ತಂದೆಯ ಹೆಸರಿನ ನಮೂದು: ಸಮಸ್ಯೆಗಳು

‘ದೇವದಾಸಿ’ಯರಿಗೆ, ‘ದೇವದಾಸಿ’ಯರ ಮಕ್ಕಳಿಗೆ ಸರಕಾರಿ ಸೌಲಭ್ಯಗಳು ಲಭ್ಯವಾಗಬೇಕಾದರೆ, ಸರಕಾರ ರೂಪಿಸಿದ ನೀತಿ-ನಿಯಮಗಳ ಹಾಗೆ ಅವರ ಹೆಸರು ದಾಖಲುಗೊಂಡಿರಬೇಕು. ಗಂಡ ಇಲ್ಲದವಳು, ಸೂಳೆ ಎಂದು ಹಾಡಿಕೆಯಲ್ಲಿ, ಸಮಾಜದಲ್ಲಿ ಎದುರಾಗುವ ಅಪಮಾನಗಳು, ಹರದೇಶಿ-ನಾಗೇಶಿ ಮಹಿಳಾ ಹಾಡುಗಾರರಿಗೆ ಸರಕಾರಿ ನಿಯಮಗಳಿಗೆ ಅನುಗುಣವಾಗಿ ಮಕ್ಕಳ ಹೆಸರನ್ನು ಶಾಲೆಯಲ್ಲಿ ದಾಖಲಿಸಿದಂತೆ ಮಾಡಿದೆ.

“ಗಂಡ ಇಲ್ದಾಕಿ, ನೀ ಸೂಳಿ, ದೇವದಾಸಿ ಅಂತ ಹಾಡ್ಕ್ಯಾಕ ಅನಿಸ್ಕೊಂಡ-ಅನಿಸ್ಕೊಂಡ ಸಾಕಾಗ್ತೈತ್ರಿ. ಸಾಲಿಗಿ ಮಕ್ಕಳ್ನ ಸೇರ್ತಾಕ ಹೋದ್ರೂ ಅದs ತೆಲಿಬ್ಯಾನಿ. ಅಪ್ಪನ ಹೆಸ್ರೇನು ಅಂತ ಕೇಳ್ತಾರು. ಮಕ್ಕಳಿಗಿ ಅಪ್ಪ ಬೇಕ ಬೇಕೇನು? ಅದಕ್ಕ ಸಿಟ್ಟಿಗೆದ್ದ ನಮ್ಮ ಮಾವನ ಹೆಸರ್ನ ಬರ್ಸಿದ್ಯಾ. ನಮ್ಮ ಜೋಡಿ ಹಾಡಿಕೆ ಮಾಡು ಹೆಣಮಕ್ಕಳೆಲ್ಲಾ ಮಕ್ಕಳ್ನ ಸಾಲಿಗಿ ಸೇರ್ಸುವಾಗ ಅವುಕುರ (ಅವರ) ಹೆಸರ್ನ ಮುಂದ ಅಪ್ಪ ಅಂತ್ಹೇಳಿ ಬಾಯಿಗಿ ಬಂದ ಹೆಸ್ರಾ ಬರಿಸಿದಾರು. ಮಕ್ಕಳ ಹೆಸ್ರ ಮುಂದ ಅಪ್ಪನ ಹೆಸ್ರಾ ಕೂಡಿಸಿದ್ರ (ಸೇರಿಸಿದರೆ) ಸರಕಾರಿ ಸೌಲತ್ತು ಸಿಗಾದಿಲ್ಲಂತ್ರಿ. ಹೀಂಗಾಗಿ ಹುಡುಗರ ಶಾಲಿ ಕಲಿಸಾಕೂ ಜಗ್ಗಿ (ಬಹಳ) ಅನೂಲಿ ಪಟ್ಟೆವ್ರಿ. ಮಕ್ಕಳ ಹೆಸ್ರ ಮುಂದ ಅಪ್ಪನ ಹೆಸ್ರಾ ಕೂಡಿಸಿದ್ದಕ್ಕ ನಮಗೂ ಏನೂ ಸೌಲತ್ತಿಲ್ಲಂತ. ಸೌಲತ್ತಿನ ಮುಖಾ ನೋಡಿದ್ರ ಸೂಳಿ ಮಕ್ಕಳು ಅಂತ ನಮ್ಮ ಮಕ್ಕಳ ಅನೂಲಿ ಸೋಸ್ತಾವು. ಹೆಸರ ಹಚ್ಚಿದ್ರ ಸೌಲತ್ತಿಲ್ಲಂತ. ಅಗ್ಸರ ನಾಯಿ ಹಳ್ಳಾನೂ ಕಾಣ್ಲಿಲ್ಲ; ಮನಿನೂ ಕಾಣ್ಲಿಲ್ಲ. ಹಂಗವ್ವಾ ನಮ್ಮ ಜೀವನಾ” ಎಂದು ಲಕ್ಷ್ಮೀಬಾಯಿ ಬೇಸರದಿಂದಲೇ ಹೇಳಿದಳು.

