ನಾವು ಐದೂ ಜನ ಹೆಣ್ಣು ಮಕ್ಳು. ಮೂವರು ಗಂಡುಮಕ್ಕಳು. ಕೊನಿ ಮಗಳ ನಾನು. ನಾನು ಐದು ವರ್ಷದಕಿ ಇದ್ದಾಗ ನಮ್ಮಪ್ಪ ತೀರಿಕೊಂಡಾ. ಬಡತನ ಅಂದ್ರ ಅಂತಿಂಥಾ ಬಡತನ ಅಲ್ಲ ನಮ್ಮದು. ಹಸಿವಿ, ಹಸಿವಿ ಅಂತ ಅತ್ತ್ರ ಹಾಲಿಪಲ್ಯ, ಹರವಿಪಲ್ಯ, ಕಿರಸಾಲಿಪಲ್ಯ, ಚಕ್ಕೋತಾಪಲ್ಯ, ನುಗ್ಗಿಪಲ್ಯ, ಗೊರಚಿ ಪಲ್ಯ ಯಾವುದಾದ್ರೂ ಸಿಕ್ರ ಅದನ್ನ ನೀರಾಗ ಹಾಕಿ ಕುದಿಸಿ ಅದಕ್ಕ ಸ್ವಲ್ಪ ಉಪ್ಪ ಹಾಕಿ ನಮ್ಮವ್ವ ನಮಗ ಕೊಡ್ತಿದ್ದಳು[1]. ಉಪ್ಪು ಹಾಕಿ ಕುದಿಸಿದ ಪಲ್ಯೆದ ರಸನ್ನಾ ತಾಣು ಕುಡಿದ್ರ ಮಕ್ಕಳಗಿ ಕೊಳೆಮಿ(ಕಡಿಮಿ) ಬೀಳತ್ತ ಅಂತ ತಾನು ಕುಡಿತಿರ್ಲಿಲ್ಲ, ನೀವು ಕುಡ್ರಿ ಅಂತ ನಮಗs ಹೇಳಿತಿದ್ಲು. ನಮ್ಮಪ್ಪನೂ ನೀವು. ಪೈಲಾ(ಮೊದಲು) ಕುಡ್ರಿ ಅಂತ ಅಂತಿದ್ರು, ಮಕ್ಕಳ ತಾಯಿ ನೀನೂ ಮಕ್ಕಳ ಸಂಗಾಟ ಕುಡಿ ಅಂತ ನಮ್ಮಪ್ಪ ನಮ್ಮವ್ವಗ ಒತ್ತಾಯಾ ಮಾಡಿದ್ರೂ ನಮ್ಮವ್ವ ಕುಡಿತಿರಲಿಲ್ಲ. ನಮ್ಮವ್ವ, ನಮ್ಮಪ್ಪ ಇಬ್ರೂ ಎರಡೆರಡು, ಮೂರ್ಮೂರು ದಿನಗಂಟ್ಲೆ ನೀರ ಕುಡಕೊಂಡ ಹಂಗs ಉಪವಾಸ ಇರೋರು.

ಈ ಯಾವೂ ಸೊಪ್ಪು ಸಿಗಲಾರ್ದಾಗ ನಮ್ಮವ್ವ ನ್ಯಾಬಳ್ಳಿ ಕಸದ್ಲೆ ಪಲ್ಯ(ಬೇಯಿಸಿದ್ದು) ಮಾಡಿಕೊಟ್ಟಳು. ನ್ಯಾಬಳ್ಳಿ ಕಸಾ ಮನಿ ಮಾಳಿಗಿ ಮ್ಯಾಗಿ ಬೆಳಿತಿತ್ತು. ಅದು ಹೊಲ್ಸ ನಾರೂದು, ಇಷ(ವಿಷ) ಇರೋದು. ಹೊಟ್ಟಿ ಕಿಚ್ಚಿಗೆ ಅದಕ್ಕೆ ಉಪ್ಪು ಹಾಕಿ ನಮ್ಮವ್ವ ಕುದಿಸಿಕೊಡ್ತಿದ್ಲು. ನಾವು ಅದನ್ನ ಬಂಗಾರಾ ಮಾಡಿ ಕುಡಿತಿದ್ವಿ.

ಹಾಲಿ ಬಳ್ಳಿ ಅಂತ ಇರೋದು. ಇದು ಬೇಲಿಗೆ ಹಬ್ಬಿರತೈತಿ. ಅದಕ್ಕ ಹೂವು ಬಿಡತಾವು. ಹೂವಾ ಮತ್ತು ಎಲಿನ್ನ ಎರಡನ್ನೂ ಕೊಡ್ಲಿಲೆ ಕೊಚ್ಚಿ, ಕೊಚ್ಚಿ, ಸಣ್ಣಂಗ ಮಾಡಿ, ಅದನ್ನು ಕುದಿಸಿ, ಅದರಾಗ ಸ್ವಲ್ಪ ಉಪ್ಪ ಹಾಕಿ ಕೊಡ್ತಿದ್ಲು. ಹೊನ್ನಿಕುಕ್ಕ ಪಲ್ಯ ತಿಂದ್ರ ಸಂಡಾಸ ಹತ್ತದ ಅನ್ನವ್ರು. ಇದು ಗೊತ್ತಿದ್ರೂ ಅದನ್ನು ಕುಚ್ಚಿ(ಕುದಿಸಿ) ಕುಡಿತಿದ್ವಿ.

ಹದಿನೈದು ದಿವಸಕ್ಕೂ, ತಿಂಗಳಿಗೋ ಯಾವಾಗಾದ್ರೂ ನಮ್ಮಪ್ಪ ಹಿಡಿಯಸು ಜ್ವಾಳಾನ್ನ ಸಾವ್ಕಾರ್ನ ಮನೆಯಿಂದ ತರ್ತಿದ್ದಾ. ಅದನ್ನ ನಮ್ಮವ್ವ ನುಚ್ಚ ಮಾಡಿ ತೆಳ್ಳಗೆ ನೀರಿನ್ಹಾಂಗ ಗಂಜಿ ಮಾಡಿ ಎಲ್ಲಾರ್ಗೂ ಕೊಡ್ತಿದ್ಲು. ನಮಗ ಬಂಗಾರಾಗಿದ್ದ ಇಂಥಾ ಗಂಜಿನ್ನ ನಮ್ಮವ್ವ, ನಮ್ಮಪ್ಪ ತಗೊಂಡಿದ್ದ ಗೊತ್ತs ಇಲ್ಲ. ನುಚ್ಚ ಮಾಡಬೇಕಂದ್ರ, ರೊಟ್ಟಿ ಮಾಡಬೇಕೆಂದ್ರ ಹೆಚ್ಚಿಗೆ ಜ್ವಾಳ ಇರ್ತಿರ್ಲಿಲ್ಲ. ಮನಿ ತುಂಬಾ ನಾವು ಎಂಟ ಜನಾ ಮಕ್ಕಳು. ಹೀಂಗಾಗಿ ನೀರಗಂಜಿ ಮಾಡಿ ಕೊಡ್ತಿದ್ರು. ಇನ್ನು ಎಂಥಾ ಬಡತನಾ ಅಂಥ ನೀವು ಕೇಳಿದ್ರು ನನಗ ಹೇಳಾಕ ಬರಲ್ಲ. ಈ ಬಡತನ ಕಳಕೊಳ್ಳಾಕಂಥ ನನಗೆ ನಾಗೇಶಿ ಹಾಡಾ ಕಲ್ಸಿದ್ರು. – ಸತ್ಯವ್ವ ತೆಳಗೇರಿ

ತಾಯಿ ಏನ ಕೇಳತೀಯ ನಮ್ಮ ಬಡತನಾ. ನಮ್ಮವ್ವ ನಮ್ಮಪ್ಪ, ಸ್ವಾದರಮಾವಾ, ಅವ್ನ ಹೆಂಡ್ರು, ನಮ್ಮ ಆಯಿ-ಮುತ್ತ್ಯಾ ಮ್ಯಾಲ ನಾವು ಎಂಟ ಜನಾ ಮಕ್ಕಳು. ಸ್ವಾದರ ಮಾವಗ ಆರ ಜನಾ ಮಕ್ಕಳು. ನಮ್ಮ ಆಯಿ ಮುತ್ತ್ಯಾಗ ಎಂಟ ಜನಾ ಮಕ್ಕಳು. ನಾವ ಏಟ್ಟ(ಎಷ್ಟು) ಜನಾ ಅದಿವಿ ಅನ್ನೊದನ್ನ ನೀವು ಲೆಖ್ಖಾ ಮಾಡ್ಕೋರಿ. ಯಾರ ಮೈಮ್ಯಾಲೂ ಹರಿಲಾರ್ದ ಬಟ್ಟಿ ಇರ್ತಿರಲಿಲ್ಲ. ಹರಕ ಬಟ್ಟಿಯಿಂದ ಮೈಯೆಲ್ಲಾ ಕಾಣೂದು. ಸಣ್ಣವರಿದ್ದಾಗ ಹರಕ ಬಟ್ಟಿ ಉಟಕೊಂಡ್ರೂ ಏನು ಅನಿಸ್ತಿರಲಿಲ್ಲ. ದೊಡ್ಡವರಾದಂಗ ಹರಕಬಟ್ಟಿಯಿಂದ ಮೈಯೆಲ್ಲಾ ಕಾಣಾಕತ್ತಿಂದ, ಬಡತನಾ ಎಂಥಾ ಕೆಟ್ಟದ್ದು ಅಂತ ಅನಸಾಕತ್ತು. ಯಾರೋ ಕೊಟ್ಟಿದ್ದ ರೊಟ್ಟಿಗೆ ಬೇಯಸಲಾರದ್ದ ಪುಂಡಿ ಪಲ್ಯ ಹಚ್ಚಕೊಂಡು ತಿಂದೀವಿ, ಪುಂಡಿ ಪಲ್ಯ ಕುದಿಸಬೇಕಂದ್ರ ಮುರಕ ಗಡಿಗಿನೂ ಇರ್ಲಿಲ್ಲ. ಅಂಗೈ ಅಗಲ ಮನಿ ಇತ್ತು. ಅದರಾಗ ಇಪ್ಪತ್ತು ಜನ ಮಲ್ಕೊತಿದ್ವಿ. ಉಸಿರಾಡಾಕ ಜಾಗನೂ ಇರ್ತಿರ್ಲಿಲ್ಲ. ಒಬ್ಬರ್ನ ತುಳಕೊಂಡ ಇನ್ನೊಬ್ಬರು ಮಲಗತಿದ್ವಿ. ನನ್ನ ದೇವರಿಗೆ ಬಿಟ್ಟ ಆಗಿತ್ತು. ಒಂದಿನಾ ಹಾಡಕಿ ಕೇಳಾಕಂತ ಹೋಗಿದ್ನಿ. ಬಾಳಿಗೇರಿ ಅಪ್ಪಣ್ಣ ಉಸ್ತಾದರ ಹಾಡಕಿ ಅದು. ಅವ್ರಿಗಿ ಊರ ಗೌಡ್ರು ನೂರು ರೂಪಾಯಿ ಕೊಟ್ಟ್ರು. ಆಗಿನಕಾಲಕ್ಕ ನೂರು ರೂಪಾಯಿ ಅಂದ್ರ ಸಾವಿರ ರೂಪಾಯಿ ಅಂದ್ಹಂಗ. ದುಡುಕಿ ಚಲೋ ಆಗತ್ತಂತ ಹಾಡಕಿ ಕಲಿಯಾಕ ಚಾಲೂ ಮಾಡಿದ್ಯಾ. – ತಿಗಣಿಬಿದರಿ ಗಂಗವ್ವ

