳ ಮೂಲಕ ಹಾಡುಗಾರರು ಒಬ್ಬರಿಗೊಬ್ಬರು ಸಂಪರ್ಕಿಸುವ ಅನುಕೂಲ ಈಗ ಇದೆ. ಆದರೆ ಫೋನು ಮಾಡಿ ಕರೆದ ತಕ್ಷಣ ಎದುರು ಹಾಡುಗಾರರು ಅವರಿಗೆ ಅಗತ್ಯವಾದ ದಿನದಂದು ಲಭ್ಯರಾಗುತ್ತಾರೆ ಎಂದಲ್ಲ. ಹೀಗಾಗಿ ಇವೊತ್ತಿಗೂ ಮೇಳ ಕಟ್ಟುವುದು ಈ ವೃತ್ತಿಯವರಿಗೆ ಪ್ರಸ್ತುತವಾಗಿದೆ.

ಹೀಗೆ ಮೇಳ ಕಟ್ಟಿಕೊಂಡಾಗ ಯಾರಿಗೆ ಚಾಜ ಬಂದರೂ ಅವರು ಎರಡೂ ಮೇಳದವರನ್ನು ಗಮನದಲ್ಲಿಟ್ಟುಕೊಂಡೇ ಸಂಬಳ ಕೇಳುತ್ತಾರೆ. ಆಗ ಅವರು ಕೇಳುವ ಮೊತ್ತ ಒಂದು ರಾತ್ರಿ ಎರಡು ಹಗಲಿಗೆ ಇಲ್ಲವೆ ಎರಡು ರಾತ್ರಿ ಮೂರು ಹಗಲಿಗೆ ಎಂಟು ಸಾವಿರದಿಂದ ಹತ್ತು ಸಾವಿರವಾಗಿರುತ್ತದೆ. ಒಂದು ರಾತ್ರಿಗೆ ಐದು ಸಾವಿರದಿಂದ ಆರು ಸಾವಿರ ರೂಪಾಯಿಗಳವರೆಗೆ ಪಡೆಯುತ್ತಾರೆ. ಮೇಲ ಕಟ್ಟಿದವರು ಹಾಡಿನ ಸಂಬಳವನ್ನು ಹೇಳುವಾಗ ಸಂಭ್ರಮಿಸುತ್ತಿರುತ್ತಾರೆ. ಬಡತನದ ಬೇಗೆಯಲ್ಲಿ ಬೆಂದ ಅವರಿಗೆ ಆರು ಸಾವಿರ, ಎಂಟು ಸಾವಿರ, ಹತ್ತು ಸಾವಿರ ಎನ್ನುವ ಪದಗಳೇ ಪುಳಕವನ್ನುಂಟು ಮಾಡುತ್ತದೆ. ಒಂದು ರಾತ್ರಿಹಾಡಿಕೆಗೆ ಇಷ್ಟು ದೊಡ್ಡ ಮೊತ್ತ ಗಳಿಸುತ್ತೇವೆ ಎನ್ನುವುದೇ ಅವರಲ್ಲಿ ತಾವು ಬಡತನದಲ್ಲಿ ಇಲ್ಲ; ತಾವು ಮೇಲಿನವರಂತೆ ಸ್ಥಿತಿವಂತರು ಎನ್ನುವ ನಂಬಿಕೆ ಸೃಷ್ಟಿಸುತ್ತಿರುತ್ತವೆ. ಮೇಳ ಕಟ್ಟಿಕೊಂಡಾಗಾಗಲಿ, ಮೇಳ ಕಟ್ಟದೇ ಇದ್ದಾಗಾಗಲಿ ಮೇಳದಲ್ಲಿರುವ ಪ್ರತಿಯೊಬ್ಬರೂ ಒಂದು ರಾತ್ರಿ ಹಾಡಿಕೆಗೆ ಪಡೆಯುವ ಹಣದಲ್ಲಿ ಅಂತಹ ವ್ಯತ್ಯಾಸವೇನೂ ಇರುವುದಿಲ್ಲ. ಈ ಎರಡೂ ಸಂದರ್ಭಗಳಲ್ಲಿ ಮೇಳಗಳಲ್ಲಿನ ತಲಾ ಒಬ್ಬರಿಗೆ ಬಸ್‌ಚಾರ್ಜ್‌ಹಾಗೂ ಊಟದ ಖರ್ಚನ್ನು ತೆಗೆದರೆ ಒಂದು ರಾತ್ರಿಯ ಹಾಡಿಕೆಗೆ ಆರು ನೂರು ರೂಪಾಯಿಗಳಿಂದ ಎಂಟು ನೂರು ರೂಪಾಯಿಗಳವರೆಗೆ ಉಳಿತಾಯವಾಗುತ್ತದೆ. ಈ ಬಗೆಯ ಆದಾಯ ಅವರಿಗೆ ವರ್ಷದುದ್ದಕ್ಕೂ ನಿರಂತರವಾಗಿ ದೊರೆಯುವುದಿಲ್ಲ. ಈ ಸತ್ಯ ಹಾಡುಗಾರರಿಗೂ ಗೊತ್ತು. ಆದರೂ ವರ್ಷದ ಮೂರು ಇಲ್ಲವೆ ನಾಲ್ಕು ತಿಂಗಳಲ್ಲಿ ದೊರೆಯುವ ಈ ಆದಾಯವು ಗಾಢವಾಗಿ ಅವರನ್ನು ಆಕರ್ಷಿಸುತ್ತಿರುತ್ತದೆ. ಈ ಬಗೆಯ ಆರ್ಥಿಕ ಆಕರ್ಷಣೆ ಮಹಿಳೆಯರನ್ನು ಹರದೇಶಿ-ನಾಗೇಶೀ ಹಾಡಿಕೆ ಕ್ಷೇತ್ರಕ್ಕೆ ಸೆಳೆಯುತ್ತದೆ. ಹಾಡಿಕೆ ಮಹಿಲೆಯರು ಮದುವೆಯಾಗುವುದು ನಿಷಿದ್ಧವಾದ ಕಾರಣಕ್ಕಾಗಿ ‘ದೇವದಾಸಿ ಪದ್ಧತಿ’ ಕಲೆಯ ಮುಸುಕಿನಲ್ಲಿ ನಿರಾತಂಕವಾಗಿ ಮುಂದುವರೆಯುತ್ತಿದೆ.