“ನನಗೆ ನಾಕು ಮಕ್ಕಳು ತಾಯಿ. ಹಾಡ್ಕ್ಯಾಗ ಸೂಳಿ ಅಂತ ಅನ್ಸಿಕೊಂಡು ನನಗ ಸಾಕಾಗಿತ್ತು ಮಕ್ಕಳ್ಯಾಕ ಸೂಳೆ ಮಕ್ಳು ಅನಿಸ್ಕೊಬೇಕೆಂತ್ಹೇಳಿ ಬಾಯಿ ಬಂದದ್ದ ಹೆಸ್ರೇಳಿ ಅಪ್ಪ ಅಂತ ಬರ್ಸಿದಾ. ನನ್ನ ಹೆಸ್ರ ಮುಂದ ಅಪ್ಪನ ಹೆಸರೈತಿ. ನನ್ಗ ಅಪ್ಪ ಇದ್ದಾ. ಮಕ್ಕಳ ಹೆಸ್ರ ಮುಂದ ಅಪ್ಪನ ಹೆಸ್ರ ಬರ‍್ಸೇನಿ. ಹಿಂಗಾಗಿ ಸರ್ಕಾರಿ ಸಾಲ್ಯಾಗ ನನ ಮಕ್ಕಳು ಓದಿದ್ರೂ ಯಾ ಸಾಯಾ (ಸಹಾಯ)ನೂ ಸಿಗ್ಲಿಲ್ಲ. ವಯಸ್ಸಾಗಿಂದ ಕಲಾ ಪಿಂಚ್ನಿ ಆಗ್ಲೆಂತ ರೊಕ್ಕಾ ಕೊಟ್ಟು-ಕೊಟ್ಟು ಸಾಕಾಗಿ ಕಡೀಕ (ಕೊನೆಯ ಪಕ್ಷ) ದೇವದಾಸಿ ಪಿಂಚ್ನಿನರ (ಪಿಂಚಣಿಯನ್ನಾದರೂ) ಕೊಡ್ರಿ ಅಂತ ಆಫೀಸ್ಗಿ ಹೋಗಿದ್ದ್ಯಾ. ಎಷ್ಟ ಮಕ್ಕಳು ನನ್ನ ನಚ್ಕೊಂಡ ಅದಾವ ಅನ್ನಾಕ ಸಾಲ್ಯಾಗ ಮಕ್ಕಳ್ನ ಸೇರ್ಸಿದ ಸರ್ಟಿಫಿಕೆಟ್ ತಗೊಂಡು ಹೋಗಿದ್ದ್ಯಾ. ಮಕ್ಕಳ ಹೆಸ್ರ ಮುಂದ ಅಪ್ಪನ ಹೆಸ್ರ ಹಚ್ಚಿದ್ನೆಲ್ಲವ್ವಾ? ನೀ ದೇವದಾಸಿ ಹ್ಯಾಂಗಾಗ್ತಿ ಅಂತಂದ್ರು. ಸಾರೂ ಹೀಂಗಿಂದ್ಹಿಂಗ ಮಕ್ಕಳ ತ್ರಾಸ ಆಗ್ತೈತೆಂತ ಯಾರೋ ಒಬ್ಬ ಗಂಡ್ಸಿನ ಹೆಸ್ರು ಬರ‍್ಸೇನ್ರಿ. ಖರೆವಂದ್ರ ನಾ ‘ದೇವದಾಸಿ’ರಿ ಅಂತಂದ್ಯಾ. ಮದ್ವಿಯಾದೋರಿಂದ್ರ ಲಗ್ನ ಪ್ರತ್ರಾ, ಜೊತಿಗಿ ತಗ್ಸಿಕೊಂಡ ಫೋಟಾ ಅಂತೆಲ್ಲಾ ಇರ್ತಾವವ್ವಾ. ನೀ ದೇವದಾಸಿ ಅನ್ನಾಕ ಯಾ ಸಾಕ್ಷಿ ಇರ‍್ತೈತಿ? ಮಕ್ಕಳ ಹೌಂದಲ್ಲೊ? ಅವುಕರ ಹೆಸರ ಮುಂದ ಅಪ್ಪನ ಹೆಸ್ರ ಬರ್ಸಿದ್ರ, ಸರಕಾರದ ಪರಕಾರ (ಪ್ರಕಾರ) ನೀ ದೇವದಾಸಿ ಆಗೂದಿಲ್ಲ ಅಂತಂದ್ರು. ಹೊಡಮಳ್ಳಿ (ವಾಪಸ್ಸು) ಹುಚ್ಚ ಪ್ಯಾಲಿಯಂಗ ಮುಕಾ ಮಾಡ್ಕೊಂಡು ಬಂದನ್ರಿ” ಎಂದು ಲಕ್ಕವ್ವ ಹೇಳಿದಳು. ಹೀಗೆ ಬಹುತೇಕ ಮಹಿಳಾ ಹಾಡುಗಾರರು ಹಾಡಿಕೆಯಲ್ಲಿ ‘ದೇವದಾಸಿ’, ‘ಸೂಳೆ’ ಎನ್ನುವ ಮೂದಲಿಕೆಯನ್ನು ಎದುರಿಸಿ ಎದುರಿಸಿ ಮಾನಸಿಕವಾಗಿ ಜರ್ಝರಿತವಾಗಿದ್ದಾರೆ. ಅವರೊಳಗಿನ ಈ ಬಗೆಯ ಮಾನಸಿಕ ಕುಸಿತವು ತಾವುಂಡ ನೋವು ಅಪಮಾನಗಳನ್ನು ತಮ್ಮ ಮಕ್ಕಳೂ ಎದುರಿಸದಿರಲಿ ಎನ್ನುವ ತಾಯಿ ಆಲೋಚನೆಗೆ ಒಳಗಾಗಿಸಿವೆ. ತಾಯಿ ಹೃದಯದ ಈ ಕಾಳಜಿಯು ಮಕ್ಕಳ ಹೆಸರಿನ ಮುಂದೆ ತಂದೆ ಹೆಸರನ್ನು ಸೃಷ್ಟಿಸಿ ನಮೂದಿಸುವಂತೆ ಮಾಡಿವೆ. ನಂತರದಲ್ಲಿ ಸರಕಾರಿ ನೀತಿ-ನಿಯಮಗಳು ಅರ್ಥವಾಗಿವೆ. ಸರಕಾರಿ ಸವಲತ್ತುಗಳ ವಾಸ್ತವಿಕತೆ ಅರ್ಥವಾದರೂ ಹಾಡಿಕೆಯೊಳಗಿನ ನಿತ್ಯದ ಅಪಮಾನಗಳು ಹಿಮ್ಮಿಂಚಾಗಿ ಚಿಮ್ಮಿ ಬಂದು ತಾಯಿ ಕಾಳಜಿಯೇ ಗೆದೆಯುವಂತೆ ಮಾಡಿವೆ. ‘ದೇವದಾಸಿ’ ಎಂದು ನಮೂದಿಸಿದರೆ ಮಕ್ಕಳಿಗೆ ಎದುರಾಗುವ ಸಾಮಾಜಿಕ ಅಪಮಾನಗಳು ಮುಂಚೂಣಿಗೆ ಬಂದಿವೆ. ತಮ್ಮ ಒಡಲುರಿ ತಮ್ಮೊಳಗೆ ಇಟ್ಟುಕೊಂಡ ಹಾಡಿಕೆ ತಾಯಂದಿರು, ಅದು ತಮ್ಮ ಮಕ್ಕಳಿಗೆ ವಿಸ್ತರಿಸದಂತೆ ನೋಡಿ ಕೊಂಡಿದ್ದಾರೆ. ತಾವೆದುರಿಸುವ ಸಾಮಾಜಿಕ ಸಮಸ್ಯೆಗಳೆದುರು ಸರಕಾರ ನೀಡುವ ಸವಲತ್ತುಗಳು ನಗಣ್ಯವೆನಿಸಿ ಬಿಡುತ್ತವೆ ಅಥವಾ ತಿರಸ್ಕರಿಸುವಂತೆ ಮಾಡುತ್ತವೆ. ಹೀಗಾಗಿ ಹಾಡಿಕೆ ಸೀಜನ್‌ನಲ್ಲಿ ದಪ್ಪು ಬಡಿದು-ಬಡಿದು ರಕ್ತ ಜಿನುಗಿದರೂ ಹಾಡಿ-ಹಾಡಿ ಗಂಟಲು ಹಾಗೂ ಹೊಟ್ಟೆ ನೋಯಿಸಿದರೂ ನಿದ್ದೆಗೆಟ್ಟರೂ ಉಪವಾಸವಿದ್ದರೂ ಹಾಡುತ್ತಾರೆ. ಸ್ವಂತ ದುಡಿಮೆಯಿಂದಲೇ ಮಕ್ಕಳನ್ನು ಓದಿಸುವ ಛಲಕ್ಕೆ ನಿಂತುಕೊಳ್ಳುತ್ತಾರೆ. ‘ದೇವದಾಸಿ’ ಎನ್ನುವ ಸಾಮಾಜಿಕ ಅಪಮಾನದಿಂದ ಮುಕ್ತಗೊಳ್ಳುವುದಕ್ಕಾಗಿಯೇ ‘ದೇವದಾಸಿ’ ಹೆಸರಿನಲ್ಲಿ ಬರುವ ಪಿಂಚಣಿಯನ್ನು ತಿರಸ್ಕರಿಸುತ್ತಾರೆ. ಹಾಡುಗಾರರಾದ ಕಾರಣ ಕಲಾ ಪಿಂಚಣಿಯನ್ನು ಬಯಸುತ್ತಾರೆ. ಹಾಗೆಯೇ ವಿಶೇಷವಾಗಿ ‘ದೇವದಾಸಿ’ ಮಕ್ಕಳಿಗೆ ಸರಕಾರ ನೀಡುವ ಸೌಲಭ್ಯಗಳನ್ನು ತಿರಸ್ಕರಿಸುತ್ತಾರೆ. ಸ್ವಂತ ದುಡಿಮೆಯಿಂದಲೇ ಮಕ್ಕಳನ್ನು ಓದಿಸ ಬಯಸುತ್ತಾರೆ. ಸರಕಾರಿ ಸೌಲತ್ತನ್ನು ತಿರಸ್ಕರಿಸಿ ಸ್ವಂತ ದುಡಿಮೆಯ ದುಡ್ಡಿನಿಂದ ಫೀಸ್ ತುಂಬುವಾಗ ಋಣ ಮುಕ್ತತೆಯನ್ನು ಅನುಭವಿಸುತ್ತಾರೆ. ಆರ್ಥಿಕ ಸಂಕಷ್ಟದಲ್ಲೂ ಒಂದು ಬಗೆಯ ಹೇಳಲಾಗದ ಸ್ವಾಭಿಮಾನದ ಸುಖವನ್ನು ಅನುಭವಿಸುತ್ತಾರೆ. ಒಮ್ಮೊಮ್ಮೆ ಶಾಲಾ-ಕಾಲೇಜುಗಳಲ್ಲಿ ಸರಕಾರ ಅಥವಾ ಸಂಸ್ಥೆಗಳು ನಿಗದಿಪಡಿಸಿದ ಕೊನೆಯ ದಿನಾಂಕದಂದು ಫೀಸ್ ತುಂಬಲಾಗದ ಆರ್ಥಿಕ ಸಂಕಷ್ಟಗಳು ಎದುರಾದಾಗ ಮಹಿಳಾ ಹಾಡುಗಾರರು ಅಸಹಾಯಕತೆಯ ಆಳದೊಳಗೆ ಕಾಣದಷ್ಟು ಕುಸಿದು ಬಿಡುತ್ತಾರೆ. ಹಾಡಿಕೆ, ಆದಾಯದ ವೃತ್ತಿ ಎಂದು ಗುರುತಿಸಿಕೊಂಡಿದ್ದರಿಂದ ಸಮುದಾಯದವರಲ್ಲಿ ಆರ್ಥಿಕ ಸಂಕಟವನ್ನು ತೋಡಿಕೊಳ್ಳಲಾಗದ ಅಸಹಾಯಕತೆ ಈ ಮಹಿಳೆಯರದು. ಒಂದು ವೇಳೆ ತೋಡಿಕೊಂಡರೂ ಅವರೂ ಹೆಚ್ಚು-ಕಮ್ಮಿ ಇವರ ಅಸಹಾಯಕತೆಯಲ್ಲಿಯೇ ಇರುತ್ತಾರೆ. ಊರಿನ ‘ಗಣ್ಯ’ ಪುರುಷರಲ್ಲಿ ಸಹಾಯವನ್ನು ಯಾಚಿಸಲಾಗದ ಅಸಹಾಯಕತೆ; ಇವರ ಅಸಹಾಯಕತೆಯನ್ನು ಪುರುಷರು ದುರುಪಯೋಗ ಪಡಿಸಿಕೊಳ್ಳುವ ಭಯ. ಹೀಗಾಗಿ ಶಾಲೆಯವರನ್ನೇ ಅಥವಾ ಕಾಲೇಜಿನವರನ್ನೇ ಕಂಡು ನಿಗದಿ ಪಡಿಸಿದ ಫೀಸ್ ತುಂಬಲು ಹೆಚ್ಚಿನ ಕಾಲಾವಕಾಶವನ್ನು ಕೇಳುತ್ತಾರೆ. ಅದಕ್ಕೆ ಶಾಲೆಯವರು ಅಥವಾ ಕಾಲೇಜಿನವರು ಒಪ್ಪಿಕೊಳ್ಳುವುದಿಲ್ಲ. ಫೀಸ್ ತುಂಬಿದರೆ ಮಾತ್ರ ಶಾಲೆ ಇಲ್ಲವೆ ಕಾಲೇಜು ಪ್ರವೇಶ ಎನ್ನುತ್ತಾರೆ; ಅಥವಾ ಪರೀಕ್ಷೆಗೆ ಅನುಮತಿ ನೀಡುತ್ತೇವೆ ಎನ್ನುತ್ತಾರೆ. ಹೀಗಾಗಿ ಆ ವರ್ಷದ ಶಿಕ್ಷಣ ನಿಂತುಕೊಂಡು ಬಿಡುತ್ತದೆ.

