‘ಪಾತರದವರು’ ಅಧ್ಯಯನ ಸಂದರ್ಭದಲ್ಲಿ ಕಲೆಗೂ ಶೋಷಿತ ಸಮುದಾಯಗಳಿಗೂ ನೇರವಾದ ಸಂಬಂಧವಿರುವುದನ್ನು ಗುರುತಿಸಿಕೊಂಡಿದ್ದೆನು. ಹಾಗೆಯೇ ‘ಹರದೇಶಿ-ನಾಗೇಶಿ’ ಕಲೆಗೂ ಶೋಷಿತ ಸಮುದಾಯಗಳಿಗೂ ಸಂಬಂಧವಿರಬಹುದೆ ಎನ್ನುವ ಕುತೂಹಲವೆ ಪ್ರಸ್ತುತ ಯೋಜನೆಯನ್ನು ರೂಪಿಸಿಕೊಳ್ಳುವಂತೆ ಒತ್ತಾಯಿಸಿತು. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಯೋಜನೆಯ ಭಾಗವಾಗಿ ಸಂಶೋಧನಾ ಪ್ರಸ್ತಾವನೆಯನ್ನು ಅಧ್ಯಾಪಕರಿಂದ ವಿಶ್ವವಿದ್ಯಾಲಯವು ಕೇಳಿತು. ಇದಕ್ಕೆ ಸಂಬಂಧಿಸಿದಂತೆ “ಹರದೇಶಿ-ನಾಗೇಶಿ: ಕಲೆ ಮತ್ತು ಕಲಾವಿದರು : ಲಿಂಗ ಸಂಬಂಧಿ ಅಧ್ಯಯನ” ಎನ್ನುವ ಯೋಜನೆಯ ಪ್ರಸ್ತಾವನೆಯನ್ನು ಸಿದ್ಧಗೊಳಿಸಿಕೊಟ್ಟೆನು.

ಸಹೋದರ ಹರಿಶ್ಚಂದ್ರ ದಿಗ್ಸಂಗೀಕರ್ ಅವರು ‘ನಾಗೇಶಿಯರು’ ಎನ್ನುವ ವಿಷಯದ ಕುರಿತು ಅಧ್ಯಯನ ಮಾಡಲು ನಿರ್ಧರಿಸಿದ್ದನ್ನು ನನ್ನ ಜೊತೆ ಹಂಚಿಕೊಂಡಿದ್ದರು. ನಾಗೇಶಿ ಪಂಥದ ಹಾಡುಗಳನ್ನು ಹಾಡುವ ಮಹಿಳೆಯರನ್ನು ಅವರು ‘ನಾಗೇಶಿಯರು’ ಎಂದು ಗುರುತಿಸಿಕೊಂಡಿದ್ದರು. ಆದರೆ ಅಧ್ಯಯನ ಪ್ರಾರಂಭಿಸುವ ಮೊದಲೇ ದುರ್ದೈವಶಾತ್ ಅವರು ನಮ್ಮನ್ನು ಅಗಲಿದರು. ಹರದೇಶಿ-ನಾಗೇಶಿ ಕಲಾವಿದರ ಕುರಿತು ಅಧ್ಯಯನ ನಡೆಸಲು ಮುಖ್ಯವಾಗಿ ಕಲಾಕಾರರ ವಿಳಾಸ ಬೇಕಾಗಿತ್ತು. ಹರಿಶ್ಚಂದ್ರ ದಿಗ್ಸಂಗೀಕರ್ ಅವರು ಬರೆದಿಟ್ಟ ಮೂವತ್ತೈದು ನಾಗೇಶಿ ಕಲಾವಿದರ ವಿಳಾಸವನ್ನು ವಿದ್ಯಾರ್ಥಿ ಚಂದ್ರಪ್ಪ ಅವರು ನನಗೆ ಒದಗಿಸಿದರು. ಅವರು ಬರೆದಿಟ್ಟ ಕಲಾವಿದರ ವಿಳಾಸದ ಜಾಡನ್ನು ಹಿಡಿದು ಹೊರಟ ನನಗೆ ನೂರರ ಮೇಲ್ಪಟ್ಟು ಹರದೇಶಿ-ನಾಗೇಶಿ ಕಲಾವಿದರು ಎದುರಾದರು.