ನಮ್ಮಪ್ಪಗ ಏಳು ಜನ ಗಂಡಸರು, ನಾವು ನಾಲ್ಕ ಮಂದಿ ಹೆಣ್ಣುಮಕ್ಕ್ಳು. ನಮ್ಮದು ಎಂಥಾ ಬಡತನ ಅಂದ್ರ ಕೂಡಾಕೂ ಜಾಗ ಇರ್ತಿರಲಿಲ್ಲ. ಬಯಲಿನ್ಯಾಗ ಜಳಕಾ ಮಾಡ್ತಿತಿದ್ವಿ. ವಯಸ್ಸಿಗಿ ಬಂದಂಗ ಬಯಲಾಗ ನಿಂತು ಜಳಕಾ ಮಾಡಬೇಕಂದ್ರ ಜೀಂವಾ ಹೋದ್ಹಂಗ ಆಗ್ತಿತ್ತು. ನಮ್ಮವ್ವ, ಅಪ್ಪ ಹೊಟ್ಟಿತುಂಬ ಉಂಡದ್ದ ನೋಡ್ಲಿಲ್ಲ. ಒಂದು ಹೊತ್ತು ಗಂಜಿ ಕುಡದ್ರ ಮುಂದ ಎರಡ ದಿವಸಾ ಏನೂ ಸಿಗ್ತಿರಲಿಲ್ಲ. ಹೊಟ್ಟಿ ಹಸ್ತೆತಿ ಅಂದ್ರ ಸೇಂಗಾ ಹುರಿದು ಕೊಡವ್ರು. ನಮ್ಮಪ್ಪಾ ಹಗಲು ರಾತ್ರಿ ದುಡದ್ರ ಎರಡ ಸೇರು ಜ್ವಾಳಾ ಸಿಗೋದು. ಮುಂದ ಬರಗಾಲಾ ಬಂತು. ನಮ್ಮವ್ವ ಅಪ್ಪ ಹಸಿವಿನಿಂದ ಸತ್ತ ಹೋದ್ರು. ನಮ್ಮಜ್ಜಿ ನಮ್ಮನ್ನ ಜ್ವಾಪಾನ ಮಾಡ್ತು. ಆಗ ಹಾಡಿಕೆ ಹಾಡವ್ರು ಹಾಡಿಕೆಯಿಂದ ದುಡ್ಡ ಮಾಡ್ಕೋತಿದ್ರು. ಅದಕ್ಕಂತ ನನಗ ಹಾಡಕಿಗಿ ಹಚ್ಚಿದ್ರು. ರಾಮಣ್ಣನು ನಮ್ಮನಿಯಾಗ ಬಂದು ಇರಾಕ ಚಾಲೂ ಮಾಡಿದ್ಯಾ. ಬಡತನಾ ಅಂದ್ರ ಹಸಿವಿನಿಂದ ಸತ್ತ ನಮ್ಮವ್ವ ಅಪ್ಪಾನ ನೆಪ್ಪ(ನೆನಪು) ಆಗ್ತಾರ. ಬ್ಯಾರೆ ಏನೂ ನೆಪ್ಪಿಗೆ ಬರಲ್ಲ. – ಬಾಗೇವಾಡಿಯ ಸಿಂಗಾರವ್ವ

ಇವು ಸತ್ಯವ್ವ, ಸಿಂಗಾರವ್ವ, ಯಮುನವ್ವ ಅವರ ಕಥನಗಳಲ್ಲ. ಇವು ಹೊಲಗೇರಿಯಲ್ಲಿನ ಬಡತನದ ಕಥನಗಳು. ಹೊಲಗೇರಿಯಲ್ಲಿನ ಬಡತನ ಹಾಗೂ ೧೯೭೦ರ ಸಂದರ್ಭದಲ್ಲಿನ ವಿಜಾಪುರದಲ್ಲಿನ ಬರಗಾಲ ಎರಡೂ ಅದೆಷ್ಟೊ ಕಟುಂಬಗಳನ್ನು ನುಂಗಿ ನೀರು ಕುಡಿದವು. ಅದೆಷ್ಟೋ ಹಸುಳೆಗಳು ಅನಾಥವಾದವು. ಹಸಿವನ್ನು ಮೆಟ್ಟಿನಿಂತ ಕುಟುಂಬದ ಹಿರಿಯರು, ಹಸುಳೆಗಳನ್ನು ಅನಾಥರನ್ನಾಗಿಸದೇ ಜೋಪಾನ ಮಾಡಿದರು. ಸಿಂಗಾರವ್ವನ ಅಜ್ಜಿ ಐದು ದಿನಗಳಾದರೂ ತಿನ್ನಲು ತುತ್ತು ಗಂಜಿ ದೊರೆಯದೇ ಇದ್ದಾಗ, ಯಾರದೋ ಹೊಲದ ಜೋಳವನ್ನು ಕದಿಯಲು ಹೋಗಿ ಹೊಲದ ಮಾಲಿಕರ ಕೈಗೆ ಸಿಕ್ಕಿದ್ದಳಂತೆ. ಹಸಿವು ಕಳ್ಳತನಕ್ಕೆ ದೂಡಿತ್ತು. ಬಹಿರಂಗಗೊಂಡ ಕಳ್ಳತನ ಆತ್ಮಹತ್ಯೆಗೆ ಪ್ರೇರೇಪಿಸಿತ್ತಾದರೂ ಸಿಂಗಾರವ್ವ ಹಾಗೂ ಇತರ ಮಕ್ಕಳ ಮುಖ ನೋಡಿ, ಆತ್ಮಹತ್ಯೆಯ ನಿರ್ಧಾರ ಹಿಂತೆಗೆದುಕೊಂಡಳಂತೆ. ಕಿತ್ತು ತಿನ್ನುವ ಬಡತನವಿದ್ದರೂ, ಆ ಬಡತನ ಅವರ ಬದುಕುವ ಕನಸುಗಳನ್ನು ಕಿತ್ತುಕೊಳ್ಳಲಿಲ್ಲ ಬೆತ್ತಲು ದೇಹವನ್ನು ಮುಚ್ಚಿಕೊಳ್ಳಲು ಹಸಿವಿನ ಚೀಲವನ್ನು ತುಂಬಿಕೊಳ್ಳಲು ಅವರಿಗೆ ದಾರಿ ತೋರಿಸಿದ್ದು ದಪ್ಪಿನ ಪದಗಳು. ಪ್ರಾಣಿಗಳೂ ತಿನ್ನಲಾರದ ಹಾಲಿ ಬಳ್ಳಿ, ಹೊನ್ನಿಕುಕ್ಕನಂತಹ ಸೊಪ್ಪನ್ನು ತಿಂದು ಬದುಕಲೇಬೇಕೆಂಬ ಛಲವನ್ನು ಬೆನ್ನಿಗಂಟಿಸಿಕೊಂಡೇ ಇವರು ಅಲೆದಿದ್ದಾರೆ. ದಪ್ಪನ್ನು ಖರೀದಿಸಲು ದುಡ್ಡಿಲ್ಲದೆ ಉಣ್ಣುವ ಮುರುಕು ತಟ್ಟೆಯನ್ನೇ ದಪ್ಪಾಗಿಸಿಕೊಂಡು ದಪ್ಪಿನ ಹಾಡನ್ನು ಕಲಿತವರು ನೂರಾರು ಜನ ಇದ್ದಾರೆ. ಪುರುಷ ಕಲಾವಿದರಿಗೂ ಬಡತನ ಕಾಡಿದೆ. ಹರಕು ಟವಲನ್ನು ಸುತ್ತಿಕೊಂಡೇ ಇಪ್ಪತ್ತು ವಸಂತಗಳನ್ನು ಕಂಡ ಪುರುಷ ಕಲಾವಿದರಿಗೇನೂ ಕೊರತೆಯಿಲ್ಲ. ಹಾಡಿಕೆ ಮಹಿಳೆಯರಿಗೆ ಬಡತನವು ತೀವ್ರ ಅಪಮಾನವನ್ನು, ಅನಾಥತೆಯನ್ನು ತಂದಿಟ್ಟಿದೆ. ಅವರು ಬಡತನವನ್ನು ಋತುಮತಿ ಅವಧಿಯ ಪೂರ್ವದ್ದು, ಋತುಮತಿಯಾದ ನಂತರದ್ದು ಎಂದು ಎರಡು ರೀತಿಯಲ್ಲಿ ವಿವರಿಸಿಕೊಳ್ಳುತ್ತಾರೆ. ಋತುಮತಿ ಅವಧಿಯ ಪೂರ್ವದಲ್ಲಿನ ಬಡತನ ಎಷ್ಟೇ ತೀವ್ರವಾದರೂ ಸಹ್ಯವಾದದ್ದು ಎಂದು ವಿವರಿಸಿಕೊಂಡಿದ್ದಾರೆ. ಆದರೆ ಋತುಮತಿಗೊಂಡ ನಂತರದ ಬಡತನವನ್ನು ಹೇಳಿಕೊಳ್ಳುವಾಗ ಅವರ ಕಣ್ಣಾಲಿ ತುಂಬಿಕೊಳ್ಳುತ್ತಿದ್ದವು. ಗಂಟಲಿನಿಂದ ಮಾತುಗಳೇ ಹೊರಡುತ್ತಿರಲಿಲ್ಲ. “ಜಳಕಾ ಮಾಡಬೇಕಂದರ ಬಚ್ಚಲ ಇರ್ತಿರಲಿಲ್ಲ. ಬಯಲಾಗ ನಿಂತು ಜಳಕಾ ಮಾಡಬೇಕಾಗ್ತಿತ್ತು. ಆ ವ್ಯಾಳಾ ಗೊತ್ತ ಮಾಡಕೊಂಡ ಕಿಡಿಗೇಡಿ ಗಂಡಸರು ಕಟ್ಟಿಗಿ ಕುಂತಬಿಡ್ತಿದ್ರು. ಏಳ್ರಿ ಅನ್ನಾಕ ಅದು ನಮ್ಮ ಜಾಗಾ ಅಲ್ಲ. ಹೇಳಿದ್ರ ಚಲವಿ ಅದಿ ಅಂತ ನೋಡಾಕ ಕುಂತೀವಿ ಅಂತ ಅಂದ ಗೊಂಡಿಯೇನು? ಮುಂದ ನೋಡಿ ಜಳಕಾ(ಸ್ನಾನ) ಮಾಡ ಅನ್ನವ್ರು. ಉಟ್ಟ ಹರಕ ಬಟ್ಟಿ ಮ್ಯಾಗ ಒಂದೆರಡು ತಂಬಿಗಿ ನೀರು ಹಾಕ್ಕೊಂಡು ಮತ್ತೊಂದು ಹರಕ ಅಂಗಿ ಹಾಕೊತಿದ್ವಿ. ಅದು ಎದಿ ಭಾಗಾ ಕಾಣೂದು, ತೊಡಿ ಕಾಣೂದು, ಜೀಂವಾ ಹಿಡಿಮಾಡಿ ಅಂಗೈಯಾಗ ಹಿಡಕೊಂಡ ತಿರಗತಿದ್ವಿ. ಶಿವನ ಬಡತನ ಕೊಡಬ್ಯಾಡ, ಹೆಣ್ಣಾಗಿ ಹುಟ್ಟಿಸಬ್ಯಾಡಾ ಅಂತ ನಿತ್ಯ ಬೇಡಕೊತಿದ್ವಿ” ಎಂದು ಒದ್ದೆ ಕಣ್ಣಿನಿಂದ ನೂರಾರು ಹಾಡಿಕೆ ಮಹಿಳೆಯರು ಬಡತನವನ್ನು ಹಂಚಿಕೊಂಡರು. ಬಯಲಿನಲ್ಲಿ ಸ್ನಾನ ಮಾಡುವುದು, ಹರಿದ ಅರೆ ಬಟ್ಟೆಯಲ್ಲಿ ಅರೆ ಬೆತ್ತಲಾಗಿ ತಿರುಗಾಡುವುದು; ಇವುಗಳ ಹಾಡಿಕೆ ಮಹಿಳೆರಯರಿಗೆ ಗಾಢವಾಗಿ ಕಾಡಿದಷ್ಟು ಹಾಡಿಕೆ ಪುರುಷರಿಗೆ ಕಾಡಿಲ್ಲ. ಹೆಣ್ಣಿನ ಮರ್ಯಾದೆಯನ್ನು ದೇಹ ಕೇಂದ್ರಿತವಾಗಿಯೇ ನಿರ್ವಚನ ಮಾಡಲಾಗಿದೆ. ಬಡತನದ ಕಾರಣಕ್ಕಾಗಿ ದೇಹ ಬಯಲುಗೊಳ್ಳುವುದು ತೀವ್ರ ಅಪಮಾನವನ್ನು ತಂದಿಟ್ಟಿದೆ. ಅವರು ಹಸಿವು ತರುವ ಸಾವನ್ನು ಮರುಮಾತಿಲ್ಲದೆ ಒಪ್ಪಿಕೊಳ್ಳುತ್ತಾರೆ. ಬಟ್ಟೆಯಿಲ್ಲದೆ ದೇಹ ಬೆತ್ತಲುಗೊಳ್ಳುವುದನ್ನು ಸಹಿಸುವುದಿಲ್ಲ. ನೂರಾರು ಪುರುಷರು ಕಣ್ಣೋಟದ ಮೂಲಕವೇ ನಿತ್ಯ ನಡೆಸುವ ಅತ್ಯಾಚಾರ ಈ ಕಳಾವಿದೆರಯರಿಗೆ ಪದೇ ಪದೇ ಸಾವನ್ನು ನೆನಪಿಸಿದೆ. ಮಲಗಲು ಸೂರು, ಉಡಲು ಬಟ್ಟೆ ಹಾಗೂ ಬದುಕುವಷ್ಟು ಅನ್ನ ಬಯಸಿದ ‘ಜೋಗತಿಯರಿಗೆ’, ‘ಬಸವಿಯರಿಗೆ’ ದಾರಿತೋರಿಸಿದ್ದು ದಪ್ಪಿನ ಹಾಡುಗಳು. ‘ಜೋಗತಿ’ಯರಿಗೆ ಚೌಡಿಕೆ ಹಾಡುಗಳು ಉಪಜೀವನಕ್ಕೆ ದಾರಿಗಳಾಗಿದ್ದರೂ ಅದು ನಿತ್ಯದ ಹೊಟ್ಟೆಯನ್ನೇನೂ ತುಂಬುತ್ತಿರಲಿಲ್ಲ. ‘ಬಸವಿ’ಯರಿಗೆ ಕೂಲಿ ಮಾಡುವುದನ್ನು ಬಿಟ್ಟರೆ ಉಪಜೀವನಕ್ಕೆ ಬೇರೆ ಮಾರ್ಗವಿರಲಿಲ್ಲ. ಚೌಡಿಕೆ ಹಾಡುಗಳು, ಹೊಲದಲ್ಲಿನ ಕೂಲಿ ಕೆಲಸ ಇವೆರಡೂ ಇವರಿಗೆ ಹೊಟ್ಟೆ ತುಂಬ ಅನ್ನ ನೀಡಲಿಲ್ಲ; ಮೈ ತುಂಬ ಬಟ್ಟೆ ಕೊಡಲಿಲ್ಲ; ಇರಲು ಸೂರು ಒದಗಿಸಲಿಲ್ಲ. ಮೈ ತುಂಬ ಬಟ್ಟೆ, ಹೊಟ್ಟೆ ತುಂಬ ಅನ್ನ ಹಾಗೂ ನಿಶ್ಚಿಂತೆಯಿಂದ ಮಲಗಲು ಸೂರು ಬಯಸಿ, ಹರದೇಶಿ ನಾಗೇಶಿ ಹಾಡಿಕೆ ಕ್ಷೇತ್ರಕ್ಕೆ ಕಾಲಿಟ್ಟವರು ದಪ್ಪಿನ ಹಾಡಿನ ಕಲಾವಿದರು.

