“ಕೇಸರಾಳದೇವಿ ನಲ್ವತ್ತ ವರ್ಷದ ಹಿಂದ ನನ್ನ ಹಾಡ್ಕಿಗಿ ಮೆಚ್ಚಿ ಒಂದ ಸಾವಿರ ರೂಪಾಯಿ ಬಹುಮಾನಾ ಕೊಟ್ಟಿದ್ಲು. ನಾಕ ಎಕರೆ ಜಮೀನಾ ಗುತಗಿ ತಗೊಂಡ್ವಿ. ಅದಕ್ಕ ಎರಡ ವರ್ಷಾ ಕರಾರ ಮಾಡಿ ಎರಡ ಸಾವಿರ ರೂಪಾಯಿ ಹೊಲದ ಯಜಮಾನನಿಗೆ ಕೊಟ್ಟಿವಿ. ಹೊಲಾನ್ನ ಒಬ್ಬ ಒಳ್ಳೆಯ ರೈತನಿಗೆ ಲಾವಣಿ ಕೊಟ್ಟಿವಿ. ಬಿತ್ತೂದು, ಬೆಳೆಯೂದು, ಕಟಾವು ಮಾಡೂದು (ಬೆಳೆ ತೆಗೆಯುವುದು) ಎಲ್ಲಾದಕ್ಕೂ ರೊಕ್ಕ ನಾವs ಕೊಡ್ತಿದ್ವಿ. ನುಸ್ತಾ(ಕೇವಲ) ಅಂವಾ ಕೆಲಸ ಮಾಡ್ಕೊಂಡ ಹೋಗ್ಬೇಕು. ಬಂದ ಬೆಳ್ಯಾಗ ನಾಕಾಣಿ ಭಾಗ (೨೫%) ಅವನಿಗಿ; ಉಳಿದ ಬಾರಣಿ ಭಾಗ (೭೫%) ನಮಗ. ಅಂವಗ ನಾವೇನು ಮತ್ತ ಮ್ಯಾಲಿ ಬ್ಯಾರೆ ಕೂಲಿ ಕೊಡೂದಿಲ್ಲ. ಹೀಂಗ ಮಾಡಿ ಒಂದಿಷ್ಟು ರೊಕ್ಕ ಕೂಡಿಟ್ಟಿವಿ, ಹಾಡ್ಕ್ಯಾಗಿಂದು ಬಂದಿದ್ದರಾಗ ಒಂದಿಷ್ಟು ಕೂಡಿಟ್ಟಿದ್ವಿ. ಹೀಂಗ ರೊಕ್ಕಾ ಗ್ವಾಳೆಮಾಡಿ (ಕೂಡಿಹಾಕುವುದು) ಕಾಕಂಡಿಕ್ಯಾಗ ೧೮ ಎಕರಾ ಜಮೀನು ತಂಗೊಂಡ್ವಿ. ಹೊಲ್ದಾಗ ಬಂದಿದ್ದ ಲಾಭಾ ಹಾಡ್ಕ್ಯಾಗಿನ ಲಾಭಾ ಎಲ್ಲಾ ಸೇರ್ಸಿ ಬಬಲೇಶ್ವರ‍್ದಾಗೂ ಎಂಟ ಎಕರಾ ಜಮೀನ ತಗೊಂಡ್ವಿ. ಎರಡ ಮನಿ ಕಟ್ಟಿಸಕೊಂಡ್ವಿ. ವಯಸ್ಸಾಗಿಂದ ಹಾಡ್ಕಿ ನಿಂತ್ರೂ ಜೀವನಾ ನಡಿತೈತಿ” ಎಂದು ಬಬಲೇಶ್ವರದ ಬಂಗಾರೆವ್ವ ಹೇಳಿದರೆ, ಆಕೆಯ ಗೆಳೆಯ ರಾಮಣ್ಣನು ಹೇಳಿದ್ದು ಹೀಗೆ: “ಈಕಿಗಿ (ಬಂಗಾರವ್ವನಿಗೆ) ಹೊರಗಿನ ವ್ಯವಹಾರಾ ಗೊತ್ತಾಗುದಿಲ್ಲ್ರಿ. ಬಂದ ಭಕ್ಷೀಸಾ, ಹಾಡ್ಕಿ ರೊಕ್ಕಾ ಎಲ್ಲಾ ಕೂಡಿಟ್ಟ ತಲಿ (ಬುದ್ದಿ) ಓಡ್ಸಿ ಪಸ್ಟಿಗೆ ನಾಕ ಎಕರೆ ಜಮೀನಾ ಗುತ್ತಿಗಿ ಹಿಡಿದ್ಯಾ. ಆಮ್ಯಾಲಿತ್ತ ಕಾಖಂಡಿಕ್ಯಾಗ ಹದಿನೆಂಟ ಎಕರೆ ಜಮೀನಾ ತಗೊಂಡ್ನಿ. ಅದ್ನು ನನ್ನ ಹೆಸರ‍್ಲೆ ಮಾಡಿಕೊಂಡ್ಯಾ. ಆಮ್ಯಾಲಿ ಬಬಲೇಶ್ವರದಾಗ ಎಂಟ ಎಕ್ರಿ ಜಮೀನು ತಗೊಂಡ್ಯಾ. ಅದನ್ನ ಬಂಗಾರವ್ವನ ಹೆಸರ‍್ಲೆ ಮಾಡಿದ್ಯಾ. ಎರಡ ಮನಿ ಕಟ್ಟಿಸಿದ್ಯಾ. ಒಂದು ಮನಿ ಆಕಿ ಹೆಸರ‍್ಲೇ ಐತಿ, ಇನ್ನೊಂದು ಮನಿ ನನ್ನ ಹೆಸರಲ್ಲೇ ಐತಿ. ನ್ನನ ಹೆಸರಿನ ಹೊಲಾ ನನ್ನ ಅಣ್ಣ-ತಮ್ಮದೇರು ಉಣ್ಣಾಕತ್ತ್ಯಾರ. ಬಬಲೇಶ್ವರ‍್ದಾಗಿನ ಈಕಿನ ಹೊಲಾನ್ನ ಉಳಿಮಿ ಮಾಡ್ಕೋಂಡು ಹೊಂಟೇವಿ. ಎಂಟ ಎಕರೆದಾಗ ಇಪ್ಪತ್ತು-ಮೂವತ್ತು ಚೀಲ ಜ್ವಾಳ, ನಾಲ್ಕೈದು ಚೀಲ ಗೋದಿ, ಒಂದಿಷ್ಟ ಅಗಸಿ, ಕುಸುಬಿ, ಸೂರಪಾನಾ, ಕಡ್ಲಿ ಎಲ್ಲಾ ಬೆಳ್ಕೊತಿವಿ. ಅದರಾಗ ನಮಗೆಷ್ಟು ಬೇಕೋ ಅಷ್ಟ ಇಟಕೊಂಡು ಉಳಿದಿದ್ನ ಮಾರ‍್ತೀವಿ. ಭೂಮಿತಾಯಿ ದಿನದ ಖರ್ಚ ಕೊಡತಾಳು. ಹೊಟ್ಟಿ ತುಂಬಿಸ್ತಾಳು. ಹೆಚ್ಚಿಗೇನು ಬೇಕ್ಹೇಳ್ರಿ?”. ಕೆಲವೇ ಕೆಲವು ಹಾಡುಗಾರರು ಬಂದ ಉತ್ಪಾದನೆಯನ್ನು ಕೂಡಿಡುತ್ತ, ಕೂಡಿಟ್ಟ ಬಂಡವಾಳವನ್ನು ಗುತ್ತಿಗೆ ಹೊಲ ಪಡೆಯುವುದಕ್ಕೆ ಹೂಡುತ್ತಾರೆ. ಹೀಗೆ ಕೆಲವು ವರ್ಷಗಳವರೆಗೆ ಜಮೀನನ್ನು, ಗುತ್ತಿಗೆ ಹಿಡಿದು ರೈತನೊಬ್ಬನಿಗೆ ಲಾವಣಿ ನೀಡುತ್ತಾರೆ. ಹರದೇಶಿ-ನಾಗೇಶಿ ಹಾಡುಗಾರರು ವರ್ಷದ ಉದ್ದಕ್ಕೂ ಹಾಡಿಕೆಯಲ್ಲಿ ತೊಡಗಿಕೊಂಡಿರುತ್ತಾರೆ. ಹೀಗಾಗಿ ಅವರಿಗೆ ಹೊಲದ ಕೆಲಸವನ್ನು ನಿರ್ವಹಿಸಲು ಸಾಧ್ಯವಾಗುವುದಿಲ್ಲ. ಅದಕ್ಕಾಗಿ ಅವರು ಭೂಮಿ ಇಲ್ಲದ ರೈತನ ಮೊರೆ ಹೋಗಿ, ಉಳುಮೆ ಮಾಡಿಸುತ್ತಾರೆ. ಇಂತಹ ಹಾಡುಗಾರರು ಏಕ ಕಾಲದಲ್ಲಿ ಎರಡು ನೆಲೆಗಳಲ್ಲಿ ಉತ್ಪಾದನೆಗೆ ತಡಗಿಸಿಕೊಂಡಿರುತ್ತಾರೆ. ೧. ಕೃಷಿ ಉತ್ಪಾದನೆ ೨. ಹಾಡಿಕೆ ಉತ್ಪಾದನೆ. ಈ ಎರಡೂ ಉತ್ಪಾದನೆಯಿಂದ ಬಂದಂತಹ ಹಣವನ್ನು ಜೀವನ ಅಗತ್ಯಗಳಿಗೆ ಬಳಸಿಕೊಂಡು ಉಳಿದದ್ದನ್ನು ಕೂಡಿಟ್ಟು ಜಮೀನು ಖರೀದಿಸುತ್ತಾರೆ. ಹೀಗೆ ಗುತ್ತಿಗೆ ಹಿಡಿಯುವ ಹಂತದಿಂದ ಜಮೀನು ಖರೀದಿಸುವ ಹಂತಕ್ಕೆ ತಲುಪುವ ಅವರು, ಒಂದಿಷ್ಟು ಸ್ಥಿರಾಸ್ತಿಯನ್ನು ಮಾಡಿಕೊಂಡಿರುತ್ತಾರೆ. ಬಂಗಾರವ್ವ-ರಾಮಣ್ಣ ಮದುವೆಯಾಗದಿದ್ದರೂ ಜೋಡಿಯಾಗಿ ಬದುಕು ಹಂಚಿಕೊಂಡವರು. ಬಂಗಾರವ್ವ ದಪ್ಪು ಬಾರಿಸಿ ಹಾಡಿದರೆ, ರಾಮಣ್ಣ ಸೂರು (ತುಂತಣಿ) ನುಡಿಸುತ್ತಾನೆ. ಹರದೇಶಿ-ನಾಗೇಶಿ ಹಾಡಿಕೆ ದುಡಿಮೆಯಲ್ಲಿ ಹಿಮ್ಮೇಳದವರಿಗಿಂತ ಹಾಡುಗಾರರದ್ದೇ ಹೆಚ್ಚು ಶ್ರಮವಿರುತ್ತದೆ. ಭಕ್ಷೀಸು ಬರುವುದು ಕೂಡ ಹಾಡುಗಾರ ಜಾಣ್ಮೆ ಹಾಗೂ ಕಂಠವನ್ನು ಅವಲಂಬಿಸಿರುತ್ತದೆ. ಹೀಗೆ ನಾಗೇಶಿ ಹಾಡುವ ಬಂಗಾರವ್ವನ ಶ್ರಮ ರಾಮಣ್ಣನಿಗಿಂತ ಹೆಚ್ಚಿನದು. ಆದರೂ ಹಣ ಕೂಡಿ ಆಸ್ತಿಯಾಗಿ ಮಾರ್ಪಟ್ಟಾಗ ಅದರ ನಿರ್ವಹಣೆಯನ್ನು ರಾಮಣ್ಣನೇ ಮಾಡುತ್ತಾನೆ. ಕೂಡಿಟ್ಟ ಹಣದಲ್ಲಿ ಮೊದಲು ತನ್ನ ಹೆಸರಿನಲ್ಲಿ ಜಮೀನು ಖರೀದಿಸುತ್ತಾನೆ. ನಂತರ ಬಂಗಾರವ್ವನ ಹೆಸರಿನಲ್ಲಿ ಖರೀದಿಸುತ್ತಾನೆ. ಹೀಗೆ ಖರೀದಿಸಿದ ಜಮೀನಿನಲ್ಲಿ ರಾಮಣ್ಣನ ಹೆಸರಿನಲ್ಲಿ ಹೆಚ್ಚಿದೆ; ಬಂಗಾರವ್ವನದು ಕಡಿಮೆ ಇದೆ. ನಿನ್ನ ಹೆಸರಿನಲ್ಲಿಯೇ ಯಾಕೆ ಹೆಚ್ಚು ಜಮೀನು ಖರೀದಿಸಿದೆ ಎಂದು ಕೇಳಿದ್ದಕ್ಕೆ ರಾಮಣ್ಣ ಉತ್ತರಿಸಿದ್ದು ಹೀಗೆ “ಲೋಕಾರೂಢಿ ಐತಲ್ಲವ್ವಾ. ನಾನು ಗಂಡ್ಸಾಗಿ ನನ್ನ ಹೆಸರಿನ್ಯಾಗ ಕಮ್ಮಿ ಜಮೀನಾ ಕೊಂಡಕೊಂಡ್ರ, ಜನ ಏನ ಅಂತೈತಿ? ರಾಮಣ್ಣ ಬಂಗಾರವ್ವನ ಕೈಯಾಗಿನ ಗೊಂಬಿ ಆಗ್ಯಾನ ಅಂತಾರ. ಗಂಡ್ಸಾಗಿ ನಾ ನನ್ನ ಕಿಮ್ಮತ್ತನ್ನ ಉಳಿಸಕ್‌ಒಬೇಕಂದ್ರ ನನ್ನ ಹೆಸರ‍್ಲೆ ಹೆಚ್ಚ ಆಸ್ತಿ ಇಟಗೊಬೇಕಾಗ್ತೈತಿ. ಇರ‍್ಲಾಕಂದ್ರ ಗಂಡ್ಸಾಗಿ ನನ್ನ ಕಿಮ್ಮತ್ತ ಹ್ಯಾಂಗ ಉಳಿತೈತಿ ಹೇಳ್ರಿ? ಅದಕ್ಕ ನನ್ನ ಹೆಸರ‍್ಲೆ ಜಾಸ್ತಿ ಮಾಡಕೊಂಡ್ಯಾ. ಅಕಿ ಹೆಸರ‍್ಲೆ ಕಡಿಮಿ ಮಾಡಿದ್ಯಾ. ಲೋಕಾರೂಢಿ ಬಿಟ್ಟ ನಡಿಯಾಕಾಗುತ್ತಾ?” ಎನ್ನುವುದು ರಾಮಣ್ಣನ ನಿಲುವು. ಲೋಕಾರೂಢಿಯಲ್ಲಿ ಇರುವಂತೆ ಇವರಲ್ಲಿಯೂ ಲಿಂಗ ಶ್ರೇಣೀಕರಣಕ್ಕೆ ಅನುಗುಣವಾಗಿಯೇ ಆಸ್ತಿ ಪರಿಕಲ್ಪನೆಯು ಬೆಳೆದು ಬಂದಿದೆ. ಮದುವೆಯ ಚೌಕಟ್ಟಿನಲ್ಲಿ ಬರುವ ಕುಟುಂಬಗಳಲ್ಲಿ ಆಸ್ತಿಯನ್ನು ಮಹಿಳೆಯರು ಮಗಳಾಗಿ ಇಲ್ಲವೆ ಹೆಂಡತಿಯಾಗಿ ಪಡೆಯುವುದೇ ಇಲ್ಲ. ದೇವದಾಸಿ ಯಂತಹ ಪದ್ಧತಿಗಳಿಗೆ ಒಳಗಾಗಿರುವ ಮಹಿಳೆಯ ತಾಯಂದಿರು ಮದುವೆಯಾಗಿದ್ದರೆ, ತಂದೆಯೇ ಕುಟುಂಬದ ಯಜಮಾನನಾಗಿ ಗುರುತಿಸಿಕೊಳ್ಳುತ್ತಾನೆ. ಹೀಗಾಗಿ ಇಂತಹ ಕುಟುಂಬಗಳಲ್ಲಿನ ಮಹಿಳೆಯರು ಜೋಗತಿಯರಾಗಿದ್ದರೆ, ಬಸವಿಯಾಗಿದ್ದಾರೆ ಅವರ ದುಡಿಮೆಯು ತಂದೆ ಆಸ್ತಿಯಲ್ಲಿ ಸೇರಿಕೊಳ್ಳುತ್ತದೆ. ಹುಲಿಯಾಳದ ರತ್ನವ್ವನ ಮಾತುಗಳನ್ನು ಗಮನಿಸಬೇಕು: “ಅವ್ವ ಮದಿವಿ ಆಗ್ಯಾಳ. ಹೀಂಗಾಗಿ ಅಪ್ಪಾ ಅವ್ವಾ ಇಬ್ರೂ ಸೇರಿ ಮನಿ ಹೊಲಾ, ಮನಿ, ಪ್ಲಾಟಾ ಎಲ್ಲಾನೂ ಅಣ್ಣಗೊಳ (ಅಣ್ಣಂದಿರ) ಹೆಸರ್ನ್ಯಾಗ ಮಾಡ್ಯಾರ. ಒಂದು ವರ್ಷತನಾ ಸರಕಾರಿ ಹಾಡಿಕೆ ಮಾಡಿದ್ದಕ್ಕ ಜಗ್ಗ ರೊಕ್ಕಾ ತಂದಿದ್ನಿ. ಅದರ್ಯಾಗ ತಂಗಿದೇರ್ದು, ಅಣ್ಣದೇರ್ದು ಮದ್ವಿಮಾಡಿದ್ರು. ಹೊಲ ತಗೊಂಡ್ರು, ಮನಿ ತಗೊಂಡ್ರು. ಆದ್ರ ಯಾವ್ದೊ ನನ್ನ ಹೆಸರಿಗಿ ಮಾಡ್ಲಿಲ್ಲ. ಎಲ್ಲಾ ಅಣ್ಣಗೊಳ ಹೆಸರಿಗೆ ಮಾಡಿದ್ರು. ಜಾತಿ ಹಾಡಿಕೆ ಮಾಡ್ತಿನಲ್ಲಾ, ಅದರ ರೊಕ್ಕಾನೂ ಅವ್ರ ಇಟಕೊಳ್ಳ್ಯಾಕತ್ತ್ಯಾರ. ನನಗಂತ ಏನೂ ಇಲ್ಲ. ನಾ ಇನ್ನುs ಹರೇsಕಿ ಅದೇನಿ. ಹೊರಗ ಮನಿ ಮಾಡ್ಕೊಂಡ ಇರೂದು ಅಷ್ಟ ಸುರಕ್ಷಿತಾ ಅಲ್ಲ. ಇನ್ನು ಎರಡು ವರ್ಷದ್ದು, ನಾಕ ವರ್ಷದ್ದು ಎಳೆ (ಎಳೆಯ) ಮಕ್ಕಳದಾವ. ನಾ ಹಾಡಿಕೆಗಿ ಹೋದಾಗ ಅವ್ನ ಯಾರ ನೋಡ್ಕೋಬೇಕು? ನಮ್ಮವ್ವನ ಮನ್ಯಾಗ ಇದ್ದದ್ದಕ ರೇಷನ್ ಕಾರ್ಡೂ ಕೊಟ್ಟಿಲ್ಲ. ನಮ್ಮದು ಒಂದು ಜೀವನಾ? ಹಂಗs ನಡಕೊಂತ ಹೊಂಟೈತಿ” ಕೆಳ ಸಮುದಾಯಗಳಲ್ಲಿನ ಸಂಕೀರ್ಣ ಮೌಲ್ಯಗಳು ದೇವದಾಸಿಯಂತಹ ಮಹಿಳೆಯರನ್ನು ಆರ್ಥಿಕ ಇಕ್ಕಟ್ಟಿಗೆ ಸಿಲುಕಿಸುತ್ತದೆ. ಜೋಗತಿಯಾದವಳಿಗೆ, ಬಸವಿಯಾದವಳಿಗೆ ತಂದೆ ಇದ್ದರೆ, ಆಕೆ ದುಡಿಮೆಯು ತಂದೆಯ ಆಸ್ತಿಯೊಡನೆ ಮಿಳಿತವಾಗುತ್ತದೆ. ಜೋಗತಿ ಇಲ್ಲವೆ ಬಸವಿ ಯಾದವರ ತಾಯಂದಿರು ಮದುವೆಯಾಗದಿದ್ದರೆ, ಗಂಡು ಮಕ್ಕಳಿಲ್ಲದಿದ್ದರೆ, ಆಗ ತಾಯಿಯ ಆಸ್ತಿಯು ಮಗಳಿಗೆ ಸೇರುತ್ತದೆ. ಮಗಳೂ ಜೋಗತಿ ಇಲ್ಲವೆ ಬಸವಿ ಆದರೆ, ಆಕೆಗೆ ಗಂಡುಮಕ್ಕಳು ಹುಟ್ಟಿದರೆ ತಾಯಿಯ ಆಸ್ತಿಯಲ್ಲಿ ಅವರೂ ಹಕ್ಕುದಾರರಾಗುತ್ತಾರೆ. ತಾಯಿ ಮೂಲದಿಂದ ಗುರುತಿಸಿಕೊಳ್ಳುವ ಕುಟುಂಬಗಳಲ್ಲೂ ಮಹಿಳೆಯರಿಗೆ ಆಸ್ತಿ ಹಂಚಿಕೆಯಲ್ಲಿ ನ್ಯಾಯ ದೊರೆಯುತ್ತದೆಂದು ಹೇಳಲಾಗುವುದಿಲ್ಲ. ಪ್ರಾಚೀನ ಕಾಲದಲ್ಲಿ, ‘ಜೋಗತಿ’ಯಾದವಳು, ‘ಬಸವಿ’ಯಾದವಳು ಆಸ್ತಿಯನ್ನು ಹೊಂದಿದ್ದರೆ, ಅದು ಹೆಣ್ಣು ಮಕ್ಕಳಿಗೆ ವರ್ಗಾವಣೆಯಾಗುತ್ತಿದ್ದಿತೋ ಏನೋ! ನನ್ನ ತಿಳುವಳಿಕೆಯ ಪ್ರಕಾರ ಜೋಗತಿಯ ಆಸ್ತಿ ಹಕ್ಕಿಗೆ ಸಂಬಂಧಿಸಿದಂತೆ ಯಾವ ದಾಖಲೆಗಳು ದೊರೆತಿಲ್ಲ. ಮೊದಲೇ ತಳ ಸಮುದಾಯದವರು ಭೂಮಿ ಹಕ್ಕಿನಿಂದ ವಂಚಿತರಾದವರು. ಒಂದು ವೇಳೆ ಜಮೀನು, ಮನೆ ಇದ್ದರೆ ಅಲ್ಲಿಯೂ ಮಾತೃಮೂಲ ಪರಿಕಲ್ಪನೆಯನ್ನು ದಾಟಿ ಹಂಚಿಕೆ ನಡೆಯುತ್ತದೆ. ಜೋಗತಿಯರು ಇಲ್ಲವೆ ಬಸವಿಯರ ಶ್ರಮದ ಮೇಲೆ ಅವರ ಕುಟುಂಬಗಳಲ್ಲಿನ ಪುರುಷರು ಅಧಿಕಾರ ಸ್ಥಾಪಿಸುತ್ತಾರೆ. ಆ ಮೂಲಕವೇ ಆಸ್ತಿಯನ್ನು ತಮ್ಮ ಹೆಸರಿಗೆ ಮಾಡಿಕೊಳ್ಳುತ್ತಾರೆ.