ಪಾತರದವರನ್ನು ಕುರಿತು ನಡೆಸಿದ ಕ್ಷೇತ್ರಕಾರ್ಯಾಧ್ಯಯನವು ಪ್ರಸ್ತುತ ಅಧ್ಯಯನದ ಕ್ಷೇತ್ರಕಾರ್ಯಕ್ಕೆ ಹೊಸ ದಾರಿಗಳನ್ನು ಹಾಗೂ ಹೊಸ ತಂತ್ರಗಳನ್ನು ತೋರಿಸಿತು. ಶೋಷಿತ ಸಮುದಾಯದ ಕುರಿತು, ಅದರಲ್ಲಿಯೂ ತುಚ್ಛೀಕರಿಸಲ್ಪಟ್ಟ ‘ದೇವದಾಸಿಯರ’ ಕುರಿತು ಅಧ್ಯಯನ ನಡೆಸುವುದು ಅಷ್ಟು ಸುಲಭವಲ್ಲ. ಪಾತರದವರ ಅಧ್ಯಯನದ ಸಂದರ್ಭದಲ್ಲಾದ ಅನುಭವಗಳಿಗಿಂತಲೂ ಭೀಕರವಾದ ಅನುಭವಗಳನ್ನು ಪ್ರಸ್ತುತ ಅಧ್ಯಯನ ಸಂದರ್ಭದಲ್ಲಿ ಎದುರಿಸಿದೆ. ಇಂಥ ಅನುಭವಗಳನ್ನು ಹಾಗೂ ಅಪಮಾನಗಳನ್ನು ನುಂಗಿಕೊಂಡು ಸ್ಥಿಮಿತ ಬುದ್ಧಿ ಹಾಗೂ ಸ್ಥಿಮಿತ ಮನಸ್ಸಿನಿಂದ ಅಧ್ಯಯನ ಮಾಡುವ ತರಬೇತಿಯನ್ನು ಪಾತರದವರು ಕ್ಷೇತ್ರಕಾರ್ಯಾಧ್ಯಯನವು ನೀಡಿತ್ತು. ಪಾತರದವರ ಕುರಿತು ನಡೆಸಿದ ಅಧ್ಯಯನ ಅನುಭವ ಪ್ರಸ್ತುತ ಅಧ್ಯಯನಕ್ಕೆ ಸಹಾಯವಾಯಿತು.

ಈ ಅಧ್ಯಯನವು ಹರದೇಶಿ-ನಾಗೇಶಿ ಚರಿತ್ರೆಯನ್ನು ಕಟ್ಟಿಕೊಡುವುದಿಲ್ಲ; ಪಂಥಗಳ ಮೂಲ-ಚೂಲವನ್ನು ಹುಡುಕುವ ಪ್ರಯತ್ನವನ್ನು ಮಾಡುವುದಿಲ್ಲ; ಹರದೇಶಿ-ನಾಗೇಶಿ ಸಾಹಿತ್ಯ ರಚಿಸುವವರ ಕವಿಚರಿತೆಯನ್ನು ಹೇಳುವುದಿಲ್ಲ. ಮರಾಠಿ ಮೂಲದ್ದೋ, ಕನ್ನಡ ಮೂಲದ್ದೋ ಎನ್ನುವ ಭಾಷಾ ಮೂಲದ ಹುಡುಕಾಟವನ್ನು ಪ್ರಸ್ತುತ ಅಧ್ಯಯನ ನಡೆಸಿಲ್ಲ. ಹರದೇಶಿ-ನಾಗೇಶಿ ಹಾಡುಗಾರಿಕೆಯನ್ನು ಕಲಾತ್ಮಕ ನೆಲೆಯಲ್ಲಿ ಅಧ್ಯಯನ ಮಾಡಿಲ್ಲ. ಕಲೆಯನ್ನು, ಕಲೆಯನ್ನು ಪೋಷಿಸುವ ಸಮಾಜವನ್ನು, ಕಲೆಯನ್ನು ನಂಬಿದವರ ಬದುಕನ್ನು ಲಿಂಗಸಂಬಂಧದ ಹಿನ್ನೆಲೆಯಲ್ಲಿ ಅರ್ಥ ಮಾಡಿಕೊಳ್ಳುವುದರತ್ತ ಪ್ರಸ್ತುತ ಅಧ್ಯಯನ ಆಸಕ್ತಿ ವಹಿಸಿದೆ.

