ಉಡಿ ತುಂಬಿಸಿಕೊಳ್ಳುವುದು: ಹಾಡಿಕೆ ಮಾಡದೇ ಇರುವ ‘ಜೋಗತಿಯರು’, ‘ಬಸವಿಯರು’ ಮೊದಲು ಹೊಂದುವ ಲೈಂಗಿಕ ಸಂಬಂಧವನ್ನು ‘ಹೆಣ್ಣು ಮಾಡುವುದು’ ಎಂದು ಹೇಳಿದರೆ, ಹಾಡಿಕೆ ಮಾಡುತ್ತಿದ್ದ ‘ಜೋಗತಿಯರು’, ‘ಬಸವಿಯರು’ ಮೊದಲ ಲೈಂಗಿಕ ಸಂಬಂಧ ಹೊಂದುವದನ್ನು ‘ಉಡಿ ತುಂಬಿಸಿಕೊಳ್ಳುವುದು’ ಎಂದು ಹೇಳಿದರು. ಜೀವನದ ಕೊನೆಯವರೆಗೂ ಜೊತೆಗಿರುತ್ತೇನೆಂದು ಅವರು ನಂಬಿದ ದೈವದ ಮೇಲೆ ಹಾಗೂ ಅವರ ಸಮುದಾಯದ ಮುಖಂಡರೆದುರಿಗೆ ಪ್ರಮಾಣ ಮಾಡಿದ ವ್ಯಕ್ತಿಯೊಂದಿಗೆ ಮಾತ್ರ ಉಡಿ ತುಂಬಿಸಿಕೊಳ್ಳುವರು.

ಕಲ್ಗಿ-ತುರಾ: ಅಕಬರನ ಆಸ್ಥಾನದಲ್ಲಿ ಶಹಾಅಲಿ ಮತ್ತು ತುಕನಗೀರ ಎನ್ನುವ ಲಾವಣಿ ಹಾಡುಗಾರರ ಇದ್ದರಂತೆ. ಇವರು ಹರದೇಶಿ-ನಾಗೇಶಿ ಹಾಡುಗಳನ್ನು ಹೇಳುತ್ತಿದ್ದರಂತೆ. ಅವರ ಹಾಡಿಕೆಯನ್ನು ಮೆಚ್ಚಿಕೊಂಡ ಅಕಬರನು ಶಹಾಅಲಿಗೆ ಕಲ್ಗಿ (ಹಕ್ಕಿಯ ಗರಿ)ಯನ್ನು, ತುಕನ್‌ಗೀರನಿಗೆ ಕಿರೀಟದಲ್ಲಿ ಧರಿಸುತ್ತಿದ್ದ ತುರಾಯಿಯನ್ನು (ಹೂವಿನಗುಚ್ಛ) ಕೊಟ್ಟನಂತೆ. ಹೀಗಾಗಿ ಅಂದಿನಿಂದ ಇವರು ಹಾಡುವ ಹಾಡುಗಳನ್ನು ಕಲ್ಗಿ-ತುರಾ ಎಂದು ಕರೆಯುವ ವಾಡಿಕೆ ಪ್ರಾರಂಭವಾಯಿತಂತೆ (ವಿವರಣೆಗೆ ಗಮನಿಸಿ ಹೆಂಡಿ ಬಿ.ಬಿ., ಲಾವಣಿಕಾರರು, ೧೯೮೦, ಜನಪದಸಾಹಿತ್ಯ ದರ್ಶನ (ಆರು). ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ) ಪ್ರಹ್ಲಾದ ಕುಮಾರ ಬಾಗೋಜಿ ಅವರು ‘ಕಲ್ಗಿ’ ಎನ್ನುದು ಹೆಣ್ಣಿನ ತಲೆಗಿರುವ ಆಭರಣವಾಗಿ ಹೆಣ್ಣಿನ ಸಂಕೇತವಾದರೆ ‘ತುರಾಯಿ ಗಂಡಿನ ಸಂಕೇತ’, (ಪ್ರಹ್ಲಾದ ಕುಮಾರ ಬಾಗೋಜಿ, ಲಾವಣಿ, ೧೯೭೪, ಜನಪದ ಸಾಹಿತ್ಯ ದರ್ಶನ-೧, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ) ಎನ್ನುತ್ತಾರೆ. ಹರದೇಶಿ ಹಾಡುಗಳನ್ನು ‘ಕಲ್ಗಿ’ ಎಂದೂ, ನಾಗೇಶಿ ಹಾಡುಗಳನ್ನು ‘ತುರಾ’ ಎಂದೂ ಕರೆಯಲಾಗುತ್ತಿದೆ. ಜನಸಾಮಾನ್ಯರಲ್ಲಿ ಕಲ್ಗಿ-ತುರಾ ಪದ ಬಳಕೆಯಲ್ಲಿಯೇ ಇಲ್ಲ.

ಕೊಟ್ಟ-ಕೊಂಡ ಹೆಣ್ಣು : ‘ಕೊಟ್ಟ ಹೆಣ್ಣು’ ಎಂದರೆ ಮಗಳು; ‘ಕೊಂಡ ಹೆಣ್ಣು’ ಎಂದರೆ ಸೊಸೆ. ‘ಮಗಳು-ಸೊಸೆ’ ಎನ್ನುವುದಕ್ಕೆ ‘ಕೊಟ್ಟ-ಕೊಂಡ ಹೆಣ್ಣು’ ಎನ್ನುತ್ತಾರೆ. ಈ ಪದ ಉತ್ತರ ಕರ್ನಾಟಕದ ತಳ ಸಮುದಾಯಗಳಲ್ಲಿ ಬಳಕೆಯಲ್ಲಿದೆ. ತಳ ಸಮುದಾಯಗಳಲ್ಲಿ ಮೂಲದಲ್ಲಿ ಕನ್ಯಾಶುಲ್ಕ ಪದ್ಧತಿ ಜಾತಿಯಲ್ಲಿತ್ತು ಎನ್ನುವ ಸುಳಿವನ್ನು ಅವರಲ್ಲಿ ಈಗಲೂ ಚಾಲ್ತಿಯಲ್ಲಿರುವ ‘ಕೊಟ್ಟ-ಕೊಂಡ ಹೆಣ್ಣು’ ಪದ ಬಳಕೆ ನೀಡುತ್ತದೆ. ಇತ್ತೀಚಿಗೆ ‘ವರದಕ್ಷಿಣೆ ಪದ್ಧತಿ’ ತಳ ಸಮುದಾಯಗಳಲ್ಲೂ ಪ್ರವೇಶಿಸಿದೆ. ಗಂಡಿನ ಕಡೆಯವರು ಹೆಣ್ಣಿನ ಕಡೆಯವರಿಂದ ವರದಕ್ಷಿಣೆ ಪಡೆದುಕೊಂಡರೂ, ಕನ್ಯಾ ಶುಲ್ಕವನ್ನು ಹೆಣ್ಣಿನ ಕಡೆಯವರಿಗೆ ಕೊಡುತ್ತಾರೆ. ಹೀಗಾಗಿಯೇ ಈಗಲೂ ತಳ ಸಮುದಾಯಗಳಲ್ಲಿ ‘ಕೊಟ್ಟ-ಕೊಂಡ ಹೆಣ್ಣು’ ಪದ ಚಾಲ್ತಿಯಲ್ಲಿದೆ.

ಗುರುಪ್ಯಾಲಾ : ಹರದೇಶಿ-ನಾಗೇಶಿ ಹಾಡು ಕಲಿಯ ಬಯಸುವ ಹುಡುಗನಿಗೆ ಗುರುಪ್ಯಾಲಾ ದೀಕ್ಷೆಯನ್ನು ನೀಡಲಾಗುತ್ತದೆ. ಒಂದು ಒಳ್ಳೆಯ ಮುಹೂರ್ತ ನೋಡಿ, ಗುರು-ಶಿಷ್ಯರಿಬ್ಬರನ್ನು ಮದುಮಕ್ಕಳಂತೆ ಕಂಬಳಿಯ ಮೇಲೆ ಸಾಸಕ್ಕಿ ಹಾಕಿ ಕೂಡಿಸುತ್ತಾರೆ. ಒಂದು ಲೋಟ ಮಡಿ ಹಾಲಿನಲ್ಲಿ ಒಣ ದ್ರಾಕ್ಷಿ, ಗೋಡಂಬಿ, ಕಲ್ಲು ಸಕ್ಕರೆ ಹಾಕಿ ಗುರುವಿಗೆ ಕೊಡುತ್ತಾರೆ. ಅದನ್ನು ಮಂತ್ರಿಸಿದ ಗುರು ತಾವು ಅರ್ಧ ಕುಡಿದು ಶಿಷ್ಯನಿಗೆ ಅರ್ಧ ಕೊಡುತ್ತಾರೆ. ಗುರುವಿನ ಎಂಜಲು ಹಾಲನ್ನು ಕುಡಿದಾಗ ಶಿಷ್ಯನಾಗುತ್ತಾನೆ. ಇದಕ್ಕೆ ‘ಹಸ್ತಿಕ್ ಆಗುವುದು’ ಎಂದು ಕೂಡ ಹೇಳುತ್ತಾರೆ.

