. ಸ್ಥಳೀಯ ಕಲಾ ಮಾರುಕಟ್ಟೆ ನೆಲೆಯಿಂದ

ಹರದೇಶಿ-ನಾಗೇಶಿ ಹಾಡುಗಳು ಆರಂಭದಲ್ಲಿ ಆಧ್ಯಾತ್ಮಿಕ ಚರ್ಚೆಗಳನ್ನು ಒಳಗೊಂಡಿದ್ದವು ಎಂದು ಹೇಳಲಾಗುತ್ತಿದೆ. ಆದರೆ ಇದಕ್ಕೆ ಯಾವುದೇ ಸಾಕ್ಷಾಧಾರಗಳಿಲ್ಲ. ಆನಂತರ ಶೃಂಗಾರ ಭಾವಕ್ಕೆ ಪಲ್ಲಟಗೊಂಡವು ಎಂದು ಹೇಳಲಾಗುತ್ತಿದೆ. ಹೀಗೆ ಪಲ್ಲಟಗೊಂಡ ಶೃಂಗಾರ ಪ್ರಧಾನವಾದ ಗೀಗೀ ಹಾಡುಗಳನ್ನು ಸ್ವತಂತ್ರ್ಯ ಚಳುವಳಿಯ ಸಂದರ್ಭದಲ್ಲಿ ವೀರ ಆಧ್ಯಾತ್ಮಕ್ಕೆ ಪರಿವರ್ತಿಸಿಕೊಳ್ಳಲಾಯಿತು; ಸ್ವಾತಂತ್ರ‍್ಯಾ ನಂತರ ಹರದೇಶಿ-ನಾಗೇಶಿ ಹಾಡುಗಳು ಪುನಃ ಶೃಂಗಾರ ರಸ ಪ್ರಧಾನವಾಗಿಯೇ ಮೂಡತೊಡಗಿದವು ಎಂದು ಹೇಳಲಾಗುತ್ತಿದೆ. ಅಂದರೆ ಶೃಂಗಾರ ಬಿಂದುವಿನಿಂದ ಆರಂಭವಾದ ಹಾಡುಗಳು ಕಾಲದ ಒತ್ತಡಕ್ಕೆ ಮಣಿದು ವೀರ ಆಧ್ಯಾತ್ಮಕ್ಕೆ ಹೊರಳಿಕೊಂಡರೂ, ಒತ್ತಡದ ತೀವ್ರತೆ ಕಡೆಮೆಯಾದಾಗ ಅದು ಪುನಃ ಶೃಂಗಾರ ಭಾವಕ್ಕೆ ಆವರ್ತನಗೊಂಡಿತು. ಇದು ಏನನ್ನು ಸೂಚಿಸುತ್ತದೆ ಎಂದರೆ, ಆರ್ಥಿಕ ಪರಿಭಾಷೆಯಲ್ಲಿಯೇ ಹೇಳುವುದಾದರೆ ಯಾವ ಹಾಡುಗಳಿಗೆ ಮಾರುಕಟ್ಟೆ ಇರುತ್ತದೆಯೋ ಆ ಹಾಡುಗಳೇ ಬೆಳೆದುಕೊಂಡು ಬರುತ್ತವೆ ಎನ್ನುವುದು. ಒಂದು ಕಾಲದ ಅಗತ್ಯವು ತನ್ನ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಒತ್ತಾಯಿಸುತ್ತದೆಯಾದರೂ, ಅದು ಯಥಾವತ್ತಾಗಿ ಅಂದರೆ ಪರಿವರ್ತನೆಗೊಂಡ ರೀತಿಯಲ್ಲಿ ಮುಂದುವರೆಯುವುದಿಲ್ಲ. ಜನ ಬೇಡಿಕೆಯನ್ನು ಅನುಸರಿಸಿಯೇ ಪುನಃ ತಮ್ಮ ಮೂಲ ರೂಪಕ್ಕೆ ಹಿಂದಿರುಗುತ್ತವೆ. ಇಲ್ಲವೆ ಹೊಸ ರೂಪುಗಳನ್ನು ಮೈಗೂಡಿಸಿ ಕೊಳ್ಳುತ್ತವೆ. ಅಂದರೆ ಪುರುಷ ಹಾಡುಗಾರರು ಹೇಳುವಂತೆ ‘ದೇವದಾಸಿಯರು’ ಪ್ರವೇಶಿಸಿದ ನಂತರದ ಹಾಡಿಕೆಯಲ್ಲಿ ಅಶ್ಲೀಲತೆ ಅಂದರೆ ಶೃಂಗಾರ ರಸವು ಸೇರಿಕೊಂಡಿಲ್ಲ. ಮಹಿಳಾ ಹಾಡುಗಾರರು ಹೇಳುವಂತೆ ಮಾರುಕಟ್ಟೆಯನ್ನು ಕೇಂದ್ರವಾಗಿರಿಸಿಕೊಂಡು ಕವಿಯೇ ಹಾಡುಗಳನ್ನು ಶೃಂಗಾರ ಪ್ರಧಾನವಗಿ ರಚಿಸಿರಬಹುದು. ಹೀಗಾಗಿ ಹಾಡುಗಳಲ್ಲಿನ ಶೃಂಗಾರ ಪ್ರಧಾನವಾದ ನಿರೂಪಣೆಗೆ ‘ದೇವದಾಸಿ’ಯರೇ ಕಾರಣ ಎಂದು ಹೇಳಲಾಗುವುದಿಲ್ಲ. ಹೆಣ್ಣನ್ನು ದೇಹ ಪ್ರಧಾನವಾಗಿಯೇ ಗುರುತಿಸಲಾಗಿದೆ; ಅರ್ಥೈಸಲಾಗಿದೆ. ಪ್ರಜನನ ಶಕ್ತಿಯ ಮೂಲಕ ಗುರುತಿಸಲ್ಪಡುವ ಮಹಿಳೆಯನ್ನು ಭೋಗಕ್ಕೆ ಅರ್ಹಳು ಎಂದೇ ಅರ್ಥೈಸಲಾಗಿದೆ. ಹೀಗಾಗಿ ಹರದೇಶಿ-ನಾಗೇಶಿ ಹಾಡುಗಳಲ್ಲಿ ಶೃಂಗಾರ ಭಾವಕ್ಕೆ ಒತ್ತು ನೀಡಲಾಗಿದೆ. ಇದಕ್ಕೆ ‘ದೇವದಾಸಿಯರು’ ಕಾರಣರಲ್ಲದಿದ್ದರೂ, ಹಾಡುಗಳಲ್ಲಿ ಹೆಣ್ಣಿನ ಕುರಿತಿರುವ ಹಗುರವಾದ ಧೋರಣೆಗಳನ್ನು ಹಾಗೂ ದ್ವಂದ್ವಾರ್ಥಗಳನ್ನು ನಿರೂಪಿಸಲು ಕವಿಗೆ ಸಾಧ್ಯವಾಗಿದ್ದುದು ‘ದೇವದಾಸಿ’ಯರ ಕುರಿತಿರುವ ಧೋರಣೆಗಳಿಂದಲೇ. ಹರದೇಶಿಯರು ಸಂಬೋಧಿಸಿ ಹಾಡುವುದು ನಾಗೇಶಿಯರನ್ನು. ನಾಗೇಶಿ ಹಾಡುಗಾರರು ಬಹುತೇಕರು ‘ದೇವದಾಸಿಯರು’, ಬೆರಳೆಣಿಕೆಯಷ್ಟು (ಕೇವಲ ನಾಲ್ಕು) ಕೆಳವರ್ಗದ ಮಹಿಳೆಯರು. ಜಾತಿ ಶ್ರೇಣೀಕರಣ ಸಮಾಜವು ಕೆಳಜಾತಿ ಹಾಗೂ ಕೆಳವರ್ಗದ ಮಹಿಳೆಯರನ್ನು ಪಾತಿವ್ರತ್ಯದ ಮೌಲ್ಯಗಳಿಂದ ಹೊರಗಿಟ್ಟು ನೋಡುತ್ತದೆ. ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣಿಗೆ ಗೌರವ ದೊರೆಯುವುದೇ ಪಾತಿವ್ರತ್ಯದಿಂದ. ಹೀಗಾಗಿ ಕೆಳಜಾತಿ ಹಾಗೂ ಕೆಳವರ್ಗಕ್ಕೆ ಸೇರಿದ ಹಾಡಿಕೆ ಮಹಿಳೆಯರು ಸಾಮಾಜಿಕ ಗೌರವ ಹಾಗೂ ಆಸ್ಮೀತೆಗಳಿಂದ ವಂಚಿಸಲ್ಪಟ್ಟರು. ಸಾಮಾಜಿಕ ಗೌರವ ಹಾಗೂ ಸಾಮಾಜಿಕ ಆಸ್ಮೀತೆಗಳಿಂದ ಹೊರಗುಳಿಸಲ್ಪಟ್ಟ ಇವರನ್ನು ಲೈಂಗಿಕ ಸೇವೆಯ ನೆಲೆಯಲ್ಲಿಯೇ ಪರಿಭಾವಿಸಲಾಗುತ್ತದೆ; ಪರಿಗಣಿಸಲಾಗುತ್ತಿದೆ.

