ಸಂಘಟನೆ

ಬಹುತೇಕ ಕಲಾವಿದರು ಹಾಡಿಕೆಯಲ್ಲಿ ಬಿಡುವು ದೊರೆಯದೇ ಇದ್ದುದಕ್ಕಾಗಿ ಸ್ವಸಹಾಯ ಗುಂಪುಗಳಲ್ಲಿ ಸದಸ್ಯರಾಗಿಲ್ಲವೆಂದು ಹೇಳಿದರು. ಪಂಚಾಯತಿ ಚುನಾವಣೆಯಲ್ಲಿ ಸ್ಪರ್ಧಿಸದೇ ಇದ್ದುದಕ್ಕೂ ಇದೇ ಕಾರಣವನ್ನು ನೀಡಿದರು. “ಅವ್ರು ಮೀಟಿಂಗಿಗೆ ಕರ‍್ದಾಗ ನಮಗೆಲ್ಲಿ ವ್ಯಾಳ್ಯಾ ಇರ‍್ಬೇಕು? ನಮ್ಮ ಹಾಡಿಕೆ ಇಂಥಾ ದಿನಾ ಇರ್ತದ, ಇಂಥಾ ದಿನಾ ಇರಲ್ಲ ಅಂತ ಹೇಳಾಕಾಗಲ್ಲ. ಚಾಜಾ ಸಿಕ್ಕ ಕೂಡ್ಲೆ ಹೋಗ್ತಿರ್ತೇವು. ಸಂಘ ಅಂದ್ರ, ರಾಜಕೀಯ ಅಂದ್ರ ಅವ್ರ ಹಿಪಾಜಿತ್ತಿಗೆ (ಅಧಿಕಾರಕ್ಕೆ) ಸೇರ್ಕೊಂಡು ಬಿಡ್ತೀವಿ. ಮೀಟಿಂಗ್‌ಗೆ ಬರ‍್ಲಾಕಾಗ್ಲಾಕಂದ್ರ ‘ಯಾಕವ್ವಾ ಇದರಾಗ ಸೇರ್ಕೊಂಡಿ’ ಅಂತ ನಿಮಂಥಾ ತಿಳಿದವ್ರು ಕೇಳ್ತಾರ. ನಮಗ ಅವಕೆಲ್ಲಾ ವ್ಯಾಳ್ಯಾ ಸಿಗೂದಿಲ್ಲವ್ವಾ” ಎಂದು ಹೇಳಿದವರೇ ಹೆಚ್ಚು.

ಸ್ವಸಹಾಯ ಗುಂಪುಗಳಲ್ಲಿ, ಸ್ತ್ರೀ ಶಕ್ತಿ ಗುಂಪುಗಳಲ್ಲಿ ಹಾಡಿಕೆ ಮಹಿಳೆಯರಿಗೆ ತೊಡಗಿಸಿ ಕೊಳ್ಳಲು ಸಾಧ್ಯವಾಗುತ್ತಿಲ್ಲ. ಗುಲ್ಬರ್ಗಾ ಶರಣ ಬಸವೇಶ್ವರ ಜಾತ್ರೆಯಲ್ಲಿ, ರಾಮದುರ್ಗದ ಹುಲಕುಂದದ ಜಾತ್ರೆಯಲ್ಲಿ, ವಿಜಾಪುರದ ಸಿದ್ದೇಶ್ವರ ಜಾತ್ರೆಯಲ್ಲಿ ಎಲ್ಲ ಹಾಡಿಕೆ ಮಹಿಳೆಯರು ಸೇರುತ್ತಾರಾದರೂ, ಮುಂಬರುವ ಜಾತ್ರೆಗಳಲ್ಲಿ ಚಾಜ ಪಡೆದುಕೊಳ್ಳುವುದರತ್ತ ಚಿತ್ತ ಕೇಂದ್ರೀಕರಿಸಿರುತ್ತಾರೆ. ಹೀಗೆ ವರ್ಷದಲ್ಲಿ ಒಂದೆರಡು ಬಾರಿ ಸೇರಿದರೂ ಅವರು ತಮ್ಮ ಕಷ್ಟ-ಸುಖಗಳ ಕುರಿತು ಮಾತನಾಡುವುದಿಲ್ಲ. ಯಾಕೆಂದರೆ ಹಾಡಿಕೆ ಸೀಜನ್ ಅದು. ಹಾಡಿಕೆ ಸೀಜನ್ ನಂತರ ಹಾಡಿಕೆಗೆ ಅವಕಾಶಗಳು ಬರುತ್ತಾವಾದರೂ ಜಾತ್ರೆಗಳ ಕಾಲದಲ್ಲಿಯಂತೆ ಚಾಜಗಳು ಸಿಗುವುದಿಲ್ಲ. ಹೀಗಾಗಿ ಚಾಜ ಪಡೆದುಕೊಳ್ಳುವುದರತ್ತ ಆಸಕ್ತಿ ವಹಿಸುವ ಇವರು ವೃತ್ತಿ ಜೀವನದ ಸಂಕಷ್ಟಗಳ ಕುರಿತು ಮಾತನಾಡುವುದಿಲ್ಲ. ಸ್ವಸಹಾಯ ಗುಂಪಿನ ಹೆಸರಿನಲ್ಲಿ, ಸ್ತ್ರೀಶಕ್ತಿ ಗುಂಪಿನ ಹೆಸರಿನಲ್ಲಿ ವಾರಕ್ಕೆ ಒಂದು ಬಾರಿ, ಇಲ್ಲವೆ ಹದಿನೈದು ದಿನಕ್ಕೆ ಒಂದು ಬಾರಿ ಸೇರುವರು. ಪ್ರಜ್ಞಾಪೂರ್ವಕವಾಗಿಯೋ, ಅಪ್ರಜ್ಞಾಪೂರ್ವಕವಾಗಿಯೋ ಒಂದಿಷ್ಟು ಕಷ್ಟ-ಸುಖಗಳನ್ನು ಹಂಚಿಕೊಳ್ಳುತ್ತಾರೆ. ಕಷ್ಟ-ಸುಖಗಳನ್ನು ಹಂಚಿಕೊಳ್ಳುವ ಮುಲಕವೆ ಸಮಸ್ಯೆಯನ್ನು, ಸ್ವಾತಂತ್ರ್ಯವನ್ನು ಗುರುತಿಸಿಕೊಳ್ಳುತ್ತಾರೆ. ಕಷ್ಟ-ಸುಖಗಳನ್ನು ಹಂಚಕೊಳ್ಳುವ ನೆಪದಲ್ಲಿ ಹಂಗು, ಬಂಧನ, ಸಮಸ್ಯೆ, ಶೋಷಣೆಗಳಿಗೆ ಹಾಗೂ ಸ್ವಾತಂತ್ರ್ಯ, ಸ್ವಂತಿಕೆಗಳಿಗೆ ಇರುವ ಅಂತರಗಳನ್ನು ಗುರುತಿಸುತ್ತಾರೆ. ಮಹಿಳೆಯರಲ್ಲಿ ಈ ಬಗೆಯ ಮನೋಭಾವ ಅಥವಾ ಎಚ್ಚರ ಬೆಳೆಯಿತೆಂದರೆ ಹಂಗನ್ನು ವಿರೋಧಿಸುತ್ತಾರೆ, ಬಂಧನವನ್ನು ಮುರಿಯುತ್ತಾರೆ. ಸಮಸ್ಯೆಗಳಿಗೆ, ಶೋಷಣೆಗಳಿಗೆ ಕಾರಣಗಳನ್ನು ಹುಡುಕಲು ಪ್ರಾರಂಭಿಸುತ್ತಾರೆ. ಸ್ವಾತಂತ್ರ್ಯದೆಡೆಗೆ, ಸ್ವಂತಿಕೆಯೆಡೆಗೆ ಹೊರಳಿಕೊಂಡು ಬಿಡುತ್ತಾರೆ. ಇಂತಹ ಪಲ್ಲಟಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ಹಾಗೂ ಕೆಳವರ್ಗಗಳಲ್ಲಿ ಸ್ವಸಹಾಯ ಗುಂಪುಗಳು, ಸ್ತ್ರೀಶಕ್ತಿಗಳು ಹುಟ್ಟುಹಾಕಬೇಕು. ದುರಂತವೆಂದರೆ ಈ ಬಗೆಯ ಗುಂಪುಗಳು ಕೇವಲ ಹಣ ಕೂಡಿಸುವುದಕ್ಕೆ, ಸಾಲ ಪಡೆಯುವುದಕ್ಕೆ ಆಸಕ್ತಿ ತೋರುತ್ತದೆ. ಸ್ವಸಹಾಯ ಗುಂಪು, ಸ್ತ್ರೀಶಕ್ತಿಯ ಗುಂಪಿನ ಚರ್ಚೆಯ ಪ್ರಸ್ತುತ ಅಧ್ಯಯನವನ್ನು ವಿಷಯಾಂತರಿಸುವ ಕಾರಣ ಕೈಬಿಡಲಾಗಿದೆ. ಒಟ್ಟಾರೆಯಾಗಿ ಸ್ವಸಹಾಯ ಗುಂಪುಗಳು, ಸ್ತ್ರೀಶಕ್ತಿ ಗುಂಪುಗಳು ನಿರೀಕ್ಷಿತ ಬದಲಾವಣೆಯನ್ನು ತರದೆ ಇದ್ದರೂ ಕೆಳವರ್ಗದ ಮಹಿಳೆಯರಲ್ಲಿ ಸಣ್ಣ ಮಟ್ಟದ ಪಲ್ಲಟವನ್ನು ತಂದದ್ದಂತೂ ಸತ್ಯ. ಹಾಡಿಕೆ ವೃತ್ತಿಯ ನಿರಂತರತೆಯು ಇಂತಹ ಸಂಘಟನೆಯಲ್ಲಿ ಭಾಗಿಯಾಗುವುದಕ್ಕೂ ಅವಕಾಶಕೊಡುತ್ತಿಲ್ಲ. ಅಪರೂಪಕ್ಕೆ ಅವರೇ ಒಂದೆಡೆ ಸೇರುವ ಸಂದರ್ಭದಲ್ಲಿಯೂ, ಕಷ್ಟ ಸುಖಗಳನ್ನು ಹಂಚಿಕೊಳ್ಳಲು ಆಗುತ್ತಿಲ್ಲ. ಯಾಕೆಂದರೆ ಅಲ್ಲಿಯೂ ಚಾಜ ಪಡೆದುಕೊಳ್ಳುವ ಗುಂಗಿನಲ್ಲಿಯೇ ಇರುತ್ತಾರೆ. ಹೀಗಾಗಿ ಹೊರಗಿ ಪ್ರಪಂಚದಲ್ಲಿ ಯಾವ ಬದಲಾವಣೆ ನಡೆಯುತ್ತಿದೆ, ತಮ್ಮ ಹಾಡಿಕೆ ಸಮುದಾಯದ ಮಹಿಳೆಯರೇ ಯಾವ-ಯಾವ ಶೋಷಣೆಗೆ ಬಲಿಯಾಗುತ್ತಿದ್ದಾರೆ ಎನ್ನುದರ ಕುರಿತು ಹಾಡಿಕೆ ಮಹಿಳೆಯರಿಗೆ ಕಿಂಚಿತ್ತೂ ಆಲೋಚಿಸಲಾಗುತ್ತಿಲ್ಲ. ಹೀಗೆ ಆಲೋಚಿಸದಂತೆ ಹಾಡಿಕೆ ವೃತ್ತಿಯು ಅವರ ಬುದ್ಧಿಗೆ ಮಂಕು ಕವಿಸಿದೆ. ಈ ಮಂಕಿನಿಂದ ಬಿಡಿಸಿಕೊಂಡಾಗ ಮಾತ್ರ ಅವರೊಳಗಡೆಯೇ ಪರ್ಯಾಯಗಳು ಹುಟ್ಟಿಕೊಳ್ಳಲು ಸಾಧ್ಯ.