ಹಾಡಿಕೆಯ ತಾಯಂದಿರು ದುಡಿಮೆಗಾಗಿ, ಊರೂರು ಅಲೆಯುತ್ತಾರೆ, ಮನೆಯಲ್ಲಿ ಅಥವಾ ಕೇರಿಯಲ್ಲಿ ಈ ತಾಯಂದಿರ ಮಕ್ಕಳಲ್ಲಿ ಓದಿನ ಆಸಕ್ತಿ ಕಮರದಂತೆ ನೋಡಿಕೊಳ್ಳುವ ಮೇಲ್ವಿಚಾರಕರು ಯಾರೂ ಇರುವುದಿಲ್ಲ. ಜೀವನದಲ್ಲಿ ಎದುರಾಗುವ ಆರ್ಥಿಕ ಸಂಕಷ್ಟದಿಂದಾಗಿ ಹಾಡಿಕೆ ತಾಯಂದಿರ ಮಕ್ಕಳು ಆಗಾಗ ಶೈಕ್ಷಣಿಕ ಜೀವನದಲ್ಲಿ ಬ್ರೇಕ್‌ಗಳನ್ನು ಎದುರಿಸಬೇಕಾಗುತ್ತದೆ. ಆಗಾಗ ಎದುರಾಗುವ ಈ ಶೈಕ್ಷಣಿಕ ಬ್ರೇಕ್‌ಗಳು ಶಿಕ್ಷಣದ ಕುರಿತು ಶಾಶ್ವತವಾಗಿ ಆಸಕ್ತಿ ಕಳೆದುಕೊಳ್ಳುವಂತೆ ಮಾಡುತ್ತವೆ. ಇಂತಹ ಶೈಕ್ಷಣಿಕ ಬ್ರೇಕ್‌ಗಳಿಂದಾಗಿ ಆಘಾತಕ್ಕೊಳಗಾಗುವ ಮಕ್ಕಳು, ಯುವತಿಯರು ಉಂಡಲೆಯುತ್ತಾರೆ. ಇಲ್ಲವೆ ಚಿಕ್ಕ-ಪುಟ್ಟ ದಿನಗೂಲಿ ಕೆಲಸಗಳಿಗೆ ಆಕರ್ಷಿತರಾಗುತ್ತಾರೆ. ಅಥವಾ ತಾಯಂದಿರ ವೃತ್ತಿಯನ್ನೇ ಆಯ್ದುಕೊಳ್ಳುತ್ತಾರೆ. ನಾನು ಸಂದರ್ಶಿಸಿದ ಮಹಿಳಾ ಹಾಡುಗಾರರ ಮಕ್ಕಳೆಲ್ಲರೂ ಅತಂತ್ರ ಬದುಕಿನ ಸಂದಿಗ್ಧತೆಯನ್ನು ಎದುರಿಸುತ್ತಿದ್ದರು. ಬಹುತೇಕ ಪುರುಷ ಹಾಡುಗಾರರ ಮಕ್ಕಳು ಟೀಚರ್ ಇಲ್ಲವೆ ಕಛೇರಿ ಸಹಾಯಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಎಲ್ಲ ಜಾತಿ ಹಾಡುಗಾರರು ಹರದೇಶಿಯಲ್ಲಿದ್ದು, ಅವರಿಗೆ ಅಲ್ಪ-ಸ್ವಲ್ಪವಾದರೂ ಸ್ಥಿರಾಸ್ಥಿ ಹಾಗೂ ಚರಾಸ್ಥಿಗಳಿರುತ್ತವೆ. ಹಾಡಿಕೆಯ ಮಹಿಳೆಯರ ಹಾಗೆ ತಮ್ಮ ಆರ್ಥಿಕ ಸಮಸ್ಯೆಯನ್ನು ಹೇಳಿ ಸಾಲವನ್ನು ಪಡೆದುಕೊಳ್ಳಲಾಗದ ಅಸಹಾಯಕತೆ ಪುರುಷ ಹಾಡುಗಾರರಿಗೆ ಇರುವುದಿಲ್ಲ. ಬಹುತೇಕ ಪುರುಷ ಹಾಡುಗಾರರ ಮಕ್ಕಳು ಕನಿಷ್ಟ ಪದವಿ ಹಂತದವರೆಗಾದರೂ ಶಿಕ್ಷಣ ಪಡೆದಿರುತ್ತಾರೆ. ಹೀಗಾಗಿ ಪುರುಷ ಹಾಡುಗಾರರ ಮಕ್ಕಳು ಸಣ್ಣ ಪುಟ್ಟ ಕೆಲಸಗಳನ್ನು ಸರಕಾರಿ ಇಲ್ಲವೆ ಖಾಸಗಿ ಸಂಸ್ಥೆಗಳಲ್ಲಿ ನಿರ್ವಹಿಸುತ್ತಿದ್ದಾರೆ. ಅಥವಾ ಸ್ವತಂತ್ರವಾದ ವ್ಯಾಪಾರವನ್ನು ನಡೆಸಿಕೊಂಡು ಹೋಗುತ್ತಿದ್ದಾರೆ. ಹಾಗಂತ ಎಲ್ಲ ಪುರುಷ ಹಾಡುಗಾರರ ಮಕ್ಕಳು ಆರ್ಥಿಕ ಭದ್ರತೆಯನ್ನು ಹಾಗೂ ಶಿಕ್ಷಣವನ್ನು ಪಡೆದಿದ್ದಾರೆ ಎಂದು ಹೇಳಲಾಗುವುದಿಲ್ಲ. ಕೆಲವು ಪುರುಷ ಹಾಡುಗಾರರ ಮಕ್ಕಳು ತಂದೆಯಂತೆ ಹಾಡಿಕೆ ವೃತ್ತಿಯನ್ನು ಅವಲಂಬಿಸಿದ್ದಾರೆ. ಆದರೆ ನಾನು ಸಂದರ್ಶಿಸಿದವರಲ್ಲಿ ಒಬ್ಬ ಹಾಡಿಕೆ ಮಹಿಳೆಯ ಮಕ್ಕಳನ್ನು ಹೊರತು ಪಡಿಸಿದಂತೆ ಉಳಿದ ಯಾವ ಮಹಿಳಾ ಹಾಡುಗಾರರ ಮಕ್ಕಳೂ ಸರಕಾರಿ ಇಲ್ಲವೆ ಖಾಸಗಿ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರ ಅಥವಾ ಸ್ವತಂತ್ರ ವ್ಯಾಪಾರವನ್ನು ನಿರ್ವಹಿಸುತ್ತಿದ್ದರ ಒಂದು ಸಣ್ಣ ಮಾಹಿತಿಯೂ ದೊರೆಯಲಿಲ್ಲ. ಬಹುತೇಕ ಮಹಿಳಾ ಹಾಡುಗಾರರ ಮಕ್ಕಳು ತಾಯಿಯಂತೆ ಹಾಡಿಕೆ ಜೀವನವನ್ನು ಅವಲಂಬಿಸಿದ್ದಾರೆ. ಹುಡುಗರಾದರೆ ತಾಯಿಯ ಹಿಂದೆ ತಾಳ ಇಲ್ಲವೆ ಸೂರು ಬಾರಿಸುವ ಉದ್ಯೋಗವನ್ನು ಅವಲಂಬಿಸಿದ್ದಾರೆ. ದೊಡ್ಡವರಾದ ಮೇಲೆ ತಾಯಿಯ ನಂತರ ಹಾಡಿಕೆ ವೃತ್ತಿಯನ್ನು ಪ್ರಾರಂಭಿಸುವುದಾಗಿ ಹೇಳಿದರು. ಮತ್ತೆ ಕೆಲ ಮಹಿಳಾ ಹಾಡುಗಾರರ ಮಕ್ಕಳು ತಾಯಿಯ ಅಲೆಮಾರಿ ಹಾಡಿಕೆ ವೃತ್ತಿಯಿಂದಾಗಿ, ಜೀವನದಲ್ಲಿ ಖಚಿತತೆಯಿಲ್ಲದೆ ಸುಮ್ಮನೆ ಉಂಡು ಅಲೆಯುತ್ತಿದ್ದಾರೆ. ಅವರಲ್ಲಿ ಬದುಕಿನ ಬಗೆಗೆ ಒಂದು ಬಗೆಯ ಮಂಕು ಕವಿದಿದೆ. ಆ ಮಂಕು ಅವರ ಜೀವನ ಆಸಕ್ತಿಯನ್ನು ನುಂಗಿ ಹಾಕಿದೆ. ಹಾಡಿಕೆಯಲ್ಲಿ ಎಷ್ಟೆಲ್ಲ ಸಂಕಷ್ಟಗಳಿದ್ದರೂ; ಗಾಳದಲ್ಲಿನ ಎರೆಹುಳುವಿಗೆ ಆಕರ್ಷಣೆಗೊಳಗಾದ ಮೀನಿನಂತೆ ಹಾಡಿಕೆಯಲ್ಲಿನ ಆದಾಯಕ್ಕೆ ಮಹಿಳಾ ಹಾಡುಗಾರರು ಆಕರ್ಷಿತರಾಗುತ್ತಾರೆ. ಮತ್ತೆ ತಮ್ಮ ಹೆಣ್ಣುಮಕ್ಕಳನ್ನು ಇದೇ ಹಾಡಿಕೆ ವೃತ್ತಿಗೆ ಕರೆತರುತ್ತಿದ್ದಾರೆ. ಹೀಗಾಗಿಯೇ ಕ್ಷೇತ್ರಕಾರ್ಯಧ್ಯಯನದಲ್ಲಿ ನನಗೆ ೧೪ ರಿಂದ ೨೨ ವರ್ಷದೊಳಗಿನ ಕನಿಷ್ಠ ೪೫ ಹಾಡುವ ಹುಡುಗಿಯರು ಎದುರಾದರು.

ಹಾಡಿಕೆ ತಾಯಂದಿರ ಕಲಿತ ಮಕ್ಕಳ ಕಣ್ಣಲ್ಲಿ ಹಾಡಿಕೆ

ಸಾಂಗ್ಲಿಯ ಹಾಡಿಕೆಯ ಪದ್ಮಬಾಯಿಯನ್ನು ಸಂದರ್ಶಿಸಲು ಹೋಗಿದ್ದೆ. ಸಂದರ್ಶನ ಮುಗಿಸಿ ಹೊರಡುವುದರಲ್ಲಿದ್ದೆ. “ತಾಯಿ ಹಂಪಿಯಿಂದ ಇಲ್ಲಿತನಾ ನನ್ನ ಹುಡ್ಕೊಂಡು ಬಂದೇದಿ. ಹಾಡಿ ಕಳಸ್ಲಾಕಂದ್ರ ದೇವಿ ಮೆಚ್ಚಂಗಿಲ್ಲ. ಸ್ಯಾಂಪಲ್ಲಿಗಿ ಒಂದೆರಡು ಹಾಡಾ ಹಾಡ್ತೇನಿ. ಕೇಳಿ ಹೋಗ್ರಿ. ಸೂರು ಹಾಕು ಮಾವನೂ ಇಲ್ಲೆ ಕುಂತಾನು. ಬಾ ಮಾವ” ಎಂದಳು. ಮಾವನನ್ನು ಕರೆದು ಹಾಡಲು ನಿಂತಳು. ಹಾಡುವ ಮುಂಚೆ ಲಯ ಬದ್ದವಾಗಿ ದಪ್ಪು ಬಾರಿಸ ತೊಡಗಿದಳು. ಒಳಗಿದ್ದ ಹನ್ನೆರಡು ಇಲ್ಲವೆ ಹದಿಮೂರು ವರ್ಷ ವಯಸ್ಸಿನ ಹುಡುಗ ‘ಯವ್ವಾ’ ಎಂದು ಕಿರಚುತ್ತ ಬಂದನು.

“ನಿನಗ ಎಷ್ಟ ಸಲ ಹೇಳೇನಿ, ದಪ್ಪಿನ ಹಾಡಾ ಹಾಡಬ್ಯಾಡಾ ಅಂತ. ಮತ್ತ-ಮತ್ತ ಅವ್ನ ಹಾಡ್ತಿಯಲ್ಲ? ನಿನ್ನ ದಪ್ಪಿನ ಸಪ್ಪಳಾ ಕೇಳಿದ್ರ ತೆಲಿ ದಿಮ್ಮಂದಂಗ ಆಗ್ತೈತಿ. ಅವತ್ತಿನ ಹಾಡಕ್ಯಾಗ ಬಾಳಾ ಸಾಬ ನಿನ್ನ ಸೂಳಿ ಅಂತ ಎಲ್ಲಾರೆದ್ರಿಗೆ ಕುಣ್ದ-ಕುಣ್ದ ಹಾಡಿದ್ದs ನೆಪ್ಪ ಆಗ್ತೈತಿ. ಹುಚ್ಚ ಹಿಡ್ದಂಗ ಆಗ್ತೈತಿ” ಎಂದು ತಲೆಯಲ್ಲಿನ ಕೂದಲು ಜಗ್ಗಿಕೊಂಡು ಪಡಸಾಲೆ ತುಂಬ ಉರುಳಾಡಿ ಅತ್ತನು. ‘ಏಯ್‌ಹುಚ್ಚ ಹುಡ್ಗಾ, ದೊಡ್ಡವ್ರ ಬಂದಾರು. ಹಿಂಗೆಲ್ಲಾ ಮಾಡಬ್ಯಾಡ’ ಎಂದು ಪದ್ಮಬಾಯಿ ಸಂತೈಸಲು ಪ್ರಯತ್ನಿಸಿದಳು. ತಾಯಿಯ ತೆಕ್ಕೆಯಿಂದ ಬಿಡಿಸಿಕೊಂಡ ಹುಡುಗ ನನ್ನತ್ತ ವ್ಯಗ್ರವಾಗಿ ನೋಡಿದ. ನಾನೇ ಅವನತ್ತ ಹೋದೆ. ಮಾತಿಲ್ಲದೆ ಚವ್ವಿ ಬಡಿಯುವ ಮೂಲಕ ಅವನಿಗೆ ಸಂತೈಸಿದೆ. ಹುಡುಗನಲ್ಲಿ ಭುಗಿಲೆದ್ದ ವ್ಯಗ್ರತೆ ಮಂಜುಗಡ್ಡೆಯಂತೆ ಕರಗಿತ್ತು. ಮಾತಿಲ್ಲದೆ ಸುಮ್ಮನೆ ಅರ್ಧ ಗಂಟೆಯವರೆಗೆ ಅತ್ತ. ನಾನೂ ಕೂಡ ಮೌನದಲ್ಲಿಯೇ ಆತನ ತಲೆ ಸವರುತ್ತ ಸಂತೈಸಿದೆ.