ಆಧುನಿಕ ಕಾಲದ ಪುಸ್ತಕ, ಶಿಕ್ಷಣ, ಉಡುಪು, ತೊಡಪು, ಸಂಗೀತ ಮೊದಲಾದವುಗಳು ಗ್ರಾಹಕರ ಅಭಿರುಚಿಗನುಗುಣವಾಗಿ ಉತ್ಪಾದನೆಗೊಳ್ಳುವುದಿಲ್ಲ. ಜಾಗತಿಕ ಮಾರುಕಟ್ಟೆಯಲ್ಲಿ ಉತ್ಪಾದನೆಗೊಳ್ಳುವ ಉತ್ಪಾದನೆಗಳೇ ಜಾಹಿರಾತಿನ ಮೂಲಕ ಗ್ರಾಹಕರ ಅಭಿರುಚಿಯನ್ನು ರೂಪಿಸುತ್ತಿರುತ್ತದೆ. ಹರದೇಶಿ-ನಾಗೇಶಿ ಹಾಡುಗಳಿಗೆ ಜಾಗತಿಕ ಮಾರುಕಟ್ಟೆಯಿಲ್ಲ. ಗ್ರಾಮೀಣ ಪ್ರದೇಶಗಳ ಜಾತ್ರೆ, ಹಬ್ಬ-ಹರಿದಿನಗಳಂತಹ ಸಂದರ್ಭಗಳೇ ಹರದೇಶಿ-ನಾಗೇಶಿ ಹಾಡುಗಾರಿಕೆಗೆ ಬೇಡಿಕೆಯಿಟ್ಟು ಮಾರುಕಟ್ಟೆ ಸೃಷ್ಟಿಸುತ್ತವೆ. ಹೀಗಾಗಿ ಹರದೇಶಿ-ನಾಗೇಶಿ ಬೇಡಿಕೆಯ ಮಾರುಕಟ್ಟೆಯನ್ನು ‘ಸ್ಥಳೀಯ ಮಾರುಕಟ್ಟೆ’ ಎಂದು ಗುರುತಿಸಬಹುದು. ಹರದೇಶಿ-ನಾಗೇಶಿ ಹಾಡುಗಾರರು ಅಥವಾ ಅವುಗಳನ್ನು ಬರೆದ ಕವಿಗಳು ‘ಸ್ಥಳೀಯ ಮಾರುಕಟ್ಟೆ’ಯ ಅಭಿರುಚಿ ಹಾಗೂ ಅಪೇಕ್ಷೆಗನುಗುಣವಾಗಿಯೇ ಹಾಡುತ್ತಿರುತ್ತಾರೆ; ಹಾಡುಗಳನ್ನು ರಚಿಸುತ್ತಿರುತ್ತಾರೆ. ಬಹುತೇಕ ಪುರುಷ ಹಾಡುಗಾರರು ಹಾಗೂ ಮಹಿಳಾ ಹಾಡುಗಾರರು ಹೇಳಿದ್ದೇನೆಂದರೆ ಇವರನ್ನು ಕರೆಸುವವರೆಲ್ಲ ಹೆಣ್ಣೆಚ್ಚು-ಗಂಡ್ಹೆಚ್ಚು ಹಾಡುಗಳನ್ನೇ ಹಾಡಬೇಕೆಂದು ಒತ್ತಾಯಿಸುತ್ತಾರೆ. ಪುಣ್ಯ ತಿಥಿಯಂತಹ ಸಂದರ್ಭವನ್ನು ಹೊರತು ಪಡಿಸಿದರೆ ಉಳಿದೆಲ್ಲ ಸಂದರ್ಭಗಳಲ್ಲಿ ಸವಾಲ್-ಜವಾಬ್‌ಹಾಡುಗಳನ್ನೇ ಹಾಡಬೇಕೆಂಬ ಒತ್ತಡವಿರುತ್ತದೆ. ಹೆಣ್ಹೆಚ್ಚು ಎಂದು ಹೇಳುವವರು ಗಂಡನ್ನು ಅಲ್ಲ ಗಳೆಯುತ್ತಿರುತ್ತಾರೆ. ಹೀಗೆ ಹೀಗಳಯುವಾಗ ಅಥವಾ ಅಲ್ಲಗಳೆಯುವಾಗ ನಿಂದನಾ ನುಡಿಗಳು ಸಹಜವಾಗಿಯೇ ಪ್ರವೇಶಿಸುತ್ತವೆ. ಅದಕ್ಕಾಗಿಯೇ ಹರದೇಶಿ-ನಾಗೇಶಿ ಹಾಡುಗಳು ‘ಅಶ್ಲೀಲ’ವೆಂದು ಕರೆಯಲ್ಪಡುತ್ತವೆ. ಒಟ್ಟಾರೆಯಾಗಿ ‘ಸ್ಥಳೀಯ ಮಾರುಕಟ್ಟೆ’ಯ ಅಭಿರುಚಿಗನುಗುಣವಾಗಿಯೇ ಹರದೇಶಿ-ನಾಗೇಶಿ ಹಾಡುಗಳು ಉತ್ಪಾದನೆಗೊಳ್ಳುತ್ತವೆ. ಅಕ್ಷರ ಕಲಿಯದವರು, ಅಲ್ಪ-ಸ್ವಲ್ಪ ಸಿಕ್ಷಣ ಪಡೆದವರು ಈ ಹಾಡುಗಳ ಗ್ರಾಹಕರಾಗಿರುತ್ತಾರೆ. ಅವರಷ್ಟಕ್ಕೆ ಅವರು ಇರುವಾಗ ಹರದೇಶಿ-ನಾಗೇಶಿ ಹಾಡುಗಳನ್ನು ಆಸ್ವಾದಿಸುತ್ತಾರೆ. ಅಲ್ಲಿ ನಮ್ಮಂತವರ ಪ್ರವೇಶವಾಯಿತೋ, ಆಗ ಹಾಡುಗಳ ಕುರಿತು ಶ್ಲೀಲ-ಅಶ್ಲೀಲದ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. “ನಿಮ್ಮಂತವರು ಈ ಹಾಡುಗಳನ್ನು ಕೇಳಬಾರದು, ಹಾಡಿಕೆಯವರನ್ನು ಕರಿಸಿದ ತಪ್ಪಿಗೆ ಹಾಡಿಕೆ ಕೇಳಬೇಕಾಗಿದೆ” ಎನ್ನುತ್ತಾರೆ.

. ಮೌಲ್ಯಗಳ ನೆಲೆಗಳಿಂದ.

ಹಾಗೆ ನೋಡಿದರೆ ಶ್ಲೀಲ-ಅಶ್ಲೀಲತೆಯ ಪ್ರಶ್ನೆಗಳು ಹುಟ್ಟಿಕೊಂಡಿದ್ದು ‘ಕುಟುಂಬ’ ಸಂಸ್ಥೆ ಸೃಷ್ಟಿಯಾದಾಗಿನಿಂದ. ಕುಟುಂಬದ ಶುದ್ಧತೆಯನ್ನು, ಸಮುದಾಯದ ಶುದ್ಧತೆಯನ್ನು ಹೆಣ್ಣಿನ ದೇಹವನ್ನು ಗಡಿರೇಖೆಯನ್ನಾಗಿಸಿಕೊಳ್ಳುವ ಮೂಲಕ ಗುರುತಿಸಲಾಯಿತು. ಕನ್ಯತ್ವ ಹಾಗೂ ಪಾತಿವ್ರತ್ಯದ ಮೂಲಕದ ಕುಟುಂಬದ ಹಾಗೂ ಸಮಾಜದ ಶೀಲವನ್ನು, ಪಾತಿವ್ರತ್ಯವನ್ನು ಗುರುತಿಸಿದರೆ; ಇದಕ್ಕೆ ಒಳಪಡದ ಹೆಣ್ಣಿನ ಮೂಲಕ ಅಶ್ಲೀಲವನ್ನು ಗುರುತಿಸಲಾಯಿತು. ಕುಟುಂಬ ಸಂಸ್ಥೆಯಲ್ಲಿನ ಶ್ಲೀಲ-ಅಶ್ಲೀಲದ ಧೋರಣೆಗಳೇ ಎಲ್ಲ ಕಾಲದಲ್ಲಿಯೂ ಮೌಲ್ಯಗಳ ನಿರ್ಣಯದ ಸಂದರ್ಭದಲ್ಲಿ ಪ್ರಧಾನ ಪಾತ್ರ ವಹಿಸಿವೆ/ವಹಿಸುತ್ತವೆ.

ಲಿಖಿತ ಸಾಹಿತ್ಯದಲ್ಲಿ ಶೃಂಗಾರ ರಸ ಇಲ್ಲವೇ ಇಲ್ಲ ಎಂದಲ್ಲ. ಕಾವ್ಯ ರಚನೆಯ ಸಂದರ್ಭದಲ್ಲಿ ನವ ರಸಗಳಲ್ಲಿ ಶೃಂಗಾರ ರಸವು ಅನಿವಾರ್ಯ ರಸವಾಗಿ ಮೂಡಿಬಂದಿದೆ. ಎಲ್ಲ ಕಾವ್ಯಗಳಲ್ಲಿಯೂ ಶೃಂಗಾರ ರಸ ಪ್ರತಿಪಾದನೆಗಾಗಿಯೇ ಒಂದಿಷ್ಟು ಪುಟಗಳನ್ನು ಮೀಸಲಿರಿಸಲಾಗಿದೆ. ‘ಭರತೇಶ ವೈಭವ’ದಲ್ಲಿ ಸಂಭೋಗ ಸಂಧಿ ಹಾಗೂ ಉಪ್ಪರಿಗೆ ಸಂಧಿಗಳಿವೆ. ಇವುಗಳಲ್ಲಿ ಶೃಂಗಾರ ಕುರಿತ ಅತಿರೇಖದ ವರ್ಣನೆಗಳಿವೆ; ವಿವರಣೆಗಳಿವೆ. ಹಳೆಗನ್ನಡ ಹಾಗೂ ಹೊಸಗನ್ನಡ ಸಾಹಿತ್ಯದಲ್ಲಿನ ಶೃಂಗಾರ ಕುರಿತಿರುವ ವಿವರಣೆ ಯಾಕೆ ಆಕ್ಷೇಪಣೆಗೆ ಒಳಗಾಗಲಿಲ್ಲ; ಹರದೇಶಿ-ನಾಗೇಶಿ ಹಾಡುಗಳಲ್ಲಿ ಶೃಂಗಾರ ಎಂದು ಹೇಳಲಾದದ್ದು ಮಾತ್ರ ಯಾಕೆ ಆಕ್ಷೇಪಣೆಗೆ ಒಳಗಾಯಿತು ಎನ್ನುವ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಇಲ್ಲಿ ಮಾಧ್ಯಮದ ಪ್ರಶ್ನೆಯೇ ಮುಖ್ಯವಾಗುತ್ತದೆ. ಓದುಗರಿಗೆ ಮಾತ್ರ ಕೃತಿಯಲ್ಲಿನ ವಿವರಗಳು ಕಾಣುತ್ತಿರುತ್ತವೆ. ಒಂದು ಎನ್ನುವುದು ಖಾಸಗಿಯ ನೆಲೆಯಲ್ಲಿಯೇ ಗುರುತಿಸಿಲಾಗುತ್ತದೆ. ಆದರೆ ಹರದೇಶಿ-ನಾಗೇಶಿ ಸಾಹಿತ್ಯ ಹಾಗಲ್ಲ. ಅದು ಪ್ರದರ್ಶನ ಕಲೆ. ಅದು ಓದುಗಬ್ಬ ಅಲ್ಲ; ಪ್ರದರ್ಶನಗಬ್ಬ. ಪ್ರದರ್ಶನದ ಮೂಲಕವೇ ಅರಳಿಕೊಳ್ಳುವ ಹರದೇಶಿ-ನಾಗೇಶಿ ಹಾಡುಗಾರಿಕೆಯು ಸಮೂಹಕ್ಕೆ ಉಪದೇಶಿಸುತ್ತಿರುತ್ತದೆ. ಯಾವ ಕಲೆಯು ಸಮೂಹಕ್ಕೆ ಮುಖಾ-ಮುಖಿಯಾಗುತ್ತದೆಯೋ ಆ ಕಲೆಯು ಮೌಲ್ಯದ ಪ್ರಶ್ನೆಯನ್ನು ಎದುರಿಸುತ್ತದೆ. ಯಾಕೆಂದರೆ ಸಾರ್ವಜನಿಕವಾಗಿ ಪ್ರದರ್ಶನಗೊಳ್ಳುವ ಕಲೆಯು ನೂರಾರು, ಸಾವಿರಾರು ಜನರ ಮನೋಭಾವವನ್ನು ತನ್ನ ನಿಯಂತ್ರಣಕ್ಕೆ ತಂದುಕೊಂಡು ತನ್ನ ಆಶಯಕ್ಕೆ ತಕ್ಕಂತೆ ರೂಪಿಸುತ್ತಿರುತ್ತದೆ. ಹೀಗಾಗಿಯೇ ಪ್ರದರ್ಶನಗೊಳ್ಳುವ ಪ್ರತಿ ಕಲೆಯೂ ಮೌಲ್ಯದ ಪ್ರಶ್ನೆಯನ್ನು ಎದುರಿಸುತ್ತಿರುತ್ತದೆ. ಇದಕ್ಕೆ ಹರದೇಶಿ-ನಾಗೇಶಿ ಹಾಡುಗಾರಿಕೆಯೂ ಹೊರತಾಗಿಲ್ಲ.