ದಪ್ಪಿನ ಹಾಡು ಕಲಿಯುವುದು ಈ ಕಲಾವಿದರಿಗೆ ಸುಲಭವಾಗಿಯೇನೂ ಇರಲಿಲ್ಲ. ಈ ಹಾಡುಗಳನ್ನು ಕಲಿಯಲು ಕಂಠ ಹಾಗೂ ಆಸಕ್ತಿ ಈ ಎರಡು ಸಂಗತಿಗಳು ಸಾಕು ಎನ್ನುವಂತಿಲ್ಲ. ಈ ವಿದ್ಯೆ ಕಲಿಯಲು ಹಣ ಕೂಡ ಬೇಕಾಗುತ್ತದೆ.

“ನನಗೀಗ ತೊಂಬತ್ತೈದು ವರ್ಷ ವಯಸ್ಸು. ನನಗೆ ಹದಿನೈದು ವರ್ಷ ವಯಸ್ಸಾಗಿದ್ದಾಗ ಹಾಡಕಿ ಕಲಿಸಿದ್ರು. ಮನಿಯಾಗ ಗಂಗಾಳ, ತಂಬಗಿ ಮಾರಿ ಈ ವಿದ್ಯಾ ಕಲಿಸ್ಯಾರ. ಆಗಿನ ಕಾಲ ಆಗಿರಬಹುದು, ಈಗಿನ ಕಾಲ ಆಗಿರಬಹುದು, ಗುರುಗೊಳ್ನ ಮನಿಯಾಗ ಇಟಕೊಂಡು ವಿದ್ಯಾ ಕಲಿಯೂದಂದ್ರ ಸುಮ್ನ ಇಲ್ಲ. ಅವ್ರ ಚಾಪಾನಿಯಿಂದ ಹಿಡಿದು ಊಟಾ, ವಸತಿ ಎಲ್ಲಾನೂ ನಾವs ನೋಡ್ಕೋಬೇಕಾಗ್ತೈತಿ. ನಾವು ಹಡಕಿ ಕಲಿಸು ಗುರುಗೊಳಗಿ ಬಾಳ ಮರ್ಯಾದಿ ಕೊಡ್ತೀವಿ. ಚಾಪಾನಿ, ಊಟಾ, ವಸತಿ ನೋಡ್ಕಂಡ್ರ ಅಷ್ಟ ಸಾಕಾಗ್ತಾ ಇರಲಿಲ್ಲ. ಮ್ಯಾಲ ಅವ್ರಿಗಿ ಪಗಾರ ಕೊಡಬೇಕಾಗ್ತಿತ್ತು. ಅವ್ರ ನಂಬಕೊಂಡ ಹೆಂಡ್ತಿ ಮಕ್ಕಳು ಇರ್ತಿದ್ದರಲ್ಲ? ಅವ್ರ್ನ ನೋಡ್ಕೋಳ್ಳು ಜವಾಬ್ದಾರಿ ಗುರುಗಳದ ಇರ್ತೈತಿ. ಆಗಿನ ಕಾಲಕ ತಿಂಗಳಾ ನಾಕಿಪ್ಪತ್ತು (ಎಂಬತ್ತು) ರೂಪಾಯಿ ಗುರುಗಳಿಗೆ ಪಗಾರ ಕೊಟ್ಟು ಈ ವಿದ್ಯೆ ಕಲಿತೇವು. ಆಗಿನ ಕಾಲಕ್ಕೆ ನಾಕಿಪ್ಪತ್ತು ರೂಪಾಯಿ ಅಂದ್ರ ಒಂದು ಸಾವಿರ ರೂಪಾಯ ಇದ್ದಂಗ. ತಿಂಗಳಾ ನಾಕಿಪ್ಪತ್ತು ರೂಪಾಯಿದ್ದಂಗ ಒಂದ ವರ್ಷ ಪಗಾರಕೊಟ್ಟು ಹಾಡಕಿ ಕಲ್ತೇನಿ. ತಿಂಗಳಾ ಈ ನಾಕಿಪ್ಪತ್ತು ರೂಪಾಯಿ ಹೊಂದಿಸಾಕ, ಗುರುಗಳ ಖರ್ಚು ನೋಡ್ಕೋಳ್ಳಾಕ ನಮ್ಮವ್ವ, ನಮ್ಮಪ್ಪ, ಆಯಿ, ಮುತ್ತ್ಯಾ, ಸ್ವಾದರ ಮಾವಾ ಎಲ್ಲರೂ ದುಡಿತಿದ್ರು. – ತಿಗಣಿಬಿದಿರಿ ಗಂಗವ್ವ

ತಂಗಿ ನಮಗ ಗುರುಗಳನ್ನ ಮನಿಯಾಗ ಇಟ್ಟಕೊಂಡು ದಪ್ಪಿನ ವಿದ್ಯಾ ಕಲಿಯೂ ತಾಕತ್ತಿರಲಿಲ್ಲ. ಶಂಕ್ರಪ್ಪ ಬಡಿಗೇರ ಅನ್ನುವರು ಹಾಡ್ಕಿ ವಿದ್ಯಾ ಕಲಿಸಿದ ಮೊದಲ ಗುರುಗಳು. ಇವ್ರು ತೆಳಗ (ಕೆಳಕ್ಕೆ) ಬರುವ ನಾಗಟ್ಯಾನ (ನಾಗಟಾನ-ಊರಹೆಸರು) ದಲ್ಲಿ ಇರ್ತಾರ. ಅವ್ರ ಮನಿ ಮುಂದ ಗುಡಿಸ್ಲಾ ಹಾಕ್ಕೊಂಡ ನಮ್ಮನಿಯಿಂದ ಹಿಟ್ಟಾ, ನುಚ್ಚಾ ಒಯ್ದು ಅಡಗಿ ಮಾಡ್ಕೊಂಡು ಕಲ್ತೇನಿ. ಮೂವತ್ತು ವರ್ಷಗಳ ಹಿಂದೆ ಕಲಿಸಿದ ಗುರುಗಳಿಗೆ ತಿಂಗಳಿಗೆ ಐದನೂರು ರೂಪಾಯಿ ಪಗಾರ ಕೊಡ್ತಿದ್ದೆ. ಹೀಂಗs ಒಂದ ವರ್ಷ ಪಗಾರಾ ಕೊಟ್ಟು ಹಾಡ್ಕಿ ವಿದ್ಯಾ ಕಲ್ತೇವಿ. – ಪಾತಾಳವ್ವ ಮಾಂಗ, ಕುಂಬಾರಹಳ್ಳಿ

ನನಗೀಗ ನಲವತ್ತೈದು ವರ್ಷ ವಯಸ್ಸು. ನಾನು ಈ ವಿದ್ಯಾನ್ನ ನನ್ನ ಮೂವತ್ತನೆ ವರ್ಷ ವಯಸ್ಸಿಗಿ ಕಲ್ತೇನು. ಹದಿನೈದು ವರ್ಷಗಳ ಹಿಂದ ಗುರುಗಳಿಗೆ ಊಟ ಹಾಕಿ ಚಾಪಾನಿ ನೋಡ್ಕೊಂಡು ಮ್ಯಾಲ ತಿಂಗಳಿಗೆ ಐದ ಸಾವಿರ ರೂಪಾಯಿ ಕೊಟ್ಟೇನು. ಬೆಳಗಲಿ ದುರುಗಪ್ಪಾರು ನನ್ನ ಹಾಡ್ಕಿ ಕಲಿಸಿದ ಮೊದಲು ಗುರುಗಳು. ಅವರಿಗಿ ತಿಂಗಳಾ ಐದು ಸಾವಿರ ಪಗಾರ ಕೊಟ್ಟು ಆರ ತಿಂಗಳ ತನಕ ಕಲ್ತೇನು. ಮೊದಲ ಚೌಡಕಿ ಹಾಡಾ ಹೇಳ್ತೀದ್ನಿ, ಕೂಲಿ ಮಾಡ್ತಿದ್ನಿ. ಯಾಕೋ ಇದರಾಗಿಂದ ಜೀವನಾ ಮಾಡಾಕಾಗಲ್ಲ ಅಂತ ಅನಿಸಿದ ಕೂಡ್ಲೆ ಚೌಡಕ್ಯಾಗನ ಹೆಣ್ಣೆಚ್ಚು ಅಂತ ಹಾಡುವ ಹಾಡಾ ಕಲಿತೆ. ಈಗ ಜೀವನ ಚಂದಂಗ ನಡದೈತಿ. – ಸಾಬವ್ವ ಸಿದ್ಧಾಪುರ, ಜಮಖಂಡಿ ತಾಲೂಕು