ಹಾಡಿಕೆಯವರು ಹಾಗೂ ಪ್ರೇಕ್ಷಕರ ನಡುವಿನ ಸಂಬಂಧಗಳು

ಹರದೇಶಿ-ನಾಗೇಶಿ ಹಾಡುಗಾರಿಕೆಯ ಕುರಿತಂತೆ ಹಾಡುಗಾರರಲ್ಲಿ ಮಾತ್ರ ಹೆಮ್ಮೆ ಇಲ್ಲ; ಅದನ್ನು ಕೇಳುವವರಲ್ಲಿಯೂ ಕಲೆಯ ಕುರಿತು ಗೌರವವಿದೆ; ಕಲಾಕಾರರ ಕುರಿತು ಪ್ರೀತಿಯಿದೆ. ಬಂಗಾರವ್ವ ತನ್ನ ಹಾಗೂ ಕಲಾ ಅಭಿಮಾನಿಗಳ ಸಂಬಂಧವನ್ನು ವಿವರಿಸಿದ್ದು ಹೀಗೆ “ಗಂಡಿಲ್ಲ, ಗಂಡಿಲ್ದೆಕಿ ಅಂತ ಗಂಡಿನ ಕಡೆಯವ್ರು ನನ್ನ ಚುಚ್ಚತಿದ್ರು. ಒಂದ ದಿನಾ ಧಾರವಾಡದ ಪಾಸ್ತೆಯವ್ರ ಎದುರಿಗೆ ಕುಂತ ಅತ್ತ್ಯಾ. ಅದಕ್ಯಾಕ ಅಳ್ತಿ? ಕೂಡಿಲ್ಲಿ ಅಂತ್ಹೇಳಿ ಮನ್ಯಾಗಿನ ಆಳ ಮನಸ್ಯಾನ ಕಡಿಯಿಂದ ಎರ‍್ಡ ಹಾರಾ ತರ್ಸಿದ್ರು. ಪಾಸ್ತೆ ಸಾಹೇಬ್ರು ವಕೀಲ್ಕಿ ಮಾಡ್ತಿದ್ದ್ರು. ನನಗೊಂದು ರಾಮಣ್ಣನಿಗೊಂದು ಹಾರಾ ಕೊಟ್ಟ್ರು. ಒಬ್ಬರ ಕೊಳ್ಳಾಗ ಒಬ್ಬರ ಹಾಕ್ರಿ ಅಂದ್ರು. ಹಂಗ ಬರೂದಿಲ್ಲರೀ. ನನಗ ಎಲ್ಲಮ್ಮಗ ಬಿಟ್ಟೈತಿ ಅಂದ್ಯಾ. ನಾನೇನು ರಾಮಣ್ಣನ ಕಡಿಯಿಂದ ತಾಳಿ ಕಟ್ಟಿಸ್ಕೊ ಅಂತ ಹೇಳ್ತಾ ಇಲ್ಲ. ಹಾರಾ ಬದಲಾಸ್ರಿ ಅಂತಿದಿನಿ. ಅದಕ್ಕ ನಿಮ್ಮ ದೇವಿ ಸಿಟ್ಟಾಗೂದಿಲ್ಲ ಅಂದ್ರು. ಅಂಜಕೊಂತ ರಾಮಣ್ಣನಿಗೆ ಹಾರಾ ಹಾಕಿದ್ನಿ. ರಾಮಣ್ಣ ನನಗ ಹಾರ ಹಾಕಿದಾ. “ಇಂದಿನಿಂದ ನೀವು ಗಂಡಾ-ಹೆಂಡ್ತಿ, ಹಾಡಿಕ್ಯಾಗ ಯಾರಾ ಏನಾರ ಅನಕೊಳ್ಳಿ. ತಲಿಗಿ ಹಚ್ಕೊಬ್ಯಾಡ್ರಿ. ಸೂರ ಹಾಕಾಕ ರಾಮಣ್ಣ ನಿನ್ನ ಹಿಂದ ಇದ್ದ ಇರ್ತಾನಲ್ಲಾ? ಅವ್ನ ತೋರ್ಸಿ ನನಗೂ ಗಂಡ ಅದಾನು ಅನ್ನು” ಅಂತ ಹೇಳಿಕೊಟ್ಟರು. ಅವ್ರ ಹೇಳಿಕೊಟ್ಟಂಗ ಅನ್ನಾಕ ಚಾಲೂ ಮಾಡಿದ್ನಿ; ನಿಮ್ಮ ಲೆಕ್ಕದಾಗ ನನ್ನ ಮದ್ವಿ ಹೌದೊ ಅಲ್ಲೊ ಗೊತ್ತಿಲ್ಲ. ಪಾಸ್ತೆಯವ್ರು ಹೇಳಿದ್ಹಂಗ ಮಾಡಿದ್ದಕ್ಕ ನಾನು ‘ದೇವದಾಸಿ’ ಅಲ್ಲ; ನಾನೂ ಗಂಡುಳ್ಳಾಕ್ಕಿ ಅನ್ನೂ ಆತ್ಮವಿಶ್ವಾಸಾ ತುಂಬ್ತು. ವರ್ಷಾ ವರ್ಷಾ ತಪ್ಪದ ಅವ್ರ ಮನಿಗಿ ಹೋಗತಿದ್ವಿ. ಗಂಡಾ-ಹೆಣ್ತಿ ಹ್ಯಾಂಗದರಿ ಅಂತ ನಕಲಿ ಮಾಡೂರು. ಅದು ನಮಗ ಖುಷಿ ತರ್ತಿತ್ತು. ಸೂಳಿ-ಸೂಳಿ ಅನ್ನು ಜಗತ್ತಿನ್ಯಾಗ ಪಾಸ್ತೆ ಸಾಹೇಬ್ರಂಥವ್ರು ಗರತಿ ಅಂತಿದ್ರಲ್ಲಾ? ಇದಕ್ಕೆಂತ ಬೆಲಿ (ಬೆಲೆ) ಕಟ್ಟಾಕಾಗ್ತೈತಿ? ಸಾಯು ಕಾಲಕ್ಕ ನಮ್ಮನ್ನ ನೋಡಬೇಕಂತ ಆಸೆಯಾಗದಿ ಅಂತ ಕಾರ ಕೊಟ್ಟ ಕಳ್ಸಿದ್ರು. ಹೋಗಿದ್ವಿ. ನಮಗ ಹಾಡಕಿಮಾಡ ಅಂದ್ರು. ಹಾಡಕಿ ಕೇಳಿ ಬಾಳs ಕುಸಿ (ಖುಷಿ) ಪಟ್ಟು. ನಾವs ಈ ಕಡಿ ಬಂದ ಎಂಟ ದನದಾಗ ತೀರಕೊಂಡ್ರು. ಅವ್ರು ತೀರಿಕೊಂಡ ಸುದ್ದಿನೂ ಕೊಟ್ಟ ಕಳ್ಸಿದ್ರು. ಮಣ್ಣಿಗೂ ಹೋಗಿದ್ವಿ. ನಮ್ಮವ್ವ-ಅಪ್ಪನ್ನ ಸಣ್ಣಕಿರ್ತಾನ ಕಳಕೊಂಡಿದ್ನಿ, ಪಾಸ್ತೆ ಸಾಹೇಬ್ರ ತಂದಿ-ತಾಯಿ ಆಗಿದ್ದ್ರು. ಅವ್ರ ಪಾದಾ ಹಿಡ್ಕೊಂಡು ಅಳೂ ಅಳೂ ಅತ್ತ್ಯಾ. ಪಾಸ್ತೆ ಅವ್ರು ತೀರ್ಕೊಂಡಿಂದ ನಾವು ಮತ್ತ ಧಾರವಾಡಕ್ಕ ಹೋಗ್ಲಿಲ್ಲ. ಅವ್ರ ತಂಗಿ ಯಂಕೂಬಾಯಿ ತನ್ನ ಮಗಾ ರಾಜೀವ ಕಡಿಯಿಂದ ಧಾರವಾಡ್ಕ ಕಾಮನ ಕಟ್ಟಿಗಿ ಹಾಡ್ಕಿಗಿ ಬರಾಕ ಬೇಕು ಹೇಳಿ ಕಳ್ಸಿದ್ರು. ಬ್ಯಾರೆ ದಾರಿಯಿಲ್ದ ಧಾರವಾಡಕ್ಕ ಹೋಗಿ ಬಂದೂ ಮಾಡ್ತಿದ್ವಿ. ಯಂಕೂಬಾಯಿಯವ್ರೂ ತೀರಿಕೊಂಡ್ರು. ಈಗ ಅವ್ರ ಮಗಾ, ರಾಜೀವ ಕರೀತಾನು. ನಮಗೂ ವಯಸ್ಸಾಗಿದೆ. ನಾವು ಹೋಗಿಲ್ಲ” ಎಂದಳು. ಪಾಸ್ತೆಯವರ ಕುಟುಂಬದೊಂದಿಗಿನ ಆತ್ಮೀಯ ಸಂಬಂಧದ ಹಾಗೆಯೆ ಅಥಣಿಯ ಲಕ್ಷ್ಮೀಬಾಯಿ ಅವರೊಂದಿಗಿನ ಸಿಹಿ ನೆನಪಿನ ಬುತ್ತಿಯನ್ನು ಬಿಚ್ಚಿದಳು. ೪೦ ವರ್ಷಗಳವರೆಗೆ ಅನ್ನ ಉಣ್ಣದೆ ಕೇವಲ ಹಣ್ಣು ಹಾಲನ್ನು ಸೇವಿಸಿ ಬದುಕಿದ ಇವರು ಕೆಸರಾಳ ಎಲ್ಲಮ್ಮನ ಭಕ್ತರು. ಇವರಿಗೆ ಹಾಡುವ ಬಂಗಾರವ್ವನೆಂದರೆ ಅಚ್ಚು ಮೆಚ್ಚು. ‘ನೀನು ಮನಿ ಹೆಣಮಗಳು’ ಎಂದು ಹೇಳಿ ಬಂಗಾರವ್ವನಿಗೆ ಪ್ರತಿ ವರ್ಷ ಒಳ್ಳೆಯ ಸೀರೆ, ಕಣ ಕೊಟ್ಟು ಉಡಿ ತುಂಬುತ್ತಿದ್ದರಂತೆ. ಒಂದು ವೇಳೆ ಹೋಗದೆ ಇದ್ದರೆ, ಒತ್ತಾಯದಿಂದ ಕರೆಸಿ ಉಡಿ ತುಂಬುತ್ತಿದ್ದರಂತೆ. ಶರಣೆಯರ ಹಾಡುಗಳನ್ನು ಹಾಡಿಸುತ್ತಿದ್ದರಂತೆ. ಆಸ್ತಿ ಹೇಗೆ ಮಾಡಬೇಕೆಂಬುದು ಬಂಗಾರವ್ವನಿಗೆ ಗೊತ್ತಿರಲಿಲ್ಲವಂತೆ. ನಲ್ವತ್ತು ವರ್ಷಗಳ ಹಿಂದೆ ಒಂದು ಸಾವಿರ ರೂಪಾಯಿ ಕೊಟ್ಟು ಜಮೀನು ಖರೀದಿಸಲು ಹೇಳಿದ್ದರಂತೆ. ಅವರ ಮಾರ್ಗದರ್ಶನದಿಂದಲೆ ಜಮೀನನ್ನು ಕೊಂಡುಕೊಳ್ಳಲು ಸಾಧ್ಯವಾಯ್ತು ಎಂದು ಹೇಳಿದಳು.