ಹರದೇಶಿ-ನಾಗೇಶಿ ಹಾಡುಗಳು ಪ್ರದರ್ಶನಗೊಳ್ಳುವ ಸಂದರ್ಭ ಹಾಗೂ ಆಚರಣೆಗಳನ್ನು ಹಿನ್ನೆಲೆಯಾಗಿಟ್ಟುಕೊಂಡು ಐದು ನೆಲೆಗಳಲ್ಲಿ ಅಧ್ಯಯನಕ್ಕೆ ಒಳಪಡಿಸುವ ಉದ್ದೇಶವಿತ್ತು. ಅಧ್ಯಯನಕ್ಕೆ ಗುರುತಿಸಿಕೊಂಡಿದ್ದ ಐದು ನೆಲೆಗಳೆಂದರೆ : ೧. ಸಂಪ್ರದಾಯಿಕ ಎಂದು ಹೇಳಲ್ಪಡುವ ಹಾಡುಗಳು ೨. ಬಂಡಿ ಜಾತ್ರೆಯನ್ನು ಅನುಲಕ್ಷಿಸಿ ೩. ಸೃಜನಶೀಲ ಹಾಡುಗಾರರನ್ನು ಅನುಲಕ್ಷಿಸಿ ೪. ಆಧುನಿಕ ಹಾಡುಗಳು ೫. ಹೆಣ್ಣು ಮಕ್ಕಳು ಚೌಡಿಕೆಯಲ್ಲಿ ಹಾಡುವ ಹಾಡುಗಳು.

. ಸಂಪ್ರದಾಯಿಕ ಎಂದು ಹೇಳಲ್ಪಡುವ ಹಾಡುಗಳು

‘ನಮ್ಮನ್ನು ಶುದ್ಧ ಸಾಂಪ್ರದಾಯಿಕ ಹಾಡುಗಳು. ಈಗಿನ ಹರದೇಶಿ-ನಾಗೇಶಿ ಹಾಡುಗಳ ಹಾಗೆ ಅಶ್ಲೀಲವಾದವುಗಳಲ್ಲ’ ಎಂದು ಹೇಳುವ ಬಂಗಾರವ್ವ, ಕಾಶಿನಾಥ ಚವ್ಹಾಣ ಅವರಂತಹ ಹಾಡುವ ಹಾಡುಗಳನ್ನು ಅಧ್ಯಯನಕ್ಕೆ ಒಳಪಡಿಸುವ ಯೋಜನೆಯಿತ್ತು.

. ಬಂಡಿ ಜಾತ್ರೆಯನ್ನು ಅನುಲಕ್ಷಿಸಿ

ಬೆಳಗಾಂ ಜಿಲ್ಲೆಯ ಹಲಗಿ, ಬಸ್ತಾಳ, ದಮ್ಮಲಗಿ, ಮುತಗಾ, ಕಣಬರಗಿ, ಕನಕಾಂಬ, ಮುಚ್ಚಂಡಿ, ಮಾಚಗಾಂವ, ಸಾಮ್ರಾಣಿ, ಸೂಳಿಭಾವಿ ಮೊದಲಾದ ಕಡೆಗಳಲ್ಲಿ ಬಂಡಿ ಜಾತ್ರೆ ಆಗುತ್ತದೆ. ಬಂಡಿ ಜಾತ್ರೆಯಲ್ಲಿ, ಬಂಡಿ ನಿಲ್ಲಿಸಿದ ಸ್ಥಳದಲ್ಲಿ ರಾತ್ರಿ ಪೂರ್ಣ ಹಾಡುವರು. ಮರುದಿನ ಬೆಳಿಗ್ಗೆ ೯ ರಿಂದ ಹಾಡುತ್ತ ಬಂಡಿಯನ್ನು ಬಂಡಿಯ ಮಾಲಿಕರ ಮನೆಗೆ ಒಪ್ಪಿಸುತ್ತಾರೆ. ಈ ಪ್ರದರ್ಶನವನ್ನು ಅಧ್ಯಯನಕ್ಕೆ ಒಳಪಡಿಸುವ ಉದ್ದೇಶವಿತ್ತು.

. ಸೃಜನಶೀಲ ಹಾಡುಗಾರರನ್ನು ಅನುಲಕ್ಷಿಸಿ

ಭೀಮಾಭಾಯಿ ತನ್ನೊಳಗೆ ಮೂಡಿದ ಹಾಡನ್ನು ಬೇರೆಯವರ ಮುಖಾಂತರ ಬರೆಯಿಸುವುದಿಲ್ಲ. ಅವಳು ತನ್ನಲ್ಲಿನ ಕವಿತಾ ಶಕ್ತಿಯನ್ನು ತಾನು ಪ್ರದರ್ಶನ ನೀಡುವಾಗ ಬಳಸಿಕೊಳ್ಳುತ್ತಾಳೆ. ಅವಳೇ ಹೇಳಿಕೊಂಡದ್ದು ಹೀಗೆ “ನಾನ ಕವಿs. ಆದ್ರ ನಾನು ಯಾರಿಗೂ ಹಾಡ್ಕಿ ಬರ್ದು ಕೊಡೊದಿಲ್ಲ. ಯಾಕಂದ್ರ ನನಗೆ ಬರಿಯಾಕ ಬರೂದಿಲ್ಲ. ಅದಕ್ಕ ಮತ್ತೊಬ್ಬರಿಗಿ ಬಾಯಿ ತೆಗೆದು ನಾನು ಹಾಡಾ ಹೇಳ್ತೀನಿ, ಬರೀರಿ ಅಂತ ಕೇಳ್ಕೋಬೇಕು. ಈ ಉಸಾಬಾರಿ ಬ್ಯಾಡಾ ಅಂತ ಬಿಟ್ಟ ಬಿಟ್ಟೇನಿ. ನನ್ನ ಹಾಡಕ್ಯಾಗ ನಾನs ಸಂದರ್ಭ ಬಂದಂಗ ಹೊಂದಿಸಿ ಕೊಂಡು ಹಾಡ್ತೇನಿ. ಅಂದೇವಾಡಿ ಮಾಸ್ತರನೂ ಹಾಡ್ಕಿ ಮಾಡ್ತಾನ. ಮತ್ತ ತಾನs ಸ್ವಂತ ರಚನಾ ಮಾಡ್ತಾನ. ಅಂವಾ ಎದರ ಹಾಡಗಾರ ಆಗಿ ಬಂದ್ರ ನನ್ನ ಹಾಡ್ಕಿ ಚಂದಾ ನೋಡಬೇಕು. ನನ್ನೊಳಗಿನ ಹಾಡುಗಳು ಎಲ್ಲಿರ್ತಾವೋ ಏನೋ? ಒಂದರ‍್ಹಿಂದ ಒಂದು ಹಂಗs ಮೂಡಿ ಬರ್ತಾವು”. ಮಹಿಳೆಯರು ಯಾರೂ ಹರದೇಶಿ-ನಾಗೇಶಿ ಹಾಡುಗಳನ್ನು ಬರೆದಿಲ್ಲ ಎನ್ನುವ ಹೇಳಿಕೆ ಪ್ರಚಲಿತದಲ್ಲಿದೆ. ನನ್ನ ಕ್ಷೇತ್ರಕಾರ್ಯಾಧ್ಯಯನದ ಸಂದರ್ಭದಲ್ಲಿಯೂ ಯಾವ ಮಹಿಳಾ ಹಾಡುಗಾರರೂ ತಾವು ಹಾಡುಗಳನ್ನು ರಚಿಸುತ್ತೇವೆ ಎಂದಾಗಲಿ, ರಚಿಸಿದ್ದೇವೆ ಎಂದಾಗಲಿ ಹೇಳಿರಲಿಲ್ಲ. ಹೀಗಾಗಿ ಎದುರು ಹಾಡುಗಾರರ ಸವಾಲು, ಪ್ರೇಕ್ಷಕರ ನಿರೀಕ್ಷೆ ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಆಯಾ ಹಾಡಿಕೆಯ ಸಂದರ್ಭಗಳಿಗೆ ಅನುಗುಣವಾಗಿಯೇ ಸ್ವಂತ ಹಾಡು ಕಟ್ಟಿ ಹೇಳುತ್ತೇನೆ ಎಂದ ಮದನಹಳ್ಳಿ ಭೀಮಾಬಾಯಿ ಹಾಗೂ ಅಂದೇವಾಡಿ ಮಾಸ್ತರ ಇವರ ಹಾಡಿಕೆಯನ್ನು ಅಧ್ಯಯನಕ್ಕೆ ಒಳಪಡಿಸುವ ಉದ್ದೇಶವಿತ್ತು.

. ಆಧುನಿಕ ಹಾಡುಗಳು

“ಹೆಣ್ಣಿನ ಹಾಡು-ಗಂಡಿನ ಹಾಡಿಗೂ ಜನಮೆಚ್ಗಿ ಬಂದsದ. ಮೊದಲಾದ್ರ ಹ್ಯಾಂಗ ಹಾಡ್ತಿದ್ವೊ ಹಾಂಗs ಕೇಳ್ತಿದ್ರು. ಈಗ ಜನ ಮೆಚ್ಚಾಕ ರೇಕಾರ್ಡು ದಾಟ್ಯಾಗ ಹಾಡ್ತೀವಿ. ಗೀಗೀ ಪದಾ ಹ್ಯಾಂಗ ಹಾಡಬೇಕೋ ಈಗ ಹಂಗ ಹಾಡ್ತಾ ಇಲ್ಲ. ಗೀಗೀ ಹಾಡಿನ್ಯಾಗ ಮೂರು ಚೌಕಿನ ಪದಗಳು ಬಂದ್ರ ಗೀಗೀ ದಾಟ್ಯಾಗ ಹಾಡಬೇಕಾಗ್ತೈತಿ. ಅವಕ್ಕ ದಾಟಿ ಬದಲ ಮಾಡಾಕ ಬರಲ್ಲ. ಉಳಿದ ಹಾಡಿಗಿ ದಾಟಿ ಬದಲು ಮಾಡ್ತೇವು” ಎಂದು ಬೆಳಗಲಿಯ ದುರಗಪ್ಪ ಹೇಳಿದ್ದರು. ಆಧುನಿಕ ದಾಟಿಯನ್ನು, ಅದರಲ್ಲಿಯು ಸಿನಿಮಾ ದಾಟಿಯನ್ನು ಗೀಗೀ ಹಾಡುಗಳಿಗೆ ಹೊಂದಿಸಿಕೊಂಡು ಹಾಡುತ್ತೇನೆ ಎಂದ ಬೆಳಗಲಿ ದುರುಗಪ್ಪ ಅವರಂತಹ ಹಾಡುಗಾರರ ಪ್ರದರ್ಶನವನ್ನು ಅಧ್ಯಯನದ ತೆಕ್ಕೆಗೆ ತೆಗೆದುಕೊಳ್ಳಬೇಕಾಗಿತ್ತು. ಹಾಡಿನ ದಾಟಿ ಬದಲಾಗಿದೆ ಎಂದರೆ, ಹಾಡಿನಲ್ಲಿಯ ವಸ್ತುವು ಬದಲಾಗಿರುತ್ತದೆ. ಹರದೇಶಿ-ನಾಗೇಶಿ ಹಾಡುಗಳಲ್ಲಿನ ದಾಟಿ ಹಾಗೂ ವಸ್ತು ಬದಲಾಗಿದೆ ಎಂದರೆ ಪ್ರೇಕ್ಷಕ ಅಭಿರುಚಿಯೂ ಬದಲಾಗಿದೆ ಎಂದರ್ಥ. ಹಾಡಿಕೆಯ ಈ ಮಾದರಿಯನ್ನು ಅಧ್ಯಯನಕ್ಕೆ ಒಳಪಡಿಸುವ ಉದ್ದೇಶವಿತ್ತು.