“ಅವ್ವ ಹಾಡೋದು ಹಾಡಕಿ ಅಲ್ಲ. ಹೌದಲ್ಲೊ?” ಎಂದು ನನ್ನನ್ನು ಪ್ರಶ್ನಿಸಿದ. ‘ಹೌದು’ ಎಂದೆ. ಅವನೊಳಗಡೆ ನನ್ನ ಬಗ್ಗೆ ಭರವಸೆ ಮೂಡಿತು. ನನ್ನ ಮಡಿಲಲ್ಲಿ ಮಲಗಿದವನು ಚಕ್ಕನೆ ಎದ್ದು ಕುಳಿತು “ನೀವ, ಫಸ್ಟ ನೋಡ್ರಿ, ಇದು ಹಾಡಕಿ ಅಲ್ಲ ಅಂತ ಹೇಳಿದ್ದು. ಹಾಡಕಿಗಿ ಬಾರವ್ವಾ, ಚಂದ ಹಾಡ್ತಿ ಅಂತ ಕರಿಯಾಕ ಬರೂವ್ರ ನಮ್ಮನಿಗಿ ಬರ್ತಿದ್ರು. ನಮ್ಮವ್ವಗ ಹಾಡಕಿ ಮಾಡಬ್ಯಾಡಾ ಅಂತ ಬುದ್ದಿವಾದಾ ಹೇಳ್ರಿ” ಎಂದನು. ಆಯ್ತು ಎಂದೆ. ಪದ್ಮಾಬಾಯಿ ಖಾಲಿ ನಗೆಯನ್ನು ನಕ್ಕಳು. ಹುಡುಗನಿಗೆ ಚಹಾ ಬಿಸ್ಕತ್ ತರಲು ಹೇಳಿದಳು. “ನಮ್ಮವ್ವಗ ನೀವs ಹೇಳ್ರಿ, ಹಾಡಕಿ ಮಾಡಬ್ಯಾಡಂತ’ ಎಂದು ಮೆಲ್ಲನೆ ನನ್ನ ಕಿವಿಯಲ್ಲಿ ಉಸುರಿ ಚಹಾ ತರಲು ಚಂಗನೆ ಜಿಗಿದು ಓಡಿಹೋದನು. ಕಳೆ ಕಳೆದುಕೊಂಡ ಮುಖದಲ್ಲಿ ಪದ್ಮಾಬಾಯಿ ನನ್ನನ್ನು ನೋಡಿ ಒಣ ನಗೆ ನಕ್ಕಳು. “ತಾಯಿ, ನಮಗೇನ ಆಸ್ತಿ-ಪಾಸ್ತಿ ಐತಾ? ಹೌದಪ್ಪಾ ಗಂಡ ಅದಾನು, ದುಡದ ತಂದ ಹಾಕ್ತಾನು ಅನ್ನುವಂಗ ಐತಾ? ಹೊರಗ ದುಡಿದ್ರ ಅಬ್ಬಬ್ಬಾ ಅಂದ್ರ ದಿನಕ್ಕ ನೂರು ರೂಪಾಯಿ ಪಗಾರಾ. ಇದರಾಗ ಈ ಸಾಂಗ್ಲ್ಯಾಗ ಆರ ಮಕ್ಕಳ ಹ್ಯಾಂಗ ಜ್ವಾಪಾನಾ ಮಾಡ್ಲಿ? ಮದ್ವಿ ವಯಸ್ಸಿಗಿ ಬಂದ ಹೆಣ್ಣಮಕ್ಕ್ಳು ಅದಾರು. ಈಗೀಗ ನಮ್ಮ ಜನದಾಗೂ ವರದಕ್ಷಿಣೆ ಕೇಳಕತ್ತ್ಯಾರು. ಎಲ್ಲಿಂದ ತರ್ಲಿ ಆಸ (ಅಷ್ಟು) ರೊಕ್ಕಾ? ಉಳಿದೆಲ್ಲಾ ಮಕ್ಕಳು ನನ್ನ ಹಾಡ್ಕಿನ ಪಸಂದ ಮಾಡ್ತಾರು. ದೊಡ್ಡ ಮಗಾನ ನನ್ನ ಹಾಡ್ಕಿಗಿ ತಾಳಾ ಹಾಕ್ತಾನು. ಇದs ಹುಡುಗ ನೋಡ್ರಿ ಹೀಂಗಾಡತೈತಿ. ಒಂದೆರಡ ಕಡಿ ಹಾಡ್ಕಿಗಿ ಕರಕೊಂಡು ಹೋಗಿದ್ದ ತಪ್ಪಾಗೈತಿ. ಹಾಡ್ಕಿ ನೋಡ್ದಾಗಿಂದ ಹೀಂಗ ಆಡಾಕತ್ತ್ಯಾನು. ಅದಕ್ಕ ಅವ್ನ ಕಲಿಯಾಕ ಹಾಸ್ಟೇಲ್ನಾಗ ಇಟ್ಟೇನಿ. ಸೂಟಿಗಂತ ಮನಿಗಿ ಬರ‍್ತೈತಲ್ಲಾ, ನನ್ನ ಕೇಳ್ಕೊಂಡ ಬಂದವರ ಜೋಡಿ ಇದs ರಗಳಿ ತಗಿತೈತಿ. ಹಾಡ್ಕ್ಯಾಗ ಸೂಳಿ, ಗಂಡ ಇಲ್ದಾಕಿ ಅಂತಾರ. ನಮ್ಮವ್ವನ್ನ ಸೂಳಿ ಯಾಕ ಅಂದ್ರಿ ಅಂತ ಜಗಳಾ ತಗಿತೈತಿ. ದೇವದಾಸೇರ್ನ ಸೂಳಿ ಅನ್ದ ಗರತಿ ಅಂತಾರೇನ್ರಿ? ತಪ್ಪ ತಿಳಕೋಬ್ಯಾಡ್ರಿ, ನನ್ನ ಮಗಾ ಹಾಡಿಸಿ ಕೊಡೂದಿಲ್ಲರಿ. ಇನ್ನೊಂದ್ಸಲ ಹಾಡ್ತೇನು” ಎಂದಳು. ಅಷ್ಟರಲ್ಲಿ ಹೋದ ವೇಗದಲ್ಲಿಯೇ ವಾಪಸ್ಸು ಬಂದ ಹುಡುಗಾ ತನ್ನ ಕಣ್ಣಿನಲ್ಲಿಯೇ ಅವರಮ್ಮನಿಗೆ ತಿಳುವಳಿಕೆ ಹೇಳಿದ್ದೇನೋ ಇಲ್ಲವೋ ಎನ್ನುವುದನ್ನು ಕೇಳಿದನು. ಅವನ ಕಣ್ಣ ಭಾಷೆಯಲ್ಲಿಯೇ ಹೌದು ಎನ್ನುವಂತೆ ಉತ್ತರಿಸಿದೆ., ಮಗನಿಂದ ಏನೋ ಜರುಗಿ ಹೋಗಿದೆ ಎನ್ನುವಂತೆ ಮೈಮುದುಡಿ ಕೈಮುಗಿದು, ತನ್ನನ್ನು ತಾನು ಮತ್ತಷ್ಟು ಕುಬ್ಜಗೊಳಿಸಿಕೊಂಡು ನಿಂತ ಪದ್ಮಾಬಾಯಿ; ಕೂದಲು ಕಿತ್ತುಕೊಂಡು ಹೊರಳಾಡಿ ಅತ್ತ ಹುಡುಗನ ರೋದನ ಹಾಗೂ ವ್ಯವಸ್ಥೆ ಬದಲಿಸುತ್ತೇನೆ ಎಂದು ಕ್ಷಣ ಮಾತ್ರದಲ್ಲಿಯೇ ನನ್ನ ಬಗ್ಗೆ ಅಪಾರ ವಿಶ್ವಾಸ ಇಟ್ಟುಕೊಂಡ ಹುಡುಗನ ಆತ್ಮವಿಶ್ವಾಸದ ಕಣ್ಣೋಟ ದಾರಿ ಉದ್ದಕ್ಕೂ ನನ್ನನ್ನು ಬೆನ್ನಟ್ಟಿಕೊಂಡೇ ಬಂದವು. ತಾಯಿಯ ಅಸಹಾಯಕತೆ, ಪ್ರತಿರೋಧದೊಂದಿಗಿನ ಮಗನ ರೋಧನ, ನನ್ನಂತವರ ಕುರಿತು ಗಳಿಗೆಯಲ್ಲಿಯೇ ಕಟ್ಟಿಕೊಂಡ ಹುಡುಗನ ಆತ್ಮವಿಶ್ವಾಸ ಎಲ್ಲವೂ ಮುಪ್ಪರಿಗೊಂಡು ನನ್ನನ್ನು ಆಗಾಗ ಕಾಡುತ್ತಿರುತ್ತವೆ.