ಚಿಕ್ಕ ವಯಸ್ಸಿನಲ್ಲಿಯೇ ತಂದೆ-ತಾಯಿಯನ್ನು ಕಳೆದುಕೊಂಡು ಬಂಗಾರವ್ವನದು ಭಿನ್ನ ಸಮಸ್ಯೆ. ತಂದೆಯ ಹೆಸರಿನಲ್ಲಿ ಯಾವುದೇ ಆಸ್ತಿ ಇರಲಿಲ್ಲ. ಜೊತೆಗೆ ಅಣ್ಣ-ತಮ್ಮಂದಿರೂ ಇರಲಿಲ್ಲ. ಆಕೆಗೆ ಮಕ್ಕಳೂ ಹುಟ್ಟಲಿಲ್ಲ. ಮಾವನೊಂದಿಗೆ ಬದುಕು ಹಂಚಿಕೊಂಡ ಆಕೆಗೆ, ಅಜ್ಜಿಯ ಸಾವಿನ ನಂತರ ಮಾವನನ್ನು ಹೊರತುಪಡಿಸಿದರೆ ಯಾರೂ ಇಲ್ಲ. ರಾಮಣ್ಣನನ್ನು ಮದುವೆಯಾಗದಿದ್ದರೂ ಹೆಂಡತಿಯಂತೆ ಬಾಳಿದ ಆಕೆ ರಾಮಣ್ಣನ ಎಲ್ಲ ನಿರ್ಧಾರಗಳನ್ನು ಒಪ್ಪಿಕೊಂಡಿದ್ದಾಳೆ. ಸತಿಯಾಗದಿದ್ದರೂ ಸತೀತ್ವವನ್ನು ಒಪ್ಪಿಕೊಂಡ ಆಕೆಯು ಪಿತೃಮೂಲ ಮೌಲ್ಯಗಳಿಗೆ ಅನುಗುಣವಾಗಿ ನಡೆದುಕೊಂಡವಳು. ಹೀಗೆ ನಡೆದುಕೊಳ್ಳದೇ ಬೇರೆ ಮಾರ್ಗ ಆಕೆಗೆ ಇರಲೇ ಇಲ್ಲ. ತನ್ನ ಕೇರಿಯಲ್ಲಿನ ರೇಣುಕೆಯ ಜೀವಂತ ಕಥೆ ಆಕೆಯ ಕಣ್ಣೆದುರಿಗಿತ್ತು. ತಾಯಿ-ತಂದೆಗೆ ಒಬ್ಬಳೇ ಮಗಳು, ರೇಣುಕೆ. ಮುಪ್ಪಿನಲ್ಲಿ ತಮ್ಮನ್ನು ನೋಡಲಿಕ್ಕಿರಲಿ ಎಂದೂ ಆಕೆಯನ್ನು ಎಲ್ಲಮ್ಮನಿಗೆ ಬಿಡಲಾಯಿತು. ತಾಯಿ-ತಂದೆಯರು ಜೀವಂತ ಇರುವತನಕ ಆಕೆ ಒಬ್ಬ ಗೆಳೆಯನೊಟ್ಟಿಗೆ ಇದ್ದಳು. ಆಕೆಯ ಇಪ್ಪತ್ತೈದನೆಯ ವಯಸ್ಸಿಗೆ ತಾಯಿ-ತಂದೆಯನ್ನು ಕಳೆದುಕೊಂಡಳು. ಅಕ್ಷರಶಃ ರೇಣುಕೆ ಅನಾಥವಾದಳು. ಹೊಲದಲ್ಲಿ ದುಡಿದು ಮನೆಗೆ ಬಂದರೆ ಸಾಕು, ಗಂಡಸರ ಕಾಟ ಪ್ರಾರಂಭವಾಗುತ್ತಿತ್ತು. ಆಕೆ ಬಾಗಿಲು ತೆರೆಯದಿದ್ದರೆ ಬಾಗಿಲು ಕಿತ್ತುಕೊಂಡು ಹೋಗುವ ಹಾಗೆ ಬಾಗಿಲನ್ನು ಬಾರಿಸುತ್ತಿದ್ದರು. ಅಕ್ಕಪಕ್ಕದವರು ಇಂತಹ ಗಂಡಸರನ್ನು ಪ್ರಶ್ನಿಸುತ್ತಿರಲಿಲ್ಲ. ಬಾಗಿಲು ತೆರೆದರೆ “ನನಗೇನು ಕಮ್ಮಿಯಾಗೈತಿ? ನಿನ್ನ ಗೆನಿಯಾ (ಗೆಳೆಯಾ) ಒಬ್ಬನs ಗಂಡ್ಸೇನು? ಬಾ ಬಾ” ಎಂದು ಅತ್ಯಾಚಾರ ನಡೆಸಿಯೇ ಹೋಗುತ್ತಿದ್ದರು. ಪುರುಷ ಕ್ರೌರ್ಯದೆದುರಿಗೆ ಅವಳ ಪ್ರತಿಭಟನೆ ಮಂಜುಗಡ್ಡೆಯಂತೆ ಕರಗಿ ಹೋಗುತ್ತಿತ್ತು. ಆಕೆ ಮನೆಯಲ್ಲಿದ್ದರೆ ಬರುವ ಗಂಡಸರಿಗೆ ಲೆಕ್ಕವಿಲ್ಲ. ಅವರು ಬರುತ್ತಾರೆ; ಅತ್ಯಾಚಾರ ನಡೆಸುತ್ತಾರೆ; ಹೋಗುತ್ತಾರೆ. ಉಡಿ ತುಂಬಿಸಿಕೊಂಡ ಗೆಳೆಯ ಮೌನ ವಹಿಸಿದ. ಅತ್ಯಾಚಾರವೆಸಗುತ್ತಿದ್ದವರು ಆಕೆಯ ದೇಹದ ಮೇಲೆ ಹಕ್ಕು ಚಲಾಯಿಸುತ್ತಿದ್ದರೆ ಹೊರತು ಹಣ ನೀಡುತ್ತಿರಲಿಲ್ಲ. ನಿತ್ಯ ನಡೆಯುವ ತನ್ನ ಮೈ ಮೇಲಿನ ಅತ್ಯಾಚಾರದಿಂದಾಗಿ ಆಕೆ ಕುಸಿದಿದ್ದಳು. ಬದುಕು ಸುಟ್ಟು ಕರಕಲಾಗಿತ್ತು. ಹೀಗಾಗಿ ಆಕೆಯಲ್ಲಿ ದುಡಿಯುವ ಚೈತನ್ಯವೂ ಬತ್ತಿ ಹೋಗಿತ್ತು. ನಿತ್ಯವೂ ಗಂಡಸರ ಕಾಮ ತೃಷೆಗೆ ಬಲಿಯಾಗುವ ರೇಣುಕೆಗೆ ತಾನು ಜೀವಂತವಾಗಿದ್ದೇನೆ ಎನ್ನುವುದೇ ಮರೆತುಹೋಗಿತ್ತು. ಅರೆ ಹುಚ್ಚಿಯಾಗಿ ಶೂನ್ಯದತ್ತ ದೃಷ್ಟಿ ನೆಟ್ಟು ಕೂಡುವ ಆಕೆ ಜೀವಂತ ಶವ. ಕಣ್ಣೆದುರಿಗಿನ ದುರಂತ ಕಥನದಿಂದ ಬಂಗಾರವ್ವ ತತ್ತರಿಸಿ ಹೋಗಿದ್ದಾಳೆ. ತನ್ನ ದುಡಿಮೆಯಿಂದ ರಾಮಣ್ಣ ತನ್ನ ಹೆಸರಿನಲ್ಲಿ ಆಸ್ತಿ ಮಾಡಿಕೊಂಡರೂ ಸ್ವ ರಕ್ಷಣೆಗಾಗಿ ಅದನ್ನು ಒಪ್ಪಿಕೊಂಡಿದ್ದಾಳೆ. ಹುಲಿಯಾಳದ ರತ್ನವ್ವ ಸ್ವರಕ್ಷಣೆಗಾಗಿ ಹಾಗೂ ತನ್ನ ಮಕ್ಕಳ ರಕ್ಷಣೆಗಾಗಿ ತಂದೆ-ತಾಯಂದಿರು ತನ್ನ ದುಡಿಮೆಯ ಮೇಲೆ ಒಡೆತನ ಸಾಧಿಸುವುದನ್ನು ಸಹಿಸಿಕೊಂಡಿದ್ದಾಳೆ. ತನ್ನ ದುಡಿಮೆ ಅಣ್ಣಂದಿರ ಹೆಸರಿನಲ್ಲಿ ಆಸ್ತಿಯಾಗುವುದರ ಬಗ್ಗೆ ಆಕೆಯ ಒಳಗೆ ನೋವಿತ್ತು; ವಿರೋಧವಿತ್ತು. ಈ ನೋವು, ವಿರೋಧವಾಗಿ ಮನೆಯಿಂದ ಹೊರಗೆ ಬಂದರೆ ‘ದೇವದಾಸಿ’ ಎನ್ನುವ ಕಾರಣಕ್ಕಾಗಿಯೇ ಎಲ್ಲರಿಂದಲೂ ಆಕೆ ನಿತ್ಯ ಅತ್ಯಾಚಾರಕ್ಕೊಳಗಾಗುವ ಅಪಾಯವಿತ್ತು. ಈ ಅಪಾಯದ ಅರಿವು, ಅಣ್ಣಂದಿರ ಹೆಸರಿನಲ್ಲಿಯೇ ಆಸ್ತಿ ಶೇಖರಣೆಗೊಳ್ಳುವುದನ್ನು ಪ್ರತಿಭಟಿಸದಂತೆ ತಡೆದಿತ್ತು. ಕಂಬಾಗಿ ಹನುಮವ್ವಳು ತನ್ನ ಯೌವನದ ಇಳಿಕೆಯ ಸಂದರ್ಭದಲ್ಲಿ ಸ್ವಂತದ ಮನೆ ಮಾಡಿಕೊಂಡಳು. ತವರು ಮನೆಯಿಂದ ಹೊರ ಬಂದ ನಂತರವೇ ಸ್ವಂತದ ಗೂಡು ಕಟ್ಟಿಕೊಂಡಿದ್ದಾಳೆ. ನಾಲ್ಕು ಎಕರೆ ನೀರಾವರಿ ಜಮೀನು ಖರೀದಿಸಿದ್ದಾಳೆ. ಸದಾ ವೈರಾಗ್ಯದಿಂದಲೇ ಮಾತನಾಡುವ ಗಣಿಯಾರದ ರೇಣುಕೆಯು ತಾನೇ ತನ್ನ ತಮ್ಮಂದಿರ ಹೆಸರಿನಲ್ಲಿ ಆಸ್ತಿ ಮಾಡಿದ್ದಾಳೆ ಬಹುತೇಕ ಹರದೇಶಿ-ನಾಗೇಶಿ ಕಲಾವಿದೆಯರು ಹರೆಯ ಕರಗುವವರೆಗೆ ತಂದೆ-ತಾಯಿ ಇಲ್ಲವೆ ಅಣ್ಣಂದಿರ ಆಶ್ರಯದಲ್ಲಿ ಇರಲು ಅಪೇಕ್ಷಿಸುತ್ತಾರೆ. ಹರೆಯ ಕರಗಿದ ನಂತರ ಸ್ವಂತದೊಂದು ಪುಟ್ಟ ಗೂಡನ್ನು ಕಟ್ಟಿಕೊಳ್ಳುವ ಕನಸನ್ನೇ ಕನವರಿಸಿದರು.