ಗೊಳ್ಳು ಒಗೆಯುವುದು : ಕುಸುಬೆ ಎಣ್ಣೆಯನ್ನು ತೆಗೆಯುವಾಗ ಉಳಿದ ಜೊಳ್ಳನ್ನು ‘ಗೊಳ್ಳು’ ಎಂದು ಕರೆಯುವರು. ಹಾಡಿಕೆಯವರ ಹಾಡು ಪ್ರೇಕ್ಷಕರಿಗೆ ಇಷ್ಟವಾದರೆ ಹಾಡುಗಾರರ ಮೇಲೆ ಕುಸುಬಿಯ ಜೊಳ್ಳನ್ನು ಒಗೆಯುವರು. ಇದಕ್ಕೆ ‘ಗೊಳ್ಳು ಒಗೆಯುವುದು’ ಎಂದು ಹೇಳುವರು. ಈ ಗೊಳ್ಳನ್ನು ಪುರುಷ ಹಾಡುಗಾರರಿಗಿಂತ ಮಹಿಳಾ ಹಾಡುಗಾರರ ಮೇಲೆ ಹೆಚ್ಚಾಗಿ ಚೆಲ್ಲುವರು.

ಚಾಜ : ಹಾಡಿಕೆಗೆ ಬರುವ ಆಹ್ವಾನವನ್ನು ‘ಚಾಜ’ ಎನ್ನುವರು. ಚಾಜದ ಅರ್ಥದಲ್ಲಿಯೇ ‘ವಿಳ್ಳೇವು’ ಪದ ಬಳಕೆಗೊಳ್ಳುತ್ತದೆ. ಹಾಡಿಕೆಗೆ ಬರುವ ಆಹ್ವಾನವನ್ನು ಒಪ್ಪಿಕೊಳ್ಳುವುದಕ್ಕೆ ‘ಚಾಜ ಹಿಡಿಯುವುದು’ ಎನ್ನುವರು. ಹಾಡುಗಾರರಿಗೆ ಆಹ್ವಾನಿಸಲು ಬಂದವರು ಹಾಡಿಕೆಗಾಗಿ ಬರುವ ಖರ್ಚು-ವೆಚ್ಚವನ್ನು ಲಕ್ಷದಲ್ಲಿಟ್ಟುಕೊಂಡು ಮುಂಗಡ ಹಣವನ್ನು ಎಲೆ ಅಡಿಕೆಯ ಜೊತೆಯಲ್ಲಿ ಕೊಡುವರು. ಹಾಡಿಕೆಗೆ ಆಹ್ವಾನಿಸಿದವರು ‘ಚಾಜ ಕೊಡುವುದು’ ಎಂದು ಹೇಳಿದರೆ; ಪಡೆದುಕೊಳ್ಳುವವರು ‘ಚಾಜ ಹಿಡಿಯುವುದು’, ‘ವೀಳ್ಯೆ ಹಿಡಿಯೋದು’, ‘ಎಲಿ ಹಿಡಿಯೋದು’ ಎಂದು ಹೇಳುವರು.

ಜನ ಮೆಚ್ಗಿ: ‘ಜನಪ್ರೀಯತೆ’ ಎನ್ನುವ ಅರ್ಥದಲ್ಲಿ ಈ ಪದವನ್ನು ಹಾಡುಗಾರರು ಬಳಸುತ್ತಾರೆ. “ಹಾಡ್ಕಿಗೂ ಜನಮೆಚ್ಗಿ ಬಂದೈತಿ” ಎನ್ನುತ್ತಾರೆ. ಜನರಿಗೆ ಇಷ್ಟವಾಗುವಂತೆ ಅಥವಾ ಜನರ ಅಪೇಕ್ಷೆಗೆ ಅನುಗುಣವಾಗಿ ದಾಟ್ಟಿ ಬದಲು ಮಾಡಿಕೊಂಡು ಹಾಡುತ್ತಾರೆ. ಹರದೇಶಿ-ನಾಗೇಶಿ ಹಾಡುಗಳ ಸಾಂಪ್ರದಾಯಿಕ ದಾಟಿಯನ್ನು ಬದಲಿಸಿಕೊಂಡು, ಸಿನಿಮಾ ಹಾಡುಗಳ ಶೈಲಿಯಲ್ಲಿ ಹಾಡುವುದನ್ನು ‘ಜನ ಮೆಚ್ಗಿ’ ಎನ್ನುತ್ತಾರೆ.

ತುರಸಿಲೆ ಹಾಡೋದು: ಜೋಶ್‌ನಿಂದ ಹಾಡುವುದಕ್ಕೆ ತುರಸಿಲೆ ಹಾಡೋದು ಎನ್ನುವರು.