ಹೀಗೆ ಹರದೇಶಿ-ನಾಗೇಶಿ ಹಾಡುಗಳ ಕಲಿಕೆ ಎನ್ನುವುದು ಕೂಡ ಬಡವರಿಗೆ ಸುಲಭವಾಗಿರಲಿಲ್ಲ. ಹಾಗಂತ ಈ ಹಾಡುಗಳನ್ನು ಶ್ರೀಮಂತರು ಕಲಿಯುತ್ತಾರೆ ಎಂದಲ್ಲ. ಬಡವರು ಮತ್ತು ‘ಜೋಗತಿಯರು’, ‘ಬಸವಿಯರು’ ಮಾತ್ರ ಕಲಿಯುತ್ತಾರೆ. ಬಡತನ ನೀಗುವುದಕ್ಕಾಗಿ ಈ ವಿದ್ಯೆಯನ್ನು ಕಲಿಯಬೇಕೆಂದರೂ, ಸಾಲ ಮಾಡಿಯೇ ಕಲಿಯಬೇಕಾಗಿತ್ತು. ಹರದೇಶಿ-ನಾಗೇಶಿ ಹಾಡುಗಳ ಕಲಿಕೆ ಹಾಗೂ ಕಲಿಸುವಿಕೆ ಆರ್ಥಿಕವಾಗಿ ದುಬಾರಿಯಾಗಲು ಎರಡು ಕಾರಣಗಳನ್ನು ಗುರುತಿಸಬಹುದು. ಮೊದಲನೆಯದು ಹಾಡಿಕೆಯನ್ನು ವೃತ್ತಿ ಪ್ರಧಾನ ವಿದ್ಯೆಯೆಂದೇ ಪರಿಗಣಿಸಿದ್ದು, ವಿದ್ಯೆ ಕಲಿಯಲು ಎಷ್ಟು ದುಡ್ಡನ್ನು ಖರ್ಚು ಮಾಡಿರುತ್ತಾರೆ. ಅದರ ಸಾವಿರ ಸಾವಿರ ಪಟ್ಟು ದುಡ್ಡನ್ನು ಗಳಿಸುತ್ತಾರೆ; ಹಣದ ಜೊತೆಗೆ ಸಾಮಾಜಿಕ ಗೌರವವನ್ನು ಈ ವಿದ್ಯೆ ನೀಡುತ್ತದೆ. ಭೂಮಿಯನ್ನು ಖರೀದಿಸುವಷ್ಟು, ಆಸ್ತಿಯನ್ನು ಹೊಂದುವಷ್ಟು ಆರ್ಥಿಕ ಪರಿಸ್ಥಿತಿಯನ್ನು ಉತ್ತಮ ಪಡಿಸುವ ಶಕ್ತಿ ಹಾಡಿಕೆಗೆ ಇದೆ ಎಂಬ ನಂಬಿಕೆ ಹರದೇಶಿ-ನಾಗೇಶಿ ಹಾಡುಗಾರರ ಸಮುದಾಯದಲ್ಲಿದೆ. ಹೀಗಾಗಿ ಕಲಿಸುವ ಗುರುಗಳು ತಮ್ಮ ತಿಂಗಳ ಖರ್ಚು-ವೆಚ್ಚದೊಂದಿಗೆ ಆಕರ್ಷಕ ಸಂಬಳವನ್ನು ಪಡೆಯಲು ಬಯಸುತ್ತಾರೆ. ಎರಡನೆಯ ಕಾರಣವೆಂದರೆ ಹಾಡನ್ನು ಕಲಿಸುವುದು ಉಸ್ತಾದ್(ಗುರುಗಳು)ರ ಉಪಜೀವನವಾಗಿರುವುದು, ಉಸ್ತಾದ್ ತಮ್ಮ ಕುಟುಂಬ ನಿರ್ವಹಣೆಗಾಗಿ ಈ ತಿಂಗಳ ಸಂಬಳವನ್ನೇ ಅವಲಂಬಿಸಿರುತ್ತಾರೆ. ಉಸ್ತಾದರು ಬಡತನದ ಹಿನ್ನೆಲೆಯನ್ನೇ ಹೊಂದಿದವರಾಗಿದ್ದರಿಂದ, ಅವರು ತಮ್ಮ ಹೊಟ್ಟೆ ಹಾಗೂ ತಮ್ಮನ್ನು ನಂಬಿದ ಕುಟುಂಬದವರ ಹೊಟ್ಟೆಯನ್ನು ತುಂಬಿಸಬೇಕಾಗುತ್ತದೆ. ಹೀಗಾಗಿ ಉಸ್ತದಾರು ತಿಂಗಳ ಸಂಬಳದ ವಿಷಯದಲ್ಲಿ ಕಟ್ಟುನಿಟ್ಟಾಗಿರುತ್ತಾರೆ. ಅವರು ಶಿಷ್ಯೆಯರ ಇಲ್ಲವೆ ಶಿಷ್ಯರ ಬಡತನವನ್ನು ಪರಿಗಣಿಸುವುದಿಲ್ಲ. ಯಾಕೆಂದರೆ ಶಿಷ್ಯೆಯರ ಇಲ್ಲವೇ ಶಿಷ್ಯರ ಬಡತನದ ತೀವ್ರತೆಯನ್ನು ಗುರುಗಳು ಎದುರಿಸುತ್ತಿರುತ್ತಾನೆ. ಹೀಗಾಗಿ ಸಂಬಳವನ್ನು ಲೆಕ್ಕಾಚಾರದಲ್ಲಿಯೇ ಪಡೆಯುತ್ತಾರೆ.

ಹಾಡಿಕೆ ಕಲಿಸುವ ಗುರುಗಳನ್ನು ‘ಉಸ್ತಾದ್’ ಎಂದೇ ಕರೆಯುತ್ತಾರೆ. ಉಸ್ತಾದ ಎನ್ನುವ ಪದವೇ ಈ ವಿದ್ಯೆ ಪುರುಷ ಪ್ರಧಾನವಾಗಿತ್ತು ಎನ್ನುವುದನ್ನು ಸೂಚಿಸುತ್ತದೆ. ಹಾಡುಗಳನ್ನು ಬರೆಯುವುದು ಹಾಗೂ ಬರೆದ ಹಾಡುಗಳನ್ನು ರಾಗದಲ್ಲಿ ಕಲಿಸುವುದನ್ನು ಉಸ್ತಾದ್‌ರು ಮಾಡುತ್ತಿದ್ದರು. ಕಲಿಸಬೇಕೆಂದು ಶಿಷ್ಯೆ/ಷ್ಯರಿಂದ ಆಹ್ವಾನ ಬಂದಾಗ ಮಾತ್ರ ಉಸ್ತಾದರು ಶಿಷ್ಯರಿದ್ದ ಊರಿಗೆ ಹೋಗುತ್ತಿದ್ದರು. ಗುರು ಜಾತಿಯಲ್ಲಿ ‘ಉತ್ತಮ’ ಜಾತಿಗೆ ಸೇರಿದವರಾಗಿದ್ದರೆ; ಶಿಷ್ಯೆ/ಷ್ಯರು ‘ಕೆಳಜಾತಿ’ಗೆ ಸೇರಿದವರಾಗಿದ್ದರೆ ಗುರು ಅಂತಹ ಶಿಷ್ಯೆ/ಷ್ಯರ ಮನೆಯಲ್ಲಿ ಉಳಿಯುತ್ತಿರಲಿಲ್ಲ. ಇಂತಹ ಗುರುಗಳಿಗೆ ಬಾಡಿಗೆ ಮನೆ ಮಾಡಬೇಕಾಗುತ್ತಿತ್ತು. ಅವರ ಅಡುಗೆಗೆ ಹಿಟ್ಟನ್ನು ಒದಗಿಸಬೇಕಾಗುತ್ತಿತ್ತು. ಹೀಗಾಗಿಯೇ ‘ಉಸ್ತಾದ್’ರನ್ನು ಸಾಕುವುದೆಂದರೆ ಬಿಳಿ ಆನೆ ಸಾಕಿದಂತೆ ಎನ್ನುವ ಆಡುನುಡಿ ದಪ್ಪಿನ ಹಾಡುಗಾರರಲ್ಲಿ ಪ್ರಚಲಿತದಲ್ಲಿದೆ. ಸಾಮಾನ್ಯವಾಗಿ ಉಸ್ತಾದ್‌ರು ಹರದೇಶಿ ಇಲ್ಲವೆ ನಾಗೇಶಿ ಎರಡೂ ಹಾಡುಗಳಲ್ಲಿ ಪಾಂಡಿತ್ಯ ಪಡೆದವರಾಗಿರುತ್ತಾರೆ; ಎರಡೂ ಪಂಗಡದವರಿಗೆ ಹಾಡುಗಳನ್ನು ಕಲಿಸುತ್ತಾರೆ. ಶಿಷ್ಯೆ/ಷರ ಮನೆಯಲ್ಲಿ ಇಲ್ಲವೆ ಅವರು ಒದಗಿಸಿದ ಬಾಡಿಗೆ ಮನೆಗಳಲ್ಲಿದ್ದು ಮಾತ್ರ ಹಾಡುಗಳನ್ನು ಕಲಿಸುವುದಿಲ್ಲ. ಗುರುಗಳ ಖರ್ಚು-ವೆಚ್ಛಗಳನ್ನು ನೋಡಿಕೊಳ್ಳಲಾರದಷ್ಟು ಬಡತನದ ಹಿನ್ನೆಲೆಯಿರುವ ಶಿಷ್ಯೆ/ಷ್ಯರಿದ್ದರೆ ಅವರನ್ನು ತಮ್ಮ ಮನೆಯಲ್ಲಿಟ್ಟುಕೊಂಡು ಹಾಡಿಕೆ ಕಲಿಸುತ್ತಾರೆ. ಇಲ್ಲವೆ ಮನೆಯ ಎದುರಿಗೆ ಗುಡಿಸಲು ಹಾಕಿಕೊಂಡು ಇರಲು ಅನುಮತಿ ನೀಡಿ ಅವರು ಬಯಸಿ ಬಂದ ವಿದ್ಯೆಯನ್ನು ಕಲಿಸುತ್ತಾರೆ. ಶಿಷ್ಯೆ/ಷ್ಯರನ್ನು ಮನೆಯಲ್ಲಿಟ್ಟುಕೊಳ್ಳುವುದು ಇಲ್ಲವೆ ಗುಡಿಸಲಲ್ಲಿ ಉಳಿಸುವುದು ಅವರವರ ಜಾತಿ ಶ್ರೇಣೀಕರಣಗಳಿಗನುಗುಣವಾಗಿಯೇ ನಡೆಯುತ್ತದೆ. ಹಾಡುಗಳನ್ನು ಕಲಿಸುವುದಕ್ಕಾಗಿಯೇ ಉಸ್ತಾದ್ ಇರುತ್ತಿದ್ದರು. ಈ ಉಸ್ತಾದ್‌ರು ಮುಸ್ಲೀಂ, ಲಿಂಗಾಯತ, ನಾಯಕ, ಹೊಲೆಯ ಇಲ್ಲವೆ ಮಾದಿಗ ಜಾತಿಗೆ ಸೇರಿದವರಾಗಿರುತ್ತಿದ್ದರು. ಈ ವಿದ್ಯೆಯನ್ನು ಕಲಿಸುವ ಉಸ್ತಾದ್‌ರೂ ಹಾಡಿಕೆಯನ್ನು ಕಲಿಯಲು ಬಯಸಿದವರಲ್ಲಿಗೆ ಹೋಗಬೇಕಾಗಿತ್ತು. ಅಂದರೆ ಕಲಿಸುವ ವೃತ್ತಿಯೂ ಅಲೆಮಾರಿ ವೃತ್ತಿಯಾಗಿತ್ತು, ಜೊತೆಯಲ್ಲಿ ಗುರುಪ್ಯಾಲಾದಂತಹ (ಗುರು ಶಿಷ್ಯರನ್ನು ಒಪ್ಪಿಕೊಳ್ಳುವುದು) ಆಚರಣೆಯು ಇತ್ತು; ಹಾಗೂ ಈಗಲೂ ಈ ಆಚರಣೆ ಚಾಲ್ತಿಯಲ್ಲಿದೆ. ಗುರುಪ್ಯಾಲಾದಂತಹ ಆಚರಣೆ ಹಾಗೂ ಅಲೆಮಾರಿ ಪ್ರಧಾನ ವೃತ್ತಿ ಜೀವನ ಇವುಗಳು ಮಹಿಳೆ ಗುರುವಾಗುವ ಅವಕಾಶವನ್ನು ನಿರಾಕರಿಸಿದ್ದವು. ಹತ್ತೊಂಬತ್ತನೆಯ ಶತಮಾನದ ಆದಿ ಭಾಗದಲ್ಲಿ ಹಾಡಿಕೆಯಲ್ಲಿ ಮಹಿಳೆಯರು ಪ್ರವೇಶಿಸಿದರು. ಕಲಿತ ವಿದ್ಯೆಯಲ್ಲಿ ಪ್ರಾವೀಣ್ಯತೆ ಪಡೆದ ಅವರು ಉಸ್ತಾದ್ ಸ್ಥಾನಕ್ಕೇರಿದರು. ಆದರೂ ಇವರಿಗೆ ಗುರುಪ್ಯಾಲಾದಂತಹ ಆಚರಣೆಯಲ್ಲಿ ಪಾಲ್ಗೊಳ್ಳುವುದಕ್ಕೆ ಹೆಣ್ಣಾದ ಕಾರಣಕ್ಕಾಗಿ ಸಾಧ್ಯ ವಾಗುವುದಿಲ್ಲ. ಗುರುಪ್ಯಾಲಾದಂತಹ ಆಚರಣೆಯೇ ಹೆಣ್ಣನ್ನು ನಿರಾಕರಿಸುತ್ತದೆ. ಹೀಗಾಗಿ ಹರದೇಶಿ-ನಾಗೇಶಿ ಹಾಡಿಕೆ ವಿದ್ಯೆಯಲ್ಲಿ ಪ್ರಾವೀಣ್ಯತೆ ಪಡೆದ ಮಹಿಳೆಯರು ದಪ್ಪು ಇಲ್ಲವೆ ಚೌಡಿಕೆ ಪೂಜಿಸಿ ಹಾಡುಗಳನ್ನು ಕಲಿಸುತ್ತಾರೆ. ಹಾಡಿಕೆ ಸಾಯವ್ವ, ತಿಗಣಿಬಿದರಿ ಗಂಗವ್ವ, ವಿಜಾಪುರದ ಸಿದ್ಧವ್ವನಂತವರು ತಮ್ಮಲ್ಲಿನ ನಾಗೇಶಿ ಹಾಡಿಕೆ ವಿದ್ಯೆಯನ್ನು ಕಲಿಯಲು ಬಯಸಿ ಬಂದವರಿಗೆ ಕಲಿಸಿದ್ದಾರೆ. ಆದರೆ ಅವರೆಂದೂ ಶಿಷ್ಯೆಯರಿದ್ದಲ್ಲಿ ಹೋಗಿ ಕಲಿಸಿಲ್ಲ. ಶಿಷ್ಯೆಯರೇ ಅವರಿದ್ದಲ್ಲಿ ಹೋಗಿ ಕಲಿತಿದ್ದಾರೆ. ಈ ಮಹಿಳಾ ಉಸ್ತಾದ್‌ರು ಶಿಷ್ಯೆಯರನ್ನು ಮಾತ್ರ ಹೊಂದಿದ್ದಾರೆ, ಶಿಷ್ಯರನ್ನಲ್ಲ. ಹರದೇಶಿ-ನಾಗೇಶಿ ವಿದ್ಯೆಯನ್ನು ಕಲಿಯಬೇಕು ಎಂದು ಬಯಸುವ ಪುರುಷರು ಉಸ್ತಾದ್‌ರನ್ನು ಹುಡುಕಿಕೊಂಡು ಹೋಗುತ್ತಾರೆ. ಮಹಿಳಾ ಕಲಾವಿದೆಯರನ್ನು ಗುರು ಎಂದು ಈ ಹಾಡಿಕೆಯನ್ನು ಕಲಿಯ ಬಯಸುವ ಪುರುಷರು ಒಪ್ಪುವುದಿಲ್ಲ.