ಇವತ್ತು ಸೈಟ್ ಬೆಲೆ, ಜಮೀನಿನ ಬೆಲೆ ಗಗನಕ್ಕೇರಿದೆ. ಹೀಗೆ ಏರಿದ ಬೆಲೆ ಹಾಡಿಕೆ ಮಹಿಳೆಯರಿಗೆ ಸ್ಥಿರಾಸ್ತಿ ಹೊಂದುವ ಕನಸನ್ನು ಕಮರಿಸುತ್ತಿದೆ. ಹರದೇಶಿ-ನಾಗೇಶಿ ಪುರುಷ ಹಾಡುಗಾರರಿಗೆ ಮಹಿಳಾ ಹಾಡುಗಾರರ ಹಾಗೆ ಆಸ್ತಿ ಮಾಡಿಕೊಳ್ಳುವುದಕ್ಕೆ ಯಾವುದೇ ಇಕ್ಕಟ್ಟುಗಳು, ಸಮಸ್ಯೆಗಳು ಎದುರಾಗುವುದೇ ಇಲ್ಲ. ವ್ಯವಸ್ಥೇಯು ಅವರ ಪರವಾಗಿದೆ. ಅವರು ತಮಗೆ ಆಸ್ತಿ ಯಾಕೆ ಬೇಕು ಎನ್ನುವುದನ್ನು ನಿರೂಪಿಸಬೇಕಿಲ್ಲ. ಆಸ್ತಿ ಅಗತ್ಯತೆಯ ಕುರಿತು ಸಮರ್ಥಿಸಬೇಕಿಲ್ಲ. ಅವರೇ ರಕ್ಷಕರಾಗಿರುವದರಿಂದ ರಕ್ಷಣೆಗಾಗಿ ಯಾರನ್ನು ಅವಲಂಬಿಸಿಲ್ಲ. ಬಹುತೇಕ ಪುರುಷ ಹಾಡುಗಾರರು ಕುಟುಂಬದಲ್ಲಿ ಆಸ್ತಿಯಿದ್ದರೆ, ಸಾಮಾಜಿಕ ಹಕ್ಕಿನ ಪ್ರಕಾರ ಆಸ್ತಿ ಪಡೆದುಕೊಂಡಿದ್ದಾರೆ. ಜೊತೆಯಲ್ಲಿ ಹಾಡಿಕೆಯಿಂದಲೂ ಜಮೀನು ಖರೀದಿಸಿದ್ದಾರೆ; ಮನೆಮಾಡಿಕೊಂಡಿದ್ದಾರೆ. ಹಾಡಿಕೆಯಿಂದ ಬಂದ ಹಣದ ಮೇಲೆ ಒಡೆತನ ಹೊಂದಿರುವ ಇವರು ಅದರ ನಿರ್ವಹಣೆ ಹಾಗೂ ವಿತರಣೆಯಲ್ಲಿಯೂ ಹಕ್ಕು ಪಡೆದುಕೊಂಡಿದ್ದಾರೆ. ವ್ಯವಸ್ಥೆಯು ಮಹಿಳೆಯ ಪೂರಕವಾಗಿರದ ಕಾರಣ ಆಕೆ ತನಗೇಕೆ ಆಸ್ತಿ ಬೇಕು ಎನ್ನುವುದನ್ನು ನಿರೂಪಿಸಬೇಕಾಗುತ್ತದೆ; ಸಮರ್ಥಿಸಬೇಕಾಗುತ್ತದೆ. ತಾನೇ ದುಡಿದ ಹಣದ ಮೇಲೆ ಒಡೆತನವನ್ನು ಹೊಂದಲು, ಅದರ ನಿರ್ವಹಣೆ ಹಾಗೂ ವಿತರಣೆಯಲ್ಲಿ ಹಕ್ಕನ್ನು ಪಡೆದುಕೊಳ್ಳಲು ಹೋರಾಡಬೇಕಾಗುತ್ತದೆ.