ಚಾಜ

ಒಂದು ಸಲ ಚಾಜ ಹಿಡಿದರೆ ಮುಗಿಯಿತು. ಯಾವುದೇ ಕಾರಣಕ್ಕೂ ಹಾಡಿಕೆಗೆ ಹೋಗುವುದನ್ನು ಬಿಡಲಾಗುವುದಿಲ್ಲ. ಹಾಡಲು ಒಪ್ಪಿಕೊಂಡ ದಿನದಂದು ಹಾಡುಗಾರರ ಕುಟುಂಬದಲ್ಲಿ ಸಾವು ಸಂಭವಿಸಿರಬಹುದು; ಹಾಡಿಕೆಯವರ ಇಲ್ಲವೆ ಹಾಡಿಕೆಗೆ ಕರೆಸಿದವರ ಊರಿನಲ್ಲಿ ಜೋರಾಗಿ ಮಳೆ ಬರುತ್ತಿರಬಹುದು; ಅಥವಾ ಹಾಡುಗಾರರಿಗೇ ತೊಂದರೆಯಾಗಿರಬಹುದು; ಇಂಥಹ ಯಾವುದೇ ಕಾರಣಗಳನ್ನು ಹಾಡುಗಾರರು ನೀಡುವಂತಿಲ್ಲ. ಚಾಜ ತೆಗೆದುಕೊಂಡರೆ ಒಪ್ಪಿಕೊಂಡ ದಿನದಂದು ಹಾಡಲು ಬರಲೇಬೇಕು. ಹಾಡುಗಾರರ ಅನುಭವದೊಂದಿಗೆ ಈ ವಿಷಯವನ್ನು ಚರ್ಚಿಸುವುದು ಅಗತ್ಯವೆನಿಸುತ್ತದೆ.

“ತಂಗಿ ಮನ್ಯಾಗ ನಮ್ಮವ್ವ ಸತ್ತಿದ್ದ್ಲು. ನಾಳಿಯಂಗ ಹುಮನಾಬಾದ್ನಾಗ ನನ್ನ ಹಾಡ್ಕಿಯಿತ್ತು. ಹಿಂಗ್ರಿ ಸಾಹೇಬ್ರ, ನಮ್ಮವ್ವ ಸತ್ತಾಳ, ಬರಾಕಾಗಂಗಿಲ್ಲ. ಅಂದದ್ದಕ್ಕ ಅವರು ನಿಮ್ಮವ್ವ ಸತ್ತ್ರ ನಾವೇನು ಮಾಡಬೇಕು? ಒಂದಿನ್ದಾಂಗ ಯಾರ್ನ ಹಾಡ್ಕಿಗಿ ಜೋಡಿಸಕೋಬೇಕು? ನೀ ಬರ್ಲಾ ಕಂದ್ರ ನಾವs ಸಾಯಬೇಕಾಗೈತಿ. ನಿನ್ನ ಕೂಲಿ ನಾಲ್ಕು ಸಾವಿರ ರೂಪಾಯಿ ಕೊಡ್ತೇವು ಅಂದಿದ್ವಿಯಲ್ಲಾ. ಅದನ್ನ ನೀನು ನನಗ ಕೊಟ್ಟಬಿಡು. ನಾನು ಸುಮ್ನೆ ಮಾತನಾಡ್ತಿನಿ ಅಂದ್ಕೊ ಬ್ಯಾಡ, ಚಾಜ ತಗೊಂಡು ಬರ್ಲಾದ್ದಕ್ಕ ಇದು ದಂಡ ಅಂತ ಅನ್ಕೊ ಅಂದ್ರು. ನನ್ನ ಬಲ್ಲಿ ಎಲ್ಲಿ ನಾಕ ಸಾವಿರ ರೂಪಾಯಿ ಬರ್ತಾವ್ರಿ? ಹೊತ್ತ ಮುಣಗುದಕ ಮಣ್ಣ ಮಾಡಿ, ಹಾಡ್ಕಿಗಿ ಬಸ್ ಹತ್ತಿದ್ಯಾ. ಕಣ್ಣಾಗಿನ ನೀರು ಆರಿರ್ಲಿಲ್ಲ. ಅಂತಾದರಾಗ ಹಾಡಿಕೆ ಮುಗಿಸಿ ಬಂದ್ಯಾ. ಏನು ಮೂಡೂದೈತಿ”. – ರೇಣುಕಾ ಮಾಂಗ, ಸೊಲ್ಲಾಪುರ

ಬಾಳs ಮಳಿ ಬಂದಿತ್ತರಿ. ಅವತ್ತ ರಾತ್ರಿ ಹಾಡ್ಕಿಯಿತ್ತು. ಮೈಯಾಗ ಜ್ವರಾನೂ ಇದ್ದ್ವು. ಬರೂದ ಬಿಟ್ಟ್ರ ನಡೀತತೇನ್ರಿ ಅಂತ ಫೋನ ಹಚ್ಚಿ ಕೇಳ್ಕೊಂಡ್ಯಾ. ಪ್ರೋಗ್ರಾಮ್ಕ ನಿಂಗ ಬರಾಕಾಗ್ಲಾಕಂದ್ರ ಮಾತ ಮಾಡಿದ್ದ ಪಗಾರ ತಂದ ಕೊಡಬೇಕು. ನಿನ್ನ ಜನ್ಮ ಇರತನಾ ವರ್ಷ ವರ್ಷಾ ನಮ್ಮೂರ ಜಾತ್ರಿಗಿ ಪಗಾರ ಇಲ್ದ ಹಾಡಬೇಕು. ಇದಕ್ಕ ಒಪ್ಗಿಯಿದ್ದ್ರ ಬರೂದು ಬಿಡು. ನಡಿತೈತಿ ಅಂತಂದ್ರು. ಬ್ಯಾರೆ ಹಾದಿ ಇಲ್ದ ಟ್ರಕ್ಕ ಹತ್ತಿ ಅವ್ರ ಊರಿಗಿ ಹೋದನ್ರಿ. ಅಲ್ಲಿನೂ ಭರ್ತಿ ಮಳಿಯಿತ್ತು. ಅಂತಾದ್ರಾಗ ಪಂಚರ್ನ ಕಂಡ್ಯಾ. ಅವ್ರು ನನ್ನ ಶಾಲ್ಯಾಗ ಕರಕೊಂಡು ಹೋದ್ರು. ಎದುರು ಮ್ಯಾಳನೂ ಬಂದಿತ್ತು. ಹಾಡ್ಕಿ ಕೇಳಾಕ ಬಂದವ್ರು ನಾಕ ಜನ ಇದ್ದ್ರು. ಹಾಡು ಕೇಳ್ತೀವಿ ಅಂತಂದ್ರು. ನೂರಾರು ಜನರೆದ್ರಿಗಿ ಹಾಡದೇಕಿಗಿ ನಾಕ ಮಂದಿ ಮುಂದ ಹಾಡಬೇಕಂದ್ರ ಸರಿ ಅನಿಸ್ಲಿಲ್ಲ. ಹಾಡೋದು ಬಿಟ್ಟ ಬ್ಯಾರೆ ದಾರಿ ಇರ್ಲಿಲ್ಲ. ಅವತ್ತ ಬೆಳ್ತನ ಹಾಡ್ಸಿದ್ರು. – ರೇಣುಕಾ ಮಾದರ, ಮುಧೋಳ

ಹಾಡ್ಕಿಗಿ ಹೋಗು ಹಿಂದಿನ ದಿನಾ ಅಣ್ಣನ ಮಗ್ನಿಗಿ ಎಕ್ಸಿಡಂಟ ಆಗಿ ವಿಜಾಪುರ ದವಾಖಾನ್ಯಾಗ ಹಾಕಿದ್ರು. ಇವತ್ತು ಫೋನು ಅದಾವ್ರಿ. ನಮ್ಮ ಕಾಲಕ್ಕ ಇವೆಲ್ಲಾ ಇದ್ದಿದ್ದಿಲ್ಲರಿ. ನಾನs ಜ್ವಾಕಿ ಮಾಡ್ದ ಹುಡುಗಾ. ಹಾಡುವ ಮನಸ ಬರ್ದ ಹಾಡ್ಕಿಗಿ ಹೋಗ್ಲಿಲ್ಲಾ. ಅದs ಒಂದು ದೊಡ್ಡ ಗುನ್ನಾ (ಅಪರಾಧ) ಆಯ್ತು. ಮಳ್ಳಾದಿನಾ(ಮರುದಿನ) ಒಬ್ಬ ತಳವಾರ್ನ ಕಳ್ಸಿ ಅವ್ರು ನನ್ನ ಕರಸ್ಕೊಂಡ್ರು. ಪಂಚಾಯ್ತಿ ಮಾಡಿದ್ರು. ಎಲ್ಲಾರೆದ್ರಿಗೆ ಬಾಯಿಸಿಕ್ಕಂಗ ಬೈದ್ರು. ನಾ ಏನ ಹೇಳಿದ್ರು ಕೇಳುವಲ್ಲ್ರು. “ಹಾಡ್ಕಿಗಿ ಬರ್ದ ನಮಗ, ನಮ್ಮೂರ್ಗಿ, ನಮ್ಮ ದೇವಿಗ್ರಿ ಅಪಮಾನಾ ಮಾಡಿದಿ. ಇದಕ್ಕ ದಂಡಾಕೊಡು ಅಂದ್ರು. ಕೈಯಾಗಿನ ರೊಕ್ಕಾ ಎಲ್ಲಾ ಅಳಿಯಾನ ಸಲವಂದ ದವಾಖಾನಿಗಿ ಇಟ್ಟಿದ್ದ್ನಿ. ರೊಕ್ಕ ಇಲ್ಲ್ರಿ ಅಂದ್ಯಾ. ಹಂಗಾರ ನಿನ್ನ ಕೊಳ್ಳಾಗಿನ ಚೇನಾ(ಚೈನು) ಕೊಡು ಅಂತಂದ್ರು ಹಾಡ್ಕಿಗಿ ಮೆಚ್ಚಿ ನಿಮ್ಮಂಥೋರು ಕೊಟ್ಟ ಚೇನ ಅದು. ಬ್ಯಾರೆ ದಾರಿಯಿಲ್ದ ತೆಗೆದುಕೊಟ್ಟ್ನಿ. ಅವ್ರ ಇಸ್ಕೊಂಡ್ರು. ನಮ್ದೇನ ಜೀವನಾ ತಾಯಿ? ಜೀವನದಾಗ ಪೈಲಾಕ(ಮೊದಲು) ಹಾಕ್ಕೊಂಡ ಬಂಗಾರ ಚೇನ ಅದು. ಹಣಾ-ಮಾನಾ ಎಲ್ಲಾ ಕಳಕೊಂಡ ಹೊಡಮಳ್ಳಿ ಊರಿಗಿ ಬಂದ್ಯಾ. – ತಿಗಣಿಬಿದರಿ ಗಂಗವ್ವ

ಮೇಲೆ ಉಲ್ಲೇಖಿಸಿದ ಹಾಡುಗಾರರ ಅನುಭವ ಕಥನಗಳನ್ನು ಗಮಿನಿಸಿ ಹೇಳುವುದಾದರೆ ಹರದೇಶಿ-ನಾಗೇಶಿ ಹಾಡುಗಾರಿಕಾ ವೃತ್ತಿಯು ಜೀತದ ವೃತ್ತಿಯಂತೆಯೇ ಇದೆ. ಆದರೆ ಈ ವೃತ್ತಿಯಲ್ಲಿರುವ ಹಾಡುಗಾರರೆಲ್ಲರೂ ತಮ್ಮದು ಸ್ವತಂತ್ರ ವೃತ್ತಿ ಎಂದೇ ಭಾವಿಸುತ್ತಾರೆ. ಹೊಲಗೆಲಸದಂತಹ ಕೆಲಸಗಳಲ್ಲಿ ಅಲ್ಲಿ ಯಜಮಾನರಿರುತ್ತಾರೆ. ಅವರು ಹೇಳಿದಂತೆ ಕೇಳಬೇಕು. ‘ನಮ್ಮ ವೃತ್ತಿಯಲ್ಲಿ ನಾವೇ ಯಜಮಾನ್ರು’ ಎಂದು ಹಾಡುಗಾರರು ಹೇಳಿಕೊಂಡರೂ ವಸ್ತು ಸ್ಥಿತಿ ಹಾಡಿರುವುದಿಲ್ಲ. ಹೊಲದ ಕೆಲಸ, ಗಾರೆ ಕೆಲಸದಂತ ಕೆಲಸಗಳಿಗೆ ಹೋದರೆ ಅಲ್ಲಿ ನಿಖರವಾಗಿ ಒಬ್ಬ ಯಜಮಾನನಿರುತ್ತಾನೆ. ಅವನು ಮಾತ್ರ ಈ ಕೆಲಸಗಾರರನ್ನು ನಿಯಂತ್ರಿಸುತ್ತಾ ನಿಂದಿಸುತ್ತಿರುತ್ತಾನೆ. ಆದರೆ ಹರದೇಶಿ-ನಾಗೇಶಿ ಹಾಡುಗಾರರ ವಿಷಯದಲ್ಲಿ ಹಾಗಾಗುವುದಿಲ್ಲ. ಯಾವ ಊರಿನ ಚಾಜ ಹಿಡಿದರುತ್ತಾರೋ, ಆ ಊರಿನ ಸದಸ್ಯರೆಲ್ಲರೂ ಇವರಿಗೆ ಯಜಮಾನರಾಗಿರುತ್ತಾರೆ. ಯಾಕೆಂದರೆ ಹಾಡುಗಾರರಿಗೆ ಕೊಡುವ ಕೂಲಿಯಲ್ಲಿ ಜನರ ದುಡ್ಡು ಇರುತ್ತದೆಯಲ್ಲಾ! ಊರಿನಲ್ಲಿ ಪಟ್ಟಿ ಎತ್ತಿ (ಊರಿನ ಎಲ್ಲ ಜನರಿಂದ ಹಣ ಸಂಗ್ರಹಿಸುವುದು) ಜಾತ್ರೆಯನ್ನು ಮಾಡಿರುತ್ತಾರೆ. ಹೀಗೆ ಜಾತ್ರೆಗೆಂದು ಸಂಗ್ರಹಿಸಿದ ಹಣದ ಮೇಲೆ ಎಲ್ಲರ ಒಡೆತನವಿರುವುದರಿಂದ, ಊರಿನವರೆಲ್ಲರೂ ಇವರ ಮೇಲೆ ಯಜಮಾನಿಕೆಯನ್ನು ಪ್ರದರ್ಶಿಸುತ್ತಾರೆ. ಹೀಗಾಗಿಯೇ ಹಾಡಲು ಹೋದಾಗ ಹಾಡಲು ಹೋಗಲಾಗದಿದ್ದಾಗ ಈ ಎರಡೂ ಸಂದರ್ಭಗಳಲ್ಲಿ ಊರಿನವರೆಲ್ಲರೂ ಹಾಡುಗಾರರ ಮೇಲೆ ಹಕ್ಕು ಚಲಾಯಿಸುತ್ತಾರೆ. ಹೀಗೆ ಊರಿನವರು ಚಲಾಯಿಸಿದ ಹಕ್ಕಿಗೆ ಗೌರವಿಸುವುದು ಹಾಡುಗಾರರ ಕರ್ತವ್ಯವಾಗಿರುತ್ತದೆ. ಹರದೇಶಿ-ನಾಗೇಶಿ ಹಾಡುಗಾರರು ತಮ್ಮ ಮೇಳದ ಮೇಲೆ ಒಡೆತನ ಹೊಂದಿದ್ದರೆ; ಮೇಳಗಳನ್ನು ಆಹ್ವಾನಿಸುವವರು ಮೇಳಗಳ ಮೇಲೆ ಒಡೆತನ ಹೊಂದಿರುತ್ತಾರೆ. ಹೀಗಾಗಿಯೇ ಹಾಡುಗಾರರು ಮಳೆ ಬಂದರೂ, ಮನೆಯಲ್ಲಿ ಸಾವು ಸಂಭವಿಸಿದರೂ, ಸ್ವತಃ ಅವರು ಅನಾರೋಗ್ಯದಿಂದ ಬಳಲುತ್ತಿದ್ದರೂ, ಚಾಜ ತೆಗೆದುಕೊಂಡ ಮೇಲೆ ಒಪ್ಪಿಕೊಂಡ ದಿನದಂದು ಹಾಡಿಕೆಗೆ ಹೋಗಲೇ ಬೇಕು. ಹಾಡಲು ಹೋಗದಿದ್ದರೆ ಮಹಿಳಾ ಹಾಡುಗಾರರು ಹಾಗೂ ಪುರುಷ ಹಾಡುಗಾರರು ಇಬ್ಬರೂ ಅವಮಾನ ಎದುರಿಸಬೇಕಾಗುತ್ತದೆ. ಮಹಿಳಾ ಹಾಡುಗಾರರು ಎದುರಿಸುವ ಅಪಮಾನಗಳು ಭಿನ್ನವಾಗಿರುತ್ತವೆ. ತಿಗಣಿಬಿದರಿ ಗಂಗವ್ವ ಒಪ್ಪಿಕೊಂಡ ದಿನದಂದು ಹೋಗಲಾಗದಿದ್ದಾಗ, ಊರಿಗೆ ಕರೆಸಿ, ಪಂಚಾಯಿತಿ ಕಟ್ಟೆಯಲ್ಲಿ ನಿಲ್ಲಿಸಿ ಅಪಮಾನಿಸಿದ ವಿಧಾನವನ್ನು ಆಕೆ ಕಣ್ತುಂಬಿ ಕೊಂಡೇ ಹೇಳಿದಳು. “ಪಂಚಾಯ್ತಿ ಕಟ್ಟ್ಯಾಗ ನಿಲ್ಲಿಸಿ ಗಣಸೂರು ಬಾಯಿ ಸಿಕ್ಕಂಗ ಮಾತನಾಡಿದ್ರು. ಪಂಚಾಯ್ತಿ ಕಟ್ಟಿಗಿ ಹೆಣಮಕ್ಳು ಬರುವಂಗಿಲ್ಲ. ಹೆಣ್ಣು ಮಕ್ಕಳಂದ್ರ ನಾನು ಮತ್ತ ನಮ್ಮಕ್ಕ ಯಮುನವ್ವ ಇಬ್ಬ್ರು ಇದ್ದದ್ದು. ಕೆಲವ್ರು ಆಕಿ ಸೀರಿ ಕಳಿ ಅಂದ್ರು, ಇನ್ನೂ ಕೆಲವ್ರು ನಮ್ಮೂರಿನ ಮಾನಾ ತಗದಕಿದು ಮಾನಾ ತಗಿರಿ ಅಂದ್ರು, ಚಾಜಾ ಕೊಡುವಾಗ ಎಲಿ ಜೊತಿ ಐದಾರ‍್ನೂರು ರೂಪಾಯಿ ಕೊಟ್ಟದ್ರವ್ವ. ಆ ರೊಕ್ಕಾ ಮುಗಿಯುತನಾ ನಮ್ಮ ಸಂಗಾ ಮಲಗು ಅಂತಂದ್ರು. ಒಂದs…ಎರಡs…. ನೆನಸ್ಕೊಬಾರ್ದು. ನೆನಸ್ಕೊಂಡ್ರ ಬದುಕಿರಬಾರ್ದು. ಒಬ್ಬ ದೊಡ್ಡ ಮನಸ್ಯಾ ಹಂಗೆಲ್ಲಾ ಮಾತಾಡಬ್ಯಾಡ್ರಿ ಅಂತ ಜನಕ್ಕ ಬುದ್ದಿ ಹೇಳಿದ್ರು, ಚಾಚಾ ತಪ್ಪಿಸಬಾರ್ದು ಅಂತ ನಿಂಗೂ ಗೊತ್ತಾಗಬೇಕಲ್ಲವ್ವಾ, ಅದಕ್ಕ ನಿನ್ನ ಕೊಳ್ಳಾಗಿನ ಚೇನು ಕೊಡು, ಹೀಂಗ ಮಾಡಿದ್ರ ನಿಮಗ ಬುದ್ದಿ ಬರೂದು ಅಂತ ಚೇನ ಇಸ್ಕೊಂಡ್ರು. ಅಬರುಗೇಡ್ಯಾಗಿ ಹೊಡಮಳ್ಳಿ ಮನಿಗಿ ಬಂದ್ವಿ. ಸಾಯಬೇಕು ಅನಿಸಿತ್ತು. ನಮ್ಮವ್ವ ನಮ್ಮಪ್ಪ ಹದನದಿನಗಂಟ್ಲ (ಹದಿನೈದು ದಿನಗಳವರೆಗೆ) ನಮ್ಮ ಕಾದ್ರು” ಇಂತಹ ಅಪಮಾನಗಳು ಎದುರಾಗುತ್ತವೆ ಎನ್ನುವುದರಿಂದಲೋ ಏನೋ ಬಹುತೇಕ ಹಾಡುಗಾರರು ಒಪ್ಪಿಕೊಂಡು ದಿನದಂದು ವೈಯಕ್ತಿಕ ಹಾಗೂ ಕುಟುಂಬದ ಕಷ್ಟ ಕಾರ್ಪಣ್ಯಗಳನ್ನು ಅಲಕ್ಷಿಸಿ ಹಾಡಲು ಹೋಗಿದ್ದಾರೆ. ತಿಗಣಿಬಿದರಿ ಗಂಗವ್ವ ಹಾಗೂ ಯಮುನವ್ವನನ್ನು ಬಿಟ್ಟರೆ ಬೇರೆ ಯಾವ ಮಹಿಳಾ ಹಾಡುಗಾರರೂ ಅಂತಹ ಭೀಕರ ಅನುಭವಕ್ಕೆ ತುತ್ತಾಗಿಲ್ಲ. ಏಕೆಂದರೆ ಯಾವ ಮಹಿಳಾ ಹಾಡುಗಾರರೂ ಹಾಡಿಕೆಗೆ ಗೊತ್ತು ಪಡಿಸಿದ ದಿನದಂದು ಗೈರು ಹಾಜರಾಗಿಲ್ಲ. ಲಕ್ಷ್ಮಣ ಮಸೀಬನಾಳ ಅವರು ಹೆಂಡತಿ ತೀರಿಕೊಂಡಾಗ ಹಾಡಲು ಹೋಗಲಿಲ್ಲವಂತೆ. ಮರುದಿನವೇ ಪಂಚಾಯತಿ ಕಟ್ಟಿಗೆ ಕರೆಸಿ, ಅಪಮಾನಿಸಲು ಪ್ರಾರಂಭಿಸಿದರಂತೆ. ದಂಡ ಕೊಡಬೇಕೆಂದರಂತೆ. ಇದರ ಪೂರ್ವ ಸೂಚನೆಯಿದ್ದ ಲಕ್ಷ್ಮಣನು ಕೇಳಿದ ಮೂರು ಸಾವಿರ ರೂಪಾಯಿಗಳನ್ನು ಕೊಟ್ಟು “ನನ್ನ ತಪ್ಪು ಮನ್ನಾ (ಕ್ಷಮಿಸುವುದು) ಮಾಡ್ರಿ. ನೀವು ಹೇಳಿದ್ಹಂಗ ದಂಡಾ ಕಟ್ಟತೇನು” ಎಂದಾಗ ಹೆಂಡತಿ ಕಳೆದುಕೊಂದ ಈತನ ಬಗ್ಗೆ ಕರುಣೆಯಿಂದ ಮಾತನಾಡಿದರಂತೆ. ಆದರೆ ಗಂಗವ್ವ-ಯಮುನವ್ವರ ಅಪಮಾನವನ್ನು ಆತನು ಎದುರಿಸಲಿಲ್ಲ.