ಹರದೇಶಿ-ನಾಗೇಶಿ ಹಾಡುಗಳನ್ನು ಕಲಿಸುವ ವೃತ್ತಿ ಸಂಚಾರ ಪ್ರಧಾನವಾದರೂ, ಯಾವಾಗ ಈ ಕಲಿಸುವ ವೃತ್ತಿಯಲ್ಲಿ ಮಹಿಳೆಯರ ಪ್ರವೇಶವಾಯಿತೋ ಆವಾಗ ಶಿಷ್ಯೆಯರೇ ಗುರುವಿದ್ದಲ್ಲಿ ಸಂಚರಿಸಬೇಕಾಯತು. ಮಹಿಳಾ ಗುರುವಿನ ಪ್ರವೇಶದಿಂದಾಗಿ ಉಸ್ತಾದ್ ವೃತ್ತಿಯು ಸ್ಥಾಯಿ ಸ್ಥಿತಿಗೆ ಪರಿವರ್ತಿತವಾಯಿತು.

ಮೊದಮೊದಲು ಗೀಗೀ ಪದ ಕಲಿಸುವವರು ಹಾಗೂ ಕಲಿಯುವವರು ಪ್ರತ್ಯೇಕವಾಗಿ ಇದ್ದಂತೆ ತೋರುತ್ತದೆ. ಗುಲ್ಬರ್ಗಾದಲ್ಲಿ ಏಳು ತಲೆಮಾರಿನ ಹಿನ್ನೆಲೆಯುಳ್ಳ ಕವಿ ಮನೆತನ ಇದೆ. ಸಾವಳಗಿ ಮೊಹಮ್ಮದಸಾಬರ ಕುರಿತು ಹರಿಶ್ಚಂದ್ರ ದಿಗ್ಸಂಗಿಕರ್ ಅವರು ಸಂಶೋಧನಾ ಅಧ್ಯಯನವನ್ನು ನಡೆಸಿ ಕೃತಿ ಪ್ರಕಟಿಸಿದ್ದಾರೆ. ಮೊದಲು ಪಚ್ಚಾಸಾಬ್, ಮುನ್ನಾಸಾಬ್, ಮುಕದುಂಸಾಬ್, ಷೇಕ್ ದಾವನ್‌ಸಾಬ್, ಹಸನ್‌ಸಾಬ್, ಹುಸೇನ್ ಸಾಬ್, ಮೋದಿನ್‌ಸಾಬ್, ಮೊಹಮ್ಮದ್‌ಸಾಬ್‌ ಹೀಗೆ ಆರು ತಲೆಮಾರಿನ ಕವಿಗಳು ಆಗಿಹೋಗಿದ್ದು ಪ್ರಸ್ತುತದಲ್ಲಿ ಮೋದಿನ್‌ಸಾಬರು ಹಾಡುಗಳನ್ನು ಕಲಿಸುತ್ತಿದ್ದಾರೆ. ಇವರೆಂದೂ ಪ್ರದರ್ಶನ ಕಲೆಯಲ್ಲಿ ಪಾಲ್ಗೊಳ್ಳುವುದಿಲ್ಲ. ಮೊಹಮ್ಮದ್ ಸಾಬರು ಪುರಾಣಗಳನ್ನು ರಾಮಾಯಣ-ಮಹಾಭಾರತ ಗಳನ್ನು ಹೇಗೆ ಓದಬೇಕು; ಇಂತಹ ಈ ಸಾಹಿತ್ಯವನ್ನು ಓದಿಕೊಂಡು ಹೇಗೆ ಪದ್ಯವನ್ನು ಬರೆಯಬೇಕು ಎನ್ನುವುದನ್ನು ಹೇಳಿಕೊಡುತ್ತಿದ್ದಂತೆ. ಸಾಹಿತ್ಯ ರಚನೆಯಲ್ಲಿ ತನ್ಮಯತೆಯನ್ನು ಪಡೆದಿರುವ ಈ ಕವಿಗಳು ಸಂತರಂತೆ ಬದುಕಿದವರು. ಸ್ವಂತದ ಮಕ್ಕಳನ್ನು ಮೋಹದ ಮಕ್ಕಳೆಂದು ಕರೆಯುವ ಇವರು; ತಮ್ಮ ವಿದ್ಯೆಯನ್ನು ಕಲಿಯಲು ಬಂದವರನ್ನೆಲ್ಲ ನಿಜವಾದ ಮಕ್ಕಳೆಂದು ಪರಿಭಾವಿಸುತ್ತಿದ್ದರು. ತಮ್ಮನ್ನು ‘ಇಷ್ಟ ಪುತ್ರರು’ ಎಂದು ಕರೆದುಕೊಳ್ಳುತ್ತಾರೆ. ಹರದೇಶಿ-ನಾಗೇಶಿ ಸಾಹಿತ್ಯ ರಚನೆಯನ್ನು ಹಾಗೂ ಅದನ್ನು ಕಲಿಸುವುದನ್ನು ಮಾತ್ರ ಉಸ್ತಾದ್‌ರು ವೃತ್ತಿ ಮಾಡಿಕೊಂಡಿದ್ದರು.

ಗುಲ್ಬರ್ಗಾದ ಮುತ್ತಜ್ಜ ಅಲ್ಲಿಸಾಬ್, ಅಜ್ಜ ಸುಲ್ತಾನ್ ಖಾನ್, ಅಪ್ಪ ಇಸ್ಮಾಯಿಲ್ ಸಾಬ್ ಹಾಗೂ ಮಗ ನಸಿರುದ್ದೀನ್‌ಸಾಬ್‌ರು ಪ್ರದರ್ಶನ ಕಲೆಯಲ್ಲಿ ಪಾಲ್ಗೊಳ್ಳುವುದು, ಈ ಹಾಡುವ ವೃತ್ತಿಯನ್ನು ಕಲಿಯ ಬಯಸಿದವರಿಗೆ ಕಲಿಸುವುದು ಹಾಗೂ ಸಾಹಿತ್ಯ ರಚನೆ ಮಾಡುವುದು ಮೂರು ವೃತ್ತಿಗಳನ್ನು ಯಶಸ್ವಿಯಾಗಿ ತಲೆ ತಲಾಂತರಗಳಿಂದ ನಿಭಾಯಿಸುತ್ತಾ ಬಂದಿದ್ದಾರೆ. ‘ಉಸ್ತಾದ್’ರಾದರೆ ತಾವು ರಚಿಸಿದ ಸಾಹಿತ್ಯವನ್ನು ದಪ್ಪಿನ ಹಾಡಿಗೆ ಹೊಂದಿಸಿ ಹಾಡುವುದನ್ನು ಹೇಳಿಕೊಡುವುದರೊಂದಿಗೆ ಸಾಹಿತ್ಯ ರಚನೆಯ ತಂತ್ರಗಳನ್ನು ಹೇಳಿಕೊಡುತ್ತಾರೆ. ಆದರೆ ಪ್ರದರ್ಶನ ಕಲೆಯಲ್ಲಿ ಪಾಲ್ಗೊಳ್ಳುವವರು ಗುರುಗಳಾದರೆ ತಾವು ರಚಿಸಿದ ಇಲ್ಲವೆ ಬೇರೆ ಕವಿಗಳು ರಚಿಸಿದ ಗೀಗೀ ಸಾಹಿತ್ಯವನ್ನು ಮಾತ್ರ ಹೇಳಿಕೊಡುತ್ತಾರೆ. ಆದರೆ ಸಾಹಿತ್ಯ ರಚನೆಯ ತಂತ್ರಗಳನ್ನು ಹೇಳಿಕೊಡುವುದಿಲ್ಲ. ಹೀಗಾಗಿಯೇ ‘ಉಸ್ತಾದ್’ರು ಇತರ ಗುರುಗಳಿಗಿಂತ ಭಿನ್ನವಾಗುತ್ತಾರೆ. ಮೊದಮೊದಲು ಹರದೇಶಿ-ನಾಗೇಶಿ ಹಾಡುವ ವೃತ್ತಿಯಲ್ಲಿ ಉಸ್ತಾದ್‌ರಿಗೆ ಪ್ರತ್ಯೇಕವಾದ ಹಾಗೂ ವಿಶೇಷವಾದ ಸ್ಥಾನಮಾನಗಳಿದ್ದವು. ಯಾವಾಗ ಪ್ರದರ್ಶನ ನೀಡುತ್ತ ನೀಡುತ್ತಾ ಪಾಂಡಿತ್ಯವನ್ನು ಪಡೆದವರು ಹಾಡಿಕೆಯ ಜೊತೆಯಲ್ಲಿ ಉಸ್ತಾದ್ ವೃತ್ತಿಯನ್ನು ನಿರ್ವಹಿಸಲು ಪ್ರಾರಂಭಿಸಿದರೋ ಉಸ್ತಾದ್ ವೃತ್ತಿಯನ್ನೇ ಅವಲಂಬಿಸಿದವರಿಗೆ ಆರ್ಥಿಕ ಹಿನ್ನಡೆ ಉಂಟಾಯಿತು. ಇಷ್ಟಾದರೂ ಉಸ್ತಾದ್ ವೃತ್ತಿಯನ್ನು ಮಾತ್ರ ನಿರ್ವಹಿಸುವವರು ಈಗಲೂ ಇದ್ದಾರೆ. ಇವರು ಇಡೀ ಹರದೇಶೀ-ನಾಗೇಶಿ ಹಾಡುಗಾರರಿಗೆ ಗುರುಗಳಾಗುತ್ತಾರೆ, ಹಾಡುಗಾರರು ಇವರಿಗೆ ಶಿಷ್ಯರಾಗುತ್ತಾರೆ.