ಚನ್ನಾಳದ ಸುಂದರಮ್ಮನ ಅನುಭವ ಬಂಗಾರವ್ವನಿಗಿಂತ ಭಿನ್ನವಾದುದು. ಗುಲ್ಬರ್ಗಾದ ಹಿರೇಸಾವಳಿಗೆಗೆ ಹಾಡಲು ಹೋಗಿದ್ದರಂತೆ. ರಾತ್ರಿ ಹಾಡಿಕೆಯಂದು ಜನ ವಿಪರೀತ ಗಲಾಟೆ ಮಾಡಿದ್ರು. ಸುಂದರಮ್ಮ ನೋಡಲು ಸುಂದರವಾಗಿದ್ದುದೇ ಸಭೆಯ ಗಲಾಟೆಗೆ ಕಾರಣವಂತೆ. ಭಕ್ಷೀಸು ಕೊಡುವ ನೆಪದಲ್ಲಿ; ಸೀರೆಗೆ ನೋಟು ಹಚ್ಚು ನೆಪದಲ್ಲಿ ಅಸಭ್ಯವಾಗಿ ನಡೆದುಕೊಂಡದ್ದಕ್ಕೆ ಸುಂದರಮ್ಮ ರುದ್ರಿಯಾದಳು. ಅಸಭ್ಯವಾಗಿ ನಡೆಸಿಕೊಂಡವರಿಗೆ ಕಪಾಳ ಮೋಕ್ಷ ಮಾಡಿದ್ದಳು. ಹೆದರಿ ಮರುದಿನ ಚಾಜ ಪಡೆಯದೆ ತನ್ನ ಮೇಳದೊಂದಿಗೆ ಊರಿಂದ ಎರಡು ಕಿಲೋಮೀಟರ್‌ದೂರ ನಡೆದುಕೊಂಡು ಹೋಗಿದ್ದಳು. ಇವರ ಹಿಂದೆ ಊರಿನ ಗೌಡನು ಓಡಿಕೊಂಡು ಬಂದು ಬಿದಾಯಿ ಪಡೆದುಕೊಂಡು ಹೋಗಬೇಕೆಂದು ಒತ್ತಾಯಿಸಿದರಂತೆ. “ಈಗ ನನ್ನ ಬಲ್ಲಿ ರೊಕ್ಕ ಇಲ್ಲ. ಹೊಂದಿಸಿಕೊಂಡು ಬರ್ತೇನು. ಅಲ್ಲಿತನ (ಅಲ್ಲಿಯವರೆಗೆ) ಇಲ್ಲೆ ಹೊಲದಾಗಿನ ಮನ್ಯಾಗ ಇರು” ಎಂದು ಹೇಳಿ ಹೋದನಂತೆ. ಹೀಗೆ ಬೆಳಿಗ್ಗೆ ೭ ಗಂಟೆಗೆ ಹೇಳಿ ಹೋದವನು ಸಾಯಂಕಾಲ ೭ ಗಂಟೆಯಾದರೂ ಬರದೇ ಇದ್ದಾಗ ಸುಂದರಮ್ಮ ಹಾಗೂ ಹಿಮ್ಮೇಳದಲ್ಲಿದ್ದ ಆಕೆಯ ಅಪ್ಪ ಮತ್ತು ಅಣ್ಣ ಹೆದರಿಕೊಂಡರಂತೆ. ಗೌಡನು ತಮ್ಮ ಹೆಣ್ಣುಮಗಳ ಮೇಲೆ ಅನ್ಯಾಯ ಮಾಡಬಹುದೆಂದು ಹೆದರಿಕೊಂಡು ಬಸ್‌ಸ್ಟ್ಯಾಂಡಿಗೆ ಹೋಗಿ ಕುಳಿತುಕೊಂಡರಂತೆ. ಇವರನ್ನು ಹುಡುಕಿಕೊಂಡು ಗೌಡ ಗಾಭರಿಯಿಂದ ಬಸ್‌ಸ್ಟ್ಯಾಂಡಿಗೆ ಬಂದನಂತೆ. ಅವರ ಹೆಂಡತಿಯ ಕೈಯಲ್ಲಿನ ಪಾಟ್ಲಿ ಬಿಲ್ವಾರಗಳನ್ನು (ಬಂಗಾರದ ಕೈ ಬಳೆಗಳು) ಪಡೆದು, ಅವುಗಳನ್ನು ಒತ್ತೆಯಿಡಲು ಹೆಂಡತಿಯಿಂದ ಒಪ್ಪಿಗೆ ತೆಗೆದುಕೊಳ್ಳಲು ಇಡೀ ದಿನ ಬೇಕಾಯಿತು ಎಂದು ಹೇಳಿದನಂತೆ. ಪಾಟ್ಲಿ ಬಿಲ್ವಾರಗಳನ್ನು ಒತ್ತೆಯಿಟ್ಟು ಹಾಡಿಕೆಗೆ ಮಾತಾದ ಹಣ (೩೫೦ರೂಪಾಯಿಗಳನ್ನು)ವನ್ನು ಕೊಟ್ಟಿದ್ದು ಹಾಡಿಕೆಯ ಸುಂದರಮ್ಮನ ಅಂತಃಕರಣ ಕಲಕಿತ್ತು. ಆಕೆ ದುಡ್ಡು ವಾಪಸ್ಸು ಮಾಡಲು ಹೋದರೂ ಗೌಡನು ತೆಗೆದುಕೊಳ್ಳಲಿಲ್ಲವಂತೆ. “ನಂಗ ನೀನು ಮರ್ಯಾದಿ ಕೊಡುದಾದ್ರ ಪತಿ ವರ್ಷಾನೂ ನಮ್ಮೂರ‍್ಗಿ ಬಂದು ಹಾಡ್ಕಿ ಮಾಡ್ಬೇಕು” ಎಂದನಂತೆ. ಇದು ಇಪ್ಪತ್ತು ವರ್ಷಗಳ ಹಿಂದಿನ ಘಟನೆಯಂತೆ. ಗೌಡ ಬದುಕಿರುವವರೆಗೂ ಹಾಡಿಕೆಗೆ ಎಷ್ಟೇ ಪಗಾರ ಕೊಟ್ಟರೂ ಆತನ ಮೇಲಿರುವ ಮರ್ಯಾದಿಯಿಂದ ಹಾಡಿ ಬರುತ್ತಿದ್ದಳಂತೆ. “ಪಾಟ್ಲಿ, ಬಿಲ್ವರಾ ಮಾರಿ ನಮಗ ಬಿದಾಯಿ ಕೊಟ್ಟಿದ್ದನ್ನು ಹ್ಯಾಂಗ ಮರಿಯಾಕ ಆಗ್ತೈತಿ ತಂಗಿ? ಗೌಡ್ರದ್ದು ಬಾಳs ದೊಡ್ಡ ಮನಸ್ಸು, ಈಗ್ಲೂ ನೆನಸಿಕೊಂಡ್ರ ಕಣ್ಣಾಗ ನೀರು ತಂಬ್ತಾವು” ಎಂದಳು ಸುಂದರಮ್ಮ.

ಬಸವನ ಬಾಗೇವಾಡಿಯ ಕೆಂಚಮ್ಮ ಬೆಳಗಾಂವದಲ್ಲಿ ಉಗಾದಿ ನಂತರ ನಡೆಯುವ ಬಂಡಿ ಜಾತ್ರೆಗೆ ಹೋದರೆ ಮೂರು ತಿಂಗಳ ನಂತರವೇ ಹುಟ್ಟೂರಿಗೆ ವಾಪಸ್ಸಾಗುತ್ತಿದ್ದಳಂತೆ. ಈ ಅವಧಿಯಲ್ಲಿ ಆಕೆ ಸಾಂಬ್ರಾದಲ್ಲಿಯೇ ವಸತಿ ಇರುತ್ತಿದ್ದಳಂತೆ. “ಸಾಂಬ್ರಾ ದೇಸಾಯರ‍್ದ ದೊಡ ಮನೆತನ ಐತ್ರಿ. ಅವ್ರ ಅರಮನಿ ಮಗ್ಗಲಾಗ ಅದೇನು ಒಟೋಸು (out hose) ಕಟ್ಟಕೊಂಡಾರ್ರಿ. ನಾನು ಬ್ಯಾರೆ ಕಡಿ ಮನಿ ಮಾಡಿದ್ರ ಬೈತಿದ್ರಿ. ನೀನು ನಮ್ಮನಿ ಹೆಣ್ಣು ಮಗಳಿದ್ದಂಗ. ಅಲ್ಲಿ ಇಲ್ಲಿ ಯಾಕ ಹೋಗ್ತಿ? ಇಲ್ಲೆ ಇದ್ದ ಬಿಡು ಅನ್ನೂರು. ಮೂರು ತಿಂಗಳ ಮಟಾ ಓಟೋಸ್ ನಂಗ ಬಿಟ್ಟ ಕೊಡತಿದ್ದ್ರು. ಹಾಡಕಿ ಇಲ್ಲದಾಗ ಮನಿಯಾಗ ಇದ್ದ್ರ, ಅವ್ರs ಊಟಕ್ಕ ಹಾಕ್ತಿದ್ರು. ಬರುವಾಗ ಒಂದು ಸೀರಿ ಕುಬಸಾ ಕೊಡ್ತಿದ್ರು. ಒಂದು ಚೀಲಾ ಜ್ವಾಳಾ ಕೊಡ್ತಿದ್ರು. ಖರೆವಂದ್ರ ದೇಸಾಯರ ಮನಿ ನಂಗ ತವರ‍್ಮನಿ ಆಗಿತ್ತು. ಈಗ್ಲೂ ಹೋಗ್ತೀನಿ, ಬರ‍್ತೀನಿ” ಎಂದಳು.

ಹೀಗೆ ಬಂಗಾರಮ್ಮ, ಸುಂದರಮ್ಮ, ಕೆಂಚಮ್ಮರಂತೆ ಅದೆಷ್ಟೋ ಮಹಿಳಾ ಕಲಾವಿದರು ಹಾಡಿಕೆ ಕೇಳುವವರು ತಮ್ಮೊಂದಿಗೆ ಇಟ್ಟುಕೊಂಡ ಮಾನವೀಯ ಸಂಬಂಧ ಕುರಿತು ಹೃದಯ ತುಂಬಿ ಮಾತನಾಡಿದರು. ಹಾಡಿಕೆ ಕ್ಷೇತ್ರದಲ್ಲಿ ಮಹಿಳಾ ಹಾಡುಗಾರರಿಗೆ ಕೇವಲ ಕಹಿ ಅನುಭವಗಳಷ್ಟೆ ಎದುರಾಗಿಲ್ಲ. ಅಪರೂಪಕ್ಕೆ ಊರಿಗೊಬ್ಬರು ಮಗಳಂತೆ ಇಲ್ಲವೆ ತಂಗಿಯಂತೆ ಇಲ್ಲವೆ ಅಕ್ಕನಂತೆ ಪ್ರೀತಿ ತೋರಿಸಿದ್ದಾರೆ. ಈ ಕಾರಣಗಳು ಮಹಿಳಾ ಹಾಡುಗಾರರನ್ನು ಇನ್ನು ಹಾಡಿಕೆ ವೃತ್ತಿಯನ್ನು ಅವಲಂಬಿಸಿರುವಂತೆ ಮಾಡಿವೆ. ಇವರನ್ನು ಗೌರವಯುತವಾಗಿ ನಡೆಸಿಕೊಂಡವರಲ್ಲಿ ಬಹುತೇಕರು ಗೌಡರು, ದೇಸಾಯಿಗಳು, ದೇವಿ ಆರಾಧಕರು ಹಾಗೂ ಸಮಾಜದಲ್ಲಿ ಗಣ್ಯ ವ್ಯಕ್ತಿಗಳೆಂದು ಪರಿಗಣಿಸಲ್ಪಟ್ಟವರು. ಹೀಗೆ ಸಮಾಜದಲ್ಲಿ ಗಣ್ಯ ವ್ಯಕ್ತಿಗಳೆಂದು ಪರಿಗಣಿಸಲ್ಪಟ್ಟವರು, ಕಲೆಯ ಕಾರಣಕ್ಕಾಗಿಯೇ ತಮ್ಮನ್ನು ಗೌರವಿಸುವರು ಎಂದು ಹಾಡಿಕೆ ಮಹಿಳೆಯರು ಪರಿಭಾವಿಸುವರು. ನಾನು ಕಲಾಕಾರರನ್ನು ಸಂದರ್ಶಿಸಲು ಹೋದಾಗ, ಅಕ್ಕ-ಪಕ್ಕದವರಿಗೆ ಅವರು ಹೇಳಿಕೊಂಡಿದ್ದು ಹೀಗೆ; “ದೂರದ ಹಂಪಿ ಇನಿವರ್ಸಿಟಿಯಿಂದ ನಮ್ಮನ್ನ ಕಾಣಾಕ ಬಂದಾರ” ಎಂದು ಡಂಗುರವನ್ನೇ ಸಾರಿಕೊಂಡು ಬರುತ್ತಿದ್ದರು. ಮದನ್ಹಹಳ್ಳಿ ಭೀಮಾಬಾಯಿ, ಬೆಳಗಲಿಯ ದುರ್ಗಪ್ಪ ಇವರು “ಜರಾ (ಸ್ವಲ್ಪ) ಕೆಲಸ ಐತರಿ ಕಾರ‍್ನಾಗ ನಮ್ಮನ್ನ ಒಂದಿಷ್ಟ ಅಲ್ಲಿತನಾ ಸ್ವಲ್ಪ ಬಿಡ್ರಿ” ಎಂದರು. ಅವರು ಹೇಳಿದಲ್ಲಿಗೆ ಕಾರಿನಲ್ಲಿ ಕರೆದುಕೊಂಡು ಹೋದೆನು. ಕಾರಿನ ಕಿಟಕಿ ತೆರೆದುಕೊಂಡು ಕುಳಿತ ಅವರು ಅಲ್ಲಿ ಇಲ್ಲಿ ನಿಲ್ಲಿಸಿ, ಪರಿಚಯದವರೊಂದಿಗೆ ಮಾತನಾಡುತ್ತಿದ್ದರು. ಅವರು ಕಾರಿನಲ್ಲಿ ಕುಳಿತುಕೊಂಡ ಭಂಗಿ, ಎದುರಾದವರೊಡನೆ ಕಾರು ನಿಲ್ಲಿಸಿ ಮಾತನಾಡುವ ಭಂಗಿಯನ್ನು ನೋಡಬೇಕಿತ್ತು. ಹೆಮ್ಮೆಯಿಂದ ಬೀಗುತ್ತಿದ್ದ ಅವರು ತಮಗೆ ತುಂಬಾ ಗೌರವವಿದೆ ಎನ್ನುವುದನ್ನು ಊರು ತುಂಬ ಕಾರಿನಲ್ಲಿ ಸುತ್ತು ಹಾಕಿ ಅಲ್ಲಲ್ಲಿ ನಿಂತು ಮಾತನಾಡುತ್ತ ನಿರೂಪಿಸಿದರು. ಸಮಾಜದಲ್ಲಿ ದೊಡ್ಡವರೆನಿಸಿಕೊಂಡವರು ತೋರಿಸುವ ಪ್ರೀತಿ ಹಾಡುಗಾರರಿಗೆ ತಾವುಂಡ ಸಾವಿರ-ಸಾವಿರ ನೋವು, ಅಪಮಾನಗಳನ್ನು ಮರೆಯುವಂತೆ ಮಾಡುತ್ತವೆ; ಭ್ರಮಾ ಲೋಕಕ್ಕೂ ಕೊಂಡೊಯ್ಯುತ್ತವೆ. ಬೆಳಗಿನ ಆಕರ್ಷಣೆಗೊಳಗಾಗಿ ಬರುವ ದೀಪ ಹುಳುವಿನಂತೆ ಅಪರೂಪಕ್ಕೆ ದೊಡ್ಡವರು ತೋರುವ ಗೌರವಕ್ಕೆ ಮರುಳಾಗಿ ಹಾಡಿಕೆ ಮಹಿಳೆಯರು ತಾವಲ್ಲದೆ, ತಮ್ಮ ಕುಟುಂಬದಲ್ಲಿನ ಕಿರಿಯ ವಯಸ್ಸಿನ ಹುಡುಗಿಯರನ್ನು ಹಾಡಿಕೆಗೆ ಕರೆ ತರುತ್ತಿದ್ದಾರೆ.

ಹಾಡಿಕೆ : ಜ್ಞಾನ

ಹಾಡಿಕೆ ವಿದ್ಯೆಯನ್ನು ಗ್ರಾಮೀಣ ಪ್ರದೇಶದವರು ಜ್ಞಾನದ ನೆಲೆಯಲ್ಲಿಯೇ ಅರ್ಥೈಸುತ್ತಾರೆ. ಹರದೇಶಿ ಹಾಡುಗಾರನಾದ ಕಾಶಿನಾಥ ಚೌವ್ಹಾಣ ಹಾಡಿಕೆಯ ಕುರಿತು ಹೇಳಿಕೊಂಡದ್ದು ಹೀಗೆ: “ಆರು ಶಾಸ್ತ್ರ, ಹದಿನೆಂಟು ಪುರಾಣ, ನಾಲ್ಕು ವೇದಗಳು ಖುರಾನ್, ಬೈಬಲ್‌ಗೆ ಸಾಕ್ಷಿಯಾಗಿ ಹಾಡಿಕೆ ಪದಗಳಿವೆ”. ಲಿಖಿತ ಪರಂಪರೆಯು ಯಾವುದನ್ನು ಅಧಿಕೃತ ಜ್ಞಾನ ಪರಂಪರೆ ಎಂದು ಪರಿಭಾವಿಸುತ್ತದೆಯೋ ಹರದೇಶಿ-ನಾಗೇಶಿ ಹಾಡುಗಾರಿಕೆಯು ಅದರೊಳಗೆ ತನ್ನ ಜ್ಞಾನವನ್ನು ಸಮೀಕರಿಸುತ್ತದೆ. ಅದಕ್ಕಿಂತ ತಾನೊಂದು ಕೈ ಮೇಲು ಎನ್ನುವ ನಿರೂಪಣೆ ಕೊಟ್ಟುಕೊಳ್ಳುತ್ತದೆ. ಆರು ಶಾಸ್ತ್ರ, ಹದಿನೆಂಟು ಪುರಾಣಗಳು, ನಾಲ್ಕು ವೇದಗಳು, ಖುರಾನ್-ಬೈಬಲ್‌ಗಳನ್ನು ಓದಿ ಅರ್ಥೈಸಿಕೊಳ್ಳಲು ಇಡೀ ಜೀವಿತಾವಧಿ ಬೇಕಾಗುತ್ತದೆ. ವೃತ್ತಿಯಲ್ಲಿದ್ದ ಅವಧಿ ಉದ್ದಕ್ಕೂ ಹಾಡಿಕೆಯನ್ನು ಕಲಿಯಬೇಕಾದರೂ, ಕೇಳುಗರಿಗೆ ಶಾಸ್ತ್ರ-ಪುರಾಣ, ಬೈಬಲ್-ಖುರಾನ್‌ಗಳ ಜ್ಞಾನವನ್ನು ತಾಸೊತ್ತಿನಲ್ಲಿ ತಿಳಿಸಿಬಿಡುತ್ತೇವೆ ಎನ್ನುವ ಹೆಮ್ಮೆ ಅವರಲ್ಲಿದೆ. ಕಲಿತವರು ಹಾಡಿಕೆ ನಡೆಯುವ ಸ್ಥಳದಲ್ಲಿ ಪ್ರವೇಶಿಸಿದಾಗ ಹಾಡುಗಳು ಅಶ್ಲೀಲವಾದವುಗಳು ಎನ್ನುವ ಅರ್ಥ ನಿರ್ವಚನಗಳನ್ನು ಪಡೆದುಕೊಳ್ಳುತ್ತವೆ. ಆದರೆ ಹರದೇಶಿ-ನಾಗೇಶಿ ಹಾಡು ಹಾಡುವವರ ಲೋಕದಲ್ಲಿ ‘ಜ್ಞಾನ’ ಎಂದೇ ಅರ್ಥೈಸಲ್ಪಟ್ಟಿದೆ. ಹೀಗಾಗಿ ಹಿಂದೆಂದಿನಂತೆ ಇಂದಿಗೂ ಆಸಕ್ತಿಯಿಂದ ಹರದೇಶಿ-ನಾಗೇಶಿ ಹಾಡುಗಳನ್ನು ಕಲಿಯುವವರಿದ್ದಾರೆ. ಹಾಡಿಕೆ ವಿದ್ಯೆ ಮರ್ಯಾದೆ ಹಾಗೂ ಹಣ ಎರಡನ್ನೂ ನೀಡುತ್ತದೆ ಎನ್ನುವ ನಂಬಿಕೆ ಪುರುಷ ಹಾಡುಗಾರರಲ್ಲಿ ಹಾಗೂ ಮಹಿಳಾ ಹಾಡುಗಾರರಲ್ಲಿ ಇಬ್ಬರಲ್ಲೂ ಇದೆ. ಹೀಗಾಗಿ ತಾವು ಕಲಿತ ವಿದ್ಯೆಯನ್ನು ಮುಂದಿನ ಪೀಳಿಗೆಗೆ ರವಾನಿಸುವ ಏಜೆಂಟ್ ಕೆಲಸವನ್ನು ಅಪಮಾನಿತರೇ ನಿರ್ವಹಿಸುತ್ತಿರುತ್ತಾರೆ.