ಚರಾಸ್ತಿ

ಚರಾಸ್ತಿ ಎಂದರೆ ಬಂಗಾರ, ಹಣ, ಪಾಲಸಿಗಳು, ಶೇರ್‌ಗಳು ಇವೆಲ್ಲ ಬರುತ್ತವೆ. ಹರದೇಶಿ-ನಾಗೇಶಿಯಂತಹ ಹಾಡುಗಾರರಿಗೆ ಪಾಲಸಿಗಳು, ಶೇರ್‌ಗಳು ಎನ್ನುವ ಪದಗಳು ಅಪರಿಚಿತವಾದವುಗಳು. ಬಂಗಾರ, ಹಣ ಅವರಲ್ಲಿರುವುದು ಬಹು ಅಪರೂಪ. ಪುರುಷ ಹಾಡುಗಾರರು ಹಾಗೂ ಹಿಮ್ಮೇಳದವರು ಚೈನು, ಉಂಗುರ ಧರಿಸಿದ್ದು ಕಂಡು ಬರಲೇ ಇಲ್ಲ. ಕೆಲವು ಪುರುಷ ಹಾಡುಗಾರರು ಕಿವಿಯಲ್ಲಿ ಸಣ್ಣ ರಿಂಗು ಧರಿಸಿದ್ದರು. ಬಹುತೇಕ ಮಹಿಳಾ ಹಾಡುಗಾರರು ಕೊರಳಲ್ಲಿ ಚೈನು, ಕೈಯಲ್ಲಿ ಉಂಗುರು ಹಾಕಿಕೊಂಡಿದ್ದರು. ಅವರು ಹಾಕಿಕೊಂಡ ಚೈನ್, ಉಂಗುರ ಹಾಡುಗಾರಿಕೆಗೆ ಮೆಚ್ಚಿ ಬಂದ ಬಹುಮಾನಗಳಾಗಿದ್ದುವೇ ಹೆಚ್ಚು. ಸ್ವತಃ ಚೈನ್ ಅವರೇ ಮಾಡಿಸಿಕೊಂಡಿದ್ದು ಕಡಿಮೆ. ಹರದೇಶಿ-ನಾಗೇಶಿ ಬಹುತೇಕ ಮಹಿಳಾ ಹಾಡುಗಾರರು ಸಾಮಾನ್ಯವಾಗಿ ತಲೆಯ ಮೇಲೆ ಸೆರಗು ಹೊದ್ದುಕೊಂಡರೂ ಕಿವಿಯೋಲೆ ಮತ್ತಿ ಕಿವಿಚೈನ್ ಕಾಣುವಂತೆ ಕಿವಿಯ ಹಿಂದಕ್ಕೆ ಸೆರಗು ಸರಿಸಿಕೊಂಡಿರುತ್ತಾರೆ. ಕಿವಿಯೋಲೆ, ಕಿವಿಚೈನ್ ಮತ್ತು ಬೋರಮಳಸರವನ್ನು ಮಹಿಳಾ ಹಾಡುಗರರೇ ಖರೀದಿಸಿರುತ್ತಾರೆ. ಈ ಚಿನ್ನದ ಒಡವೆಗಳನ್ನು ತಮ್ಮ ಹಾಡಿಕೆಯ ದುಡಿಮೆಯಿಂದಲೇ ಗಳಿಸಿರುತ್ತಾರೆ. ಹೀಗಾಗಿ ಈ ಒಡವೆಗಳ ಕುರಿತು ಅವರಿಗೆ ವಿಶೇಷ ಹೆಮ್ಮೆಯಿದೆ. ರಂಗದ ಮೇಲೆ ಕಲಾ ಪ್ರದರ್ಶನದ ಸಂದರ್ಭದಲ್ಲಿ ಮೈಮೇಲೆ ಬಂಗಾರ ಸ್ವಾಮಾನ ಇದ್ರ ಚಂದ ಎನ್ನುವುದು ಇವರ ಅಭಿಪ್ರಾಯ. ಒಡವೆಯನ್ನು ಇಷ್ಟ ಪಡುವುದಕ್ಕೆ ಕುತೂಲಹಕರವಾದ ಕೆಲವು ಕಾರಣಗಳನ್ನು ನೀಡಿದರು. “ನಮ್ಮ ಬಂಗಾರ ಸ್ವಾಮಾನಾ ನಮ್ಮ ಮೈ ಮ್ಯಾಲ ಇರ್ತಾವು. ನಾಕ ಮಂದಿ ಮುಂದ ಹಾಡಕಿ ಮಾಡೂದಕ ಚಂದಕ್ಕಿರಲಿ ಅಂತ ನಮ್ಮ ಮೈ ಮ್ಯಾಲಿನ ಬಂಗಾರ ಸ್ವಾಮಾನಕ್ಕ ಮನ್ಯಾನವರ್ಯಾರೂ ಕಣ್ಣ ಹಾಕೂದಿಲ್ಲ. ನಮಗ ಮನಿ-ಹೊಲಾ ಇರೂದು ಇಲ್ಲ. ಇದ್ದ್ರೂ ಅವು ನಮ್ಮ ಹೆಸರ‍್ನಾಗ ಇರೂದಿಲ್ಲ. ನಮ್ಮ ಹೆಸರ್ಗೆ ಇರೂವಂದ್ರ ನಮ್ಮ ಮೈ ಮ್ಯಾಲಿನ ಬಂಗಾರ ಸ್ವಾಮಾನ” ಎಂದು ಕುಳಲಿ ಎಲ್ಲವ್ವ ಹೇಳಿದರೆ, ಕಂಬಾಗಿ ಹನುಮವ್ವನು “ಹಾಡಿಕೆ ಸುರುವಾದಾಗಿಂದ ಇಪ್ಪತ್ತ ವರ್ಷತನಾ ನನ್ನ ದುಡುಕೀನ (ಸಂಗಳ) ನಮ್ಮವ್ವ-ಅಪ್ಪ, ಅಣ್ಣ-ತಮ್ಮದೇರು ತಗೋತಿದ್ರು. ಆವಾಗ ನಾ ದುಡಿದದ್ದು ನನ್ನ ಹತ್ರಾನೂ ಒಂದಿಷ್ಟು ಇರ್ಲಿ ಅಂತ ಆಸೆಯಿತ್ತು. ಹ್ಯಾಂಗ ಇಟ್ಕೊಬೇಕು? ನನ್ನ ದುಡಿಕ್ಯಾಗ್ಯ ಬೇಕಾದಷ್ಟು ಹೊಲಾ-ಮನಿ ಮಾಡಿದ್ರು. ಆದ್ರ ಅದಕ್ಕ ಹಕ್ಕದಾರ್ತಿ ನಾನಲ್ಲ. ಒಂದಿಷ್ಟು ನನ್ನ ಹೆಸರ‍್ನಾಗೂ ಇರ್ಲಿ ಅಂತ ನನ್ನ ದುಡಿಕ್ಯಾಗನ ಬಂಗಾರ ಸ್ವಾಮಾನ ಮಾಡಿಕೊಂಡ್ನಿ. ನೀನು ದುಡಿದು ಬರೇ ಅವ್ರಿಗೇ ಕೊಟ್ಟ್ರ ನಮ್ಮ ಗತಿಯೇನಬೆ ಅಂದ್ವು ಮಕ್ಕಳು. ಅದ್ಕ ಬ್ಯಾರೆ ಮನಿ ಮಾಡಿದ್ದ್ಯಾ. ಹೋಲಾನೂ ತಂಗೊಂಡ್ನಿ, ಮನೀನೂ ತಂಗೊಂಡ್ನಿ. ಹಾಡಕಿ ಹಕ್ಕಿಗಳು ನಾವು. ಹಾಡಕಿ ಎಲ್ಲಿರ್ತಾವು ಅಲ್ಲಿ ಹಾರಕೋಂತ ಹೋಗವ್ರು. ಮನಿಕಟ್ಟಿನೂ ಮನ್ಯಾಗ ಇರಾಕಾಗಲ್ಲ. ಹೊಲಾ ಇದ್ದ್ರು ಅದ್ರ ದೇಖರಕಿ ನೋಡಕೊಂತ ಯಜಮಾನ್ಕಿ ಮಾಡಾಕಾಗಲ್ಲ.. ಮಗಾನ ಎಲ್ಲಾ ನೋಡ್ಕೋತಾನು. ಏನರ ಹೇಳಾಕ ಹೋದ್ರ ನಿಂಗೇನು ತಿಳಿಯೂದಿಲ್ಲ ಸುಮ್ಮ್ನ ಕೊಡಬೆ ಅಂತಾನು. ಅವ್ರು ಬೆಳದಾರ ನೋಡ್ರಿ. ಹಕ್ಕ ಮಾಡಾಕ ಬರ‍್ಲಾರ‍್ದ ಆಸ್ತಿ ಅಂದ್ರ ಬಂಗಾರ ಸ್ವಾಮಾನಾ. ಯಾಕಂದ್ರ ಅವು ಯಾವಾಗ್ಲೂ ನನ್ನ ಮೈಮ್ಯಾಲ ಇರ್ತಾವು. ಎಷ್ಟು ಕಷ್ಟಾ ಪಟ್ಟ ದುಡಿದ್ರೂ ನಂದೂ ಅಂತ ಉಳಿಯೂದು ಅಂದ್ರ ಬಂಗಾರ ನೋಡ್ರಿ” ಎಂದು ಹೇಳಿದಳು. ಇಬ್ಬರು ವಕ್ತೃಗಳ ನಿರೂಪಣೆಗಳು ತಮ್ಮ ದುಡಿಮೆಯಿಂದ ಬಂದ ಹಣವನ್ನು ಆಸ್ತಿಯಾಗಿ ಪರಿವರ್ತಿಸಿಕೊಳ್ಳುವ, ಅದರ ಮೇಲೆ ಹಕ್ಕು ಉಳಿಸಿಕೊಳ್ಳುವ ತಂತ್ರದ ಭಾಗವಾಗಿಯೇ ನಿರೂಪಣೆಗೊಳ್ಳುತ್ತವೆ. ಪಿತೃ ಪ್ರಧಾನ ಕುಟುಂಬಗಳಲ್ಲಿ ಕುಟುಂಬದ ಆಸ್ತಿಯು ತಂದೆಯಿಂದ ಮಗನಿಗೆ ವರ್ಗಾವಣೆಯಾಗುತ್ತದೆ. ಅಲ್ಲಿ ಮಹಿಳೆಗೆ ಪ್ರವೇಶವೇ ಇಲ್ಲ. ಹಿಂದಿನ ಪ್ರಾಚೀನ ಉಲ್ಲೇಖನಗಳನ್ನು ಗಮನದಲ್ಲಿಟ್ಟುಕೊಂಡು ಹೇಳುವುದಾದರೆ ತವರಿನವರು ಕೊಟ್ಟ ಒಡವೆಗಳ ಮೇಲೆ ಮದುವೆಯಾದ ಮಹಿಳೆಯರು ಹಕ್ಕನ್ನು ಹೊಂದಿರುತ್ತಾರೆ. ಅದನ್ನು ಸ್ತ್ರೀ ಧನ ಎಂದು ಕರೆಯಲಾಗುತ್ತದೆ. ತಳ ಸಮುದಾಯ ದವರು ಆಸ್ತಿಯನ್ನು ಹೊಂದಿರುವುದು ಕಡಿಮೆ. ಯಾಕೆಂದರೆ ಮೇಲ್ಜಾತಿ, ಮೇಲ್ವರ್ಗಗಳ ಸೇವೆ ಮಾಡುವ ಅವರು ಸೇವೆ ಮಾಡಿಸಿಕೊಳ್ಳುವವರ ಆಸ್ತಿಯಾಗಿಯೇ ಪರಿಗಣಿಸಲ್ಪಡುತ್ತಾರೆ. ಸ್ವಾತಂತ್ರ್ಯ ಚಳುವಳಿಯಲ್ಲಿನ ದಲಿತರ ಹೋರಾಟಗಳು, ಸಮಾಜದಲ್ಲಿ ಅಲ್ಪ-ಸ್ವಲ್ಪ ಬದಲಾವಣೆಗಳನ್ನು ತಂದಿವೆ. ಉಳುವವನೆ ಒಡೆಯ ಕಾನೂನು ಜಮಿನುದಾರರ ಜಮೀನಿನಲ್ಲಿ ಜೀತಕ್ಕಿದ್ದ ದಲಿತರಿಗೆ ಆಸ್ತಿ ಹಕ್ಕನ್ನು ನೀಡಿತು. ಸಾಮಾನ್ಯವಾಗಿ ದಲಿತರನ್ನು ಮಾತೃಮೂಲ ನೆಲೆಯಿಂದಲೇ ಗ್ರಹಿಸಿ ಅಧ್ಯಯನಗಳು ನಡೆದಿವೆ. ಆದರೆ ಕೆಳ ಸಮುದಾಯಗಳಲ್ಲಿನ ಸಾಮಾಜಿಕ ವ್ಯವಸ್ಥೆ ಹಾಗೂ ಮೌಲ್ಯಗಳು ಅಧ್ಯಯನಕಾರರು ನಿರೂಪಿಸಿದಷ್ಟು ಸರಳವಾಗಿರುವುದಿಲ್ಲ. ಕೆಳ ಸಮುದಾಯಗಳಲ್ಲಿನ ಎಲ್ಲರನ್ನು ಮದುವೆಯ ಚೌಕಟ್ಟಿನ ಹೊರಗಿಟ್ಟು ಚರ್ಚಿಸಲಾಗುವುದಿಲ್ಲ. ಯಾಕೆಂದರೆ ಅವರಲ್ಲಿ ಮದುವೆಯಾಗುವ ಪದ್ಧತಿಯೂ ಇದೆ; ಹೆಣ್ಣು ಮಕ್ಕಳನ್ನು ದೇವರಿಗೆ ಬಿಡುವ ಪದ್ಧತಿಯೂ ಇದೆ. ಮೇಲ್ಜಾತಿ, ಮಧ್ಯಮ ಜಾತಿ, ಕೆಳ ಮಧ್ಯಮ ಜಾತಿಗಳು, ತಮ್ಮ ತಮ್ಮ ಜಾತಿಗನುಗುಣವಾಗಿ ಪಿತೃ ಪ್ರಧಾನ ಮೌಲ್ಯಗಳನ್ನು ಹೊಂದಿವೆ. ಹೀಗೆ ಜಾತಿಗನುಗುಣವಾಗಿ ಪಿತೃ ಪ್ರಧಾನ ಮೌಲ್ಯಗಳು ಭಿನ್ನವಾಗಿದ್ದರೂ ಎಲ್ಲ ಮೇಲ್ಜಾತಿಗಳು, ಮಧ್ಯಮ ಜಾತಿಗಳು ಹಾಗೂ ಕೆಳ ಮಧ್ಯಮ ಜಾತಿಗಳು ಪಿತೃ ಪ್ರಧಾನ ಮೌಲ್ಯಗಳ ಹಿನ್ನೆಲೆಯನ್ನೇ ಹೊಂದಿವೆ. ಪಿತೃಪ್ರಧಾನ ಕುಟುಂಬಳಿಗೆ ಖಚಿತವಾದ ಸಾಮಾನ್ಯ ರೂಪವೊಂದಿದೆ. ತಂದೆಯೇ ಕುಟುಂಬದ ಯಜಮಾನನಾಗಿರುತ್ತಾನೆ. ತಂದೆಯಿಂದ ಮಗನಿಗೆಮಾತ್ರ ಆಸ್ತಿ ವರ್ಗಾವಣೆಯಾಗುತ್ತದೆ. ಕುಟುಂಬ ನಿರ್ಧಾರಗಳೆಲ್ಲವನ್ನೂ ಪುರುಷನೇ ನಿರ್ಧರಿಸುತ್ತಾನೆ. ಹಾಗೂ ನಿರ್ಣಯಿಸುತ್ತಾನೆ. ಇದುವರೆಗಿನ ನಮ್ಮ ಅಧ್ಯಯನಗಳು ತಳ ಸಮುದಾಯಗಳಲ್ಲಿಮಹಿಳೆ ಪ್ರಮುಖ ಸ್ಥಾನವನ್ನು ಹೊಂದಿರುವಳು ಎಂದು ನಿರೂಪಿಸಿವೆ. ಆದರೆ ವಸ್ತುಸ್ಥಿತಿಹಾಗಿರಲಾರದು. ಇದರ ಪರಿಶೀಲನೆ ಅಗತ್ಯವಾದುದು. ಬಹುತೇಕ ತಳ ಸಮುದಾಯಗಳು ಆರಾಧಿಸುವ ದೈವಗಳು ಮಾತೃ ನೆಲೆಯ ಹಿನ್ನಲೆಯನ್ನು ಹೊಂದಿರುತ್ತವೆ. ಈ ಹಿನ್ನೆಲೆಯಲ್ಲಿ ಕೆಲವು ತಳ ಸಮುದಾಯಗಳಲ್ಲಿ ದೇವದಾಸಿ ಬಿಡುವ ಪದ್ಧತಿ ಇಂದಿಗೂ ಉಳಿದುಕೊಂಡು ಬಂದಿದೆ. ತಳ ಸಮುದಾಯದವರನ್ನು ಪುರುಷ ನಿಷ್ಠ ಮೌಲ್ಯಗಳೇ ಪ್ರಭಾವಿಸಿರುವುದರಿಂದ ಅವರು ಅನುಸರಿಸುವ ಮೌಲ್ಯಗಳೂ ಪುರುಷನಿಷ್ಠವಾಗಿರುತ್ತವೆ. ಹೀಗೆ ಅವರ ಆರಾಧನಾ ಪದ್ಧತಿಗಳು ಮಾತೃ ಮೂಲವಾಗಿದ್ದರೆ, ಆಚರಣಾ ಮೌಲ್ಯಗಳು ಪುರುಷ ನಿಷ್ಠವಾಗಿವೆ. ಈ ಕಾರಣಕ್ಕಾಗಿಯೇ ತಳ ಸಮುದಾಯಗಳಲ್ಲಿನ ಮಹಿಳೆಯರು ಅತಂತ್ರತೆಯಲ್ಲಿ, ಅಸುರಕ್ಷತೆಯಲ್ಲಿ ಬಳಲುತ್ತಿದ್ದಾರೆ. ‘ಜೋಗತಿ’ ಇಲ್ಲವೆ ಬಸವಿ ಬಿಟ್ಟ ಕುಟುಂಬಗಳು, ತಮ್ಮ ಮಗಳನ್ನು ಮಗನೆಂದು ಹೇಳುತ್ತವೆ. ಆಕೆ ಮನೆಯಲ್ಲಿ ಮಗನಂತೆ ಎಲ್ಲ ಅಧಿಕಾರವನ್ನು ಹೊಂದಿರುವವಳು ಎಂದು ಹೇಳುತ್ತವೆ. ಆಸ್ತಿಯಂತಹ ವಿಷಯ ಬಂದಾಗ ಅವುಗಳು ಮನೆಯ ಮಗನ ಪರವಾಗಿಯೇ ನಿಲ್ಲುತ್ತವೆ. ‘ಜೋಗತಿ’ ಇಲ್ಲವೆ ಬಸವಿ ಯಾದವಳ ಶ್ರಮವು, ಅವಳು ಹುಟ್ಟಿದ ಮನೆಯಲ್ಲಿನ ಅಪ್ಪನ ಇಲ್ಲವೆ ಅಣ್ಣ-ತಮ್ಮಂದಿರ ಆಸ್ತಿ ಶೇಖರಣೆಗೆ ಬಳಕೆಗೊಳ್ಳುತ್ತಿರುತ್ತದೆ. ಅಂದರೆ ಬಾಯಿಮಾತಿನಲ್ಲಿ ಆಕೆ ಮನೆಯ ಮಗ, ಮನೆಯ ಮಗನಿಗಿರುವ ಎಲ್ಲ ಅಧಿಕಾರಿಗಳೂ ಆಕೆಗಿವೆ. ‘ಜೋಗತಿ’ ಇಲ್ಲವೆ ‘ಬಸವಿ’ಯನ್ನು ಕೇಂದ್ರವಾಗಿಟ್ಟುಕೊಂಡು ಅವರು ಹೇಳುವ ಅಧಿಕಾರವು ಜವಾಬ್ದಾರಿ ಅನ್ನುವ ಅರ್ಥದ ನೆಲೆಯಲ್ಲಿಯೇ ಬಳಕೆಯಲ್ಲಿದೆ. ಇಂತಹ ಕುಟುಂಬಗಳಲ್ಲಿನ ಅಪ್ಪ ಇಲ್ಲವೆ ಗಂಡು ಮಕ್ಕಳ ಅಧಿಕಾರವು ಹಕ್ಕಿನ ನೆಲೆಯಲ್ಲಿ ಚಾಲ್ತಿಯಲ್ಲಿದೆ. ಒಂದೇ ಕುಟುಂಬದಲ್ಲಿ ‘ಅಧಿಕಾರ’ ಎನ್ನುವ ಪದವು ಜೋಗತಿ ಕೇಂದ್ರವಾಗಿರಿಸಿಕೊಂಡಾಗ ಜವಾಬ್ದಾರಿ ಎನ್ನುವ ಅರ್ಥವನ್ನು ಪಡೆದುಕೊಳ್ಳುತ್ತದೆ; ಪುರುಷರನ್ನು ಕೇಂದ್ರವಾಗಿರಿಸಿಕೊಂಡಾಗ ಹಕ್ಕು ಎನ್ನುವ ಅರ್ಥವನ್ನು ಪಡೆದುಕೊಳ್ಳುತ್ತದೆ; ಜೋಗತಿಯರ, ಬಸವಿಯರ ಶ್ರಮವನ್ನು ಬೆವರನ್ನು ನಿರ್ದಾಕ್ಷಿಣ್ಯವಾಗಿ ತಳ ಸಮುದಾಯಗಳು ಬಳಸಿಕೊಳ್ಳುತ್ತವೆ. ಅದು ಆಸ್ತಿಯಾದರೆ ಅದರ ಮೇಲೆ ಅಧಿಕಾರ ಸ್ಥಾಪಿಸುತ್ತವೆ. ಲೋಕಾರೂಢಿ ನೀತಿಗಳನ್ನು ಮುಂದಿಟ್ಟು ಆಸ್ತಿಯಲ್ಲಿನ ಆಕೆಯ ಹಕ್ಕನ್ನು ನಿರಾಕರಿಸುತ್ತವೆ.