ಭಕ್ಷೀಸು

ಜಾತ್ರೆಗೆ ಹಾಡಲು ಒಪ್ಪಿಕೊಂಡರೆ ಒಂದು ಮೇಳಕ್ಕೆ ವೇತನವನ್ನು ನಿಗದಿಪಡಿಸುತ್ತಾರೆ. ಎಲೆ ಕೊಡುವಾಗ ಒಂದಿಷ್ಟು ಹಣವನ್ನು ಮುಂಗಡವಾಗಿ ಕೊಡುತ್ತಾರೆ. ಹಾಡಿಕೆಗೆ ಮುಗಿದ ನಂತರ ಮುಂಗಡವಾಗಿ ಕೊಟ್ಟ ಹಣವನ್ನು ಮುರಿದುಕೊಂಡು ಉಳಿದಹಣವನ್ನು ಕೊಡುತ್ತಾರೆ. ಹಾಡನ್ನು ಹಾಗೂ ಅವರ ಕಂಠವನ್ನು ಮೆಚ್ಚಿಕೊಂಡ ಜನರ ಹಾಡು ಮುಗಿಯುವವರೆಗೆ ಹಣವನ್ನು ಬಹುಮಾನವಾಗಿ ಕೊಡುತ್ತಿರುತ್ತಾರೆ. ಇದಕ್ಕೆ ಕಲಾಕಾರರು ಭಕ್ಷೀಸು ಎನ್ನುವರು. ಈ ಭಕ್ಷೀಸು ಕೂಡ ಜನರ ಸ್ಪಂದನೆಯನ್ನು ಅನುಸರಿಸಿಯೇ ಹೆಚ್ಚು ಕಡಿಮೆ ಸಂಗ್ರಹವಾಗುತ್ತದೆ. ಕಡಿಮೆಯೆಂದರೆ ಐದುನೂರು ರೂಪಾಯಿಗಳು ಹೆಚ್ಚೆಂದರೆ ಎರಡು ಸಾವಿರ ರೂಪಾಯಿಗಳು ಸಂಗ್ರಹವಾಗುತ್ತವೆ. ಜನಸ್ಪಂದನೆಯ ಜೊತೆಯಲ್ಲಿ ಊರಿನವರ ಆರ್ಥಿಕ ಹಿನ್ನೆಲೆಯು ಕೂಡ ಬರುವ ಭಕ್ಷೀಸನ್ನು ನಿರ್ಧರಿಸುತ್ತಿರುತ್ತದೆ. ಕೆಲವರು ಎಲ್ಲರಿಗೂ ಕಾಣುವ ಹಾಗೆ ಹಣವನ್ನು ಮೈಕಿಗೆ ಕಟ್ಟಿ ಸವಾಲ್ ಹಾಕಿ ಜವಾಬ್ ಹೇಳಿ ಕಟ್ಟಿದ ಹಣವನ್ನು ಬಿಡಿಸಿಕೊಳ್ಳಲು ಹೇಳುತ್ತಾರೆ. ಇದಕ್ಕೆ ‘ಪಂಥಾ ಕಟ್ಟೋದು’ ಎಂದು ಹೇಳುತ್ತಾರೆ. ಪರ-ವಿರೋಧವಾಗಿ ಹಾಡುವ ಯಾವ ಮೇಳದವರಾದರೂ ಸವಾಲ್ ಬಿಡಿಸಿ ಪಂಥಕ್ಕೆ ಕಟ್ಟಿದ ಹಣವನ್ನು ಗೆಲ್ಲಬಹುದು. ಹಾಡುಗಾರರೇ ಸವಾಲ್ ಬಿಡಿಸಬೇಕೆಂದಿಲ್ಲ; ಹಿಮ್ಮೇಳದವರೂ ಬಿಡಿಸಬಹುದು. ಸವಾಲ್ ಬಿಡಿಸಿದವರು ಹಣ ಗೆದ್ದುಕೊಳ್ಳುತ್ತಾರೆ. ಕೆಲವರು ಸವಾಲ್ ಕೇಳಿ ಹಣದ ಬದಲು ಬೆಳ್ಳಿ ಖಡಗವನ್ನು, ಬಂಗಾರ ಚೈನನ್ನು ಪಂಥಕ್ಕಿಡುತ್ತಾರೆ. ಹಾಡುಗಾರರು ಉತ್ತರಿಸಿದರೆ ಪಂಥಕ್ಕಿಟ್ಟ ಬಂಗಾರ ಚೈನನ್ನು, ಬೆಳ್ಳಿ ಖಡಗವನ್ನು ಕೊಡಲೇಬೇಕು. ಸಾರ್ವಜನಿಕ ಪಂಥ ಆಹ್ವಾ, ಇದಾಗಿದ್ದರಿಂದ ಪಂಥಕ್ಕೆ ಹಾಡು ಕೇಳಲು ಕುಳಿತವರೆಲ್ಲರೂ ಸಾಕ್ಷಿಯಾಗಿರುತ್ತಾರೆ. ತಿಗಣಿಬಿದರಿ ಗಂಬ್ವ ತಾನು ಬಂಗಾರ ಚೈನನ್ನು ಗೆದ್ದ ಅನುಭವ ಕಥನವನ್ನು ನಗುತ್ತಲೇ ಬಿಚ್ಚಿಟ್ಟಳು. “ಹಾಡಿಕಿಗಿ ಸವಾಳ್ ಹಾಕಿ ಪಂಥಾ ಕಟ್ಟಿದ್ಹಂಗ ರಂಗು(ಜೀವಂತಿಕೆ) ಬರ‍್ತೈತಿ. ಚಡಚಣಕ್ಕ ಹಾಡಕಿಗಿ ಹೋಗಿದ್ದ್ಯಾ. ನಾವು, ಎದುರು ಮ್ಯಾಳದವ್ರು ತುರಿಸಿನ ಮ್ಯಾಲ ಹಾಡಾಕತ್ತಿದ್ವಿ. ಜನಕ್ಕೂ ಹುರುಪ ಬಂತು. ಅವ್ರೂ ಟೇಜಿಗೆ ರೊಕ್ಕಾ ಕಟ್ಟಿ ಸವಾಲ್ ಹಾಕಾಕ್ಹತ್ತಿದ್ವಿ. ಇದು ನಮ್ಗೂ ಮತ್ತಷ್ಟು