“ಪದುಮ ಜಾತಿಯ ಹೆಣ್ಣಿಗಿ ಮಾತ್ರ ಹಾಡ್ಕಿ ವಿದ್ಯಾ ಹತ್ತತ್ತ್ರಿ. ಅಂಥ ಇಂಥವರಿಗಿ ಹಾಡ್ಕಿ ವಿದ್ಯಾ ತಲೀಗಿ ಹತ್ತುದಿಲ್ಲರಿ. ನಾನು ಪದುಮ ಜಾತಿ…” ಎಂದು ಕಂಬಾಗಿ ಹನುಮವ್ವ ಹೇಳಿಕೊಳ್ಳುವಾಗಲೇ ‘ಸಾಕ ನಿಲ್ಲಸವ್ವಾ ನಿನ್ನ ಪುರಣಾನಾ” ಎನ್ನುತ್ತ ನಾವು ಕುಳಿತ ಹೊಲದ ಮನೆಯೊಳಗೆ ಪ್ರವೇಶಿಸಿದಳು ಒಂದು ಹುಡುಗಿ. ಹದಿನೆಂಟರ ವಯಸ್ಸಿರಬೇಕು ಆ ಹುಡುಗಿಗೆ. ಬಂದವಳೇ ದಪ್ಪೆಂದು ಕೈಯಲ್ಲಿನ ನೋಟು ಬುಕ್‌ಗಳನ್ನು ಒಗೆದಳು. ನನ್ನತ್ತ ಕತ್ತು ಹೊರಳಿಸಿ ತೀಕ್ಷ್ಣವಾಗಿ ನೋಡಿದಳು. “ಇನಿವರ್ಸಿಟಿ ಮೇಡಮತೇರು ಅವ್ರು. ಹಾಡ್ಕ್ಯಾಗಿನ ಕಷ್ಟ-ಸುಖಾ ಇಚಾರ‍್ಸಾಕ ಬಂದಾರ” ಎಂದಳು ಹನುಮವ್ವ. ಆಗ ಹುಡುಗಿಯ ಕಣ್ಣಿನಲ್ಲಿನ ತೀಕ್ಷ್ಣತೆ ಚಕ್ಕನೆ ಮಾಯವಾಯಿತು. ಭರವಸೆಯಿಂದ ನಕ್ಕಳು. “ಹಾಡುತ್ತಾಳೆಂದೇ ನಿಮ್ಮಮ್ಮನನ್ನು ಹಂಪಿಯಿಂದ ಹುಡುಕಿಕೊಂಡು ಬಂದೆ. ಹಾಡಿಕೆಗೆ ಮರ್ಯಾದಿಲ್ಲೇನು?’ ಎಂದೆ. ಹುಡುಗಿಯ ಅಂತರಂಗದ ಮಾತನ್ನು ಹೊರ ಕೆಡವಲು ಬೇಕೆಂದೆ ಕೆಣಿಕಿ ಕೇಳಿದ್ದೆ. ಹುಡುಗಿ ಒಹೋ ಹೀಗೋ ವರಸೆ ಎನ್ನುವಂತೆ ನನ್ನತ್ತ ಹೊರಳಿ ನಿಂತಳು. ಟೊಂಕಕ್ಕೆ ಎರಡೂ ಕೈಗಳನ್ನು ಇಟ್ಟುಕೊಂಡ ಹುಡುಗಿ ಹೇಳಿದ್ದು-ಕೇಳಿದ್ದು ಹೀಗೆ; “ನಮ್ಮವ್ವ ಚಂದ ಹಾಡ್ತಾಳಂತ ಗೊತ್ತೈತಿ ಮೇಡಂ. ಛಾಯಾ, ಎಸ್.ಪಿ.ಬಾಲಸುಬ್ರಮಣ್ಯಂ, ಎಸ್. ಜಾನಕಿ ಇವರೆಲ್ಲರೂ ಹಾಡ್ತಾರು. ಆದ್ರ ನಮ್ಮವ್ವಗ ಇವ್ರಂಗ ಮರ್ಯಾದಿ ಸಿಗೂದಿಲ್ಲ್ರಿ, ಅವ್ರಿಗಿ ಸಮಾಜ್ದಾಗ ಮರ್ಯಾದಿ ಕೊಟ್ಟಂಗ ನಮ್ಮವ್ವಗ ಮರ್ಯಾದಿ ಕೊಡೂದಿಲ್ಲರಿ. ಸ್ಟೇಜಿನಮ್ಯಾಗ ನಮ್ಮವ್ವಗ ಹಾಡ್ಕ್ಯಾಗ ಬೈದಂಗ ಇವ್ರಿಗಿ ಬೈಯೂದಿಲ್ಲ್ರಿ. ನಮ್ಮವ್ವ ಎಷ್ಟ ಚಂದ ಹಾಡಿದರೇನು ಹಾಡ್ಕಿಯಕಿ, ದೇವದಾಸಿ ಅಂತಾರ ಹೊರ‍್ತು, ಸಂಗೀತಗಾರ್ತಿ ಅನ್ನೂದಿಲ್ಲ್ರಿ. ಸಣ್ಣಕಿದ್ದಾಗ ನಮ್ಮವ್ವನ ಜೋಡಿ ಹಾಡ್ಕಿಗಿ ಹೋಗ್ತಿದ್ದ್ಯಾ. ಹರದೇಶಿಯವ್ರು ನಮ್ಮವ್ವನ ಬಗ್ಗೆ ಬಾಯಿಗಿ ಬಂದಂಗೆಲ್ಲಾ ಹಾಡ್ಕ್ಯಾಗ ಹೇಳ್ತಿದ್ದ್ರು. ಹೊಟ್ಟ್ಯಾಗ ಸಂಕ್ಟ ಆಗೂದು. ನುಂಗುವಂಗಿಲ್ಲ, ಉಗುಳುವಂಗಿಲ್ಲ, ಅಂಥಾ ಬದುಕು ನಮ್ದು. ನಮ್ಮವ್ವಗ ನಾನು ದಿನಾಲೂ ಹಾಡ್ಕಿ ಬಿಡಬೆ ಅಂತs ಹೇಳ್ತಿರತೇನು. ಕೇಳುವಂಗಿಲ್ಲ ಆಕಿ. ಹಾಡ್ಕಿ ಸರಸೋತಿ ಇದ್ದ್ಹಂಗ! ಅಕಿನಿಂದ ಅನ್ನಾ ಕಂಡೆವು. ಹಂಗೆಲ್ಲಾ ಮಾತ್ನಾಡಬ್ಯಾಡ್ರಿ ಅಂತ ನಮಗs ಬುದ್ಧಿವಾದಾ ಹೇಳ್ತಾಳ್ರಿ. ನಮ್ಮವ್ವ ಎಷ್ಟ ಚಂದ ಹಾಡಿದ್ರೇನು ನಮ್ಮನ್ನ ‘ದೇವದಾಸಿ’ ಮಕ್ಳು ಅಂತ ಕರಿಯೋದು ಬಿಡ್ತಾರೇನ್ರಿ? ನಿಮ್ಮಂಥ ತಿಳಿದವ್ರು ನಮ್ಮವ್ವಗ ಸಂಗೀತ ಜ್ಞಾನ ಐತಿ ಅಂತೀರಿ. ನಮ್ಮ ಕಷ್ಟ ಯಾರೂ ಕೇಳಿರ್ಲಿಲ್ಲಾ. ನೀವು ಕೇಳಾಕ ಬಂದಿರಿ. ಈಗ ನೀವs ಹೇಳ್ರಿ, ಹಾಡ್ಕಿ ಇರಬೇಕೆಂತಿರೋ ಬ್ಯಾಡ್ಯಾ ಅಂತಿರೋ?” ಎಂದು ನನಗೆ ಮರು ಸವಾಲೆಸೆದಳು. ನಾನು ಉತ್ತರಿಸಬೇಕೆನ್ನುವಷ್ಟರಲ್ಲಿ ಹನುಮವ್ವನ ಹಿರಿಯ ಮಗ “ಮೇಡಂ ಹಾಡ್ಕಿ ಚಲೊ ಅಲ್ಲ ಅಂತ ಮಾತ್ರ ಹೇಳಬ್ಯಾಡ್ರಿ. ಇದನ್ನ ನಚ್ಕೊಂಡಂತಾ ನೂರಾರು ಸಂಸಾರ ಅದಾವ್ರಿ. ನಮ್ಮವ್ವನ ಹಾಡ್ಕಿಗಿ ನಾನs ಸೂರ ಹಾಕಾಕ ಹೋಗ್ತಿನ್ರಿ. ನಮ್ಮವ್ವನ ತರುವಾಯ ನಾನು ಹಾಡ್ಕಿ ಮಾಡ್ತಿನ್ರಿ. ಇಕಿಗಿ ನೀವು ಹಾಡ್ಕಿ ಚಲೊ ಅಲ್ಲ ಅಂತ ಹೇಳಿ ಬಿಟ್ಟ್ರ ಸಾಕ್ರಿ, ಅದನ್ನ ಡಂಗ್ರಾ ಹೊಡ್ಕೊಂಡ ತಿರಗ್ಯಾಡತಾಳ್ರಿ” ಎಂದು ನಗುತ್ತ ಹೇಳಿದನು. ಆತನ ತಮಾಷೆಯ ಮಾತಿನಲ್ಲಿ ಹಾಡಿಕೆಯನ್ನೇ ನೆಚ್ಚಿಕೊಂಡ ನೂರಾರು ಕುಟುಂಬಗಳ ಆರ್ಥಿಕ ಪ್ರಶ್ನೆಯಿತ್ತು. ಈ ಹಾಡಿಕೆ ಬೇಡವೇ ಬೇಡ ಎಂದು ಹುಡುಗಿ ನಿರ್ಧಾರದಲ್ಲಿ ಜಾತಿ ನೆಲೆಯಲ್ಲಿ ಹಾಗೂ ಲಿಂಗದ ನೆಲೆಯಲ್ಲಿ ನಡೆಯುವ ಶೋಷಣೆಯ ಸತ್ಯವಿತ್ತು.

ಹಾಡಿಕೆ: ಸಮಾಜ: ಸರಕಾರ

ಸಮಾಜ ಮತ್ತು ಸರ್ಕಾರವು ಹಾಡಿಕೆಯ ಕುರಿತಂತೆ ಅನೇಕ ದ್ವಂದ್ವಗಳನ್ನು ರೂಢಿಸಿಕೊಂಡಿದೆ. ಅದನ್ನು ತಿಗಣಿಬಿದಿರಿ ಗಂಗವ್ವನ ಮಾತುಗಳಲ್ಲಿಯೇ ಹೇಳಬಯಸುತ್ತೇನೆ.

“ಗುಡ್ಡಕ್ಕ (ಸವದತ್ತಿ) ಎಲ್ಲವ್ವನ ಹತ್ರ ಹೋಗಿದ್ದ್ಯಾ. ನಿಮ್ಮಂಥವರು ಬಂದು ನನ್ನ ಕೈಯಾಗಿನ ಚೌಡಕಿ ಕಿತಕೊಂಡ್ರು. ಕಿತ್ತಕೊಂಡ ಕೂಡ್ಲೆ ಜೀಂವಾ ಹಾs ಅಂತ ಬಾಯಾಗ ಬಂದಂಗಾಯ್ತು. ಚೌಡಕಿ ಕಸಕೊಂಡೆಕಿ ಕಡಿಯಿಂದ ‘ಅವ್ವಾ, ತಾಯಿ’ ಅಂತ ಕಾಲಾಕೈ ಹಿಡಕೊಂಡು ಚೌಡಕಿ ಬಿಡಿಸಿಕೊಂಡ್ಯಾ. ನನ್ನ ಚೌಡಕಿ ಕಿತ್ತಕೊಂಡಾಗ ಉಸಿರಾಟಾ ನಿಂತು, ಕೈಕಾಲು ತಣ್ಣಗಾದಂಗಾಗಿದ್ದು. ಚೌಡಕಿ ಕೈಯಾಗ ಬಂದಕೂಡ್ಲೆ ನಿಂತ ಉಸಿರಾಟ ಚಾಲು ಆಯ್ತು. ಆ ಹುಡುಗಿಗಿ ಒಂದುs ಮಾತು ಹೇಳಿದ್ಯಾ. “ತಂಗಿ ಚೌಡಕಿ ಹಿಡಕೊಂಡಂತಾ, ದಪ್ಪ ಹಿಡಕೊಂಡಂತಾ ನಮ್ಮಂಥವ್ರು ನಿಮಗ ಸೂಳೇರು ಕಂಡ್ಹಂಗ ಕಾಣ್ತೇವು. ನಮಗೆ ಚೌಡಕಿ ಹಿಡಕೊಂಡಂತವ್ರು, ದಪ್ಪ ಹಿಡಕೊಂಡಂತವ್ರು ಸಾಕ್ಷಾತ್ ಸರಸ್ವತಿ ಕಂಡಂಗ ಕಾಣ್ತಾರು. ಒಂದs ಸಂಗೀಗ ವಾದ್ಯ. ಅದನ್ನು ನೋಡೋ ಲೆಕ್ಕದಾಗ ಬ್ಯಾರೆ ಬ್ಯಾರೆ ಆಗ್ಯಾವ ಅಷ್ಟs. ಚೌಡಕಿ ಹಿಡಿದದ್ದಕ್ಕ ನೀವು ನನ್ನ ಸೂಳಿತನಾ ಮಾಡ್ತಾಳು ಅಂತ ನೋಡ್ತೀರಿ. ನಾನು ತಾಯಿ ಹೆಸರ‍್ಲೆ ಕಲಾ ಸೇವಾ ಮಾಡಿ ಬದಕ್ತಿದೀನಿ ಅಂತ ಅನಕೋತಿನಿ.”