ಗ್ರಾಮೀಣ ಕಲಾ ಮಾರುಕಟ್ಟೆ: ಜಾತಿ ಹಾಗೂ ಲಿಂಗ ರಾಜಕಾರಣ

“ರಾಧಾನಾಟ, ದಾಸರಾಟ, ಪಾರಿಜಾತದಾಗ ಪಾತ್ರಾ ಮಾಡಾಕ ಹೆಣ್ಣಮಕ್ಕಳು ಸಿಗವಲ್ಲರು. ಇಲ್ಲಿ ಹೆಣ್ಣಮಕ್ಕಳು ಎಲ್ಲಾ ನಾಟಕ ಕಂಪನಿ ಸೇರ್ಕೊಂಡಾರು. ಈಗ ಸಿನಿಮಾ, ನಾಟಕ್ದಾಗ ಎಲ್ಲಾ ಜಾತಿಯವ್ರು ಸೇರ್ಕೊಂತಾರು. ‘ದೇವದಾಸಿ’ ಪದ್ದೂತಾ ಕಮ್ಮಿಯಾಗಾಕತ್ತೈತಿ. ನಮ್ಮಲ್ಲಿ ರಾಧನಾಟ, ದಾಸರಾಟಾ ಅದಾವು. ಸಣ್ಣಾಟದಾಗ ತಿರುನೀಲಕಂಠ, ಧ್ರುವಚರಿತೆ, ಅಕ್ಕ ಮಹಾದೇವಿ, ಮಾಯಿಯಾಟ, ಸತ್ಯವಾನ ಸಾವಿತ್ರಿ ಹೀಂಗ ಆಟ ಆದಾವ. ಈ ಆಟಾದಾಗೂ ಹೆಣ್ಹೆಚ್ಚು-ಗಂಡ್ಹೆಚ್ಚು ವಾದಾ ಐತಿ. ಹೆಣ್ಣ ಪಾತ್ರನ್ನ ದೇವದಾಸೇರ ಮಾಡ್ತಿದ್ರು. ಈಗ ದೇವದಾಸೇರು ಇಲ್ಲದ್ದಕ್ಕ ಇಂಥಾ ಸಣ್ಣಾಟಗಳು ಇನ್ನು ಮುಂದ ನಡಿಯೂದಿಲ್ಲ. ಹಳೆಮಂದಿ (ವಯಸ್ಸಾದವರು) ಇರುತಾನಾ ಈ ಕಲಾ ಇರ್ತಾವ. ಆ ಮ್ಯಾಲೆ ಅಕ್ಷರದಾಗಷ್ಟs ಉಳಿತಾವು” ಎನ್ನುವುದು ಹಿರಿಯ ಕಲಾವಿದರ ಅಳಲು. ಬಯಲಾಟಗಳಲ್ಲಿ ಹೊಸ ತಲೆಮಾರಿನ ಹುಡುಗಿಯರು ಸಿಗುತ್ತಿಲ್ಲ ಎಂದ ತಕ್ಷಣ ‘ದೇವದಾಸಿ ಪದ್ಧತಿ’ ನಿಂತಿದೆ ಎನ್ನುವ ನಿರ್ಣಯಕ್ಕೆ ಬರಲಾಗುವುದಿಲ್ಲ.

ಹಿರಿಯ ಕಲಾವಿದರು ಅಥವಾ ಅವರಂತೆ ಬಯಲಾಟಗಳನ್ನು ಕಲೆಯೆಂದು ಪರಿಭಾವಿಸುವ ವಿದ್ವಾಂಸರು ಕಲೆಯನ್ನು ಕಲಾತ್ಮಕ ನೆಲೆಯಲ್ಲಿಯೇ ಅರ್ಥೈಸುತ್ತಿದ್ದಾರೆ. ಕಲೆಯನ್ನು ಕಲಾತ್ಮಕ ನೆಲೆಯಲ್ಲಿಯೇ ಗ್ರಹಿಸಿದಾಗ, ಕಲೆಯೊಳಗಿನ ಶೋಷಿತ ಮೌಲ್ಯಗಳು ಬಯಲುಗೊಳ್ಳುವುದಿಲ್ಲ. ಕಲೆಯನ್ನು ಸಾಮಾಜಿಕ ನೆಲೆಗಳಲ್ಲಿಟ್ಟು ಚರ್ಚಿಸಿದಾಗ, ಅದರೊಳಗಿನ ಜಾತಿ, ಲಿಂಗ ಹಾಗೂ ವರ್ಗ ರಾಜಕಾರಣವು ಬಯಲುಗೊಳ್ಳುತ್ತದೆ. ರಾಧನಾಟ, ಪಾರಿಜಾತ, ಭಾಗವತ, ದಾರಾಟ, ಬಯಲಾಟ ಮೊದಲಾದವುಗಳಲ್ಲಿ ನಟಿಸುತ್ತಿದ್ದವರು ‘ದೇವದಾಸಿ’ಯರೇ. ‘ದೇವದಾಸಿ’ ಅಲ್ಲದ ಮಹಿಳೆಯರು ಬಯಲಾಟಗಳಲ್ಲಿ ನಟಿಸಿಲ್ಲ ಹಾಗೂ ನಟಿಸಲು ಬರುವುದಿಲ್ಲ. ಬಯಲಾಟಗಳು ನಶಿಸಿ ಹೋಗುತ್ತಿವೆ ಎಂದು ಹಳಹಳಿಸುತ್ತಿರುವವರಲ್ಲಿ ‘ದೇವದಾಸಿ’ ಪದ್ಧತಿ ಉಳಿಯಲೇಬೇಕೆಂಬ ಹಠವಿಲ್ಲ. ಆದರೆ ಅವರಿಗೆ ಕಲೆ ಬೇಕು. ಹೆಣ್ಣುಪಾತ್ರಗಳಲ್ಲಿ ‘ದೇವದಾಸಿ’ಯರನ್ನು ಹೊರತು ಪಡಿಸಿದಂತೆ ಬೇರಾರೂ ನಟಿಸಲು ಬರುವುದಿಲ್ಲ. ಅದೊಂದು ಸಾಮಾಜಿಕ ಪದ್ಧತಿ. ಗ್ರಾಮೀಣ ಭಾಗಗಳಲ್ಲಿ ಮಾತ್ರ ಈ ಕಲೆಗಳು ಬೇಡಿಕೆ ಉಳಿಸಿಕೊಂಡಿವೆ. ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಜಾತಿ ಶ್ರೇಣೀಕರಣಕ್ಕೆ ಅನುಗುಣವಾಗಿರುವ ಲಿಂಗ ಶ್ರೇಣೀಕರಣ; ಇವುಗಳಿಗೆ ಅನುಗುಣವಾಗಿ ರೂಪುಗೊಂಡ ಸಂಪ್ರದಾಯ ಆಚರಣೆಗಳು ಚಾಲ್ತಿಯಲ್ಲಿವೆ. ಬಯಲಾಟಗಳಲ್ಲಿನ ಪಾತ್ರಧಾರಿಗಳಿಗೆ ಸಂಭಾವನೆಯೂ ಅತಿ ಕಡಿಮೆಯಿರುತ್ತದೆ. ಹರದೇಶಿ-ನಾಗೇಶಿ ಹಾಡುಗಾರರಂತೆ ವರ್ಷವಿಡೀ ಪ್ರದರ್ಶನ ನೀಡಲು ಆಹ್ವಾ ದೊರೆಯುವುದಿಲ್ಲ. ಹೀಗಾಗಿ ಈ ಬಯಲಾಟಗಳು ಅವರ ಉಪಜೀವನಕ್ಕೆ ಸಹಾಯವಾಗುವುದಿಲ್ಲ. ಯಾರೇ ಆಗಲಿ ಕಲಿತ ವಿದ್ಯೆಗೂ, ವೃತ್ತಿಗೂ ನೇರವಾದ ಸಂಬಂಧವನ್ನು ಬಯಸುತ್ತಾರೆ. ಕಲಿತ ವಿ‌ದ್ಯೆ ವೃತ್ತಿಯಾಗಿ ಪರಿವರ್ತಿತವಾಗದಿದ್ದರೆ ಅದರಲ್ಲಿ ಯಾರೂ ಉಳಿದುಕೊಳ್ಳಬಯಸುವುದಿಲ್ಲ. ನಾನು ಭೇಟಿಯಾದ ಹಾಡಿಕೆಯವರು ಹೇಳಿದ ಪ್ರಕಾರ ಬಯಲಾಟದಲ್ಲಿರುವವರು ನಾಟಕಕ್ಕೆ ಪಲ್ಲಟಗೊಂಡಿದ್ದಾರೆ. ಇವರಲ್ಲಿ ಕೆಲವರು ನಾಟಕ ಕಂಪನಿಗಳಿಗೆ ಪಲ್ಲಟಗೊಂಡಿದ್ದರೆ; ಮತ್ತೆ ಕೆಲವರು ಗ್ರಾಮೀಣ ರಂಗಭೂಮಿಯನ್ನು ನೆಚ್ಚಿಕೊಂಡಿದ್ದಾರೆ. ನಾಟಕ ಕಂಪನಿಗಳಲ್ಲಿ ಎಲ್ಲ ಜಾತಿಯ ಮಹಿಳೆಯರು ನಟಿಯರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರಿಗೆ ತಿಂಗಳಿಗೆ ಇಂತಿಷ್ಟು ಎಂದು ನಿಗದಿತ ಸಂಬಳವಿರುತ್ತದೆ. ಆದರೆ ಗ್ರಾಮೀಣ ರಂಗಭೂಮಿಯಲ್ಲಿ ಶೇಕಡಾ ತೊಂಬತ್ತೆಂಟರಷ್ಟು ‘ದೇವದಾಸಿ’ಯರೇ ನಟಿಸುತ್ತಿದ್ದಾರೆ. ಇನ್ನು ಉಳಿದ ಶೇಕಡಾ ಎರಡರಷ್ಟು ಮಹಿಳೆಯರು ತಳ ಸಮುದಾಯದ ಮಹಿಳೆಯರೇ ಆಗಿದ್ದು. ‘ವಿಧವೆ’ಯರಾಗಿರುತ್ತಾರೆ. ಹಾಡಿಕೆ ವೃತ್ತಿಯ ಹಾಗೆಯೇ ಗ್ರಾಮೀಣ ರಂಗಭೂಮಿಯಲ್ಲಿ ನಟಿಸುವ ಮಹಿಳೆಯರು ನಟನೆಯನ್ನು ವೃತ್ತಿಯಾಗಿಯೇ ಪರಿಭಾವಿಸಿಕೊಂಡಿರುತ್ತಾರೆ. ಹಾಡಿಕೆಯವರ ಹಾಗೆ ಇವರು ಮೇಳ ಕಟ್ಟಿಕೊಳ್ಳಬೇಕಿಲ್ಲ. ವೀರ ಅಭಿಮನ್ಯು, ಕುರುಕ್ಷೇತ್ರ, ಅಕ್ಷಯಾಂಬರ, ರಕ್ತ ರಾತ್ರಿ, ಹೇಮರೆಡ್ಡಿ ಮಲ್ಲಮ್ಮ ಮೊದಲಾದ ಪೌರಾಣಿಕ ನಾಟಕಗಳನ್ನು; ಅಣ್ಣ-ತಂಗಿ, ರಕ್ಷಾ ಬಂಧನ, ಮಾತಂಗ ಕನ್ಯಾ, ದಾರಿ ದೀಪ, ಬಂಜೆ ತೊಟ್ಟಿಲು, ಗಂಡನ ಆಜ್ಞೆ ಮೊದಲಾದ ಸಾಮಾಜಿಕ ನಾಟಕಗಳನ್ನು ಗ್ರಾಮೀಣ ರಂಗಭೂಮಿಯವರು ಆಡಿಸುತ್ತಾರೆ. ಈ ನಾಟಕಗಳಲ್ಲಿನ ನಿಗದಿತ ಪಾತ್ರಗಳಲ್ಲಿ ‘ದೇವದಾಸಿಯರು’ ತರಬೇತುಗೊಂಡಿರುತ್ತಾರೆ. ಆಯಾ ಪಾತ್ರಗಳ ಮೂಲಕ ಹೆಸರು ಪಡೆದುಕೊಂಡಿರುತ್ತಾರೆ. ಎಲ್ಲ ಗ್ರಾಮೀಣ ಪ್ರದೇಶಗಳಲ್ಲಿ ವರ್ಷಕ್ಕೊಮ್ಮೆ ನಾಟಕವಾಡುತ್ತಾರೆ. ಪುರುಷ ಪಾತ್ರಧಾರಿಗಳು ಸ್ಥಳೀಯರೇ ಆಗಿರುತ್ತಾರೆ. ಮಧ್ಯಮ ಜಾತಿ ಇಲ್ಲವೆ ಕೆಳ ಮಧ್ಯಮ ಜಾತಿಗಳಲ್ಲಿನ ಪುರುಷರೇ ನಟಿಸುತ್ತಾರೆ. ಹೆಣ್ಣು ಪಾತ್ರಧಾರಿಗಳನ್ನು ಮಾತ್ರ ಹೊರಗಡೆಯಿಂದ ಕರೆಯಿಸುತ್ತಾರೆ. ಹಾಡಿಕೆಯ ಹಾಗೆಯೇ ಗ್ರಾಮೀಣ ರಂಗಭೂಮಿಯಲ್ಲಿ (ಹವ್ಯಾಸಿ ರಂಗಭೂಮಿ) ಮಹಿಳಾ ಪಾತ್ರಗಳನ್ನು ನಿರ್ವಹಿಸುತ್ತಿದ್ದ ‘ದೇವದಾಸಿಯರು’ ಆರಂಭದಲ್ಲಿ ಅರವತ್ತು ರೂಪಾಯಿಗಳನ್ನು ಪಡೆಯುತ್ತಿದ್ದರು. ಈಗ ಪ್ರತಿಯೊಬ್ಬ ನಟಿಯೂ ದಿನವೊಂದಕ್ಕೆ ಎರಡು ಸಾವಿರದ ಐದನೂರರಿಂದ ಮೂರು ಸಾವಿರದವರೆಗೆ ಸಂಭಾವನೆ ಪಡೆದುಕೊಳ್ಳುತ್ತಾರೆ. ಸುಭದ್ರಮ್ಮ ಮನ್ಸೂರ ಅವರಂತೆ ಹೆಸರುವಾಸಿಯಾದವರು ಒಂದು ದಿನಕ್ಕೆ ನಾಲ್ಕು ಸಾವಿರದಿಂದ ಐದು ಸಾವಿರದವರೆಗೆ ಸಂಭಾವನೆಯನ್ನು ಪಡೆದುಕೊಳ್ಳುತ್ತಾರೆ. ಹೀಗಾಗಿ ಹರದೇಶಿ-ನಾಗೇಶಿ ಗಂಡ್ಹೆಚ್ಚು-ಹೆಣ್ಣೆಚ್ಚು ಎನ್ನುವ ವಾದವನ್ನೇ ಮಂಡಿಸುವ ತಿರುನೀಲಕಂಠ, ಧ್ರುವ ಚರಿತ್ರೆ, ಅಕ್ಕಮಹಾದೇವಿ, ಮಾಯಿಯಾಟ, ಸತ್ಯವಾನ ಸಾವಿತ್ರಿ ಮೊದಲಾದ ಆಟಗಳು ಜನ ಬೇಡಿಕೆಯನ್ನು ಕಳೆದುಕೊಂಡಿವೆ. ಬಯಲಾಟಗಳ ಅಭಿರುಚಿಯು ಗ್ರಾಮೀಣ ರಂಗಭೂಮಿಯತ್ತ ಹೊರಳಿದೆ. ಸ್ಥಳೀಯ ಜನರ ಅಪೇಕ್ಷೆಗೆ ಅನುಗುಣವಾಗಿ ಸ್ಥಳೀಯ ಮಾರುಕಟ್ಟೆಯು ರೂಪು ಗೊಳ್ಳುತ್ತಿರುತ್ತದೆ. ರಾಧಾನಾಟ, ಕೃಷ್ಣ ಪಾರಿಜಾತಗಳು ಕಡಿಮೆಯಾಗುತ್ತಿವೆ ಎಂದ ತಕ್ಷಣ ‘ದೇವದಾಸಿ ಪದ್ಧತಿ’ ಕ್ಷೀಣಗೊಳ್ಳುತ್ತಿದೆ ಅಥವಾ ನಿಂತೇ ಹೋಗಿದೆ ಎಂದು ಸಂಭ್ರಮಿಸಬೇಕಿಲ್ಲ. ‘ದೇವದಾಸಿ’ಯರೆಲ್ಲರೂ ಗ್ರಾಮೀಣ ಕಲಾ ಮಾರುಕಟ್ಟೆಯ ಅಭಿರುಚಿಗೆ ಅನುಗುಣವಾಗಿ ಕಲೆಯನ್ನು ರೂಢಿಸಿಕೊಂಡವರು ಅಥವಾ ಗ್ರಾಮೀಣ ಕಲಾ ಮಾರುಕಟ್ಟೆಯು ತನ್ನ ಅಭಿರುಚಿ ಹಾಗೂ ಅಪೇಕ್ಷೆಗೆ ಅನುಗುಣವಾಗಿ ‘ದೇವದಾಸಿ’ಯರನ್ನು ಕಲಾವಿದರನ್ನಾಗಿ ರೂಪಿಸುತ್ತಿರುತ್ತದೆ. ‘ದೇವದಾಸಿ’ಯರು ಗ್ರಾಮೀಣ ಕಲಾ ಮಾರುಕಟ್ಟೆಯನ್ನೇ ಅವಲಂಬಿಸಿದ್ದರಿಂದ ಅದರ ಅಭಿರುಚಿಗೆ ಅನುಗುಣವಾಗಿ, ಅಪೇಕ್ಷೆಗೆ ಅನುಗುಣವಾಗಿ ಭಿನ್ನ-ಭಿನ್ನ ಕಲೆಗಳಿಗೆ ಸ್ಥಿತ್ಯಂತರ ಗೊಳ್ಳುತ್ತಾರೆ. ಹೆಣ್ಣ್ಹೆಚ್ಚು-ಗಂಡ್ಹೆಚ್ಚು ವಾದವನ್ನೇ ಮಂಡಿಸುವ ಸಣ್ಣಾಟಗಳು ಕ್ಷೀಣಿಸುತ್ತಿವೆ ಎಂದ ತಕ್ಷಣ ‘ದೇವದಾಸಿ ಪದ್ಧತಿ’ ನಿಂತೇ ಹೋಗಿದೆ ಎನ್ನುವ ನಿರ್ಣಯಕ್ಕೆ ಬರಬಾರದು. ಸಣ್ಣಾಟದಲ್ಲಿರುವವರು ಗ್ರಾಮೀಣ ರಂಗಭೂಮಿಗೆ ಇಲ್ಲವೆ ಹಾಡಿಕೆಯಲ್ಲಿರುವವರು ಗ್ರಾಮೀಣ ರಂಗಭೂಮಿಗೆ ಪಲ್ಲಟಗೊಳ್ಳುತ್ತಿರುತ್ತಾರೆ.