. ಚೌಡಿಕೆಯಲ್ಲಿ ಹೆಣ್ಣು ಮಕ್ಕಳು ಹಾಡುವ ಹಾಡುಗಳು

ಮುಧೋಳ, ಜಮಖಂಡಿ ಹಾಗೂ ಮಹಾಲಿಂಗಪುರ ಈ ಭಾಗಗಳಲ್ಲಿ ಹರದೇಶಿ-ನಾಗೇಶಿ ಹಾಡುಗಳನ್ನು ಚೌಡಿಕೆಯಲ್ಲಿ ಮಹಿಳೆಯರೇ ಹಾಡುತ್ತಾರೆ. ಹರದೇಶಿ ಹಾಡುವ ಸತ್ಯವ್ವ, ಹೇಳಿದ್ದು ಹೀಗೆ : “ಗಂಡ್ಹೆಚ್ಚು ಅಂತ ಹಾಡುವಾಗ ನಾವು ಹೆಂಗಸರು ಅನ್ನುದನ್ನ ಮರತೀರತೀವಿ. ಹೆಣ್ಹೆಚ್ಚು ಅಂತ ನಮ್ಮ ಎದುರು ಹಾಡೋರು ನಮ್ಮಂಗ ಹೆಣ್ಣ ಮಕ್ಕಳ ಅಂಗ ಗೊತ್ತಿರತೈತಿ. ಗಂಡಾಗಿ ಹಾಡು ಗಳಿಗ್ಯಾಗ ನಾವು ಹೆಣ್ಣ ಅನ್ನೂದನ್ನ ಮರೆತಿರ‍್ತೀವಿ. ಎದುರಿನವರ್ನ ಬಾಯಿಗಿ ಸಿಕ್ಕಂಗ ಬೈತಿರ‍್ತೀವಿ. ಹೀಂಗ ಹಾಡಿದ್ರs ಜನಾ ಪಸಂದಪಟ್ಟ ಹಾಡಕಿ ಕೇಳ್ತಾರು” ಇಂತಹ ಹಾಡಿಕೆಗಳನ್ನು ಅಧ್ಯಯನಕ್ಕೆ ಒಳಪಡಿಸುವ ಉದ್ದೇಶವಿತ್ತು. ಹೆಣ್ಣು-ಹೆಣ್ಣು ಮಕ್ಕಳೇ ಚೌಡಕಿಯಲ್ಲಿ ಗಂಡ್ಹೆಚ್ಚು-ಹೆಣ್ಹೆಚ್ಚು ಎಂದು ಹಾಡುವುದನ್ನು ಹೇಳುವ ಕುತೂಹಲವಿತ್ತು. ೬೦ ದಿನಗಳ ಕ್ಷೇತ್ರಕಾರ್ಯಧ್ಯಯನವು ಕಲಾವಿದರ ಸಂಬಂಧವನ್ನು ಅರ್ಥಮಾಡಿಕೊಳ್ಳುವುದಕ್ಕೆ ಸಾಕಾಗಿತ್ತು. ಯೋಜನೆಯ ಕ್ಷೇತ್ರಕಾರ್ಯ ಅಧ್ಯಯನದ ಅವಧಿಯೂ ಪೂರ್ಣಗೊಂಡಿತ್ತು. ಹೀಗಾಗಿ ಹರದೇಶಿ-ನಾಗೇಶಿಯ ಪ್ರದರ್ಶನ ಕಲೆಯನ್ನು ಅಂದುಕೊಂಡಂತೆ ಅಧ್ಯಯನ ಮಾಡಲಾಗಲಿಲ್ಲ. ಮಾಗಾಂವ ಮತ್ತು ಸಿಂದಗಿ ತಾಲೂಕಿನ ಮದನಹಳ್ಳಿಯಲ್ಲಿ ಎರಡು ಪ್ರದರ್ಶನ ಕಲೆಯನ್ನು ಮಾತ್ರ ನೋಡಲು ನನಗೆ ಸಾಧ್ಯವಾಯ್ತು. ಒಂದು ಹಗಲಿನಲ್ಲಿ ನಡೆದ ಪ್ರದರ್ಶನವಾದರೆ; ಮತ್ತೊಂದು ರಾತ್ರಿಯಲ್ಲಿ ನಡೆದ ಪ್ರದರ್ಶನವಾಗಿತ್ತು. ಎರಡೂ ಸಂದರ್ಭದಲ್ಲಿಯೂ ಕೈಯಲ್ಲಿ ರೇಕಾರ್ಡಿಂಗ್‌ಕೈಕೊಟ್ಟಿತ್ತು. ಹಾಗೆಯೇ ಹ್ಯಾಂಡಿಕ್ಯಾಮ್‌ನಲ್ಲಿ ರೇಕಾರ್ಡಿಂಗ್‌ಗೆ ಸ್ಥಳವೇ ಇರಲಿಲ್ಲ. ಹರದೇಶಿ-ನಾಗೇಶಿ ಕಲಾವಿದರ ಸಂದರ್ಶನವೇ ತುಂಬಿಕೊಂಡು ಲೋಡಾದ ಅದು ಪ್ರದರ್ಶನ ಕಲೆಯನ್ನು ರೇಕಾರ್ಡಿಂಗ್‌ಗೆ ಒಳಪಡಿಸಲು ನಿರಾಕರಿಸಿತು. ಹೀಗಾಗಿ ಇಡಿಯಾಗಿ ಹಾಡುಗಳನ್ನು ಉಲ್ಲೇಖಿಸಿ ಅಧ್ಯಯನ ಮಾಡಲು ಸಾಧ್ಯವಾಗಿಲ್ಲ. ಬರೆದುಕೊಳ್ಳಲು ಸಾಧ್ಯವಾದ ಸಣ್ಣ ಸಣ್ಣ ಹಾಡಿನ ತುಣುಕುಗಳನ್ನು ಉಲ್ಲೇಖಿಸುತ್ತಾ, ಒಂದೊಂದು ತಂಡದವರು ಹಾಡಿದ ಹಾಡಿನೊಳಗಿನ ಅರ್ಥವನ್ನು ಹಾಡಿನ ಸಂದರ್ಭದೊಂದಿಗೆ ವಿವರಿಸುತ್ತಾ, ವಿಶ್ಲೇಷಿಸುತ್ತ ಅಧ್ಯಯನಕ್ಕೆ ಒಳಪಡಿಸಲಾಗಿದೆ.

ಪ್ರದರ್ಶನ-೧

ಗುಲ್ಬರ್ಗಾ ಜಿಲ್ಲೆಯ ಮಾಗಾಂವದಲ್ಲಿ ನಾವು ಹಾಡಿಕೆ ಪ್ರದರ್ಶನಕ್ಕೆ ಹೋದಾಗ, ಅದಾಗಲೇ ಹಾಡಿಕೆ ಪ್ರಾರಂಭವಾಗಿತ್ತು. ಹರದೇಶಿ ತಂಡದವರದ್ದು ಹಾಡುವ ಅವಧಿ ಮುಗಿದಂತೆ ಕಾಣುತ್ತಿತ್ತು. ನಾಗೇಶಿ ಹಾಡುಗಾರ್ತಿ ಬಾನಾಬಾಯಿ ಸ್ಟೇಜಿನಲ್ಲಿ ಇರಲಿಲ್ಲ. ಅನಿವಾರ್ಯವಾಗಿ ಹರದೇಶಿಯವರು ನಾಗೇಶಿಯ ಬಾನಾಬಾಯಿ ಬರುವ ತನಕ ರಂಗದಲ್ಲಿ ಹಾಡಬೇಕಿತ್ತು.

“ಪಕ್ಕಾ ಹಾಡಾಕ ಬರೂದಿಲ್ಲ
ಬಿಟ್ಟ ಹೋಗಿದಿ ಚಾ ಕುಡಿಯಾಕ
ಕುಂತವರ ಏನಂತ ತಿಳಿದಿ ನೀ
ದೇವರ ಸಭಾ ಇರತದ
ನಡಬರಕ ಯಾಕ ಬಿಟ್ಟಿದಿ?”