ಸರಕಾರವು ‘ದೇವದಾಸಿ’ ನಿಷೇದ ಕಾಯ್ದೆಯನ್ನು ಕಡ್ಡಾಯಗೊಳಿಸುತ್ತದೆ. ಅದೇ ಕಾಲದಲ್ಲಿ ಪರಂಪರೆ ಉದ್ದಕ್ಕೂ ‘ದೇವದಾಸಿ’ಯರೇ ನಿರ್ವಹಿಸಿಕೊಂಡು ಬಂದ ಕಲೆಗಳನ್ನು ಕಲಾತ್ಮಕ ನೆಲೆಯಲ್ಲಿ ಅರ್ಥೈಸುತ್ತದೆ. ಹೀಗೆ ಅರ್ಥೈಸುತ್ತಲೇ ಅವರ ಕಲೆಗಳನ್ನು ಸಂಸ್ಕೃತಿಯ ಹಾಗೂ ಪರಂಪರೆಯ ಭಾಗವಾಗಿಸಿಕೊಳ್ಳುತ್ತದೆ. ತಳ ಸಮುದಾಯಗಳಲ್ಲಿನ ಕಲೆಗಳು ಅಳಿವಿನಂಚಿನಲ್ಲಿವೆ ಎಂದು ಹಳಹಳಿಸುತ್ತ, ಅವುಗಳನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತದೆ. ಪರಂಪರೆಯನ್ನು ಹಾಗೂ ಸಂಸ್ಕೃತಿಯನ್ನು ಉಳಿಸುವ ಹಾಗೂ ಬೆಳೆಸುವ ಜವಾಬ್ದಾರಿಯನ್ನು ಸರಕಾರದ ನೆಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳು ಹಾಗೂ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಗಳು ನಿರ್ವಹಿಸುತ್ತಿದ್ದರೆ; ಸಮಾಜದ ನೆಲೆಯಲ್ಲಿ ಜಾತ್ರೆ, ಉತ್ಸವಗಳು ನಿರ್ವಹಿಸುತ್ತಿವೆ. ಹೀಗೆ ಸರಕಾರ ಹಾಗೂ ಸಮಾಜಗಳು ಒದಗಿಸುವ ಕಲಾ ವೇದಿಕೆಗಳೇ ‘ದೇವದಾಸಿ’ ಪರಂಪರೆಯನ್ನು ಪೋಷಿಸುತ್ತಿವೆ ಹಾಗೂ ಮುಂದುವರೆಸುತ್ತಿವೆ. ಯಾಕೆಂದರೆ ತಳ ಸಮುದಾಯಗಳ ಮಹಿಳಾ ಕಲಾವಿದರು ನಿರ್ವಹಿಸಿಕೊಂಡು ಹೋಗುವಕಲೆಗೂ ‘ದೇವದಾಸಿ’ ಪರಂಪರೆಗೂ ನೇರವಾದ ಸಂಬಂಧವಿದೆ; ಅವುಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ‘ದೇವದಾಸಿ’ ಪರಂಪರೆ ಹಾಗೂ ಅವರು ನಂಬಿದ ಕಲೆಗಳು ಬೇರ್ಪಡಿಸಲಾಗದಷ್ಟು ಒಂದರೊಳಗೊಂದು ಕರಗಿವೆ.

ಜೋಗತಿ ಸಂಪ್ರದಾಯ, ಈ ಸಂಪ್ರದಾಯವನ್ನು ಅವಲಂಬಿಸಿದ ಚೌಡಕಿಯಂತಹ ವಾದ್ಯಗಳು ಮಾತೃಮೂಲ ಪರಂಪರೆಯನ್ನು ಹೊಂದಿವೆ ಎಂದು ಹೇಳಲಾಗುತ್ತಿದೆ. ಈ ಕುರಿತಂತೆ ಗಂಭೀರವಾದ ಅಧ್ಯಯನಗಳು ನಡೆಯಬೇಕಿದೆ. ಪಿತೃಪ್ರಧಾನ ಮೌಲ್ಯಗಳು ತಮ್ಮ ಅಗತ್ಯಕ್ಕೆ ತಕ್ಕಂತೆ ತಳ ಸಮುದಾಯಗಳನ್ನು ರೂಪಿಸಿಕೊಂಡಿವೆ; ಅದಕ್ಕೆ ತಕ್ಕಂತೆ ಅವರನ್ನು ತರಬೇತುಗೊಳಿಸಿವೆ. ಚರಿತ್ರೆ ಉದ್ದಕ್ಕೂ ಪ್ರಬಲ ಸಮಾಜಗಳು ಯಾವುದನ್ನು ತಳ ಸಮುದಾಯದ ಮಹಿಳೆಯರ ಜೀವನ ಎಂದು ನಂಬಿಸಿ ತರಬೇತುಗೊಳಿಸಿದೆಯೋ ಅದನ್ನು ಮುಗ್ಧತೆಯಿಂದ ಸ್ವೀಕರಿಸಿದ್ದಾರೆ. ದೇಹದೊಳಗಿನ ಜೀವ ಮತ್ತು ಸಮಾಜದೊಳಗಿನ ಜೀವನ ಅವರಿಗೆ ಬೇರೆ-ಬೇರೆಯಲ್ಲ. ತಳ ಸಮುದಾಯದ ಮಹಿಳೆಯರಿಗೆ ಚೌಡಕಿ, ದಪ್ಪು ಜೀವನವಾಗಿದ್ದಂತೆ ಜೀವವಾಗಿವೆ; ಜೀವವಾಗಿದ್ದಂತೆ ಜೀವನವಾಗಿವೆ. ಅದಕ್ಕಾಗಿಯೇ ತಳ ಸಮುದಾಯದ ಮಹಿಳೆಯರಿಂದ ಚೌಡಕಿಯನ್ನು, ದಪ್ಪನ್ನು ಕನಿಷ್ಠ ಪದ್ಧತಿಯ ಸಂಕೇತವೆಂದು ಕಿತ್ತುಕೊಂಡಾಗ, ಅವರು ಜೀವ ಹೋದಂತಹ ವೇದನೆಯನ್ನು ಅನುಭವಿಸುತ್ತಾರೆ. ಹೀಗೆ ಕಲಾ ಸಲಕರಣೆಯನ್ನು ಕಿತ್ತುಕೊಂಡ ಸರಕಾರವೇ, ಸಮಾಜವೇ, ಅವರು ನಂಬಿದ ಕಲೆಗಳನ್ನು ಸಂಸ್ಕೃತಿ ಭಾಗವಾಗಿ ನಿರ್ವಚಿಸಿದಾಗ, ಅವುಗಳಿಗೆ ವೇದಿಕೆಗಳನ್ನು ಒದಗಿಸಿದಾಗ ಗೊಂದಲಕ್ಕೀಡಾಗುತ್ತಾರೆ. ಸರಕಾರವು ಹಾಗೂ ಸಮಾಜಗಳು ತಾವು ಗೊಂದಲದಲ್ಲಿ ಇರುವುದರ ಜೊತೆಯಲ್ಲಿ ಶೋಷಿತ ಸಮುದಾಯಗಳನ್ನು ಗೊಂದಲದಲ್ಲಿ ಇಡುತ್ತಿವೆ. ಹೀಗಾಗಿಯೇ ಶೋಷಿತ ಸಮುದಾಯಗಳು ಯಾವುದು ಅಪಮಾನ, ಯಾವುದು ಸನ್ಮಾನ; ಯಾವುದು ಶೋಷಿತ ಬದುಕು, ಯಾವುದು ಶೋಷಣೆ ರಹಿತ ಬದುಕು; ಯಾವುದು ಆಸ್ಮಿತೆ; ಯಾವುದು ಆಸ್ಮಿತೆಯಲ್ಲ ಎನ್ನುವುದರ ಖಚಿತತೆ ಇಲ್ಲದೆ ಸರಕಾರ ಹಾಗೂ ಸಮಾಜಗಳು ಎಳದತ್ತ ಹೋಗುತ್ತಿದ್ದಾರೆ. ಸರಕಾರ ಹಾಗೂ ಸಮಾಜಗಳಲ್ಲಿನ ದ್ವಂದ್ವಗಳನ್ನು ತಿಗಣಿಬಿದರಿ ಗಂಗವ್ವನಂಥವರು ಪ್ರಶ್ನಿಸುವಷ್ಟು ಸೂಕ್ಷ್ಮರಾಗಿದ್ದಾರೆ. ಆದರೆ ಸರಕಾರ ಹಾಗೂ ಸಮಾಜಗಳು ತಮ್ಮ ದ್ವಂದ್ವಗಳನ್ನು ಗುರುತಿಸಿಕೊಳ್ಳದಷ್ಟು ಅಸೂಕ್ಷ್ಮವಾಗಿವೆ.