ದಪ್ಪಿನ ಪದ: ಹರದೇಶಿ-ನಾಗೇಶಿ ಹಾಡುಗಳನ್ನು ‘ದಪ್ಪಿನ ಪದ’ ಎಂದು ಕರೆಯುವರು. ಹಾಡುಗಾರರು ದಪ್ಪು ಬಡಿಯುತ್ತ ಹಾಡುವುದರಿಂದ ಇವುಗಳಿಗೆ ‘ದಪ್ಪಿನ ಪದಗಳು’ ಎನ್ನುವ ಹೆಸರು ಬಂದಿರಬೇಕು. ಈ ಪದ ಜನಸಾಮಾನ್ಯರಲ್ಲಿ ಹೆಚ್ಚು ಬಳಕೆಯಲ್ಲಿದೆ. ಇದಕ್ಕೆ ದಪ್ಪಿನ ಹಾಡು ಎನ್ನುವ ಪದ ಕೂಡ ಬಳಕೆಯಲ್ಲಿ ಇದೆ.

ಪಟ್ಟಿ ಕೊಡತಾರು: ದೇವರೆದುರಿಗೆ ಒಡೆದ ತೆಂಗಿನ ಕಾಯಿಯ ಹೊಳಕುಗಳನ್ನು ‘ಪಟ್ಟಿ’ ಎಂದು ಹಾಡಿಕೆಯವರು ಕರೆಯುವರು. ಹಾಡಿಕೆ ಕಲಿತ ಆರಂಭದಲ್ಲಿ ಚಾಜ ಪಡೆದುಕೊಳ್ಳದೇ ಹಾಡಿಕೆಗೆ ಹೋಗುತ್ತಾರೆ. ತಾವು ಹಾಡುತ್ತೇವೆ ಎಂಬುದನ್ನು ಪ್ರಚಾರ ಮಾಡಲು ಹಾಡುಗಾರರು ಅನುಸರಿಸುವ ತಂತ್ರವಿದು. ಇಂಥವರಿಗೆ ಜಾತ್ರೆ ನಡೆಸುವವರು ಹಾಡಿಕೆ ಮಧ್ಯದಲ್ಲಿ ಹಾಡಲು ಅವಕಾವ ಕೊಡುತ್ತಾರೆ. ಹೀಗೆ ಹಾಡಿದವರಿಗೆ ದೇವರೆದುರಿಗೆ ಒಡೆದ ತೆಂಗಿನ ಕಾಯಿಯ ಒಂದು ಹೊಳಕಿನಲ್ಲಿ ಐವತ್ತು ಇಲ್ಲವೆ ನೂರು ರೂಪಾಯಿಯಿಟ್ಟು ಇಟ್ಟು ಕೊಡುತ್ತಾರೆ. ಹೀಗೆ ಕೊಡುವವರು ಹಾಡುಗಾರರಿಗೆ ಒಳ್ಳೆಯದಾಗಿ ಎಂದು ಆಶೀರ್ವದಿಸಲಾಗಿದೆ ಎಂದು ಭಾವಿಸುತ್ತಾರೆ. ಆದರೆ ತೆಂಗಿನ ಹೊಳಕನ್ನು ಪಡೆಯುವವರು ಅದನ್ನು ಅವಮರ್ಯಾದೆಯಾಗಿ ಪರಿಭಾವಿಸುವರು. “ತಿರಕರಿಗೆ ಕೊಟ್ಟಂಗ ಕೈಯಾಗ ಪಟ್ಟಿ ಕೊಡತಾರು” ಎಂದು ಹೇಳುತ್ತಾರೆ.

ಪಂಥಾ ಕಟ್ಟೋದು: ಹಣವನ್ನು ಅಥವಾ ಚಿನ್ನ ಇಲ್ಲವೆ ಬೆಳ್ಳಿಯಂತಹ ಬೆಲೆ ಬಾಳುವ ವಸ್ತುವನ್ನು ಪ್ರೇಕ್ಷಕರು ಮೈಕಿಗೆ ಕಟ್ಟುತ್ತಾರೆ ಹಾಗೂ ಸವಾಲು ಹಾಕುತ್ತಾರೆ. ಸವಾಲನ್ನು ಬಿಡಿಸಿ ಪಂಥಕ್ಕೆ ಇಟ್ಟಂಥವುಗಳನ್ನು ಪಡೆದುಕೊಳ್ಳಲು ಹಾಡುಗಾರರಿಗೆ ಸೂಚಿಸುತ್ತಾರೆ. ಇದಕ್ಕೆ ‘ಪಂಥಾ ಕಟ್ಟೋದು’ ಎನ್ನುತ್ತಾರೆ. ಪಂಥ ಕಟ್ಟುವವರು ಪ್ರೇಕ್ಷಕರೇ ಆಗಿರುತ್ತಾರೆ.

ಬಾಯಿತೊಂಡಿ : ಮೌಖಿಕ ಹಿನ್ನೆಲೆ ಹೊಂದಿದೆ ಎಂದು ಹೇಳುವುದನ್ನು ‘ಬಾಯಿತೊಂಡಿ’ ಎಂದು ಹೇಳುತ್ತಾರೆ.