ಗ್ರಾಮೀಣ ಕಲಾ ಮಾರುಕಟ್ಟೆಯಲ್ಲಿ ಬೇಡಿಕೆಯಲ್ಲಿರುವ ಪ್ರದರ್ಶನ ಕಲೆಗೂ ಜಾತಿಗೂ, ಲಿಂಗಕ್ಕೂ ಹಾಗೂ ವರ್ಗಕ್ಕೂ ನೇರವಾದ ಸಂಬಂಧವಿದೆ. ಗ್ರಾಮೀಣ ಪ್ರದೇಶಗಳಲ್ಲಿ ಬೇಡಿಕೆಯಲ್ಲಿರುವ ಕಲೆಗಳಿಗೆ ಶಾಸ್ತ್ರೀಯ ಸ್ವರೂಪ ಇಲ್ಲ. ಅವೆಲ್ಲವೂ ಗತ್ತು ಪ್ರಧಾನವಾದವುಗಳು. ಗ್ರಾಮೀಣ ಪ್ರದೇಶದಲ್ಲಿನ ಪ್ರದರ್ಶನ ಕಲೆಗಳು ಜಾಗತಿಕ ಮಾರುಕಟ್ಟೆಯನ್ನು ಪ್ರವೇಶಿಸಿಲ್ಲ; ಅಥವಾ ಜಾಗತಿಕ ಮಾರುಕಟ್ಟೆಯು ತನ್ನನ್ನು ತಾನು ಗ್ರಾಮೀಣ ಕಲಾ ಮಾರುಕಟ್ಟೆಗೆ ವಿಸ್ತರಿಸಿಕೊಂಡಿಲ್ಲ. ಬಡತನವನ್ನೇ ಹಾಸು ಹೊದ್ದು ಮಲಗಿರುವ ಗ್ರಾಮೀಣ ಜನತೆಯಿಂದ ಜಾಗತಿಕ ಉದ್ದಿಮೆಗಳು ನಿರೀಕ್ಷಿಸುವ ಲಾಭಾಂಶಗಳು ದಕ್ಕುವುದಿಲ್ಲ. ಜಾಗತಿಕ ಮಾರುಕಟ್ಟೆಯು ಅಪೇಕ್ಷಿಸುವ ಲಾಭಾಂಶಗಳು ಎಲ್ಲಿ ಇರುವುದಿಲ್ಲವೋ, ಅಲ್ಲಿ ಜಾಗತಿಕ ಮಾರುಕಟ್ಟೆಗಳು ಪ್ರವೇಶಿಸುವುದಿಲ್ಲ. ಹೀಗಾಗಿ ಸ್ಥಳೀಯ ಮಾರುಕಟ್ಟೆಗಳು ರೂಢಿಸಿಕೊಂಡಿರುವ ಲಿಂಗ, ಜಾತಿ ಹಾಗೂ ವರ್ಗ ರಾಜಕಾರಣದ ಭಾಗವಾಗಿಯೇ ಗ್ರಾಮೀಣ ಪ್ರದೇಶಗಳಲ್ಲಿನ ಕಲೆಗಳು ಬೆಳೆಯುತ್ತವೆ. ಹರದೇಶಿ-ನಾಗೇಶಿಯಂತಹ ಕಲೆಗಳು ವೃತ್ತಿಯಾಗಿ ಪರಿಗಣಿಸಲ್ಪಟ್ಟರೂ ಸಾಂಸ್ಕೃತಿಕ ಮೌಲ್ಯಗಳೇ ಪ್ರಧಾನವಾಗಿ ಇಂತ ವೃತ್ತಿಗಳನ್ನು ಆಳುತ್ತಿವೆ. ವೃತ್ತಿ ಹಿಂದೆ ಸರಿದು ಸಾಂಸ್ಕೃತಿಕ ಮೌಲ್ಯಗಳು ಮುಂದಾದಾಗ ಪ್ರದರ್ಶನ ಕಲೆಗಳಿಗೂ ಹಾಗೂ ಲಿಂಗ, ಜಾತಿ ಹಾಗೂ ವರ್ಗಕ್ಕೂ ಬೇರ್ಪಡಿಸಲಾಗದ ಗಾಢವಾದ ಸಂಬಂಧಗಳು ಬೆಳೆಯುತ್ತವೆ. ಹೀಗಾಗಿ ದಪ್ಪಿಗೂ, ಚೌಡಕಿಗೂ ‘ದೇವದಾಸಿ ಪದ್ಧತಿ’ಗೂ ನೇರವಾದ ಸಂಬಂಧಗಳಿವೆ. ಹರದೇಶಿ-ನಾಗೇಶಿ ಹಾಡುಗಾರಿಕೆ ಉಳಿಯಬೇಕೆಂದರೆ ‘ದೇವದಾಸಿ ಪದ್ಧತಿ’ ಉಳಿಯಬೇಕು ಎಂದೇ ಅರ್ಥ, ದಪ್ಪು ಹಿಡಿಯಬೇಕೆಂದರೆ, ಚೌಡಕಿ ಹಿಡಿಯಬೇಕೆಂದರೆ ಮದುವೆಯಾಗುವಂತಿಲ್ಲ ಎನ್ನುವ ನಂಬಿಕೆ ನಾನು ಸಂದರ್ಶಿಸಿದ ಎಲ್ಲ ಮಹಿಳಾ ಹಾಡುಗಾರರಲ್ಲಿ ಗಾಢವಾಗಿ ಇದ್ದುದು ಕಂಡುಬಂದಿತು.