ನಾನು ಹೋದ ಕಡೆಯಲ್ಲೆಲ್ಲಾ ಹಾಡಿಕೆ ಮಹಿಳೆಯರು ಹೇಳಿದ ಅನುಭವ ಕಥನವನ್ನೇ ಅವರತ್ತ ತಿರುಗಿಸಿ ಯಾಕೆ ಬೇಕು ಈ ಕಲೆ ಎಂದು ಪ್ರಶ್ನಿಸುತ್ತಿದ್ದೆ. ಹಾಡಿಕೆಯನ್ನು ಬಿಟ್ಟು ಬೇರೆ ಉದ್ಯೋಗಕ್ಕೆ ಹೊರಳಿಕೊಳ್ಳಲು ಹೇಳುತ್ತಿದ್ದೆ. “ದಪ್ಪು ಹಿಡಿದರೆ, ಚೌಡಕಿ ಹಿಡಿದರೆ ಮದುವೆಯಾಗುವಂತಿಲ್ಲ ಎನ್ನುವುದ ನಿಮ್ಮ ನಂಬಿಕೆ. ಹಾಗಿದ್ದರೆ ದಪ್ಪು ಹಾಗೂ ಚೌಡಕಿ ಹಿಡಿಯುವುದನ್ನು ಬಿಟ್ಟು ಬಿಡಿ. ಮಕ್ಕಳಿಗೆ ಹೊಸ ಬದುಕಿನ ಬೆಳಕಿಗೆ ತೆರೆದುಕೊಳ್ಳಲು ಬಿಡಿ. ಹಾಡಿಕೆಯಲ್ಲಿನ ದೊಡ್ಡ ಮೊತ್ತದ ಸಂಬಳಕ್ಕೆ ಆಕರ್ಷಿತರಾಗಿ ಊರೂರು ಅಲೆಯುವುದನ್ನು ಬಿಡಿ. ಒಂದು ಕಡೆಯಲ್ಲಿ ನೆಲೆನಿಂತು ಚಿಕ್ಕ ಪುಟ್ಟ ಕೆಲಸಗಳನ್ನು ನಿರ್ವಹಿಸಿ ಮಕ್ಕಳ ಶಿಕ್ಷಣಕ್ಕೆ ಒತ್ತು ಕೊಡಿ…” ಎಂದು ಉಪನ್ಯಾಸ ನೀಡುತ್ತಿದ್ದೆ. ನಾನು ದೊಡ್ಡವಳು ಎಂದು ಅವರು ಪರಿಭಾವಿಸಿದ ಕಾರಣ ನನ್ನ ಉಪನ್ಯಾಸವನ್ನು ಕೇಳಿಸಿಕೊಳ್ಳುತ್ತಿದ್ದರು ಅಥವಾ ಸಹಿಸಿ ಕೊಳ್ಳುತ್ತಿದ್ದರು. ಇಂಥದೆ ಉಪನ್ಯಾಸವನ್ನು ನೀವರಿಗಿಯ ಮಲ್ಲಮ್ಮನಿಗೆ ನೀಡುತ್ತಿದ್ದೆ. ಉಪನ್ಯಾಸ ಪ್ರಾರಂಭಿಸಿದ ಹೊತ್ತಿನಲ್ಲಿಯೇ ಮಧ್ಯ ಪ್ರವೇಶಿಸಿದ ಮಲ್ಲಮ್ಮ ನನ್ನ ಉಪನ್ಯಾಸಕ್ಕೆ ಕತ್ತರಿ ಪ್ರಯೋಗ ಮಾಡಿದಳು. “ವಯಸ್ಸಿನ್ಯಾಗ ನಾನು ದೊಡ್ಡೇಕಿ. ಸ್ಥಾನದಾಗ ನೀವು ದೊಡ್ಡೋರು. ನಿಮ್ಮಷ್ಟು ನಾನು ಸಾಲಿ ಕಲ್ತೇಕಿ ಅಲ್ಲ. ನೀವು ದಿನಾಲೂ ಜಗತ್ತ್ನ ಪೇಪರ‍್ನಾಗ ಓದತಿರತೀರಿ. ಇವತ್ತಿನ ಕಾಲಮಾನದ ಸಮಸ್ಯಾ ಏನು ಅನ್ನೂದು ನಮಗಿಂತ ನಿಮಗ ಚಲೋ ಗೊತ್ತೈತಿ. ನಮ್ಮಂಥಾ ಹೊಲೆ ಮಾದಿಗರ್ನ ನಿಮ್ಮಂಥೋರು ಮನಿ ದಗದಕ್ಕಂತೂ ಕರಿಯೂದಿಲ್ಲ. ನಮ್ಮನ್ನ ನೋಡಿದ್ರ ನೀವು ಮೈಲ್ಗಿ ಆಗ್ತೀರಿ. ನಿಮ್ಮ ಮನಿ ಅಂಗಳ್ದಾಗ ಕರಕೊಳ್ಳುದಂತೂ ಕನಸಿನ ಮಾತು. ಹೊಲದ ದಗದಕ್ಕ ಹೋಗ್ತೇನಿ ಅಂದ್ರ ದಿನಾ ಒಬ್ಬೊಬ್ಬ ರೈತಾ ಎಣ್ಣಿಕುಡ್ದು ಸಾಯಕ್ಕತ್ತಾನು. ಒಮ್ಮೊಮ್ಮಿ ಮಳಿ ಇರ‍್ಲಾರ‍್ದಕ್ಕ ಬೆಳಿ ಸತ್ತ ಹ್ವಾದ್ರ, ಮತ್ತೊಮ್ಮಿ ಹೆಚ್ಚ ಮಳಿ ಆಗಿ ಬೆಳಿ ಕೊಚ್ಕೊಂಡ ಹೋಗ್ತಾವು. ನೋಡಿರಿಲ್ಲರಿ ಮೊನ್ನಿ ದೊಡ್ಡ ಮಳಿಬಂದು ಹೆಂಗಾತು ಜೀವ್ನಾ? ರೈತರs ಸಾಲ್ದಾಗ ಸಾಯಕತ್ತಾರ. ಇನ್ನ ನಮ್ಮನ್ನೇನ ಕರ‍್ದ ಕೂಲಿಗಿ ಹಚ್ಚತಾರು? ಇನ್ನ ಪಾಟ್ರಿ ಪಿಟ್ರಿ (Factory) ದಗದ ನಮಗೆ ಗೊತ್ತಿಲ್ಲ. ನಮ್ಮ ಆಯಿ ಮುತ್ತ್ಯಾ ಜೀಂವಾ ತೇದ-ತೇದ (ತೇಯ್ದು-ತೇಯ್ದು) ಅಂಗೈ ಅಗಲ ಜಾಗದಾಗ ಮನಿ ಅಂತ ಕಟ್ಟಿಸ್ಯಾರ. ಇರೋ ಅಂಗೈ ಅಗಲದಷ್ಟ ಸ್ವಂತ ಮನಿ ಬಿಟ್ಟು ಪೂನಾ ಬಾಂಬೆಕ್ಕ ಗಾರಿ ಕೆಲ್ಸ ಹುಡ್ಕೊಂಡು ಹೋಗಬೇಕು. ಗೊತ್ತಿಲ್ದ ಊರಾಗ ಜೀವ್ನ ಮಾಡೂದು ಅಷ್ಟ ಸರಳ ಅಲ್ಲ್ರಿ. ಸರಕಾರ ನಮಗೇನಾರ ಕೆಲ್ಸಾ ಕೊಡತೈತಾ? ನಾವು ಹ್ಯಾಂಗ ಬದುಕೂನು? ಹಾಡ್ಕಿ ನಚ್ಕೊಂಡ ನಮ್ಗೆಲ್ಲಾ ನೀವೇನ ಕೆಲ್ಸಾ ಕೊಡ್ಸಾಗ ಆಗ್ತೈತಾ?…” ಅವಳ ಒಂದೊಂದು ಮಾತು ನನ್ನ ನಾಲಗಿಯ ದ್ರವವನ್ನು ಆರಿಸುತ್ತಾ ಬಂದಿತು. ಬಾಯಿ ಒಣಗಿ ಗಂಟಲು ಕಟ್ಟಿದ ನನಗೆ ಮಾತೇ ಹೊರಡಲಿಲ್ಲ. ಆರ್ಥಿಕ ಅಸಹಾಯಕತೆಯು ಸಾಮಾಜಿಕ ಜಾಗೃತ ಪ್ರಜ್ಞೆಯನ್ನು ತನ್ನ ಆಪೋಷನಕ್ಕೆ ಸೆಳೆದುಕೊಳ್ಳುತ್ತಿರುತ್ತದೆ. ಪರ್ಯಾಯ ಬದುಕು ಸೂಚಿಸಲಾಗದ ನಾನು ಹಾಡಿಕೆಯಲ್ಲಿನ ಕತ್ತಲೆ ಜಗತ್ತಿನ ಕುರಿತು ಮಾತನಾಡುವ ನೈತಿಕತೆಯನ್ನು ಕಳೆದುಕೊಂಡಿದ್ದೇನೆ ಎನಿಸಿತು. ಪರ್ಯಾಯ ವೃತ್ತಿಯನ್ನು ಕಟ್ಟಿಕೊಡಲಾಗದ, ಹಾಡಿಕೆಯಲ್ಲಿನ ಶೋಷಣೆಯನ್ನು ಒಪ್ಪಿಕೊಳ್ಳಲಾಗದ ಅಸಹಾಯಕತೆಯಲ್ಲಿ ತೊಳಲಾಡುತ್ತಿದ್ದೆನು. ಸ್ವಲ್ಪ ಹೊತ್ತು ಮೌನವಾಗಿದ್ದ ಮಲ್ಲಮ್ಮ ಮತ್ತೆ ತಾನಾಗಿಯೇ ಮಾತನಾಡತೊಡಗಿದಳು: “ದುರ್ಗವ್ವನ ಪೂಜೆ ಬ್ಯಾರೆ ಯಾರೂ ಮಾಡಾಕ ಬರಲ್ಲ, ಎಲ್ಲವ್ವನ ಪೂಜಾಕ್ಕೂ ನಾವು ಬೇಕs ಬೇಕಾಗ್ತೈತಿ. ಎಲ್ಲಿತನಾ ದುರುಗವ್ವಾ, ಎಲ್ಲವ್ವಾ ಇರತಾರೋ ಅಲ್ಲಿತನಾ ನಾವು (ದೇವದಾಸಿಯರು) ಇರತೇವು. ಹೀಂಗಾಗಿ ನಮ್ಮಂಥವ್ರ ಬದುಕಿಗಿ ದಾರಿ ಬೇಕಲ್ಲಾ? ನಿಮಂಥೋರು ಓದಿದ್ರ ಸರ್ಕಾರ ಕೆಲ್ಸಾ ಕೊಡತೈತಿ. ನಮಂಥೋರು ಹಾಡ್ಕಿ ಕಲ್ತ್ರ ಚಾಜಾ ಸಿಗ್ತಾವು. ನೀವು ‘ದೇವದಾಸಿ’ ಆಗಬ್ಯಾಡ್ರಿ ಅಂತ ಹೇಳ್ತೀರಿ. ಹೀಂಗ ಹೇಳು ನೀವು ನಮ್ಮ ಹಾಡ್ಕಿನ ಕಲಿ (ಕಲೆ) ಅಂತ್ಹೇಳಿ ಕರಿತಿರಿ; ಸನ್ಮಾನ ಮಾಡ್ತೀರಿ. ಜಾನಪದ ಅಕಾಡೆಮಿಯವ್ರು, ಸಂಸ್ಕೃತಿ ಇಲಾಕಾದವ್ರು ಸತ (ಸಹಿತ) ನಮ್ಮ ಹಾಡ್ಕಿ ಪೋಗ್ರಾಂ (Program) ನಡಸ್ತಾರು. ಹಾಡ್ಕಿ ಬೇಕು ಅಂತಂದ್ರ ‘ದೇವದಾಸಿ ಪದ್ದತಾ ಬೇಕು’ ಅಂತಂದಂಗ. ದೇವದಾಸಿ ಪದ್ದೂತಾ ಬ್ಯಾಡಾ ಅಂತಂದ್ರ ನಮ್ಮ ಕಲಿ ಬ್ಯಾಡಾ ಅಂತಂದಂಗ” ಎಂದು ನಕ್ಕಳು. ಅವಳ ನಗು ಅಂತಿಂಥಾ ನಗುವಲ್ಲ ಅದು. ನಮ್ಮ ವ್ಯವಸ್ಥೆಗೆ ಸರಕಾರಕ್ಕೆ ಎಸೆದ ಸವಾಲದು. ಅಕ್ಷರಶಃ ನನ್ನ ಮಾತುಗಳು ನಿಂತು ಹೋಗಿದ್ದವು