ಯಾವ ವಿದ್ಯೆ ಗುರು ಪರಂಪರೆಯನ್ನು ಹೊಂದಿರುತ್ತದೆಯೋ ಆ ವಿದ್ಯೆ ಮಹಿಳೆಯನ್ನು ನಿರಾಕರಿಸುತ್ತಿರುತ್ತದೆ. ಅದು ಜನಸಾಮಾನ್ಯರಲ್ಲಿ ಪ್ರಚಲಿತವಿರುವ ಹಾಗೂ ಮಾನ್ಯತೆ ಪಡೆದ ವಿದ್ಯೆಯಾಗಿರಬಹುದು, ವಿದ್ವತ್ ಪ್ರಪಂಚದಲ್ಲಿ ಗೌರವ ಪಡೆದ ವಿದ್ಯೆಯಾಗಿರಬಹುದು- ಅಲ್ಲಿ ಮಹಿಳೆ ತಿರಸ್ಕರಿಸಲ್ಪಡುತ್ತಾಳೆ. ಪಾತರದವರಲ್ಲಿಯೂ ನೃತ್ಯ ಹಾಗೂ ಸಂಗೀತ ವಿದ್ಯೆಯನ್ನು ಹೇಳಿಕೊಡುವವರು ಪುರುಷರಾಗಿರುತ್ತಾರೆ. ಯಾವುದೇ ವೃತ್ತಿಯಾಗಿರಬಹುದು ಗುರುವಾಗಿರುವವರು ಪುರುಷರೇ ಆಗಿರುತ್ತಾರೆ. ಸಾಮಾನ್ಯವಾಗಿ ಪುರುಷ ಪ್ರಧಾನವಾಗಿ ಗುರುತಿಸಿಕೊಂಡ ವೃತ್ತಿಗಳಲ್ಲಿ ಗುರು-ಶಿಷ್ಯರು ಇಬ್ಬರೂ ಪುರುಷರೇ ಆಗಿರುತ್ತಾರೆ. ಪಾತರದವರಲ್ಲಿ ವಿದ್ಯೆಯನ್ನು ಕಲಿಸುವವರು ಪುರುಷರಾದರೆ, ಕಲಿಯುವವರು ಮಹಿಳೆಯರಾಗುತ್ತಾರೆ. ಯಾಕೆಂದರೆ ಪಾತರದ ಕುಟುಂಬದಲ್ಲಿನ ಹುಡುಗಿಯರಿಗೆ ಗಂಡಾ ಕಟ್ಟಿದ ನಂತರವೇ ಸಂಗೀತ, ಇಲ್ಲವೇ ನೃತ್ಯ ವಿದ್ಯೆಯನ್ನು ಹೇಳಿಕೊಡಲಾಗುತ್ತದೆ. ಗಂಡಾ ಕಟ್ಟಿಸಿಕೊಳ್ಳುವುದೆಂದರೆ ಹುಡುಗಿಯನ್ನು ಸಂಗೀತ ವಾದ್ಯಗಳೊಂದಿಗೆ ವಿಶೇಷವಾಗಿ ತಬಲಾದೊಂದಿಗೆ ಮದುವೆ ಮಾಡುತ್ತಾರೆ. ಪಾತರದವಳು ಯಾವ ದೇವಸ್ಥಾನದಲ್ಲಿ ಸೇವೆ ಸಲ್ಲಿಸುತ್ತಿರುತ್ತಾಳೋ ಆ ದೇವರನ್ನೇ ಗಂಡನೆಂದು ಹೇಳಿಕೊಳ್ಳಬೇಕಾಗುತ್ತದೆ. ಪಾತರದವರಲ್ಲಿನ ಗುರುಗಳ ಕರ್ತವ್ಯ ದೇವರ ಸೇವೆಗೆಂದು ಮೀಸಲಿದ್ದ ಹುಡುಗಿಗೆ ಸಂಗೀತವನ್ನು, ನೃತ್ಯವನ್ನು ಕಲಿಸುವುದಾಗಿತ್ತು. ಹೀಗಾಗಿ ಇಲ್ಲಿ ಗುರು ಪರಂಪರೆ ಪುರುಷ ಪ್ರಧಾನವಾದುದಾದರೆ, ಶಿಷ್ಯ ಪರಂಪರೆ ಮಹಿಳಾ ಪ್ರಧಾನವಾದುದು. ಆದರೆ ಹರದೇಶಿ-ನಾಗೇಶಿ ವಿದ್ಯೆ ಕಲಿಸುವ ಪೂರ್ವದಲ್ಲಿ ನಡೆಯುವ ಗುರುಪ್ಯಾಲಾದಂತಹ ಆಚರಣೆಯು ಮಹಿಳೆ ಗುರುವಾಗುವುದನ್ನು ಹಾಗೂ ಶಿಷ್ಯೆಯಾಗುವುದನ್ನು ಎರಡನ್ನೂ ನಿರಾಕರಿಸುತ್ತದೆ. ಅಲ್ಲದೆ ಗುರುವಾಗುವವರು ಓದು ಬಲ್ಲವರಾಗಿರಬೇಕಾಗುತ್ತದೆ; ಸಾಹಿತ್ಯ ಜ್ಞಾನ ಇರಬೇಕಾಗುತ್ತದೆ; ಅನುಭಾವದ ಅರಿವು ಇರಬೇಕಾಗುತ್ತದೆ. ಒಟ್ಟಾರೆಯಾಗಿ ಹರದೇಶಿ-ನಾಗೇಶಿ ವಿದ್ಯೆಯು ಜ್ಞಾನಕೇಂದ್ರಿತವಾಗಿ ಹಾಗೂ ಅನುಭಾವ ಕೇಂದ್ರಿತವಾಗಿ ಗುರುತಿಸಲ್ಪಟ್ಟಿದ್ದರಿಂದ ಮಹಿಳೆ ನಿರಾಕರಿಸಲ್ಪಟ್ಟಿದ್ದಾಳೆ. ಹಾಡಿಕೆ ಸಾಮಾಜಿಕ ಬೋಧನಾ ವೃತ್ತಿಯಾಗಿ ಗುರುತಿಸಲ್ಪಟ್ಟಿದೆ. ಸಾಮಾಜಿಕ ಬೋಧನಾ ಕೆಲಸವು ಪುರುಷ ಕೇಂದ್ರಿತವಾಗಿಯೇ ಪರಿಗಣಿಸಲ್ಪಟ್ಟಿದೆ. ಕೇಳಿಸಿ ಕೊಳ್ಳುವುದು, ನಿರ್ದೇಶನದಂತೆ ನಡೆಯುವುದು ಹೆಣ್ಣಿನ ಬಾಧ್ಯತೆಯಾಗಿ ನಿರ್ವಚಿಸಲ್ಪಟ್ಟರೆ; ಬೋಧಿಸುವುದು ಹಾಗೂ ನಿರ್ದೇಶಿಸುವುದು ಗಂಡಸಿನ ಹಕ್ಕಾಗಿ ನಿರ್ವಚಿಸಲ್ಪಟ್ಟಿದೆ. ಹೆಣ್ಣಿನಿಂದ ನಿರೀಕ್ಷಿಸಲ್ಪಡುವ ಬಾದ್ಯತೆಗಳು, ಗಂಡಿನ ಹಕ್ಕುಗಳು-ಇವುಗಳಗಳು ಯಾರು ಯಾವ ವೃತ್ತಿಯಲ್ಲಿ ಹಾಗೂ ಸ್ಥಾನದಲ್ಲಿರಬೇಕೆಂಬುದನ್ನು ನಿರ್ದೇಶಿಸುತ್ತವೆ. ಗಂಡಾಕಟ್ಟುವುದಕ್ಕೂ ಪಾತರದವಳಾಗುವುದಕ್ಕೂ ಸಂಬಂಧವಿದ್ದಂತೆ ‘ಜೋಗತಿ’ ಇಲ್ಲವೆ ‘ಬಸವಿ’ ಯಾಗುವುದಕ್ಕೂ ಹಾಡಿಕೆ ಕಲಿಯುವುದಕ್ಕೂ ನೇರವಾದ ಸಂಬಂಧವಿಲ್ಲ. ಪಾತರದವರಲ್ಲಿ ಹುಡುಗಿಯೊಬ್ಬಳು ಗಂಡಾಕಟ್ಟಿದ ನಂತರವೇ ಪಾತರದವಳಾಗುತ್ತಾಳೆ. ಆದರೆ ಗುರುಪ್ಯಾಲಾದಂತಹ ಆಚರಣೆಗೊಳಗಾದ ನಂತರದಲ್ಲಿ ಹುಡುಗಿಯೊಬ್ಬಳು ‘ಜೋಗತಿ’ ಇಲ್ಲವೆ ‘ಬಸವಿ’ಯಾಗುವುದಿಲ್ಲ. ಈಗಾಗಲೇ ಹೇಳಿದಂತೆ ಗುರುಪ್ಯಾಲದಂತಹ ಆಚರಣೆ ಮಹಿಳೆಯರನ್ನು ನಿರಾಕರಿಸುತ್ತದೆ. ಹೀಗಾಗಿ ‘ಜೋಗತಿ’ಯಾದವಳು ಇಲ್ಲವೆ ‘ಬಸವಿ’ಯಾದವಳು ದಪ್ಪು ಪೂಜಿಸಿ ಹಾಡಿನ ಕಲಿಕೆಗೆ ತೊಡಗುತ್ತಾಳೆ. ಅಂದರೆ ಹಾಡಿಕೆ ಮಹಿಳೆಯರು ದಪ್ಪು ಇಲ್ಲವೆ ಚೌಡಿಕೆ ಹಿಡಿಯುವ ಮುಂಚೆಯೇ ‘ಜೋಗತಿ’ಯರಾಗಿರುತ್ತಾರೆ, ‘ಬಸವಿ’ಯರಾಗಿರುತ್ತಾರೆ. ಮೇಲ್ಜಾತಿಗಳಲ್ಲಿ ಪರದಾ ಪದ್ಧತಿ ಇರುವುದರಿಂದ ಈ ಮಹಿಳೆಯರಾರೂ ಪ್ರದರ್ಶನ ಕಲೆಗಳಲ್ಲಿ ಭಾಗಿಯಾಗಲು ಬರುವುದಿಲ್ಲ. ಹೀಗಾಗಿಯೇ ಇಂತಹ ಪ್ರದರ್ಶನ ಕಲೆಗಳಲ್ಲಿ ‘ಜೋಗತಿಯರು’, ‘ಬಸವಿಯರು’ ಪಾಲ್ಗೊಳ್ಳುತ್ತಾರೆ. ರಂಗಭೂಮಿಯನ್ನು ಆಕರ್ಷಕವಾಗಿಸಲು ಹೆಣ್ಣು ಪಾತ್ರಗಳಿಗೆ ‘ಪಾತರದವರನ್ನು’, ‘ಜೋಗತಿ’ಯರನ್ನು ಬಳಸಿಕೊಂಡಂತೆ, ಹರದೇಶಿ-ನಾಗೇಶಿ ವೃತ್ತಿಯನ್ನು ಆಕರ್ಷವಾಗಿಸಲು ‘ಜೋಗತಿ’ಯರನ್ನು, ‘ಬಸವಿ’ಯರನ್ನು ಬಳಸಿಕೊಳ್ಳಲಾಯಿತು. ತಮ್ಮ ವೃತ್ತಿಯನ್ನು ಆಕರ್ಷಕವಾಗಿಸಲು ಹರದೇಶಿ-ನಾಗೇಶಿ ಹಾಡುವ ದಲಿತ ಸಮುದಾಯದ ಪರುಷರು ಹಾಗೂ ಮೇಲ್ಜಾತಿಯ ಪುರುಷರು ‘ದೇವದಾಸಿ’ ಮಹಿಳೆಯರನ್ನು ಎಳೆದು ತಂದರು. ಈ ಕಲೆಯಿಂದಾಗಿ ‘ದೇವದಾಸಿ’ ಎನ್ನುವ ಹೀಗಳಿಕೆಯಿಂದ ಮುಕ್ತಿ ಹೊಂದುವಿರಿ ಎಂದು ಈ ಮಹಿಳೆಯರಿಗೆ ನಂಬಿಸಿದರು. ಹರದೇಶಿ-ನಾಗೇಶಿ ಹಾಡುಗಾರಿಕೆಯಲ್ಲಿ ಪ್ರವೇಶಿಸಿದ ಮಹಿಳೆಯರನ್ನು ಊಳಿಗಮಾನ್ಯ ಶಾಹಿ ಮೌಲ್ಯಗಳು ಪೋಷಿಸುತ್ತಾ ಬಂದಿವೆ. ಹೀಗೆ ಹರದೇಶಿ-ನಾಗೇಶಿ ಹಾಡುಗಾರಿಕೆಯ ವೃತ್ತಿಯಲ್ಲಿ ಪ್ರವೇಶಿಸಿದ ಮಹಿಳೆಯರು ಪರ್ಯಾಯ ಆರ್ಥಿಕತೆಯನ್ನು ಕಟ್ಟಿಕೊಳ್ಳಲು ಪ್ರಯತ್ನಿಸಿದರು. ಅದರಲ್ಲಿ ಯಶಸ್ವಿಯಾದರು ಕೂಡ. ಹಾಡುಗಾರಳಾಗಿ ಗುರುತಿಸಿಕೊಂಡಂತೆ ‘ಉಸ್ತಾದ್‌’ಳಾಗಿ ಗುರುತಿಸಿಕೊಳ್ಳಲಾಗಲಿಲ್ಲ. ಹರದೇಶಿ-ನಾಗೇಶಿ ಹಾಡುಗಾರಿಕೆಯ ಕ್ಷೇತ್ರ ಮಹಿಳೆಯನ್ನುಕಲಾಕಾರಳೆಂದು ಒಪ್ಪಕೊಂಡಿತು. ನಾಟಕಗಳಲ್ಲಿ, ಚೌಡಿಕೆಯಲ್ಲಿ, ಸಂಗೀತ, ನೃತ್ಯಗಳಲ್ಲಿ ಮಹಿಳೆಯನ್ನು ಕಲಾಕಾರಳೆಂದು ಒಪ್ಪಿಕೊಂಡ ಚರಿತ್ರೆಯಿತ್ತು; ‘ಉಸ್ತಾದ್’ಳೆಂದು ಇಲ್ಲವೆ ‘ಕಲಾ ಗುರು’ಗಳೆಂದು ಒಪ್ಪಿಒಂಡ ಚರಿತ್ರೆಯಿಲ್ಲ. ಹೀಗಾಗಿಯೇ ಹರದೇಶಿ-ನಾಗೇಶಿ ಹಾಡುಗಾರಿಕೆಯಲ್ಲಿ ಹಾಡುಗಾರಳು, ಕಲಾಕಾರಳು ಎಂದು ಗುರುತಿಸಿಕೊಂಡಷ್ಟು ಸುಲಭವಾಗಿ ಉಸ್ತಾದ್ ಅಥವಾ ಕಲಾ ಗುರುವಾಗಿ ಗುರುತಿಸಿಕೊಳ್ಳಲಾಗಲಿಲ್ಲ. ಬೋಧನೆ, ಸಾಹಿತ್ಯಜ್ಞಾನ, ಅನುಭಾವ, ಓದು ಇವೆಲ್ಲವೂ ಉಸ್ತಾದ್ ಆಗುವ ಅರ್ಹತೆಗಳು; ಈ ಎಲ್ಲ ಅರ್ಹತೆಗಳು ಪುರುಷ ಕೇಂದ್ರಿತವಾಗಿಯೇ ಗುರುತಿಸಿ ಗೌರವಿಸಲ್ಪಟ್ಟಿದ್ದವೆ. ಹೀಗಾಗಿ ಹರದೇಶಿ-ನಾಗೇಶಿ ಹಾಡುಗಾರಿಕೆಯ ಕ್ಷೇತ್ರದಲ್ಲಿ ಮಹಿಳೆಯರು ಉಸ್ತಾದ್‌ರಾಗಿ ಪರಿಗಣಿಸಲ್ಪಡಲಿಲ್ಲ.