ಲಂಬಾಣಿ ಜನಾಂಗಕ್ಕೆ ಸೇರಿದ ಬಾನಾಬಾಯಿ ಮದುವೆಯಾಗಿದ್ದರೂ ನಾಗೇಶಿ ಹಾಡುಗಳನ್ನು ಕಲಿಯುತ್ತಿರುವ ತನ್ನ ಹೆಣ್ಣುಮಕ್ಕಳ ಬಗೆಗೆ ಹೇಳಿದ್ದು ಹೀಗೆ; “ನನ್ನ ಮಕ್ಕಳು ಈ ಕಲಿ ಹಿಂದೆ ಬೆನ್ನ ಹತ್ತ್ಯಾರ ಅಂದ್ರ ಮದ್ವಿ ಆಗಾಕ ಬರುವಂಗಿಲ್ಲ. ನಾನು ನಾಗೇಶಿ ಹಾಡ್ಕಿ ಕಲಿತ್ತದ್ದು ಮದ್ವಿಯಾಗಿಂದ; ಗಂಡ ಕಲಿ ಅಂತ ಹೇಳಿಂದ ಕಲ್ತ್ಯಾ. ಮದ್ವಿಗೆ ಮುಕ್ಕಟ (ಮುಂಚಿತವಾಗಿ) ಹಾಡ್ಕಿ ಶುರು ಹಚಗೊಂಡಾರ ಅಂದ್ರ ಮದ್ವಿ ಆಗುವಂಗಿಲ್ಲ. ಹಾಡಿಕೆ ಹುಡಗೇರ್ನ ನಮ್ಮಂದ್ಯಾಗ ಯಾ ಗಂಡೂ ಮದುವಿ ಆಗಾಕ ಮನಸ್ಸು ಮಾಡೂದಿಲ್ಲ. ಹಾಡಿಕಿನs ಹಂಗ್ರಿ, ಹೆಣ್ಣಮಕ್ಕಳ್ನ ಮದ್ವಿ ಮಾಡಿಸಿಕೊಡುದಿಲ್ಲ” ‘ದೇವದಾಸಿಯರು’, ಹಿಡಿಯುವ ದಪ್ಪಿಗೂ, ತಾಳಕ್ಕೂ, ಚೌಡಕಿಗೂ ಹಾಗೂ ಮದುವೆಯ ನಿರಾಕರಣೆಗೂ ಸಂಬಂಧ ಕಲ್ಪಿಸಿಕೊಂಡರೆ; ಬಾನಾಬಾಯಿಯು ಹಾಡಿಕೆ ವೃತ್ತಿಗೂ ಮದುವೆಯಾಗದಿರುವುದಕ್ಕೂ ಸಂಬಂಧ ಕಲ್ಪಿಸಿಕೊಳ್ಳುತ್ತಾಳೆ. ಗ್ರಾಮೀಣ ಭಾಗಗಳಲ್ಲಿನ ಕೆಳಜಾತಿಯ ಮಹಿಳೆಯರು, ಬುಡಕಟ್ಟು ಮಹಿಳೆಯರು ಹಾಡಿಕೆಯಂತಹ ಕಲಾ ವೃತ್ತಿಯನ್ನು ಮದುವೆ ಮುಕ್ತ ಜೀವನಕ್ಕೆ ಸಮೀಕರಣಕ್ಕೆ ಒಳಪಡಿಸುತ್ತಾರೆ. ಮೇಲ್ಜಾತಿಯ, ಮೇಲ್ವರ್ಗದ ಲಿಂಗ ಹಾಗೂ ಜಾತಿ ರಾಜಕಾರಣದ ಭಾಗವಾಗಿ ಇಂತಹ ತಾತ್ವಿಕತೆ ರೂಪಗೊಂಡಿದೆಯೋ ಅಥವಾ ಕಲಾ ಪ್ರೀತಿಯನ್ನು ಇಟ್ಟುಕೊಂಡಂತ ತಳ ಸಮುದಾಯದ ಮಹಿಳೆಯರ ಒಳಗಿನಿಂದ ಇಂತಹ ತಾತ್ವಿಕತೆ ರೂಪುಗೊಂಡಿದೆಯೋ, ಖಚಿತವಾಗಿ ಹೇಳಲಾಗುವುದಿಲ್ಲ. ಇದನ್ನು ಅರ್ಥ ಮಾಡಿಕೊಳ್ಳಲು ಇನ್ನಷ್ಟು ಅಧ್ಯಯನಗಳು ನಡೆಯಬೇಕಿದೆ. ಹಾಡಿಕೆಗಾಗಿ, ಗ್ರಾಮೀಣ ರಂಗಭೂಮಿಯಲ್ಲಿ ನಟಿಸುವುದಕ್ಕಾಗಿ ತಳ ಸಮುದಾಯಗಳ ಮಹಿಳೆಯರು ‘ದೇವದಾಸಿ’ಯರಾಗಿಲ್ಲ. ‘ದೇವದಾಸಿ’ ಬದುಕಿಗಿಂತ, ಭಿನ್ನವಾಗಿ ಬದುಕಬೇಕೆಂಬ ಪರ್ಯಾಯ ಬದುಕಿನ ಕನಸಿನಿಂದ ಹಾಡಿಕೆಯಂತಹ ಕಲಾ ಪ್ರವೇಶ ಮಾಡಿದರು ಎನ್ನುವ ಎಚ್ಚರಿಕೆಯನ್ನು ಇಟ್ಟುಕೊಂಡೇ ಅಧ್ಯಯನ ನಡೆಸಬೇಕಿದೆ.

ನಾಗ ಕನ್ಯೆಯರು: ಹಾಡಿಕೆ

ಮಹಿಳಾ ಹಾಡುಗಾರರಲ್ಲಿ ಬಹುತೇಕರು ಹರದೇಶಿ-ನಾಗೇಶಿ ಹಾಡುಗಳನ್ನು ಆಧ್ಯಾತ್ಮಿಕ ನೆಲೆಯಲ್ಲಿ ಸ್ವೀಕರಿಸುತ್ತಾರೆ. ಬಬಲೇಶ್ವರದ ಬಂಗಾರವ್ವನು ಹಾಡಿಗೂ, ದೈವಿ ಶಕ್ತಿ ಆಹ್ವಾನೆಗೂ ಸಂಬಂಧ ಕಲ್ಪಿಸಿಕೊಂಡು ಹೇಳಿದ ಕಥನವಿದು. “ಚಿಕ್ಕೋಡಿ ತಾಲೂಕಿಗೆ ಹಾಡಿಕೆಗೆ ಹೋಗಿದ್ದ್ಯಾ. ಅಲ್ಲಿ ನಾಗಪ್ಪನ ಮ್ಯಾಗ ಹಾಡಿದ್ಯಾ.

“ನಡೀರೆ ನಾಗಯ್ಯಾಗ ಹಾಲು ಎರಿಯಾನು
ನರ-ನಾರೇರು ಕೂಡಿ
ನಾಗಗನ್ನೇರು ನಾವು ಒಂದ್ಹೊತ್ತು ಮಾಡಿ
ನಾಗಗನ್ನೇರು ನಾಲ್ವರು ಕೂಡಿ
ನಾಗಯ್ಯಾಗ ಹಾಲು ಎರಿಯೋನು
ಬಕ್ತಿಯೆಂಬ ಬಾನ, ನೇವೇದ್ಯ ಮಾಡಿ
ಓಂ ಶಿವ ಎಂದು ನಾವು ಬರೂನ ಹಾಡಿ”