ಮೇಲ್ಜಾತಿ, ಮಧ್ಯಮ ಜಾತಿ ಹಾಗೂ ಕೆಳಜಾತಿಗಳಲ್ಲಿನ ಕುಟುಂಬಗಳಲ್ಲಿ ಆಸ್ತಿ, ಅಧಿಕಾರದ ಕುರಿತಂತೆ ಖಚಿತ ಸ್ವರೂಪವಿದೆ. ವಂಶ ಪಾರಂಪರ್ಯದ ಹೆಸರಿನಲ್ಲಿ ತಂದೆಯಿಂದ ಮಗನಿಗೆ ಆಸ್ತಿ ವರ್ಗಾವಣೆಗೊಳ್ಳುತ್ತದೆ. ಮಗನು ಕುಟುಂಬದ ಸದಸ್ಯನಾಗಿ ಪರಿಗಣಿಸಲ್ಪಡುತ್ತಾನೆ. ಮಗಳನ್ನು ಕುಟುಂಬದಲ್ಲಿ ಅತಿಥಿಯಾಗಿ (ಗಂಡನ ಮನೆಗೆ ಹೋಗುವವಳು) ನಡೆಸಿ ಕೊಳ್ಳಲಾಗುತ್ತಿದೆ. ಇಂತಹ ಕುಟುಂಬಗಳಲ್ಲಿನ ಮೌಲ್ಯಗಳಿಗೂ, ಆಚರಣೆಗಳಿಗೂ ವ್ಯತ್ಯಾಸವಿರುವುದಿಲ್ಲ. ಯಾವುದು ಮೌಲ್ಯವಾಗಿರುತ್ತದೆಯೋ ಅದು ಆಚರಣೆಯಲ್ಲಿರುತ್ತದೆ. ಅಲ್ಲಿ ಅಧಿಕಾರ ಹಾಗೂ ಆಸ್ತಿ ಹಂಚಿಕೆಯ ವಿಷಯದಲ್ಲಿ ಯಾವುದೇ ಬಗೆಯ ದ್ವಂದ್ವಗಳಿಲ್ಲ. ಗಂಡನ ಮನೆಗೆ ಹೋಗುವಾಗ ಆಕೆಗೆ ಕೆಲವಷ್ಟೇ ಒಡವೆಗಳನ್ನು ಕೊಟ್ಟು ಕಳುಹಿಸುತ್ತಾರೆ. ಅಂದರೆ ಪಿತೃ ಪ್ರಧಾನ ಕುಟುಂಬಗಳಲ್ಲಿನ ಹಿಳೆಯರಿಗೆ ಸ್ಥಿರಾಸ್ತಿಯಲ್ಲಿ ಪಾಲು ದೊರೆಯದೇ ಇದ್ದರೂ ಚಿನ್ನ, ಹಣದಂತಹ ಚರಾಸ್ತಿಯು ದೊರೆಯುತ್ತದೆ. ಆಸ್ತಿ ಹಕ್ಕಿನ ವಿಷಯ ಪ್ರತ್ಯೇಕ ಚರ್ಚೆಯನ್ನೇ ಬಯಸುತ್ತದೆ. ಆಸ್ತಿ ಹಕ್ಕಿನ ಅಧ್ಯಯನ, ಈ ಕೃತಿಯ ಆಶಯವಲ್ಲವಾದ್ದರಿಂದ ಈ ಅಧ್ಯಯನಕ್ಕೆ ಅಗತ್ಯವೆನಸಿದಷ್ಟು ಮಾತ್ರ ಚರ್ಚಿಸಲಾಗಿದೆ. ಪಿತೃಪ್ರಧಾನ ಕುಟುಂಬಗಳಲ್ಲಿ ಹುಟ್ಟಿದ ಮಹಿಳೆಯರಿಗೆ ಸ್ಥಿರಾಸ್ತಿ ದೊರೆಯುವುದಿಲ್ಲ. ಎನ್ನವುದು ಖಚಿತವಿದೆ. ಹಣ, ಒಡವೆಯಂತಹ ಚರಾಸ್ತಿಗಳು ದೊರೆಯುತ್ತವೆ. ಪಾತರದವರಾದರೆ, ಸ್ಥಿರಾಸ್ತಿ ಹಾಗೂ ಚರಾಸ್ತಿಯು ಪಾತರದವಳ ನೆಲೆಯಿಂದಲೇ ಗುರುತಿಸಲಾಗುತ್ತದೆ. ದೇವಸ್ಥಾನದ ದೇವರ ಹೆಸರಿನಲ್ಲಿದ್ದ ಜಮೀನು ದೇವರ ಸೇವೆ ಮಾಡುತ್ತಿದ್ದವರ ವೃತ್ತಿಗಳ ಹೆಸರಿನಲ್ಲಿ ಅವರ ಸೇವಾ ಶ್ರೇಣೀಕರಣಕ್ಕೆ ಅನುಗುಣವಾಗಿ ವಿಂಗಡನೆಗೊಂಡಿತ್ತು. ಈ ಹಿನ್ನೆಲೆಯಲ್ಲಿ ಪಾತರದವರಿಗೂ ಜಮೀನು ಇರುತ್ತಿತ್ತು. ಸೇವೆ ಮಾಡುತ್ತಿದ್ದ ಪಾತರದವಳು ತಾನು ಉಳುಮೆ ಮಾಡುತ್ತಿದ್ದ ದೇವಸ್ಥಾನದ ಜಮೀನಿನಲ್ಲಿ ತನ್ನ ಹಕ್ಕು ಉಳಿಸಿಕೊಳ್ಳಬೇಕಾದರೆ, ತನ್ನ ವೃತ್ತಿಯ ನಂತರ ತನ್ನ ಮಗಳನ್ನು ದೇವರ ಸೇವೆಗೆ ಮೀಸಲಿರಿಸಬೇಕಾಗುತ್ತದೆ. ಹೀಗೆ ಜಮೀನಿನ ಮೇಲೆ ಉಳುಮೆಯ ಹಕ್ಕು ಉಳಿಸಿಕೊಳ್ಳಲು ಪಾತರದ ಕುಟುಂಬಗಳಲ್ಲಿ ಹೆಣ್ಣು ಮಕ್ಕಳನ್ನು ನಿರಂತರವಾಗಿ ದೇವರ ಸೇವೆಗೆ ಮೀಸಲಿಡಲಾಗುತ್ತಿತ್ತು. ಹೀಗಾಗಿಯೇ ಏನೋ ಪಾತರದವಳು ತನಗೆ ಮಗಳಾಗದಿದ್ದರೆ, ಮಗಳನ್ನು ದತ್ತು ತೆಗೆದುಕೊಳ್ಳುತ್ತಿದ್ದಳು. ಉಳುವವನೇ ಒಡೆಯ ಎನ್ನುವ ಕಾಯ್ದೆ ಜಾರಿಗೆ ಬಂದ ನಂತರ ಇವರ ಸೇವೆಗೆಂದು ಮೀಸಲಿದ್ದ ದೇವರ ಹೆಸರಿನಲ್ಲಿದ್ದ ಜಮೀನು, ಮನೆಗಳು ಇವರ ಹೆಸರಿಗೆ ಬಂದವು. ಹೀಗೆ ಪಾತರದವರಲ್ಲಿ ಮಾತ್ರ ಆಸ್ತಿ ಪಾತರದವಳ ಹೆಸರಿನಲ್ಲಿದೆ. ಪಾತರದ ಕುಟುಂಬದಲ್ಲಿ ಮಗಳು ಪಾತರದವಳಾಗದಿದ್ದರೆ ಆಕೆಗೆ ಆಸ್ತಿ ಇಲ್ಲ. ಈಗ ಈ ಕುಟುಂಬಗಳೂ ಪಿತೃ ಪ್ರಧಾನ ಮೌಲ್ಯಗಳನ್ನು ಅಳವಡಿಸಿಕೊಂಡಿವೆ.

ಆದರೆ ‘ಜೋಗತಿ’ಯವರಿಗೆ, ‘ಬಸವಿ’ಯರಿಗೆ ಪಾತರದವರ ಹಾಗೆ ದೇವಸ್ಥಾನದಿಂದಲೂ ಆಸ್ತಿ ಹಂಚಿಕೆಯಾಗಿಲ್ಲ. ಪಿತೃ ಪ್ರಧಾನ ಕುಟುಂಬಗಳಲ್ಲಿನ ಮಹಿಳೆಯರ ಹಾಗೆ ಹುಟ್ಟಿದ ಮನೆಯಿಂದ ಚರಾಸ್ತಿಯನ್ನೂ ಪಡೆದುಕೊಂಡಿಲ್ಲ. ಮದುವೆಯ ಚೌಕಟ್ಟಿನೊಳಗೆ ಬರುವ ಮಹಿಳೆಯರಿಗಿಂತಲೂ, ಪಾತರದವರಿಗಿಂತಲೂ, ಭಿನ್ನವಾದ ಸಮಸ್ಯೆಗಳನ್ನು ಈ ಮಹಿಳಾ ಹಾಡುಗಾರರು ಎದುರಿಸುತ್ತಿದ್ದಾರೆ. ಈ ಮಹಿಳಾ ಹಾಡುಗಾರರು ದುಡಿದೂ ಬಡವರು. ತಮ್ಮ ದುಡಿಮೆಯಿಂದ ಆದಾಯದ ಮೇಲೆ ಹಕ್ಕು ಉಳಿಸಿಕೊಳ್ಳಲು ಕುಟುಂಬಗಳಲ್ಲಿನ ದ್ವಂದ್ವ ಮೌಲ್ಯಗಳು (ಮಾತೃಮೂಲ ಪದ್ದತಿಗಳ ಆರಾಧನೆ, ಪುರುಷ ನಿಷ್ಠ ಮೌಲ್ಯಗಳ ಆಚರಣೆ) ಅವಕಾಶ ನೀಡುತ್ತಿಲ್ಲ. ಹೀಗಾಗಿ ತಮ್ಮ ದುಡಿಮೆಯ ಒಂದಿಷ್ಟು ಭಾಗವನ್ನಾದರೂ ಅನುಭವಿಸುವ ಆಸೆಯಿಂದ ಒಡವೆ ಮಾಡಿಸಿಕೊಳ್ಳುತ್ತಾರೆ. ತಾನೂ ಸ್ಥಿತಿವಂತಳು ಎಂದು ತೋರಿಸಲು ದುಡಿಮೆಯಿಂದ ಬಂದ ಹಣವನ್ನು ಅನುಭವಿಸಲು ಆಕೆಗಿರುವ ದಾರಿಯೆಂದರೆ ಒಡವೆಗಳನ್ನು ಖರೀದಿಸುವುದು ಹಾಗೂ ಧರಿಸುವುದು.

ಕ್ಷೇತ್ರಕಾರ್ಯ ಅನುಭವದೊಂದಿಗೆ ಹರದೇಶಿ-ನಾಗೇಶಿ ಮಹಿಳಾ ಹಾಡುಗಾರರ ಒಡವೆಗಳು ನಿರೂಪಣೆಗೊಳ್ಳುವ ಬಗೆಯನ್ನು ಚರ್ಚಿಸ ಬಯಸುತ್ತೇನೆ. ನನ್ನ ಕಿವಿಯಲ್ಲಿ ಕಿವಿಯೋಲೆ ಸ್ವಲ್ಪ ತೂಕವಿದ್ದು, ಅವುಗಳನ್ನು ಕಿವಿ ಚೈನ್ ಇಲ್ಲದೆ ಹಾಕಿಕೊಂಡರೆ, ಜೋತು ಬೀಳುತ್ತಿದ್ದವು. ಹೀಗಾಗಿ ನಾನೂ ಕಿವಿಚೈನ್ ಧರಿಸಿದ್ದೆ. ಹಾಡುಗಾರರು ಮನೆಯಲ್ಲಿ ಇದ್ದಾರೋ ಇಲ್ಲವೋ ಎನ್ನುವುದನ್ನು ಸ್ಪಷ್ಟಪಡಿಸಿಕೊಳ್ಳಲು ನನ್ನ ಜೊತೆ ಬಂದಿದ್ದ ವಿದ್ಯಾರ್ಥಿ ಪಂಪಾಪತಿ, ಇಲ್ಲವೆ ಭೀಮೇಶ ಕೇರಿಯ ಒಳಗಡೆ ಹೋಗುತ್ತಿದ್ದರು. ಊರಾಚೆ ಹಾಗೂ ಕೇರಿಯ ಆರಂಭದಲ್ಲಿ ನಿಂತಿರುತ್ತಿದ್ದ ನನ್ನನ್ನು ನೋಡಿದ ಊರಿನ ಜನ ಹಾಗೂ ಕೇರಿಯ ಜನರು ನನ್ನ ಕಿವಿಚೈನ್ ನೋಡಿಯೇ “ಹಾಡಿಕೆಯಕಿ ಇರಬೇಕು” ಎಂದು ತಮ್ಮೊಳಗೆ ಮಾತನಾಡುತ್ತಿದ್ದರು. “ಏಯ್ ಕೊಳ್ಳಾಗ ತಾಳಿ ಐತಿ. ಹಾಡಿಕೆಯಕಿ ಅಲ್ಲಾಬಿಡು” ಎನ್ನುತ್ತಿದ್ದರು. ಇನ್ನು ಕೆಲವರು “ಹಾಡಿಕೆಗಿ ಬರ್ತಿದ್ರ ಕರಿರ‍್ಲೆ ಆಕಿನ್ನ. ನೋಡಾಕ ಬೇಷ (ಚೆನ್ನಾಗಿ) ಅದಾಳ” ಎನ್ನುತ್ತಿದ್ದರು. ಅವರ ಈ ಎಲ್ಲ ಮಾತುಗಳು ಕಾರಣವಾಗಿದ್ದುದು ನಾನು ಹಾಕಿಕೊಂಡ ಕಿವಿಚೈನ್. ನನ್ನ ಜೊತೆಯಲ್ಲಿ ಬಂದಿದ್ದ ವಿದ್ಯಾರ್ಥಿಗಳು ನಮ್ಮ ಮೇಡಂ ಬಂದಿದ್ದಾರೆ ಎಂದು ಪ್ರಚಾರ ಕೊಟ್ಟರೂ, ಅದನ್ನು ಜನ ಕೇಳಿಸಿಕೊಳ್ಳುತ್ತಿರಲಿಲ್ಲ. ನಾನು ಹಾಕಿಕೊಂಡ ಕಿವಿಚೈನ ಮೂಲಕ ನನ್ನನ್ನು ಅವರು ಗ್ರಹಿಸುತ್ತಿದ್ದರು. ಊರಿನವರು ನನ್ನನ್ನು ನೋಡುವ ನೋಟ, ಆಡುವ ಮಾತುಗಳು ನನ್ನನ್ನು ಆಘಾತಗೊಳಿಸಿದ್ದವು. ಕೇವಲ ಅಧ್ಯಯನ ಸಂದರ್ಭದಲ್ಲಿ ಎದುರಿಸಿದ ಅಪಮಾನಗಳು ನನ್ನನ್ನು ಈ ಪರಿ ಘಾಸಿಗೊಳಿಸಿರಬೇಕಾದರೆ, ಹಾಡಿಕೆಯನ್ನೇ ಬದುಕಾಗಿಸಿದವರು ಎದುರಿಸುವ ಅಪಮಾನಗಳು ನ್ನೆಷ್ಟು ಕ್ರೂರವಾಗಿರಬೇಕು? ಕ್ಷೇತ್ರಕಾರ್ಯದಿಂದ ಹಿಂದಿರುಗಿದ ನಾನು ಮೊದಲು ಮಾಡಿದ ಕೆಲಸ ಕಿವಿಚೈನನ್ನು ತೆಗಿದಿಟ್ಟಿದ್ದು. ಅವುಗಳನ್ನು ತೆಗೆದಿಟ್ಟಾಗ ನನಗೆ ಏನೋ ಒಂದು ಬಗೆಯ ನಿರಾಳತೆ. ಹರದೇಶಿ-ನಾಗೇಶಿ ಮಹಿಳಾ ಹಾಡುಗಾರರು ನನ್ನ ಕಿವಿ ಚೈನನ್ನು ನೋಡಿ ಖುಷಿಪಟ್ಟಿದ್ದರು. ‘ನಾವೂ ನಿಮ್ಮಂಗ ಕಿವಿಚೈನ ಹಾಕೋತೀವಿ. ಹೆಣ್ಣಮಕ್ಕಳಿಗಿ ಚಂದ ಕಾಣ್ತಾವ್ರಿ ಅವು. ಸಭಾದಾಗ ನಿಲ್ತಿವಿಯಲ್ಲಾ? ಏನಾರ ಬಂಗಾರ ಸಾಮಾನ ಮೈಮ್ಯಾಲ ಇದ್ರ ಚಂದ” ಎಂದ ಅನೇಕ ಮಹಿಳಾ ಹಾಡುಗಾರರು ನನ್ನೊಂದಿಗೆ ತಮ್ಮನ್ನು ಸಮೀಕರಿಸಿ ಕೊಂಡಿದ್ದರು. ಒಡವೆಗೆ ಸಂಬಂಧಿಸಿದಂತೆ, ಸಾಮಾಜಿಕತೆಗೆ ಸಂಬಂಧಿಸಿದಂತೆ ಮಾತನಾಡುವಾಗ ಮಹಿಳಾ ಹಾಡುಗಾರರು ನನ್ನನ್ನು ವ್ಯಕ್ತಿಗತವಾಗಿ ನೋಡುತ್ತಿರಲಿಲ್ಲ, ಬದಲಾಗಿ ನನ್ನನ್ನು ಮೇಲ್ ಅಂತಸ್ತಿನೊಂದಿಗೆ ಸಮೀಕರಿಸಿಕೊಂಡಿದ್ದರು. ನಾನು ಅವರಿಗೆ ಮೇಲ್ ಅಂತಸ್ತಿನ ಪ್ರತಿಮೆಯಾಗಿದ್ದರಿಂದ ನನ್ನೊಂದಿಗೆ ಸಮೀಕರಿಸಿಕೊಳ್ಳುತ್ತಿದ್ದ ಅವರು ತಾವೂ ಮೇಲ್ ಅಂತಸ್ತಿಗೆ ಏರಿದಂತೆ, ಸಂತೋಷ ಪಡುತ್ತಿದ್ದರು. ಊರಿನವರಿಗೆ ನಾನು ಕಿವಿಚೈನ್ ಹಾಕಿಕೊಂಡಿದ್ದ ಕಾರಣಕ್ಕೆ ಹಾಡಿಕೆಯವಳಾಗಿದ್ದೆ. ಕಿವಿ ಚೈನವೊಂದೇ ನನ್ನನ್ನು ಹಾಗೆ ಹಗುರ ದೃಷ್ಟಿಯಿಂದ ಕಾಣುವುದಕ್ಕೆ ಕಾರಣವಾಗಿರಲಿಕ್ಕಿಲ್ಲ. ನಾನು ಹೆಣ್ಣು ಎನ್ನುವ ಕಾರಣವೂ ಅವರ ತಾತ್ಸಾರಕ್ಕೆ ಕಾರಣವಾಗಿರಬೇಕು. ಕಿವಿಚೈನ ಕಾರಣಕ್ಕಾಗಿ ಹಾಡಿಕೆಯವಳು ಎನ್ನುವ ಅವರ ನಿಲುವ ಅವರೊಳಗಿನ ತಾತ್ಸಾರವನ್ನು ಮತ್ತಷ್ಟು ತೀವ್ರಗೊಳಿಸಿತ್ತು. ನಾನು ಮತ್ತು ಹಾಡಿಕೆಯವರು ಹಾಕಿಕೊಂಡದ್ದು ಒಂದೇ ಒಡವೆಯಾದರೂ ಊರಿನವರು ಹಾಗೂ ಹಾಡಿಕೆಯವರು ಇಬ್ಬರೂ ಅದನ್ನು ಅವರ ಸಾಮಾಜಿಕ ಹಿನ್ನೆಲೆಗಳ ಗ್ರಹಿಕೆಗಳಲ್ಲಿಯೇ ಅರ್ಥೈಸಿಕೊಂಡಿದ್ದರು.