ಕೃತಿಯನ್ನು ರಚಿಸುವಾಗ ಸಮುದಾಯದ ಆತ್ಮಕಥನದ ರೂಪದಲ್ಲಿ ಬರೆಯಬೇಕೆನ್ನುವ ಖಚಿತ ಉದ್ದೇಶವೇನೂ ಇರಲಿಲ್ಲ. ಬರೆಯುತ್ತಲೇ ಅದು ಸಮುದಾಯದ ಆತ್ಮಕಥನವಾಗಿ ರೂಪುಗೊಂಡಿತು. ಅಂದರೆ ಅಧ್ಯಯನಕ್ಕೆ ಆಯ್ದುಕೊಂಡ ವಿಷಯವೇ ಸಮುದಾಯ ಆತ್ಮಕಥನದ ಅಧ್ಯಯನ ಮಾದರಿಯನ್ನು ಬಯಸಿತ್ತು.

ಎಲ್ಲ ಹರದೇಶಿ-ನಾಗೇಶಿ ಕಲಾವಿದರು ಅಧ್ಯಯನಕ್ಕೆ ಸಹಕರಿಸಿದ್ದಾರೆ. ವಕ್ತೃಗಳನ್ನು ನಾನು ‘ಮಾಹಿತಿದಾರರು’ ಎಂದು ಪರಿಗಣಿಸಿಲ್ಲ. ಅವರನ್ನು ‘ಜ್ಞಾನಿಗಳು’ ಎಂದು ಪರಿಭಾವಿಸಿದ್ದೇನೆ. ಪ್ರಸ್ತುತ ಅಧ್ಯಯನವನ್ನು ಯಾವುದೇ ಅಧ್ಯಯನ ಮಾದರಿಗಳು ಪ್ರಭಾವಿಸಿಲ್ಲ. ವಕ್ತೃಗಳು ನೀಡಿದ ಜ್ಞಾನದೊಳಗಿನಿಂದಲೇ ಅಧ್ಯಯನದ ತಾತ್ವಿಕತೆ ರೂಪು ಪಡೆದಿದೆ. ಇಂತಹ ಅಪರೂಪದ ಕೃತಿ ರೂಪು ಪಡೆಯುವುದಕ್ಕೆ ಕಾರಣರಾದ ಎಲ್ಲ ಹರದೇಶಿ-ನಾಗೇಶಿ ಕಲಾವಿದರನ್ನು ಪ್ರೀತಿಯಿಂದ ಸ್ಮರಿಸುವೆ. ಜೊತೆಯಲ್ಲಿ ಹಾಡಿಕೆ ನಡೆಸುವ ಊರಿನವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕೆಲ ಸಿಬ್ಬಂದಿಗಳು ಅಧ್ಯಯನಕ್ಕೆ ಅಗತ್ಯವಾದ ಮಾಹಿತಿಯನ್ನು ಒದಗಿಸಿದ್ದಾರೆ. ಇವರೆಲ್ಲರ ನೆರವನ್ನು ಸ್ಮರಿಸುವೆ.