ಹುರುಪ ತಂತು. ಸಭಾದಾಗೊಬ್ಬ ಬಂದ. ತನ್ನ ಕೊಳ್ಳಾಗಿನ ಬಂಗಾರ ಚೈನಾ ತಗ್ದು ಸವಾಲ್ ಹಾಕಿ ಯಾರ ಜವಾಬ್ ಕೊಡ್ತಾರೋ ಅವ್ರಿಗಿ ಈ ಚೈನ್ ಅಂದಾ? ಅದನ್ನ ನಾನs ಬಿಸಿದ್ಯಾ. ಮಾತಾಡಿದ್ಹಂಗ ಚೈನ ಕೊಟ್ಟ. ಹಾಡಕಿ ಮುಗಿದಿಂದ ಮಳ್ಳಾದಿನ (ಮರುದಿನ) ನಮ್ಮೂರ‍್ಗಿ ಹೊಂಟಿದ್ವಿ. ದಾರಾಗ ಚೇನಾ ಕೊಟ್ಟವ್ನು ತಲಿ ತುರಿಸ್ಕೊಂತ ನಿಂತಿದ್ದ. ‘ಗಂಗವ್ವ, ಗಂಗವ್ವ ನನ್ನ ಚೇನ ನನಗ ಕೊಟ್ಟಬಿಡs. ಬೇಕಾದ್ರ ಇನ್ನೂರು ರೂಪಾಯಿ ಭಕ್ಷೀಸು ಕೊಡ್ತೇನು. ಚೇನ ಕೊಟ್ಟ ಬಿಡವ್ವಾ. ಅದ್ನ ನಮ್ಮವ್ವ ನನಗಂತs ಮಾಡಿಸಿದ್ಲು. ನೆನ್ನಿ (ನಿನ್ನೆಯ) ಕುಡ್ದ ನಿಶೇದಾಗ ಕೊಟ್ಟಬಿಟ್ಟೇನಿ. ನಿನ್ನ ಕೈ ಮುಗಿತೇನು. ನಮ್ಮವ್ವನ ನೆಪ್ಪಿಗಿ ಅದೊಂದs ಇರೋದು” ಅಂತ ಗೋಳ್ಯಾಡಕ್ಹತ್ತಿದ್ದ. ದಾರ್ಯಾಗಿದ್ದ ಜನಾ ಅವಂಗ ವಾಪಸ್ ಚೈನ ಕೊಡಬ್ಯಾಡವ್ವ ಅನ್ನೋರು. ಚೇನ ಕೊಟ್ಟವ್ನು. ಅಳೊದೊಂದs ಬಾಕಿಯಿತ್ತು. ನಂಗs ಅವ್ನ ಪಡಿಪಾಟ್ಲು ಪಡೂದ ನೋಡಿ ಕೆಟ್ಟ ಅನಿಸ್ತು. ಚೈನ ವಾಪಸ್ ಅವಂಗ ಕೊಟ್ಟ್ಯಾ. ಅಂವಾ ಕೈಮುಗಿದ್ಯಾ. ‘ನಿನ್ನೊಳಗ ನನ್ನ ತಾಯಿನ್ನ ಕಂಡ್ಯಾ’ ಅಂತ ಅಂದಾ? ಸೂಳೇರು ಅನ್ನು ಸಮಾಜ್ದಾಗ ತಾಯಿ ಅಂದ್ನಲ್ಲ. ಅದs ದೊಡ್ಡ ಭಕ್ಷೀಸು ಅನಿಸ್ತು. ಖರೇವಂದ್ರ ಅಂವಾ ನನಗ ಮಗಾ ಆಗಿ ಕಂಡದ್ಕ ಚೇನ ವಾಪಾಸ್ ಕೊಟ್ಟಿದ್ದ್ಯಾ.” ಕಲಾವಿದೆಯರ ಬದುಕಿನಲ್ಲಿ ತಾಯಿಯಂತಹ ಅಪರೂಪದ ಗೌರವದ ಭಕ್ಷೀಸು ದೊರೆತಿದ್ದು ಬಹಳ ವಿರಳ. ಇಂತಹ ವಿರಳ ಭಕ್ಷೀಸನ್ನು ಪಡೆದವರು ಆರ್ದ್ರ ಹೃದಯದಿಂದ ಘಟನೆಗಳನ್ನು ಮೆಲುಕು ಹಾಕುತ್ತಾರೆ.

ಕೆಲವರು ತಮಗೆ ಇಷ್ಟವಾದ ಹಾಡುಗಾರರಿಗೆ ನೇರವಾಗಿ ಹತ್ತು ತೊಲೆಯ ಬೆಳ್ಳಿಯ ಖಡಗವನ್ನು, ಚಿನ್ನದ ಉಂಗುರವನ್ನು, ಚಿನ್ನದ ಚೈನನ್ನು ಬಹುಮಾನವಾಗಿ ಕೊಟ್ಟದ್ದು ಇದೆ. ಹೀಗೆ ಬಂದ ಭಕ್ಷೀಸಿಗೂ, ಹಾಡಿಕೆಗಾಗಿ ನಿಗದಿಪಡಿಸಿದ ವೇತನಕ್ಕೂ ಯಾವುದೇ ಸಂಬಂಧವಿಲ್ಲ. ಹಣದ ರೂಪದಲ್ಲಿ ಬಂದ ಭಕ್ಷೀಸನ್ನು ಕೆಲವು ಮೇಳದವರು ಸಮಾನವಾಗಿ ಹಂಚಿಕೊಳ್ಳುತ್ತಾರೆ. ಇನ್ನು ಕೆಲವು ಮೇಳದವರು ಯಾರಿಗೆ ಭಕ್ಷೀಸು ಬಂದಿರುತ್ತದೆಯೋ ಅವರೇ ಅದರ ಮೇಳೆ ಒಡೆತನ ಹೊಂದುತ್ತಾರೆ. ನಾನು ಗಮನಿಸಿದಂತೆ ಮಹಿಳಾ ಹಾಡುಗಾರರು ಹಣದ ರೂಪದಲ್ಲಿ ಬಂದ ಭಕ್ಷೀಸನ್ನು ಮಾತ್ರ ತಮ್ಮ ಹಿಮ್ಮೇಳದವರಿಗೆ ಸಮಾನವಾಗಿ ವಿತರಿಸುತ್ತಾರೆ. ದಪ್ಪಿನಲ್ಲಿ ಹಾಡುವ ಮಹಿಳಾ ಹಾಡುಗಾರರು ಮನಸಿದ್ದೋ, ಇಲ್ಲದೆಯೋ, ಹಿಮ್ಮೇಳವನ್ನು ಕಾಯ್ದು ಕೊಳ್ಳುವುದಕ್ಕಾಗಿ ಬಂದ ಭಕ್ಷೀಸನ್ನು ತನ್ನ ಮೇಳದಲ್ಲಿರುವವರಿಗೆ ಸಮಾನವಾಗಿ ಹಂಚುತ್ತಾರೆ. ಇಲ್ಲದಿದ್ದರೆ ನಾನು ಸೂರು ಹಾಕದಿದ್ರ, ನಾನು ತಾಳಾ ಬಾರಸದಿದ್ರ ನಿನ್ನ ಹಾಡ್ಕಿ ನಡಿತ್ತಿತೇನು ಎಂದು ಮೂದಲಿಸಿ ಅವಳ ಮೇಳವನ್ನು ಬಿಟ್ಟು ಹೋಗುತ್ತಾರಂತೆ. ಹೀಗಾಗಿ ಮೇಳ ಕಾಯ್ದುಕೊಳ್ಳುವುದಕ್ಕಾಗಿ ದಪ್ಪಿನ ಹಾಡಿನ ಮಹಿಳೆಯರು ಹಣದ ರೂಪದಲ್ಲಿ ಬಂದ ಭಕ್ಷೀಸನ್ನು ತನ್ನನ್ನೊಳಗೊಂಡ ಮೇಳದವರಿಗೆ ಸಮಾನವಾಗಿ ವಿಂಗಡಿಸಿ ಹಂಚುತ್ತಾರೆ. ದಪ್ಪಿನ ಹಾಡುಗಳನ್ನು ಹೇಳುವ ಪುರುಷ ಹಾಡುಗಾರರಿಗೆ ಭಕ್ಷೀಸು ವಿತರಿಸುವದು ಸಮಸ್ಯೆಯಾಗುವುದೇ ಇಲ್ಲ. ಯಾರು ಭಕ್ಷೀಸನ್ನು ಪಡೆದಿರುತ್ತಾರೋ ಅವರೇ ಅದರ ಮೇಲೆ ಒಡೆತನ ಹೊಂದುತ್ತಾರೆ.

ಹರದೇಶಿ-ನಾಗೇಶಿ ಹಾಡುಗಳನ್ನು ಹೇಳುವ ಚೌಡಕಿ ಮೇಳಗಳು ಭಕ್ಷೀಸಿನ ವಿಷಯದಲ್ಲಿಯೂ ದಪ್ಪಿನ ಮೇಳಗಳಿಗಿಂತ ಭಿನ್ನವಾಗಿ ನಿಲ್ಲುತ್ತವೆ. ಚೌಡಿಕಿ ಮೇಳದಲ್ಲಿ ಸವಾಲ್‌ಗೆ ಜವಾಬ್ ಕೊಡುವವನು ಮಾಸ್ತರ ಆಗಿದ್ದರಿಂದ, ಜವಾಬ್‌ಗೆ ಬಂದ ಭಕ್ಷೀಸಿನ ಮೇಲೆ ಅವನೇ ಒಡೆತನ ಸಾಧಿಸುತ್ತಾನೆ. ಈ ಮೇಳದಲ್ಲಿ ಎಲ್ಲರಿಗಿಂತಲೂ ಹೆಚ್ಚು ಸಂಬಳ ಪಡೆಯುವ ಮಾಸ್ತರನೇ ಬಂದ ಭಕ್ಷೀಸನ್ನು ಪಡೆಯುತ್ತಾನೆ. ಇದನ್ನು ಮೇಳದ ಮಹಿಳಾ ಹಾಡುಗಾರರು ಒಪ್ಪಿಕೊಳ್ಳದೇ ಬೇರೆ ವಿಧಿಯಿಲ್ಲ. ಯಾಕೆಂದರೆ ಸವಾಲ್‌ಗೆ ಜವಾಬು ನೀಡದಿದ್ದರೆ ಇವರಿಗೆ ಹಾಡಲು ಬರುವ ಆಹ್ವಾನಗಳು ಕಡಿಮೆಯಾಗುತ್ತವೆ. ಹೀಗಾಗಿ ಮಾಸ್ತರನು ಬಂದ ಭಕ್ಷೀಸನ್ನು ಸಮಾನವಾಗಿ ಹಂಚಿಕೊಳ್ಳದಿದ್ದರೂ ಸಹಿಸಿಕೊಳ್ಳುತ್ತಾರೆ. ತಮ್ಮ ಹಾಡಿಗೆ ಬಂದ ಭಕ್ಷೀಸನ್ನು ನಾಲ್ಕು ಜನ ಮಹಿಳೆಯರು ಹಂಚಿಕೊಳ್ಳುತ್ತಾರೆ. ಮೇಳವನ್ನಿಟ್ಟುಕೊಂಡು ಹಾಡುವಾಗ ನನ್ನ ಕಂಠಕ್ಕೆ ಭಕ್ಷೀಸು ಬಂದಿದ್ದು ಎಂದು ಹೇಳಲಾಗುವುದಿಲ್ಲ. ಮೇಳದೊಂದಿಗೆ ಪ್ರದರ್ಶನಗೊಳ್ಳುವ ಕಲೆ ಇದಾಗಿದ್ದರಿಂದ ಹಾಡುಗಾರಿಕೆ ಶಸ್ವಿಯಾಗುವುದಕ್ಕೆ ಹಿಮ್ಮೇಳದವರೂ ಕಾರಣರಾಗಿರುತ್ತಾರೆ, ನಿಜ. ಆದರೆ ಬಂದ ಭಕ್ಷೀಸನ್ನು ಸಮಾನವಾಗಿ ಹಂಚುವ ಇಲ್ಲವೆ ಅದರ ಮೇಲೆ ಒಡೆತನ ಹೊಂದುವ ಪ್ರಕ್ರಿಯೆ ಕೂಡ ಲಿಂಗಾಧಾರಿತ ಮೌಲ್ಯಗಳ ನೆಲೆಯಲ್ಲಿಯೇ ನಡೆಯುತ್ತಿರುತ್ತದೆ.