ಬಿದಾಯಿ: ಹಾಡಿಕೆ ಮುಗಿದ ನಂತರ, ನಿಗದಿ ಪಡಿಸಿದ ಸಂಬಳವನ್ನು ಹಾಡಲು ಕರೆಯಿಸಿದವರು ಹಾಡಿದವರಿಗೆ ಕೊಡುವರು. ಅದಕ್ಕೆ ‘ಬಿದಾಯಿ’ ಎನ್ನುವರು.

ಭಕ್ಷೀಸು : ಪ್ರೇಕ್ಷಕರು ಹಾಡುಗಾರರ ಹಾಡಿಕೆಗೆ ಮೆಚ್ಚಿ ಕೊಡುವ ಬಹುಮಾನವನ್ನು ‘ಭಕ್ಷೀಸು’ ಎನ್ನುತ್ತಾರೆ.

ಮಾಸ್ತರ್: ಚೌಡಿಕೆಯಲ್ಲಿ ಹರದೇಶಿ-ನಾಗೇಶಿ ಹಾಡುಗಳನ್ನು ಹಾಡುವ ಮಹಿಳೆಯರು, ತಮ್ಮ ಜೊತೆಯಲ್ಲಿ ಒಡಪು ಬಿಚ್ಚಿ ಹೇಳಲು ವ್ಯಕ್ತಿಯೊಬ್ಬನನ್ನು ಕರೆದುಕೊಂಡು ಹೋಗುತ್ತಾರೆ. ಎದುರು ಹಾಡುಗಾರರಿಂದ ಹಾಗೂ ಪ್ರೇಕ್ಷಕರಿಂದ ಎದುರಾಗುವ ಸವಾಲುಗಳನ್ನು ಬಿಚ್ಚಿ ಹಾಡುಗಾರರಿಗೆ ಹೇಳಿಕೊಡುವ ವ್ಯಕ್ತಿಯನ್ನು ‘ಮಾಸ್ತರ್’ ಎಂದು ಕರೆಯುವರು. ಚೌಡಿಕೆಯಲ್ಲಿ ಹರದೇಶಿ-ನಾಗೇಶಿ ಹಾಡುವ ಮಹಿಳೆಯ ‘ಮಾಸ್ತರ್‌’ನ್ನು ವಿದ್ವಾಂಸನೆಂದೇ ಪರಿಗಣಿಸುತ್ತಾರೆ. ವಿದ್ವಾಂಸ ಎನ್ನುವ ಅರ್ಥದಲ್ಲಿಯೇ ಮಾಸ್ತರ ಪದ ಬಳಕೆಗೊಳ್ಳುತ್ತದೆ. ದಪ್ಪಿನ ಪದಗಳನ್ನು ಬರೆಯುವವರನ್ನು ‘ಶಾಹಿರ್’ ಎಂದು ಕರೆಯುವಂತೆ ಚೌಡಿಕೆಯಲ್ಲಿ ಹರದೇಶಿ-ನಾಗೇಶಿ ಹಾಡುಗಳನ್ನು ಬರೆಯುವವರನ್ನು ‘ಮಾಸ್ತರ್’ ಎಂದು ಕರೆಯುವರು. ‘ಮಾಸ್ತರ್’ ಕೇವಲ ಹಾಡುಗಾರರಿಗೆ ಸವಾಲ್‌ನ್ನು ಬಿಚ್ಚಿ ಹೇಳುವುದಿಲ್ಲ. ಜೊತೆಯಲ್ಲಿ ಚೌಡಿಕೆಯಲ್ಲಿ ಹೇಳುವ ಹರದೇಶಿ-ನಾಗೇಶಿ ಸಾಹಿತ್ಯವನ್ನು ಕೂಡ ರಚಿಸುತ್ತಿರುತ್ತಾನೆ. ಹೇಳುವ ಜವಾಬು ದೊಡ್ಡದಿದ್ದರೆ ಮಾಸ್ತರನೇ ವೇದಿಕೆಗೆ ಬರುತ್ತಾನೆ; ಚುಟುಕಾಗಿದ್ದರೆ ಹಾಡುಗಾರರಿಗೆ ಹೇಳಿಕೊಡುತ್ತಾನೆ.

ಮ್ಯಾಳ ಕಟ್ಟೋದು : ಹರದೇಶಿ ಹಾಗೂ ನಾಗೇಶಿ ಎರಡೂ ಮೇಳದವರಲ್ಲಿ ಯಾರೊಬ್ಬರಿಗೂ ಚಾಜ ಬಂದರೂ ಎದುರು ಹಾಡುಗಾರರನ್ನಾಗಿ ತಮ್ಮನ್ನೇ ಕರೆಯಬೇಕೆಂದು ಎರಡೂ ಮೇಳದವರು ಸೇರಿ ಮಾತುಕತೆ ಮಾಡಿಕೊಂಡಿರುತ್ತಾರೆ. ಇದಕ್ಕೆ ‘ಮ್ಯಾಳ ಕಟ್ಟೋದು’ ಎನ್ನುವರು.