ನನ್ನ ವಿದ್ಯಾಗುರುಗಳೂ ಹಿರಿಯ ವಿದ್ವಾಂಸರೂ ಹಾಗೂ ಕನ್ನಡ ವಿಶ್ವವಿದ್ಯಾಯದ ಕುಲಪತಿಗಳೂ ಆಗಿದ್ದ ಡಾ. ಎಂ.ಎಂ. ಕಲಬುರ್ಗಿ ಅವರು ಅಧ್ಯಯನದಲ್ಲಿ ಎದುರಾದ ವೈಚಾರಿಕ ಸಮಸ್ಯೆಗಳಿಗೆ ಪರಿಹಾರಗಳನ್ನು ಸೂಚಿಸಿದ್ದಾರೆ. ಅಲ್ಲದೆ ಕೃತಿಯ ಮೊದಲ ಪುಟದಿಂದ ಕೊನೆಯ ಪುಟದವರೆಗೆ ಓದಿ ಮಹತ್ವಪೂರ್ಣವಾದ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಅವರಿಗೆ ಗೌರವಪೂರ್ಣವಾದ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.

ನಮ್ಮ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಎ. ಮುರಿಗೆಪ್ಪ ಹಾಗೂ ಕುಲಸಚಿವರಾದ ಡಾ. ಮಂಜುನಾಥ ಬೇವಿನಕಟ್ಟಿ ಅವರು ಶೈಕ್ಷಣಿಕ ಒತ್ತಡ ತಂದು ಕೃತಿ ಪೂರ್ಣಗೊಳ್ಳುವುದಕ್ಕೆ ಕಾರಣರಾಗಿದ್ದಾರೆ. ಅವರಿಗೆ ಗೌರವಪೂರ್ಣ ನಮನಗಳು.

ಕ್ಷೇತ್ರಕಾರ್ಯಾಧ್ಯಯನ ಪೂರ್ಣಗೊಳಿಸಿದ ನನಗೆ, ಬರಹ ಪ್ರಾರಂಭಿಸುವುದು ಹೇಗೆ ಎನ್ನುವ ಸವಾಲು ಎದುರಾಯಿತು. ಅಧ್ಯಯನ ವಿಷಯದಲ್ಲಿ ಗೊಂದಲಗಳೆದುರಾದಾಗ ನಾನು ಪ್ರಧಾನವಾಗಿ ಚರ್ಚಿಸುವುದು ಸಹೋದರ ಬಿ.ಎಂ.ಪುಟ್ಟಯ್ಯ ಅವರೊಂದಿಗೆ. ಎರಡು ತಿಂಗಳವರೆಗೆ ಕ್ಷೇತ್ರಕಾರ್ಯಾಧ್ಯಯನದಲ್ಲಿ ಸಂಗ್ರಹಿಸಿದ ಮಾಹಿತಿಯನ್ನು ಪುಟ್ಟಯ್ಯ ಅವರೊಂದಿಗೆ ಹಂಚಿ ಕೊಂಡೆನು. ಎಲ್ಲವನ್ನು ಕೇಳಿಸಿಕೊಂಡು ಅವರು ವಿಷಯಗಳನ್ನು ಆರು ಅಧ್ಯಾಯಗಳಲ್ಲಿ ವಿಂಗಡಿಸಿ, ಈ ನಿಟ್ಟಿನಲ್ಲಿ ಬರೆಯಲು ಸಾಧ್ಯವೆ ಯೋಚಿಸಿ ಎಂದರು. ನಾನು ಅಧ್ಯಯನಕ್ಕಾಗಿ ಸಂಗ್ರಹಿಸಿದ ಮಾಹಿತಿ ಸಹೋದರ ಪುಟ್ಟಯ್ಯ ಅವರು ಸೂಚಿಸಿದ ಅಧ್ಯಾಯಗಳನ್ನು ಬಯಸುತ್ತಿದ್ದವೋ ಏನೋ. ಕಾಡು-ಮೇಡಲ್ಲಿ ಹರಿಯುವ ನದಿಯಂತೆ ಬರಹ ಸಹಜವಾಗಿ ಹರಿಯತೊಡಗಿತು. ಮೊದಲು ನಾನು ಬರೆಯಲು ಕುಳಿತೆ. ನಂತರ ವಿಷಯವೇ ಅಧ್ಯಾಯಗಳನ್ನು ಬರೆಯಿಸಿಕೊಂಡಿತು. ಆಡಳಿತಾತ್ಮಕ ಒತ್ತಡಗಳು, ಕೌಟುಂಬಿಕ ಒತ್ತಡಗಳು ಹಾಗೂ ಅನಾರೋಗ್ಯದ ಕಾರಣಗಳು ಅಲ್ಲಲ್ಲಿ ಬರಹಕ್ಕೆ ತಡೆಗಳನ್ನು ತಂದದ್ದಂತೂ ನಿಜ. ಆಗಲೂ ಪುನಃ ನನ್ನನ್ನು ವಿಷಯದೊಳಗೆ ಪ್ರವೇಶಿಸಲು ಪ್ರೇರೇಪಿಸಿದವರೇ ಪುಟ್ಟಯ್ಯ ಅವರು. ಅವರಿಗೆ ಕೃತಜ್ಞತೆ ಹೇಳುವುದು ಔಪಚಾರಿಕವೆನಿಸಿದರೂ ಹೇಳದಿದ್ದರೆ ತಪ್ಪಾಗುತ್ತದೆ.