ಎಂದು ಹಾಡುತ್ತಿದ್ದರು. ಹಾಡುಗಾರಳು ಬಂದು ನನ್ನ ಪಕ್ಕಕ್ಕೆ ಕೂತಳು. ‘ಒಂದಿಟ್ಟು ಚಾ ಕುಡಿಯಾಕ ಹೋದ್ರ ಅದನ್ನ ಬಟಾಬಯಲ ಮಾಡಿ ಹ್ಯಾಂಗ ಹಾಡತಾವ ನೋಡು. ಗಂಟ್ಲ ಸಡಲ ಆಗಬೇಕಲ್ಲರಿ ನಂದು” ಎಂದಳು. ಆಕೆಯನ್ನು ನೋಡಿದ ಹರದೇಶಿ ಹಾಡುಗಾರರು, “ಇಪ್ಪತ್ತು ಮಂದಿ ಗೋಣ ಕಡಿದಾನು. ಸತ್ತಿಲ್ಲ, ರಕ್ತ ಬಂದಿಲ್ಲ, ಏನು? ಇದಕ್ಕೆ ಎರಡು ದಿನ ತಗೋ” ಎಂದರು. ಆಕೆಯ ‘ಉಗುರು’ ಎಂದು ಉತ್ತರ ಹೇಳಿದಳು. ನಂತರ ಆಕೆ ಬಹಳ ಚಂದಾಗಿ ಆಲಾಪನೆ ಮಾಡಿ ಹಾಡಿದಲು. ಬಹಳ ಸೊಗಸಾಗಿತ್ತು. ಅಕೆಯ ಹಾಡಿನ ಲಯಕ್ಕೆ ಆಕೆಯೇ ಬಾರಿಸುವ ದಪ್ಪು ಹಾಡಿಕೆಗೆ ಸೊಬಗನ್ನು ತಂದಿತ್ತು. ಆಕೆಯ ಗಂಡನೇ ಶೃತಿ ಬಾರಿಸುತ್ತಿದ್ದ. ಆಕೆಯ ಎಂಟು ಇಲ್ಲವೆ ಒಂಭತ್ತು ವರ್ಷ ವಯಸ್ಸಿನ ಮಗ ತಾಳ ಬಾರಿಸುತ್ತಿದ್ದ. ದಪ್ಪು ಹಿಡಿದು ಹಾಡುವಾಗ ಹಿಮ್ಮೇಳದವರು ಗಂಡಸರೇ ಇರಬೇಕಾಗುತ್ತದೆ. ಆರು ಮಕ್ಕಳ ದೊಡ್ಡ ಕುಟುಂಬದ ಜವಾಬ್ದಾರಿ ಹೊತ್ತ ಈ ದಂಪತಿಗಳಿಗೆ ತಾಳ ಬಾರಿಸುವವನಿಗೆ ಸಂಬಳ ಕೊಡುವ ಶಕ್ತಿ ಇಲ್ಲ. ಗಂಡು ಬೇಕು ಎಂದು ಹೆತ್ತ ಮೊದಲ ಐದು ಮಕ್ಕಳೂ ಹೆಣ್ಣು ಮಕ್ಕಳೇ ಆಗಿದ್ದರು. ಹೆಣ್ಣುಮಕ್ಕಳು ದಪ್ಪಿನ ಹಾಡಿನಲ್ಲಿ ತಾಳ ಬಾರಿಸುವಂತಿಲ್ಲ. ಹೀಗಾಗಿ ಈ ಎಳೆ ಹುಡುಗನನ್ನೇ ಆರ್ಥಿಕ ಉಳಿತಾಯದ ಉದ್ದೇಶದಿಂದ ತಾಳ ಬಾರಿಸಲು ನಿಲ್ಲಿಸಲಾಗಿತ್ತು. ಬಾಯಲ್ಲಿ ಹಲ್ಲಿಲ್ಲದ, ನಿಲ್ಲಲು ಶಕ್ತಿಯಿಲ್ಲದ ಬಡಕಲು ಗಂಡ, ಎಳೆಯ ಮಗನನ್ನು ಹಿಮ್ಮೇಳವಾಗಿಸಿಕೊಂಡ ಆಕೆಗೆ ಪ್ರತಿ ಹಾಡುಗಾರಿಕೆಯು ಸವಾಲೇ ಆಗಿರುತ್ತಿತ್ತು. ಹೆಂಡತಿಯನ್ನು ಜಾಣೆಯೆಂದು, ಗಂಡನನ್ನು ದಡ್ಡನೆಂದು ಹಾಡಲು ಪ್ರಾರಂಭಿಸಿದ ಆಕೆಯ ಹಾಡಿನ ಕಥನವು ಹೀಗಿದೆ: ‘ಗಂಡನಿಗೆ ಸಾಲ ಮಾಡಲು ಹೇಳುತ್ತಾಳೆ. ಪಡೆದ ಸಾಲದಿಂದ, ಬಾಂಬೆಯಿಂದ ಆಕಳು ತರಿಸುತ್ತಾಳೆ. ಆಕಳ ಹಾಲನ್ನು ನೆಲುವಿನಲ್ಲಿ ಇಡುವಾಗ ನೆಲುವಿಗೆ ಆಕೆ ಸಿಕ್ಕಿಕೊಳ್ಳುತ್ತಾಳೆ. ಸೊಸೆಯ ಕಣ್ಣು ತಪ್ಪಿಸಿ ಹಾಲು ಕುಡಿಯುತ್ತಿದ್ದ ಅತ್ತೆಯೂ ಹಾಲಿನ ಆಸೆಗಾಗಿ ಬಂದು ನೆಲವಿಗೆ ಸಿಕ್ಕಿಕೊಳ್ಳುತ್ತಾಳೆ. ಬಾಂಗ್ಲಾ ದೇಶದ ಬಾಂವಾ ಕಥಾ ನಾಯಕಿಯನ್ನು ಬಿಡಿಸಲು ಹೋಗಿ ಆತನೂ ಆಕೆಯ ಕಾಲಿಗೆ ಸಿಕ್ಕಿಕೊಳ್ಳುತ್ತಾನೆ. ತಾಯಿಯ ಹಾಲು ನೆನಪಾದ ಕರು ಕತ್ತಲಲ್ಲಿಯೇ ಬಂದು ಬಾಂಗ್ಲಾ ಬಾಂವಾನ ಶಿಶ್ನವನ್ನೇ ಮೊಲೆ ಹಾಲೆಂದು ಚೀಪುತ್ತದೆ. ಆದರೆ ಹಾಲು ಬರಲಿಲ್ಲ’. ಇದನ್ನೇ ಆಕೆ ಕಣ್ಣೆದುರಿಗೆ ಚಿತ್ರ ಮೂಡುವಂತೆ ಹಾಡುತ್ತಾಳೆ. ಬಾಂಗ್ಲಾ ಬಾಂವಾನ ಪ್ರವೇಶದ ಸನ್ನಿವೇಶಕ್ಕೆ ಹೆಚ್ಚು ಒತ್ತ ನೀಡಲಾಗಿದೆ. ಕರು ಬಾಂಗ್ಲಾ ಬಾಂವಾನೊಂದಿಗೆ ನಡೆದುಕೊಂಡ ವಿಧಾನವನ್ನೇ ವಿವರಿಸಲು ಹೆಚ್ಚು ಸಮಯ ತೆಗೆದುಕೊಂಡಳು. ಇದನ್ನು ಕೇಳಿದ ನನಗೆ ಕಸಿವಿಸಿಯೆನಿಸಿತು. ಇದನ್ನು ಹಾಡುವ ಆಕೆ ಬಾಯಿಗೆ ಸೆರಗನ್ನು ತಂದು ನಾಚಿಕೊಂಡಂತೆ ಹಾಡುತ್ತಿದ್ದಳು. ಕುಳಿತ ಪುರುಷ ಪ್ರೇಕ್ಷಕರೆಲ್ಲರೂ ಮೀಸೆಯಲ್ಲಿಯೇ ಮುಸಿ ಮುಸಿ ನಗುತ್ತಿದ್ದರು. ಅಲ್ಲಿ ನನ್ನನ್ನು ಹೊರತುಪಡಿಸಿದರೆ ಯಾವ ಮಹಿಳಾ ಪ್ರೇಕ್ಷಕರೂ ಇರಲಿಲ್ಲ. ಬಾನಾಬಾಯಿಯ ಹಾಡುಗಳನ್ನು ಪುರುಷರು ಬಹಳ ಆಸಕ್ತಿಯಿಂದ ಹಾಗೂ ಸಂತೋಷದಿಂದ ಕೇಳುತ್ತಿದ್ದರು. ಅವಳ ಈ ಹಾಡಿಕೆಗೆ ಕುಳಿತ ಪ್ರೇಕ್ಷಕರಲ್ಲಿ ತಲೆಗೊಬ್ಬರಂತೆ ಇಪ್ಪತ್ತು ಜನರು ಹತ್ತು ರೂಪಾಯಿಗಳನ್ನು ಭಕ್ಷೀಸಾಗಿ ಕೊಟ್ಟರು. ಅಂದರೆ ಆಕೆ ಹಾಡಿದ್ದು ನಲವತ್ತು ನಿಮಿಷಗಳವರೆಗೆ. ಈ ನಲ್ವತ್ತು ನಿಮಿಷಗಳ ಹಾಡಿಕೆಗೆ ಆಕೆ ಪಡೆದುಕೊಂಡದ್ದು ಇನ್ನೂರು ರೂಪಾಯಿಗಳನ್ನು. ಬಂದ ಭಕ್ಷೀಸು ಹಾಡುಗಾರಳ ಖುಷಿಯನ್ನು ಇಮ್ಮಡಿಗೊಳಿಸಿತು.

ಅನಂತರ ವೇದಿಕೆಗೆ, ಬಂದ ಹರದೇಶಿ ಹಾಡುಗಾರನು ‘ಸತ್ಯ ಎಂಬ ಹಾದರತನ ನಿತ್ಯ ಮಾಡಿರಿ’ ಎಂದು ಹಾಡುತ್ತ ಪ್ರವೇಶಿಸಿದನು. ತುಂಡು ಹಾಡನ್ನು ಹಾಡಿದವನೇ ನಾಗೇಶಿ ಹಾಡುಗಾರಳನ್ನು ಬೆರಳು ಮಾಡಿ ತೋರಿಸುತ್ತ “ಇಕಿ, ನಿನ್ನೆ ನನ್ನ ಓಡ್ಸೊಕೊಂಡ ಹೋಗಾಕ ನೋಡಿದ್ಲು… ಇಂಥಾ ಚಪರಾಸಿ ಹೆಂಗಸರ್ನ ನಾನೆಷ್ಟು ನೋಡಿಲ್ಲಾ? ನಾನs ಆಕೆಗೆ ಇದ್ದಕಿ ನೀನು. ಗಂಡಗ ನಿಷ್ಠಾ ತೋರ್ಸು ಅಂತ ಉಗುದ ಕಳ್ಸಿದಿನ್ರಿ” ಎಂದನು. ಬಾನಾಬಾಯಿ ಲಂಬಾಣಿ ಜನಾಂಗಕ್ಕೆ ಸೇರಿದವಳಾಗಿದ್ದು ಗಂಡ-ಮಗನನ್ನೇ ಹಿಮ್ಮೇಳವಾಗಿಸಿಕೊಂಡು ಹಾಡುತ್ತಿದ್ದಳು. ಪ್ರಚಲಿತದಲ್ಲಿರುವ ಪಾತಿವ್ರತ್ಯ ಮೌಲ್ಯವನ್ನು ಮುಂದೊಡ್ಡಿ, ಆಕೆಯನ್ನು ಬಹಿರಂಗವಾಗಿ ಅಪಮಾನಿಸಿದನು.

ಪ್ರೇಕ್ಷಕರು ಇದಕ್ಕೂ ನಗುತ್ತಲೇ ಪ್ರತಿಕ್ರಿಯಿಸಿದರು. ಸ್ಟೇಜಿನ ಒಂದು ಮೂಲೆಯಲ್ಲಿ ಎಲೆ ಅಡಿಕೆ ಹಾಕಿಕೊಳ್ಳುತ್ತ ಕುಳಿತಿದ್ದ ಆಕೆ ಹರದೇಶಿ ಹಾಡುಗಾರನತ್ತ, ತಂಡದತ್ತ ಲಟಿಕೆ ಮುರಿಯುತ್ತಾ ಸಾಪಳಿಸುತ್ತಿದ್ದಳು. ಆಕೆ ಲಟಿಕೆ ಮುರಿಯುವುದು ಹಾಗೂ ಸಾಪಳಿಸುವುದು ಹರದೇಶಿ ಹಾಡುಗಾರನ ಹಾಡಿನ ಅವಧಿಯು ಮುಗಿಯುವವರೆಗೆ ನಡೆದೇ ಇತ್ತು.

ಬಾನಾಬಾಯಿಯ ಚಾರಿತ್ರ್ಯ ಹರಣ ಮಾಡಿದ ನಂತರ ಹರದೇಶಿ ಹಾಡುಗಾರನು ‘ಹೆಣ್ಣು ದೇವತೆಯಲ್ಲ…’ ಎಂದು ಹಾಡುತ್ತ ಹಳ್ಳಿಯ ಹುಡುಗಿ ಬಾಂಬೆಗೆ ಹೋದ ಕಥನವನ್ನು ಹಾಡುತ್ತಾನೆ. ಬಾಂಬೆಯಲ್ಲಿ ದಿಕ್ಕುಕಾಣದೆ ಕುಳಿತ ಹಳ್ಳಿಯ ಹುಡುಗಿಗೆ ಹುಡುಗನೇ ಮಾರ್ಗದರ್ಶಕನಾಗುತ್ತಾನೆ. ಹುಡುಗಿಯನ್ನು ಹುಡುಗನ ಮೂಲಕವೇ ಚಲನೆಗೆ ಒಳಪಡಿಸಲಾಗಿದೆ. ನಿತ್ಯ ಜೀವನದಲ್ಲಿ ಗಂಡಿನ ಮಾರ್ಗದರ್ಶನವಿಲ್ಲದೆ ಹೆಣ್ಣು ಚಲಿಸಲು ಸಾಧ್ಯವೇ ಇಲ್ಲ ಎನ್ನುವ ನಿರ್ಣಯವನ್ನು ಕೇಳುಗರ ಮುಂದಿಡುತ್ತಾರೆ. ಇದಕ್ಕೆ ಎಲ್ಲ ಪ್ರೇಕ್ಷಕರು ತಲೆ ಅಲ್ಲಾಡಿಸಿ ಹೌದು ಎನ್ನುವಂತೆ ಒಪ್ಪಿಗೆ ಸೂಚಿಸುತ್ತಾರೆ. ಕೊನೆಯಲ್ಲಿ ಹಾಡುಗಾರನು ‘ತಂಗಿ ಹೊಲ್ಸ ಹೊಲ್ಸ ಹಾಡಾ ಹಾಡಬ್ಯಾಡ. ಗೀಗೀ ಪದಗಳು ಗೊತ್ತಿದ್ರ ಹಾಡು. ಮಾಗಾಂವಿ ಜನ ಅಂದ್ರ ಏನ ತಿಳಕೊಂಡಿದಿ? ನಮ್ಮದೆರುಗಿ ಹಾಡೋದಿದ್ದ್ರ ಸುದ್ದ ನಾಗೇಶಿ ಹಾಡಾ ಹಾಡು; ಹಲ್ಕಟ್ಟ ಹಾಡಲ್ಲ. ಸಭಾಕ್ಕ ಗೌರವ ಕೊಟ್ಟು ಸಭಾ ಮರ್ಯಾದಿ ಕಾಯುವಂಗ ಹಾಡು’ ಎಂದು ಹೇಳಿ ಕೆಳಗಿಳಿದನು.

ನಾಗೇಶಿ ಹಾಡುಗಾರಳು ಕೋಪಿಸಿಕೊಂಡಂತೆ ಕಾಣುತ್ತಿದ್ದಳು. ಅಕ್ಷರಶಃ ಆಕೆ ಬೇಟೆಯಾಡುವಂತೆ ವೇದಿಕೆಯನ್ನು ಪ್ರವೇಶಿಸಿದಳು. “ರೊಡ್ಡಗೈಲೆ ದಪ್ಪ ಬಾರಿಸ್ಕೊಂತ ಎನಂದಲೆ? ನನಗ ಹಾಡ್ಕಿ ಬರಂಗಿಲ್ಲಾ? ನಾನು ಜಾತೀಲೆ ಲಂಬಾಣಿ ಅದೀನು. ನಿನ್ನ ಅಡವ್ಯಾಗ ಮೊಲಾ ಸುಟ್ಟಂಗ ಸುಟ್ಟ ತಿಂದ ಬಿಡತೇನು. ನನಗ ಹಾಡ್ಕಿ ಬರುವಂತಿಲ್ಲ ಅಂತಿಯಾ? ಬಾಂಗ್ಲಾ ದೇಶದ ಬಾಂವಾನ ಸಾಮಾನು ಚಿಪ್ಪು ಅಂದ್ರ ನೀ ಹೊಲಸ ಯೋಚ್ನಿ ಮಾಡಿದ್ರ ನಾನೇನ ಮಾಡ್ಲಿ? ತಾಯಿ ಮಹಾತ್ಮಿ ಹೇಳು ಹಾಡೋ ಅದು. ನನ್ನಂಥಾ ತಾಯಂದಿರ ಎದಿ ಹಾಲಿನಿಂದ ನಿಮ್ಮಂಥವರು ಬೆಳದಬಂದಿರಿ ಅಂತ ಹೇಳಿನಿ. ತಾಯಿ ಮಹಾತ್ಮೆ ಹಾಡದು. ಮಲಿ ಹಾಲು ಕುಡ್ದು ಬೆಳ್ದ ನೀನು ನನ್ನ ಆಳ ಮನಷ್ಯ. ಅಪ್ಪಗ ಎಂದರs, ಯಾವ ಕಾಲ್ದಾಗರs ಮಲಿ ಹಾಲು ಬಂದಾವೇನು?” ಎಂದು ಪ್ರಶ್ನಿಸುತ್ತಾ

“ಜನಾ ಎಲ್ಲಾ ಹುಟ್ಟ್ಯಾದ ಸೀರ್ಯಾಗ
ನಿನ್ನಂತಹ ಚೌರಾಸಿ ಕೂಸುಗಳು ಇದs ಗಂಗ್ರ
್ಯಾಗ
ಎಟ್ಟ ನಿಗರಾಡತಿದಿ ನೀನು”

ಎಂದು ಹಾಡುತ್ತ ತಾಯಿ ಗರ್ಭದಿಂದಲೇ ಜಗತ್ತು ಜನಿಸಿದೆ ಎನ್ನುವ ತಾತ್ವಿಕತೆ ಬೆಳೆಸುತ್ತ ಹೋಗುತ್ತಾಳೆ. ಬಾನಾಬಾಯಿಯ ಎದುರು ಹಾಡುಗಾರನಾಗಿ ಹಾಡಿದ ವಿಲಾಸನು ತನ್ನ ಬಲಗೈಯನ್ನು ಬೆಂಗಳೂರಿನ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುವಾಗ ಕಳೆದು ಕೊಂಡಿದ್ದನು. ಹೀಗಾಗಿ ಅನಿವಾರ್ಯವಾಗಿ ಆತನು ಎಡಗೈಯಿಂದಲೇ ದಪ್ಪು ಬಾರಿಸುತ್ತಿದ್ದರು. ಈ ವಿಷಯವನ್ನೇ ವಿಲಾಸನನ್ನು ಮೂದಲಿಸಲು ಬಾನಾಬಾಯಿ ಎತ್ತಿಕೊಂಡಳು. ನಾಗೇಶಿ ಹಾಡುಗಾರ್ತಿ ಬಾನಾಬಾಯಿ ಅತಿಹೆಚ್ಚು ಭಕ್ಷೀಸು ಪಡೆದದ್ದು ವಿಲಾಸನಿಗೆ ವೃತ್ತಿ ಅಸೂಯೆಯನ್ನು ಉಂಟುಮಾಡಿದ್ದರೆ; ವಿಲಾಸನು ಬಹಿರಂಗವಾಗಿ ತನ್ನ ಚಾರಿತ್ರ್ಯ ಹರಣ ಮಾಡಿದ್ದು ಹಾಗೂ ಆಕೆಯ ಹಾಡಿದ್ದ ಹಾಡು ನಾಗೇಶಿ ಹಾಡು ಅಲ್ಲವೇ ಅಲ್ಲ ಎಂದಿದ್ದು ಆಕೆಯನ್ನು ಕೆರಳಿಸಿದ್ದವು. ಜೋರಾಗಿ ದಪ್ಪು ಬಾರಿಸುತ್ತ ಇಡೀ ಸ್ಟೇಜಿನ ತುಂಬ ಓಡಾಡಿ ಬೈದಳು. ಸಾಮಾನ್ಯವಾಗಿ ಹರದೇಶಿ-ನಾಗೇಶಿ ಹಾಡುಗಾರರು ನಿಂತಲ್ಲಿಯೇ ಹಾಡುವರು. ಇಲ್ಲವೇ ಚಿಕ್ಕ ವೃತ್ತಾಕಾರದಲ್ಲಿ ಚಲಿಸುತ್ತ ಹಾಡುವರು. ನಾನು ಕೇಳಿದ ಪ್ರಕಾರ ಯಾರೂ ಇಡೀ ಸ್ಟೇಜನ್ನು ಹಾಡಿಕೆಯ ಸಂದರ್ಭದಲ್ಲಿ ಬಳಸಿಕೊಂಡಿಲ್ಲ. ಮಹಿಳೆಯನ್ನು ನೋಯಿಸಲು, ಅಧೀರಗೊಳಿಸಲು, ಹಿಂದೆ ಸರಿಯುವಂತೆ ಮಾಡಲು ಪುರುಷರು ಬಳಸುವ ಅಸ್ತ್ರವೆಂದರೆ ಚಾರಿತ್ರ್ಯಕ್ಕೆ ಸಂಬಂಧಿಸಿದ್ದು. ಮೇಲ್ಜಾತಿಯ ಮಹಿಳೆಯರಾಗಿರಬಹುದು, ಕೆಳಜಾತಿಯ ಮಹಿಳೆಯರಾಗಿರಬಹುದು-ಇವರು ಪುರುಷರಿಗೆ ಸವಾಲೆನಿಸಿದಾಗ ಶೀಲದ ಪ್ರಶ್ನೆಯನ್ನೇ-ಎತ್ತುತ್ತಾರೆ. ಬಾನಾಬಾಯಿಯ ಗಂಡ ಅಸಹಾಯಕನಂತೆ ನಿಲ್ಲಲು ಶಕ್ತಿಯಿಲ್ಲದಂತೆ ನಿಂತಲ್ಲಿಯೇ ಆ ಕಡೆ ಈ ಕಡೆ ವಾಲುತ್ತಿದ್ದನು. ನೋಡಲು ದೈಹಿಕವಾಗಿ ಮಾತ್ರ ಕುಗ್ಗಿದಂತೆ ಕಾಣುತ್ತಿರಲಿಲ್ಲ. ಮಾನಸಿಕವಾಗಿಯೂ ಕುಗ್ಗಿರುವುದು ಸ್ಪಷ್ಟವಾಗಿ ಗೋಚರವಾಗುತ್ತಿತ್ತು. ಬಡತನದ ತೀವ್ರತೆ ಈ ಹಾಡಿಕೆಯನ್ನು ಅವಲಂಬಿಸುವಂತೆ ಮಾಡಿತ್ತು. ಹರದೇಶಿಯವರು ಬಾನಾಬಾಯಿಯನ್ನು ಹೀಗಳೆದು ಮಾತನಾಡುವಾಗ ಅಲ್ಲಿಯೇ ಕುಳಿತಿದ್ದ ಆಕೆಯ ಗಂಡನ ಹತ್ತಿರ ಹೋಗಿ ಕುಳಿತೆ. “ನಿಮ್ಮ ಹೆಂಡತಿಯ ಬಗ್ಗೆ ಇಷ್ಟೆಲ್ಲಾ ಮಾತಾನಾಡ್ತಾ ಇದ್ದಾರೆ. ನಿಮಗೇನೂ ಅನಿಸುವುದಿಲ್ವೆ?” ಎಂದು ಪ್ರಶ್ನಿಸಿದೆ. ಅದಕ್ಕವನು ತಲೆಯಲ್ಲಾಡಿಸಿ ನಕ್ಕನು. ಮಾತನಾಡಲಿಲ್ಲ. ಅವನ ಆ ನಗು ವಿಷಾದವನ್ನೇ ತುಂಬಿಕೊಂಡಿತ್ತು.