ರಂಗ ತಾಲೀಮು: ಹಾಡಿಕೆಯ ತಾಲೀಮು ಮಾಡವುದಕ್ಕೆ ‘ರಂಗ ತಾಲೀಮು’ ಎನ್ನುವರು.

ಶಾಹಿರ್ ಮತ್ತು ಶಾವರ್ಕೆರು: ಶಾಯರ್ ಅಥವಾ ಶಾಹಿರ್ ಎಂದರೆ ಕವಿ. ಆರಂಭದಲ್ಲಿ ದಪ್ಪಿನ ಪದಗಳನ್ನು ಬರೆಯುವವರಿಗೆ ಹಾಗೂ ಹಾಡುವವರಿಗೆ ‘ಶಾವಿರ‍್ಕೆರು’ ಎನ್ನುತ್ತಿದ್ದರು. ಆಗ ಹಾಡು ರಚಿಸುವವರು ಹಾಗೂ ಹಾಡುವವರು ಪುರುಷರೇ ಆಗಿದ್ದರು. ಇಂಥವರು ಮಾತ್ರ ತಮ್ಮ ಹೆಸರಿನ ಮುಂದೆ ‘ಶಾಹಿರ್’ ಎಂದು ಸೇರಿಸಿಕೊಳ್ಳುತ್ತಿದ್ದರು. ಹಾಡುಗಾರರು ಕವಿಯೂ ಕೂಡ ಹೌದು ಎಂದು ಸೂಚಿಸುವುದಕ್ಕೆ ಹಾಡುಗಾರರ ಹೆಸರಿನ ಮುಂದೆ ‘ಶಾಹಿರ್’ ಎನ್ನುವ ಪದ ಬಳಕೆಗೊಳ್ಳುತ್ತಿತ್ತು. ಯಾಕೆಂದರೆ ಎಲ್ಲ ಹಾಡುಗಾರರು ಕವಿಗಳಾಗುತ್ತಿರಲಿಲ್ಲ. ಶಾವರ‍್ಕೆರು ಎನ್ನುವ ಪದ, ಮಹಿಳಾ ಹಾಡುಗಾರರು ಪ್ರವೇಶಿಸಿದ ನಂತರದಲ್ಲಿಯೂ ಚಾಲ್ತಿಯಲ್ಲಿದೆ. ಆದರೆ ಮೊದಲ ಅರ್ಥದಲ್ಲಿ ಶಾವರ‍್ಕೆರು ಪದ ಬಳಕೆಯಾಗುತ್ತಿಲ್ಲ. ಯಾಕೆಂದರೆ ಮಹಿಳಾ ಹಾಡುಗಾರರು ದಪ್ಪಿನ ಪದಗಳನ್ನು ಹಾಡುತ್ತಾರೆ ಹೊರತು ರಚಿಸುವುದಿಲ್ಲ. ಆದರೂ ಶಾವರ‍್ಕೆರು ಎನ್ನುವ ಪದ ಹಿಂದೆಂದಿನಂತೆ ಈಗಲೂ ಚಾಲ್ತಿಯಲ್ಲಿದೆ. ಪುರುಷ ಹಾಡುಗಾರರಿದ್ದಾಗ ಮಾತ್ರ ಚಾಲ್ತಿಯಲ್ಲಿದ್ದ ‘ಸೃಜನಶೀಲ ಕವಿ’ ಎನ್ನುವ ಅರ್ಥ ನಿರ್ವಚನಗಳು ಮಹಿಳಾ ಹಾಡುಗಾರರ ಪ್ರವೇಶದಿಂದಾಗಿ ಹಿಂದೆ ಸರಿದಿವೆ. ಅಗಾಧ ಪ್ರಮಾಣದ ಹಾಡುಗಳನ್ನು ನೆನಪಿಡುವುದನ್ನೇ ‘ಜ್ಞಾನ’ ಎಂದು ಗೌರವದಿಂದ ಕರೆಯಲಾಗುತ್ತಿದೆ. ಈ ಅರ್ಥದಲ್ಲಿಯೇ ‘ಶಾವರ‍್ಕೆರು’, ‘ಶಾಹಿರ್’ ಎನ್ನುವ ಪದ ಬಳಕೆಗೊಳ್ಳುತ್ತಿದೆ.