ಪ್ರಸ್ತುತ ಅಧ್ಯಯನಕ್ಕೆ ಸಲಹೆ-ಸೂಚನೆಗಳನ್ನು ನೀಡುತ್ತಾ ಸಹಕರಿಸಿದ ಡಾ. ಎಚ್.ಎಸ್. ರಾಘವೇಂದ್ರರಾವ್, ಡಾ. ಟಿ.ಆರ್. ಚಂದ್ರಶೇಖರ್, ಡಾ. ರಹಮತ್‌ ತರೀಕೆರೆ, ಡಾ. ವಿ.ಬಿ. ತಾರಕೇಶ್ವರ, ಡಾ. ಬಸವರಾಜ ಮಲಶೆಟ್ಟಿ ಅವರಿಗೆ ಗೌರವಪೂರ್ಣ ಕೃತಜ್ಞತೆಗಳು.

ಪ್ರಸ್ತತ ಅಧ್ಯಯನವು ಕಲಾವಿಷಯಕ್ಕೆ ಸಂಬಂಧಪಟ್ಟಿದೆ. ಇತ್ತೀಚೆಗೆ ಕಲೆಗೆ ಸಂಬಂಧಿಸಿದ ವಿಷಯಗಳ ಕುರಿತು ಬರೆದರೆ, ಸೇತುಮಾಧವ ಅವರಿಗೆ ಕಳುಹಿಸಿ ಅಭಿಪ್ರಾಯ ಕೇಳುತ್ತಿದ್ದೇನೆ. ಪ್ರಸ್ತುತ ಅಧ್ಯಯನ ಕೃತಿಯನ್ನು ಪೂರ್ಣ ಓದಿದ ಅವರು “ಈ ಕೃತಿಯನ್ನು ಇಟ್ಟುಕೊಂಡು ನಾಟಕಗಳನ್ನು ಬರೆಯಬಹುದು, ಸಿನಿಮಾವನ್ನು ಮಾಡಬಹುದು; ಅಷ್ಟು ಪರಿಣಾಮಕಾರಿಯಾಗಿ ಬರಹ ಮೂಡಿ ಬಂದಿದೆ” ಎಂದು ಮೆಚ್ಚುಗೆ ಮಾತುಗಳನ್ನಾಡಿದ್ದಾರೆ. ಅವರಿಗೆ ಗೌರವಪೂರ್ಣ ಕೃತಜ್ಞತೆಗಳು.