ಈ ಹಾಡು ಇನ್ನ ಬಾಳಾ ದ್ವಾಡ್ದ ಐತ್ರಿ. ಈ ಹಾಡ ಹಾಡಿದ್ದಕ್ಕ ಎಲ್ಲಿದ್ದುವೋ ಏನೋ ನಾಕೈದು ನಾಗರ ಹಾವಾ ಹೆಡಿ ಎತ್ತಿಕೊಂಡು ಬಂದು ಕುಂತ್ವು. ಜನಾ ಎಲ್ಲಾ ಹೌಹಾರಿದ್ರು. ಊರಿನ ಮುಕಂಡರು (ಮುಖಂಡರು) ಬಂದ ನಾಗಪ್ಪಗೊಳಗಿ ಪೂಜೆ ಮಾಡಿ ನಮ್ಮ ಕಡಿಲಿಂದ (ಭಾಗದಿಂದ) ಏನಾರ ತೆಪ್ಪ (ತಪ್ಪು) ಆಗಿದ್ರ ಹೊಟ್ಟ್ಯಾಗ ಹಾಕೋ ಅಪ್ಪಾ ಅಂತ ಸನಮಾ (ನಮಸ್ಕಾರಾ) ಮಾಡಿದ್ರು. ಆಮಾಲತ್ತ ಊರ ಹಿರ್ಯಾರು ನನಗ ಕೈ ಮುಗಿದ್ರು. ಖರೆವಂದ್ರ (ನಿಜವಾಗಲೂ) ನೀನು ನಾಗಕನ್ನೇನ ತಾಯಿ ಅಂತ ನಂಗ ಕೈ ಮುಗಿದ್ರು. ಖರೆವ ಹೇಳಬೇಕೆಂದ್ರ ನಾಗನ್ನೇರು, ಜೊಗತೇರು ಬಲ್ಲಿ (ಹತ್ತಿರ) ದೈವಸಕ್ತಿ ಇರ್ತವ. ನಿಮ್ಮಂಥಾ ಜನಾ ನಮ್ಮನ್ನ ದೇವದಾಸಿ, ಊಳಿ ಅಂತ ಕರ್ದು ನಮಗ ಕಿಮ್ಮತ್ತ ಇಲ್ದಂಗ ಮಾಡೇರಿ. ನಮ್ಮ ಶಕ್ತಿ ಎನಂತ ಆ ದೇವಿಗಿ ಗೊತ್ತೈತಿ; ನಮಗ ಗೊತ್ತೈತಿ. ನಾಗಪ್ಪ ಹಾಡಾ ನಾನು ಹಾಡಾಕ ಚಾಲು ಮಾಡಿಂದ ನಾಗಪ್ಪಗೋಳು ಬಂದ ಯಾಕ ಕೂಡಬೇಕ್ರಿ? ನೀವು ಹಾಡಿ ನೋಡ್ರಿ, ನೀವು ಹಾಡಿದ್ರ ಒಂದೂ ನಾಗಪ್ಪ ಬರೂದಿಲ್ಲ. ಸಮಾಜದಾಗ ನೀವು ದೊಡ್ಡೋರು ಇರಬೋದು. ದೇವರ ಕಡಿಲಿಂದ (ದೃಷ್ಟಿಯಿಂದ) ಅಲ್ಲ. ನಾವು ದೇವಿ ಮಕ್ಕಳು. ಅದಕ್ಕ ನಾವು ಕರದ್ರ ನಾಗಪ್ಪಗೊಳು ಹುಬ-ಹುಬ ನಮ್ಮ ಕಣ್ಣೆದ್ರುಗೆ ಬಂದ ಕೂಡತಾವು” ಎಂದು ಹೇಳಿದಳು. ನಾನು ಸಂದರ್ಶಿಸಿದ ನೂರಾರು ಮಹಿಳಾ ಹಾಡುಗಾರರು ಇಂತಹ ನೂರಾರು ಅನುಭವ ಕಥನಗಳನ್ನು ಹೇಳಿದರು. ಬಬಲೇಶ್ವರದ ಬಂಗಾರವ್ವನು ಹೇಳಿದ ಕಥನವನ್ನು ಉಲ್ಲೇಖಿಸಿದ ಉದ್ದೇಶವಿಷ್ಟೆ. ‘ದೇವದಾಸಿ’ಯರಾದ ಕಾರಣ ತಮ್ಮಲ್ಲಿ ವಿಶೇಷ ಶಕ್ತಿ ಇದೆ; ಈ ಶಕ್ತಿಯು ಪ್ರಕಟಗೊಳ್ಳುವ ಮಂತ್ರಗಳಾಗಿ ಹರದೇಶಿ-ನಾಗೇಶಿ ಹಾಡುಗಳಿವೆ; ಹಾಡಿಕೆಯಲ್ಲಿ ಅವರಲ್ಲಿನ ದೈವಿ ಶಕ್ತಿ ಪ್ರದರ್ಶನಗೊಳ್ಳುತ್ತದೆ. ಹೀಗೆ ತಮ್ಮನ್ನು ತಾವು ದೈವಿಕ ನೆಲೆಯಲ್ಲಿ ನಿರ್ವಚಿಸಿಕೊಳ್ಳುತ್ತಾರೆ. ಹೀಗಾಗಿ ಅವರಿಗೆ ‘ದೇವದಾಸಿ ಪದ್ಧತಿ’ಯನ್ನು ಸಾಮಾಜಿಕ ಸಮಸ್ಯೆಯಾಗಿ ಪರಿಭಾವಿಸಲು ಸಾಧ್ಯವಾಗುತ್ತಿಲ್ಲ. ‘ದೇವದಾಸಿ ಪದ್ಧತಿ’ಗೆ ಒಳಗಾಗುವವರು, ‘ದೇವದಾಸಿ ಪದ್ಧತಿ’ಯನ್ನು ಸಮಸ್ಯೆಯಾಗಿ ಪರಿಭಾವಿಸದ ಹೊರತು, ಈ ಪದ್ಧತಿಯನ್ನು ನಿರ್ಮೂಲನ ಮಾಡಲು ಸಾಧ್ಯವಿಲ್ಲ.

ಹಾಡಿಕೆ ವಿಸ್ತರಣೆ

‘ದೇವದಾಸಿ’ ಪದ್ಧತಿಯಲ್ಲಿನ ಹಾಗೂ ಹಾಡಿಕೆ ಬಗೆಗಿನ ಮೂಢನಂಬಿಕೆಗಳಷ್ಟೆ ‘ದೇವದಾಸಿ’ ಪದ್ಧತಿಯನ್ನು ಹಾಗೂ ಹಾಡಿಕೆಯನ್ನು ಪೋಷಿಸುತ್ತದೆ ಎಂದು ಹೇಳಲಾಗುವುದಿಲ್ಲ. ಈ ಹಿಂದೆ ಚರ್ಚಿಸಿದಂತೆ ಪ್ರಬಲವಾದ ಆರ್ಥಿಕ ಕಾರಣವೂ ಇದಕ್ಕಿದೆ. ಹೊಲ ಮನೆಗಳ ದಿನಗೂಲಿ ಗಳಿಗಿಂತ ಹಾಡಿಕೆಗೆ ಆಕರ್ಷಕವಾದ ಸಂಬಳ ದೊರೆಯುವುದರಿಂದ ಬಹುತೇಕ ‘ದೇವದಾಸಿ’ಯರು ಹಾಡಿಕೆಯತ್ತ ವಾಲುತ್ತಿದ್ದಾರೆ. “ದಿನಗೂಲಿ ಆದ್ರ, ಕೂಲಿಗಿ ಹೋದದ್ದಷ್ಟ ಲೆಕ್ಕ ತಂಗಿ. ನಿಮ್ಮಂದಿ ನಮ್ಮನ್ನ ಮನಿ ಕೆಲ್ಸಕ್ಕ ಕರಕೊಳ್ಳುದಿಲ್ಲ. ರಾಜಸ್ತಾನಿ ಮಂದಿ ಕಸ-ಮುಸ್ರಿಗೆ ಕರಿತಾರ. ಅನುವು-ಆಪತ್ತು ಅಂತ ದಗದಕ್ಕ (ಕೆಲಸ) ಹೋಗೂದು ಬಿಟ್ಟರ ಅವತ್ತಿನ ಪಗಾರ ಕಟ್ಟ ಮಾಡ್ತಾರ. ಹೊಲದ ದಗದದ್ದು ಅದs ಹಣಿಬಾರಾ. ತಂಗಿ ನಾನು ದಗದಾ ಮಾಡು ಮನಿ ಮಾಲಕ್ತಿ ಉಟ್ಟಬಿಟ್ಟ ಸೀರಿನೂ ಮಾರ್ತಾಳು. ಆಕಿ ಮಾರು ಸೀರ್ಯಾಗ ಜಿಗಿ (ಸತ್ವ) ಇರೂದಿಲ್ಲ. ಅಂಥಾ ಒಂದ ಸೀರಿಗೆ ಮೂವತ್ತು ಇಲ್ಲ ನಲವತ್ತು ರೂಪಾಯಿದಂಗ ಮಾರಾಟ ಮಾಡ್ತಾಳು. ಅಂಥಾ ಸೀರಿನ ಕೊಟ್ಟು, ನನಗ ಕೊಡು ಪಗಾರದಾಗನs ಸೀರಿ ಲೆಕ್ಕಾ ಮುರಕೋತಾಳು. ಇದನ್ನ ನೋಡಿದ್ರ ಹಾಡಿಕೆನ ಬೇಸಿ (ಒಳ್ಳೆಯದು) ಅನಸ್ತೈತ್ತಲ್ಲ್ರಿ ನಿಮಗ? ಅದಕ್ಕ ನಾವು ಹಾಡ್ಕಿ ಮಾಡ್ತೇವು. ಅದರಾಗೇನ ಇವತ್ತ ಬಂದಿಲ್ಲ, ನಿನ್ನಿ ಬಂದಿಲ್ಲ ಅಂತ ಪಗಾರಾ ಕಟ್ ಮಾಡಾಕ ಬರೂದಿಲ್ಲ. ಇಲ್ಲಿಯವರಂಗ ಹಳಿ ಸೀರಿ ಕೊಡೂದಿಲ್ಲ. ಹೊಸ ಸೀರಿ, ಹೊಸಾ ಕುಬ್ಸಾ ಕೊಟ್ಟ ದಂಡಿ ಕಟ್ಟಿ ಮ್ಯಾಲ ಉಡಿ ತುಂಬಿ ಕಳಿಸ್ತಾರ. ಮಾತಾಡಿದಷ್ಟು ಪಗಾರ ಕೊಡ್ತಾರು ಎಂದು ವಿಜಾಪುರದ ದಾನಮ್ಮ ಹೇಳಿದಳು. ಹೊಲ-ಮನೆಯ ದಿನಗೂಲಿಗಿಂತ ಹಾಡಿಕೆಯಲ್ಲಿ ಆಕರ್ಷಕ ಸಂಬಳ ದೊರೆಯುವುದರಿಂದ ‘ದೇವದಾಸಿ’ಯರೆಲ್ಲೂ ಹಾಡಿಕೆಯತ್ತ ವಾಲುತ್ತಿದ್ದಾರೆ. ಹೀಗಾಗಿಯೇ ಏನೋ ಹರದೇಶಿ-ನಾಗೇಶಿ ಹಾಡಿಕೆ ಹೊಸ ಟಿಸಿಲೊಡೆದು ಕುರುಬ ಜನಾಂಗದಲ್ಲಿ ಪ್ರವೇಶಿಸಿದೆ. ಜಮಖಂಡಿ ತಾಲೂಕಿನ ಮಣ್ಣೂರು, ತಲ್ಲಿಹಾಳ, ಮುತ್ತೂರು ಗ್ರಾಮಗಳಲ್ಲಿ, ಮುಧೋಳದ ವಜ್ರಮಟ್ಟಿಯಲ್ಲಿ ಹರದೇಶಿ-ನಾಗೇಶಿಯ ಹಾಗೆ ಅಮೋಘ ಸಿದ್ಧನ ಮೇಳ, ಬೀರದೇವರ ಮೇಳ ಹುಟ್ಟಿಕೊಂಡಿರುವುದು ಕ್ಷೇತ್ರಕಾರ್ಯದ ಸಂದರ್ಭದಲ್ಲಿ ತಿಳಿದುಬಂದಿತು. ಅಮೋಘಸಿದ್ಧನ ಮೇಳವು ಗಂಡು ಹೆಚ್ಚು ಎನ್ನುವ ನಿರೂಪಣೆಯನ್ನು ಬೆಳೆಸಿದರೆ; ಬೀರ ದೇವರ ಮೇಳವು ಹೆಣ್ಣು ಹೆಚ್ಚು ಎನ್ನುವ ನಿರೂಪಣೆಗೆ ಒತ್ತು ಕೊಡುತ್ತದೆ. ಈ ಹಾಡಿಕೆ ಮೇಳದಲ್ಲಿ ‘ದೇವದಾಸಿ’ಯರಷ್ಟೆ ಇಲ್ಲ; ಕುರುಬ ಜನಾಂಗದ ಹುಡುಗಿಯರೂ ಇದ್ದಾರೆ. ಈ ಹಾಡಿಕೆಯಲ್ಲಿ ಎಳೆ ಹರೆಯದ ಹುಡುಗಿಯರು ಮಾತ್ರ ಇರುವುದು ಗಮನಿಸಬೇಕಾದ ಸಂಗತಿ. ಈ ವಿಷಯವು ಪ್ರತ್ಯೇಕ ಚರ್ಚೆಯನ್ನು ಬಯಸುತ್ತದೆ. ಒಟ್ಟಿನಲ್ಲಿ ಹರದೇಶಿ-ನಾಗೇಶಿ ಹಾಡಿಕೆಯು ಸ್ಥಳೀಯ ಕಲಾ ಮಾರುಕಟ್ಟೆಯ ಅಭಿರುಚಿಗನುಗುಣವಾಗಿ ರೂಪಗೊಳ್ಳುತ್ತಿರುವುದಂತೂ ಸತ್ಯ.