“ನಿಮಗೆ ಏನೂ ಅನ್ಸೋದಿಲ್ವೆ? ಸುಮ್ಮನೆ ಕುಳಿತಿರಲ್ಲಾ?” ಎಂದು ಮತ್ತೆ ಕೆಣಕುವಂತೆ ಕೇಳಿದೆ. ಅದಕ್ಕವನು ಕೆರಳಲಿಲ್ಲ. ಬೀಡಿ ಸೇದುವುದನ್ನು ನಿಲ್ಲಿಸಿ ನನ್ನೆಡೆಗೆ ನೋಡಿದ “ಬಡವರ ಹೊಟ್ಟಿ ತಿಪಲ ನಿಮ್ಮಂಥವರ್ಗೆ ತಿಳಿಯುದಿಲ್ಲ. ಹೆಣ್ತಿನ್ನ ಸೂಳಿ ಅಂದ್ರೂ ಹೊಟ್ಟಾಗ ಹಾಕೋಬೇಕಾಗ್ತೈತಿ. ಮಕ್ಕಳನ್ನ ಸೂಳಿ ಅಂದ್ರೂ ಹೊಟ್ಟಾಗ ಹಾಕೋಬೇಕಾಗತ್ತೈತಿ. ಹಸಿವು ತೀರಿಸ್ಕೋಬೇಕಿದ್ರೆ ಇಂಥಾವೆಲ್ಲ ನುಂಗಬೇಕಾಗ್ತೈತಿ. ಏಯತ್ ಇಂಥಾವೆಲ್ಲ ನಮಗ ತಡಕೊಳ್ಳಾಕಗಾಗಲ್ಲ ಅಂತ ಒದರಾಡಿದ್ರ, ಕೂಳಿರ‍್ಲಾರ‍್ದ ಸಾಯಿ ಬೇಕಾಗ್ತೈತಿ. ಬದಕ ಬೇಕಿದ್ರ ಏನಂದ್ರೂ ಸಹಿಸ್ಕೋಬೇಕು. ಸಾಯಿ ಬೇಕೆನ್ಸಿದ್ರ ಜಗಳಾ ಕಾಯಬೇಕು” ಎಂದು ಜೀವವಿಲ್ಲದ ನಗೆ ನಕ್ಕಿದ್ದ. ಹೆಂಡತಿಯ ಕುರಿತು ಹರದೇಶಿ ಹಾಡುಗಾರು ಬಟಾಬಯಲಿನಲ್ಲಿ ಸಭಿಕರೆದುರಿಗೆ ಹೇಳಿದ ಮಾತು ಆತನ ಅಂತರಂಗವನ್ನು ಕುಕ್ಕಿದ್ದವು. ಬಡತನವು ಆತನನ್ನು ಅಸಹಾಯಕ ಗೊಳಿಸಿತ್ತು. ಆದರೆ ಅದೇ ಬಡತನ ಸ್ಥಿತಿಯಲ್ಲಿರುವ ಆತನ ಹೆಂಡತಿಯಲ್ಲಿನ ಸಿಟ್ಟು ಗಂಡನ ಹಾಗೆ ಅಂತರಂಗದೊಳಗೆ ಬಂಧಿಯಾಗಿರಲಿಲ್ಲ. ಕುದ್ದು ಲಾವಾರಸವಾಗಿ ವೇದಿಕೆಯಲ್ಲಿ ಹೊರ ಚಿಮ್ಮಿತ್ತು. ಯಾಕೆಂದರೆ ಹೆಣ್ತನದ ಕುರಿತ ಅಪಮಾನವನ್ನು ಹೆಣ್ಣೆ ಅನುಭವಿಸುವುದಕ್ಕೂ, ಆಕೆಯ ಗಂಡನು ಅನುಭವಿಸುವುದಕ್ಕೂ ವ್ಯತ್ಯಾಸವಿದೆ. ಹೆಣ್ತದ ಕುರಿತ ಅಪಮಾನ ನೇರವಾಗಿ ಆಕೆಗೆ ಸಂಬಂಧಿಸಿದ್ದಾಗಿದೆ. ಆದ್ದರಿಂದ ಅದು ಸ್ವ ಅಪಮಾನವಾಗುತ್ತದೆ. ಹೆಂಡತಿಗಾದ ಅಪಮಾನವು ಪರೋಕ್ಷ ಅಪಮಾನದ ಸ್ವರೂಪ ಪಡೆದುಕೊಳ್ಳುವುದರಿಂದ ಬಾನಾಬಾಯಿಗೆ ಆಘಾತವನ್ನುಂಟು ಮಾಡಿದಷ್ಟು ಆಕೆಯ ಗಂಡನಿಗೆ ಅಘಾತವನ್ನು ಉಂಟುಮಾಡಿರಲಿಕ್ಕಿಲ್ಲ. ಜೊತೆಯಲ್ಲಿ ಆರ್ಥಿಕ ಅಸಹಾಯಕತೆ ಆತನನ್ನು ಮತ್ತಷ್ಟು ಕುಬ್ಜಗೊಳಿಸಿರಲಿಕ್ಕೂ ಸಾಕು. ದ್ರೌಪದಿಯ ವಸ್ತ್ರಾಪಹರಣ ಆದಾಗ ಆಕೆಯ ಗಂಡಂದಿರು ತಲೆ ತಗ್ಗಿಸಿಕೊಳ್ಳುತ್ತಿದ್ದ ಪ್ರಸಂಗವನ್ನು ನೆನಪಿಸಿಕೊಳ್ಳಬಹುದು.

ಹರದೇಶಿ ಹಾಡುಗಾರರನ್ನು ತರಾಟೆಗೆ ತೆಗೆದುಕೊಂಡ ಬಾನುಬಾಯಿ ನಂತರದಲ್ಲಿ ಸ್ತ್ರೀ ಗರ್ಭಶಕ್ತಿಯ ಕುರಿತು ಹಾಡಿ ಕೊನೆಯಲ್ಲಿ

“ಹೆಣ್ಣುಮಕ್ಕಳ ಉಡಿಯಾನ ಕೂಸು ಇದ್ದಾಂಗ
ನೀವು ಕೊಟ್ಟ ರೊಕ್ಕ ಯಾವಾಗ್ಲೂ ಇರಲ್ಲ.
ನಿಮ್ಮ ಪಿರುತಿ ಮಾತ್ರ ಯಾವಾಗ್ಲೂ ಇರತ್ತೈತಿ”

ಎಂದು ಹಾಡುತ್ತಾ ಹೇಳಿದಳು. ಈ ಮೂರು ಸಾಲುಗಳನ್ನು ಆಕೆ ತಿರುಗಿ ತಿರುಗಿ ಐದು ಬಾರಿ ಹೇಳಿದಳು. ಹಾಗೆ ಆಕೆ ಹೇಳುವಿಕೆಯಲ್ಲಿ ಒಂದು ನಿರೀಕ್ಷಣೆ ಇತ್ತು. ಸಭಿಕರನ್ನು ತನ್ನ ಬೆಂಬಲಿಗರನ್ನಾಗಿ ಮಾಡಿಕೊಳ್ಳುವ ರಾಜಕೀಯ ಇತ್ತು. ಆ ಮೂಲಕವೇ ಹರದೇಶಿ ಹಾಡುಗಾರನಿಗೆ ತನ್ನ ಹೆಣ್ತನ ಕುರಿತು ಹಗರುವಾಗಿ ಮಾತನಾಡದೇ ಇರುವ ಎಚ್ಚರಿಕೆ ನೀಡುವ ಉದ್ದೇಶವೂ ಇದ್ದಂತೆ ತೋರುತ್ತಿತ್ತು. ಭಕ್ಷೀಸನ್ನು ಹಿಂದೆ ಮಾಡಿ ಭಾವನಾತ್ಮಕ ಸಂಬಂಧವನ್ನು ಮುಂದೆ ಮಾಡಿದಳು ಅಥವಾ ಭಕ್ಷೀಸನ್ನು ಭಾವನಾತ್ಮಕ ಸಂಬಂಧದ ಅಪೇಕ್ಷೆಯಲ್ಲಿ ಹಾಗೂ ನಿರೀಕ್ಷೆಯಲ್ಲಿ ಕರಗಿಸಿಬಿಟ್ಟಳು. ಮಾಗಾಂವಿಗೆ ಅವಳು ಕೂಸಾದರೆ, ಅವಳ ಮಾನಾಪಮಾನವು ಮಾಗಾಂವಿಯ ಮಾನಾಪಮಾನವಾಗಿಬಿಡುತ್ತದೆ. ಬಹಿರಂಗವಾಗಿ ತನ್ನ ಹೆಣ್ತನಕ್ಕೆ ಆಗುವ ಅಪಮಾನವನ್ನು ತಡೆ ಹಿಡಿಯುವುದು ಆಕೆಯ ಉದ್ದೇಶವಾಗಿತ್ತು, ಅವಳ ಹಾಡಿಗೆ ಪ್ರೇಕ್ಷಕರು ಕರಗಿದರು. ಮತ್ತು ಚೆನ್ನಾಗಿಯೇ ಭಕ್ಷೀಸನ್ನು ನೀಡಿದರು. “ಬಾನಾಬಾಯಿಯ ಪದ ಕೇಳಿದ್ರು, ಅದಕ್ಕಾಗಿ ಶಂಕ್ರಪ್ಪ ಅವರು ಹತ್ತು ರೂಪಾಯಿ ಕೊಟ್ಟಾರ, ಮನ್ನಿಸತಕ್ಕದ್ದು” ಎಂದ ಪ್ರತಿ ಭಕ್ಷೀಸನ್ನು ಇಸಿದುಕೊಳ್ಳುವಾಗ ಅವರವರ ಹೆಸರನ್ನು ಹೇಳುತ್ತಿದ್ದಳು. ಸಭೆಯಲ್ಲಿ ಭಕ್ಷೀಸು ಪಡೆದುಕೊಳ್ಳುವುದರಿಂದಾಗಿ ಮುಂದಿನ ಹಾಡಿಗೆ ವಿಳಂಬವಾಗುತ್ತಿತ್ತು. ಅದಕ್ಕಾಗಿ ‘ಮನ್ನಿಸತಕ್ಕದ್ದು’ ಎಂದು ಹಾಡುಗಾರರು ಹೇಳುತ್ತಿರಬಹುದು.