ಹರದೇಶಿ-ನಾಗೇಶಿ ಮಹಿಳಾ ಹಾಡುಗಾರರ ಬಡತನೀಕರಣ

ಸರಕಾರದ ಹಾಡಿಕೆ ಹಾಗೂ ಖಾಸಗಿ ಹಾಡಿಕೆಗಳಲ್ಲಿ ಹಣ ಸಂಪಾದಿಸಿದ್ದೇನೆ ಎಂದು ಹೇಳುವ ದನ್ಯಾಳದ ದುರುಗವ್ವ ಸುಖವಾಗಿಲ್ಲ ಎನಿಸಿತು. ಭೂತದೊಂದಿಗೆ ವರ್ತಮಾನವನ್ನು ಮಿಳಿತಗೊಳಿಸುತ್ತ ದುರುಗವ್ವ ಕಷ್ಟ-ಸುಖಗಳನ್ನು ಬಿಚ್ಚಿಟ್ಟಿದ್ದು ಹೀಗೆ. “ನನ್ನ ಪಸ್ಟಿನ ಮಗಾರಿ ನನ್ನ ಹಾಡ್ಕಿಗಿ ತುಂತುಣಿ ಬಾರಿಸ್ತಿದ್ದಾ. ಮದವಿನೂ ಮಾಡಿದ್ದ್ಯಾ. ಯಾಕs ಅವನ ತಲಿಗಿ ಶಕಾ (ಹುಚ್ಚು) ಆಯ್ತು. ಹದಿನಾಲ್ಕು ವರ್ಷದ ಹಿಂದಿಂದ ಅವ್ನ ತಲಿ ಸರಿ ಉಳಿಲಿಲ್ಲರಿ. ಅವ್ನ ತೋರ‍್ಸಾಕಂತ ಪುಣಾಕ್ಕ ಕರಕೊಂಡು ಹೋಗಿದ್ದ್ಯಾ. ಬಸ್ಸಿನಾಗ ಅಕ್ಸಿಡಂಟ್ ಆಯ್ತು. ಮಗನ್ನ ತೋರ್ಸಿಕೊಂಡು ಹಾಡ್ಕಿಗೆ ಹೋಗ್ತಿನಿ ಅಂತ ಮನ್ಯಾಗ ಹೇಳಿದ್ದ್ಯಾ. ದೊಡ್ಡ ಆಕ್ಸಿಡೆಂಟ್ ಆಗಿ ಮೂರು ತಿಂಗಳಾ ಇದ್ದ್ಯಾ. ಬಾಳs ದಿವ್ಸ ಬರ‍್ಲಾರ‍್ದ ಕೂಡ್ಲೆ ಮನ್ಯಾಗ ಹಂಗಿಂದ್ಹಂಗ ಹಾಡ್ಕಿಗಿ ಹೋಗಿರ್ತಾಳ ಅಂತ ಅಂದಕೊಂಡಿದ್ರು. ಕೈಯಾ-ಕಾಲಾ ಮುರ್ದು ಸಾಯೋದು ಕೇಡೊಂದಾಗಿ ಮೂರು ತಿಂಗಳ ಮಟಾ ದವಾಕಾನ್ಯಾಗ ಬಿದ್ದಿದ್ದ್ಯಾ. ಮನ್ಯಾಗ ನನ್ನ ನೋಡಿದ ಕೂಡ್ಲೆ ನನಗ ಆಕ್ಸಿಡೆಂಟ್ ಆಗಿದ್ದು ತಿಳಿಯಿತು. ಮೂರು ತಿಂಗಳಮಟಾ ದವಾಕಾನ್ಯಾಗ ಇದ್ದದಕ ಕೈಯಾಗಿನ ರೊಕ್ಕಾ ಕಾಲಿ ಆಯ್ತು. ರೊಕ್ಕ ಕೊಳಿಮಿ (ಕಡಮಿ) ಬಿದ್ದದ್ದಕ್ಕ ಮೈಮ್ಯಾಲ ಇದ್ದೊಟು ಬಂಗಾರಾ ಮಾರಿ ಬಿಟ್ಟ್ಯಾ. ಹದಿನೈದು ವರ್ಷದಿಂದ ತಲಿಗಿ (ತಲೆಗೆ) ಶಕಾ ಅದ ಮಗನ್ನ ಶ್ಯಾನ್ಯಾ ಮಾಡಬೇಕಂತ ದುಡದೋಟು ರೊಕ್ಕಾ ಅವನಿಗs ಹಾಕೇನಿ. ಆದ್ರ ಹಿಡ್ದ ಶಕಾ ಬಿಟ್ಟಿಲ್ಲ. ಅಂವಗ ಹುಟ್ಟಿದ ಮಕ್ಕಳ್ನ ನೋಡ್ಕೋಬೇಕು ಅಂವಂಗೂ ಮೂರು ಮಕ್ಕಳ ಅದಾವ. ಹೆಣ್ತಿ ಈ ಮಗನ ಬಿಟ್ಟ ಹೋಗಿಬಿಟ್ಟ್ಯಾಲ. ನಾ ದಪ್ಪ ಬಿಟ್ಟ ಚೌಡ್ಕಿ ಹಾಡಾಕತ್ತಿಂದ ನನ್ನ ಕೊನಿ ಮಗ್ಳು ತಾಳಾ ಬಾರಿಸ್ತಿದ್ಲು. ಆಕಿನ ದೇವ್ರಿಗಿ ಬಿಟ್ಟಿತ್ತು. ಮೂರ‍್ನೆ ಕೂಸು ಹಡಿಯುವಾಗ ಸತ್ತ್ಲು. ಆಕಿನ ಮೂರ ಮಕ್ಕಳ್ನ ಸಾಕಬೇಕು. ಕೊನಿ ಮಗನಿಗಿ ಬಿ.ಎಡ್ ಓದ್ಸೇನಿ. ನನ್ನ ಸ್ವಂತ ಮನಿನ್ನ ಇಪ್ಪತ್ತು ಸಾವಿರ ರೂಪಾಯಿಗೆ ಮಾರಿ ಅಂವಗ ಫೀಸ್ ಕೊಟ್ಟ್ಯಾ. ಆದ್ರ ಅಂವ್ಹಂಗ ಕೆಲ್ಸ ಸಿಕ್ಕಿಲ್ಲ. ಕೆಲ್ಸ ಯಾವಾಗ ಸಿಕ್ತದೊ ಏನೋ ಅಂತ ಅವಂದೂ ಮದ್ವಿ ಮಾಡೇನಿ. ಅಂವಂಗೂ ಎರ‍್ಡ ಮಕ್ಳ ಅವಾ. ಇವರ‍್ನೆಲ್ಲ ನಾನs ಜ್ವಾಪಾನ ಮಾಡ್ಬೇಕು. ಇವರ್ಗೆಲ್ಲ ನಾನs ದುಡ್ಡ ತಂದ ಹಾಕಬೇಕು. ತಲಿ ಸರೀಗಿಲ್ದ ಮಗನ ಮಗಳು, ಮದ್ವಿ ವಯಸ್ಸಿಗಿ ಬಂದಾಳ. ಆಕಿದೂ ಮದ್ವಿ ಮಾಡಬೇಕು. ಹೀಂಗ ಸೊಸ್ತೆರ್ಗೆ, ಗಂಡ ಮಕ್ಕಳಿಗೆ, ಮೊಮ್ಮಕ್ಳಿಗೆ ನಾನs ದುಡದ ತಂದ ಹಾಕಬೇಕು. ಅದಕ್ಕ ನಾನು ಅರವತ್ತ ವರ್ಷ ವಯಸ್ಸಾದ್ರೂ ಹಾಡ್ಕಿ ನಿಲ್ಲಿಸಿಲ್ಲ. ಹಾಡ್ಕಿಗಿ ಹೋಗ್ತೇನಂತ ನನ್ನ ಮೈಮ್ಯಾಲ ಚಂದನ್ನ ಬಟ್ಟಿ ಅದಾವು. ಇದು ಹೊರಗಿನ ಮಾತಾಯ್ತು. ಒಳಗಿನ ಮಾತಂದ್ರ ಬಾಳೆದಾಗ ನಾನು ಸತ್ತು ಬಾಳ ವರ್ಷ ಆಯ್ತು.” ಇದು ದನ್ಯಾಳ ದುರುಗವ್ವನ ಕಥನವಾದರೆ, ಮಕ್ಕಳಾಗದ ಜತ್ತದ ಭೀಮವ್ವನ ಕಥೆ ಇದಕ್ಕಿಂತ ಭಿನ್ನವಾಗಿದೆ.

“ಸಣ್ಣ ವಯದಾಗ (ವಯಸ್ಸಿನಲ್ಲಿ) ಅವ್ವಾ, ಅಪ್ಪನ ಕಳಕೊಂಡ್ನಿ, ಮನ್ಯಾಗ ನಾನs ದೊಡ್ಡೇಕಿ. ಹಾಡಿಕೆ ಕಲ್ತ್ಯಾ. ಹಾಡಿಕೆ ಮಾಡಕೊಂತ ಇಬ್ರ ತಮ್ಮದೇರು, ಮೂವಾರು ತಂಗ್ದೇರು ಬೆಳೆಸಿದ್ನಿ, ನಾನs ನಿಂತ ಅವ್ರ ಮದ್ವಿ ಮಾಡಿದ್ಯಾ. ಹೆಣ್ಮುಕ್ಕಳ್ದು ಮದ್ವಿ, ಮಾಡೋದು ಹೊಟ್ಲಾಗೋದು (ಬಸಿರು), ಹಡಿಯೂದು ಒಂದs… ಎರಡs ಹೇಳಿಕೊಂತ ಹೋದ್ರ ಮಂಗ್ಯಾನ ಬಾಳ ಬೆಳ್ದಂಗ ಬೆಳಿತಾವು. ನಾನs ದೊಡ್ಡಕಿ, ಹಾಡಿಕೆ ದುಡಕಿ ಮಾಡೇಕಿ. ಹೀಂಗಾಗಿ ಮನ್ಯಾಗ ಐದ ಪೈಸಾದಿಂದ ಹಿಡಕೊಂಡು ಐವತ್ತು ಸಾವಿರ ತನಾ ಖರ್ಚು ಬಂದ್ರೂ ನನ್ನ ಕೇಳ್ತಾರು. ನಮ್ಮನಿಗಿ ನಾನs ತಂದಿ ಇದ್ದಂಗ. ನಾನು ನಮ್ಮ ತಮ್ಮದೇರ್ನ, ತಂಗಿದೇರ್ನ ಅಷ್ಟs ನೋಡ್ಕೊಳುವಂಗಿಲ್ಲ. ಅವ್ರಿಗಿ ಹುಟ್ಟಿದ ಮಕ್ಕಳಾನೂ ನೋಡ್ಕೋಬೇಕು. ಅವಕ್ಕ ಏನಾರ ಬೇಕಾದ್ರ, ನನ್ನ ಸುತ್ತಾ ತಿರಗತಾವು. ನನಗಂತೂ ಮಕ್ಕಳಿಲ್ಲ. ಮನ್ಯಾಗ ಗಂಡಸರ‍್ರು ಹ್ಯಾಂಗ ಕಠಿಣಾಗಿರ್ತಾರೋ ಹಂಗs ನಮಗ ಇರಾಕಾಗೂದಿಲ್ಲ. ಈಗ ನೋಡು ತಮ್ಮಾ ಕಾಲ ಮುರ್ಕೊಂಡು ಬಿದ್ದಾನು, ಅವ್ನ ಖರ್ಚಾ ನೋಡ್ಕೋಬೇಕು. ತಂಗಿ ಮಗಳು ಹಡಿಯಾಕ ಬಂದಾಳು. ಎಲ್ಲಾರೂ ಬಂದ ನನ್ನ ಕೇಳ್ತಾರು. ಕಳ್ಳ ಚುರ‍್ರ ಅಂತದ. ಹಾಡಿಕೆಗಿ ಹೋಗಿ ರೊಕ್ಕಾ ತಂದ ಮನಿ ಸಮಸ್ಯಾ ನಾನ ಬಿಡ್ಸೊಕೊಂತೇನಿ. ಒಂದs ಎರಡಾ?, ಇಂತಾದ್ರಾಗ ರೊಕ್ಕಾ ಹ್ಯಾಂಗ ಉಳಿತಾವು, ಆಸ್ತಿ ಹ್ಯಾಂಗ ಮಾಡ್ಕೊಳಾಕಾಗತೈತಿ?” ಎಂದು ಜತ್ತದ ಭೀಮವ್ವ ನನ್ನನ್ನೆ ಪ್ರಶ್ನಿಸಿದಳು.