ಸಂಗೀತ ವಿಷಯಕ್ಕೆ ಸಂಬಂಧಿಸಿದಂತೆ ಸಲಹೆ-ಸೂಚನೆಗಳನ್ನು ನೀಡಿದ ಡಾ. ಚಲುವರಾಜು ಮತ್ತು ಸವಿತಾ ನುಗಡೋಣಿ ಅವರನ್ನೂ ಸ್ಮರಿಸುವೆ.

ಕ್ಷೇತ್ರಕಾರ್ಯ ಪ್ರಾರಂಭಿಸಿದಾಗಿನಿಂದ ಕರಡು ತಿದ್ದುವವರೆಗೆ ತಾಳ್ಮೆಯಿಂದ ನನ್ನೊಂದಿಗಿದ್ದು ಸಹಕರಿಸಿದ ಸಂಶೋಧನಾ ವಿದ್ಯಾರ್ಥಿಗಳಾಗ ಭೀಮೇಶ ಮತ್ತು ಎನ್.ಎಲ್. ಪಂಪಾವತಿ ಅವರನ್ನು ಪ್ರೀತಿಯಿಂದ ನೆನೆಯುವೆ.

ನನ್ನೊಂದಿಗೆ ಅತ್ಯಂತ ಪ್ರೀತಿಯಿಂದ ಸಹಕರಿಸಿದ ನನ್ನ ಬಾಳ ಸಂಗಾತಿ ಅರುಣಸ್ವಾಮಿ, ಮಗ ಭುವನ್ ಹಾಗೂ ಪುಟ್ಟ ಮಗಳು ಮಹಿಳಾ ಇವರನ್ನು ಪ್ರೀತಿಯಿಂದ ಸ್ಮರಿಸುವೆ.

ಪ್ರಸ್ತುತ ಅಧ್ಯಯನವು ಸಮುದಾಯದ ಆತ್ಮಕಥನ ಮಾದರಿಯಲ್ಲಿಯೇ ರೂಪಿತವಾಗಿದೆ. ಕಲಾವಿದರ ಅನುಭವಗಳನ್ನು ಅವರ ಭಾಷೆಯಲ್ಲಿಯೇ ಯಥಾವತ್ತಾಗಿ ಹಿಡಿದಿಡಲು ಪ್ರಯತ್ನಿಸಲಾಗಿದೆ. ಇಂತಹ ಬರಹವನ್ನು ಡಿ.ಟಿ.ಪಿ. ಮಾಡುವುದು ಅಷ್ಟು ಸುಲಭವಲ್ಲ. ಬಹಳ ಸಹನೆಯಿಂದ ಡಿ.ಟಿ.ಪಿ. ಮಾಡಿದ ಸಹೋದರ ವೀರೇಶ ಕೆ. ಅವರನ್ನು ಹಾಗೂ ಪುಟ ವಿನ್ಯಾಸವನ್ನು ಅಚ್ಚುಕಟ್ಟಾಗಿ ಮಾಡಿದ ಕೆ. ಆಂಜನೇಯ ಅವರನ್ನು ಪ್ರೀತಿಯಿಂದ ಸ್ಮರಿಸುವೆ.

ಕೃತಿಯ ಅಚ್ಚುಕಟ್ಟಾಗಿ ಪ್ರಕಟವಾಗಲು ಸಹಕರಿಸಿದ ಪ್ರಸಾರಾಂಗದ ನಿರ್ದೇಶಕರಾದ ಡಾ. ಮಂಜುನಾಥ ಬೇವಿನಕಟ್ಟಿ ಹಾಗೂ ಸಹಾಯಕ ನಿರ್ದೇಶಕರಾದ ಶ್ರೀ ಬಿ.ಸುಜ್ಞಾನಮೂರ್ತಿ, ಶ್ರೀ ಎಚ್.ಬಿ. ರವೀಂದ್ರ, ಮುಖಪುಟ ರಚಿಸಿರುವ ಕಲಾವಿದ ಶ್ರೀ ಕೆ.ಕೆ. ಮಕಾಳಿ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.

ಡಾ. ಶೈಲಜ ಹಿರೇಮಠ