ಆರಂಭದ ವೃತ್ತಿ ಜೀವನದ ಸಮಸ್ಯೆಗಳು

ಹಾಡು ಕಲಿತ ತಕ್ಷಣ ಎಲ್ಲ ಕಡೆಗಳೂ ಹಾಡುಗಾರಿಕೆಗೆ ಆಹ್ವಾನ ಬರುತ್ತದೆ ಎನ್ನಲಾಗುವುದಿಲ್ಲ. ತಾವು ಹಾಡುಗಾರರೆಂದು ಗುರುತಿಸಿಕೊಳ್ಳಲು ಬಹಳಷ್ಟು ಶ್ರಮಪಡುತ್ತಾರೆ. ಈ ಕುರಿತಂತೆ ಹರದೇಶಿ-ನಾಗೇಶಿ ಮಹಿಳಾ ಹಾಡುಗಾರರ ಅನುಭವವನ್ನು ಪರಿಶೀಲಿಸುವ ಜರೂರಿದೆ.

“ಹಾಡ್ಕಿ ಕಲ್ತಕೂಡ್ಲೆ ನಮ್ಮನ್ನಾರೂ ಹಾಡಾಕ ಬರ್ರಿ ಅಂತ ಎಲಿಕೊಡಾಕ ಬರೂದಿಲ್ಲ. ಕ್ಯಾಳೆಂಡರಿನ್ಯಾಗ ಎಂದ ಜಾತ್ರಿಯಿದೆ ಅಂತ ಗೊತ್ತಮಾಡಿಕೊಂಡು ನಾವs ಅಲ್ಲಿ ಹಾಡ್ಕಿಗಿ ಹೋಗತಿದ್ವಿ. ಹಾಡ್ತೀವಿ ಅಂತ ಹ್ಯಾಂಗ ಪರಿಚಾರ (ಪ್ರಚಾರ) ಆಗ್ಬೇಕು? ಎರಡು ವರ್ಷತನಾ ಪಗಾರ ಇಲ್ದ ಹಾಡೇನಿ. ಚಂದಂಗ ಹಾಡಿದ್ರ ಐನೂರು, ಎಂಟನೂರು ಭಕ್ಷೀಸ ಬರೂದು. ಹಾಡ್ಕಿ ಮುಗದಿಂದ ಜಾತ್ರಿಯವರು ಪಟ್ಟ್ಯಾಗ (ದೇವರಿಗೆ ಒಡೆದ ತೆಂಗಿನಕಾಯಿಯ ಅರ್ಧ ಹೊಳಿಕೆ) ಎರಡನೂರು, ಮುನ್ನೂರು ರೂಪಾಯಿ ಇಟ್ಟು ಕೊಡ್ತಾರು. ಇಷ್ಟ ಆದಾಯದಾಗ ನಾವು ಜೀವನಾ ಮಾಡಬೇಕಾಗಿತ್ತು. ನನ್ನ ತಮ್ಮನs ಸೂರು(ತುಂತುಣಿ) ಹಾಕ್ತಿದ್ದs. ಕಾಕಾನ ತಾಳಾ ಬಾರಿಸತಿದ್ದ. ಮೂವಾರು ಒಂದು ಗುಂಪಾಗಿ ರೊಕ್ಕ ಬಂದರೇನು, ಬಿಟ್ಟರೇನು, ಬಂದಷ್ಟರಾಗ ಹಂಚಕೊಂಡು ಜೀವನಾ ಮಾಡ್ತಿದ್ದೀವಿ” – ಪಾತಾಳ ಮಾಯವ್ವ

“ಕನಕವಾಡಿ ಸಾಯವ್ವ ನಮ್ಮಜ್ಜಿ. ಆಕಿ ನಮ್ಮನ್ಯಾಗ ಇದ್ದು ಹಾಡ್ಕಿ ಹೇಳಿಕೊಟ್ಟಳು. ನನ್ನ ಹಾಡ್ಕಿ ಪರಿಚಾರ ಆಗಾಕ ಕಷ್ಟ ಏನೂ ಆಗ್ಲಿಲ್ಲ. ಸಾಯವ್ವಜ್ಜಿ ಹಾಡಕ್ಯಾಗ ಪ್ರಸಿದ್ಧಿ ಪಡೆದಿದ್ದಳು. ಆಕಿಗಿ ಎಲಿ(ಆಹ್ವಾನ) ಬಂದಿದ್ದನ್ನು ನನ್ನ ಮೊಮ್ಮಗಳು ಚಂದಂಗ ಹಾಡ್ತಾಳು ಅಂದು ನನಗ ಎಲಿ ಕೊಡಸ್ತಿದ್ದಳು. ಹೀಂಗಾಗಿ ಹಾಡ್ಕಿ ಚಾಲೂ ಮಾಡಿದಾಗಿಂದ ಪಗಾರ ಬರ್ತಾಯಿತ್ತು. ನಾನೂ ಹಾಡಕ್ಯಾಗ ಪ್ರಸಿದ್ದಿ ಪಡದಿಂದ ಹೆಚ್ಚು ಪಗಾರ ಬರಾಕ ಚಾಲೂ ಆಯ್ತು.” – ಹಲಿಯಾಳ ರತ್ನವ್ವ

“ಹಾಡ ಕಲಿತಕೂಡ್ಲೆ ಚಾಜಾ ಕೊಟ್ಟು ನಮ್ನನ್ನ ಹಾಡಕಂತ ಕರಿಯಾಕ ಬರಲ್ಲ. ಕರಿಯದೆ ಆರು ವರ್ಷದತನ ಜಾತ್ರಿ ಇದ್ದಲ್ಲಿಗೆ ಹಾಡಿಕೆಗೆ ಹೋಗೇನಿ. ಸೂರಿನವರಿಗೂ, ತಾಳದವರಿಗೂ ನನ್ನ ಕೈಲಿಂದ ಕೂಲಿ ಕೊಟ್ಟು ಕರಕೊಂಡುಹೋಗೇನಿ. ಜಾತ್ರೆಯವರು ಕೊಟ್ಟರೆ ಕೊಟ್ಟರು; ಬಿಟ್ಟರೆ ಬಿಟ್ಟರು. ಜಾತ್ರ್ಯಾಗ ಭಕ್ಷೀಸು ಕೂಡ ಒಂದು ರೂಪಾಯಿ, ಎರಡು ರೂಪಾಯಿ ಕೊಡತಿದ್ದರು. ಭಕ್ಷೀಸು ಎಲ್ಲಾ ಸೇರಿ ಹತ್ತು ಇಲ್ಲಾ ಇಪ್ಪತ್ತು ರೂಪಾಯಿ ಆಗೂದು. ಹಿಂದ ಮ್ಯಾಳದವರ್ನ ಕರಕೊಂಡ ಹೋಗಾಕ ಊರಿನ ಗೌಡತೇರ ಕಡಿಯಿಂದ ಸಾಲಾ ಕೇಳ್ತಿದ್ದೆ. ಯಾವ ಊರಿಗಿ ಹೋಗ್ತೀನಿ ಅನ್ನುದರ ಮೇಲೆ ಸಾಲಾ ಕೇಳ್ತೀದ್ನಿ. ಸಮೀಪ ಇದ್ರ ಕಡಿಮಿ ಸಾಲಾ, ದೂರ ಇದ್ರ ಹೆಚ್ಚ ಸಾಲಾ ಕೇಳ್ತಿದ್ನಿ. ಇಪತ್ತ ವರ್ಷದ ಹಿಂದ ಗುಲ್ಬರ್ಗಾ ಹೋಗುವಾಗ ಐವತ್ತು ರೂಪಾಯಿ ಸಾಲಾ ಮಾಡಿದ್ನಿ, ಈ ಸಾಳಾ ಬಾಳs ವಜ್ಜಿ ಆಗಿತ್ತು. ಆದ್ರೂ ಕಲಿ ಮ್ಯಾಲಿನ ಪ್ರೀತಿ ಹೋಗ್ಲಿಲ್ಲ. ಊಟಾ ಮಾಡಬೇಕಂದ್ರ ರೊಕ್ಕಾ ಕೊಡಬೇಕಾಗಿತ್ತು. ಅದಕ್ಕಂತ ಅಡವ್ಯಾಗ ಬೆಳದ ಹಣ್ಣ ತಿಂದು ಹೊಟ್ಟಿ ತುಂಬಿಸಿಕೊಂಡೇನಿ. ಮೊದಲು ನಾವು ಪಜೀತಿ ಪಟ್ಟಿದ್ದು ನೆನೆಸಿಕೊಂಡ್ರೆ ಹೊಟ್ಯಾಗ ಸಂಕಟ ಆಗತ್ತ ತಂಗಿ. ಮುಂದೊಂದ ದಿನಾ ಈ ಹಾಡಿಕೆನs ನಮಗ ಆಸ್ತಿ ಮಾಡುವಂಗ ದುಡಿಮಿ ಕೊಡ್ತದಂತ ಎಷ್ಟ ಕಷ್ಟ ಆದ್ರೂ ಪರಿಚಾರ ಆಗುತನಕ ಪಗಾರ ಇಲ್ದ ಹಾಡೇನಿ.” – ಗಣಿಯಾರ ರೇಣುಕಾ