ಸಖಿ-ಖ್ಯಾಲಿ: ಹರದೇಶಿ-ನಾಗೇಶಿ ಹಾಡುಗಳನ್ನು ಸಖಿ-ಖ್ಯಾಲಿ ಎಂದು ಕರೆಯುವ ವಾಡಿಕೆ ವಿಜಾಪುರದ ಭಾಗದಲ್ಲಿದೆ. ಕಂಬಾಗಿಯ ಹನುಮವ್ವನು ‘ಸಖಿ-ಖ್ಯಾಲಿ ಹಾಡ್ತೀನಿ’ ಎಂದು ಹೇಳಿದಳು. ಅಂದರೆ ಸಖಿ-ಖ್ಯಾಲಿಯು ಕೂಡ ಹಾಡಿಕೆ ಎನ್ನುವ ಅರ್ಥದಲ್ಲಿಯೇ ಬಳಕೆಗೊಳ್ಳುತ್ತಿದೆ. ಹರದೇಶಿ-ನಾಗೇಶಿ ಹಾಡುಗಳ ರಚನಾ ಸ್ವರೂಪದ ಚೌಕಟ್ಟೆ ಈ ಪದ ಬಳಕೆಗೆ ಕಾರಣವಾಗಿರಬೇಕು. ಹಾಡಿಕೆಯವರು ಹಾಡುವ ಹಾಡು ಮೂರು ಹಂತದಲ್ಲಿ ವಿಂಗಡನೆ ಗೊಂಡಿರುತ್ತದೆ; ಅವುಗಳೆಂದರೆ ೧. ಸಖಿ, ೨. ಪದ, ೩. ಖ್ಯಾಲಿ. ಹರದೇಶಿ-ನಾಗೇಶಿ ಹಾಡುಗಾರರು ಮೊದಲಿಗೆ ತಮ್ಮ ಪಕ್ಷದ ತಾತ್ವಿಕತೆಗೆ ಅನುಗುಣವಾಗಿ ದೇವರ ಸ್ತುತಿ ಗೀತೆಯನ್ನು ಹಾಡುವರು. ಇದಕ್ಕೆ ‘ಸಖಿ’ ಎನ್ನುವರು. ತಾವು ಬೆಳಸಲಿರುವ ತಾತ್ವಿಕತೆಗೆ ಸಂಬಂಧಿಸಿದಂತೆ ಮುಖ್ಯ ಕಥನವನ್ನು ಹೇಳುವರು. ಕಥನವು ಕಡಿಮೆಯೆಂದರೆ ೧೮ ನುಡಿಗಳಿಗೆ ವಿಸ್ತರಿಸಿ ಕೊಂಡಿರುತ್ತದೆ. ಹೆಚ್ಚೆಂದರೆ ಹಾಡುಗಾರರೇ ಹೇಳಿದ ಪ್ರಕಾರ ನುಡಿಗಳನ್ನು ಲೆಕ್ಕ ಹಾಕಲಾಗುವುದಿಲ್ಲವಂತೆ; ಅದು ಒಂದು ಗಂಟೆಯಿಂದ ಎರಡು ಗಂಟೆಯ ಅವಧಿಯವರೆಗೂ ವಿಸ್ತರಿಸಿಕೊಳ್ಳುತ್ತದೆಯಂತೆ. ವಿಜಾಪುರ ಭಾಗದಲ್ಲಿ ಮುಖ್ಯ ಕಥನವನ್ನು ‘ಪದ’ ಎಂದು ಕರೆದರೆ; ಗುಲ್ಬರ್ಗ ಭಾಗದಲ್ಲಿ ‘ಪಟ್ಟೇವು’ ಎಂದು ಕರೆಯುತ್ತಾರೆ. ‘ಪಟ್ಟೇವು’ ಎನ್ನುವುದು ‘ಪಠ್ಯ’ ಎನ್ನುವ ಅರ್ಥದಲ್ಲಿ ಬಳಕೆಗೊಳ್ಳುತ್ತಿರಬೇಕು. ಹಾಡಿನ ಮುಕ್ತಾಯವನ್ನು ‘ಖ್ಯಾಲಿ’ ಎಂದು ಕರೆಯುತ್ತಾರೆ. ಇದಕ್ಕೆ ಕೆಲವರು ‘ಚಾಲಿ’ ಎಂದು ಕೂಡ ಹೇಳುವರು. ಹಾಡಿಕೆ ಸಾಹಿತ್ಯ ರಚನೆಯಲ್ಲಿನ ಆರಂಭದ ‘ಸಖಿ’ಯನ್ನು ಕೊನೆಯ ‘ಖ್ಯಾಲಿ’ಯನ್ನು ಸೇರಿಸಿ, ಸಖಿ-ಖ್ಯಾಲಿ ಎಂದು ಕರೆಯಲಾಗುತ್ತಿದೆ. ಈ ಪದವನ್ನು ಹಾಡುಗಾರರು ಮಾತ್ರ ಬಳಸುತ್ತಾರೆ. ಪ್ರೇಕ್ಷಕರು ಹಾಡಿಕೆಯನ್ನು ಸಖಿ-ಖ್ಯಾಲಿ ಎಂದು ಕರೆಯುವುದಿಲ್ಲ.