ಅಥವಾ ಭಾಷೆಯೇ ಮರೆತು ಹೋಗಿತ್ತು. ಮೌನದಲ್ಲಿ ಹೊರಬಂದೆ. ಹಾಡಿಕೆ ಕಲಿಯುವ ಸಂದರ್ಭದಲ್ಲಿ ಅಪ್ರಾಪ್ತ ವಯಸ್ಸಿನಲ್ಲಿ ಗುರುಗಳಿಂದ ಅತ್ಯಾಚಾರಕ್ಕೊಳಗಾದ ಹುಡುಗಿಯರು ಅನುಭವಿಸಿದ ಹಿಂಸೆಗಳು, ತಲ್ಲಣಗಳು; ತೇಪೆಯ ಹಾಗೂ ಸವಕಲು ಸೀರೆಯನ್ನು ಉಟ್ಟುಕೊಂಡು ಪ್ರೇಕ್ಷಕರೆದುರಿಗೆ ಹಾಡುವಾಗ ಅನುಭವಿಸಿದ ಮುಜುಗರಗಳು, ಕೀಳರಿಮೆಗಳು; ವೃತ್ತಿ ಆರಂಭದಲ್ಲಿ ಬಸ್‌ಚಾರ್ಜಗೆ ದುಡ್ಡಿಲ್ಲದೆ ಪರದಾಡಿದ ದಿನಗಳು, ಸನ್ಮಾನದ ಹೆಸರಿಲ್ಲಿ ಅನುಭವಿಸಿದ ಹೇಳಿಕೊಳ್ಳಲಾಗದ, ನುಂಗಿಕೊಳ್ಳಲಾಗದ ಅಪಮಾನಗಳು; ಸನ್ಮಾನದ ಹೆಸರಿನಲ್ಲಿ ನಡೆದ ಅಪಮಾನಗಳನ್ನು ಸನ್ಮಾನಗಳೇ ಎಂದು ನಂಬಿದ ಮುಗ್ಧ ಮನಸ್ಸುಗಳು; ಊರಿನ ಕೆಲ ‘ಗಣ್ಯ’ ಕುಟುಂಬದವರು ಅವರಿಗೆ ಅಪರೂಪಕ್ಕೆ ತೋರಿದ ಕರಳುಬಳ್ಳಿಯ ಪ್ರೀತಿ; ದೇವದಾಸಿಯಾಗಿ ಮೈ ಒಪ್ಪಿಸಲು ನಿರಾಕರಿಸಿದಂತವರು; ಗಂಡಸರು ಹೂಡುವ ತಂತ್ರಗಳಿಗೆ ಪ್ರತಿ ತಂತ್ರಗಳನ್ನು ರೂಪಿಸಿಕೊಂಡು ತಮ್ಮನ್ನು ರಕ್ಷಿಸಿಕೊಂಡವರು; ‘ದೇವದಾಸಿ’ ಎನ್ನುವ ಹೀಗಳಿಕೆಗೆ ನೊಂದು ಜೊತೆಯಲ್ಲಿದ್ದವನೊಂದಿಗೆ ಹಾರ ಬದಲಾಯಿಸಿಕೊಳ್ಳುವ ಮೂಲಕ ‘ಜೋಗತಿ’ ಸಂಪ್ರದಾಯವನ್ನು ಮುರಿದವರು; ಮಕ್ಕಳಿಗೆ ಅಪ್ಪ ಇರಲೇಬೇಕೇನು ಎಂದು ಪ್ರಶ್ನಿಸಿದವರು; ಸರಕಾರಿ ಸೌಲಭ್ಯಗಳನ್ನು ನಿರಾಕರಿಸಿ ಸಾಮಾಜಿಕ ಗೌರವವನ್ನು ನಿರೀಕ್ಷಿಸಿ ಮಕ್ಕಳ ಹೆಸರ ಮುಂದೆ ತಂದೆಯ ಹೆಸರನ್ನು ನಮೂದಿಸಿದವರು; ಸಾಮಾನ್ಯ ಜೀವನಕ್ಕೂ ಸಾಧಿತ ಜೀವನಕ್ಕೂ ಇರುವ ಅಂತರವನ್ನು ಗುರುತಿಸಿಕೊಂಡವರು; ತಮ್ಮ ಸಾಧನೆಯ ಜೀವನಕ್ಕೆ ತೊಡಕಾಗದೆ ಇರುವಂತಹ ಜೊತೆಗಾರನನ್ನು ಆಯ್ದುಕೊಳ್ಳುವಲ್ಲಿನ ಅವರ ತರ್ಕಗಳು; ಜೊತೆಗಾರನನ್ನು ಕೇವಲ ಮಕ್ಕಳನ್ನು ಪಡೆಯುವ ಪರಿಕರವಾಗಿ ಅವರು ಪರಿಭಾವಿಸಿದ ಪರಿ; ಸಾಧನೆಗೂ ಮದುವೆಯಾಗದೆ ಇರುವುದಕ್ಕೂ ಅವರು ಕಲ್ಪಿಸಿಕೊಂಡ ಸಂಬಂಧಗಳು. ಹಾಡಿಕೆಯಿಂದಲೇ ಮೂರ‍್ನಾಲ್ಕು ಎಕರೆ ಹೊಲ, ಪುಟ್ಟ ಮನೆ ಖರೀದಿಸಿ ತಾವು ಆಸ್ತಿ ಹೊಂದಿದ್ದೇವೆ ಎಂದು ಸಂತಸದಲ್ಲಿದ್ದ ಮಹಿಳಾ ಹಾಡುಗಾರರು; ನಾಲ್ಕು ತಿಂಗಳ ವರೆಗೆ ಹಾಡಿಕೆಗಾಗಿ ಹುಟ್ಟೂರು ಹಾಗೂ ಕುಟುಂಬ ಬಿಟ್ಟು ತೆರಳುವಾಗ ಅನುಭವಿಸಿದ ಹಿಂಸೆಗಳು; ಮಕ್ಕಳಿಗೆ ಉಣಿಸಲಾಗದ, ಆಡಿಸಲಾಗದ ಅವರಲ್ಲಿನ ಅಸಹಾಯ ಕತೆಗಳು; ದೂರದೂರಿನಲ್ಲಿ ಕೆಲವು ತಿಂಗಳವರೆಗೆ ಹಾಡಿಕೆಗಾಗಿ ತೆರಳಿದ ಅವರು ಬಾಡಿಗೆ ಮನೆ ಮಾಡಲಾಗದೆ ಬಯಲಿನಲ್ಲಿಯೇ ಅತ್ತ ನಿದ್ರೆಯೂ ಅಲ್ಲ, ಇತ್ತ ಎಚ್ಚರವೂ ಅಲ್ಲ ಎನ್ನುವ ಸ್ಥಿತಿಯಲ್ಲಿ ಮಲಗಿದ ದಿನಗಳು; ಬಯಲಿನಲ್ಲಿ ಮಲಗಿದಾಗ ಸ್ನಾನ ಮಾಡುವಾಗ ಎದುರಿಸದ ಹೇಳಿಕೊಳ್ಳಲಾಗದ ಹಿಂಸೆಗಳು; ಹಾಡಿಕೆಗೆ ಹೋದಲ್ಲಿ, ಪ್ರಕೃತಿ ಸಹಜ ಕರೆಗಳಾಗ ಮಲ-ಮೂತ್ರ ವಿಸರ್ಜನೆಯನ್ನು ನಿರ್ಭಯವಾಗಿ ಮಾಡಲಾಗದ ಅಸಹಾಯಕತೆಗಳು; ಅಂತಹ ಸಂದರ್ಭಗಳಲ್ಲಿ ಅವರೆದುರಿಸಿದ ಲೈಂಗಿಕ ದೌರ್ಜನ್ಯಗಳು; ಇಂತಹ ದೌರ್ಜನ್ಯಗಳ ಕಾರಣದಿಂದಾಗಿ ಹಾಡಿಕೆಗೆ ವಿದಾಯ ಹೇಳಿದ ಮಹಿಳೆಯರು; ಭೀಕರ ದೌರ್ಜನ್ಯಗಳನ್ನು ನುಂಗಿ ಕೊಂಡು ಹಾಡಿಕೆಯಲ್ಲಿಯೇ ಉಳಿದಿರುವ ಮಹಿಳೆಯರ ಸಂಕಟಗಳು; ಹಾಡಿಕೆ ವೃತ್ತಿ ನಿರ್ವಹಿಸುವ ಕಾರಣಕ್ಕಾಗಿಯೇ ಮಕ್ಕಳಿಂದ ತಿರಸ್ಕರಿಸಲ್ಪಟ್ಟವರು; ‘ದೇವದಾಸಿ’, ‘ನಡತೆ ಗೆಟ್ಟವಳು’ ಎಂದು ಎದುರು ಹಾಡುಗಾರನಿಂದ ಎದುರಾದ ಅಪಮಾನಗಳಿಂದಾಗಿ ಅನುಭವಿಸಿದ ಸಂಕಟಗಳು; ಎದುರು ಹಾಡುಗಾರರು ಹಾಗೂ ಊರಿನ ಕೆಲ ಪುಂಡರಿಂದ ರಕ್ಷಣೆ ಪಡೆದುಕೊಳ್ಳಲು ಹಾಡಿಕೆಯಲ್ಲಿಯೇ ‘ನಿಮ್ಮ ಉಡಿಯಾನ ಕೂಸು ನಾನು’ ಎಂದು ರಕ್ಷಣೆ ಯಾಚಿಸುವ ಅವರ ಅಸಹಾಯಕತೆಗಳು; ದೀರ್ಘ ಅವಧಿಯವರೆಗೆ ನಿಂತು ಹಾಡುವುದರಿಂದಾಗಿ ಅನುಭವಿಸುವ ನಡನೋವು, ಮೊಣಕಾಲು ನೋವು; ಇವುಗಳ ಕಾರಣದಿಂದಾಗಿ ಎಲ್ಲರಂತೆ ಸಹಜವಾಗಿ ಕುಳಿತುಕೊಂಡು ಮಲ-ಮೂತ್ರ ವಿಸರ್ಜನೆ ಮಾಡಲಾಗದ ಅಸಹಾಯಕತೆಗಳು; ಹೊಟ್ಟಿ ಕಟ್ಟಿದ್ದಕ್ಕಾಗಿ ಮುಪ್ಪಿನಲ್ಲಿಯೂ ಅವರು ಎದುರಿಸುವ ಅಸಿಡಿಟಿ ಸಮಸ್ಯೆಗಳು; ಹೊಟ್ಟೆ ಪಾಡಿಗಾಗಿ ನಿರಂತರ ಹಾಡಿ ಹಾಡಿ ಧ್ವನಿ ಒಡೆದಾಗ ಪ್ರೇಕ್ಷಕರಿಂದ ಅಪಮಾನಗೊಂಡ ದಿನಗಳು; ದೇಹದ ದಣಿವನ್ನು, ಧ್ವನಿಯ ದಣಿವನ್ನು ಔಷಧೀಯ ಮೂಲಕ ನಿಯಂತ್ರಿಸುತ್ತಾ ಹಾಡಿಕೆಯಲ್ಲಿ ತೊಡಗಿಸಿಕೊಳ್ಳುವ ಅವರ ಆರ್ಥಿಕ ಅಸಹಾಯಕತೆಗಳು; ಹಾಡಿಕೆ ಮೇಳ ಉಳಿಸಿಕೊಳ್ಳುವುದಕ್ಕಾಗಿ ಮಹಿಳೆಯರು ಪಡುವ ಪ್ರಯಾಸಗಳು, ಪರದಾಟಗಳು; ಹೊಟ್ಟೆ ‘ಕಿಚ್ಚಿ’ಗಾಗಿ ದಪ್ಪು ಬಡಿದು, ಬಡಿದು ಬೆರಳಿನಿಂದ ಜಿನುಗಿದ ರಕ್ತದ ಹನಿಗಳು, ನೋವಿನಿಂದ ತೊಟಕಿದ ಅವರ ಕಣ್ಣೀರ ಹನಿಗಳು; ತಾಯಿ ಎದುರಿಸಿದ ಅಪಮಾನಗಳನ್ನು ನೆನೆದುಕೊಂಡು ಕೂದಲು ಕಿತ್ತುಕೊಂಡು ಅಳುವ ಕಂದಮ್ಮಗಳ ಆಕ್ರಂದನ ಹೀಗೆ ನೂರಾರು ವಿಷಯಗಳು ನನ್ನ ಮನದಾಳದಲ್ಲಿ ಕೊರೆಯತೊಡಗಿದವು….

* * *