ಮದುವೆಯ ಚೌಕಟ್ಟಿಗೆ ಬರುವ ಮಹಿಳೆಯಾಗಿರಬಹುದು, ಮದುವೆಯ ಚೌಕಟ್ಟಿನ ಹೊರಗುಳಿಸಲ್ಪಟ್ಟ ಮಹಿಳೆಯಾಗಿರಬಹುದು-ಇವರು ಹಕ್ಕು ಹಾಗೂ ಅಧಿಕಾರದಿಂದ ವಂಚಿತರಾಗಿರುತ್ತಾರೆ. ಜೀವನದ ಕೊನೆ ಉಸಿರು ಇರುವವರೆಗೂ ಅವರ ಮೇಲೆ ಕುಟುಂಬ ಕರ್ತವ್ಯ ನಿರ್ವಹಿಸುವ ಜವಾಬ್ದಾರಿಯಿರುತ್ತದೆ. ಪುರುಷರಿಗೆ ಕರ್ತವ್ಯ, ಜವಾಬ್ದಾರಿ ಕಡಿಮೆ, ಆದರೆ ಅವರಿಗೆ ಜನ್ಮ ಜಾತವಾಗಿಯೇ ಹಕ್ಕು ಹಾಗೂ ಅಧಿಕಾರವು ದತ್ತವಾಗಿರುತ್ತದೆ. ಹೀಗಾಗಿ ಒಂದೇ ಕುಟುಂಬದಲ್ಲಿ ಹುಟ್ಟಿದ ಅಣ್ಣ-ತಮ್ಮಂದಿರು ಬೆಳೆದ ಮೇಲೆ ಕರ್ತವ್ಯಗಳಿಂದ, ಜವಾಬ್ದಾರಿಯಿಂದ ಜಾರಿಕೊಂಡು ಹಕ್ಕು ಹಾಗೂ ಅಧಿಕಾರದ ಕಡೆಗೆ ವಾಲುತ್ತಾರೆ. ಕುಟುಂಬದಲ್ಲಿನ ಮಹಿಳೆಯರ ಮೇಲೆ, ಮಕ್ಕಳ ಮೇಲೆ ಹಾಗೂ ಆಸ್ತಿಯಿದ್ದರೆ, ಅದರ ಮೇಲೆ ಹಕ್ಕು ಚಲಾಯಿಸುವ ಮೂಲಕ ಅಧಿಕಾರ ಸ್ಥಾಪಿಸುತ್ತಾರೆ. ಹಕ್ಕು ಹಾಗೂ ಅಧಿಕಾರದ ಕಾರಣಕ್ಕಾಗಿಯೇ ವಯಸ್ಸಿಗೆ ಬಂದ ಮೇಲೆ ತಂದೆಯ ಕುಟುಂಬದಲ್ಲಿಯೇ ಉಳಿಯುತ್ತಾರೆ. ಇಲ್ಲವೆ ಹುಟ್ಟಿ ಬೆಳೆದ ಕುಟುಂಬದಿಂದ ಹೊರಬಂದು, ತಮ್ಮ ಕುಟುಂಬವನ್ನು ಹೊಂದುತ್ತಾರೆ. ಹುಟ್ಟಿದ ಮನೆಯಲ್ಲಿಯೇ ಉಳಿದುಕೊಳ್ಳುವ ಇಲ್ಲವೆ ಹೊರಬರುವ ಎರಡೂ ಸ್ವಾತಂತ್ರ್ಯಗಳು ಪುರುಷನಿಗಿರುತ್ತದೆ. ಇದರಲ್ಲಿ ಯಾವುದೂ ಅವರಿಗೆ ಕಡ್ಡಾಯವಾಗಿರುವುದಿಲ್ಲ. ಹೀಗೆ ಕೂಡು ಕುಟುಂಬದ ಜವಾಬ್ದಾರಿಯಿಂದ, ಚಿಕ್ಕ ಕುಟುಂಬಕ್ಕೆ (ಗಂಡ-ಹೆಂಡತಿ ಮತ್ತು ಮಕ್ಕಳು) ಸ್ಥಿತ್ಯಂತರಗೊಂಡರೂ ಇವರು ತಮ್ಮ ಕುಟುಂಬದ ಮೇಲೆ ಹಾಗೂ ಮೂಲ ಕುಟುಂಬದ ಮೇಲೆ ಅಧಿಕಾರ ಹೊಂದಿರುತ್ತಾರೆ. ಇವರು ತಮ್ಮ ಕುಟುಂಬದ ಉತ್ಪಾದನೆಯ ಮೇಲೆ ಹಾಗೂ ಮೂಲ ಕುಟುಂಬದ ಉತ್ಪಾದನೆಯ ಮೇಲೆ ಹಕ್ಕು, ಅಧಿಕಾರ ಚಲಾಯಿಸುತ್ತಾರೆ. ಹೀಗೆ ಹಕ್ಕನ್ನು ಚಲಾಯಿಸುವ ಮೂಲಕವೇ ಅಧಿಕಾರವನ್ನು ಉಳಿಸಿಕೊಳ್ಳುತ್ತಾರೆ. ಈ ರೀತಿಯಾಗಿ ಪುರುಷರು ಎರಡೂ ಕುಟುಂಬಗಳಲ್ಲಿನ ಆಸ್ತಿ ಹಾಗೂ ಉತ್ಪಾದನೆಯ ಮೇಲೆ ಹಕ್ಕು ಹಾಗೂ ಅಧಿಕಾರವನ್ನು ಸ್ಥಾಪಿಸುತ್ತಾರೆ. ಆದರೆ ಜವಾಬ್ದಾರಿಯ ವಿಷಯ ಬಂದಾಗ ಕಣ್ಣಿಗೆ ಕಾಣುವ ತಮ್ಮ ಚಿಕ್ಕ ಕುಟುಂಬದ ಸಮಸ್ಯೆಗಳನ್ನು ಮುನ್ನೆಲೆಗೆ ತಂದು ತಾವು ನಿಭಾಯಿಸಬೇಕಾದ ಮೂಲ ಕುಟುಂಬದ ಜವಾಬ್ದಾರಿಗಳನ್ನು ಹಿನ್ನೆಲೆಗೆ ತಳ್ಳುತ್ತಾರೆ.

‘ದೇವದಾಸಿ’ ಸಮುದಾಯದ ಪುರುಷರು ಹಾಗೂ ‘ದೇವದಾಸಿ’ ಸಮುದಾಯಗಳಿಗೆ ಒಳಪಡದ ಸಮಾಜಗಳು ‘ದೇವದಾಸಿ’ ಮಹಿಳೆಯರನ್ನು ಇಬ್ಬಗೆಯ ಸ್ಥಿತಿಯಲ್ಲಿ ಇಟ್ಟಿವೆ. ಹುಟ್ಟಿದ ಮನೆಯಲ್ಲಿ ಕುಟುಂಬದ ಸದಸ್ಯರಾಗಿ ಪರಿಗಣಿಸಲ್ಪಡುವ ‘ದೇವದಾಸಿಯರು’ ಮದುವೆಯಾಗದ ಕಾರಣಕ್ಕಾಗಿ ಕುಟುಂಬ ರಹಿತವಾಗಿಯೇ ಗುರುತಿಸಲ್ಪಡುವಳು. ‘ದೇವದಾಸಿ’ ಸಮುದಾಯದವರು ಈ ಮಹಿಳೆಯರನ್ನು ದುಡಿಮೆಯ ಸಂದರ್ಭದಲ್ಲಿ ಮಾತ್ರ ಕುಟುಂಬದ ಸದಸ್ಯರನ್ನಾಗಿ ಪರಿಗಣಿಸುತ್ತಾರೆ. ಹಕ್ಕು ಹಾಗೂ ಅಧಿಕಾರದ ಪ್ರಶ್ನೆಗಳು ಎದುರಾದಾಗ ಈ ಮಹಿಳೆಯರ ಕುಟುಂಬದ ಸದಸ್ಯತ್ವವನ್ನು ನಿರಾಕರಿಸುತ್ತಾರೆ; ಹಾಗೂ ಅವರನ್ನು ಕುಟುಂಬ ರಹಿತವಾಗಿಯೇ ನೋಡುತ್ತಾರೆ.