ಅಷ್ಟರಲ್ಲಿ ಕುಡಿದ ಒಬ್ಬನು ಎದ್ದು ನಿಂತು, “ನೀವೆಲ್ಲಾ ಬಳಿ ಹಾಕೊಂಡಿರೇನ್ರಲೆ? ಆ ಹೆಣ ಮಗಳು ಹುಬಾ ಹುಬಾ ನಮಗ ಗಂಡಸೂರು ಉಪಯೋಗಿಲ್ಲ ಅಂದ್ರೂ ಸುಮ್ಮನ ಕುಂತಿರಲ್ಲಾ, ನಿನ್ನ (ಹರದೇಶಿ ಹಾಡುಗಾರನನ್ನು ತೋರಿಸುತ್ತಾ) ನಮ್ಮ ಸಲವಂದ ಕರಿಸೇತಪಾ. ಹಾಡು, ಆ ಲೌಡಿಗೆ… ತಿಳಿಸಿ ಹೇಳು” ಎಂದು ತೂರಾಡುತ್ತ ಹೇಳಿದನು. ಕೆಲವು ಗಂಡಸರು ಹೌದು, ಹೌದು ಎಂದರು. ಬಹಳ ಉಮೇದಿಯಿಂದ ಸ್ಟೇಜಿಗೆ ಬಂದ ವಿಲಾಸನು ಆಧುನಿಕ ಹೆಣ್ಣು ಮಕ್ಕಳ ಜೀವನ ಶೈಲಿಯನ್ನು ವ್ಯಂಗ್ಯಗೊಳಿಸಿ ಹಾಡತೊಡಗಿದನು. ತಲೆಯ ಮೇಲೆ ಸೆರಗು ಇಲ್ಲದ್ದನ್ನು, ವಯಸ್ಸಾದ ಹೆಣ್ಣಿನ ಆಧುನಿಕ ಅಲಂಕಾರವನ್ನು, ಅಡುಗೆ ಮಾಡದೆ ಹೊಟೇಲಿನಲ್ಲಿ ಉಣ್ಣುವುದನ್ನು, ಸಿನಿಮಾ, ನಾಟಕ ನೋಡುವುದನ್ನು, ಕುಂಕುಮದ ಬದಲಾಗಿ ಟಿಕಲಿ ಹಚ್ಚಿಕೊಳ್ಳುವುದನ್ನು ವ್ಯಂಗ್ಯವಾಡಿ ಕೊನೆಯಲ್ಲಿ

“ನಡೀರವ್ವ ನಿಮ್ಮ ಗಂಡನ ಸೇವಾದಲ್ಲಿ ಸ್ವಂತ ದುಡಿರಿ
ಶಿವನಾಮ ಎನ್ನುವ ಸೀರಿ ಉಡಿರೆವ್ವ
ಸೌಭಾಗ್ಯ ಎನ್ನುವ ಕುಂಕುಮ ಇಡರವ್ವ
ಪುತ್ರನ ಹಡಿರವ್ವ”

ಎಂದು ಹಾಡಿದನು. ಆಧುನಿಕ ಜಗತ್ತಿನ ಮಹಿಳೆಯರಿಗೂ ಬೋಧಿಸುವ ಶಕ್ತಿ ತನಗಿದೆ ಎನ್ನುವುದನ್ನು ನಿರೂಪಿಸುವ ಉಮೇದಿಯಲ್ಲಿ ಆತನಿದ್ದನು. ನಾವು ಬೋಧಿಸುವ ನೀತಿ ಕೇವಲ ಗ್ರಾಮೀಣರಿಗೆ ಮಾತ್ರ ಸಂಬಂಧಿಸಿದ್ದಲ್ಲ. ನಿಮ್ಮಂತಹ ನಗರದವರಿಗೂ ಬೋಧಿಸಬಲ್ಲೆವು ಎಂದು ತನ್ನ ಜಾಣ್ಮೆಯನ್ನು ನನ್ನೆದುರಿಗೆ ಅನಾವರಣಗೊಳಿಸುವ ಹುಮ್ಮಸ್ಸಿನಲ್ಲಿದ್ದನ. ಹಾಡಿನ ಕೊನೆಯಲ್ಲಿ “ಇಲ್ಲಿ ಯಾರೋ ಸಾಹೆಬ್ತೆರು ಕುಂತಾರ, ಅವ್ರಿಗಿ ನಮ್ಮ ಹಾಡ ಗಾಂವಗಡ ಅನಸಬಹುದು. ಅದಕ್ಕೆ ಪ್ಯಾಟಿ ಹಾಡಾ ಹಾಡೇನಿ” ಎಂದನು. ಸ್ಟೇಜ ಇಳಿಯುವ ಮುಂಚೆ ಬಾನಾಬಾಯಿಯತ್ತ ಕೈಮಾಡಿ “ಈಗ ಹಾಡಿದ್ದ ಹಾಡು ನಿನ್ನ ಮ್ಯಾಗಿಂದು. (ನನ್ನ ಕಡೆಗೆ ಬೆರಳು ಮಾಡಿ ತೋರಿಸುತ್ತ) ಅವ್ರು ಪ್ಯಾಟಿಯವ್ರು. ಅವ್ರ ಬಗ್ಗಿ ಮಾತಾಡಿಲ್ಲ. ತಲಿಮ್ಯಾಲ ಸೆರಗ ಇಲ್ದ ಹಾಡಿದ ನಿನ್ನಂತಹ ದಿಗಮಲ್ಲ ಹೆಂಗ್ಸನ ಬಗ್ಗಿನ ಹಾಡೆನಿ. ನೆಟ್ಟಗ ಐದು ನಿಮಿಷ ನಿಲ್ಲಾಕಾಗ್ಲಾರ‍್ದಂತ ಗಂಡನ್ನ ಇಟ್ಕೊಂಡು ಇಂಥಾ ಪ್ಯಾಶನ್ ಮಾಡ್ತಿಯಲ್ಲಾ? ಅದು ಏನ ಹೇಳ್ತೈತಿ? ಅವಾಚ್ಯ ಶಬ್ದ ಬೈಯ್ದು ಹಾಡೋದು ಹಾಡಕಿ ಅನುಸೂದಿಲ್ಲ” ಎನ್ನುತ್ತಾ ಬಾನಾ ಬಾಯಿಯನ್ನೇ ನೋಡುತ್ತ

“ಪದ ಹಾಡಿ ರೊಕ್ಕ ಕೇಳಬ್ಯಾಡ್ರಿ
ಯಮಲೋಕ ಅವರಿಗಿ ಕಾದೈತಿ”

ಎಂದು ಹಾಡಿ ಕೆಳಗಿಳಿದನು. ನನ್ನ ಪಕ್ಕದಲ್ಲಿಯೇ ಕುಳಿತ ಬಾನಾಬಾಯಿ ಏನೂ ಮಾತನಾಡಲಾಗದ ಅಸಹಾಯಕತೆಯಲ್ಲಿದ್ದಳು. ಮುಷ್ಠಿಯಲ್ಲಿ ಮಣ್ಣು ಎತ್ತಿ ವಿಲಾಸನಿಗೆ ಎಸೆಯುವಂತೆ ಕೈ ಮುಂದೆ ಮಾಡಿ, ಹಾಗೆ ಮಾಡಲಾಗದೆ ತಲೆ ಜಾಡಿಸಿ, ಅವುಡುಗಚ್ಚಿ ಕುಳಿತಳು. ಕಣ್ಣಂಚಿನಲ್ಲಿ ನೀರಿತ್ತು. ನಾನು ಆಕೆಯನ್ನು ಎಲ್ಲಿ ತಪ್ಪು ತಿಳಿದಿಕೊಂಡಿರುವೇನೋ ಎನ್ನುವ ಆತಂಕ ಆಕೆಯಲ್ಲಿತ್ತು. “ನಾಕ ಜನರೆದ್ರುಗೆ ನಿಂತ ಹಾಡ್ತೇವು ಅಂತ ಚಂದಂಗಾದ್ರ ಇಂಥಾ ಬಿಕನಾಶಿ ಗಂಡಸರು ಹೀಂಗಾಡ್ತಾವ” ಎಂದು ವಟಗುಟ್ಟಿದಳು. ಅವಳ ಕಣ್ಣೀರ ಜೊತೆ ಮೂಗು ಸೋರಲು ಪ್ರಾರಂಭಿಸಿತು. ಕಣ್ಣು ಮೂಗು ಒರೆಸಿಕೊಂಡಳು. “ಯಾಕೋ ಹಾಡಾಕ ಮನಸಬರವಲ್ತು” ಎಂದು ಕೂತಲ್ಲಯೇ ಚಡಪಡಿಸಿದಳು. ಏನು ಯೋಜನೆ ಬಂತೋ ಏನೋ ತಟ್ಟನೆ ಎದ್ದು ತನ್ನ ಮಕ್ಕಳಿಗೆ ಹಾಡುವ ಅವಕಾಶವನ್ನು ಕೇಳಿದಳು. ಹರದೇಶಿ-ನಾಗೇಶಿ ಹಾಡುಗಳನ್ನು ಕಲಿಯುವ ಹೊಸಬರಿಗೆ ಜಾತ್ರೆಗಳಲ್ಲಿ ಮೇಳಗಳ ಮಧ್ಯ ಹಾಡುವ ಅವಕಾಶವನ್ನು ಕಲ್ಪಿಸುತ್ತಾರೆ. ಬಾನಾಬಾಯಿಯ ಬೇಡಿಕೆಯನ್ನು ಕಾರ್ಯಕ್ರಮದ ಆಯೋಜಕರು ಒಪ್ಪಿದರು. ಬಾನಾಬಾಯಿಯ ಗಂಟಿಕ್ಕಿದ ಮುಖ ಸಡಿಲುಗೊಂಡಿರಲಿಲ್ಲ. ಎದುರು ಹಾಡುಗಾರನು ಆಕೆಯ ಹೆಣ್ತನವನ್ನು ಅಪಮಾನಿಸುತ್ತಿದ್ದನು. ಇದು ಆಕೆಯ ಮನಸ್ಸನ್ನು ಕದಡಿತ್ತು. ಅಪಮಾನದಿಂದ ಕದಡಿತ ಮನಸ್ಸು ಹಾಡಲು ನಿರಾಕರಿಸಿತು. ಹಾಡಲು ಮನಸ್ಸು ಅವಕಾಶ ನೀಡದಿದ್ದಾಗ ತನ್ನ ಹೆಣ್ಣುಮಕ್ಕಳಿಗೆ ವೇದಿಕೆ ಬಿಟ್ಟುಕೊಟ್ಟಳು. ಇಷ್ಟಾದರೂ ಆಕೆಯ ಮನಸ್ಸು ಶಾಂತಗೊಂಡಂತೆ ಕಾಣಲಿಲ್ಲ. ಎದ್ದು ಹೋದಳು.