“ನನಗ ಹಾಡ್ಕಿ ಕಲಿಯಾಕೂ ಊರಿನ ಜನಾನ ರೊಕ್ಕ ಕೊಟ್ರು. ನಮ್ಮಾವ ರಾಮಣ್ಣನ ನನ್ನ ಹಾಡಿಗಿ ಸೂರ ಹಾಕ್ತಿದ್ದ. ತಾಳದವರಿಗಿ ದುಡ್ಡು ಕೊಟ್ಟು ಕರಕೊಂಡು ಹೋಗ್ತಿದ್ವಿ. ಪ್ರಚಾರ ಆಗಬೇಕಂತ ಹಂಗs ಕರಿಲಾರ್ದ ಐದ ವರ್ಷ ಮಟಾ ಹಾಡೇನಿ. ದೂರದ ಊರಿಗಿ ಹೋಗಬೇಕಂದ್ರ ಸಾಲಾ ಮಾಡ್ತಿದ್ದ್ಯಾ. ಬಸ್ಚಾರ್ಜ್ಗಿ ದುಡ್ಡು ಬೇಕಿತ್ತು. ತಾಳದವರಿಗಿ ದುಡ್ಡ ಕೊಡಬೇಕಿತ್ತು. ಹೋಟೇಲ್ನಾಗ ಚಾಪಾನಿಗಂತ ಒಂದ ಸ್ವಲ್ಪ ಖರ್ಚು ಆಗೂದು. ಹೀಂಗs ಮಾಡಿದ ಸಾಲಾ ಐದು ನೂರು ಆಯ್ತು. ಸಾಲ ಬಾಳs ವಜ್ಜ ಆದ ಕೂಡ್ಲೆ ಬಬಲೇಶ್ವರ ಊರ ಬಿಟ್ಟಬಿಟ್ಟ್ವೆ. ಬಾಂಬೆ ಹೋದ್ವಿ. ನಾಲ್ಕೈದು ದಿನಾ ಗೊಲ್ಲರ ಓಣ್ಯಾಗ ನಿಂತ್ವಿ. ಆ ಒಣಿಗಿ ದಾರಾಯಿ ಓಣಿ ಅಂತಾರ. ಊಟ ಇಲ್ಲಾ, ಚಾಪಾನಿ ಇಲ್ಲ. ಹಂಗs ಉಪವಾಸ ನೀರ ಕುಡಕೊಂತ ಇದ್ವಿ. ಖೂನ ಇರ್ಲಾರ್ದ ನಮ್ಮನ್ನ ನೋಡಿ ಕೆಲವರು ಇಲ್ಲ್ಯಾಕ ನಿಂತಿರಿ ಹೋಗ್ರಿ ಅಂತ ಬೈದ್ರು. ನಮ್ಮ ಪರವಾಗಿ ಒಬ್ಬ ನಿಂತಾ. ಅವಗ ಸಾಯಿಬಣ್ಣ ಅಂತಿದ್ರು. ಅವ್ನು ತಮ್ಮ ಮನಿಗಿ ಕರಕೊಂಡುಹೋಗಿ ಅಂಗಳಾ ತೋರ್ಸಿ, ಹಿಟ್ಟು, ಬ್ಯಾಳಿ, ಬೆಲ್ಲ ಕೊಟ್ಟು ಅಡಗಿ ಮಾಡ್ಕೊಂಡು ಊಟಾ ಮಾಡ್ರಿ ಅಂತ ಹೇಳ್ದಾ, ಹಸಿದು ನಿತ್ರಾಣಾದ ನಮಗ ಸಾಯಿಬಣ್ಣ ದೇವ್ರಾಗಿ ಕಂಡ. ಅವ್ನ ಕೆಲಸ ದಾರೂ(ಸಾರಾಯಿ) ಮಾರುದಾಗಿತ್ತು. ನಾವು ಹಾಡ್ಕಿ ಹಾಡವ್ರು ಅಂತ ಅವ್ನಿಗೆ ಹೇಳಿದಕೂಡ್ಲೆ ಅವತ್ತ ರಾತ್ರಿ ಅಲ್ಲೆ ಒಂದು ಬಯಲು ಜಾಗಾದಾಗ ಹಾಡ್ಕಿಗಿ ಏರ್ಪಾಟು ಮಾಡಿದಾ. ನಮ್ಮ ಜೋಡಿ ತಾಳದವನು ಇರ್ಲಿಲ್ಲ. ದಪ್ಪ ಬಾರಿಸಿ ನಾ ಹಾಡಿದ್ರ; ಅದಕ್ಕ ರಾಮಣ್ಣ ಸೂರು ಹಾಕ್ತಿದಾ. ಅವತ್ತ ರಾತ್ರಿ ನೂರಾ ಇಪ್ಪತ್ತು ರೂಪಾಯಿ ಭಕ್ಷೀಸು ಬಂತು. ಅದರಾಗ ಅರವತ್ತು ರೂಪಾಯಿ ಸಾಯಿಬಣ್ಣ ತಗೊಂಡು, ಉಳಿದ ಅರವತ್ತ ರೂಪಾಯಿ ನಮಗ ಕೊಟ್ಟ. ನಾವು ಹಾಡ್ಕಿ ಪಬ್ಲಿಕ್ ಆಯ್ತು. ಒಂದ ರಾತ್ರಿ ಹಾಡ್ಕಿಗಿ ಒಂದ ಸಾವಿರ ರೂಪಾಯಿತನ ಕೂಡ್ತಿತ್ತು. ಅದರಾಗ ಅರ್ಧ ಸಾಯಿಬಣ್ಣ ಇಟ್ಕೊಂಡು ಉಳಿದ ಅರ್ಧ ನಮಗ ಕೊಡ್ತಿದ್ದ. ಇಪ್ಪುತ್ತು ದಿವಸಾ ಇದ್ದು ಹಾಡಿದ್ದಕ್ಕ ನಮ್ಮತ್ರ ಐದುಸಾವಿರ ರೂಪಾಯಿ ದುಡ್ಡು ಕೂಡ್ತು. ಆಗಿನ ಕಾಲಕ ಇದು ಬಾಳs ದುಡ್ಡು. ಇವತ್ತಿನ ಐವತ್ತಸಾವಿರಕ್ಕ ಅದು ಸಮಾ ಆಗ್ತೈತಿ. ಇಷ್ಟ ದುಡ್ಡು ಸಿಗಾಕ ಹತ್ತಿದ್ರೂ ಊರಿನ ಎಳತ ತಪ್ಪಲಿಲ್ಲ. ತಿಂಗಳೊಳಗ ವಾಪಸ್ ಊರಿಗಿ ಬಂದ್ವಿ. ಮಾಡಿದ್ದ ಐದನೂರು ರೂಪಾಯಿ ಸಾಲಾ ಬಗಿ ಹರಿಸಿದ್ವಿ. ಮುಂದ ನಮಗ ತೊಂದರಿ ಆಗ್ಲಿಲ್ಲ. ಹಾಡ್ಕಿ ಬರಾಕ ಚಾಲೂ ಆದ್ವು. ಬಡತನಾನು ಹೋಯ್ತು” – ಬಬಲೇಶ್ವರದ ಬಂಗಾರೆವ್ವ

“ನಮ್ಮನಿಯಾನವರಿಗೆ ಗುರುಗಳಿಗೆ ಪಗಾರ ಕೊಟ್ಟು ಕಲಿಸುವಷ್ಟು ತಾಕತ್ತಿರಲಿಲ್ಲ. ಹೀಂಗಾಗಿ ನಮ್ಮನ್ನ ಗುರುಗಳ ಮನಿಯ್ಯಾಗ ಇಟ್ಟ್ರು. ಗುರುಗಳ ಮನಿಯಾಗ ಇದ್ರೂ ಪಗಾರ ಕೊಡಬೇಕಾಗಿತ್ತು. ಅಷ್ಟು ಕೊಡಲಾರದಷ್ಟು ಬಡತನ ನಮ್ಮದು. ಅದಕ್ಕ ಅವರ ಮನಿ ಕಸ, ಮುಸುರಿ ಮಾಡಿಕೊಂಡು ಕಲಿಬೇಕಿತ್ತು. ಅವರ ಹತ್ರ ಮೂರ್ನಾಲ್ಕು ವರ್ಷ ಇದ್ದ್ಯಾ. ಒಂದು ವರ್ಷದತನಾ ಹಾಡ್ಕಿ ಕಲಿಸಿದ್ರು. ವರ್ಷ ಆಗಿಂದ ನಮ್ಮನ್ನು ಹಾಡ್ಕಿಗಿ ಕರಕೊಂಡು ಹೋಗಾಕ ಚಾಳೂ ಮಾಡಿದ್ರು. ಅವ್ರ ಹತ್ರ ಇದ್ದು ಮೂರು ವರ್ಷ ಹಾಡ್ಕಿ ಮಾಡೇನಿ. ಹಾಡ್ಕಿಗಿ ಹೋದಾಗ ನಮಗೆಷ್ಟರ ಭಕ್ಷೀಸು ಬರ್ಲಿ, ಪಗಾರ ಕೊಡ್ಲಿ ಅದನ್ನ ಗುರುಗಳs ತಗೋತಾರು. ಹೀಗಂತ ಮೊದ್ಲ ಮಾತುಕತೆ ಆಗಿರ್ತದ. ಹೀಂಗ ಮೂರು ವರ್ಷ, ನಾಕ ವರ್ಷ ಗುರುಗೊಳ ಹತ್ತ್ರ ದುಡಿತೀವಿ. – ಮುಂದರೂಪದ ರಾಣವ್ವ

ಮೇಲಿನ ವಕ್ತೃಗಳ ಅನುಭವಗಳನ್ನು ಪರಿಶೀಲಿಸಿದಾಗ ಹರದೇಶಿ-ನಾಗೇಶಿ ಹಾಡುಗಾರಿಕೆಯ ವೃತ್ತಿಯಲ್ಲಿ ಗುರುತಿಸಿಕೊಳ್ಳುವುದು, ಬೆಳೆಯುವುದು ಅಷ್ಟು ಸುಲಭವಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಎಲ್ಲ ‘ಜೋಗತಿಯರು’, ‘ಬಸವಿಯರು’ ಹಾಡುವ ವೃತ್ತಿಯ ಆರಂಭದಲ್ಲಿ ಒಂದೇ ಬಗೆಯ ಸಮಸ್ಯೆಯನ್ನು ಎದರಿಸಿರುತ್ತಾರೆ ಎಂದು ಹೇಳಲಾಗುವುದಿಲ್ಲ. ಅದು ಅವರವರ ಆರ್ಥಿಕ ಹಾಗೂ ಕೌಟುಂಬಿಕ ಹಿನ್ನೆಲೆಯನ್ನು ಅವಲಂಬಿಸಿರುತ್ತದೆ. ಅವರ ವೃತ್ತಿ ಜೀವನದ ಆರಂಭದ ಸಮಸ್ಯೆಗಳನ್ನು ನಾಲ್ಕು ನೆಲೆಗಳಲ್ಲಿ ಗುರುತಿಸಲಾಗಿದೆ. ಅವುಗಳೆಂದರೆ ೧. ಗುರುಗಳಲ್ಲಿ ಜೀತಕ್ಕಿರುವುದು ೨. ಕಲಾವಿದರೆಯರ ಉಡುಪು: ವೃತ್ತಿ ಮರ್ಯಾದೆ. ೩. ಹಾಡುಗಾರಳ ಕೌಟುಂಬಿಕ ಕಲಾ ಹಿನ್ನೆಲೆ ೪. ಸ್ವತಂತ್ರ ವೃತ್ತಿ ನಿರ್ವಹಣೆ.

 

[1] ಪಲ್ಯ ಎನ್ನುವ ಪದವನ್ನು ಸೊಪ್ಪು ಎನ್ನುವ ಅರ್ಥದಲ್ಲಿಯೇ ಬಳಸುತ್ತಾರೆ.