‘ಜೋಗತಿ’ಯರಾದ, ‘ಬಸವಿ’ಯರಾದ ಹರದೇಶಿ-ನಾಗೇಶಿ ಹಾಡುಗಾರರನ್ನು, ಅವರ ಕುಟುಂಬದವರು ಗಂಡು ಮಕ್ಕಳಂತೆ ಪರಿಗಣಿಸಿದ್ದರೂ, ಅವರನ್ನು ಹೆಣ್ಣುಮಕ್ಕಳಂತೆಯೇ ಸಾಮಾಜೀಕರಣಗೊಳಿಸಲಾಗಿರುತದೆ. ಹೀಗಾಗಿ ‘ಜೋಗತಿಯರು’, ‘ಬಸವಿಯರು’ ಕುಟುಂಬದ ಸದಸ್ಯರ ಮೇಲಾಗಲಿ, ಆಸ್ತಿಯಿದ್ದರೆ, ಆಸ್ತಿಯ ಮೇಲಾಗಲಿ, ಸ್ವತಃ ತಾವೇ ದುಡಿದು ಗಳಿಸಿದಹಣದ ಮೇಲಾಗಲಿ ಹಕ್ಕು ಹಾಗೂ ಅಧಿಕಾರ ಸ್ಥಾಪಿಸ ಬಯಸುವುದಿಲ್ಲ. ಒಂದು ವೇಳೆ ಹಕ್ಕು, ಅಧಿಕಾರ ಸ್ಥಾಪಿಸ ಬಯಸಿದರೂ ಆಕೆಯ ಕುಟುಂಬದೊಳಗಿನ ಪುರುಷರು ಅದಕ್ಕೆ ಅವಕಾಶ ಕಲ್ಪಿಸುವುದಿಲ್ಲ. ಕುಟುಂಬದಲ್ಲಿನ ಪುರುಷರ ಹಿಡಿತ ಮೀರಿಯೂ ಕುಟುಂಬದ ಮೇಲೆ ಹಾಗೂ ಆಸ್ತಿಯಿದ್ದರೆ ಆಸ್ತಿಯ ಮೇಲೆ, ತಮ್ಮ ಸಂಪಾದನೆಯ ಮೇಲೆ ಅಧಿಕಾರ ಸ್ಥಾಪಿಸಬಯಸಿದರೆ, ಕುಟುಂಬದಿಂದ ಹೊರ ಹಾಕಲ್ಪಡುತ್ತಾರೆ. ಕುಟುಂಬದ ಸದಸ್ಯರ ಕಾರಣದಿಂದಾಗಿಯೇ ಅವಳಿಗೆ ರಕ್ಷಣೆ ದೊರೆತಿರುತ್ತದೆ. ತನಗೆ ಬೇಕಾದ ಗೆಳೆಯನೊಂದಿಗೆ ಜೀವನವಿಡಿ ಬಾಳಲು ಸಾಧ್ಯವಾಗುತ್ತದೆ. ಇಲ್ಲದಿದ್ದರೆ ‘ದೇವದಾಸಿ’ ಎನ್ನುವ ಅವಳ ಸಾಮಾಜಿಕ ಹಿನ್ನೆಲೆಯೇ ಅವಳ ಮೇಲೆ ಅತ್ಯಾಚಾರ ನಡೆಯಲು ಪ್ರೋತ್ಸಾಹಿಸುತ್ತದೆ. ಈ ಕಾರಣಕ್ಕಾಗಿಯೇ ಆಸ್ತಿ ಬೇಕಿದ್ದರೂ, ತಮ್ಮ ಹಾಡಿಕೆ ಸಂಪಾದನೆಯ ಮೇಲೆ ತಮ್ಮ ಒಡೆತನ ಉಳಿಸಿಕೊಳ್ಳಲು ಪ್ರಯತ್ನಿಸುವುದಿಲ್ಲ. ಮೇಲಿನ ಎಲ್ಲ ವಿಶ್ಲೇಷಣೆಗಳನ್ನು ಗಮನಿಸಲಾಗಿ ಕೆಲವು ಸಂಗತಿಗಳು ಸ್ಪಷ್ಟಗೊಳ್ಳುತ್ತವೆ. ಆಸ್ತಿಗೆ, ಅಧಿಕಾರಕ್ಕೆ ಚಲನೆ ಎನ್ನುವುದು ಇರುವುದಿಲ್ಲ. ಕುಟುಂಬದೊಳಗಿನ ಸದಸ್ಯರೇ ಅದರೆಡೆಗೆ ಚಲಿಸುತ್ತಾರೆ. ಲಿಂಗ ಶ್ರೇಣೀಕರಣಕ್ಕನುಗುಣವಾಗಿ ರೂಪಗೊಂಡ ಮೌಲ್ಯಗಳೇ ಕುಟುಂಬದಲ್ಲಿನ ಸದಸ್ಯರಿಗೆ, ಹಕ್ಕು ಮತ್ತು ಅಧಿಕಾರದೆಡೆಗೆ ಚಲಿಸಲು ಶಕ್ತಿಯನ್ನು ಕೊಡುತ್ತದೆ; ನಂಬಿಕೆಯನ್ನು ನೀಡುತ್ತವೆ. ಅಂದರೆ ಹಕ್ಕು ಹಾಗೂ ಅಧಿಕಾರದಂತೆ, ಲಿಂಗ ಶ್ರೇಣೀಕರಣಕ್ಕೆ ಅನುಗುಣವಾಗಿರುವ ಮೌಲ್ಯಗಳನ್ನು ಪುರುಷ ಪ್ರಧಾನ ಸಮಾಜ ಸ್ಥಿರವಾಗಿರಿಸಲು ಬಯಸುತ್ತದೆ. ಸಾಮಾಜಿಕ ಮೌಲ್ಯಗಳಿಗನುಗುಣವಾಗಿಯೇ ಹಕ್ಕು ಮತ್ತು ಅಧಿಕಾರ ಬದಲಾಗದೇ ಅಂದರೆ ಚಲಿಸದೇ ಉಳಿದುಕೊಳ್ಳುತ್ತದೆ. ಮೌಲ್ಯಗಳು ತಮಗೆ ತಾವೇ ಸ್ಥಿರವಾಗುವುದಿಲ್ಲ. ಮೌಲ್ಯಗಳಿಂದ ಲಾಭ ಪಡೆದುಕೊಳ್ಳುವವರು ಅವುಗಳನ್ನು ಸ್ಥಿರಗೊಳಿಸುತ್ತಿರುತ್ತಾರೆ; ಅಧಿಕೃತಗೊಳಿಸುತ್ತಿರುತ್ತಾರೆ. ಹಕ್ಕು ಅಧಿಕಾರಗಳನ್ನು ಪುರುಷರೊಂದಿಗೆ ಸಮೀಕರಣಗೊಳಿಸಲಾಗಿದೆ. ಹೀಗಾಗಿ ಅವನು ಹಕ್ಕು ಮತ್ತು ಅಧಿಕಾರದೆಡೆಗೆ ಚಲಿಸಬೇಕಾಗಿಲ್ಲ. ಆದರೆ ಹಕ್ಕು ಮತ್ತು ಅಧಿಕಾರ ಹೊಂದುವುದಕ್ಕಾಗಿ ಮಹಿಳೆಯರು ಹಕ್ಕು ಇದ್ದಲ್ಲಿ, ಅಧಿಕಾರ ಇದ್ದಲ್ಲಿ ಚಲಿಸಬೇಕಾಗುತ್ತದೆ. ‘ಜೋಗತಿ’ ಇಲ್ಲವೆ ‘ಬಸವಿ’ ಹಿನ್ನೆಲೆ ಹೊಂದಿ ಹರದೇಶಿ-ನಾಗೇಶಿ ಮಹಿಳಾ ಹಾಡುಗಾರರು ಕೌಟುಂಬಿಕ ಜವಾಬ್ದಾರಿಯ ಸಂದರ್ಭದಲ್ಲಿ ಕುಟುಂಬದ ಸದಸ್ಯರಂತೆ ಪರಿಗಣಿಸಲ್ಪಡುತ್ತಾರೆ. ಆದರೆ ಅವರು ಕುಟುಂಬದ ಸದಸ್ಯರಾಗಿರುವುದಿಲ್ಲ. ಹಕ್ಕು, ಅಧಿಕಾರದ ಹಾಗೆ ಕುಟುಂಬದ ಸದಸ್ಯತ್ವ ಕೂಡ ಸ್ಥಿರವಾಗಿರುತ್ತದೆ. ಹೀಗೆ ಪುರುಷಕೇಂದ್ರಿತವಾಗಿರುವ ಸದಸ್ಯತ್ವ, ಆತನಿಗೆ ಅನುಕೂಲವಾಗುವ ಹಾಗೆ ಮೌಲ್ಯಗಳನ್ನು ಸಮೀಕರಿಸಿಗೊಂಡಿರುತ್ತದೆ. ಪುರುಷ ಪ್ರಧಾನ ಸಮಾಜದಲ್ಲಿ ಸ್ಥಿರವಾಗಿರುವ ಹಕ್ಕು, ಅಧಿಕಾರ, ಸದಸ್ಯತ್ವಗಳಂತಹ ಮೌಲ್ಯಗಳೆಡೆಗೆ ಹರದೇಶಿ-ನಾಗೇಶಿ ಮಹಿಳೆಯರು ಚಲಿಸಲು ಪ್ರಯತ್ನಿಸುತ್ತಾರೆ. ಹರದೇಶಿ-ನಾಗೇಶಿ ಮಹಿಳಾ ಹಾಡುಗಾರರ ಕುಟುಂಬಗಳಲ್ಲಿ ಮಾತೃಮೂಲ ಮೌಲ್ಯಗಳು ಇಲ್ಲವೇ ಇಲ್ಲವೆನ್ನುವಷ್ಟು ತೆಳುವಾಗಿವೆ. ಮದುವೆಯನ್ನು ಒಪ್ಪಿಕೊಂಡಿರುವ ಇವರ ಕುಟುಂಬಗಳಲ್ಲಿ ಪಿತೃಮೂಲ ಮೌಲ್ಯಗಳು ಪ್ರಬಲವಾಗಿವೆ. ಹೀಗಾಗಿಯೇ ಹಾಡಿಕೆ ಮಹಿಳೆಯರನ್ನು ಅವರ ಕುಟುಂಬಗಳು ಹಕ್ಕು ಮತ್ತು ಅಧಿಕಾರದಿಂದ ದೂರ ಇಟ್ಟಿವೆ. ಈ ಹಾಡಿಕೆ ಮಹಿಳೆಯರಿಗೆ ಅವರ ಕುಟುಂಬದವರು ಎರಡು ಆಯ್ಕೆಗಳನ್ನು ಎದುರಿಗಿಟ್ಟಿರುವರು. ೧ ಹಕ್ಕು ಮತ್ತು ಅಧಿಕಾರವನ್ನು ಮರೆತು ಕುಟುಂಬದಲ್ಲಿ ಉಳಿಯುವುದು, ೨. ಹಕ್ಕು ಮತ್ತು ಅಧಿಕಾರ ಬೇಕೆಂದರೆ ಕುಟುಂಬದ ಹೊರಗೆ ಹೋಗುವುದು. ಸಂದರ್ಶಿಸಿದ ಹಿರಿಯ ಹಾಗೂ ಕಿರಿಯ ಮಹಿಳಾ ಹಾಡುಗಾರರು ಹಾಡಿಕೆ ಸಂದರ್ಭದಲ್ಲಿ ಎದುರಾದ ಭೀಕರ ಅನುಭವಗಳು ಅವರನ್ನು ಕುಟುಂಬದಲ್ಲಿ ಉಳಿಯುವಂತೆ ಮಾಡಿವೆ ಎಂದು ಹೇಳಿದರು. ಹಾಗಾಗಿ ಕುಟುಂಬದಲ್ಲಿ ಆಸ್ತಿಯಿದ್ದರೆ ಆಸ್ತಿಯ ಮೇಲೆ, ತಮ್ಮ ಹಾಡಿಕೆಯ ದುಡಕಿಯ ಮೇಲೆ, ಮಹಿಳೆಯರಿಗೆ ಹಕ್ಕು ಮತ್ತು ಅಧಿಕಾರವನ್ನು ಉಳಿಸಿಕೊಳ್ಳಲಾಗಲಿಲ್ಲ. ಈ ಮಹಿಳಾ ಹಾಡುಗಾರರು ಹಕ್ಕು ಮತ್ತು ಅಧಿಕಾರದೆಡೆಗೆ ಚಲಿಸಿದರೂ ಹಕ್ಕು ಹಾಗೂ ಅಧಿಕಾರದೊಳಗಿನ ಮೌಲ್ಯಗಳು ಅವರನ್ನು ತಮ್ಮ ಪರಿಧಿಯೊಳಗೆ ಸೇರಿಸಿಕೊಳ್ಳುವುದೇ ಇಲ್ಲ.

ಹೆಂಡತಿ-ಮಕ್ಕಳನ್ನು, ತಂದೆ-ತಾಯಿಯರನ್ನು, ಮದುವೆಯಾಗುವವರೆಗೆ ಅಕ್ಕ-ತಂಗಿಯರನ್ನು ನೋಡಿಕೊಳ್ಳುವುದು ಪುರುಷರ ಕೌಟುಂಬಿಕ ಜವಾಬ್ದಾರಿಯಾಗಿ ನಿರ್ವಚನಗೊಂಡಿದೆ. ಈ ಕೌಟುಂಬಿಕ ಜವಾಬ್ದಾರಿಯು ಆರ್ಥಿಕ ನೆಲೆಗೆ ಸೀಮಿತಗೊಂಡಿದೆ. ಹಾಗೂ ಅದು ಆಸ್ತಿ ಹಕ್ಕು, ಕೌಟುಂಬಿಕ ಅಧಿಕಾರಕ್ಕೆ ನೇರವಾಗಿ ಸಂಬಂಧ ಹೊಂದಿದೆ. ಗಂಡು ಮಕ್ಕಳಂತೆ ಪರಿಗಣಿಸಲ್ಪಡುವ ಹರದೇಶಿ-ನಾಗೇಶಿ ಮಹಿಳಾ ಹಾಡುಗಾರರ ಜವಾಬ್ದಾರಿ, ಅವರ ಕುಟುಂಬದ ಪುರುಷರಿಗಿಂತ ಭಿನ್ನವಾಗಿದೆ. ಮದುವೆಯಾಗದೇ ಉಳಿಸಿದ್ದ ಕಾರಣಕ್ಕಾಗಿ ಅವರಿಗೆ ಪುರುಷರಂತೆ ತಮ್ಮದೇ ಆದ ಕುಟುಂಬವಿಲ್ಲ. ಹಾಡುಗಾರಳ ಅಮ್ಮ ಮದುವೆಯಾಗಿದ್ದರೆ ಅಮ್ಮ-ಅಪ್ಪ, ಇವರಿಗೆ ಹುಟ್ಟಿದ ಎಲ್ಲ ಮಕ್ಕಳು, ಈ ಮಕ್ಕಳಿಗೆ ಹುಟ್ಟಿದ ಎಲ್ಲ ಮಕ್ಕಳನ್ನು ಆಕೆ ತನ್ನ ಕುಟುಂಬ ಎಂದೇ ಭಾವಿಸಬೇಕಾಗುತ್ತದೆ. ಇವರೆಲ್ಲರ ಜವಾಬ್ದಾರಿಯನ್ನು ಹಾಡುಗಾರಳು ತನ್ನ ಮರಣ ಹೊಂದುವವರೆಗೆ ನಿಭಾಯಿಸಬೇಕಾಗುತ್ತದೆ. ತಮ್ಮ ಕುಟುಂಬದಲ್ಲಿ ಪುರುಷ ಸದಸ್ಯರಂತೆ ಪರಿಗಣಿಸಲ್ಪಟ್ಟ ಈ ಮಹಿಳಾ ಹಾಡುಗಾರರ ಜವಾಬ್ದಾರಿಯು ಆಸ್ತಿ ಹಕ್ಕು ಹಾಗೂ ಕೌಟುಂಬಿಕ ಅಧಿಕಾರದೊಂದಿಗೆ ಯಾವುದೇ ಸಂಬಂಧ ಹೊಂದಿರುವುದಿಲ್ಲ. ಹೀಗಾಗಿ ಈ ಮಹಿಳಾ ಹಾಡುಗಾರರಿಗೆ, ಕುಟುಂಬದಲ್ಲಿ ಆಸ್ತಿಯಿದ್ದರೆ, ಅದರಲ್ಲಿಯೂ ಪಾಲು ದೊರೆಯುವುದಿಲ್ಲ. ಅವಳಿಗೆ ಸ್ವ ದುಡಿಮೆಯ ಮೇಲೆ ಅಧಿಕಾರ ಹೊಂದಲು ಅವಕಾಶ ನೀಡುವುದಿಲ್ಲ. ಈ ಹಾಡುಗಾರಳ ದುಡಿಮೆಯ ಹಣವು ಆಕೆಯ ಬಳಿ ಉಳಿಯದೇ, ಅವಳ ಕುಟುಂಬದ ಪುರುಷರ ಕೈ ಸೇರುತದೆ. ಅಂದರೆ ಕುಟುಂಬದೊಳಗಿನ ಲಿಂಗ ಶ್ರೇಣೀಕರಣಕ್ಕೆ ಅನುಗುಣವಾಗಿ ಮೌಲ್ಯಗಳು ರೂಪಿತವಾಗಿರುತ್ತವೆ. ಮೌಲ್ಯಗಳಿಗೆ ಅನುಗುಣವಾಗಿಯೇ ಆಸ್ತಿ ಮೇಲಿನ ಒಡೆತನವು, ಸ್ವ ದುಡಿಮೆಯ ಸಂಪಾದನೆಯ ಮೇಲಿನ ಒಡೆತನವು ಸ್ಥಿರವಾಗಿ ಉಳಿಯುವುದು, ಇಲ್ಲವೆ ಚಲಿಸುವ ಗುಣಗಳನ್ನು ಪಡೆದುಕೊಳ್ಳುವುದು ನಿರ್ಧರಿತವಾಗುತ್ತದೆ. ಪುರುಷನಾದರೆ ಕುಟುಂಬದಲ್ಲಿನ ಆಸ್ತಿಹಕ್ಕು ಮತ್ತು ಅಧಿಕಾರಗಳು ಬೇರೆಡೆಗೆ ಚಲಿಸುವುದಿಲ್ಲ, ಆತನಲ್ಲಿಯೇ ಸ್ಥಿರಗೊಳ್ಳುತ್ತವೆ. ಮಹಿಳೆಯಾದರೆ, ಅವರ ಸ್ವ ದುಡಿಮೆಯ ಸಂಪಾದನೆಯೂ ಚಲನೆಗೆ ಒಳಪಡುತ್ತದೆ. ಸಾಮಾಜಿಕ ಮೌಲ್ಯಗಳು ಆಕೆಯ ಸ್ವ ಸಂಪಾದನೆಯನ್ನು ಕೂಡ ಪುರುಷನೆಡೆಗೆ ಚಲಿಸುವಂತೆ ಮಾಡುತ್ತವೆ. ಹೀಗೆ ಮಹಿಳಾ ಸಂಪಾದನೆಯು ಚಲಿಸಿ ಪುರುಷನ ಆಸ್ತಿಯಲ್ಲಿ ಸಮೀಕರಣಗೊಂಡ ತಕ್ಷಣವೇ ಅದಕ್ಕೆ ಸ್ಥಿರ ರೂಪ ಬಂದು ಬಿಡುತ್ತದೆ. ಹೀಗೆ ಸ್ಥಿರ ರೂಪ ಪಡೆದುಕೊಂಡು ಆಸ್ತಿಹಕ್ಕು, ಮತ್ತೆಂದಿಗೂ ಅವಳೆಡೆಗೆ ಚಲಿಸುವುದೇ ಇಲ್ಲ. ಹೀಗಾಗಿ ಹರದೇಶಿ-ನಾಗೇಶಿ ಮಹಿಳಾ ಹಾಡುಗಾರರು ಎಷ್ಟೇ ದುಡಿದರೂ, ಅವರ ಸಂಪಾದನೆಯು ಆಸ್ತಿಯಾಗದಂತೆ ಅವರ ಮೇಲಿನ ಕೌಟುಂಬಿಕ ಜವಾಬ್ದಾರಿಗಳು ನೋಡಿಕೊಳ್ಳುತ್ತಿರುತ್ತವೆ. ಸಾಮಾಜಿಕ ಮೌಲ್ಯಗಳೂ ಕೂಡ ಇದಕ್ಕೆ ಪೂರಕವಾಗಿರುತ್ತವೆ. ಹೀಗಾಗಿ ಹರದೇಶಿ-ನಾಗೇಶಿ ಮಹಿಳಾ ಹಾಡುಗಾರರು ಹಗಲು-ರಾತ್ರಿ ದುಡಿದರೂ ಮಹಿಳಾ ಬಡತನದಿಂದ ಬಿಡುಗಡೆಗೊಳ್ಳುವುದೇ ಇಲ್ಲ.

* * *