ಸೀಜನ್: ಫೆಬ್ರವರಿಯಿಂದ ಮೇವರೆಗೆ ಉತ್ತರ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕ ಭಾಗಗಳಲ್ಲಿ ಜಾತ್ರೆಗಳು ನಡೆಯುತ್ತವೆ. ಹರದೇಶಿ-ನಾಗೇಶಿ ಹಾಡುಗಾರರಿಗೆ ಈ ಅವಧಿಯಲ್ಲಿ ಹೆಚ್ಚು ಆಹ್ವಾನಗಳು ಬರುತ್ತವೆ. ಹಾಡುಗಾರರ ಪಾಲಿಗೆ ಈ ಅವಧಿ ‘ಚಾಜ’ ಪಡೆದುಕೊಳ್ಳುವ ‘ಸುಗ್ಗಿಯ ಕಾಲ’. ಹೀಗಾಗಿಯೇ ಹರದೇಶಿ-ನಾಗೇಶಿ ಹಾಡುಗಾರರು ಈ ಅವಧಿಯನ್ನು ‘ಸೀಜನ್’ ಎಂದು ಕರೆಯುತ್ತಾರೆ. ಕೆಲವರು ‘ಹಾಡಕಿ ಸೀಜನ್’ ಎಂದೂ ಹೇಳುತ್ತಾರೆ.

ಸೂರು ಹಾಕುವುದು ಮತ್ತು ಸೂರುಕಾರರು: ದಪ್ಪಿನ ಪದಕ್ಕೆ ಹಿಮ್ಮೇಳವಾಗಿ ತುಂತುಣಿ ನುಡಿಸುವವರು, ತಾಳ ಬಾರಿಸುವವರು ಇರುತ್ತಾರೆ. ತುಂತುಣಿ ನುಡಿಸುವುದನ್ನು ‘ಸೂರು ಹಾಕುವುದು’ ಎಂದು ಹೇಳಲಾಗುತ್ತದೆ. ತುಂತುಣಿ ನುಡಿಸುವವರನ್ನು ‘ಸೂರುಕಾರರು’, ‘ಸೂರು ಹಾಕೋರು’ ಎಂದು ಕರೆಯುತ್ತಾರೆ.

ಹರದೇಶಿ-ನಾಗೇಶಿ : ಶಿವನ ಪಾರಮ್ಯದ ಮೂಲಕವೇ ಗಂಡಿನ ಹೆಚ್ಚುಗಾರಿಕೆಯನ್ನು ಸಾರುವ ಹಾಗೂ ನಿರೂಪಿಸುವ ಹಾಡುಗಳನ್ನು ‘ಹರದೇಶಿ’ ಹಾಡುಗಳು ಎಂದು ಕರೆಯುತ್ತಾರೆ. ಶಕ್ತಿ ಪಾರಮ್ಯದ ಮೂಲಕ ಸ್ತ್ರೀಯ ಹೆಚ್ಚುಗಾರಿಕೆಯನ್ನು ಸಾರುವ ಹಾಗೂ ನಿರೂಪಿಸುವ ಹಾಡುಗಳನ್ನು ನಾಗೇಶಿ ಹಾಡುಗಳು ಎಂದು ಕರೆಯುವರು. ಈ ಹಾಡುಗಳನ್ನು ನಾಥ ಪಂಥದ ಮೂಲದಿಂದ ಕೆಲ ವಿದ್ವಾಂಸರು ಗುರುತಿಸುತ್ತಾರೆ.

ಹಾಡಿಕೆ : ಹರದೇಶಿ-ನಾಗೇಶಿ ಹಾಡುಗಳನ್ನು ಹಾಡುವುದಕ್ಕೆ ‘ಹಾಡಿಕೆ’, ‘ಹಾಡ್ಕಿ’, ‘ಹಾಡಕಿ’ ಎನ್ನುತ್ತಾರೆ. ಇದಕ್ಕೆ ದಪ್ಪಿನ ಪದಗಳು, ದಪ್ಪಿನ ಹಾಡುಗಳು, ಶಾವರಕಿ ಹಾಡುಗಳು, ಗೀಗೀ ಪದಗಳು, ಗೀಗೀ ಹಾಡುಗಳು, ಲಾವಣಿಗಳು ಎಂದು ಕೂಡ ಹೇಳುತ್ತಾರೆ.

ಹಾಡಿಕೆಯವರು : ಹರದೇಶಿ-ನಾಗೇಶಿ ಹಾಡುಗಳನ್ನು ಹಾಡುವವರಿಗೆ ‘ಹಾಡಿಕೆಯವರು’, ‘ಹಾಡ್ಕಿಯವರು’ ಎನ್ನುತ್ತಾರೆ. ಹಾಡಿಕೆಯವರಿಗೆ ಶಾವರ‍್ಕೆರು, ದಪ್ಪಿನವರು, ಗೀಗೀಯವರು ಎಂದು ಕೂಡ ಹೇಳುವರು.

* * *